ನೀತಿ ಪ್ರತೀತಿ -ವಿಭಾ ಪುರೋಹಿತ ಅಂಕಣl ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು……

ಅತಿಯಾದ ಸಂಗ್ರಹಣೆ ಅಪಾಯಕಾರಿಯಾಗಬಲ್ಲದು
———-‐‐——————————————————

ಭೈರನೆಂಬ ಒಬ್ಬ ಬೇಡ ನಿದ್ದನು. ಅವನು ಪ್ರತಿದಿನವೂ ಅಡವಿಗೆ ಹೋಗಿ ಬೇಟೆಯಾಡಿ ಮನೆಗೆ ಹಿಂತಿರುಗುತ್ತಿದ್ದನು. ಒಂದು ದಿನ ಜಿಂಕೆಯನ್ನು ಕೊಂದು ಹೊತ್ತುಕೊಂಡು ತನ್ನ ಮನೆಗೆ ಮರಳಿ ಬರುತ್ತಿರುವಾಗ ಒಂದು ದೊಡ್ಡ ಕಾಡು ಹಂದಿಯನ್ನು ನೋಡಿದನು . ಸರಿ ಇದನ್ನೂ ಬೇಟೆಯಾಡಿ ಜಿಂಕೆಯೊಂದಿಗೆ ಇದನ್ನು ಸಾಯಿಸಿ ತೆಗೆದುಕೊಂಡು ಹೋಗೋಣವೆಂದು ಆಲೋಚಿಸಿದನು.

ತುಂಬಾ ಆಹಾರ ಸಂಗ್ರಹಣೆಯಾಗುತ್ತದೆಂದು ಸಂತೋಷವಾಯಿತು. ಜಿಂಕೆಯನ್ನು ನೆಲದಲ್ಲಿಟ್ಟು ಹಂದಿಗೆ ಬಾಣವನ್ನು ಬಿಟ್ಟನು . ಆ ಬಾಣವು ಹಂದಿಗೆ ತಾಗಿತು . ಆ ಹಂದಿಯು ರೋಷದಿಂದ ಬಂದು ಬೇಡನನ್ನು ಇರಿದಾಗ ಅಲ್ಲಿಯೇ ಬೇಡನು ಸತ್ತು ಹೋದನು. ಬಾಣದಿಂದ ರಕ್ತ ಸೋರುತ್ತಿದ್ದ ಹಂದಿ ಸಹ ಅಲ್ಲಿಂದ ಸ್ವಲ್ಪ ಮುಂದೆ ಬಂದು ಸತ್ತು ಬಿದ್ದಿತ್ತು.

ಸ್ನೇಹಿತರೆ, ಈ ಸಣ್ಣ ಕಥೆಯಿಂದ ತಿಳಿದು ಬರುವ ಅಂಶವೇನೆಂದರೆ ಮನುಷ್ಯನಿಗೆ ಅತಿಯಾದ ಆಸೆ ಇದೆ. ಮನುಷ್ಯನ ಹಾಗೆ ಪ್ರಾಣಿಗಳಿಗೂ ಕಷ್ಟದ ಪ್ರಸಂಗಗಳು ಬರುತ್ತವೆ. ಹಣವನ್ನಾಗಲಿ, ಆಹಾರವನ್ನಾಗಲಿ ಅತಿಯಾಗಿ ಎಂದೂ ಸಂಗ್ರಹ ಮಾಡಬಾರದು.

ಆಚಾರ್ಯ ಚಾಣಕ್ಯರು ಹೇಳುವ ಪ್ರಕಾರ ಎಲ್ಲಾ ಸಮಸ್ಯೆಗಳಿಂದ ಮುಕ್ತರಾಗಲು ಸಂಪತ್ತು ಸಹಾಯಕಾರಿ ಇದು ನಮಗೆ ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆಯನ್ನು ನೀಡುತ್ತದೆ . ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯು ಭವಿಷ್ಯದಲ್ಲಿ ಕೆಟ್ಟ ಸಮಯವನ್ನು ಸುಲಭವಾಗಿ ಎದುರಿಸಲು ಹಣ ಅಥವಾ ಸಂಪತ್ತು ಸಂಗ್ರಹಿಸಬೇಕು. ಆದರೆ ಅದು ಗೀಳಾಗಬಾರದು. ಹಣ ಸಂಪಾದನೆ ಬದುಕಿನ ಒಂದು ಭಾಗವಷ್ಟೇ , ಅದೇ ಬದುಕಾಗಬಾರದು. ಮೊದಲು ಸಂಪಾದನೆ ನಂತರ ಅದರ ಸಂಗ್ರಹಣೆ, ರಕ್ಷಣೆ ಕುರಿತಾದ ಆಲೋಚನೆಗಳಿಂದ ಮನುಷ್ಯ ಜೀವನಪೂರ್ತಿ ಮುಳುಗಿಬಿಡುತ್ತಾನೆ. ಎಷ್ಟು ಬೇಕು ಅಷ್ಟು ಸಂಗ್ರಹಣೆ ಮುಖ್ಯವಾಗುತ್ತದೆ . ಆದರೆ ಅತಿಯಾದ ಸಂಗ್ರಹಣೆ ಸಲ್ಲದು “ಅತಿಯಾದ ಅಮೃತವೂ ವಿಷ” ವೆಂಬ ಮಾತಿದೆ.

ಜೀವನದಲ್ಲಿ ಆಕಸ್ಮಿಕವಾಗಿ ಎದುರಾಗುವ ಸಂಕಷ್ಟಗಳನ್ನು ಎದುರಿಸಲು ಹಣ ಸಂಗ್ರಹಣೆ ಅವಶ್ಯವಾಗಿ ಬೇಕಾಗುತ್ತದೆ . ವೃದ್ಧಾಪ್ಯವನ್ನು ಸುಭದ್ರ ಮಾಡಿಕೊಳ್ಳಲು ಅನುವಾಗುತ್ತದೆ. ಇವೆಲ್ಲದರ ಹೊರತಾಗಿ ಅತಿ ಹೆಚ್ಚಿನ ಹಣ ಸಂಗ್ರಹಣೆ ತುಸು ಅಪಾಯಕಾರಿಯೇ ಸರಿ. ಅವಶ್ಯಕತೆಗಿಂತ ಹೆಚ್ಚು ಹಣವಿದ್ದಲ್ಲಿ ಮನುಷ್ಯನ ‘ಮನಸ್ಸೆಂಬ ಮರ್ಕಟ’ ಬೇಡದ್ದನ್ನೆಲ್ಲ ಯೋಚಿಸುತ್ತದೆ. ಬೇಡದನ್ನೆಲ್ಲ ಮಾಡುತ್ತದೆ ಈಗ ಎಲ್ಲ ಯುವಕರು ಸಾಧಾರಣ 25 ರಿಂದ 30 ವರ್ಷಗಳ ಒಳಗೆ ಹಣ ಸಂಪಾದನೆ ಮಾಡಿ ಬಿಡುತ್ತಾರೆ. ಕೆಲವರು ಅದನ್ನು ಸದ್ವಿನಿಯೋಗ ಮಾಡಿಕೊಳ್ಳುತ್ತಾರೆ .

ಆದರೆ ಕೆಲವರು ಅದರಿಂದ ಏನು ಮಾಡಬೇಕೆಂಬ ಸರಿಯಾದ ಮಾರ್ಗ ಅರಿಯದೆ ಬೇರೆ ಬೇರೆ ಚಟಗಳಿಗೆ ತುತ್ತಾಗುವ ಸಂಭವಗಳೇ ಹೆಚ್ಚಾಗಿವೆ. ಜೀವನದ ಪರಮೋಚ್ಚ ಗುರಿಯಾದ ಹಣ ಸಂಪಾದನೆಯನ್ನು ಸಾಧಿಸಿರುತ್ತಾರೆ. ನಿಜ, ಆದರೆ ನೆಮ್ಮದಿ, ಆನಂದ ಅವರಿಗೆ ಸಿಕ್ಕಿರುವುದಿಲ್ಲ. ಮಿತಿಮೀರಿ ಹಣ ಸಂಗ್ರಹಣೆಯಾಗುತ್ತದೆ . ಹಾಗಾಗಿ ಖರ್ಚಿಗೆ ಕಡಿವಾಣವೇ ಇಲ್ಲದಂತಾಗುತ್ತದೆ. ಇಂಥ ಸಮಯದಲ್ಲಿ ಸರಿಯಾದ ವ್ಯಕ್ತಿಗಳ ಸಹವಾಸ ಅಥವಾ ಸರಿಯಾದ ತಿಳುವಳಿಕೆ ದೊರೆತರೆ ಅವರು ಒಳ್ಳೆಯ ವ್ಯಕ್ತಿಯಾಗಿ, ಸಮಾಜ ಸೇವಕರಾಗಿ (ಸುಧಾಮೂರ್ತಿ, ಪುನೀತ ರಾಜಕುಮಾರ …ಇತರರು) ರೂಪುಗೊಳ್ಳುತ್ತಾರೆ. ಇಲ್ಲವಾದರೆ ದುಶ್ಚಟಗಳಿಗೆ ದಾಸರಾಗುತ್ತಾರೆ.

ಯಾವುದೇ ಆಗಲಿ ‘ನಿಂತ ನೀರಾಗಬಾರದು ಹರಿಯುವ ನೀರಾಗಬೇಕು’ ಎನ್ನುವ ಹಿರಿಯರ ನೀತಿಯ ಹಾಗೆ ನೀರು ಉಪಯೋಗಕ್ಕೆ ಬರಬೇಕು. ಹಾಗೂ ಪರಿಶುದ್ಧತೆಯಿಂದ ತನ್ನ ಅಸ್ತಿತ್ವವನ್ನು ಕಾಪಾಡಿಕೊಳ್ಳಬೇಕು, ಎಂದರೆ ಅದು ಸದಾ ಹರಿಯುತ್ತಿರಬೇಕು. ಹಾಗೆಯೇ ಹಣವೂ ಕೂಡ. ಸರ್ವಜ್ಞನ ತ್ರಿಪದಿಯಂತೆ

ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ
ಕೊಟ್ಟಿದ್ದು ಕೆಟ್ಟಿತೆನಬೇಡ, ಮುಂದೆ
ಕಟ್ಟಿಹುದು ಬುತ್ತಿ ಸರ್ವಜ್ಞ

2008ರಲ್ಲಿ ನೋಟಿನ ಅಮಾನ್ಯೀಕರಣವಾದಾಗ ಅತಿ ಆಸೆಯಿಂದ ಮಾಡಿದ ಅತಿಯಾದ ಸಂಗ್ರಹಣೆ ಹೊರ ಬಿದ್ದುದ್ದನ್ನು ನಾವೆಲ್ಲ ನೋಡಿದ್ದೇವೆ. ಅತಿಯಾದ ಸಂಗ್ರಹಣೆಯಾದಾಗ ಕೆಲವರು ಅದನ್ನು ಕದ್ದು ಮುಚ್ಚಿ ಇಟ್ಟಿದ್ದರು. ಹಾಗೆ ಇಟ್ಟ ಹಣ ಉಪಯೋಗಕ್ಕೆ ಬಾರದಾಯಿತು. ಕೆಲವರಂತೂ ಆ ನೋಟುಗಳನೆಲ್ಲ ಸುಟ್ಟು ಹಾಕಿದ ದೃಶ್ಯಗಳನ್ನು ನೋಡಿದ್ದೇವೆ.

ಅತಿಯಾದ ಆಹಾರವನ್ನು ಒಮ್ಮೆಲೆ ತಯಾರಿಸಿದಾಗ, ಅದು ಹಾಳಾಗಬಾರದೆಂದು ರೆಫ್ರಿಜಿರೆಟ್ ಮಾಡಬೇಕಾಗುತ್ತದೆ. ಆಗ ಆಹಾರವು ಸತ್ವವನ್ನು, ರುಚಿಯನ್ನು ಕಳೆದುಕೊಳ್ಳುತ್ತದೆ. ಮನೋವೈಜ್ಞಾನಿಕವಾಗಿ ಮನುಷ್ಯ ನಲಿವನ್ನು, ಸುಖ, ಸಂತೋಷವನ್ನು ಬಹುಬೇಗ ಹಂಚಿಕೊಳ್ಳುತ್ತಾನೆ. ಆದರೆ ನೋವುಗಳನ್ನು ಯಾರೊಂದಿಗೂ ಸುಲಭವಾಗಿ ಹೇಳುವದಿಲ್ಲ. ಕೆಲವರು ಅಂತರ್ಮುಖಿಗಳಾಗಿರುತ್ತಾರೆ. ಮನಸ್ಸಿನಲ್ಲಿದ್ದ ದುಗುಡವನ್ನು ಹಾಗೇ ಇಟ್ಟುಕೊಳ್ಳುತ್ತಾ ಹೋದಾಗ, ಕೊನೆಗೆ ಕೊರಗಿ ಕೊರಗಿ ಸುಟ್ಟು ಹೋಗುತ್ತಾರೆ. ಇಲ್ಲವೆ ಹಠಾತ್ ಸ್ಫೋಟಗೊಳ್ಳುತ್ತಾರೆ. ಅತಿಯಾದ ಸಂಗ್ರಹಣೆಯೇ ಇಂಥ ಆಘಾತಕ್ಕೆ ಕಾರಣವಾಗುತ್ತದೆ. ನೋವನ್ನು ಸಕಾಲಕ್ಕೆ ಹೊರಹಾಕಿದ್ದರೆ ಅಪಾಯವಾಗುತ್ತಿರಲಿಲ್ಲ.

ಇಂದಿನ ಯುವ ಜನಾಂಗವನ್ನು ಗಮನಿಸಿದಾಗ ; ಪಾಲಕರು ಮಿತಿಮೀರಿದ ಹಣ ಸಂಪಾದನೆಯಲ್ಲಿ ತೊಡಗುವುದರಿಂದ ಕುಟುಂಬದ ಕಡೆ ,ಮಕ್ಕಳ ಬೆಳವಣಿಗೆ ಕಡೆ ನಿರ್ಲಕ್ಷ ತೋರುತ್ತಾರೆ. ದುಡ್ಡೇ ದೊಡ್ಡಪ್ಪ ಎಂದು ತಿಳಿದಿರುತ್ತಾರೆ. ಮುಂದೆ ಯಾವುದೋ ಒಂದು ಘಟ್ಟದಲ್ಲಿ ಖಂಡಿತವಾಗಿ ಭ್ರಮನಿರಸನಗೊಳ್ಳುತ್ತಾರೆ. ಮಕ್ಕಳ ಮಾನಸಿಕ ಆರೋಗ್ಯ ಹಾಗೂ ಸಂಬಂಧಗಳಲ್ಲಿ ಶಿಥಿಲತೆ ಉಂಟಾಗುತ್ತದೆ.

ತಂದೆ ತಾಯಿಯರ ಪ್ರೀತಿ ,ಮಮತೆ ಕಕ್ಕುಲತೆಗಳಿಂದ ವಂಚಿತರಾಗುತ್ತಾರೆ. ಆ ಪ್ರೀತಿ ವಿಶ್ವಾಸವನ್ನು ಬೇರೆಲ್ಲೊ ಹುಡುಕುವಂತಾಗುತ್ತದೆ. ಮುಂದೆ ಮಕ್ಕಳು ಬೆಳೆದು ದೊಡ್ಡವರಾದಾಗ ದುಂದು ವೆಚ್ಚ, ಐಶಾರಾಮಿ ಜೀವನ ನಡೆಸುತ್ತಾರೆ . ಇವರಲ್ಲಿ ಸ್ವಂತಿಕೆ, ಸ್ವಾಭಿಮಾನ, ಪರಿಶ್ರಮ ಎಂಬುದು ಮರೀಚಿಕೆಯಾಗು ತ್ತದೆ. ಸ್ವಂತ ಶಕ್ತಿಯ ಮೇಲೆ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಅಸಮರ್ಥರಾಗುತ್ತಾರೆ.

ಯಾವ ವಸ್ತುಗಳು ಅಥವಾ ಕೆಲಸ ನಮಗೆ ಸದಾ ಸಂತೋಷವನ್ನು ನೀಡುತ್ತದೆಯೋ ಅದು ಮಾತ್ರ ನಿಜವಾದ ಅರ್ಥದಲ್ಲಿ ಆಸ್ತಿ (asset) ಎನಿಸಿಕೊಳ್ಳುತ್ತದೆ. ಯಾವ ವಸ್ತು ಅಥವಾ ಕೆಲಸ ನೋವು ನೀಡುತ್ತದೆ ಅದು ಬಾಧ್ಯತೆ ( liability) ಅಥವಾ ಹೊಣೆಗಾರಿಕೆ ಎನಿಸಿಕೊಳ್ಳುತ್ತದೆ. ಸಂಗ್ರಹಣೆ ಹೆಚ್ಚಾದಂತೆ ಕಾಯ್ದುಕೊಳ್ಳಲು ಉಪಾಯ ಹುಡುಕಬೇಕಾಗುತ್ತದೆ, ಹೊಣೆಗಾರಿಕೆ ಹೆಚ್ಚುತ್ತದೆ. ಇದರಿಂದ ನೆಮ್ಮದಿ ದೂರವಾಗುತ್ತದೆ. ಸಂಗ್ರಹಣೆ ಇರಬೇಕು ನಿಜ , ಆದರೆ ಅದು ಅತಿಯಾದಾಗ ನಮ್ಮ ಆನಂದವನ್ನು ಕಸಿದುಕೊಳ್ಳಬಹುದು ಅಲ್ಲವೆ ? ಮಿತವಾದ ಸಂಗ್ರಹಣೆ ಇರಲಿ , ಹಿತವಾದ ಜೀವನವಿರಲಿ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter