ಅನುಮಾನವೆಂಬ ಹುತ್ತದ ಸುತ್ತ…

ಚಿತ್ರ: ಮಂಗಳಾ ಶೆಟ್ಟಿ

"ಬಾಳಪ್ಪಜ್ಜ, ನಾ ಹೆಂಗ ಮಾಡ್ಲೋ? ಹನ್ನೊಂದು ಸೋಮ್ವಾರ ಮಠಕ್ಕೆ ಬರ್ಬೇಕಂತೆ. ಆರ್ನೇ ಮತ್ತು ಹನ್ನೊಂದ್ನೇ ಸೋಮ್ವಾರ ರಾತ್ರಿ ಮಠದಾಗೇ ವಸ್ತಿ ಹಾಕಿ ಮರ್ದಿನ ಬೆಳ್ಳಂಬೆಳಿಗ್ಗೆ ಅದೇನೋ ಬ್ರಾಹ್ಮೀ ಮೂರ್ತದಾಗ ದೇವ್ರ ಪೂಜೆ ಮಾಡ್ಬೇಕಂತ ಸ್ವಾಮ್ಯಾರು ಹೇಳ್ಯಾರ." ಮನ್ಯಾಗ ಎಲ್ರೂ ಅವ್ನಿಗೆ ಬಾಳ್ಯಾ ಅಂತ ಕರೀತಿದ್ರೂ ಸಾಹುಕಾರ್ತಿ ಗಂಗಾಂಬಿಕಾದೇವಿ ಮಾತ್ರ ಆತನಿಗೆ ಬಾಳಪ್ಪಜ್ಜ, ಬಾಳಪ್ಪಜ್ಜ ಅಂತ ಪ್ರೀತಿಲೇ ಕರೀತಿದ್ಳು. ಬಾಳಪ್ಪ ಆಕೆಗೆ ಅಜ್ಜನ ಸ್ಥಾನದಲ್ಲಿರುವವನಂತೆ ಕಂಡಿದ್ದ. ಗಂಗಾಂಬಿಕೆಯ ಮಾತಿನಲ್ಲಿ ಒಂಥರ ಆತಂಕವಿತ್ತು.  
"ಅಮ್ಮೋರೇ, ನಾನ್ ಅದೀನಿ. ಚಿಂತ್ಯಾಕೆ ಚಿನ್ಮಯನಿರುವಾಗ. ವಾರ ವಾರ ನಿಮ್ಮನ್ ಮಠಕ್ಕೆ ಕರ್ಕೊಂಡು ಬಂದು ಕರ್ಕೊಂಡು ಹೋಗ್ತೀನಿ. ಅದೇನೂ ಭಯ ಬ್ಯಾಡ ತಾಯಿ." ಸಾಹುಕಾರ ಶರಣಪ್ನೋರ ಮನ್ಯಾಗ ಬಾಳ ವರ್ಷದಿಂದ ಖಾಯಂ ಕೆಲ್ಸಕ್ಕಿದ್ದ ಬಾಳಪ್ಪ. ಮನೆಯವರೆಲ್ರಿಗೆ ಬಾಳ್ಯಾ ಅಂದ್ರೆ ಬಾಳ ಅಭಿಮಾನ. ಬಾಳ್ಯಾ ಶಿಸ್ತಿನ ಸಿಪಾಯಿಯಂತೆ ಸಾಹುಕಾರ್ರ ಮನಿಗೆ ಜೀವ ತೇಯ್ತಿದ್ದ. 
"ನೀನೇನೋ ಅದಿ ಬಾಳಪ್ಪಜ್ಜ, ಆದ್ರೆ ಆ ಸ್ವಾಮಿ ಒಂಥರ ನೋಡಿದ್ರು. ಅವ್ರ ನೋಟ ಯಾಕೋ ಸರಿ ಅನಿಸ್ಲಿಲ್ಲ ನನ್ಗೆ. ಅದನ್ನ ನೆನ್ಸಿಕೊಂಡ್ರೆ ನನ್ ಎದಿ ಯಾಕೋ ಹೊಡ್ಕೊಳ್ಳಕತ್ತೇದ." ಗಂಗಾಂಬಿಕಾದೇವಿ ತನ್ ಎದಿಯೊಳ್ಗಿದ್ದ ನೋವನ್ನು ಹೊರಗಿಟ್ಟಿದ್ಳು.
"ನಾನ್ ನಿಮ್ಜೊತಿಗೇ ಇರ್ತೇನೆ ಅಮ್ಮೋರೆ. ನೀವ್ ಯಾಕ್ ತಲಿ ಬಿಸಿ ಮಾಡ್ಕೋಂತೀರಿ."
"ಆಯ್ತು ಬಿಡಪ್ಪಾ, ನೀ ಇದ್ಮ್ಯಾಲೆ ನಾನ್ಯಾಕೆ ಚಿಂತಿ ಮಾಡ್ಲಿ...?" ಗಂಗಾಂಬಿಕಾದೇವಿ ಅಂದಾಗ ಬಾಳ್ಯಾ ಖುಷಿಖುಷಿಯಿಂದ ಬೀಗಿದ್ದ. ಇಬ್ರೂ ಮಾತಾಡ್ತ ಮಾತಾಡ್ತ ಶಂಕರಾನಂದ ಸ್ವಾಮಿಗಳ ಮಠ್ದಿಂದ ಹೆಜ್ಜೆ ಹಾಕಿ ಮಠದ ಹೊರ್ಗಡೆ ನಿಲ್ಸಿದ್ದ ಸವಾರಿ ಬಂಡಿಯ ಕಡೆಗೆ ಸಮೀಪಿಸಿದ್ರು. ಅವರು ಇನ್ನೂ ಎರ್ಡ ಹರದಾರಿ ಪ್ರಯಾಣ ಮಾಡಿ ತಮ್ಮೂರಾದ ಚಿನ್ನಾಪುರಕ್ಕೆ ಹೋಗ್ಬೇಕಿತ್ತು. ಗಂಗಾಂಬಿಕಾ ಬಂಡಿಯಲ್ಲಿ ಕುಳಿತ್ಕೊಂಡ ಕೂಡ್ಲೇ ಬಾಳಪ್ಪ ಎತ್ಗಳ ಕೊಳ್ಳು ಕಟ್ಟಿದ. ಬಂಡಿ ಮುಂದೆ ಸಾಗ್ತಿದ್ದಂತೆ ಎತ್ತಿನ ಕೊಳ್ಳಾಗಿನ ಗೆಜ್ಜಿ ಶಬ್ದ ಗಿಲ್ ಗಿಲ್ ಅಂತ ಇಂಪಾಗಿ ಕೇಳ್ಸಾಕ ಹತ್ತಿದಂತೆ ಗಂಗಾಂಬಿಕಾಳ ಮನಸ್ಸು ಹಿಂದೆ ಹಿಂದೆ ಓಡತೊಡಗಿ ನೆನಪಿನ ಹಂದರ ಕೆದ್ಕತೊಡಗಿತು. ತನ್ನ ಮದುವಿ ಶರಣಪ್ಪ ಸಾಹುಕಾರನ ಜೊತಿಗೆ ಆಗಿ ತಮ್ಮಿಬ್ಬರ ಮೊದಲ ರಾತ್ರಿ ದಿನ ಗಂಡ ಹೇಳಿದ್ದ ಮಾತ್ಗಳು ನೆಪ್ಪಿಗೆ ಬಂದಾಗ ಗಂಗಾಂಬಿಕಾಳ ಕೆನ್ನೆಗಳು ರಂಗೇರಿದ್ದವು.

ಗಂಗಾಂಬಿಕಾದೇವಿ ಸಾಹುಕಾರ ಶರಣಪ್ನೋರ ಮನಿಗೆ ನಡೀಲಿಕ್ಕೆ ಬಂದು ಆಗ್ಲೇ ಆರು ವರ್ಷ ಆಗಿದ್ವು. ಹದಿನೆಂಟು ತುಂಬಿದ್ದಾಗ ಮದುವಿ ಆಗಿತ್ತು. ಸಾಹುಕಾರ ಶರಣಪ್ನೋರ್ ಮನಿತನ ಅಂದ್ರ ಆ ಸೀಮ್ಯಾಗೇ ದೊಡ್ಡದು. ಇಪ್ಪತ್ತೈದು ಕೂರ್ಗಿ ಜಮೀನು, ಎಂಟೆತ್ತಿನ ಕಮತ, ಮನಿ ಒಳ್ಗ, ಹೊರ್ಗ ಆಳು, ಕಾಳುಗಳು. ಹತ್ತೆಂಟು ಆಳ್ಗಳ ಪೈಕಿ ಈ ಬಾಳ್ಯಾನೂ ಒಬ್ಬ. ಅವ್ನು ಸಾಹುಕಾರ್ರ ಮನ್ಯಾಗ ಒಂದ್ರೀತಿ ಮನಿ ಮಗ್ನಂತೆ ಇದ್ದ. 
ಶರಣಪ್ಪ ಸಾಹುಕಾರ್ ಮತ್ತು ಗಂಗಾಂಬಿಕಾದೇವಿಯವ್ರ ದಾಂಪತ್ಯ ಅನ್ಯೋನ್ಯವಾಗೇ ಸಾಗಿತ್ತು. ಗಂಗಾಂಬಿಕಾ ಮೊದ್ಲೇ ಚೆಂದುಳ್ಳಿ ಚೆಲುವಿ. ಸುರಗಿ ನೀರು ತಲಿ ಮ್ಯಾಲೆ ಬಿದ್ಮ್ಯಾಲೆ ಅವ್ಳ ಚೆಲುವಿಗೆ ಮತ್ತಷ್ಟು ರಂಗೇರಿತ್ತು. ರೂಪೇಶು ಲಕ್ಮಿಯಂತಿದ್ದ ಗಂಗಾಂಬಿಕಾ ಸೌಂದರ್ಯವತಿ, ಅಂದಗಾತಿ. ಅವಳ ಆಯಸ್ಕಾಂತದಂಥ ರೂಪರಾಸಿ, ಮೈಮಾಟಕ್ಕೆ ಶರಣಪ್ಪನವ್ರು ಮನಸೋತಿದ್ರು ಮೊದಲ ಸಲ ಅವ್ಳನ್ನು ನೋಡಿದಾಗ.     
ಸಾಹುಕಾರ ಮಲ್ಲಪ್ಪ ಮತ್ತು ಶಂಕ್ರಮ್ಮ ಅವರ ಏಕೈಕ ಸುಪುತ್ರ ಶರಣಪ್ಪ. ಶರಣಪ್ಪ ಸಾಹುಕಾರ ತನ್ನ ಅಪ್ಪ, ಅಮ್ಮನ ಜೊತಿಗೆ ಬಾಳಷ್ಟು ಕನ್ಯೆಗಳನ್ನು ನೋಡಿದ್ದ. ಒಂದು ಹುಡುಗಿನೂ ಪಸಂದ್ ಆಗಿರ್ಲಿಲ್ಲ. ದೊಡ್ಡ ದೊಡ್ಡ ಮನಿತನದ ಕನ್ಯೆಗಳನ್ನು ನೋಡಿದ್ರು. ಒಬ್ಳು ಸಣಕಲು-ಹಂಚಿಕಡ್ಡಿ, ಇನ್ನೊಬ್ಳು ಡುಮ್ಮಿ, ಮತ್ತೊಬ್ಳು ಕುಳ್ಳಿ, ಮಗದೊಬ್ಳು ಕರ್ರಗೆ, ಇವ್ಳು ತಟ್ಗು ಚೆಂದ ಆದ್ರೆ ಕಾಗೆ ಬಣ್ದವ್ಳು, ಇವ್ಳಿಗೆ ಬಣ್ಣ ಐತೆ ಆದ್ರೆ ಚೆಂದಿಲ್ಲ, ಇವ್ಳ ಗುಣ ಚೊಲೋ ಇಲ್ಲಂತ, ಇವ್ಳು ಶೂರ್ಪಾನಕಿ ಇದ್ದಂಗೆ, ಕಡೆಗೊಬ್ಳು ಹಲ್ಲುಬ್ಬಿ ಅಂತ ನೂರೆಂಟು ಹೆಸರಿಟ್ಟಿದ್ಳು ಶಂಕ್ರಮ್ಮ ಸಾಹುಕಾರ್ತಿ. ಬಾಳಷ್ಟು ಕನ್ಯೆ ನೋಡಿದ ಮ್ಯಾಲೆ, "ನನಗೀಗ ಸದ್ಯ ಮದುವಿ ಬ್ಯಾಡ. ಸ್ವಲ್ಪ ದಿವ್ಸ ಹೋಗ್ಲಿ" ಎಂದಿದ್ದ ಶರಣಪ್ಪ ಬ್ಯಾಸ್ರ ಮಾಡ್ಕೊಂಡು. 
ಕನ್ಯಾನ್ವೇಷಣೆಯನ್ನು ನಿಲ್ಲಿಸಿದ ಮೂರು ತಿಂಗಳ ನಂತರ ನವತರುಣ ಶರಣಪ್ಪ ತನ್ನ ಚಡ್ಡಿ ದೋಸ್ತರಾದ ರಾಜು, ರಾಜೀವ, ಶಿವಣ್ಣ, ಸಮೀರ್‍ರ ಜೊತೆಗೆ ಪಕ್ಕದ ಗ್ರಾಮ ಚಂದ್ರಾಪುರದಲ್ಲಿ ಪ್ರತಿ ವರ್ಷ ವಿಜೃಂಭಣೆಯಿಂದ ಜರುಗುತ್ತಿದ್ದ ಅಂಬಾದೇವಿ ಜಾತ್ರೆಗೆ ಹೋಗಿದ್ದ. ಅಂಬಾದೇವಿಯ ದರ್ಶನದ ನಂತರ ಗೆಳೆಯರ ಜೊತೆಗೆ ಹರಟೆ ಕೊಚ್ಚುತ್ತಾ ಜಾತ್ರೆಯನ್ನೆಲ್ಲಾ ಸುತ್ತಿದ್ದ ಸಕತ್ತಾಗಿ ಮಜಮಾಡುತ್ತಾ. ಸಾಕು ಬೇಕೆನ್ನುವಷ್ಟು ಬೆಂಡು-ಬತ್ತಾಸು, ಡಾಣಿ-ಪುಗ್ಗಿ, ಮಿರ್ಚಿ-ಬಜಿ ಕೊಡ್ಸಿದ್ದ ಗೆಳೆಯರಿಗೆ. ಆಗ ಅವನ ಕಣ್ಣಿಗೆ ಬಿದ್ದದ್ದು ನವಿಲು ಬಣ್ಣದ ಲಂಗ, ಬಿಳಿ ಧಾವಣಿಯಲ್ಲಿ ನಳನಳಿಸುತ್ತಿದ್ದ ಆ ಸೌಂದರ್ಯ ದೇವತೆ. ಅವಳಂಥಹ ರಂಭೆಯನ್ನು ಅವನು ತನ್ನ ಜೀವಮಾನದಲ್ಲೇ ಕಂಡಿರಲಿಲ್ಲ. ಎಷ್ಟೋ ಹೊತ್ತು ಅವಳ ಚಲನವನಗಳನ್ನು ತದೇಕಚಿತ್ತದಿಂದ ನೋಡಿದ್ದ. ಅವಳ ರೂಪರಾಶಿಯನ್ನು ಕಣ್ಗಳಲ್ಲಿ ತುಂಬಿಕೊಂಡಿದ್ದ. ಇವನ ಕಣ್ಗಳು ಅವಳಲ್ಲೇ ನೆಟ್ಟಿದ್ದವು.
"ಏನಪ್ಪ ದೋಸ್ತ್, ಅದೇನು, ಅಷ್ಟು ಹೊತ್ನಿಂದ ನಾನು ನಿನ್ನನ್ನೇ ನೋಡ್ತಿದ್ದೀನಿ. ನೀನು ಮಾತ್ರ ಇಲ್ಲಿ ಇದ್ದ ಹಾಗೆ ಇಲ್ಲ. ಎಲ್ಲೋ ಕಳೆದು ಹೋಗಿರುವಿ ಅಂತ ಅನಿಸ್ಲಕ್ಕತ್ತಿದೆ. ಯಾವ್ದೋ ಲೋಕ್ದೊಳ್ಗೆ ವಿಹಾರ ಮಾಡ್ಲಿಕ್ಕತ್ತೀದಿ ಅಂತ ಅನಿಸ್ತದೆ." ಶರಣಪ್ಪನ ಹಲ್-ಚಲ್ ಗಮನಿಸುತ್ತಿದ್ದ ಅವನ ಗೆಳೆಯ ರಾಜು ಛೇಡಿಸಲು ಮುಂದಾಗಿದ್ದ. 
"ಹಂಗೇನೂ ಇಲ್ಲ...ಇಲ್ಲ. ಅದು, ಆ ಕಡೆಯ ಅಂಗ್ಡೀಲಿ ತೂಗು ಹಾಕಿರೋ ಚೆಂದದ ಗೊಂಬೆ, ಹೂವಿನ ಮಾಲೆಗಳನ್ನು ನೋಡ್ತಿದ್ದೆ." ತೊದಲುತ್ತಾ ಹೇಳಿದ್ದ ಶರಣಪ್ಪ. 
"ಹೌದೌದು, ನೀನು ನೋಡ್ತಿರೋದು ಜೀವಂತ ಚೆಂದದ ಗೊಂಬೆಯನ್ನೇ. ಅಯ್ಯೋ ಮಾರಾಯ, ನಮ್ಗೆ ಅಷ್ಟೂ ಗೊತ್ತಾಗಂಗಿಲ್ಲೇನು? ಖಾಸಾ ಗೆಳೆಯನ ಮನಸ್ಸು, ನೋಟ ಎಲ್ಲಿವೆ ಅಂತ ತಿಳ್ಕೋಳ್ಲಾರದಷ್ಟು ದಡ್ಡರೇನಲ್ಲ? ನಮ್ಗೂ ನಿನ್ನಂಗೆ ಏರು ಜವ್ವನ ಇಲ್ವೇನು? ನಿನ್ನ ಮನಸ್ಸಿನ ಚಡಪಡಿಕೆ ನಮ್ಗೆಲ್ಲ ಅರ್ಥವಾಗುತ್ತೆ ಕಣೋ. ನೀನು ನೋಡ್ತಿರೋದು ಆ ನವಿಲು ಬಣ್ಣದ ಲಂಗದ ಹುಡುಗೀನ ಅಂತ ಹುಡ್ಗುತನದ ನಮ್ಮ ತುಡ್ಗು ಮನಸ್ಸಿಗೆ ಚೆನ್ನಾಗಿ ಗೊತ್ತು. ಈಗಾಗ್ಲೇ ಬಾಳಷ್ಟು ಕನ್ಯಾಮಣಿಗಳನ್ನು ನೋಡಿ ನೋಡಿ ದಣಿದ ನಿನ್ನ ಮನಸ್ಸಿಗೆ, ಕಣ್ಣಿಗೆ ಆ ಹುಡುಗಿ ಚೆಲುವು ತಂಪೆರಿತಿರಬೇಕಲ್ಲವೇ? ನಿನ್ನ ನೋಟದಾಗ ಭಾರೀ ಸಂಭ್ರಮ ಐತೆ ಅಂತ ಅನಸಕತ್ತೈತಿ... ಆ ಜೀವಂತ ಬೊಂಬೆ ಕೊರಳಿಗೆ ಹೂವಿನ ಮಾಲೆ ಹಾಕೋ ಬಯಕೆ, ತವಕ ಅಲ್ವೇನೋ?" ಇನ್ನೊಬ್ಬ ಗೆಳೆಯ ರಾಜೀವ್ ಚುಡಾಯಿಸಲು ಮುಂದಾದ.
"ಹೌದಪ್ಪಾ, ಹೌದು. ನಾನು ಆ ಹುಡುಗಿನ್ನೇ ನೋಡ್ತಿದ್ದೇನೆ. ಅದಕ್ಕೇನೀಗ? ಅಷ್ಟಕ್ಕೂ ಒಂದ್ಸಾರಿ ನೋಡಿದ ಕೂಡ್ಲೇ ಹೂವಿನ ಮಾಲೆ ಹಾಕ್ಲಿಕ್ಕಾಗ್ತದೇನೋ? ನಿಮ್ದು ಬಾಳ ಧಿಮಾಕು ಆತುಬಿಡು." ಶರಣಪ್ಪ ಸತ್ಯ ಬಾಯ್ಬಿಟ್ಟಿದ್ನಾದ್ರೂ ರಾಜೀವನ ಮಾತನ್ನು ಸಾರಾಸಗಟಾಗಿ ಒಪ್ಪಿಕೊಳ್ಳಲು ತಯಾರಿಲ್ಲದವನಂತೆ ನಾಟಕ ಮಾಡಿದ. ಆದರೆ ಅವನ ದನಿಯಲ್ಲಿ ಮೆದುವಿತ್ತು.
"ಹೂಂ, ಹಂಗ ಬಾ ದಾರಿಗೆ. ಹುಡುಗೀನ್ ನೋಡ್ತಿದ್ದುದು ಒಪ್ಕೊಂಡೆಯಲ್ಲ, ಅಷ್ಟೇ ಸಾಕು. ಅಂತೂ ನಮ್ ಹುಡ್ಗ ಆ ದಂತದ ಬೊಂಬಿಗೆ ಮರುಳಾಗೇನಲ್ಲ, ನಮಗದೇ ಖುಷಿ. ನಮ್ಗೆ ಬೇಕಾಗಿದ್ದು ಅದೇ ಅಲ್ವೇ? ನಮ್ಗೆ ನಿಜವಾದ ಅತ್ತಿಗೆ ಸಿಗೋ ಅವಕಾಶ ಬಂದಂಗಾತು. ಆ ಹುಡುಗಿ ನಿನ್ನ ಮನಸು ತುಂಬ್ಯಾಳೆ ಅಂತ ನಮ್ಗೆ ಖಾತ್ರಿಯಾಗ್ಲಿಕ್ಕತ್ತೇದ. ಈಗ್ಲೇ ಅವ್ಳಿಗೆ ಮಾಲೆ ಹಾಕು ಅಂತ ಅಂದೋರ್ಯಾರು? ಏನೋ ತಮಾಷೆ ಮಾಡಿದ್ವಿ. ಮಾಲೆ ಹಾಕೋಕೆ ಸೂಕ್ತ ವ್ಯವಸ್ಥೆ ಮಾಡಲು ಹಿರೇರ ಕಾಲಿಡಿದು ಮನವಿ ಸಲ್ಲಿಸೋಣ." ಗೆಳೆಯರೆಲ್ಲರೂ ಒಕ್ಕೊರಲಿನಿಂದ ಹರ್ಷ ವ್ಯಕ್ತಪಡಿಸಿದ್ದರು.
"ಅದೆಲ್ಲಾ ಇರ್ಲಿ. ಮಂಗ್ಯಾನಂಗೆ ಮಾಡೋದು ಬಿಟ್ಟು ಮೊದ್ಲು ಅವಳು ಯಾರು ಅಂತ ಹೇಳಾಕಾಗಂಗಿಲ್ಲೇನು?" ಶರಣಪ್ಪನ ದನಿಯಲ್ಲಿ ಬೇಡಿಕೆ ಜೊತೆಗೆ ಕಾತುರವಿತ್ತು. 
"ಅಬ್ಬಬ್ಬಾ, ಇದೇನಪ್ಪಾ ಅಂಥ ಅವಸರ? ನೋಡಿದ್ದು ಈಗಷ್ಟೇ. ಆಗ್ಲೇ ಶುರುವಾಯ್ತಾ...?" ಗೆಳೆಯರು ಮತ್ತೆ ತಮಾಷೆಗೆ ಮುಂದಾಗಿದ್ದರು.
"ಹೌದು, ಹೌದು. ಆ ಹುಡುಗಿ ನನಗೆ ಇಷ್ಟವಾಗಿದ್ದು ಖರೇನೇ ಐತೆ. ನಿಮ್ಗೂ ಖುಷಿಯಾಗೈತೆ ಅಂತ ನೀವೂ ಹೇಳಿರಲ್ಲ, ಮತ್ತಿನ್ನೇನು? ಹೌದೋ ಅಲ್ವೋ?"
"ಆಯ್ತು ಏನೀಗ?"
"ಏನಿಲ್ಲ, ಅವಳು ನನ್ನ ಕಡಿಗೆ ತನ್ನ ಕೃಪಾ ದೃಷ್ಟಿ ಬೀರ್ಬೇಕು ಅಂತ ನನ್ನ ಮನದಾಸೆ."
"ಅಷ್ಟೇ ತಾನೇ? ಮುಂದೆ ನೋಡು..." ಎಂದೆನ್ನುತ್ತಾ ಶರಣಪ್ಪನ ಗೆಳೆಯರು ಅತ್ತ ಕಡೆಯ ಅಂಗಡಿಯತ್ತ ನಾಗಾಲೋಟದಲ್ಲಿ ಜಿಗಿದರು. ಏನನ್ನೋ ಖರೀದಿಸುತ್ತಿದ್ದ ಆ ಹುಡುಗಿಯತ್ತ ದೌಡಾಯಿಸಿದ್ದರು. 
"ಅಕ್ಕಾ, ನಿಮಗೆ ಏನು ಬೇಕಾಗಿತ್ತು? ಆ ಕಡೆಯ ಅಂಗ್ಡೀಲಿ ಒಳ್ಳೊಳ್ಳೆ ಸಾಮಾನು ಅದಾವ. ನಿಮ್ಗೆ ಬೇಕಾದ್ದು ಅಲ್ಲಿ ಸಿಕ್ಕೇ ಸಿಗುತ್ತೆ. ಒಂದ್ಸಾರಿ ಆ ಕಡಿಗೆ ನೋಡ್ರಿ ಬೇಕಾದ್ರೆ" ಎಂದೆನ್ನುತ್ತಾ ಆ ಹುಡುಗಿಯ ಗಮನ ಸೆಳೆಯಲು ಮುಂದಾಗಿದ್ದರು ಶರಣಪ್ಪನ ದೋಸ್ತರು. 
"ಇವರ್ಯಾರಪ್ಪಾ ನನ್ನ ತಮ್ಮಂದಿರು? ನಾನ್ಯಾವಾಗ ಇವರಿಗೆ ಅಕ್ಕನಾದೆ? ಇವರ್ಯಾಕೆ ನಂಗೆ ಆ ಅಂಗಡಿಯ ಕಡೆಗೆ ನೋಡಲು ಹೇಳುತ್ತಿದ್ದಾರೆ?" ಎಂದೆನ್ನುತ್ತಾ ಆಕೆ ಅವರ ಕಡೆಗೆ ದೃಷ್ಟಿಸಿದಾಗ ಅವರ ಕಣ್ಣುಗಳಲ್ಲಿ ಅದೇನೋ ಬೇಡಿಕೆಯೊಂದು ಇದೆ ಎಂಬುದನ್ನು ಗುರುತಿಸಿದ್ದಳು. ಅವರ ಬೇಡಿಕೆಗೆ ಅಸ್ತು ಎನ್ನುವವಳಂತೆ ಕುತೂಹಲದಿಂದ ಆ ಕಡೆಯ ಅಂಗಡಿಯ ಕಡೆಗೆ ತನ್ನ ಚಿಗರೆಯ ಕಂಗಳ ನೋಟ ಹರಿಸಿದಾಗ ಆಕೆಗೆ ಕಂಡದ್ದು ಹಸನ್ಮುಖಿಯಾಗಿ ತನ್ನನ್ನೇ ದಿಟ್ಟಿಸುತ್ತಾ ನಿಂತಿದ್ದ ಶರಣಪ್ಪನನ್ನು. ಕ್ಷಣಕಾಲ ಇಬ್ಬರ ನೋಟಗಳು ಒಂದಾಗಿದ್ದವು. ನಾಲ್ಕೂ ಕಣ್ಣುಗಳು ಸೇರಿದ್ದವು. ಕೋಲ್ಮಿಂಚೊಂದು ಫಳ್ ಫಳ್ಳೀರೆಂದು ಅವಳೆದೆಯನ್ನು ನಡುಗಿಸಿತ್ತು. ಶರಣಪ್ಪನ ತೀಕ್ಷಣವಾದ ಕುಡಿನೋಟಕ್ಕೆ ಹುಲಿಯನ್ನು ಕಂಡು ಬೆದರಿದ ಹರಿಣಿಯಂತಾದ ಅವಳು ತಕ್ಷಣ ಮುಖವನ್ನು ಕೆಳಗೆ ಹಾಕಿದ್ದಳು. ಗೌರವರ್ಣದ ಅವಳ ಮುಖ ಗೋಧೂಳಿಯ ಸಮಯದ ಆಕಾಶದಂತಾಗಿತ್ತು ಕೆಂಪು ಕೆಂಪಗೆ. ನಾಚಿ ನೀರಾಗಿದ್ದ ಆಕೆ ತನ್ನ ಗೆಳತಿಯ ಕೈ ಹಿಡಿದುಕೊಂಡು ಅಲ್ಲಿಂದ ಬೇರೆ ಅಂಗಡಿಗೆ ದೌಡಾಯಿಸಿದ್ದಳು. ತಮ್ಮ ಕಾರ್ಯ ಸಿದ್ಧಿಯಾಯಿತು ಎಂದು ಅಂದುಕೊಂಡ ಶರಣಪ್ಪನ ಗೆಳೆಯರು ಓಡೋಡುತ್ತಾ ತಮ್ಮ ಗೆಳೆಯನನ್ನು ಸೇರಿಕೊಂಡಿದ್ದರು.
"ಏಯ್ ಸಾಹುಕಾರ, ಕಣ್ತುಂಬ ನೋಡಿದೇನೋ ಆ ಹುಡುಗಿನಾ...?" ಗೆಳೆಯರ ತುಂಟಾಟ ಮತ್ತೆ ಶುರುವಾಗಿತ್ತು.
"ನೋಡೀನಿ ಬಿಡ್ರೋ ತರ್ಲೆ ನನ್ ಮಕ್ಳ. ಅದಿರಲಿ, ಅವಳು ಯಾರು?" ಶರಣಪ್ಪನ ಮಾತಿನಲ್ಲಿ ಅವಳ ಬಗ್ಗೆ ತಿಳಿದುಕೊಳ್ಳುವ ಆತುರ, ತವಕ, ಕುತೂಹಲ ಇತ್ತು.
"ಅದ್ಯಾಕಪ್ಪ ಅಷ್ಟು ಅವಸರ? ಅವಳು ಯಾರಾದರೆ ನಿಂಗೇನು?" ರಾಜು ತನ್ನ ಕಿಚಾಯಿಸುವಿಕೆಯ ರಾಗವನ್ನು ಮುಂದುವರಿಸಿದ್ದ.
"ಲೇ ರಾಜು ನಿಂದು ಅತಿಯಾತು. ಹಾಕ್ತೀನಿ ನೋಡು" ಎಂದೆನ್ನುತ್ತಾ ರಾಜುನ ಮೇಲೆ ಹುಸಿಕೋಪ ತೋರಿಸಲು ಮುಂದಾಗಿದ್ದ ಶರಣಪ್ಪ. 
"ಸಿಟ್ಯಾಕೋ ಸಿಡುಕ್ಯಾಕೋ ನನ ಗೆಳೆಯ. ಇಷ್ಟಾತು ನಿಂಗೆ ಅವಳ ಮ್ಯಾಲೆ" ರಾಗವಾಗಿ ಹಾಡಿದ್ದ ಗೆಳೆಯ ಶಿವಣ್ಣ.
"ಸಾಕು ಬಿಡ್ರೋ ಅದೆಷ್ಟು ಅಂತ ಕಾಡಿಸ್ತೀರಿ?" ಸಮೀರ್ ಶರಣಪ್ಪನ ಸಹಾಯಕ್ಕೆ ಬಂದಿದ್ದ. 
"ಅಯ್ಯೋ ದೋಸ್ತ್, ನೀನು ಕಂಕುಳಲ್ಲಿ ಕೂಸನ್ನಿಟ್ಕೊಂಡು ಊರೆಲ್ಲಾ ತಿರುಗಿಬಿಟ್ಟಿ. ಆಕೆ ನಮ್ಮೂರಿನ ಪಕ್ಕದೂರಾದ ರಾಜೂರಿನ ಸಾಹುಕಾರ ಭೀಮರಾಯಪ್ಪನವರ ಮಗಳಿರಬೇಕು ಎಂದೆನಿಸುತ್ತಿದೆ." ರಾಜೀವ್ ಸುಳಿವು ನೀಡಿದ್ದ.
"ನೋಡ್ರೆಪ್ಪಾ ಗೆಳೆಯಂದಿರಾ, ನೀವು ಅದೇನ್ ಮಾಡ್ತೀರೋ ನನ್ಗೆ ಗೊತ್ತಿಲ್ಲ. ಆ ಬೆಡಗಿ ಬಗ್ಗೆ ಬೇಗ ಪತ್ತೆ ಹಚ್ಬೇಕು. ಆಕೆ ನಿಮ್ಮ ಅತ್ತಿಗೆ ಆಗ್ಬೇಕು ಅಷ್ಟೇ." ಶರಣಪ್ಪ ಕುಲುಕುಲು ನಗುತ್ತಾ ಹೇಳಿದಾಗ ಗೆಳೆಯರ ಬಳಗದಲ್ಲಿ ಸಂಭ್ರಮ ಮೂಡಿತ್ತು. ಗೆಳೆಯರೆಲ್ರೂ ಶರಣಪ್ಪನನ್ನು ಮೇಲೆತ್ತಿಕೊಂಡು ಖುಷಿಪಟ್ರು. ಆ ಖುಷಿಯಲ್ಲಿ ಶರಣಪ್ಪ ಸಾಹುಕಾರ ಗೆಳೆಯರನ್ನು ಪಕ್ಕದ ಕಬ್ಬಿನ ಹಾಲಿನ ಅಂಗಡಿಗೆ ಕರೆದುಕೊಂಡು ಹೋಗಿದ್ದ. 
"ಅವ್ವಾರ, ಹಳ್ಳ ಬಂತು. ತಟಗ ಇಳ್ದು ಆ ಗಿಡ್ದ ನೆಳ್ಳಿನ್ಯಾಗ ಕುಳ್ತುಕೊಂಡು ದಣಿವಾರ್ಸಿಕೊಳ್ರಿ. ಎತ್ತುಗೋಳಿಗೆ ನೀರು ಕುಡ್ಸಿಕೊಂಡು ಬರ್ತೀನಿ. ಆಮ್ಯಾಗೆ ಬುತ್ತಿಗಂಟು ಬಿಚ್ಚೋವ್ರಿಯಂತೆ." ಬಾಳಪ್ಪ ಅಂದಾಗ ಗಂಗಾಂಬಿಕಾ ತನ್ನ ಕನಸಿನ ಲೋಕ್ದಿಂದ ಹೊರಗೆ ಬಂದ್ಳು. ಬಾಳಪ್ಪ ಚಕ್ಕಡ್ಯಾಗ ಇದ್ದ ಜಮಖಾನ ಗಿಡ್ದ ಕೆಳ್ಗೆ ಹಾಸಿದ. ಮನದಲ್ಲೆ ಮುಸಿ ಮುಸಿ ನಗುತ್ತಾ ಕೆಳಗಿಳ್ದು ಗಿಡ್ದ ಕೆಳ್ಗೆ ಕುಳ್ತುಕೊಂಡ್ಳು. 

ಹಳ್ಳದಾಗ ಹರೀತಿದ್ದ ನೀರಿನ ಜುಳು ಜುಳು ನಿನಾದ ಗಂಗಾಂಬಿಕಾಳ ಮನಸ್ಸಿಗೆ ಒಂಥರ ಹಿತವೆನಿಸಿತ್ತು. ಹಳ್ಳದ ದಂಡಿ ಮ್ಯಾಲಿದ್ದ ಗಿಡ-ಮರಗಳಲ್ಲಿದ್ದ ಹಕ್ಕಿಗಳ ಚಿಲಿಪಿಲಿ ಗಾನ ಕಿವಿಗೆ ಇಂಪೆನಿಸಿ, "ಚಿಲಿಪಿಲಿಗುಟ್ಟುವ ಹಕ್ಕಿಯ ಕಂಠದಿ ಇಂಪನು ಇಟ್ಟವನ್ಯಾರೆ?" ಎಂದು ಗುನುಗತೊಡಗಿದ್ಳು. ಮತ್ತೆ ಗಂಗಾಂಬಿಕಾಳ ಮನಸ್ಸು ಹಿಂದೋಡತೊಡ್ಗಿತು.
ಶರಣಪ್ಪನ ಗೆಳೆಯರೆಲ್ರೂ ಹುಡುಗಿಯ ಊರು, ವಿಳಾಸ ಪತ್ತೆ ಮಾಡಿದ್ರು. ಹಿರೇರ ರಾಯಭಾರದ ಮೂಲಕ ಶರಣಪ್ಪನ ಅಪ್ಪ ಮಲ್ಲಪ್ಪ ಸಾಹುಕಾರ್ರಿಗೆ ಸುದ್ದಿ ಮುಟ್ಸಿದ್ರು. ಹುಡುಗಿನ ನೋಡೋ ಶಾಸ್ತ್ರಾನೂ ಮುಗ್ಸಿದ್ರು. ರಾಜೂರು ಭೀಮರಾಯಪ್ಪ ಸಾಹುಕಾರ್ರಿಗೆ ಮಲ್ಲಪ್ಪ ಸಾಹುಕಾರ್ರರ ಬೀಗಸ್ತನ ಮಾಡೋದಕ್ಕೆ ಬಾಳ ಖುಷಿ ಆಗಿತ್ತು. ಗಂಗಾಂಬಿಕಾದೇವಿ ಶರಣಪ್ಪ ಸಾಹುಕಾರ್ರರ ಮಡದಿಯಾಗಿ ಅವರ ಮನೆ ತುಂಬಿದ್ಳು. ಮೊದಲರಾತ್ರಿ ದಿನ ಶರಣಪ್ಪ ಗಂಗಾಂಬಿಕಾಳಿಗೆ ಅಂದು ಜಾತ್ರೆಯಲ್ಲಿ ಆಕೆಯನ್ನು ಕಂಡಿದ್ದ ಸನ್ನಿವೇಶವನ್ನು ವರ್ಣರಂಜಿತವಾಗಿ ವಿವರಿಸಿದ್ದ. 
"ಥೂ ಕಳ್ಳ, ನೀನು ಹೀಂಗ ನನ್ ಯಾಮಾರಿಸಿದ್ಯಾ?" ಎಂದೆನ್ನುತ್ತಾ ಖುಷಿಯಲ್ಲಿ ಬೀಗುತ್ತಾ ಶರಣಪ್ಪ ಸಾಹುಕಾರನ ತೆಕ್ಕೆಯೊಳ್ಗೆ ಸೇರ್ಕೊಂಡಿದ್ದಳು.
"ಏನ್ರೆವ್ವಾ, ನಂಗೆ ತಿಂಬಾಕ ರೊಟ್ಟಿ-ಗಿಟ್ಟಿ ಕೊಡ್ತಿಯಾ ಅಥವಾ ಹಿಂಗೇ ಕನಸು ಕಾಣ್ತಾ ಕುಳ್ತುಕೊಳ್ತಿಯಾ ತಾಯಿ? ಹೊಟ್ಟೆ ಬಾಳ ಹಸಿದೈತೆ" ಎಂದು ಬಾಳಪ್ಪ ಎಚ್ಚರಿಸಿದಾಗ್ಲೇ ಗಂಗಾಂಬಿಕಾ ನೆನಪಿನ ಲೋಕದಿಂದ ಹೊರ ಬಂದ್ಳು. ಬಾಳ ನಾಚಿಕೊಂಡ್ಳು ಬಾಳಪ್ಪನ ಮಾತ್ನಿಂದ.
"ಅಜ್ಜ, ಹಂಗೇನಿಲ್ಲ, ಬಾ ಬಾ ಉಂಬಾಕ ಕೊಡ್ತೀನಿ" ಎಂದೆನ್ನುತ್ತಾ ಬುತ್ತಿ ಗಂಟು ಬಿಚ್ಚಿದ್ಳು. 
"ಅವ್ವಾರೇ, ನಿಮ್ಮ ಮುಖದಾಗಿನ ರಂಗು ನೋಡಿದ್ರೆ ಸಾಹುಕಾರ್ರರ ಯಾವ್ದೋ ಹಳೇ ಮಾತು ನೆಪ್ಪಿಗೆ ಬಂದಿರ್ಬೇಕು."
"ಹೌದಜ್ಜ" ಎಂದು ಹೇಳಿದಳಾದ್ರೂ ಗಂಗಾಂಬಿಕಾ ಅದು ಏನು, ಎಂತ ಅಂತ ವಿವರ ಹೇಳ್ದೇ ಎಳ್ಳಚ್ಚಿದ ಬಿಳಿ ಜೋಳದ ರೊಟ್ಯಾಗ ಹೆಸರು ಕಾಳು, ಎಣ್ಣೆಗಾಯಿ ಬದ್ನೇಕಾಯಿ ಪಲ್ಯೆ, ಹಸಿಮೆಣಸಿನಕಾಯಿ ಚಟ್ನಿ, ಹುಣಸೀ ಚಟ್ನಿ ಹಚ್ಚಿ ಕೆನೆಮೊಸರು ಹಾಕಿ ಬಾಳಪ್ನ ಕೈಯಾಗಿಟ್ಳು. ಬಾಳಪ್ಪ ನಗುನಗ್ತಾ ರೊಟ್ಟಿ ಮುರ್ಕೊಂಡು ಪಲ್ಯೆ ಹಚ್ಗೊಳ್ಳತ, "ನೀನೂ ಉಂಡು ಬಿಡವ್ವಾ" ಎಂದ. 
"ಹಳ್ಳದ ದಂಡ್ಯಾಗೆ ಕುಳ್ತು ಉಣ್ಣೋ ರುಚಿ ಮನ್ಯಾಗ ಉಂಡ್ರೆ ಸಿಗಂಗಿಲ್ಲ ನೋಡು ತಾಯಿ." ಬಾಳಪ್ಪಜ್ಜನ ಮಾತು ಖರೇ ಅನಿಸಿದ್ವು ಗಂಗಾಂಬಿಕಾಳಿಗೆ.

ಗಂಗಾಂಬಿಕಾದೇವಿ ಐದು ಸೋಮ್ವಾರ ಮಠಕ್ಕೆ ಹೋಗಿ ಬಂದ್ಳು. ಬಾಳಪ್ಪಜ್ಜ ಪ್ರತಿಬಾರೆ ಆಕೆಯ ಜೊತೆಗೆ ಹೋಗಿ ಬರ್ತಿದ್ದ. ಪ್ರತಿಸಲ ಸ್ವಾಮೀಜಿಯ ಆಶೀರ್ವಾದ ಪಡೆಯಲು ಗಂಗಾಂಬಿಕೆ ಹೋದಾಗ ಸ್ವಾಮೀಜಿ ಅವ್ಳನ್ನು ಅಪಾದ ಮಸ್ತಕ ದಿಟ್ಟಿಸುತ್ತಿದ್ರು. 
"ಸಾಹುಕಾರ್ತಿ ಹೆಂಗದೀಯವ್ವ? ಆರಾಮ ಅದಿ ತಾನೇ? ಮಠಕ್ಕೆ ಬಂದು ಹೋಗುವಾಗಿನಿಂದ ಏನಾದ್ರೂ ಸುಧಾರಣೆ ಐತೇನು? ಏನಾದ್ರೂ ಹೊಸ ಸುದ್ದಿ ಐತೇನು? ಮುಂದಿನ ವಾರ ಮಠದಲ್ಲೇ ವಸ್ತಿ ಹಾಕ್ಬೇಕು ಅನ್ನೋದು ಗೊತ್ತಿರ್ಬೇಕಲ್ಲ?" ಮುಂದಿನ ವಾರದ ವಸ್ತಿಯ ಬಗ್ಗೆ ಸ್ವಾಮೀಜಿ ತಿಳಿಸಿದ್ದಾಗ ಗಂಗಾಂಬಿಕಾ ಗಾಬರಿಗೊಂಡಿದ್ಳು. 
"ಹಂಗೇನೂ ಹೊಸ ಸುದ್ದಿ ಇಲ್ಲ ಸ್ವಾಮೀಜಿ. ಮುಂದಿನ ವಾರ ವಸ್ತಿ ಹಾಕೋ ವಿಷಯ ನೆನಪಿನ್ಯಾಗ ಐತೆ ಸ್ವಾಮೀಜಿ" ಎಂದು ಚುಟುಕಾಗಿ ಹೇಳಿ ಅಲ್ಲಿಂದ ಹೊರಟಿದ್ಳು. 
ಆರ್ನೇ ವಾರ ಗಂಗಾಂಬಿಕಾ ಅಂಜಂಜುತ್ತಲೇ ಮಠಕ್ಕೆ ಬಂದು ಪೂಜೆ ಸಲ್ಲಿಸಿದ್ಳು. ಬಾಳಪ್ಪಜ್ಜ ಅವ್ಳ ಜೊತೆಗಿದ್ದ. ಅಂದು ಮಠದಲ್ಲಿ ಭಕ್ತರ ದಂಡೇ ಇದ್ದಿದ್ರಿಂದ ಸ್ವಾಮೀಜಿಯವ್ರಿಗೆ ಪುರುಷೊತ್ತೇ ಇರ್ಲಿಲ್ಲ. ಅವ್ರಿಗೆ ತುಸು ಬಿಡುವು ಸಿಕ್ಕಾಗ ಆಗ್ಲೇ ಸಂಜೆಯಾಗುತ್ತಲಿತ್ತು. ಗಂಗಾಂಬಿಕಾಳಂತೆ ಅಂದು ಮಠದಲ್ಲಿ ಉಳಿದುಕೊಳ್ಳುವ ಭಕ್ತರ ಸಂಖ್ಯೆಯೂ ಹೆಚ್ಚಿತ್ತು. ಉಳಿದುಕೊಳ್ಳಲು   ಸಾಹುಕಾರ್ತಿಗೊಬ್ಬಾಕೀಗೆ ಒಂದು ಚಿಕ್ಕ ಕೋಣೆಯನ್ನು ಕೊಡಲಾಗಿತ್ತು. ಉಳಿದವರು ದೊಡ್ಡ ಕೋಣೆಯೊಂದರಲ್ಲಿ ಇಪ್ಪತ್ತರಿಂದ ಮೂವತ್ತು ಜನರು ಇರ್ಬೇಕಾಗಿತ್ತು. ಶರಣಪ್ಪ ಸಾಹುಕಾರರು ಮಠಕ್ಕೆ ನೀಡಿದ್ದ ಭಕ್ತಿಯ ಕಾಣಿಕೆ ಅಪಾರವಾಗಿದ್ರಿಂದ ಆ ರೀತಿಯ ಸೌಲಭ್ಯ, ಸ್ಥಾನ-ಮಾನ ಇತ್ತು ಅವರ ಕುಟುಂಬದವರಿಗೆ. 
ಗಂಗಾಂಬಿಕಾ ರಾತ್ರಿ ಊಟಮಾಡಿ ಇನ್ನೇನು ಮಲಗುವ ಹವಣಿಕೆಯಲ್ಲಿದ್ದಾಗ ಸ್ವಾಮೀಜಿಯವರಿಂದ ಕರೆ ಬಂದಿತ್ತು. ಒಮ್ಮೆಲೇ ಅವ್ಳಿಗೆ ದಿಗಿಲಾಗಿತ್ತು. ಎದೆ ಧಸಕ್ಕೆಂದಿತು. ಎದೆಯಲ್ಲಿ ಡವ-ಡವ, ಬುಗಿಲು ಬುಗಿಲು. ಜೀವ ಕೈಯಲ್ಲಿ ಹಿಡ್ಕೊಂಡು ಬಾಳಪ್ಪಜ್ಜನ ಜೊತೆಗೆ ಹೋಗಿದ್ಳು. 
"ಏನವ್ವಾ ಸಾಹುಕಾರ್ತಿ, ನಿನ್ಗೆ ಉಳಕೊಳ್ಳಾಕ ಚೊಲೋ ವ್ಯವಸ್ಥೆ ಆಗೈತಿಲ್ಲ? ಏನಾದ್ರೂ ತ್ರಾಸು-ಗೀಸು ಇದ್ರೆ ಹೇಳು. ನಾವು ಮಠದ ಕಾರ್ಯದರ್ಶಿಗೆ ಹೇಳಿ ವ್ಯವಸ್ಥೆ ಮಾಡಿಸ್ತೇವೆ." ಸ್ವಾಮೀಜಿ ಗಂಗಾಂಬಿಕಾಳನ್ನೇ ದಿಟ್ಟಿಸುತ್ತಾ ಹೇಳಿದಾಗ ಅದೇನೋ ಒಂಥರ ನಡುಕ ಶುರುವಾಗಿತ್ತು.
"ಎಲ್ಲಾ ಸೌಕರ್ಯ ಚೊಲೋ ಐತೆ ಸ್ವಾಮೀಜಿ." ಪಟ್ಟಂತ ಹೇಳಿದ್ದಳು ಗಂಗಾ ಅಲ್ಲಿಂದ ಪಾರಾಗಲು. 
"ಹೌದಾ ಸರಿ. ಹಾಗಾದರೆ ಈಗ ಹೋಗಿ ಬೇಗ ಮಲಗಿ ಬೇಗ ಎದ್ದು ಬೆಳಗಿನ ವಿಶೇಷ ಪೂಜೆಗೆ ತಯಾರಾಗಿ ಬಾ" ಎಂದು ಹೇಳಿ ಕಳುಹಿಸಿದ್ದರು. 
ಪುಳ್ಳು-ಪುಕ್ಕುವಿನಲ್ಲಿ ಗಂಗಾಳಿಗೆ ಆ ದಿನ ಇಡೀ ರಾತ್ರಿ ಸರಿಯಾಗಿ ನಿದ್ರೆ ಬರ್ಲಿಲ್ಲ. ಅಷ್ಟಷ್ಟಕ್ಕೇ ಎಚ್ಚರವಾಗ್ತಿತ್ತು. ಬಾಳಪ್ಪಜ್ಜ ಆಕೆಯ ಕೋಣೆಯ ಹೊರಗೇ ಮಲಗಿದ್ದ. ಆದ್ರೂ ಆಕೆಯ ಎದೆಯೊಳ್ಗೆ ಅದೇನೋ ಒಂದ್ರೀತಿಯ ಅಳುಕು, ಹೆದರಿಕೆ ಇತ್ತು. ಬೆಳಗಿನ ಜಾವ ಗಂಗಾಳಿಗೆ ಗಾಢ ನಿದ್ರೆ ಆವರಿಸಿಕೊಂಡಿತ್ತು. ಬ್ರಾಹ್ಮೀ ಮುಹೂರ್ತಕ್ಕೆ ಒಂದು ತಾಸು ಮುಂಚಿತವಾಗಿ ಬಾಳಪ್ಪಜ್ಜ ಗಂಗಾಳನ್ನು ಎಬ್ಸಿದ್ದ ಪೂಜೆಗೆ ತಯಾರಾಗಲು. 
ಸ್ವಾಮೀಜಿ ಹೇಳಿದ ಸಮಯಕ್ಕೆ ಸರಿಯಾಗಿ ಗಂಗಾಂಬಿಕಾ ತಯಾರಾಗಿ ಪೂಜೆ ಮಾಡುವ ಸ್ಥಳಕ್ಕೆ ಹೋಗಿದ್ದಳು. ಎತ್ತರದ ಸ್ಥಾನದಲ್ಲಿ ಆಗಲೇ ಸ್ವಾಮೀಜಿ ವಿರಾಜಮಾನರಾಗಿದ್ದರು. ನೂರೆಂಟು ಭಕ್ತರೂ ಆಸೀನರಾಗಿದ್ದರು ಸ್ವಾಮೀಜಿಗೆ ಎದುರಿನ ಹಜಾರದಲ್ಲಿ. ಪೂಜೆ ನಿರಾತಂಕವಾಗಿ ಶುರುವಾಗಿತ್ತು ಸರಿಯಾದ ಸಮಯಕ್ಕೆ. ಹಾಗೇ ಪೂಜೇನೂ ಮುಗಿದಿತ್ತು ಹೇಳಿದ ಸಮಯದಲ್ಲಿ. 
"ಎಲ್ರೂ ಪ್ರಸಾದ ತೊಗೊಂಡು ನಿಮ್ಮ, ನಿಮ್ಮ ಊರಿಗೆ ಹೋಗ್ಬಹುದು. ಆ ಶಿವ ನಿಮಗೆಲ್ಲರಿಗೂ ಒಳ್ಳೇದು ಮಾಡ್ತಾನೆ." ಎಲ್ರಿಗೂ ಆಶೀರ್ವಚನ ನೀಡಿ ಕಳುಹಿಸಿದ್ರು ಸ್ವಾಮೀಜಿ. 
ಪ್ರಸಾದ ಸ್ವೀಕರಿಸಿ ಗಂಗಾ ಬಾಳಪ್ಪನ ಜೊತೆಗೆ ಹೊರಡಲು ತಯಾರಾಗಿದ್ದಳು. ಪುನಃ ಸ್ವಾಮೀಜಿಯವರಿಂದ ಅವ್ಳಿಗೆ ಬುಲಾವ್ ಬಂದಿತ್ತು. "ಮತ್ತೇನಪ್ಪ ಇದು? ಏನು ಗ್ರಾಚಾರ ಕಾದೈತೋ ಏನೋ? ಒಂದೂ ಗೊತ್ತಾಗವಲ್ತಲ್ಲ?" ಎಂದು ಮನದಾಗೇ ಅಂದುಕೊಳ್ತಾ ನಿಧಾನವಾಗಿ ಹೆಜ್ಜೆ ಹಾಕಿದ್ದಳು ಗಂಗಾ.
"ಏನಮ್ಮ ಇವತ್ತಿನ ಪೂಜೆ ಹೆಂಗೆ ಅನ್ಸಿತು?" ಅಂತ ವಿಚಾರಿಸಿದ್ರು ಸ್ವಾಮೀಜಿ.
"ತುಂಬಾ ಚೆನ್ನಾಗಿತ್ತು ಸ್ವಾಮೀಜಿ. ಬಾಳ ಇಷ್ಟ ಆತು ನಂಗೆ." ಗಂಗಾ ಮೆಲ್ಲಗೆ ಉಸುರಿದ್ದಳು. 
"ಮುಂದಿನ ವಾರದಿಂದ ಇನ್ನೂ ವಿಶೇಷ ಪೂಜೆಗಳು ಶುರುವಾಗುತ್ವೆ. ಸರಿ, ಹೋಗಿ ಬಾ. ಶಿವ ಒಳ್ಳೇದು ಮಾಡ್ಲಿ" ಎಂದು ಹೇಳಿ ಕಳುಹಿಸಿದ್ದರು ಸ್ವಾಮೀಜಿ.                      

ಎಂಟು ವಾರ ಮುಗ್ಸಿ ಒಂಭತ್ತನೇ ವಾರ ಗಂಗಾಂಬಿಕಾ ಮಠಕ್ಕೆ ಪೂಜೆಗಾಗಿ ಹೋಗಿದ್ಳು. ಮಾಮೂಲಿನಂತೆ ಪೂಜೆ, ಪ್ರಸಾದ ಮುಗ್ಸಿಕೊಂಡು ತನ್ನೂರಿಗೆ ಹೊರಡಲು ತಯಾರಿ ನಡೆಸಿದ್ಳು. ಸ್ವಾಮೀಜಿ ಕರೆಸಿದ್ರು ಆಕೆಯನ್ನು ತಮ್ಮ ಖಾಸಾ ಕೋಣೆಗೆ. ಅಳುಕುತ್ಲೇ ಜೀವಾನೇ ಕೈಯ್ಯಾಗಿಟ್ಕೊಂಡು ಸ್ವಾಮೀಜಿ ದರ್ಶನಕ್ಕೆ ಹೊರಟ್ಳು.
ತಮ್ಮ ಏಕಾಂತದ ಕೋಣೆಯಲ್ಲಿ ವಿಶೇಷ ಪೀಠದಲ್ಲಿ ಆಸೀನರಾಗಿದ್ದ ಸ್ವಾಮೀಜಿಯವರನ್ನು ಕಾಣುತ್ತಲೇ ಗಂಗಾಂಬಿಕಾಳ ಎದೆ ಧಸಕ್ಕೆಂದಿತು. ಬೇರೆ ಯಾವ ನರಮಾನವನ ಸುಳಿವೂ ಅಲ್ಲಿ ಇರಲಿಲ್ಲ. "ಗುರು ಬಸವೇಶ, ಕಾಪಾಡು ತಂದೆ" ಎಂದು ಮನದಲ್ಲೇ ತನ್ನ ಆರಾಧ್ಯ ದೈವವನ್ನು ನೆನೆಯುತ್ತ ಸ್ವಾಮೀಜಿಯವರಿಗೆ ನಮಿಸಿದಳು. 
"ಬಾ ಮಗಳೇ, ಬಾ. ಹೇಗಿದ್ದೀಯ?" ಎಂದು ಸ್ವಾಮೀಜಿ ಗಂಗಾಂಬಿಕಾಳನ್ನು ತಮ್ಮ ಪೀಠದ ಹತ್ತಿರ ಕರೆದಿದ್ದರು. 
"ಮಗಳೇ ಎಂದು ಯಾರನ್ನು ಕರೆಯುತ್ತಿದ್ದಾರೆ ಸ್ವಾಮೀಜಿ?" ತಬ್ಬಿಬ್ಬಾಗಿದ್ದ ಗಂಗಾಂಬಿಕಾ ಕತ್ತನ್ನು ತಿರುಗಿಸಿ ಸುತ್ತಲೂ ನೋಡಿದ್ಳು. "ಯಾರೂ ಕಾಣುತ್ತಿಲ್ಲವಲ್ಲ?" ಎಂದು ತನ್ನೊಳಗೇ ಅಂದುಕೊಳ್ಳುವಷ್ಟರಲ್ಲಿ, "ಮಗಳೇ ಗಂಗಾಂಬಿಕಾ, ನಿನಗೇ ಹೇಳಿದ್ದು. ಯಾಕೆ ನಮ್ಮ ಮಾತಿನಲ್ಲಿ ನಂಬಿಕೆ ಇಲ್ಲವೇ?"     
"ಮಗಳೇ" ಎಂಬ ಶಬ್ದ ಗಂಗಾಳ ಕಿವಿಯಲ್ಲಿ ಜೇನು ಸುರಿದಂತಾಗಿತ್ತು. ಆತಂಕ, ಗಾಬರಿ ಎಲ್ಲಾ ಮಾಯವಾಗಿದ್ದವು ತಕ್ಷಣ. 
"ಸ್ವಾಮೀಜಿ, ತಾವು ನನಗೇ ಮಗಳೇ ಎಂದು ಕರೆಯುತ್ತಿದ್ದೀರಾ?"
"ಹೌದಮ್ಮ ಹೌದು. ಮಗಳೆಂದು ನಿನ್ನನ್ನು ಕರೆದಿದ್ದಕ್ಕೆ ನಿನಗೇನಾದರೂ ಬೇಸರವಾತೇ? ಮಠಕ್ಕೆ ಬರುವ ಮಹಿಳೆಯರೆಲ್ಲರೂ ನಮಗೆ ತಾಯಿ, ಸಹೋದರಿ ಇಲ್ಲವೇ ಮಕ್ಕಳ ಸಮಾನ ಎಂದು ನಾವಂದುಕೊಂಡಿದ್ದೇವೆ. ಅಣ್ಣ ಬಸವಣ್ಣನವರೇ ನಮಗೆ ಆರಾಧ್ಯ ದೈವ."
"ತಮ್ಮಿಂದ ಮಗಳು ಎಂದು ಕರೆಸಿಕೊಳ್ಳುವುದು ನನ್ನ ಸೌಭಾಗ್ಯ ಎಂದು ಭಾವಿಸಿದ್ದೇನೆ ಸ್ವಾಮೀಜಿ. ಇದು ನನ್ನ ಜೀವನದ ಅತ್ಯಂತ ಅವಿಸ್ಮರಣೀಯ ಗಳಿಗೆ ಎಂದು ಅಂದುಕೊಳ್ಳುವೆ." ಗಂಗಾಂಬಿಕಾ ಸ್ವಾಮೀಜಿಯ ಪಾದುಕೆಗಳಿಗೆ ದೀರ್ಘದಂಡ ನಮಸ್ಕಾರ ಸಲ್ಲಿಸಿ ಕೈ ಕಟ್ಟಿಕೊಂಡು ನಿಂತುಕೊಂಡಳು. ಆದರೂ ಅವಳ ಮುಖದಲ್ಲಿ ಇನ್ನೂ ಗಾಬರಿಯೂ ಇತ್ತು.
"ಸಾಹುಕಾರ್ತಿ, ನೀನು ಇನ್ನೂ ಗಾಬರಿಯಲ್ಲಿರುವಂತಿದೆ...? ಮೊದಲ ದಿನದಿಂದ ನಿನಗೆ ನಮ್ಮ ನಡವಳಿಕೆಯ ಬಗ್ಗೆ ಅನುಮಾನವಿತ್ತಲ್ಲವೇ?" 
"ನಂಗೆ ನಿಜ್ವಾಗ್ಲೂ ಈಗ ಗಾಬ್ರಿಯಾಗ್ತಿದೆ. ನನ್ನ ಮನಸಿನ್ಯಾಗೆ ಇದ್ದುದು ಸ್ವಾಮೀಜಿಯ ಒಳಗಣ್ಣಿನ ಅರಿವಿಗೆ ಬಂದಂಗೈತೆ...? ಈಗ ನಾನು ಖರೇ ಹೇಳೋದೋ, ಸುಳ್ಳು ಹೇಳೋದೂ ಅಂತ ಒಂದು ಅರ್ಥವಾಗ್ಲಿಲ್ಲ...? ಇಲ್ಲ ಅಂತ ಸುಳ್ಳು ಹೇಳಿದ್ರೆ ಅದೂ ಇವ್ರಿಗೆ ತಮ್ಮ ದಿವ್ಯದೃಷ್ಟಿಯಿಂದ ಗೊತ್ತಾಗಿ ಬಿಡ್ತದೆ. ಖರೇ ಹೇಳೋದೇ ಸರಿ ಅಲ್ವಾ?" ಅಂತ ಮನದೊಳಗೇ ಅಂದ್ಕೊಂಡು ಗಂಗಾ, "ಹೌದು ಸ್ವಾಮೀಜಿ" ಅಂತ ಅಂದ್ಳು ನಡುಕದಲ್ಲಿ. 
"ನೋಡು ಮಗು ಗಂಗಾಂಬಿಕಾ, ಸಾಹುಕಾರರ ಮನೆತನಕ್ಕೂ ನಮ್ಮ ಮಠಕ್ಕೂ ತಲೆತಲಾಂತರದಿಂದ ಅವಿನಾಭಾವ ಸಂಬಂಧವಿದೆ. ಆ ಪರಂಪರೆ ಮುಂದುವರಿದುಕೊಂಡು ಬಂದಿದೆ. ನಮ್ಮದು ವಿರಕ್ತ ಮಠ. ಹೆಣ್ಣನ್ನು ತಾಯಿಯ ಸ್ಥಾನದಲ್ಲಿರಿಸಿ ಪೂಜಿಸುವ ಪರಿಪಾಠವಿದೆ ನಮ್ಮ ಮಠಕ್ಕೆ. ಇತ್ತೀಚಿನ ದಿನಗಳಲ್ಲಿ ಕೆಲವು ಸ್ವಾಮೀಜಿಯವರು ಅನೈತಿಕತೆಯಲ್ಲಿ ತೊಡಗಿರುವುದು ನಿನ್ನ ಗಮನಕ್ಕೆ ಬಂದಿರಬಹುದು. ಅದಕ್ಕೇ ಹನ್ನೊಂದು ವಾರಗಳವರೆಗೆ ಮಠಕ್ಕೆ ಬರುವುದಕ್ಕೆ ಮತ್ತು ಕೆಲವು ಸಾರೆ ಮಠದಲ್ಲೇ ವಸ್ತಿ ಇರಲು ತಿಳಿಸಿದ್ದಕ್ಕೆ ನಿನ್ನ ಮನಸ್ಸಿನಲ್ಲಿ ನಮ್ಮ ಬಗ್ಗೆ ಅನುಮಾನ ಮೂಡಿರಬೇಕು. ನಾವೂ ಆಶಾಡಭೂತಿ ಸ್ವಾಮಿಗಳಂತೆಯೇ ಇರಬೇಕು ಎಂದು ನೀನು ಅಂದುಕೊಂಡಿರಬಹುದು."
"ಸ್ವಾಮೀಜಿ ನಂದು ಬಾಳ ತಪ್ಪಾಗಿಬಿಟ್ಟೈತೆ. ಕ್ಷಮಿಸಿಬಿಡ್ರಿ."  
"ನಿನ್ನ ಮನಸಿನ್ಯಾಗೆ ನೀನು ಕಲ್ಪಿಸಿಕೊಂಡಿದ್ದು ಸಹಜವೇ. ಇರಲಿ ಬಿಡು, ನಾವು ಮಗಳೇ ಅಂತ ಕರೆದು ಬಿಟ್ಟೆವಲ್ಲ, ಕ್ಷಮಿಸಿದಂತೆಯೇ. ಮಗಳೇ, ನೀನು ಗಮನಿಸಿರಬಹುದು. ನಾವು ಭಕ್ತರಿಂದ ಯಾವತ್ತೂ ನಮ್ಮ ಪಾದಗಳನ್ನು ಮುಟ್ಟಿ ನಮಸ್ಕರಿಸುವುದಕ್ಕೆ ಹೇಳುವುದಿಲ್ಲವೆಂಬುದು. ಅದೇನಿದ್ದರೂ ಪಾದುಕೆಗಳಿಗೆ ನಮಸ್ಕರಿಸಿದರೆ ಸಾಕು ಅಷ್ಟೇ ಅಂತ ಹೇಳುತ್ತೇವೆ. ಭಕ್ತರೆಲ್ಲರನ್ನೂ ನಾವು ಸಮಾನಭಾವದಿಂದ ನೋಡುತ್ತೇವೆ. ಸರ್ವರಿಗೂ ಒಳಿತಾಗಲೆಂದು ಶಿವನಲ್ಲಿ ಪ್ರಾರ್ಥಿಸುತ್ತೇವೆ. ತಮ್ಮ ಮನದಾಸೆಗಳನ್ನು ಈಡೇರಿಸಿಕೊಳ್ಳಲು ನೂರೆಂಟು ಹರಕೆಗಳನ್ನು ಹೊತ್ತುಕೊಂಡು ಇಲ್ಲಿಗೆ ಬರುವ ಭಕ್ತರ ಮನದಲ್ಲಿ ಆತ್ಮವಿಶ್ವಾಸ ಮತ್ತು ಆತ್ಮಸ್ಥೈರ್ಯವನ್ನು ಮೂಡಿಸಬೇಕಾದದ್ದು ನಮ್ಮ ಕರ್ತವ್ಯ. ಆತ್ಮವಿಶ್ವಾಸ ಮತ್ತು ಆತ್ಮಸ್ಥೈರ್ಯ ಹೆಚ್ಚಾದಂತೆ ಮನುಷ್ಯ ಸಕಾರಾತ್ಮಕವಾಗಿ ಸ್ಪಂದಿಸಲು ಮುಂದಾಗುತ್ತಾನೆ. ಆಗ ಅವರ ಮನದಾಳದ ಆಸೆಗಳು ತನ್ನಿಂದ ತಾನೇ ಕಾರ್ಯರೂಪಕ್ಕೆ ಬರಲು ಶುರುವಾಗುತ್ತವೆ. ನಿನ್ನ ವಿಷಯದಲ್ಲೂ ನಾವು ಅದನ್ನೇ ಮಾಡುತ್ತಿದ್ದೇವೆ. ಮಠಕ್ಕೆ ಬರುತ್ತಿರುವ ಈ ಕೆಲವೊಂದು ವಾರಗಳಲ್ಲಿ ನಿನ್ನಲ್ಲೂ ಸಕಾರಾತ್ಮಕ ಬದಲಾವಣೆಗಳಾಗಿರಬೇಕು ಎಂಬುದು ನಮ್ಮ ಊಹೆ. ಏನಂತೀಯ ಮಗಳೇ?"
"ಹೌದು ಸ್ವಾಮೀಜಿ, ನನ್ನಲ್ಲೂ ಬದಲಾವಣೆಯಾಗುತ್ತಿರುವ ಸೂಚನೆಗಳು ಬಂದಾಗಿವೆ. ಆಶಾಕಿರಣ ಮೂಡುತ್ತಿರುವ ಅನುಭವ ನನ್ನೆದೆಯಲ್ಲಿ, ನನ್ನೊಡಲಲ್ಲಿ. ಮನದಲ್ಲಿ ತುಸು ಗೊಂದಲವಿದ್ದರೂ ಅದೇನೋ ಗೊತ್ತಿಲ್ಲ, ಈ ತಿಂಗಳು ನಾನು ತಲೆ ಮೇಲೆ ನೀರು ಹಾಕಿಕೊಂಡಿಲ್ಲ. ಸ್ವಾಮೀಜಿ."
"ಹಾಗಾದರೆ ನಾವು ಹೇಳಿದ್ದು ಸತ್ಯವಾಗುವ ಕಾಲ ಸನ್ನಿಹಿತವಾಗಿದೆ ಎಂದಂಗಾಯಿತು. ತಾಯ್ತನದ ನೋವು-ನಲಿವನ್ನು ಅನುಭವಿಸಬೇಕು, ಬೇಗ ತಾಯಿಯಾಗಬೇಕು ಎಂಬ ಮಹದಾಸೆ ನಿನ್ನಲ್ಲಿ ಅಂಕುರಿಸಿದ್ದರಿಂದ ಅದಕ್ಕೆ ಪೂರಕವಾಗಿ ನಿನ್ನ ಆತ್ಮವಿಶ್ವಾಸ, ಆತ್ಮಸ್ಥೈರ್ಯಗಳೂ ಜೊತೆಗೂಡಿ ಕಾರ್ಯ ಸಾಧಿಸಿವೆ. ಶುಭಮಸ್ತು ಮಗಳೇ."
"ತಂದೆಯೇ, ನಿಮ್ಮಲ್ಲಿ ನನ್ನದೊಂದು ಮನವಿ..."
"ಹೇಳು ಮಗಳೇ?"
"ಮಗಳೇ ಎಂದು ತಾವು ಹೇಳುತ್ತಿರುವಾಗ, ಈ ನಿಮ್ಮ ಮಗಳಿಗೆ ತಮ್ಮ ಪಾದಸ್ಪರ್ಷ ಮಾಡಿ ನಮಸ್ಕರಿಸಿ ಆಶೀರ್ವಾದ ಪಡೆಯುವ ಆಸೆ. ಬೇಡಿಕೆಯನ್ನು ಮನ್ನಿಸಬೇಕಾಗಿ ವಿನಂತಿ."
"ತಥಾಸ್ತು ಮಗಳೇ, ನಿನ್ನಿಚ್ಛೆಯಂತೆಯೇ ಆಗಲಿ."
ಗಂಗಾಂಬಿಕಾಳ ಎದೆ ತುಂಬಿ ಬಂದಿತ್ತು. ಭಾವೋದ್ವೇಗದಿಂದ ಸ್ವಾಮೀಜಿಯ ಚರಣಗಳಿಗೆ ನಮಿಸುತ್ತಾ ಆನಂದಬಾಷ್ಪದ ಅಭಿಷೇಕ ಮಾಡಿದಳು. ಸಾಹುಕಾರ್ತಿಯನ್ನು ಕರೆದುಕೊಂಡು ಹೋಗಲು ಬಂದಿದ್ದ ಬಾಳಪ್ಪ ಆ ಅವಿಸ್ಮರಣೀಯ ದೃಶ್ಯವನ್ನು ಕಣ್ಗಳಲ್ಲಿ ತುಂಬಿಕೊಳ್ತಾ ಆನಂದಿಸತೊಡಗಿದ. 

*ಶೇಖರಗೌಡ ವೀ ಸರನಾಡಗೌಡರ್

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

6 thoughts on “ಅನುಮಾನವೆಂಬ ಹುತ್ತದ ಸುತ್ತ…”

  1. JANARDHANRAO KULKARNI

    ಕಥೆಯ ಹರಿವು ಎಲ್ಲಿಗೋ ಹೋಗುತ್ತದೆ ಅನ್ನುವಷ್ಟರಲ್ಲಿ ಸಕಾರಾತ್ಮಕ ಅಂತ್ಯ ಕಂಡು ಅನುಮಾನಕ್ಕೆ ತೆರೆ ಎಳೆದಿದ್ದು ಸೊಗಸಾಗಿತ್ತು.

  2. ಧರ್ಮಾನಂದ ಶಿರ್ವ

    ಕಥೆ ಸೊಗಸಾಗಿದೆ. ಮುಂದೇನೋ ಅನಾಹುತ ನಡೆಯಬಹುದು ಅಂದುಕೊಂಡು ಓದುತ್ತಿದ್ದವರಿಗೆ ಸಾತ್ವಿಕ ತಿರುವು ಸಮಾಧಾನ ಕೊಡುವಂತಿದೆ.
    ಅಭಿನಂದನೆಗಳು

    1. ಬಿ.ಟಿ.ನಾಯಕ್.

      ‘ಅನುಮಾನವೆಂಬ ಹುತ್ತದ ಸುತ್ತ…’ ಸರಾಗವಾಗಿ ಸಾಗಿ, ಸುರಕ್ಷಿತವಾಗಿ ತನ್ನ ಗುರಿ ತಲುಪಿದೆ. ಇಂಥಹ ರಚನೆ ಬಹಳ ಕಷ್ಟ ಸಾಧ್ಯ. ಆದರೇ ಲೇಖಕರು ಕಥಾ ಲೋಕದಲ್ಲಿ ಬಹಳೇ ನುರಿತವರಾದುದ್ದರಿಂದ ಈ ಕಥೆಗೆ ಮೆರುಗು ತಂದಿದ್ದಾರೆ. ಅವರ ಸಾಹಿತ್ಯ ಶಕ್ತಿಗೆ ಅಭಿನಂದನೆಗಳು. : ಬಿ.ಟಿ.ನಾಯಕ್.

  3. Chintamani Sabhahit

    ನಂಬಿಕೆ ಮತ್ತು ವಿಶ್ವಾಸಗಳಲ್ಲಿ ಹುಟ್ಟುವ ಆಶಯ, ಅಪೇಕ್ಷಿತ ಪರಿಣಾಮದ ನಿರೀಕ್ಷೆಯಲ್ಲಿ, ಭಯ, ಅನುಮಾನಗಳೆಂಬ ವರ್ತುಲದಲ್ಲಿ ಹಾದು ಹೋಗುವ ಒಂದು ಅನಿವಾರ್ಯತೆಯನ್ನು ಸಹಿಸಿಕೊಳ್ಳಬೇಕಾದ ಮಹತ್ವಾಕಾಂಕ್ಷೆಗೆ ಆಧಾರವಾಗುವದು : ಒಂದು ದೂರದ, ಕಾಣದ, ಅಂತರಂಗದ, ಅದಮ್ಯ ಭರವಸೆ!

    ಸಂಭಾಷಣೆಯ ಮಾಧ್ಯಮದಲ್ಲೇ ಓಲಾಡುವ ಈ ವಾರದ ಕತೆಯ ಯಾತ್ರೆ ಮುಗಿಸುತ್ತಿರುವಂತೆ ಜಯವಾಗುವದು, ದೇವರ ಮೇಲಿನ ಈ ಭರವಸೆಯೇ!

    ಮಠದ / ಮಠಗಳ ಸ್ವಾಮಿಗಳ ಧಾರ್ಮಿಕ ನಿಷ್ಠೆಯ ನಿಯತ್ತಿನ ಮೇಲೆ, ದಿನವಿಡೀ ಬೇರೆ ಬೇರೆ ಪತ್ರಿಕೆಗಳಲ್ಲಿ, ಸುಳಿದಾಡುವ ನಿಂದನೆಯ ಊಹಾಪೋಹಗಳು ಸುಳ್ಳಾಗಲೀ ಅಂತ ಜನರು ಪ್ರಾರ್ಥಿಸಿದರೂ, ವರದಿಯ ಪ್ರಕಾರ ಕಂಡುಬರುವ ಅನೇಕ ಆಕ್ರೋಶ, ಆಕ್ರಂದನಗಳಲ್ಲಿ, ಸ್ರೋತವಾಗುವ ಸತ್ಯಾಸತ್ಯತೆಯಲ್ಲಿ ಉಕ್ಕಿ ಬರುವ ಕಠೋರ ಉದಾಹರಣೆಗಳು, ಮಠಗಳ, ಮಠದ ಸ್ವಾಮಿಗಳ ಮೇಲೆ, ಜನರಿಟ್ಟಿರುವ ಶ್ರದ್ಧೆಯನ್ನೇ ಬುಡಮೇಲು ಮಾಡುತ್ತಿರುವ ಸಧ್ಯದ ಕರಾಳ ಪರಿಸ್ಥಿತಿಯಲ್ಲಿ ಬರೆದ ಈ ಕತೆ, ಅವೆಲ್ಲ ಸಂಶಯಗಳಲ್ಲಿ ತುಳಿದಾಡುತ್ತ, ಆ ಭೀಷಣ ಆತಂಕವನ್ನೇ ಬುಡಮೇಲು ಮಾಡುವದು ಆಶಾ ಕಿರಣದ ಒಂದು ಗಮನಾರ್ಹ ಅಂಶ!

    ಸುದೀರ್ಘವೆನಿಸಿದರೂ, ಸರಾಗವಾಗಿ ಓದಿಸಿಕೊಳ್ಳುವ ಕತೆ.

  4. Dr Madhavi S Bhandary

    ಕಥೆಯಲ್ಲಿರುವ ಸಕಾರಾತ್ಮಕ ಬೆಳವಳಿಗೆ ಇಂದಿನ ತುರ್ತು. ಅಭಿನಂದನೆಗಳು.

  5. Raghavendra Mangalore

    ಗ್ರಾಮೀಣ ಭಾಷೆಯ ಕಥೆ ತುಂಬಾ ಸರಾಗವಾಗಿ ಓದಿಸಿಕೊಂಡು ಹೋಗುವಲ್ಲಿ ಯಶಸ್ವಿಯಾಗಿದೆ. ಸಕಾರಾತ್ಮಕ ಅಂತ್ಯ ಕಥೆಯ ತೂಕವನ್ನು ಮತ್ತಷ್ಟು ಹೆಚ್ಚಿಸಿದೆ.ಒಟ್ಟಿನಲ್ಲಿ ಉತ್ತಮ ಕಥೆ ಓದಲು ನೀಡಿದ ನಿಮಗೆ ಅಭಿನಂದನೆಗಳು.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter