ಬೇಸಿಗೆಯ ಅಂತ್ಯ ಬಂದಂತೆ ಹೆಚ್ಚಿನ ಕೆರೆ ಬಾವಿಗಳ ನೀರು ತಳ ಕಾಣುತ್ತವೆ. ಹೊಳೆ ಹಳ್ಳಗಳು ಬತ್ತಿ ನೀರಿಗಾಗಿ ಪರಿತಾಪ ಪಡುವ ಸಂದರ್ಭ ಎದುರಾಗುತ್ತದೆ. ಮಳೆಗಾಲದಲ್ಲಿ ಸುರಿದ ಮಳೆಯನ್ನು ಸರಾಗವಾಗಿ ಹರಿದು ಹೋಗಲು ಬಿಟ್ಟಿದ್ದಕ್ಕಾಗಿ ಬೇಸಿಗೆಯಲ್ಲಿ ಒಂದಿಷ್ಟು ಜನ ಪರಿತಾಪ ಪಡುವುದೂ ಉಂಟು. ಆದರೆ ನೀರುಳಿಸಲು ಶ್ರಮಪಡುವ ಜನರಿದ್ದಾರೆ?.. ಎಂದೆಲ್ಲ ಒಂದೇ ಸಮ ಗೊಣಗಾಡುತ್ತಿದ್ದೆ. ನನ್ನ ಮಾತನ್ನು ಬ್ರೇಕ್ ಹಾಕುವಂತೆ ಮಗ ವಿಶ್ವಾಸ ಹೇಳಿದ….
‘ಅಮ್ಮಾ ನಿನಗೆ ಗೊತ್ತೇ ಬೀವರ್ ಎನ್ನುವ ದಂಶಕ ಜಾತಿಯ ಪ್ರಾಣಿಗಳು ಡ್ಯಾಂ ಕಟ್ಟಿ ನೀರುಳಿಸುತ್ತವೆ. ಆ ಡ್ಯಾಮುಗಳು ಅವು ಎಷ್ಟು ಗಟ್ಟಿಮುಟ್ಟಾಗಿರುತ್ತವೆ ಎಂದರೆ ಅದನ್ನು ತೆರವು ಮಾಡಬೇಕೆಂದರೆ ಜೇಸಿಬಿ ಬಳಸಬೇಕು!.’.
ಅವನು ಹೇಳಿದ ಇಷ್ಟೇ ವಿವರದಿಂದ ನನಗೆ ಎಷ್ಟು ಕುತೂಹಲ ಹುಟ್ಟಿತೆಂದರೆ ಇಂದು ನಿಮಗೆಲ್ಲ ಬರೀ ಅನ್ನ ಸಾರು ಅಷ್ಟೇ ಸ್ಪೆಷಲ್ ಅಡುಗೆ ಏನೂ ಇಲ್ಲ …… ನಾನು ಬೀವರ್ ಕಟ್ಟುವ ಡ್ಯಾಮ್ ನೋಡಬೇಕು ಎಂದು ಘೋಷಿಸಿ ಕಂಪ್ಯೂಟರಿನ ಮುಂದೆ ಬೀವರ್ಸ ಬಗ್ಗೆ ಸರ್ಚ ಮಾಡುತ್ತಾ ಹೋದೆ.
ನಂಬಲಸಾಧ್ಯವಾದ ಅಪೂರ್ವ ದೃಶ್ಯಗಳು ನನ್ನೆದಿರು ತೆರೆದುಕೊಳ್ಳುತ್ತಾ ಹೋದವು.. ಹೆಗ್ಗಣದಂತಹ ಮೂತಿ, ಫಳ ಫಳ ಕಣ್ಣುಗಳ, ತುಪ್ಪಳದ ಮೈಯ, ಚಪ್ಪಟೆ ಬಾಲದ, ಗರಗಸಕ್ಕಿಂತ ಹರಿತವಾದ ಹಲ್ಲಿನ ಬೀವರ್ ನೋಡು ನೋಡುತ್ತಲೇ ಹತ್ತಾರು ಅಡಿಯ ಮರವನ್ನು ಹಲ್ಲಿನಿಂದ ಕೊರೆದು ಬೀಳಿಸಿತು. ಅವುಗಳನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿಸಿತು. ಹಲ್ಲು ಮತ್ತು ಕಾಲುಗಳ ಸಹಾಯದಿಂದ ನೀರಿನಲ್ಲಿ ಎಳೆದುಕೊಂಡು ಹೋಯಿತು. ಮರದ ಟೊಂಗೆಗಳನ್ನು ಒಯ್ದು ಇಂಟರ್‍ಲಾಕ್ ಮಾಡುತ್ತ ಜೋಡಿಸಿತು. ನದೀ ತೀರದ ಕಲ್ಲುಗಳನ್ನು ಟೊಂಗೆಗಳ ಸಂದಿಗೆ ಪೇರಿಸಿತು. ನದಿಯ ಚಿಗುಟು ಮಣ್ಣನ್ನು ಮೂತಿಯಿಂದಲೇ ತಂದು ಮೆತ್ತಿತು, ಪಾಚಿಯಂತಹ ಜಲ ಸಸ್ಯಗಳನ್ನು ಎಲ್ಲೆಲ್ಲಿಂದಲೂ ಬೆನ್ನ ಮೇಲೆ ಹೊತ್ತು ತಂದಿತು. ಮಣ್ಣಿನೊಂದಿಗೆ ಸೇರಿಸಿ ನಿರ್ಮಿಸುತ್ತಿದ್ದ ಡ್ಯಾಮಿನ ಸಂದಿಗೊಂದಿಗಳನ್ನು ತುಂಬಿತು.. ನೋಡು ನೋಡುತ್ತಿದ್ದಂತೆಯೇ ಈ ಡ್ಯಾಮ್ ಕಟ್ಟುವ ಕಾಯಕದಲ್ಲಿ ನಾಲ್ಕಾರು ಬೀವರ್ಸ ಒಟ್ಟಾಗಿ ದುಡಿಯುವುದೂ ಕಂಡುಬಂತು. ಅವುಗಳಿಗೆ ಕೆಲಸದಲ್ಲಿ ಅದೆಂತಹ ತಲ್ಲೀನತೆ! ಕೆಲಸದಲ್ಲಿ ಅತ್ಯಪೂರ್ವ ಚಾಕಚಕ್ಯತೆ! ಅತಿ ಚುರುಕಿನ ಪ್ರಾಣಿಗಳು!
ಅತ್ಯಂತ ತಂಪು ಪ್ರದೇಶದಲ್ಲಿ ಹಿಮಗಟ್ಟುವ ನದಿಯಲ್ಲಿ ತಮಗೆ ಅಗತ್ಯವಾದ ಆಹಾರ ಸಂಗ್ರಹಿಸಲು ನದಿಗೆ ಡ್ಯಾಂ ಕಟ್ಟುವ, ಕೊಳ ನಿರ್ಮಿಸಿಕೊಳ್ಳುವ ಬೀವರ್ಸ ತಮಗೆ ತಿಳಿದೋ ತಿಳಿಯದೆಯೋ ಪ್ರಕೃತಿಗೆ ತಮ್ಮದೇ ಆದ ರೀತಿಯಲ್ಲಿ ನೀರುಳಿಸಿ ಉಪಕಾರ ಮಾಡುತ್ತಿವೆ. ಮೂಲತಃ ಸಸ್ಯಾಹಾರಿಗಳಾದ ಇವು ಮರದ ಕಾಂಡಗಳಲ್ಲಿ ಕೆಳಭಾಗದಲ್ಲಿರುವ ಸಿಹಿಯಾದ ತಿರುಳನ್ನು ಗುರುತಿಸಿ ತಿನ್ನುತ್ತವೆ ಮತ್ತು ನೀರಿನಾಳದಲ್ಲಿ ತಟ್ಟಿಕೊಂಡಿರುವ ತಮ್ಮ ಮನೆಗಳಲ್ಲಿ( ಅದೂ ಕೂಡಾ ಸಾಕಷ್ಟು ವಿಶೇಷವಾಗಿಯೇ ಇರುತ್ತದೆ) ಅವುಗಳನ್ನು ಸಂಗ್ರಹಿಸಿಕೊಳ್ಳುತ್ತವೆ. ರಾಕಿ ಪರ್ವತ ಶ್ರೇಣಿಯಲ್ಲಿ ಇವು ಕಟ್ಟುವ ಪುಟ್ಟ ಪುಟ್ಟ ಡ್ಯಾಮ್ಗಳಲ್ಲಿ ಸರಿ ಸುಮಾರು ಆರು ಬಿಲಿಯನ್ ಲೀಟರ್ ನೀರು ನೀರು ಸಂಗ್ರಹವಾಗಿ ಫಿಲ್ಟರ್ ಆಗುತ್ತವೆ! ಡ್ಯಾಮಿನಿಂದಾಗಿ ಮಣ್ಣಿನ ಸವೆತವಾಗುವುದು ತಪ್ಪುತ್ತದೆ. ಪ್ರವಾಹವನ್ನು ತಪ್ಪಿಸಲೂ ಕೂಡಾ ಇವುಗಳಿಂದ ಅನುಕೂಲವಾಗಿವೆ.
ಡ್ಯಾಮ್ ಕಟ್ಟುವ ಅವರ ಶ್ರದ್ಧೆಯೋ ಬಣ್ಣಿಸಲಸದಲ.. ಯಾವುದೇ ಕಾರಣಕ್ಕೆ ಅವುಗಳು ಕಟ್ಟಿದ ಡ್ಯಾಮಿಗೆ ಕೊಂಚ ಧಕ್ಕೆಯಾಗಿ ನೀರು ಹೊರ ಹೋಗುತ್ತಿದೆ ಎನ್ನಿಸಿದರೆ ಅವುಗಳನ್ನು ತಕ್ಷಣ ರಿಪೇರಿ ಮಾಡುತ್ತವೆ. ವರ್ಷದ ಆರು ತಿಂಗಳು ಇವುಗಳು ಡ್ಯಾಮ್ ಕಟ್ಟುವ, ಆಹಾರ ಸಂಗ್ರಹಿಸುವ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತವೆ. ಚಳಿಗಾಲದಲ್ಲಿ ನೀರು ಹಿಮಗಟ್ಟಲಾರಂಭಿಸಿದಾಗಅದರ ಕೆಳಭಾಗದಲ್ಲಿ ಕಟ್ಟಿದ ತಮ್ಮ ಮನೆಗಳಲ್ಲಿ ಸಂಗ್ರಹಿಸಿದ ಆಹಾರ ತಿನ್ನುತ್ತಾ ನೆಮ್ಮದಿಯಿಂದ ಬದುಕುತ್ತವೆ. ಮರಿಗಳನ್ನು ಬೆಳೆಸುತ್ತವೆ. ಹಿಮ ಕರಗಿದಾಗ ಮರಿಗಳಿಗೆ ಈಜುವ. ನೀರಿನೊಳಗೆ ಮುಳುಗಿಯೂ ಸಂಚರಿಸುವ ತರಬೇತಿ ಕೊಡುತ್ತವೆ. ಅವು ಡ್ಯಾಮ್ ಕಟ್ಟಿದ ಸುತ್ತಮುತ್ತಲಿನ ಪ್ರದೇಶದಲ್ಲಿ ಆಹಾರದ ಲಭ್ಯತೆ ಕಡಿಮೆ ಆಗಿದೆ ಎನ್ನಿಸಿದಾಗ ಆ ಜಾಗವನ್ನೇ ತೊರೆದು ಬೇರೆಡೆಗೆ ಹೋಗುತ್ತವೆ.
ನದಿಯ ಹರಿವಿನ ಕೆಳಭಾಗದಲ್ಲಿ ಮನುಷ್ಯರು ವಾಸಿಸುತ್ತಿದ್ದು ನೀರಿನ ಹರಿವು ಕಡಿಮೆಯಾಗಿದೆ ಎನ್ನಿಸಿದರೆ ನದಿಗುಂಟ ಹುಡುಕಿ ಬಿವರ್ಸ ಕಟ್ಟಿದ ಕಟ್ಟದಿಂದ ನೀರು ಬರುತ್ತಿಲ್ಲ ಎನಿಸಿ ಡ್ಯಾಮ್ ತೆಗೆಯುವ ಸಂದರ್ಭ ಬರುವುದೂ ಉಂಟು. ಆ ಡ್ಯಾಮನ್ನು ಸುಲಭವಾಗಿ ತೆಗೆಯಲಾಗುವುದಿಲ್ಲ. ಜೆಸಿಬಿಯೇ ಹೆಣಗಾಡಿ ತೆಗೆಯಬೇಕಾಗುವುದು!
ಯುರೇಸಿಯನ್ ಬೀವರ್ ಹಾಗೂ ಅಮೇರಿಕನ್ ಬೀವರ್ ಎನ್ನುವ ಎರಡು ವೈವಿಧ್ಯದ ಬೀವರಗಳನ್ನು ಯುರೋಪು, ಅಮೇರಿಕಾ, ಕೆನಡಾ ಹಾಗೂ ಇತರೆಡೆಗೆ ಕಾಣಬಹುದು. ಹತ್ತರಿಂದ ಹನ್ನೆರಡು ವರ್ಷ ಬದುಕಬಹುದಾದ ಇವು ತಾವು ಬದುಕುವ ಪ್ರದೇಶವನ್ನು ತಂಪಾಗಿ, ಹಸಿರಾಗಿಡಲು, ಉಳಿದ ಜಲಚರಗಳು ಪಕ್ಷಿಗಳಿಗೂ ನೆರವಾಗುತ್ತಿವೆ. ಆದ ಕಾರಣದಿಂದಲೇ ಯುರೋಪಿನಲ್ಲಿ ಇವುಗಳನ್ನು ಬೇಟೆಯಾಡುವುದನ್ನು ನಿಷೇಧಿಸಲಾಗಿದೆ. ಮೈದು ತುಪ್ಪಳದ ಇವುಗಳನ್ನು ಅಪರೂಪಕ್ಕೆ ಮನುಷ್ಯರು ಸಾಕುವುದೂ ಉಂಟು. ವನ್ಯಜೀವಿ ಪ್ರಿಯರನೇಕರು ಇವುಗಳನ್ನು ರಕ್ಷಿಸುತ್ತಿದ್ದಾರೆ.
ಬೀವರ್ಸ ಕಟ್ಟಿದ ಡ್ಯಾಮು ಮತ್ತು ಮನೆಗಳನ್ನು ನೋಡಿದ ನೆಟ್ಟಿಗರೆಲ್ಲರೂ ‘ಡಿಗ್ರಿ ಪಡೆಯದ ಇಂಜಿನಿಯರ್ಸ’ ಎಂದು ಹಾಡಿ ಹೊಗಳಿದ್ದಾರೆ. ಬೀವರ್ಸ ಕಟ್ಟಿದ ಡ್ಯಾಮುಗಳ ರಚನೆಯನ್ನು ಸರಿಯಾಗಿ ಅಧ್ಯಯನ ಮಾಡಿ ಮನುಷ್ಯರೂ ಇಂತಹ ಡ್ಯಾಮುಗಳನ್ನು ಕಟ್ಟಿದರೆ ಪರಿಸರ ಸ್ನೇಹಿ ಡ್ಯಾಮುಗಳ ನಿರ್ಮಾಣ ಮಾಡಬಹುದಾದ ಸಾಧ್ಯತೆ ಗೋಚರಿಸುತ್ತದೆ.
* ಮಾಲತಿ ಹೆಗಡೆ