ಏರ್ಯ ಲಕ್ಷ್ಮೀ ನಾರಾಯಣ ಆಳ್ವರ ಕವನಸಂಕಲನ ‘ಮೊದಲ ಮಳೆ’

ಏರ್ಯರದು ಮುಖ್ಯತ: ಕವಿಚೇತನ ಎಂದು ಸಂಕಲನದ ಮುನ್ನುಡಿಯಲ್ಲಿ ಅಮೃತ ಸೋಮೇಶ್ವರರು ಸರಿಯಾಗಿಯೇ ಗುರುತಿಸಿದ್ದಾರೆ. ಅವರದು ಭಾವಾದ್ರ್ರ ಹೃದಯ. ಹಾಗಾಗಿಯೇ ‘ವೇದಿಕೆ ಮೇಲೆ ಭಾಷಣಕ್ಕೆ ನಿಂತಾಗಲೂ ಅವರು ತಟ್ಟನೆ ಕವಿಯಾಗಿಬಿಡುತ್ತಾರೆ’ ಈ ಮಾತನ್ನು ಕೂಡ ಅಮೃತರು ಹೇಳಿದ್ದು.. ನಾನೂ ಹಲವು ವೇದಿಕೆಗಳಲ್ಲಿ ನೋಡಿದ್ದೇನೆ..ತುಳುನಾಡಿನ ಅವಿಭಾಜ್ಯ ಅಂಗವಾಗಿದ್ದ ಕಾಸರಗೋಡು ಕೇರಳದ ಪಾಲಾದ ಸಂಕಟವನ್ನು ಅವರು ನೆನೆದು ಮಮ್ಮಲ ಮರುಗುತ್ತಿದ್ದುದನ್ನು ಆ ವೇಳೆ ಮಾತುಸ ಗದ್ಗದವಾಗುತ್ತಿದ್ದುದನ್ನು ನಾನು ಕಂಡವಳೇ. ಅವರ ಏಕೈಕ ಕವನಸಂಕಲನ ಈ ‘ಮೊದಲಮಳೆ’. 1946ರಿಂದ 1996-98ರ ವರೆಗಿನ ನಿಡುಗಾಲದ ಅವಧಿಯಲ್ಲಿ ಅವರು ಬರೆದ 41 ಕವನಗಳ ಸಂಗ್ರಹವಿದು. ಇಲ್ಲಿ ನಾನು ಒಂದೊಂದು ಕವಿತೆಯ ಪರಿಶೀಲನೆಗೆ ತೊಡಗುವುದಿಲ್ಲ. ಅಮೃತರು ತಮ್ಮ ಮುನ್ನುಡಿಯಲ್ಲಿ ಸಂಕಲನದ ವೈಶಿಷ್ಟ್ಯವನ್ನು ಹಲವು ಕವಿತೆಗಳ ಮೂಲಕ ಸೋದಾಹರಣ ಗುರುತಿಸಿದ್ದಾರೆ.

ಏರ್ಯರು ಕವಿಯಾಗಬೇಕೆಂಬ ಹಂಬಲದಿಂದ ಕವಿತೆ ಬರೆದವರಲ್ಲ. ಅವರು ದೊಡ್ಡ ಕಾವ್ಯೋಪಾಸಕರು. ಸೇಡಿಯಾಪುರಂತಹ ಹಿರಿಯರಿಂದ ಅವರು ಹೇಳಿಸಿಕೊಂಡ ಕಾವ್ಯಪಾಠ, ತಾವೇ ಅಪ್ಪಟ ಕಾವ್ಯಾಸಕ್ತಿಯಿಂದ ನಡೆಸಿದ ಹಳೆ ಮತ್ತು ಹೊಸ ಕಾವ್ಯಪರಂಪರೆಗಳ ಶ್ರದ್ಧೇಯ ಓದು, ವಿಶಿಷ್ಟ ಸಂದರ್ಭಗಳಲ್ಲಿ ಅವರನ್ನು ಸುಮ್ಮನೆ ಕೂರಲು ಬಿಡದೆ ಕವನಗಳನ್ನು ಬರೆಯಿಸಿತು. ಯಾವುದೇ ಪಂಥಪಂಗಡಗಳಿಗೆ ಸೀಮಿತಗೊಳ್ಳದ ಓದು ಅವರದು. ಈ ಬಗ್ಗೆ ಅವರೇ ಕೆಲವು ಮಾತುಗಳನ್ನು ಹೇಳಿದ್ದಾರೆ ಕೂಡ. (ಅವರು ಸಂಕಲನದ ಆರಂಭದಲ್ಲಿ ಸಹೃದಯರೊಂದಿಗೆ ಹಂಚಿಕೊಂಡ ಮಾತುಗಳಲ್ಲಿ ಈ ಸೂಚನೆ ಇದೆ.) ಕುವೆಂಪು, ಬೇಂದ್ರೆ ಮುಂತಾದ ಕವಿಗಳನ್ನು ಮಾತ್ರವಲ್ಲದೆ ವಿಶೇಷವಾಗಿ ನಮ್ಮ ಜಿಲ್ಲೆಯ ಸೇಡಿಯಾಪು, ಕಡೆಂಗೋಡ್ಲು, ಪೈ, ಕಯ್ಯಾರ ಮುಂತಾದವರ ಅಭಿಮಾನದ ಅಭ್ಯಾಸಿ.ಅವರ ಕವನಗಳಲ್ಲಿ ಕವನದ ಆಶಯಕ್ಕೆ ಪೂರಕವಾಗಿ ಬರುವ ಸಾಂದರ್ಭಿಕ ಉದ್ಧರಣೆಗಳು ಇದಕ್ಕೆ ಸಾಕ್ಷಿ.ಅವರು ಮನೋಧರ್ಮದಲ್ಲಿ ನವೋದಯ ಕಾವ್ಯಪರಂಪರೆಗೆ ಹತ್ತಿರದವರಾದರೂ ನವ್ಯದ ಹರಿಕಾರ ಗೋಪಾಲಕೃಷ್ಣ ಅಡಿಗರ ಕಾವ್ಯದ ವಿಶೇಷ ಅಭ್ಯಾಸಿ. ಅವರ ನಿಷ್ಠುರವಾದ ರಾಜಕೀಯಪ್ರಜ್ಞೆಯಿಂದ ತುಂಬ ಪ್ರಭಾವಿತರಾಗಿದ್ದಾರೆನಿಸುತ್ತದೆ.( ಅಡಿಗರು ಏರ್ಯರೊಂದಿಗೆ ಕವನ ಸಂಕಲನವನ್ನು ಪ್ರಕಟಿಸಲು ಒತ್ತಾಯಿಸಿದ್ದಾಗಿ ಏರ್ಯರು ದಾಖಲಿಸಿದ್ದಾರೆ. ಆದರೆ ಈ ಸಂಕಲನ ಪ್ರಕಟವಾಗುವ ಹೊತ್ತಿಗೆ ಅಡಿಗರು ತೀರಿಕೊಂಡಿದ್ದರು.) ತಮ್ಮ ಹಿಂದಿನ ತಲೆಮಾರಿನ ಕವಿಗಳಿಗಿಂತ ಭಿನ್ನರಾಗಿ ಸಮಕಾಲೀನ ರಾಜಕೀಯ ಆಗುಹೋಗುಗಳಿಗೆ ತೀಕ್ಷ್ಣ ಮತ್ತು ತೀವ್ರ ಪ್ರತಿಕ್ರಿಯೆ ಹಾಗೂ ಸ್ಪಷ್ಟವಾದ ರಾಜಕೀಯ ನಿಲುವುಗಳಿಂದ ವಿಶೇಷವಾಗಿ ಗುರುತಿಸಲ್ಪಟ್ಟವರು ಅಡಿಗರು. ‘ಒಂದು ಜನಾಂಗದ ಕಣ್ಣುತೆರೆಸಿದ ಕವಿ’ ಎಂದು ಲಂಕೇಶರಿಂದ ಗುರುತಿಸಲ್ಪಟ್ಟ ಅಡಿಗರು ಆಮೇಲೆ ಅನೇಕ ಬಂಡಾಯ ಮತ್ತು ಬಂಡಾಯೋತ್ತರ ಕವಿಗಳಿಂದ ಅನಾದರಕ್ಕೊಳಗಾದವರಾದರೂ ಕಾವ್ಯದ ಗಂಭೀರ ಅಭ್ಯಾಸಿಗೆ ,ಈ ಪ್ರಕಾರವನ್ನು ಆದರಿಸಿ ಒಲಿಸಿಕೊಳ್ಳುವವರಿಗೆ ಅಡಿಗರ ಕಾವ್ಯ ಮತ್ತು ಅಭಿವ್ಯಕ್ತಿಯ ಕ್ರಮ ಯಾವಾಗಲೂ ಮಾರ್ಗದರ್ಶಿಯಾಗಿ ನಿಲ್ಲುತ್ತದೆ. ಅವರ ಮಣ್ಣಿನ ವಾಸನೆ ಪ್ರಬಂಧ ಸಂಕಲನದ ಬರಹಗಳು ಪ್ರತಿಪಾದಿಸುವ ವೈಚಾರಿಕ ನಿಲುವಿಗೆ ಎಂದಿಗೂ ಪ್ರಸಕ್ತಿ ಇದೆ.

ಈ ಮಾತುಗಳ ಪೀಠಿಕೆಯೊಂದಿಗೆ ಏರ್ಯರ ಕವನಗಳ ಪರಿಶೀಲನೆಗೆ ತೊಡಗಬಹುದು. ಕವನ ಎನ್ನುವುದು ಸುಪ್ತಚೇತನ, ಜಾಗೃತ ಮನಸ್ಸುಗಳ ಸಂಯೋಗದಿಂದ ಅಥವಾ ಸ್ವಪ್ನ, ಜಾಗೃತಿ ಮತ್ತು ಪರಿಶ್ರಮಗಳ ಫಲವಾಗಿ ಸಂಭವಿಸುತ್ತದೆ ಎಂದು ಗೋಪಾಲಕೃಷ್ಣ ಅಡಿಗರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಏರ್ಯರ ಕವನಗಳನ್ನು ಪರಿಭಾವಿಸಿದರೆ ಅವರ ಸುಪ್ತ ಮನಸ್ಸು ‘ಶಿವಾಸ್ತೇ ಪಂಥಾನ:ಸಂತು’ ಅಂದರೆ ಮುಂದಿನ ದಾರಿಯ ಸುಗಮ ಮಂಗಳದ ಕುರಿತಾಗಿ ಕಾಳಜಿ ಕಳವಳಗಳುಳ್ಳದ್ದಾಗಿ ಕಾಣುತ್ತದೆ. ಈ ಸಂಗ್ರಹದಲ್ಲಿ ಅದೇ ಶೀರ್ಷಿಕೆಯ ಕವನವಿದೆ. ಅಲ್ಲದೆ ಮತ್ತೊಂದು ಕವನವು ಈ ಉಕ್ತಿಯಿಂದ ಕೊನೆಗೊಳ್ಳುತ್ತದೆ ಕೂಡ. ಕಾಳಿದಾಸನ ಶಾಕುಂತಲದಲ್ಲಿ ಕಣ್ವ ಮಹರ್ಷಿಗಳು ಶಕುಂತಲೆಯನ್ನು ಪತಿಗೃಹಕ್ಕೆ ಕಳುಹಿಸಿಕೊಡುವಾಗ ಹೇಳುವ ಮಾತು ಇದು. ಆಕೆಯನ್ನು ಸಾಕಿ ಸಲಹಿದ ಕಣ್ವರಿಗೆ ದುಷ್ಯಂತ ಬಂದು ಹೋದ ಮತ್ತು ಆ ಬಳಿಕದ ವಿದ್ಯಮಾನಗಳು ತಿಳಿದಿವೆ. ಆಕೆಯ ಪತಿಯೇ ಬಂದು ಕರೆದುಕೊಂಡು ಹೋಗಬೇಕಾಗಿತ್ತು. ಆದರೆ ಹಾಗಾಗಲಿಲ್ಲ. ಆದ್ದರಿಂದ ಆಕೆಯ ಮುಂದಿನ ಬದುಕಿನ ಕುರಿತಾದ ಅನಿಶ್ಚಿತತೆಯ ಬಗ್ಗೆ ಒಂದು ಕಳವಳ ಕಾಳಜಿಯೂ ಈ ಶುಭಹಾರೈಕೆಯಲ್ಲಿ ಬೆರೆತಿದೆ. ಅದು ಕೇವಲ ಸಾಂಪ್ರದಾಯಿಕವಾದ ಶುಭಹಾರೈಕೆಯಲ್ಲ. ಅದರ ಹಿಂದೆ ಆತಂಕವಿದೆ; ಕಳವಳವಿದೆ. ಏರ್ಯರ ಸುಪ್ತಮನಸ್ಸಿನ ತುಡಿತವಿರುವುದು ಪ್ರಧಾನವಾಗಿ ಮಂಗಲದ ಅಥವಾ ಒಳಿತಿನ ಕಡೆಗೆ.ಅದರ ಹಿಂದಿರುವುದು ಸಾಮಾಜಿಕ ವಾಸ್ತವದ ಅರಿವು ಹಾಗೂ ಅದರ ಬೆನ್ನಲ್ಲೆ ಮೂಡಿರುವ ಕಾಳಜಿ, ಕಳವಳಗಳು.

ಈ ಕೇಂದ್ರ ಆಶಯದ ಆಧಾರದಲ್ಲಿ ಸಂಗ್ರಹದ ಕೆಲವು ಕವನಗಳನ್ನು ವಿಶ್ಲೇಷಿಸಬಯಸುತ್ತೇನೆ. ‘ಕತ್ತೆ ಸತ್ತುಹೋಯಿತು’ ಎಂಬ ಕವನ ಐತಿಹಾಸಿಕ ಮಹತ್ವವನ್ನು ಪಡೆದ ಕವನ. ದೇಶದ ಮೇಲೆ ತುರ್ತುಪರಿಸ್ಥಿತಿ ಹೇರಿದ ಸಂದರ್ಭದಲ್ಲಿ ಏರ್ಯರ ಕವಿಮನಸ್ಸು ತುಡಿದ ಬಗೆ ಇದರಲ್ಲಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾದ ಆ ಸಂದರ್ಭದಲ್ಲಿ ಈ ಕವನವನ್ನು ಬರೆದದ್ದು ಮಾತ್ರವಲ್ಲದೆ ಪ್ರಕಟಿಸಿದ್ದು ( ಉದಯವಾಣಿ 10/ 8/ 1975) ಬಹಳ ವಿರಳವಾದ ಉದಾಹರಣೆಯಾಗಿ ನಿಲ್ಲುತ್ತದೆ. ಸಂಕ್ರಮಣ ಪತ್ರಿಕೆಯ 1977ರ ಆಗಸ್ಟ್ ಸಂಚಿಕೆಯಲ್ಲಿ ಈ ಕುರಿತಾಗಿ ಉಲ್ಲೇಖವಿದ್ದು.ಪ್ರಜಾಸತ್ತಾತ್ಮಕ ಮೌಲ್ಯಗಳ ಬಗ್ಗೆ ಕವಿತೆ ಮೂಡಿಸಿದ ಜಾಗೃತಿ, ಸಂಚಲನವನ್ನು ನೆನೆಯಲಾಗಿದೆ. (ಸಂಕಲನದ ಬ್ಲರ್ಬನಲ್ಲಿ ಅದನ್ನು ಉದ್ಧರಿಸಲಾಗಿದೆ.)

‘ಮಗೂ’ ಎಂಬ ಸಂಬೋಧನೆಯೊಂದಿಗೆ ಆರಂಭವಾಗುವ ಕವನ ತಂದೆಯೂ ಮಗನೂ ಹೊತ್ತು ತಂದಿದ್ದ ಕತ್ತೆ ಸತ್ತು ಹೋಯಿತೆಂಬ ಖೇದದ ಒಕ್ಕಣೆಯೊಂದಿಗೆ ಮುಂದುವರಿಯುತ್ತದೆ. ಅಂದರೆ ಎರಡು ತಲೆಮಾರುಗಳ ಹೋರಾಟದ ಫಲವಾಗಿ ದೊರೆತ ಸ್ವಾತಂತ್ರ್ಯ, ಪ್ರಜಾಪ್ರಭುತ್ವದ ಆದರ್ಶ ತುರ್ತುಪರಿಸ್ಥಿತಿಯ ಘೋಷಣೆಯೊಂದಿಗೆ ಅವಸಾನವಾಯಿತು. ಈ ಸಾವಿನ ಶೋಕಾಚರಣೆಯಾಗಲಿಲ್ಲ .ಯಾಕೆಂದರೆ ಸ್ವಾತಂತ್ರ್ಯವೇ ಹರಣವಾದ ಬಳಿಕ ವೇದಿಕೆ ಎಲ್ಲಿ ಎಂಬ ವ್ಯಂಗ್ಯವಿಲ್ಲಿದೆ. ಕೇವಲ ಉಸಿರು ಊಟಗಳನ್ನಷ್ಟೆ ನೆಮ್ಮದಿಯ ನೆಲೆ ಎಂದು ಭಾವಿಸಿ ವ್ಯಕ್ತಿತ್ವದ ಘನತೆಯ ಬೆಲೆಯನ್ನರಿಯದ ಹಲವುಮಂದಿಗೆ ಇದರಿಂದ ಏನೂ ಬಾಧಕವಿಲ್ಲ. ಆದರೆ ಸಾಕ್ಷಿಪ್ರಜ್ಞೆಯಂತಿರುವ ಕವಿಗೆ ಅಥವಾ ನಿರೂಪಕನಿಗೆ ಈ ಸಾವಿನ ಪರಿಣಾಮ ಎದೆಯಲ್ಲಿ ಬೇಯುವ, ಮನದಲ್ಲಿ ದುಗುಡ ತುಂಬಿದ,ಕಣ್ಣಲ್ಲಿ ನೀರು ಪ್ರವಹಿಸುವ ಅನುಭವವಾಗುತ್ತದೆ. ಸ್ವಾತಂತ್ಯೋತ್ತರ ಕುಡಿಗಳಿಗೆ ಸ್ವಾತಂತ್ರ್ಯ ಹೋರಾಟವೆನ್ನುವುದು ಬರಿಯ ಕತೆ ಪುಸ್ತಕವನ್ನೋದಿ ತಿಳಿದ ಮಾಹಿತಿ. ಆದರೆ ಕವಿ ಪ್ರತಿನಿಧಿಸುವುದು ಪ್ರತ್ಯಕ್ಷಾನುಭವವನ್ನು. ಆ ತ್ಯಾಗ ಬಲಿದಾನಗಳ, ಬವಣೆ ಬೇಗುದಿಗಳ ಸುದೀರ್ಘ ಹೋರಾಟದ ಫಲ ಕೊನೆಗೂ ದೊರೆತಾಗ ಪಟ್ಟ ಸಂಭ್ರಮ, ಸಡಗರದ ನೆನಪು- ಈ ದುರಂತಕ್ಕೆ ಮುಖಾಮುಖಿಯಾದಾಗ ಭವಿತವ್ಯವನ್ನು ನೆನೆದು ಕಳವಳ ಮೂಡುತ್ತದೆ. ಕವನದ ‘ಮಗೂ’ ಪ್ರತಿನಿಧಿಸುವ ಎಳೆಯ ತಲೆಮಾರು ಸ್ವಾತಂತ್ರ್ಯದ ಬೆಲೆಯನ್ನು ತಿಳಿದಿರಬೇಕಾದ ಅಗತ್ಯವಿದೆ. ಬದುಕಿ ಬಾಳಬೇಕಾದ ಮಂದಿ ಮತ್ತೆ ಕತ್ತೆಯ ತರಲು, ಅದನ್ನು ವಿರೋಧಿಸುವ ಪಡೆಯನ್ನು ಎದುರಿಸುವೆವು ಎಂಬ ಛಲ ಮತ್ತು ಬಲದೊಂದಿಗೆ ಸನ್ನದ್ಧರಾಗಬೇಕು , ‘ಸಕಲ ಸುಲಕ್ಷಣಗಳ ರಾಸಭವ ತರಬೇಕು, ಚಿಣ್ಣರೆಲ್ಲರು ಸೇರಿ ಮತ್ತೆ ಹಾರಬೇಕು, ಆಕಾಶಪಥದಲ್ಲಿ ಮುಗಿಲಮಾಲೆಯ ಮೀರಿ ನಕ್ಷತ್ರ.ಗಳೊಡನೆ ಚಿನ್ನಾಟವಾಡಬೇಕು’ ಎಂಬ ಪ್ರಯೋಗದ ಮೂಲಕ ‘ಮಗು’ ಎನ್ನುವುದು ಭವಿಷ್ಯದ ಜನಾಂಗವಾದ ಎಳೆಯ ತಲೆಮಾರನ್ನು ಪ್ರತಿನಿಧಿಸುವುದು ಸ್ಪಷ್ಟಗೊಳ್ಳುತ್ತದೆ. ಇಲ್ಲಿ ಕವಿಯ ಸಾಕ್ಷಿಪ್ರಜ್ಞೆ ಭಾರತದ ಭವಿತವ್ಯವನ್ನು ನೆನೆದು ಕಳವಳಿಸುತ್ತದೆ.. ಆಯೋಗಯೋಗ,ಮಂಗಳೂರು , ವಾರ್ತಾಪತ್ರ ಎನ್ನುವ ಶೀರ್ಷಿಕೆಯ ಕವನಗಳೂ ಕವಿಯ ಗಾಢವಾದ ಸಮಕಾಲೀನ ರಾಜಕೀಯ ಪ್ರಜ್ಞೆಯ ಅಭಿವ್ಯಕ್ತಿಗಳಾಗಿವೆ.

ತುರ್ತುಪರಿಸ್ಥಿತಿ ಕಳೆದ ಬಳಿಕ ಆ ಕಾಲದ ಅಮಾನವೀಯ ಅತಿರೇಕಗಳ ವಿಚಾರಣೆಗಾಗಿ ನಿಯುಕ್ತವಾದ ಆಯೋಗ ಕಾರ್ಯಪ್ರವೃತ್ತವಾದಾಗ ಬರೆದ ಕವನ ‘ಆಯೋಗ ಯೋಗ. ಇದು ‘ಕತ್ತೆಸತ್ತುಹೋಯಿತು’ ಕವನಕ್ಕೆ ಬರೆದ ಅನುಬಂಧದಂತಿದೆ. ಇಲ್ಲೂ ಕೂಡ ‘ಮಗೂ’ ಎಂಬ ಸಂಬೋಧನೆಯಿರುವುದು ಗಮನಾರ್ಹ.

ವಿಚಾರಣೆ ವೇಳೆ ಬೆಳಕಿಗೆ ಬರುವ ದೌರ್ಜನ್ಯ ಕ್ರೌರ್ಯಗಳ ಕತೆ ಕಣ್ಣು, ಕಿವಿಮೂಗುಗಳನ್ನು ಮುಚ್ಚಿಕೊಳ್ಳುವಷ್ಟು ಭಯಾನಕ ಮತ್ತು ಭೀಭತ್ಸಕರ.ಆದರೆ ಕೊನೆಗೂ ಆ ಅತಿರೇಕಗಳಿಗೆ ನಿಲುಗಡೆಯಾಗಿ ‘ದೇವರಿನಣಂ ಕಿರಿಯದೇವತೆ’ಯಾದ ಬಿಡುಗಡೆಯು ದೊರಕಿತಲ್ಲ! ಪುರಾಣಕಾಲದಿಂದ , ರಾಮಾಯಣ ಮಹಾಭಾರತ ಕಾಲದಿಂದ ಮಾನಿನಿಯ ಮಾನಕ್ಕೆ, ಈ ಭೂಮಿತಾಯಿಯ ಮಾನಕ್ಕೆ ಎಷ್ಟೆಷ್ಟು ಸವಾಲು ಸಂಕಟಗಳು ಎದುರಾದರೂ ಅಂತಹ ಸ್ಥಿತಿಯಿಂದ ವಿಮೋಚನೆ ಕೂಡ ಕಾಲ ಸಾರುತ್ತಿರುವ ಸಾರ್ವತ್ರಿಕ ಸತ್ಯ. ಕಾಲದೇಶಗಳ ಹಂಗಿಲ್ಲದೆ ಬದುಕಿನ ಗತಿಯನ್ನು ಅನುಸರಿಸಿ ಬಂದಿರುವ ಕಾವ್ಯ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಕರ್ತವ್ಯವನ್ನು ಮಾಡುತ್ತ ಬಂದಿದೆ. ಅದು ಗೋವಿಂದ ಪೈಯವರು ‘ಬಿಡುಗಡೆಯೆ ದೇವನಿನಣಂ ಕಿರಿಯ ದೇವತೆಯೆ’ ಎಂದು ಉದ್ಗರಿಸಿದ್ದಿರಬಹುದು ; ಕುಮಾರವ್ಯಾಸ ಕವಿ ತುಂಬಿದ ಸಭೆಯಲ್ಲಿ ದ್ರೌಪದಿಯ ಶ್ರೀಮುಡಿಗೆ ದುರುಳ ಕೈಯಿಕ್ಕಿದ ಪ್ರಸಂಗದಲ್ಲಿ ‘ ಕೆದರಿದವು ಸೂಸಕದ ಮುತ್ತುಗಳುದುರಿದವು ಸೀಮಂತಮಣಿಗಳ ಹೊದರು ಮುರಿದವು ಕರ್ಣಪೂರದ ರತ್ನದೋಲೆಗಳು’ಎಂದು ಮಹಾಭಾರತ ಯುದ್ಧದ ದುರಂತಧ್ವನಿಯನ್ನು ಮುನ್ನುಡಿಯುವುದಿರಬಹುದು –ಇಂತಹ ಕಾವ್ಯಸಂದರ್ಭಗಳ ನೆನಪು ಕನ್ನಡದ ಸಂಸ್ಕೃತಿಗೆ ಕಾಲದೇಶಗಳ ಮಿತಿಯ ಮೀರಿದ ಬದುಕಿನ ಅಖಂಡ ಸೂತ್ರದಲ್ಲಿ ಅಂದಿಗೂ ಇಂದಿಗೂ ಎಂದಿಗೂ ಪ್ರಸ್ತುತವಾಗಿದ್ದು ಕವಿಯ ಆಶಯವನ್ನು ಬೆಳಗುವಲ್ಲಿ ಪೂರಕವಾಗುತ್ತದೆ.

ವಾರ್ತಾಪತ್ರ ಎಂಬ ಕವನವು ಕೇವಲ ಕೆಡುಕಿನ ವಿಜೃಂಭಣೆಯನ್ನು ಸಾರುವ ಸುದ್ದಿಗಳಿಗೆ ಪ್ರಾಶಸ್ತ್ಯಕೊಡುವ ಪತ್ರಿಕೆಗಳ ಬಗ್ಗೆ ಹೇಳುತ್ತಲೇ ವರ್ತಮಾನವನ್ನು ಮೀರಿ ಸಾರ್ವಕಾಲಿಕಕ್ಕೆ ಹೊರಳಿಕೊಳ್ಳುತ್ತದೆ.ತಿಳಿಯೆ ನೋವಿರೆ ತಿಳಿಯದಿರುವುದೆ ಜಾಣ್ಮೆ ಎಂಬ ಕುವೆಂಪು ಅವರ ವಾಣಿಯನ್ನು ಉದ್ಧರಿಸಿಯೂ ಅದನ್ನು ತಿದ್ದುವ ಪ್ರಯತ್ನವನ್ನು ಮಾಡುತ್ತದೆ. ‘ತಿಳಿಯೆ ನೋವಿರೆ ತಿಳಿಯದಿರುವುದೆ? ನಿಜವನರಿಯದಿರುವುದೆ?’ ಎಂದು ಪ್ರಶ್ನಿಸಿ ‘ನೋವಬಸಿರಲೆ ಹುಟ್ಟು, ಕತ್ತಲಲೆ ಜನಿಸಿತ್ತು ಬೆಳಕಿನಾಬಿತ್ತು!/ ಉರುಳಿತ್ತು ಅಸುರ ಕತ್ತು /ಬೆಳಕರಳಿ ಪರಿಮಳಿಸಿತ್ತುಎನ್ನುತ್ತ ಕೇಡಿನ ಇರವಿನ ಅರಿವಿಗೆ ಮಾತ್ರ ಅದರ ವಿನಾಶ ಸಾಧ್ಯ ಎಂದು ಕೃಷ್ಣಾವತಾರದ ರೆಫರೆನ್ಸ್ ಮೂಲಕ ಸಾರುತ್ತದೆ.

‘ಸದಾಶಿವರಾಯ ರಸ್ತೆಯಲ್ಲಿ’ ಎಂಬ ಕವನದ ಸಂದರ್ಭವನ್ನು ಕವಿ ದಾಖಲಿಸಿರುವುದು ಹೀಗೆ –‘ಮಂಗಳೂರಿನ ಸದಾಶಿವ ರಾವ್ ರಸ್ತೆಯಲ್ಲಿ ಬೆಳಗಿನ ಬೆಳ್ಳಂಬೆಕಿನಲ್ಲಿ ತರುಣ ಪತ್ರಿಕೋದ್ಯಮಿಯೋರ್ವರನ್ನು ಎದೆಗೆ ಇರಿದು ಕೊಲ್ಲಲಾಯಿತು. ಅ ನಂತರ ನಗರದಲ್ಲಿ ಲೂಟಿ, ದೊಂಬಿಗಳು ನಡೆದವು.ನಗರವಾಯಿತು ಮಸಣ. ಕಫ್ರ್ಯೂಬಂತು. ಜೊತೆಗೆ ನಡೆಯಿತು ರಾಜಕೀಯದ ಚದುರಂಗದಾಟ.’ಆಹೊತ್ತಿಗೆ ಬರೆದ ಕವಿತೆ.’

ಘಟನೆ ಎಲ್ಲೇ ನಡೆದರೂ ದುರಂತವೇ. ಆದರೂ ಸದಾಶಿವರಾಯ ರಸ್ತೆಯಲ್ಲಿ ನಡೆದದ್ದು ಕವಿಮನಸ್ಸಿಗೆ ದಾರುಣ ವ್ಯಂಗ್ಯವಾಗಿ ಕಾಣಿಸುತ್ತದೆ. ದೇಶಭಕ್ತ ಕಾರ್ನಾಡ್ ಸದಾಶಿವರಾಯರು ತಮ್ಮದೆಲ್ಲವನ್ನೂ ಸ್ವಾತಂತ್ರ್ಯಕ್ಕಾಗಿ ಸಮರ್ಪಿಸಿದ ವ್ಯಕ್ತಿ. ಅವರ ನೆನಪಿಗೆ ಅವರ ಕಾರ್ಯಕ್ಷೇತ್ರವಾದ ಮಂಗಳೂರಿನ ಒಂದು ರಸ್ತೆಗೆ ಅವರ ಹೆಸರನ್ನಿಟ್ಟರೆ ಆ ರಸ್ತೆಯಲ್ಲೇ ಈ ಘಟನೆ ನಡೆದದ್ದು ಅತ್ಯಂತ ವಿಪರ್ಯಾಸ. ಕೇಡಿನ ವಿಜೃಂಭಣೆಯನ್ನು ನೆನೆದು ಕವಿಮನಸ್ಸು ತಳಮಳಿಸುತ್ತದೆ. ಸದಾ ಒಳಿತನ್ನು ಮಾಡುವವ ಎಂಬರ್ಥವೂ ಅಡಗಿರುವ ‘ಸದಾಶಿವ’ ಪದದ ವ್ಯಂಗ್ಯ ಮತ್ತಷ್ಟು ಮನಮುಟ್ಟುತ್ತದೆ. ಇಡೀಕವನದಲ್ಲಿ ಕವಿ ಶಬ್ದಗಳಿಗಿರುವ ವ್ಯಂಜಕ ಶಕ್ತಿಯನ್ನು ಚೆನ್ನಾಗಿ ದುಡಿಸಿಕೊಂಡಿದ್ದಾರೆ. ಮಂಗಳೂರು ಎನ್ನುವುದನ್ನು ಮಂಗಳ ಊರು ಎಂದು ವಿಂಗಡಿಸಿ ಅದರ ಹೃದಯದಲ್ಲೆ ತಿವಿದುಕೊಂದರಲ್ಲ ಎನ್ನುವುದಾಗಲೀ ‘ ಉದಯ ಸೂರ್ಯನು ಎದ್ದು ಹಗಲ ಬಾಗಿಲ ತೆರೆದು ಕಣ್ಣು ಹೊಸೆಯುವ ಹೊತ್ತು ಕಣ್ಣುಮುಚ್ಚಿತು ಜೀವ’ ಎನ್ನುವುದನ್ನಾಗಲೀ ಗಮನಿಸಬೇಕು. ಸೂರ್ಯೋದಯವಾಗುವುದು ಸಕಲಜೀವಗಳ ಕಣ್ಣುತೆರೆಯಿಸುವುದಕ್ಕೆ . ಆದರೆ ಇಲ್ಲಿ ಜೀವ ಕಣ್ಮುಚ್ಚಿದೆ.ಬೆಳಕುಮೂಡಿತು ಎಂದು ಕೈಯ ಮುಗಿಯುವ ಹೊತ್ತು ಕಣ್ಣಮುಚ್ಚಿತು ಜೀವ ಎಂದು ಮತ್ತೆ ಪುನಾರವರ್ತನೆಯ ಸಾಲು ಕೂಡ ಇದೆ. ಕಣ್ಣು ಮುಚ್ಚುವುದು ತೆರೆಯುವುದು ಎಂಬ ಕ್ರಿಯೆ ಮತ್ತೆ ಕವನದಲ್ಲಿ ಪುನರಾವರ್ತನೆಯಾಗಿದ್ದು ಕವನದ ಪ್ರಬಂಧ ಧ್ವನಿಗೆ ಪೂರಕವಾಗಿ ದುಡಿಯುತ್ತದೆ.ಕವನ ಆರಂಭವಾಗುವುದು ಸೂರ್ಯೋದಯದೊಂದಿಗೆ ಕೊನೆಗೊಳ್ಳುವದೂ ಉದಯದೊಂದಿಗೆ . ‘ನಿದ್ದೆ ಕಳೆಯಿತು ಕಣ್ಣುತೆರೆಯಿತು ಬೆಳಕು ಹರಿದಿದೆ ಹೊರಗಡೆ’ ಎಂದು ಸೂರ್ಯೋದಯದ ಭೌತಿಕ ವಿದ್ಯಮಾನವನ್ನು ಹೇಳುವುದರ ಜೊತೆಗೆ ‘ಬೆಳಕು ಬೆಳಗಿತೆ ಒಳಗಡೆ’ ಎಂಬ ಸಾಲು ಹಿಂಬಾಲಿಸುತ್ತದೆ..ಒಂದು ಕೊಲೆ ಮತ್ತು ಪ್ರತಿಹಿಂಸೆಯಲ್ಲಿ ಅದರ ಅನುರಣನ ಕವಿಗೆ ಗೋಪಾಲಕೃಷ್ಣ ಅಡಿಗರ ‘ಎಂದು ಕೊನೆ?’ ಹಾಡಿನ ಸಾಲುಗಳೂ ನೆನಪಾಗುತ್ತವೆ. ‘ ಒಬ್ಬರನೊಬ್ಬರು ನಂಬುವ ತುಂಬುವ ಹಬ್ಬವು ಕಬ್ಬದ ಕಾದಂಬಿನಿಯಲಿ ಮೂಡುವ ಮಳೆಬಿಲ್ಲಾಯಿತೆ ಮೊಳೆಯದೆ ಅದು ಎದೆಯಾಳದಲಿ, ಬೆಳೆಯದೆ ನಮ್ಮೀ ಬಾಳಿನಲಿ’ ಎಂದು ಈ ಕವಿಯೂ ದನಿಗೂಡಿಸುತ್ತಾರೆ. ಕಾವ್ಯ ಪ್ರತಿಪಾದಿಸುವ ಆದರ್ಶ ಒಂದೆಡೆಯಾದರೆ ವಾಸ್ತವದ ವಿಕೃತಿ ಇನ್ನೊಂದೆಡೆ.

ಕಣ್ಣುಮುಚ್ಚುವುದು ತೆರೆಯುವುದು, ಮತ್ತೆ ಮುಚ್ಚುವುದು . ಕನಸಿನ ಭಯಾನಕವು .ವಾಸ್ತವದ ಪ್ರತಿಫಲನವೇ ಆಗಿದ್ದು ವಾಸ್ತವವು ಬಗೆಮಬ್ಬು, ಕೊಳೆ ಕೊಬ್ಬಿನ ಅಸಹ್ಯ ಫಲಿತವಾಗಿದೆ. ‘ಎಂದು ಕೊನೆ ಎಂದು ಅಡಿಗರು ಬರೆದರಲ್ಲ, ಮತ್ತೇಕೆ ಬರೆಯಬೇಕು’ ,ಅನ್ನುತ್ತ ಕವಿ ಸುಮ್ಮನೆ ಕೂರುವಂತಿಲ್ಲ.ಯಾಕೆಂದರೆ ಹಿಂಸೆ ಪ್ರತಿಹಿಂಸೆಯ ಅಟ್ಟಹಾಸ ಮುಂದುವರಿಯುತ್ತಲೇ ಇದೆ.

ಮಂಗಳೂರು ಮಹಾನಗರವಾಗಿ ಬೆಳೆಯುತ್ತಿರುವ ನಾನಾಮುಖಗಳನ್ನು ನಗರ ನಾಗರಿಕತೆಯ ವಿಶ್ವರೂಪವನ್ನು ಹಿಡಿದಿಡುತ್ತ ಸಾಗುವ ಕವನದ ಕೊನೆಗೆ ‘ಮಂಗಳೆಯ ಆವಾಸ /ಮಂಜುನಾಥ ನಿವಾಸ ತೆಂಗುಹಸಿರಿನ ಹಾಸ/ ನೀಲಕಡಲಿನ ಘೋಷ,ಸಂಜೆಬಾನಿನ ವೇಷ /ಪಡುವ ಗಾಳಿಯತೋಷ/ ಇಂದೂ ಕೈಬೀಸಿಕರೆಯುತ್ತಿವೆ ನನ್ನ ಹಿಂದಿನಂತೆ /ಆದರೆ ಕನಸಿನಂತೆ ಎಲ್ಲ ಅರೆಗಳಿಗೆಯೊಳಗೆ ಮಾಯ’ವಾಗುವ ವಿಪರ್ಯಾಸವನ್ನು ನೋಡುತ್ತಾ. ಕೊನೆಗೆ ರತ್ನನ ಪರಿಭಾಷೆಯಲ್ಲಿ ‘ಎಲ್ಲರೂವೆ ಯೋಳ್ತಿರ್ತಾರೆ ಮಂಗ್ಳೂರ್ ಬೆಳ್ಕೊಳ್ತೈತೆ/ ನಾನೂವೆ ಅನ್ನೋದು ಅದೇಮಾತೆ /ಆದ್ರೂ ಒಮ್ಮೊಮ್ಮೆ ಅನ್ನಿಸ್ತೈತೆ /ಮಂಗ್ಳೂರ್ ಏನೋ ಕಳ್ಕೊಳ್ತೈತೆ’.ಪ್ರಗತಿಯ ಹೆಸರಿನಲ್ಲಿ ಕಳೆದುಕೊಳ್ಳುತ್ತಿರುವುದರ ಬಗ್ಗೆ ಹೊಟ್ಟೆಯಲ್ಲಿ ಚಳಕುಮೂಡಿಸುತ್ತದೆ ಈ ಸಾಲು.

ಈ ಸಂಕಲನದಲ್ಲಿ ಸಾಮಾಜಿಕ ಕಾಳಜಿಯ ಕವಿತೆಗಳಲ್ಲದೆ ತಾತ್ವಿಕ ಹೊರಳು ಉಳ್ಳ ಕವಿತೆಗಳಿವೆ. ಪ್ರಕೃತಿಗೀತೆಗಳಲ್ಲೂ ಒಂದು ತಾತ್ವಿಕ ಒಳನೋಟವನ್ನು ಒಳಗೊಂಡ ರಚನೆಗಳೂ ಇವೆ. ‘ಮುಗಿಲು ನಾಟ್ಯವಾಡಿತು’ ಎಂಬ ಕವನವನ್ನು ಉದಾಹರಿಸುವುದಿದ್ರೆ. ಅಲ್ಲಿ ವಿವಿಧ ರೂಪಗಳಲ್ಲಿ ಕಾಣಿಸಿ ಮರೆಯಾಗುವ ಮುಗಿಲ ನಾಟ್ಯದ ಚರ್ಯೆಯಲ್ಲಿ ಜಗತ್ತಿನಲ್ಲಿ ನಿರಂತರ ಜರಗುತ್ತಿರುವ ಹುಟ್ಟು ಸಾವಿನ ದರ್ಶನವನ್ನು ಕಾಣುವುದಕ್ಕೆ ಮತ್ತು ಕಾಣಿಸುವುದಕ್ಕೆ ಕವಿಗೆ ಸಾಧ್ಯವಾಗಿದೆ. ಅವರ ಆರಂಭಿಕ ರಚನೆಗಳು ಹ್ರಸ್ವವಾಗಿದ್ದು ತೀವ್ರಭಾವದ ಕ್ಷಣವೊಂದರ ಸ್ಮಾರಕದಂತೆ ಸಾಂದ್ರವಾಗಿವೆ.ಅವ್ಯಕ್ತವಾದ ಭಯದ ತೀವ್ರ ತೆಯನ್ನು ‘ಎನ್ನುಸಿರೆ ಬಿರುಗಾಳಿ ಪದರವವೆ ಬರಸಿಡಿಲು ‘ ಎಂದು ಆರಂಭಿಸಿ ಬುದ್ಧಿ,ಮನಸ್ಸು, ಕಿವಿ ಕಣ್ಣು – ಹೀಗೆ ಸವ್ರ್ರತ್ರ ವ್ಯಾಪಿಸಿ ಅಸ್ತಿತ್ವವೇ ಅದಾಗಿರುವ ಪರಿಯನ್ನು ನಿರೂಪಿಸಿದ ಬಗೆ ಅನನ್ಯ. ‘ಮನಸಿಗೆಂತು ನಿಲುಗಡೆ’, ‘ದ್ವಂದ್ವ’ ,’ಹೃದಯ ಮಂಥನ ‘– ಈ ಕವನಗಳು ಕವಿಯೊಳಗಿನ ಒಬ್ಬ ಸೂಕ್ಷ್ಮ ಸಂವೇದನೆಯ ಜಿಜ್ಞಾಸುವನ್ನು ದರ್ಶಿಸುತ್ತವೆ.
ಇಂದೀ ಹೃದಯದೊಳಗುದಿಯೇತಕೆ
ದಿವ್ಯಾಮೃತ ಬಹಮಂಥನವೇನಿದು?
ಆರನೊ ನೆನೆಯುತ ಏನನೊ ಬಯಸುತ
ಆವುದೊ ರಾಗಕೆ ಮಿಡಿಯುತಲಿದೆ ಮನ
( ಹೃದಯ ಮಂಥನ) ಎಂಬ ಸಾಲುಗಳನ್ನು ಗಮನಿಸಬಹುದು.

‘ಹಗಲಾಯಿತು’ ಎಂಬ ಶೀರ್ಷಿಕೆಯ ಕವನ ವಾಸ್ತವದ ಗಾಢ ಪ್ರಜ್ಞೆಯಿಂದ ಆವಿರ್ಭವಿಸಿದೆ. ಸೂರ್ಯೋದಯದ ರಮ್ಯಚಿತ್ರಗಳಿಗೆ ಭಾವಸ್ಫುರಣಗಳಿಗೆ ಕನ್ನಡದಲ್ಲೇನು ಬರವಿಲ್ಲ.ಕವಿ ಪು.ತಿ.ನ ಅವರು ‘ಶಾರದ ಯಾಮಿನಿ’ಎಂಬ ಸಂಕಲನದ ಕವಿತೆಗಳಲ್ಲಿ ಶರದದ ಇರುಳಿನ ವರ್ಣನೆಯನ್ನು ಅದರ ನಿಗೂಢ ಮೋಹಕತೆಯನ್ನು ಬಗೆದವರಾಗಿ ಭಿನ್ನರಾಗಿ ನಿಲ್ಲುತ್ತಾರೆ. ಆದರೆ ಪುತಿನ ಅವರ ದರ್ಶನ ಬೇರೆ.ಏರ್ಯರು ಈ ಕವನದಲ್ಲಿ ಹಗಲು ಮತ್ತು ಇರುಳನ್ನು ಮುಖಾಮುಖಿಯಾಗಿಸಿ ಕೊಡುವ ಕಾಣ್ಕೆ ಬೇರೆ.ಕವನವು ‘ಅಮಲ ಇರುಳ ದಿವದ ಶಾಂತಿಯ’ ವರ್ಣನೆಯಿಂದ ಆರಂಭವಾಗುತ್ತದೆ. ನೆಲದ ಕೋಟಿಕೋಟಿ ಜೀವಗಳು ಎಲ್ಲ ಭಿನ್ನಭಾವ ಕೆಡುಕು ದುಡುಕು ಮೋಹ ಮದಗಳನ್ನೆಲ್ಲ ಮರೆತು ತಾಯ ಮಡಿಲ ಮಗುವಿನಂತೆ ಮಲಗಿ ಮುಗ್ಧವಾಗಿರುವ ಚಿತ್ರವನ್ನು ಕೊಡುತ್ತಾರೆ.ಆದರೆ ‘ಕೋಳಿಕೂಗಿ ಮೂಡುದಿಕ್ಕಿನಲ್ಲಿ ರುಧಿರ ಹರಿತ/ ಬಂತು ಬಂತು ಹಗಲು ಹರಿದು /’ ಎನ್ನುವ ಕವಿ ‘ಕಣ್ಣು ಕುಕ್ಕಿಮೆರೆವ ಸೂರ್ಯ/ ಕೆಡುಕು ದುಡುಕು ಮೈಯಮುರಿದು ‘ ಅಸುರಭಾವದ ದಿಗಿಣಕುಣಿತಕ್ಕೆ ಸಜ್ಜಾಗುವುದರ ಭೀತಿಯನ್ನು ಅನುಭವಿಸುತ್ತಿದ್ದಾರೆ.ಚೆಂಡೆಬಡಿತ ಎದೆಯ ತುಡಿತ ಅಸುರನ ಧಾಳಿಯ ಮುನ್ಸೂಚನೆಯನ್ನು ನೀಡುತ್ತಿದೆಯೆನಿಸುತ್ತದೆ. ‘ದೇವಲೋಕ ಸೂರೆಹೋಗಿ ಅಳಲು ಎದೆಯ ತುಂಬಿ ಬಂದ’ ಭಾವದೊಂದಿಗೆ ಕವನ ಕೊನೆಗೊಳ್ಳುತ್ತದೆ. ಯಕ್ಷಗಾನದ ಬಣ್ಣದ ವೇಷ ಅಥವಾ ಅಸುರವೇಷದ ಪ್ರವೇಶದ ರೂಪಕವನ್ನು ಕವಿ ಇಲ್ಲಿ ಬಳಸಿಕೊಂಡಿದ್ದಾರೆ. ಯಕ್ಷಗಾನದಲ್ಲಿ ಅಸುರವೇಷ ವಿಜೃಂಭಿಸಿದರೂ ಮತ್ತೆ ಅಸುರ ಸಂಹಾರವಾಗಿ ದೇವಲೋಕ ದೇವತೆಗಳ ಕೈಗೆ ದೊರೆಯುತ್ತದೆ. ಆದರೆ ಕಲೆ ಬೇರೆ ವಾಸ್ತವ ಬೇರೆ ಎನ್ನುವುದು ಕವಿಯ ಅನುಭವ. ಹಾಗಾಗಿ ಕವನ ಭಯ ಆತಂಕದ ವಿಷಣ್ಣತೆಯಲ್ಲಿಯೇ ಕೊನೆಗೊಳ್ಳುತ್ತದೆ. ಈ ಕವನವು ಕೂಡ ನಾನು ಆರಂಭದಲ್ಲಿ ಹೇಳಿದಂತೆ ಒಳಿತಿಗಾಗಿ ಹಂಬಲಿಸುವ ಹಾಗೂ ಕೆಡುಕಿನ ಕುರಿತಾಗಿ ಆತಂಕಪಡುವ ಏರ್ಯರ ಕವಿಪ್ರಜ್ಞೆಗೆ ಸಾಕ್ಷಿಯಾಗಿದೆ.

ಪೊಳಲಿ ಶಂಕರನಾರಾಯಣ ಶಾಸ್ತ್ರಿಯವರ ಕುರಿತು ಹಾಗೆಯೇ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ ಇಪ್ಪತೈದನೆಯ ವರ್ಧಂತಿಯ ಸಂದರ್ಭದಲ್ಲಿ ಬರೆದ ಗೀತೆ .-ಇವು ವ್ಯಕ್ತಿಚಿತ್ರಗಳನ್ನು ಕಟ್ಟಿಕೊಡುವುದರ ಜತೆಗೆ ಭಾವಪೂರ್ಣ ಋಣಭಾರವನ್ನು ನಾಡಿನ ಪರವಾಗಿ ಅರ್ಪಿಸುವಂತೆ ಮೂಡಿಬಂದಿದೆ. ಗಾಂಧಿ ಶತಮಾನೋತ್ಸವದ ಹೊತ್ತಿಗೆ ಬರೆದ ಗಾಂಧಿಗಾಥಾ,ಕೂಡ ಈ ಗುಂಪಿಗೆ ಸೇರುತ್ತದೆ. ‘ಹಾಡೊಂದ ಹಾಡಬೇಕು’ ,’ವಿಶ್ವಬಂಧು’ –ಈ ಕವನಗಳಲ್ಲಿ ಕನಸುಗಾರ ಕವಿ ನಾಡಿನ ಭವ್ಯ ಭವಿತವ್ಯಕ್ಕೆ ಹಂಬಲಿಸುವುದನ್ನು ಕಾಣಬಹುದು.

ಅನಾಮಧೇಯ ತಂಗಿಯೊಬ್ಬಳ ಕುರಿತು ಬರೆದ ಕವನದಲ್ಲಿ ರಕ್ತಸಂಬಂಧವನ್ನು ಮೀರಿದ ಅಮಲ ಸ್ನೇಹದ ಭಾವ ಗಂಡು-ಮತ್ತು ಹೆಣ್ಣುಜೀವಗಳ ಮಧ್ಯೆ ಇದ್ದು ಎರಡು ಜೀವಗಳನ್ನೂ ಪರಸ್ಪರ ಪೊರೆಯಬಹುದು ಎನ್ನುವುದನ್ನು ಸ್ವಾನುಭವದ ನೆಲೆಯಲ್ಲಿ ನಿರೂಪಿಸಿದ್ದಾರೆ.’ಹೋಗುವೆನು ನಾ ‘ ಎಂದು ಕುವೆಂಪು ಮಲೆನಾಡಿನ ಸಿರಿಯನ್ನು ನೆನೆದು ಹಂಬಲಿಸಿ ಬರೆದಿದ್ದರೆ ಏರ್ಯರು ಅದಕ್ಕೆ ಸಂವಾದಿಯಾದ ಆಶಯವನ್ನು ‘ಹೇಗೆ ಬರಲಿ ಹೇಳು’ ಎನ್ನುತ್ತ ತಮ್ಮ ಹುಟ್ಟೂರಿನ ಬಂಧವನ್ನು ಕಡಿದೊಗೆದು ಬರಲಾಗದ ಸ್ಥಿತಿಯನ್ನು ಸಕಾರಣ ನಿವೇದಿಸಿಕೊಂಡಿದ್ದಾರೆ.

ಸಂಕಲನದಲ್ಲಿ ಸಾಂಸಾರಿಕ ಗೀತೆಗಳ ಸಂಖ್ಯೆ ಕಡಿಮೆ..’ನಲ್ಲೆಗೆ‘ ‘ಮನೆಯೊಡತಿ’, ‘ಮೊದಲ ರಾತ್ರಿಯ ಎದೆಯ ಮಾತು’ ‘ನನ್ನಾಕೆಗೆ’- ಹೀಗೆ ಕೆಲವೇ ಕವನಗಳು. ಇವುಗಳಲ್ಲಿ ಮೊದಲ ಎರಡು ಕವನಗಳು ರಮ್ಯಚಿತ್ರಗಳಾಗಿ ಗಮನಸೆಳೆದರೆ ನಂತರದ ಎರಡು ಕವನಗಳು ಬಾಳಿನ ಸತ್ವವನ್ನು ಮೈದುಂಬಿಕೊಂಡಿವೆ. ಕುತೂಹಲದ ಮಾತೆಂದರೆ ಮೊದಲರಾತ್ರಿಯ ಎದೆಯಮಾತು ವರನದ್ದಾಗಿರದೆ ವಧುವಿನದ್ದಾಗಿದೆ.ಬೇಂದ್ರೆಯವರು ‘ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು’ ಎಂದು ಸತಿಯ ಮಾತುಗಳಲ್ಲ ನಿರೂಪಿಸಿದ್ದನ್ನು ಇಲ್ಲಿ ನೆನೆಯ ಬಹುದು. ಇದಕ್ಕೆ ಪೂರಕವಾಗಿ 1970ರಲ್ಲಿ ತಮ್ಮ ಮಡದಿಯ ಕುರಿತು ಬರೆದಿರುವ ‘ನನ್ನಾಕೆಗೆ’ ಎಂಬ ಕವನವು ದಾಂಪತ್ಯ ಮೀಮಾಂಸೆಯನ್ನು ಅತ್ಯಂತ ಹೃದ್ಯವಾಗಿ ಮುಂದಿಡುತ್ತದೆ. ‘ಆನಂದಿ ನೀನು ಆನಂದ ತಂದೆ ನನಗೆಂದೆ ಅಲ್ಲ ಮನೆಮಂದಿಗೆಲ್ಲ/ ಹೊಂದು ಹೊಂದಾಣಿಕೆಯ ಸಂಸಾರವಿದರೊಳಗೆ ನೀನಾದೆ ಬೆಸುಗೆ ಬೆಲ್ಲ/ ಎಂಬ ಪಕ್ವವಾದ ಮುಕ್ತಾಯದ ಮಾತುಗಳಲ್ಲಿ ಕೃತಜ್ಞತೆಯ ಭಾರದಿಂದ ತೊನೆಯುತ್ತದೆ.

ಕವನ ಸಂಕಲನದ ಕೊನೆಯಲ್ಲಿ ಇರುವ ನಾಗಾರಾಧನೆ ಮತ್ತು ಕಂಬಳದ ಕುರಿತಾದ ಕವನಗಳು ತುಳುನಾಡಿನ ಸಾಂಸ್ಕøತಿಕ ವಿವರಗಳನ್ನು ನೀಡುವ ರಚನೆಗಳು. ಇವುಗಳಿಗೆ ಟಿಪ್ಪಣಿಯನ್ನು, ಪದವಿವರಣೆಯನ್ನು ನೀಡಿದ್ದಾರೆ . ತುಳುನಾಡಿನ ಸಾಂಸ್ಕೃತಿಕ ಅಸ್ಮಿತೆಯ ಬಗ್ಗೆ ಕವಿಗೆ ಅಭಿಮಾನವಿದೆ..ನಾಗರಪಂಚಮಿ ತುಳುನಾಡಿಗೆ ವಿಶಿಷ್ಟವಾದ ಪ್ರಕೃತಿಯ ಆರಾಧನೆ ಎಂಬ ನೆಲೆಯಲ್ಲಿ ಕವನವು ನಿರೂಪಿತವಾಗಿದ್ದು ಅದು ಭಾವನಾ ನಿಷ್ಠವೂ ಆಗಿದೆ. ಕಂಬಳದ ಕುರಿತಾದ ಕವನದಲ್ಲಿ ಆಚರಣೆಯ ವಿವರಗಳು ಅನುಕ್ರಮವಾಗಿದ್ದು ವೀಕ್ಷಕ ವಿವರಣೆಯ ಉತ್ಸಾಹದಲ್ಲಿ ಸಾಗಿದೆ. ಇಂದಿನ ದಿನಗಳಲ್ಲಿ ನಾವು ಕಾಣುವ ನೇರಪ್ರಸಾರದ ಅನುಭವವನ್ನು ಈ ಕವನ ಕೊಡುತ್ತದೆ.
ಹೆಚ್ಚು ಬರೆದವನಲ್ಲ ಎಂದು ತಮ್ಮಗುರು ಸೇಡಿಯಾಪು ಅವರ ಮಾತಿನಂತೆ ಏರ್ಯರು ಕೂಡ ಹೆಚ್ಚು ಬರೆಯಲಿಲ್ಲ. ಆದರೆ ಸಂಕಲನದ ಕವನಗಳು ಕವಿಯ ಸೂಕ್ಷ್ಮಸಂವೇದನೆಯನ್ನು,ಸಮಾಜದ ಆಗುಹೋಗುಗಳಿಗೆ ಮಿಡಿಯುವ ಹೃದಯವನ್ನು ಸಮರ್ಥವಾಗಿ ಪರಿಚಯಿಸುತ್ತವೆ.ಹಾಗೂ ಕವಿಮಿಡಿತದ ಸಾಕ್ಷಿಗಳಾಗಿ ನಿಲ್ಲುತ್ತವೆ.

  • ಡಾ. ಮಹೇಶ್ವರಿ.ಯು

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

7 thoughts on “ಏರ್ಯ ಲಕ್ಷ್ಮೀ ನಾರಾಯಣ ಆಳ್ವರ ಕವನಸಂಕಲನ ‘ಮೊದಲ ಮಳೆ’”

  1. ಡಾ. ಸುಭಾಷ್ ಪಟ್ಟಾಜೆ

    ಏರ್ಯ ಲಕ್ಷ್ಮೀನಾರಾಯಣ ಆಳ್ವರ ಕಾವ್ಯದ ನಾಡಿಮಿಡಿತವನ್ನು ದಾಖಲಿಸಿದ ಲೇಖನ.

  2. ಖಂಡಿಗೆ

    ಹೃದ್ಯ ಬರವಣಿಗೆ. ಕವನದ ವಿಶ್ಲೇಷಣೆ ಏರ್ಯರ ಕವಿಮನಸಿನ ಒಳಗೆ ಕೈಹಿಡಿದು ನಡೆಸುತ್ತದೆ.ಅಭಿನಂದನೆಗಳು

  3. ರಘುರಾಮ ಭಟ್ . ಕೆ.

    ಸಹೃದಯರಾದವರು ಕಾವ್ಯವನ್ನು ‌ಹೇಗೆ ಅವಲೋಕನ ಮಾಡಬೇಕು; ಹೇಗೆ ಮಾಡಬಲ್ಲರು ಎನ್ನುವುದಕ್ಕೆ ಉತ್ತರ ಈ ಕಾವ್ಯಾವಲೋಕನದಲ್ಲಿ ನಿಖರವಾಗಿ ಬಂದಿದೆ.‌ ರಚನಾತ್ಮಕ ವಿಮರ್ಶೆ ಎಂದರೆ ಹೇಗಿರಬೇಕು ಎನ್ನುವುದಕ್ಕೆ ಅತ್ಯುತ್ತಮ ನಿದರ್ಶನ ಮಹೇಶ್ವರಿ ಅಕ್ಕನವರ ಈ ಸುಂದರ ಕಾವ್ಯಾವಲೋಕನ. ನಿಮ್ಮ ಈ ಅವಲೋಕನದ ಮಧ್ಯೆ ಯಥೋಚಿತವಾಗಿ ನೀವು ಉದಾಹರಿಸುವ ಕುವೆಂಪು, ಜಿ. ಪಿ. ರಾಜರತ್ನಂ, ಅಡಿಗರೇ ಮೊದಲಾದ ಕನ್ನಡದ ಹಿರಿಯ ಕವಿಗಳ ಉದ್ಧರಣೆಗಳು ಸಹೃದಯರ ಕಾವ್ಯಾಸಕ್ತರನ್ನು ಮನೋಜ್ಞಗೊಳಿಸುತ್ತವೆ. ಒಟ್ಟಿನಲ್ಲಿ ಈ ಒಂದು ಅವಲೋಕನ ನನಗೆ ಬಲು ಸಂತೃಪ್ತಿಯನ್ನು ನೀಡಿತು. ಅವರಿಗೆ ಹೃತ್ಪೂರ್ವಕ‌ ಧನ್ಯವಾದಗಳು.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter