ಕೃತಿ: ಲೋಕಲ್ ಟ್ರೈನ್
ಲೇ: ಅನಿತಾ ಪಿ. ತಾಕೊಡೆ
ಪ್ರ: ಸ್ನೇಹಾ ಎಂಟರ್ ಪ್ರೈಸಸ್ ಬೆಂಗಳೂರು.
ಪು: 240.
ಬೆಲೆ: 240.
ಸೃಜನಶೀಲತೆ ನಿಸರ್ಗದ ಅಪೂರ್ವ ಕೊಡುಗೆ. ಸೂಕ್ಷ್ಮಜೀವಿಯಿಂದ, ಪ್ರಬುದ್ಧ ಮನುಷ್ಯನವರೆಗೆ ಇದು ಎಲ್ಲದರೊಳಗೆ ಹಾಸುಹೊಕ್ಕು. ಜಗತ್ತಿನ ವ್ಯಾಪಾರ, ವ್ಯವಹಾರಗಳೆಲ್ಲವೂ ನಾನಾರೂಪದ ಕ್ರಿಯಾಶೀಲತೆಗಳಿಂದಲೇ ರೂಪುಗೊಳ್ಳುತ್ತವೆ, ಹಸನಾಗಲು ಹಾತೊರೆಯುತ್ತವೆ. ಅಂತೆಯೇ ಓರ್ವ ಕವಿ, ಲೇಖಕರೆಲ್ಲರೂ ಇದೇ ಧೀಶಕ್ತಿಯನ್ನು ವಿಭಿನ್ನ ರೀತಿಯಲ್ಲಿ ದುಡಿಸಿಕೊಂಡು ಸಮಾಜದಲ್ಲಿ ದಾಖಲಾಗಲು ಬಯಸುತ್ತಾರೆ. ಅಂಥ ಸೃಜನದ ಹರಿವನ್ನು ಸೂಕ್ತವಾಗಿ ಒರೆಗೆ ಹಚ್ಚಿದರೆ, ‘ಲೋಕಲ್ ಟ್ರೈನ್’ ನಂಥ ಮನೋಹರ ಬರಹ ಮೂಡಲು ಸಾಧ್ಯವಿದೆ ಎನ್ನುವುದನ್ನು ಅನಿತಾ ಪಿ. ತಾಕೊಡೆಯವರು ನಿರೂಪಿಸಿದ್ದಾರೆ.
ಅನಿತಾರವರು ಈಗಾಗಲೇ ತುಳು, ಕನ್ನಡಭಾಷೆಯಲ್ಲಿ ಮೂರು ಕವನ ಸಂಕಲನ, ಆತ್ಮಕಥನ, ಸಂಪ್ರಬಂಧ, ಕಥಾಸಂಕಲನ, ವ್ಯಕ್ತಿಚಿತ್ರ ಹಾಗೂ ಅಂಕಣ ಬರಹಗಳ ಮೂಲಕ ಸಾಹಿತ್ಯಲೋಕದಲ್ಲಿ ನವೀನ ಛಾಪು ಮೂಡಿಸಿದ್ದಾರೆ. ಲೋಕಲ್ ಟ್ರೈನ್ ಅವರ ಏಳನೇ ಕೃತಿಯಾಗಿ ಪ್ರಯಾಣ ಹೊರಟಿದೆ. ಎಂಟನೇ ಕೃತಿ, ‘ಸುವರ್ಣ ಯುಗ’ ಈಗ್ಗೆ ಕೆಲವು ಕಾಲದ ಹಿಂದಷ್ಟೇ ಲೋಕಾರ್ಪಣೆಗೊಂಡು ವಿಶೇಷ ಮನ್ನಣೆ ಪಡೆದಿದೆ.
ಪ್ರಸಿದ್ಧ ಲೇಖಕರು, ವಿಶ್ರಾಂತ ಪ್ರಾಧ್ಯಾಪಕರಾದ ಡಾ. ತಾಳ್ತಜೆ ವಸಂತ ಕುಮಾರ ಅವರು ಈ ಕೃತಿಯ ಮುನ್ನುಡಿಯಲ್ಲಿ, ‘ಲೋಕಲ್ ಟ್ರೈನ್ ಶೀರ್ಷಿಕೆಯೇ ಒಂದು ರೂಪಕವಾಗಿ ತನ್ನನ್ನು ಸಾರ್ಥಕಗೊಳಿಸಿಕೊಂಡಿದೆ’ ಎಂದಿರುವುದು ಹಾಗೂ ಮುಂಬೈ ಪತ್ರಕರ್ತರು, ಬರಹಗಾರರಾದ ಶ್ರೀ ಲಕ್ಷ್ಮಣ ಕೊಡಸೆಯವರು ತಮ್ಮ ಬೆನ್ನುಡಿಯಲ್ಲಿ, ‘ಮುಂಬೈ ಬದುಕಿನ ವಿಭಿನ್ನ ಚಿತ್ರಣ, ತಮ್ಮ ಕವನಗಳಲ್ಲಿ ಬದುಕಿನ ಸುಂದರ ಗಳಿಗೆಗಳನ್ನು ಅನುಭವಿಸುವ ಸಕಾರಾತ್ಮಕ ದೃಷ್ಟಿ ಮತ್ತು ಕವಿಗೆ ಅಗತ್ಯವಾಗಿ ಬೇಕಾದ ಲಯವನ್ನು ಅನಿತಾ ಅವರು ಈ ಗದ್ಯ ಬರಹದಲ್ಲೂ ಸಮರ್ಥವಾಗಿ ಉಳಿಸಿಕೊಂಡಿದ್ದಾರೆ” ಎಂಬ ಮಾತುಗಳು ಅರ್ಥಪೂರ್ಣ ಒಕ್ಕಣೆಗಳು.
ಇಲ್ಲಿನ, ಮುಂಬೈ ಲೋಕಲ್ ಟ್ರೈನ್‍ನಲ್ಲಿ ಚಲಿಸುತ್ತಿರುವ ಬದುಕು ಎಂಬ ಮೊದಲ ಅಂಕಣದಲ್ಲಿ ಪ್ರಾಧ್ಯಾಪಕರಾದ ಡಾ. ಜಿ. ಎನ್. ಉಪಾಧ್ಯರು, ‘ಅಷ್ಟು ದೂರದ ಪ್ರಯಾಣದಲ್ಲಿ ಬಹಳಷ್ಟು ಸಮಯ ಸಿಗುತ್ತೆ. ಒಂದು ಪುಸ್ತಕವನ್ನೇ ಓದಿ ಮುಗಿಸಬಹುದು!’ ಎಂಬ ಕಿವಿಮಾತನ್ನೇ ಲೇಖಕಿ ಅದೇ ರೈಲು ಪ್ರಯಾಣಿಕರ ಜನಜೀವನವನ್ನು ಓದಲು ಪ್ರಯೋಗಿಸಿದ್ದರ ಫಲವೇ ಇಲ್ಲಿ ಸಮಗ್ರ ಕೃತಿಯಾಗಿ ಮೂಡಿ ಬಂದಿದೆ. ಲೇಖಕಿ ತಾನು, ಲೋಕಲ್ ಟ್ರೈನಿನಲ್ಲಿ ಸಂಚರಿಸಿದಾಗಲೆಲ್ಲ ಜನಸಮುದಾಯದ ಸಮಷ್ಟಿ ಬುದ್ಧಿ, ಮನೋಧರ್ಮಗಳನ್ನು ಈ ಕೃತಿಯ ಮೂಲಕ ದಿಟ್ಟಿಸಿದ ಒಳನೋಟ ವಿಶಿಷ್ಟವಾದುದು. ಈ ಪುಸ್ತಕದಲ್ಲಿ ಒಟ್ಟು ನಲವತ್ತೇಳು ಅಂಕಣಗಳಿವೆ. ಬಹುತೇಕ ಬರಹಗಳು ವಿವಿಧ ಪ್ರಸಿದ್ಧ ಪತ್ರಿಕೆಗಳಲ್ಲಿ ಪ್ರಕಟವಾಗಿ ಓದುಗರ ಮೆಚ್ಚುಗೆ ಗಳಿಸಿದವು. ಹಾಗಾಗಿ ಭಾವನೆಗಳನ್ನು ಬಡಿದೆಬ್ಬಿಸಿ ಮನಸ್ಸಿಗೆ ಮುದ ನೀಡುತ್ತ, ಬದುಕಿನ ನಡೆಯನ್ನೆಚ್ಚರಿಸುತ್ತ ಸಾಗುವ ಕೆಲವು ಲೇಖನಗಳ ವಿಶೇಷತೆಯನ್ನಿಲ್ಲಿ ವಿವರಿಸುವುದು ಸೂಕ್ತವೆನ್ನಿಸುತ್ತದೆ.
‘ನನ್ನ ಮತ್ತು ಲೋಕಲ್ ರೈಲಿನ ಕತೆ ಬೇರೆಯೇ. ಪ್ರತಿ ಸಲವೂ ರೈಲಿನ ಒಳಹೊಕ್ಕೆನೆಂದರೆ ಅಲ್ಲೊಂದು ವಿಭಿನ್ನ ಲೋಕವೇ ತೆರೆದುಕೊಳ್ಳುತ್ತಿತ್ತು. ಹಲವಾರು ಬದುಕುಗಳು ಒಂದೆಡೆ ಸೇರಿದಾಗ, ಎದುರಿನಲ್ಲಿ ನಿಂತು ಅವರನ್ನೆಲ್ಲ ನೋಡುತ್ತಿದ್ದಂತೆಯೇ ಬಹಳಷ್ಟು ಓದಿಬಿಡುತ್ತಿದ್ದೆ’ ಎಂಬ ಲೇಖಕಿಯ ಮಾತುಗಳು ಈ ಕೃತಿಯಲ್ಲಿ ಸುಸ್ಪಷ್ಟವಾಗಿ ಜೀವತಳೆದಿವೆ. ಇಲ್ಲಿನ ಬರಹಗಳು ಲೋಕಲ್ ಟ್ರೈನ್‍ನೊಳಗೆಯೇ ಆರಂಭವಾಗಿ ನಮ್ಮನ್ನೂ ಜೊತೆಗೆ ಕರೆದೊಯ್ಯುತ್ತವೆ. ನಾವು ಅವುಗಳ ಅಂತರಾಳಕ್ಕಿಳಿಯುತ್ತಿದ್ದಂತೆಯೇ ವಿವಿಧ ಭೋಗಿಗಳ ಜನಜೀವನದ ವೈಶಿಷ್ಟ್ಯ ಹೇಗೋ ಹಾಗೆಯೇ ಹೊರ ಜಗತ್ತಿನ ವಿವಿಧ ವಿಚಾರವಸ್ತುಗಳೂ ಇಲ್ಲಿ ಹಳಿಯ ಮೇಲೆ ಲಯಬದ್ಧವಾಗಿ ಚಲಿಸುವುದು ಓದಿಗೆ ಜೀವಂತಿಕೆ ತುಂಬುತ್ತದೆ.
ಮುಂದಿನ ಲೇಖನದಲ್ಲಿ, ‘ಮಹಿಳಾ ಭೋಗಿಗಳಲ್ಲಿ ಕೆಲವೊಮ್ಮೆ ಹೆಂಗೆಳೆಯರ ಜಗಳ, ರಂಪಾಟಗಳನ್ನು ಕಂಡಾಗಲೆಲ್ಲ, ಹೆಣ್ಣು ತ್ಯಾಗಮಯಿ, ಸಹನಾಮೂರ್ತಿ’ ಎಂಬ ಪದಗಳು ಮಹಿಳೆಯರಿಗಿಂತ ಪುರುಷರಿಗೇ ಹೆಚ್ಚು ಅನ್ವಯಿಸಬಹುದು ಅಂತನೂ ಅನಿಸಿಬಿಡುತ್ತದೆ!’ ಎಂಬ ವಿವರವು ಲೇಖಕಿಗೆ ಪುರುಷರ ಮೇಲಿರುವ ಗೌರವವನ್ನು ಬಿಂಬಿಸುತ್ತದೆ. ಯಾರೂ ಬರಲಿ, ಹೋಗಲೀ ಬದುಕು ನಿಲ್ಲುವುದಿಲ್ಲ…! ಎಂಬ ಅಂಕಣದಲ್ಲಿ, ಯುವತಿಯೊಬ್ಬಳ ಪ್ರೇಮಪ್ರಕರಣವು ರೈಲಿನೊಳಗೆಯೇ ಅಂತ್ಯವಾಗುವುದನ್ನು ಕಾಣುವ ಲೇಖಕಿಯು ಆ ಹೆಣ್ಣು ಮಗಳಿಗೆ ಸ್ಪಂದಿಸುವ ರೀತಿ, ಮಾತೃಹೃದಯವನ್ನು ತೆರೆದಿಡುತ್ತದೆ. ಅದರಿಂದ ಗಂಡು, ಹೆಣ್ಣಿನ ಮನಸ್ಥಿತಿಗಳು ಭಿನ್ನ ಭಿನ್ನ. ಅದು ನಿಸರ್ಗ ನಿಯಮ ಕೂಡಾ. ಆದರೂ ಹೆಣ್ಣೊಬ್ಬಳು ಗಂಡನ್ನೂ ಗಂಡೊಬ್ಬ ಹೆಣ್ಣನ್ನೂ ಏಕೆ ಸರ್ವಸ್ವವೆಂದು ಭಾವಿಸುತ್ತಾರೆ ಎನ್ನುವುದು ನಿಗೂಢವೆನಿಸುತ್ತದೆ!
ಮುಂಬೈಗೆ ಹೋದ ಹೊಸಬರು ಲೋಕನ್ ಟ್ರೈನ್‍ಗಳಲ್ಲಿ ನುಗ್ಗುವ ಇಳಿಯುವ ಜನಸಾಗರವನ್ನು ಕಾಣುತ್ತ, ರಪ್ಪನೆ ಮೈನಡುಕವೆದ್ದು, ಅಯ್ಯಬ್ಬಾ, ದೇವರೇ! ಇದೆಲ್ಲ ನಮ್ಮಿಂದ ಸಾಧ್ಯವೇ ಇಲ್ಲಪ್ಪಾ! ಎಂದುದ್ಗರಿಸಿ ಅಂಥ ದೃಶ್ಯಗಳನ್ನೇ ನೋಡಲಿಚ್ಛಿಸದವರೆಷ್ಟೋ ಮಂದಿ. ಆದರೆ ಅಂಥವರೆದುರು ಆ ರೋಚಕ ಜೀವನ ಸಂಚಾರದ ವಿಶೇಷ ವರ್ಣನೆಯನ್ನು ಮಾಡುವ ಲೇಖಕಿಯ ಉತ್ಸಾಹ, ಸಾಹಸಪ್ರವೃತ್ತಿ ಇಲ್ಲಿ ಎದ್ದು ಕಾಣುತ್ತದೆ. ಮಹಿಳೆಯರು ಎಂಥ ದುರ್ಗಮ ಊರು, ರಾಜ್ಯಗಳಲ್ಲಿ ಬಾಳಹೊರಟರೂ ಅವರ ಜೀವನಪ್ರೀತಿ, ಸಂಸ್ಕøತಿ, ಸಂಪ್ರದಾಯ ಅಲ್ಲೆಲ್ಲಾ ಹರಡಿಕೊಳ್ಳುತ್ತದೆ ಎಂಬುದುನ್ನು ಇಲ್ಲಿನ ಬಹುತೇಕ ಬರಹಗಳು ಸ್ಪಷ್ಟಪಡಿಸುತ್ತವೆ.
ಅಪ್ಪಟ ಹಳ್ಳಿಯ ಹೆಣ್ಣೊಬ್ಬಳು ಮದುವೆಯಾಗಿ ಮುಂಬೈ ನಗರಿಗೆ ಹೋಗಿ, ತನ್ನ ಗಂಡ ಮತ್ತು ಅಲ್ಲಿನ ವಾತಾವರಣಕ್ಕೆ ಹೊಂದಿಕೊಂಡು ಗೃಹಲಕ್ಷ್ಮಿಯಾಗಿ ಜೀವನ ರೂಪಿಸುವ ಬಗೆ, ಅವಳ ಅತಿಥಿ ಸತ್ಕಾರ, ಅದರಿಂದ ಆಗಾಗ ಅವಳಲ್ಲುಂಟಾಗುವ ತಲ್ಲಣ; ಅದರ ನಡುವೆಯೂ ತನ್ನ ಸ್ತ್ರೀತ್ವವನ್ನು ಸಾರ್ಥಕಪಡಿಸಿಕೊಳ್ಳುವಲ್ಲಿ ತಲೆದೋರುವ ವೈರುದ್ಧ್ಯಗಳೆಲ್ಲವನ್ನೂ ಮೀರಿ ತನ್ನ ಮನೆ, ಮನಸ್ಸುಗಳನ್ನು ಸಮೃದ್ಧಗೊಳಿಸುವ ಅವಳ ಪ್ರಯತ್ನವು ಒಂದು ಕುಟುಂಬವನ್ನು ಹೇಗೆ ಏಳಿಗೆಯೆಡೆಗೆ ಕೊಂಡೊಯ್ಯಬಲ್ಲದು ಎನ್ನುವುದನ್ನು ‘ನಗರ ಕಲಿಸಿತು ಬದುಕುವ ಕಲೆ’ಲೇಖನವು ಮನೋಜ್ಞವಾಗಿ ಚಿತ್ರಿಸಿದೆ.
ಮುಂದಿನ ಲೇಖನದಲ್ಲಿ, ಲೋಕಲ್ ರೈಲು ಪ್ರಯಾಣದಲ್ಲಿ ವಿವಿಧ ಪರಾಕೀಯ ಭಾಷೆಗಳ ನಡುವೆ ತನ್ನವೇ ಆದ ಕನ್ನಡ, ತುಳು ಭಾಷೆಗಳು ಮಾತಾಡುವಾಗ ಲೇಖಕಿಗೆ ಆಗುವ ಆನಂದದ ಚಿತ್ರಣವಿದೆ. ಲೋಕಲ್ ರೈಲಿಗೂ ಮಾತು ಬರುತ್ತಿದ್ದರೇ! ಎಂಬ ಅಂಕಣದಲ್ಲಿ, ಒಂದು ಇರುವೆಯೂ ನುಸುಳದಂತೆ ಕಿಕ್ಕಿರದ ರೈಲಿನೊಳಗೆ ಹತ್ತುವ ಗಡಿಬಿಡಿಯಲ್ಲಿ ಒಬ್ಬ ತಾಯಿಯ ಕೈತಪ್ಪಿದ ಪುಟ್ಟ ಮಗು ಹೊರಗುಳಿಯುವುದೂ, ಮರುಕ್ಷಣವೇ ಪ್ರಯಾಣಿಕ ವೃಂದವು ಆ ತಾಯಿಗೆ ನೀಡುವ ಸಹಕಾರವೂ ದೈವೀಪ್ರೇಮವನ್ನು ಬಿಂಬಿಸುತ್ತದೆ. ಮುಂದಿನೊಂದು ಬರಹದಲ್ಲಿ ಬರುವ ಲೀನಾ ಬಾಯಿಯ ಕಥೆಯಂತೂ ನಗೆಯ ಹೊನಲು ಹರಿಸುತ್ತದೆ. ಮಹಾನಗರದ ಬೀದಿಯಲ್ಲಿ ವಿಳಾಸವಿಲ್ಲದವರ ಜೊತೆ! ಎಂಬ ಲೇಖನದಲ್ಲಿ ದೊಂಬರಾಟದ ಹುಡುಗಿ ಮತ್ತು ಬೀದಿ ಬದಿ ವ್ಯಾಪಾರಿಗಳ ಕರುಣಾಜನಕ ಸ್ಥಿತಿಯನ್ನು ಲೇಖಕಿ ಆದ್ರ್ರವಾಗಿ ಬಿಚ್ಚಿಟ್ಟಿದ್ದಾರೆ. ಇನ್ನೊಂದು ಲೇಖನದಲ್ಲಿ, ಹುಡುಗಿಯರನ್ನು ಪಠಾಯಿಸಲೆಂದೇ ಬೋಗಿ ಹತ್ತುವ ಗಂಡಸರು. ಅವರು ತಮ್ಮನ್ನು ನೋಡುತ್ತಾರೆಂದು ತಿಳಿದ ಕೂಡಲೇ ಮಹಿಳೆಯರ ಬ್ಯಾಗುಗಳಿಂದ ಹೊರ ಬರುವ ಮಿನಿ ಬ್ಯೂಟಿಪಾರ್ಲರ್ ಕಿಟ್‍ಗಳು! ಎಂಬ ಸ್ವಾರಸ್ಯಕರ ವಿವರಣೆ, ಸ್ತ್ರೀ ಪರುಷರ ಸಹಜ ಆಕರ್ಷಣೆಯ ತುಡಿತವನ್ನು ತೆರೆದಿಡುತ್ತದೆ.
ಡಬ್ಬಾವಾಲಗಳ ಕುರಿತು ವಿಶೇಷ ಮಾಹಿತಿ ತೆರೆದಿಡುವ, ಡಬ್ಬಾವಾಲರ ಅಪೂರ್ವ ಸೇವೆ! ಎಂಬ ಲೇಖನದಲ್ಲಿ ಅವರು ಮುಂಬೈ ನಗರಕ್ಕೆ ಪ್ರಾಣಶಕ್ತಿಯ ಪ್ರತೀಕವಾಗಿ ಚಿತ್ರಿತಗೊಂಡು ವಿಸ್ಮಯ ಮೂಡಿಸುತ್ತಾರೆ. ಬೂಟುಕಾಲಿನ ಸದ್ದು, ಅಪ್ಪೆಮಿಡಿಯನ್ನು ಹುಡುಕುತ್ತ…!, ಬೋಗಿಯೊಳಗಿನ ಮಹಿಳಾ ಜಗತ್ತು, ಬಂಡೆಗಲ್ಲು ಮೆಲ್ಲನುಸುರಿದ ಮಾತು, ಮಾಟುಂಗದ ಸೇತುವೆ ಕನ್ನಡ ಮಾತಾಡುತ್ತದೆ, ಊರವರ ಮನಸ್ಸು ಅಚ್ಚ ಮಲ್ಲಿಗೆ, ಕೋಟಿ ತಾರೆಯರು ಧರೆಗಿಳಿಯುತಲಿಹರು…! ಹೀಗೆ ಎಲ್ಲಾ ಅಂಕಣಗಳು ಮುಂಬೈನಗರದ ಜನಜೀವನದ ಮುಖ್ಯಾಂಶಗಳನ್ನೂ, ಲೋಕಲ್ ಟ್ರೈನಿನ ಸಮಗ್ರ ವಿಷಯವಸ್ತುಗಳನ್ನೂ, ಸ್ತ್ರೀಯರ ವಿವಿಧ ಅಭ್ಯಾಸ, ಹವ್ಯಾಸಗಳನ್ನೂ ಒಳಗೊಂಡು ಓದುಗರ ಮನದ ಕದ ತಟ್ಟುತ್ತ ಸಾಗುತ್ತವೆ. ಒಟ್ಟಾರೆ, ‘ಆಮ್ಚೀ ಮುಂಬೈ’ಯನ್ನು ಇನ್ನಷ್ಟು ಆಪ್ತವಾಗಿಸುವಲ್ಲಿ ಯಶಸ್ವಿಯಾದ ಅನಿತಾ ತಾಕೊಡೆ ಅವರಿಂದ ಇನ್ನಷ್ಟು ನವೀನ ಬರಹಗಳು ಹೊರಹೊಮ್ಮಲಿ ಎಂದು ಆಶಿಸೋಣ.
ಗುರುರಾಜ್ ಸನಿಲ್, ಉಡುಪಿ
******
3 thoughts on “‘ಲೋಕಲ್ ಟ್ರೈನ್’-ಒಂದು ಅವಲೋಕನ”
Very nicely presented Travelling l experience in Local Trains..
By reading you will be instigated to experience TRAIN TRAVEL.
Anitakka,mayanagariya mayajaladalli biddantee local gaadiya akarshane tudita amogavaddaddù
ಒಂದು ಉತ್ತಮ ಮಟ್ಟದ ಅವಲೋಕನ. ಅಭಿನಂದನೆಗಳು ಸನಿಲ್ರವರಿಗೆ ಹಾಗೂ ಲೇಖಕಿ ಅನಿತರವರಿಗೆ 😊👍