ಆಷಾಢದ ಜಿಟಿಜಿಟಿ ಮಳೆಗೆ ರಸ್ತೆಗಳೆಲ್ಲ ಜಾರು- ಬಂಡೆಗಳಂತೆ ಆಗಿವೆ . ಹೊರಗೆ ಕಾಲಿಟ್ಟರೆ ಸಾಕು ರಾಡಿ, ಕೆಸರು; ಒಂದು ವಾರ ಆದ್ರೂ ಮಳಿ ನಿಲ್ಲುವ ಸುದ್ದಿನೇ ಇಲ್ಲ ! ಇಂಥದ್ರಲ್ಲಿ ಅಮ್ಮನ ಪಾರಿಜಾತ ಸೇವೆ ಅಧಿಕಮಾಸ, ಚಾತುರ್ಮಾಸ, ಶ್ರಾವಣ ಮಾಸ, ಅಂತ ಕೃಷ್ಣನಗುಡಿಗೆ, ರಾಮನಗುಡಿಗೆ, ರಾಯರ ಮಠಕ್ಕೆ ಪ್ರತಿನಿತ್ಯ ಪಾರಿಜಾತ ಪುಷ್ಪ ಹರಿದು, ಆರಿಸಿ , ಕಾಲುನಡಿಗೆಯಿಂದ ಹೋಗಿ ಕೊಟ್ಟು ಬರೋದು ಅವಳ ಸೇವೆ. ಈ ಸೇವೆ ಒಂದೂ ದಿನ ತಪ್ಪದೇ ನಡೆಸಿದಳು. ಬರುವ ಹುಣ್ಣಿವಿಗೆ ಅಮ್ಮನ ವ್ರತ ಮುಗಿಯುತ್ತೆ ಅಂತ ನಾನೇ ಒಂದೊಡ್ಡ ನಿಟ್ಟುಸಿರು ಬಿಟ್ಟು ನಿರಾಳ ಆಗ್ತೀನಿ.
ಅಮ್ಮನ ಮನೆಯ ಪಾರಿಜಾತದ ಮರಕ್ಕೂ ಈ ವಿಷಯ ತಿಳಿದಿತ್ತೇನೋ ಈ ವರ್ಷ ಬಂಪರ್ ಬೆಳೆ! ಹೂವುಗಳ ಸುರಿಮಳೆ , ರಾಶಿ ರಾಶಿ ಹೂ ನೀಡಿತು. ಮನೆಯ ಅಂಗಳ, ಮನೆ ಮುಂದಿನ ರಸ್ತೆ ಪಾರಿಜಾತ ಹೂವಿನ ಮೆದುಹಾಸು. ಟಚ್ ವುಡ್ ! 67 ವರ್ಷದ ಅಮ್ಮ ಚಟುವಟಿಕೆಯಿಂದ ಇದ್ದಾಳೇನೊ ನಿಜ. ಆದರೆ ವಯೋಸಹಜವಾದ ಈಕಾಲದ ಮಂಡಿ ನೋವಿದೆ, ಹಾರ್ಟ್ ನ ಸಲುವಾಗಿ ಎಕೊಸ್ಪ್ರೀನ್, ಮೂಳೆಗಳು ಗಟ್ಟಿ ಇರಲಿ ಅಂತ ಕ್ಯಾಲ್ಸಿಯಂ, ಎನಿಮಿಕ್ ಆಗಬಾರದು ಅಂತ ಐರನ್ ಗುಳಿಗೆಗಳು ಸರ್ವೇಸಾಮಾನ್ಯ. ಇಷ್ಟೆಲ್ಲ ಇದ್ರೂನು ಅಮ್ಮನ ಸಂಕಲ್ಪ ಶಕ್ತಿಗೆ ಸೆಲ್ಯೂಟ್ ಮಾಡ್ಲೇಬೇಕು. ನಾಲ್ಕು ತಿಂಗಳು ನೇಮವನ್ನ ಅಚ್ಚುಕಟ್ಟಾಗಿ ಪಾಲಿಸಿದ್ಲು.
ನಸುಕಿನಲ್ಲಿ ಎದ್ದು ಕಸ, ಥಳಿ, ರಂಗೋಲಿ ಹಾಕುವದರೊಂದಿಗೆ ಅವಳ ದಿನದ ಪ್ರಾರ್ಥನೆ ಶುರುವಾಗುತ್ತದೆ. ನಮ್ಮ ಅಪಾರ್ಟ್ಮೆಂಟ್ ಸಂಸ್ಕೃತಿಯಲ್ಲಿ ಇದೆಲ್ಲ ತೀರ ಕಡಿಮೆ. ಕೆಲಸದವರು ಮಾಪಿಂಗ್ ಮಾಡುತ್ತಾರೆ. ಬಣ್ಣವಿಲ್ಲದ ರಂಗೋಲಿ ಸ್ಟಿಕರ್ ನೆಲಕ್ಕೆ ಅಂಟಿರುತ್ತೆ ಅಷ್ಟೆ. ಅಮ್ಮಗೌರಿ ಪೂಜೆ, ತುಳಸಿ ಪೂಜೆ ಮಾಡ್ತಾಳೆ. ಅಷ್ಟ್ರಲ್ಲೇ ಅಪ್ಪನ ಉದಯ ಕಾಲ ಸ್ತೋತ್ರಗಳು ಆರಂಭವಾಗುತ್ತವೆ. ಕಷಾಯ ಕುದಿಯಲು ಇಟ್ಟು ಪಾರಿಜಾತ ಹೂಗಳನ್ನ ಆರಿಸುವ ಕಾಯಕದಲ್ಲಿ ತೊಡಗುತ್ತಾಳೆ . ಬುಟ್ಟಿತುಂಬ ಪಾರಿಜಾತದ ಹೂಗಳ ಪರಿಮಳ, ಕುದಿಯುತ್ತಿರುವ ಕಷಾಯದ ಘಮದಲ್ಲಿ ಶುಂಠಿ, ತುಳಸಿ, ಒಂದೇಲಗ (ಬ್ರಾಹ್ಮಿ), ಅಮೃತ ಬಳ್ಳಿ,ಜೇಷ್ಠ ಮಧು, ಕಾಳಮೆಣಸು, ಅರಿಷಿಣ , ಜೀರಿಗೆ, ಹವೀಜದ ಅಂಶವೆಲ್ಲ ಸೇರಿಕೊಂಡು ಮನೆಯೆಲ್ಲ ಸಂಜೀವಿನಿ ಸುವಾಸನೆ! ಅಪ್ಪನಿಗೆ ಬೆಲ್ಲವಿಲ್ಲದೇ ಸೋಸಿ ನಂತರ ತನಗೆ ಮಾತ್ರ ಚೂರು ಬೆಲ್ಲದ ಪುಡಿ ಹಾಕಿ ಮುಚ್ಚಿಡುತ್ತಾಳೆ. ಹೂವು ಒಪ್ಪಿಸಿ ಬಂದ ಮೇಲೆಯೇ ಅವಳು ಕಷಾಯ ಕುಡಿಯುವುದು.
ಬೆಳಿಗ್ಗೆ ಹೊತ್ತು ಒಂದು ನಿಮಿಷ ಸಮಯ ವ್ಯಯ ಮಾಡೋದಿಲ್ಲ . ತನ್ನ ಬೆಳಗಿನ ಪಾರಾಯಣಗಳನ್ನ ಹೇಳ್ತಾ ಹೇಳ್ತಾ ತಿಂಡಿಗೆ ಬೇಕಾಗುವ ತರಕಾರಿಗಳನ್ನು ತೊಳೆದು,ಹೆಚ್ಚಿ , ಅಣಿ ಮಾಡಿಕೊಳ್ಳುತ್ತಾಳೆ. ಅಮ್ಮನಿಗೆ ಕೇಶವನಾಮ, ಮಧ್ವನಾಮ, ಶ್ರೀರಾಮರಕ್ಷಾ , ಮುಂತಾದ ಸ್ತೋತ್ರಗಳೆಲ್ಲ ಬಾಯಿಪಾಠ! ಕನ್ನಡಿ ಮುಂದೆ ಒಂದು ಚಣ ನಿಂತು ಕುಂಕುಮ ಸರಿ ಮಾಡ್ಕೊಂಡು ದೇವಸ್ಥಾನಕ್ಕೆ ಹೊರಡೋದು. ಚಳಿ, ಮಳೆ, ಬಿಸಿಲು ಏನೇ ಇರಲಿ ಈ ಕೆಲಸಕ್ಕೆ ಯಾವುದು ಅಡ್ಡಿಯಾಗೋದಿಲ್ಲ. ಆ ದೃಢನಿಶ್ಚಯ ,ಮನೋಬಲ ಅವಳ ಕಣ್ಣಲ್ಲಿ ಕಂಡಿದ್ದೇನೆ. ಶ್ರದ್ಧೆ , ಜೀವನಪ್ರೀತಿ ಅಲ್ಲಿ ನಳನಳಿಸುವದನ್ನೂ ಕಂಡಿದ್ದೇನೆ. ಇದು ಬರಿ ಅಮ್ಮನ ಮಾತಲ್ಲ, ಊರಿನಲ್ಲಿರುವ ಅಮ್ಮನ ಆಸುಪಾಸಿನ ವಯೋಮಾನದವರೆಲ್ಲರ ನಿತ್ಯಸತ್ಯದ ಮಾತು.
ನನಗೆ ಒಮ್ಮೊಮ್ಮೆ ಇದು ಭಕ್ತಿಯೊ… ಶಕ್ತಿಯೊ….ಅಥವಾ ಎರಡೂ ಇದೆಯಾ ಎಂಬ ಬೆರಗು. ನಮಗೆ ಯಾಕಿಲ್ಲ ಇಂಥ ಭಕ್ತಿ ,ಶಕ್ತಿ? ಎಂಬ ಪ್ರಶ್ನೆ ಕಾಡುತ್ತದೆ. ನಮ್ಮೊಳಗೂ ಈ ಶಕ್ತಿಗಳಿವೆಯಾ ? ಅವುಗಳನ್ನು ಜಾಗೃತಗೊಳಿಸಬೇಕಾ? ಎನಿಸುತ್ತದೆ. ಸ್ನೇಹಿತರೆ, ಸಂಕಲ್ಪ ಎಂದರೆ ಸರಿಯಾಗಿ ಕಲ್ಪಿಸುವುದು ಎಂದರ್ಥ. ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಈ ಶಕ್ತಿ ಇದೆ. ಇದು ಆಂತರ್ಯದ ಶಕ್ತಿ. ದೇವಸ್ಥಾನದಲ್ಲಿ ಪೂಜೆಯನ್ನು ಸಲ್ಲಿಸುವಾಗ ಅರ್ಚಕರು ಸಂಕಲ್ಪ ಮಾಡಿಕೊಳ್ಳಿ ಎಂದು ಹೇಳುವುದನ್ನು ಕೇಳಿರುತ್ತೇವೆ .
” ಪ್ರಾರ್ಥನಾ ವೈ ಸಂಕಲ್ಪ: ” ಎನ್ನುವ ವೇದದ ಮಾತೊಂದಿದೆ. ಅಂದರೆ ನಮಗೆ ಏನು ಬೇಕು ಎಂದು ಮನಸ್ಸಿನಲ್ಲಿ ಕಲ್ಪಿಸಿಕೊಳ್ಳುವುದು . ನಾವು ಪ್ರಾರ್ಥಿಸಿ ಆಹ್ವಾನಿಸುವ ದೇವತೆಯ ಶಕ್ತಿಯನ್ನು ಪಡೆದುಕೊಳ್ಳುವದು. ಅಗ್ನಿದೇವನು ಸಂಕಲ್ಪಶಕ್ತಿಯ ಅಧಿದೇವ ಎಂದು ಹೇಳುತ್ತಾರೆ. ನಮ್ಮ ಹಿಂದಿನ ತಲೆಮಾರಿನವರು ಇದನ್ನೆಲ್ಲ ಪಾಲಿಸಿಕೊಂಡು ಬಂದವರು. ಅದಕ್ಕೆ ಅವರಲ್ಲಿ ಅಚಲವಾದ ಸಂಕಲ್ಪ ಶಕ್ತಿಯಿದೆ.ಆದರೆ ನಮ್ಮ ಸಂಕಲ್ಪ ಗಟ್ಟಿತನ ಪಡೆಯುವಲ್ಲಿ ಯಾಕೆ ಹಿಂದೆಬೀಳುತ್ತದೆ ಎನ್ನುವುದಕ್ಕೆ ಬೇರೆ ಬೇರೆ ಕಾರಣಗಳಿವೆ. ಇದರ ನಡುವೆ ಬೆರಳೆಣಿಕೆಯಷ್ಟು ದೃಢವಾದ ಸಂಕಲ್ಪ ಶಕ್ತಿಯನ್ನು ಹೊಂದಿರುವವರಿದ್ದಾರೆ. ಉದಾಹರಣೆ ನಮ್ಮ ಹೆಮ್ಮೆಯ ಕನ್ನಡತಿ ಪದ್ಮಭೂಷಣ ಸುಧಾಮೂರ್ತಿಯವರು, ಅಂದುಕೊಂಡಿದ್ದನ್ನು ಸಾಧಿಸಿಯೇ ತೋರಿಸುವವರು.
ಇಲ್ಲಿ ಇನ್ನೊಂದು ಉದಾಹರಣೆಯನ್ನು ಕೊಡಬೇಕು ಅನಿಸುತ್ತಿದೆ. ಶ್ರೀಲಂಕಾದ ಅತಿ ವೇಗದ ಬೌಲರ್ ಮುರಳಿಧರನ್ ಒಂದು ಸಂದರ್ಶನದಲ್ಲಿ ತಮ್ಮ ಯಶಸ್ಸಿನ ಗುಟ್ಟನ್ನು ಹೇಳಿರುವುದು ಈ ದಿಶೆಯಲ್ಲಿ ಉಲ್ಲೇಖನೀಯವಾದುದು . ” ನಾನು ಆಟಕ್ಕೆ ಹೋಗುವ ಒಂದು ವಾರಕ್ಕೆ ಮುಂಚೆ ನಾನು ಕಳೆದ ಬಾರಿ ಎಷ್ಟು ಯಶಸ್ವಿಯಾಗಿದ್ದೆ ಎಂದು ಮನಸ್ಸಿನಲ್ಲಿ ಯೋಚಿಸುತ್ತೇನೆ . ಹಾಗೆ ಪ್ರತಿ ಬಾರಿ ನಾನು ಚೆಂಡನ್ನು ಹಾಕುವ ಮುನ್ನ ನನ್ನ ಮನಸ್ಸಿನಲ್ಲಿ ಆ ಕಡೆಯಿಂದ ವಿಕಿಟ್ ಉರುಳಿದಂತೆ ಕಲ್ಪಿಸಿಕೊಳ್ಳುತ್ತೇನೆ. ಆಗ ವಿಕೆಟ್ ಉರುಳಿ ಹೋಗುತ್ತದೆ”
ಈ ರೀತಿಯ ಸಂಕಲ್ಪ ಹಾಗೂ ಉತ್ಕಟೇಚ್ಛೆಗಳೊಂದಿಗೆ ನಮ್ಮ ಸುತ್ತಲೂ ಇರುವ ಪ್ರತಿಯೊಬ್ಬ ಯಶಸ್ವಿ ವ್ಯಕ್ತಿಯು ಸಾಧನೆ ಮಾಡಿರುತ್ತಾರೆ. ಹೀಗೆ ನಾವು ಏನಾಗಬೇಕು ಎಂಬುದನ್ನು ಅಥವಾ ನಮಗೆ ಏನು ಬೇಕು ಎನ್ನುವುದನ್ನು ಎಷ್ಟು ತೀವ್ರವಾಗಿ ನಮ್ಮ ಮನಸ್ಸಿನಲ್ಲಿ ನಿರಂತರವಾಗಿ ಪ್ರೇರಣೆಗಳನ್ನು ಕೊಡುತ್ತಿವೆಯೋ ಅದರ ಮೇಲೆ ನಮ್ಮ ಯಶಸ್ಸು ನಿರ್ಧಾರವಾಗುತ್ತದೆ. ಇದನ್ನು ಇಂದಿನ ಮನೋವೈಜ್ಞಾನಿಕ ಪರಿಭಾಷೆಯಲ್ಲಿ ‘ಸ್ವಯಂಪ್ರೇರಣೆ’ (ಆಟೋ ಸಜೆಶನ್) ಎನ್ನುತ್ತಾರೆ. ವೈದಿಕ ಆರಾಧನೆಗಳಲ್ಲಿ ಅತ್ಯಂತ ಮಹತ್ವದ ಸ್ಥಾನ ಪಡೆದಿರುವ ಸಂಕಲ್ಪದ ಪರಿಕಲ್ಪನೆಯೂ ಇದನ್ನೇ ಹೇಳುತ್ತದೆ. ( ಭಾರತೀಯ ಚಿಂತನೆಯಲ್ಲಿ ಮನೋವೈಜ್ಞಾನಿಕ ತತ್ವಗಳು- ಡಾ.ಜಯಂತಿ ಮನೋಹರ,ಪುಟ7,8)
ಆದರೆ ಬಹುತೇಕ ಜನರಿಗೆ ಇದು ಕಷ್ಟ ಸಾಧ್ಯ. ಸಂಕಲ್ಪಕ್ಕೆ ಅಡ್ಡಿಯಾಗುವ ವಿಷಯಗಳು ಹಲವಾರು. ಒಂದು ಮುಖ್ಯವಾದ ಅಂಶವೆಂದರೆ ನಕಾರಾತ್ಮಕ ಭಾವ. ಇನ್ನೊಂದು ನಮ್ಮ ಆಲಸ್ಯ. ಕೆಲವು ಸಲ ಯಾವ ಆಲೋಚನೆ ಮಾಡುತ್ತಿದ್ದೇವೋ ಅದಕ್ಕೆ ಪರಸ್ಪರ ವಿರುದ್ಧವಾದ ಅನೇಕ ವಿಕಲ್ಪಗಳು ಹುಟ್ಟಿಕೊಂಡು ನಾವು ಮುಂಚಿತವಾಗಿ ಮಾಡಿದ ಆಲೋಚನೆಗಳನ್ನು , ನಿರ್ಧಾರಗಳನ್ನು ನಿಷ್ಫಲ ಗೊಳಿಸುತ್ತಿರುತ್ತವೆ. ಇದರಿಂದ ಮನಸ್ಸು ಅಲ್ಲೋಲ ಕಲ್ಲೋಲವಾಗಿ ಅಶಾಂತಿಗೆ ಕಾರಣವಾಗುತ್ತದೆ.
ಈ ನಕಾರಾತ್ಮಕ ಆಲೋಚನೆ, ಸಂಕಲ್ಪ ಶಕ್ತಿಗೆ ಅಡ್ಡಿಯಾಗುವುದು. ಇದರಿಂದ ಮತ್ತು ಆಲಸ್ಯದಿಂದ ಹೊರಬರಲು ಯೋಗ, ಧ್ಯಾನ ಮಾಡಬೇಕಾಗುತ್ತದೆ. ನಮ್ಮ 24×7 ಬಿಡುವಿಲ್ಲದ ಧಾವಂತದ ಜೀವನಕ್ರಮದಲ್ಲಿ ಇದರ ಕುರಿತು ಯೋಚಿಸುವುದಿಲ್ಲ. ನಮ್ಮ ದೇಹ, ಮನಸ್ಸು, ಬುದ್ಧಿ,ಆಲೋಚನೆಯ ಬಗೆಗೆ ನಾವೇ ಅಲಕ್ಷ್ಯ ಯಾಕೆ ತೋರುತ್ತೇವೆ ? ನಮ್ಮನ್ನು ಕುರಿತು ನಾವೇ ಯೋಚಿಸುವ ಅಗತ್ಯವಿದೆಯಲ್ಲವೆ ?
4 thoughts on “ನೀತಿ ಪ್ರತೀತಿ -ವಿಭಾ ಪುರೋಹಿತ ಅಂಕಣl ‘ಸಂಕಲ್ಪಶಕ್ತಿ’”
ಅದ್ಭುತ ಅಮ್ಮ 👏❤️❤️
ಧನ್ಯವಾದ
ತುಂಬ ಅದ್ಬುತವಾಗಿದೆ
ಚೆನ್ನಾಗಿದೆ ವಿಭಾ.