(ಕಾಸರಗೋಡು ಜಿಲ್ಲೆಯ ಉಪ್ಪಳಕ್ಕೆ ಸಮೀಪವಾಗಿರುವ ಬಾಯಿಕಟ್ಟೆಯ ಶ್ರೀ ಲಕ್ಷ್ಮೀ ಮಿಲ್ಸ್ ಸಭಾಂಗಣದಲ್ಲಿ ಬೆಂಗಳೂರಿನ ವೀರಲೋಕ ಪ್ರಕಾಶನ ಮತ್ತು ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಆಶ್ರಯದಲ್ಲಿ ನೆರವೇರಿದ ಎರಡು ದಿನಗಳ ಕಥಾ ಕಮ್ಮಟದ ಅವಲೋಕನ .)
“””””””””””””””””””
ಸಾಗರ ಗಾತ್ರದ ಪ್ರಾಚೀನ ಕಥಾ ಸಂಪತ್ತಿದ್ದೂ ಪಾಶ್ಚಾತ್ಯ ಸಣ್ಣಕತೆಗಳ ಪ್ರವಾಹದೆದುರು ನಾವು ಕಂಗಾಲಾದೆವು. ನಮ್ಮ ದೇಶದ ಸಾಹಿತ್ಯ ಹೊರಗಿನಿಂದ ಬಂದದ್ದೆಂದೂ, ಅದು ಚಲಾವಣೆಯಾಗದ ನಾಣ್ಯವೆಂದೂ ಆಕ್ರಮಣಕಾರರು ಘೋಷಿಸಿದ್ದರು. ಪಾಶ್ಚಾತ್ಯ ಸಾಹಿತ್ಯಕ್ಕೆ ಆ ರೀತಿಯ ಮೋಡಿಯನ್ನು ಮಾಡುವ ಶಕ್ತಿ ಸಿಕ್ಕಿದ್ದು ನಿಜ. ಅದಕ್ಕೆ ಕಾರಣಗಳೂ ಇವೆ.
ತಾವು ಆಕ್ರಮಿಸಿದ ದೇಶಗಳ ಸಾಮಾಜಿಕ, ರಾಜಕೀಯ ಮತ್ತು ಶೈಕ್ಷಣಿಕ ವಲಯಗಳಲ್ಲಿ ಸುಧಾರಣೆಗಳನ್ನು ತರಲು ಶ್ರಮಿಸಿದ ಬ್ರಿಟಿಷರು ನಮಗಿಂತ ಮೊದಲೇ ಯಂತ್ರಗಳ ಬಳಕೆಯನ್ನು ಆರಂಭಿಸಿದರು. ಅದರ ನೆರವಿನಲ್ಲಿ ಅವರು ಪತ್ರಿಕೆಗಳನ್ನು ಬಳಕೆಗೆ ತಂದರು. ಸಾರಿಗೆ ಸೌಕರ್ಯವನ್ನು ಅಭಿವೃದ್ಧಿಪಡಿಸಿಕೊಂಡು ನಮಗಿಂತ ಮೊದಲೇ ನಾಗರಿಕರೆನಿಸಿಕೊಂಡರು!
ಬರೆದ ತಕ್ಷಣ ಸಾಹಿತ್ಯ ಕೃತಿಗಳನ್ನು ಓದುಗರಿಗೆ ತಲುಪಿಸುವುದಕ್ಕೆ ಸಾಧ್ಯವಾದಂದಿನಿಂದ ನಮ್ಮ ದೇಶದಲ್ಲೂ ಕಥಾ ರಚನೆಗೆ ವೇಗ ಸಿಕ್ಕಿತು. ಆಧುನಿಕ ಕಥಾ ಸಾಹಿತ್ಯಕ್ಕೂ ಚಾಲನೆ ದೊರಕಿತು. ಭಾರತೀಯ ಸಾಹಿತ್ಯಲೋಕದಲ್ಲಿ ಆಧುನಿಕ ಸಣ್ಣಕತೆಯು ದೇಶದಾದ್ಯಂತ ಚಿಗುರೊಡೆಯಿತು. ಸಾಹಿತ್ಯ ರಚನೆಗಳಲ್ಲಿ ರೈಲು, ಬಸ್ಸು, ಕಾರು, ಅಫೀಮು, ಕೋರ್ಟು ಕಛೇರಿ, ಬ್ಯಾಡ್ಮಿಂಟನ್, ಸೊಳ್ಳೆ ಬಲೆ, ಸಾಬೂನು, ಕ್ವಿನೀನು ಮುಂತಾದ ಅನ್ಯದೇಶೀಯ ಪದಗಳು ಸ್ಥಾನವನ್ನು ಪಡೆದುಕೊಂಡವು. ಮುಕ್ತ ಪ್ರೇಮ, ಕಾಮ ಸಂಪ್ರದಾಯವಾದಿಗಳನ್ನು ದಂಗುಬಡಿಸಿತು. ಇಂಥ ಕತೆಗಳ ಉಗಮ, ವಿಕಾಸ, ವೈವಿಧ್ಯಗಳ ಬಗ್ಗೆ ಸಂವಾದ ಮಾಡಲು ಎಷ್ಟು ದಿನಗಳಿದ್ದರೂ ಕಡಿಮೆಯೇ.
ಕಾಸರಗೋಡು ಜಿಲ್ಲೆಯ ಉಪ್ಪಳಕ್ಕೆ ಸಮೀಪವಾಗಿರುವ ಬಾಯಿಕಟ್ಟೆಯ ಶ್ರೀ ಲಕ್ಷ್ಮೀ ಮಿಲ್ಸ್ ಸಭಾಂಗಣದಲ್ಲಿ ಬೆಂಗಳೂರಿನ ವೀರಲೋಕ ಪ್ರಕಾಶನ ಮತ್ತು ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಆಶ್ರಯದಲ್ಲಿ ಎರಡು ದಿನಗಳ ಕಥಾ ಕಮ್ಮಟ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ. ಪ್ರಮೀಳಾ ಮಾಧವ್ ಅವರ ಮಾತುಗಳು ಹೀಗಿವೆ. “ಮಕ್ಕಳಿಂದ ಹಿಡಿದು ಮುದುಕರವರೆಗೆ ಎಲ್ಲರೂ ಕಥೆಗಳನ್ನು ಇಷ್ಟಪಡುತ್ತಾರೆ. ಅದರ ರಚನೆಯ ಕುರಿತು ಮಾತು ಬಂದಾಗ ಪ್ರಶ್ನೆಗಳು ಏಳುತ್ತವೆ. ಪ್ರಕೃತಿಯಲ್ಲಿ ಜೀವೋದ್ಭವವಾದಲ್ಲಿಂದ ಕಥೆಯೂ ಹೊರಟಿತು. ಸುಮಾರು ಸಾವಿರ ವರ್ಷಗಳ ಹಿಂದೆಯೇ ರಚನೆಗೊಂಡ ವಡ್ಡಾರಾಧನೆಯನ್ನು ಕನ್ನಡದ ಕಥಾ ಗುಚ್ಛವೆಂದು ಗುರುತಿಸುತ್ತೇವೆ. ಮಹಾ ಕಾವ್ಯಗಳ ಒಳಗೂ ಕಥೆಗಳೇ ತುಂಬಿವೆ. ರುದ್ರಭಟ್ಟ ‘ಕಥೆಯಂ ಕೇಳೆಲೆ ಕಂದ’ ಎನ್ನುತ್ತಾ ಕಾವ್ಯ ರಚನೆಗೆ ತೊಡಗುತ್ತಾನೆ. ‘ನನ್ನ ಚಿಕ್ಕ ತಾಯಿ’, ‘ನನ್ನ ಚಿಕ್ಕ ತಂದೆ’ ಮುಂತಾದ ಕತೆಗಳಿಂದ ಪಂಜೆ ಮಂಗೇಶ ರಾಯರು ಮುನ್ನೆಲೆಗೆ ಬಂದ ಬೆನ್ನಲ್ಲೇ ಸಣ್ಣ ಕಥೆಗಳ ಜನಕ ಮಾಸ್ತಿಯವರ ವೈವಿಧ್ಯಮಯ ರಚನೆಗಳು ಚಾಲ್ತಿಗೆ ಬಂದು ಪ್ರಗತಿಶೀಲ, ನವ್ಯ, ಬಂಡಾಯ, ದಲಿತ ಚಳುವಳಿಗಳ ಮೂಲಕ ವೇಗವನ್ನು ಪಡೆದವು. ಅವರವರ ನಿಲುವು, ವೈಚಾರಿಕತೆಗಳು ಮುಖ್ಯವಾದವು. ಸೃಜನ, ಸೃಜನೇತರ ಎಂಬ ಸ್ವಭಾವಗಳು ಸಾಹಿತ್ಯಕ್ಕಿವೆ. ತಕ್ಷಣದ ಪ್ರತಿಕ್ರಿಯೆ ಎಂದಿಗೂ ತೃಪ್ತಿಯನ್ನು ಕೊಡಲಾರದು. ಪ್ರತಿಭೆ ಸ್ಫೂರ್ತಿಗಳ ಸಂಗಮವಾಗಿದ್ದರೆ ಕತೆ ಪರಿಣಮಿಸೀತು. ಬದುಕಿನ ಗೊಂದಲಗಳ ನಡುವೆ ಹುಟ್ಟುವ ತೀಕ್ಷ್ಣ ಭಾವ ಬರಹಗಾರರನ್ನು ಸೃಷ್ಟಿಸುತ್ತದೆ. ಜೀವನದ ಸತ್ಯಗಳನ್ನು ಸೆರೆಹಿಡಿಯಲು ನೆರವಾಗುತ್ತದೆ. ಮನುಷ್ಯ ಮನಸ್ಸಿನ ಮೂಲ ರಾಗ ಭಾವಗಳನ್ನು ಹೊಂದಿದ ಸಾಹಿತ್ಯ ಜೀವಂತವಾಗಿರುತ್ತದೆ. ಲೇಖಕನಾದವನಿಗೆ ಪ್ರತಿಭೆಯ ಕಣ್ಣು ಇರಬೇಕು. ಉತ್ತಮ ಕತೆಗಳಿಗೆ ಅಡ್ಡಗೋಡೆಗಳಿಲ್ಲ. ಸಾಹಿತ್ಯವು ಹಿತವಾಗಿದ್ದು ಸಂಸ್ಕಾರಯುತವಾಗಿರಬೇಕು. ಸಮಾಜವನ್ನು ಸನ್ಮಾರ್ಗಕ್ಕೆ ಒಯ್ಯುವಂತಿರಬೇಕು. ನಿರಂತರ ಬರವಣಿಗೆಯ ಮೂಲಕ ಕೈ ಪಳಗಬೇಕು. ಸದಾ ಹೊಸತನ್ನು ಕಾಣುವ, ಹೊಸತನ್ನು ಕಟ್ಟುವ ಕಲೆಯನ್ನು ಹೊಂದಿರಬೇಕು. ಈ ನಿಟ್ಟಿನಲ್ಲಿ ನಿಮ್ಮನ್ನು ಚೋದಿಸುವುದಕ್ಕೆ ಇಂತಹ ಶಿಬಿರ ಸಹಕಾರಿಯಾದೀತು.”
ಸಂಪನ್ಮೂಲ ವ್ಯಕ್ತಿ ಡಾ. ಮೋಹನ ಕುಂಟಾರ್
“”””””””””””””””””””””””””””””””””””
ಯಾಕೆ ಬರೆಯಬೇಕು ಎನ್ನುವುದಕ್ಕೆ ಉತ್ತರವಿಲ್ಲ. ಹೇಗೆ ಬರೆಯಬೇಕನ್ನುವುದಕ್ಕೆ ಉತ್ತರಗಳಿವೆ ಎಂದು ಮಾತಿಗೆ ಮೊದಲು ಮಾಡಿದ ಖ್ಯಾತ ಸಂಶೋಧಕ – ಅನುವಾದಕ ಮೋಹನ ಕುಂಟಾರ್ ಅವರು ‘ಎಲ್ಲ ಚಟುವಟಿಕೆಗಳ ಉಗಮ ಸ್ಥಾನ ಮನಸ್ಸು’ ಎಂದು ಸೂಚಿಸುತ್ತಾ “ನೆನಪು ಸಂವೇದನೆಯ ಭಾಗವಾಗಿರಬೇಕು. ಸಮಾಜ- ಕುಟುಂಬಗಳೇ ಕತೆಗೆ ಪಠ್ಯ. ಮಹಾಭಾರತದಿಂದ ತೊಡಗಿ ಕತೆಗಳೆಲ್ಲಾ ಕಟ್ಟು ಕಥೆಗಳೇ. ಆಮೇಲೆ ಅವುಗಳು ಜೀವನ ಸತ್ಯಗಳಾಗುತ್ತವೆ. ಅಭಿಪ್ರಾಯಗಳನ್ನು ಹಂಚಿಕೊಳ್ಳುವುದಕ್ಕೆ ಬರವಣಿಗೆ ಅಗತ್ಯ. ಕಾಲದ ನಿರ್ಬಂಧಗಳಿಲ್ಲದ ಘಟನೆಗಳಾಗಿ ಅವುಗಳು ಮರು ನಿರೂಪಣೆಗೊಳ್ಳುತ್ತವೆ. ತಂತ್ರಗಾರಿಕೆಯಲ್ಲಿ ಕತೆಯ ಜೀವ ಇರುತ್ತದೆ. ಸ್ವಂತಿಕೆಯ ಪ್ರದರ್ಶನವೂ ಸೇರಿಕೊಳ್ಳುತ್ತದೆ. ದೃಶ್ಯಗಳನ್ನು ಕಟ್ಟಿಕೊಡುವಾಗ ಹೆಚ್ಚು ಮಾತುಗಳು ಬೇಕಿಲ್ಲ. ಮಾತುಗಳ ನಡುವಿನ ಮೌನಕ್ಕೂ ಮಹತ್ವವಿದೆ. ಕಥೆಯ ಮೂಲಕ ವಿಸ್ಮಯದ ಜಗತ್ತನ್ನು ಸೃಷ್ಟಿಸಬಹುದು” ಎಂದು ವಿಶ್ಲೇಷಿಸುವುದರೊಂದಿಗೆ ಕತೆಗಾರನೊಬ್ಬನು ಹಂತ ಹಂತವಾಗಿ ರೂಪು ತಾಳುವ ರೀತಿಯನ್ನು ಪ್ರಸ್ತುತಪಡಿಸಿದರು.
ತಮ್ಮ ಮಕ್ಕಳು ಕತೆಗಾರರಾಗಬೇಕೆಂದು ಯಾವ ಹೆತ್ತವರೂ ಬಯಸುವುದಿಲ್ಲವೆಂಬ ವಾಸ್ತವವನ್ನು ಮುಂದಿಟ್ಟ ಕುಂಟಾರ್ ಅವರು ಮಲಯಾಳಂ ಭಾಷೆಯ ಮಹತ್ವದ ಸಾಹಿತಿ ಎಂ. ಟಿ ವಾಸುದೇವನ್ ನಾಯರ್ ಅವರ ಬಾಲ್ಯವನ್ನು ಉದಾಹರಿಸಿದರು. “ಶಾಲೆಯಲ್ಲಿ ಕಲಿಯುತ್ತಿರುವಾಗ ನಾನೊಬ್ಬ ಕತೆಗಾರನಾಗಬೇಕೆಂಬ ಅದಮ್ಯ ಹಂಬಲವಿತ್ತು. ಹತ್ತನೇ ತರಗತಿಯ ಬಳಿಕ ಒಂದು ವರ್ಷ ಮನೆಯಲ್ಲಿ ಕುಳಿತ ವೇಳೆಯಲ್ಲಿ ಪತ್ರಿಕೆಗೆ ಬರೆದು ಕಳುಹಿಸಿದ್ದೆಲ್ಲ ಹಿಂತಿರುಗಿ ಬರತೊಡಗಿತು. ಅದು ಯಾರಿಗೂ ತಿಳಿಯಬಾರದೆಂದು ಅಂಚೆಕಟ್ಟು ತಲುಪುವ ಮುನ್ನವೇ ಅಂಚೆ ಕಚೇರಿಯ ಮುಂದೆ ಹಾಜರಿರತೊಡಗಿದರು. ಅಂಚೆ ಕಟ್ಟು ಬರದಿದ್ದ ಸಂದರ್ಭಗಳಲ್ಲಿ ತನ್ನ ಬರಹ ಸ್ವೀಕೃತವಾಗಿರಬಹುದೇ, ಎಂದಾದರೂ ಪ್ರಕಟವಾದೀತೇ ಎಂಬ ಆಸೆ ಮೂಡುತ್ತಿತ್ತು. ಮಗನ ಪರಿಸ್ಥಿತಿಯನ್ನು ಸಹಿಸಲಾರದೆ ಅಪ್ಪ ಹಂಗಿಸಿದ್ದೂ ಆಯಿತು. ಒಂದು ದಿನ ಅವರು ಎರಡು ರೂಪಾಯಿ ಹಿಡಿದುಕೊಂಡು ರೈಲು ಹತ್ತಿ, ಟ್ಯುಟೋರಿಯಲ್ ಶಾಲೆಗೆ ಸೇರಿ…”
ಸಾಹಿತ್ಯವು ಅನುಭವ ಜನ್ಯ ಎಂಬುದು ನಿಜವಾದರೂ ಅನುಭವ ಇರುವವರೆಲ್ಲ ಲೇಖಕರಾಗುವುದಿಲ್ಲ. ಅನುಭವವನ್ನು ಅಭಿವ್ಯಕ್ತಿಸುವ ಕಲೆ ಸಿದ್ಧಿಸಿದವರು ಮಾತ್ರ ಸಾಹಿತಿ ಎನಿಸಿಕೊಳ್ಳುತ್ತಾರೆ. ಬರೆಯಬೇಕು ಎಂಬ ಅಪೇಕ್ಷೆ ಹೃದಯದಿಂದ ಮೂಡಿ ಬರಬೇಕು. ಕೆಲವರ ಬದುಕಿಗೆ ಅದೇ ಆಧಾರ. ಕತೆ ಹೇಳಲು, ಬರೆಯಲು ಮಾನಸಿಕ ಸಿದ್ಧತೆ ಬೇಕು. ಯಾವುದೋ ಸಂದರ್ಭದ ಅನುಭವಗಳು ಮಾತಿನ ಮೂಲಕ ಎಂದೋ ಹೊರಬರಬಹುದು ಎಂಬ ಕಿವಿಮಾತುಗಳ ಮೂಲಕ ಒಂದು ದಿನದ ತರಬೇತಿಯನ್ನು ನೀಡಿದರು.
ಅಧ್ಯಕ್ಷರ ಮಾತುಗಳಲ್ಲಿ ಕಾಸರಗೋಡಿನ ಕಥಾ ಸಾಹಿತ್ಯ
“”””””””””””””””””””””””””””””””””””””””
ಉದ್ಘಾಟನ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕವಿ, ಪತ್ರಕರ್ತ, ಅಂಕಣ ಬರಹಗಾರ ರಾಧಾಕೃಷ್ಣ ಉಳಿಯತ್ತಡ್ಕ ಅವರು ಕಾಸರಗೋಡಿನ ಕಥಾಸಾಹಿತ್ಯದ ಶ್ರೀಮಂತಿಕೆಯನ್ನು ಪರಿಚಯಿಸುತ್ತಾ ಬೇಕಲ ರಾಮನಾಯಕ, ಸಿರಿಬಾಗಿಲು ವೆಂಕಪ್ಪಯ್ಯ, ಕಯ್ಯಾರರು, ಜೀ. ಶಂ. ಪೆರ್ಲ, ಕಳ್ಳಿಗೆ, ಕೆ. ವಿ. ತಿರುಮಲೇಶ್, ವೇಣುಗೋಪಾಲ ಕಾಸರಗೋಡು, ಅನುಪಮಾ ಪ್ರಸಾದ್ ಮುಂತಾದ ನೂರಾರು ಕಥಾಸಾಹಿತಿಗಳ ದುಡಿಮೆಯಲ್ಲಿ ಅಲ್ಲಿನ ಇತಿಹಾಸ, ಜನಪದ, ಸಮಕಾಲೀನತೆ, ಪುರಾಣಗಳು ಮತ್ತು ಆಯಾ ಕಾಲಘಟ್ಟಗಳಲ್ಲಿ ಬದುಕು ಮರುಸೃಷ್ಟಿಗೊಂಡ ಬಗೆಯನ್ನು ಸ್ಮರಿಸಿದರು.
“ಕಥನ ಸಾಹಿತ್ಯಕ್ಕೆ ಸಂಬಂಧಿಸಿ ಇಲ್ಲಿ ಗಂಭೀರವಾದ ದುಡಿಮೆ ಸಂದಿದೆ . ಈಶ್ವರಯ್ಯ, ಕೆ. ಟಿ ಶ್ರೀಧರ್, ನಿತ್ಯಾನಂದ ಪಡ್ರೆ, ಪಿ. ಎನ್. ಮೂಡಿತ್ತಾಯರಂಥವರು ಕಾರ್ಯಾಗಾರ, ತರಬೇತಿಗಳ ಮೂಲಕ ಕಿರಿಯರಿಗೆ ಪ್ರೇರಣೆಯನ್ನು ನೀಡಿದರು. ಈ ಶಿಬಿರದ ಮೂಲಕ ಕಥೆಗಳನ್ನು ಓದುವ, ಅವುಗಳನ್ನು ಆಸ್ವಾದಿಸಿ ಚರ್ಚಿಸುವ, ಚಿಂತಿಸಿ ಆಲೋಚನೆಗಳನ್ನು ಹಂಚುವ ಕೆಲಸವಾಗಬೇಕು. ಸಾಹಿತ್ಯವು ಜನ ಸಾಮಾನ್ಯರ ಬದುಕಿಗೆ ಸ್ಪಂದಿಸಬೇಕು. ಶ್ರಮ ಸಂಸ್ಕೃತಿಯ ಸೂಕ್ಷ್ಮಗಳ ಪ್ರತಿಪಾದನೆ
ಕಾಣಿಸಿಕೊಳ್ಳಬೇಕು. ಭಾವನೆಗಳು ವರದಿಯಾಗಿ, ಘೋಷಣೆಯಾಗಿ, ಬರೇ ಸ್ವಗತವಾಗಿ ಮೂಡಿಬಂದರೆ ಸಾಹಿತ್ಯವೆನಿಸಲಾರದು. ಚಿಂತನೆಗೆ ಹಚ್ಚುವ, ವೈಚಾರಿಕ ನೆಲೆಗಟ್ಟಿನಲ್ಲಿ ಸಮಕಾಲೀನ ಸ್ಥಿತಿಗತಿಗಳಿಗೆ ಕನ್ನಡಿಯನ್ನು ಹಿಡಿಯುವ ಕತೆಗಳ ರಚನೆಯಾಗಬೇಕು. ಅವುಗಳು ವಾಸ್ತವ ಸತ್ಯಗಳನ್ನು ಒಳಗೊಂಡಿರಬೇಕು” ಎಂದರು.
ಸ್ನೇಹಲತಾ ಅವರೊಂದಿಗೆ ಸ್ನೇಹ ಸಂವಾದ
“”””‘””””””””””””””””
ಬೆಂಗಳೂರಿನ ವೀರಲೋಕ ಪ್ರಕಾಶನ ಕಾಸರಗೋಡು ಜಿಲ್ಲೆಯ ೧೭ ರಿಂದ ೪೦ ವಯಸ್ಸಿನ ಆಸಕ್ತರಿಗಾಗಿ ಏರ್ಪಡಿಸಿದ್ದ ಈ ಶಿಬಿರಕ್ಕೆ ಬಹು ಸಂಖ್ಯೆಯಲ್ಲಿ ಆಗಮಿಸಿದ ಶಿಬಿರಾರ್ಥಿಗಳು ತಾವು ರಚಿಸಿದ್ದ ಸಣ್ಣಕತೆಗಳನ್ನು ಮಂಡಿಸಿದರು. ಬೆಂಗಳೂರಿನಿಂದ ಬಂದ ಪ್ರಾಧ್ಯಾಪಕ ಡಾ. ಎಸ್. ಎಲ್. ಮಂಜುನಾಥ್ ಅವುಗಳನ್ನು ವಿಮರ್ಶಿಸಿ, ಸಲಹೆ ಸೂಚನೆಗಳನ್ನು ಕೊಟ್ಟದ್ದು ಪರಿಣಾಮಕಾರಿಯೆನಿಸಿತು. ಹಿಂದಿನ ದಿನ ತಾವು ರಚಿಸಿದ್ದ ‘ಉಪ್ಪಿಟ್ಟು’ ಎಂಬ ಕಥೆಯನ್ನು ಓದಿದ ಬಳಿಕ ಪುಟ್ಟ ವಸ್ತುವೊಂದು ಕಥಾ ಪ್ರಕಾರವಾಗಿ ಹೊಮ್ಮುವಲ್ಲಿ ಭಾಷೆಯ ಪಾತ್ರ ಮತ್ತು ಪರಿಣಾಮ ಬೀರುವ ಬಗೆಯನ್ನು ವಿವರಿಸಿದರು.
ಶಿವಮೊಗ್ಗ ಕರ್ನಾಟಕ ಸಂಘದ ಕಥಾ ಪ್ರಶಸ್ತಿ ವಿಜೇತ ಕತೆಗಾರ್ತಿ ಸ್ನೇಹಲತಾ ದಿವಾಕರ್ ತಮ್ಮ ಅನುಭವ ಕಥನದ ಮೂಲಕ ಗಮನವನ್ನು ಸೆಳೆದರು. “ಕಣ್ಣಾರೆ ಕಂಡ ಶೋಷಣೆಯ ವಿರುದ್ಧ ಏನೂ ಮಾಡಲಾಗದ ಪರಿಸ್ಥಿತಿಯಲ್ಲಿ ದೊರಕುವ ಹೊರದಾರಿ ಕಥಾರಚನೆ ಒಂದೇ. ಇದಕ್ಕೆ ಧೈರ್ಯ ಬೇಕು. ಕೆಲವು ದಶಕಗಳ ಕಾಲ ಕಾದು ಕೊನೆಗೂ ಕೆಲವು ಕತೆಗಳನ್ನು ಬರೆದ ಅನುಭವ ನನ್ನದು. ಕೆಟ್ಟ ನೆನಪುಗಳನ್ನು ನನ್ನಂತೆ ಹೆಚ್ಚು ಕಾಲ ಬಚ್ಚಿಟ್ಟುಕೊಂಡವರೆಷ್ಟು ಜನರಿದ್ದಾರೋ. ನನಗಂತೂ ಅನ್ಯಾಯಗಳ ವಿರುದ್ಧ ಹೇಳುವುದಕ್ಕೆ ಬಹಳಷ್ಟು ಇದೆ. ಅದರಲ್ಲೂ ಹದಿಹರೆಯದ ಹೆಣ್ಣುಮಕ್ಕಳ ವಿರುದ್ಧ ನಡೆಯುವ ಅನ್ಯಾಯ ಅತಿಯಾದ ಸಂಕಟವನ್ನು ಉಂಟುಮಾಡುತ್ತದೆ. ನಾನು ಹೊರತಂದ ‘ ಮಗ್ಗ ‘ ಮತ್ತು ‘ಆಮೆ’ ಕಥಾಸಂಕಲನಗಳು ಇಂಥ ನೋವಿನ ಹಿನ್ನೆಲೆಯಲ್ಲಿ ರೂಪುಗೊಂಡಿವೆ” ಎಂದರು.
ಹಿರಿಯ ಪ್ರಾಧ್ಯಾಪಕಿ, ಸಂಶೋಧಕಿ ಡಾ. ಯು. ಮಹೇಶ್ವರಿ, ಲೇಖಕ – ವಿಮರ್ಶಕ ಡಾ. ಕಿಶೋರ್ ಕುಮಾರ್ ರೈ ಶೇಣಿ, ಕತೆಗಾರ ಸುಂದರ ಬಾರಡ್ಕ , ಸಹಾಯಕ ಪ್ರಾಧ್ಯಾಪಕ ಪ್ರವೀಣ್ ಪದ್ಯಾಣ, ನಿವೃತ್ತ ಅಧ್ಯಾಪಕ ಶೀನ ಬಂಗೇರ ಅವರೊಂದಿಗೆ ಸಂವಾದ ನಡೆಯಿತು.
ಚುರುಕಾದ ಶಿಬಿರಾರ್ಥಿಗಳು
“”””‘”””””””””
ಕಮ್ಮಟವನ್ನು ಜೀವ ಸೆಲೆ ತುಂಬಿದ ಕಾರ್ಯಾಗಾರವಾಗುವಂತೆ ಮಾಡಿದ ಶಿಬಿರಾರ್ಥಿಗಳ ಪಾತ್ರ ಮಹತ್ವದ್ದು. ತುಳು ಕತೆಗಳನ್ನು ಬರೆಯುವ ತೇಜಶ್ರೀಯಿಂದ ತೊಡಗಿ ರಂಜಿತಾ, ಸ್ವಾತಿ, ಶ್ವೇತಾ, ಸೌಮ್ಯ, ಅನನ್ಯ ಬೇಕಲ, ಪಲ್ಲವಿ, ದೀಪ್ತಿ ಎಂ, ಶರಣ್ಯ, ನವ್ಯಶ್ರೀ, ಪ್ರಕೃತಿ, ವನಜಾಕ್ಷಿ ಚಂಬ್ರಕಾನ, ದೇವಿಕಾ, ನವ್ಯ, ಜ್ಯೋತಿರ್ಲಕ್ಷ್ಮಿ, ದಿಲ್ದಾರ್ ಸುಲ್ತಾನ, ಗುರು ಪ್ರಸಾದ್, ಸುಮನ್ ಮಿಲಿಂದ್ ಮತ್ತಿತರರು ಬರೆದ ಕತೆ ಮತ್ತು ಪ್ರತಿಕ್ರಿಯೆಗಳು ಹೊಸ ಭಾವನೆ ಮತ್ತು ದೃಷ್ಟಿ ಕೋನಗಳನ್ನು ಒದಗಿಸಿದವು. ಪ್ರೀತಿ ಪ್ರೇಮ ಪ್ರಣಯ ಮತ್ತು ಕಾಲ್ಪನಿಕ ವಿಚಾರಗಳಲ್ಲಿ ಮಾತ್ರ ಲೀನವಾಗದೆ ಆಧುನಿಕ ಸಮಾಜವು ಎದುರಿಸುವ ಭಾವನಾತ್ಮಕ ತಳಮಳಗಳನ್ನು ಸ್ಪರ್ಶಿಸುವ, ಸಮಕಾಲೀನ ತಲ್ಲಣಗಳನ್ನು ಸಂಕೀರ್ಣವಾಗಿ ಅಭಿವ್ಯಕ್ತಿಸುವ ಕತೆಗಳನ್ನು ರಚಿಸಿದ ಶಿಬಿರಾರ್ಥಿಗಳು ಪ್ರಾಯಕ್ಕೆ ಮೀರಿದ ಪ್ರಬುದ್ಧತೆ ಮತ್ತು ಪ್ರೌಢಿಮೆಯನ್ನು ವ್ಯಕ್ತಪಡಿಸಿದರು.
ಡಾ . ಸುಭಾಷ್ ಪಟ್ಟಾಜೆ
“”””””””””””””””””
ಸೃಜನಶೀಲತೆ ರೂಪ ತಳೆಯುವ ಬಗೆಯು ಅನನ್ಯವೂ ಅಸಾಧಾರಣವೂ ಆಗಿದೆ. ಅದು ಬರಹಗಾರರ ಗ್ರಹಣ ಶಕ್ತಿ , ಸಂವೇದನೆ, ಅಭಿವ್ಯಕ್ತಿ ಸಾಮರ್ಥ್ಯ, ಸಾಮಾಜಿಕ ಧೋರಣೆ ಮತ್ತು ಕಾಳಜಿಗಳನ್ನು ಅವಲಂಬಿಸಿದೆ. ಬದುಕಿನಿಂದ ಗ್ರಹಿಸಿದ ವಾಸ್ತವವನ್ನು ಬುದ್ಧಿಯ ಬಲದಿಂದ ತೂಗಿ, ಸಮರ್ಥ ಭಾಷೆ ಮತ್ತು ಕಲ್ಪನೆಗಳ ಮೂಲಕ ಪುನರ್ ಸೃಷ್ಟಿಸುವುದೇ ಸಾಹಿತ್ಯ ಎನ್ನುವ ಪಟ್ಟಾಜೆ ಈ ಕಾರ್ಯಾಗಾರದ ಹಿಂದಿದ್ದ ಬಲಿಷ್ಠ ಶಕ್ತಿ. ಕಮ್ಮಟದ ನಿರ್ದೇಶಕರಾಗಿ ಅವರು ತಮ್ಮ ಕರ್ತವ್ಯವನ್ನು ಚಾಚೂ ತಪ್ಪದೆ ನಿರ್ವಹಿಸಿದರು. ಶಿಬಿರಾರ್ಥಿಗಳ ಕತೆಗಳಿಗೆ ವಿಮರ್ಶಾತ್ಮಕ ಚೌಕಟ್ಟು ನೀಡುವ ಮೂಲಕ ಅವರನ್ನು ಭರವಸೆಯ ಬರಹಗಾರರನ್ನಾಗಿ ಅರಳಿಸುವಲ್ಲಿ ಅವರ ಪ್ರಾಮಾಣಿಕ ಶ್ರಮ ಎದ್ದು ಕಾಣುತ್ತಿತ್ತು. ಅವರ ಸಂಘಟನ ಸಾಮರ್ಥ್ಯ, ನಿಷ್ಪಕ್ಷಪಾತ ನಡೆ ನುಡಿಗಳು ಅಭಿನಂದನೀಯವಾಗಿವೆ.
ಮರೆಯಲಾಗದ ಕತೆ
“””””””””””””””””
ಕಥಾ ಕಮ್ಮಟಕ್ಕೆ ಸಹಯೋಗವನ್ನು ಒದಗಿಸಿದ ಜಿಲ್ಲಾ ಕನ್ನಡ ಲೇಖಕ ಸಂಘದ ಕಾರ್ಯಾಧ್ಯಕ್ಷ ಪಿ. ಎನ್. ಮೂಡಿತ್ತಾಯರು ಸಮಾರೋಪ ಭಾಷಣವನ್ನು ಮಾಡಿದರು.
ಮರೆಯಲಾಗದ ಕತೆಗಳ ಕತೆ ರೋಚಕವೆನಿಸಿತು. ಭಾರತೀಯ ಕಥಾಪರಂಪರೆಯು ವೇದ, ಪುರಾಣ, ಉಪನಿಷತ್ತುಗಳ ಮರುಸೃಷ್ಟಿ ಎಂಬ ವಾದವನ್ನು ಒಪ್ಪುವುದಾದರೆ ಈಗೇನು ನಡೆಯುತ್ತಿದೆ? ಪಂಪನ ಲೌಕಿಕ, ಜನ್ನನ ಮನೋವೈಜ್ಞಾನಿಕ ವಿಶ್ಲೇಷಣೆ, ರನ್ನನ ಸಿಂಹಾವಲೋಕನ, ನಾಗವರ್ಮನ ಹಿನ್ನೋಟ ತಂತ್ರ, ಮುದ್ದಣನ ಸಮಕಾಲೀನ ನೋವುಗಳ ಅನಾವರಣಗಳ ತನಕದ ಸಾಹಸಗಳನ್ನಾದರೂ ಹಿಂದಿಕ್ಕುವ ಸಾಮರ್ಥ್ಯ ಇಂದಿನವರಿಗೆ ಏಕಿಲ್ಲ?
ಕತೆಗಳಲ್ಲಿ ನೀತಿ ಮುಖ್ಯ ಎನ್ನುವವರು ಅನೈತಿಕ ನಡೆಯು ಹೊಸ ಸ್ವಾತಂತ್ರ್ಯ ಎಂದು ಬೀಗುವುದೇಕೆ? ಪುರಾಣಗಳು ಸುಳ್ಳಾಗಿದ್ದರೆ ಅವುಗಳಲ್ಲಿನ ಕೆಲವೇ ಪಾತ್ರಗಳು ನಿಜ ಎಂಬ ಪ್ರತಿಪಾದನೆ ಯಾಕೆ?
ಇಂದಿನ ಕಥಾಸಾಹಿತ್ಯ ಹೆಮ್ಮೆ ತಾಳುವಂತಿದೆ ನಿಜ . ಅದೇ ವೇಳೆ ನಾಣ್ಯದ ಇನ್ನೊಂದು ಮುಖವನ್ನು ಮರೆಯದೆ ಇಂದಿನ ಕತೆಗಾರರು ತಮ್ಮ ಬಲವನ್ನು ಹೆಚ್ಚಿಸಿಕೊಳ್ಳಬೇಕು. ಕಡಿಮೆ ಮಾತಿನಲ್ಲಿ ಸಾಹಿತ್ಯ ಸೃಷ್ಟಿಯಾಗಬೇಕಾದ ಅನಿವಾರ್ಯತೆ ಇಂದು ನಮ್ಮ ಮುಂದಿದೆ. ಹಾಗೆಂದು ಕಲ್ಪನೆ, ಭಾವನೆಗಳು ಸಾಯಲೂಬಾರದು.
*******