ತಂತಿ ತಂತಿಗೆ ತಾಗಿ…..


ಕತ್ತೆತ್ತಿದೆ, ಕಾಣಲಿಲ್ಲ ಗಿಡ ಮರ
ತಂತಿಗೆ ತಂತಿ ತಾಗಿ ಬುಗಿಲೆದ್ದ ಧಗೆ
ಎದೆ ಝಲ್ !
ಛಳಕ್ಕನೆ ಮುರಿದ ತಂತು
ಮತ್ತೆ ಕೂಡಿಕೊಳಲಾರದು
ಹೊತ್ತುರಿಯುವ ನಭದಲ್ಲೀಗ
ಹಕ್ಕಿಗಳ ರೆಕ್ಕೆ ಸುಟ್ಟರೆಂಬ ಭಯ !
(ತಂತಿ ತಂತಿಗೆ ತಾಗಿ..)
ಇದು ಕವಿ ದೀಪಾ ಗೋನಾಳ ಅವರ ಚೊಚ್ಚಲ ಕವನ ಸಂಕಲನದ ಶೀರ್ಷಿಕೆ ಕವಿತೆಯ ಸಾಲುಗಳು.  ಶೀರ್ಷಿಕೆಯ ತಾಜಾತನವೇ ಇವರ  ಕವಿತೆಗಳ ಕುರಿತು ಕುತೂಹಲ ಮೂಡಿಸುವುದು.

ಪ್ರಗತಿಯ ನಶೆಯಲ್ಲಿ ನಿರಂತರ ಪ್ರಕೃತಿಯನ್ನು ನಾಶಮಾಡುತ್ತಲೇ ಬಂದ ಮನುಷ್ಯನ ತೀರದ ದಾಹ, ದುಷ್ಟತನವನ್ನು ಪರಿಣಾಮಕಾರಿಯಾಗಿ ತಣ್ಣಗೆ ತೆರೆದಿಟ್ಟ ಕವಿತೆ. ಕಾಡು ಮರ ನೆರಳು  ಹೂವು ಹಸಿರೆಂಬುದು ಕೇವಲ ನೆನಪಾಗಿ, ಕನಸಾಗಿ ಬಿಟ್ಟವೆಂಬ ಗಾಢ ವಿಷಾದ.   ಮುಂಚಿದ್ದ ಆ ದಾರಿ ಸವೆದಷ್ಟು  ದಾರಿಗುಂಟ ಎದುರಾಗುವ ಸಿಹಿಗಾಳಿಗೆ ಮೈಯೊಡ್ಡುವ ಸುಖ!  ಹಕ್ಕಿಪಿಕ್ಕಿಗಳ ಚಿಲಿಪಿಲಿ ಇಂಪಿನ ಹಾಡನ್ನು ಕೇಳಲೋಸ್ಕರವೇ ಹೆಜ್ಜೆಯನ್ನು ತುಸು ಸಣ್ಣದಾಗಿಸಿಕೊಂಡು ಸಾವದಾನವಾಗಿ ನಡೆಯುವ ಹಿತ !  ಈಗ ಇವೆಲ್ಲ ಬರೇ ನೆನಪು!!! ತಂತಿಗೆ ತಂತಿ ತಾಗಿದರೆ ಆಗುವ ಅನಾಹುತವದೇ ಹೊತ್ತಿಕೊಂಬ ಕಿಡಿ. ಮನುಷ್ಯ ಸಂಬಂಧಗಳಿಗೂ ಅನ್ವಯಿಸುವ ಸಮರ್ಥ ರೂಪಕ ಇದು !  ಆ ಕಿಡಿಯ ಕಿಚ್ಚು ಬುಗಿಲೆದ್ದು ಎಲ್ಲವನ್ನೂ ಆಹುತಿ ತೆಗೆದುಕೊಳ್ಳುವುದಲ್ಲ ಎಂಬ ಆತಂಕ.  ಇಂತಿರುವಾಗ ಕೊನೆಯಲ್ಲಿ, ‘ಹಕ್ಕಿಗಳ ರೆಕ್ಕೆ ಸುಟ್ಟರೆಂಬ ಭಯ’ ವ್ಯಕ್ತಪಡಿಸುವ ಕವಿಗೆ ನಾವು ಕಳೆದುಕೊಂಡ ನಿಸರ್ಗ ಸಹಜ ಸುಖ ಸೌಂದರ್ಯದ ಜೊತೆಗೆ ಕಾಡಿನ ನಿಷ್ಪಾಪಿ ಜೀವರಾಶಿಗಳ ಕಾಪಾಡುವುದೆಂತು ಎಂಬ ಕಳಕಳಿಯಿದೆ.  

ಚೆಂದ ಬೆಂದಿದೆ ಅಂದಾಗೆಲ್ಲ/ಕೆಂಡದುರಿ ಸಮನಾಗಿ ದಕ್ಕಿತ್ತೆಂದು/ಪ್ರತ್ಯೇಕವಾಗಿ ಹೇಳಬೇಕೆ !?

(ಅರ್ಥ: ಐದು ಹನಿಗಳು)

ದೀಪ/ಕೊರೆವ ಚಳಿಯ ಮಧ್ಯ/ಇಷ್ಟೇ ಇಷ್ಟು ಶಾಖವೆರೆವ ಜೀವಸೆಲೆ

(ತನ್ನ ತಾ ಸುಟ್ಟುಕೊಂಡರೂ)

ಬೆನ್ನುಮಾಡಿ ಹೋದದ್ದಕ್ಕೆ ನನ್ನ ದೂರಿಲ್ಲ/ಆದರೆ ದೇಹ ಸೋತು ಬಾಗಿ ಬೆಂಡಾದದ್ದು/ಹಿಂದಿನಿಂದಲೂ ಅತಿ ಹೆಚ್ಚೇ ಸ್ಪಷ್ಟವಿತ್ತು

(ಎದ್ದು ಹೋಗಿದ್ದಕ್ಕೆ)
ನೋವುಂಡು ನುಗ್ಗಾಗಿ/ಎಳೆವ ರಬ್ಬರಾಗಿ ಹೋಗಿದ್ದೆ/ಜಗ್ಗಾಡಿದಷ್ಟು ಹೀಚುತ್ತಲೇ ಹೋದೆ !

ಕಸುವು ಮೈಗೂಡಿ ಮನ ದಿನದಿನಕ್ಕೆ/ಕಬ್ಬಿಣವೋ ಉಕ್ಕೋ ಆಗುತ್ತಲೇ ಹೋಯಿತು

(ಗೊಡವೆ ಮತ್ತು ಅರಿವು)

ಈ ರೀತಿ ನಿಖರವಾಗಿ ಬರೆಯಬಲ್ಲ ಕವಿ ಕೇವಲ ಕಲ್ಪನೆಗೆ ಜೋತು ಬೀಳದೆ ನಿಂತ ನೆಲದ ಅನುಭವದ ನೆಲೆಯಲ್ಲಿ ವಾಸ್ತವದೊಂದಿಗೆ ಮುಖಾಮುಖಿಯಾಗುವ ಛಲ ಮತ್ತು ಎಚ್ಚರದ ಪ್ರಜ್ಞೆವುಳ್ಳವರು.  ಮೊದಲ ಸಂಕಲನದಲ್ಲೇ ಅರ್ಥವತ್ತಾದ ರೂಪಕ, ಪ್ರತಿಮೆಗಳ ಮೂಲಕ ಕವಿತೆಯನ್ನು ನೇಯಬಲ್ಲ ನಯಗಾರಿಕೆ ಸಿದ್ಧಿಸಿಕೊಂಡಿರುವುದು ಗಮನಾರ್ಹವಾದುದು. 

ಕಾಮಪಿಪಾಸುಗಳಿಂದ ಅತ್ಯಾಚಾರಕ್ಕೊಳಗಾಗಿ ದಾರಿಮೇಲೆ ಎಸೆಯಲ್ಪಟ್ಟ ನತದೃಷ್ಟ ಹೆಣ್ಣಿನ ಕ್ರೌರ್ಯವನ್ನು  ಚಿತ್ರಿಸಿದ ಪರಿ ಹೀಗಿದೆ;

ನಾನು ಕೂಗುತ್ತಲೇ ಇದ್ದೆ/ಯಾರಾದರೂ ಬಂದು ಉಳಿಸಿಯಾರೆಂದು
ಓಡುತ್ತಲೇ ಇದ್ದೆ/ಯಾರಾದರೂ ಹಿಡಿದು ನಿಲ್ಲಿಸಿ
ಆಸ್ಪತ್ರೆಯ ಬೆಡ್ಡಿನವರೆಗೆ ತಂದು ಬಿಟ್ಟಾರೆಂದು
.......

ಅತ್ಯಾಚಾರಕೆ ಸಿಲುಕಿ/ಪೊಲೀಸ್ ಠಾಣೆ ನ್ಯಾಯಾಲಯ ಮಾಧ್ಯಮಗಳ ಮುಂದೆ ಬಂದ ದಿನವೇ/ನಾನು ಸತ್ತು ಹೋಗಿದ್ದೆ
.....

ಈಗಲೂ ಸುಟ್ಟು ಬೂದಿಯಾದದ್ದು ನಾನಲ್ಲ/ನನ್ನ ದೇಹವೂ ಅಲ್ಲ
ಈ ವ್ಯವಸ್ಥೆ ಮೇಲಿದ್ದ ನಂಬಿಕೆ/ಅದೀಗ ನಡುರಸ್ತೆಯಲ್ಲಿ ಉರಿದು ಬೂದಿಯಾಯ್ತು ! 

(ಕೂಗುತ್ತಲೇ ಇದ್ದೆ !) 

ಜಡ ವ್ಯವಸ್ಥೆಯ ನಪುಂಸಕತನವನ್ನು ನಗ್ನಗೊಳಿಸುವ  ಕವಿತೆ ನಮ್ಮನ್ನು ನಖಶಿಖಾಂತ ಅಸ್ವಸ್ಥಗೊಳಿಸುತ್ತದೆ.
ಕವಿ, ಸಾಹಿತಿ ಸತೀಶ ಕುಲಕರ್ಣಿ ಅವರು ಮುನ್ನುಡಿಯಲ್ಲಿ ಬಹಳ ಸೂಕ್ಷ್ಮವಾಗಿ ಇಲ್ಲಿನ ಕವಿತೆಗಳ  ಪದರಪದರ ತೆರೆದಿಟ್ಟಿದ್ದಾರೆ.

“....ಜೀವಸೆಲೆ ಹುಡುಕಾಟದಲ್ಲಿ ತಂತಿಗೆ ತಂತಿ ತಾಗಿ ಒಂದಿಷ್ಟು ಬೆಳಕು ಕಿಡಿಗಳಿಲ್ಲಿ ಚೆಲ್ಲಿವೆ. ಮುಖ್ಯವಾಗಿ ಕವಯತ್ರಿಗೆ ತಾನು ಬರೆಯಬೇಕೆಂಬ ವಸ್ತುವಿನ ಅರಿವು ಇದೆ. ಅಂತಹ ಅರಿವು ಬೆರಗಾಗಿ ಕಾಡಿದಾಗ ಬರೆದ ಕವಿತೆಗಳಿವು.....

ಗಂಡು ಹೆಣ್ಣಿನ ಸಂಬಂಧವನ್ನು ವ್ಯಾಖ್ಯಾನಿಸುವ ರೀತಿ ಈಗ ಬದಲಾಗಿದೆ. ಕಾಲದ ರೀತಿ ರಿವಾಜುಗಳು ಬದಲಾಗಿವೆ. ಅದನ್ನು ಹೇಳುವ ಕ್ರಮ ಕೂಡ ಕಾವ್ಯದಲಿ ಬದಲಾದುದಕ್ಕೆ ಇಲ್ಲಿಯ ಹಲವು ಕವಿತೆಗಳು ಸಾಕ್ಷಿ ಹೇಳುತ್ತವೆ... ಇವು  ‘ಮುಚ್ಚಿಲ್ಲದ ಬಿಚ್ಚು ಮನಸ್ಸಿನ ಕಾವ್ಯ’ ಎಂದಿದ್ದಾರೆ.

ನನ್ನುಡಿಯಲ್ಲಿ ಕವಿ ದೀಪಾ,  “ ನಾನೇಕೆ ಬರೆಯುತ್ತೇನೆ ? ಎಂಬ ಪ್ರಶ್ನೆಯನ್ನು ನನಗೆ ನಾನೇ ಸಾಕಷ್ಟು ಬಾರಿ ಕೇಳಿಕೊಂಡದ್ದಿದೆ. ಪ್ರತಿ ಬಾರಿ ಪ್ರಶ್ನೆ ಉದ್ಭವಿಸಿದಾಗಲೂ ಮತ್ತೊಂದು ಕವಿತೆ ಬರೆಯುತ್ತೇನೆಯೇ ಹೊರತು ಜವಾಬು ಮಾತ್ರ ಸಿಕ್ಕಿಲ್ಲ. “ ಎಂದು  ಪ್ರಾಮಾಣಿಕವಾಗಿ ತಮ್ಮ  ಸಂದೇಹವನ್ನು ತೋಡಿಕೊಂಡಿರುವುದು, ಅವರು ಬರವಣಿಗೆಯಲ್ಲಿ ಸರಿಯಾದ ದಾರಿಯಲ್ಲೇ ನಡೆಯುತ್ತಿದ್ದಾರೆನ್ನುವುದಕ್ಕೆ ಸಾಕ್ಷಿ.

ದೀಪಾ ಅವರ ಕವಿತೆಗಳಲ್ಲಿ ಏಕಾಂತದಂತಹ ಹೆಣ್ತನದ ಮಧುಮಧುರ  ಪಿಸುಗುಡುವಿಕೆ ಅದರ ಮಾರ್ಧವತೆಯಿಂದಲೇ ಲೋಕಾಂತವಾಗಿ ಮುದ ನೀಡುವವು.  ಯಾವ ಚೌಕಟ್ಟಿನೊಳಗೂ ಬಂಧಿಯಾಗ ಬಯಸದ ಇಂತಹ ಲಹರಿಗಳು  ಆಪ್ತವಾಗಿದ್ದು ಕವಿಯ ಕಾವ್ಯ ಸಂವೇದನೆಗಳನ್ನು ಖರೇಖರೇ ಹೊಳೆಯಿಸುತ್ತವೆ.
ಈಗ ಲೊಚ್ ಮುತ್ತಿಗೆ/ಇಡೀ ರಾಣಿಮಹಲ್ ಸ್ತಬ್ಧವಾಗಿ ಮಲಗಿತ್ತು

(ಷರಾ ಹೀಗಿತ್ತು)

ಜಡೆ ಹಿಡಿದು ಎಳೆದೆಳೆದು/ಪಕ್ಕಕ್ಕಾನಿಸಿ ಕೂತವ..
ಹೀಗೆ ಎದ್ದೋದಾಗ ಎದೆ ಬಿಗಿದು/ಬಲ ಮೊಲೆಯೊಳಗೆ ಸಣ್ಣಗೆ ಜಿನುಗುವ ಹಾಲು...

(ಮೈ ಕೊಡವದಿರು)

ಮೋಟು ಜಡೆಗ್ಯಾತರ ಹೂ/ತೆಗೆಯದಿರು ತಕರಾರು !
ಹೂ ಜಡೆಗಲ್ಲ :/ನೋಟಕ್ಕೆ ಘ್ರಾಣಕ್ಕೆ ಎನಗೆ ಎನ್ನ ಮನಕೆ

( ಘಮದ ಘನಕ್ಕೆ)

ಬದುಕಿನ ಬವಣೆಗಳು ಬೆನ್ನೇರಿ ಕುಳಿತು ಹೆದರಿಸುತ್ತಿದ್ದವಲ್ಲ; ಆಗ ಚೆಂದಕ್ಕಿದ್ದೆ
ಬೆನ್ನತ್ತಿದ್ದ ಸಂಕಷ್ಟಗಳು ಒಂದೊಂದೇ ಸರಿಯುತ್ತಿದ್ದಂತೆ ಬದಲಾದೆ !

( ನೀ ಮೊದಲು ಹೀಗಿರಲಿಲ್ಲ)

ಎದೆಯ ಮೇಲಿನ ಹಚ್ಚೆಗೆ ಅಗ್ಗಿಷ್ಟಿಕೆಯ ಕೆಂಡ ಹಚ್ಚಿ ಉಜ್ಜಿಕೊಂಡವನಲ್ಲವೇ ನೀನು;

ಎದೆ ಒಳಗಿನ ಇವಳನ್ನು ತೆಗೆದು ಹಾಕಲೆತ್ನಿಸಿ ಸೋತವನಲ್ಲವೆ ನೀನು !

(ಮರೆತವನಲ್ಲವೆ ನೀನು... ?)

ಬೆನ್ನಿಗಾನಿಕೊಂಡು ಕುಳಿತರು/ಮುಂಗನ್ನಡಿ ಸರಿಮಾಡಿ ಬಿಂಬ ನೋಡುವುದೇ ?
ಗಾಡಿ ಬದಿಗಚ್ಚಿ ಬಯಲು ಮಾಡಬಾರದೆ/ಬಚ್ಚಿಟ್ಟ ಪ್ರೀತಿ..?

(ಬೇಷರಮ್...)

ಈ ಕೃತಿಗೆ ಬೆನ್ನುಡಿಯ ರೂಪದಲ್ಲಿ ಸದಾ ಚೈತನ್ಯ ಚಿಲುಮೆಯಾಗಿ ಕಿರಿಯರಿಗೆ ಮಾಧರಿಯಾಗಿರುವ  ಹಿರಿಯ ಕವಿ ಎಂ.ಆರ್. ಕಮಲ ಅವರ ಅಕ್ಕರೆಯ ನುಡಿ ಹಾರೈಕೆಗಳಿವೆ.

ಬದುಕಿನ ಪಯಣದಲ್ಲಿ ಹೊರ ನೋಟಕ್ಕೆ ದಕ್ಕಿದ ಸಕಲವೂ,  ಒಳಗಣ್ಣು ಅರಿತದೆಲ್ಲವನ್ನು ಪದಗಳೊಂದಿಗೆ ಬೆಸೆದು ಪಕ್ಕಾಗಿಸುವ ಕೌಶಲ, ಈ ಕವಿಯ ಕಾವ್ಯ ಪ್ರತಿಭೆಗೆ ಹಿಡಿದ ಕೈಗನ್ನಡಿ.  ಅಂದವಾದ ಮುದ್ರಣ ವಿನ್ಯಾಸವೂ ಈ ಕೃತಿಯ ಚೆಲುವನ್ನು ಹೆಚ್ಚಿಸಿದೆ. ಒಂದು ಸೊಗಸಾದ ಓದಿಗೆ ಕಾರಣರಾದ ಕವಿಗೂ  ಪ್ರಕಟಿಸಿದ ನೌಂಟಂಕಿ ಪ್ರಕಾಶನದವರಿಗೂ ಅಭಿನಂದನೆಗಳು.
*ಗೋಪಾಲ ತ್ರಾಸಿ




ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter