ಮಿಂಚಿನ ಬಳ್ಳಿ- ವಿಕಾಸ ಹೊಸಮನಿ ಅಂಕಣ l ಚಿಟ್ಟೆ – ಒಂದು ಟಿಪ್ಪಣಿ

ಬೇಲಿಯ ಗೂಟದ ಮೇಲೊಂದು ಚಿಟ್ಟೆ – ಒಂದು ಟಿಪ್ಪಣಿ

ಕನ್ನಡದ ಖ್ಯಾತ ಕವಿ ಮತ್ತು ಕಾದಂಬರಿಕಾರ ಡಾ. ನಾ. ಮೊಗಸಾಲೆಯವರ ಇತ್ತೀಚಿನ ಕವನ ಸಂಕಲನ ‘ಬೇಲಿಯ ಗೂಟದ ಮೇಲೊಂದು ಚಿಟ್ಟೆ’ (೨೦೨೨). ಸುಮಾರು ಐದೂವರೆ ದಶಕಗಳಿಂದ ಕನ್ನಡದಲ್ಲಿ ಕಾವ್ಯ ರಚನೆ ಮಾಡುತ್ತ ಬಂದಿರುವ ಮೊಗಸಾಲೆಯವರು ಈಗಾಗಲೇ ಹನ್ನೊಂದು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ‘ನೀಲ ಆಕಾಶ’ ಎಂಬ ಇದುವರೆಗಿನ ಕವಿತೆಗಳ ಬೃಹತ್ ಸಂಪುಟ ಸಹ ಪ್ರಕಟವಾಗಿದೆ.

ನವ್ಯಕಾವ್ಯ ಏರುಗತಿಯಲ್ಲಿದ್ದ ಕಾಲದಲ್ಲಿ ಕವಿತೆ ಬರೆಯಲು ಆರಂಭಿಸಿದ ಮೊಗಸಾಲೆಯವರು ಕಾಲಕ್ಕೆ ತಕ್ಕಂತೆ ಬದಲಾಗುತ್ತ, ಬೆಳೆಯುತ್ತ ಬಂದಿದ್ದಾರೆ. ನವ್ಯ, ದಲಿತ-ಬಂಡಾಯ ಮತ್ತು ನವ್ಯೋತ್ತರ ಈ ಮೂರು ಕಾಲಘಟ್ಟದ ಪಲ್ಲಟಗಳನ್ನು ಮೊಗಸಾಲೆಯವರ ಕಾವ್ಯದಲ್ಲಿ ಕಾಣಬಹುದು. ನವ್ಯದ ಕಲಾತ್ಮಕತೆ ಮತ್ತು ದಲಿತ-ಬಂಡಾಯದ ಪ್ರತಿಭಟನೆ ಎರಡನ್ನೂ ಅವರ ಕಾವ್ಯದ ಪೂರ್ವಾರ್ಧದಲ್ಲಿ ಗುರುತಿಸಬಹುದು. ಬಹುಶಃ ‘ಇಹಪರದ ಕೊಳ’ ಕವನಸಂಕಲನದ ನಂತರ ಅವರ ಒಲವು ನಿಲುವುಗಳು ಸ್ಪಷ್ಟವಾಗಿ ಬೇರೆಯದೇ ದಾರಿ ಹಿಡಿದವು. ಈ ದೃಷ್ಟಿಯಿಂದ ನೋಡಿದಾಗ ‘ಇಹಪರದ ಕೊಳ’ ಕವನಸಂಕಲನ ಅವರ ಕಾವ್ಯಕ್ಕೆ ಹೊಸ ತಿರುವು ನೀಡಿದ ಕೃತಿ.

‘ಅರವತ್ತರ ನಂತರ ಅರಳು ಮರಳು’ ಎಂಬ ನಾಣ್ಣುಡಿಯಿದೆ. ಕನ್ನಡದ ಬುದ್ಧಿಜೀವಿಗಳಿಗೆ ಈ ಮಾತು ಅನ್ವಯಿಸಬಹುದೇ ಪರಂತು ಮೊಗಸಾಲೆಯವಯರಂತಹ ಸೃಜನಶೀಲ ಲೇಖಕರಿಗಲ್ಲ! ಸದಾ ಹೊಸತನಕ್ಕಾಗಿ ತುಡಿಯುವ ಮೊಗಸಾಲೆಯವರು ಅರವತ್ತರ ನಂತರ ಮರಳಿ ಅರಳಿದ್ದಾರೆ ಅದರ ಫಲವೇ ‘ಬೇಲಿಯ ಗೂಟದ ಮೇಲೊಂದು ಚಿಟ್ಟೆ’ ಎಂಬ ಕವನ ಸಂಕಲನ. ಈ ಕವನ ಸಂಕಲನದ ಮೂಲಕ ಅವರು ತಮ್ಮ ಕಾವ್ಯವನ್ನು ಹೊಸ ಮಜಲಿಗೆ ಕೊಂಡೊಯ್ದಿದ್ದಾರೆ. ಸದ್ಯ ಎಪ್ಪತ್ತೆಂಟರ ಹರೆಯದಲ್ಲಿರುವ ಅವರು ತಮ್ಮ ಮಾಗಿದ ಜೀವನಾನುಭವಗಳನ್ನು ಕವಿತೆಗಳ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ.

ಅಂತಾರಾಷ್ಟ್ರೀಯ ಖ್ಯಾತಿ ಪಡೆದ ಲೇಖಕ ಮತ್ತು ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಯು. ಆರ್. ಅನಂತಮೂರ್ತಿಯವರು ಮೊಗಸಾಲೆಯವರ ಕಾವ್ಯದ ಕುರಿತು ತುಂಬ ಪ್ರೀತಿಯಿಟ್ಟುಕೊಂಡವರು. ಕಾವ್ಯ ಮೋಹಿಯಾದ ಅವರು ಮೊಗಸಾಲೆಯವರ ಕಾವ್ಯದ ಕುರಿತು ಹೇಳಿರುವ ಮಾತುಗಳು ತುಂಬ ಮನೋಜ್ಞವಾಗಿವೆ. ‘ಬೇಲಿಯ ಗೂಟದ ಮೇಲೊಂದು ಚಿಟ್ಟೆ’ ಸಂಕಲನದ ಕವಿತೆಗಳು ಈ ಮಾತುಗಳನ್ನು ಸಮರ್ಥಿಸುವಂತಿವೆ.

“ಮೊಗಸಾಲೆ ನಿತ್ಯದ ಸಾಮಾನ್ಯದಲ್ಲಿ ತೊಡಗಿದ್ದೇ ಕಾವ್ಯ ರಚಿಸುತ್ತಾರೆ. ಹಲವು ಬಾರಿ ಇದು ನಡೆಯುವುದು ಉದ್ದೀಪನಗೊಂಡು ಊಹೆಯಲ್ಲಿ. ಇದಿಂದು ಶಬ್ದದಲ್ಲಿ ನಡೆಯುವ ಲೀಲೆ. ಈ ಲೀಲೆಯಲ್ಲಿ ಮುದವಿದೆ, ಮನೋರಂಜನೆಯಿದೆ.”
(ಯು. ಆರ್. ಅನಂತಮೂರ್ತಿ, ಬೆನ್ನುಡಿಯ ಸಾಲುಗಳು)

ಮೊಗಸಾಲೆಯವರು ಅರ್ಧ ಶತಮಾನದ ತಮ್ಮ ದಾಂಪತ್ಯ ಜೀವನದ ಅನುಭವವನ್ನು ತುಂಬ ಸೊಗಸಾಗಿ ಕಾವ್ಯದಲ್ಲಿ ತಂದಿದ್ದಾರೆ. ಇಲ್ಲಿನ ಬಹುತೇಕ ಕವಿತೆಗಳಲ್ಲಿ ಸಮರಸ ದಾಂಪತ್ಯದ ಪ್ರಬುದ್ಧ ಚಿತ್ರಣ ಕಂಡು ಬರುತ್ತದೆ. ಇಲ್ಲಿ ಅವರು ಪತ್ನಿಯನ್ನು ಬರೀ ಪತ್ನಿಯಾಗಿ ನೋಡುವುದಿಲ್ಲ. ಒಬ್ಬ ಗೆಳತಿಯಾಗಿ, ಪ್ರೇಯಸಿಯಾಗಿ, ಮಾರ್ಗದರ್ಶಿಯಾಗಿ ಮತ್ತು ಆತ್ಮಸಖಿಯಾಗಿ ನೋಡುತ್ತಾರೆ. ಪ್ರಕೃತಿ ಮತ್ತು ಮನುಷ್ಯ ಜೀವನಕ್ಕಿರುವ ಸಾಮ್ಯಗಳು, ಪ್ರಕೃತಿಯಲ್ಲಿ ಋತುಭೇದಗಳುಂಟಾಗುವಂತೆ ಮನುಷ್ಯ ಜೀವನದಲ್ಲಿ ಉಂಟಾಗುವ ಜೀವನ ಪಲ್ಲಟಗಳನ್ನು ತುಂಬ ಚೆನ್ನಾಗಿ ಚಿತ್ರಿಸಿದ್ದಾರೆ. ವೃದ್ಧಾಪ್ಯದ ಸಾಂಗತ್ಯ ಮತ್ತು ಜೀವನಪ್ರೀತಿಯನ್ನು ಅನನ್ಯವಾಗಿ ಕವಿತೆಗಳಲ್ಲಿ ಹಿಡಿದಿಟ್ಟಿರುವುದು ಈ ಕವಿತೆಗಳ ಮಹತ್ವವನ್ನು ಹೆಚ್ಚಿಸಿದೆ.

‘ಯುಗಾದಿ’, ‘ಮೋಡವೇ ಇರದೆ ಬಂದ ಮಳೆ’, ‘ಮೊಮ್ಮಗ’, ‘ಅವಳು ಮತ್ತು ನಾನು’, ‘ಮರ ಮತ್ತು ನೆರಳು’, ‘ಮುಸ್ಸಂಜೆ ಅಲ್ಲದ ಮುಸ್ಸಂಜೆ’ ಮತ್ತು ‘ಒಂದು ಮುಂಜಾನೆ’ ಕವಿತೆಗಳಲ್ಲಿ ಬದುಕಿನ ಮುಸ್ಸಂಜೆಯಲ್ಲಿರುವ ವ್ಯಕ್ತಿ ಹಿನ್ನೋಟದ ಕನ್ನಡಿಯಲ್ಲಿ ತಮ್ಮ ದಾಂಪತ್ಯ ಜೀವನ ನಡೆದು ಬಂದ ದಾರಿಯ ಕಡೆಗೆ ತಿರುಗಿ ನೋಡುವ ಚಿತ್ರವಿದೆ. ಕಳೆದು ಹೋದ ಕಾಲಘಟ್ಟದ ನೆನಪುಗಳ ಕುರಿತು ಮಾತ್ರ ಈ ಕವನಗಳು ಕನವರಿಸುವುದಿಲ್ಲ. ಬದಲಾವಣೆ ಅನಿವಾರ್ಯ ಎಂಬುದನ್ನು ತುಂಬ ಚೆನ್ನಾಗಿ ಅರಿತಿರುವ ಕವಿ ಅಂತಹ ಬದಲಾವಣೆಯನ್ನು ಸ್ಥಿತಪ್ರಜ್ಞತೆಯಿಂದ ಸ್ವೀಕರಿಸುತ್ತಾರೆ. ಭೂತಕಾಲದ ನೆನಪುಗಳ ಜೊತೆ ಜೊತೆಗೆ ವರ್ತಮಾನದ ವಾಸ್ತವಕ್ಕೂ ಅಷ್ಟೇ ಚೆನ್ನಾಗಿ ಸ್ಪಂದಿಸುವುದರಿಂದ ಈ ಕವಿತೆಗಳು ಇಂತಹ ವಸ್ತುವಿನ ಕುರಿತು ಬಂದ ಈ ಬಗೆಯ ಇತರೆ ಕವಿತೆಗಳಿಗಿಂತ ತುಂಬ ಭಿನ್ನವಾಗಿ ನಿಲ್ಲುತ್ತವೆ.

‘ಯುಗಾದಿ’, ‘ಮೊಮ್ಮಗ’, ‘ಅವಳು ಮತ್ತು ನಾನು’, ‘ಮುಸ್ಸಂಜೆ ಅಲ್ಲದ ಮುಸ್ಸಂಜೆ’ ಮತ್ತು ‘ಒಂದು ಮುಂಜಾನೆ’ ಈ ದೃಷ್ಟಿಯಿಂದ ನೋಡಿದಾಗ ತುಂಬ ಯಶಸ್ವಿ ಕವಿತೆಗಳು. ಧಾವಂತದ ಬದುಕಿನ ಆಧುನಿಕ ಜೀವನದಲ್ಲಿ ಕುಟುಂಬ ಜೀವನದ ಪರಿಕಲ್ಪನೆಯೇ ಬದಲಾಗಿದೆ. ಅವಿಭಕ್ತ ಕುಟುಂಬಗಳು ಒಡೆದು ಚಿಕ್ಕ ಚಿಕ್ಕ ಕುಟುಂಬಗಳು ನಿರ್ಮಾಣವಾಗಿವೆ. ತಂದೆ-ತಾಯಿ ಮತ್ತು ಒಂದು ಮಗು ಅಥವಾ ಎರಡು ಮಕ್ಕಳಿರುವ ಪುಟ್ಟ ಪುಟ್ಟ ಕುಟುಂಬಗಳೇ ಈಗ ಎಲ್ಲೆಡೆ ಕಾಣುತ್ತಿವೆ. ಮಕ್ಕಳು, ಮೊಮ್ಮಕ್ಕಳಿಂದ ದೂರವಿರುವ ಅಜ್ಜ-ಅಜ್ಜಿಯರು ಒಂದೆಡೆಯಾದರೆ, ವೃದ್ಧರಾದ ತಂದೆ-ತಾಯಿಗಳಿಂದ ದೂರವಾದ ಮಕ್ಕಳು ಮತ್ತು ಅಜ್ಜ-ಅಜ್ಜಿಯರ ಬೆಚ್ಚನೆಯ ಪ್ರೀತಿಯಿಂದ ವಂಚಿತರಾದ ಮೊಮ್ಮಕ್ಕಳಿದ್ದಾರೆ. ಮೊಗಸಾಲೆಯವರ ಕವಿತೆಗಳು ಇಂತಹ ವರ್ತಮಾನದ ಜ್ವಲಂತ ಸಮಸ್ಯೆಗಳನ್ನು ತುಂಬ ಸಂಯಮದಿಂದ ಚಿತ್ರಿಸುತ್ತವೆ. ಈ ಕವಿತೆಗಳಲ್ಲಿ ವೃದ್ಧಾಪ್ಯದಲ್ಲಿ ಅಸಹಾಯಕರಾಗಿ, ಮಕ್ಕಳು, ಮೊಮ್ಮಕ್ಕಳಿಂದ ದೂರವಾಗಿ ಕರುಣೆ ಬೇಡುವ ದಂಪತಿಗಳಿಲ್ಲ. ಅದಕ್ಕೆ ಬದಲಾಗಿ ಎಂತಹುದೇ ಪರಿಸ್ಥಿತಿ ಬಂದರೂ ಅದನ್ನು ಸ್ಥಿತಪ್ರಜ್ಞತೆಯಿಂದ ಎದುರಿಸಬಲ್ಲ ವೃದ್ಧ ದಂಪತಿಗಳಿದ್ದಾರೆ. ಮಾಗಿದ ಮನಸ್ಸಿನ, ಅಪಾರ ಜೀವನಾನುಭವ ಹೊಂದಿದ ವೃದ್ಧ ದಂಪತಿಗಳು ಪರಸ್ಪರರಿಗೆ ಊರುಗೋಲಾಗಿ ಜೀವನವನ್ನು ಸಹನೀಯಗೊಳಿಸಿಕೊಂಡಿದ್ದಾರೆ.

ಮಕ್ಕಳು, ಮೊಮ್ಮಕ್ಕಳಿಂದ ದೂರವಿದ್ದರೂ ಸಹ ತಮ್ಮ ಸುತ್ತಮುತ್ತಲಿನ ಮರಗಿಡಗಳಲ್ಲಿ, ಅರಳಿ ಪರಿಮಳ ಸೂಸುವ ಹೂವುಗಳಲ್ಲಿ, ಚಿಲಿಪಿಲಿಗುಟ್ಟುವ ಹಕ್ಕಿಗಳಲ್ಲಿ ಮತ್ತು ಬಣ್ಣ ಬಣ್ಣದ ಚಿಟ್ಟೆಗಳಲ್ಲಿ ಮಗುವನ್ನು ಕಾಣುವ ಪ್ರೀತಿ ತುಂಬಿದ ವೃದ್ಧ ದಂಪತಿಗಳ ಚಿತ್ರಣ ಭಿನ್ನವಾಗಿ ಮೂಡಿ ಬಂದಿದೆ. ಜೀವನದ ಸುಖ-ದುಃಖಗಳಲ್ಲಿ ಸಹಭಾಗಿಗಳಾಗಿ ಬದುಕನ್ನು ಅರ್ಥಪೂರ್ಣಗೊಳಿಸಿಕೊಂಡ ಹಿರಿಯ ದಂಪತಿಗಳು ಪುಟಿಯುವ ಜೀವನ ಪ್ರೀತಿಗೆ ಸಾಕ್ಷಿಯಾಗಿದ್ದಾರೆ.

ಸಣ್ಣ ಸಣ್ಣ ಸಂಗತಿಗಳನ್ನು ಸಹ ತುಂಬ ಸೂಕ್ಷ್ಮವಾಗಿ ಗಮನಿಸುವ ಮೊಗಸಾಲೆಯವರು ದೈನಂದಿನ ಬದುಕಿನ ಕ್ಷುಲ್ಲಕವೆಂಬಂತಹ ಸಂಗತಿಗಳಲ್ಲಿ ಸಹ ಹೊಸದನ್ನು ಕಾಣಬಲ್ಲರು. ಇಂತಹ ಸಣ್ಣ ಸಣ್ಣ ಕ್ಷುಲ್ಲಕ ಸಂಗತಿಗಳೇ ಕವಿಯೊಬ್ಬ ಧ್ಯಾನಸ್ಥನಾಗಿ ಚಿಂತಿಸಿದಾಗ ಕವಿತೆಯಾಗಿ ಮೂಡಿ ಬರುತ್ತವೆ. ಅಂತಹ ಕವಿತೆಗಳು ಈ ಸಂಕಲನದಲ್ಲಿ ಧಾರಾ‌ಳವಾಗಿವೆ. ಈ ಕವನ ಸಂಕಲನಕ್ಕೆ ಶೀರ್ಷಿಕೆ ನೀಡಿರುವ ‘ಬೇಲಿಯ ಗೂಟದ ಮೇಲೊಂದು ಚಿಟ್ಟೆ’, ‘ಬಿದ್ದ ನವಿಲ ಗರಿಯ ಕೆಳಗಿರುವ ಇರುವೆಗೆ’, ‘ಇರುವೆಯ ಸುಖವ ಕೊಡು’, ‘ಚಿಟ್ಟೆ ಮತ್ತು ಹೂವು’, ‘ಮಳೆಗೆ ತೊಯ್ದು ಹೋದ ಹಕ್ಕಿ’ ಮತ್ತು ‘ಮರ ಒಂದು, ನೋಟ ಎರಡು’ ಇಂತಹ ಸರಳ ಮತ್ತು ಸುಂದರ ಕವಿತೆಗಳಿಗೆ ಒಳ್ಳೆಯ ಉದಾಹರಣೆಗಳು. ಗಹನವಾದ ವಿಚಾರವನ್ನು ತುಂಬ ಸರಳವಾಗಿ ಆದರೆ ಅರ್ಥಪೂರ್ಣವಾಗಿ ಹೇಳುವಂತಹ ಕವಿತೆಗಳಿವು.

‘ಅಹಲ್ಯೆ’, ‘ಊರ್ಮಿಳೆ’ ಮತ್ತು ‘ಶಬರಿ’ ಕವಿತೆಗಳು ಪುರಾಣ ಪ್ರಸಿದ್ಧ ಸ್ತ್ರೀ ಪಾತ್ರಗಳಾದ ಅಹಲ್ಯೆ, ಊರ್ಮಿಳೆ ಮತ್ತು ಶಬರಿಯ ಕುರಿತು ಮರು ಚಿಂತಿಸುವಂತೆ ಮಾಡುತ್ತವೆ. ‘ಅಜ್ಜ ನೆಟ್ಟಾಲ’, ‘ಕೃಷ್ಣ ಮೆನನ್ ರಸ್ತೆ’, ‘ಸ್ಥಿತ್ಯಂತರ’, ‘ಎಳೆನೀರು’ ಮತ್ತು ‘ಗಾಂಧಿ, ನಮ್ಮ ನಡುವೆ’ ವರ್ತಮಾನದ ಸಾಮಾಜಿಕ ಪರಿಸ್ಥಿತಿಗಳಿಗೆ ಸ್ಪಂದಿಸುವ ಕವಿತೆಗಳು.

‘ಬೇಲಿಯ ಗೂಟದ ಮೇಲೊಂದು ಚಿಟ್ಟೆ’ ಕವನ ಸಂಕಲನದಲ್ಲಿ ಒಟ್ಟು ಎಪ್ಪತ್ತಾರು ವೈವಿಧ್ಯಮಯ ಕವನಗಳಿವೆ. ಶಬ್ದಾಡಂಬರ, ಪಾಂಡಿತ್ಯ ಪ್ರದರ್ಶನ, ಬೇಕೆಂದೇ ತರುವ ಕಾವ್ಯ ಚಮತ್ಕಾರ ಮತ್ತು ಒತ್ತಾಯಪೂರ್ವಕ ಪ್ರತಿಮೆಗಳ ಬಳಕೆಯಿಂದ ಇಲ್ಲಿನ ಕವನಗಳು ಪಾರಾಗಿವೆ. ಬಹುತೇಕ ಕವನಗಳು ತುಂಬ ಸರಳವಾಗಿ ಕಂಡರೂ ಸಾಂದ್ರವಾಗಿ ಮತ್ತು ಅರ್ಥಪೂರ್ಣವಾಗಿ ಮೂಡಿಬಂದಿವೆ. ಗಹನವಾದ ಜೀವನ ತತ್ವವನ್ನು ತುಂಬ ಸರಳವಾಗಿ ಹೇಳುವ ಕಲೆಗಾರಿಕೆ ಮೊಗಸಾಲೆಯವರಿಗೆ ಒಲಿದಿದೆ. ‘ಬೇಲಿಯ ಗೂಟದ ಮೇಲೊಂದು ಚಿಟ್ಟೆ’ ಸಂಕಲನದ ಕವಿತೆಗಳು ಒಂದು ಬಾರಿ ಓದಲು ಕೈಗೆತ್ತಿಕೊಂಡರೆ ಓದಿ ಮುಗಿಸಿಯೇ ಕೆಳಗಿಡಬೇಕು ಎಂಬಷ್ಟು ಸೊಗಸಾಗಿವೆ.

ಯಾವುದೇ ಮ್ಯಾನಿಫೇಸ್ಟೋ ಒಂದನ್ನು ಸ್ಥಾಪಿಸಲು ಅಥವಾ ಸಮರ್ಥಿಸಲು ಹೆಣಗುವ, ಕೆಲವು ಪಂಥಗಳ ವಕ್ತಾರರಂತೆ ವರ್ತಿಸುವ, ಹತ್ತು ಹಲವು ಸಣ್ಣ-ಪುಟ್ಟ ಪ್ರಶಸ್ತಿಗಳನ್ನು ಪಡೆದು ನಮಗೆ ಸಮನಾರಿಲ್ಲ ಎಂದು ಬೀಗುವ ಕನ್ನಡದ ಪ್ರತಿಭಾ ದರಿದ್ರ, ಯುವ ಮತ್ತು ಮಧ್ಯ ವಯಸ್ಕ ಕವಿಗಳು/ಕವಯತ್ರಿಯರು ಮೊಗಸಾಲೆಯವರು ಮತ್ತು ವೆಂಕಟೇಶಮೂರ್ತಿಯವರಂತಹ ಹಿರಿಯ ಕವಿಗಳಿಂದ ಕಲಿಯುವುದು ಸಾಕಷ್ಟಿದೆ. ದುರ್ದೈವಶಾತ್ ಅಹಂಕಾರದಿಂದ ಅಂಧರಾಗಿ, ಕೂಪ ಮಂಡೂಕಗಳಂತೆ ವರ್ತಿಸುವ ಪ್ರತಿಭಾ ದರಿದ್ರರಿಗೆ ಇಂತಹ ಒಳ್ಳೆಯ ಮಾತುಗಳು ಪಥ್ಯವಾಗುವುದಿಲ್ಲ! ಇರಲಿ, ಮೊಗಸಾಲೆಯವರ ‘ಬೇಲಿಯ ಗೂಟದ ಮೇಲೊಂದು ಚಿಟ್ಟೆ’ ಇತ್ತೀಚೆಗೆ ಕನ್ನಡದಲ್ಲಿ ಬಂದ ಅತ್ಯುತ್ತಮ ಕೃತಿಗಳಲ್ಲೊಂದು. ಸಹೃದಯರು ಓದಿ ಸಂತಸ ಪಡುಬಹುದಾದ ಒಂದು ಒಳ್ಳೆಯ ಕವನ ಸಂಕಲನ ನೀಡಿದ ಮೊಗಸಾಲೆಯವರು ಅಭಿನಂದನಾರ್ಹರು.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter