ಮಿಂಚಿನ ಬಳ್ಳಿ- ವಿಕಾಸ ಹೊಸಮನಿ ಅಂಕಣ l ‘ಆತ್ಮಾವಲೋಕನ ಸಭೆ’

ನನ್ನ ಹಿರಿಯ ಮಿತ್ರ ಡಾ.ನಾಗರಾಜನಿಗೆ ಹುಬ್ಬಳ್ಳಿಯ ಜಂಗ್ಲಿಪೇಟೆಯ ಮಲ್ಲಮ್ಮನ ಅಟ್ಟದಲ್ಲಿ ನಡೆಯಲಿರುವ ೨೦೨೩ರ ವಿಶ್ವಕಪ್ ಫೈನಲ್ ಪಂದ್ಯದ ಸೋಲಿನ ಆತ್ಮಾವಲೋಕನ ಸಭೆಯ ಆಮಂತ್ರಣ ಪತ್ರಿಕೆಯ ಸಾಫ್ಟ್ ಕಾಪಿ ವಾಟ್ಸಪ್ ಮೂಲಕ ತಲುಪಿತು. ವಿಶ್ವಕಪ್ ಕೈ ತಪ್ಪಿದ ದುಃಖದಲ್ಲಿದ್ದ ಡಾ.ನಾಗರಾಜನಿಗೆ ಈ ಆತ್ಮಾವಲೋಕನ ಸಭೆಗೆ ಹೋದರೆ ಕೊಂಚ ದುಃಖ ಕಡಿಮೆಯಾದೀತು ಎಂಬ ಭರವಸೆಯಿಂದ ಸಭೆಗೆ ಹಾಜರಾಗುವುದಾಗಿ ಮೆಸೇಜ್ ಕಳಿಸಿದ. ಸಭೆ ನಡೆಯುವ ದಿನ ಅವನು ಸ್ವಲ್ಪ ತಡವಾಗಿ ಹೋದ. ಅದಾಗಲೇ ಎಂಬತ್ತಕ್ಕೂ ಅಧಿಕ ಅಭಿಮಾನಿಗಳು ಬಂದು ಸೇರಿದ್ದರು.

ಸಭೆಯ ಆರಂಭದಲ್ಲಿ ಐಶ್ವರ್ಯ ರೈ ಕನ್ಯಾ ಸಂಘದ ಅಧ್ಯಕ್ಷೆ ಅನುಪಮಾ ವಿಶ್ವಕಪ್ ಸೋತ ಭಾರತ ತಂಡದ ಬಗ್ಗೆ, ಫೈನಲ್ ಪಂದ್ಯ ನಡೆದ ಕೆಟ್ಟ ದಿನದ ಬಗ್ಗೆ ಮನ ಕರಗುವಂತೆ ಮಾತನಾಡಿದಳು. ರೋಹಿತ್ ಭಯ್ಯಾ ಮತ್ತು ವಿರಾಟ್ ಭಯ್ಯಾ ಪಂದ್ಯ ಸೋತ ನಂತರ ಕಣ್ಣೀರಿಟ್ಟ ಬಗ್ಗೆ ಹೇಳುವಾಗ ಗದ್ಗದಿತಳಾಗಿ ಹೋ… ಎಂದು ಅತ್ತಳು. ಅವಳು ಅತ್ತದ್ದು ನೋಡಿ ಸಭಿಕರು ಸಹ ಕಣ್ಣೀರು ಒರೆಸಿಕೊಂಡರು. ಅನುಪಮಳ ಗುಪ್ತಪ್ರೇಮಿಯಾದ ಬೆಂಕಿ ಬಾಯ್ಸ್ ಟೀಮಿನ ಕ್ಯಾಪ್ಟನ್ ಬಸು ಮಾತು ಬರದೆ ಮೂಕನಂತೆ ಅವಳನ್ನೇ ದಿಟ್ಟಿಸುತ್ತಿದ್ದ. ಆತ್ಮಾವಲೋಕನ ಸಭೆ ಶೋಕಸಭೆಯಾಗಿ ಮಾರ್ಪಡುತ್ತಿರುವುದನ್ನು ಗಮನಿಸಿದ ಡಾ.ನಾಗರಾಜ, ಮೊಬೈಲಿನಲ್ಲಿ ಹೊಸ ಹೊಸ ಬಟ್ಟೆಗಳು ಯಾವ್ಯಾವ ಆನ್‌ಲೈನ್ ಶಾಪುಗಳಲ್ಲಿ ರಿಯಾಯತಿ ದರದಲ್ಲಿ ಸಿಗುತ್ತವೆ ಎಂದು ಹುಡುಕುವುದರಲ್ಲಿ ಮಗ್ನಳಾಗಿದ್ದ ಸ್ಲಿವ್ಲೆಸ್ ಪೂರ್ಣಿಮಾಳಿಗೆ ಅನುಪಮಳನ್ನು ಸಂಭಾಳಿಸಲು ಹೇಳಿದ ನಂತರ ಎರಡ್ಮೂರು ಬಾರಿ ಕೆಮ್ಮಿ, ಕ್ಯಾಕರಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಲು ಆರಂಭಿಸಿದ.

“ಭಾರತ ಕ್ರಿಕೆಟ್ ತಂಡಕ್ಕೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂಥ ಸ್ಥಿತಿಯುಂಟಾಗಿದ್ದು ಇದೇ ಮೊದಲೇನಲ್ಲ. ೨೦೦೩ರಲ್ಲಿ ನನ್ನ ಮಾನಸ ಗುರು ಮತ್ತು ಜಗತ್ತಿನ ಸರ್ವಶ್ರೇಷ್ಠ ಎಡಗೈ ಬ್ಯಾಟರುಗಳಲ್ಲಿ ಒಬ್ಬರಾದ ಪ್ರಿನ್ಸ್ ಸೌರವ್ ಗಂಗೂಲಿಯವರಿಗೂ ಸಹ ಹೀಗೇ ಆಗಿತ್ತು. ಭಾರತ ಒಟ್ಟು ನಾಲ್ಕು ಬಾರಿ ಫೈನಲ್ಲಿಗೆ ಬಂದಿತ್ತು. ಅದರಲ್ಲಿ ಎರಡು ಬಾರಿ ಚಾಂಪಿಯನ್ ಮತ್ತು ಎರಡು ಬಾರಿ ರನ್ನರ್ಸ್ ಅಪ್ ಆಗಲು ಸಾಧ್ಯವಾಗಿತ್ತು. ಎರಡೂ ಬಾರಿ ಫೈನಲ್ಲಿನಲ್ಲಿ ಸೋತಿದ್ದು ಆಸ್ಟ್ರೇಲಿಯ ವಿರುದ್ಧವೇ ಎಂಬುದನ್ನು ಎಲ್ಲ ಭಾರತೀಯರೂ ಗಮನಿಸಬೇಕಿದೆ. ಆಗ ಸಚಿನ್-ಸೌರವ್ ಎಂಬ ಸಿಂಹ ಜೋಡಿಯಿತ್ತು. ಈ ಬಾರಿ ವಿರಾಟ್-ರೋಹಿತ್ ಎಂಬ ಸಿಂಹ ಜೋಡಿಯಿತ್ತು. ಇಷ್ಟೆಲ್ಲ ಇದ್ದೂ ಯಕಶ್ಚಿತ್ ಪ್ಯಾಟ್ ಕಮ್ಮಿನ್ಸ್ ಎಂಬ ಹುಚ್ಚಂಗಿ ಮಗನ ನೇತೃತ್ವದ ಆಸ್ಟ್ರೇಲಿಯ ವಿರುದ್ಧ ಸೋತದ್ದನ್ನು ನನಗಿನ್ನೂ ನಂಬಲು ಸಾಧ್ಯವಾಗುತ್ತಿಲ್ಲ. ೨೦೦೩ರಲ್ಲಿ ಠಕ್ಕರ ಗುರುವಾದ ರಿಕ್ಕಿ ಪಾಂಟಿಂಗ್ ತನ್ನ ಬ್ಯಾಟಿನ್ ಮೇಲ್ಮೈಗೆ ಗ್ರಾಫೈಟ್ ದ್ರಾವಣ ಸವರಿಕೊಂಡು ಬಂದು ಮೋಸದ ಆಟವಾಡಿ, ಶತಕ ಗಳಿಸಿ ಆಸ್ಟ್ರೇಲಿಯ ತಂಡ ಗೆಲ್ಲುವಂತೆ ಮಾಡಿದ ವಿಚಾರ ತುಂಬ ಜನಕ್ಕೆ ಗೊತ್ತಿಲ್ಲ.” ಎಂದು ರಸಾಯನಶಾಸ್ತ್ರದ ಹಿನ್ನಲೆಯಲ್ಲಿ ತಜ್ಞ ವಿವರಣೆ ನೀಡಿದ. ಇದಕ್ಕೆ ಅಲ್ಲಿ ಕೂಡಿದ ಮಂದಿ ಜೋರಾಗಿ ಚಪ್ಪಾಳೆ ತಟ್ಟುವ ಮೂಲಕ ಒಪ್ಪಿಗೆ ಸೂಚಿಸಿದರು.

ನಾಗರಾಜನ ನಂತರ ಜಂಗ್ಲಿಪೇಟೆಯ ವಿರಾಟ್ ಕೊಹ್ಲಿ ಅಭಿಮಾನಿ ಬಳಗದ ಅಧ್ಯಕ್ಷ ಕಲ್ಲೇಶಿ ಮಾತು ಆರಂಭಿಸಿದ. “೨೦೦೩ರಲ್ಲಿ ಮೋಸದಿಂದ ಭಾರತಕ್ಕೆ ಸಿಗಬೇಕಿದ್ದ ವಿಶ್ವಕಪ್ ಕಸಿದುಕೊಂಡ ಆಸ್ಟ್ರೇಲಿಯನ್ನರು ನಮಕ್ ಹರಾಮಿ ಮಂದಿ ಅನ್ನೋದನ್ನ ನನ್ನ ಗುರು ಡಾ.ನಾಗರಾಜರು ವೈಜ್ಞಾನಿಕವಾಗಿ ಸಾಬೀತು ಮಾಡಿದ್ದಾರೆ. ಬ್ಯಾಟಿಗೆ ರಾಸಾಯನಿಕ ದ್ರಾವಣ ಸವರಿಕೊಂಡು ಬಂದು ಆಟವಾಡುವ ಈ ಕೆಂಪು ಮೂತಿಯ ಮಕ್ಕಳು ವಿಶ್ವಕಪ್ ಫೈನಲ್ ಪಂದ್ಯದ ದಿನ ಪಿಚ್ಚಿಗೆ ಸಹ ರಾಸಾಯನಿಕ ದ್ರಾವಣ ಯಾಕೆ ಸಿಂಪಡಿಸಿರಬಾರದು? ಡಾ.ನಾಗರಾಜರು ಇದರ ಕುರಿತು ಕೂಲಂಕಷವಾಗಿ ಅಧ್ಯಯನ ಮಾಡಿ ಒಂದು ಪುಸ್ತಕ ಬರೆಯಬೇಕೆಂದು ಅವರಲ್ಲಿ ಕೇಳಿಕೊಳ್ಳುತ್ತೇನೆ. ಹಿಂದೆ ಸಚಿನ್ ತೆಂಡೂಲ್ಕರ್ ಅವರು ಸರಣಿ ಶ್ರೇಷ್ಠರಾದರೂ ಭಾರತ ಸೋತಿತ್ತು. ಈ ಬಾರಿ ವಿರಾಟ್ ಕೊಹ್ಲಿ ಅವರು ಸರಣಿ ಶ್ರೇಷ್ಠರಾದರೂ ಸಹ ಭಾರತ ಸೋತಿದೆ. ನಮಗೆಲ್ಲಾ ಇದರಿಂದ ಎಷ್ಟು ದುಃಖವಾಗಿದೆ ಎಂಬುದರ ಕಲ್ಪನೆ ತುಂಬ ಜನಕ್ಕೆ ಇಲ್ಲ.” ಎಂದು ಕರವಸ್ತ್ರದಿಂದ ಕಣ್ಣೀರು ಒರೆಸಿಕೊಂಡ.

ಯಂಗ್ ಟೈಗರ್ಸ್ ಟೀಮಿನ ಸ್ಪಿನ್ ಬೌಲರ್ ಗಂಗಾಧರ ಅಲಿಯಾಸ್ ಗೂಗ್ಲಿ ಗಂಗೂ ಜ್ಯೋತಿಷ್ಯ ಶಾಸ್ತ್ರ ಬಲ್ಲವ. ಅವನು ಸಹ ಉತ್ಸಾಹದಿಂದ ವಾದ ಮಂಡಿಸಿದ. “ಫೈನಲ್ ನಡೆದ ನವೆಂಬರ್ ೧೯ ಭಾರತ ತಂಡಕ್ಕೆ ಆಗಿ ಬರುವ ದಿನವಲ್ಲ. ಈ ೧೩, ೧೯ ಸಂಖ್ಯಾಶಾಸ್ತ್ರ ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅಪಶಕುನದ ದಿನಗಳು. ನಾಯಕ ರೋಹಿತ್ ಶರ್ಮರಿಗೆ ಗುರುಬಲವಿರಲಿಲ್ಲ. ಒಳ್ಳೆಯ ಸಮಯದಲ್ಲಿ ಗುರು ಕೈಕೊಟ್ಟದ್ದರಿಂದ ದ್ವಿಶತಕ ಬಾರಿಸಬೇಕಿದ್ದ ರೋಹಿತ್ ಭಯ್ಯಾ ಕೇವಲ ೪೭ಕ್ಕೆ ಔಟಾದರು. ಇನ್ನು ಕೊಹ್ಲಿಯ ಜಾತಕ ಪರಿಶೀಲಿಸಿದಾಗ ರಾಹು-ಕೇತುಗಳು ನವೆಂಬರ್ ೧೯ರಂದೇ ಅವರ ರಾಶಿಯನ್ನು ಪ್ರವೇಶಿಸಿದ್ದನ್ನು ನಾನು ಗಮನಿಸಿದೆ. ಸುದೈವದಿಂದ ಗುರು ಮತ್ತು ಶನಿ ಗ್ರಹಗಳ ಕೃಪಾಕಟಾಕ್ಷದಿಂದ ಅದನ್ನೆಲ್ಲ ಮೀರಿ ಕೊಹ್ಲಿ ಅರ್ಧ ಶತಕ ಹೊಡೆದರಾದರೂ ಶತಕ ಹೊಡೆಯುವಲ್ಲಿ ವಿಫಲವಾದರು. ಶುಭಮಾನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಇಬ್ಬರೂ ಸಹ ಅವಿವಾಹಿತರು. ಇವರಿಬ್ಬರ ಜಾತಕ ಪರಿಶೀಲಿಸಿದಾಗ ಕುಜದೋಷದ ಲಕ್ಷಣಗಳು ಕಂಡು ಬಂದವು. ಕುಜದೋಷದ ಪರಿಹಾರ ಮಾಡಿದ್ದರೆ ಅಥವಾ ಇವರಿಬ್ಬರಲ್ಲಿ ಒಬ್ಬರಾದರೂ ಗುರುಬಲವಿರುವ ಕನ್ಯೆಯನ್ನು ಮದುವೆಯಾಗಿ ನಂತರ ಫೈನಲ್ ಆಡಿದ್ದರೆ ಇವರಿಂದ ಒಂದು ಒಳ್ಳೆಯ ಇನ್ನಿಂಗ್ಸ್ ನಿರೀಕ್ಷಿಸಬಹುದಿತ್ತು. ಇನ್ನು ಬೌಲರುಗಳ ಜಾತಕ ಪರಿಶೀಲಿಸಿದಾಗ ಎಲ್ಲ ಗ್ರಹಗಳು ಅವರ ವಿರುದ್ಧ ಒಟ್ಟಾಗಿ ಮಸಲತ್ತು ಮಾಡಿದವು ಎಂಬುದನ್ನು ನಾವು ಗಮನಿಸಬೇಕಿದೆ. ಇಲ್ಲದಿದ್ದರೆ ನಮ್ಮ ಬೌಲರುಗಳನ್ನು ಕಂಡು ಗಡಗಡ ನಡುಗುವ ಬ್ಯಾಟರುಗಳಿರುವ ಹೊತ್ತಿನಲ್ಲಿ ಕ್ರಿಕೆಟ್‌ನ ಬಾಲ ಮಕ್ಕಳಾದ ಟ್ರಾವಿಸ್ ಹೆಡ್ ಮತ್ತು ಮಾರ್ಕಸ್ ಲಬುಶೇನನಂತಹವರು ಶತಕ, ಅರ್ಧ ಶತಕ ಹೊಡೆಯುವುದೆಂದರೇನು?” ಎಂದು ಹೇಳಿ ಮುಗಿಸುವಷ್ಟರಲ್ಲಿ ಕಲ್ಲೇಶಿ ಮತ್ತು ಸ್ಲಿವ್ಲೆಸ್ ಪೂರ್ಣಿಮಾ ಬಂದು ಗಂಗೂನ ಕಾಲಿಗೆ ಬಿದ್ದು ನಮಸ್ಕರಿಸಿದರು. ಕಲ್ಲೇಶಿಯ ತಲೆಯ ಮೇಲೆ ಮಮತೆಯಿಂದ ಕೈಯಾಡಿಸಿದ ಗಂಗೂ, ಪೂರ್ಣಿಮಾಳ ಕ್ಲಾಥ್ ಲೆಸ್ ಬೆನ್ನ ಮೇಲೆ ಯಥೇಚ್ಛ ಕೈಯಾಡಿಸಿ ತನ್ನ ಬ್ರಹ್ಮಚಾರಿ ಚಪಲ ತೀರಿಸಿಕೊಂಡ.

ಗೂಗ್ಲಿ ಗಂಗೂ ಮತ್ತಷ್ಟು ಉತ್ಸಾಹದಿಂದ, “ಹಾಗೆ ನೋಡಿದರೆ ಅಂದು ಹಳದಿ ಜರ್ಸಿ ತೊಟ್ಟು ಆಡಿದವರಿಗೆ ಗೆಲುವು ಖಚಿತವಾಗಿತ್ತು. ಭಾರತ ತಂಡವೇ ಹಳದಿ ಜರ್ಸಿ ತೊಟ್ಟು ಮೊದಲು ಬ್ಯಾಟಿಂಗ್ ಮಾಡಿದ್ದರೆ ೬೦೦ ರನ್ನುಗಳನ್ನು ಹೊಡೆಯುತ್ತಿದ್ದರು! ರೋಹಿತ್ ಭಯ್ಯಾ ತ್ರಿಶತಕ ಮತ್ತು ವಿರಾಟ್ ಭಯ್ಯಾ ದ್ವಿಶತಕ ಗಳಿಸುತ್ತಿದ್ದರು! ಚೇಸಿಂಗ್ ಮಾಡಿದ್ದರೆ ೧೦ ವಿಕೆಟ್ಟುಗಳಿಂದ ಗೆಲ್ಲುತ್ತಿದ್ದರು! ಆದರೇನು ಮಾಡುವುದು ಅಂದು ಅದೃಷ್ಟಹೀನವಾದ ನೀಲಿ ಜರ್ಸಿ ತೊಟ್ಟು ಆಡಿದರು! ಎಲ್ಲ ನಮ್ಮ ಕರ್ಮ!” ಎಂದು ಮಾತು ಮುಗಿಸಿದ. ನೆರೆದವರೆಲ್ಲ ಅವನ ವಾದವನ್ನು ಮೆಚ್ಚಿ “ಶಹಬ್ಬಾಷ್ ಬಿಡ್ಡ” ಎಂದು ಬೆನ್ನು ತಟ್ಟಿದರು.

ಇದಾದ ನಂತರ ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮಾಡಿದ್ದ ಪ್ರವೀಣ್ ತುರಮರಿ ಮಾತು ಶುರು ಮಾಡಿದ. “ಭಾರತದ ಸೋಲಿಗೆ ಹಲವರು ಹಲವು ಬಗೆಯ ಕಾರಣ ನೀಡಿದರು. ನನ್ನ ದೃಷ್ಟಿಯಲ್ಲಿ ಭಾರತ ತಂಡಕ್ಕೆ ಭಾರತೀಯರು ನೀಡಿದ ತೀವ್ರ ಮಾನಸಿಕ ಒತ್ತಡವೇ ವಿಶ್ವಕಪ್ ಫೈನಲ್ ಸೋಲಿಗೆ ಕಾರಣ! ಅಹಮದಾಬಾದಿನ ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಎಂದು ಖ್ಯಾತಿ ಪಡೆದ ನರೇಂದ್ರ ಮೋದಿ ಸ್ಟೇಡಿಯಮ್ಮಿನಲ್ಲಿ ಒಂದೂ ಕಾಲು ಲಕ್ಷ ಜನರನ್ನು ಸೇರಿಸಿ, ನಮ್ಮ ಕ್ರಿಕೆಟ್ ಆಟಗಾರರ ಮೇಲೆ ಇನ್ನಿಲ್ಲದಂತೆ ಒತ್ತಡ ಹೇರಿದರೆ, ಆಟಗಾರರು ಸ್ವಸ್ಥವಾಗಿ ಆಟವಾಡುವುದಾದರೂ ಹೇಗೆ? ಪ್ರತಿಯೊಂದು ಬಾಲಿಗೂ ಹಾ… ಹೂ… ಎನ್ನುವುದು. ಬೌಂಡರಿ, ಸಿಕ್ಸರುಗಳು ಬಂದಾಗ ಕೇಕೆ ಹೊಡೆಯುವುದು, ವಿಕೆಟ್ಟುಗಳು ಬಿದ್ದಾಗ ಲಾಟರಿ ಹೊಡೆದವರಂತೆ ವರ್ತಿಸುವುದು. ಮೈತುಂಬ ದೇಶಪ್ರೇಮ ಆವಾಹಿಸಿಕೊಂಡು ಅಮಾನುಷರಂತೆ ವರ್ತಿಸುವುದು ಮಾಡಿದರೆ ಯಾರು ತಾನೇ ಚೆನ್ನಾಗಿ ಆಡಲು ಸಾಧ್ಯ? ಇಷ್ಟು ಒತ್ತಡವನ್ನು ಸಹಿಸಿಕೊಂಡು ಭಾರತ ಫೈನಲ್ ವರೆಗೆ ಬಂದದ್ದೇ ಹೆಚ್ಚು. ಇನ್ನು ಮುಂದೆ ಸೆಮಿ ಫೈನಲ್ ಮತ್ತು ಫೈನಲ್ ಪಂದ್ಯಗಳ ಸಂದರ್ಭದಲ್ಲಿ ಕ್ರಿಕೆಟ್ ಸ್ಟೇಡಿಯಮ್ಮಿನಲ್ಲಿ ಪ್ರೇಕ್ಷಕರಿಗೆ ಅವಕಾಶ ನೀಡಬಾರದು. ಆಟಗಾರರಿಗೆ ಸ್ವಸ್ಥವಾಗಿ ಆಡುವ ವಾತಾವರಣ ನಿರ್ಮಿಸಿ ಕೊಡಬೇಕು. ಭಾರತ ತಂಡ ಒತ್ತಡ ನಿರ್ವಹಣೆ ಮಾಡುವಲ್ಲಿ ಯಶಸ್ವಿಯಾದರೆ ಒಂದಲ್ಲ ಹತ್ತು ವಿಶ್ವಕಪ್ ಗೆಲ್ಲುವುದು ಅಸಾಧ್ಯವೇನಲ್ಲ.” ಎಂದು ಹೇಳಿ ಮಾತು ಮುಗಿಸಿದ. ಅವನ ಮಾತುಗಳಲ್ಲಿ ಸತ್ಯವಿದೆಯೆಂದು ತುಂಬ ಜನರಿಗೆ ವೇದ್ಯವಾಯಿತು.

ಕೊನೆಗೆ ಮಾತನಾಡಿದ ಬೆಂಕಿ ಬಸು, “ಭಾಳ ಮಂದಿ ನಮ್ಮ ಶತ್ರು ಪಾಕಿಸ್ತಾನ ಅಂತ ತಿಳಕೊಂಡಾರ ಅದು ತಪ್ಪು ಐತಿ. ಇವತ್ತ ನಾನು ಹೇಳ್ತೀನಿ ನಮ್ಮ ಶತ್ರು ಪಾಕಿಸ್ತಾನವಲ್ಲ, ನಮ್ಮ ಶತ್ರು ಆಸ್ಟ್ರೇಲಿಯ! ವರ್ಷದೊಳಗ ನಾಲ್ಕು ತಿಂಗಳು ಮಕ್ಕಳು ಇಲ್ಲೇ ಇರ್ತಾರ. ಐಪಿಎಲ್ ಆಡಿ ಚೀಲದ ತುಂಬ ರೊಕ್ಕಾ ತೊಗೊಂಡು ಹೋಗ್ತಾರ ಆದರ ಮಕ್ಕಳು ಕಡೀಕ ನಮಗ ದೋಖಾ ಮಾಡ್ತಾರ. ಅಂವಾ ಮಗಾ ಮ್ಯಾಕ್ಸವೆಲ್ಲಗ ಕನ್ಯಾ ಕೊಟ್ಟೀವಿ, ಸಾಕಷ್ಟು ರೊಕ್ಕಾ ಕೊಟ್ಟೀವಿ, ನಮ್ಮ ಕ್ರಿಕೆಟ್ ಆಟಗಾರರಿಗೆ ತೋರಿಸುವಷ್ಟು ಪ್ರೀತಿ ತೋರಿಸಿವಿ. ಆದರೂ ಮಗಾ ಉಲ್ಟಾ ಹೊಡದ. ವಾಂಖೆಡೆ ಸ್ಟೇಡಿಯಮ್ಮಿನ್ಯಾಗ ಕುಂಟಗೋತ ಎರಡ ನೂರಾ ಒಂದು ರನ್ನು ಹೊಡೆದ. ಬಾಲ ಮಕ್ಕಳಿಂದ ಕೂಡಿದ ಅಫ್ಘಾನಿಸ್ತಾನ ತಂಡದವರು ಇವರನ್ನ ಹೆಚ್ಚು ಕಡಿಮೆ ಹೊರಗ ದಬ್ಬಿದ್ದರು. ಆವಾಗ ಈ ಕುಂಟ ಕುದುರಿಗೆ ಬೆಂಬಲ ಕೊಟ್ಟು ಗೆಲ್ಲೂ ಹಂಗ ಮಾಡಿದ್ದು ನಮ್ಮ ಇಂಡಿಯನ್ಸು! ಇರಲಿ, ಆಟದಾಗ ಸೋಲು ಗೆಲುವು ಇದ್ದದ್ದ. ಆದರ ಅಂವಾ ಮಗಾ ಮಾರ್ಷ್ ವಿಶ್ವಕಪ್ ಟ್ರೋಫಿ ಮ್ಯಾಲೆ ಕಾಲಿಟ್ಟುಕೊಂಡು ಕೂತದ್ದು ನನಗ ರಕ್ತ ಕುದಿಯುವ ಹಂಗ ಮಾಡ್ತು. ಚೆಂದ ಚೆಂದದ ಹುಡುಗಿಯರು ಕೆಲಸಕ್ಕ ಬಾರದ ಉಢಾಳ ಹುಡುಗರ ಜೊತೆ ಓಡಿ ಹೋಗಿ ಲಗ್ನ ಆಗೂ ಹಂಗ ಈ ವಿಶ್ವ ಕಪ್ ರೋಹಿತ್ ಭಯ್ಯಾನಂತಹ ಅಗದೀ ಜಂಟಲಮನ್ ಮನಶಾನ ಬಿಟ್ಟು ಉಢಾಳ ಕಮ್ಮಿನ್ಸನ ಕೈ ಸೇರುತ್ತ ಅಂದ್ರ ನಮ್ಮ ನಸೀಬು ಎಷ್ಟು ಕೆಟ್ಟದ್ದಿರಬೇಕು. ಇರಲಿ, ಆ ಉಪದ್ವ್ಯಾಪಿ ಮಾರ್ಷಗ ಐಪಿಎಲ್ ನಿಂದ ಬ್ಯಾನ್ ಮಾಡಬೇಕು ಅನ್ನೂದು ನನ್ನ ಅಭಿಪ್ರಾಯ.” ಎಂದು ಕಣ್ಣೀರು ಹಾಕಿದ.

ಅಲ್ಲಿ ನಡೆಯುವ ತಮಾಷೆ ನೋಡಲು ಬಂದಿದ್ದ ಪುಟಾಣಿಯೊಂದು “ಬೋಲೋ ಭಾರತ್ ಮಾತಾ ಕೀ…” ಎಂದು ಜೋರಾಗಿ ಕೂಗಿದ ಕೂಡಲೇ ಉಳಿದ ಪುಟಾಣಿಗಳು “ಜೈ…” ಎಂದು ಮಲ್ಲಮ್ಮನ ಅಟ್ಟ ನಡುಗುವಂತೆ ಜೋರಾಗಿ ಜೈಕಾರ ಹಾಕಿದವು. ಇದನ್ನೆಲ್ಲ ನೋಡಿ ಬೆಂಕಿ ಬಸುಗೆ ಸಮಾಧಾನವಾಯಿತು. ಅವನು ಅನುಪಮಳ ಪಕ್ಕದಲ್ಲಿ ಹೋಗಿ ಕುಳಿತುಕೊಂಡ ನಂತರ ಇಬ್ಬರೂ ಕಣ್ಣಲೇ ಲಡಾಯಿ ಶುರು ಮಾಡಿದರು.

ಸಭೆಯ ಕೊನೆಯಲ್ಲಿ ಎಲ್ಲರಿಗೂ ಸೌಭಾಗ್ಯ ಟಿಫಿನ್ ಸೆಂಟರಿನಿಂದ ತರಿಸಿದ ಉದ್ದಿನ ವಡೆ ಮತ್ತು ಮಸಾಲಾ ಚಹ ಕೊಡಲಾಯಿತು‌. ಸಪ್ಲೈ ಮಾಡಲು ಬಂದ ರಂಗ ಹಳದಿ ಟೀ ಶರ್ಟ ಹಾಕಿಕೊಂಡದ್ದು ನೋಡಿ ಬೆಂಕಿ ಬಸುಗೆ ತುಂಬ ಸಿಟ್ಟು ಬಂತು, “ಮಗನಾ ರಂಗ್ಯಾ, ನೀನು ಆಸ್ಟ್ರೇಲಿಯದವ ಇದ್ದೀಯೋ ಇಲ್ಲಾ ಬುದ್ಧಿ ಜೀವಿ ಇದ್ದೀಯೋ? ಮಗಾ ಹಳದಿ ಟೀ ಶರ್ಟ್ ಹಾಕ್ಕೊಂಡು ಅಪಹಾಸ್ಯ ಮಾಡಾಕ ಬಂದಾನ…” ಎಂದು ಒದರಾಡಿದ. ಅನುಪಮ ಮತ್ತು ಇತರರು ಅವನನ್ನು ಸಮಾಧಾನ ಪಡಿಸಿದರು.
ಆತ್ಮಾವಲೋಕನ ಸಭೆಯಲ್ಲಿ ಕೆಳಕಂಡ ನಿರ್ಣಯಗಳನ್ನು ಅಂಗೀಕರಿಸಲಾಯಿತು.

  • ಭಾರತ ತಂಡದ ಸೋಲು ಭಾರತೀಯರ ಸೋಲು. ಇನ್ನು ಮುಂದೆ ಭಾರತ ವಿಶ್ವಕಪ್ ಗೆಲ್ಲದಿದ್ದರೂ ಪರವಾಗಿಲ್ಲ, ಆಸ್ಟ್ರೇಲಿಯ ಮಾತ್ರ ವಿಶ್ವಕಪ್ ಗೆಲ್ಲಕೂಡದು.
  • ಐಪಿಎಲ್ ಟೂರ್ನಿಯಲ್ಲಿ ಆಸ್ಟ್ರೇಲಿಯ ಆಟಗಾರರಿಗೆ ಪ್ರಾಮುಖ್ಯತೆ ನೀಡುವುದನ್ನು ನಿಲ್ಲಿಸಬೇಕು.
  • ಐಪಿಎಲ್ ನಲ್ಲಿ ಆಡುವ ಯಾವುದೇ ತಂಡಕ್ಕೂ ಆಸ್ಟ್ರೇಲಿಯದ ಆಟಗಾರನೊಬ್ಬ ನಾಯಕನಾಗಕೂಡದು.
  • ಒಂದೂವರೆ ಶತಕೋಟಿ ಭಾರತೀಯರ ಕನಸಿನ ಕನ್ಯೆಯಾದ ವಿಶ್ವಕಪ್ ಟ್ರೋಫಿ ಕಸಿದುಕೊಂಡ ಆಸ್ಟ್ರೇಲಿಯನ್ನರು ಪಾಕಿಸ್ತಾನಕ್ಕಿಂತ ಅಪಾಯಕಾರಿ ಎಂಬ ನಿಜ ಸಂಗತಿಯನ್ನು ಸಾಮಾನ್ಯ ಜನರಿಗೆ ತಲುಪಿಸಬೇಕು. ಇದಕ್ಕೆ ಎಡಪಂಥೀಯ ಬುದ್ಧಿಜೀವಿಗಳ ಬೆಂಬಲ ಪಡೆಯಬೇಕು.
  • ರೋಹಿತ್ ಮತ್ತು ವಿರಾಟ್ ಭಯ್ಯಾರ ಕಣ್ಣಲ್ಲಿ ನೀರು ತರಿಸಿದ್ದಲ್ಲದೆ, ಧಿಮಾಕಿನಿಂದ ವಿಶ್ವಕಪ್ ಟ್ರೋಫಿಯ ಮೇಲೆ ಕಾಲಿಟ್ಟು ಕುಳಿತು ಅಕ್ಷಮ್ಯ ಅಪರಾಧ ಎಸಗಿದ ತಿರಸಷ್ಟನಾದ ಮಾರ್ಷ ಎಂಬ ಖಳನನ್ನು ಐಪಿಎಲ್ ನಿಂದ ಹೊರಗಿಡಬೇಕು.
  • ಇನ್ನು ಮುಂದೆ ಭಾರತ ಕ್ರಿಕೆಟ್ ತಂಡದ ಮೇಲೆ ಒತ್ತಡ ಹಾಕುವುದನ್ನು ನಿಲ್ಲಿಸಬೇಕು.
  • ರೋಹಿತ್ ಮತ್ತು ವಿರಾಟ್ ಎಂಬ ಸಿಂಹ ಜೋಡಿಯ ನಿವೃತ್ತಿಯ ಕುರಿತು ಮಾತನಾಡುವ ಮೂರ್ಖರಿಗೆ ಸರಿಯಾದ ಪಾಠ ಕಲಿಸಬೇಕು.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

4 thoughts on “ಮಿಂಚಿನ ಬಳ್ಳಿ- ವಿಕಾಸ ಹೊಸಮನಿ ಅಂಕಣ l ‘ಆತ್ಮಾವಲೋಕನ ಸಭೆ’”

  1. ಮೋಹನ ಕುಂಟಾರ್

    ಹ್ಯೂಮರ್ ಸೆನ್ಸ್ ನಿಂದ ವಿವೇಚನಾಶಕ್ತಿಯನ್ನು ಪ್ರಚೋದಿಸುವ ಉತ್ತಮ ಬರಹ. ಅಭಿನಂದನೆಗಳು-ಮೋಹನ ಕುಂಟಾರ್

  2. ಉದಯಕುಮಾರ ಹಬ್ಬು

    ಇತ್ತೀಚಿಗೆ ಗಿನ ಐ ಪಿ ಎಲ್ ವಿಶ್ವಕಪ್ ಟ್ರೋಫಿಯನ್ನು ಭಾರತವು ಒತ್ತಡಕ್ಕೊಳಗಾಗಿ ಕಳೆದುಕೊಂಡಿತು.‌ಈ ಕುರಿತ ಹಾಸ್ಯಮಯ ವಿಡಂಬನಾತ್ಮಕ ಪ್ರಬಂಧ.‌ಖುಶಿ ಕೊಟ್ಟಿತು ವಿಕಾಸ್

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter