ಮಿಂಚಿನ ಬಳ್ಳಿ- ವಿಕಾಸ ಹೊಸಮನಿ ಅಂಕಣ l ಮೊಗಸಾಲೆಯವರ ‘ಧಾತು’

ಡಾ.ನಾ.ಮೊಗಸಾಲೆ ಕನ್ನಡದ ಮಹತ್ವದ ಲೇಖಕರಲ್ಲೊಬ್ಬರು. ಮೊಗಸಾಲೆಯವರು ವೃತ್ತಿಯಿಂದ ವೈದ್ಯರಾದರೂ ಪ್ರವೃತ್ತಿಯಿಂದ ಸಾಹಿತಿಗಳು. ಮೊಗಸಾಲೆಯವರು ಕಳೆದ ಐದು ದಶಕಗಳಿಂದ ಕಾವ್ಯ, ಕಥೆ, ಕಾದಂಬರಿ ಮತ್ತು ವೈದ್ಯಕೀಯ ಸಾಹಿತ್ಯ ಸೇರಿದಂತೆ ಹಲವು ಪ್ರಕಾರಗಳಲ್ಲಿ ಸಮೃದ್ಧ ಕೃಷಿ ಮಾಡಿದ್ದಾರೆ. ಮೊಗಸಾಲೆಯವರ ಒಟ್ಟು ಸಾಹಿತ್ಯ ಹೆಚ್ಚು ಕಡಿಮೆ ಹತ್ತು ಸಾವಿರ ಪುಟಗಳಷ್ಟಾಗುತ್ತದೆ. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಮೊಗಸಾಲೆಯವರು ಸಾಕಷ್ಟು ಕೃತಿಗಳನ್ನು ರಚಿಸಿದ್ದರೂ ಅವರ ಅಭಿವ್ಯಕ್ತಿಯ ಪ್ರಮುಖ ಮಾಧ್ಯಮ ಕಾವ್ಯ ಮತ್ತು ಕಾದಂಬರಿ. ಕನ್ನಡದಲ್ಲಿ ಕಾವ್ಯ ಮತ್ತು ಕಾದಂಬರಿ ಎರಡೂ ಪ್ರಕಾರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ಸಾಹಿತಿಗಳು ತೀರ ಕಡಿಮೆ.

ನಾ.ಮೊಗಸಾಲೆಯವರು ಸಾಹಿತಿಯಾಗಿ ಎಷ್ಟು ಖ್ಯಾತರೋ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದಲ್ಲಿ ಸಂಘಟಕರಾಗಿಯೂ ಅಷ್ಟೇ ಖ್ಯಾತಿ ಪಡೆದಿದ್ದಾರೆ. ಕರ್ನಾಟಕ ರಾಜ್ಯದ ಇತರ ಅನೇಕ ಹಳ್ಳಿಗಳಂತೆಯೇ ಒಂದು ಸಾಮಾನ್ಯ ಕುಗ್ರಾಮವಾಗಿದ್ದ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಾಂತಾವರ ಎಂಬ ಪುಟ್ಟ ಹಳ್ಳಿ ಮೊಗಸಾಲೆಯವರ ಸತತ ಪರಿಶ್ರಮದಿಂದಾಗಿ ಇಂದು ಕರ್ನಾಟಕದ ಸಾಂಸ್ಕೃತಿಕ ಭೂಪಟದಲ್ಲಿ ಮಹತ್ವದ ಸ್ಥಾನ ಗಳಿಸಿದೆ.
‘ಮಣ್ಣಿನ ಮಕ್ಕಳು’ವಿನಿಂದ ‘ಇದ್ದೂ ಇಲ್ಲದ್ದು’ವರೆಗೆ ಮೊಗಸಾಲೆಯವರು ಈತನಕ ಒಟ್ಟು ಇಪ್ಪತ್ತು ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ಅವರ ಒಟ್ಟು ಹದಿನಾಲ್ಕು ಕಾದಂಬರಿಗಳು ನಾಲ್ಕು ಸಂಪುಟಗಳಲ್ಲಿ ಪ್ರಕಟವಾಗಿವೆ. ಮೊಗಸಾಲೆಯವರ ‘ನನ್ನದಲ್ಲದ್ದು’, ‘ಉಲ್ಲಂಘನೆ’, ‘ಮುಖಾಂತರ’, ‘ಧಾತು’ ಮತ್ತು ‘ಇದ್ದೂ ಇಲ್ಲದ್ದು’ ಕಾದಂಬರಿಗಳು ಓದುಗ ಮತ್ತು ವಿಮರ್ಶಕರಿಂದ ಅಪಾರ ಮೆಚ್ಚುಗೆ ಪಡೆದಿವೆ.

‘ನನ್ನದಲ್ಲದ್ದು’ ಮತ್ತು ‘ಉಲ್ಲಂಘನೆ’ ಕಾದಂಬರಿಗಳು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿವೆ. ಮೊಗಸಾಲೆಯವರ ಹಲವು ಕಾದಂಬರಿಗಳು ಇಂಗ್ಲಿಷ್, ಮಲಯಾಳಂ, ಮರಾಠಿ ಮತ್ತು ತೆಲುಗು ಭಾಷೆಗಳಿಗೆ ಅನುವಾದವಾಗಿವೆ. ಕಳೆದ ಕೆಲವು ವರ್ಷಗಳಲ್ಲಿ ಪ್ರಕಟವಾದ ಕಾದಂಬರಿಗಳಲ್ಲಿ ಮೊಗಸಾಲೆಯವರ ‘ಮುಖಾಂತರ’, ‘ಧಾತು’ ಮತ್ತು ‘ಇದ್ದೂ ಇಲ್ಲದ್ದು’ ಕಾದಂಬರಿಗಳು ಗಮನಾರ್ಹವಾಗಿವೆ.

ಮೊಗಸಾಲೆಯವರು ಮೊದಲಿನಿಂದಲೂ ವಿಭಿನ್ನ ಮತ್ತು ವಿಶಿಷ್ಟ ಕಥಾವಸ್ತುವಿನ ಹುಡಾಕಟದಲ್ಲಿರುವ ಲೇಖಕರು. ಮೊಗಸಾಲೆಯವರ ಕಾದಂಬರಿಗಳು ತಮ್ಮ ವೈವಿಧ್ಯಮಯ ಕಥಾವಸ್ತುವಿನಿಂದಾಗಿ ಓದುಗರ ಮತ್ತು ವಿಮರ್ಶಕರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಗಿವೆ. ಜನಪ್ರಿಯ ಕಾದಂಬರಿಕಾರರಾದ ಮೊಗಸಾಲೆಯವರ ಕಾದಂಬರಿಗಳಿಗೆ ಈಗಲೂ ಸಾಕಷ್ಟು ಬೇಡಿಕೆಯಿರುವುದರಿಂದಲೇ ಅವರ ಅನೇಕ ಕಾದಂಬರಿಗಳು ಮತ್ತೆ ಮತ್ತೆ ಮರು ಮುದ್ರಣ ಕಾಣುತ್ತಿವೆ.

‘ಕಾಮ’ ಮನುಷ್ಯನ ಮೂಲಭೂತ ಅವಶ್ಯಕತೆಗಳಲ್ಲಿ ಒಂದು. ಈಗಾಗಲೇ ಕನ್ನಡ ಸಾಹಿತ್ಯದಲ್ಲಿ ಅನೇಕ ಕಥೆ, ಕಾದಂಬರಿಗಳಿಗೆ ‘ಕಾಮ’ ವಸ್ತುವಾಗಿದೆ. ಕನ್ನಡದ ಖ್ಯಾತ ಕಾದಂಬರಿಕಾರರಾದ ಶಿವರಾಂ ಕಾರಂತರ ‘ಮೈ ಮನಗಳ ಸುಳಿಯಲ್ಲಿ’, ಎಸ್.ಎಲ್.ಭೈರಪ್ಪನವರ ‘ಸಾಕ್ಷಿ’ ಮತ್ತು ಶಾಂತಿನಾಥ ದೇಸಾಯಿಯವರ ‘ಅಂತರಾಳ’ ಕಾದಂಬರಿಗಳಲ್ಲಿ ಕಾಮವೇ ಕೇಂದ್ರ ವೃತ್ತಾಂತವಾಗಿದೆ.*

ಕಾಮದ ಕುರಿತು ನಿರ್ಭಿಡೆಯಿಂದ ಬರೆಯಲು ಕನ್ನಡ ಲೇಖಕರು ಈಗಲೂ ಹಿಂಜರಿಯುತ್ತಾರೆ. ಕಾಮವೆಂಬುದು ಅಶ್ಲೀಲವೆಂಬ ಭಾವನೆ ಇನ್ನೂ ನಮ್ಮ ಸಮಾಜದಲ್ಲಿರುವುದೇ ಇದಕ್ಕೆಲ್ಲ ಕಾರಣ. ಲೇಖಕರು ಇಷ್ಟೆಲ್ಲ ಮಡಿವಂತಿಕೆ ಮೀರಿ ಬರೆಯುವ ಧೈರ್ಯ ಮಾಡಿದರೂ ಸಾಹಿತ್ಯ ಕೃತಿಯೊಂದರಲ್ಲಿ ಲೇಖಕನ ಆತ್ಮಕಥಾನಕದ ಅಂಶಗಳಿವೆಯೇನೋ ಎಂಬ ಕುತೂಹಲ ಸಹಜವಾಗಿಯೇ ಓದುಗರಲ್ಲಿ ಉಂಟಾಗುವ ಸಂಭವವಿರುವುದರಿಂದ ಈ ಬಗೆಯ ಕೃತಿಗಳ ರಚನೆಗೆ ಲೇಖಕರು ಹಿಂದೇಟು ಹಾಕುವುದು ಸಹಜ. ಕನ್ನಡದಲ್ಲಿ ಲೇಖಕರ ಪರಿಸ್ಥಿತಿಯೇ ಹೀಗಿರುವಾಗ ಲೇಖಕಿಯರು ಕಾಮದಂತಹ ವಿಷಯದ ಕುರಿತು ಬರೆಯುವ ಧೈರ್ಯ ತೋರಿಸುವುದು ಸದ್ಯಕ್ಕಂತೂ ಸಾಧ್ಯವೆಂದು ತೋರುವುದಿಲ್ಲ.

‘ಕಾಮ’ ಮೊಗಸಾಲೆಯವರ ಕಾದಂಬರಿಗಳಲ್ಲಿ ಬಹು ಹಿಂದಿನಿಂದಲೂ ಕಥನದ ಒಂದು ಮುಖ್ಯಾಂಶವಾಗಿ ಬಂದಿದೆ. ಮೊಗಸಾಲೆಯವರ ಆರಂಭಿಕ ಹಂತದ ಕಾದಂಬರಿಗಳಾದ ‘ನನ್ನದಲ್ಲದ್ದು’, ‘ಪಲ್ಲಟ’, ‘ಹದ್ದು’ ಮತ್ತು ‘ಪ್ರಕೃತಿ’ ಕೃತಿಗಳಲ್ಲಿ ಕಾಮ ಮನುಷ್ಯನ ಜೀವನದಲ್ಲಿ ವಹಿಸಿದ ಪಾತ್ರ ಎಂತಹುದು ಎಂಬುದರ ಕುರಿತ ವಿಶ್ಲೇಷಣೆಯಿದೆ. ಮೊಗಸಾಲೆಯವರು ಈ ಎಲ್ಲ ಕಾದಂಬರಿಗಳಲ್ಲಿ ಗಂಡು-ಹೆಣ್ಣಿನ ನಡುವಿನ ತೀವ್ರ ಸಂಬಂಧವನ್ನು ಅಶ್ಲೀಲವೆನಿಸದೇ ಸಹಜವೆಂಬಂತೆ ಚಿತ್ರಿಸಿರುವುದು ಗಮನಾರ್ಹ.

ಮಧ್ಯ ವಯಸ್ಕ ಮತ್ತು ವೃದ್ಧಾಪ್ಯದ ಪ್ರೇಮ-ಕಾಮವನ್ನು ಚಿತ್ರಿಸಿರುವ ಕಾದಂಬರಿಗಳು ಕನ್ನಡ ಸಾಹಿತ್ಯದಲ್ಲಿ ಬೆರಳೆಣಿಕೆಯಷ್ಟು ಮಾತ್ರ ಲಭ್ಯ. ಶಾಂತಿನಾಥ ದೇಸಾಯಿಯವರ ‘ಅಂತರಾಳ’ ಮತ್ತು ಮೊಗಸಾಲೆಯವರ ‘ಧಾತು’ ಈ ವಿಷಯದ ಕುರಿತು ಬಂದ ಗಮನಾರ್ಹ ಕಾದಂಬರಿಗಳು.

ಮೊಗಸಾಲೆಯವರ ಕಾಲ್ಪನಿಕ ಸೃಷ್ಟಿಯಾದ ಸೀತಾಪುರದ ವೃದ್ಧ ನಾರಾಯಣರಾಯರು ‘ಧಾತು’ ಕಾದಂಬರಿಯ ಕಥಾನಾಯಕ. ವೃತ್ತಿಯಿಂದ ವಕೀಲ ಮತ್ತು ಪ್ರವೃತ್ತಿಯಿಂದ ಸಾಹಿತಿಯಾದ ನಾರಾಯಣರಾಯರು ತಮ್ಮ ವೃದ್ಧಾಪ್ಯದಲ್ಲಿ ಹೆಂಡತಿಯನ್ನು ಕಳೆದುಕೊಳ್ಳುತ್ತಾರೆ. ಅವರಿಗೆ ಮರು ಮದುವೆಯಾಗುವ ಯೋಚನೆಯಿದ್ದರೂ ಅದರ ಬಗ್ಗೆ ಸ್ಪಷ್ಟತೆಯಿಲ್ಲ. ಮದುವೆ ಕೇವಲ ದೈಹಿಕ ಕಾಮನೆಗಳನ್ನು ಪೂರೈಸಿಕೊಳ್ಳುವುದಕ್ಕೋ ಅಥವಾ ಅದಕ್ಕೂ ಮಿಗಿಲಾದ ಆತ್ಮ ಸಂಗಾತಕ್ಕೋ ಎಂಬ ಕುರಿತು ತೀವ್ರ ಗೊಂದಲದಲ್ಲಿರುವ ನಾರಾಯಣರಾಯರು ಈ ಪ್ರಶ್ನೆಗೆ ಪರಿಹಾರ ಪಡೆಯಲು ಮನಶಾಸ್ತ್ರಜ್ಞ ಡಾ.ಪ್ರದೀಪನ ಮೊರೆ ಹೋಗುತ್ತಾರೆ. ನಾರಾಯಣರಾಯರಿಗೆ ಅಲ್ಲಿಯೂ ಸೂಕ್ತ ಮತ್ತು ಸಮಾಧಾನಕರ ಉತ್ತರ ಸಿಗುವುದಿಲ್ಲ.

ಜನಪ್ರಿಯ ಪತ್ರಿಕೆಯೊಂದರಲ್ಲಿ ಪ್ರಕಟವಾದ ನಾರಾಯಣರಾಯರ ‘ಮನದ ಮುಂದಿನ ಮಾಯೆ’ ಎಂಬ ಕಥೆ ತುಂಬ ಜನ ಓದುಗರಿಗೆ ಇಷ್ಟವಾಗುವ ಮೂಲಕ ಅವರಿಗೆ ಸಾಕಷ್ಟು ಹೆಸರು ತಂದುಕೊಡುತ್ತದೆ. ಈ ‘ಮನದ ಮುಂದಿನ ಮಾಯೆ’ ಎಂಬ ಕಥೆಯೇ ನಾರಾಯಣರಾಯರಿಗೆ ರಾಧಾ ಎಂಬ ಪ್ರೌಢ ಮತ್ತು ಪ್ರಬುದ್ಧ ಹೆಣ್ಣಿನ ಸ್ನೇಹ ದೊರಕಿಸಿ ಕೊಡುತ್ತದೆ. ನಾರಾಯಣರಾಯರಿಗೆ ರಾಧಾಳ ಸಾಂಗತ್ಯ ತೀರ ಆಪ್ಯಾಯಮಾನವಾಗಿದ್ದು ಅವರು ಮದುವೆ ಮತ್ತು ಗಂಡು-ಹೆಣ್ಣಿನ ಸಂಬಂಧದ ಕುರಿತು ಹೊಸ ದೃಷ್ಟಿಕೋನದಿಂದ ಯೋಚಿಸುವಂತೆ ಮಾಡುತ್ತದೆ. ನಾರಾಯಣರಾಯರು ಮತ್ತು ರಾಧಾರ ಸಂಬಂಧದಲ್ಲಿ ಕಾಮ ಗೌಣವಾಗಿ ಆತ್ಮ ಸಾಂಗತ್ಯ ಮುಖ್ಯವಾಗುತ್ತದೆ. ರಾಧಾಳ ಸಾಂಗತ್ಯದಲ್ಲಿ ನವಚೈತನ್ಯ ಪಡೆಯುವ ನಾರಾಯಣರಾಯರು ಜೀವನದ ಕುರಿತು, ಹೆಣ್ಣಿನ ಕುರಿತು ಮತ್ತು ಮದುವೆಯ ಕುರಿತು ತೀವ್ರವಾಗಿ ಆಲೋಚಿಸುತ್ತಾರೆ. ರಾಧಾಳ ಜೊತೆಗಿನ ಸಂಬಂಧ ಕಾಮವನ್ನು ಮೀರಿದಂತಹ ಪರಿಶುದ್ಧ ಪ್ರೇಮವೆಂಬುದನ್ನು ಮನಗಂಡ ನಾರಾಯಣರಾಯರು ಮತ್ತೊಮ್ಮೆ ಮದುವೆಯಾಗದಿರಲು ನಿರ್ಧರಿಸುತ್ತಾರೆ.

ಕಥೆಯೊಳಗೊಂದು ಕಥೆಯಾಗಿ ಬರುವ ‘ಮನದ ಮುಂದಿನ ಮಾಯೆ’ ಕಾದಂಬರಿಗೆ ಪೋಷಕವಾಗಿ ಬಂದಿದೆ. ಇಲ್ಲೂ ಒಬ್ಬ ವೃದ್ಧ ಕಥಾನಾಯಕನಿದ್ದಾನೆ. ಹದಿಹರೆಯದ ಯುವತಿಯೊಬ್ಬಳ ಬಳಿ ಅವಳ ಕುರಿತು ಉಂಟಾಗಿರುವ ದೈಹಿಕ ಆಕರ್ಷಣೆಯ ಬಗ್ಗೆ ತನ್ನ ಮನದಾಸೆಯನ್ನು ಹೇಳಿಕೊಳ್ಳುವ ವೃದ್ಧ, ಆ ಯುವತಿ ಅವರ ಆಸೆಯನ್ನು ಪೂರೈಸಲು ಒಪ್ಪಿಗೆ ಕೊಡುವ ವೇಳೆಗೆ ಹೃದಯಾಘಾತದಿಂದಾಗಿ ಸಾವನ್ನಪ್ಪುವುದು ಪರಿಣಾಮಕಾರಿಯಾಗಿ ಮೂಡಿಬಂದಿದೆ.

ಕಾದಂಬರಿಯನ್ನು ಬಹಳ ಚೆನ್ನಾಗಿ ಗ್ರಹಿಸಿರುವ ವಿಮರ್ಶಕಿ ಆಶಾದೇವಿಯವರು ಸ್ತ್ರೀವಾದಿ ಹಿನ್ನೆಲೆಯಲ್ಲಿ ಕಾದಂಬರಿಯನ್ನು ಅರ್ಥೈಸಿ ಬೆಲೆಯುಳ್ಳ ಮುನ್ನುಡಿ ಬರೆದಿದ್ದಾರೆ. ಮದುವೆ ಬೇಕೋ? ಬೇಡವೋ? ಎಂಬ ದ್ವಂದ್ವ ಆರಂಭದಲ್ಲಿ ನಾರಾಯಣರಾಯರನ್ನು ಕಾಡಿದರೂ ಕ್ರಮೇಣ ರಾಧಾಳ ಸಾಂಗತ್ಯದಲ್ಲಿ ಆತ್ಮವಿಮರ್ಶೆ ಮಾಡಿಕೊಳ್ಳುತ್ತಾ ಈ ವಯಸ್ಸಿನಲ್ಲಿ ಬೇಕಾಗಿರುವುದು ಆತ್ಮಸಂಗಾತಿಯೇ ಹೊರತು ಹೆಂಡತಿಯಲ್ಲ ಎಂಬುದನ್ನು ಮನಗಾಣುತ್ತಾರೆ. ನಾರಾಯಣರಾಯರು ಕೊನೆಗೂ ಮದುವೆ ಬೇಡವೆಂಬ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ. ನಾರಾಯಣರಾಯರು ಮತ್ತು ರಾಧಾ ಧಾರವಾಡ ಸಾಹಿತ್ಯ ಸಂಭ್ರಮದಲ್ಲಿ ಪಾಲ್ಗೊಳ್ಳುವುದು ಮತ್ತು ಕಾರವಾರಕ್ಕೆ ಭೇಟಿ ನೀಡುವುದು ಕಥೆಯ ಓಟಕ್ಕೆ ಪೂರಕವಾಗಿ ಬಂದಿವೆ.

ಪ್ರೇಮ-ಕಾಮಗಳು ಒಂದೇ ನಾಣ್ಯದ ಎರಡು ಮುಖಗಳು. ಪ್ರೇಮವಿಲ್ಲದ ಕಾಮ ಅಥವಾ ಕಾಮವಿಲ್ಲದ ಪ್ರೇಮ ಇರುವುದು ಸಾಧ್ಯವಿಲ್ಲ. ಕಾಮ ಜೀವನದ ಅವಶ್ಯಕತೆಗಳಲ್ಲೊಂದು, ಆದರೆ ಅದೇ ಜೀವನದ ಪರಮಾರ್ಥವಲ್ಲ. ವೃದ್ಧಾಪ್ಯದಲ್ಲಿ ಬೇಕಾದದ್ದು ಮದುವೆ ಅಥವಾ ದೈಹಿಕ ಸಾಂಗತ್ಯವಲ್ಲ, ಬದಲಾಗಿ ಇದೆಲ್ಲವನ್ನೂ ಮೀರಿದ ಆತ್ಮಸಾಂಗತ್ಯ. ಇಂತಹ ಆತ್ಮಸಂಗಾತಿಯ ಅಗತ್ಯವನ್ನು ಬಹಳ ಸುಂದರವಾಗಿ ಮನಮುಟ್ಟುವಂತೆ ಹೇಳಿರುವ ‘ಧಾತು’ ಕಾದಂಬರಿಯ ವಸ್ತು ಕನ್ನಡದ ಮಟ್ಟಿಗಂತೂ ಹೊಸದು. ಕಥೆ ಹೇಳುವಲ್ಲಿ ಮೊಗಸಾಲೆಯವರು ಅಪಾರ ಸಂಯಮ ತೋರಿದ್ದಾರೆ. ವಿವರಗಳು ಎಲ್ಲೂ ಅತಿಯೆನಿಸದಂತೆ, ಕಥೆಯ ಓಟ ಕಾದಂಬರಿಯುದ್ದಕ್ಕೂ ಒಂದೇ ರೀತಿಯಿರುವಂತೆ ಬರವಣಿಗೆಯ ಹದ ಕಾಯ್ದುಕೊಂಡಿದ್ದಾರೆ.

ಮೊಗಸಾಲೆಯವರ ‘ಧಾತು’ ಕಾದಂಬರಿ ಓದುವಾಗ ಪದೇ ಪದೇ ನೆನಪಾಗುವ ಮತ್ತೊಬ್ಬ ಲೇಖಕರೆಂದರೆ ಖುಷ್ವಂತ್ ಸಿಂಗ್. ವೃದ್ಧಾಪ್ಯದ ಪ್ರೇಮ-ಕಾಮದ ಕುರಿತು ಹಲವು ಕಥೆ-ಕಾದಂಬರಿ ಬರೆದಿರುವ ಖುಷ್ವಂತ್ ಸಿಂಗ್ ಅವರ ಸಾಹಿತ್ಯದಲ್ಲಿ ಲಿಬಿಡೋ ಅಥವಾ ಲಂಪಟತನ ಎದ್ದು ಕಾಣುತ್ತದೆ.**

ಖುಷ್ವಂತ್ ಸಿಂಗ್ ತಮ್ಮ ಬಹುತೇಕ ಕಥೆ, ಕಾದಂಬರಿಗಳಲ್ಲಿ ಗಂಡು-ಹೆಣ್ಣಿನ ನಡುವಿನ ದೈಹಿಕ ಸಂಬಂಧವನ್ನು ತೀವ್ರವಾಗಿ ಚಿತ್ರಿಸಿದರೂ ಮನೋವಿಶ್ಲೇಷಣೆಯಲ್ಲಿ ನಿರೀಕ್ಷಿತ ಯಶಸ್ಸು ಸಾಧಿಸುವುದಿಲ್ಲ. ಮೊಗಸಾಲೆಯವರು ಮಾತ್ರ ತಮ್ಮ ಕಾದಂಬರಿಗಳಲ್ಲಿ ಗಂಡು-ಹೆಣ್ಣಿನ ನಡುವಿನ ಸಂಕೀರ್ಣ ಸಂಬಂಧಗಳ ಸ್ವರೂಪವನ್ನು ವಿವಿಧ ಆಯಾಮಗಳಲ್ಲಿ ಮನೋವಿಶ್ಲೇಷಣೆಗೊಳಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂತಹ ವಿಷಯಗಳಲ್ಲಿ ಖುಷ್ವಂತ್ ಸಿಂಗ್ ಲೇಖಕರಾಗಿ ಎಲ್ಲಿ ಸೋಲುತ್ತಾರೋ ಅಲ್ಲಿ ಲೇಖಕರಾಗಿ ಮೊಗಸಾಲೆಯವರು ಗೆಲ್ಲುತ್ತಾರೆ. ಇದು ಖಂಡಿತವಾಗಿಯೂ ಮೊಗಸಾಲೆಯವರ ಕಥನದ ಶಕ್ತಿ. ‘ಧಾತು’ ಕನ್ನಡದ ಮಟ್ಟಿಗಂತೂ ಒಂದು ಹೊಸ ಬಗೆಯ ಪ್ರಯೋಗಶೀಲ ಕಾದಂಬರಿ.

ಅಡಿ ಟಿಪ್ಪಣಿಗಳು:.

* ಶಿವರಾಂ ಕಾರಂತರ ‘ಮೈ ಮನಗಳ ಸುಳಿಯಲ್ಲಿ’ ಮತ್ತು ಭೈರಪ್ಪನವರ ‘ಸಾಕ್ಷಿ’ ಕಾಮವನ್ನೇ ಕೇಂದ್ರ ವಸ್ತುವಾಗಿ ಹೊಂದಿರುವ ಕಾದಂಬರಿಗಳು. ‘ಮೈ ಮನಗಳ ಸುಳಿಯಲ್ಲಿ’ ಕಾದಂಬರಿ ಬಸ್ರೂರಿನ ವಾರಾಂಗನೆ ಮಂಜುಳೆಯ ಆತ್ಮಕಥಾನಕದಂತಿದೆ. ‘ಸಾಕ್ಷಿ’ ಕಾದಂಬರಿ ಮಂಜಯ್ಯನೆಂಬ ಲಂಪಟನ ಕಥಾನಕ. ‘ಮೈ ಮನಗಳ ಸುಳಿಯಲ್ಲಿ’ ಹೆಣ್ಣು ಕೇಂದ್ರಪಾತ್ರವಾದರೆ ‘ಸಾಕ್ಷಿ’ಯಲ್ಲಿ ಗಂಡು ಕೇಂದ್ರಪಾತ್ರವಾಗಿ ಬಂದಿದೆ. ಶಾಂತಿನಾಥ ದೇಸಾಯಿಯವರ ‘ಅಂತರಾಳ’ ಕಾದಂಬರಿ ವಿಕ್ರಮ್ ಎಂಬ ಮೇಲ್ಮಧ್ಯಮ ವರ್ಗದ ಮಧ್ಯವಯಸ್ಕನ ವಿವಾಹೇತರ ಸಂಬಂಧ ಮತ್ತು ಅದು ಆತನ ದಾಂಪತ್ಯದಲ್ಲಿ ಉಂಟುಮಾಡುವ ಬಿರುಕಿನ ಕುರಿತ ಕಥಾನಕ.
** ರವಿ ಬೆಳಗೆರೆ ಕನ್ನಡಕ್ಕೆ ಅನುವಾದಿಸಿದ ಖುಷ್ವಂತ್ ಸಿಂಗ್ ಅವರ ‘ದಿ ಕಂಪನಿ ಅಫ್ ವುಮೆನ್’ ಮತ್ತು ‘ವೃದ್ಧ ಚಪಲದ ಸಂಜೆ’ ಕಾದಂಬರಿಗಳನ್ನು ಓದಿದರೆ ಅದರಲ್ಲಿ ಲಿಬಿಡೋ ಅಥವಾ ಲಂಪಟತನ ಎದ್ದು ಕಾಣುತ್ತದೆ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter