ಒಬ್ಬ ಕರ್ಮಠ ಸನ್ಯಾಸಿಯು ದೇಶಾಂತರ ಸುತ್ತುತ್ತ ಒಂದು ಊರಿಗೆ ಬಂದನು. ಆಗ ಭರ್ತಿ ಮಳೆಗಾಲ. ಹಗಲಿರುಳೆನ್ನದೆ ಧಾರಾಕಾರ ಮಳೆ ಸುರಿಯುತ್ತಿತ್ತು. ಅಲ್ಲಿ ಒಬ್ಬ ಹಾರವನನ್ನು ಭೇಟಿಯಾಗಿ “ಸ್ವಾಮಿ ,ಬ್ರಾಹ್ಮಣರೇ ನಾನು ವ್ರತಸ್ಥನಾಗಿದ್ದೇನೆ, ನನ್ನ ವ್ರತವು ಮುಗಿಯ ಬೇಕಾದರೆ ಕೆಲವು ದಿವಸಗಳು ಆಗಬಹುದು. ಅಲ್ಲಿಯವರೆಗೆ ತಮ್ಮ ಮನೆಯಲ್ಲಿ ಉಳಿದುಕೊಳ್ಳಲು ಅನುವು ಮಾಡಿ ಕೊಡುವುದಾದರೆ ಒಳ್ಳೆಯದು “ಎಂದು ವಿನಂತಿಸಿದನು. ಆಗ ಬ್ರಾಹ್ಮಣನು ಒಂದೇ ಮಾತಿಗೆ ಒಪ್ಪಿಕೊಂಡನು. ಮತ್ತು ಸನ್ಯಾಸಿಗೆ ಬೇಕಾದ ಅನುಕೂಲತೆಗಳೆಲ್ಲ ಮಾಡಿಕೊಟ್ಟನು . ವ್ರತಾಚರಣೆಗಳೆಲ್ಲ ನಿಶ್ಚಿಂತೆಯಿಂದ ಸಾಗಿದವು. ಸನ್ಯಾಸಿಗೆ ಬಹಳ ಸಂತೋಷವಾಯಿತು. ಪ್ರತಿನಿತ್ಯ ವ್ರತದ ಕಾರ್ಯಗಳಾದ ದೇವತಾ ಪೂಜೆ, ಅನ್ನದಾನ ಮೊದಲಾದವುಗಳಿಂದ ಆ ಮನೆಯಲ್ಲಿದ್ದು ಕಾಲ ಕಳೆಯುತ್ತಿದ್ದನು.
ಎರಡು ತಿಂಗಳ ನಂತರ ಒಂದು ದಿನ ಮುಂಜಾನೆ ಹಾರವನು ಅವನ ಹೆಂಡತಿಯು ಪರಸ್ಪರ ಮಾತನಾಡುತ್ತಿದ್ದರು. ಮುಂದಿನ ಕೆಲವು ದಿವಸಗಳಲ್ಲಿ ನವರಾತ್ರಿ ಆರಂಭವಾಗುವುದು ಆಗ ಪಕ್ಕದ ಹಳ್ಳಿಗೆ ಹೋದರೆ ವಿಶೇಷವಾದ ದಾನ ಧರ್ಮಗಳು ದಕ್ಷಿಣೆಗಳು ನನಗೆ ದೊರಕುತ್ತವೆ. ಅದಕ್ಕಾಗಿ ನಾನು ಅಲ್ಲಿಗೆ ಹೋಗಬೇಕಾಗಿದೆ ಎಂದು ಹಾರವ ಹೇಳಿದನು. “ನೀನು ಮಾತ್ರ ಮನೆಯಲ್ಲಿ ಒಬ್ಬ ಬ್ರಾಹ್ಮಣನನ್ನು ಕರೆದು ಅವನಿಗೆ ಊಟಕ್ಕೆ ಬಡಿಸಿ ದಾನ-ದಕ್ಷಣೆ ಕೊಟ್ಟು ಕಳುಹಿಸು” ಎಂದು ಹೇಳಿದನು. ಗಂಡನ ಮಾತನ್ನು ಕೇಳಿದ ಕೂಡಲೇ ದಾರಿದ್ರ ದಿಂದ ಕಂಗೆಟ್ಟ ಆ ಬ್ರಾಹ್ಮಣನ ಹೆಂಡತಿ” ನನ್ನ ಉದರ ನಿರ್ವಹಣೆ ಕಷ್ಟವಾಗುತ್ತಿರುವಾಗ ಇದೆಲ್ಲಾ ಹೇಗೆ ಸಾಧ್ಯವಾಗುತ್ತದೆ. ಮದುವೆಯಾಗಿ ಬಂದಾಗಿನಿಂದ ಕಷ್ಟಗಳನ್ನೇ ಅನುಭವಿಸುತ್ತಿರುವೆ ” ಎಂದು ತನ್ನ ಅಳಲನ್ನು ಕಟುವಾಗಿಯೇ ತೋಡಿಕೊಂಡಳು.ತುಸು ಗಟ್ಟಿ ದ್ವನಿಯಲ್ಲಿಯೇ ಮಾತಾಡಿದಳು.
ಬ್ರಾಹ್ಮಣನು ಶಾಂತ ಮನಸ್ಸಿನವನಾದ್ದರಿಂದಲೇ ಹೆಂಡತಿಯ ಮಾತುಗಳನ್ನು ಕೇಳಿ ಸುಮ್ಮನಿದ್ದನು. ಮತ್ತೊಬ್ಬನಾಗಿದ್ದರೆ ಮನಸ್ತಾಪಕ್ಕೆ , ಜಗಳಕ್ಕೆ ಕಾರಣವಾಗುತ್ತಿತ್ತು .ಅವಳ ಮಾತಿಗೆ ಸ್ವಲ್ಪವೂ ಕೋಪವನ್ನು ತಾಳದೆ “ಸತಿಯೇ, ಇಂತಹ ಮಾತುಗಳನ್ನ ಆಡಬಾರದು , ಎಲ್ಲರ ದೋಸೆಗಳು ತೂತಾಗಿಯೇ ಇರುವವು. ಒಬ್ಬನದು ಒಂದು ರೀತಿಯಾದಗಿದ್ದರೆ, ಮತ್ತೊಬ್ಬನದು ಇನ್ನೊಂದು ರೀತಿ ಯಾವ ಪ್ರಕಾರದ ಕುಂದು ಕೊರತೆಗಳಿಲ್ಲದವರು ಎಲ್ಲಿದ್ದಾರೆ ? ಅಂಥವರನ್ನು ದೇವರು ಹುಟ್ಟಿಸಿಯೇ ಇಲ್ಲ . ಹೀಗಿದ್ದುದರಿಂದಲೇ ದೇವರ ಮಹಿಮೆ ಇಂದಿಗೂ ತಡೆದು ನಿಂತಿದೆ. ಮನುಷ್ಯ ಎಂತಹ ದರಿದ್ರನಿದ್ದರೂ ಇದ್ದುದ್ದರಲ್ಲಿಯೇ ತನ್ನ ಕೈಲಾದಷ್ಟು ದಾನ ಧರ್ಮ ಪರೋಪಕಾರಗಳನ್ನು ಮಾಡುತ್ತಿರಬೇಕು ಶ್ರೀಮಂತನ ತುಲಾಭಾರ ದಾನಕ್ಕು ಬಡವನ ಒಂದು ಕಾಸಿನ ದಾನಕ್ಕು ದೇವರಲ್ಲಿ ಸಮಾನವಾದ ಬೆಲೆ ಇದೆ. ಅದರಲ್ಲಿ ಹೆಚ್ಚು ಕಡಿಮೆ ಇಲ್ಲ ಅಂತಯೇ ಯಥಾ ಶಕ್ತಿ ದಾನ ಧರ್ಮದಿಗಳನ್ನು ಮಾಡಬೇಕು ಎಂದು ಹಿರಿಯರು ಹೇಳುತ್ತಾರೆ ಗಂಡನ ಮಾತುಗಳನ್ನು ಕೇಳುತ್ತಾ ಸಾಧ್ವಿಮಣಿಯ ಮನಸ್ಸು ಪರಿವರ್ತನೆಯಾಗಿ ಜ್ಞಾನೋದಯವಾದಂತೆ ಕಂಡುಬಂದಿತು.
ಮನುಷ್ಯನು ಪ್ರಾಪಂಚಿಕ ಸುಖ ದುಃಖಗಳ ಬಗ್ಗೆ ಬಹಳ ಹಚ್ಚಿಕೊಳ್ಳಬಾರದು. ಹಾಗೆಯೇ ಪ್ರಪಂಚವನ್ನು ತೀರ ಅಲಕ್ಷಿಸಲೂ ಬಾರದು, ಎಂಬ ನೀತಿ ಇದರಲ್ಲಡಗಿದೆ. ಇದಕ್ಕಾಗಿ ಇಹ- ಪರ ಎರಡಕ್ಕೂ ಸಾಧನೆಯಾಗುವಂತಹ ‘ದಾನ’ ವನ್ನು ಯಥಾಶಕ್ತಿ ಮಾಡುವದಿದೆ. ಹಾಗೂ ಸತ್ಪಾತ್ರರಿಗೆ ಸಲ್ಲಿಸುವದಿದೆ. ಇಲ್ಲಿ ಬಹುಮುಖ್ಯವಾಗಿ ಕಾಣಿಸುವುದು ಭಾರತೀಯರ ಜೀವನ ಪ್ರೀತಿ ಎಂಬ ತತ್ವ . ಬಹಳ ಹಿಂದಿನಿಂದ ಋಗ್ವೇದದ ಸೂಕ್ತಗಳಲ್ಲಿ ಹೇಳಿರುವಂತೆ ” ದಾನ ಮಾಡದವನು ಅನ್ನಕ್ಕಾಗಿ ಹಂಬಲಿಸುವುದು ಅವನ ನೈತಿಕ ತಪ್ಪು , ತಾನು ತಿನ್ನುವ ಆಹಾರಕ್ಕೆ ತಾನೇ ಹೊಣೆಯಾಗಿರುವದರ ಜೊತೆಗೆ ಬೇರೆಯವರಿಗೂ ಅನ್ನ ನೀಡುವಂತಾದರೆ ಅದು ಮಹತ್ವದ್ದಾಗುತ್ತದೆ .” ಭಾರತೀಯ ಸಂಪ್ರದಾಯಿಕ ,ಸಂಸ್ಕೃತಿಕ ಸದ್ಗುಣಗಳಲ್ಲಿ ದಾನವೂ ಒಂದು. ದಾನಗಳಲ್ಲಿ ಪ್ರಮುಖವಾಗಿ ನಾಲ್ಕು ವಿಧಗಳು. ಶಾಶ್ವತದಾನ, ನೈಮಿತ್ತಿಕ ದಾನ, ಕಾಮ್ಯಕದಾನ ಮತ್ತು ವಿಮಲದಾನ.ಇವೆಲ್ಲ ಆಧ್ಯಾತ್ಮಿಕ ಹೊಳಹನ್ನು ಹೊಂದಿವೆ, ಮತ್ತು ಅವರವರ ನಂಬಿಕೆಯನ್ನೂ ಅವಲಂಬಿಸಿವೆ. ಚತುರೋಪಾಯಗಳಲ್ಲಿಯೂ ಕೂಡ ದಾನ ಮಹತ್ವದ್ದಾಗಿದೆ. ಸಾಮ, ದಾನ ,ಭೇದ ,ದಂಡ ಎಂಬ ನಾಲ್ಕು ಬಗೆಗಳಿವೆ.
ಮೊದಲಿನಿಂದ ರೂಢಿಯಲ್ಲಿರುವ ಅನ್ನದಾನ,ವಿದ್ಯಾದಾನ, ಭೂದಾನ,ಗೋದಾನ ಹೀಗೆ ಅನೇಕ ಪ್ರಕಾರಗಳ ದಾನಗಳಿವೆ. ಅನ್ನದಾನ ಮತ್ತು ವಿದ್ಯಾದಾನಗಳನ್ನು ಶ್ರೇಷ್ಠ ದಾನಗಳೆಂದು ಹಿಂದಿನಿಂದಲೂ ಪ್ರತೀತಿಯಿದೆ. ಈಗಲೂ ಇಂಥ ದಾನಗಳನ್ನು ಶ್ರದ್ಧಾ ಭಕ್ತಿಯಿಂದ ಮಾಡುವವರು ಅನೇಕರಿದ್ದಾರೆ. ದಾನಶೂರ ಕರ್ಣ , ಬಲಿ ಚಕ್ರವರ್ತಿಯ ಹಾಗೂ ರಂತಿದೇವನ ಕುರಿತಾದ ಕಥೆ ಎಲ್ಲರಿಗೂ ತಿಳಿದಿದೆ. ‘ದಾನ’ ಎಂದಾಗ ಇವರೆಲ್ಲರ ಹೆಸರು ಮಂಚೂಣಿಯಲ್ಲಿ ಬರುವಂಥವು.
ಗೌತಮಬುದ್ಧ, ವಿವೇಕಾನಂದರೂ ಕೂಡ ಈ ಕುರಿತಾಗಿ ಹೇಳಿದ್ದಾರೆ. ” ದಾನದ ಮಹತ್ವ ನಿಮಗೆ ನಿಜಕ್ಕೂ ಗೊತ್ತಿದ್ದರೂ
ನಿಮ್ಮ ಯಾವ ಊಟವನ್ನು ನೀವು ಹಂಚಿಕೊಳ್ಳದೇ ಇರುವುದಿಲ್ಲ ” ಎಂಬ ಗೌತಮ ಬುದ್ಧನ ಈ ಮೇಲಿನ ಮಾತುಗಳು ಅನ್ನದಾನದ ಮಹತ್ವವನ್ನು ಹೇಳುತ್ತದೆ. ಸಿರಿ- ಸಂಪತ್ತನ್ನು ಕಸಿದುಕೊಳ್ಳಬಹುದು. ಆದರೆ ಕಲಿತ ವಿದ್ಯೆಯನ್ನು ಯಾರೂ ಕಸಿಯಲಾರರು. ಆದ್ದರಿಂದ ವಿದ್ಯಾದಾನವೂ ಕೂಡ ಅತ್ಯಂತ ಉತ್ಕೃಷ್ಟವಾದ ದಾನವಾಗಿದೆ.
ನಮಗೆಲ್ಲ ಗೊತ್ತಿರುವ ರಕ್ತ ದಾನ, ಅಂಗಾಗದಾನಗಳು ಈಗ ಪ್ರಾಮುಖ್ಯತೆಯನ್ನು ಪಡೆದಿವೆ. ಜೀವಂತವಾಗಿರುವಾಗ ಅಥವಾ ಜೀವಿತಾವಧಿಯನಂತರವೂ ಈ ದಾನಗಳನ್ನು ಮಾಡಬಹುದು. ರಕ್ತ ದಾನ ಮಾಡುವದು ಆರೋಗ್ಯಕ್ಕೆ ಒಳ್ಳೆಯದು ಎನ್ನುವದು ದೃಢಪಟ್ಟ ವಿಷಯವಾಗಿದೆ. ಇದು ಕೆಲವರಿಗೆ, ಕೆಲವು ಸಂದರ್ಭದಲ್ಲಿ ಧನ ಗಳಿಕೆಯ ಮಾರ್ಗವೂ ಹೌದು. ಆಧುನಿಕ ತಂತ್ರಜ್ಞಾನದಿಂದ ವೀರ್ಯವನ್ನು ದಾನ ಮಾಡುತ್ತಾರೆ. ಆದರೆ ಇದು ಬಹುತೇಕ ಹಣಸಂಪಾದನೆಗಾಗಿ ಇರಬಹುದು. ಕೆಲವೊಮ್ಮೆ ಅನಾರೋಗ್ಯ ಪಿಡಿತರಿಗೆ ಸಹಾಯವೂ ಸಿಗಬಹುದು. ( ಈ ಹಿನ್ನೆಲೆಯಿಂದ ಮೂಡಿಬಂದ ಚಿತ್ರ ‘ವಿಕ್ಕಿ ಡೋನರ್ ‘ನೆನಪಿಸಿಕೊಳ್ಳಬಹುದು.)
ಇತ್ತೀಚೆಗೆ ” World Give Day ” ಎಂದು ಪ್ರತಿವರ್ಷ ಮೇ 4 ಕ್ಕೆ ಆಚರಿಸಲಾಗುತ್ತದೆ. ಅಂದರೆ ಜಾಗತಿಕ ಮಟ್ಟದಲ್ಲಿಯೂ ದಾನದ ಮಹತ್ವದ ಅರಿವು ಮೂಡಿದೆ. ಆದರೆ ಭಾರತೀಯ ಸಂಸ್ಕೃತಿಯ ಹಿನ್ನೆಲೆಯಲ್ಲಿ ” ದಾನ” ಎಂದರೆ ಕೊಡುವುದು ,ನೀಡುವುದು. ಬಲಗೈಯಿಂದ ಕೊಟ್ಟದ್ದು ಎಡಗೈಗೂ ತಿಳಿಯಬಾರದೆಂದು ಹೇಳುವ ಹಿರಿಯರ ಮಾತೇ ಇದೆ. ದಾನ ಮಾಡಿದ ಮೇಲೆ ಬಡಾಯಿ ಕೊಚ್ಚಿಕೊಳ್ಳಬಾರದೆಂಬ ಸಂದೇಶ ಇದರಲ್ಲಿದೆ.
ಹಾಗಾಗಿ ದಾನಕ್ಕೆ ಪರವಾಗಿ ಹಣ ಪಡೆಯುವದಂತೂ ಸರ್ವಥಾ ದಾನವೆನಿಸಿಕೊಳ್ಳಲಾರದು. ಹಣ ಪಡೆಯುವದಾದರೆ ಅದೊಂದು ಒಪ್ಪಂದ ಅಥವಾ ಕರಾರು. ಅದು “ದಾನ” ಎಂದಾಗಲಾರದು. ಕೆಲವೊಮ್ಮೆ ಗ್ರಹಣ ಕಾಲದ ಗ್ರಹಗತಿಗಳ ಕಂಟಕಗಳನ್ನು ಕಳೆಯಲು ಕೂಡ ದಾನ ಮಾಡುತ್ತಾರೆ. ಇದು ಪ್ರತಿಫಲಾಪೇಕ್ಷೆಯನ್ನು ಬಯಸಿ ಮಾಡುವಂತಹ ದಾನವಾಗುತ್ತದೆ. ಸುಮಾರು ಎಂಟುಸಾವಿರ ವರ್ಷಗಳ ಹಿಂದೆಯೆ ವೇದಕಾಲದಿಂದ ಋಷಿಗಳು ದಾನ ಆಚರಿಸುತ್ತ ಬಂದಿದ್ದಾರೆ. ಮುಂದೆ ಕನ್ನಡದ ಶಾಸನಗಳಲ್ಲಿಯೂ ಕೆಲವು ರಾಜರು ದಾನವಾಗಿ ನೀಡಿದ ಉಲ್ಲೇಖವಿದೆ. ಪುರಾಣಗಳಲ್ಲಿ, ಮಹಾಕಾವ್ಯಗಳಲ್ಲಿ ,ಭಗವದ್ಗೀತೆಯಲ್ಲಿ ಅಷ್ಟೇಅಲ್ಲದೆ ವಚನಸಾಹಿತ್ಯ, ದಾಸ ಸಾಹಿತ್ಯ ದಲ್ಲಿ ದಾನದ ಮಹತ್ವವವನ್ನು ಢಾಳಾಗಿ ಕಾಣಬಹುದು.
ಒಟ್ಟಿನಲ್ಲಿ ಹಿಂದೆ ಇಹ-ಪರ ಗಳೆರಡರ ಸಾಧನೆಗೆ ದಾನ ಅವಶ್ಯಕ ಎಂಬ ಸತ್ಯದರ್ಶನವನ್ನು ಹೊಂದಿದ್ದರು. ಆಧುನಿಕತೆಯ ಪ್ರಜ್ಞಾಪರಿಸರದಲ್ಲಿ ವ್ಯಕ್ತಿಗತವಾಗಿ ಅವರವರ ಅಭಿಪ್ರಾಯಗಳು ಅವರಿಗೆ ಮುಖ್ಯವಾಗುತ್ತವೆ. ಹಾಗಾಗಿ ‘ದಾನ’ ವನ್ನು ದೈವಿಕ ಹಾಗೂ ಆಧ್ಯಾತ್ಮಿಕ ಪರಿಪ್ರೇಕ್ಷೆಗಳ ಹೊರತಾಗಿಯೂ ನೋಡಬಹುದಾಗಿದೆ. ಜನರು ಕೆಲವು ದಾನಗಳಿಂದ ಹಣದ ಕೊರತೆಯನ್ನೂ ನೀಗಿಸಿ ಕೊಳ್ಳುತ್ತಾರೆನ್ನುವುದು ಸುಳ್ಳಲ್ಲ. ಏನೇ ಆಗಲಿ , ಯಾವುದೇ ಕೆಲಸವಾಗಲಿ ಅದರಿಂದ ಅನ್ಯರಿಗೆ ನೋವಾಗದೆ , ನಮಗೆ ಸಂತೃಪ್ತಿ ಸಿಕ್ಕರೆ ಸಾಕಲ್ಲವೇ !
4 thoughts on “ನೀತಿ ಪ್ರತೀತಿ -ವಿಭಾ ಪುರೋಹಿತ ಅಂಕಣl ‘ದಾನ’ ವೆಂಬ ಮಹತಿಯ ಸುತ್ತ …..”
ದಾನದ ಮಹತ್ವದ ಬಗ್ಗೆ ಲೇಖನ ಚೆನ್ನಾಗಿದೆ
ಧನ್ಯವಾದಗಳು
ಲೇಖನ ಚೆನ್ನಾಗಿದೆ. ಅಭಿನಂದನೆಗಳು 🌷
ಧನ್ಯವಾದಗಳು