ಒಂದು ಊರಿನಲ್ಲಿ ದಯಾಳವೂ ಧರ್ಮಿಷ್ಠನೂ ಆದ ಗುಣಸೇನ ಎಂಬ ಶ್ರೀಮಂತ ವ್ಯಾಪಾರಿ ಇದ್ದನು. ಆದರೆ ಅವನ ಹೆಂಡತಿ ಅವನಿಗೆ ತದ್ವಿರುದ್ಧವಾಗಿ ಇದ್ದಳು. ಅವಳ ಸ್ವಭಾವ,ನಡತೆ ಸರಿಯಾಗಿರಲಿಲ್ಲ. ಇವರಿಗೆ ರತ್ನಶಿಖೆ ಎಂಬ ಮಗಳು ಇದ್ದಳು. ನೂಲಿನಂತೆ ಸೀರೆ ತಾಯಿಯಂತೆ ಮಗಳು , ಎಂಬಂತೆ ರತ್ನಶಿಖೆಯು ತಾಯಿಯ ಹಾದಿಯನ್ನೇ ಹಿಡದಿದ್ದಳು. ಗುಣಸೇನನಿಗೆ ಹೆಂಡತಿ ಮತ್ತು ಮಗಳ ಸ್ವಭಾವ ತಿಳಿದಿತ್ತು. ತಂದೆಯಾದ ತನ್ನ ಕರ್ತವ್ಯವನ್ನು ಪೂರೈಸಲು ಮುಂದಾಗಿ ರತ್ನಶಿಖೆಗೆ ಮದುವೆಯನ್ನು ಮಾಡಿದನು. ಮದುವೆಯಾದ ಬಳಿಕವಾದರೂ ಮಗಳು ಸುಧಾರಿಸಬಹುದೆಂಬ ಸಣ್ಣ ನಂಬಿಕೆ ತಂದೆಯ ಮನದಲ್ಲಿತ್ತು. ಆದರೆ ಮದುವೆಯಾದ ನಂತರವೂ ರತ್ನಶಿಖೆ ಹಳೆಯ ಚಾಳಿಯನ್ನು ಬಿಡಲಿಲ್ಲ. ಕೆಲವು ದಿನಗಳು ಉರುಳಿದವು. ಗುಣಸೇನನ ಸೇವಕನೊಬ್ಬ ರತ್ನಶಿಖೆಯ ಮನೆಗೆ ಬಂದು ಅವಳನ್ನು ಸಂಧಿಸಿದನು. ಆ ಸೇವಕ ಅವಳ ಹಿಂದಿನ ಪ್ರಿಯತಮನಾಗಿದ್ದನು. ಗಂಡನ ಮನೆಯಲ್ಲಿ ತನ್ನ ಹಳೆಯ ಸ್ನೇಹಿತನನ್ನು ಭೇಟಿಯಾಗುವುದು ಅವಳಿಗೆ ಸ್ವಲ್ಪವೂ ಸಹಿಸಲಾಗಲಿಲ್ಲ. ಅವಳು ಹೊರಟು ಹೋಗು ಎಂದರೂ ಅವನು ಹೋಗಲಿಲ್ಲ. ಅಲ್ಲಿಂದ ಅವನು ಕದಲಲಿಲ್ಲವೆಂದಾಗ ಬೇಸತ್ತ ರತ್ನಶಿಖೆ ಹಾಲಿನಲ್ಲಿ ತೊಟ್ಟು ವಿಷ ಹಾಕಿ ಅವನಿಗೆ ಕುಡಿಯಲು ಕೊಟ್ಟಳು . ಹಾಲನ್ನು ಕುಡಿದೊಡನೆ ಸೇವಕ ಸತ್ತು ಬಿದ್ದನು. ಸ್ವಲ್ಪ ಹೊತ್ತಿನಲ್ಲಿಯೇ ರತ್ನಶಿಖೆಯ ಗಂಡ ಮನೆಗೆ ಹಿಂತಿರುಗಿದನು. ಅವಳ ಕೈಕಾಲುಗಳು ಹೆದರಿಕೆಯಿಂದ ನಡಗುತ್ತಿದ್ದವು, ಆದರೂ ಅದನ್ನು ತೋರಿಗೊಡದೇ ಗಂಡನಿಂದ ಸೇವಕನ ಹೆಣವನ್ನು ಮರೆಮಾಚಿದಳು. ರಾತ್ರಿಯಾಯ್ತು. ರತ್ನ ಶಿಖೆಯು ಗಂಡ ನಿದ್ರೆಯಲ್ಲಿ ಇರಬೇಕಾದರೆ ; "ಅಯ್ಯೋ ನನ್ನ ಗಂಡ ನನ್ನ ತಂದೆಯ ಸೇವಕನನ್ನು ಕೊಂದುಬಿಟ್ಟಿದ್ದಾನೆ " ಎಂದು ಕೂಗಾಡುತ್ತಾ ಅಳುತ್ತಾ ಕುಳಿತುಬಿಟ್ಟಳು. ಅವಳ ಕಿರಚಾಟ ಕೇಳಿ ನೆರೆಹೊರೆಯವರೆಲ್ಲ ಬಂದು ಬಂದು ನೋಡುತ್ತಿದ್ದರು . ಏನೂ ತಿಳಿಯದ ರತ್ನಶಿಖೆಯ ಗಂಡ ನೆರೆದಿದ್ದ ಜನರಿಗೆ "ಈ ಸಾವು ಹೇಗೆ ಸಂಭವಿಸಿತೆಂದು ತನಗೆ ತಿಳಿಯದು" ಎಂದು ನುಡಿದನು . ರಾಜಭಟರು ಬಂದು ರತ್ನಶಿಖೆಯ ಮಾತನ್ನೇ ನಂಬಿ, ಅವಳ ಗಂಡನನ್ನು ಬಂಧಿಸಿ ರಾಜ್ಯದ ನ್ಯಾಯಾಲಯಕ್ಕೆ ಕರೆದೊಯ್ದರು. ಮಹಾರಾಜನು ಏನು ನಡೆಯಿತೆಂದು ಕೇಳಿದಾಗಲೂ ರತ್ನಶಿಖೆ ತನ್ನ ನೆರೆಹೊರೆಯವರ ಬಳಿ ಹೇಳಿದ್ದದನ್ನೇ ಪುನರುಚ್ಚರಿಸಿದಳು . ಬೇರಾವ ಸಾಕ್ಷಾಧಾರಗಳಿಲ್ಲದ್ದರಿಂದ ರಾಜನು ಅವಳ ಮಾತನ್ನೇ ನಂಬಿದನು. ರತ್ನಶಿಖೆಯ ಗಂಡನೇ ಗುಣಸೇನನ ಸೇವಕನನ್ನು ಕೊಲೆ ಮಾಡಿರುವನೆಂದು ಅವನಿಗೆ ಮರಣದಂಡನೆಯನ್ನು ವಿಧಿಸಿದನು. ಛೆ !ನಿರಪರಾಧಿಗೆ ಶಿಕ್ಷೆ ಆಗಬೇಕೆ ? ಎಂದು ತಕ್ಷಣ ರಾಜನ ಆಸ್ಥಾನಕ್ಕೆ ಒಬ್ಬ ಕಳ್ಳನು ಬಂದು ರಾಜನಿಗೆ ನಿಜ ಸಂಗತಿಯನ್ನು ತಿಳಿಸಿದನು. ರತ್ನಶಿಖೆ ಮತ್ತು ಗುಣಸೇನನ ಸೇವಕ ಇವರೊಬ್ಬರ ನಡುವೆ ಜರುಗಿದ ಮಾತುಕತೆಯನ್ನು ಹಿಂದಿನ ಸಂಜೆ ರತ್ನಶಿಖೆಯ ಮನೆಗೆ ಕಳ್ಳತನ ಮಾಡಲೆಂದು ಹೋಗಿದ್ದ ಒಬ್ಬ ಕಳ್ಳ ಕೇಳಿಸಿಕೊಂಡಿದ್ದನು. ಈ ಪ್ರಸಂಗಕ್ಕೆ ಅವನು ಸಾಕ್ಷಿಯಾಗಿದ್ದನು. ಮಹಾರಾಜನು ಸಾಕ್ಷವನ್ನು ಪರಿಶೀಲಿಸಿ ರತ್ನಶಿಖೆಯ ಗಂಡನನ್ನು ಬಿಡುಗಡೆ ಮಾಡಿದನು. ಕಳ್ಳನು ಸಾಕ್ಷಿ ಹೇಳಿದ್ದರೂ ಅವನು ಕಳ್ಳತನಕ್ಕಾಗಿ ಬೇರೆಯವರ ಮನೆಯನ್ನ ಪ್ರವೇಶಿಸಿದ್ದನ್ನು ಗಮನಿಸಿ ಸೆರೆಮನೆಯ ಶಿಕ್ಷೆಯನ್ನು ಅವನಿಗೆ ವಿಧಿಸಿದನು. ರತ್ನಶಿಖೆಗೆ ಮರಣದಂಡನೆಯನ್ನು ವಿಧಿಸಲಾಯಿತು. ಮಾಡಿದ್ದುಣ್ಣೋ ಮಹರಾಯ! ಎನ್ನುವ ಮಾತು ದಿಟವಾಯ್ತು. ಸ್ನೇಹಿತರೆ, ರತ್ನಶಿಖೆ ಅಪರಾಧಿ ಹೌದು. ನಿರಪರಾಧಿಯಾದ ಗಂಡನ ಮೇಲೆ ತಪ್ಪು ಹೊರೆಸಿದ್ದು , ಶಿಕ್ಷೆಯಾಗುವಂತೆ ಮಾಡಿದ್ದು ಮಹಾಪರಾಧವೇ ಸರಿ. ಮದುವೆಯಾದ ನಂತರ ಹಳೆಯ ಸ್ನೇಹವನ್ನು ಮತ್ತೆ ಕದ್ದು- ಮುಚ್ಚಿ ಮುಂದುವರಿಸಿದ್ದು ತಪ್ಪು. ಅವಳು ನಾಟಕವಾಡಿ ಸುಳ್ಳನ್ನು ಸತ್ಯವೆಂದು ಸ್ಥಾಪಿಸಲು ಹುನ್ನಾರ ಮಾಡಿದ್ದೂ ಸರಿಯಲ್ಲ. ಆದರೆ ಅವಳಿಗೆ ಅರಿವಿಲ್ಲದಂತೆ ಆ ದೈವವು ರತ್ನಶಿಖೆಯ ದುರ್ಬುದ್ಧಿಗಳಿಗೆ ಸಾಕ್ಷ ಒದಗಿಸಿ ಪಾಠ ಕಲಿಸಿತ್ತು. ಹಾಗಾದರೆ ಇದರಲ್ಲಿ ತಂದೆ ಗುಣಸೇನನ ಪಾಲು ಇಲ್ಲವೆ ? ಎಂಬ ಪ್ರಶ್ನೆ ಕಾಡುತ್ತದೆ. ಈ ಎಲ್ಲ ಘಟನೆಗಳಿಗೆ ಮೂಲ ಸೂತ್ರಧಾರ ಗುಣಸೇನನೆಂದರೆ ತಪ್ಪಾಗಲಾರದು. " ಅಪರಾಧಿ ನಾನಲ್ಲ ಅಪರಾಧ ಎನಗಿಲ್ಲ " ಅಂತ ಸುಮ್ಮನಿರುವುದು ಎಷ್ಟರ ಮಟ್ಟಿಗೆ ಸರಿ. ಮಗಳ ದುರ್ನಡತೆ ತಿಳಿದಿದ್ದರೂ ಮದುವೆ ಮಾಡಿಸಿ, ಬೇರೊಬ್ಬರ ಬದುಕಿನಲ್ಲಿ ಬಿರುಗಾಳಿ ಎಬ್ಬಿಸಿದಂತಾಯಿತು. ಇದು ಶಿಕ್ಷಾರ್ಹ. ಪ್ರಸ್ತುತದಲ್ಲಿ ಹೀಗೆ ಮಾಡುವ ಎಷ್ಟೋ ಪಾಲಕರನ್ನ ನಮ್ಮ ಸುತ್ತಮುತ್ತ ಕಾಣುತ್ತೇವೆ. ಮಗ/ ಮಗಳ ವರ್ತನೆ ಗೊತ್ತಿದ್ದರೂ ಮುಚ್ಚಿಟ್ಟು ಮದುವೆ ಮಾಡುತ್ತಾರೆ. ಇದರಿಂದ ಆಗುವ ಅನರ್ಥಗಳು, ಅನಾಹುತಗಳು ಅನೇಕ. ಮನಸ್ತಾಪ, ಆಸಿಡ್ ದಾಳಿ, ವಿವಾಹವಿಚ್ಛೇದನ, ಅಪಹರಣ, ಆತ್ಮಹತ್ಯೆ ಅಥವಾ ಹತ್ಯೆಗೆ ಎಡೆಮಾಡುತ್ತವೆ. ಸೂಚನೆ ಸಿಕ್ಕ ಕೂಡಲೇ ಪಾಲಕರು ಮಕ್ಕಳನ್ನು ತಿದ್ದಲು ಪ್ರಯತ್ನಿಸಬೇಕು. ಮದುವೆ ಮಾಡಿ ಕೈತೊಳೆದುಕೊಳ್ಳಬೇಕೆಂಬ ಮನೋಭಾವ ಬಿಡಬೇಕು. ಸಮಸ್ಯೆಯನ್ನು ಇನ್ನೊಬ್ಬರಿಗೆ ವರ್ಗಾಯಿಸಿದರೆ ಸಾಕು ಎನ್ನುವ ಇಂಗಿತವು ಆ ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸಿದಂತಾಗುತ್ತದೆ. ತಂದೆ ತಾಯಿಯರು ಈ ನಿಟ್ಟಿನಲ್ಲಿ, ನಿಧಾನವಾಗಿ ಯೋಚಿಸಿ ಮುಂದುವರೆಯಬೇಕು. ಮಕ್ಕಳ ಅಭಿಪ್ರಾಯಕ್ಕೆ ಆದ್ಯತೆ ನೀಡಬೇಕಾಗುತ್ತದೆ. 'ಸಾವಿರ ಸುಳ್ಳು ಹೇಳಿಯಾದರೂ ಒಂದು ಮದುವೆ ಮಾಡೀಸಬೇಕೆಂಬ ಮಾತು ' ಇಂದು ಸುತರಾಂ ಪಾಲಿಸಲಾಗದು. ಈಗಿನ ಡಿಜಿಟಲ್ ಯುಗದಲ್ಲಿ ಪಾಲಕರು ಹೊಸ ತಲೆಮಾರಿನವರನ್ನು ಅರ್ಥಮಾಡಿಕೊಳ್ಳುವದು ಬಲು ಕಷ್ಟ. ಜೀವನದ ಬಗೆಗೆ ಸ್ಪಷ್ಟತೆ ಇರುವುದಿಲ್ಲ. ನಿರ್ಧಾರಗಳನ್ನು , ನಿಲುವುಗಳನ್ನ ಬಹಳ ಬೇಗ ಬದಲಾಯಿಸುತ್ತಾರೆ. ಸುತ್ತಲಿನ ವಾತಾವರಣ ಹಾಗಿದೆಯಾ, ಬೆಳೆಸುತ್ತಿರುವ ಪಾಲಕರ ತಪ್ಪೋ, ಸಹವಾಸ ದೋಷವೋ,ನಮ್ಮ ಶಿಕ್ಷಣ ವ್ಯವಸ್ಥೆಯೋ! ನ್ಯೂಕ್ಲಿಯರ್ ಕುಟುಂಬದ ಪರಿಣಾಮವೋ! ಎಲ್ಲಿ ತಪ್ಪಾಗುತ್ತಿದೆ ? ಯೋಚಿಸಬೇಕಲ್ವೆ? * ವಿಭಾ ಪುರೋಹಿತ
ನೀತಿ ಪ್ರತೀತಿ -ವಿಭಾ ಪುರೋಹಿತ ಅಂಕಣlಅನಾಹುತಕ್ಕೆ ಅವಕಾಶ ಕೊಡದಿರಿ !
ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಿ
ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ
ಫೇಸ್ಬುಕ್ ಲಾಗಿನ್ ಬಳಸಿ ಕಮೆಂಟ್ ಮಾಡಿ
ವಿಭಾ ಪುರೋಹಿತ
ವಿಭಾ ಪುರೋಹಿತ
ಸ್ನಾತಕೋತ್ತರ ಪದವಿಧರೆಯಾದ ಇವರು ಕನ್ನಡ ಬೋಧಕಿಯಾಗಿ ಕಾರ್ಯ ನಿರ್ವಹಿಸುತ್ತಿರುವರು.
"ಲೋಹಕಾರ್ಯ " ಎಂಬ ತಾಂತ್ರಿಕ ಮಾಸಿಕ ಪತ್ರಿಕೆಯ ಸಂಪಾದಕೀಯ ಸಹಕಾರ್ಯ ನಿರ್ವಹಿಸಿದ ಅನುಭವ ಇವರಿಗಿದೆ.
ಹವ್ಯಾಸ : ಕವನ ರಚನೆ ಮತ್ತು ಇಂಗ್ಲೀಷ ಭಾಷೆಯಿಂದ ಕನ್ನಡಕ್ಕೆ ಅನುವಾದ ಮಾಡುವುದು.
ಪ್ರಕಟಿತ ಕೃತಿಗಳು: 1. ಮಲ್ಲಿಗೆ ಮತ್ತು ಇತರ ಕವಿತೆಗಳು
2. ದೀಪಹಚ್ಚು
3 . ಕಲ್ಲೆದೆ ಬಿರಿದಾಗ
4. ಬಾಲ್ಕನಿ ಕಂಡ ಕವಿತೆಗಳು
ಕವನ ಸಂಕಲನಗಳು ಧಾರವಾಡದ "ಅವನಿರಸಿಕರಂಗ " ಪ್ರಕಾಶನದಿಂದ ಬೆಳಕು ಕಂಡಿವೆ. ಇನ್ನೂ ಎರಡು ಕೃತಿಗಳನ್ನು ಹೊರತರುವ ತಯಾರಿಯಲ್ಲಿದ್ದಾರೆ.
ಅನುವಾದ : ವೈದ್ಯಕೀಯ ಕ್ಷೇತ್ರಕ್ಕೆ ಸಂಬಧಿಸಿದ ಪಿ.ಹೆಚ್. ಡಿ ಪ್ರಬಂಧವನ್ನು ಇಂಗ್ಲೀಷಿನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ.
ಪ್ರಶಸ್ತಿಗಳು: ಮೊದಲನೆ ಕವನ ಸಂಕಲನಕ್ಕೆ "ಸ್ವಾಮಿ ವಿವೇಕಾನಂದ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ ದೊರಕಿದೆ.(2015 ರಲ್ಲಿ).
* 'ಕಲ್ಲೆದೆ ಬಿರಿದಾಗ ' ಕಾವ್ಯ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ " ರತ್ನಾಕರವರ್ಣಿ ಮುದ್ದಣ ಅನಾಮಿಕ ದತ್ತಿ ಪ್ರಶಸ್ತಿ" ದೊರಕಿದೆ.(2019)
* ಬೆಂಗಳೂರು ನಗರ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ತಿನ " ಕನ್ನಡ ಸೇವಾರತ್ನ " ಪ್ರಶಸ್ತಿ 2020 ರಲ್ಲಿ ಲಭಿಸಿದೆ.
* ಧಾರವಾಡದ 84ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಕವನ ವಾಚನ.
ಅನೇಕ ರಾಜ್ಯಮಟ್ಟದ ಹಾಗೂ ಜಿಲ್ಲಾ ಮಟ್ಟದ ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಪುಣೆ,ಧಾರವಾಡ ಮತ್ತು ಬೆಂಗಳೂರಿನಲ್ಲಿ ಜರುಗಿದ ಕಾವ್ಯಮೇಳದಲ್ಲಿ ಪಾಲ್ಗೊಂಡಿದ್ದಾರೆ.
ವೃತ್ತಿ ಅನುಭವ:
* 4 ವರ್ಷ ಶಿಕ್ಷಕಿಯಾಗಿ ಖಾಸಗಿ ಶಾಲೆ ಯಲ್ಲಿ ಕಾರ್ಯನಿರ್ವಹಿಸಿದ್ದಾರೆ
* ಎರಡೂವರೆ ವರ್ಷ ಹಾಸನ ಆಕಾಶವಾಣಿ F.M. ಕೇಂದ್ರದಲ್ಲಿ ಉದ್ಘೋಷಕಿಯಾಗಿ ಕಾರ್ಯನಿರ್ವಹಿಸಿದ್ದಾರೆ.
* ಬೆಂಗಳೂರು ದೂರದರ್ಶನ ಚಂದನವಾಹಿನಿಯಲ್ಲಿ ವಾರ್ತಾ ವಾಚಕಿಯಾಗಿ ಕೆಲಸ ಮಾಡಿದ ಅನುಭವವಿದೆ.
All Posts
3 thoughts on “ನೀತಿ ಪ್ರತೀತಿ -ವಿಭಾ ಪುರೋಹಿತ ಅಂಕಣlಅನಾಹುತಕ್ಕೆ ಅವಕಾಶ ಕೊಡದಿರಿ !”
🙏🏼 ಸಾಮಾಜಿಕ ಕಳಕಳಿಯ ಚೊಕ್ಕದಾದ ಚಿಕ್ಕದಾದ ಬರಹ ಚೆನ್ನಾಗಿದೆ.
Thank you madm
ಚಂದದ ಬರೆಹ ಅಭಿನಂದನೆಗಳು