ಮಿಂಚಿನ ಬಳ್ಳಿ- ವಿಕಾಸ ಹೊಸಮನಿ ಅಂಕಣ l ‘ನವ್ಯಧ್ವನಿ’ – ಒಂದು ಟಿಪ್ಪಣಿ

ಕನ್ನಡದಲ್ಲಿ ನವ್ಯ ಸಾಹಿತ್ಯವನ್ನು ಅಧಿಕೃತವಾಗಿ ಆರಂಭಿಸಿದವರು ವಿ. ಕೃ. ಗೋಕಾಕರು. ಆಕ್ಸಫರ್ಡಿನಲ್ಲಿ ಉನ್ನತ ಶಿಕ್ಷಣ ಪಡೆದ ಗೋಕಾಕರು ಇಂಗ್ಲಿಷ್, ಫ್ರೆಂಚ್ ಸೇರಿದಂತೆ ಪಾಶ್ಚಾತ್ಯ ಸಾಹಿತ್ಯವನ್ನು ಓದಿ ಅರಗಿಸಿಕೊಂಡಿದ್ದರು. ಉನ್ನತ ಪ್ರತಿಭೆಯ ಕವಿ ಮತ್ತು ಕಾವ್ಯ ಮೀಮಾಂಸಕರಾಗಿದ್ದ ಅವರು ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಕಾವ್ಯ ರಚನೆ ಮಾಡಬಲ್ಲ ಶಕ್ತಿಯಿದ್ದ ಪ್ರತಿಭಾವಂತರು. ಗೋಕಾಕರು ಕನ್ನಡದಲ್ಲಿ ಏನೂ ಬರೆಯದೇ ಕೇವಲ ಇಂಗ್ಲಿಷಿನಲ್ಲೇ ಕಾವ್ಯ ರಚನೆ ಮಾಡಿದ್ದರೂ ಸಹ ಒಳ್ಳೆಯ ಕವಿಯೆಂದು ಖ್ಯಾತಿ ಪಡೆಯಬಹುದಿತ್ತು. ಇಂತಹ ಅಪಾರ ಸಾಧ್ಯತೆಗಳಿದ್ದ, ಪ್ರಚಂಡ ಪ್ರತಿಭೆಯಾದ ಗೋಕಾಕರಿಂದ ಕನ್ನಡದಲ್ಲಿ ನವ್ಯ ಕಾವ್ಯ ಆರಂಭಗೊಂಡಿದ್ದು ಆಕಸ್ಮಿಕವಲ್ಲ.

ನವೋದಯ ಮತ್ತು ನವ್ಯ ಎರಡೂ ಮಾರ್ಗದಲ್ಲಿ ಕಾವ್ಯ ರಚಿಸಿ ಯಶಸ್ಸು ಪಡೆದ ಗೋಕಾಕರು ನವೋದಯ ಮತ್ತು ನವ್ಯದ ಮಧ್ಯೆ ಸಮನ್ವಯ ಸಾಧಿಸಿದರು. ನವ್ಯ ಕಾವ್ಯದ ಶಕ್ತಿ ಮತ್ತು ಮಿತಿಗಳ ಕುರಿತು ಸಂಪೂರ್ಣ ಅರಿವಿದ್ದ ಅವರು ಕನ್ನಡದಲ್ಲಿ ನವ್ಯ ಕಾವ್ಯದ ಅಗತ್ಯ ಮತ್ತು ಕನ್ನಡಕ್ಕೆ ಬೇಕಾದ ನವ್ಯ ಕಾವ್ಯ ಎಂತಹುದು ಎಂಬುದರ ಕುರಿತು ಆಳವಾಗಿ ಚಿಂತಿಸಿದ್ದಾರೆ. ಕೇವಲ ಪಾಶ್ಚಾತ್ಯರಿಂದ ಪ್ರೇರಿತವಾಗಿ ರಚಿತವಾದ ನವ್ಯ ಕಾವ್ಯ ಭಾರತೀಯ ಭಾಷೆಗಳಲ್ಲಿ ಯಶಸ್ಸು ಗಳಿಸುವುದು ಕಷ್ಟ ಎಂಬ ಅರಿವಿದ್ದ ಗೋಕಾಕರು ಪಾಶ್ಚಾತ್ಯ ಮಾರ್ಗದಲ್ಲಿ ಕಾವ್ಯ ರಚನೆಯಾದರೂ ಅದಕ್ಕೆ ಬೇಕಾದ ಅನುಭವ ದ್ರವ್ಯ ಒದಗುವುದು ಭಾರತೀಯ ಪರಂಪರೆಯ ಹಿನ್ನೆಲೆಯಲ್ಲಿ ರೂಪುಗೊಂಡ ಪ್ರಜ್ಞೆಯಲ್ಲಿ ಎಂದು ದೃಢವಾಗಿ ನಂಬಿದ್ದರು. ಸ್ವತಃ ತಮ್ಮ ಕಾವ್ಯದಲ್ಲಿ ಇಂತಹ ಪ್ರಯೋಗ ಮಾಡಿ ಯಶಸ್ಸು ಗಳಿಸಿದ್ದು ಗೋಕಾಕರ ಬಹುದೊಡ್ಡ ಸಾಧನೆ.

ಅಗಮ್ಯ ಮತ್ತು ಕ್ಲಿಷ್ಟವಾದ ನವ್ಯ ಕಾವ್ಯ ಸಾಮಾನ್ಯ ಓದುಗರಿಗೆ ತುಂಬ ಕಷ್ಟ ಎಂಬ ಹೊತ್ತಿನಲ್ಲಿ ಅಂತಹ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಿ ನವ್ಯ ಕಾವ್ಯ ಗಮ್ಯವಾದುದು ಮತ್ತು ಸಾಮಾನ್ಯ ಓದುಗರಿಗೆ ಸಹ ಎಟುಕಬಲ್ಲುದು ಎಂಬುದನ್ನು ತೋರಿಸಲೆಂದೇ ಗೋಕಾಕರು ಸುಮಾರು ೬೭ ವರ್ಷಗಳ ಹಿಂದೆ ತಂದ ಪುಸ್ತಕ ‘ನವ್ಯಧ್ವನಿ’.

ಗೋಕಾಕರು ಕನ್ನಡದ ಮತ್ತೊಬ್ಬ ಮಹತ್ವದ ಕವಿಯಾದ ಚೆನ್ನವೀರ ಕಣವಿಯವರ ಜೊತೆ ಸೇರಿ ಸಂಪಾದಿಸಿದ ‘ನವ್ಯಧ್ವನಿ’ ಎಂಬ ಆಯ್ದ ಪ್ರಾತಿನಿಧಿಕ ಕವಿತೆಗಳ ಸಂಕಲನಕ್ಕೆ ಐತಿಹಾಸಿಕ ಮಹತ್ವವಿದೆ. ೧೯೫೬ರಲ್ಲಿ ಧಾರವಾಡದ ಪ್ರತಿಭಾ ಗ್ರಂಥಮಾಲೆ ಅಥವಾ ಸಮಾಜ ಪುಸ್ತಕಾಲಯದ ಮೂಲಕ ಪ್ರಕಟವಾದ ೧೨೦ ಪುಟಗಳ ಈ ಸಣ್ಣ ಆ್ಯಂಥಾಲಜಿಯಲ್ಲಿ ಒಟ್ಟು ೩೦ ಕವಿತೆಗಳಿವೆ. ವರಕವಿ ಬೇಂದ್ರೆ, ಗೋಕಾಕ್, ಗೋಪಾಲಕೃಷ್ಣ ಅಡಿಗ, ಸು. ರಂ. ಎಕ್ಕುಂಡಿ, ಗಂಗಾಧರ ಚಿತ್ತಾಲ, ಜಿ. ಎಸ್. ಶಿವರುದ್ರಪ್ಪ, ಚೆನ್ನವೀರ ಕಣವಿ, ಬಿ. ಸಿ. ರಾಮಚಂದ್ರ ಶರ್ಮ, ಶಂಕರ ಮೊಕಾಶಿ ಪುಣೇಕರ, ಶಾಂತಿನಾಥ ದೇಸಾಯಿ, ಕ. ವೆಂ. ರಾಜಗೋಪಾಲ, ಬಿ. ಎಚ್. ಶ್ರೀಧರ ಮತ್ತು ಸಿದ್ದಣ್ಣ ಮಸಳಿಯವರ ಕವಿತೆಗಳಿವೆ.

ಸಂಪಾದಕರಾದ ಗೋಕಾಕರು ೧೭ ಪುಟಗಳ ಅಭ್ಯಾಸಪೂರ್ಣ ಪೀಠಿಕೆಯನ್ನು ಬರೆದಿದ್ದಾರೆ. ಕನ್ನಡ ಮತ್ತು ಇತರೆ ಭಾರತೀಯ ಭಾಷೆಗಳಲ್ಲಿ ನವ್ಯ ಕಾವ್ಯ ಆರಂಭವಾದದ್ದರ ಬಗ್ಗೆ ಅವರು ವಿಶದವಾಗಿ ಚರ್ಚಿಸಿದ್ದಾರೆ. ನವ್ಯ ಕಾವ್ಯದ ವ್ಯಾಪ್ತಿ ಸೀಮಿತವಾದುದಲ್ಲ, ವಿಶಾಲವಾದುದು ಎಂದು ಹೇಳುವ ಗೋಕಾಕರ ಮಾತಿನಲ್ಲಿ ಸತ್ಯವಿದೆ. ನವ್ಯ ಕಾವ್ಯ ಪಾಶ್ಚಾತ್ಯರ ಪ್ರೇರಣೆ ಮತ್ತು ಪ್ರಭಾವದಿಂದ ಭಾರತೀಯ ಭಾಷೆಗಳಲ್ಲಿ ರಚನೆಯಾದರೂ ಅದರ ಮೂಲ ಧಾತುವಾದ ನಿರಾಶಾವಾದ ಮತ್ತು ಪರಕೀಯ ಪ್ರಜ್ಞೆ ಭಾರತೀಯ ಪರಂಪರೆಯಲ್ಲೇ ಇತ್ತು ಎಂದಿರುವ ಗೋಕಾಕರು ನವ್ಯಕಾವ್ಯದ ಅಗತ್ಯತೆಯ ಕುರಿತು ಹೇಳಿರುವ ಮಾತುಗಳು ಗಮನಾರ್ಹವಾಗಿವೆ.

“ಹಿಂದೆ ಪ್ರಗತಿಶೀಲ ಚಳುವಳಿಯಂತೆ ಕಳೆದ ಹತ್ತು-ಹದಿನೈದು ವರ್ಷಗಳಲ್ಲಿ ನವ್ಯಕಾವ್ಯದ ಆಂದೋಲನ ಭಾರತೀಯ ಭಾಷೆಗಳಲ್ಲಿಯೂ ತಲೆಯೆತ್ತಿದೆ. ಪ್ರಗತಿಶೀಲರ ಮೇಲೆ ಕಾರ್ಲಮಾರ್ಕ್ಸ್, ಲೆನಿನ್ನರ ಪ್ರಭಾವ ಬಿದ್ದಂತೆ ನವ್ಯಕವಿಗಳು ಫ್ರೆಂಚ್ ಪ್ರತೀಕನಿಷ್ಠ (Symbolist) ಹಾಗೂ ಆಂಗ್ಲ ನವ್ಯರಿಂದ ಸ್ಫೂರ್ತಿಯನ್ನು ಪಡೆದಿದ್ದಾರೆ. ಅಸಾಮದಿಂದ ಕನ್ಯಾಕುಮಾರಿಯವರೆಗೆ ನವ್ಯತೆಯ ಕಹಳೆ ಕೇಳಿದೆಯಲ್ಲದೆ, ಪ್ರಯೋಗ ಪ್ರಾರಂಭವಾಗಿ ಈಗ ಮಾಗುತ್ತಲಿದೆ. ಅತೃಪ್ತಿ-ನಿರಾಶೆಗಳನ್ನು ಭಾರತೀಯರು ಪರಕೀಯರಿಂದ ಕಲಿಯಬೇಕಾಗಿರಲಿಲ್ಲ. ಭಾರತದಲ್ಲಿಯ ದುಃಖ ಹಿಮಾಲಯದಂತೆ ಬಿದ್ದುಕೊಂಡಿದೆ. ಆದರೆ ಅಭಿವ್ಯಕ್ತಿಯ ಮಾರ್ಗ ವಿಶೇಷ ಸಮುದ್ರದಾಚೆಯಿಂದ ಬಂದುದು ನಿಜ. ಆ ಓಟ, ಮಾಟ, ನಡಿಗೆ ಭಾರತೀಯ ಸಾಹಿತ್ಯಗಳಿಗೆ ನವೀನ ರಸಾನುಭವವನ್ನು ತಂದಿತು. ನವ್ಯ ಕವಿತೆಗಳು ಮೊದಲು ಎಲ್ಲ ಭಾರತೀಯ ಭಾಷೆಗಳಲ್ಲೂ ಅಗಮ್ಯವಾದಂತೆ ಕಂಡವು. ಆದರೆ ಇತ್ತೀಚೆಗೆ ಓದುಗರ ತಿಳುವಳಿಕೆ ತಿಳಿಯಾದಂತೆ ಕವಿಗಳ ಕಲಾವಂತಿಕೆಯೂ ಹದಕ್ಕೆ ಬಂದು ನವ್ಯತೆಯು ಗಮ್ಯವಾಗತೊಡಗಿದೆ.”

“ಹೀಗೆ ನವ್ಯತೆಯು ಬರಿ ಕನ್ನಡದಲ್ಲಿಯೇ ಎದ್ದ ಗೊಂದಲವಲ್ಲ. ಅದು ಗೊಂದಲವೇ ಆಗಿದ್ದರೆ, ಭಾರತದ ತುಂಬೆಲ್ಲ ಅದು ಎದ್ದಿದೆ. ಭಾರತೀಯ ಸಾಹಿತ್ಯಗಳ ವೈವಿಧ್ಯದಲ್ಲಿ ಐಕ್ಯತೆಯ ಸ್ವರವೊಂದು ಸದಾ ಮಿಡಿಯುತ್ತಿರುತ್ತದೆ. ನವ್ಯತೆಯು ಭಾರತದ ಸ್ವಾತಂತ್ರ್ಯೋತ್ತರ ಐಕ್ಯತೆಯ ಒಂದು ಭಾಗವಾಗಿದೆ.”
(ಪೀಠಿಕೆ, ಪುಟ ೪-೫)

‘ನವ್ಯಧ್ವನಿ’ಯಲ್ಲಿರುವ ಎಲ್ಲ ಕವಿತೆಗಳು ನವ್ಯ ಕವಿತೆಗಳಲ್ಲ. ನಮ್ಮ ತಥಾಕಥಿತ ವಿಮರ್ಶಕರು ರೂಪಿಸಿರುವ ಎಲ್ಲ ನಿಯಮಾವಳಿಗಳನ್ನು ಚಾಚೂ ತಪ್ಪದೆ ಪಾಲಿಸುವುದಾದರೆ ಇಲ್ಲಿನ ಬಹುತೇಕ ಕವಿತೆಗಳು ನವ್ಯಕಾವ್ಯದಿಂದ ಆಚೆ ನಿಲ್ಲಬೇಕಾಗುತ್ತದೆ. ಗೋಕಾಕರು ಇಲ್ಲಿನ ಕವಿತೆಗಳ ಆಯ್ಕೆಗೆ ಅನುಸರಿಸುವ ಮಾನದಂಡ ತುಂಬ ಭಿನ್ನವಾದುದು. ಅವರು ತಥಾಕಥಿತ ವಿಮರ್ಶಕರು (ಐವತ್ತರ ದಶಕದ ಆರಂಭದಲ್ಲಿ ವಿಮರ್ಶಕರು ಇನ್ನೂ ಇಷ್ಟೊಂದು ಪ್ರಭಾವಶಾಲಿಗಳಾಗಿರಲಿಲ್ಲ! ಈಗಿನ ಬುದ್ಧಿಜೀವಿಗಳು ಆಗ ಶೈಶವಾವಸ್ಥೆಯಲ್ಲಿದ್ದರು!) ಬಳಸುವ ಹಳೆಯ ವಿಧಾನವನ್ನು ತೊರೆದು ಕವಿತೆಗಳಲ್ಲಿ ನವ್ಯದೃಷ್ಟಿಗೆ ಆದ್ಯತೆ ನೀಡಿದ್ದಾರೆ. ಇಲ್ಲದಿದ್ದರೆ ನವ್ಯ ಸಾಹಿತ್ಯ ಮತ್ತು ನವ್ಯ ಸಾಹಿತಿಗಳನ್ನು ತಾತ್ಸಾರದಿಂದ ಕಾಣುತ್ತಿದ್ದ ಬೇಂದ್ರೆ ಮತ್ತು ಶಂಕರ ಮೊಕಾಶಿ ಪುಣೇಕರರ ಕವನಗಳು ಈ ಸಂಕಲನದಲ್ಲಿರುತ್ತಿರಲಿಲ್ಲ. ಅದೇ ‘ನವ್ಯಧ್ವನಿ’ ಸಂಕಲನದ ವಿಶೇಷ. ಬೇಂದ್ರೆಯವರು ‘ನಾಲ್ಪೇ ಸುಖಮಸ್ತೀ’ ಕವನ ಬರೆದದ್ದೇ ಅತ್ಯಾಧುನಿಕರು ಮತ್ತು ಅತಿ ಬುದ್ಧಿವಂತರಂತೆ ವರ್ತಿಸುತ್ತಿದ್ದ ನವ್ಯ ಸಾಹಿತಿಗಳನ್ನು ಹಂಗಿಸಲು! ಗೋಕಾಕರು ಅದನ್ನೇ ಈ ಸಂಕಲನದಲ್ಲಿ ನವ್ಯ ಕವಿತೆಯೆಂದು ಸೇರಿಸಿದ್ದಾರೆ. ಅದಕ್ಕೆ ಅವರು ಕೊಡುವ ವಿವರಣೆಯೂ ಕೂಡ ಅಷ್ಟೇ ಅರ್ಥಪೂರ್ಣ ಮತ್ತು ಸ್ವಾರಸ್ಯಕರವಾಗಿದೆ.

“ನಾಲ್ಪೇ ಸುಖಮಸ್ತೀ” ಎಂಬ ಬೇಂದ್ರೆಯವರ ವ್ಯಂಗ್ಯ ನವ್ಯ ಕವನವೂ ಈ ಸಂಕಲನದಲ್ಲಿರುವುದು ಅದರ ಒಂದು ವಿಶೇಷ ಲಕ್ಷಣವಾಗಿದೆ. ಹಿರಿ-ಕಿರಿ ಭೇದ, ಆಧುನಿಕ-ಪ್ರಗತಿಶೀಲ-ನವ್ಯ ಭೇದಗಳು, ಕಾವ್ಯಕ್ಕೆ, ಪ್ರಯೋಗಪ್ರಿಯತೆಗೆ ತಾಕಲಾರವೆಂದು ಇದರಿಂದ ಸ್ಪಷ್ಟವಾಗುತ್ತದೆ. ಯಾವ ಪದ್ಧತಿಯದಾದರೂ ಕಾವ್ಯವು ಕಾವ್ಯ. ಬರಿ ನವ್ಯ ಮಾರ್ಗದಲ್ಲಿ ಬರೆಯಲು ಪ್ರಾರಂಭಿಸಿದವರಿಗೇ ಈ ದಾರಿ ಮೀಸಲೆಂದಲ್ಲ, ಯಾವ ಕವಿಯೂ ಈ ದಾರಿಯನ್ನು ತುಳಿಯಬಹುದು. ಅನೇಕ ತಂತ್ರಗಳಂತೆ ನವ್ಯತೆಯೂ ಒಂದು ತಂತ್ರ, ಒಂದು ವಿಧಾನ. ಯಾವ ಕವಿಯೂ ಅದನ್ನು ಬಳಸಿಕೊಳ್ಳಬಹುದು. ಅಲ್ಲಲ್ಲಿ ಎದ್ದ ಗೊಂದಲ ನವ್ಯತೆಯ ಗೊಂದಲವಲ್ಲ, ತಪ್ಪು ತಿಳುವಳಿಕೆಯ ಗೊಂದಲ. ಬೇಂದ್ರೆಯವರು ಆಗೀಗ ಭಿನ್ನಾಭಿಪ್ರಾಯವನ್ನು ವ್ಯಕ್ತಗೊಳಿಸಿದ್ದರೆ ಅದು ನವ್ಯಕಾವ್ಯವನ್ನು ಕುರಿತಲ್ಲ – ನವ್ಯದೃಷ್ಟಿಯ ಹೆಸರಿನಲ್ಲಿ ಪ್ರಕಟವಾಗುವ ಅಪೂರ್ಣ ದೃಷ್ಟಿಯನ್ನು ಕುರಿತು.”
(ಪೀಠಿಕೆ, ಪುಟ ೧೭)

‘ನವ್ಯಧ್ವನಿ’ಯಲ್ಲಿ ಬೇಂದ್ರೆಯವರ ‘ನಾಲ್ಪೇ ಸುಖಮಸ್ತೀ’, ಗೋಕಾಕರ ‘ವೈದ್ಯ ವಿದ್ಯಾಲಯ’, ಅಡಿಗರ ‘ಭೂಮಿಗೀತ’, ಎಕ್ಕುಂಡಿಯವರ ‘ಜೋಗದ ಜಲಪಾತದಲ್ಲಿ’, ರಾಮಚಂದ್ರ ಶರ್ಮರ ‘ಕೆಂಡ-ಕಡಲು’, ‘???’, ಗಂಗಾಧರ ಚಿತ್ತಾಲರ ‘ಕರೆ’, ‘ಘಾಟಿ’, ಶಿವರುದ್ರಪ್ಪನವರ ‘ಔತಣ’, ‘ಹುಟ್ಟಿದ ಹಬ್ಬ’, ಕಣವಿಯವರ ‘ಯುಗಾದಿ’, ‘ಮಣ್ಣಿನ ಮೆರವಣಿಗೆ’, ಪುಣೇಕರರ ‘ಮಾಯಿಯ ಮೂರು ಮುಖಗಳು’, ‘ಅಪಸ್ವರಗಳು’, ಶ್ರೀಧರರ ‘ಚಂಡಿಕಾಹ್ವಾನ’, ‘ಸತ್ತಾತ್ಮಗಳ ಸಂಚು’, ರಾಜಗೋಪಾಲರ ‘ಹೊರಗು-ಒಳಗು’, ‘ಕರ್ಮಕಾಂಡ’, ಮತ್ತು ಶಾಂತಿನಾಥ ದೇಸಾಯಿಯವರ ‘ಹೊಸಹುಟ್ಟು’ ಸೇರಿದಂತೆ ಮೂವತ್ತು ವಿಭಿನ್ನ ಮತ್ತು ವೈವಿಧ್ಯಮಯ ಕವಿತೆಗಳಿವೆ. ಅತ್ಯುತ್ತಮ, ಉತ್ತಮ ಮತ್ತು ಕೆಲವೇ ಕೆಲವು ಸಾಧಾರಣವೆನ್ನಬಹುದಾದ ಕವಿತೆಗಳು ಸಹ ಈ ಸಂಕಲನದಲ್ಲಿವೆ.

ಸಂಪಾದಕರಾದ ಗೋಕಾಕರು ಪೀಠಿಕೆಯಲ್ಲಿ ಹೇಳಿರುವಂತೆ ನವ್ಯಕಾವ್ಯವನ್ನು ವಿಸ್ತಾರವಾದ ದೃಷ್ಟಿಕೋನದಿಂದ ನೋಡಿ, ಅದರಂತೆ ಈ ಸಂಕಲನಕ್ಕೆ ಕವಿತೆಗಳನ್ನು ಆಯ್ದುಕೊಂಡಿದ್ದಾರೆ. ಆ ಕಾಲಕ್ಕೆ ಇದೊಂದು ಅರ್ಥಪೂರ್ಣ ಪ್ರಯೋಗವೇ ಸರಿ. ಈ ಸಂಕಲನದ ಕೆಲವು ಕವಿತೆಗಳು ಎಷ್ಟೊಂದು ಅರ್ಥಪೂರ್ಣವಾಗಿವೆಯೆಂದರೆ ಅವುಗಳನ್ನು ಬಿಡಿ ಬಿಡಿಯಾಗಿ ಪ್ರಾಯೋಗಿಕ ವಿಮರ್ಶೆಗೆ ಒಳಪಡಿಸಬಹುದು. ಕಾವ್ಯಾಭ್ಯಾಸಿಗಳು ಮತ್ತು ಓದುಗರು ಅಗತ್ಯವಾಗಿ ‘ನವ್ಯಧ್ವನಿ’ಯನ್ನು ಓದಬೇಕು. ವಿಶೇಷವಾಗಿ ಕವಿಗಳು/ಕವಯತ್ರಿಯರೆಂಬ ಭ್ರಮೆಯಲ್ಲಿರುವ, ಪುಸ್ತಕ ಬ್ರಹ್ಮ, ಲೋಕ ವೀರ, ಮಜಾ ವಾಣಿ, ವಿಶ್ವ ವಿಜಯ ಮುಂತಾದ ದೊಡ್ಡ ಸಂಸ್ಥೆಗಳು ಮತ್ತು ಪತ್ರಿಕೆಗಳು ನಡೆಸುವ ರಿಯಾಲಿಟಿ ಶೋಗಳಂತಹ ಸ್ಪರ್ಧೆಗಳಲ್ಲಿ ವಿಜೇತರಾದವರು ಮತ್ತು ಸಾಹಿತ್ಯ ಲೋಕದ ಹಿತೈಷಿಗಳ ಕೃಪೆಯಿಂದ ಹಿತ್ತಲ ಬಾಗಿಲಿನ ಮೂಲಕ ಕನ್ನಡ ಸಾಹಿತ್ಯ ಪರಿಷತ್ತು, ದಸರಾ ಕವಿಗೋಷ್ಠಿಗಳಲ್ಲಿ ಮಿಂಚುವ ಸ್ವಯಂಘೋಷಿತ ಕವಿಗಳು/ಕವಯತ್ರಿಯರು ಇಂತಹ ಒಂದು ಕವನಗಳ ಆ್ಯಂಥಾಲಜಿಯನ್ನು ಓದಬೇಕಿದೆ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

1 thought on “ಮಿಂಚಿನ ಬಳ್ಳಿ- ವಿಕಾಸ ಹೊಸಮನಿ ಅಂಕಣ l ‘ನವ್ಯಧ್ವನಿ’ – ಒಂದು ಟಿಪ್ಪಣಿ”

  1. ಉದಯಕುಮಾರ ಹಬ್ಬು

    ಗೋಕಾಕರು ಸಂಪಾದಿಸಿದ “ನವ್ಯಕಾವ್ಯ” ಸಂಕಲನದ ಅವಲೋಕನ ತುಂಬವ ಸಮೀಚನವಾಗಿದೆ. ವಿಮರ್ಶಕ ವಿಕಾಸ ಹೊಸಮನಿ ಇವರಿಗೆ ಧನ್ಯವಾದ ಮತ್ತು ಅಭಿನಂದನೆಗಳು

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter