ಬದುಕು ಬವಣೆಗೆ ಸ್ವಹತ್ಯೆ ಪರಿಹಾರವೇ?

ವಿಕಸಿತ ಮನಸ್ಸಿನ ನಂಬಿಕೆಯ ಪ್ರಕಾರ ಜೀವಿಯೊಂದರ ಹುಟ್ಟು ಪೂರ್ವ ನಿಧರ್ರಿತ. ಬದುಕು ಸ್ವಾಭಾವಿಕ, ಸಾವು ಸಹಜ ಎಂಬ ಮಾತಿದೆ. ಜೀವನ ಹಾಗೆಯೇ ಸಾಗಿದರೆ ಚೆಂದ. ಆದರೆ ಜೀವಿಯು ತನ್ನ ಕರ್ತವ್ಯ ನಿಭಾಯಿಸುತ್ತ ಅನುಭವದ ಮೂಸೆಯಲ್ಲಿ ಬೆಂದು ಪರಿಪಕ್ವವಾಗುವ ಮುನ್ನವೇ ಸೋತು ಅಂತ್ಯವನ್ನು ಹಂಬಲಿಸಿದರೆ ಅಂಥ ಜೀವಕ್ಕೆ ಬೆಲೆ ಎಲ್ಲಿ? ಮನುಷ್ಯ ಒಂದಲ್ಲ ಒಂದು ವಿಷಮ ಪರಿಸ್ಥಿತಿಯಲ್ಲಿ ಸಾವನ್ನು ಬಯಸುತ್ತಾನೆ. ಆ ಸ್ವಭಾವ ಅವನ ವಿಕಾಸದಿಂದಲೇ ಹಿಂಬಾಲಿಸುತ್ತಿದೆ ಎಂಬ ವಾದವೂ ಇದೆ. ಆದರೂ, ಇಂದಿನ ಕಾಲಘಟ್ಟದಲ್ಲಿ ಸಾವನ್ನು ಅತಿರೇಕದಲ್ಲಿ ಹಂಬಲಿಸುವ, ಶರಣಾಗುವ ಜೀವಗಳು ಹಿಂದೆಂದಿಗಿಂತಲೂ ಅಧಿಕವಾಗುತ್ತಿವೆ ಎನ್ನುತ್ತದೆ ಮನೋವಿಜ್ಞಾನ. ಇದಕ್ಕೆ ಪೂರಕವಾದ ಗೆಳೆಯನೊಬ್ಬನ ದಾರುಣ ಸಾವು ಹೃದಯವನ್ನು ಚುಚ್ಚಿತ್ತು!
ಸುಮಾರು ಎರಡು ದಶಕಗಳ ಗೆಳೆತನ ನನ್ನ ಮತ್ತು ಅವನದು. ಒಮ್ಮೆ ನನ್ನ ವೃತ್ತಿ ಬದಲಾಯಿತು. ಅವನಿಂದ, ವೃತ್ತಿ ಭಾಂಧವರಿಂದ ದೂರವಾಗಿ ನನ್ನ ಕ್ಷೇತ್ರದಲ್ಲಿ ತೊಡಗಿಕೊಂಡೆ. ಆದರೂ ಅವರೊಂದಿಗಿನ ಒಡನಾಟ ಇಂದಿಗೂ ನಿಕಟವಿದೆ. ಆ ಗೆಳೆಯನೂ ಉದ್ಯೋಗ ನಿಮಿತ್ತ ಪಕ್ಕದ ಗ್ರಾಮಕ್ಕೆ ಹೊರಟು ಹೋದ. ಆದರೆ ಕೆಲವು ವರ್ಷಗಳ ನಂತರ ಅವನನ್ನು ಮರದ ಕೊಂಬೆಯಲ್ಲಿ ನೇತಾಡುವ ಶವವಾಗಿ ನೋಡುವ ದುರ್ದೆಶೆ ಒದಗಿತು!
ಅವನು ತನ್ನನ್ನು ತಾನು ಕೊಂದುಕೊಂಡಿದ್ದ! ಕಾರಣ ಅವನ ದೃಷ್ಟಿಯಲ್ಲಿ ಅನೇಕವಿತ್ತು. ಆದರೆ, ಸಾಯಲು ಅವೆಲ್ಲ ವಿಷಯಗಳೇ ಅಲ್ಲ! ಎಂದು ಅವನಿಗೆ ತಿಳಿಸಿ ಹೇಳುವವರು ಯಾರಿದ್ದರು? ಅವನಿಗೆ ಸ್ವಂತ ಸಂಸಾರವಾಗುವ ಮುನ್ನ ರಕ್ತಸಂಬಂಧಿಗಳ ನಡುವೆ ನಡೆಯುತ್ತಿದ್ದ ಗಲಾಟೆ, ಮನಸ್ತಾಪಗಳು. ಆಗಾಗ ಹುಟ್ಟುತ್ತಿದ್ದ ಹಣದ ತೊಂದರೆ, ಮದುವೆಯಾದ ನಂತರ ಮಕ್ಕಳಾಗಲಿಲ್ಲವೆಂಬ ಕೊರಗು. ಅವನ ಮೇಲೆ ನಡೆದ ಮಾರಕ ಅಪಘಾತ. ಇವೆಲ್ಲದರ ನಡುವೆ ಅವನ ಕಣ್ಣಮುಂದೆಯೇ ನಡೆಯುತ್ತಿದ್ದ ಒಡನಾಡಿಗಳ, ನೆರೆಕರೆಯವರ ಏಳಿಗೆ, ಯಶಸ್ಸು. ಅದರಿಂದ ಅವನಲ್ಲುಂಟಾಗುತ್ತಿದ್ದ ಅಸಹನೆ, ಮತ್ಸರ. ಅವುಗಳ ಮುಂದಿನ ರೂಪ ಎಲ್ಲರ, ಎಲ್ಲದರ ಮೇಲೂ ಕೋಪ, ದ್ವೇಷ. ತನ್ನೊಂದಿಗಿದ್ದು ಮೇಲೇರಿದವರು ಎಷ್ಟು ಬೇಗನೇ ನಾಶವಾದರೆ ಅಷ್ಟು ಚೆನ್ನ ಎಂಬ ಭಾವ. ಈ ಎಲ್ಲಾ ಮಾನಸಿಕ ಸಂಘರ್ಷಗಳಿಂದ ಜೀವನದ ಮೇಲೆಯೇ ಜಿಗುಪ್ಸೆ. ಇಂಥ ಸ್ಥಿತಿಯಿಂದ ಹೊರಗೆ ಬರುವುದು ಹೇಗೆ? ಎಂಬ ವಿವೇಚನೆಯನ್ನೇ ತುಳಿಯುವ ಖಿನ್ನತೆಯೂ ಅವನನ್ನು ಆವರಿಸಿಕೊಂಡಿತು ಎಂಬುದು ಮೇಲ್ನೋಟಕ್ಕೆ ಕಾಣುವ ಕಾರಣಗಳು.
ಆತನ ಬದಲಾದ ಸ್ವಭಾವಕ್ಕೆ ಸಣ್ಣ ಉದಾಹರಣೆಯೊಂದಿದೆ. ಒಮ್ಮೆ ಅವನನ್ನೂ ಇತರ ಗೆಳೆಯರನ್ನೂ ಭೇಟಿಯಾಗಲು ಹೋಗಿದ್ದೆ. ನಮ್ಮೆಲ್ಲರ ಮಾತುಕಥೆಗಳು ತೆಂಗಿನ ಮರದ ಕಟ್ಟೆಯೊಂದರಲ್ಲಿ ಕುಳಿತು ರಸವತ್ತಾಗಿ ಸಾಗುತ್ತಿದ್ದವು. ಆಗೊಂದು ಘಟನೆ ನಡೆಯಿತು. ಒಣ ತೆಂಗಿನ ಕಾಯಿಯೊಂದು ಮರದಿಂದ ಉದುರುವುದಕ್ಕೂ ಅದೇ ನೇರಕ್ಕೆ ಕುಳಿತಿದ್ದ ನಾನು ನನ್ನ ಭಂಗಿಯನ್ನು ಬದಲಿಸುವುದಕ್ಕೂ ಸರಿ ಹೋಗಿ ನೆತ್ತಿಗೆ ಬಡಿಯಲಿದ್ದ ಕಾಯಿ ಭುಜಕ್ಕೆ ಅಪ್ಪಳಿಸಿತು. ನೋವಿನಿಂದ ಕಣ್ಣು ಕತ್ತಲಿಟ್ಟಿತು. ಕಾಯಿ ಬಿದ್ದುದನ್ನೂ ನನ್ನ ಚೀರುವಿಕೆಯನ್ನೂ ಕಂಡ ಗೆಳೆಯ, ‘ಹೇ, ನೋವಾಯ್ತನಾ…?’ ಎಂದವನು, ‘ಥೂ! ಅದು ನಿನ್ನ ನೆತ್ತಿಗಾದರೂ ಬೀಳಬಾರದಿತ್ತಾ ಮಾರಾಯಾ…!’ ಎಂದು ನಕ್ಕ.
‘ಛೇ! ನೀನೆಂಥ ಮನುಷ್ಯನೋ…?’ ಎಂದು ಇಬ್ಬಗೆಯ ನೋವಿನಿಂದ ಉದ್ಗರಿಸಿದ್ದೆ. ‘ಮತ್ತಿನ್ನೇನೋ, ನೀನು ಸಾಧಿಸುವುದನ್ನೆಲ್ಲ ಸಾಧಿಸಿಯಾಯಿತು. ಹೆಸರು ಕೀರ್ತಿ ಬಂತು. ಹಣದ ಕೊರತೆಯೂ ಇಲ್ಲ. ಆದರೆ ನಾವೆಲ್ಲ ನೋಡಿಲ್ಲಿ, ಮೊದಲು ಹೇಗಿದ್ದೆವೋ ಹಾಗೆಯೇ ಸಾಯುತ್ತಿದ್ದೇವೆ!’ ಎಂದಿದ್ದ ನಗುತ್ತ. ಆ ಕ್ಷಣ ಅವನ ಮೇಲೆ ಜಿಗುಪ್ಸೆ ಹುಟ್ಟಿತು. ಆದರೂ ಅವನು ಒಳ್ಳೆಯ ವ್ಯಕ್ತಿ. ಅಂಥವನು ನನ್ನ ನೋವಿನಲ್ಲಿ ಹೇಗೆ ಖುಷಿ ಕಂಡ? ಎಂದೆನ್ನಿಸಿತು. ಆದರೆ ಅವನ ಆಗಿನ ಸ್ಥಿತಿ ನೆನೆದು ಅನುಕಂಪ ಮೂಡಿತು. ವಾರದ ನಂತರ ಮತ್ತೆ ಸ್ನೇಹಿತರನ್ನು ಭೇಟಿಯಾಗಲು ಹೋದೆ. ಆವತ್ತು ಅವನಿರಲಿಲ್ಲ. ಇತರರಲ್ಲಿ ಅವನ ಸಮಸ್ಯೆಯ ಬಗ್ಗೆ ಚರ್ಚಿಸಿ ಮನೋವೈದ್ಯರಿಂದ ಚಿಕಿತ್ಸೆ ಕೊಡಿಸೋಣ ಎಂದಿದ್ದೆ.
‘ಮನೋವೈದ್ಯರಿಗೆ ತೋರಿಸಲು ಅವಗೇನು ಹುಚ್ಚಾ ಮಾರಾಯಾ! ಅವನು ಇರುವುದೇ ಹಾಗೆ. ಈಗೀಗಂತೂ ಸಣ್ಣಪುಟ್ಟ ಕಾರಣಕ್ಕೂ ಜಗಳವಾಡುತ್ತಾನೆ. ಯಾರೊಂದಿಷ್ಟು ಹೆಚ್ಚಿಗೆ ಸಂಪಾದಿಸಿದರೂ ಹೊಟ್ಟೆಕಿಚ್ಚು ಪಡುತ್ತಾನೆ. ಬುದ್ಧಿ ಹೇಳಿದರೆ ಕಚ್ಚಲು ಬರುತ್ತಾನೆ. ಆವತ್ತೊಮ್ಮೆ ಯಾರೊಡನೆಯೋ ಜಗಳವಾಡಿ ಚೆನ್ನಾಗಿ ಕುಡಿದು ವಾಹನ ಚಲಾಯಿಸಿ ಆಕ್ಸಿಡೆಂಟ್ ಮಾಡಿಕೊಂಡು ಮೂರು ತಿಂಗಳು ಆಸ್ಪತ್ರೆಯಲ್ಲಿ ನರಳಿದ. ನಾವೆಲ್ಲಾ ಹಣ ಹೊಂದಿಸಿ ಬಿಲ್ಲು ಕಟ್ಟಿ ಡಿಸ್ಚಾರ್ಜ್ ಮಾಡಿ ಮನೆಗೆ ಕಳುಹಿಸಿದೆವು. ಆದರೂ ಅವನು ಬದಲಾಗಲಿಲ್ಲ. ಇನ್ನು ಅವನ ತಂಟೆಯೇ ಬೇಡ ಮಾರಾಯ. ಸತ್ತು ಹೋಗಲಿ ಆಚೆಗೆ!’ ಎಂದು ಗೆಳೆಯರು ಅಂದಾಗ ಚಡಪಡಿಸುತ್ತ ಎದ್ದು ಬಂದಿದ್ದೆ.
ಇಂದು, ಪೋಸ್ಟ್ ಮಾರ್ಟಮ್ ಮುಗಿಸಿ ತಂದ ಅವನ ದೇಹವನ್ನು ಪಡಸಾಲೆಯಲ್ಲಿ ಮಲಗಿಸಲಾಯಿತು. ಅವನ ನಾಲಗೆ ಇನ್ನೂ ಹೊರಚೆಲ್ಲಿದ ಸ್ಥಿತಿಯಲ್ಲಿತ್ತು. ಜೀವನ ಹೋರಾಟದಲ್ಲಿ ಸೋಲುಂಡ ಛಾಯೆ ಮುಖದಲ್ಲಿ ಎದ್ದು ಕಾಣುತ್ತಿತ್ತು. ದುಃಖ ಉಮ್ಮಳಿಸಿತು. ನನ್ನನ್ನು ಕಂಡು ಜೊತೆಗಿದ್ದ ಗೆಳೆಯನ ಕಣ್ಣಾಲಿಗಳೂ ತೇವಗೊಂಡವು. ತಕ್ಷಣ ಕಣ್ಣೊರೆಸಿಕೊಂಡು ಅಲ್ಲಿನ ಪರಿಸ್ಥಿತಿಯತ್ತ ಗಮನಹರಿಸಿದೆ. ಅವನ ಬಂಧು ಬಳಗ, ನೆರೆಕರೆ, ಸಹೋದ್ಯೋಗಿಗಳೆಲ್ಲ ನೆರೆದಿದ್ದರು. ಆತನ ಬಿಡುಗಡೆಗೆ ಹೆಗಲುಕೊಟ್ಟ ಮರದತ್ತ ಹೋದೆ. ಅದರ ತುದಿಯಲ್ಲಿ ನೇಣಿನ ಕುಣಿಕೆಯ ತುಂಡು ಹಗ್ಗವೊಂದು ನೇತಾಡುತ್ತ ಮನಸ್ಸನ್ನು ಚುಚ್ಚುತ್ತಿತ್ತು. ಅಲ್ಲೂ ಅವನ ಸಂಗಡಿಗರ ಕೆಲವು ಗುಂಪುಗಳು ಚರ್ಚಿಸುತ್ತಿದ್ದವು. ಒಂದು ಗುಂಪಿನಲ್ಲೊಬ್ಬ, “ಅವನು ಇದನ್ನೆಲ್ಲ ಮೊದಲೇ ಪ್ಲಾನ್ ಮಾಡಿದ್ದಾಂತ ಕಾಣುತ್ತೆ. ತಿಂಗಳ ಹಿಂದೆ, ‘ಎಂಥ ಜೀವನ ಮಾರಾಯ ಇದು? ಏನೂ ಸುಖವಿಲ್ಲ. ಎಲ್ಲಾದರೂ ಹೋಗಿ ಸಾಯಬೇಕು ಅಂತನ್ನಿಸುತ್ತೆ. ಏನಿದೆ ಅಂತ ಬದುಕಬೇಕು?” ಎನ್ನುತ್ತಿದ್ದ. ‘ಏನೂಂತ ಮಾತಾಡ್ತೀ ಮಾರಾಯಾ? ಹುಚ್ಚ ನಿಂಗೇ! ತಾಪತ್ರಯಗಳು ಯಾರಿಗಿಲ್ಲ? ನಾವೆಲ್ಲ ನಿನಗಿಂತಲೂ ಕಷ್ಟದಲ್ಲಿರುವವರು ಗೊತ್ತುಂಟಾ. ಆದರೂ ಹೋರಾಡುತ್ತಿಲ್ವಾ? ಇನ್ನುಮುಂದೆ ಹಾಗೆಲ್ಲ ಮಾತಾಡಿದರೆ ಜಾಗ್ರತೆ ನೋಡು! ಎಂದು ಗದರಿಸಿದ್ದೆವು’ ಎಂದ.
‘ವಿಷಯ ಅದಲ್ಲ ಮಾರಾಯಾ, ಅವನಿಗೆ ಮಕ್ಕಳಾಗಲಿಲ್ಲ ಎಂಬ ಚಿಂತೆಯಿತ್ತು. ನಾವು ಅವನನ್ನು ಕೆಲವು ಡಾಕ್ಟ್ರು ಮತ್ತು ಜೋಯಿಸರಲ್ಲಿಗೆ ಕಳುಹಿಸಿದ್ದೆವು. ಔಷಧಿ ತಿನ್ನುತ್ತ, ಜೋಯಿಸರ ಪೂಜೆಗಳನ್ನೂ ಮಾಡಿಸುತ್ತಿದ್ದ. ಆದರೂ ಪ್ರಯೋಜನವಾಗಲಿಲ್ಲ!’ ಎಂದ ಇನ್ನೊಬ್ಬ.
‘ಹೇ ನೀವೆಲ್ಲ ಯಾವ ಕಾಲದಲ್ಲಿದ್ದೀರಿ ಮಾರಾಯಾ? ಇನ್ನೂ ಮಾಟಮಂತ್ರಗಳ ಹುಚ್ಚಿನಿಂದ ಹೊರಗೆ ಬಂದಿಲ್ಲವಲ್ಲ! ಅವನಿಗೆ ಮಕ್ಕಳಾಗದಿರಲು ಕಾರಣ ನನಗೆ ಗೊತ್ತಿತ್ತು. ಹೆಂಡತಿಯನ್ನು ಮುಟ್ಟಲೇ ಮನಸ್ಸಾಗುವುದಿಲ್ಲ ಅಂತ ನನ್ನ ಹತ್ರ ಹೇಳುತ್ತಿದ್ದ. ನಾವೆಲ್ಲ ಒಮ್ಮೆ ಅವನನ್ನು ಉಪಾಯವಾಗಿ ಕೂರಿಸಿಕೊಂಡು, ಫಾರಿನ್ ಬ್ಲೂಫಿಲ್ಮ್ ತೋರಿಸಿದ್ದೆವು. ಆನಂತರ ಗೆಲುವಾಗಿ ಮನೆಗೆ ಹೋದವನು ಮರುದಿನದಿಂದ ಚೆನ್ನಾಗಿಯೇ ಇದ್ದ!’ ಎಂದ ಮತ್ತೊಬ್ಬ.
‘ಅದೇನೇ ಇರಬಹುದು. ಆದರೆ ನನಗನ್ನಿಸುತ್ತೆ, ಅವನಿಗೆ ಆಕ್ಸಿಡೆಂಟ್ ಆದಾಗ ಮಂಡೆಯ ನರಕ್ಕೆ ಪೆಟ್ಟು ಬಿದ್ದಿರಬೇಕು. ಡಾಕ್ಟರ್ ಸರಿಯಾಗಿ ಗಮನಿಸಿಲ್ಲಾಂತ ಕಾಣುತ್ತೆ. ಅವನಿಗೆ ಪದೇಪದೇ ಗ್ಯಾಸ್ಟ್ರಿಕ್ ಕೂಡಾ ಆಗುತ್ತಿತ್ತು. ಬಹುಶಃ ಅದಕ್ಕೆ ಮದ್ದು ಮಾಡುತ್ತಿದ್ದರೆ ಬದುಕುತ್ತಿದ್ದನೋ ಏನೋ?’ ಎಂದ ಮಗದೊಬ್ಬ.
‘ಅವನಿಗೆ ನಲ್ವತ್ತು ಸಾವಿರ ಸಾಲನೂ ಇತ್ತೂಂತ ಹೇಳಿದ್ದ. ಅದಕ್ಕೆ ನಾನು, ನಿನ್ನದೆಂಥದು ಮಾರಾಯಾ ನಲ್ವತ್ತು ಸಾವಿರ? ನನಗೆ ಒಂದೂವರೆ ಲಕ್ಷ ಇದೆ ಗೊತ್ತುಂಟಾ! ಅದರ ನಡುವೆ ಎರಡು ಹೆಣ್ಣು ಮಕ್ಕಳು ಬೇರೆ ಪ್ರಾಯಕ್ಕೆ ಬಂದು ನಿಂತಿದ್ದಾರೆ. ಅಂಥ ಸಮಸ್ಯೆಗಳನ್ನೆಲ್ಲ ಇಟ್ಟುಕೊಂಡು ನಾನು ಬದುಕುತ್ತಿಲ್ಲವಾ? ಸ್ವಲ್ಪ ಹೆಚ್ಚಿಗೆ ದುಡಿದು ಸಾಲ ತೀರಿಸುವ ಯೋಚನೆ ಮಾಡಬೇಕು ಗೊತ್ತಾಯ್ತಾ!’ ಎಂದು ಬುದ್ಧಿ ಹೇಳಿದ್ದೆ. ಇವತ್ತು ನೋಡಿದರೆ ಹೀಗೆ ಮಾಡಿಕೊಂಡ ಮುಠ್ಠಾಳ!’ ಎಂದ ಇನ್ನೊಬ್ಬ.
ಅವನ ಸಂಸ್ಥೆಯ ಮುಖ್ಯಸ್ಥನೊಬ್ಬ, ‘ಅವನಿಗೆ ನಿಜಕ್ಕೂ ಮಂಡೆ ಸಮ ಇರಲಿಲ್ಲ. ಮಾತೆತ್ತಿದರೆ ಸಾಯುವ ಬಗ್ಗೆ ಮಾತಾಡುತ್ತಿದ್ದ. ಸತ್ತು ಹೋಗಬೇಕು ಮಾರಾಯಾ, ನಿದ್ದೆ ಮಾಡುವಾಗಲೇ ಸತ್ತರೆ ಎಷ್ಟು ಒಳ್ಳೆಯದಲ್ಲವಾ? ನೇಣು ಹಾಕಿಕೊಳ್ಳುವುದು, ವಿಷ ಕುಡಿಯುವುದು, ರೈಲಿಗೆ ತಲೆ ಕೊಡುವುದೆಲ್ಲ ಕಷ್ಟದ ಕೆಲಸ!’ ಎಂದು ತಮಾಷೆಯಾಗಿ ಹೇಳುತ್ತ ನಮ್ಮ ತಲೆ ತಿನ್ನುತ್ತಿದ್ದ. ಒಮ್ಮೆ ಎಲ್ಲರೂ ಅವನನ್ನು ಹಿಡಿದು ಕುಳ್ಳಿರಿಸಿ, ನಮ್ಮೆಲ್ಲರ ಜೀವನದ ಕಷ್ಟಸುಖಗಳನ್ನೂ, ಸಾಧನೆಗಳನ್ನೂ ಒಂದು ಗಂಟೆ ವಿವರಿಸಿ ಉಪದೇಶ ಮಾಡಿದೆವು. ಆವತ್ತಿನಿಂದ ಆತ್ಮಹತ್ಯೆಯ ಬಗ್ಗೆ ಮಾತಾಡುವುದನ್ನು ನಿಲ್ಲಿಸಿದ ಮತ್ತು ಮೌನವಾಗಿಬಿಟ್ಟ! ನಂತರ ಕೆಲಸಕ್ಕೆ ಬರುವುದನ್ನೂ ನಿಲ್ಲಿಸಿದ. ಇವತ್ತು ನೋಡಿದರೆ ಹೇಡಿಯಂತೆ ಸತ್ತು ಸಂಸಾರಕ್ಕೆ ಗತಿಯಿಲ್ಲದಂತೆ ಮಾಡಿದ!’ ಎಂದ ತಿರಸ್ಕಾರದಿಂದ.
ಬಳಿಕ ಅವನ ಅಕ್ಕನ ಮಗ, ‘ಬಹಳ ಕಾಲದ ನಂತರ ಇವತ್ತು ಬೆಳಿಗ್ಗೆ ಹೆಂಡತಿಯ ಮನೆಗೂ ದೊಡ್ಡಕ್ಕನ ಮನೆಗೂ ಹೋಗಿ ಸಂಜೆಯವರೆಗೆ ಇದ್ದು ಬಂದಿದ್ದ. ಸ್ನಾನ ಮಾಡಿ ದೈವಸ್ಥಾನಕ್ಕೆ ಹೋಗಿ ಬಂದು ಅಂಗಳದಲ್ಲಿ ಕುಳಿತು ಯಾವುದೋ ಪುಸ್ತಕ ಓದುತ್ತಿದ್ದ. ಕತ್ತಾಲಾದ ನಂತರ ಕಾಣೆಯಾದ. ತುಂಬಾ ಹುಡುಕಿದೆವು. ಕೊನೆಗೆ ನೋಡಿದರೆ…!’ ಎಂದು ಕಣ್ಣೀರೊರೆಸಿಕೊಂಡ. ಕೊನೆಯಲ್ಲಿ ಅವನ ಸಂಬಂಧಿಕನೊಬ್ಬ, ‘ಅವನೊಬ್ಬ ಹೇಡಿಯನಾ. ಹೀಗೆ ಮಾಡಿಕೊಳ್ಳುವಂತಿದ್ದರೆ, ಮದುವೆಯಾದರೂ ಯಾಕಾಗಬೇಕಿತ್ತು? ಅವಳ ಬಾಳನ್ನೂ ಹಾಳು ಮಾಡಿಬಿಟ್ಟ ಥೂ!’ ಎಂದ. ಆದರೆ ಅವನು ತನ್ನ ಜೀವನವನ್ನೇ ಮುಗಿಸಿಕೊಂಡಿದ್ದಾನೆಂದರೆ ಅದೆಂಥ ಮಾನಸಿಕ ಹಿಂಸೆಗಳನ್ನು ಅನುಭವಿಸಿರಬಹುದು! ಇಷ್ಟೆಲ್ಲ ನಡೆದಿದ್ದರೂ ನನಗೊಂದೂ ತಿಳಿಯಲಿಲ್ಲವಲ್ಲ ಛೇ! ಎಂದೆನ್ನಿಸಿತು. ಅವನು ಪದೇಪದೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎನ್ನುವುದನ್ನು ನನಗೆ ಯಾಕೆ ತಿಳಿಸಲಿಲ್ಲ? ಎಂದೊಬ್ಬ ಸ್ನೇಹಿತನನ್ನು ಕೇಳಿದೆ. ‘ಅಯ್ಯೋ, ಹಾಗೆ ಹೇಳುವವರು ಮಾಡಿಕೊಂಡೇ ತೀರುತ್ತಾರೆಂದು ಯಾರಿಗೆ ಗೊತ್ತಿತ್ತು ಮಾರಾಯಾ?’ ಎಂದ ಆತ ವಿಷಾದದಿಂದ.
ಅಷ್ಟರಲ್ಲಿ ಅವನು ನೇಣು ಬಿಗಿದಿದ್ದ ಮರದ ಹತ್ತಿರ ನಿಂತಿದ್ದವನೊಬ್ಬ, ‘ಥೂ! ದರಿದ್ರದ ಮರವಿದು. ಒಂದು ಹಸಿಹಸಿ ಜೀವವನ್ನೇ ಬಲಿ ತೆಗೆದುಕೊಂಡಿತು. ನಾಳೆಯೇ ಕಡಿಯಬೇಕು ಇದನ್ನು!’ ಎಂದ. ಅದು ಸುಮಾರು ಹತ್ತು ವರ್ಷ ಪ್ರಾಯದ ಎಳೆಯ ಅತ್ತೀಮರ. ಅದನ್ನು ಬದುಕಲು ಬಿಟ್ಟರೆ ಕೆಲವೇ ವರ್ಷಗಳಲ್ಲಿ ಹೆಮ್ಮರವಾಗಿ ಬೆಳೆದು ಆ ಪರಿಸರಕ್ಕೆ ನೂರಾರು ಕಾಲ ಶುದ್ಧ ಆಮ್ಲಜನಕ, ಜಲಧಾರೆಯನ್ನು ಪೂರೈಸುತ್ತ ಸಾವಿರಾರು ಜೀವಸಂಕುಲಗಳಿಗೆ ಆಹಾರಾಶ್ರಯವಾಗಬಲ್ಲದು. ಆದರೆ ನಮ್ಮ ಅಜ್ಞಾನ ಅಂಥ ಸೃಷ್ಟಿಯನ್ನೂ ನಾಶಮಾಡಲು ಹೊರಟಿರುವುದು ಭಯಾನಕ! ಗೆಳೆಯನ ದೇಹವನ್ನು ಮೀಯಿಸುವ ವಿಧಿ ಆರಂಭವಾಯಿತು. ಅವನ ಪತ್ನಿಯನ್ನು ಹೊರಗೆ ಕರೆತರಲಾಯಿತು. ‘ಅಯ್ಯೋ ದೇವರೇ…ನನ್ನನ್ನು ಬಿಟ್ಟು ಹೋದಿರಲ್ಲ…ಇನ್ನು ನನಗ್ಯಾರು ದಿಕ್ಕು!’ ಎಂದು ಆಕೆ ಬೊಬ್ಬಿಡುತ್ತ ಗಂಡನ ದೇಹವನ್ನು ಮೀಯಿಸಿದ್ದು ಕರುಳು ಕತ್ತರಿಸುವಂತಿತ್ತು.
ಪ್ರಸಿದ್ಧ ಮನೋರೋಗ ತಜ್ಞ ಡಾ. ಸಿ. ಆರ್. ಚಂದ್ರಶೇಖರ್ ಬರೆಯುತ್ತಾರೆ, “ಸಮಾಜ/ಮನೋವಿಜ್ಞಾನಿಗಳು ಸ್ವ-ಹತ್ಯೆಯನ್ನು ‘ಯಶಸ್ವಿ ಸ್ವ-ಹತ್ಯೆ ಮತ್ತು ‘ಸ್ವ-ಹತ್ಯೆಯ ಪ್ರಯತ್ನ’ ಎಂದು ಎರಡು ವಿಭಾಗ ಮಾಡಿದ್ದಾರೆ. ಯಶಸ್ವೀ ಸ್ವಹತ್ಯೆಯಲ್ಲಿ ವ್ಯಕ್ತಿ ತನ್ನ ಕ್ರಿಯೆಯಲ್ಲಿ ಯಶಸ್ವಿಯಾಗಿ ಸಾವನ್ನಪ್ಪುತ್ತಾನೆ. ಸ್ವಹತ್ಯೆಯ ಪ್ರಯತ್ನದಲ್ಲಿ ಅವನು ಯಶಸ್ವಿಯಾಗದೆ ಬದುಕುಳಿಯುತ್ತಾನೆ. ಈ ಎರಡೂ ಗುಂಪಿನ ವ್ಯಕ್ತಿಗಳು ತಮ್ಮದೇ ಆದ ವೈಶಿಷ್ಟ್ಯ ಹಾಗೂ ಸ್ವ-ಹತ್ಯೆಯ ಕಾರಣಗಳನ್ನು ಹೊಂದಿರುತ್ತಾರೆ. ‘ಸ್ವ-ಹತ್ಯೆಯ ಪ್ರಯತ್ನ’ದ ಗುಂಪಿನವರು ಉನ್ಮಾದದ ಮನಸ್ಕರು, ಚಂಚಲಚಿತ್ತರು. ಮನೆಯವರನ್ನು ಸಂಬಂಧಪಟ್ಟವರನ್ನು, ಹೆದರಿಸಲು, ಗಮನ ಸೆಳೆಯಲು, ಪ್ರತಿಭಟಿಸಲು ಸ್ವ-ಹತ್ಯೆಯ ಬೆದರಿಕೆ ಹಾಕುತ್ತಾರೆ. ‘ಯಶಸ್ವೀ ಸ್ವ-ಹತ್ಯೆಯ ಗುಂಪಿನವರು ಹೆಚ್ಚು ಅಂತರ್ಮುಖಿಗಳು, ಗಂಭೀರ ಸ್ವಭಾವದವರು. ಯಾವಾಗಲೂ ಮಾನಸಿಕ ವಿಪ್ಲವಕ್ಕೆ ಸಿಲುಕಿರುತ್ತಾರೆ. ಈ ವಿಪ್ಲವವು ಅಂಥವರ ದೇಹದಲ್ಲಿ ಹುಟ್ಟಿದ ಮಾನಸಿಕ ಕಾಯಿಲೆಗಳಿಂದ ಬರಬಹುದು ಅಥವಾ ವಾತಾವರಣದ ಬಾರೀ ಆಘಾತದಿಂದ, ಹಣಕಾಸಿನ ನಷ್ಟ, ಪ್ರೇಮ ಮತ್ತು ಇನ್ನಿತರ ಗುರಿಗಳಲ್ಲಿ ವಿಫಲತೆ, ಪ್ರೀತಿಪಾತ್ರರ ಅಗಲಿಕೆ, ಸಾವು, ನಿರಾಶೆಗಳು ಕಾರಣವಾಗಬಹುದು. ಯಶಸ್ವೀ ಸ್ವ-ಹತ್ಯೆ ಮಾಡಿಕೊಳ್ಳುವವರು ಸಾಕಷ್ಟು ಕಾಲ ಯೋಚಿಸಿ, ಏನು ಮಾಡಬೇಕು, ಹೇಗೆ ಮಾಡಿಕೊಳ್ಳಬೇಕು ಎಂದು ಕರಾರುವಕ್ಕಾಗಿ ನಿರ್ಧರಿಸಿ ಪೂರ್ವಸಿದ್ಧತೆ ಮಾಡಿಕೊಳ್ಳುತ್ತಾರೆ. ಅವರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ನೇರವಾಗಿ ಅಥವಾ ಪರೋಕ್ಷವಾಗಿ ಒಂದಲ್ಲ ಒಂದು ಸಾರಿ ಇತರರಿಗೆ ತಮ್ಮ ಸಾವಿನ ಸುಳಿವು ನೀಡುತ್ತಿರುತ್ತಾರೆ!” ಎಂದು.
ಇಲ್ಲಿ ನನ್ನ ಗೆಳೆಯನೂ ಪರೋಕ್ಷವಾಗಿ ಅನೇಕ ಬಾರಿ ಸಂಗಡಿಗರಿಗೆ ತನ್ನ ಸಾವಿನ ಸೂಚನೆ ನೀಡಿದ್ದ. ಆದರೆ ಅವರೆಲ್ಲ ಅದನ್ನು ಅರ್ಥ ಮಾಡಿಕೊಳ್ಳದೆ ತಪ್ಪು ಮಾಡಿದರೇ? ಆತ ಜೀವಂತವಿದ್ದಾಗ ಯಾವ ಯಾವ ರೀತಿಗಳಿಂದ ಅವನನ್ನು ‘ಸರಿಪಡಿಸಲು!’ ಪ್ರಯತ್ನಿಸಿದರು ಎಂಬುದನ್ನು ಗಮನಿಸಿದರೆ, ಯಾರಿಗೂ ಮನೋವೈದ್ಯರಿಂದ ಅವನಿಗೆ ಚಿಕಿತ್ಸೆ ಕೊಡಿಸಬೇಕೆಂಬ ಜ್ಞಾನವಿರಲಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಆದ್ದರಿಂದ ಇನ್ನು ಮುಂದಾದರೂ ಶ್ರೀಸಾಮಾನ್ಯರು ಸಾಧ್ಯವಾದಷ್ಟು ಮಾನಸಿಕ ಸಮಸ್ಯೆ, ಮನೋರೋಗಗಳ ಕುರಿತು ಸೂಕ್ತ ಮಾಹಿತಿಯನ್ನು ಸ್ವತಃ ತಿಳಿದುಕೊಳ್ಳಲು ಪ್ರಯತ್ನಿಸುವ ಹಾಗೂ ಸರಕಾರ, ಸಂಘಸಂಸ್ಥೆಗಳೂ ಜನರಲ್ಲಿ ಅಂಥ ಜ್ಞಾನವನ್ನು ನಿರಂತರ ಮೂಡಿಸುವ ತುರ್ತು ಅಗತ್ಯವಿದೆ ಎಂದೆನ್ನಿಸುತ್ತದೆ.

******

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter