ನೀತಿ ಪ್ರತೀತಿ -ವಿಭಾ ಪುರೋಹಿತ ಅಂಕಣl ‘ಸಮನ್ವಯ ಸಾಧನೆ -ಕಾರ್ಯಸಿದ್ಧಿ’

ಒಂದು ಪಟ್ಟಣದೊಳಗೆ ವರ್ಧಮಾನವೆಂಬ ಒಬ್ಬ ವೈಶ್ಯನಿದ್ದನು. ಅವನಲ್ಲಿ ಸಾವಿರಾರು ಮಣ ತೂಕದ ಕಬ್ಬಿಣ ಸಂಗ್ರಹವಿತ್ತು .ಕಾಶಿಯಾತ್ರೆಗೆ ಹೊರಟ ವೈಶ್ಯನು ನನ್ನ ಹತ್ತಿರವಿದ್ದ ಕಬ್ಬಿಣವನ್ನೆಲ್ಲ ಬೇರೊಬ್ಬ ಸಾಹುಕಾರನಿಗೆ ಒಪ್ಪಿಸಿ ಹೊರಟನು . ಕೆಲವು ದಿವಸಗಳಲ್ಲಿ ಕಬ್ಬಿಣಕ್ಕೆ ಮಿತಿಮೀರಿದ ಬೆಲೆಯೂ ಬಂದಿತು . ಆಗ ಸಾಹುಕಾರನು ಕಬ್ಬಿಣವನ್ನೆಲ್ಲ ಮಾರಿ ಹಣ ಸಂಪಾದಿಸಿಕೊಂಡನು. ಕೆಲವು ದಿನಗಳ ನಂತರ ಯಾತ್ರೆಯಿಂದ ವಾಪಸಾದ ವರ್ಧಮಾನನು ಸಾಹುಕಾರನಲ್ಲಿಗೆ ಬಂದನು. ಸಾಹುಕಾರನು ವೈಶ್ಯನನ್ನು ಕುರಿತು ನೀನು ಇಟ್ಟು ಹೋದ ಕಬ್ಬಿಣವನ್ನು ಇಲಿಗಳು ತಿಂದು ಹಾಳು ಮಾಡಿಬಿಟ್ಟವು. ಅದಕ್ಕೆ ನಾನೇನು ಮಾಡಲಿ ಎಂದುನು . ಅವನ ಮಾತನ್ನು ಕೇಳಿ ವೈಶ್ಯನು ಮನಸ್ಸಿನಲ್ಲಿಯೇ ಲೆಕ್ಕಾಚಾರ ಹಾಕಿಕೊಂಡು ಸುಮ್ಮನಾದನು. ಜಾಣತನದಿಂದಲೇ ತನ್ನ ಕಾರ್ಯವನ್ನು ಸಾಧಿಸಬೇಕೆಂದು ಮನಸ್ಸಿನಲ್ಲಿ ನಿರ್ಧರಿಸಿದನು.

ಅವನ ಸಮಾಧಾನದ ರೀತಿಯ ನಡಿಗೆ ನಡತೆಯನ್ನು ನೋಡಿ ಸಾಹುಕಾರನಿಗೆ ಕಬ್ಬಿಣದ ಹಣವು ತನಗೆ ದಕ್ಕಿತೆಂದು ಅಂದುಕೊಂಡನು. ವರ್ಧಮಾನನು ಎಂದಿನಂತೆ ಸಾಹುಕಾರನೊಡನೆ ಸ್ನೇಹದಿಂದಲೇ ಇರುತ್ತಿದ್ದನು. ಹೀಗೆ ಎಷ್ಟೋ ದಿನಗಳು ಕಳೆದವು. ಒಂದು ದಿನ ಜಾತ್ರೆಯ ನಿಮಿತ್ತ ಸಾಹುಕಾರನ ಮಗನನ್ನು ತನ್ನೊಂದಿಗೆ ಕರೆದೊಯ್ದನು. ಅವನನ್ನು ತನ್ನ ಮನೆಯಲ್ಲಿ ಬಚ್ಚಿಟ್ಟನು. ರಾತ್ರಿಯಾದರೂ ಮಗ ಮನೆಗೆ ಹಿಂದಿರುಗಲೇ ಇಲ್ಲ . ಸಾಹುಕಾರನಿಗೆ ಅತೀವ ಕಳವಳವಾಯಿತು. “ಜಾತ್ರೆಯಲ್ಲಿ ನಾನು ನಿನ್ನ ಮಗನನ್ನು ಹೆಗಲ ಮೇಲೆ ಕುಳ್ಳಿರಿಸಿಕೊಂಡಿದ್ದೆ, ಹದ್ದು ಬಂದು ಎತ್ತಿಕೊಂಡು ಹೋಯಿತು ” ಎಂದು ವರ್ಧಮಾನನು ಹೇಳಿದನು. ಕೋಪಿಷ್ಟನಾದ ಸಾಹುಕಾರನು ಅದು ಹೇಗೆ ಸಾಧ್ಯವೆಂದು ವರ್ಧಮಾನನ ಮೇಲೆ ಸಂದೇಹ ಪಟ್ಟು, ನ್ಯಾಯಸ್ಥಾನಕ್ಕೆ ಕರೆದೊಯ್ದನು.

ನ್ಯಾಯಾಧೀಶನು ಉಭಯತರರನ್ನು ಕರೆಸಿ ಅವರ ವಿನಂತಿಯನ್ನು ಆಲಿಸಿದನು. ಅವನ ಕಬ್ಬಿಣವನ್ನು ಇಲಿಯು ತಿಂದದ್ದು , ಸಾಹುಕಾರನ ಮಗನನ್ನು ಹದ್ದು ಒಯ್ಯದದ್ದು ಇವೆರಡೂ ಪರಸ್ಪರ ಪೋಷಕಗಳೆಂದು ತಿಳಿದು ಚತುರನಾದ ನ್ಯಾಯಾಧೀಶನು ವೈಶ್ಯನ ಕಬ್ಬಿಣದ ಬೆಲೆಯನ್ನು ವೈಶ್ಯನಿಗೆ ಕೊಡಿಸಿ ಸಾಹುಕಾರನ ಮಗನನ್ನು ಸಾಹುಕಾರನಿಗೆ ಕೊಡಿಸಿ ವ್ಯಾಜ್ಯವನ್ನು ಬಗೆಹರಿಸಿದನು.

ಸ್ನೇಹಿತರೆ, ಇಲ್ಲಿ ಶಕ್ತಿಗಿಂತ ಯುಕ್ತಿ ಮೇಲು ಎನ್ನುವ ಅಂಶ , ಸಮಾಧಾನದಿಂದ ವರ್ತಿಸಬೇಕು ಎನ್ನುವ ಅಂಶ, ಎದ್ದು ಕಾಣುತ್ತದೆ. ಬೇರೆ ಬೇರೆ ಆಯಾಮಗಳಿಂದ ಈ ಕಥೆಯನ್ನು ಅವಲೋಕಿಸಬಹುದು. ಮಾತಿನ ಪ್ರಾಮುಖ್ಯತೆಯೂ ಇಲ್ಲಿ ಗಮನಾರ್ಹ ಅಂಶವಾಗಿದೆ. ” ಮಾತು ಆಡಿದರೆ ಹೊಯ್ತು , ಮುತ್ತು ಒಡೆದರೆ ಹೊಯ್ತು ” ಎನ್ನುವ ಹಿರಿಯರ ಹೇಳಿಕೆಯೊಂದಿದೆ. ಅದರೊಂದಿಗೆ ನ್ಯಾಯಾಧೀಶರ ಜಾಣ ತೀರ್ಮಾನವನ್ನೂ ವರ್ಧಮಾನನ ಸಮಯಪ್ರಜ್ಞೆಯನ್ನೂ ಮೆಚ್ಚಲೇಬೇಕು. ವರ್ಧಮಾನನು ಸರಿಯಾದ ಸಮಯಕ್ಕೆ ಕಾದನು. ಸಮಯವು ಕೂಡಿ ಬಂದಾಗ ಬುದ್ಧಿವಂತ ನ್ಯಾಯಾಧೀಶರಿಂದ ಸರಿಯಾದ ಪರಿಹಾರ ಸಿಕ್ಕಿತು. ವರ್ಧಮಾನ ದುಡುಕಿ ಆ ಸಂದರ್ಭದಲ್ಲಿ ಸಾಹುಕಾರ ಸುಳ್ಳು ಹೇಳುತ್ತೀಯ , ಇಲಿಗಳು ಕಬ್ಬಿಣವನ್ನೆಲ್ಲ ತಿನ್ನ ಲು ಅಸಾಧ್ಯ, ಸ್ವಲ್ಪ ಮಟ್ಟಿಗೆ ಹಾಳುಮಾಡಿರಬಹುದು, ಆದರೆ ಪೂರ್ತಿ ತಿಂದುಹಾಕಲು ಸಾಧ್ಯವಿಲ್ಲವೆಂದು ಜಗಳವಾಡಬಹುದಿತ್ತು. ಆದರೆ ತಕ್ಕ ನ್ಯಾಯ ಬಹುಶ: ಸಿಗುತ್ತಿರಲಿಲ್ಲ. ಸಮರ್ಥ ನ್ಯಾಯಾಧೀಶರಿಂದ ಸಮಸ್ಯೆಗೆ ಪರಿಹಾರ ದೊರೆಯ ಬೇಕಾದರೆ ಸರಿಯಾದ ಸಮಯಕ್ಕಾಗಿ ವರ್ಧಮಾನನು ಕಾಯಬೇಕಾಯಿತು.

ಇದರಿಂದ ತಿಳಿಯುವುದೇನೆಂದರೆ ನಮ್ಮ ಪ್ರಯತ್ನ ಸಾಕಷ್ಟು ಇದ್ದರೂ ದೈವದ ಸಹಕಾರವೂ ಸ್ವಲ್ಪಮಟ್ಟಿಗೆ ಬೇಕಾಗುತ್ತದೆ. ಸರಿಯಾದ ಸಮಯ, ಸ್ವಪ್ರಯತ್ನ , ಮತ್ತು ದೈವೇಚ್ಛೆ ಇವು ಮೂರೂ ಪೂರಕವಾದಾಗ ಕಾರ್ಯಸಿದ್ಧಿಯಾಗುವುದು. ಮನುಷ್ಯನಿಗೆ ಸಮಯಪ್ರಜ್ಞೆ ಇರಬೇಕಾಗುತ್ತದೆ. ಎಷ್ಟೋಸಲ ನಮ್ಮ ಸುತ್ತಮುತ್ತ ಕೆಲವು ಘಟನೆಗಳು ನಡೆದಿರುತ್ತವೆ. ಕೆಲವರಿಗೆ ಯಾವ ಸಮಯದಲ್ಲಿ ಏನು ಮಾತನಾಡಬೇಕೆಂಬ ಅರಿವು ಇರುವುದಿಲ್ಲ. ಇದರಿಂದ ಅವರು ಅಪಹಾಸ್ಯಕ್ಕೆ ಒಳಗಾಗುವ ಸನ್ನಿವೇಶ, ಅಥವಾ ಅನಪೇಕ್ಷಿತ ಅಪಾಯಗಳು ಎದುರಾಗಬಹುದು. ಹಾಗೂ ಮತ್ತೆ ಕೆಲಸಲ ಆ ಮಾತುಗಳಿಂದ ವೃಥಾ ಮನಸ್ತಾಪಗಳು ಉಂಟಾಗಬಹುದು. ಆದ್ದರಿಂದ ಸ್ಥಿತಪ್ರಜ್ಞತೆಯಿಂದ ,ಸಂಯಮದಿಂದ ಸಮಯಾವಕಾಶ ನೋಡಿಕೊಂಡು ಮಾತನಾಡುವುದು ಬುದ್ಧಿವಂತರ ಲಕ್ಷಣ ಎನ್ನಿಸಿಕೊಳ್ಳುತ್ತದೆ.

ಮಾನ್ಯ ಡಿ.ವಿ.ಗುಂಡಪ್ಪನವರ ಈ ಕಗ್ಗ ಇದೇ ರೀತಿಯ ವಿಚಾರಗಳನ್ನ ಪ್ರತಿಪಾದಿಸುತ್ತದೆ.

ವಿಧಿಗೆ ನೀನು ಕಾರ್ಯ ನಕ್ಷೆಯ ವಿಧಿಸ ಹೊರಡದಿರು / ಅಧಿಕಾರಿ ನೀನಲ್ಲ ; ವಿಧಿ ಬೆಪ್ಪನಲ್ಲ//
ಹದವರಿತು ವಿಧಿ ತಾನೇ ಕುದುರಿಸುವನೆಲ್ಲವನು /
ಅದಟದಿರು ನೀನವನ ಮಂಕುತಿಮ್ಮ //

ಮನುಷ್ಯನ ಜೀವನದಲ್ಲಿ ವಿಧಿಯ ಪಾತ್ರದ ಬಹುಮುಖ್ಯವಾದುದು. ವಿಧಿಯು ಹೇಗೆ ತನ್ನ ಕೆಲಸವನ್ನು ಮಾಡಬೇಕೆಂದು ನಾವು ಹೇಳಬೇಕಾಗಿಲ್ಲ. ನಮ್ಮ ಮಾತುಗಳನ್ನು ಕೇಳಲು ವಿಧಿಗೆ ನಾವು ಅಧಿಕಾರಿಯೂ ಅಲ್ಲ ಮತ್ತು ವಿಧಿಯು ಬೆಪ್ಪನೂ ಅಲ್ಲ. ಸಮಯದ ಅನುಕೂಲತೆಯು ಪಕ್ವವಾದಾಗ ವಿಧಿಯು ತಾನೇ ಆ ಕೆಲಸವನ್ನು ವ್ಯವಸ್ಥೆಗೆ ಬರುವಂತೆ ಮಾಡುತ್ತಾನೆ . ನೀನು ಅವನನ್ನು ಗದರಬೇಡ ಎನ್ನುವ ಸಮನ್ವಯ ನ್ಯಾಯ ಇಲ್ಲಿದೆ. ಒಟ್ಟಿನಲ್ಲಿ ಸ್ವಪ್ರಯತ್ನ, ಸಮಯಪ್ರಜ್ಞೆ, ದೈವಸಂಕಲ್ಪಗಳು ಮೇಳವಿಸಿ ಸಮನ್ವಯಗೊಂಡಾಗಲೇ ಕಾರ್ಯಸಿದ್ಧಿಯಾಗುವುದು ನಿಶ್ಚಿತ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter