ಏಕ ವ್ಯಕ್ತಿ ತಾಳ ಮದ್ದಳೆ : ಕೃಷ್ಣ ನಿರ್ಯಾಣ
ರಚನೆ ಹಾಗೂ ಪ್ರಸ್ತುತಿ : ಶ್ರೀ ದಿವಾಕರ ಹೆಗಡೆ, ಕೆರೆಹೊಂಡ, ಮೈಸೂರು.
ಭಾಗವತರು : ಶ್ರೀ ಅನಂತ ಹೆಗಡೆ, ಯಲ್ಲಾಪುರ
ಮದ್ದಳೆ : ಶ್ರೀ ಅನಂತ ಪಾಠಕ, ಪುಣೆ
ನಿಯೋಜಕರು : ರಾಗವಲ್ಲಿ ಫೈನ್ ಆರ್ಟ್ಸ್ ಫೌಂಡೇಶನ್, ಬೆಂಗಳೂರು
ಅವಲೋಕನ : ಇಹ ಲೋಕದ ನಿರ್ಗಮನದ ಕ್ಷಣಗಳ ಮೇಲೆ ಕ್ಪ ಕಿರಣ ಬೀರುವ ‘ಕೃಷ್ಣ ನಿರ್ಯಾಣ’ ‘ಯಕ್ಷ ಗಾನ’ದ ‘ಯಕ್ಷ’ನಲ್ಲಿ ಮನಸ್ಸನ್ನು ಆಕರ್ಷಿಸುವ ಯಾವುದೋ ಒಂದು ಚಮತ್ಕಾರವಿದೆ; ಆ ಚಮತ್ಕಾರ ಪ್ರತಿಭೂತವಾಗುವದು ಭಾಗವತನ ‘ಗಾನ’ದಿಂದ, ವೇಷಧಾರಿಯ ತಿರುವು ಕೊಡುವ ಕುಣಿತದ ಲಯದಿಂದ, ಪಾತ್ರದ ಪರಿಚಯವನ್ನು ಪ್ರಕಟಪಡಿಸುವ ಅರ್ಥ ವೈಖರಿಯಿಂದ, ಉಪಯೋಗಿಸುವ ಭಾಷಾ ಚಾತುರ್ಯದಿಂದ, ಅನಿರ್ವಚನೀಯ ಅಂಗ ಭಾವದ ಚಾಕಚಕ್ಯತೆಯಿಂದ, ಒಟ್ಟೂ ಮೂಡುವ ಚಕಮಕಿಯಿಂದ, ಪ್ರೇಕ್ಷಕರಲ್ಲಿ ಪ್ರತಿಫಲಿಸುವ ಹೃದಯ ತರಂಗಗಳಿಂದ. ಈ ಯಕ್ಷಗಾನ, ಸಂಗೀತ, ನೃತ್ಯ, ವರ್ಣರಂಜಿತ ವೇಷಭೂಷ, ನಾನಾ ತರದ ಹಾವಭಾವದ, ಸಾಮಾನ್ಯವಾಗಿ ಪೌರಾಣಿಕ, ಇತ್ತೀಚಿಗೆ ಜಾನಪದ ಹಿನ್ನೆಲೆಯುಳ್ಳ, ಮನೋಗ್ರಾಹ್ಯ, ಸಂದರ್ಭಕ್ಕೆ ಅನುಗುಣವಾದ, ಅರ್ಥಪೂರಿತ ಸಂಭಾಷಣೆಗಳ ಮನೋರಂಜನಾ ಕುಣಿತದ ರೂಪದಲ್ಲಿ, ಪ್ರಾಥಮಿಕವಾಗಿ, ಕರ್ನಾಟಕದ ಕರಾವಳಿ ಅಂಚುಗಳಲ್ಲಿ ಜನಿತವಾಗಿ, ಇಡೀ ಕರ್ನಾಟಕಕ್ಕೇ ಪ್ರಸಾರಿತವಾದ ಒಂದು ವಿಶೇಷ ಕಲಾ ಮಾಧ್ಯಮ!
ಶತಾವಧಾನಿ ಡಾ . ಆರ್ . ಗಣೇಶರ ಪ್ರಕಾರ , ಸನಾತನ ಧರ್ಮ ಇಡೀ ಪ್ರಪಂಚವನ್ನೇ ಒಂದು ದಿವ್ಯ ಕಾವ್ಯವೆಂದು ಪರಿಗಣಿಸುತ್ತದೆ. ಮನುಷ್ಯ ಗಣ ಕಾಲಾನುಕ್ರಮದಲ್ಲಿ, ಪರಿಪರಿಯ ಸೃಜನಶೀಲತೆಯಿಂದ, ಈ ದೇವ ಕಾವ್ಯವನ್ನು ಜೀವ ಕಾವ್ಯವನ್ನಾಗಿ ಸತತವಾಗಿ ಪರಿವರ್ತಿಸುತ್ತಿದೆ. ಪ್ರಾಮುಖ್ಯವಾಗಿ ಪೌರಾಣಿಕ ಸನ್ನಿವೇಶಗಳನ್ನು ಆಯ್ದು ರಚಿಸುವ ಈ ಕಲಾವರಣ, ರಂಗಸ್ಥಳದಿಂದ ಮೂಲ ಯಕ್ಷಗಾನದಲ್ಲಿದ್ದ ವೇಷ, ವೈಢೂರ್ಯ, ಕುಣಿತಗಳನ್ನು ಬಿಟ್ಟು, ಈ ಎಲ್ಲ ರಂಗ ಭೂಷಗಳ ಪಾತ್ರಗಳಿಂದ ಒಂದಷ್ಟು ದೂರ ಬಂದು, ವಿವಿಧ ವೇಷರಹಿತ ಪಾತ್ರಗಳನ್ನೂ ಭಾಗವತಿಕೆ, ಮದ್ದಳೆಯ ಹಿನ್ನೆಲೆಯಲ್ಲಿ ಅರ್ಥೈಸುತ್ತ, ಪ್ರೇಕ್ಷಣೆಯ ಗಮನವನ್ನು ಶ್ರವಣ ಪ್ರಾಧಾನ್ಯವಾಗಿ, ‘ಪ್ರಸಂಗ’ ಅನ್ನುವ ರೂಪಕ್ಕೆ ಮಾರ್ಪಾಟಾಯಿತು. ಇನ್ನೂ ಮುಂದಿನ ಹಂತದಲ್ಲಿ, ಇಂತಹ ಎಲ್ಲ ಪಾತ್ರಗಳೂ ಒಬ್ಬ ವ್ಯಕ್ತಿಯಲ್ಲೇ ಸಮಾವೇಶಗೊಂಡು, ಏಕ ವ್ಯಕ್ತಿ ತಾಳ ಮದ್ದಳೆಯ ರೂಪ ಪಡೆಯಿತು .
ಯಕ್ಷಗಾನಕ್ಕೆ ಬೇಕಾದ ಸಮಯದ ಅಭಾವವೋ, ಅತ್ಯಗತ್ಯ ಶಿಸ್ತಿನ ಕುಣಿತದ ಕಲೆಯ ವಿಶೇಷ ತರಬೇತಿ ಇಲ್ಲದೆಯೋ ಅಥವಾ ಆವಶ್ಯಕ ಸೌಕರ್ಯಗಳ, ಸಾಮಗ್ರಿಗಳ ಇರದಿರುವಿಕೆಯೋ , ಇನ್ನಾವುದೇ ಕಾರಣಗಳೆಲ್ಲ, ಗೌಣವಾಗುತ್ತ, ಈ ಕಲೆಯ ಅಭಿರುಚಿಯನ್ನು ಉಳಿಸಿಕೊಳ್ಳುತ್ತ, ಆಸ್ವಾದಿಸುವ ಪ್ರಕ್ರಿಯೆಯನ್ನು, ಜನಾನುರಾಗಕ್ಕೆ ಮುಂದುವರೆಸುವ ತೀವ್ರ ಬಯಕೆ, ಪಡೆದ ಒಂದು ನೂತನ ಆಯಾಮವೇ ಏಕವ್ಯಕ್ತಿ ತಾಳ ಮದ್ದಳೆ ಅಂತ ಹೇಳಬಹುದು. ಸಂಕ್ಷಿಪ್ತವಾಗಿ, ಯಕ್ಷಗಾನದ ತಾಳಮದ್ದಲೆ, ‘ಪ್ರಸಂಗ ’ದಿಂದ ಮುಂದುವರಿದು, ಆಧುನಿಕ ಸಮಯ ಸಾಪೇಕ್ಷದಲ್ಲಿ, ವೇಷರಹಿತ ಕಥಾ ಸಾಹಿತ್ಯದ ಅರ್ಥಧಾರೀ ರೂಪದಲ್ಲಿ, ಶತಾವಧಾನಿ ಡಾ.ಆರ್. ಗಣೇಶರ ಪ್ರೇರಣೆಯಿಂದ ಆರಂಭವಾದ ‘ಏಕವ್ಯಕ್ತಿ ತಾಳ ಮದ್ದಳೆ’ ಹೊಸ ಆಯಾಮವಾಗಿ ಬೆಳೆಯುತ್ತಿದೆ.
ಸ್ವತಃ ಯಕ್ಷಗಾನ ನಟ, ರಚನಾಕಾರ, ಸಂಘಟಕ, ಕವಿ, ಮೈಸೂರು ಆಕಾಶವಾಣಿ ಕಾರ್ಯಕ್ರಮ ಅಧಿಕಾರಿಗಳೂ ಆದ, ಶ್ರೀ ದಿವಾಕರ ಹೆಗಡೆಯವರು, ತಮ್ಮ ಕಾವ್ಯಾತ್ಮಕ ಶೈಲಿಯಿಂದ, ಈ ಏಕವ್ಯಕ್ತಿ ತಾಳ ಮದ್ದಳೆಯಲ್ಲಿ ಗರ್ಭಿತ ಆಯಾಮಗಳಾದ, ಅಂತರ್ಗತ, ವ್ಯಾಪ್ತಿ, ಸೂಚ್ಯ, ಆಕಾಶ, ಅನಿರ್ವಚನೀಯ ರೂಪುಗಳನ್ನು, ಅರ್ಥ ಗರ್ಭಿತವಾಗಿ, ಅನಾವರಣ ಮಾಡುತ್ತ, ಈಗಾಗಲೇ ಅವರು ರಚಿಸಿದ್ದ ಕೃತಿಗಳಲ್ಲಿ ಕನಕ ಜಾನಕಿ, ವೀರ ಸನ್ಯಾಸಿ ಮತ್ತು ಕೃಷ್ಣ ನಿರ್ಯಾಣ ಪ್ರಾಮುಖ್ಯವಾದವುಗಳು .
ಬೆಂಗಳೂರಿನ ‘ರಾಗವಲ್ಲಿ ಫೈನ್ ಆರ್ಟ್ಸ್ ಫೌಂಡೇಶನ್’ ನವರು ಏರ್ಪಡಿಸಿದ, ದಿವಾಕರ ಹೆಗಡೆಯವರ ಸಮರ್ಪಕ ಹಾಗೂ ಸುಸಂಶೋಧಿತ ‘ಕೃಷ್ಣ ನಿರ್ಯಾಣ’ದ – ಏಕ ವ್ಯಕ್ತಿ ತಾಳ ಮದ್ದಳೆಯ ಕಾರ್ಯಕ್ರಮದ, ವಿಶ್ವೇಶ್ವರ ಗಾಯತ್ರಿಯವರು ಕಳಿಸಿದ ಮೂರು ಕಂತಿನ ಭೂರಿ ರಸದೂಟವನ್ನು ಸವಿಯುವಾಗ, ಅಂಬಿಕಾತನಯದತ್ತರ ಒಂದು ಜನಪ್ರಿಯ ಕಾವ್ಯ ಸಾಕ್ಷಿ, “ನೂರು ಮರ, ನೂರು ಸ್ವರ, ಒಂದೊಂದೂ ಅತಿ ಮಧುರ, ಬಂಧವಿರದೇ ಬಂಧುರ, ಸ್ವಚ್ಛಂದ-ಸುಂದರ!” ಕವನದ ಸಾಲುಗಳು, ಬಹಳೇ ನೆನಪಾದವು.
‘ಕೃಷ್ಣಮ್ ಕೃಷ್ಣೇತಿ’-ಅವನಿಗೆ ಮತ್ಯಾರು ಸಾಟಿ? ಕಾಲವನ್ನು ಬಲ್ಲವ, ಅಂತ್ಯವನ್ನು ಬಲ್ಲವ, ಎಲ್ಲ ಸಾಧ್ಯಗಳ ಸರ್ವ ತಂತುಗಳನ್ನೂ ಜೋಡಿಸುವವ, ಎಲ್ಲ ಕಡೆಗೂ ಇರದಿದ್ದರೂ ಇದ್ದವ! ಆದರೆ, ‘ನಿರ್ಗಮನ’ದ ಸಮಯದಲ್ಲಿರುವ ನೆನಪು, ಸಹಜವಾಗಿ ಭಾವುಕತೆಗೆ ಸಂಬಂದಿಸಿದ್ದು. ಹೀಗಾಗಿ, ದಿವಾಕರರು ಉಪಯೋಗಿಸಿದ್ದು ಮಾನವೀಯ ಮನೋಭಾವದ ಹಾರ್ದಿಕ ಸಂಬಂಧಗಳ ಕಲ್ಪನೆಯನ್ನು. ಕೃಷ್ಣನ ಹುಟ್ಟಿನಿಂದ ಸಾವಿನವರೆಗಿನ ಸುದೀರ್ಘ ಪ್ರಯಾಣದಲ್ಲಿ ಎದುರಾದ, ಸಹಭಾಗಿಯಾದ ವ್ಯಕ್ತಿ ವಿಶೇಷಗಳ, ಸಾಂದರ್ಭಿಕ ಏರಿಳಿತಗಳ, ಕಾಲಾನುಕ್ರಮ ವಸ್ತು-ವಿಷಯಗಳನ್ನು, ಮೂಲ ಸ್ರೋತಕ್ಕೆ ಚ್ಯುತಿಯಾಗದಂತೆ, ಸಕ್ಷಮ ಅಭ್ಯಸನದ ಬೆನ್ನೆಲುಬಿನಲ್ಲಿ ಕೇಂದ್ರೀಕರಿಸುತ್ತ, ಅರಳುವ ಅವ್ಯಕ್ತವನ್ನು ಹೊರತರುವ ತನ್ಮಯತೆಯ ತಾದಾತ್ಮ್ಯದಲ್ಲಿ ಸುಸಜ್ಜಿತವಾಗಿ, ಜೋಡಿಸಿದ್ದಾರೆ. ಜತೆಗೆ, ಬಿಸಿ ದೋಸೆಗೆ ಹಾಕುವ ನಯವಾದ ಬೆಣ್ಣೆಯಂತಿರುವ ಅನಂತ ಹೆಗಡೆಯವರ ಭಾಗವತಿಕೆ ಮತ್ತು ಜೇನುತುಪ್ಪವನ್ನು ಸಿಹಿಯಾಗಿ ಸವರುವ ಅನಂತ ಪಾಠಕರ ಮದ್ದಳೆ, ಬಹಳಕಾಲ ನೆನಪಿಡುವಂತಹ ದಿವಾಕರರ, ತಾವೇ ರಚಿಸಿದ ಕೃತಿಯನ್ನು ಸಾಕಾರಗೊಳಿಸುವಲ್ಲಿ, ಅನಂತ ದ್ವಯರ ಸಮ್ಮಿಲನ ಅಪ್ರತಿಮವಾಗಿದೆ!
ಹೆಸರೇ ಸೂಚಿಸುವಂತೆ, ಈ ‘ಕೃಷ್ಣ ನಿರ್ಯಾಣ’ದಲ್ಲಿ, ಕೃಷ್ಣನ ಬಾಲ್ಯದಿಂದ ನಿರ್ಗಮನದವರೆಗಿನ ಎಲ್ಲ ಮಹತ್ವದ ಘಟನೆಗಳ, ಘಟಕಗಳ, ಘಟ್ಟಗಳ, ಘಟಾನುಘಟಿ ವ್ಯಕ್ತಿಮತ್ವಗಳ ಶೌರ್ಯದ ಅಹಂಕಾರ ಮರ್ದನದ, ವಿವಿಧ ಮಜಲುಗಳ, ಕುತೂಹಲಗಳ ಸಖ್ಯವನ್ನು ವಿಶದೀಕರಿಸುವ, ಅನುಭವಿಸಿದ ಭಾವ ಸಂಗಮ- ದುರ್ಗಮಗಳನ್ನು ಕೊಂಡಾಡುವ, ಸನ್ನಿವೇಶಗಳ ಸುರಮ್ಯ ವರ್ಣನೆಗಳಿವೆ. ದಿವಾಕರರ ಈ ಏಕವ್ಯಕ್ತಿ ತಾಳ ಮದ್ದಳೆಯ ಅನೇಕ ವರ್ಷಗಳ ತಾಲೀಮಿನ ಪರಿಪಕ್ವತೆಯ ನಿಜ ಸೊಬಗು, ಶ್ರವಣ ಕ್ರಿಯೆಗೆ ತಂತೋ ತಂತು ಸರಾಗವಾಗಿ ಸುರಿಸುವ ಸಮಯ ಸ್ಫೂರ್ತಿಯ ಪಾಕದ ಹದವನ್ನು, ರುಚಿಯ ತಾಜಾತನವನ್ನು, ಪ್ರಾರಂಭದಿಂದ ಕೊನೆಯವರೆಗೂ ಗುಪ್ತದಿಂದ ಮುಕ್ತವಾಗಿ ಅರಳುವ, ಆಪ್ತವಾಗಿ ಅರಹುವ, ತೃಪ್ತವಾಗಿ ಮರುಗುವ, ನಿರ್ಲಿಪ್ತವಾಗಿ ಮಿನುಗುವ, ವಿಕ್ಷಿಪ್ತತೆಯನ್ನು ವಿವೇಚಿಸುವ, ಕ್ಲುಪ್ತತೆಯನ್ನು ಅರ್ಥೈಸುವ, ಸಂತಪ್ತತೆಯ ಭಾವಾತಿಶಯದಲ್ಲಿ, ಸೌಂದರ್ಯದ ಅವಿನಾಭಾವದ ವರ್ತುಲದಲ್ಲಿ ಚಂದವಾಗಿ ಹೊರ ಹೊಮ್ಮುವ ವಾಙ್ಮಯದಲ್ಲಿ ಎದ್ದು ತೋರುತ್ತದೆ. ವಸ್ತು ನಿರೂಪಣೆಯ ಒಟ್ಟೂ ವೈಭವಕ್ಕೆ, ಈ ವಾಙ್ಮಯವೇ ಆಭರಣ; ಸ್ವಲ್ಪ ಕಣ್ಣು ಮುಚ್ಚಿದರೆ ಸಾಕು, ಬಲಿಷ್ಠ ಯಕ್ಷಗಾನವೇ ಸಾಕ್ಷಾತ್ ಎದುರು ಬಂದಂತೆ, ಆದರೆ, ಹೆಜ್ಜೆಯಿರದ ಯಕ್ಷಗಾನಕ್ಕೆ, ಶಬ್ದಮುತ್ತುಗಳ ಗೆಜ್ಜೆಯನ್ನು ಸಜ್ಜು ಮಾಡುತ್ತ, ಪೂರ್ತಿ ವ್ಯಾಖ್ಯಾನವನ್ನು ನಿಖರವಾಗಿ ನಿರ್ವಹಿಸಿದ್ದಾರೆ, ದಿವಾಕರರು!
ಇಲ್ಲಿ ನನಗೆ, ಬಸವಣ್ಣನನವರ ಒಂದು ವಚನ ನೆನಪಾಯಿತು : ‘ ನುಡಿದರೆ ಮುತ್ತಿನ ಹಾರದಂತಿರಬೇಕು; ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು; ನುಡಿದರೆ ಸ್ಫಟಿಕದ ಸಲಾಖೆಯಂತಿರಬೇಕು” ದಿವಾಕರರು, ಸೂಕ್ತ ಸಂಚಿನ ದಿವೆಯ ಆಕರರಾಗಿ, ತಮ್ಮ ರಚನೆಯ ನುಡಿಗಳಲ್ಲಿ ನಡೆದು, ಕೃಷ್ಣನ ಅಂತಿಮ ನಿರ್ಗಮನದ ಕ್ಷಣಗಳನ್ನು ಲಕ್ಷಣವಾಗಿ ಸಾಕ್ಷಾತ್ಕರಿಸಿದ್ದಾರೆ, ಅನ್ನುವದು ಮನವಿಟ್ಟು, ಗಮನವಿಟ್ಟು ಕೇಳಿದವರಿಗೆಲ್ಲ ವೇದ್ಯವಾಗುತ್ತದೆ ಅನ್ನುವುದರಲ್ಲಿ ಸಂಶಯವಿಲ್ಲ.
ಇಂತಹ ಕೃತಿಸಿಧ್ಧ ಏಕವ್ಯಕ್ತಿ ತಾಳ ಮದ್ದಳೆಯನ್ನು ನೋಡುವ, ಕೇಳುವ ಆಹ್ಲಾದಕತೆಯೇ ಬೇರೆ. ಕೇಳದೇ ಇದ್ದ ಕೇಳಬಯಸುವವರಿಗೆ, ಅಲ್ಲಿರುವ ಚಿತ್ತಾಕರ್ಷಕ ಅನುಸಂಧಾನಗಳಲ್ಲಿ, ಕೆಲವನ್ನಾದರೂ ಪರಿಚಯಿಸದಿದ್ದಲ್ಲಿ, ಅವಲೋಕನ ಅಪೂರ್ಣವಾದೀತು!
ಕೃಷ್ಣನ ಸ್ವಗತಗಳು : ತನ್ನ ಸಾವು ಮುಂದಿತ್ತು, ಹಾಲಿನಂತೆ, ಮಜವಾದ ಆಟಿಗೆಯಂತೆ, ಹಾರುವ ಹಕ್ಕಿಯಂತೆ, ಹರಿದಾಡುವ ಹಾವಿನಂತೆ, ಕುದುರೆಯ ಸವಾರಿಯಂತೆ, ನಲಿವಿನಿಂದ ಕುಣಿದಾಡಿದಂತೆ, ಇತ್ಯಾದಿ.
ಕಳೆದು ಹೋದ ಕ್ಷಣಗಳ ನೆನಪೆಂದರೆ : ಇಡಿಯಾದ ತಾಯ್ತನವನ್ನು ಅನುಭವಿಸಿದಂತೆ, ಬೆಳದಿಂಗಳಿನಂತೆ, ಕತ್ತಲೆಯ ಕೂಟದಂತೆ, ಆತ್ಮ ತೃಪ್ತಿಯ ಕಲಿಕೆಯಂತೆ, ಕಾಲವನ್ನು ಲಯದಿಂದ ಲೆಕ್ಕ ಹಾಕುವಂತೆ, ಪ್ರೀತಿಯನ್ನು ತಂಬಿಗೆಯಲ್ಲಿ ಸಂಗ್ರಹಿಸಿಡದಂತೆ, ಶಾಸನವಿಲ್ಲದ ನಿರ್ದೇಶನದ ಮಾಧುರ್ಯವನ್ನು ಸವಿದಂತೆ, ಸಮಸ್ಯೆಯಲ್ಲೇ ಇರುವ ಸಮಾಧಾನವನ್ನು ಹುಡುಕುವಂತೆ, ಇತ್ಯಾದಿ.
ಕಡೆದ ಮಜ್ಜಿಗೆಯಲ್ಲಿ ದೊರೆಯುವ ತತ್ವ ಬೆಣ್ಣೆಗಳೆಂದರೆ : ಕಷ್ಟವನ್ನು ಸಾಕುವುದರಲ್ಲಿ ಸುಖವಿದೆ, ಬದುಕಲಿಕ್ಕೆ ಶ್ರದ್ಧೆಯೊಂದೇ ಸಾಕು, ರಾಜನಾದವನು ದೇಶವನ್ನೂ, ಕಾಲವನ್ನೂ ಆಳಬೇಕು; ದೇಶವನ್ನು ಬಲದಿಂದ, ಸಾಮರ್ಥ್ಯದಿಂದ, ಕಾಲವನ್ನು ಶೀಲದಿಂದ, ತಪಸ್ಸಿನಿಂದ, ಲೋಕಕಲ್ಯಾಣಕ್ಕಾಗಿ ಪೌರುಷವನ್ನು ಪ್ರತಿಪಾದಿಸಬೇಕು, ಬಿಸಿಲೇ ಇರದಿದ್ದರೆ ನೆರಳಿದೆಯೇ? ಬದುಕಿನ ನಲಿವನ್ನು ಕಂಡುಕೊಳ್ಳಲು, ವಯಸ್ಸು ಒಂದು ಸಮಸ್ಯೆಯಲ್ಲ, ಇತ್ಯಾದಿ.
ಕೃಷ್ಣನನ್ನು ಕೇಳಲು ಯಾರಿಗೆ ಆಸಕ್ತಿಯಿಲ್ಲ? ಇಡೀ ಕಥನದಲ್ಲಿ, ಪ್ರಮುಖ ವ್ಯಕ್ತಿಗಳ ತೀಕ್ಷ್ಣ ಸ್ವಭಾವದ ಸೂಕ್ಷ್ಮ ಪರಿಚಯಗಳೂ ಕಾಣಸಿಗುತ್ತವೆ. ಭಾಗವತದಿಂದ ಮಹಾಭಾರತದ ಕೊನೆಯವರೆಗಿನ ಸನ್ನಿವೇಶಗಳ ಸ್ಮರಣೆಯಲ್ಲಿ, ರಾಮಾಯಣದ ಕೆಲ ಅಂಶಗಳೂ ಸಕಾರಣವಾಗಿ, ಸಂದರ್ಭಕ್ಕೆ ಉಚಿತವಾಗಿ ಮಿಂಚುತ್ತವೆ. ಕಂಸನ ಕನಸ್ಸಿನಲ್ಲೂ ಕೃಷ್ಣ, ಕಂಸನಿಂದ ಹತ್ಯವಾದ ಆ ಸಮಯದ ಗಂಡು ಶಿಶುಗಳನ್ನೆಲ್ಲ ಕಳೆದುಕೊಂಡ ತಾಯಂದಿರರ ದೌರ್ಭಾಗ್ಯ, ಕೌರವನಿಗಾಗಿ ಸಾಯುವ ಒಬ್ಬನೇ ಒಬ್ಬ ಕರ್ಣನ ತುಮುಲದ ವರ್ಣನೆ, ಇಡೀ ಯುಗಕ್ಕೇ ಉತ್ತರ ನೀಡಬೇಕಾದ ಪ್ರಶ್ನೆಯಾದ ದ್ರೌಪದಿ ವಸ್ತ್ರಾಪಹರಣಕ್ಕೆ ಪರಿಹಾರವೇ ಪ್ರತೀಹಾರವೆಂದು ನಿಶ್ಚಯಿಸುವಾಗ, ಭೀಮ, ಕೀಚಕನನ್ನು ಕೊಂದಾಗಲೇ ನಡುಗಿರುವ, ‘ಜಾನಾಮಿ ಧರ್ಮಮ್, ನ ಚ ಮೇ ಪ್ರವೃತ್ತಿ:’ ಎಂದು ಅರಿತೂ ಧರ್ಮರಾಜನಿಗೆ ಧರ್ಮ ಹೇಳುವ ಮತ್ತೂ ಬೇರೆಯವರ ಬತ್ತಳಿಕೆಯ ಭರವಸೆಯ ಆಧಾರದ ಮೇಲೆ ಯುದ್ಧ ಸಾರುವ ದುರ್ಯೋಧನನ ವಿಸಂಗತ ಬುದ್ಧಿಮತ್ತೆಯ, ಸಂಸಾರ-ಸಖ್ಯಗಳ ನೆನಪಿನ ಮಹಾಪೂರಗಳ ಕೊನೆಯಲ್ಲಿ, ಸ್ಮ್ರತಿಗೆ ಹೊಳೆಯುವ ಸಪ್ತರ್ಷಿಗಳ, ಗಾರ್ಗ್ಯ ಋಷಿಗಳ ಶಾಪದ ಜ್ಞಾಪಕ ಪರಮಾವಧಿಯಲ್ಲಿ ನಿರ್ಗಮಿಸುವ ಕೃಷ್ಣ, ನಮ್ಮೆಲ್ಲರ ಇಹ ಜೀವನದ ಕೊನೆಯ ಅವಿಸ್ಮರಣೀಯ ಕ್ಷಣಗಳನ್ನು ಎದುರುಗೊಳ್ಳುವ ಲೌಕಿಕ, ಯುಕ್ತಾಯುಕ್ತ ಪರಿಜ್ಞಾನದ ಇಂಗಿತವನ್ನು ತಪ್ಪದೇ ಸೂಚಿಸುವ ಸುಶ್ರಾವ್ಯ ಭಾಗವತಿಕೆಯ ಮುಕ್ತಾಯ, ಮಾರ್ಮಿಕವಾಗಿದೆ!
ಕಾರ್ಯಕ್ರಮವನ್ನು ಆಯೋಜಿಸಿದ, ರಾಗವಲ್ಲಿ ಫೈನ್ ಆರ್ಟ್ಸ್ ಫೌಂಡೇಶನ್, ಬೆಂಗಳೂರು ಅವರಿಗೂ ಅಭಿನಂದನೆ.
ಈ ಸಂಪೂರ್ಣ ಕಾರ್ಯಕ್ರಮವನ್ನು ಶ್ರವಣಿಸಲು ಭೇಟಿ ನೀಡಿ :
https://youtu.be/8GHdM4aiGmQ ಮತ್ತು https://youtu.be/fzKGvGbPRFg ಮತ್ತು https://youtu.be/_mcAv_jwKJs
-ಚಿಂತಾಮಣಿ ಸಭಾಹಿತ