ನಾ. ಮೊಗಸಾಲೆಯವರ ಕತೆಗಳು: ಸಮಾಜದ ವಾಸ್ತವ ದರ್ಶನ

ಕನ್ನಡದ ಮಹತ್ವದ ಕವಿ, ಕಾದಂಬರಿಕಾರ ಮತ್ತು ಸಂಘಟಕರಾಗಿ ಗುರುತಿಸಿಕೊಂಡ ಡಾ. ನಾ. ಮೊಗಸಾಲೆಯವರು ಸುಂದರಿಯ ಎರಡನೇ ಅವತಾರ ಮತ್ತು ಇತರ ಕತೆಗಳು (2004) ಸೀತಾಪುರದ ಕತೆಗಳು (2007) ಸೀತಾಪುರದಲ್ಲಿ ಗಾಂಧೀಜಿ (2011) ಸನ್ನಿಧಿಯಲ್ಲಿ ಸೀತಾಪುರ (2014) ಎಂಬ ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಸೀತಾಪುರದಲ್ಲಿ ಕತೆಗಳೇ ಇಲ್ಲ (2018) ಎಂಬ ಹೆಸರಿನಲ್ಲಿ ಅವರ ಸಮಗ್ರ ಕತೆಗಳ ಸಂಗ್ರಹವು ಬಿಡುಗಡೆಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸೀತಾಪುರ ಎಂಬ ಊರಿನಲ್ಲಿ ಬದುಕುತ್ತಿರುವ ಜನಸಮುದಾಯದ ದೈನಂದಿನ ಜೀವನದ ಸುಖದುಃಖಗಳ, ಇಕ್ಕಟ್ಟು ಬಿಕ್ಕಟ್ಟುಗಳನ್ನು ನಿರೂಪಿಸಿದ್ದಾರೆ. ಮನುಷ್ಯ ಪ್ರಯತ್ನ ಮತ್ತು ಸಾಧ್ಯತೆಗಳಲ್ಲಿ ಇವರಿಗೆ ಇರುವ ನಂಬಿಕೆಯು ವ್ಯಕ್ತವಾಗುತ್ತದೆ.

ಮೊಗಸಾಲೆಯವರು ತಮ್ಮ ಬರವಣಿಗೆಯನ್ನು ಆರಂಭಿಸಿದ್ದು ಕನ್ನಡದಲ್ಲಿ ನವ್ಯ ಚಳುವಳಿಯು ಪ್ರಖರವಾಗಿದ್ದ ಕಾಲದಲ್ಲಿ. ಆದ್ದರಿಂದ ಈ ಚಳುವಳಿಯ ಪ್ರಭಾವವು ಅವರ ಮೇಲಿದೆ. ಜೊತೆಗೆ ಕಾಂತಾವರದ ಜನಸಾಮಾನ್ಯರ ಬದುಕನ್ನು ಹತ್ತಿರದಿಂದ ಕಂಡ ಅನುಭವವೂ ಅವರ ಕತೆಗಳ ವಸ್ತು ಪ್ರಪಂಚದ ಒಂದು ಪ್ರಮುಖ ಭಾಗವಾಗಿದೆ. ಅವರನ್ನು ಸಾಹಿತಿಯನ್ನಾಗಿ ಬೆಳೆಸಿದ ಕಾಂತಾವರವು ದಕ್ಷಿಣ ಕನ್ನಡ ಜಿಲ್ಲೆಯ ಯಾವುದೇ ಭಾಗದಲ್ಲಿರುವಂತೆ ತುಳು ಕನ್ನಡ ಸಂಸ್ಕøತಿಯುಳ್ಳದ್ದು. ಮನುಷ್ಯನ ಸಣ್ಣತನಗಳು, ಕ್ಷುದ್ರ ಸ್ವಾರ್ಥಗಳು, ಮೋಸ ಕುಟಿಲತೆಗಳು, ಆರ್ದತೆ ಅನುಕಂಪಗಳು ಎಲ್ಲ ಕಡೆ ಇರುವಂಥದ್ದೇ. ಮೊಗಸಾಲೆಯವರು ಕತೆಯನ್ನು ಹೇಳುವ ಮೂಲಕ ಮನುಷ್ಯರನ್ನು ಹೆಚ್ಚು ಅರ್ಥ ಮಾಡಿಕೊಳ್ಳಲು ಶ್ರಮಿಸುತ್ತಾರೆ. ಒಂದೊಂದು ಕತೆಯೂ ಒಂದೊಂದು ಸ್ವತಂತ್ರ ಹುಟ್ಟು. ಚಂದ್ರಶೇಖರ ಕಂಬಾರರ ಶಿವಾಪುರ, ಎಂ. ವ್ಯಾಸರ ದುರ್ಗಾಪುರಗಳ ಸ್ಥಿರ ಆವರಣದಲ್ಲಿ ಜೀವನದರ್ಶನವು ದೊರಕುವಂತೆ ಸೀತಾಪುರದಂಥ ಕಾಲ್ಪನಿಕ ಸ್ಥಳವನ್ನು ಕೇಂದ್ರೀಕರಿಸಿ ಕಾಂತಾವರದಲ್ಲಿ ಕತೆಯಾಗುವ ವ್ಯಕ್ತಿಗಳು, ವಸ್ತುವಿಶೇಷಗಳು ಇಲ್ಲಿ ಕಾಣಸಿಗುತ್ತವೆ. ಸಮಾಜದರ್ಶನದ ಮೂಲಕ ಜೀವನದರ್ಶನ ಅವರ ಕತೆಗಳ ದಾರಿ. ಎಷ್ಟು ಕತೆಗಳನ್ನು ಬರೆದರೂ ಮನುಷ್ಯನ ಮುಖ ಅನಂತವಾಗಿಯೇ ಇರುವುದರಿಂದ ಮೊಗಸಾಲೆಯವರೊಳಗಿನ ಕತೆಗಾರನು ಕತೆಗಳನ್ನು ಹೇಳಿ ದಣಿಯಲಾರ.

ದಲಿತರ ಜೀವನದ ಮುಖ್ಯ ಪ್ರಶ್ನೆಯಾದ ಬದುಕುಳಿಯುವ ಸಮಸ್ಯೆಯನ್ನು, ಅದರಿಂದ ಹುಟ್ಟಿಕೊಳ್ಳುವ ನೈತಿಕ ಸವಾಲುಗಳನ್ನು ಮೊಗಸಾಲೆಯವರು ‘ಐಕಾರ್ನಿಯಾ’ ಕತೆಯಲ್ಲಿ ಎದುರಿಸಿದ್ದಾರೆ. ಅವರ ದರ್ಶನವು ಸಮಾಜದ ಉಳಿದ ಘಟಕಗಳನ್ನೂ ಒಳಗೊಳ್ಳಲು ಹವಣಿಸುತ್ತದೆ. ಬಿಲ್ಲವ ಸಮುದಾಯಕ್ಕೆ ಸೇರಿದ ವಿಶ್ವನು ಈ ಕತೆಯ ಕೇಂದ್ರದಲ್ಲಿದ್ದರೂ ಅವನ ಸಾಮಾಜಿಕ ಪರಿಸರ ಹೆಚ್ಚು ವಿಸ್ತಾರವಾಗಿದೆ. ದಲಿತ ಪಾತ್ರ ಬಂದೊಡನೆ ಪ್ರತಿಭಟನೆಯ ಕಲ್ಪನೆ ನಮ್ಮನ್ನು ಆವರಿಸಿಕೊಳ್ಳುತ್ತದೆ. ಈ ಕತೆಯೂ ಇದಕ್ಕೆ ಹೊರತಲ್ಲ. ಪ್ರತಿಭಟನೆಯನ್ನು ಪ್ರತಿನಿಧಿಸುವ ವಿಶ್ವನು ಶಿಕ್ಷಣದ ಲಾಭವನ್ನು ಪಡೆದು ಹೊಸ ವಿಚಾರಗಳಿಗೆ ತಮ್ಮನ್ನು ತೆರೆದುಕೊಂಡವನು. ಆದರೆ ಅವನ ತಂದೆ ಅಂಗಾರನು ದಲಿತರ ಅಸಹಾಯಕತೆಯ ಎಲ್ಲ ಲಕ್ಷಣಗಳನ್ನು ಮೈಗೂಡಿಸಿಕೊಂಡವನು. ಆತ ರಂಗಪ್ಪ ಶೆಟ್ಟಿಯಿಂದ ಉಪಕೃತ. ತನಗೆ ಶೇಂದಿ ಶರಾಬು ಅಂಗಡಿಯನ್ನು ಗುತ್ತಿಗೆಯಲ್ಲಿ ಒದಗಿಸಿ ಕೊಟ್ಟು ಈ ಸ್ಥಿತಿಗೆ ತಲುಪಲು ಕಾರಣರಾದ ಶೆಟ್ಟರ ಮೇಲೆ ಅವನಿಗೆ ಭಕ್ತಿ ಗೌರವಗಳಿವೆ. ಅವರನ್ನು ಎದುರು ಹಾಕಿಕೊಂಡರೆ ಬದುಕಲು ಸಾಧ್ಯವಿಲ್ಲ ಎಂಬ ಭಯವಿದೆ. ಹೊಸ ವಿಚಾರಗಳಿಂದ ಪ್ರಭಾವಿತನಾದ ವಿಶ್ವನು ಜಾತಿ ಸಂಘಟನೆಯನ್ನು ಹುಟ್ಟು ಹಾಕಿದ್ದಲ್ಲದೆ ಶೆಟ್ಟರನ್ನು ಟೀಕಿಸಿ ಸಿಟ್ಟಿಗೆಬ್ಬಿಸಿದ್ದಾನೆ. “ಜಾತೀಯ ಸಂಘಟನೆ ಮಾಡೋದು ಅಂದರೆ ಜಾತೀಯತೆಯನ್ನು ಪ್ರಚೋದಿಸುವುದು. ಅಲ್ಲದೆ ಇದು ದೇಶದ ಹಿತದೃಷ್ಟಿಯಂದಲೂ ತಪ್ಪು” ಎನ್ನುವ ಶೆಟ್ಟರ ಮಾತಿನಲ್ಲಿ ತಥ್ಯವಿದೆಯಾದರೂ ಬಿಲ್ಲವ ಸಮುದಾಯದವರು ಬಹುಸಂಖ್ಯಾತರಾಗಿರುವ ಆ ಊರಿನಲ್ಲಿ ವಿಶ್ವನು ಬಡವರ ವಿದ್ಯಾಭ್ಯಾಸ, ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ, ಮೂರ್ತೆದಾರರಿಗೆ ಜೀವ ವಿಮೆಯ ಸೌಲಭ್ಯ, ಬಡವರಿಗೆ ಕಡಿಮೆ ವೆಚ್ಚದಲ್ಲಿ ಮದುವೆ ಮುಂತಾದ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳುವ ಮೂಲಕ ಕಾರ್ಯಗಳಿಂದ ಅವನ ವರ್ಚಸ್ಸು ಹೆಚ್ಚಿ ಚುನಾವಣೆಗೆ ನಿಂತರೆ, ಬಿಲ್ಲವರು ಜಾತಿ ಸಂಘಟನೆಯ ಹೆಸರಿನಲ್ಲಿ ಒಗ್ಗಟ್ಟಾಗಿ ಅವನನ್ನು ಜನಪ್ರತಿನಿಧಿಯಾಗಿ ಆರಿಸಿದರೆ ತನ್ನ ಅಧ್ಯಕ್ಷ ಪದವಿಗೆ ಸಂಚಕಾರ ಬರಬಹುದು ಎಂಬ ಭಯದಿಂದ ಆ ಮಾತನ್ನು ಹೇಳಿದ್ದಾರೆಯೇ ಹೊರತು ಪ್ರಗತಿಪರ ದೃಷ್ಟಿಯಿಂದ ಅಲ್ಲ. ಆದರೆ ವಿಶ್ವನ ಸಂಘಟನೆಯಲ್ಲಿ ಜಾತಿಯ ಉದ್ದೇಶವು ಗೌಣವಾಗಿದೆ. ಆದರೆ ಅವನ ಕಾಳಜಿಯನ್ನು ಯಾರೂ ಅರ್ಥಮಾಡಿಕೊಳ್ಳುವುದಿಲ್ಲ. ಊರಿನ ಜಾತಿಬಾಂಧವರ ಬೆಂಬಲವನ್ನು ಪಡೆಯುವ ಸಲುವಾಗಿ ವಿಶ್ವನು ಗುರಿಕಾರನಾದ ಕರಿಯ ಬೋಂಟ್ರನನ್ನು ಸಂಘಟನೆಯ ಸದಸ್ಯನನ್ನಾಗಿ ಮಾಡಲು ಹೊರಟರೆ ಆತನು ರಂಗಪ ್ಪಶೆಟ್ಟರ ಪರ ನಿಂತಿರುತ್ತಾನೆ. ದೇವನೂರ ಮಹಾದೇವರ ‘ಗ್ರಸ್ತರು’ ಕತೆಯ ನಾಯಕನ ಪರಿಸ್ಥಿತಿಯೇ ವಿಶ್ವನದ್ದು. ಆ ಕತೆಯ ನಾಯಕನಿಗೆ ಪ್ರತಿಭಟನೆಯ ಪರಿಣಾಮವನ್ನು ಎದುರಿಸುವ ಸಿದ್ಧತೆಯು ಇರುವುದಿಲ್ಲ. ‘ಹಾಗಲ್ಲ ನಿಮಗೆ ಗೊತ್ತಾಗಲ್ಲ’ ಎನ್ನುವುದು ಬಿಟ್ಟರೆ ವಿರೋಧಿಗಳ ವಾದಕ್ಕೆ ಅವನಲ್ಲಿ ಉತ್ತರವಿಲ್ಲ. ಪ್ರತಿಭಟನೆಯ ಪರಿಣಾಮವನ್ನು ಎದುರಿಸಲು ವಿಶ್ವನಲ್ಲಿ ಸಿದ್ಧತೆ ಇದ್ದರೂ, ಧ್ಯೇಯಧೋರಣೆಗಳು ಸ್ಪಷ್ಟವಾಗಿದ್ದರೂ ಜಾತಿ ಬಾಂಧವರ ಬೆಂಬಲವಿಲ್ಲದಿರುವುದರಿಂದ ಪ್ರತಿಭಟನೆಯು ಸಾಧ್ಯವಾಗದೆ ಯಾತನೆಗೆ ಒಳಗಾಗುತ್ತಾನೆ. ಏಕಾಂಗಿಯಾಗಿರುವುದರಿಂದ ಆತನ ಇಚ್ಛಾಶಕ್ತಿಯು ಸೋಲುತ್ತದೆ. ತಂದೆತಾಯಿಯರ ಅಸಹಾಯಕತೆ, ರಂಗಪ್ಪಶೆಟ್ಟರ ಕುಟಿಲ ನೀತಿ, ಜಾತಿ ಬಾಂಧವರ ಪ್ರೋತ್ಸಾಹದ ಕೊರತೆ, ಬಿಲ್ಲವ ಜಾತಿಗೆ ಸೇರಿದ ತನಗೆ ಒಂದು ಲೋಟ ಕಾಫಿಯನ್ನೂ ಕೊಡಲಾರದ ವಿಷ್ಣು ಮಾಸ್ತರರ ಹೆಂಡತಿಯ ಜಾತೀಯತೆಯಿಂದ ಹುಟ್ಟಿದ ಅವಮಾನವನ್ನು ಅವನು ಕಷ್ಟಪಟ್ಟು ಅರಗಿಸಿಕೊಳ್ಳುತ್ತಾನೆ. ಆದರೆ ತನ್ನ ಗುರುಗಳೂ, ಸಾಕಷ್ಟು ವಯಸ್ಸಾದವನೂ ಆದ ವಿಷ್ಣು ಮಾಸ್ತರನ ಜೊತೆ ತನ್ನ ತಂಗಿ ಕೊರಪೊಳು ಮಲಗಿದ ದೃಶ್ಯ ಅವನ ಇಚ್ಛಾಶಕ್ತಿಯನ್ನು ಅಲುಗಿಸಿಬಿಡುತ್ತದೆ. ‘ವಿಶ್ವ ಮಗುವಾಗಿ ಜಗಲಿಯ ಮೇಲೆ ಕುಕ್ಕರಿಸಿದ’ ಎಂಬ ವಾಕ್ಯದಲ್ಲಿ ಅವನ ಅಸಹಾಯಕತೆಯ ಚಿತ್ರಣವಿದೆ. ಕಾಲ ಬದಲಾದರೂ ಬದಲಾಗದ ಊರು, ಇನ್ನೂ ಉಳಿದುಕೊಂಡಿರುವ ಊಳಿಗಮಾನ್ಯ ವ್ಯವಸ್ಥೆಯ ಪ್ರಾಬಲ್ಯ, ಮೇಲ್ಜಾತಿಯವರ ಕೈಯಲ್ಲೇ ಉಳಿದಿರುವ ಅಧಿಕಾರ- ಅಂತಸ್ತು ಮತ್ತು ಗುಲಾಮರಾಗಿಯೇ ಮುಂದುವರಿಯುತ್ತಿರುವ ಕೆಳಜಾತಿಯವರ ಪರಿಸ್ಥಿತಿಯನ್ನು ತೋರಿಸಲು ಅವನ ಕುಸಿತವು ನಿರ್ಣಾಯಕವಾಗಿದೆ. ಇದ್ದ ನೀರನ್ನೆಲ್ಲ ಹೀರುವ ಐಕಾರ್ನಿಯಾ ಎಂಬ ಜಲ ಸಸ್ಯದಂತೆ ಮೇಲು ಜಾತಿಯವರು ಬಡವರ ಚೈತನ್ಯವನ್ನು ಹೀರುತ್ತಾರೆ ಎಂಬ ಧ್ವನಿ ಇಲ್ಲಿದೆ. ವಿಶ್ವನ ತಾಯಿ ತಣ್ಣಗಿನ ಕಾಫಿಯನ್ನು ತಂದುಕೊಡುವ ಸನ್ನಿವೇಶದ ಸಾಂಕೇತಿಕತೆಯು ಸ್ಪಷ್ಟವಾಗಿಯೇ ಇದೆ. ದೇವನೂರ ಮಹಾದೇವರ ‘ಗ್ರಸ್ತರು’ ಎಂಬ ಕತೆಗಯೊಂದಿಗೆ ಅನಂತಮೂರ್ತಿಯವರ ‘ಪ್ರಕೃತಿ’ಯ ಜೊತೆಗೂ ಹೋಲಿಸಬಹುದಾದ ಈ ಕತೆಯು ಸಮಸ್ಯೆಗೆ ಸುಲಭ ಪರಿಹಾರವನ್ನು ಸೂಚಿಸದೆ, ಕಾವ್ಯನ್ಯಾಯವನ್ನು ಒದಗಿಸದೆ, ಸಮಸ್ಯೆಯ ಸ್ವರೂಪವನ್ನು ಮಾತ್ರ ಮುಂದಿಡುವುದರಿಂದ ನವ್ಯ ಮತ್ತು ದಲಿತ ಬಂಡಾಯ ಕತೆಗಳಿಗಿಂತ ಭಿನ್ನವೆನಿಸಿಕೊಳ್ಳುತ್ತದೆ. ಶಿವರಾಮ ಕಾರಂತರ ‘ಚೋಮನ ದುಡಿ’ಯ ನಂತರ ದಲಿತ ಸಂವೇದನೆಯನ್ನು ದಲಿತೇತರನೊಬ್ಬ ವಿಶಿಷ್ಟವಾಗಿ ನೋಡುವ ಸಂದರ್ಭ ಲಂಕೇಶರ ‘ಮುಟ್ಟಿಸಿಕೊಂಡವನು’ ಎಂಬ ಕತೆಯಲ್ಲಿದೆ ಎಂದು ಅಭಿಪ್ರಾಯಪಟ್ಟ ವಿಮರ್ಶಕರು ಅದಕ್ಕಿಂತ ಮೊದಲು 1977ರಲ್ಲೇ ಅಂಥ ಕತೆಯನ್ನು ಬರೆದ ಮೊಗಸಾಲೆಯವರನ್ನು ಗುರುತಿಸದಿರುವುದು ವಿಷಾದನೀಯವಾಗಿದೆ.

ಬಾಗಿಲು ಒಳ ಹೊರಗೆ ತೆರೆದುಕೊಳ್ಳಲು ಬಿಜಾಗರಿಯ ಅಗತ್ಯವಿದೆ. ನಾವು ಕೂಡ ಒಳಹೊರಗುಗಳಿಗೆ ಮನಸ್ಸು ತೆರೆದುಕೊಳ್ಳಬೇಕು ಎಂಬುದನ್ನು ಧ್ವನಿಸುವ ‘ಬಿಜಾಗರಿ’ ಎಂಬ ವಿಶಿಷ್ಟ ಸಾಂಕೇತಿಕ ಕತೆಯು ನಿವೃತ್ತ ಮುಖ್ಯೋಪಾಧ್ಯಾಯ ಸೀತಾರಾಮಯ್ಯನವರ ಮನಸ್ಥಿತಿಯನ್ನು ಹಿಡಿದಿಡುತ್ತದೆ. ಕೆ. ಎ. ಎಸ್ ಪರೀಕ್ಷೆಯಲ್ಲಿ ತೇರ್ಗಡೆಯನ್ನು ಹೊಂದಿ, ಸರಕಾರಿ ಉದ್ಯೋಗವನ್ನು ಸಂಪಾದಿಸಿ ನಗರವಾಸಿಯಾದ ಮಗನು ಹಳ್ಳಿಯಲ್ಲಿರುವ ಆಸ್ತಿಯನ್ನು ಮಾರಿ ತನ್ನ ಜೊತೆಯಲ್ಲಿ ನೆಲೆಸಬೇಕೆಂದು ಸೀತಾರಾಮಯ್ಯನವರ ಬಳಿ ಕೇಳಿಕೊಂಡಾಗ ನೆಲದ ಮೇಲಿನ ಮೋಹವನ್ನು ತೊರೆಯಲಾರದ ಅವರು ಊರಿನಲ್ಲೇ ಉಳಿಯುವ ಇಂಗಿತವನ್ನು ವ್ಯಕ್ತಪಡಿಸಿದರೂ, ಅವರ ಹೆಂಡತಿಯು ತನ್ನ ಮಗನ ಜೊತೆಯಲ್ಲೇ ವಾಸಿಸಲು ಹಟ ಹಿಡಿದಿದ್ದರಿಂದ, ತೋಟದ ಕೆಲಸಕ್ಕೆ ಜನ ಸಿಗದ ಪರಿಸ್ಥಿತಿ ಉಂಟಾಗಿದ್ದರಿಂದ ಪಿತ್ರಾರ್ಜಿತವಾಗಿ ಬಂದಿದ್ದ ಎರಡೆಕರೆ ತೋಟ, ತಾತ ಕಟ್ಟಿಸಿದ ಮನೆಮಾರನ್ನೆಲ್ಲ ತನ್ನ ವಿದ್ಯಾರ್ಥಿಯಾಗಿದ್ದ ಹಸನಬ್ಬನಿಗೆ ಮಾರಿ ಹುಟ್ಟೂರಾದ ಸೀತಾಪುರವನ್ನು ತೊರೆದು ಮಗನೊಂದಿಗೆ ನೆಲೆಸುತ್ತಾರೆ. ಅರ್ಚಕ ರಾಮಭಟ್ಟರ ಮಗನ ಮದುವೆಗೆಂದು ಸೀತಾಪುರಕ್ಕೆ ಊರಿಗೆ ಬಂದ ಸೀತಾರಾಮಯ್ಯನವರಿಗೆ ನೆನಪುಗಳು ಕಾಡುತ್ತವೆ. ಹಸನಬ್ಬನು ತನ್ನ ಮತ್ತು ಅಜ್ಜ ಮುತ್ತಜ್ಜರ ಬದುಕನ್ನು ಅರಳಿಸಿದ ಮನೆಯನ್ನು ಕೆಡವಿ ಬೇರೆ ಮನೆಯನ್ನು ಕಟ್ಟಿರಬಹುದು ಅಥವಾ ಅಲ್ಲಿ ಅಡಿಕೆಯ ಗಿಡಗಳನ್ನು ನೆಟ್ಟಿರಬಹುದು ಎಂದು ಊಹಿಸಿದ್ದ ಸೀತಾರಾಮಯ್ಯನವರು ಆ ಮನೆಯ ಮುಂದೆ ಅಜ್ಜ ಕಟ್ಟಿಸಿದ್ದ ತುಳಸಿಕಟ್ಟೆ, ಒಳಮನೆಯ ಗೋಡೆಯಲ್ಲಿ ಬಿಡಿಸಿದ ಚಿತ್ರ, ತನ್ನ ಹೆಂಡತಿ ಹೊಸ್ತಿಲಲಲ್ಲಿ ಬರೆದಿಟ್ಟಿದ್ದ ರೇಖಾಚಿತ್ರ, ದೇವರಕೋಣೆ ಮತ್ತು ಅಡುಗೆಕೋಣೆಗಳು ಸುಸ್ಥಿತಿಯಲ್ಲಿರುವುದನ್ನು ಕಂಡು ಬೆರಗಾಗುತ್ತಾರೆ.

ಬೇರೆಯವರಿಗೆ ಬಾಡಿಗೆಗೆ ಕೊಡದಿರಲು ಕಾರಣವೇನು ಎಂದು ಹಸನಬ್ಬನನ್ನು ಪ್ರಶ್ನಿಸಿದಾಗ “ಇದು ನಿಮ್ಮಂಥವರು ಹುಟ್ಟಿ ಬೆಳೆದ ಮನೆ. ಬಾಡಿಗೆಯ ಆಸೆಯಲ್ಲಿ ಎಂತೆಂಥವರಿಗೆ ಕೊಡಲು ನನಗೆ ಇಷ್ಟವಿಲ್ಲ. ನಿಮ್ಮಂಥವರು ಯಾರಾದರೂ ಸಿಕ್ಕರೆ ಬಾಡಿಗೆಗೆ ಕೊಡಬೇಕು ಎಂದುಕೊಂಡಿದ್ದೇನೆ. ಮನೆಯ ಮಾಡುಗೀಡು ರಿಪೇರಿ ಮಾಡಿಸಿದ್ದೇನೆ. ಮನೆ ಹಳತಾದರೂ ಹತ್ತೈವತ್ತು ವರ್ಷಕ್ಕೆ ಏನೂ ತೊಂದರೆಯಿಲ್ಲ. ಇದು ನನಗೆ ಕಲಿಸಿದ ಮಾಸ್ಟ್ರ ಮನೆ” ಎನ್ನುವ ಮೂಲಕ ಹಸನಬ್ಬನ ವ್ಯಕ್ತಿತ್ವವು ಎತ್ತರಕ್ಕೇರುತ್ತದೆ. ಭಾವಪರವಶರಾದ ಸೀತಾರಾಮಯ್ಯನರು ಆ ಮನೆಯಲ್ಲಿ ತಾವೇ ಬಾಡಿಗೆದಾರರಾಗಿ ನೆಲೆಸಲು ತೀರ್ಮಾನಿಸುತ್ತಾರೆ. ಮಗನ ಮನೆಯ ಬಚ್ಚಲುಮನೆಯ ಬಾಗಿಲಿಗೆ ಬಡಿದ ಬಿಜಾಗರಿಯು ತುಕ್ಕು ಹಿಡಿದು ತುಂಡಾಗಿ ಬೀಳಲಿದೆ ಎಂಬುದನ್ನು ಮನಗಂಡ ಸೀತಾರಾಮಯ್ಯನವರು ಮಗನ ಬಳಿ ಈ ವಿಷಯವನ್ನು ಪ್ರಸ್ತಾಪಿಸಿದಾಗ ತನ್ನ ಕಾರ್ಯಾಲಯಕ್ಕೆ ಲೋಕೋಪಯೋಗಿ ಇಲಾಖೆಯ ಮಂತ್ರಿಗಳು ಬರಲಿರುವ ಕಾರಣ ಕೆಲಸದ ಒತ್ತಡದಲ್ಲಿದ್ದ ಆತನಿಗೆ ಬಾಗಿಲನ್ನು ಸರಿಪಡಿಸಲು ಸಮಯವಿಲ್ಲದಿರುವುದರಿಂದ ಮಂತ್ರಿಗಳು ಬಂದು ಹೋದ ಮೇಲೆ ಹೊಸ ಬಾಡಿಗೆ ಮನೆಯನ್ನು ಹುಡುಕೋಣ ಎನ್ನುತ್ತಾನೆ. ಸ್ನಾನಕ್ಕೆ, ಶೌಚಾಲಯಕ್ಕೆ ಹೋಗುವಾಗ ಬಿಜಾಗರಿ ತುಂಡಾಗಿ ಬಾಗಿಲು ತಲೆಗೆ ಬಿದ್ದರೆ ಎಂದು ಒಳಗೊಳಗೆ ಭಯ ಹುಟ್ಟಿ ತಂದೆತಾಯಿಯರ ಮನಸ್ಸು ಹಿಂಸೆಗೊಳಗಾಗುತ್ತದೆ. ಅದೇ ಹೊತ್ತಿನಲ್ಲಿ ರಾಮ ಭಟ್ಟರು ಸೀತಾರಾಮಯ್ಯನವರನ್ನು ಕಾಣಲು ಬಂದಾಗ ಬೆಳಗ್ಗಿನಿಂದಲೇ ಮೂತ್ರ ವಿಸರ್ಜಿಸಲಾರದೆ ಒದ್ದಾಡುತ್ತಿದ್ದ ಅವರ ಹೆಂಡತಿ ದೇವಕಿಯಮ್ಮ ‘ಶೌಚಾಲಯದ ಬಾಗಿಲಿನ ಬಿಜಾಗರಿ ಕಿತ್ತು ಹೋಗಿದೆ’ ಎಂದು ಎಚ್ಚರಿಸಿದರೂ ಕೇಳದೆ ದಢಾರನೆ ಬಾಗಿಲು ಮುಚ್ಚಿ ಕುಳಿತುಕೊಳ್ಳುವಷ್ಟರಲ್ಲಿ ಬಿಜಾಗರಿ ತುಂಡಾಗಿ ಅವರ ತಲೆಯ ಮೇಲೆ ಬೀಳುತ್ತದೆ. ಬಾಗಿಲಿನ ಮೊಳೆ ಹಣೆಗೆ ಬಡಿದು ರಕ್ತ ಸೋರತೊಡಗುತ್ತದೆ. ನಾಚಿಕೆ ಅವಮಾನಗಳಿಂದ ಕುದಿದ ಸೀತಾರಾಮಯ್ಯನವರು ತನ್ನ ಮಗನ ಮೇಲೆ ಸಿಟ್ಟುಗೊಂಡು ಹುಟ್ಟೂರಿಗೆ ಮರಳಲು ಸಿದ್ಧನಾಗುತ್ತಾರೆ. ಇದನ್ನು ತಿಳಿದ ಮಗನು ಅವರಲ್ಲಿ ಕ್ಷಮೆಯನ್ನು ಕೇಳಿ “ನಿಜವಾದ ಅವಮಾನವಾದದ್ದು ನಿಮಗಲ್ಲ, ನನಗೆ. ನಾಳೆ ಬೆಳಗ್ಗೆಯೇ ಬಾಗಿಲು ಸರಿ ಮಾಡಿಸುತ್ತೇನೆ” ಎಂದು ಮಾತು ಕೊಡುತ್ತಾನೆ. ಅವನ ಕಣ್ಣಂಚಿನಲ್ಲಿ ಕಂಡ ಪ್ರೀತಿಯ, ನೋವಿನ ಹನಿಗಳಲ್ಲಿ ಕರಗಿದ ಸೀತಾರಾಮಯ್ಯ ತಾನು ಮಾಡಿದ ನಿರ್ಧಾರ ತಪ್ಪೆಂದು ಮನಗಂಡು ಮಗನೊಡನೆ ಉಳಿದುಕೊಳ್ಳುತ್ತಾರೆ.

ಕತೆಯಲ್ಲಿರುವ ತಂದೆ, ತಾಯಿ ಮತ್ತು ಮಗ ನಿಜಕ್ಕೂ ಒಳ್ಳೆಯ ಜೀವಗಳೇ. ಮೂವರಿಗೂ ಪರಸ್ಪರ ಪ್ರೀತಿಯೇ. ಒಬ್ಬರಿಗಾಗಿ ಇನ್ನೊಬ್ಬರು ಮರುಗುವವರೇ. ಆದರೆ ಬದುಕಿನ ಏರಿಳಿತಗಳು, ನಗರದ ಜೀವನವು ಇವರ ಸಂಬಂಧಗಳನ್ನು ಎಷ್ಟು ವಕ್ರಗೊಳಿಸುತ್ತದೆ, ಸಾಮಾನ್ಯ ಘಟನೆಗಳು ತಿರುಚಿಕೊಂಡು ಜೀವನವನ್ನು ಹೇಗೆ ಹಾಳು ಮಾಡುತ್ತವೆ ಎಂಬುದನ್ನು ಪಾತ್ರಗಳ ನೋವಿನ ಮೂಲಕ ಅರ್ಥವಾಗುತ್ತದೆ. ಮೂವರೂ ನಿರಪರಾಧಿಗಳು. ಒಳ್ಳೆಯ ಮನಸ್ಸಿನವರು. ಆದರೂ ನೋವನ್ನು ಅನುಭವಿಸುತ್ತಾರೆ. ‘ಇದಕ್ಕೆಲ್ಲ ಅರ್ಥವೇನು ದೇವರೇ?’ ಎಂದು ನವ್ಯ ಸಾಹಿತ್ಯವು ಕೇಳತೊಡಗಿದ ಪ್ರಶ್ನೆಯನ್ನು ಈ ಕತೆಯೂ ಅಬ್ಬರವಿಲ್ಲದೆ ಕೇಳುತ್ತದೆ. ತಂದೆ-ಮಗ ಬಾಂಧವ್ಯದ ಮೇಲೆ ನೆರಳೊಂದು ಹೇಗೆ ಬೀಳಬಹುದು! ಜೀವ ಜೀವಗಳ ನಡುವೆ ಪ್ರೀತಿ ಇದ್ದಾಗಲೂ ಪರಸ್ಪರ ಅರ್ಥ ಮಾಡಿಕೊಂಡು ಬದುಕುವುದೆಷ್ಟು ಕಷ್ಟ! ಎಷ್ಟು ಹತ್ತಿರವಿದ್ದರೂ ಎಷ್ಟು ದೂರ! ಭಾವಾತಿರೇಕವಿಲ್ಲದೆ ಕೋಮಲವಾದ ಹೃದಯವಂತಿಕೆಯಲ್ಲಿ ತೊಯ್ದು ಹೋಗುವ ಈ ಕತೆಯು ಆಧುನಿಕ ಬದುಕಿನ ತಲ್ಲಣಗಳನ್ನು ಸೂಕ್ಷ್ಮವಾಗಿ ವಿವರಿಸುತ್ತದೆ. ತಂದೆ ಮಕ್ಕಳ ಸಂಬಂಧ ಹಲವು ಕಾರಣಗಳಿಂದ ಶಿಥಿಲವಾಗಿ ದೂರವಾಗುವ ಸಂದರ್ಭ ಇಲ್ಲಿದೆ. ಪ್ರಕೃತಿಯಿಂದ ದೂರ ಸರಿಯುತ್ತಾ ನಗರವಾಸಿಗಳಾದಂತೆಲ್ಲ ನಿಸ್ಸಾರವೂ ನಿರ್ವೀರ್ಯವೂ ಆಗಿಬಿಡುವ ಬದುಕನ್ನು ಕಣ್ಮುಂದೆ ತರುವ ಕತೆಯಲ್ಲಿ ವೃದ್ಧ ತಂದೆತಾಯಿಯರೊಂದಿಗೆ ವಾತ್ಸಲ್ಯ ಮಮಕಾರಗಳನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲದ ಅವಸರದ ಯಾಂತ್ರಿಕ ಬದುಕು ಅನಾವರಣಗೊಂಡಿದೆ ಎನ್ನಬಹುದಾದರೂ ಹಳ್ಳಿಯ ಬದುಕೂ ಇದಕ್ಕೆ ಹೊರತಾಗಿರಲಿಲ್ಲ ಎಂಬುದು ಗಮನಾರ್ಹವಾಗಿದೆ. ಮುಖ್ಯೋಪಾಧ್ಯಾಯ ವೃತ್ತಿಯಲ್ಲಿದ್ದ ಸೀತಾರಾಮಯ್ಯನವರು ಬಿಡುವಿಲ್ಲದೆ ಒದ್ದಾಡುತ್ತಿದ್ದ ಸಂದರ್ಭದಲ್ಲಿ ಮಗನ ವಿದ್ಯಾಭ್ಯಾಸ, ಎರಡೆಕರೆ ಅಡಿಕೆ ತೋಟ, ನೆಂಟರ ಯೋಗಕ್ಷೇಮಗಳನ್ನು ನೋಡಿಕೊಂಡದ್ದು ಅವರ ಹೆಂಡತಿಯೇ. ಆದ್ದರಿಂದಲೇ ತಂದೆಯು ಮಗನ ಮೇಲೆ ಸಿಟ್ಟುಗೊಂಡು ಹಳ್ಳಿಯಲ್ಲಿ ನೆಲೆಸಲು ನಿರ್ಧರಿಸಿದಾಗ “ಇಷ್ಟಕ್ಕೆಲ್ಲ ಸಿಟ್ಟು ಮಾಡಿಕೊಂಡು ಮಗನಿಂದ ದೂರ ಹೋದರೆ ಆಗುತ್ತಾ? ನೀವು ಹೋಗಿ ನಾನು ಬರುವವಳಲ್ಲ” ಎಂದು ಧೈರ್ಯದಿಂದ ಹೇಳಿ ಮಾತೃ ಹೃದಯದ ಮಮತೆಯನ್ನು ವ್ಯಕ್ತಪಡಿಸಲು ಆಕೆಗೆ ಸಾಧ್ಯವಾಗುತ್ತದೆ. ಹಳಹಳಿಕೆ, ಕೊರಗುಗಳು ಇದ್ದರೂ ಬದಲಾದ ಸಂದರ್ಭವನ್ನು ಅರ್ಥಮಾಡಿಕೊಂಡು, ಪರಿಸ್ಥಿತಿಯೊಂದಿಗೆ ಹೊಂದಿಕೊಂಡು ಸಮಾಧಾನವನ್ನು ತಂದುಕೊಳ್ಳುವ ಮನೋಭಾವವು ಮುಖ್ಯವಾಗುತ್ತದೆ. ಮನೆಯಲ್ಲಿರುವ ವೃದ್ಧ ತಂದೆತಾಯಿಯರ ಕುರಿತು ಹೊಸ ತಲೆಮಾರು ಪ್ರೀತಿ ಕಾಳಜಿಗಳನ್ನು ತೋರಿ ತಾವು ಅಲಕ್ಷಿತರಲ್ಲ ಎಂಬ ಭರವಸೆಯನ್ನು ಮೂಡಿಸಬೇಕಾದ ಅಗತ್ಯದ ಕಡೆಗೆ ಬೊಟ್ಟು ಮಾಡುವ ಕತೆಯು ಮಾನವೀಯ ಸಂಬಂಧಗಳ ಮಹತ್ವವನ್ನು ಅರಿತು ಬದುಕಿದರೆ ಅದುವೇ ಸ್ವರ್ಗ ಎಂಬ ವಿಚಾರವನ್ನು ವ್ಯಕ್ತಪಡಿಸುತ್ತದೆ. ಆಧುನಿಕ ಬದುಕಿನ ವಾಸ್ತವಗಳನ್ನು ತಿಳಿದು ಬದುಕುವುದು ನಮ್ಮ ಕರ್ತವ್ಯವಾಗಬೇಕು. ಹಿರಿಯರಿಗೆ ಕಿರಿಯರ ಮೇಲಿನ ಅಪನಂಬಿಕೆ, ಕಿರಿಯರಿಗೆ ಹಿರಿಯರ ಮೇಲಿರುವ ಅಸಮಾಧಾನ- ತಿರಸ್ಕಾರ, ತಲೆಮಾರುಗಳ ಅಂತರ, ಪೀಳಿಗೆಗಳ ನಡುವಿನ ಸಂಘರ್ಷಗಳಲ್ಲಿ ಕಿರಿಯರ ಹೊಸ ಚಿಂತನೆಗಳನ್ನು ಗ್ರಹಿಸಲಾರದೆ ಹಿರಿಯರು ಜಡವಾಗುತ್ತಿದ್ದಾರೆ. ಮನುಷ್ಯರ ನಡುವಿನ ಗೋಡೆಗಳು, ಮನಸ್ಸುಗಳ ನಡುವಿನ ಕಂದರಗಳನ್ನು ಕೂಡಿಸುವ ಸೇತುವೆಯನ್ನು ಕಟ್ಟಬೇಕಲ್ಲದೆ ಸಂಬಂಧಗಳನ್ನು ಕಡಿದುಕೊಂಡು ಏಕಾಕಿಯಾಗಬಾರದು. ಮಕ್ಕಳಿಗೂ ಅವರದ್ದೇ ಆದ ನೆಲೆ ಬೆಲೆಗಳಿವೆ. ತಮ್ಮ ಭೂತಕ್ಕೆ ಅವರ ಭವಿಷ್ಯವನ್ನು ಕಟ್ಟಿ ಹಾಕುವುದು ಸರಿಯಲ್ಲ ಎಂದು ಹಿರಿಯರು ಮನಗಾಣಬೇಕಾದ ಅಗತ್ಯವನ್ನು ಈ ಕತೆಯು ಧ್ವನಿಸುತ್ತದೆ.

ನೀರು ಮತ್ತು ಕರುಣೆಗಳ ನಡುವಿನ ಸಂಬಂಧವು ಸಾಹಿತ್ಯದಲ್ಲಿ ಹೊಸತಲ್ಲ. ಕೆ. ಸದಾಶಿವ ಅವರ ‘ನಲ್ಲಿಯಲ್ಲಿ ನೀರು ಬಂದಿತು’, ಜನಾರ್ದನ ಎರ್ಪಕಟ್ಟೆ ಅವರ ‘ನೀರು’ ಕತೆಯಂತೆ ಮೊಗಸಾಲೆಯವರ ‘ನೀರು ಬಂತು ನೀರು’ ಕತೆಯಲ್ಲಿ ನೀರು ಕರುಣೆಯ ಪ್ರತೀಕವಾಗಿ ಬೆಳೆಯುವ ರೀತಿಯು ಗಮನಾರ್ಹವಾಗಿದೆ. ವೆಂಕಪ್ಪಯ್ಯ ಮತ್ತು ಶೀನಪ್ಪಯ್ಯ ಎಂಬ ಅಣ್ಣ ತಮ್ಮಂದಿರ ವೈಮನಸ್ಯದಿಂದ ಹುಟ್ಟುವ ಪರಿಣಾಮಗಳನ್ನು ವಿಶ್ಲೇಷಿಸುವ ಕತೆಯು ಮನುಷ್ಯನ ಸ್ವಭಾವದಲ್ಲಿರುವ ಕ್ಷುದ್ರ ಕ್ಷುಲ್ಲಕತೆ ಮತ್ತು ಅದನ್ನು ನಿವಾರಿಸುವ ಬಗೆಯ ಕಡೆಗೆ ಮೇಲೆ ಬೆಳಕನ್ನು ಚೆಲ್ಲುತ್ತದೆ. ವೆಂಕಪ್ಪಯ್ಯನ ದನವು ಶೀನಪ್ಪಯ್ಯನ ಮನೆ ಹಿಂದೆ ಬೆಳೆದ ಬಸಳೆ ಸೊಪ್ಪುಗಳನ್ನು ತಿಂದಾಗ ಶೀನಪ್ಪಯ್ಯನ ಹೆಂಡತಿ ದನದ ಕಾಲನ್ನು ಕಡಿಯುತ್ತಾಳೆ. ಇದನ್ನು ಪ್ರಶ್ನಿಸಿದ ವೆಂಕಪ್ಪಯ್ಯ ಮತ್ತು ಅವನ ಹೆಂಡತಿ ಲಕ್ಷ್ಮಿಯನ್ನು ಅಶ್ಲೀಲ ಮಾತುಗಳಿಂದ ಬೈಯುತ್ತಾಳೆ. ದುಡುಕು ಪ್ರವೃತ್ತಿ ಮತ್ತು ಒಡಕು ಬಾಯಿಯ ಕಾರಣಗಳಿಗಾಗಿ ಎರಡು ಕುಟುಂಬಗಳ ನಡುವೆ ಜಗಳ ಹತ್ತಿ ಸಂಬಂಧವು ಬತ್ತಿ ಹೋಗುತ್ತದೆ. ಬೇಸಿಗೆಯ ದಿನಗಳಲ್ಲಿ ಶೀನಪ್ಪಯ್ಯನ ಪಾಲಿಗೆ ನೀರಿನ ಕೊರತೆ ಉಂಟಾದಾಗ ಆತನು ಪಂಚಾಯತಿನ ವತಿಯಿಂದ ನೀರಿನ ವಿತರಣೆಯನ್ನು ಬಯಸಿ ಅಧ್ಯಕ್ಷರಿಗೆ ಅರ್ಜಿಯನ್ನು ಸಲ್ಲಿಸುತ್ತಾನೆ. ಆದರೆ ನೀರಿನ ಕೊಳವೆಯು ಮೋರಿ ಮತ್ತು ವೆಂಕಪ್ಪಯ್ಯನ ಮನೆಯ ಗೇಟಿನ ನಡುವೆ ಇರುವ ಕಾಂಕ್ರೀಟ್ ರಸ್ತೆಯಲ್ಲೇ ಹಾದು ಹೋಗಬೇಕಾಗುವುದರಿಂದ ಆತನ ಒಪ್ಪಿಗೆಯನ್ನು ಪಡೆದುಕೊಳ್ಳುವುದು ಅನಿವಾರ್ಯವಾಗುತ್ತದೆ. ಆದರೆ ಹಿಂದಿನ ಅಹಿತಕರ ಘಟನೆಯ ಕಾರಣದಿಂದಾಗಿ ಮುನಿಸುಗೊಂಡಿದ್ದ ವೆಂಕಪ್ಪಯ್ಯನು ತಮ್ಮನನ್ನು ಬೈದು, ಅವಮಾನಿಸಿ ಕಳುಹಿಸುತ್ತಾನೆ. ವೆಂಕಪ್ಪಯ್ಯನ ಹೃದಯವನ್ನು ಬತ್ತಿಸಿದ್ದು ತನ್ನ ತಮ್ಮನ ಮನೆಯವರ ಕಡೆಯಿಂದ ಆದ ಅನಿರೀಕ್ಷಿತ ಆಘಾತವೇ ಹೊರತು ಕ್ರೌರ್ಯವಲ್ಲ. “ನೀವು ಲೋಕವನ್ನು ಜಯಿಸಿದ ಹಾಗೆ ಯಾಕೆ ಮಾತನಾಡುತ್ತೀರಿ? ನೀವು ನಿಮ್ಮ ತಮ್ಮನ ಸ್ಥಾನದಲ್ಲಿ ನಿಂತು ಯೋಚಿಸಿ ನೋಡಿ. ನೀರಿಲ್ಲದೆ ಅವರಿಗೆ ಎಷ್ಟು ಕಷ್ಟ ಆಗಿರಬಹುದು? ನೀರಿಲ್ಲದೆ ಬದುಕುವುದು ಹೇಗೆ ಸಾಧ್ಯ? ನೀವು ಇಷ್ಟು ಕ್ರೂರವಾಗಿ ನಡೆದುಕೊಳ್ಳಬಾರದಿತ್ತು. ಒಂದು ಮಾತು ಹೇಳುತ್ತೇನೆ ಕೇಳಿ. ನೀವು ಅವರಿಗೆ ನೀರು ಕೊಂಡು ಹೋಗಲು ಅವಕಾಶ ಕೊಡದಿದ್ದರೆ ನಾನು ನಾಳೆಯಿಂದ ಇಲ್ಲಿ ನೀರು ಮುಟ್ಟುವುದಿಲ್ಲ. ಬಿಸಿ ನೀರಾದರೂ ಅದನ್ನು ತಣ್ಣಗೆ ಮಾಡಿ ಕುಡಿಯಬೇಕು ಎನ್ನುತ್ತಿದ್ದರು ನನ್ನ ಅಪ್ಪ. ನಿಮ್ಮ ಹಾಗೇ ನನಗೂ ಸಿಟ್ಟು ಬರುವುದುಂಟು. ಆಗ ನನಗೆ ಅಪ್ಪನ ನೆನಪಾಗುತ್ತದೆ. ನಾನು ನಿಮ್ಮ ಹಾಗೆ ಹುಳಿಮರ ಅಲ್ಲ. ಬಾಳೆ ಅಂದರೆ ಬಾಳೆಯೇ. ಗೊನೆ ಹಾಕಿ ಮಾಗಿದ ಕೂಡಲೇ ಬಾಳೆ ತನ್ನಿಂತಾನೇ ಬಾಗುತ್ತದೆ. ನಿಮಗೆ ಬಾಗಿಯೇ ಗೊತ್ತಿಲ್ಲ. ದಮ್ಮಯ್ಯ. ನಿಮ್ಮ ಹಠ ಬಿಟ್ಟು ಬಿಡಿ. ಆ ಶೀನಪ್ಪಯ್ಯ ನಿಮ್ಮ ಖಾಸಾ ತಮ್ಮ. ಅವನ ಹೆಂಡತಿ ನನ್ನ ತಂಗಿಯಲ್ಲದಿರಬಹುದು. ಆದರೆ ನನ್ನ ಹಾಗೆ ಹೆಣ್ಣು ಮಗಳು. ಹೆಣ್ಣು ಮಕ್ಕಳಿಗೆ ಎಲ್ಲಾ ಹೆಣ್ಣು ಮಕ್ಕಳೂ ಅಕ್ಕ ತಂಗಿಯರೇ ಆಗಿರುತ್ತಾರೆ ಅಥವಾ ಅಮ್ಮ ದೊಡ್ಡಮ್ಮನೇ. ಹಠ ಬೇಡ, ನೀರು ಕೊಡಿ ಎಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ” ಎನ್ನುವ ಮೂಲಕ ಹೆಂಡತಿ ಲಕ್ಷ್ಮಿಯು ಆತನ ಮನಪರಿವರ್ತನೆಗೆ ಕಾರಣಳಾಗುತ್ತಾಳೆ. ನೀರಿನ ಬತ್ತುವಿಕೆ, ಉಕ್ಕುವಿಕೆ, ಬದುಕಿಗೆ ಅದರ ಅನಿವಾರ್ಯತೆಗಳು ಸ್ಫುರಿಸುತ್ತಾ ನೀರು ಎಂಬುದು ಕರುಣೆಯ ದೃಶ್ಯರೂಪವಾಗುತ್ತದೆ. ಇಲ್ಲಿ ತಾಯಿಯ ವಾತ್ಸಲ್ಯದಂಥ ಪ್ರೀತಿಯು ನೀರಾಗಿ ಹರಿಯುತ್ತದೆ. ಅನುಕಂಪ, ಸಹೋದರತೆ ಮತ್ತು ಸಹಮಾನವ ಪ್ರಜ್ಞೆ ಪ್ರಾಣದಾಯಕ ನೀರಿನ ರೂಪದಲ್ಲಿ ಒಸರುತ್ತದೆ. ಕೊಳವೆಯ ಮೂಲಕ ಬರುವ ನೀರು, ಅಣ್ಣ ತಮ್ಮಂದಿರ ಕಣ್ಣಿನಲ್ಲಿ ತುಳುಕುವ ಹನಿಗಳೆರಡೂ ಒಂದೇ ಆಗಿದ್ದು ಮನಸ್ಸಿನ ರಾಡಿಯನ್ನು ತೊಳೆದು ಶುದ್ಧಗೊಳಿಸುತ್ತದೆ. ನೀರಿನ ನಿಮಿತ್ತವಾಗಿ ಜಿನುಗಿದ ಹೊಸ ಅರಿವು ಮತ್ತು ತನ್ನೆದೆಯೊಳಗೆ ಇಣುಕಿ ನೋಡಿದ ಅನುಭವದಿಂದ ಅಣ್ಣ ತಮ್ಮಂದಿರು ಹೊಸ ಹುಟ್ಟನ್ನು ಪಡೆದುಕೊಳ್ಳುತ್ತಾರೆ.

ಮೊಗಸಾಲೆಯವರ ಪ್ರಾತಿನಿಧಿಕ ಕತೆಗಳಲ್ಲಿ ಒಂದಾದ ‘ನುಗ್ಗೆಗಿಡ’ವು ಹಲವು ದೃಷ್ಟಿಕೋನಗಳಿಂದ ಮುಖ್ಯವೆನಿಸುತ್ತದೆ. ಅತ್ಯಂತ ಕೋಮಲವಾಗಿರುವ ನುಗ್ಗೆ ಗಿಡವನ್ನು ಅದೆಷ್ಟು ಬಾರಿ ಕಡಿದರೂ ಮುರಿದರೂ ಬೇಗನೆ ಚಿಗುರುತ್ತದೆ. ಅಂಥ ನುಗ್ಗೆ ಗಿಡವು ಹೆಣ್ಣಿನ ಮನಸ್ಸಿನ ರೂಪಕವಾಗಿ ಬೆಳೆಯುವ ಪರಿ ಅಚ್ಚರಿಯನ್ನು ಹುಟ್ಟಿಸುತ್ತದೆ. ಹಸದುಲ್ಲಾನ ಮಗನು ಸರ್ಪಸುತ್ತು ಕಾಯಿಲೆಯಿಂದ ನರಳುತ್ತಿದ್ದು ಯಾವ ಚಿಕಿತ್ಸೆಯೂ ಫಲಕಾರಿಯಾಗದಿದ್ದುದರಿಂದ ನಾಟಿವೈದ್ಯೆ ಪ್ರೇಮಕ್ಕನಿಗೆ ಮೊರೆಹೋಗುತ್ತಾನೆ. ಆಕೆ ಬೈಹುಲ್ಲಿನ ಕಡ್ಡಿ, ನಿರ್ವಿಷದ ಬೇರು ಮತ್ತು ಆಗ ತಾನೇ ಬಾವಿಯಿಂದ ಸೇದಿದ ನೀರನ್ನು ತಂಬಿಗೆಯಲ್ಲಿ ತುಂಬಿಕೊಂಡು ಒಳಕೋಣೆಗೆ ಹೋಗಿ ಮಂತ್ರವನ್ನು ಪಠಿಸುತ್ತಿದ್ದಂತೆ ಹಸದುಲ್ಲನು ಆಕೆಯ ಗಂಡ ದಾಸಣ್ಣನೊಡನೆ ಮಾತನಾಡುತ್ತಾ ಅವರು ತನಗೆ ಕೊಟ್ಟ ದನಕ್ಕೆ ಗಬ್ಬ ನಿಲ್ಲುವುದು ಕಷ್ಟವೆಂದು ತಿಳಿದಾಗ ಹಬ್ಬದ ಸಮಯವನ್ನು ನೋಡಿ ಅದನ್ನು ಕಸಾಯಿಖಾನೆಗೆ ಮಾರಿದ ವಿಷಯವನ್ನು ಹೇಳುತ್ತಾನೆ. ಈ ವಿಷಯವನ್ನು ಒಳಗಿನಿಂದ ಕೇಳಿಸಿಕೊಂಡ ಪ್ರೇಮಕ್ಕ ಸಿಟ್ಟುಕೊಂಡು ಬೈಹುಲ್ಲಿನ ಕಡ್ಡಿ, ನಿರ್ವಿಷದ ಬೇರು ಮತ್ತು ನೀರು ತುಂಬಿದ ತಂಬಿಗೆಯನ್ನು ಅಂಗಳಕ್ಕೆ ಬೀಸಿ ಎಸೆದು ಹಸದುಲ್ಲನನ್ನು ಬೈದು ಅಲ್ಲಿಂದ ಹೊರಟುಹೋಗಲು ಹೇಳುತ್ತಾರೆ. ಅವಳನ್ನು ಸಮಾಧಾನಪಡಿಸಲು ಕುಪ್ಪಣ್ಣಯ್ಯನವರು ಕೊಟ್ಟಿಗೆಯ ಕಡೆ ಹೋದಾಗ ಆಕೆ ಬೈಪಣೆಯಲ್ಲಿ ನಿಂತು ಅಟ್ಟದಿಂದ ಬೈಹುಲ್ಲನ್ನು ತೆಗೆಯುತ್ತಿರುತ್ತಾಳೆ. ಮದ್ದಿಗೆ ಯಾವ ರೀತಿಯ ಪ್ರತಿಫಲವನ್ನೂ ಪಡೆಯದ ಆಕೆಯು ಒಳಗೆ ಹೆಣ್ಣು ಎಷ್ಟೇ ಸಿಟ್ಟು ಮಾಡಿದರೂ, ಮನಸ್ಸು ಮುರಿದರೂ ಕೊನೆಗೆ ಕರುಣಾಮಯಿಯಾಗಿ ಬದಲಾಗುತ್ತಾಳೆ. ತನ್ನ ಪ್ರೀತಿಯ ದನ ಇಲ್ಲವಾಗಲು ಕಾರಣರಾದವರಿಗೂ ಒಳಿತನ್ನು ಬಯಸಿ ಮಾನವೀಯತೆಯನ್ನು ಮೆರೆಯುವ ಪ್ರೇಮಕ್ಕನ ಪಾತ್ರವನ್ನು ನುಗ್ಗೆ ಗಿಡಕ್ಕೆ ಹೋಲಿಸಲಾಗಿದೆ. ಹೆಣ್ಣಿನ ಸಹೃದಯತೆಯನ್ನು ವ್ಯಕ್ತಪಡಿಸುವ ಈ ರಚನೆಯು ‘ನೀರು ಬಂತು ನೀರು’ ಕತೆಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಕೋಮು ಸಾಮರಸ್ಯದ ಸಂಕೇತವೂ ಆಗುತ್ತದೆ. ‘ನೀರು ಬಂತು ನೀರು’ ಕತೆಯ ಲಕ್ಷ್ಮಿ ಮತ್ತು ‘ನುಗ್ಗೆಗಿಡ’ದ ಪ್ರೇಮಕ್ಕನನ್ನು ಸ್ವತಂತ್ರ ವ್ಯಕ್ತಿತ್ವವನ್ನು ಪಡೆದುಕೊಂಡ ಪಾತ್ರ ಅಥವಾ ಪ್ರಾತಿನಿಧಿಕ ಪಾತ್ರ ಎನ್ನುವುದಕ್ಕಿಂತಲೂ ಇಂಥ ವರ್ಗೀಕರಣಗಳನ್ನು ಮೀರಿ ಬೆಳೆಯುವ ಕತೆಯು ಜೀವಕ್ಕೆ ಮೂಲಭೂತ ಅನುಭವವನ್ನು ತಂದು ಕೊಡುತ್ತದೆ ಎಂಬುದು ಮುಖ್ಯವಾಗುತ್ತದೆ.

‘ಪ್ಲ್ಲಾಸಿಬೋ’ ರೇಬಿಸ್ ಕಾಯಿಲೆಯ ಸುತ್ತ ಹಬ್ಬಿಕೊಳ್ಳುವ ಕತೆ. ಪೂರ್ಣಚಂದ್ರ ತೇಜಸ್ವಿಯವರ ‘ಕೃಷ್ಣೇಗೌಡನ ಆನೆ’ ಎಂಬ ಕತೆಯಲ್ಲಿ ಆನೆಯು ಊರಿನ ಅವಾಂತರಗಳಿಗೆ ಕಾರಣವಾಗುವಂತೆ ಇಲ್ಲಿ ದಾಸಭಟ್ಟರ ಬೆಕ್ಕು ಅವರಿಗೆ ಕಚ್ಚಿ ಕಣ್ಮರೆಯಾದಾಗ ಹುಟ್ಟಿಕೊಳ್ಳುವ ಸಂದಿಗ್ಧತೆಯು ರಾಜಕೀಯ ಆಯಾಮಗಳನ್ನು ಪಡೆದುಕೊಳ್ಳುತ್ತದೆ. ‘ಕೃಷ್ಣೇಗೌಡನ ಆನೆ’ಯಲ್ಲಿ ಬರುವ ಹುಚ್ಚುನಾಯಿಗಳ ಸಮಸ್ಯೆ ಇಲ್ಲೂ ಬಂದಿರುವುದು ಕಾಕತಾಳೀಯವಾಗಿರಲಾರದು. ಅಲ್ಲಿ ಒಂದು ಸನ್ನಿವೇಶವಾಗಿ ಮಾತ್ರ ಬರುವ ವಿದ್ಯಮಾನವು ಮೊಗಸಾಲೆಯವರ ಕತೆಯಲ್ಲಿ ಸಂಕೀರ್ಣ ರಾಜಕೀಯ ವ್ಯವಸ್ಥೆಯ ಪ್ರತಿಬಿಂಬವಾಗಿ ವಿಸ್ತಾರವನ್ನು ಪಡೆದಿದೆ. ಕಾಯಿಲೆಯು ಇಲ್ಲದಿದ್ದರೂ ಇದೆ ಎಂಬ ಭ್ರಮೆ ಇರುವವರಿಗೆ ಚುಚ್ಚುಮದ್ದು ಅಥವಾ ಗುಳಿಗೆಗಳನ್ನು ಔಷಧ ಮತ್ತು ಜೀವಾತುಗಳ ರೂಪದಲ್ಲಿ ಕೊಟ್ಟು ಅದು ಪರಿಣಾಮಕಾರಿ ಎಂದು ಅವರಿಗೆ ಮನವರಿಕೆ ಮಾಡಿಸುವ ಮಾನಸಿಕ ಚಿಕಿತ್ಸೆಗೆ ಪ್ಲಾಸಿಬೋ (ತನ್ನನ್ನು ತಾನೇ ಖುಷಿಪಡಿಸಿಕೊಳ್ಳುವುದು) ಎನ್ನುತ್ತಾರೆ. ಬೆಕ್ಕಿನ ಕಡಿತಕ್ಕೆ ಒಳಗಾದ ತನಗೆ ರೇಬಿಸ್ ಇರಬಹುದೆಂದು ಭ್ರಮೆಗೆ ಒಳಗಾಗಿ ಆಸ್ಪತ್ರೆಗೆ ತೆರಳಿದ ದಾಸು ಭಟ್ಟರು ಚುಚ್ಚುಮದ್ದುಗಳು ದೊರೆಯದೆ ತಳಮಳಿಸುತ್ತಾರೆ. ಇದನ್ನೇ ನೆಪವಾಗಿಟ್ಟುಕೊಂಡು ‘ಈ ವಾರದೊಳಗೆ ನಾನು ಎಂಟು ಹತ್ತು ಜನರನ್ನು ನಾಯಿ ಕಡಿದಿದೆ ಎಂದು ಆಸ್ಪತ್ರೆಗೆ ಕಳುಹಿಸುತ್ತೇನೆ. ಅಲ್ಲಿ ಚುಚ್ಚುಮದ್ದುಗಳು ಇಲ್ಲದಿರುವುದರಿಂದ ವೈದ್ಯರು ಅವರನ್ನು ರಾಂಪುರದ ಸಾರ್ವಜನಿಕ ಆಸ್ಪತ್ರೆಗೆ ಸಾಗಹಾಕುತ್ತಾರೆ. ಅಲ್ಲಿನ ವೈದ್ಯಾಧಿಕಾರಿಯವರು ಹೊರಗಿಂದ ಚುಚ್ಚುಮದ್ದನ್ನು ತರಲು ಚೀಟಿ ಬರೆದು ಕೊಡುತ್ತಾರೆ. ಆಗ ನಮಗೆ ಒಂದು ಅಸ್ತ್ರ ಸಿಕ್ಕಿದ ಹಾಗೆ ಆಗುತ್ತದೆ. ಮೊದಲು ನಮ್ಮ ಪಂಚಾಯತ್ ಅಧ್ಯಕ್ಷರನ್ನು, ಆಮೇಲೆ ಶಾಸಕರನ್ನು ತರಾಟೆಗೆ ತೆಗೆದುಕೊಳ್ಳುವ ಹಾಗೆ ಪತ್ರಿಕಾಗೋಷ್ಠಿ ಮಾಡುತ್ತೇವೆ. ಮೂರು ತಿಂಗಳೊಳಗೆ ಬರುವ ಪಂಚಾಯತ್ ಚುನಾವಣೆಯಲ್ಲಿ ಜನಪರವಲ್ಲದ ಈಗಿನ ಪಂಚಾಯತ್ ಸದಸ್ಯರಿಗೆ ಮತ ಚಲಾಯಿಸಬೇಡಿ ಎಂದು ಜನರಿಗೆ ಹೇಳುತ್ತೇವೆ’ ಎಂಬ ಯೋಜನೆಯನ್ನು ತಯಾರಿಸುವ ವೀರಪ್ಪ ಗೌಡ, ಜನರ ಮನವಿಯನ್ನು ಸ್ವೀಕರಿಸಿ ಪಂಚಾಯತ್ ಮೀಟಿಂಗ್‍ನಲ್ಲಿ ಒಂದು ನಿರ್ಣಯ ಮಾಡಿ ಅಧಿಕೃತರಿಗೆ ಕಳುಹಿಸಿ ಕೊಡುವ ಬದಲು ‘ಮನವಿಯನ್ನು ನಮಗೆ ಯಾಕೆ ನೀಡುತ್ತೀರಿ? ತಾಲೂಕು ಅಥವಾ ಜಿಲ್ಲಾ ಪಂಚಾಯತಿಗೆ, ತಾಲೂಕು ವೈದ್ಯಾಧಿಕಾರಿಗಳಿಗೆ ಇಲ್ಲವೇ ಶಾಸಕರಿಗೆ ಕೊಡಿ’ ಎಂದು ದಬಾಯಿಸುವ ಪಂಚಾಯತ್ ಅಧ್ಯಕ್ಷ ಭಾಸ್ಕರ ಹೆಗ್ಡೆ, ‘ನಿಮ್ಮ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹತ್ತು ರೇಬಿಪ್ಯೂರ್ ಚುಚ್ಚುಮದ್ದುಗಳನ್ನು ಕೊಟ್ಟು ಕಳುಹಿಸುತ್ತೇನೆ. ಬೀದಿನಾಯಿಗಳ ಕಾಟವನ್ನೂ ನಿಲ್ಲಿಸುತ್ತೇನೆ. ಆದರೆ ವಿರೋಧ ಪಕ್ಷದಲ್ಲಿರುವ ವೀರಪ್ಪ ಗೌಡ ನಮ್ಮ ಪಕ್ಷಕ್ಕೆ ಬರಬೇಕು. ಭಾಸ್ಕರ ಹೆಗ್ಡೆ ತನ್ನ ಬೆಂಬಲಿಗರಿಗೆಲ್ಲ ಬೇನಾಮಿ ಹೆಸರಿನಲ್ಲಿ ಪಂಚಾಯತ್ ಕಾಮಗಾರಿಗಳನ್ನು ಕೊಡುವುದಲ್ಲದೆ ಅವರಿಂದ ಮೂವತ್ತು ಶೇಕಡಾ ಕಮಿಶನ್ ಹೊಡೆಯುತ್ತಿದ್ದಾನೆ. ಪಂಚಾಯತಿನಲ್ಲಿ ಕುಡಿತ ಜಡಿತವೂ ಉಂಟಂತೆ. ಇಪ್ಪತ್ತು ಶೇಕಡಾ ತೆಗೆದುಕೊಳ್ಳುವ ನನಗಿಂತ ಹೆಚ್ಚು ತೆಗೆದುಕೊಳ್ಳುವ ಭಾಸ್ಕರ ಹೆಗ್ಡೆ ಎಲ್ಲಾದರೂ ಶಾಸಕನಾದರೆ ನೂರು ಶೇಕಡಾ ತೆಗೆದುಕೊಳ್ಳುತ್ತಾನೆ. ಆದ್ದರಿಂದ ಅವನನ್ನು ಈಗಲೇ ಚಿವುಟಿ ಹಾಕಬೇಕು. ಅವನನ್ನು ಕಿತ್ತೊಗೆದು ವೀರಪ್ಪಗೌಡರನ್ನೇ ಪಂಚಾಯತ್ ಅಧ್ಯಕ್ಷರನ್ನಾಗಿ ಮಾಡಬೇಕು’ ಎನ್ನುವ ಶಾಸಕರು ಇವರೆಲ್ಲರೂ ಪಟ್ಟಭದ್ರ ಹಿತಾಸಕ್ತಿ ಮತ್ತು ಭ್ರಷ್ಟ ವ್ಯವಸ್ಥೆಯ ಪ್ರತಿನಿಧಿಗಳು. ಇದಕ್ಕೆ ಮೂಕಸಾಕ್ಷಿಯಾದ ಕುಪ್ಪಣ್ಣಯ್ಯ ‘ನಿಜವಾದ ಪ್ಲಾಸಿಬೋ ಎಂದರೆ ಇದುವೇ’ ಎಂದು ಮಾರ್ಮಿಕವಾಗಿ ನುಡಿಯುತ್ತಾನೆ. ಜನರ ಹಿತಾಸಕ್ತಿಗಳಿಗೆ ಅಡ್ಡಿ ಆತಂಕಗಳು ಉಂಟಾದಾಗ ದುಸ್ತರಗೊಂಡ ಬದುಕನ್ನು ದುರಸ್ತಿಗೊಳಿಸಬೇಕಾದ ಜನಪ್ರತಿನಿಧಿಗಳು ಅಧಿಕಾರವನ್ನು ಪಡೆಯುವ ಅಥವಾ ಉಳಿಸಲು ಹೊರಡುವ ವಿರೋಧಾಭಾಸವನ್ನು ಲೇಖಕರು ಲೇವಡಿ ಮಾಡಿದ್ದಾರೆ. ಅಧಿಕಾರಕ್ಕೋಸ್ಕರ ತತ್ವನಿಷ್ಠೆಗಳನ್ನು ಮರೆತು ಪಕ್ಷದಿಂದ ಪಕ್ಷಕ್ಕೆ ನೆಗೆಯುವವರನ್ನು ಟೀಕಿಸಿದ್ದಾರೆ. ಅಧಿಕಾರದ ಪಗಡೆಯಾಟದಲ್ಲಿ ಕಾಯಿಗಳನ್ನು ಜರುಗಿಸುವ ಚಿಂತೆಯಲ್ಲಿ ಮಗ್ನರಾಗುವ ವರ ಲಾಭಕೋರರು ಮತ್ತು ಅಧಿಕಾರಕ್ಕಾಗಿ ಆದರ್ಶವನ್ನು ಮಾರಲು ಹೇಸದವರ ನಡುವೆ ಆತ್ಮವಂಚನೆಯನ್ನು ಮಾಡಿಕೊಳ್ಳಲಾರದ, ಧ್ಯೇಯವನ್ನು ಮೀರಿ ನಡೆಯಲಾರದ, ನೇರ ನಡೆನುಡಿಯ ಪ್ರಾಮಾಣಿಕರು ಸಾಮಾಜಿಕ – ರಾಜಕೀಯ ರಂಗದಲ್ಲಿ ವಿಜೃಂಭಿಸುವ ಸೋಗಲಾಡಿಗಳ, ಗೋಮುಖವ್ಯಾಘ್ರರ ಮತ್ತು ಪಟ್ಟಭದ್ರ ಹಿತಾಸಕ್ತಿಗಳ ನಡುವೆ ಒಂಟಿಯಾಗುವ ಜನಸಾಮಾನ್ಯರ ಪ್ರತಿನಿಧಿಯಾಗಿ ಕುಪ್ಪಣ್ಣಯ್ಯನು ಕಾಣಿಸಿಕೊಳ್ಳುತ್ತಾನೆ. ಏನೂ ಆಗಲಿಲ್ಲವೆಂಬಂತೆ ಬೆಕ್ಕು ದಾಸಭಟ್ಟರ ಮನೆಗೆ ಹಿಂತಿರುಗಿ ಬರುವುದು ಇನ್ನೊಂದು ವ್ಯಂಗ್ಯ. ರೇಬಿಸ್ ಕಾಯಿಲೆಯ ಹೆಸರಿನಲ್ಲಿ ಇಡೀ ಸಮಾಜದ ಕ್ಷುದ್ರ ರಾಜಕೀಯವನ್ನು ಅನಾವರಣಗೊಳಿಸುವ ಕತೆಯು ಮೊಗಸಾಲೆಯವರ ಉತ್ತಮ ರಚನೆಗಳಲ್ಲಿ ಒಂದು.

ಸಮಾಜವು ಮೊಗಸಾಲೆಯವರ ಕತೆಗಳ ಕೇಂದ್ರ ಬಿಂದುವಾಗಿದೆ. ಅವರ ಕತೆಗಳು ಸಾಮಾಜಿಕ ಸಂಬಂಧ ಮತ್ತು ಐಕ್ಯತೆಯನ್ನು ಬಯಸುತ್ತವೆ. ಮಾನವೀಯ ಸಂಬಂಧಗಳ ಮೇಲೆ ಆಕ್ರಮಣವನ್ನು ಮಾಡುವ ತೀವ್ರತರವಾದ ವೈಯಕ್ತಿಕ ಪ್ರಜ್ಞೆ, ಸ್ವಾರ್ಥ ಮತ್ತು ಆಧುನಿಕತೆಯ ಅತಿರೇಕಗಳು ಮೂಲಕ ಕುಟುಂಬದ ಮತ್ತು ಸಾಮಾಜಿಕ ವಿಘಟನೆಗೆ ಕಾರಣವಾಗುತ್ತವೆ ಎಂಬ ಗ್ರಹಿಕೆಯಲ್ಲಿ ಕತೆಯ ವಿನ್ಯಾಸವು ರೂಪು ತಾಳುತ್ತದೆ. ಏಕಪಾತ್ರ ಅಥವಾ ನಾಯಕಪಾತ್ರ ಪ್ರಧಾನವಾಗಿರುವ ರಚನೆಗಳಿಗಿಂತ ಇಲ್ಲಿನ ಕತೆಗಳಿಗೆ ಸೀತಾಪುರವೇ ಕೇಂದ್ರವಾಗಿದೆ. ಇಲ್ಲಿ ಸಂಪ್ರದಾಯಸ್ಥರು, ಉದಾರವಾದಿಗಳು, ಆಧುನಿಕರು, ಧರ್ಮವನ್ನು ನಂಬುವವರು ಮತ್ತು ಅದನ್ನು ಪ್ರಶ್ನಿಸುವವರು ಇದ್ದಾರೆ. ಹಿಂದೂಗಳು, ಕ್ರೈಸ್ತರು ಮತ್ತು ಮುಸ್ಲಿಮರು ಏಕಶಿಲಾಕೃತಿ ಎಂಬಂತೆ ಚಿತ್ರಿತರಾಗದಿರುವುದರಿಂದ ಯಾವ ಪಾತ್ರವನ್ನೂ ಜಾತಿಮಾದರಿ, ಕೋಮುಮಾದರಿ, ವರ್ಗಮಾದರಿ, ಲಿಂಗಮಾದರಿ ಎನ್ನುವಂತಿಲ್ಲ. ಜಾತಿ, ಕೋಮು, ವರ್ಗ, ಲಿಂಗಗಳು ಧಾರಣ ಮಾಡುವ ಅಥವಾ ರೂಢಿಗತವಾದ ಲಕ್ಷಣಗಳಿದ್ದರೂ ಅವುಗಳನ್ನು ಮೀರುವ, ಅಪ್ಪಟ ಮನುಷ್ಯತ್ವವನ್ನು ಅನಾವರಣಗೊಳಿಸುವ ಆಸ್ಥೆಯು ಕಂಡು ಬರುತ್ತದೆ. ಅವರ ನಡುವಿನ ಭಿನ್ನಾಭಿಪ್ರಾಯ ಮತ್ತು ಸಂಘರ್ಷಗಳು ಮನುಷ್ಯರ ನಡುವಿನ ಭಿನ್ನಾಭಿಪ್ರಾಯ ಸಂಘರ್ಷವೆಂಬಂತೆ ಮೂಡಿ ಬಂದಿವೆ. ಏನೇ ಅಸಮಾಧಾನಗಳಿದ್ದರೂ ತಮ್ಮ ನಡುವಿನ ವೈಯಕ್ತಿಕ ಸಂಬಂಧಗಳನ್ನು ಧ್ವಂಸಗೊಳಿಸದಂತೆ ನೋಡಿಕೊಳ್ಳುವ ವಿವೇಕವನ್ನು ತೋರುತ್ತಾರೆ. ದ್ವೇಷದ ಬೀಜಗಳನ್ನು ಬಿತ್ತುವವರ ಬಗ್ಗೆ ಎಚ್ಚರವನ್ನು ತಾಳುತ್ತಾರೆ. ಅದನ್ನು ವಿರೋಧಿಸುವಲ್ಲಿ ಕೈಜೋಡಿಸುತ್ತಾರೆ. ದ್ವಿದಳ ವಿಭಜನೆ, ವರ್ಗೀಕರಣದ ಕಥನ ಮಾದರಿಗಳನ್ನು ಕೈಬಿಟ್ಟಿದ್ದರಿಂದ ಇಲ್ಲಿನ ಕತೆಗಳು ಕೋಮುವಾದಿ ಅಥವಾ ಜಾತ್ಯತೀತ ಕಥನವಾಗದೆ ಅಪ್ಪಟ ಮಾನವೀಯ ಕಥನವಾಗುತ್ತದೆ. ಯಾವ ಅತಿಗೂ ಹೋಗದೆ ಸಾಮರಸ್ಯದ ಹಾದಿಗಾಗಿ ಹಂಬಲಿಸುವ ಕತೆಗಳು ವ್ಯಕ್ತಿ, ಕುಟುಂಬ ಮತ್ತು ಜನಸಮುದಾಯದ ಅನುಭವಗಳನ್ನು ಲೋಕಜ್ಞಾನದ ವಿಶಾಲ ಭಿತ್ತಿಯಲ್ಲಿ ನಿರೂಪಿಸುತ್ತವೆ. ಸಂಘರ್ಷದ ನೆಲೆಗಳ ಬದಲು ಸಮಸ್ಯೆಗಳ ಪರಿಹಾರ ಸಾಧ್ಯವೇ ಎಂಬ ಅಶಯ, ಹಂಬಲ ನಿರೀಕ್ಷೆಗಳನ್ನು ಸೀತಾಪುರ ಎಂಬ ಊರಿನಲ್ಲಿ ಶೋಧಿಸುತ್ತಾರೆ. ಆಯಾ ಕಾಲದ ಸಮಸ್ಯೆಗಳನ್ನು ಮಾತ್ರವಲ್ಲ, ತಮ್ಮ ಕನಸುಗಳನ್ನೂ ಹೂಡಿ ಅದರ್ಶ ಮತ್ತು ವಾಸ್ತವಗಳ ಪರಿಭಾಷೆಯಲ್ಲಿ ಹೊಸ ಸಾಧ್ಯತೆಗಳನ್ನು ಸೃಷ್ಟಿಸುತ್ತದೆ. ಅಂತರಂಗದಲ್ಲಿರುವ ಮಾನವೀಯತೆಯ ಸೆಲೆಯನ್ನು ಉಕ್ಕಿಸಿ ಬದುಕನ್ನು ಹಸಿರಾಗಿಸುವ ಹಂಬಲ ಇಲ್ಲಿದೆ.

ಅನುಭವನಿಷ್ಠ ಸಾಹಿತ್ಯದಲ್ಲಿ ಕತೆಗಾರನು ಬೆಳೆದಂತೆ ಅವನ ಅನುಭವ ಪ್ರಪಂಚ ಮಾತ್ರವಲ್ಲ ಅದನ್ನು ನೋಡುವ ದೃಷ್ಟಿಕೋನವೂ ಬದಲಾಗುತ್ತದೆ. ಸಿದ್ಧಾಂತಗಳಿಗೆ ಅಂಟಿಕೊಂಡ ಬಹಳಷ್ಟು ಕತೆಗಾರರು ಬದುಕಿನ ಚಲನಶೀಲತೆಯನ್ನು ಗಮನಿಸದೆ ಯಾಂತ್ರಿಕವಾಗಿ ಬರೆಯುತ್ತಿರುವ ಹೊತ್ತಿನಲ್ಲಿ ಮೊಗಸಾಲೆಯವರು ಅಂಥ ಅಪಾಯದಿಂದ ಪಾರಾಗಿದ್ದಾರೆ. ಸಾಮಾಜಿಕ ಸಂಬಂಧಗಳ ಮೂಲಕ ಬದುಕನ್ನು ಶೋಧಿಸಿ ಅದಕ್ಕೆ ಅರ್ಥವನ್ನು ಕೊಡಲು ಯತ್ನಿಸುವ ಅವರ ಕತೆಗಳಲ್ಲಿ ನೆನಪುಗಳಿಗೆ ಮಹತ್ವವಿಲ್ಲ. ವರ್ತಮಾನದ ಕಡೆ ಮಾತ್ರ ಅವರ ಗಮನವನ್ನು ಹರಿಸುವ ಪಾತ್ರಗಳು ಭೂತಪೀಡೆಯಿಂದ ನರಳುವುದಿಲ್ಲ. ಇದು ವಾಸ್ತವದ ಅರಿವಿನಿಂದ ಬಂದಿದೆ. ಇವರ ಬರಹಗಳಲ್ಲಿ ನಯ-ನುಣುಪು, ಮಾದಕತೆ-ಚಿತ್ರಮಯತೆಗಳಿಗೆಲ್ಲ. ತುಮುಲ, ದ್ವಂದ್ವಗಳಿದ್ದರೂ ಮನಶಾಸ್ತ್ರೀಯ ನೆಲೆಯ ವಿಶ್ಲೇಷಣೆಯಿಲ್ಲ. ಅಂತರಂಗವನ್ನು ತಲ್ಲಣಗೊಳಿಸುವ ತಣ್ಣಗಿನ ಕ್ರೌರ್ಯವನ್ನು ನಿರ್ಭಾವುಕರಾಗಿ ಹೇಳುವ ಇವರು ತಮ್ಮ ಬರವಣಿಗೆಯ ಮೂಲಕ ಓದುರನ್ನು ಬೆಚ್ಚಿ ಬೀಳಿಸುವುದಿಲ್ಲ. ಆಕರ್ಷಕ ಕಥಾವಸ್ತುವಿಲ್ಲ. ಆಕರ್ಷಕ ಕತೆಯನ್ನು ಹೇಳುವ ಉದ್ದೇಶವೂ ಇಲ್ಲ. ಬದುಕಿನ ಪರಿಸ್ಥಿತಿಯ ವರ್ಣನೆ, ನಿರೂಪಣೆಗಳಲ್ಲಿ ವಾಸ್ತವತೆಯಿದ್ದರೂ ಅನುಭವವು ಮುಖ್ಯವಾಗುತ್ತದೆ. ಕತೆಯಲ್ಲಿ ಎದ್ದು ಕಾಣುವ ಅದಮ್ಯ ಆಶಾ ಭಾವನೆ, ಬದುಕು ಉತ್ತಮಗೊಳ್ಳುವುದೆಂಬ ಭರವಸೆ ಮತ್ತು ಬದುಕಿನ ಉರಿಯಲ್ಲೂ ಬತ್ತದ ಪ್ರೇಮ ಅಂತಃಕರಣಗಳು ಕತೆಯ ಧನಾತ್ಮಕ ಅಂಶಗಳಾಗಿವೆ. ಮಾಮೂಲು ವಿಷಯಗಳಾದರೂ ಅವುಗಳು ಎಲ್ಲ ಕಾಲದ ಸಮಸ್ಯೆ ಎಂಬಂತೆ ಬರೆಯುವುದು ಒಳ್ಳೆಯ ಕತೆಗಾರರ ಲಕ್ಷಣವಾಗಿದೆ. ಅವರು ಕತೆಯನ್ನು ಕಟ್ಟಲಿಲ್ಲ ಎಂದಲ್ಲ. ಕತೆಯನ್ನು ಹೇಳುವುದರಲ್ಲೇ ಅವರಿಗೆ ಆಸಕ್ತಿ ಹೆಚ್ಚು. ಸ್ವಾನುಭವದ ಸಾಮಾಗ್ರಿಯನ್ನು ಕೂಡ ನೇರವಾಗಿ ಪ್ರವೇಶಿಸುವುದಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಹಳ್ಳಿಯ ಸಾಮಾಜಿಕ ವಾತಾವರಣ ಮತ್ತು ವ್ಯವಸ್ಥೆಯ ಕತೆಯನ್ನು ಹೇಳುವುದಕ್ಕಾಗಿ ಸುಶಿಕ್ಷಿತ ಮನಸ್ಸಿನ ಸಹೃದಯಿ ನಿವೇದಕನನ್ನು ಉಪಯೋಗಿಸಿದ್ದಾರೆ. ಈ ನಿವೇದಕನು ಕತೆಯ ಪರಿಸರದೊಡನೆ ನಿಕಟವಾದ ಸಂಬಂಧವನ್ನು ಹೊಂದಿರುವ ವ್ಯಕ್ತಿಯಾಗಿರುತ್ತಾನೆ. ಅವರಿಗಿಂತ ಕುಪ್ಪಣ್ಣಯ್ಯನು ಮುಖ್ಯವಾಗುತ್ತಾನೆ. ಎಲ್ಲೋ ಇರುವ ಪಾತ್ರಗಳು ಕೇಂದ್ರಕ್ಕೆ ಬಂದು ಭೇಟಿಯಾಗಲು ಅವನ ಉಪಾಹಾರ ಗೃಹವು ಆವರಣವನ್ನು ಒದಗಿಸುತ್ತದೆ. ಇವನು ಗ್ರಾಮೀಣ ಬದುಕಿನ ಸಂಸ್ಕøತಿಯನ್ನು ಸಂಕೇತಿಸುವಂತೆ ಬದುಕಿನಲ್ಲಿ ನಿಶ್ಚಯದಾಢ್ರ್ಯವನ್ನು ಸೂಚಿಸುವ ಮಾನದಂಡವೂ ಆಗಿದ್ದಾನೆ. ಅವಸರದ ಬದುಕಿನ ಜೊತೆಯಲ್ಲೇ ಎಲ್ಲರೊಂದಿಗೆ ಒಡನಾಡುವ ಅವನು ಮೊಗಸಾಲೆಯವರ ಕತೆಗಳ ನಾಡಿಮಿಡಿತವಾಗಿದ್ದಾನೆ. ನ್ಯಾಯನಿಷ್ಠುರತೆ, ಸತ್ಯನಿಷ್ಠೆ, ಮತ್ತು ಪ್ರಾಮಾಣಿಕತೆಗಳ ಮೂರ್ತರೂಪವಾಗಿರುವ ಆತನು ಲೇಖಕ ಮತ್ತು ಜನರ ಆತ್ಮಸಾಕ್ಷಿಯಾಗಿದ್ದಾನೆ. ನಿವೇದಕ ಅಥವಾ ಇತರ ಪಾತ್ರಗಳ ಮೂಲಕ ಹೇಳಲಾಗದ್ದನ್ನು ಈತನು ಹೇಳುತ್ತಾನೆ. ಬದುಕು ಹೀಗಿರಬೇಕು ಎಂಬುದನ್ನು ಸೂಚಿಸುತ್ತಾನೆ. ಮೊಗಸಾಲೆಯವರ ನಿಲುವು ಮತ್ತು ಜೀವನಾನುಭವಗಳೇ ಕುಪ್ಪಣ್ಣಯ್ಯನ ರೀತಿನೀತಿಗಳಲ್ಲಿವೆ. ಆದ್ದರಿಂದ ಮೊಗಸಾಲೆಯವರಿಗೆ ತಮ್ಮ ಕತೆಗಳ ಮೂಲಕ ಜೀವನ ಸಂದೇಶವನ್ನು ಬಿತ್ತರಿಸಲು ಕುಪ್ಪಣ್ಣಯ್ಯನವರ ಪಾತ್ರವೇ ಯೋಗ್ಯವೆನಿಸಿದ್ದಲ್ಲಿ ಅಚ್ಚರಿಯಿಲ್ಲ. ಮೊಗಸಾಲೆಯವರ ನಿಜವಾದ ಆಸ್ಥೆಯಿರುವುದು ಸಾರ್ಥಕ ಜೀವನದಲ್ಲಿ. ಅಂಥ ಜೀವನವನ್ನು ನಡೆಸಲು ಅವಶ್ಯವಾದ ಜೀವನಸೂತ್ರಗಳಲ್ಲಿ. ಅವರ ಕತೆಗಳ ವೈವಿಧ್ಯ ಮತ್ತು ವೈಶಾಲ್ಯಗಳನ್ನು ಈ ಪರಿಪ್ರೇಕ್ಷ್ಯದಲ್ಲಿ ನೋಡಬೇಕಾಗುತ್ತದೆ.

ಆರು ದಶಕಗಳ ಕಾಲ ಕಾವ್ಯ ಮತ್ತು ಕಾದಂಬರಿ ಪ್ರಕಾರದಲ್ಲಿ ತಮ್ಮ ಸೃಜನಶೀಲ ಪ್ರತಿಭೆಯನ್ನು ತೊಡಗಿಸಿಕೊಂಡಿರುವ ಮೊಗಸಾಲೆಯವರು ವಸ್ತುವೈವಿಧ್ಯದಲ್ಲಿ ಕನ್ನಡ ಕಥಾಸಾಹಿತ್ಯಕ್ಕೂ ಸಮೃದ್ಧ ಕೊಡುಗೆಯನ್ನು ನೀಡಿದ್ದಾರೆ. ನವ್ಯ ನವ್ಯೋತ್ತರಗಳಿಗೆ ಮುಖಾಮುಖಿಯಾಗಿದ್ದಾರೆ. ಯಾವ ಪಂಥಗಳಿಗೂ ತಮ್ಮನ್ನು ಸಮೀಕರಿಸಿಕೊಳ್ಳದೆ ಬರೆಯುತ್ತಾ ಬಂದಿದ್ದಾರೆ. ದೈನಿಕಗಳ ಮೂಲಕವೇ ದಟ್ಟ ವಿವರಗಳನ್ನು ಕಟ್ಟಿಕೊಡುವ ಕಥನಕ್ರಮ ಇವರದ್ದು. ಇಲ್ಲಿ ಕತೆಯನ್ನು ಕಟ್ಟುವ ಮತ್ತು ಕತೆಯನ್ನು ಹೇಳುವ ಪದ್ಧತಿಗಳು ಇವೆ. ಕತೆಯನ್ನು ಹೇಳುವುದರಲ್ಲಿ ಮಾಸ್ತಿಯವರ ಮತ್ತು ಕಥನದಲ್ಲಿ ಗೊರೂರರ ಪ್ರಭಾವವು ಸ್ಪಷ್ಟವಾಗಿದೆ. ಗೊರೂರರಂತೆ ರಚನೆಯ ರೂಪಕ್ಕೆ ಗಮನವನ್ನು ಕೊಡದೆ ಗೆಳೆಯರ ಎದುರು ಕುಳಿತು ನೆನಪುಗಳನ್ನು ತೋಡಿಕೊಳ್ಳುವ ರೀತಿ ಮೊಗಸಾಲೆಯವರದ್ದು. ಆದ್ದರಿಂದ ಅಪ್ರಸ್ತುತವೆನಿಸುವ ಸಾಮಾಗ್ರಿಗಳು ಸೇರಿಕೊಳ್ಳುವುದಿದೆ. ಆದರೆ ಅವರು ಹಳ್ಳಿಯ ಬದುಕನ್ನು ಪುನರ್ ಸೃಷ್ಟಿಸಿದರೇ ಹೊರತು ವೈಭವೀಕರಿಸಲಿಲ್ಲ. ಯಾಕೆಂದರೆ ಅವರಲ್ಲಿರುವ ವಾಸ್ತವ ಪ್ರಜ್ಞೆಯು ಭಾವಾತಿರೇಕ ಮತ್ತು ಅತಿಯಾದ ಅದರ್ಶಗಳಿಗೆ ಕಟ್ಟೆಯನ್ನು ಕಟ್ಟುತ್ತದೆ. ಕತೆಗಳ ವಸ್ತುವನ್ನು ಹೆಚ್ಚಾಗಿ ಗ್ರಾಮ ಜೀವನದಿಂದಲೇ ಆರಿಸಿಕೊಂಡಿದ್ದಾರೆ. ಸಮೀಪದಿಂದ ನೋಡಿದ, ಅನುಭವಿಸಿದ, ಅಭ್ಯಸಿಸಿದ ಆಧಾರದಿಂದ ಚಿತ್ರಿತವಾದ ಗ್ರಾಮಜೀವನವು ಅದರ ಒಳಹೊರಗುಗಳಿಂದ ಕೂಡಿಯೇ ವ್ಯಕ್ತವಾಗುವುದರಿಂದ ಈ ಕತೆಗಳಲ್ಲಿ ಸತ್ವವಿದೆ. ನಿಜ ಜೀವನದ ಸಂದರ್ಭದಲ್ಲಿ ಹುಟ್ಟಿಕೊಂಡ ಹೆಚ್ಚಿನ ಕತೆಗಳಲ್ಲಿ ಕೆಲವಂತೂ ನಡೆದು ಹೋದ ಘಟನೆಗಳೇ ಆಗಿವೆ. ಅವುಗಳಲ್ಲಿ ಕಾಲ್ಪನಿಕತೆ ಇಲ್ಲವೆಂದಲ್ಲ. ಆದರೆ ಕಲ್ಪನೆಗೆ ಮಹತ್ವವಿಲ್ಲ. ಸಾಮಾಜಿಕ ಜೀವನವನ್ನು ಬಲ್ಲ ಮೊಗಸಾಲೆಯವರಿಗೆ ಅಲ್ಲಿ ನಡೆಯುವ ಶೋಷಣೆ, ಮೋಸ, ದ್ವೇಷಗಳ ಬಗ್ಗೆ ಆಳವಾದ ಅರಿವಿದೆ. ಜನಜೀವನದೊಡನೆ ಹೊಂದಿದ ಸಂಬಂಧವನ್ನು ಹೊಂದಿರುವ ಅವರು ತಮ್ಮದೇ ಆದ ನೋಟದ ಆಧಾರದಿಂದ ಮನುಜವರ್ಗವನ್ನು ಕುರಿತ ಮುಖ್ಯ ಸೂತ್ರಗಳನ್ನು ಸಾಧಿಸುತ್ತಾರೆ. ಕತೆಯ ವಸ್ತು ಮತ್ತು ಕಥನದ ರೀತಿಯು ಜನರ ಬಾಳುವೆಯಿಂದ ಮೂಡಿ ಬಂದಿದೆ. ಮನುಷ್ಯನ ಇಚ್ಛೆಯನ್ನು ಮೀರಿ ಮಾನವೀಯತೆಯು ಕ್ರಿಯಾಶೀಲವಾಗುವ ಬಗೆಯು ಮುಖ್ಯವಾಗುತ್ತದೆ. ಕನ್ನಡ ಸೃಜನಶೀಲ ಮನಸ್ಸು ಇವರ ಕತೆಗಳ ಅಧ್ಯಯನದ ಮೂಲಕ ಅನೇಕ ಒಳನೋಟಗಳನ್ನು ಪಡೆದುಕೊಳ್ಳಬಹುದು. ಆದರೆ ಕನ್ನಡ ಸಾಹಿತ್ಯದ ಮುಖ್ಯಧಾರೆಯಲ್ಲಿ ಮೊಗಸಾಲೆಯವರ ಕತೆಗಳ ಸ್ವರೂಪ ಮತ್ತು ಕನ್ನಡ ಕಥಾಸಾಹಿತ್ಯದಲ್ಲಿ ವಿಶಿಷ್ಟವೆನ್ನಬಹುದಾದ ಕೆಲವು ರಚನೆಗಳನ್ನು ಕನ್ನಡ ವಿಮರ್ಶಾ ಲೋಕವು ಗಮನಿಸದಿರುವುದು ಅಚ್ಚರಿಯ ಸಂಗತಿಯಾಗಿದೆ. ಆಧುನಿಕ ಒತ್ತಡಗಳ ನಡುವೆ ಜಡವಾಗುತ್ತಿರುವ ಸಂವೇದನೆಯನ್ನು ಜೀವಂತವಾಗಿಡುವ, ಬರಡಾಗುತ್ತಿರುವ ಮನಸ್ಸುಗಳಲ್ಲಿ ಜೀವಸೆಲೆಯನ್ನು ಉಕ್ಕಿಸಿ ಚೈತನ್ಯದ ಹನಿಯನ್ನು ಸಿಂಪಡಿಸುವ, ಉಪಭೋಗ ಸಂಸ್ಕøತಿಯ ಸೆಳೆತದಲ್ಲಿ ಸಿಕ್ಕಿ ಬಿಕ್ಕಟ್ಟಿನಲ್ಲಿರುವಾಗ ಸಂಬಂಧಗಳಿಗೆ ಮಾನವೀಯ ಸ್ಪರ್ಶವನ್ನು ನೀಡುವ ಮೊಗಸಾಲೆಯವರ ಕತೆಗಳು ವಿಶೇಷ ಚರ್ಚೆಗೆ ಒಳಗಾಗಬೇಕಿವೆ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

2 thoughts on “ನಾ. ಮೊಗಸಾಲೆಯವರ ಕತೆಗಳು: ಸಮಾಜದ ವಾಸ್ತವ ದರ್ಶನ”

  1. Raghavendra Mangalore

    ತುಂಬಾ ಅದ್ಭುತ ಅವಲೋಕನ. ಅಭಿನಂದನೆಗಳು ಲೇಖಕರಿಗೆ.

    1. ಡಾ. ಸುಭಾಷ್ ಪಟ್ಟಾಜೆ

      ಧನ್ಯವಾದಗಳು. ಮೂಲ ಲೇಖನವು ಹನ್ನೊಂದು ಪುಟಗಳಿಂದ ಕೂಡಿದ್ದು ಅನಿವಾರ್ಯ ಕಾರಣಗಳಿಂದ ಐದು ಪುಟಗಳಿಗೆ ಇಳಿಸಲಾಗಿದೆ.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter