ಆ ಹಳ್ಳಿಯಲ್ಲಿದ್ದ ಹಲವು ‘ ಅಂತರ ಗಂಗೆ ‘ ಬಾವಿಗಳು ಈಗ ಸೊರಗಿ ಒಣಗಿ ಅಡ್ರೆಸ್ ಇಲ್ಲದಂತಾಗಿವೆ. ಆದರೆ ಊರ ಉತ್ತರ ದಿಕ್ಕಿನ ತುದಿಯಲ್ಲಿನ ಹಳೆಯ ಬಾವಿ ಮಾತ್ರ ವ್ಯವಸಾಯಕ್ಕೂ ಹಾಗೂ ಕುಡಿಯಲು ಎಲ್ಲ ಕಾಲಕ್ಕೂ ಉಪಯೋಗವಾಗುತ್ತಿರುವುದು. ಅಲ್ಲದೇ ಈ ಬಾವಿ ಮಾತ್ರ ಎಂದೂ ಬತ್ತಲಿಲ್ಲ. ಅದು ಅಜ್ಜನ ಕಾಲದಿಂದ ಮೊಮ್ಮಕ್ಕಳ ಜಮಾನದವರೆಗೆ ತನ್ನ ಒಡಲಲ್ಲಿ ನೀರನ್ನು ಶೇಖರಣೆ ಮಾಡಿಕೊಂಡು ಸದಾ ಜೀವ ಸೆಲೆಯನ್ನು ಉಳಿಸಿಕೊಂಡಿದೆ.
ಅಂತಹ ‘ ಕಲ್ಪವೃಕ್ಷ ‘ ದ ಮುಂದೆ ಒಂದು ಮುಂಜಾನೆ ಜನವೋ ಜನ. ಊರ ಅತಿ ದೊಡ್ಡ ನೇತಾರ ‘ ಟೋಪಿ ( ಮಕ್ಮಲ್ ಟೋಪಿ ಹಾಕುವ…) ಗುಂಡಣ್ಣ’ ನನ್ನು ಬೇಗ ಕರೆಯಿರಿ ಎಂದು ಯಾರೋ ಯುವಕನೊಬ್ಬ ಜೋರಾಗಿ ಕೂಗಿದ ಬಾವಿಯಲ್ಲಿ ಒಮ್ಮೆ ಇಣುಕಿ. ಊರಿನ ಮೂವರು ದೊಡ್ಡ ನಾಯಕರಲ್ಲಿ ( ಸ್ವಯಂ ಘೋಷಿತ! ) ‘ ಅತಿ ದೊಡ್ಡ ‘ ನಾಯಕ ಟೋಪಿ ಗುಂಡಣ್ಣ. ಇನ್ನುಳಿದ ದೊಡ್ಡ ನಾಯಕರಾದ ಚಂದ್ರಪ್ಪ ಮತ್ತು ರಾಮಣ್ಣನಿಗೆ ಮೆಸ್ಸೇಜ್ ಹೋಗಿ ಮಾಡಲು ಅವರಿಗೆ ಬೇರೆ ಏನೂ ಕೆಲಸವಿಲ್ಲದ ಕಾರಣ ಕೂಡಲೇ ಓಡಿ ಬಂದರು.
ಇಡೀ ಊರಿನ ಯುವಕರೆಲ್ಲ ತಮ್ಮ ಕೈಗಳಲ್ಲಿ( ಹಗ್ಗವಲ್ಲ!) ಮೊಬೈಲ್ ಹಿಡಿದು ಸೇದುವ ಬಾವಿಯತ್ತ ಸಾಗಿದರು. ಊರಿನ ಹಿರಿಯರೆಲ್ಲರೂ ( ಅಂತಸ್ತು ಮತ್ತು ಅಧಿಕಾರದಲ್ಲಿರುವವರು! ) ಅಲ್ಲಿ ಜಮಾಯಿಸಿದರು. ಬಾವಿಯ ಹತ್ತಿರದ ಬೇವಿನ ಮರದಡಿ ಹಾಕಿದ ಛೇರುಗಳ ಮೇಲೆ ನೀಟಾಗಿ ಎಲ್ಲ ನೇತಾರರು ಆಸೀನರಾದರು. ಅಲ್ಲಿಗೇ ಖಾರ ಮಂಡಕ್ಕಿ, ಬಿಸಿ ಬಿಸಿ ಮಿರ್ಚಿ ಮತ್ತು ಚಹಾ ಸರಬರಾಜು ಆಯಿತು. ನಾಯಕರೆಲ್ಲ ನಿಧಾನವಾಗಿ ತಿನ್ನುವ ಶಾಸ್ತ್ರ ಮುಗಿಸಿದರು. ಬಾವಿಯ ದಂಡೆಯ ಮೇಲಿನ ಯುವಕರಲ್ಲಿ ಕೆಲವರು ಬಾವಿಯಲ್ಲಿ ಬಿದ್ದು ಸಾವು – ಬದುಕಿನ ಮಧ್ಯೆ ಒದ್ದಾಡುತ್ತಿರುವನೊಂದಿಗೆ ಅಲ್ಲಿಂದಲೇ ‘ ಸೆಲ್ಫೀ ‘ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಬಾವಿಯಲ್ಲಿ ಬಿದ್ದ ಮನುಷ್ಯ ‘ ಕಾಪಾಡಿ ಕಾಪಾಡಿ… ‘ ಎಂದು ಗಟ್ಟಿ ಧ್ವನಿಯಲ್ಲಿ ಅರಚುತ್ತಾ ಕೈ ಮುಗಿದು ಬೇಡಿಕೊಂಡರೂ ಯಾರೂ ಆ ಕಡೆ ಲಕ್ಷ್ಯ ಕೊಡುತ್ತಿಲ್ಲ. ಬಾವಿಯಲ್ಲಿ ಬಿದ್ದ ವ್ಯಕ್ತಿಯನ್ನು ಒಂದು ‘ ಮನೋರಂಜನೆ ‘ ವಸ್ತುವನ್ನಾಗಿಸಿ ನೋಡಿ ಖುಷಿ ಪಡುವ ಸಡಗರದಲ್ಲಿ ಇದ್ದರು ನೆರೆದ ಜನರೆಲ್ಲ… ಆಗ ಅಲ್ಲಿ ಯಾರೊಬ್ಬರೂ ‘ ಪಾನ್ ಇಂಡಿಯಾ ಹೀರೋ ‘ ( ಸದ್ಯದ ಟ್ರೆಂಡ್! ) ಆಗುವ ಸಾಹಸ ಮಾಡಲಿಲ್ಲ ಪಾಪ! ಅಲ್ಲದೇ ಅದು ನಮ್ಮ ಕೆಲಸವಲ್ಲ…ನಮ್ಮ ನಾಯಕರು ಆತನ ಪ್ರಾಣ ಉಳಿಸಬೇಕು… ಇದು ಅವರ ಕರ್ತವ್ಯ ಮತ್ತು ಜವಾಬ್ದಾರಿ ಎಂದು ಅಲ್ಲಿದ್ದ ಎಲ್ಲ ಯುವಕರ ( ಯುವ ಸೋಮಾರಿಗಳ) ಏಕಾಭಿಪ್ರಾಯ.
ಅತಿ ದೊಡ್ಡ ನಾಯಕ ‘ ಟೋಪಿ ಗುಂಡಣ್ಣ ‘ ಅಂತಹ ಒಬ್ಬಿಬ್ಬರ ಮಾತು ಕೇಳಿ ಕೂತಲ್ಲೇ ಬೆಚ್ಚಿ ಬಿದ್ದ. ತಾನೇ ಬಾವಿಯಲ್ಲಿ ಬಿದ್ದವನನ್ನು ರಕ್ಷಿಸಬೇಕೆಂಬ ಬೇಡಿಕೆ ಕಿವಿಗೆ ಬಿದ್ದು ಕೆಲ ಕ್ಷಣ ದಿಗಿಲುಗೊಂಡ, ಆತಂಕಗೊಂಡ..
ನಂತರ ನಿಧಾನವಾಗಿ ಬಾವಿಕಟ್ಟೆಯ ಮೇಲೆ ಕೂತ ಯುವಕನೊಬ್ಬನನ್ನು ಕರೆದು ” ಇವನು ಕಾಲು ಜಾರಿ ಅಕಸ್ಮಾತ್ ಆಗಿ ತಾನೇ ಬಿದ್ದನೋ ಅಥವಾ ಯಾರಾದರೂ ಹೊಡೆದು ಕೈ ಕಾಲು ಮುರಿದು ನಂತರ ತಂದು ಬಾವಿಯಲ್ಲಿ ಎಸೆದು ಹೋದರೋ…ಅಲ್ಲದೇ ಇವನು ನಮ್ಮ ಊರಿನವನೋ ಇಲ್ಲಾ ಬೇರೆ ಊರಿನವನೋ ಮೊದಲು ತಿಳಿದುಕೋ … ಜೊತೆಗೆ ಅವನಿಗೆ ಮದುವೆ ಆಗಿತ್ತೋ ಅಥವಾ ಹೆಂಡತಿಯ ಕಾಟ ಭರಿಸಲಾರದೆ ಬಾವಿಗೆ ಬಂದು ಬಿದ್ದನೋ ಹೇಗೆ… ಎಲ್ಲ ಡೀಟೇಲ್ ತಿಳಿದುಕೊಂಡು ಬಂದು ನನಗೆ ಹೇಳು.” ಎಂದು ಹುಕುಂ ಜಾರಿಗೊಳಿಸಿದ ಟೋಪಿ ಗುಂಡಣ್ಣ.
” ಸರಿ… ಧಣಿ ” ಎಂದು ಹೇಳಿ ಹೋದವನು ಮತ್ತೆ ಪತ್ತೆಯೇ ಇಲ್ಲ. ಜನ ಜಂಗುಳದಲ್ಲಿ ಅವನು ನಾಪತ್ತೆ!
” ಆತ್ಮಹತ್ಯೆಗೆ ಅಂತಲೇ ಬಾವಿಯಲ್ಲಿ ಹಾರಿದವನನ್ನು ನಾವು ಕಾಪಾಡುವುದು ನಮ್ಮ ತಪ್ಪಾಗುತ್ತದೆ. ಅದು ಅವನ ಜನ್ಮ ಸಿದ್ಧ ಹಕ್ಕು ಮತ್ತು ಅವನ ವೈಯುಕ್ತಿಕ ಸ್ವಾತಂತ್ರ್ಯ…ಅದನ್ನು ನಾವು ಗೌರವಿಸಬೇಕು. ಸಂವಿಧಾನವನ್ನು ನಾವು ಯಥಾವತ್ತಾಗಿ ಪಾಲಿಸಬೇಕು… ಬದಲಾಗಿ ನಾವು ಯಾವ ರೀತಿಯಿಂದಲೂ ಅದಕ್ಕೆ ಧಕ್ಕೆ ತರಬಾರದು… ” ಎಂದ ಗುಂಡಣ್ಣನ ಸಹಚರ ಚಂದ್ರಪ್ಪ ತನ್ನ ಮನಸಿನ ವಿಶಾಲ ಮನೋಭಾವನೆಯನ್ನು ಹೊರ ಹಾಕುತ್ತಾ.
” ಅವನು ಯಾವ ಕೋಮಿಗೆ ಸೇರಿದವನು… ಯಾವ ಜಾತಿಯವನು.. ಯಾವ ಉಪ ಜಾತಿ ಅಥವಾ ಪಂಗಡಕ್ಕೆ ಸೇರಿದವನು….ಅಲ್ಲದೇ ಯಾವ ಮಠದ ಅನುಯಾಯಿ ಎಂದು ಮೊದಲು ಸವಿಸ್ತಾರವಾಗಿ ವಿಚಾರಿಸು…ನಂತರ ಅವನನ್ನು ಬಾವಿಯಿಂದ ಎತ್ತಿ ಕಾಪಾಡುವದೋ ಬೇಡವೋ ಎಂದು ನಿರ್ಧಾರ ಮಾಡೋಣ… ” ಎಂದು ಒಬ್ಬ ಆಂತರಂಗಿಕ ಶಿಷ್ಯನನ್ನು ಕರೆದು ‘ ಸಮಾಜವಾದಿ ‘ ರಾಮಪ್ಪ ಹೇಳಿದ.
ಒಂದು ತಾಸು ತಡೆದರೂ ಯಾರಿಂದಲೂ ಸರಿಯಾದ ಉತ್ತರ ಸಿಗದಿದ್ದರಿಂದ ಚಂದ್ರಪ್ಪ ತಾನೇ ಬಾವಿ ಕಟ್ಟೆಯ ಹತ್ತಿರ ಬಂದು ಇಣುಕಿ ಬಾವಿಯಲ್ಲಿ ಬಿದ್ದವನನ್ನು ಉದ್ದೇಶಿಸಿ ” ನೀನು ರಾಮನ ಭಕ್ತನಾದರೆ ಆ ಆಂಜನೇಯನನ್ನು ಪ್ರಾರ್ಥಿಸು…ನೀನು ಕ್ರೈಸ್ತ ಪಂಗಡಕ್ಕೆ ಸೇರಿದ್ದರೆ ಆ ಯೇಸು ಪ್ರಭುವಿಗೆ ಮೊರೆ ಹೋಗು…ಇಸ್ಲಾಂ ಮತದವನಾದರೆ ಆ ‘ ಅಲ್ಲಾನನ್ನು ‘ ಕಾಪಾಡುವಂತೆ ಬೇಡಿಕೋ…ನೀನು ಪ್ರಜಾಪ್ರಭುತ್ವವನ್ನು ನಂಬುವನಾದರೆ ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಸ್ವಾತಂತ್ರ್ಯ ಯೋಧರನ್ನು ನೆನಪಿಸಿಕೋ… ಅವರ ವಂಶದವರಾದ ನಾವು ಇಲ್ಲಿಂದಲೇ ನಿನಗೆ ಒಳಿತಾಗಲಿ ಎಂದು ಆಶೀರ್ವಾದ ಮಾಡುತ್ತೇವೆ…ನೀನು ಭಯ ಪಡಬೇಡ…ನಿನಗೇನು ಆಗುವದಿಲ್ಲ…ಉಸಿರು ಇನ್ನೂ ಸ್ವಲ್ಪ ಹೊತ್ತು ಬಿಗಿ ಹಿಡಿದುಕೋ ಅಷ್ಟೇ” ಎಂದು ಅಲ್ಲಿಂದಲೇ ಧೈರ್ಯ ತುಂಬಿದ.
ಸ್ವಲ್ಪ ಹೊತ್ತಿನ ಬಳಿಕ ಧಿಡೀರ್ ಎಂದು ಪಂಚಾಯತಿ ಸಿಬ್ಬಂದಿಯೊಬ್ಬ ‘ ಟೋಪಿ ಗುಂಡಣ್ಣ ‘ ನ ಮುಂದೆ ಪ್ರತ್ಯಕ್ಷನಾಗಿ ಹತ್ತಿರ ಬಂದು ” ಬಾವಿಯಲ್ಲಿ ಬಿದ್ದವನ ಹೆಸರು ಮತದಾರರ ಪಟ್ಟಿಯಲ್ಲಿ ಇದೆ. ಆದರೆ ಅವನು ಮರಣ ಹೊಂದಿದ್ದಾನೆ ಎಂದು ನಮ್ಮ ದಾಖಲೆಗಳು ಹೇಳುತ್ತಿವೆ…ಈಗ ಏನು ಮಾಡೋಣ ಸಾರ್..” ಎಂದು ಪ್ರಶ್ನಿಸಿದ ಟೋಪಿ ಗುಂಡಣ್ಣನನ್ನು.
” ಅಂದರೆ ಈತ ಬದುಕಿದ್ದರೂ ನಮ್ಮ ಪಕ್ಷಕ್ಕೆ ಓಟು ಹಾಕಿಲ್ಲ…ಓಟು ಹಾಕಲಾರದವನು ನಮ್ಮ ಪಾಲಿಗೆ ಇದ್ದರೂ ಒಂದೇ ಸತ್ತರೂ ಒಂದೇ! ಆದರೂ ಮಾನವತೆಯ ದೃಷ್ಟಿಯಿಂದ ಈತನನ್ನು ನಾವು ರಕ್ಷಿಸಬಹುದೋ ಇಲ್ಲವೋ ಎಂದು ಹೈ ಕಮಾಂಡನ್ನು ಒಂದು ಮಾತು ಕೇಳೋಣ . ಅವರ ಅನುಮತಿ ಸಿಕ್ಕ ಬಳಿಕ ಬಾವಿಯೊಳಗಿನ ಮನುಷ್ಯನನ್ನು ಬದುಕಿಸುವ ಬಗ್ಗೆ ಅಲೋಚಿಸಬಹುದು. ಅಲ್ಲಿಯವರೆಗೆ ಅವನು ಉಸಿರು ಬಿಗಿ ಹಿಡಿದುಕೊಂಡು ಇರಲು ಸೂಚಿಸಿ” ಎಂದು ಶಾಂತವಾಗಿ ಉತ್ತರಿಸಿ ಎಲ್ಲರತ್ತ ಕೈ ಬೀಸಿ ಮನೆಯ ದಾರಿ ಹಿಡಿದ ಟೋಪಿ ಗುಂಡಣ್ಣ.
ಗುಂಡಣ್ಣನ ಸಹಚರರು ಏನೊಂದೂ ಮಾತನಾಡದೆ ನಾಯಕನನ್ನು ಫಾಲೋ ಮಾಡಿದರು. ಅವರ ಹಿಂಬಾಲಕರು ಮೆಲ್ಲಗೆ ಜಾಗ ಖಾಲಿ ಮಾಡಿದರು. ಅಲ್ಲಿ ಈಗ ಉಳಿದಿರೋದು ಶ್ರೀ ಸಾಮಾನ್ಯರು ಮಾತ್ರ. ಅಷ್ಟರಲ್ಲಿ ” ನಾನು ಸತ್ತು ಹೋಗ್ತೀದಿನಿ ಸಾಯುತ್ತಿದ್ದೇನೆ. ಸತ್ತೇ ಬಿಟ್ಟೆ…” ಎಂದು ಬಾವಿಯಲ್ಲಿಂದ ಜೋರಾಗಿ ಕೇಳಿ ಬರುತ್ತಿದ್ದ ಶಬ್ದ ಒಮ್ಮೇಲೆ ನಿಂತುಹೋಯಿತು. ಕೂಡಲೇ ಹಿಂದೆಯೇ ಏನೋ ಮುಳುಗಿದ ಶಬ್ದ! ನಂತರ ಎಲ್ಲವೂ ನಿಶ್ಯಬ್ದ !!
*****
12 thoughts on “ಬಾವಿಯಲ್ಲಿ ಬಿದ್ದವನೊಬ್ಬನ ಕಥೆ – ವ್ಯಥೆ”
ವಿಡಂಬನಾತ್ಮಕ ಬರಹ ಚನ್ನಾಗಿದೆ. ರಾಜಕಾರಣಿಗಳು ತನ್ನ ಸ್ವಾರ್ಥ ಮಾತ್ರ ನೋಡುತ್ತಾರೆ ಎಂದು ಮಾರ್ಮಿಕವಾಗಿ ಹೇಳಿದ್ದೀರಿ. ಅಭಿನಂದನೆಗಳು ರಾಘವೇಂದ್ರ ಮಂಗಳೂರು
ಧನ್ಯವಾದಗಳು
ಸ್ವಾರ್ಥತೆ ಮೆರೆಯುತ್ತಿದೆ ಇದು ಚೀಟಿ ಏಟು. ಅಲ್ಲದೇ, ಸಾವಿನಲ್ಲೂ ಜಾತಿ ಹುಡುಕುವವರಿಗೆ ಕೂಡಾ ಚೆನ್ನಾಗಿ ಬಾರಿಸಿದ ಹಾಗ ಇದೆ. ಒಟ್ಟಿನಲ್ಲಿ ವಿಡಂಬನೆ ಚೆನ್ನಾಗಿದೆ. ಅಭಿನಂದನೆಗಳು.
ಧನ್ಯವಾದಗಳು
ಕಥೆ ತುಂಬಾ ಚೆನ್ನಾಗಿ ಬಂದಿದೆ ಇಂದಿನ ನೈಜ ಬದುಕಿನ ಚಿತ್ರಣವನ್ನೇ ಬಾಳ ಸೊಗಸಾಗಿ ವಿವರಣೆ ಕೊಟ್ಟಿದಿರಿ ತುಂಬಾ ಧನ್ಯವಾದಗಳು ಪುನಃ ಇಂತಹ ಕಥೆಗಳನ್ನು ನಿಮ್ಮಿಂದ ನಿರೀಕ್ಷೆ
ಧನ್ಯವಾದಗಳು
ವಾಸ್ತವದ ಚಿತ್ರಣ ಸೊಗಸಾಗಿದೆ. ಅಭಿನಂದನೆಗಳು.
ಧನ್ಯವಾದಗಳು
ಬಹಳ ಮಾರ್ಮಿಕವಾದ ವಿಡಂಬನಾ ಬರಹ. ಅಂತಸ್ತು, ಅಧಿಕಾರ, ರಾಜಕೀಯದಲ್ಲಿದ್ದವರ ಯೋಚನೆಗಳು ಜನಸಾಮಾನ್ಯನೊಬ್ಬನ ಸಂಕಷ್ಟದ ಸಮಯದಲ್ಲಿ ಹೇಗೆ ಕೆಲಸ ಮಾಡುತ್ತವೆ ಎನ್ನುವ ಸ್ವಾರ್ಥಭರಿತ ವಿಷಯವನ್ನು ಸೊಗಸಾಗಿ ಮೂಡಿಸಿದ್ದೀರಿ.
ಅಭಿನಂದನೆಗಳು
ಧನ್ಯವಾದಗಳು
ವಿಡಂಬನಾತ್ಮಕ ಬರಹ ಮಾರ್ಮಿಕ ವಾಗಿ ಬರೆದು ಪ್ರಸ್ತುತ ರಾಜಕಾರಣಿ ಗಳ ಸ್ವಾರ್ಥ ಮನೋಭಾವ ಎತ್ತಿ ತೋರಿಸುವ ಲೇಖನ ಚೆನ್ನಾಗಿದೆ.
ಅಭಿನಂದನೆಗಳು
ಧನ್ಯವಾದಗಳು