‘ಪ್ರವಾಸಿಗರ ಅಂತರಂಗ’ – ಇದು ಸೃಜನಾ – ಕನ್ನಡ ಲೇಖಕಿಯರ ಬಳಗ ಮುಂಬಯಿ ಇತ್ತೀಚೆಗೆ ಪ್ರಕಟಿಸಿದ ಹತ್ತನೇ ಕೃತಿ. ‘ಕತೆ ಹೇಳೇ ‘ ಸೃಜನಾ ಬಳಗದವರ ಕಥಾ ಸಂಕಲನ 2004 ರಲ್ಲಿ ಮಾನ್ಯ ಯಶವಂತ ಚಿತ್ತಾಲರ ಸಮ್ಮುಖದಲ್ಲಿ ಪ್ರಕಟಗೊಂಡ ಮೊದಲ ಕೃತಿ. ಕಾಕತಾಳೀಯ ಎಂಬಂತೆ ಆ ಕೃತಿ ಬಿಡುಗಡೆಯಂದು ಪರಿಚಯವನ್ನು ಮಾಡುವ ಅವಕಾಶ ನನಗೆ ಸಿಕ್ಕಿತ್ತು. ಈ ಪ್ರವಾಸ ಕಥನ ಬಿಡುಗಡೆಗೊಂಡ ಸಂದರ್ಭ ಕೃತಿಯ ಕುರಿತಾದ ಪರಿಚಯಾತ್ಮಕ ಟಿಪ್ಪಣಿ ಇಂತಿವೆ.
ಪ್ರವಾಸದಲ್ಲಿ ಪ್ರಯಾಣ ಬಹುಮುಖ್ಯವಾದರೂ ಎಲ್ಲಾ ಪ್ರಯಾಣಗಳು ಪ್ರವಾಸವಲ್ಲ. ಪೂರ್ವ ನಿರ್ಧಾರಿತವಾಗಿ ಧಾರ್ಮಿಕ ಕ್ಷೇತ್ರಕ್ಕೆಂದೇ ಹೋಗುವ, ತೀರ್ಥಯಾತ್ರೆಯಂತಹುಗಳೂ ಪ್ರವಾಸವಲ್ಲ. ಪ್ರವಾಸ ಕಥನ ಎಂದರೆ ಪ್ರವಾಸದ ಒಟ್ಟೂ ಅನುಭವಗಳನ್ನು ಸ್ವಾರಸ್ಯಕರವಾಗಿ ಹೇಳುವುದು, ಹಂಚಿಕೊಳ್ಳುವುದು. ಕಥೆ ಬರೆಯುವಾಗ ಎಲ್ಲವೂ ಅನುಭವವೇ ಆಗಿರದೆ ಒಂದಷ್ಟು ಕಲ್ಪನೆಗೂ ಅವಕಾಶ ಇರುವುದು. ಆದರೆ ಪ್ರವಾಸ ಕಥನದಲ್ಲಿ ಕೇವಲ ಅನುಭವವೇ ಕೇಂದ್ರ. ಹಾಗಾಗಿಯೆ ಪ್ರವಾಸದಲ್ಲಿ ಕೇವಲ ಭೇಟಿ ನೀಡುವ ಸ್ಥಳವೊಂದೇ ಮುಖ್ಯ ಅಲ್ಲ, ಎಲ್ಲವನ್ನೂ ಒಳಗೊಂಡ ಒಟ್ಟು ಅನುಭವ ಮುಖ್ಯವಾಗುತ್ತದೆ.
ಒಂದೊಳ್ಳೇ ಪ್ರವಾಸ ಕಥನದಲ್ಲಿ; ಪೂರ್ವ ತಯಾರಿಯ ಹಂತದಿಂದ ಹಿಡಿದು, ಹಿಂದಿರುಗಿ ಬರುವ ತನಕದ ಸಣ್ಣ ಪುಟ್ಟ ವಿವರಗಳಿಗೂ ಆದ್ಯತೆ ನೀಡುವುದು;
ಭೇಟಿ ನೀಡಿದ ಸ್ಥಳ, ಪರಿಸರದ ಸೂಕ್ಷ್ಮ ಅವಲೋಕನ, ಚಾರಿತ್ರಿಕ ಮಹತ್ವ, ಬಹಳ ಮುಖ್ಯವಾಗಿ ಸ್ಥಳೀಯ ಜನರೊಡನೆ ಸಂವಹನ;
ಪ್ರವಾಸ ಸಂದರ್ಭ ಎದುರಾದ, ಆಗುವ ಆತಂಕ, ಮೋಜಿನ,ಎಡವಟ್ಟಿನ ಪ್ರಸಂಗಗಳು.
ಈ ಕೃತಿಯಲ್ಲಿ ಹೆಚ್ಚಿನ ಲೇಖಕಿಯರು ತಾವು ಮಾಡಿದ ಪ್ರವಾಸದ ಅನುಭವಗಳನ್ನು ಓದುಗರ ಆಸಕ್ತಿ ಸೆಳೆಯುವಂತೆ ಕಟ್ಟಿ ಕೊಟ್ಟಿದ್ದಾರೆನ್ನಬಹುದು. ಹಿರಿಯರಾದ ಡಾ. ಸುನೀತಾ ಶೆಟ್ಟಿಯವರಿಂದ ಹಿಡಿದು ಹೊಸತೇ ಆಗಿ ಬರವಣಿಗೆ ಆರಂಭಿಸಿದ ಸುಶೀಲ ದೇವಾಡಿಗರನ್ನು ಸೇರಿ ಒಟ್ಟು 46 ಲೇಖಕಿಯರ ಪ್ರವಾಸಕ್ಕೆ ಸಂಬಂಧಪಟ್ಟಂತಹ ಬರಹಗಳಿವೆ. ಮುಂಬಯಿಯಲ್ಲಿ ಇಂತಹ ಕೃತಿ ಮೊದಲ ಪ್ರಯತ್ನ ಎನ್ನಬಹುದು.
ಸುಮಾರು 11 ಲೇಖಕಿಯರು ಸಮುದ್ರದಾಚೆಯ ಅಂಡಮಾನ್ ನಿಕೋಬಾರ್ ಮತ್ತು ವಿದೇಶ ಪ್ರವಾಸಾನುಭವವನ್ನು ಬರೆದರೆ, ಸುಮಾರು 13 ಲೇಖಕಿಯರು ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ನೀಡಿದ ಭೇಟಿಯನ್ನು, ಆಯಾ ಕ್ಷೇತ್ರದ ಮಹಿಮೆಯನ್ನು ಬರೆದಿರುವರು. ಇನ್ನುಳಿದ 22 ಮಂದಿ ದೇಶದ ವಿವಿಧ ಭಾಗಗಳನ್ನು ತಿರುಗಾಡಿ ಬಂದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಹೀಗೆ ಈ ಕೃತಿ ದಕ್ಷಿಣದ ಕನ್ಯಾಕುಮಾರಿ, ಉತ್ತರದ ಮಾನಸ ಸರೋವರ, ಕಾಶ್ಮೀರ; ಇತ್ತ ಗುಜರಾತ್ ನಿಂದ ಅತ್ತ ಪೂರ್ವೋತ್ತರ ರಾಜ್ಯಗಳು ಮತ್ತು ಸಾಗರದಾಚೆಯೂ ಸೇರಿ ಭಿನ್ನಭಿನ್ನ ನಾಡು, ದೇಶ, ಪ್ರದೇಶಗಳ ವಿಭಿನ್ನ ರೀತಿಯ ಪ್ರವಾಸ ಕಥನದ ಬೃಹತ್ ಗೊಂಚಲಂತೆ ಗೋಚರಿಸುವುದು.
ಡಾ. ಸುನೀತಾ ಎಂ. ಶೆಟ್ಟಿಯವರ ಕಾಳಪಾಣೀ – ದ್ವೀಪದಲ್ಲಿ ನನ್ನ ಹೆಜ್ಜೆ; ಮಿತ್ರಾ ವೆಂಕಟ್ರಾಜರ – ಸ್ಪೇನ್ ದೇಶದ ಸಾಂಸ್ಕತಿಕ ಬಳುವಳಿ; ಡಾ. ದಾಕ್ಷಾಯಣಿ ಯಡಹಳ್ಳಿವರ – ಮೀರಾಳನ್ನು ಹುಡುಕುತ್ತಾ; ಯಶೋದಾ ಶೆಟ್ಟಿಯವರ (ಸುದೀರ್ಘವಾದ ಆದರೆ ಗಮನಾರ್ಹ) – ಇಟಲಿಯಾಣ ; ಮುಂತಾದ ಪ್ರವಾಸ ಕಥನಗಳು ಪ್ರೌಢ ನಿರೂಪಣೆಯಿಂದ ಗಮನ ಸೆಳೆಯುತ್ತವೆ. ಈ ಕಥನಗಳ ಹೂರಣ, ಭಾಷೆ, ಒಟ್ಟಂದದಲ್ಲಿ ಕೃತಿಯ ಸೊಭಗನ್ನು ಹೆಚ್ಚಿಸಿವೆ.
ಇನ್ನು ಪದ್ಮಜಾ ಮಣ್ಣೂರವರ – ಭಾರತೀಯ ಸಂಸ್ಕೃತಿ ಮೆರೆವ ಕಾಂಬೋಡಿಯಾ – ವಿಯೆಟ್ನಾಮ್; ಡಾ. ಜಿ.ಪಿ. ಕುಸುಮ ಅವರ ಜೀವನದಲೊಮ್ಮೆ ದಕ್ಷಿಣ ಭಾರತದ ತಾಣಗಳಿಗೆ ಭೇಟಿಯಾಗಿ; ಅಮಿತಾ ಭಾಗವತ್ ಅವರ – ಬಾಯ್ತೆರದ ಸಿಂಹದ ಲಾಂಛನದ ಸಿಂಗಾಪುರ; ಸುಜಾತಾ ಶೆಟ್ಟಿಯವರ – ಚೈನಾ ಅನುಭವ; ಸರಿತಾ ನಾಯಕ್ ಅವರ – ಅಸ್ಸಾಂ, ಮೇಘಾಲಯ ಮತ್ತು ಅರುಣಾಚಲ ಪ್ರದೇಶ; ಲತಾ ಸಂತೋಷ ಶೆಟ್ಟಿಯವರ – ನಿಜಾಮರ ನಗರಿಗೊಂದು ಸುತ್ತು ; ಡಾ. ರಜನಿ ಪೈಯವರ – ಮರುಭೂಮಿಯಲ್ಲೊಂದು ಸ್ವರ್ಗ (ದುಬಾಯಿ) ; ವಿದ್ಯಾ ದೇಶಪಾಂಡೆಯವರ – ದೇವಭೂಮಿ ಹಿಮಾಚಲ; ಮುಂತಾದವುಗಳು ಪ್ರವಾಸದ ಸಮಗ್ರ ಅನುಭವ ಮತ್ತು ಲವಲವಿಕೆಯ ನಿರೂಪಣೆಯಿಂದ ಓದುಗರಲ್ಲಿ ಆಸಕ್ತಿ ಹುಟ್ಟಿಸುವ ಗಮನ ಸೆಳೆಯುವ ಕಥನಗಳು.
ಇಲ್ಲಿನ ಹೆಚ್ಚಿನ ಲೇಖಕಿಯರು ನಿಸ್ಸಂದೇಹವಾಗಿ ಪ್ರವಾಸ ಕಥನ ಬರವಣಿಗೆಯನ್ನು ಗಂಭೀರವಾಗಿ ಪರಿಗಣಿಸಿದವರಾಗಿದ್ದಾರೆ ಎನ್ನುವುದು ಖುಷಿ ಕೊಡುವ ವಿಷಯವಾಗಿದೆ. ಭಿನ್ನ ಭಿನ್ನ ಪ್ರದೇಶಗಳ ಕುರಿತಾದ ವಿಭಿನ್ನ ಕಥನಗಳು 365 ಸುಧೀರ್ಘ ಪುಟಗಳಲ್ಲಿ ದಾಖಲಾಗಿವೆ. ಇಲ್ಲಿನ ಕಥನಗಳಲ್ಲಿ ಮೇಲ್ನೋಟಕ್ಕೆ ಗಮನಕ್ಕೆ ಬರುವಂತಹದ್ದು ಎಲ್ಲಾ ಲೇಖಕಿಯರ ಬರವಣಿಗೆ ಕುರಿತಾದ ಪ್ರೀತಿ ಮತ್ತು ಉತ್ಸಾಹ. ಹೊಸಬರ ಬರಹಗಳಲ್ಲೂ ತೀರಾ ಅಗತ್ಯವಾದ ಆತ್ಮವಿಶ್ವಾಸವನ್ನು ಗಮನಿಸಬಹುದು.
ಡಾ. ಸುನೀತಾ ಶೆಟ್ಟಿಯವರು ಅಂಡಮಾನ್ ನ ಕಾಳಾಪಾಣೀ ಬಗ್ಗೆ ಬರೆಯುತ್ತಾ, “ ಅಲ್ಲಿನ ಗಾಂಧಿ ಪಾರ್ಕಿನಲ್ಲಿ ಗಾಂಧೀಜಿ ತಲೆ ತಗ್ಗಿಸಿ ಓದುವ ಪ್ರತಿಮೆ ಇದೆ. ಮುಂಬಾಗದ ಎತ್ತರ ಪ್ರದೇಶದಲ್ಲಿ ಸೆಲ್ಯೂಲರ್ ಜೈಲನ್ನು ನೋಡಿ ನಾಚಿ ಗಾಂಧೀಜಿ ತಲೆ ತಗ್ಗಿಸಿದ್ದಾರೆಂದು ನಾನು ಭಾವಿಸಿದೆ…, ಅಲ್ಲಿನ ಹವಳದ ದ್ವೀಪಕ್ಕೆ ಹೋಗಿ ಕಡಲಿನಲ್ಲಿ ಮುಳುಗಿ ಅದ್ಭುತ ಜಲಾಚರಗಳನ್ನು ನೋಡಿ ಧನ್ಯನಾದೆ ಎನ್ನುತ್ತಾರೆ. ತೊಂಬತ್ತರ ವಯಸ್ಸಲ್ಲೂ ತರುಣಿಯರನ್ನು ನಾಚಿಸುವಂತಹ ಲವಲವಿಕೆ ಜೀವನ ಪ್ರೀತಿಗೆ ಅವರೇ ಸಾಟಿ ಎನ್ನಬಹುದು. ಅವರ ಈ ಕಥನ ಸಂಕಲನದ ಮಾದರಿ ಬರಹವಾಗಿದೆ.
ಸಂಧ್ಯಾ ದೀಕ್ಷಿತ ಅವರು ತಾವು ಹತ್ತು ವರ್ಷದವರಿದ್ದಾಗ ಪರಿವಾರದವರೊಂದಿಗೆ ಕೈಗೊಂಡ (ಅವರ ಅಜ್ಜಿಗೋಸ್ಕರ ತಿರುಪತಿ ಮುಂತಾದ ದೇವಸ್ಥಾನಗಳ ಭೇಟಿ) ಪ್ರವಾಸವನ್ನು ನೆನೆಯುತ್ತ, ಆಗ ಅಂಬಾಸಿಡರ್ ಕಾರಿನಲ್ಲಿ ಹದಿನೈದು ಜನ ಹತ್ತು ದಿನ ಪ್ರಯಾಣಿಸಿದ ಸಾಹಸ ಮತ್ತು ಆಗ ಅದು ಈಗಿನ ಯಾವುದೇ ವಿಮಾನ ಯಾನಕ್ಕಿಂತಲೂ ಮಿಗಿಲಾದುದು ಎನ್ನುತ್ತ, ಪ್ರಥಮ ಪ್ರವಾಸ ಇದೆಯಲ್ಲ ಅದು ಪ್ರಥಮ ಪ್ರೇಮದಷ್ಟೇ ವಿಶೇಷ ಎಂದು ಹೇಳುವ ಪ್ರಾಮಾಣಿಕತೆ ಮೆಚ್ಚುವಂತಾಹದ್ದು.
ಸುಶೀಲಾ ಅಮೀನ್ ಅವರು ಸಾಗರದಾಚೆಯ ಐದು ದಿನಗಳು… ಬ್ಯಾಂಕಾಕ್ ನ ಪಟ್ಟಾಯದಲ್ಲಿ ತಂಡದವರ ಜೊತೆ ಬಾಡಿ ಮಸಾಜ್ ಮಾಡಿಕೊಂಡ ಆನಂದಾನುಭವವನ್ನು ಬರೆಯುತ್ತ, ಕೊನೆಯ ದಿನ ತಡ ರಾತ್ರಿತನಕ ಬ್ಯಾಂಕಾಕ್ ಬೀದಿಗಳಲ್ಲಿ ಅಲೆದಾಡಲು ಹೊರಟ ಗಂಡಂದಿರ ಜೊತೆ ಹೆಂಡತಿಯರೂ ಹೊರಡಲು ಮುಖ್ಯ ಕಾರಣ ಅಲ್ಲಿನ ನೈಟ್ ಲೈಫ್ ವೀಕ್ಷಿಸಲು ಅಲ್ಲ. ಬದಲಾಗಿ ತಮ್ಮ ಗಂಡಂದಿರೆಲ್ಲಿ ಅಲ್ಲಿನ ಸುಂದರ ಹುಡುಗಿಯರ ಬಲೆಗೆ ಬೀಳುತ್ತಾರೋ ಅನ್ನುವ ಭಯದಿಂದ ! ಎಂದು ಮನದ ಮಾತನ್ನು ಹೇಳಿಕೊಂಡಿರುವುದನ್ನು ಓದುವಾಗ, ಆ ಗಂಡಂದಿರ ಬಗ್ಗೆ ‘ಅಯ್ಯೋ ಪಾಪ!’ ಅನ್ನಿಸದಿರದು.
ಲೇಖಕಿ ಸುಜಾತ ಶೆಟ್ಟಿಯವರಿಗೆ ಮೊದಲ ಬಾರಿ ಚೀನಾ ದೇಶಕ್ಕೆ ಹೋಗುವ ಸಂದರ್ಭ ಬಂದಾಗ , ಏನು ಚೈನಾ ? ಬೇಡಾಪ್ಪಾ ಅಂತ ಒಲ್ಲದ ಮನಸ್ಸಿನಿಂದ ಹೋದರೆ ಹಿಂದಿರುಗಿ ಬಂದು, ‘ಈ ಪ್ರವಾಸ ಜೀವನಾನುಭವ ಮತ್ತು ಜೀವನ ದೃಷ್ಟಿಯನ್ನು ಬದಲಾಯಿಸುವುದಂತೂ ಸತ್ಯ’ ಅಂತ ಒಪ್ಪಿಕೊಳ್ಳುತ್ತಾರೆ. ಹೀಗೆಯೇ ಅಮಿತಾ ಭಾಗವತ್ ಸಹ ಈ ಹಿಂದೆ ಯೂರೋಪ್, ಅಮೇರಿಕಾ ಮುಂತಾದ ದೇಶಗಳ ಪ್ರವಾಸ ಮಾಡಿದ ತಮಗೆ ಪುಟ್ಟ ದೇಶ ಸಿಂಗಾಪೂರ್ ಅಷ್ಟೇನು ಸೆಳೆಯಲಿಲ್ಲ. ಆದರೆ ಸಿಂಗಾಪೂರ್ ಸುತ್ತಾಡಿ ಬಂದ ಮೇಲೆ ಅಲ್ಲಿನ ಶಿಸ್ತುಬದ್ಧ ವ್ಯವಸ್ಥೆ, ಅಚ್ಚುಕಟ್ಟುತನಕ್ಕೆ ಲೇಖಕಿ ಮಾರು ಹೋಗುತ್ತಾರೆ.
ಸುರೇಶ್ ನಾಯಕ್ ಅವರು ನಾರ್ಥ್ ಈಸ್ಟ್ ನಲ್ಲಿರುವ ಪ್ರಸಿದ್ಧ ಕಾಮಾಕ್ಯ ದೇವಸ್ಥಾನದ ಕುರಿತು ಬರೆಯುತ್ತ, ‘ದೇವಿಯ ವಿಗ್ರಹ ನೋಡಲು ಭಯಾನಕವಾಗಿದೆ. ಸ್ತ್ರೀಯರು ಋತುಮತಿಯಾಗುವಂತೆ ಈ ದೇವಸ್ಥಾನ ನಾಲ್ಕು ದಿನ ಮುಚ್ಚಲ್ಪಟ್ಟು ನಂತರ ಇಡೀ ದೇವಸ್ಥಾನ ತಳದಿಂದ ಶಿಖರ ತನಕ ತೊಳೆದ ನಂತರವೇ ಭಕ್ತರಿಗೆ ದರ್ಶನಕ್ಕೆ ಅನುವು ಮಾಡಿಕೊಡುವರು’ ಎಂಬ ಕುತೂಹಲಕಾರಿ ವಾಡಿಕೆಯನ್ನು ಬರೆದಿರುವರು.
ಪ್ರವಾಸದ ಕನಸು ನನಸಾಯಿತು ಅಂತ ಬರೆಯುತ್ತಾ ಅನಸೂಯ ಯಾಳಗಿ ಅವರು ತಾವು ಹಿಂದೆ ಕೈಗೊಂಡ ಪ್ರವಾಸಗಳನ್ನೆಲ್ಲ ಮೆಲುಕು ಹಾಕುತ್ತಾರೆ ಮತ್ತು ದೂರದ ಊರುಗಳಿಗೆ ಪ್ರವಾಸ ಹೋಗುವುದಾದರೆ ವಯಸ್ಸು ಮೀರುವ ಮೊದಲೇ ಅಂದರೆ 50-60 ವರ್ಷದೊಳಗೇ ಹೋಗಿ ಬನ್ನಿ ಎಂದು ಕಿವಿಮಾತು ಹೇಳುತ್ತಾರೆ. ಹೌದಾದರೂ, ಪ್ರವಾಸಕ್ಕೆ ವಯಸ್ಸಿಗಿಂತಲೂ ಆರೋಗ್ಯ ಭಾಗ್ಯ ಮುಖ್ಯವಾಗುತ್ತದೆ.
ಬಹಳಷ್ಟು ಲೇಖಕಿಯರು ಧಾರ್ಮಿಕ ಕ್ಷೇತ್ರಗಳ ಭೇಟಿಯನ್ನು ಕುರಿತು ಬರೆದಂತೆ, ಅನಿತಾ ತಾಕೊಡೆ ತನ್ನೂರಿನ ಸುತ್ತಮುತ್ತಲಿನ ಸ್ಥಳ ವಿಶೇಷಗಳನ್ನು ದಾಖಲಿಸಿದ್ದಾರೆ. ಹಾಗೆಯೇ ದೀಪಾ ಶೆಟ್ಟಿಯವರು ತಮ್ಮೂರಿನ ಪ್ರಸಿದ್ಧ ಶೃಂಗೇರಿ ಶಾರದಾಂಭೆಯ ಮಹಿಮೆ ಬಗ್ಗೆ ಬರೆಯುತ್ತಾರೆ. ಈ ಮೊದಲಾದ ಕಥಾನಕಗಳು ಸೊಗಸಾಗಿ ಓದಿಸಿಕೊಂಡು ಹೋಗುತ್ತವಾದರೂ ಇವು ಪ್ರವಾಸದ ಪರೀಧಿಯಾಚೆಗಿನ ಪ್ರಬಂಧ ಬರಹಗಳೆನ್ನಬಹುದೇನೊ.
ಈ ಕೃತಿಯ ಹಿಂದೆ ಪ್ರಧಾನ ಸಂಪಾದಕರಾಗಿ ಲತಾ ಸಂತೋಷ ಶೆಟ್ಟಿ ಮತ್ತು ಹಿರಿಯ ಸಾಹಿತಿ ಶ್ಯಾಮಲಾ ಮಾಧವ, ಸುಶೀಲಾ ದೇವಾಡಿಗ ಮತ್ತು ಸರೋಜ ಅಮಾತಿ ಸಂಪಾದಕೀಯ ಮಂಡಳಿಯಲ್ಲಿರುವ ಇವರೆಲ್ಲರ ಶೃಮ ಬಹಳಷ್ಟಿದೆ. ಮುಂದೆ ಇಲ್ಲಿನ ಒಂದಷ್ಟು ಲೇಖಕಿಯರಿಂದ ಪೂರ್ಣ ಪ್ರಮಾಣದ ಪ್ರವಾಸ ಕಥನ ಕೃತಿಯನ್ನು ನಿರೀಕ್ಷಿಸಬಹುದು; ಬರವಣಿಗೆಗೆ ಹೊಸಬರು ಬರೆಯಬೇಕು. ಇದೇ ಸೃಜನಾ ಸಂಘಟನೆಯ ಆಶಯವೂ ಹೌದು.
(ಗೋಪಾಲ ತ್ರಾಸಿ.)
2 thoughts on “ಸೃಜನಾ – ಕನ್ನಡ ಲೇಖಕಿಯರ ಬಳಗ ಮುಂಬಯಿ – ‘ಪ್ರವಾಸಿಗರ ಅಂತರಂಗ’”
ಪ್ರವಾಸಿಗರ ಅಂತರಂಗ ದ ಸಮೀಕ್ಷೆ ಯನ್ನು ಗೋಪಾಲ ತ್ರಾಸಿ ಯವರು ಸಮತೋಲವಾಗಿ ವಿವರಿಸಿರುವಂತೆ. 46 ಲೇಖಕಿಯರು ಅಂತರಂಗ ಬಿಚ್ಚಿ ಟ್ಟುಕೊಂಡುದುದನ್ನು ವಿಸ್ತೃತವಾಗಿ ಬರೆದಿರುವರು
ಮುಂಬಯಿ ಕನ್ನಡ ಲೇಖಕಿಯರ ಬಳಗದ ವತಿಯಿಂದ ಹೊರಬಂದ ಕೃತಿಯನ್ನು ವರ್ಣಿಸುತ್ತ ಈ ವಸ್ತು ನಿಷ್ಟ ಪುಸ್ತಕ ವೈಶಿಷ್ಟ್ಯವಾದುದೆಂದು ಅಭಿಮಾನ ಪಟ್ಟಿರುವರು. ತ್ರಾಸಿಯವರೇ ಬಳಗದ ಸಂಚಾಲಕಿ ಯಾದ ನಾನು ತಮಗೆ ಅಭಿನಂದಿಸುವೆನು.
ವಂದನೆಗಳು ಪದ್ಮಜಾ ಮೇಡಮ್. ಕನ್ನಡ ಲೇಖಕಿಯರನ್ನು ಬರೆಯಿಸಿ ಬೆಳೆಸುವ ಸೃಜನಾ ಬಳಗದ ಕಾಳಜಿ ಸ್ತುತ್ಯಾರ್ಹವೇ. ಈ ಪುಸ್ತಕ ಅದಕ್ಕೊಂದು ನಿದರ್ಶನ.