ಸಮಕಾಲೀನ ಸಮಾಜದ ಸ್ತ್ರೀಯ ದಿನಚರಿಯ ಭಾಗವಾಗಿ ಹುಟ್ಟಿ, ಮೀಟಿ ಹೋಗುವಂತಹ ಹಲವು ಸಂಚಾರಿ ಭಾವಗಳನ್ನು, ಮಾತಿನಲ್ಲಿ ಹೇಳಲಾಗದ ವಾಸ್ತವ ಸಂಗತಿಗಳನ್ನು, ಜನರ ನಡವಳಿಕೆಗಳನ್ನು, ಪ್ರಕೃತಿಯಲ್ಲಿ ಕಂಡ ವಿಸ್ಮಯಗಳನ್ನು ಹಾಗೂ ಅರಿವಿಗೆ ದಕ್ಕಿದ ಸಂಗತಿಗಳನ್ನು ಭಿನ್ನ ಬಗೆಯಲ್ಲಿ ಕವಿತೆಯ ರೂಪದಲ್ಲಿ ಸೂಕ್ಷ್ಮವಾಗಿ ಸೆರೆಹಿಡಿದು ಸಂಕಲಿಸುವುದು ಆಯಾ ಕಾಲಘಟ್ಟದ ಸಾಹಿತ್ಯಕ ಅಗತ್ಯತೆಗಳಲ್ಲಿ ಒಂದಾಗಿದೆ. ಇದಕ್ಕೆ ಪೂರಕವಾಗಿ ಹೊರಬಂದ ಕವಿತೆಗಳ ಸಂಕಲನ ‘ಮಾತು ಮೀಟಿ ಹೋಗುವ ಹೊತ್ತು’. ಕವಿತೆಗಾಗಿ ಕವಿ ಕಾಯುವ, ಕವಿಯೇ ಕವಿತೆಯಾಗುವ, ಕವಿಯ ತೆಕ್ಕೆಗೆ ಕವಿತೆ ಸಿಗುವ, ಕವಿತೆ ಕಂಗಾಲಾಗುವ, ದಿಗಿಲಾಗುವ ಸಂದರ್ಭಗಳಲ್ಲಿ ಹುಟ್ಟಿಕೊಂಡ ಕವಿತೆಗಳು ಇಲ್ಲಿವೆ. ‘ಆದರೂ ನಾವು ಮರವಾಗಿದ್ದೇವೆ’ ಕವಿತೆಯಲ್ಲಿ ಭಾವನೆಗಳ ಮೊಳಕೆಗಳು ಕಣ್ಣೊಡೆಯುತ್ತವೆ, ಕುಡಿ ನೆಗೆದು ಕೊಡಿಗೇರುವ ಆಟವಾಡುತ್ತವೆ. ‘ಹರವಿಕೊಂಡಷ್ಟೂ ಹಬ್ಬುವ ಭಾವಗಳು ಗಿಡಗಂಟಿ ಎಲೆಗಳ ರೂಪದಲ್ಲಿ ಕುಲು ಕುಲು ನಗುವ ಸದ್ದು ಮಾಡುತ್ತವೆ. ಹೆಣ್ಣಿನ ಬದುಕಿನ ವಿವಿಧ ಸ್ಥರಗಳ ಸಂವೇದನೆಯನ್ನು ಸ್ಫುರಿಸುತ್ತ ಲವಲವಿಕೆಯಿಂದ ಸಾಗುವ ಕವಿತೆಯು ಸುದೀರ್ಘ ಎಂಬಂತೆ ಅನಿಸಿದರೂ ಕೊನೆಯಲ್ಲಿ ”ಆದರೂ ನಾವು ಮರವಾಗಿದ್ದೇವೆ; ಹಾಗಂತ ಎಲ್ಲರೂ ಅಂದುಕೊಂಡಿದ್ದಾರೆ’ ಎಂಬ ಸಾಲು ಕವಿತೆಯನ್ನು ಸಾರ್ವತ್ರಿಕಗೊಳಿಸಿಬಿಡುತ್ತದೆ. ಪರಿಸ್ಥಿತಿಯ ಪ್ರಭಾವಕ್ಕೆ ಸಿಲುಕಿದ ಹೆಣ್ಣಿನ ಭಾವ ಪ್ರಪಂಚವೂ ನಿಚ್ಚಳವಾಗಿ ಕಣ್ಣ ಮುಂದೆ ಬರುತ್ತದೆ. ಕೇವಲ ಕಲ್ಪನೆಯಲ್ಲಿ ತೇಲಾಡದೆ ಬದುಕಿಗೆ ಹತ್ತಿರವಾಗುವ ಅನೇಕ ಸಂಗತಿಗಳು ಆಪ್ತ ನಡಿಗೆಯೊಂದಿಗೆ ಈ ಸಂಕಲದುದ್ದಕ್ಕೂ ಕಾಣಸಿಗುವುವು.
ಈ ಕೃತಿಯ ಕವಿ ಸ್ಮಿತಾ ಅಮೃತ್ ರಾಜ್ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಹಸಿರು ಬನದ ನಡುವೆ ಇರುವ ಸಂಪಾಜೆಯವರು. ಹಳ್ಳಿಯ ಬದುಕಿನ ಚಿತ್ರಣದೊಂದಿಗೆ ಮನುಷ್ಯ ಸಹಜವಾದ ಭಾವಗಳನ್ನು ಬೆಸೆಯುವಲ್ಲಿ ಅವರು ಸಿದ್ಧಹಸ್ತರು ಎಂಬುದು ಅವರ ಎಲ್ಲ ಪುಸ್ತಕಗಳನ್ನು ಓದಿದಾಗ ಸ್ಪಷ್ಟವಾಗುತ್ತದೆ. ಸರಳ ನಿರೂಪಣೆಯೊಂದಿಗೆ ವಿಷಯಗಳನ್ನು ಪೋಣಿಸುವ ಇವರ ಕವಿ ಪ್ರತಿಭೆ ವಿಶೇಷವೆನಿಸುತ್ತದೆ. ಪ್ರಬಂಧಕಾರರಾಗಿ, ಅಂಕಣಕಾರರಾಗಿ, ಕತೆಗಾರರಾಗಿಯೂ ಈಗಾಗಲೇ ಅವರು ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ.
ಸಂಕಲನದ ಹೆಚ್ಚಿನ ಕವಿತೆಗಳು ರೂಪಕಗಳ ಮೂಲಕವೇ ಬದುಕಿನ ಸ್ವರೂಪವನ್ನು ಸೂಕ್ಷ್ಮವಾಗಿ ಹೇಳುತ್ತವೆ. ಸಂಚಾರಿ ಭಾವ ಪ್ರಪಂಚದಲ್ಲಿಯೂ ನಿರಾಳವಾಗಿ ಸಂಚರಿಸಿವೆ. ‘ಎಲ್ಲಾ ಅಮ್ಮಂದಿರೂ ಗುಲಾಬಿಯ ತದ್ರೂಪ’ವಾಗಿ ಇಲ್ಲಿನ ಕವಿತೆಗೆ ಕಾಣುತ್ತದೆ. (ಅರಳು ಗುಲಾಬಿಯ ಹಿಂದೆ)
'ಅತ್ತಷ್ಟು ಬಾರಿ ನಗಲಿಲ್ಲ ಆದರೂ ಅತ್ತದ್ದು ಸುದ್ದಿಯಾಗಲೇ ಇಲ್ಲ ನಕ್ಕಿದ್ದು.. ಗುಲ್ಲೋ ಗುಲ್ಲು' (ಅರಿಕೆಗಳು)
‘ಇನಿತು ರಂಗನ್ನು ನನಗೂ ಉಳಿಸದೆ ಆ ಸಂಜೆ ಮತ್ತೆ ಬಣ್ಣ ಕಳೆದುಕೊಳ್ಳುತ್ತಿದೆ’ ಎಂಬುದಾಗಿ ಅದು ಹೆಣ್ಣಿನ ಭಾವನೆಗಳನ್ನು ಬಿಚ್ಚಿಡುತ್ತದೆ. ‘ಕಾಲ ಬದಲಾಗಿದೆ ಭಾವಗಳು ಬದಲಾಗಬಲ್ಲವೇ?’ (ಅಮ್ಮ ಹೇಳುತ್ತಾಳೆ) ಇದು ಕವಿತೆ ಕೇಳುವ ಪ್ರಶ್ನೆ. ಯಾವುದೋ ಒಂದು ಅದೃಶ್ಯ ಗಳಿಗೆಯಲ್ಲಿ ಮನುಷ್ಯ ಮನುಷ್ಯರ ನಡುವೆ ನುಸುಳಿಕೊಂಡಿರುವ ಗೆರೆಯ ಮೇಲೆ ತೀರಾ ನಿಗಾ ಇಟ್ಟು ಅಳಿಸಲು ಇಲ್ಲಿನ ಕವಿತೆ ಪ್ರಯತ್ನಿಸಿದೆ. ಗೆರೆಯ ಜಾಗದಲ್ಲಿ ಕನ್ನಡಿಯನ್ನು ತೂಗಿಬಿಡುವ ಆತ್ಮಾವಲೋಕನ ‘ಗೆರೆ’ ಕವಿತೆಯನ್ನು ಗೆಲ್ಲಿಸಿದೆ.
"ಕಾಲಿಲ್ಲದ ಕೈಯಿಲ್ಲದ ಕವಿತೆ ಹೇಗಿದ್ದರೇನಂತೆ? ನನ್ನೊಡಲ ಕುಡಿಗೆ ನನ್ನದೇ ಪಡಿಯಚ್ಚು ತಾನೇ? ಇಲ್ಲೇ ಗಿರಕಿಯ ಹೊಡೆಯುತ್ತಾ ಹಾಡಿಕೊಂಡೇ ಇರಲಿ ಲಾಲಿ ಬೇಜಾರೇನಿಲ್ಲ "ಅಕಸ್ಮಾತ್ ರೆಕ್ಕೆ ಹುಟ್ಟಿಯೋ ರೆಕ್ಕೆ ಕಟ್ಟಿಯೋ ದೂರ ಹಾರುತ್ತ ಸಾಗಿದರೆ ಅದು ಅದಕ್ಕೆ ದಕ್ಕಿದ ಭಾಗ್ಯ ನನ್ನದಲ್ಲ". (ಅದಕ್ಕೆ ದಕ್ಕಿದ ಭಾಗ್ಯ) ಎನ್ನುವ ನಿರಾಳತೆಯಲ್ಲಿ ಹುಟ್ಟಿಕೊಂಡಂತೆ ಇಲ್ಲಿನ ಕವಿತೆಗಳು ಗುಲಾಬಿ ಹೂವು, ಹಳದಿ ಹೂವು, ಕಾಡು ಹೂವು, ಭಾವಿಕಟ್ಟೆ, ಮಿಂಚುಹುಳು, ಚಿಟ್ಟೆ, ಹಕ್ಕಿ, ಬಿಸಿಲು, ಸೋನೆ ಹನಿ, ಸುರಿಮಳೆ, ಕತ್ತಲು, ಬೆಳಕು, ಕಿಟಕಿ ಬಾಗಿಲು, ಕುಕ್ಕರ್, ಸಿಡಿವ ಸಾಸಿವೆ ಒಗ್ಗರಣೆ, ಅಪರೂಪಕ್ಕೊಂದು ನಗರ, ಹಸಿ ಮಣ್ಣು,ಖಾಲಿ ಜಾಗ ಇವೆಲ್ಲವುದರ ಸಮೇತವಾಗಿ ಓದುಗರ ಭಾವಕೋಶಕ್ಕೆ ಲಗ್ಗೆ ಇಡುತ್ತವೆ. ಆಸೆ ಆಶಯಗಳನ್ನು ಹೇಳಿಕೊಳ್ಳುತ್ತಾ, ನಿರಾಶೆ ಹತಾಶೆಗಳನ್ನು ಹಾಯ್ದು ಕೊನೆಯಲ್ಲಿ ಸಮಾಧಾನದ, ಆತ್ಮಾವಲೋಕನದ, ಮುಕ್ತವಾದ ಪ್ರಶ್ನೆ ಮತ್ತು ಸೋಜಿಗದೊಂದಿಗೆ ಕವಿತೆಗಳು ಕೊನೆಗೊಳ್ಳುತ್ತವೆ. ಮಹಿಳೆಯ ಮನೋಪ್ರಪಂಚದ ತುಂಬೆಲ್ಲ ಬೆಳಕು ಹಾಯಿಸುವ ಇಲ್ಲಿನ ಕವಿತೆಗಳಲ್ಲಿ ಕಾಣುವ ಸಂವೇದನೆಗಳು ಸಾರ್ವತ್ರಿಕವಾಗಿ, ಸಾರ್ವಕಾಲಿಕವಾಗಿ ಅನ್ವಯವಾಗುವಂಥವು. ಕವಿಯ ಕೆಲವು ಕವಿತೆಗಳು ಇಂಗ್ಲಿಷ್ ಹಾಗೂ ಮಲಯಾಳಂ ಭಾಷೆಗೆ ಅನುವಾದವಾಗಿರುವುದು ಅವರ ಭಾಷಾತೀತ ಪ್ರಜ್ಞೆಗೂ ಸಾಕ್ಷಿಯಾಗಿದೆ.
ಸಂಕಲನದ ‘ ಮನಸು ಹೂವಾಗಿದೆ’ ಕವಿತೆಯ ಪ್ರಾಯೋಗಿಕ ನೋಟವೊಂದು ಹೀಗಿದೆ –
ಮನಸ್ಸು ಮುದುಡಿದೆ, ಕಲ್ಲಾಗಿದೆ,ಮಡುಗಟ್ಟಿದೆ, ಇಂತಹ ಸಾಮಾನ್ಯ ನುಡಿಗಟ್ಟುಗಳು ಸಮಾಜದಲ್ಲಿ ಕೇಳಿಬರುತ್ತಿರುವ ಈ ಸಂದರ್ಭದಲ್ಲಿ ‘ಮನಸ್ಸು ಹೂವಾಗಿದೆ’ ಎಂಬ ಶೀರ್ಷಿಕೆ ಏನೋ ಕುತೂಹಲ, ಉತ್ಸಾಹ ಮೂಡಿಸುವಂತದ್ದು. ಈ ಕವಿತೆಯಲ್ಲಿ ಮೌನದಲ್ಲಿ ಅರಳಿದ ಅಂಗಳದ ಪುಟ್ಟ ಹೂವಿನ ಮೂಲಕ ಕವಿ ಅನೇಕ ಸಂಗತಿಗಳನ್ನು ತೆರೆದಿಡುತ್ತಾರೆ.
'ಆ ಝಡಿ ಮಳೆಗೆ ಗಿಡ ಮರದ ರೆಂಬೆ ಕೊಂಬೆಗಳೆಲ್ಲಾ ಟೊಂಗೆ ಮುರಿದುಕೊಂಡು ಕಣ್ಣೆದುರೇ ಹರಡಿಕೊಂಡ ಕನಸುಗಳೆಲ್ಲಾ ಚದುರಿ ಚಲ್ಲಾಪಿಲ್ಲಿ'
ಆದಾಗ ‘ಪವಾಡ ಜರುಗಿದಂತೆ ಮನೆಯ ಮುಂದಿನ ಅಂಗಳದ ಪುಟ್ಟ ಹೂ ಮಾತ್ರ ಬಿರು ಮಳೆಗೆ ಒಡ್ಡಿಕೊಳ್ಳುತ್ತಲೇ ಸುಖಿಸುತ್ತಿದೆ’ಅದರ ‘ಒಂದೇ ಒಂದು ದಳವೂ ಘಾಸಿಗೊಳ್ಳಲಿಲ್ಲ ಯಾಕೆ? ಯಕ್ಷಪ್ರಶ್ನೆಯಾಗಿದೆ’. ಈ ಕವಿತೆಯ ಆರಂಭವು ಪ್ರಸ್ತುತದಲ್ಲಾಗುತ್ತಿರುವ ಪ್ರಕೃತಿ ವಿಕೋಪಗಳಿಂದ ನಿಸರ್ಗದಲ್ಲಿ ಉಂಟಾದ ವಿಷಾದನೀಯ ಬದಲಾವಣೆಗಳ ಭೌತಿಕ ನೋಟದಂತೆ ಕಂಡು ಬಂದರೂ ಮಾನವನ ಗುಣಸ್ವಭಾವವನ್ನು ಇವು ಪ್ರತಿಬಿಂಬಿಸಿವೆ. ಈ ಎರಡು ಮಗ್ಗಲುಗಳು ಇಲ್ಲಿ ಮುಖಾಮುಖಿಯಾಗಿವೆ. ಬಿಸಿಲು ಝಳ, ಝಡಿ ಮಳೆ, ಹಾಳು ಚಳಿ, ಇವು ಧ್ವನಿಸುವ ಸ್ವಭಾವಗಳು ಒಂದು ಬಗೆಯದಾದರೆ ನದಿ,ಕೆರೆ, ಹೂವು ಇವು ಅದರ ವಿರುದ್ಧ ಸ್ವಭಾವಗಳನ್ನು ಬಿಂಬಿಸುತ್ತವೆ. ಪ್ರಕೃತಿಯಲ್ಲಿ ಯಾವುದೂ ನಿಕೃಷ್ಟವಲ್ಲ. ರವಿ ಕಾಣದ್ದು ಕವಿಗೆ ಕಾಣುವುದು. ಎಷ್ಟೆಲ್ಲ ಬಗೆಯ ವೈಪರೀತ್ಯಗಳಲ್ಲೂ ‘ಇಷ್ಟಗಲ ಹೂವು ಅಷ್ಟಗಲ ನಕ್ಕಿದ್ದು, ನಾಲ್ಕು ದಿಕ್ಕಿನಲ್ಲೂ ಪರಿಮಳ ಹುಟ್ಟಿದ್ದು ಈ ಕವಿತೆಗೆ ದಕ್ಕಿದ ಸಂಗತಿ. ಮನಸ್ಸು ಮೃದುವಾದರೂ ಅದಕ್ಕೆ ಕೆಡುಕುಗಳೆಲ್ಲವನ್ನೂ ಕಡೆಗಣಿಸಿ ಎದ್ದು ನಿಲ್ಲುವ ತಾಕತ್ತೂ ಇದೆ ಎಂಬುದನ್ನು ಹೂವಿನಂತೆ ಕವಿತೆಯಲ್ಲಿ ಅರಳಿಸಲಾಗಿದೆ. ಇದು ಕವಿಗೆ ಪವಾಡವೆಂಬಂತೆಯೂ ಕಾಣುತ್ತಿದೆ. ಮನುಷ್ಯ ಸ್ವಭಾವಗಳಲ್ಲಿ ಎಷ್ಟೇ ತಿರುವುಮುರುವುಗಳಾದರೂ ಶುದ್ಧ ಹೂ ಹೃದಯವು ಬಾಗದೇ ತನ್ನಷ್ಟಕ್ಕೆ ತಾನು ಕರ್ತವ್ಯನಿರತವಾಗಿದೆ ಎಂಬುದು ಕವಿಗೇ ಯಕ್ಷಪ್ರಶ್ನೆಯಾಗಿದೆ! ತರ್ಕಕ್ಕೆ ನಿಲುಕದ ಪ್ರಶ್ನೆಯಾಗಿದೆ. ಅದಕ್ಕಾಗಿ ಸಹೃದಯರು ತಮ್ಮೊಳಗನ್ನೇ ಒಮ್ಮೆ ನೋಡಿಕೊಳ್ಳಲು ಸೂಕ್ಷ್ಮವಾಗಿ ಹೇಳಿದೆ. ‘ತರ್ಕಕ್ಕೆ ನಿಲುಕದ ಹೂವೊಂದು ತನ್ನಷ್ಟಕ್ಕೆ ತೊನೆದಾಡುತ್ತ’ ಕವಿತೆಯನ್ನು ಎತ್ತಿಹಿಡಿದಿದೆ.
ಇಲ್ಲಿನ ಪ್ರತಿಯೊಂದು ಕವಿತೆಯೂ ಪ್ರಾಯೋಗಿಕವಾಗಿ ವಿಮರ್ಶಿಸಬೇಕಾದಂಥವು.
'ದಿಕ್ಕಾಗಿದ್ದ ನದಿ ತಾನೇ ದಿಕ್ಕು ಬದಲಿಸಿ ಕೆಂಪಗೆ ಹರಿಯುವಾಗ ದಿಕ್ಕು ಕಾಣದೆ ದಿಕೆಟ್ಟು ನಾನು ದಿಕ್ಕಿಗೆ ಮುಖ ಮಾಡುವುದ ನಿಲ್ಲಿಸಿದ್ದೇನೆ. ಮುಖವಾಡ ಹಾಕಲು ನದಿಗೂ ಸಾಧ್ಯವಾ..? ದಿಗಿಲಾಗುತ್ತಿದೆ ನನಗೆ'.(ನದಿ ದಿಕ್ಕು ಬದಲಿಸಿದೆ).
ಎಲ್ಲರ ಬಳಿಯೂ ಎಲ್ಲರೊಳಗೂ ಇರಬಹುದಾದ ಖಾಲಿ ಜಾಗವನ್ನು ತೋರಿಸಿ ಕೊಡುವ ‘ಒಂದು ಖಾಲಿ ಜಾಗ ‘ ಕವಿತೆಯು ನಿರಾಕಾರ ಗಾಳಿಯು ಹೊತ್ತು ತರುವ ಅಪರೂಪದ ಪರಿಮಳ, ಕಂಡದ್ದು ಕಾಣದ್ದು ಎಂದಿಗೂ ದೊರಕದ್ದು ಎಲ್ಲವನ್ನೂ ತುಂಬಿಕೊಳ್ಳುತ್ತಲೇ ಇದ್ದರೂ ಆ ಜಾಗ ಖಾಲಿ ಖಾಲಿಯಾಗಿಯೇ ಉಳಿದಿದೆ, ಅದು ಬಹುಶಃ ನಿಮ್ಮದೇ ಇರಬಹುದೇನೋ ಎನ್ನುತ್ತದೆ.
ಕವಿ ತನ್ನ ಆವರಣದಲ್ಲಿ ತನ್ಮಯನಾಗಿ ವಿಷಾದ,ಆನಂದವನ್ನು ಕಾಣುತ್ತಾರೆ. ಹಳ್ಳಿಯ ಬದುಕಿಗಿರುವುದು ಸೀಮಿತ ಜಗತ್ತು ಎನ್ನುವುದನ್ನು ಮತ್ತೆ ಮತ್ತೆ ಎತ್ತಿ ಹೇಳಿದ್ದಾರೆ. ‘ಬಾವಿಕಟ್ಟೆ’ಯು ‘ನೆಟ್ಟ ದಿಟ್ಟಿಗೆ ಒಂದು ಹಿಡಿ ಆಗಸ ಬಿಟ್ಟರೆ ಆಕೆ (ನೀರು ಸೇದುವವಳು) ತರುವ ಕೊಡದೊಂದಿಗಷ್ಟೇ ಹೇಗೋ ಬೆಳೆದದ್ದು ನಂಟು’ ಎಂಬ ವಿಷಾದ ಆವರಿಸುವಾಗಲೇ ಡುಬುಕಿ ಹೊಡೆಯುವ ಕೊಡದ ಕೂಡ ಸೇರಿ ಜಗತ್ತನ್ನು ನೋಡುವ ಕಾತರಕ್ಕೆ ಮೈತುಂಬಾ ಅಲೆ’ ಎಬ್ಬಿಸಿಬಿಡುತ್ತದೆ. ಒಟ್ಟಿನಲ್ಲಿ ಅವ್ಯಕ್ತ ಅನುಭವದ ತೆಕ್ಕೆಯೊಳಗಿನಿಂದಲೇ ಮಾನವ ಸಂವೇದನೆಯನ್ನು ಸೂಕ್ಷ್ಮವಾಗಿ ಪ್ರಚೋದಿಸುವ ಇಲ್ಲಿನ ಕವಿತೆಗಳು ಪ್ರಸ್ತುತ ಸಂದರ್ಭದಲ್ಲಿ ಕವಿತೆಯ ಓದಿನ ಪರಮಾನಂದವನ್ನು ನೀಡುವುದು. ‘ಮಾತು ಮೀಟಿ ಹೋಗುವ ಹೊತ್ತು’ ಇದು ಪ್ರಸ್ತುತದ ಸಂದರ್ಭದ ಒಂದು ಉತ್ತಮ ಕವಿತಾ ಸಂಕಲನ ಎನ್ನುವುದರಲ್ಲಿ ಸಂಶಯವಿಲ್ಲ.
*****
2 thoughts on “‘ಮಾತು ಮೀಟಿ ಹೋಗುವ ಹೊತ್ತ’ನ್ನು ಹಿಡಿದಷ್ಟೂ ಹಿಗ್ಗು.”
ಧನ್ಯವಾದಗಳು
ವಿಮರ್ಶೆಯ ಮೂಲಕ ಕವಿತೆಯನ್ನು ಇನ್ನಷ್ಟು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿದೆ.ಈರ್ವರಿಗೂ ವಂದನೆಗಳು.