ಮಿಂಚಿನ ಬಳ್ಳಿ- ವಿಕಾಸ ಹೊಸಮನಿ ಅಂಕಣ l ಮಲಯಾಳಿಗಳು

ನಮ್ಮ ದೇಶಬಾಂಧವರು ಮತ್ತು ನೆರೆಯ ರಾಜ್ಯದವರಾದ ಮಲಯಾಳಿಗಳು ದಕ್ಷಿಣ ಭಾರತದಲ್ಲಿರುವ ಕನ್ನಡಿಗರು, ತೆಲುಗರು ಮತ್ತು ತಮಿಳರಿಗಿಂತ ಹಲವು ವಿಧದಲ್ಲಿ ತುಂಬ ಭಿನ್ನ ಸ್ವಭಾವದವರು. ಕೇರಳ ರಾಜ್ಯ ಮತ್ತು ಮಲಯಾಳ ಭಾಷೆಯ ಕುರಿತು ಮಲಯಾಳಿಗೆ ಇರುವ, "ನಾವು, ನಮ್ಮದು..." ಎಂಬ ಅಭಿಮಾನ ತುಂಬ ದೊಡ್ಡದು. ಮಲಯಾಳಿಗಳ ಕುರಿತ ಹಲವು ಸಂಗತಿಗಳು ತುಂಬ ಸ್ವಾರಸ್ಯಕರವಾಗಿವೆ. 
ಮಲಯಾಳಂ ಸಂಸ್ಕೃತಿ, ಸಾಹಿತ್ಯ ಮತ್ತು ಸಿನಿಮಾ ಕುರಿತು ಮಲಯಾಳಿಗಳಿಗಿರುವ ಪ್ರೀತಿ ಮತ್ತು ಅಭಿಮಾನ ಅನುಕರಣೀಯವಾದುದು. ಇಂದಿಗೂ ಯಾವುದೇ ಲೇಖಕನೊಬ್ಬ ಬರೆದು ಬದುಕಬಲ್ಲ ಪರಿಸ್ಥಿತಿ ಕೇರಳದಲ್ಲಿದೆಯೆಂದರೆ ಅದಕ್ಕೆ ಕಾರಣ ಮಲಯಾಳಿ ಓದುಗರು. ಇಂದಿಗೂ ದೊಡ್ಡ ಮಟ್ಟದಲ್ಲಿ ಪುಸ್ತಕಗಳನ್ನು ಕೊಂಡು ಓದುವ ಮೂಲಕ ಸಾಹಿತ್ಯ ಮತ್ತು ಸಾಹಿತಿಗಳನ್ನು ಪೋಷಿಸುವ ಗುರುತರ ಕೆಲಸವನ್ನು ಮಲಯಾಳಿಗಳು ಮಾಡುತ್ತಿದ್ದಾರೆ. 
ಜ್ಞಾನಪೀಠ ಪ್ರಶಸ್ತಿ ವಿಜೇತರಾದ ತಕಳಿ ಶಿವಶಂಕರ್ ಪಿಳ್ಳೈ ಮತ್ತು ಎಂ.ಟಿ.ವಾಸುದೇವನ್ ನಾಯರ್ ಭಾರತೀಯ ಕಥನ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಅಪೂರ್ವ ಸಾಹಿತಿಗಳು. ಅಂತರಾಷ್ಟ್ರೀಯ ಖ್ಯಾತಿ ಪಡೆದ 'ಚೆಮ್ಮೀನು' ಕಾದಂಬರಿ ಬರೆದವರು ತಕಳಿ. ಇದುವರೆಗೆ ಈ ಕಾದಂಬರಿಯ ಎರಡು ಲಕ್ಷಕ್ಕೂ ಅಧಿಕ ಪ್ರತಿಗಳು ಮಲಯಾಳಂ ಭಾಷೆಯೊಂದರಲ್ಲಿಯೇ ಮಾರಾಟವಾಗಿವೆ! 'ಚೆಮ್ಮೀನು' ಕಾದಂಬರಿಯ ಮಾರಾಟದಿಂದ ದೊರೆತ ಹಣದಲ್ಲಿಯೇ ತಕಳಿಯವರು ಒಂದು ದಿವಿನಾದ ತೋಟ ಮತ್ತು ದೊಡ್ಡ ಮನೆಯನ್ನು ಖರೀದಿಸಿ  ನೆಮ್ಮದಿಯಿಂದ ಜೀವಿಸಿದರು ಎಂಬುದು ಆಶ್ಚರ್ಯವಾದರೂ ಸತ್ಯ ಸಂಗತಿ. 
'ಪ್ರಿಯಪೆಟ್ಟ ಎಳುತ್ತಕಾರನ್' (ಜನಪ್ರಿಯ ಲೇಖಕ) ಎಂದೇ ಖ್ಯಾತಿ ಪಡೆದ ಎಂ.ಟಿ.ವಾಸುದೇವನ್ ನಾಯರ್ ಮಲಯಾಳಂ ಭಾಷೆಯ ಜೊತೆ ಜೊತೆಗೆ ಇತರೆ ಭಾರತೀಯ ಭಾಷೆಗಳ ಓದುಗರಿಗೂ ಚಿರಪರಿಚಿತರು. ಅವರ ಕೃತಿಗಳು ಮರುಮುದ್ರಣ ಮತ್ತು ಮಾರಾಟದ ವಿಷಯದಲ್ಲಿ ದಾಖಲೆಯನ್ನೇ ಸೃಷ್ಟಿಸಿವೆ. ಎಂ.ಟಿ.ಯವರ 'ನಾಲುಕೆಟ್ಟು' ಕಾದಂಬರಿ ಐವತ್ತಕ್ಕೂ ಅಧಿಕ ಮುದ್ರಣ ಕಂಡಿದ್ದು, ಎರಡು ಲಕ್ಷಕ್ಕೂ ಅಧಿಕ ಪ್ರತಿಗಳು ಮಾರಾಟವಾಗಿವೆ! 
ಎಂ.ಟಿ.ರವರ 'ನಾಲುಕೆಟ್ಟು', 'ಅಸುರವಿತ್ತು' ಮತ್ತು 'ಕಾಲಂ' ಕಾದಂಬರಿಗಳಿಗೆ ಐವತ್ತು ವರ್ಷ ತುಂಬಿದ ಸಂದರ್ಭದಲ್ಲಿ ಅವುಗಳ ವಿಶೇಷ ಆವೃತ್ತಿಯನ್ನು ತರಲಾಯಿತು. 'ಗೋಲ್ಡನ್ ಜ್ಯೂಬಿಲಿ ಎಡಿಷನ್' ಎಂದು ತುಂಬ ಅಂದವಾಗಿ ಮುದ್ರಿಸಿ, ದುಬಾರಿ ಬೆಲೆಯಿಟ್ಟರೂ ಐದು ಸಾವಿರಕ್ಕೂ ಅಧಿಕ ಪ್ರತಿಗಳು ಆರು ತಿಂಗಳಲ್ಲೇ ಮಾರಾಟವಾದವು! 
ಕಲಾತ್ಮಕ ಸಿನಿಮಾಗಳ ಮೂಲಕ ಮಲಯಾಳಂ ಚಿತ್ರರಂಗದಲ್ಲೂ ಅಪಾರ ಖ್ಯಾತಿ ಪಡೆದ ಎಂ.ಟಿ.ಯವರು ಕೇರಳದಲ್ಲಿ ಮಮ್ಮೂಟ್ಟಿ ಮತ್ತು ಮೋಹನಲಾಲರಷ್ಟೇ ಜನಪ್ರಿಯರು. ಸಾಹಿತ್ಯ ಅವರಿಗೆ ಜನಪ್ರಿಯತೆಯ ಜೊತೆಗೆ ನೆಮ್ಮದಿಯ ಬದುಕನ್ನು ಸಹ ನೀಡಿದೆ. 
ಮಲಯಾಳಿಗಳಲ್ಲಿರುವ 'ಮಲಯಾಳಂ ಪ್ರಜ್ಞೆ'ಯ ಕುರಿತು ಹೇಳಲೇಬೇಕು. ಮಲಯಾಳಿಯೊಬ್ಬ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಯಾರೇ ಆಗಿರಲಿ ಅವನು ಎದೆಯುಬ್ಬಿಸಿ ಹೇಳುವುದು ತಾನೊಬ್ಬ ಮಲಯಾಳಿಯೆಂದು. ಬ್ರಾಹ್ಮಣ, ನಾಯರ್, ಇಳವಾ, ಪರಯ, ಮಾಪ್ಪಿಳ್ಳೆ, ನಸ್ರಾಣಿ ಸೇರಿದಂತೆ ಹತ್ತು ಹಲವು ಜಾತಿಗಳ ಲೇಖಕ-ಲೇಖಕಿಯರು ಮಲಯಾಳದಲ್ಲಿ ಬರೆಯುತ್ತಿದ್ದರೂ ಅವರು ಮೊದಲು ತಮ್ಮನ್ನು ತಾವು ಮಲಯಾಳಿ ಲೇಖಕ/ಲೇಖಕಿ ಎಂದು ಹೆಮ್ಮೆಯಿಂದ ಗುರುತಿಸಿಕೊಳ್ಳುತ್ತಾರೆ. 
ವೈಕಂ ಮಹ್ಮದ್ ಬಷೀರರು ಭಾರತದ ಮೇಜರ್ ಲೇಖಕರಲ್ಲೊಬ್ಬರು. ಮಲಯಾಳಿ ಮುಸ್ಲಿಂ ಜಗತ್ತನ್ನು ಅದರ ಎಲ್ಲ ಧನಾತ್ಮಕ ಮತ್ತು ಋಣಾತ್ಮಕ ಅಂಶಗಳೊಂದಿಗೆ ತುಂಬ ಸುಂದರವಾಗಿ ಕಥನದಲ್ಲಿ ಕಟ್ಟಿಕೊಟ್ಟ ಬಹುದೊಡ್ಡ ಲೇಖಕ ವೈಕಂ. ಮಲಯಾಳಂ ಓದುಗರು ವೈಕಂ ಮಹ್ಮದ್ ಬಷೀರರನ್ನು ತಕಳಿ ಶಿವಶಂಕರ್ ಪಿಳ್ಳೈ, ಶಂಕರನ್ ಕುಟ್ಟಿ ಪೊಟ್ಟೆಕ್ಕಾಟ್ಟ್ ಮತ್ತು ಕೇಶವ ದೇವರಂತಹ ದೊಡ್ಡ ಲೇಖಕರ ಸಾಲಿನಲ್ಲೇ ಗುರುತಿಸಿ, ಗೌರವಿಸುತ್ತಾರೆ. ಮಲಯಾಳಿಗಳು ಎಂದೂ ಯಾವುದೇ ಲೇಖಕನನ್ನು ಜಾತಿಯ ಮೂಲಕ ಗುರುತಿಸುವುದಿಲ್ಲ. ಮಲಯಾಳಿ ಮಂದಿ ವೈಕಂರನ್ನು ಮಲಯಾಳದ ಬಹುದೊಡ್ಡ ಲೇಖಕರೆಂದು ಹೇಳುತ್ತಾರೆಯೇ ಹೊರತು ಮುಸ್ಲಿಂ ಲೇಖಕರೆಂದಲ್ಲ! 
ಇತ್ತೀಚೆಗೆ ಕನ್ನಡ ಸಾಹಿತ್ಯ ಲೋಕದಲ್ಲಿ ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗ, ವಾಲ್ಮೀಕಿ, ಕುರುಬ, ದಲಿತ (ಎಡಗೈ-ಬಲಗೈ), ಮುಸ್ಲಿಂ ಮತ್ತು ಕ್ರಿಶ್ಚಿಯನ್ ಲೇಖಕರಿದ್ದಾರೆ. ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಹಳೆ ಮೈಸೂರು ಮತ್ತು ಕರಾವಳಿ ಲೇಖಕರಿದ್ದಾರೆ. ದುರ್ದೈವಶಾತ್ ಕನ್ನಡ ಲೇಖಕರಿಲ್ಲ! ತುಂಬ ಜನ ಕನ್ನಡ ಲೇಖಕ-ಲೇಖಕಿಯರು ಲಿಂಗ, ಜಾತಿ, ಪ್ರದೇಶಗಳ ಮೂಲಕ ತಮ್ಮನ್ನು ತಾವು ಗುರುತಿಸಿಕೊಳ್ಳಲು ಬಯಸುತ್ತಾರೆ. ಏಕೆಂದರೆ ಇಂತಹ ಲೇಖಕ-ಲೇಖಕಿಯರಿಗೆ ಯೋಗ್ಯತೆಯ ಬಲದ ಮೇಲೆ ನಿಲ್ಲುವುದು ಕಷ್ಟವೆಂದು ಗೊತ್ತಿದೆ ಆದರೆ ಅದನ್ನವರು ಒಪ್ಪಿಕೊಳ್ಳುವುದಿಲ್ಲ. ಕನ್ನಡದ ತುಂಬ ಜನ ಲೇಖಕ-ಲೇಖಕಿಯರು ಮೀಸಲಾತಿಯ ಆಧಾರದ ಮೇಲೆಯೇ ಸಾಹಿತ್ಯಲೋಕದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಯೋಗ್ಯತೆಯೊಂದನ್ನೇ ಮಾನದಂಡವಾಗಿಟ್ಟುಕೊಂಡು ಹೊರಟರೆ ತುಂಬ ಜನ ದೊಡ್ಡ ದೊಡ್ಡ ಲೇಖಕ-ಲೇಖಕಿಯರು ಸ್ಥಾನಭ್ರಷ್ಟರಾಗಬೇಕಾಗುತ್ತದೆ. ತುಂಬ ಜನ ಅಯೋಗ್ಯರಿಗೆ ಕೊಟ್ಟ ಪ್ರಶಸ್ತಿ-ಗೌರವಗಳನ್ನೆಲ್ಲ ವಾಪಸ್ ಪಡೆಯಬೇಕಾಗುತ್ತದೆ. ಇದು ಸದ್ಯದ ಕನ್ನಡ ಸಾಹಿತ್ಯ ಲೋಕದ ದುರಂತ! 
ಇರಲಿ, ಮತ್ತೆ ಮಲಯಾಳಿಗಳ ವಿಷಯಕ್ಕೆ ಬರೋಣ. ಮಲಯಾಳಂ ಸಿನಿಮಾ ಭಾರತೀಯ ಸಿನಿಮಾಗೆ ಅತ್ಯುತ್ತಮ ಕೊಡುಗೆ ನೀಡಿದೆ. ಎಪ್ಪತ್ತು, ಎಂಬತ್ತು ಮತ್ತು ತೊಂಬತ್ತರ ದಶಕಗಳು ಮಲಯಾಳಂ ಸಿನಿಮಾದ ಸುವರ್ಣ ಯುಗವೆಂದು ಕರೆಯಬಹುದು. ಪ್ರೇಮ್ ನಜೀರ್, ಸತ್ಯನ್, ಜಯನ್, ಮಧು, ಮಮ್ಮೂಟ್ಟಿ, ಮೋಹನಲಾಲ್, ಜಯರಾಂ, ದಿಲೀಪರಂತಹ ನಟರು ಮತ್ತು ಶೀಲಾ, ಜಯಭಾರತಿ, ಶಾರದಾ, ಸೀಮಾ, ವಿಧುಬಾಲಾ, ಶೋಭನಾ, ರೇವತಿ, ಮೋನಿಷಾ, ಮಂಜು ವಾರಿಯರ್, ಕಾವ್ಯ ಮಾಧವನ್ ಮತ್ತು ಅನುಸಿತಾರರಂತಹ ನಟಿಯರು ಮಲಯಾಳಂ ಸಿನಿಮಾವನ್ನು ಜನಪ್ರಿಯಗೊಳಿಸಿದ್ದಾರೆ. 
ಮಲಯಾಳಂ ಸಿನಿಮಾಗಳ ಯಶಸ್ಸು ನಿರ್ಧರಿತವಾಗುವುದು ಕಥೆ, ಚಿತ್ರಕಥೆ ಮತ್ತು ನಟನೆಯ ಮೇಲೆ ಎಂಬ ಕಾಲವೊಂದಿತ್ತು. ಸದ್ಯ ಆಧುನಿಕತೆಯ ಸೆಳವಿಗೆ ಸಿಕ್ಕು ಮಲಯಾಳಂ ಸಿನಿಮಾದ ಚೆಹರೆ ಸಂಪೂರ್ಣ ಬದಲಾಗಿದೆ. ಜನಪ್ರಿಯತೆ ಮತ್ತು ಶ್ರೀಮಂತಿಕೆಯ ಭೂತ ಮಲಯಾಳಂ ಸಿನಿಮಾದ ಗುಣಮಟ್ಟವನ್ನು ಹಾಳು ಮಾಡಿದೆ. ತೆಲುಗು ಮತ್ತು ತಮಿಳು ಚಿತ್ರರಂಗದ ಅಬ್ಬರ ಮತ್ತು ಆಡಂಬರವನ್ನು ಅನುಕರಿಸಲು ಹೋಗಿ ಮಲಯಾಳಂ ಸಿನಿಮಾ ಸೊರಗಿದೆ. ಪ್ರತಿಭಾವಂತರಿಗಿಂತ ಹಣ ಮತ್ತು ಜನಪ್ರಿಯತೆ ಗಳಿಸಬೇಕೆಂಬ ಮಂದಿ ಹೆಚ್ಚಾಗಿ ಸಿನಿಮಾ ರಂಗಕ್ಕೆ ಬರುತ್ತಿರುವುದರಿಂದ ಉತ್ತಮ ಚಿತ್ರಗಳು ಹೆಚ್ಚಾಗಿ ಬರುತ್ತಿಲ್ಲ. 
ಮೂರು 'ಮ' ಕಾರಗಳ ಬಗ್ಗೆ ಮಲಯಾಳಿ ಮಂದಿಗೆ ಬಹಳ ಪ್ರೀತಿಯಿದೆ ಎಂದು ಹೇಳುತ್ತಾರೆ. ಆ ಮೂರು 'ಮ' ಕಾರಗಳೆಂದರೆ ಮಲಯಾಳಂ, ಮಮ್ಮೂಟ್ಟಿ ಮತ್ತು ಮೋಹನಲಾಲ್! ಮಲಯಾಳಿಗಳ ದೃಷ್ಟಿಯಲ್ಲಿ ಮಮ್ಮುಟ್ಟಿ, ಮೋಹನಲಾಲರನ್ನು ಮೀರಿಸುವ ನಟರು ಭೂಮಿ ಮಲಯಾಳದಲ್ಲೇ ಇಲ್ಲ! ತೆಲುಗನೊಬ್ಬ ನಾಗಾರ್ಜುನ ಮತ್ತು ಮಮ್ಮೂಟ್ಟಿ ಇಬ್ಬರೂ ಭಾಗವಹಿಸಿದ್ದ ಸಮಾರಂಭವೊಂದರ ವಿಡಿಯೋ ನೋಡಿ, "ನಾಗಾರ್ಜುನ ಸರ್ ಅರವತ್ತರ ಹರೆಯದಲ್ಲೂ ಎಷ್ಟು ಸುಂದರವಾಗಿದ್ದಾರೆ!" ಎಂದು ಉದ್ಗರಿಸಿದ. ಮಲಯಾಳಿಗಳ ಪಾಲಿಗೆ ಮಮ್ಮೂಟ್ಟಿ ಸಾಕ್ಷಾತ್ ದೇವರಲ್ಲವೇ! ಸರಿ, ಮಲಯಾಳಿಗಳು ರೊಚ್ಚಿಗೆದ್ದರು. ಮಮ್ಮೂಟ್ಟಿಯಂತಹ ಸುಂದರಾಂಗ ಮತ್ತು ಶ್ರೇಷ್ಠ ನಟ ಭೂಮಿಯ ಮೇಲೆಯೇ ಇಲ್ಲವೆಂದು ಆನ್ ಲೈನ್ ನಲ್ಲಿ ಜಗಳ ತೆಗೆದರು. 
ಸುದೈವವಶಾತ್ ಕರುನಾಡ ಚಕ್ರವರ್ತಿ ಶಿವಣ್ಣನ ಅಭಿಮಾನಿಯಾದ ಡಾ. ನಾಗರಾಜ ಆ ಗ್ರೂಪಿನಲ್ಲಿದ್ದದ್ದರಿಂದ ಸರಿಹೋಯಿತು. ಡಾ. ನಾಗರಾಜನಂತೂ ಮಲಯಾಳಿಗಳಿಗೆ, "ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ಬೀಗುವ ಮಮ್ಮೂಟ್ಟಿ ಯಾವ ಸುಂದರಾಂಗನಯ್ಯಾ? ಮಮ್ಮೂಟ್ಟಿ ಒಳ್ಳೆಯ ನಟನಿರಬಹುದು ಆದರೆ ಮಮ್ಮೂಟ್ಟಿಗಿಂತ ದೊಡ್ಡ ದೊಡ್ಡ ನಟರು ತುಂಬ ಜನರಿದ್ದಾರೆ. ಶ್ರೇಷ್ಠತೆಯ ವ್ಯಸನದಿಂದ ಬಳಲುವ ನಿಮ್ಮಂಥ ಮೂರ್ಖ ಮಲಯಾಳಿಗಳಿಗೆ ಏನು ಹೇಳುವುದು?" ಎಂದು ಚೆನ್ನಾಗಿ ಝಾಡಿಸಿದ. ಇದನ್ನು ಇಲ್ಲಿಗೆ ಬಿಡದ ಡಾ. ನಾಗರಾಜ, "ಮಕ್ಕಳೇ, ಶಿವಣ್ಣನ ಮುಂದೆ ಯಾವ ಮಮ್ಮೂಟ್ಟಿ, ಮೋಹನಲಾಲನೂ ನಿಲ್ಲಲು ಸಾಧ್ಯವಿಲ್ಲ. ಇನ್ನಾದರೂ ಸತ್ಯವನ್ನರಿತುಕೊಳ್ಳುವುದು ಒಳ್ಳೆಯದು!" ಎಂದು ಆವೇಶದಿಂದ ಹೇಳಿದ. ಅವನ ಕೋಪಕ್ಕೆ ಮಲಯಾಳಿಗಳು ತೆಪ್ಪಗಾದರು. ತೆಲುಗರಂತೂ ಡಾ. ನಾಗರಾಜನನ್ನು "ಮಂಚಿವಾಡು"ಎಂದು ಅಭಿನಂದಿಸಿದರು. ಈ ಘಟನೆಯಿಂದ ಕನ್ನಡದ ಶಿವಣ್ಣನ ಅಭಿಮಾನಿಯಾದ ನಾಗರಾಜನಿಗೆ ತೆಲುಗಿನ ನಾಗಾರ್ಜುನನ ಅಭಿಮಾನಿಯಾದ ರಂಜನಾ ಸ್ನೇಹಿತೆಯಾದಳು! 
ಮಲಯಾಳಂ ಚಿತ್ರಗಳೇ ಎಲ್ಲ ಚಿತ್ರಗಳಿಗಿಂತ ಶ್ರೇಷ್ಠವೆಂಬುದು ಮಲಯಾಳಿಗಳ ಖಚಿತ ಅಭಿಪ್ರಾಯ! ಕನ್ನಡ, ತಮಿಳು, ತೆಲುಗು ಮತ್ತು ಹಿಂದಿಯವರು ಪರಸ್ಪರರ ಚಿತ್ರಗಳನ್ನು ಕದ್ದು ಸಿನಿಮಾ ಮಾಡುತ್ತಾರೆ ಆದರೆ ಮಲಯಾಳಂನವರು ಪಾಶ್ಚಾತ್ಯ ಸಿನಿಮಾಗಳನ್ನು ಕದ್ದು ಸಿನಿಮಾ ಮಾಡುತ್ತಾರೆ. ಮಲಯಾಳಿಗಳು ಎಷ್ಟು ಬುದ್ಧಿವಂತರೆಂದರೆ ಅವರು ಕದ್ದು ಸಿನಿಮಾ ಮಾಡಿದರೂ ಅದನ್ನು ಕದ್ದ ಮಾಲೆಂದು ಸಾಬೀತುಪಡಿಸುವುದು ತುಂಬ ಕಷ್ಟ. ಅದೇ ರೀತಿ ಮಲಯಾಳಿ ಸಿನಿಮಾದ ಅಭಿಮಾನಿಗಳು ಬೇರೆ ಭಾಷೆಗಳಲ್ಲಿ ಎಂತಹ ಶ್ರೇಷ್ಠ ಚಿತ್ರವೇ ಬರಲಿ, ಎಂತಹ ಶ್ರೇಷ್ಠ ನಟನೇ ಇರಲಿ ಯಾವುದೇ ಕಾರಣಕ್ಕೂ ಅದನ್ನವರು ಒಪ್ಪುವುದಿಲ್ಲ. ಮಲಯಾಳಂ ಚಿತ್ರಗಳೇ ಮೇಲು, ಮಲಯಾಳಂ ನಟರೇ ಶ್ರೇಷ್ಠ ಎಂದು ವಾದಿಸುತ್ತಾರೆ. ಶೇಕಡಾ ಎಂಬತ್ತರಷ್ಟು ಮಲಯಾಳಿಗಳಿಗೆ ಇಂತಹ ಶ್ರೇಷ್ಠತೆಯ ವ್ಯಸನವಿದೆ. 
ಚಲನಚಿತ್ರ ಪ್ರಶಸ್ತಿಗಳನ್ನು ದುಡ್ಡು ಕೊಟ್ಟು ಖರೀದಿಸುವಲ್ಲಿ ಹಿಂದಿ ಮತ್ತು ಮಲಯಾಳಂ ಚಿತ್ರರಂಗದವರ ನಡುವೆ ಸಾಕಷ್ಟು ಪೈಪೋಟಿಯಿದೆ. ಯಾವುದೇ ಒಂದು ಪ್ರಶಸ್ತಿಯ ಮೇಲೆ ಮಲಯಾಳಿಗಳ ಕಣ್ಣು ಬಿದ್ದರೆ ಅವರದನ್ನು ಬಿಡುವುದಿಲ್ಲ. ಶತಾಯಗತಾಯ ಪ್ರಯತ್ನಿಸಿ ಆ ಪ್ರಶಸ್ತಿ ಪಡೆದೇ ತೀರುತ್ತಾರೆ. ಮಲಯಾಳಂ ನಟರ ಪ್ರಶಸ್ತಿ ಮೋಹದ ಕುರಿತು ನನ್ನ ಮಲಯಾಳಿ ಸ್ನೇಹಿತೆಯೊಬ್ಬಳೊಂದಿಗೆ ಮಾತನಾಡುತ್ತ ತಮಾಷೆ ಮಾಡಿದಾಗ ಅವಳ ಮುಖ ಸಪ್ಪಗಾಯಿತು. ಮಮ್ಮುಟ್ಟಿ ಮತ್ತು ಮೋಹನಲಾಲ್ ಅಂತಹವರಲ್ಲ ಎಂದು ನನ್ನೊಂದಿಗೆ ವಾದಿಸಿದಳು.  ಮಲಯಾಳಿ ಸ್ಟಾರ್ ನಟರಾದ ಮಮ್ಮುಟ್ಟಿ ಮತ್ತು ಮೋಹನಲಾಲರಿಗೋಸ್ಕರ ಈ ಸುಂದರ ಮಲಯಾಳಿ ಹುಡುಗಿಯ ಸ್ನೇಹವನ್ನು ಕಳೆದುಕೊಳ್ಳುವುದು ಬುದ್ಧಿವಂತಿಕೆಯಲ್ಲವೆಂದು ಆ ವಿಚಾರವನ್ನು ಅಲ್ಲಿಗೇ ಕೈಬಿಟ್ಟೆ!
ಮಲಯಾಳಿಗಳು ಜಗತ್ತಿನ ಯಾವುದೇ ಭಾಗದಲ್ಲೂ, ಎಂತಹ ಕಷ್ಟದ ಪರಿಸ್ಥಿತಿಯಲ್ಲೂ ಬದುಕು ಕಟ್ಟಿಕೊಳ್ಳಬಲ್ಲರು. ಕೇರಳದ ಪ್ರತಿಯೊಂದು ಮನೆಯಲ್ಲೂ ಒಬ್ಬರಾದರೂ ದುಬೈ, ಕತಾರ್ ಅಥವಾ ಅಬುದಾಬಿ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿ ಕೆಲಸ ಮಾಡುತ್ತಿರುತ್ತಾರೆ. ಭಾರತದ ಬಹುತೇಕ ಎಲ್ಲ ರಾಜ್ಯಗಳ, ಎಲ್ಲ ಜಿಲ್ಲೆಗಳಲ್ಲೂ ಮಲಯಾಳಿಗಳು ಕಾಣಸಿಗುತ್ತಾರೆ. ಬೆಂಗಳೂರು, ಮೈಸೂರು, ಮಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಮಲಯಾಳಿಗಳು ತುಂಬ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕರ್ನಾಟಕದ ಬಹುತೇಕ ನರ್ಸಿಂಗ್ ಕಾಲೇಜುಗಳಲ್ಲಿ ಮಲಯಾಳಿಗಳೇ ಹೆಚ್ಚು. ಬಹುಶಃ ಮಲಯಾಳಿಗಳಿಲ್ಲದ ಊರುಗಳಿಲ್ಲ ಎಂಬ ಮಾತಿನಲ್ಲಿ ಅತಿಶಯೋಕ್ತಿ ಇಲ್ಲ. ಹುಟ್ಟಾ ಚಾಣಾಕ್ಷರಾದ ಮಲಯಾಳಿಗಳು ಎಲ್ಲಿ ಹೋದರೂ ತಮ್ಮತನವನ್ನು ಬಿಟ್ಟುಕೊಡುವುದಿಲ್ಲ. ತುಂಬ ಬದ್ಧತೆಯಿಂದ ತಮ್ಮ ಭಾಷೆ, ಸಂಸ್ಕೃತಿ, ಆಚಾರ-ವಿಚಾರಗಳು ಮತ್ತು ಹಬ್ಬ-ಹರಿದಿನಗಳನ್ನು ಆಚರಿಸುತ್ತಾರೆ. 
ಮೂರು ವರ್ಷಗಳ ಹಿಂದೆ ಹುಬ್ಬಳ್ಳಿಯಲ್ಲಿರುವ ಮಲಯಾಳಿಗಳು ಸೇರಿ ಆಚರಿಸಿದ 'ಓಣಂ' ಹಬ್ಬದಲ್ಲಿ ನಾನು ಭಾಗವಹಿಸಿದ್ದೆ. ಆ ಸಂಪೂರ್ಣ ಏರಿಯಾ ಯಾವ ರೀತಿ ಮಲಯಾಳೀಕರಣಗೊಂಡಿತ್ತೆಂದರೆ ನಾನಿರುವುದು ಹುಬ್ಬಳ್ಳಿಯಲ್ಲೋ ಅಥವಾ ಕಣ್ಣೂರಿನಲ್ಲೋ ಎಂದು ಗೊಂದಲವಾಯಿತು. ಮಲಯಾಳಿ ಮಿತ್ರರೆಲ್ಲ ಸೇರಿ ಉತ್ತರ ಕರ್ನಾಟಕದ ದೇಸಿ ಹುಡುಗನಾದ ನನಗೆ ಹೊಸತಾದ ಬಿಳಿ ಮುಂಡು ಮತ್ತು ಬಿಳಿ ಶರ್ಟು ತೊಡಿಸಿ ಮಲಯಾಳಿ ಹುಡುಗನಾಗಿ ಕಾಣುವಂತೆ ಮಾಡಿದರು. ಅಚ್ಚ ಮಲಯಾಳ ಶೈಲಿಯಲ್ಲಿ ಸೀರೆಯುಟ್ಟುಕೊಂಡು ಮಿಂಚುತ್ತಿದ್ದ ನಾಲ್ಕಾರು ಸುಂದರ ಮಲಯಾಳಿ ಹುಡುಗಿಯರು ನನ್ನನ್ನು ಮಲಯಾಳದಲ್ಲೇ ಮಾತಾಡಿಸಿದರು. "ನನಗೆ ಮಲಯಾಳಂ ಬರುವುದಿಲ್ಲ..." ಎಂದು ವಿನಯದಿಂದ ಹೇಳಿದಾಗ ಕೇರಳದ ಚೆಲುವೆಯೊಬ್ಬಳು, "ಪರವಾಗಿಲ್ಲ ಚೆಟಾ, ನಾನು ನಿಮಗೆ ಆರು ತಿಂಗಳಲ್ಲಿ ಮಲಯಾಳಂ ಕಲಿಸುವೆ ಆಯ್ತಾ?" ಎಂದಳು! ಕಾರಣಾಂತರಗಳಿಂದ ನನಗೆ ಆ ಮಲಯಾಳಿ ಸುಂದರಿಯ ಶಿಷ್ಯನಾಗುವ ಸಂದರ್ಭ ತಪ್ಪಿ ಹೋಯಿತು.
ಇನ್ನು ಮಲಯಾಳಿ ಹುಡುಗಿಯರ ಕುರಿತು ಪ್ರತ್ಯೇಕ ಅಧ್ಯಾಯವನ್ನೇ ಬರೆಯಬೇಕು. ಈ ಮಲಯಾಳಿ ಹುಡುಗಿಯರು ಎಲ್ಲೇ ಹೋದರೂ, ಹೇಗೆ ಇದ್ದರೂ ತಮ್ಮ ಸಂಪ್ರದಾಯವನ್ನು ಮಾತ್ರ ಬಿಡುವುದಿಲ್ಲ. ಬಂಗಾರದ ಬಣ್ಣದ ಅಂಚಿರುವ ಶುಭ್ರ ಶ್ವೇತ ವರ್ಣದ ಸೀರೆಯುಟ್ಟು, ಮೊಣಕಾಲವರೆಗೆ ನೇತಾಡುವ ಉದ್ದ ಜಡೆಗೆ ಘಮಘಮಿಸುವ ಹೂವು ಮುಡಿದು, ಹಣೆಗೆ ಚಂದನದ ನಾಮವಿಟ್ಟು, ಮುಖದಲ್ಲಿ ಮಿಲಿಯನ್ ಡಾಲರ್ ಮುಗುಳ್ನಗೆ ತುಂಬಿಕೊಂಡು, ಕೈಯಲ್ಲೊಂದು ದೀಪ ಹಿಡಿದುಕೊಂಡು ನಿಂತರೆ ಸ್ವಾಮಿ ವಿವೇಕಾನಂದರ ಕಟ್ಟಾ ಅನುಯಾಯಿಯಾದ ನನ್ನಂಥ ಒಳ್ಳೆಯ ಹುಡುಗರು ಸಹ ತತ್ತರಿಸಿ ಹೋಗಬೇಕು ಅಷ್ಟೊಂದು ಸುಂದರವಾಗಿ ಕಾಣುತ್ತಾರೆ! 
ಇರಲಿ, ಇದು ನಾನು ಹತ್ತಿರದಿಂದ ಕಂಡ ಮಲಯಾಳಿಗಳ ಕುರಿತ ಒಂದು ಪಾರ್ಶ್ವನೋಟವೇ ಹೊರತು ಸಮಗ್ರ ಚಿತ್ರಣವಲ್ಲ. ಮಲಯಾಳಿಗಳ ಚಿತ್ರ-ವಿಚಿತ್ರ ಸ್ವಭಾವಗಳ ಕುರಿತು ಬರೆಯುತ್ತ ಹೊರಟರೆ ಹಲವು ಅಧ್ಯಾಯಗಳಿರುವ ಒಂದು ದೊಡ್ಡ ಪುಸ್ತಕವನ್ನೇ ಬರೆಯಬೇಕಾದೀತು. 




ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

1 thought on “ಮಿಂಚಿನ ಬಳ್ಳಿ- ವಿಕಾಸ ಹೊಸಮನಿ ಅಂಕಣ l ಮಲಯಾಳಿಗಳು”

  1. JANARDHANRAO KULKARNI

    ಲೇಖನ ಚೆನ್ನಾಗಿದೆ. ನಮ್ಮ ಭಾಷೆ ಬೆಳೆಯಬೇಕು ಅಂದರೆ ಸಾಹಿತ್ಯ ವಿಪುಲವಾಗಿರಬೇಕು, ಅದನ್ನು ಓದುವ ಹವ್ಯಾಸ ಇರಬೇಕು. ಮಲೆಯಾಳಿ, ತಮಿಳು ಜನರು ಮಾತಾಡುವುದು ತನ್ನ ಮಾತೃಭಾಷೆಯನ್ನೇ, ಜಾತಿ ಯಾವುದೇ ಇರಲಿ. ಕನ್ನಡದಲ್ಲಿ ಹಾಗಿಲ್ಲ. ಅಲ್ಲದೆ ನನ್ನಲ್ಲಿ ಸಾಹಿತ್ಯ ಲೇಖನದಲ್ಲಿ ಹೇಳಿದಂತೆ ಕನ್ನಡದ ತುಂಬ ಜನ ಲೇಖಕ-ಲೇಖಕಿಯರು ಮೀಸಲಾತಿಯ ಆಧಾರದ ಮೇಲೆಯೇ ಸಾಹಿತ್ಯಲೋಕದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಅದೂ ಒಂದು ದುರಂತ.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter