ಕ್ರಿಯಾಶೀಲ ಪತ್ರಕರ್ತ, ಸಾಹಿತಿ ಶ್ರೀನಿವಾಸ ಜೋಕಟ್ಟೆ

ಕಳೆದ ನಾಲ್ಕು ದಶಕಗಳಿಂದ ದೂರದ ಮುಂಬೈಯಲ್ಲಿ ನೆಲೆಸಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಗಳ ಹಿರಿಮೆ ಗರಿಮೆಗಳನ್ನು ಹೆಚ್ಚಿಸಲು ಶ್ರಮಿಸುತ್ತಾ ಬಂದ ಶ್ರೀನಿವಾಸ ಜೋಕಟ್ಟೆ ಅವರು ಕನ್ನಡಿಗರಿಗೆ ಪರಿಚಿತರು. ಕವಿಯಾಗಿ, ಕತೆಗಾರರಾಗಿ, ಪ್ರವಾಸ ಸಾಹಿತ್ಯ ನಿರ್ಮಾಪಕರಾಗಿ, ಅಂಕಣಕಾರರಾಗಿ, ಪತ್ರಕರ್ತರಾಗಿ ಜೋಕಟ್ಟೆ ಅವರು ಮಾಡಿದ ಕನ್ನಡ ಪರಿಚಾರಿಕೆ ಗಮನಾರ್ಹವಾದುದು. ಜೋಕಟ್ಟೆ ಅವರ ಸಾಹಿತ್ಯ ಕೃಷಿ ಬಹುಮುಖವಾದುದು. ಮುಂಬೈಯಲ್ಲಿ ಅವರ 40 ಹಾಗೂ 41ನೆಯ ಕೃತಿಗಳು ಲೋಕಾರ್ಪಣೆಗೊಂಡ ಹಿನ್ನೆಲೆಯಲ್ಲಿ ಅವರ ಕ್ರಿಯಾಶೀಲ ವ್ಯಕ್ತಿತ್ವದ ಕುರಿತ ಕಿರು ಲೇಖನ ಇಲ್ಲಿದೆ.”
*ಡಾ. ಜಿ.ಎನ್. ಉಪಾಧ್ಯ


ನಮ್ಮ ಪ್ರಾಚೀನ ಶಾಸ್ತ್ರಕಾರರು ಕವಿಯಾಗುವುದಕ್ಕೆ ಅಥವಾ ವಿಶಾಲವಾದ ಅರ್ಥದಲ್ಲಿ ಹೇಳುವುದಾದರೆ ಲೇಖಕನಾಗಲು ಇರಬೇಕಾದ ಕೆಲವು ಮೂಲಭೂತ ಅಂಶಗಳನ್ನು ಹೀಗೆ ಪಟ್ಟಿ ಮಾಡಿದ್ದಾರೆ. “ಪ್ರತಿಭೆಯುಂ ಅಭ್ಯಾಸಮುಮಂ ವಿದ್ವತ್ಸೇವೆಯುಂ ಕಾವ್ಯ ಪ್ರಚಯ ಪರಿಚಯ” ಅಂದರೆ ಪ್ರತಿಭೆ, ಸತತವಾದ ಓದು, ಅಧ್ಯಯನ, ಸಾಹಿತಿಗಳೊಂದಿಗಿನ ಒಡನಾಟ, ವಿಚಾರ ವಿಮರ್ಶೆ, ಪ್ರಾಚೀನ ಕಾವ್ಯ, ಸಾಹಿತ್ಯ ಪರಂಪರೆಯ ಅರಿವು ಇದ್ದವರು ಮಾತ್ರ ಒಳ್ಳೆಯ ಲೇಖಕರಾಗಬಲ್ಲರು, ಸಾಹಿತ್ಯ ಕೃತಿಯನ್ನು ನಿರ್ಮಾಣ ಮಾಡಬಲ್ಲರು ಎಂಬುದಾಗಿ ಹೇಳಿದ್ದಾರೆ. ಈ ಮಾತು ಇಂದಿಗೂ ನಿಜವೇ ಆಗಿದೆ. ಮೇಲಿನ ಎಲ್ಲ ಅರ್ಹತೆಗಳನ್ನು ಸಾಹಿತಿ ಲೇಖಕ ಶ್ರೀನಿವಾಸ ಜೋಕಟ್ಟೆ ಅವರು ಮೈಗೂಡಿಸಿಕೊಂಡಿದ್ದಾರೆ.

ಸೂಕ್ಷ್ಮವಾದ ಮನಸ್ಸು ಸೃಜನಶೀಲ ಲೇಖಕನ ನಿಜವಾದ ಬಂಡವಾಳ. ಸೃಜನಶೀಲ ಮನಸ್ಸಿನ ಜತೆಗೆ ಬರೆಯಬೇಕೆಂಬ ತೀವ್ರವಾದ ತುಡಿತ, ತಾಳ್ಮೆ, ಪ್ರಗತಿಪರ ಚಿಂತನೆ ಇದ್ದರೆ ಮಾತ್ರ ಉತ್ತಮ ಲೇಖಕನಾಗಲು ಸಾಧ್ಯ. ಶ್ರೀನಿವಾಸ ಜೋಕಟ್ಟೆ ಅವರ ವ್ಯಕ್ತಿತ್ವಕ್ಕೆ ಸಾಧನೆಗೆ ಅನೇಕ ಮುಖಗಳಿವೆ. ಕಳೆದ ನಾಲ್ಕು ದಶಕಗಳಿಂದ ಮುಂಬೈ ಮಹಾನಗರದಲ್ಲಿ ನೆಲೆಸಿ ಕನ್ನಡ ಸಾಹಿತ್ಯ ಕೃಷಿ ಹಾಗೂ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿರುವ ಜೋಕಟ್ಟೆ ಅವರು ಆಧುನಿಕ ಕನ್ನಡದ ಮಹತ್ವದ ಲೇಖಕರಲ್ಲಿ ಒಬ್ಬರಾಗಿದ್ದಾರೆ. “ಶ್ರೀನಿವಾಸ ಜೋಕಟ್ಟೆ ಕಣ್ಣು ಮನಸ್ಸು ಬುದ್ಧಿ ಭಾವಗಳನ್ನು ಸದಾ ಜಾಗೃತರಾಗಿಸಿಕೊಂಡಿರುವ ಸೃಜನಶೀಲ ಲೇಖಕ ಹಾಗೂ ಪತ್ರಕರ್ತ. ಎರಡೂ ಬಗೆಯ ಬರವಣಿಗೆಯನ್ನು ನಿಷ್ಠೆಯಿಂದ ಮಾಡಿಕೊಂಡು ಬಂದಿರುವ ಜೋಕಟ್ಟೆ ತಮ್ಮ ಆಕರ್ಷಕ ಕಥನಶೈಲಿಯಿಂದ ವಿಶಿಷ್ಟ ಲೇಖಕರಾಗಿ ಗುರುತಿಸಿಕೊಂಡಿದ್ದಾರೆ. ಅವರ ಕಥೆ, ಕವನಗಳಿಗೆ ಅಭಿಮಾನಿಗಳಿರುವಂತೆ ಅವರ ಪ್ರವಾಸ ಕಥನಗಳು ಹಾಗೂ ಲೇಖನಗಳಿಗೂ ಅಭಿಮಾನಿಗಳಿದ್ದಾರೆ. ಈ ಬಗೆಯ ವೈವಿಧ್ಯಮಯ ಲೇಖನಗಳನ್ನು ಬರೆಯುತ್ತಿದ್ದ ಕರಾವಳಿಯ ಖ್ಯಾತ ಪತ್ರಕರ್ತ ಸಾಹಿತಿ ಪಾ. ವೆಂ. ಆಚಾರ್ಯರನ್ನು ಜೋಕಟ್ಟೆ ನೆನಪಿಸುವುದು ಆ ಕಾರಣಕ್ಕಾಗಿ” ಎಂಬುದಾಗಿ ಹಿರಿಯ ಸಾಹಿತಿ, ವಿಮರ್ಶಕ ಡಾ. ಬಿ. ಜನಾರ್ದನ ಭಟ್ ಅವರು ಶ್ರೀನಿವಾಸ ಜೋಕಟ್ಟೆ ಅವರ ಸಾಹಿತ್ಯ ಸಾಧನೆಯನ್ನು ಸರಿಯಾಗಿಯೇ ಗುರುತಿಸಿದ್ದಾರೆ.

ಹತ್ತು ಹಲವು ವಿಷಯಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿರುವ ಶ್ರೀನಿವಾಸ ಜೋಕಟ್ಟೆ ಅವರು ಕನ್ನಡ ಸಾಹಿತ್ಯದ ನಾನಾ ಪ್ರಕಾರಗಳಲ್ಲಿ ಕೃತಿ ರಚನೆ ಮಾಡಿರುವುದು ಗಮನೀಯ ಸಂಗತಿ, ಪತ್ರಿಕೋದ್ಯಮಿಯಾಗಿದ್ದು ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿರುವ ಜೋಗಿ ಅವರು ಶ್ರೀನಿವಾಸ ಜೋಕಟ್ಟೆ ಅವರ ಸಿದ್ಧಿ ಸಾಧನೆಗಳ ಬಗೆಗೆ ಹೀಗೆ ಹೇಳಿದ್ದಾರೆ – ಶ್ರೀನಿವಾಸ ಜೋಕಟ್ಟೆ ಇಂಥದ್ದೇ ಅನ್ನಬಹುದಾದ ಪ್ರಕಾರಕ್ಕೆ ಗಂಟು ಬಿದ್ದವರಲ್ಲ. ಕತೆ, ಕವನ, ವಿಮರ್ಶೆ, ಲೇಖನ ಹೀಗೆ ತಮಗೆ ಇಷ್ಟವಾದದ್ದನ್ನೂ ಇಷ್ಟವಾಗದ್ದನ್ನೂ ಅಷ್ಟೇ ಪ್ರೀತಿಯಿಂದ ಬರೆಯಬಲ್ಲವರು. ಮುಂಬಯಿಯನ್ನು ಪ್ರೀತಿಸುವಷ್ಟೇ ಜೋಕಟ್ಟೆಯನ್ನೂ ಪ್ರೀತಿಸಬಲ್ಲ ಶ್ರೀನಿವಾಸ್, ಅಲ್ಲಿರುವಷ್ಟೇ ನಿರಾಳವಾಗಿ ಇಲ್ಲೂ ಇರಬಲ್ಲರೆನ್ನುವುದು ಅವರ ಬರಹಗಳಲ್ಲೂ ಕಾಣಿಸಿಕೊಳ್ಳುತ್ತದೆ. ಎಂಬತ್ತರ ದಶಕದಲ್ಲಿ ಸಾಹಿತ್ಯ ಲೋಕಕ್ಕೆ ಕಾಲಿಟ್ಟ ಜೋಕಟ್ಟೆ ತಮ್ಮ ಬದುಕಿನ ಅಸಂಖ್ಯ ವರ್ಷಗಳನ್ನು ಮುಂಬಯಿಯಲ್ಲಿ ಕಳೆದವರು. ಹೀಗಾಗಿ ಮುಂಬಯಿಯ ಪ್ರೇರಕ ಶಕ್ತಿಗಳಲ್ಲಿ ಅತ್ಯಂತ ಚೂಪು ಎಂದು ಕನ್ನಡಿಗರು ಪರಿಗಣಿಸುವ ಬಾಲಿವುಡ್, ಅಂಡರ್‍ವಲ್ರ್ಡ್ ಎರಡರ ಬಗ್ಗೆಯೂ ಅವರಿಗೆ ಗೊತ್ತು. ಅದರ ಜೊತೆಗೆ ಸಾಕಷ್ಟು ವ್ಯಾಪಕವಾಗಿ ಸುತ್ತಾಡಿದ್ದರಿಂದ ಬರೆಯಬಲ್ಲ ಅನುಭವ ಮತ್ತು ಭಾಷೆಯೂ ಅವರಿಗೆ ಸಿದ್ಧಿಸಿದೆ. ಲೇಖನಗಳ ಯಶಸ್ಸಿರುವುದು, ಸಮಕಾಲೀನತೆಯಲ್ಲಿ, ವಸ್ತುಗಳ ಆಯ್ಕೆಯಲ್ಲಿ ಮತ್ತು ಅವುಗಳಿಗೊಂದು ಆಯಾಮ ಕೊಡುವಲ್ಲಿ. ಅದನ್ನು ಶ್ರದ್ಧೆಯಿಂದ ಮಾಡಬಲ್ಲ ಜೋಕಟ್ಟೆ ಬರಹಗಳ ಶಕ್ತಿಯೂ ಅಲ್ಲಿಂದಲೇ ಬಂದಿದೆ”. ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ಸಮದಂಡಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಜೋಕಟ್ಟೆ ಅವರ ಕ್ರಿಯಾಶೀಲತೆಗೆ ಯಾರೂ ಬೆರಗಾಗಬೇಕು.

“ಈ ಶ್ರೀನಿವಾಸ ಜೋಕಟ್ಟೆ ಅದ್ಯಾವಾಗ ಮುಂಬೈಯಲ್ಲಿ ಇರ್ತಾರೋ, ಅದ್ಯಾವಾಗ ಜೋಕಟ್ಟೆಗೆ ಬರ್ತಾರೋ ಗೊತ್ತಿಲ್ಲ. ಮುಂಬೈಯಲ್ಲೊಂದು ಜೋಕಟ್ಟೆ ಸೃಷ್ಟಿಯಾಗಿರುವುದಂತೂ ನಿಜ. ಶ್ರೀನಿವಾಸ ಅಂದರೆ ಯಾರಿಗೂ ಪರಿಚಯವಾಗಲಿಕ್ಕಿಲ್ಲ. ಆದರೆ ಜೋಕಟ್ಟೆ ಎಂದರೆ ಇವರದ್ದೇ ಮುಖ ಕಣ್ಣೆದುರಿಗೆ ಬರುತ್ತದೆ. ಮೊದಲು ಹೆಸರಿಗೆ ಹಾಕಿಕೊಂಡ ಶ್ರೀನಿವಾಸ ಇವತ್ತು ಜೋಕಟ್ಟೆ ಎಂದೇ ಪರಿಚಿತರಾಗಿರುವುದು ಗಮನಸೆಳೆಯುವ ಸಂಗತಿ. ಆಡು ಮುಟ್ಟದ ಸೊಪ್ಪಿಲ್ಲ ಎಂಬ ಗಾದೆ ಇದೆ ; ಹಾಗೆಯೇ ಜೋಕಟ್ಟೆ ಬರೆಯದೆ ಬಿಟ್ಟ ವಿಷಯವಿಲ್ಲ. ಅದರಲ್ಲೂ ಮುಂಬೈಗೆ ಸಂಬಂಧಿಸಿ ಜೋಕಟ್ಟೆ ಸಾಕಷ್ಟು ಬರೆದಿದ್ದಾರೆ. ಇಲ್ಲಿ ದೂರದ ಬೆಂಗಳೂರಿನಲ್ಲಿ ಕುಳಿತು ಮುಂಬೈ ಬಗ್ಗೆ ಏನನ್ನಾದರೂ ಪ್ರಕಟಿಸೋಣ ಎಂದು ಕೊಂಡರೆ ತಕ್ಷಣ ನೆನಪಾಗುವ ನಾಲ್ಕೈದು ಹೆಸರುಗಳಲ್ಲಿ ಜೋಕಟ್ಟೆಯವರದ್ದೂ ಒಂದು. ಅದರಲ್ಲೂ ಇತ್ತೀಚೆಗೆ ಕಾಲಿಗೆ ಚಕ್ರ ಕಟ್ಟಿದಂತೆ ತಿರುಗಾಡುತ್ತಿರುವ ಜೋಕಟ್ಟೆ ಪ್ರವಾಸ ಕಥನಕ್ಕೆ ಜೋತುಬಿದ್ದು ನೋಡಿದ್ದನ್ನೆಲ್ಲ ಬರೆಯುತ್ತಿದ್ದಾರೆ. ಕಣ್ನೋಟದ ಜತೆಗೆ, ಸಾಕಷ್ಟು ಮಾಹಿತಿಗಳನ್ನು ಕಲೆ ಹಾಕಿ ಓದುಗರ ಜ್ಞಾನದಾಹ ತಣಿಸುತ್ತಿದ್ದಾರೆ. ಅವರ ಎಲ್ಲ ಲೇಖನಗಳೂ ಓದಿಸಿಕೊಂಡು ಹೋಗುತ್ತವೆ. ಮಾಹಿತಿಗಳನ್ನೂ ನೀಡುತ್ತದೆ” ಎಂಬುದಾಗಿ ಸುಧಾ' ವಾರ ಪತ್ರಿಕೆಯ ಸಹಾಯಕ ಸಂಪಾದಕ ಬಿ. ಎಂ. ಹನೀಫ್ ಅವರು ಜೋಕಟ್ಟೆ ಅವರ ಸಾಧನೆಯನ್ನು ಸರಿಯಾಗಿಯೇ ಗುರುತಿಸಿದ್ದಾರೆ.

ಶ್ರೀನಿವಾಸ ಜೋಕಟ್ಟೆ ಅವರದು ಬಹುಮುಖ ಪ್ರತಿಭೆ, ವಿಶಿಷ್ಟ ವ್ಯಕ್ತಿತ್ವ. ಅವರ ಆಸಕ್ತಿಯ ವಿಷಯಗಳು ನೂರಾರು. ಅವರು ಕವಿ, ಕತೆಗಾರ, ಅಂಕಣಕಾರ, ಪತ್ರಕರ್ತ, ಬಹುಭಾಷಾ ವಿದ್ವಾಂಸ, ಸಂಘಟಕ, ಅನುವಾದಕ ಹೀಗೆ ಮುಂಬೈಯಲ್ಲಿ ಕನ್ನಡ ಚಟುವಟಿಕೆಗಳ ಸ್ಫೂರ್ತಿ ಪ್ರೇರಣೆಯ ಶಕ್ತಿಯಾಗಿ ಎಲ್ಲರ ಪ್ರೀತ್ಯಾದರಗಳಿಗೆ ಪಾತ್ರರಾಗಿದ್ದಾರೆ. ಅವರದು ಸರಳ, ಸೌಜನ್ಯಪೂರ್ಣ ಸ್ನೇಹಪರ ವ್ಯಕ್ತಿತ್ವ, ಶಿಸ್ತು, ಶುಚಿ ರುಚಿ ಜೀವನಕ್ಕೆ ಅವರು ಹೆಸರಾದವರು.

ಜೋಕಟ್ಟೆ ಅವರ ಬರವಣಿಗೆಯಲ್ಲಿಯೂ ಒಂದು ಬಗೆಯ ಒಪ್ಪ ಓರಣ ಲೆಕ್ಕಾಚಾರವಿರುವುದು ಗಮನೀಯ ಅಂಶ. ಹೊರನಾಡಿನಲ್ಲಿದ್ದೂ ನಾಡಿನ ಪ್ರಮುಖ ಮಾಸಿಕ, ವಾರಪತ್ರಿಕೆ, ದೈನಿಕಗಳಿಗೆ ನಿರಂತರವಾಗಿ ಲೇಖನ ಕತೆ, ಕವಿತೆಗಳನ್ನು ಬರೆಯುವುದರ ಮೂಲಕ ಅವರು ಇಂದಿಗೂ ತಮ್ಮ ಲೇಖನಿಯನ್ನು ಚಿರನೂತನವಾಗಿ ಉಳಿಸಿಕೊಂಡಿದ್ದಾರೆಂಬುದು ಅಭಿಮಾನದ ಸಂಗತಿ. ಜೋಕಟ್ಟೆ ಅವರ ಬರಹದಲ್ಲಿಯ ವಿಷಯ ವೈವಿಧ್ಯ ವಿಶಿಷ್ಟವಾಗಿದೆ. ಭವ್ಯ ಮಾನವ ಮಹಾಕಾವ್ಯದ ಬಗೆಗೆ ಬರೆದಿರುವ ಅವರು ಮುಂಬೈನ ಭೂಗತ ಜಗತ್ತಿನ ಇಂಚು ಇಂಚನ್ನು ವರ್ಣಿಸುತ್ತಾರೆ. ವರ್ತಮಾನ ಕಾಲದ ವೈರುಧ್ಯವನ್ನು ಅವರು ಮುಲಾಜಿಲ್ಲದೆ ಚರ್ಚಿಸುತ್ತಾ ಬಂದಿದ್ದಾರೆ. ವೈಚಾರಿಕ ಒಳನೋಟವೂ ಅವರ ಬರವಣಿಗೆಯ ಮತ್ತೊಂದು ಗುಣ.

ಶ್ರೀನಿವಾಸ ಜೋಕಟ್ಟೆ ಅವರು ಸಮಕಾಲಿನ ಕನ್ನಡ ಸಾಹಿತ್ಯದ ಮಹತ್ವದ ಬರಹಗಾರರಲ್ಲಿ ಒಬ್ಬರು. ಕನ್ನಡ ಸಾಹಿತ್ಯದ ಬಂಡಾಯ ಕಾಲಘಟ್ಟದಲ್ಲಿ ಸಾಹಿತ್ಯ ಸೃಷ್ಟಿ ಆರಂಭಿಸಿದ ಶ್ರೀನಿವಾಸ ಜೋಕಟ್ಟೆ ಅವರು ಅನೇಕ ತೊಡಕು ತೊಂದರೆಗಳ ನಡುವೆಯೇ ದೂರದ ಮುಂಬೈಯಲ್ಲಿ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡರು. ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ನಾಡು ನುಡಿ ಸಾಹಿತ್ಯ ಸಂಸ್ಕøತಿಯ ಬಣ್ಣ ಬನಿಯನ್ನು ಗಾಢಗೊಳಿಸಲು ಅವರು ಶ್ರಮಿಸುತ್ತಾ ಬಂದಿದ್ದಾರೆ. ಜೋಕಟ್ಟೆ ಅವರದು ಹೋರಾಟದ ಬದುಕು. ಅವರ ಜೀವನ ಸಾಧನೆ ಮತ್ತು ಬರಹಗಳು ವಿಶಿಷ್ಟವೂ, ಮಹತ್ವಪೂರ್ಣವೂ ಆಗಿದೆ. ಜೋಕಟ್ಟೆ ಅವರ ಬರವಣಿಗೆ ಕಾಯಕಕ್ಕೆ, ಕ್ರಿಯಾಶೀಲತೆಗೆ ಮಾನವೀಯ ಅಂತಃಕರಣವೇ ಪ್ರೇರಣೆಯಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ಮುಖ್ಯವಾಗಿ ಗಮನಿಸಬೇಕಾದ ಸಂಗತಿ ಎಂದರೆ ಜೋಕಟ್ಟೆ ಅವರು ಹೊರನಾಡ ಮುಂಬೈಯಲ್ಲಿ ರೂಢಿಸಿಕೊಂಡಿರುವ, ಅಳವಡಿಸಿಕೊಂಡಿರುವ ಕ್ರಿಯಾಶೀಲತೆ. ಅವರು ಮುಖ್ಯವಾಗಿ ಪತ್ರಕರ್ತ, ಅವರ ಬೌದ್ಧಿಕ ಶ್ರಮ ಹೆಚ್ಚಾಗಿ ಅಭಿವ್ಯಕ್ತಗೊಂಡದ್ದು ಸಾಹಿತ್ಯ ಕೃತಿಗಳಿಗಿಂತ ಅಂಕಣ ಬರಹಗಳಲ್ಲಿ, ಬಿಡಿ ಬಿಡಿಯಾದ ಅಗ್ರ ಲೇಖನಗಳಲ್ಲಿ. ಕಳೆದ ನಾಲ್ಕು ದಶಕಗಳಲ್ಲಿ ಅವರು ಬರೆದ ಸಾವಿರಾರು ಲೇಖನಗಳು ದೇಶದ ಮೂಲೆ ಮೂಲೆಯ ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ಈವರೆಗೆ ಜೋಕಟ್ಟೆ ಅವರ ನಲ್ವತ್ತಕ್ಕೂ ಹೆಚ್ಚು ಕೃತಿಗಳು ಬೆಳಕು ಕಂಡಿದ್ದು ಅವುಗಳಲ್ಲಿ ಸಿಂಹಪಾಲು ಅಂಕಣ ಸಾಹಿತ್ಯ ಹಾಗೂ ಪ್ರವಾಸ ಸಾಹಿತ್ಯ ಕೃತಿಗಳದೇ ಆಗಿವೆ.

ಶ್ರೀನಿವಾಸ ಜೋಕಟ್ಟೆ ಅವರು ಮಂಗಳೂರು ಸಮೀಪದ ಜೋಕಟ್ಟೆ ಎಂಬ ಪುಟ್ಟ ಗ್ರಾಮದಲ್ಲಿ 1964 ರ ಜುಲೈ 4 ರಂದು ಜನಿಸಿದರು. ಅವರ ತಂದೆಯ ಹೆಸರು ವೆಂಕಟರಮಣ, ತಾಯಿ ಗಿರಿಜಾ. ಶ್ರೀನಿವಾಸರ ತಂದೆ ವೃತ್ತಿಯಲ್ಲಿ ವೈದ್ಯರಾಗಿದ್ದರು. ಅವರು ಜೋಕಟ್ಟೆಯ ಸುತ್ತಲಿನ ಗ್ರಾಮಗಳಲ್ಲಿ ಡಾ. ಐ. ವಿ. ರಾವ್ ಎಂದೇ ಪ್ರಸಿದ್ಧರಾಗಿದ್ದರು. ಶ್ರೀನಿವಾಸ ಜೋಕಟ್ಟೆ ಅವರ ಅಜ್ಜ ಇನವಳ್ಳಿ ಶ್ರೀನಿವಾಸಯ್ಯ. ಒಂದು ಕಾಲದಲ್ಲಿ ಪಾಣೆ ಮಂಗಳೂರು ಸಮೀಪ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದರಂತೆ. ಬಂಟ್ವಾಳ ಪರಿಸರದಲ್ಲಿ ಬಂದ ದೊಡ್ಡ ನೆರೆಗೆ ದೇವಸ್ಥಾನವೆಲ್ಲ ಕೊಚ್ಚಿ ಹೋಗಿದ್ದರಿಂದ ಆರ್ಚಕ ವೃತ್ತಿಗೆ ವಿದಾಯ ಹೇಳಿ ಮಂಗಳೂರಿನ ಜಪ್ಪು ಎಂಬಲ್ಲಿಗೆ ಬಂದು ದಸ್ತಾವೇಜು ಬರಹಗಾರ ವೃತ್ತಿಯನ್ನು ಕೈಗೊಂಡರು. “ಅಪ್ಪನ ವೈದ್ಯ ವೃತ್ತಿಯೇ ನನ್ನಲ್ಲಿ ಚಿಂತನೆಗಳನ್ನು ಮೂಡಿಸುತ್ತಾ ಬಂದದ್ದು, ದೇವರು ಧರ್ಮಗಳ ಬಗ್ಗೆ ಪ್ರಶ್ನೆಗಳನ್ನು ಹಾಕಿಸಿದ್ದದ್ದು, ನನ್ನನ್ನು ಬರಹಗಾರನಾಗಿಸಿದ್ದು, ಎಲ್ಲವುದಕ್ಕೂ ಕೊಂಡಿ ಇದೆ' ಎಂದು ಜೋಕಟ್ಟೆ ಅವರು ತಮ್ಮ ಲೇಖನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಶ್ರೀನಿವಾಸ ಜೋಕಟ್ಟೆ ಅವರು ಸಾಂಪ್ರದಾಯಿಕ ಶಿಕ್ಷಣಕ್ಕಿಂತ ವ್ಯಾಪಕ ಓದು, ವಿದ್ವಜ್ಜನರ ಸಂಪರ್ಕ ಸತ್ಸಂಗ, ಅನೇಕ ಪ್ರದೇಶಗಳ ಸುತ್ತಾಟಗಳಿಂದ ಪಡೆದ ಜ್ಞಾನವೇ ಹೆಚ್ಚು. ಅವರು ಶಾಲೆಯಲ್ಲಿ ಕಲಿತದ್ದಕ್ಕಿಂತ ಜೀವನ ಶಾಲೆಯಲ್ಲಿ ಅರಿತದ್ದೇ ಜಾಸ್ತಿ. ಅವರು ಮಧ್ಯಮ ವರ್ಗದ ಹಿನ್ನೆಲೆಯಿಂದ ಬಂದವರು. ಅವರು ಬಿ.ಕಾಂ. ಓದಿದವರು. ಜೋಕಟ್ಟೆ ಅವರ ಮನೆಮಾತು ತುಳು. ಹೀಗಿದ್ದೂ ಕನ್ನಡ, ಇಂಗ್ಲೀಷ್, ಹಿಂದಿ, ಮರಾಠಿ ಮೊದಲಾದ ಭಾಷೆಗಳ ಪರಿಚಯವುಳ್ಳವರು. ಸ್ವಪ್ರಯತ್ನ ಹಾಗೂ ಅತೀವ ಜ್ಞಾನಾಕಾಂಕ್ಷೆಗಳೇ ಅವರನ್ನು ಲೇಖಕರನ್ನಾಗಿ ಮಾಡಿತು. ವಿಪುಲ ಲೋಕಾನುಭವ ಅವರ ಪ್ರತಿಭೆಯ ವಿಕಾಸಕ್ಕೆ ಕಾರಣವಾಯಿತು.

ಜೋಕಟ್ಟೆ ಕನ್ನಡ ಸೇನಾನಿ. ದೂರದ ಮುಂಬೈಯಲ್ಲಿ ಕನ್ನಡ ಬಲವರ್ಧನೆಗೆ ಅವರು ಕಳೆದ ನಾಲ್ಕು ದಶಕಗಳಿಂದ ಶ್ರಮಿಸುತ್ತಾ ಬಂದಿದ್ದಾರೆ. ತಮ್ಮ ಕ್ರಿಯಾಶೀಲ ವ್ಯಕ್ತಿತ್ವದಿಂದ ಕನ್ನಡವನ್ನು ಉಳಿಸಿ ಬೆಳೆಸಲು ಅವರು ನಿರಂತರವಾಗಿ ಚಿಂತಿಸುತ್ತಾ ಬಂದಿದ್ದಾರೆ. ತಮ್ಮ ಲೇಖನ, ಚಿಂತನ, ಸಾಂಘಿಕ ಚಟುವಟಿಕೆಗಳ ಮೂಲಕ ಅವರು ಮುಂಬೈ ಮಹಾನಗರದಲ್ಲಿ ಕನ್ನಡ ಸಂಸ್ಕøತಿಯನ್ನು ಜೀವಂತವಾಗಿಡಲು ಸಹಕರಿಸುತ್ತಿದ್ದಾರೆ. ಮುಂಬೈ ಕನ್ನಡಿಗರ ಶಕ್ತಿ ಕೇಂದ್ರವಾಗಿರುವ ಮಾಟುಂಗ ಪಶ್ಚಿಮದ ಕರ್ನಾಟಕ ಸಂಘದ ಕಾರ್ಯದರ್ಶಿಯಾಗಿದ್ದಾಗ ವಿವಿಧ ಬಗೆಯ ಕನ್ನಡ ಯೋಜನೆಗಳ ಅನುಷ್ಠಾನಕ್ಕೆ ಅವರು ಕೈಜೋಡಿಸಿದ್ದರು. ಮುಂಬೈ ಕರ್ನಾಟಕ ಸಂಘದ ಮುಖವಾಣಿಸ್ನೇಹ ಸಂಬಂಧ’ ಪತ್ರಿಕೆಯ ಸಂಪಾದಕರಾಗಿ ಅವರು ಗೈದ ಕನ್ನಡ ಕೈಂಕರ್ಯ ಉಲ್ಲೇಖನೀಯ ಅಂಶ. ಮುಂಬೈನ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಯಾಗಿ, ಸಕ್ರಿಯ ಸದಸ್ಯರಾಗಿಯೂ ಅವರು ಕೆಲಸ ಮಾಡುತ್ತಾ ಬಂದಿದ್ದಾರೆ. ಹೀಗಾಗಿ ಶ್ರೀನಿವಾಸ ಜೋಕಟ್ಟೆ ಅವರು ಮುಂಬೈನ ಗಣ್ಯ ಕನ್ನಡಿಗರಲ್ಲಿ ಒಬ್ಬರಾಗಿ ಎಲ್ಲರ ಪ್ರೀತ್ಯಾದರಗಳಿಗೆ ಪಾತ್ರರಾಗಿದ್ದಾರೆ. ಮುಂಬೈಯಲ್ಲಿ ಕನ್ನಡದ ಬಾವುಟವನ್ನು ಏರಿಸಿ ನಿಲ್ಲಿಸಲು ಶ್ರಮಿಸಿದ ಪ್ರಮುಖರಲ್ಲಿ ಜೋಕಟ್ಟೆ ಅವರ ಹೆಸರೂ ಸೇರಿಕೊಂಡಿದೆ. ಹೊರನಾಡಿನ ಮುಂಬೈಯಲ್ಲಿ ಕಿರಿಯ ಬರಹಗಾರರನ್ನು ಹುರಿದುಂಬಿಸುವ, ಮಾರ್ಗದರ್ಶನ ಮಾಡುವ ಕಾರ್ಯದಲ್ಲಿ ಅವರು ನಿರತರಾಗಿದ್ದಾರೆ. ಶ್ರೀನಿವಾಸ ಜೋಕಟ್ಟೆ ಅವರ ಪತ್ನಿ ಜಯಲಕ್ಷ್ಮೀ ಅವರೂ ಸಾಹಿತ್ಯಾಸಕ್ತರು. ಜೋಕಟ್ಟೆ ಅವರ ಬರವಣಿಗೆಯ ಅಕ್ಷರ ವಿನ್ಯಾಸದ ಜವಾಬ್ದಾರಿಯನ್ನು ಅವರು ವಹಿಸಿಕೊಂಡಿದ್ದಾರೆ. ಅನೇಕ ಹೊಸ ಲೇಖಕರ ಲೇಖನಗಳನ್ನು ಪ್ರಕಟಿಸಿ ಬರೆಯುವವರಲ್ಲಿ ಆತ್ಮವಿಶ್ವಾಸ ತುಂಬಿದ್ದಾರೆ. ದೂರದ ಮುಂಬೈಯಲ್ಲಿ ತಮ್ಮ ಮಾತು ಕೃತಿಗಳ ಮೂಲಕ ಕನ್ನಡ ಜನಮನವನ್ನು ರೂಪಿಸಲು ಅವರು ಶ್ರದ್ಧೆಯಿಂದ ದುಡಿಯುತ್ತಾ ಬಂದಿದ್ದಾರೆ. ಜೋಕಟ್ಟೆ ಅವರ ನುಡಿ ಸೇವೆ ನಾಡಿಗೆ ಮಾದರಿಯಾಗಿದೆ.

*******

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Sign up for our Newsletter