ಮಿಂಚಿನ ಬಳ್ಳಿ- ವಿಕಾಸ ಹೊಸಮನಿ ಅಂಕಣ l ಅಭಿಮಾನ

ಭಾರತದ ಎಲ್ಲೆಡೆಯೂ ಇತ್ತೀಚೆಗೆ ಅಭಿಮಾನದ ಮತ್ತು ಅಭಿಮಾನಿಗಳ ಹಾವಳಿ ಹೆಚ್ಚಾಗುತ್ತಿದೆ. ಹಲವು ವರ್ಷಗಳ ಹಿಂದೆ ಚಿತ್ರನಟರು, ಸಂಗೀತಗಾರರು, ಆಟಗಾರರು ಮತ್ತು ಕೆಲವೇ ಕೆಲವು ರಾಜಕಾರಣಿಗಳಿಗೆ ಮಾತ್ರ ಅಭಿಮಾನಿಗಳಿರುತ್ತಿದ್ದರು ಆದರೆ ಇತ್ತೀಚೆಗಿನ ವರ್ಷಗಳಲ್ಲಿ ದುಷ್ಟರು, ಭ್ರಷ್ಟರು, ಲಂಪಟರು, ಬುದ್ಧಿಜೀವಿಗಳು, ಸಮಾಜಘಾತುಕರು ಮತ್ತು ದೇಶದ್ರೋಹಿಗಳಿಗೂ ಅಭಿಮಾನಿಗಳಿದ್ದಾರೆ. ಪ್ರಸ್ತುತ ದಿನಮಾನಗಳಲ್ಲಿ ಅಭಿಮಾನದ ಮತ್ತು ಅಭಿಮಾನಗಳ ಬಗೆಗಿನ ವ್ಯಾಖ್ಯೆಯೇ ಬದಲಾಗಿರುವುದು ಚಿಂತನಾರ್ಹ.

ಭಾರತೀಯ ಚಿತ್ರನಟರ ಕುರಿತು ಅವರ ಅಭಿಮಾನಿಗಳಿಗಿರುವ ಅತಿರೇಕದ ಪ್ರೀತಿ ಕಂಡರೆ ನನಗೆ ತುಂಬ ಆಶ್ಚರ್ಯವಾಗುತ್ತದೆ. ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ನಟರ ಅಭಿಮಾನಿಗಳ ಹುಚ್ಚಾಟಕ್ಕಂತೂ ಮಿತಿಯೇ ಇಲ್ಲ. ಇದೊಂದು ವಿಷಯದಲ್ಲಿ ಮಾತ್ರ ನಮ್ಮ ಕನ್ನಡಿಗರು ಉಳಿದವರಿಗಿಂತ ಕೊಂಚ ಪ್ರಬುದ್ಧರು. ಇದೊಂದು ವಿಷಯಕ್ಕಾದರೂ ನಮ್ಮ ಕನ್ನಡ ಪ್ರೇಕ್ಷಕರನ್ನು ಅಭಿನಂದಿಸಲೇಬೇಕು.

ಹಿಂದಿ ಚಿತ್ರರಂಗದ ಮೊದಲ ಸೂಪರ್ ಸ್ಟಾರ್ ಎಂಬ ಹೆಗ್ಗಳಿಕೆಗೆ ಪಾತ್ರರಾದ ರಾಜೇಶ್ ಖನ್ನಾರ ಬಗೆಗಿನ ಅಭಿಮಾನದ ಕಥೆಗಳು ತುಂಬ ಸ್ವಾರಸ್ಯಕರವಾಗಿವೆ. ರಾಜೇಶ್ ಖನ್ನಾ ತುಂಬ ಆಕರ್ಷಕ ವ್ಯಕ್ತಿತ್ವ ಹೊಂದಿದ್ದ ಸ್ಫುರದ್ರೂಪಿ ನಟ. ಎಪ್ಪತ್ತು-ಎಂಬತ್ತರ ದಶಕದಲ್ಲಿ ಅವರು ಅನೇಕ ರೋಮ್ಯಾಂಟಿಕ್ ಚಿತ್ರಗಳಲ್ಲಿ ನಟಿಸುವ ಮೂಲಕ ಅಪಾರ ಜನಪ್ರಿಯತೆ ಪಡೆದಿದ್ದರು. ಪ್ರೇಕ್ಷಕರ ಮನಸೂರೆಗೊಳ್ಳುವಂತೆ ಅಭಿನಯಸುವುದರಲ್ಲಿ ಸಿದ್ಧಹಸ್ತರಾದ ರಾಜೇಶ್ ಖನ್ನಾ ದೇಶದಾದ್ಯಂತ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ್ದರು. ಅದರಲ್ಲೂ ವಿಶೇಷವಾಗಿ ಮಹಿಳಾ ಅಭಿಮಾನಿಗಳಿಗೆ ಅವರ ಬಗ್ಗೆ ಇದ್ದ ಹುಚ್ಚು ಅಭಿಮಾನ ದಂಗು ಬಡಿಸುವಂತಹದು.

ಮುಂಬೈನಲ್ಲಿರುವ ರಾಜೇಶ್ ಖನ್ನಾರ “ಆಶೀರ್ವಾದ್” ಬಂಗಲೆಯ ಮುಂದೆ ನೆರೆದಿರುತ್ತಿದ್ದ ಅಭಿಮಾನಿಗಳನ್ನು ನಿಯಂತ್ರಿಸುವುದಕ್ಕಾಗಿಯೇ ಅವರ ಬಂಗಲೆಯ ಹಿಂದೆ ಹೊಸ ಪೊಲೀಸ್ ಸ್ಟೇಷನ್ ಒಂದನ್ನು ತೆರೆಯಲಾಯಿತು ಮತ್ತು ಅವರ ಮಹಿಳಾ ಅಭಿಮಾನಿಗಳ ನಿಯಂತ್ರಣಕ್ಕಾಗಿಯೇ ಮಹಿಳಾ ಪೊಲೀಸರನ್ನು ನಿಯೋಜಿಸಲಾಯಿತು ಎಂಬುದು ಆಶ್ಚರ್ಯವಾದರೂ ಸತ್ಯ! ಎಪ್ಪತ್ತರ ದಶಕದಲ್ಲಿ “ಆಶೀರ್ವಾದ್” ಬಂಗಲೆಯ ಮುಂದೆ ರಾಜೇಶ್ ಖನ್ನಾರ ದರ್ಶನಕ್ಕೆ ಕಾದು ನಿಲ್ಲುತ್ತಿದ್ದ ಅವರ ಅಸಂಖ್ಯ ಅಭಿಮಾನಿಗಳಲ್ಲಿ ಒಬ್ಬರಾದ ನಟಿ ರೀನಾ ರಾಯ್ ಮುಂದೆ ಅವರ ಜೊತೆ ಹಲವು ಚಿತ್ರಗಳಲ್ಲಿ ನಟಿಸುವಂತಾದದ್ದು ಯೋಗಾಯೋಗ.

ರಾಜೇಶ್ ಖನ್ನಾ ಮದ್ರಾಸಿಗೆ ಬರುವುದು ಗೊತ್ತಾದರೆ ಮಧ್ಯರಾತ್ರಿಯ ವೇಳೆಯಲ್ಲೂ ವಿಮಾನ ನಿಲ್ದಾಣ ಮತ್ತು ಹೊಟೇಲಿನ ಮುಂದೆ ಸಾವಿರಾರು ಜನ ಯುವತಿಯರು ಅವರಿಗಾಗಿ ಕಾದು ನಿಲ್ಲುತ್ತಿದ್ದ ದೃಶ್ಯ ಆ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿತ್ತು. ಉತ್ತರ ಭಾರತದಲ್ಲಂತೂ ತುಂಬ ಜನ ಯುವತಿಯರು ರಾಜೇಶ್ ಖನ್ನಾರ ಭಾವಚಿತ್ರದೊಂದಿಗೆ ಮದುವೆಯಾದ ಪ್ರಸಂಗಗಳು ರಾಜೇಶ್ ಖನ್ನಾರ ಕುರಿತು ಅಂದಿನ ಯುವತಿಯರಿಗೆ ಇದ್ದ ಹುಚ್ಚು ಅಭಿಮಾನಕ್ಕೆ ಸಾಕ್ಷಿ!
ತೆಲುಗಿನ ಸ್ಟಾರ್ ನಟರಾದ ಚಿರಂಜೀವಿ ಮತ್ತು ನಂದಮೂರಿ ಬಾಲಕೃಷ್ಣರ ಅಭಿಮಾನಿಗಳು ಆಜನ್ಮ ವೈರಿಗಳಂತೆ ಬಡಿದಾಡುತ್ತಾರೆ. ನಟ ಪವನ್ ಕಲ್ಯಾಣನ ಉಗ್ರ ಅಭಿಮಾನಿಯೊಬ್ಬ ತನ್ನ ಮೆಚ್ಚಿನ ನಟನನ್ನು ನಿಂದಿಸಿದವನೊಬ್ಬನನ್ನು ಕೊಲೆ ಮಾಡಿ ಜೈಲು ಸೇರಿದ! ನಂತರದ ದಿನಗಳಲ್ಲಿ ಆತನ ಆರಾಧ್ಯ ದೈವವಾದ ಪವನ್ ಕಲ್ಯಾಣ್ ಅವನಿಗೇನಾದರೂ ಜಾಮೀನು ಕೊಡಿಸಿ ಜೈಲಿನಿಂದ ಹೊರತಂದನೆ? ಎಂಬುದರ ಕುರಿತು ಯಾವುದೇ ಮಾಹಿತಿ ಲಭ್ಯವಿಲ್ಲ.

ಚಿತ್ರನಟರನ್ನು ದೇವರಂತೆ ಆರಾಧಿಸುವ ತಮಿಳು ಪ್ರೇಕ್ಷಕರ ಹುಚ್ಚಾಟದ ಬಗ್ಗೆ ಸಾಕಷ್ಟು ಜೋಕುಗಳು ಪ್ರಚಲಿತದಲ್ಲಿವೆ. ‘ವೀರಪಾಂಡ್ಯ ಕಟ್ಟಬೊಮ್ಮನ್’ ಎಂಬ ಪ್ರಖ್ಯಾತ ಐತಿಹಾಸಿಕ ಚಿತ್ರದಲ್ಲಿ ತಮಿಳಿನ ಮೇರುನಟ ಶಿವಾಜಿ ಗಣೇಶನ್ ಸ್ವಾತಂತ್ರ್ಯ ಹೋರಾಟಗಾರನಾದ ತಮಿಳುನಾಡಿನ ಪಾಳೆಯಗಾರ ವೀರಪಾಂಡ್ಯ ಕಟ್ಟಬೊಮ್ಮನ್ ಪಾತ್ರದಲ್ಲಿ ಅಕ್ಷರಶಃ ಪರಕಾಯ ಪ್ರವೇಶ ಮಾಡಿ ಅದ್ಭುತವಾಗಿ ನಟಿಸಿದ್ದರು. ಇಂದಿಗೂ ವೀರಪಾಂಡ್ಯ ಕಟ್ಟಬೊಮ್ಮನ್ ಎಂದರೆ ಕಣ್ಣಮುಂದೆ ಮೂಡುವ ಚಿತ್ರ ಮೇರು ನಟ ಶಿವಾಜಿ ಗಣೇಶನ್ ಅವರದು. ಬ್ರಿಟಿಷರ ವಿರುದ್ಧ ಕಟ್ಟಬೊಮ್ಮನ್ ವೀರಾವೇಶದಿಂದ ಹೋರಾಡಿದರೂ ಕೊನೆಗೆ ಬ್ರಿಟಿಷರ ಎದುರು ಸೋಲುತ್ತಾನೆ. ಚಿತ್ರದ ಕೊನೆಯ ಸನ್ನಿವೇಶದಲ್ಲಿ ಕಟ್ಟಬೊಮ್ಮನ್ ನನ್ನು ಬ್ರಿಟಿಷರು ಗಲ್ಲಿಗೇರಿಸುತ್ತಾರೆ.

‘ವೀರಪಾಂಡ್ಯ ಕಟ್ಟಬೊಮ್ಮನ್’ ಚಿತ್ರದ ಅದ್ಭುತ ಯಶಸ್ಸನ್ನು ಕಂಡು ಅದರ ಕುರಿತು ವರದಿ ಮಾಡಲು ಪ್ರಸಿದ್ಧ ಇಂಗ್ಲಿಷ್ ಪತ್ರಿಕೆಯ ಪತ್ರಕರ್ತನೊಬ್ಬ ಚೆನ್ನೈಗೆ ಬಂದ. ‘ವೀರಪಾಂಡ್ಯ ಕಟ್ಟಬೊಮ್ಮನ್’ ಸಿನಿಮಾ ನೋಡಿ ಹೊರಬಂದ ತಮಿಳು ಪ್ರೇಕ್ಷಕನೊಬ್ಬನಿಗೆ ಪತ್ರಕರ್ತ, “ಸಿನಿಮಾದ ಕುರಿತು ನಿಮ್ಮ ಅಭಿಪ್ರಾಯವೇನು ಗೆಳೆಯ?” ಎಂದು ಕೇಳಿದ. ತಮಿಳು ಬಾಂಧವ, “ಚಿತ್ರವೇನೋ ಚೆನ್ನಾಗಿದೆ ಆದರೆ ಕಟ್ಟಬೊಮ್ಮನ್ ಪಾತ್ರವನ್ನು ಶಿವಾಜಿ ಗಣೇಶನ್ ಮಾಡಿದ್ದರಿಂದ ಬ್ರಿಟಿಷರು ಗಲ್ಲಿಗೇರಿಸಿದರು. ಅದೇ ವಾದ್ಯಾರ್ (ಎಂ.ಜಿ.ರಾಮಚಂದ್ರನ್) ಕಟ್ಟಬೊಮ್ಮನ್ ಆಗಿದ್ದರೆ ಈ ಬ್ರಿಟಿಷ್ ನಾಯಿಗಳನ್ನು ತುಂಡು ತುಂಡಾಗಿ ಕತ್ತರಿಸಿ ಹಾಕುತ್ತಿದ್ದರು!” ಎಂದು ಆವೇಶಭರಿತನಾಗಿ ಹೇಳಿದನಂತೆ. ತಮಿಳು ಪ್ರೇಕ್ಷಕರ ಅಂಧಾಭಿಮಾನದ ಕುರಿತು ಇದಕ್ಕಿಂತ ಹೆಚ್ಚಿನ ವಿವರಣೆ ನೀಡುವ ಅಗತ್ಯವಿಲ್ಲವೆನಿಸುತ್ತದೆ.

ಮಲಯಾಳಂ ಪ್ರೇಕ್ಷಕರು ನಮ್ಮ ತಮಿಳು, ತೆಲುಗು ಬಾಂಧವರಿಗಿಂತ ಯಾವುದರಲ್ಲೂ ಕಡಿಮೆಯಿಲ್ಲ. ಮಲಯಾಳಿಗಳ ದೃಷ್ಟಿಯಲ್ಲಿ ಮಮ್ಮುಟ್ಟಿ, ಮೋಹನಲಾಲರನ್ನು ಮೀರಿಸುವ ನಟರು ಹಿಂದೆಯೂ ಹುಟ್ಟಿಲ್ಲ, ಮುಂದೆಯೂ ಹುಟ್ಟುವುದಿಲ್ಲ! ಮಲಯಾಳಂ ಚಿತ್ರಗಳೇ ಎಲ್ಲ ಚಿತ್ರಗಳಿಗಿಂತ ಶ್ರೇಷ್ಠವೆಂಬುದು ಮಲಯಾಳಿಗಳ ಖಚಿತ ಅಭಿಪ್ರಾಯ. ಕನ್ನಡ, ತಮಿಳು, ತೆಲುಗು ಮತ್ತು ಹಿಂದಿಯವರು ಪರಸ್ಪರರ ಚಿತ್ರಗಳನ್ನು ಕದ್ದು ಸಿನಿಮಾ ಮಾಡುತ್ತಾರೆ ಆದರೆ ಮಲಯಾಳಂನವರು ಪಾಶ್ಚಾತ್ಯ ಸಿನಿಮಾಗಳನ್ನು ಕದ್ದು ಸಿನಿಮಾ ಮಾಡುತ್ತಾರೆ.

ಮಲಯಾಳಿಗಳು ಎಷ್ಟು ಬುದ್ಧಿವಂತರೆಂದರೆ ಅವರು ಕದ್ದು ಸಿನಿಮಾ ಮಾಡಿದರೂ ಅದನ್ನು ಕದ್ದ ಮಾಲೆಂದು ಸಾಬೀತುಪಡಿಸುವುದು ತುಂಬ ಕಷ್ಟ. ಅದೇ ರೀತಿ ಮಲಯಾಳಿ ಸಿನಿಮಾದ ಅಭಿಮಾನಿಗಳು ಬೇರೆ ಭಾಷೆಗಳಲ್ಲಿ ಎಂತಹ ಶ್ರೇಷ್ಠ ಚಿತ್ರವೇ ಬರಲಿ, ಎಂತಹ ಶ್ರೇಷ್ಠ ನಟನೇ ಇರಲಿ ಯಾವುದೇ ಕಾರಣಕ್ಕೂ ಅದನ್ನವರು ಒಪ್ಪುವುದಿಲ್ಲ. ಮಲಯಾಳಂ ಚಿತ್ರಗಳೇ ಮೇಲು, ಮಲಯಾಳಂ ನಟರೇ ಶ್ರೇಷ್ಠ ಎಂದು ವಾದಿಸುತ್ತಾರೆ. ಶೇಕಡಾ ಎಂಬತ್ತರಷ್ಟು ಮಲಯಾಳಿಗಳಿಗೆ ಶ್ರೇಷ್ಠತೆಯ ವ್ಯಸನವಿದೆ.

ಚಲನಚಿತ್ರ ಪ್ರಶಸ್ತಿಗಳನ್ನು ದುಡ್ಡು ಕೊಟ್ಟು ಖರೀದಿಸುವಲ್ಲಿ ಹಿಂದಿ ಮತ್ತು ಮಲಯಾಳಂ ಚಿತ್ರರಂಗದವರ ನಡುವೆ ಸಾಕಷ್ಟು ಪೈಪೋಟಿಯಿದೆ. ಯಾವುದೇ ಒಂದು ಪ್ರಶಸ್ತಿಯ ಮೇಲೆ ಮಲಯಾಳಿಗಳ ಕಣ್ಣು ಬಿದ್ದರೆ ಅವರದನ್ನು ಬಿಡುವುದಿಲ್ಲ. ಶತಾಯಗತಾಯ ಪ್ರಯತ್ನಿಸಿ ಆ ಪ್ರಶಸ್ತಿ ಪಡೆದೇ ತೀರುತ್ತಾರೆ. ಮಲಯಾಳಂ ನಟರ ಪ್ರಶಸ್ತಿ ಮೋಹದ ಕುರಿತು ನನ್ನ ಮಲಯಾಳಿ ಸ್ನೇಹಿತೆಯೊಬ್ಬಳೊಂದಿಗೆ ಮಾತನಾಡುತ್ತ ತಮಾಷೆ ಮಾಡಿದಾಗ ಅವಳ ಮುಖ ಸಪ್ಪಗಾಯಿತು. ಮಮ್ಮುಟ್ಟಿ ಮತ್ತು ಮೋಹನಲಾಲ್ ಅಂತಹವರಲ್ಲ ಎಂದು ನನ್ನೊಂದಿಗೆ ವಾದಿಸಿದಳು. ಮಲಯಾಳಿ ಸ್ಟಾರ್ ನಟರಾದ ಮಮ್ಮುಟ್ಟಿ ಮತ್ತು ಮೋಹನಲಾಲರಿಗೋಸ್ಕರ ಈ ಸುಂದರ ಮಲಯಾಳಿ ಹುಡುಗಿಯ ಸ್ನೇಹವನ್ನು ಕಳೆದುಕೊಳ್ಳುವುದು ಬುದ್ಧಿವಂತಿಕೆಯಲ್ಲವೆಂದು ಆ ವಿಚಾರವನ್ನು ಅಲ್ಲಿಗೇ ಕೈಬಿಟ್ಟೆ!

ನಮ್ಮ ದೇಶದಲ್ಲಿ ಅಭಿಮಾನಿಗಳ ವಿಷಯದಲ್ಲಿ ಚಿತ್ರನಟರಿಗೆ ಸ್ಪರ್ಧೆಯೊಡ್ಡಬಲ್ಲವರೆಂದರೆ ಅದು ಕ್ರಿಕೆಟ್ ಆಟಗಾರರು ಮಾತ್ರ. ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ, ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೋಹ್ಲಿ ಮತ್ತು ರೋಹಿತ್ ಶರ್ಮರಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ.
ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ಕ್ರಿಕೆಟ್ ಆಟದಿಂದ ನಿವೃತ್ತರಾಗಿ ತುಂಬ ವರ್ಷಗಳೇ ಕಳೆದರೂ ಅವರಿಬ್ಬರ ಜನಪ್ರಿಯತೆ ಕಡಿಮೆಯಾಗಿಲ್ಲ.

ಬಂಗಾಳದಲ್ಲಂತೂ ಸೌರವ್ ಗಂಗೂಲಿಯವರಿಗಿರುವ ಅಸಂಖ್ಯ ಅಭಿಮಾನಿಗಳು ಮತ್ತು ಗಂಗೂಲಿಯವರ ಬಗೆಗೆ ಅವರ ಅಭಿಮಾನಿಗಳಿಗಿರುವ ಅಪಾರವಾದ ಪ್ರೀತ್ಯಾದರ ಕಂಡರೆ ಯಾರಿಗಾದರೂ ಆಶ್ಚರ್ಯವಾಗುತ್ತದೆ. ಸೌರವ್ ಗಂಗೂಲಿಯವರ ವರ್ಚಸ್ಸು ಮತ್ತು ಜನಪ್ರಿಯತೆ ಹಾಗಿದೆ. ಇದೇ ಮಾತು ಸಚಿನ್ ತೆಂಡೂಲ್ಕರ್ ಮತ್ತು ಯುವರಾಜ್ ಸಿಂಗ್ ಅವರಿಗೂ ಅನ್ವಯಿಸುತ್ತದೆ. ಮಹೇಂದ್ರ ಸಿಂಗ್ ಧೋನಿಯವರಿಗೆ ನಾಯಕರಾಗಿದ್ದಾಗ ಇದ್ದಂತಹ ವರ್ಚಸ್ಸು ಈಗಿಲ್ಲವಾದರೂ ಅವರ ಅಭಿಮಾನಿ ಬಳಗವೂ ಸಾಕಷ್ಟು ದೊಡ್ಡದಿದೆ.

ಸದ್ಯದ ಬಿಸಿ ಬಿಸಿ ಚರ್ಚೆಯೆಂದರೆ ವಿರಾಟ್ ಕೋಹ್ಲಿ ವರ್ಸಸ್ ರೋಹಿತ್ ಶರ್ಮ ಎಂಬುದು. ನಿಜಕ್ಕೂ ವಿರಾಟ್ ಕೋಹ್ಲಿ ಮತ್ತು ರೋಹಿತ್ ಶರ್ಮರ ನಡುವೆ ಎಷ್ಟು ಶತ್ರುತ್ವವಿದೆಯೋ ಗೊತ್ತಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಇವರಿಬ್ಬರ ಅಭಿಮಾನಿಗಳ ಮಧ್ಯ ನಡೆಯುವ ಜಗಳಗಳು ತುಂಬ ಸ್ವಾರಸ್ಯಕರವಾಗಿರುತ್ತವೆ. ಭಾರತದ ಟ್ವೆಂಟಿ ಟ್ವೆಂಟಿ, ಏಕದಿನ ಮತ್ತು ಟೆಸ್ಟ್ ಕ್ರಿಕೆಟ ತಂಡಕ್ಕೆ ರೋಹಿತ್ ಶರ್ಮ ನಾಯಕರಾಗಿ ಆಯ್ಕೆಯಾದ ನಂತರ ಇವರಿಬ್ಬರ ಅಭಿಮಾನಿಗಳ ಜಗಳ ತಾರಕಕ್ಕೇರಿದೆ. ಇದರಿಂದ ವಿಶೇಷ ಪರಿಣಾಮವೇನಾಗದಿದ್ದರೂ ಕನಿಷ್ಠ ಪಕ್ಷ ಕೆಲಸವಿಲ್ಲದೇ ಸದಾ ಅಂತರ್ಜಾಲ ತಾಣದಲ್ಲಿ ಮುಳುಗಿರುವ ನೆಟ್ಟಿಗರಿಗೆ ಮನರಂಜನೆಯಾದರೂ ಸಿಗುತ್ತದೆ. ಇದಕ್ಕೊಂದು ತಾಜಾ ಉದಾಹರಣೆಯಾಗಿ ಈ ಘಟನೆಯನ್ನು ಗಮನಿಸಬಹುದು.

ರೋಹಿತ್ ಅಭಿಮಾನಿ : “ಭಾರತದಲ್ಲಿ ಹುಟ್ಟಿದ ನಾನೇ ಭಾಗ್ಯವಂತ! ಏಕೆಂದರೆ ನಮ್ಮ ಗುರು ರೋಹಿತ್ ಶರ್ಮ ಏಕದಿನ ಕ್ರಿಕೆಟಿನಲ್ಲಿ ಮೂರು ದ್ವಿಶತಕ ಬಾರಿಸಿದ್ದಾರೆ!!”
ವಿರಾಟ್ ಅಭಿಮಾನಿ : “ನಿನ್ನನ್ನು ಹುಟ್ಟಿಸಿದ ನಿನ್ನ ತಂದೆ-ತಾಯಿ ದುರದೃಷ್ಟವಂತರು! ಏಕೆಂದರೆ ನೀನು ಕಳೆದ ಮೂರು ವರ್ಷಗಳಿಂದ ಪಿ.ಯು.ಸಿ. ಫೇಲಾಗುತ್ತಿದ್ದೀಯ!!”
ರೋಹಿತ್ ಅಭಿಮಾನಿ : “ನಿಮ್ಮ ಗುರು ಕ್ಯಾಪ್ಟನ್ ಆಗಿರುವ ಆರ್.ಸಿ.ಬಿ. ಟೀಮು ಐ.ಪಿ.ಎಲ್.ನಲ್ಲಿ ಎಷ್ಟು ಸಲ ಕಪ್ ಗೆದ್ದಿದೆಯೆಂದು ನಮಗೂ ಗೊತ್ತು ಮರಿ, ಸುಮ್ಮನೆ ಕೊಚ್ಚಿಕೋಬೇಡ.”
ವಿರಾಟ್ ಅಭಿಮಾನಿ : “ಈ ಸಲ ಕಪ್ ನಮ್ದೇ! ಜೈ ಆರ್.ಸಿ.ಬಿ! ಜೈ ವಿರಾಟ್ ಕೋಹ್ಲಿ!!”
ರೋಹಿತ್ ಅಭಿಮಾನಿ : “ಎರಡು ಸಾವಿರ ವರ್ಷಗಳಿಂದ ಇದನ್ನು ಕೇಳುತ್ತಿದ್ದೇನೆ! ಯಾರು ಬೇಕಾದರೂ ಕನಸು ಕಾಣಬಹುದು, ಕನಸು ಕಾಣೋದಿಕ್ಕೆ ದುಡ್ಡು ಕೊಡಬೇಕಾಗಿಲ್ಲವಾದ್ದರಿಂದ ನೀನು ಅಷ್ಟಾದರೂ ಮಾಡು ಮರಿ…”

ಹೀಗೆ ನಾಟಕದ ಸಂಭಾಷಣೆಯಂತೆ ಇದು ಸಾಗುತ್ತದೆ. ನನಗೆ ನಮ್ಮ ದೇಶದಲ್ಲಿ ಎಷ್ಟು ಮಂದಿ ಕೆಲಸವಿಲ್ಲದ ಜನ ಇಂತಹ ವ್ಯರ್ಥ ವಿಷಯಗಳ ಕುರಿತು ಕಾಲಹರಣ ಮಾಡುತ್ತಿದ್ದಾರೆ ಎನಿಸಿ ಆಶ್ಚರ್ಯವಾಗುತ್ತದೆ. ಇದನ್ನು ನನ್ನ ಮಿತ್ರನೊಬ್ಬನ ಬಳಿ ಹೇಳಿದಾಗ ಆತ ಕುದ್ದು ಹೋದ.
“ಅಹಂಕಾರಿಗಳಾದ ಮುಂಬೈ ಮತ್ತು ಚೆನ್ನೈ ಟೀಮುಗಳವರಿಗೆ ಒಂದು ಪಾಠ ಕಲಿಸಬೇಕಾಗಿದೆ!” ಎಂದು ಸಿಟ್ಟಿನಿಂದ ಮೇಜು ಗುದ್ದಿ ಹೇಳಿದ.

“ನಮ್ಮ ಗುರು ವಿರಾಟ್ ಕೋಹ್ಲಿಯ ಸಮಯ ಸ್ವಲ್ಪ ಚೆನ್ನಾಗಿಲ್ಲ. ಟಾಸ್ ಸೋಲೆ ಮ್ಯಾಚಿನ ಸೋಲಿಗೆ ಮುಖ್ಯ ಕಾರಣ! ಟಾಸ್ ಮಾಡುವಾಗ ನಮ್ಮ ಗುರುವಿಗೆ ಮೋಸ ಮಾಡುತ್ತಿದ್ದಾರೆ, ಶೀಘ್ರದಲ್ಲಿಯೇ ಇದರ ಕುರಿತು ಸಿ.ಬಿ.ಐ. ತನಿಖೆ ಮಾಡಬೇಕೆಂಬುದು ನಾವೆಲ್ಲ ಬೆಂಗಳೂರಿನ ವಿಧಾನಸೌಧದ ಮುಂದೆ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಲಿದ್ದೇವೆ!” ಎಂದು ಆವೇಶದಿಂದ ಹೇಳಿದ.
ವಿರಾಟ್ ಕೋಹ್ಲಿ ಮತ್ತು ಆರ್.ಸಿ.ಬಿ. ಟೀಮಿನ ಉಗ್ರ ಅಭಿಮಾನಿಯಾದ ಇವನೊಂದಿಗೆ ಮಾತನಾಡಿ ಪ್ರಯೋಜನವಿಲ್ಲವೆಂದು ನನಗೆ ಮನದಟ್ಟಾಯಿತು. ನಾನು ಆ ಉಗ್ರ ಅಭಿಮಾನಿಯಿಂದ ತಪ್ಪಿಸಿಕೊಂಡು ಬರುವಷ್ಟರಲ್ಲಿ ಸಾಕು ಸಾಕಾಗಿ ಹೋಯಿತು.

ನಾನು ಕಂಡಂತೆ ಮಧ್ಯವಯಸ್ಕ ಕವಿ ಒಬ್ಬ ಆರಂಭದಲ್ಲಿ ಚೆನ್ನಾಗಿಯೇ ಕವಿತೆ ಬರೆಯುತ್ತಿದ್ದ. ಜಾತಿ ಮತ್ತು ವಸೂಲಿಯ ಆಧಾರದ ಮೇಲೆ ಕೆಲವು ಸಣ್ಣ-ಪುಟ್ಟ ಪ್ರಶಸ್ತಿಗಳು ಸಿಕ್ಕ ನಂತರ ಈತನ ವರಸೆ ಬದಲಾಯಿತು. ಇತ್ತೀಚೆಗೆ ಈ ಮಹಾಶಯ ತನ್ನನ್ನು ತಾನು ಕನ್ನಡದ ಏಕಮೇವಾದ್ವಿತೀಯ ಕವಿ, ಇನ್ನು ತನಗೆ ಸಮನಾದ ಕವಿ ಕರ್ನಾಟಕದಲ್ಲಿ ಇಲ್ಲವೆಂದು ತಿಳಿದುಕೊಂಡು ತುಂಬ ಅಹಂಕಾರದಿಂದ ವರ್ತಿಸುತ್ತಿದ್ದಾನೆ. ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಸಿಕ್ಕ ನಂತರ ಈ ಮಧ್ಯವಯಸ್ಕ ಕವಿಯ ಬರವಣಿಗೆ ಬಹುತೇಕ ನಿಂತೇ ಬಿಟ್ಟಿದೆ. ಬರೆದರೂ ತುಂಬ ಕಳಪೆಯಾಗಿ ಬರೆಯುತ್ತಿದ್ದಾನೆ. ಇತ್ತೀಚೆಗೆ ಒಬ್ಬ ಓದುಗರಿಗೆ ಈ ಮೂರ್ಖ, “ನನ್ನ ಕಾವ್ಯಕ್ಕೆ ಕರ್ನಾಟಕದಾದ್ಯಂತ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಅದರಲ್ಲೂ ಮಹಿಳಾ ಅಭಿಮಾನಿಗಳೇ ಹೆಚ್ಚು! ಇದುವರೆಗೆ ನನಗೆ ಮುನ್ನೂರು ಹುಡುಗಿಯರು ರಕ್ತದಲ್ಲಿ ಪ್ರೇಮಪತ್ರ ಬರೆದಿದ್ದಾರೆ!” ಎಂದು ಬುರುಡೆ ಬಿಟ್ಟ. ಪ್ರಜ್ಞಾವಂತರಾದ ಓದುಗರು, “ಎಲ್ಲಿ ಆ ಪ್ರೇಮಪತ್ರಗಳನ್ನು ತೋರಿಸಿ ನೋಡೋಣ?” ಎಂದಿದ್ದಕ್ಕೆ ಅವರ ದೋಸ್ತಿಯನ್ನೇ ಬಿಟ್ಟ.

ಇತಿಹಾಸದಲ್ಲೆಲ್ಲೂ ಹುಡುಗಿಯರು ತಮ್ಮ ರಕ್ತದಲ್ಲಿ ಪ್ರೇಮಪತ್ರ ಬರೆದ ಉದಾಹರಣೆಯಿಲ್ಲ! ಅದರಲ್ಲೂ ಕನ್ನಡದ ಹುಡುಗಿಯರು ತುಂಬ ಬುದ್ಧಿವಂತರು ಮತ್ತು ಸಾಮಾನ್ಯ ಜ್ಞಾನ ಉಳ್ಳವರು. ಹುಡುಗಿಯರು ಹುಡುಗರಿಂದ ರಕ್ತದಲ್ಲಿ ಪ್ರೇಮಪತ್ರ ಬರೆಸುತ್ತಾರೆಯೇ ಹೊರತು ತಾವು ಬರೆಯುವುದಿಲ್ಲ! ರಕ್ತದಲ್ಲಿ ಪ್ರೇಮಪತ್ರ ಬರೆಯುವ ಮೂರ್ಖತನ ಮಾಡುವವರು ಹುಡುಗರು ಮಾತ್ರ! ಈ ಭಂಡ ಕವಿಯ ಕವಿತೆಗಳಿಗೆ ರೋಸಿ ಹೋಗಿ ನಾಲ್ಕಾರು ಹುಡುಗಿಯರು ಕೆಂಪು ಇಂಕಿನಲ್ಲಿ ಸಿಕ್ಕಾಪಟ್ಟೆ ಬೈದು ಬರೆದ ಮಾನಹಾನಿಯ ಪತ್ರಗಳನ್ನೇ ಇವನು ರಕ್ತದಲ್ಲಿ ಬರೆದ ಪ್ರೇಮಪತ್ರ ಎಂದು ಪ್ರಚಾರ ಮಾಡುತ್ತಿದ್ದಾನೆಯೇ? ಕನ್ನಡ ಕಾವ್ಯದೇವತೆ ಇನ್ನೂ ಏನೇನು ನೋಡಲಿಕ್ಕಿದೆಯೋ?

ಮಧ್ಯವಯಸ್ಕ ಕವಯತ್ರಿಯೊಬ್ಬಳಿದ್ದಾಳೆ. ಈ ಮಹಿಳೆ ಖ್ಯಾತಿ ಪಡೆದಿದ್ದು ತನ್ನ ಸೌಂದರ್ಯ ಮತ್ತು ಚಾಣಾಕ್ಷತನದಿಂದಲೇ ಹೊರತು ಪ್ರತಿಭೆಯಿಂದಲ್ಲ! ಪ್ರಚಾರಪ್ರಿಯಳಾದ ಈಕೆ ಮೈಸೂರು ಮತ್ತು ಕರಾವಳಿ ಭಾಗದಲ್ಲಿ ನಡೆಯುವ ಬಹುತೇಕ ಎಲ್ಲ ಕವಿಗೋಷ್ಠಿ ಮತ್ತು ಸಾಹಿತ್ಯಕ ಸಮಾರಂಭಗಳಲ್ಲಿ ತಪ್ಪದೇ ಭಾಗವಹಿಸುತ್ತಾಳೆ. ಇತ್ತೀಚೆಗೆ ಹಿರಿಯ ಕವಿಯೊಬ್ಬರ ಸನ್ಮಾನ ಸಮಾರಂಭ ಏರ್ಪಾಡಾಗಿತ್ತು. ಈ ಮಹಾಮಹಿಳೆ ಹೊಸ ರೇಷ್ಮೆ ಸೀರೆಯುಟ್ಟು ತುಂಬ ಸಡಗರದಿಂದ ಸಮಾರಂಭಕ್ಕೆ ಆಗಮಿಸಿದ್ದಳು.

ಉದಯೋನ್ಮುಖ ಕಥೆಗಾರನಾದ ನನ್ನ ಮಿತ್ರನೂ ಈ ಸಮಾರಂಭಕ್ಕೆ ಹೋಗಿದ್ದ. ಸಮಾರಂಭದಲ್ಲಿ ಈ ಕಥೆಗಾರ ಕುರ್ಚಿ ಖಾಲಿಯಿದೆ ಎಂದುಕೊಂಡು ಈ ಕವಯತ್ರಿಯ ಪಕ್ಕ ಕುಳಿತುಕೊಂಡ. ನನ್ನ ಮಿತ್ರ ಮೊದಮೊದಲು ರೇಷ್ಮೆ ಸೀರೆಯುಟ್ಟ ಕವಯತ್ರಿಯನ್ನು ಕಲರ್ಸ್ ಕನ್ನಡ ಛಾನಲ್ಲಿನಲ್ಲಿ ಬರುವ ಜನಪ್ರಿಯ ಧಾರಾವಾಹಿಯೊಂದರ ಪೋಷಕ ನಟಿಯೆಂದು ತಿಳಿದಿದ್ದ!

ಕವಯತ್ರಿ, “ಕಂದಾ, ನೀನು ಯಾರಪ್ಪ? ನಿನ್ನ ಹೆಸರೇನು? ಏನು ಮಾಡುತ್ತಿದ್ದೀಯ?” ಎಂದು ಕೇಳಿದಳು.
ಕಥೆಗಾರ, “ಮೇಡಂ, ನಾನೊಬ್ಬ ಉದಯೋನ್ಮುಖ ಕಥೆಗಾರ, ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಸಂಶೋಧನಾ ವಿದ್ಯಾರ್ಥಿ” ಎಂದು ಪರಿಚಯಿಸಿಕೊಂಡ.
ಕವಯತ್ರಿ, “ಸಂತೋಷ ಕಂದಾ, ದೇವರು ನಿನಗೆ ಒಳ್ಳೆಯದನ್ನು ಮಾಡಲಿ!” ಎಂದಳು.
“ಮೇಡಂ, ನೀವು ಕಲರ್ಸ್ ಕನ್ನಡ ಛಾನೆಲ್ಲಿನಲ್ಲಿ ಬರುವ ‘ಶ್ರೀದೇವಿ’ ಧಾರಾವಾಹಿಯ ಪೋಷಕ ನಟಿಯೇ?” ಎಂದು ಕೇಳಿದ.ಕವಯತ್ರಿ, “ಇಲ್ಲ ಕಂದಾ, ನಾನು ಕನ್ನಡ ಕವಯತ್ರಿ. ಇತ್ತೀಚೆಗೆ ನನ್ನ ಕವನಸಂಕಲನಕ್ಕೆ ಹುಬ್ಬಳ್ಳಿಯ ನವ್ಯಕಾವ್ಯ ಪುರಸ್ಕಾರ ದೊರೆಯಿತು” ಎಂದಳು.

ಕಥೆಗಾರ, “ಮೇಡಂ, ನಿಮ್ಮ ಪುಸ್ತಕದ ಬಗ್ಗೆ ಕೇಳಿದ್ದೇನೆ. ಕಾಸರಗೋಡಿನ ಒಬ್ಬ ಪ್ರಣಯಕಥಾ ಲೇಖಕನಿಗೆ ಸದಾ ನಿಮ್ಮ ‘ಪುಸ್ತಕದ ಧ್ಯಾನ!” ಎಂದು ಹೇಳಿದ.
ರೇಷ್ಮೆ ಸೀರೆಯ ಕವಯತ್ರಿ ಇದನ್ನು ಕೇಳಿ ಹಿರಿಹಿರಿ ಹಿಗ್ಗಿದಳು. ಕೊನೆಗೆ ಈ ಚಾಣಾಕ್ಷ ಮಹಿಳೆ ತನ್ನ ಜಂಭದ ಚೀಲದಿಂದ ಸ್ಮಾರ್ಟ್ ಫೋನನ್ನು ತೆಗೆದು, “ಕಂದಾ, ನಿನ್ನ ಪರಿಚಯವಾಗಿದ್ದು ತುಂಬ ಸಂತೋಷ ಕಣಪ್ಪ. ನಿನ್ನೊಂದಿಗೆ ಒಂದು ಸೆಲ್ಫಿ ಆಗಲಿ” ಎಂದು ಹೇಳಿ ತನ್ನ ಫೋನನ್ನು ಅವನ ಕೈಗೆ ಕೊಟ್ಟು ಸೆಲ್ಫಿ ತೆಗೆಯುವಂತೆ ಹೇಳಿದಳು. ಕಥೆಗಾರ ಸೋದರತ್ತೆಯಂತೆ ಮಮಕಾರ ತೋರುತ್ತಿರುವ ಈ ಕವಯತ್ರಿಯೊಂದಿಗೆ ವಿವಿಧ ಕೋನಗಳಲ್ಲಿ ಎರಡ್ಮೂರು ಸೆಲ್ಫಿ ತೆಗೆದುಕೊಂಡ ನಂತರ ಫೋನನ್ನು ಅವಳಿಗೆ ಮರಳಿಸಿದ.

ಕಥೆಗಾರ ಮರುದಿನ ಫೇಸ್‌ಬುಕ್ ಓಪನ್ ಮಾಡಿದಾಗ ಕವಯತ್ರಿಯ ಪೋಸ್ಟ್ ಕಂಡು ಬೆಚ್ಚಿಬಿದ್ದ! ಚಾಣಾಕ್ಷಳಾದ ಕವಯತ್ರಿ, “ಇತ್ತೀಚೆಗೆ ನಡೆದ ಸಮಾರಂಭದಲ್ಲಿ ನನಗೆ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಸಂಶೋಧಾನಾರ್ಥಿಯಾಗಿರುವ ಉದಯೋನ್ಮುಖ ಕಥೆಗಾರನೊಬ್ಬನ ಪರಿಚಯವಾಯಿತು. ಈ ಸಹೃದಯಿ ಬಾಲಕ ನನ್ನ ಕಟ್ಟಾ ಅಭಿಮಾನಿ! ನನ್ನ ಕವನ ಸಂಕಲನವನ್ನು ನನಗಿಂತ ಹೆಚ್ಚು ಬಾರಿ ಇವನೇ ಓದಿದ್ದಾನೆ! ಇಂತಹ ಅಭಿಮಾನಿಗಳನ್ನು ಪಡೆದ ನಾನೇ ಧನ್ಯ ಸ್ತ್ರೀ!” ಎಂಬ ಅಡಿಬರಹದ ಜೊತೆಗೆ ಸಮಾರಂಭದಲ್ಲಿ ಕ್ಲಿಕ್ಕಿಸಿದ ಸೆಲ್ಫಿಗಳನ್ನು ಪೋಸ್ಟ್ ಮಾಡಿದ್ದಳು!

ರಾಜಕಾರಣಿಗಳ ಅಭಿಮಾನಿಯಾಗುವುದು ಒಂದು ಅರೆಕಾಲಿಕ ಉದ್ಯೋಗ. ಕಷ್ಟಪಟ್ಟು ಕೆಲಸ ಮಾಡಲಾಗದ ಮೈಗಳ್ಳರಿಗೆ ಇದು ಹೇಳಿ ಮಾಡಿಸಿದ ಕೆಲಸ. ಯಾವುದೇ ಒಬ್ಬ ರಾಜಕಾರಣಿಗೆ ಸಚಿವ ಸ್ಥಾನ ಸಿಗದಿದ್ದರೆ ಅಥವಾ ಸಚಿವ ಸ್ಥಾನ ಸಿಕ್ಕರೂ ಬೇಕಾದ ಖಾತೆ ಸಿಗದಿದ್ದರೆ ಅಭಿಮಾನಿಗಳ ಆಕ್ರೋಶ ಭುಗಿಲೇಳುತ್ತದೆ. ಲಾಭದಾಯಕ ನಿಗಮ, ಮಂಡಳಿಗಳ ಅಧ್ಯಕ್ಷ ಸ್ಥಾನ ಸಿಗದಿದ್ದರೂ ಅಭಿಮಾನಿಗಳು ರೊಚ್ಚಿಗೆದ್ದು ಪ್ರತಿಭಟಿಸುತ್ತಾರೆ. ಲೈಂಗಿಕ ಹಗರಣದಲ್ಲಿ ಭಾಗಿಯಾದವರು ಮತ್ತು ಬ್ರಹ್ಮಾಂಡ ಭ್ರಷ್ಟಾಚಾರ ಮಾಡುವವರನ್ನು ನಾಚಿಕೆಯಿಲ್ಲದೆ ಸಮರ್ಥಿಸಿಕೊಳ್ಳುವ ಇಂತಹ ಅಭಿಮಾನಿಗಳು ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದ್ದಾರೆ. ಹಣಕ್ಕೆ ಬೆಲೆ ಕೊಡುವ ಇಂತಹ ಅಭಿಮಾನಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಆಗಾಗ ಪಕ್ಷ ಮತ್ತು ನಾಯಕರನ್ನು ಬದಲಾಯಿಸುತ್ತಿರುತ್ತಾರೆ. ಇತ್ತೀಚೆಗೆ ಇಂತಹ ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತಿರುವುದು ನಿಜಕ್ಕೂ ತುಂಬ ವಿಷಾದದ ಸಂಗತಿ.

ಇಷ್ಟೆಲ್ಲ ಹೇಳಿದ ಮೇಲೆ ಕನ್ನಡ ಭಾಷಾಭಿಮಾನಿಗಳ ಕುರಿತು ಹೇಳದಿದ್ದರೆ ತಪ್ಪಾಗುತ್ತದೆ. ಕರ್ನಾಟಕಕ್ಕೆ ತಮಿಳರು ಮತ್ತು ಮರಾಠಿಗರು ಕೊಟ್ಟಷ್ಟು ಕಿರುಕುಳವನ್ನು ಯಾರೂ ಕೊಟ್ಟಿಲ್ಲ. ಮರಾಠಿಗರು ಮತ್ತು ತಮಿಳರು ಆಗಾಗ ಬೆಳಗಾವಿ ಮತ್ತು ಕಾವೇರಿ ನದಿಯ ವಿಷಯದಲ್ಲಿ ಕನ್ನಡಿಗರನ್ನು ಕೆಣಕುತ್ತಲೇ ಇರುತ್ತಾರೆ. ಕಳಸಾ-ಬಂಡೂರಿ ವಿಚಾರದಲ್ಲಿ ಗೋವಾದವರು ಮತ್ತು ಕಾಸರಗೋಡಿನ ವಿಚಾರದಲ್ಲಿ ಮಲಯಾಳಿಗಳು ಸಹ ಯಥಾಶಕ್ತಿ ಉಪದ್ರವ ನೀಡುತ್ತಲೇ ಇದ್ದಾರೆ.

“ಕರುನಾಡರ್ ಉದಾರ ಚರಿತರ್” ಎಂಬ ಮಾತು ಅಕ್ಷರಶಃ ಸತ್ಯ ಏಕೆಂದರೆ ತುಂಬ ಉದಾರಿಗಳಾದ ಕನ್ನಡಿಗರು ಕನ್ನಡಕ್ಕೆ ಒದಗಿರುವ ದುಸ್ಥಿತಿಯನ್ನು ಲಕ್ಷಿಸುವುದೇ ಇಲ್ಲ. ಬಹುತೇಕ ಕನ್ನಡಿಗರಿಗೆ ಕನ್ನಡದ ಬಗೆಗೆ ನಿಜವಾದ ಅಭಿಮಾನ ಮತ್ತು ಕಾಳಜಿಯಿಲ್ಲವೆಂಬ ಮಾತು ಕಹಿಯಾದರೂ ಸತ್ಯವಾದುದು. ಕರ್ನಾಟಕದ ಬಗೆಗೆ ಅಪಾರ ಪ್ರೀತಿ, ಅಭಿಮಾನ ಹೊಂದಿದ ಕನ್ನಡಿಗರು ಕಡಿಮೆ ಸಂಖ್ಯೆಯಲ್ಲಾದರೂ ಇರುವುದು ಸ್ವಲ್ಪವಾದರೂ ಸಮಾಧಾನ ತರುವ ಸಂಗತಿ. ಕರ್ನಾಟಕದ ನೆಲ, ಜಲ ಮತ್ತು ಭಾಷೆಗೆ ಯಾವುದೇ ರೀತಿಯ ವಿಪತ್ತು ಬಂದರೂ ಮುನ್ನುಗ್ಗಿ ಹೋರಾಟ ಮಾಡುವ ಕನ್ನಡಾಭಿಮಾನಿಗಳು ನಿಜಕ್ಕೂ ಅಭಿನಂದನಾರ್ಹರು. ನಾಡು-ನುಡಿಗಾಗಿ ಮಿಡಿಯುವ ಇಂತಹ ವೀರ ಕನ್ನಡಿಗರ ಸಂತತಿ ಬೆಳೆಯಲಿ ಮತ್ತು ಬೆಳಗಲಿ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter