ಒಂದು ನರಿ ಆಹಾರ ಹುಡುಕುತ್ತಾ ಅರಣ್ಯದಲ್ಲಿ ಸಂಚರಿಸುತ್ತಿತ್ತು. ಇದ್ದಕ್ಕಿದ್ದ ಹಾಗೆ ಕಿವಿ ಗಡಚಿಕ್ಕುವಂತೆ ಬಹುದೊಡ್ಡ ಶಬ್ದ ಕೇಳಿಸತೊಡಗಿತು. ಅಲ್ಲಿಯೇ ಸ್ವಲ್ಪ ದೂರದಲ್ಲಿ ನಗಾರಿಯ ಮೇಲೆ ಮರದ ರೆಂಬೆಗಳು ಗಾಳಿಗೆ ಜೋರಾಗಿ ಹೊಡೆದುಕೊಳ್ಳುತ್ತಿದ್ದವು. ಹಾಗಾಗಿ ಕಾನನವೆಲ್ಲ ಕಂಪಿಸುವಷ್ಟು ಜೋರಾಗಿ ಶಬ್ದವಾಗುತ್ತಿತ್ತು.” ಧ್ವನಿಯೇ ಇಷ್ಟು ಜೋರಾಗಿರುವಾಗ ಈ ಧ್ವನಿಯನ್ನು ಮಾಡುವ ಪ್ರಾಣಿ ಇನ್ನೆಷ್ಟು ಭಯಂಕರವಾಗಿರಬಹುದು ! ” ಎಂದು ಯೋಚಿಸಿ ನರಿ ತುಂಬ ಹೆದರಿತು. ಇದಕ್ಕೆ ಆಹಾರವಾಗುವ ಮೊದಲು ಕಾಡನ್ನೇ ಬಿಟ್ಟು ಹೋಗಲು ನಿರ್ಧರಿಸಿತು .
ಸಪ್ಪೆ ಮುಖ ಹಾಕಿಕೊಂಡು ನಡೆದಿತ್ತು. ಸ್ವಲ್ಪ ಹೊತ್ತಿನ ನಂತರ ನರಿಯು ಶಾಂತ ಚಿತ್ತವಾಗಿ ಕುಳಿತು ವಿಚಾರ ಮಾಡಿತು . ತನ್ನ ಪೂರ್ವಜರೆಲ್ಲಾ ಬಾಳಿ ಬದುಕಿದ ಈ ಸ್ಥಳವನ್ನು ಹೇಗೆ ಬಿಡುವುದು ? ಶಬ್ದ ಮಾತ್ರದಿಂದ ಅಂಜಿ ವಾಸಸ್ಥಾನವನ್ನೇ ಬದಲಿಸುವುದು ಮೂರ್ಖತನ.
ಈ ಶಬ್ದವು ಯಾರದು ? ಎಲ್ಲಿಂದ ಬಂದಿರಬಹುದು ? ಎಂಬ ಪ್ರಶ್ನೆಗಳಿಗೆ ಉತ್ತರ ಬಯಸಿತು. ಪ್ರತ್ಯಕ್ಷವಾಗಿ ಆ ಜಾಗಕ್ಕೆ ಹೋಗಿ ವಿಚಾರಿಸಿ ನೋಡೋಣವೆಂದು ನಿರ್ಧರಿಸಿತು. ಸಾವಕಾಶವಾಗಿ ಶಬ್ದವು ಕೇಳಿಸಿದ ದಿಕ್ಕಿನ ಕಡೆ ಮುಖಮಾಡಿತು. ಶಬ್ದದ ಮರ್ಮವನ್ನು ತಿಳಿಯಲೇಬೇಕು ಎಂದು ಧ್ವನಿಯ ಜಾಡು ಹಿಡಿದು ಬಹುದೂರ ಸಾಗತೊಡಗಿತು. ಜಾಗ್ರತೆಯಿಂದ ಹೆಜ್ಜೆ ಹಾಕಿತು. ಮನಸ್ಸು ಮರ್ಕಟವಿದ್ದಂತೆ , ಇಲ್ಲ- ಸಲ್ಲದ ಕಲ್ಪನಾಲಹರಿ ಹರಿಯತೊಡಗಿತು.
ನರಿಯ ಮನಸ್ಸಿನಲ್ಲಿ ಆ ಪ್ರಾಣಿಯು ಎಂಥದಿರಬಹುದು? ಹೇಗೀರಬಹುದು? ದೈತ್ಯಾಕಾರದ ಮೃಗವೇ ? ಹೀಗೆಲ್ಲ ವಿಚಾರಮಾಡುತ್ತಿತ್ತು. ದಾರಿ ಸಾಗುತ್ತಲೇ ಇತ್ತು. . ಅಂತಿಮವಾಗಿ ನಗಾರಿಯ ಹತ್ತಿರ ಬಂದು ತಲುಪಿತು. ಎಂದೂ ನೋಡಿರದ ಅತಿದೊಡ್ಡ ನಗಾರಿಯನ್ನೂ ಬೆರಗುಗಣ್ಣಿನಿಂದ ಕಂಡಿತು. ಮೊದಲು ಮುಟ್ಟಿ ನೋಡಿತು. ಅತ್ತ ಇತ್ತ ಇಣುಕುತ್ತ ಧೈರ್ಯ ಮಾಡಿ ಒಂದು ಸಲ ನಗಾರಿಯನ್ನು ಬಾರಿಸಿತು. ಅದೇ ರೀತಿ ಮೂರ್ನಾಲ್ಕು ಸಲ ಬಾರಿಸಿತು. ನಂತರ ಖಚಿತವಾಗಿ ಇದರಿಂದಲೇ ಶಬ್ದ ಬಂದಿತೆಂದು ಅರಿವಾಯಿತು.
ಅದು ಊಹಿಸಿದ ಹಾಗೆ ಯಾವ ಪ್ರಾಣಿಯೂ ಅಲ್ಲಿರಲಿಲ್ಲ. ತಕ್ಷಣ ಹೊಟ್ಟೆಹಸಿವು ನೆನಪಾಯಿತು. ನರಿ ಅಷ್ಟಕ್ಕೂ ಸುಮ್ಮನಾಗಲಿಲ್ಲ. ನಗಾರಿಯ ಹೊಟ್ಟೆಯಲ್ಲಿ ತಿನ್ನುವ ಪದಾರ್ಥಗಳು ತುಂಬಿರಬಹುದೆಂದು ಊಹಿಸಿತು. ಈ ಮೇಲಿನ ಚರ್ಮವನ್ನು ಹರಿದು ಬಿಟ್ಟರೆ ಅನಾಯಾಸವಾಗಿ ಒಂದೆರಡು ತಿಂಗಳಿಗಾಗುವಷ್ಟು ಆಹಾರವು ಸುಲಭವಾಗಿ ದೊರೆಯುವುದು. ಹೀಗೆಲ್ಲ ಲೆಕ್ಕಾಚಾರ ಹಾಕುವಾಗ ಮತ್ತೆ ಒಂದು ಕ್ಷಣ ಮೌನವಾಗಿ ಯೋಚಿಸಿತು. ಜಾಣನರಿ ಅಲ್ಲವೆ ! ನಗಾರಿಯ ಹೊಟ್ಟೆಯಲ್ಲಿ ಪದಾರ್ಥಗಳಿದ್ದರೆ ಭಯಂಕರವಾದ ಸದ್ದು ಬರಲು ಸಾಧ್ಯವಿರಲಿಲ್ಲವೆಂದು ಸುಮ್ಮನಾಯಿತು.
ಸ್ನೇಹಿತರೆ,ಇಲ್ಲಿ ‘ ನಗಾರಿ ಮತ್ತು ನಗಾರಿಯಿಂದ ಬರುವ ಶಬ್ದ ‘ ಬದುಕಿನಲ್ಲಿ ಆಕಸ್ಮಿಕವಾಗಿ ಬರುವ ವಸ್ತುಗಳು ಅಥವಾ ಸನ್ನಿವೇಶಗಳು. ಇಂತಹ ಅನಪೇಕ್ಷಿತ ಸಂಗತಿಯಿಂದ ಧೃತಿಗೆಡದಿರಿ. ಕೆಲವು ಸೂಕ್ಷ್ಮ ಮನಸ್ಸಿನ ಜನರು ಎದೆಗುಂದಿ ತಪ್ಪು ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಗಳೇ ಹೆಚ್ಚು. ಆತ್ಮಹತ್ಯೆಯಂತಹ ಪ್ರಕರಣಗಳು ಬಹುಪಾಲು ಇಂಥದ್ದೇ ಕಾರಣಕ್ಕೆ ಸಂಭವಿಸುವಂಥದು.
ನಿಧಾನವಾಗಿ ವಿಚಾರಿಸಿ ನಿರ್ಣಯ ಕೈಗೊಳ್ಳಬೇಕು. ನಮ್ಮ ಬುದ್ಧಿಮತ್ತೆಯಿಂದ ,ತಾಳ್ಮೆಯಿಂದ ಹಾಗೂ ಪರಿಶ್ರಮದಿಂದ ಕೂಲಂಕುಶವಾಗಿ ವಿಚಾರಿಸಿ ಪರಿಹಾರ ಕಂಡುಕೊಳ್ಳಬಹುದು. ಬದುಕಿಗೆ ಬೆನ್ನು ತೋರಿಸುವುದು ಎಷ್ಟು ಸರಿ ! ನರಿಯಂತೆ ಸಮಾಧಾನವಾಗಿದ್ದು ಕಷ್ಟದಿಂದ ಹೊರಬರುವ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ಹಾಗೂ ಜಾಗರೂಕತೆಯಿಂದ ಉಪಾಯ ಹುಡುಕಬೇಕು. ಅಕ್ಕನ ವಚನದ ಒಂದು ಸಾಲಿನಂತೆ ” ಸಂತೆಯೊಳಗೊಂದು ಮನೆಯ ಮಾಡಿ ಶಬ್ದಕ್ಕೆ ನಾಚಿದೊಡೆಂತಯ್ಯ ” ಮತ್ತು ದಾಸವಾಣಿಯಂತೆ “ಈಸಬೇಕು ಇದ್ದು ಜೈಸಬೇಕು” ಜೀವನಪಾಠದ ನುಡಿಮುತ್ತುಗಳನ್ನು ಮರೆಯುವಂತಿಲ್ಲ.
- ವಿಭಾ ಪುರೋಹಿತ
2 thoughts on “ನೀತಿ ಪ್ರತೀತಿ -ವಿಭಾ ಪುರೋಹಿತ ಅಂಕಣl ಅನಪೇಕ್ಷಿತ ಸಂಗತಿಗಳಿಗೆ ಧೃತಿಗೆಡದಿರಿ..”
ಒಳ್ಳೆಯ ವಿಚಾರಗಳನ್ನು ಕಥೆಯ ತಿರುಳಿನ ಜೊತೆ ಹೇಳಿದಾಗ ಸ್ಪಷ್ಟತೆ ಇರುತ್ತದೆ. ಬೇಗ ಅರ್ಥ ಆಗುತ್ತದೆ. ಉತ್ತಮವಾದ ಲೇಖನ.
ಧನ್ಯವಾದ ಸರ್