ನಗುವಿರದ ಮನದಲ್ಲಿ ಅರಳಿದ ಮಲ್ಲಿಗೆ

	"ನಿದ್ರೆ ಬಂತೇನೇ ಕುಂಟಿ...?"
	"ನಿದ್ರೆ ಮಾಡ್ಬೇಕೆಂದ್ರೆ ನೀನೆಲ್ಲಿ ಬಿಡ್ತಿಯೋ ಹೆಣ್ಣ್ಯಾ...?"
	"ಏನಂದೀ...? ನನ್ಗೆ ಹೆಣ್ಣ್ಯಾ ಅಂದ್ಯಾ...?"
	"ಹೌದು, ಹೆಣ್ಣ್ಯಾನೇ ಅಂದಿದ್ದು. ಮತ್ತಿನ್ನೇನು...? ಈ ನಿನ್ನ ಉಬ್ಬಿದೆದೆ, ಹೆಂಗಸಿನಂಥ ಧ್ವನಿ, ವೈಯಾರದ ನಡಿಗೆ ಗಮನಿಸಿದರೆ ನಿನ್ನನ್ನು ಗಂಡೆಂದು ಯಾರು ಹೇಳಲು ಸಾಧ್ಯ? ಅದೇನೋ ಒಂಚೂರು ಕುರುಚಲು ಮೀಸೆ, ಗಡ್ಡ ಇರೋದ್ರಿಂದ ನಿಂಗೆ ತುಸು ಮರ್ಯಾದೆ ಅಷ್ಟೇ. ಈಗೇನು? ನಾನು ನಿನ್ನನ್ನು ಹೆಣ್ಣ್ಯಾ ಅಂತಾನೇ ಕರೆಯುವೆ."
	"ಮತ್ತೆ ಇಷ್ಟೊತ್ತಿನವರೆಗೆ ಸಕತ್ತಾಗಿ ಎಂಜಾಯ್ ಮಾಡಿದ್ದು ನನ್ನ ಹೆಣ್ತನದಿಂದಲೇ ಅಥವಾ ಗಂಡಸ್ತನದಿಂದಲೇ...?"
	"ಥೂ ಕಳ್ಳ... ಎಂಜಾಯ್ ಮಾಡಿದ್ದು ನಿಜ. ಆದರೂ ನೀನು ನನಗೆ ಹೆಣ್ಣ್ಯಾನೇ."
	"ಮತ್ತೆ ಅಲ್ಲಿ ಪಕ್ಕದಲ್ಲಿ ಮಲಗಿರುವ ಮಗು "ಚಿಗುರು" ನನ್ನದಾ... ಅಥವಾ ನಿನ್ನ ಮಾಜಿ ಗಂಡನ ನೆನಪಿನ ಕಾಣಿಕೆಯಾ...?" 
	"ಥೂ ನಿನ್ನ...$ ಆ ದರಿದ್ರದವನ ಹೆಸರೆತ್ತಬೇಡ. ನಿನ್ನ ಪತ್ನಿಯಾದಾಗಿನಿಂದ ಅವನ ನೆರಳೂ ಸಹ ಬಿದ್ದಿಲ್ಲ. ಅವನೇನು ಮನುಷ್ಯನಾ? ಯಾವಾಗಲೋ ಸತ್ತುಹೋದ ನನ್ನ ಪಾಲಿಗೆ. ಅವನೀಗ ಬೀದಿನಾಯಿಯಂತೆ ಸುತ್ತುತ್ತಿದ್ದಾನೆ. ಪ್ರೇಯಸಿಯೂ ಕೈ ಕೊಟ್ಟಿದ್ದಾಳೆ. ಯಾವ ಹೆಣ್ಣೂ ಅವನ ಕೈಹಿಡಿಯಲು ಮುಂದೆ ಬರುತ್ತಿಲ್ಲ. ಪಾಪಿಗೆ ತಕ್ಕ ಪ್ರಾಯಶ್ಚಿತ್ತವಾಗುತ್ತಿದೆ. ಅವನೇನಾದರೂ ನನ್ನನ್ನು ಮುಟ್ಟಲು ಬಂದರೆ ಜಾಡಿಸಿ...ಒದೆಯುವೆ. ನನ್ನ ಮೇಲೆ ಅನುಮಾನವಾ...?"
	"ಇಲ್ಲ ಬೇಬಿ, ಸುಮ್ಮನೇ ತಮಾಷೆಗೆ ಹೇಳಿದೆ. ಗಯ್ಯಾಳಿ, ನನ್ನನ್ನೇಕೆ ಕೆಣಕುತ್ತಿರುವಿ...?"
	"ರಸಮಯ ಗಳಿಗೆಯಲ್ಲಿ ಪರಸ್ಪರ ಕೆಣಕುತ್ತಿದ್ದರೆ ಅದರ ಮಜವೇ ಬೇರೆ ಅಲ್ಲವೇ ಚಿನ್ನ...? ಈ ಕುಂಟೀನೇ ನಿನಗೆ ಗಂಡಸ್ತನದ ಸರ್ಟಿಫಿಕೇಟ್ ಕೊಟ್ಟಿದ್ದು ಅಲ್ಲವಾ...? ಬರೀ ದ್ವಂದ್ವದಲ್ಲಿ ಮುಳುಗಿ ಮುದುಡಿ, ಮುರುಟುತ್ತಿದ್ದ ನಿನ್ನ ಜೀವದ ಕುಡಿಗೆ ಪ್ರೀತಿಯ ನೀರು, ತಂಬೆಲರನ್ನು ಎರೆದು ಮತ್ತೆ ಚಿಗುರುವಂತೆ ಮಾಡಿದ್ದು ಈ ಕುಂಟೀನೇ ಅಲ್ಲವಾ?" 
	"ಹೌದು, ಇಲ್ಲವೆಂದೆನೇ? ಆದರೆ ಅಂದು ಪರೀಕ್ಷಿಸುವುದಕ್ಕೋಸ್ಕರ ಟೆಂಪೊರೆರಿಯಾಗಿ ತೊಡರಿಕೊಂಡವಳು ಶಾಶ್ವತವಾಗಿಯೇ  ಅಂಟಿಕೊಂಡುಬಿಟ್ಟೆಯಲ್ಲ...?"
	"ರಾಜಾ, ನೀನೇ ನನಗೆ ಸರ್ವಸ್ವ. ಬೀದಿಗೆ ಬಿದ್ದಿದ್ದ ಈ ಕುಂಟಿಗೊಂದು ಬಾಳನ್ನು ಕೊಟ್ಟು ಮರುಜೀವನ ಕಲ್ಪಿಸಿಕೊಟ್ಟವನು ನೀನಲ್ಲವೇ? ನನ್ನೊಡಲಲ್ಲಿ ತಾಯ್ತನದ ಬೀಜವನ್ನು ಬಿತ್ತಿ ಮುದ್ದು ಮುದ್ದಾಗಿರುವ `ಚಿಗುರು' ಮಡಿಲಲ್ಲಿ ನಲಿದಾಡುವಂತೆ ಮಾಡಿರುವ ಭೂಪತಿ ನೀನೇ. ನೀ ನನಗೆ ನಾ ನಿನಗೆ ಅಲ್ಲವೇ?"
	"ಅಬ್ಬಾ, ನನ್ನ ಜೀವನ ಸಾರ್ಥಕವಾಯಿತು. ಈ ಕುಂಟಿಯಿಂದಲೇ ನನ್ನ ಬಾಳಲ್ಲಿ ಬಣ್ಣ ಬಣ್ಣದ ಚಿತ್ತಾರಗಳು ಮೂಡಿ ಆಸೆ ಗರಿಗೆದರಿದ್ದು. ನೀನೇ ನನಗೆ ದಾರಿದೀಪ. ಈಗ ರಾತ್ರಿ ತುಂಬಾ ಹೊತ್ತಾಗಿದೆ, ಶುಭರಾತ್ರಿ" ಎಂದೆನ್ನುತ್ತಾ ಗುರುಪ್ರಸಾದ್ ಮುದ್ದಿನ ಮಡದಿ ಅರ್ಪಿತಾಳನ್ನು ಮುದ್ದು ಮಾಡಿದ. ಅರ್ಪಿತಾಳೂ ತನ್ನ ಪ್ರೇಮದುಂಗುರ ಒತ್ತಿ ಶುಭರಾತ್ರಿ ಹೇಳಿ ಅಂಗಾತ ಮಲಗಿದ್ದ ಗಂಡನ ಮೆದುವೆದೆಯ ಮೇಲೆ ಮುಖವಿಟ್ಟು ಕಣ್ಮುಚ್ಚಿದಳು. ಗುರುಪ್ರಸಾದನ ಬಲಗೈ ಅವಳ ನುಣುಪಾದ ಬೆನ್ನಲ್ಲಿ ನವಿರಾಗಿ ಹರಿದಾಡತೊಡಗಿತು. 
****
	ಒಲವಿನ ವೀಣೆ ಇಬ್ಬರೆದೆಗಳಲ್ಲಿ ಮೌನದಿ ಮಿಡಿಯುತ ಅಂತರಂಗದ ಗುಪ್ತ ಅರಮನೆಯಲ್ಲಿ ಸದ್ದುಗದ್ದಲವಿಲ್ಲದೇ ಸಂಭ್ರಮಗೊಳ್ಳುತ್ತಿತ್ತು ಮಧುರಾತಿ ಮಧುರ ಅನುಭೂತಿಯಲ್ಲಿ ಮಾತುಗಳು ಏತಕೆ ನಮ್ಮಿಬ್ಬರ ನಡುವೆ ಹೃದಯಗಳು ಬೆಸೆದಿರುವಾಗ, ಭಾವಗಳು ಬೆರೆತಿರುವಾಗ ಎಂಬಂತೆ. 
	ನಿದಿರೆಯ ಸರಿಸಿ ನೆನಪಿನ ಕೂಸು ಎದ್ದು ಕುಳಿತಿತ್ತು ಇಬ್ಬರೆದೆಗಳಲ್ಲಿ ನಿಶ್ಯಬ್ದ ರಾತ್ರಿಯಲ್ಲಿ ಕನವರಿಸುತ್ತ. ಕಣ್ಮುಚ್ಚಿ ಮಲಗಿದ್ದರೇ ವಿನಃ ನಿದ್ರಾದೇವಿ ಆವರಿಸಿಕೊಳ್ಳಲಿಲ್ಲ.  
ಗುರುಪ್ರಸಾದ್

	ಅಂದು ಶನಿವಾರ. ಮಧ್ಯಾಹ್ನ ಕಾಲೇಜಿನಿಂದ ಮನೆಗೆ ಹೊರಡಲು ಬೈಕ್ ಸ್ಟಾರ್ಟ್ ಮಾಡಿದ್ದೆ. ಅಷ್ಟರಲ್ಲಿ ನನ್ನ ಹಿಂದೇನೇ ಬಂದಿದ್ದ ಅರ್ಪಿತಾ ಮೇಡಂ, "ಗುರು, ಇಂದು ನನ್ನ ಅಟೋದವನು ಬರುವುದಿಲ್ಲ. ಅಭ್ಯಂತರವಿಲ್ಲದಿದ್ದರೆ ನಮ್ಮ ಮನೆಗೆ ಡ್ರಾಪ್ ಕೊಡುವಿಯಾ...?" ಎಂದು ಕೇಳಿದಾಗ, "ಅದಕ್ಕೇನಂತೆ, ಬನ್ನಿ ಕುಳಿತುಕೊಳ್ಳಿರಿ" ಎಂದು ನಗೆ ಹನಿಸುತ್ತಾ ಬೈಕ್ ಏರಿ ಕುಳಿತುಕೊಳ್ಳಲು ಅವಳಿಗೆ ಸಹಾಯ ಹಸ್ತ ಚಾಚಿದ್ದೆ. ಅರ್ಪಿತಾ ಈಗ್ಗೆ ಮೂರ್ನಾಲ್ಕು ತಿಂಗಳುಗಳ ಹಿಂದೆಯಷ್ಟೇ ನಮ್ಮ ಕಾಲೇಜಿಗೆ ವರ್ಗವಾಗಿ ಬಂದಿದ್ದಳು. ಚಿಕ್ಕವಳಿದ್ದಾಗ ಪೋಲಿಯೋ ಅಟ್ಯಾಕ್ ಆಗಿದ್ದರಿಂದ ಅವಳ ಬಲಗಾಲು ಊನವಾಗಿತ್ತು. ಕಾಲನ್ನು ಎಳೆದು ಹಾಕುತ್ತಿದ್ದಳು. ಎಲ್ಲರಿಗೂ ಅವಳ ಬಗ್ಗೆ ಅನುಕಂಪ. ಕಾಲೊಂದು ಬಿಟ್ಟರೆ ಸಾಧಾರಣ ರೂಪಿನ ಚೆಂದದ ಹೆಂಗಸು. ನನಗಿಂತ ಮೂರ್ನಾಲ್ಕು ವರ್ಷ ಹಿರಿಯವಳೇನೋ? 
	ಅರ್ಪಿತಾಳ ಮನೆಯ ಹತ್ತಿರ ಬೈಕ್ ನಿಲ್ಲಿಸಿ ತೋಳಿಡಿದು ನಿಧಾನವಾಗಿ ಇಳಿಯಲು ಸಹಕರಿಸಿದ್ದೆ. ಬೈ ಹೇಳಿ ಹೊರಡಬೇಕೆಂದು ಮುಂದಾದಾಗ, "ಇಲ್ಲಿಯವರೆಗೆ ಬಂದಿರುವಿ, ಮನೆಯೊಳಗೆ ಬರುವುದಿಲ್ಲವೇ...?" ನಿಧಾನವಾಗಿ ರಾಗ ಎಳೆದಿದ್ದಳು. "ಇಲ್ಲ, ಮತ್ತೊಂದು ಸಾರೆ ಬರುವೆ" ಎಂದಾಗ, "ಇರಲಿ ಬಾರೋ, ಒಂದೈದು ನಿಮಿಷ ಅಷ್ಟೇ" ಎಂದು ಒತ್ತಾಯಿಸಿದಾಗ ಮರುಮಾತಿಲ್ಲದೇ ಅವಳ ಹಿಂದೆ ಹೆಜ್ಜೆ ಹಾಕಿದ್ದೆ. ಮನೆಗೆ ಬೀಗ ಬೇರೆ ಬಡಿದಿತ್ತು. ಬೀಗ ತೆಗೆದು ಒಳಗೆ ಬರಲು ಸ್ವಾಗತ ಕೋರಿದ್ದಳು. 
	"ಮೇಡಂ, ನೀವೊಬ್ಬರೇ ಇರೋದಾ...?" ಅನುಮಾನಿಸುತ್ತ ಪ್ರಶ್ನಿಸಿದಾಗ, "ನನ್ನ ಯಜಮಾನರು ಪಕ್ಕದ ಊರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಸಂಜೆಗೆ ಬರುತ್ತಾರೆ. ಅದೋ ನೋಡಿ, ಅವರೇ..." ಎಂದೆನ್ನುತ್ತಾ ಹಾಲ್‍ನ ಟೀವಿಯ ಮೇಲಿದ್ದ ಫೋಟೋವನ್ನು ತೋರಿಸಿದಾಗ ಅತ್ತ ದೃಷ್ಟಿ ಹರಿಸಿದ್ದೆ. ಜೋಡಿ ಫೋಟೋದಲ್ಲಿ ಅರ್ಪಿತಾ ಗಂಡನೊಂದಿಗೆ ನಗೆ ಬೀರುತ್ತಿದ್ದುದು ಕಂಡು ಬಂತು.  
	"ಗುರು, ಇಂದು ಇಲ್ಲೇ ಊಟಮಾಡುವಿಯಂತೆ... ಒಂದೈದು ನಿಮಿಷದಲ್ಲಿ ರೆಡಿಮಾಡುವೆ." ಅರ್ಪಿತಾ ಬೇಡಿಕೊಂಡಾಗ, "ಬೇಡ, ಬೇಡ, ನಿಮಗೇಕೆ ತೊಂದರೆ? ನಾನು ಹೊರಡುವೆ." ಅಂದು ಅಮ್ಮ ಬೇರೆ ಊರಿನಲ್ಲಿ ಇರದಿದ್ದುದರಿಂದ ಅರ್ಪಿತಾಳ ಮಾತಿನಂತೆ ಊಟ ಮಾಡುವ ಮನಸ್ಸಿದ್ದರೂ ಶಿಷ್ಟಾಚಾರಕ್ಕಾಗಿ ಬೇಡವೆಂದಿದ್ದೆ. 
	"ನಾನೇನು ದಿನಾಲೂ ನಿನ್ನನ್ನು ಕರೆಯುವುದಿಲ್ಲ. ಇವತ್ತೊಂದಿನ ಊಟ ಮಾಡು ಅಷ್ಟೇ" ಎಂದೆನ್ನುತ್ತಾ ನನ್ನ ತೋಳಿಡಿದು ಕುರ್ಚಿಯೊಂದರಲ್ಲಿ ಕೂಡ್ರಿಸಿದಾಗ ಇಲ್ಲವೆನ್ನದವನಾಗಿದ್ದೆ. 
	"ಎರಡು ನಿಮಿಷ ಕೂಡು, ಬಟ್ಟೆ ಬದಲಿಸಿಕೊಂಡು ಬರುವೆ" ಎಂದೆನ್ನುತ್ತಾ ಕಾಲೆಳೆದುಕೊಂಡು ಬೆಡ್‍ರೂಮು ಸೇರಿಕೊಂಡಿದ್ದಳು. ಎರಡು ನಿಮಿಷವಾಗಿತ್ತೇನೋ? ಅವಳ ಕೋಣೆಯಿಂದ ಚೀತ್ಕಾರ ಹೊರಹೊಮ್ಮಿತ್ತು. "ಹಾವು, ಹಾವು. ಗುರು, ಬೇಗ ಬಾರೋ." ಅರ್ಪಿತಾಳ ಚೀರಾಟ ಕೇಳಿಸಿದ್ದರಿಂದ, `ಹಾವು ಎಲ್ಲಿ...?' ಎಂದೆನ್ನುತ್ತಾ ಅವಳ ಕೋಣೆಗೆ ಧಾವಿಸಿದ್ದೆ. ಬಾಗಿಲ ಹಿಂದಿನ ಗೋಡೆಯ ಪಕ್ಕದಲ್ಲಿ ಅರೆನಗ್ನ ಸ್ಥಿತಿಯಲ್ಲಿ ನಿಂತಿದ್ದ ಅರ್ಪಿತಾಳನ್ನು ಕಂಡು ನಾನು ಹಾವನ್ನು ಕಂಡು ಮೆಟ್ಟಿದವನಂತೆ ಹಿಂದೆ ಸರಿಯಲು ಮುಂದಾಗಿದ್ದೆ.   
	"ಇನ್ನೇನು ನೈಟಿ ಹಾಕಿಕೊಳ್ಳಬೇಕಿಂದಿದ್ದೆ. ಅಷ್ಟರಲ್ಲಿ ಹಾವು ಅಲ್ಮಾರದತ್ತ ಹರಿದು ಹೋಗುವುದನ್ನು ಕಂಡು ಚೀರಿದೆ. ಅಲ್ಲಿ ಅಲ್ಮಾರದ ಕೆಳಗೆ ನೋಡು." ಅರ್ಪಿತಾ ಹೇಳಿದಾಗ ಅಲ್ಮಾರದತ್ತ ಹೆಜ್ಜೆ ಹಾಕಿ ಬಗ್ಗಿ ನೋಡತೊಡಗಿದೆ. ಅಷ್ಟರಲ್ಲಿ ಅರ್ಪಿತಾ ಹಿಂದಿನಿಂದ ನನ್ನನ್ನು ಬಳಸಿದ್ದಳು. ನಾನು ಕೊಸರಿಕೊಳ್ಳಲು ಮುಂದಾದಾಗ ಅವಳ ಹಿಡಿತ ಬಲವಾಗತೊಡಗಿತ್ತು. 
	"ಗುರು, ಬಹಳ ದಿನಗಳಿಂದ ಈ ಅವಕಾಶಕ್ಕೆ ಕಾಯುತ್ತಿದ್ದೆ. ಇಂದು ಕೈಗೂಡುತ್ತಿದೆ. ಇದು ನಿನ್ನ ಒಳ್ಳೆಯದಕ್ಕೇ. ನಿನ್ನ ನಡಿಗೆ, ಹಾವ-ಭಾವ, ಧ್ವನಿ, ಉಬ್ಬಿದೆದೆ ಗಮನಿಸಿದರೆ ನೀನು ಹೆಣ್ಣೋ, ಗಂಡೋ ಎಂಬ ಅನುಮಾನ ಎಲ್ಲರಲ್ಲಿ ಮೂಡುತ್ತಿದೆ. ಇವೆಲ್ಲವೂ ಪ್ರಕೃತಿ ಸಹಜ ವೈಪರೀತ್ಯಗಳಿರಬಹುದು. ಆದರೆ ನೀನು ಗಂಡಸು ಎಂದು ಸಾಬೀತು ಮಾಡುವುದಕ್ಕೆ ನಿನಗಿರುವುದು ಒಂದೇ ಚಾನ್ಸ್. ಆ ಸದವಕಾಶ ಇಂದು ಕೂಡಿಬಂದಿದೆ. ಉಪಯೋಗಿಸಿಕೋ" ಎಂದೆನ್ನುತ್ತಾ ನನ್ನನ್ನು ತನ್ನ ಮೇಲೆ ಎಳೆದುಕೊಂಡಿದ್ದಳು. ನನ್ನ ಮನಸ್ಸೂ ಅಂಥ ಅವಕಾಶಕ್ಕಾಗಿ ಕಾಯುತ್ತಿತ್ತೇನೋ ಎಂಬಂತೆ ಹೆಚ್ಚಿಗೆ ಒತ್ತಾಯಿಸಿಕೊಳ್ಳದೇ ಅರ್ಪಿತಾಳ ತುಂಟಾಟಕ್ಕೆ ಸ್ಪಂದಿಸಿದ್ದೆ. ನನಗೋ ಹೊಸ ಅನುಭವ. ಅವಳೋ ಪಳಗಿದ ಹೆಣ್ಣುಲಿ. ಅವಳ ಮಾರ್ಗದರ್ಶನದಲ್ಲಿ ಅಂಬೆಗಾಲಿಕ್ಕಿ ಮುನ್ನಡೆದಿದ್ದೆ. ಅವಳ ಸಾಂಗತ್ಯದ ಪರೀಕ್ಷೆಯಲ್ಲಿ ಪಾಸಾಗಿದ್ದೆ. ಸಾಧಿಸಲಾರದ್ದನ್ನು ಸಾಧಿಸಿದಂಥ ಖುಷಿ ನನ್ನೆದೆಯಲ್ಲಿ.
	"ಗುರು, ನೀನು ಪಕ್ಕಾ ಗಂಡಸೇ. ಚಿಂತಿಸಬೇಡ. ಈವರೆಗಿನ ನನ್ನ ದಾಂಪತ್ಯ ಜೀವನದಲ್ಲಿ ಇಂಥಹ ಮಧುರಾನುಭೂತಿ ಅನುಭವಿಸಿರಲಿಲ್ಲ. ನಿನ್ನ ಸಾಂಗತ್ಯದಲ್ಲಿ ರತಿಸುಖದ ಪರಾಕಾಷ್ಠೆ ಸವಿದೆ." ಅರ್ಪಿತಾಳ ಸಂಭ್ರಮಕ್ಕೆ ಮೇರೆ ಇರಲಿಲ್ಲ. ಮುಗಿಲು ಮುಟ್ಟುವಂತಿತ್ತು. ವರ್ಷಧಾರೆಗೆ ನಳನಳಿಸುವ ಭೂದೇವಿಯಂತಾಗಿದ್ದಳು. ನಾನೂ ಅವಳ ಸಂಭ್ರಮದಲ್ಲಿ ಪಾಲ್ಗೊಂಡಿದ್ದೆ. ಅವಳು ನನ್ನೆದೆಯನ್ನು ಮೃದುವಾಗಿ ಸವರುತ್ತಾ, "ಗುರು, ನಿನ್ನೆದೆಯಷ್ಟೇ ನಿನ್ನ ಹೃದಯದ ಮಾತುಗಳೂ ಮೃದು. ನನ್ನಿಂದೇನಾದರೂ ತಪ್ಪಾಗಿದ್ದರೆ ಕ್ಷಮಿಸು" ಎಂದು ಹೇಳಿ ಕಿಲಕಿಲ ನಕ್ಕಿದ್ದಳು.
	"ಮೇಡಂ, ನಾನು ನಿಮಗೆ ತುಂಬಾ ಆಭಾರಿಯಾಗಿದ್ದೇನೆ" ಎಂದಿದ್ದೆ ಕುರುಚಲು ಮೀಸೆಯಲ್ಲಿ ಮುಸಿಮುಸಿ ನಗುತ್ತಾ.
	"ಮೇಡಂ-ಗೀಡಂ ಏನೂ ಬೇಡ. ಸಿಂಪಲ್ಲಾಗಿ ಅರ್ಪಿತಾ ಎಂದು ಕರೆದರೆ ಸಾಕು."
	"ನೀವು ನನಗಿಂತ ಹಿರಿಯರು...?"
	"ಅದೇನಿದ್ದರೂ ಅರ್ಪಿತಾ ಅಂತ ಕರೆದರೆ ಸಾಕು." ತನ್ನದೆಲ್ಲವನ್ನೂ ಅರ್ಪಿಸಿಕೊಂಡಿದ್ದ ಅರ್ಪಿತಾ ತಾಕೀತು ಮಾಡಿದ್ದಳು. 
	"ಓಕೆ" ಅಂದಿದ್ದೆ. 
	"ಒಳ್ಳೇ ಹುಡುಗ, ಜಾಣ ಮರಿ." ನನ್ನ ಕೆನ್ನೆ ತಟ್ಟುತ್ತ ಶಹಬ್ಬಾಸಗಿರಿ ಕೊಟ್ಟಿದ್ದಳು.  
	"ಅರ್ಪಿತಾ, ಒಂದು ರಿಕ್ವೆಸ್ಟ್..."
	"ಏನು...?"
	"ಮತ್ತೆ ಮತ್ತೆ ನನ್ನನ್ನು ಈ ಕೃತ್ಯಕ್ಕೆ ಬಳಸಿಕೊಳ್ಳಬೇಡ"
	"ಮುಂದಿನದು ಮುಂದೆ. ಅದೆಲ್ಲ ಈಗೇಕೆ?" ಅರ್ಪಿತಾ ಹೇಳಿದಾಗ ಖುಷಿಖುಷಿಯಲ್ಲಿ ಅವಳಿಂದ ಬೀಳ್ಕೊಂಡಿದ್ದೆ.
****
	ಕಡುಬಡತನ ಮನೆಗಂಟಿಕೊಂಡಿದ್ದ ಶಾಪ. ಅಮ್ಮ ನಾಲ್ಕಾರು ಮನೆಗಳಲ್ಲಿ ಕಸ-ಮುಸುರೆ ಮಾಡುತ್ತಿದ್ದುದರಿಂದ ಹೊಟ್ಟೆಪಾಡಿಗೆ ಕೊರತೆ ಇರಲಿಲ್ಲ. ಗೌಂಡಿ ಕೆಲಸ ಮಾಡುತ್ತಿದ್ದ ಅಪ್ಪ ಕಲ್ಲಪ್ಪ ಸಕಲಗುಣ ಸಂಪನ್ನ. ದುಡಿದಿದ್ದೆಲ್ಲವನ್ನೂ ಮದಿರೆ, ಮಾನಿನಿ, ಗುಟ್ಕಾ, ಇಸ್ಪೀಟಾಟಕ್ಕೆ ಇಡುತ್ತಿದ್ದ. ರಾತ್ರಿ ಕತ್ತಲೆಯಲ್ಲಿ ಅಮ್ಮನೊಂದಿಗೆ ಜಗಳ, ಹೊಡೆದಾಟ. ಅಮ್ಮನ ಮೈಯಲ್ಲಿ ಆಗಾಗ ಬಾಸುಂಡೆಗಳು ಮೂಡುತ್ತಿದ್ದವು. ಅಮ್ಮ ಗಳಿಸಿದ್ದನ್ನು ಹೊಡೆದು-ಬಡಿದು ಕಿತ್ತುಕೊಳ್ಳುತ್ತಿದ್ದ ಕಿರಾತಕ. ನೀರವ ರಾತ್ರಿಯಲ್ಲಿ ಅಮ್ಮನ ಅರಣ್ಯರೋದನ, ನರಳಾಟ ಹೊರಗೆ ಮಲಗಿರುತ್ತಿದ್ದ ನನ್ನ ಕಿವಿಯಲ್ಲಿ ಕಾದ ಎಣ್ಣೆ ಸುರಿದಂತಾಗುತ್ತಿತ್ತು. ಎದ್ದು ಅಪ್ಪನೆನ್ನುವ ನರರಾಕ್ಷಸನನ್ನು ತದಕಲೇ ಎಂಬ ಸಿಟ್ಟು ನನ್ನೆದೆಯಲ್ಲಿ ಕುದಿಯುತ್ತಿತ್ತಾದರೂ ಅಸಹಾಯಕತೆಯಿಂದ ತೆಪ್ಪಗಿರುತ್ತಿದ್ದೆ. ಆದರೂ ಅಮ್ಮನೆನ್ನುವ ಕರುಣಾಮಯಿ, ಸಹನಾಮಯಿ, ಕ್ಷಮಯಾ ಧರಿತ್ರಿ ಒಂದಿನಾನೂ ಅಪ್ಪನನ್ನು ಬೈಯುತ್ತಿರಲಿಲ್ಲ, ಅಪ್ಪನ ಕೆಟ್ಟದ್ದರ ಬಗ್ಗೆ ತುಟಿ ಪಿಟಕ್ಕೆನ್ನುತ್ತಿರಲಿಲ್ಲ. ಜೀವನವೆಂಬ ನದಿಯಲ್ಲಿ ಈಜುವುದು ಸುಲಭವಲ್ಲ ಎಂಬುದು ಚಿಕ್ಕವನಿದ್ದಾಗಿನಿಂದಲೇ ಹೃದಯಕ್ಕೆ ತಟ್ಟಿತ್ತು. ಅಪ್ಪ ಕುಡಿದೂ ಕುಡಿದೂ, ಅಮ್ಮನಿಗೆ ಚಿತ್ರಹಿಂಸೆ ಕೊಟ್ಟೂ ಕೊಟ್ಟೂ ಕೊನೆಗೆ ಕಂತೆ ಒಗೆದಾಗ ನಾನು ಒಂಭತ್ತನೇ ತರಗತಿಯಲ್ಲಿದ್ದೆ.                      	ನಾನಾಗ ಪಿಯು ಟೂದಲ್ಲಿ ಓದುತ್ತಿದ್ದೆ. ನನ್ನ ದೇಹದಲ್ಲಿ ವಿಚಿತ್ರ ಬದಲಾವಣೆಗಳಾಗತೊಡಗಿದವು. ನನ್ನ ವಾರಿಗೆಯ ಸಹಪಾಠಿ ಹುಡುಗರಿಗೆ ಚಿಗುರುಮೀಸೆ ಮೂಡತೊಡಗಿದ್ದರೆ ಹೆಣ್ಣುಡುಗಿಯರಂತೆ ನನ್ನೆದೆಯ ಮೊಲೆಗಳು ಉಬ್ಬತೊಡಗಿದವು. ಧ್ವನಿಯಲ್ಲೂ ಅಗಾಧ ಬದಲಾವಣೆ ಅದೂ ಹೆಣ್ಣು ಹುಡುಗಿಯರಂತೆ ಮೃದುವಾಗತೊಡಗಿತು. ನಡೆದಾಡುವ ಹಾವ-ಭಾವ, ಕೈ ಬೀಸುವಿಕೆಗಳೂ ಹೆಣ್ಣಿನಂತೆ ಕಾಣತೊಡಗಿತು. ಹುಡುಗರು ಚುಡಾಯಿಸಲು ಮುಂದಾಗಿದ್ದರು. ಮುಜುಗರ, ಮಾನಸಿಕ ಚಿತ್ರಹಿಂಸೆಯ ಅನುಭವ. ಕೆಲವೊಬ್ಬರಂತೂ ಎದೆಗೇ ಕೈ ಹಾಕುತ್ತಿದ್ದರು. ಅಮ್ಮನಿಗೂ ತೋರಿಸಿದೆ. ಅವಳೂ ಗಾಬರಿಗೊಂಡಳು. ಊರಲ್ಲಿದ್ದ ಡಾಕ್ಟರರ ಹತ್ತಿರ ಕರೆದುಕೊಂಡು ಹೋಗಿ ತೋರಿಸಿದಳು. `ಹಾರ್ಮೋನುಗಳ ಅಸಮತೋಲನದಿಂದ ಕೆಲವರಲ್ಲಿ ಹೀಗಾಗುತ್ತದೆ. ಇದೇನಂಥ ಗಂಭೀರ ಸಮಸ್ಯೆಯಲ್ಲ. ಚಿಂತಿಸುವುದು ಬೇಡ' ಎಂದು ಹೇಳಿ ಕಳುಹಿಸಿದ್ದರು. ಆದರೆ ನನ್ನ ಮಾನಸಿಕ ನೋವು, ಹಿಂಸೆ ನನಗಷ್ಟೇ ಗೊತ್ತು. 
	ಅದೊಂದು ದಿನ ಕಾಲೇಜಿನಿಂದ ಮನೆಗೆ ಬರುತ್ತಿರುವಾಗ ಶ್ರೀಮಂತ ಮನೆತನದ ಸೀನಿಯರ್ ಹುಡುಗನೊಬ್ಬ ತನ್ನ ಮನೆಗೆ ಕರೆದುಕೊಂಡು ಹೋಗಿದ್ದ. ಮನೆಗೆ ಹೋದವ ತನ್ನ ಕೋಣೆಗೆ ಕರೆದುಕೊಂಡು ಹೋಗಿದ್ದ. ಮೊಬೈಲಿನಲ್ಲಿ ಅದೇನೋ ಅಶ್ಲೀಲ ಚಿತ್ರಗಳ ದೃಶ್ಯಗಳನ್ನು ತೋರಿಸುತ್ತ ನನ್ನೆದೆಗೆ ಕೈಹಾಕಿ, `ಗುರು, ನೀನು ಹೆಣ್ಣೋ, ಗಂಡೋ ಎಂಬುದನ್ನು ಇಂದು ಟೆಸ್ಟ್ ಮಾಡಿಬಿಡೋಣ' ಎಂದೆನ್ನುತ್ತಾ ನನ್ನನ್ನು ಹಾಸಿಗೆಗೆ ಎಳೆದು ವಿವಸ್ತ್ರಗೊಳಿಸಲು ಮುಂದಾಗಿದ್ದ. ಅವನ ಅಸಭ್ಯ ವರ್ತನೆಯನ್ನು ಪ್ರತಿಭಟಿಸಿ ಕೊಸರಿಕೊಂಡು ತಕ್ಷಣ ಅಲ್ಲಿಂದ ಓಡಿಹೋಗಿ ನಮ್ಮ ಮನೆ ಸೇರಿದ್ದೆ. ಮಾನಸಿಕ ಯಾತನೆ ಅನುಭವಿಸಿದೆ, ತುಂಬಾ ಕುಗ್ಗಿ ಹೋದೆ. ನಾನು ಗಂಡೋ, ಹೆಣ್ಣೋ ಎಂಬ ದ್ವಂದ್ವದಲ್ಲಿ ಮುಳುಗಿ ಹೋದೆ. `ಈ ಜೀವನ ಇಷ್ಟೇನಾ? ಯಾವುದಕ್ಕಾಗಿ ಈ ಬದುಕು...? ಬದುಕಿದ್ದೂ ನಾನು ಸಾಧಿಸುವುದೇನಿದೆ? ಇಂಥಹ ಜೀವನವೇ ಬೇಡ. ನನ್ನಂಥಹ ಪ್ರಾಣಿ ಇಲ್ಲದಿದ್ದರೂ ಈ ಜಗತ್ತಿಗೇನು ನಷ್ಟವಾಗುವುದಿಲ್ಲ. ಅಂದರೆ ಇದಕ್ಕೆ ಕೊನೆ ಹಾಡಬೇಕೆಂದರೆ ಆತ್ಮಹತ್ಯೆಯೊಂದೇ ನನಗುಳಿದಿರುವ ದಾರಿ. ತತಕ್ಷಣ ಮನಸ್ಸಿನ ಪರದೆಯ ಮುಂದೆ ಅಮ್ಮನ ಮುಖ ಪ್ರತ್ಯಕ್ಷವಾಯಿತು. ಹೌದು, ಅಮ್ಮ ನನಗಾಗಿ ಬಹಳಷ್ಟು ಕಷ್ಟ ಪಡುತ್ತಿದ್ದಾಳೆ. ಹೊಟ್ಟೆ-ಬಟ್ಟೆ ಕಟ್ಟಿ ನನ್ನ ವಿದ್ಯಾಭ್ಯಾಸಕ್ಕಾಗಿ ತನ್ನ ಜೀವನವನ್ನೇ ಮುಡುಪಿಟ್ಟಿದ್ದಾಳೆ. ನನ್ನ ಬಗ್ಗೆ ಅದೆಷ್ಟೋ ಕನಸುಗಳನ್ನು ಕಟ್ಟಿಕೊಂಡಿದ್ದಾಳೆ. ನಾನು ಓದಿ ಒಂದು ಒಳ್ಳೇ ಉದ್ಯೋಗ ಹಿಡಿದು ಸಮಾಜದಲ್ಲಿ ಒಬ್ಬ ಉತ್ತಮ ನಾಗರಿಕನಾಗಬೇಕೆಂದು ಹಂಬಲಿಸುತ್ತಿಲ್ಲವೇ? ಅಪ್ಪ ಕೊಟ್ಟಂಥಹ ಚಿತ್ರಹಿಂಸೆಗಳನ್ನು ನನಗಾಗಿ ಸಹಿಸಿಕೊಳ್ಳುತ್ತಿದ್ದಳಲ್ಲವೇ? ಆತ್ಮಹತ್ಯೆ ಮಾಡಿಕೊಂಡು ಬಿಟ್ಟರೆ ತಾಯಿಯ ಋಣ ತೀರಿಸಿದಂತಾಗುತ್ತದೆಯೇ? ಏಳೇಳು ಜನ್ಮವೆತ್ತಿದರೂ ತಾಯಿ ಋಣ ತೀರಿಸಲು ಸಾಧ್ಯವಿಲ್ಲವಂತೆ. ಅದೇನೇ ಎಡರು-ತೊಡರುಗಳು ಬಂದರೂ ಧೈರ್ಯದಿಂದ ಎದುರಿಸಿ ತಾಯಿಯ ಕನಸನ್ನು ಸಾಕಾರಗೊಳಿಸುವುದು ನನ್ನ ಕರ್ತವ್ಯವಲ್ಲವೇ?' ಧೈರ್ಯವೇ ಸರ್ವತ್ರ ಸಾಧನಂ ಎಂಬ ಹಿರಿಯರ ಹಿತನುಡಿಯನ್ನು ಜ್ಞಾಪಿಸಿಕೊಂಡು ನನ್ನನ್ನು ನಾನೇ ಸಮಾಧಾನ ಮಾಡಿಕೊಂಡಿದ್ದೆ ಅಂದು. 
	ಇಂಥಹ ಹಲವಾರು ಘಟನೆಗಳು, ಚಿತ್ರಹಿಂಸೆಗಳು, ಲೈಂಗಿಕ ದೌರ್ಜನ್ಯದ ಪ್ರಯತ್ನಗಳು ನನ್ನ ಮೇಲೆ ಅವ್ಯಾಹತವಾಗಿ ನಡೆಯುತ್ತಲೇ ಇದ್ದವು. ಅಂದಿನಿಂದ ಸಡಿಲವಾದ ಅಂಗಿಯನ್ನು ತೊಡಲೂ ಮುಂದಾಗಿದ್ದೆ. ಅದಕ್ಕೂ ಸ್ನೇಹಿತರ, "ನೀನೆಷ್ಟೇ ಮುಚ್ಚಿಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದರೂ ನೀನೆಂಥಹವನೆಂದು ಇಡೀ ಜಗತ್ತಿಗೇ ಗೊತ್ತಾಗಿದೆ. ನೀನು ಹೆಣ್ಣ್ಯಾನೇ" ಎಂದು ಚುಡಾಯಿಸುವುದು, ಪಟಕ್ಕಂತ ನನ್ನೆದೆಯನ್ನು ಅಮುಕಿ ಅಸಭ್ಯವಾಗಿ ವರ್ತಿಸುವುದು ಮುಂದುವರಿದಿತ್ತು. ಕೆಲವೊಬ್ಬರು ನನ್ನ ಮರ್ಮಾಂಗಕ್ಕೂ ಕೈ ಹಾಕಿ ಹಾವನ್ನು ಮೆಟ್ಟಿದವರಂತೆ ಹಿಂದಕ್ಕೆ ಸರಿದಿದ್ದೂ ಇದೆ. ಎಲ್ಲವನ್ನೂ ಸಹಿಸಿಕೊಳ್ಳುತ್ತಾ ರಸಾಯನ ಶಾಸ್ತ್ರದಲ್ಲಿ ಎಂಸ್ಸಿಯನ್ನೂ ಮುಗಿಸಿಕೊಂಡೆ. ಬಿಎಸ್ಸಿ ಮುಗಿಸಿದಾಗಲೇ ಓದಿಗೆ ಬೈ ಹೇಳಬೇಕೆಂದರೂ ಅಮ್ಮ ತನ್ನ ಹಟ ಬಿಡಲೇ ಇಲ್ಲ. `ನನಗೇನೇ ತೊಂದರೆಯಾದರೂ ನೀನು ಇನ್ನೂ ಓದಲೇಬೇಕು' ಎಂದೆನ್ನುತ್ತಾ ನನ್ನ ಓದಿಗೆ ಪ್ರೋತ್ಸಾಹ ನೀಡುತ್ತಿದ್ದಳು. ವಿದ್ಯಾರ್ಥಿ ವೇತನದ ಸಹಾಯವೂ ನನಗಿತ್ತು. ಕಾಲೇಜ್, ವಿಶ್ವವಿದ್ಯಾಲಯದಲ್ಲಿ ಓದುವಾಗಲೂ ಬಹಳಷ್ಟು ದೈಹಿಕ, ಮಾನಸಿಕ ಹಿಂಸೆ ಅನುಭವಿಸಿದೆ ನನ್ನ ದೇಹದಲ್ಲಿನ ನ್ಯೂನ್ಯತೆಗಳಿಂದ. ಕೆಲವೊಬ್ಬರು, `ಹಾಸಿಗೆಗೆ ಬಾ' ಎಂದು ಕರೆಯುವಷ್ಟರ ಮಟ್ಟಿಗೆಗಿನ ಕೀಳು ಮಟ್ಟಕ್ಕೂ ಇಳಿಯುತ್ತಿದ್ದರು. ಅದೆಷ್ಟೋ ಸಾರೆ ಆತ್ಮಹತ್ಯೆಯ ವಿಚಾರ ಸುಳಿದು ಹೋಗಿತ್ತು. ಆಗಲೂ ಅಮ್ಮನ ಮುಖ ಧುತ್ತೆಂದು ಕಣ್ಣೆದುರಿಗೆ ಬಂದು ನಿಲ್ಲುತ್ತಿತ್ತು. ಹೇಗೋ ಸಮಾಧಾನ ಮಾಡಿಕೊಂಡು ಸಹಿಸಿಕೊಳ್ಳುತ್ತಿದ್ದೆ. ಆದರೂ ಕೀಳರಿಮೆಯ ಭಾವ ನನ್ನನ್ನು ಘಾಸಿಗೊಳಿಸುತ್ತಿತ್ತು. ಎಂಸ್ಸಿ ನಂತರ ಬಿಎಡ್ ಕೂಡ ಮಾಡಿಕೊಂಡೆ. ಅಮ್ಮನ ಆಶೀರ್ವಾದದಿಂದ ಕಾಲೇಜಿನಲ್ಲಿ ಉಪನ್ಯಾಸಕ ಕೆಲಸವೂ ಸಿಕ್ಕಿತು. ಈಗಲೂ ಸಾಕಷ್ಟು ಕಹಿ ಪ್ರಸಂಗಗಳನ್ನು ಎದುರಿಸುತ್ತಿದ್ದೇನೆ. ನನ್ನ ವಿದ್ಯಾರ್ಥಿಗಳಿಂದಲೂ ನಗೆಪಾಟಲಿಗೆ ಈಡಾಗುತ್ತಿದ್ದೇನೆ. ಇಂಥಹ ಸಂದಿಗ್ಧ ಸಮಯದಲ್ಲಿ ಅರ್ಪಿತಾ ನಮ್ಮ ಕಾಲೇಜಿಗೆ ಬಂದಳು.           
						ಅರ್ಪಿತಾ

	ನನ್ನ ಗಂಡ ಸುಂದರನಿಗೆ ವಿಕಲಚೇತನಳಾದ ನಾನೆಂದರೆ ಮೊದಲಿನಿಂದಲೂ ಅಸಡ್ಡೆತನ, ಕಾಲುಕಸ ಇದ್ದಂತೆ. ಯಾವಾಗಲೂ ತುಚ್ಛಭಾವದಿಂದ ನೋಡುತ್ತಿದ್ದ. ಮೊದಲರಾತ್ರಿಯ ದಿನದಂದಂತೂ ರಣಹದ್ದು ಗುಬ್ಬಚ್ಚಿಯ ಮೇಲೆ ಎರಗುವಂತೆ ನನ್ನ ದೇಹದ ಮೇಲೆ ಎರಗಿ ದೌರ್ಜನ್ಯವೆಸಗಿ ಅಟ್ಟಹಾಸ ಮೆರೆದಿದ್ದ. ಚೆಂದಾಗಿ ಒಂದು ಪ್ರೀತಿಯ ಮಾತಿಲ್ಲ, ಕತೆಯಿಲ್ಲ. ರಾತ್ರಿ ರಾಕ್ಷಸನಂತೆ ಮೈಮೇಲೆ ಎರಗಿ ತನ್ನ ತೀಟೆ ತೀರಿಸಿಕೊಳ್ಳುತ್ತಿದ್ದ. ದಾಂಪತ್ಯ ಜೀವನವೆನ್ನುವುದು ನರಕ ಸದೃಶವಾಗಿತ್ತು. ಎದೆಯೊಳಗಿನ ನೋವುಗಳನ್ನು ಹೇಗೋ ನುಂಗಿಕೊಳ್ಳುತ್ತಿದ್ದೆ. ಹೊಂದಾಣಿಕೆಯೇ ಜೀವನವಾಗಿತ್ತು.
	ಈ ಕಾಲೇಜಿಗೆ ಬಂದ ದಿನವೇ ನನಗೆ ಗುರುಪ್ರಸಾದನ ಪರಿಚಯವಾಗಿತ್ತು. ಅದೇನೋ ಒಂಥರ ಅನುಕಂಪ ಅವನ ಪರಿಸ್ಥಿತಿಯನ್ನು ಕಂಡಾಗ. ನನ್ನ ಕಾಲಲ್ಲಿ ಊನವಿದ್ದುದರಿಂದ ಅವನಿಗೂ ನನ್ನ ಮೇಲೆ ಒಂಥರ ಅನುಕಂಪವಿದ್ದುದು ನನ್ನ ಗಮನಕ್ಕೆ ಬರದೇ ಇರಲಿಲ್ಲ. ಅವನಲ್ಲಿ ಧೈರ್ಯ ತುಂಬಬೇಕು ಎಂಬ ಯೋಚನೆ ನನ್ನಲ್ಲಿ ಸುಳಿಯದೇ ಇರಲಿಲ್ಲ. 
	ಗುರುಪ್ರಸಾದನೊಂದಿಗೆಗಿನ ಮೊದಲ ಮಧುರಾತಿ ಅನುಭವದ ನಂತರ ಅವನನ್ನು ನನ್ನ ಮನೆಗೆ ಮತ್ತೆ ಮೂರ್ನಾಲ್ಕು ಸಾರೆ ಕರೆದುಕೊಂಡು ಹೋಗಿದ್ದೆ ಡ್ರಾಪ್ ತೆಗೆದುಕೊಳ್ಳುವ ನೆಪದಲ್ಲಿ. `ಇಂಥಹ ಕೃತ್ಯಕ್ಕೆ ನನ್ನನ್ನು ಮತ್ತೆ ಬಳಸಿಕೊಳ್ಳಬೇಡ' ಎಂದಿದ್ದ ಅವನ ಮಾತಿಗೆ ಮನ್ನಣೆ ನೀಡಿದ್ದೆ. ಇಬ್ಬರೂ ಮನಸಾರೆ ಹರಟುತ್ತಿದ್ದೆವು ಅಷ್ಟೇ. ಅವನ ಮನದಲ್ಲಿದ್ದ ದ್ವಂದ್ವ ಇನ್ನೂ ಸಂಪೂರ್ಣವಾಗಿ ಅಳಿಸಿ ಹೋಗಿರಲಿಲ್ಲವೆಂಬುದು ಅವನ ಮನದಾಳದ ಮಾತುಗಳಲ್ಲಿ ಆಗಾಗ ವ್ಯಕ್ತವಾಗುತ್ತಲೂ ಇತ್ತು. ಆಗಾಗ ಅವನೆದೆ ತದಕಿ ತಮಾಷೆ ಮಾಡುತ್ತಲೂ ಇದ್ದೆ.
	"ಗುರು, ಸೃಷ್ಟಿಯ ವೈಚಿತ್ರ್ಯದಲ್ಲಿ ಕೆಲವೊಂದು ಸಾರೆ ದೇಹದಲ್ಲಿ ಹಾರ್ಮೋನುಗಳ ಅಸಮತೋಲನದಿಂದ ನಿನ್ನಂತೆ ಶಾರೀರಿಕವಾಗಿ ಏರು-ಪೇರುಗಳಾಗುತ್ತವೆ. ಎಷ್ಟೋ ಜನ ಹೆಂಗಸರಿಗೆ ಕಂಠ ಗಡುಸಾಗಿದ್ದು ಧ್ವನಿ ಗಂಡಸಿನಂತಿರುತ್ತದೆ. ಕೆಲವೊಬ್ಬರು ಗಂಡಸಿನಂತೆ ದೊಡ್ಡದೊಡ್ಡದಾಗಿ ಹೆಜ್ಜೆಗಳನ್ನು ಹಾಕುತ್ತಾ ಕೈಗಳನ್ನು ಅಡ್ಡಾ-ದಿಡ್ಡಿಯಾಗಿ ಬೀಸುತ್ತಿರುತ್ತಾರೆ. ಕೆಲವು ಗಂಡಸರ ಶರೀರ ಸಂಪೂರ್ಣ ಗಂಡಿಸಿನಂತಿದ್ದರೂ ಮಾನಸಿಕವಾಗಿ ಹೆಣ್ಣಿನ ಸಂವೇದನೆಗಳನ್ನು ಅನುಭವಿಸುತ್ತಿರುತ್ತಾರೆ. ನಿನ್ನಂತೆ ಕೆಲವೊಬ್ಬರಿಗೆ ಧ್ವನಿ ಮತ್ತು ನಡಿಗೆಯಲ್ಲಿ ಹೆಂಗಸಿನ ಹಾವ-ಭಾವವಿರುತ್ತವೆ. ಭಗವಂತನ ಸೃಷ್ಟಿಯಲ್ಲಿ ಇಂಥಹ ಚೋದ್ಯಗಳು ಅಲ್ಲೊಂದು ಇಲ್ಲೊಂದರಂತೆ ಕಾಣಸಿಗುತ್ತವೆ. ಭಗವಂತ ನಿನಗೆ ಅದೇನು ಶರೀರವನ್ನು ಕರುಣಿಸಿರುವನೋ ಅದನ್ನು ಒಪ್ಪಿಕೊಂಡರೆ ನಿನ್ನ ದ್ವಂದ್ವಕ್ಕೆ ಉತ್ತರ ಸಿಕ್ಕ ಹಾಗೆ. ಆಗ ಎಲ್ಲವೂ ಸರಳ; ಜೀವನವೂ ಸುಂದರ. ಹದಿಹರೆಯಕ್ಕೆ ಬಂದಾಗಿನಿಂದಲೂ ನೀನು ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಘಾಸಿಗೊಂಡಿರುವುದು ನಿಜ. ಆದರೆ ಅದನ್ನೇ ಮನಸ್ಸಿನಲ್ಲಿಟ್ಟುಕೊಂಡು ಜೀವನಪರ್ಯಂತ ಕೊರಗುವುದರಲ್ಲಿ ಅರ್ಥವಿಲ್ಲ. ನೀನು ಗಂಡಸಿನಂತೆಯೇ ಜೀವನ ನಡೆಸಲು ಇಚ್ಛಿಸುತ್ತಿರುವಾಗ ಎಲ್ಲ ದ್ವಂದ್ವಗಳಿಂದ ಹೊರಗೆ ಬರಲು ಮನಸ್ಸನ್ನು ಅಣಿಗೊಳಿಸಿಕೊಳ್ಳಬೇಕು ಅಷ್ಟೇ. ಖಾಲೀ-ಪೀಲಿ ಜನರಾಡುವ ಕುಟುಕು, ಕುಚೋದ್ಯದ ಮಾತುಗಳಿಗೆ ಕಿವಿಗೊಡುವ ಅವಶ್ಯಕತೆ ಇಲ್ಲ. ಅತ್ತಿತ್ತ ಹರಿದಾಡಿ ದ್ವಂದ್ವ, ಕೀಳರಿಮೆಗಳನ್ನು ಹುಟ್ಟುಹಾಕುವ ಮನಸ್ಸೆಂಬ ಕುದುರೆಯ ಮೂಗುದಾರವನ್ನು ಭದ್ರವಾಗಿ ಹಿಡಿದುಕೊಂಡು ನಮಗೆ ಬೇಕಿರುವ ದಿಕ್ಕಿನಲ್ಲಿ ಚಲಿಸುವಂತೆ ಮಾಡಿದರೆ ಎಲ್ಲವೂ ತನ್ನಿಂದ ತಾನೇ ಸರಿ ಹೋಗುತ್ತದೆ. ಆ ಧೈರ್ಯ ನಿನ್ನಲ್ಲಿ ಇದೆಯೆಂಬುದು ನನಗೆ ಮನವರಿಕೆಯೂ ಆಗಿದೆ. ನೀನು ಪಕ್ಕಾ ಗಂಡಸೇ ಎಂಬುದನ್ನು ಈಗಾಗಲೇ ಸಾಬೀತೂ ಮಾಡಿರುವಿ. ಇನ್ನೂ ಅನುಮಾನವೇಕೆ? ಬಿ ಕೂಲ್. ನನಗೆ ಪರಿಚಯವಿರುವ ಆಪ್ತ ಸಮಾಲೋಚಕರೊಬ್ಬರು ಇದ್ದಾರೆ. ಇನ್ನೂ ಅನುಮಾನವಿದ್ದರೆ ಅವರ ಸಲಹೆ ಪಡೆಯೋಣ." ಅವನಲ್ಲಿ ಆತ್ಮಸ್ಥೈರ್ಯ ಮೂಡಿಸುವ ಪ್ರಯತ್ನ ಮಾಡಿದ್ದೆ.
	"ಅರ್ಪಿತಾ, ಯಾರಲ್ಲೂ ಹೋಗುವುದು ಬೇಡ. ಇದಕ್ಕಿಂತ ಹೆಚ್ಚಿನ ಆಪ್ತ ಸಮಲೋಚನೆ ಬೇಕಾ...? ಹೃದಯ ತಟ್ಟುವ ನಿನ್ನ ಮಾತುಗಳಿಗೆ ನಾನು ಚಿರಋಣಿ. ನೀನು ಹೇಳಿದಂತೆ ಭಗವಂತ ಕರುಣಿಸಿರುವ ಈ ದೇಹ ಹೇಗಿದೆಯೋ ಹಾಗೆ ಸ್ವೀಕರಿಸಿ ಗಂಡಸಿನಂತೆಯೇ ವರ್ತಿಸುವೆ. ನಿನ್ನಿಂದ ತುಂಬಾ ಉಪಕಾರವಾಯಿತು" ಎಂದೆನ್ನುತ್ತಾ ಗುರು ನನ್ನ ಕೈಗಳೆರಡನ್ನೂ ಹಿಡಿದುಕೊಂಡು ತನ್ನ ಹಣೆಗೊತ್ತಿಕೊಂಡು ಧನ್ಯತಾಭಾವ ವ್ಯಕ್ತಪಡಿಸುತ್ತಾ ನನ್ನನ್ನು ಬಲವಾಗಿ ತಬ್ಬಿ ಹಣೆಗೆ ಮುತ್ತಿಟ್ಟಿದ್ದ. ಅವನ ನೋಟದಲ್ಲಿ ಕೃತಜ್ಞತಾ ಭಾವವಿತ್ತು.   
	ಮುಂದೆ ತುಸು ದಿನಗಳಲ್ಲಿ ನನ್ನ ಸಂಸಾರದಲ್ಲಿ ಬಿರುಗಾಳಿ ಬೀಸಲು ಶುರುವಾಯಿತು. ಗುರು ಆಗಾಗ ನಮ್ಮ ಮನೆಗೆ ಬಂದು ಹೋಗುತ್ತಿದ್ದುದನ್ನು ಗಮನಿಸಿದ ಅಕ್ಕ-ಪಕ್ಕದವರು ನಮ್ಮಿಬ್ಬರ ನಡತೆಯನ್ನು ಸಂಶಯಾಸ್ಪದ ದೃಷ್ಟಿಯಿಂದ ನೋಡತೊಡಗಿದರು. ನನ್ನ ಗಂಡನ ಕಿವಿಯಲ್ಲಿ ಯಾರೋ ಸಂಶಯದ ಹುಳುವನ್ನು ಬಿಟ್ಟಿದ್ದೂ ಆಯಿತು. `ಒಲ್ಲದ ಗಂಡನಿಗೆ ಮೊಸರಲ್ಲೂ ಕಲ್ಲು' ಎಂಬಂತೆ ನನ್ನ ಗಂಡನೆನ್ನುವ ಪ್ರಾಣಿ ದೂರ್ವಾಸ ಮುನಿಯಂತಾದ. ಬಯ್ಗಳ ಸರಮಾಲೆಯನ್ನೇ ನನ್ನ ಕೊರಳಿಗೆ ಹಾಕಿದ. ಬಾಸುಂಡೆಗಳೂ ಆಗಾಗ ಮೈ ಮೇಲೆ ಚಿತ್ರ-ವಿಚಿತ್ರ ಚಿತ್ರಗಳನ್ನು ಮೂಡಿಸತೊಡಗಿದವು. `ನೀನು ಜಾರಿಣಿ, ಲಜ್ಜೆಗೆಟ್ಟವಳು. ನನ್ನಂಥಹ ಸುಂದರ ಗಂಡನಿದ್ದರೂ ಆ ಹೆಣ್ಣ್ಯಾನಂಥ ಹುಡುಗನ ಜೊತೆಗೆ ಚಕ್ಕಂದವಾಡುತ್ತಿರುವಿ. ನನ್ನಲ್ಲಿ ಇರದಂಥಹದ್ದು ಅವನಲ್ಲೇನಿದೆ? ಥೂ ನಿನ್ನ ಜನ್ಮಕ್ಕಿಷ್ಟು ಬೆಂಕಿಹಾಕ! ಹೊಟ್ಟೆಪಾಡಿಗಾಗಿ ಸೆರಗು ಹಾಸುವ ಹೆಂಗಸಿಗಿಂತಲೂ ನೀನು ಕಡೆ" ಎಂಬ ಬೈಗುಳಗಳು ನನ್ನ ಮುಡಿಗೇರತೊಡಗಿದವು. ಜೀವನ ನರಕ ಸದೃಶವಾಗತೊಡಗಿತು.        
	`ಅನುಮಾನ ಮತ್ತು ಅವಮಾನ ಎಂಬ ಪದಗಳಿಗೆ ಸಾವಿರಾರು ಹೃದಯಗಳನ್ನು ಛಿದ್ರ ಮಾಡುವಷ್ಟು ಶಕ್ತಿ ಇದೆ. ಈ ಎರಡೂ ಪದಗಳು ನಮ್ಮ ಜೀವನದಲ್ಲಿ ಬಾರದಂತೆ ನೋಡಿಕೊಳ್ಳಿರಿ' ಎಂದು ಅನುಭಾವಿಗಳು ಹೇಳಿದ್ದು ನನ್ನ ಜೀವನದಲ್ಲಿ ಅಕ್ಷರಶಃ ಸತ್ಯವೆನಿಸತೊಡಗಿತು.
	"ಏನೋ ಪಾಪ ಕುಂಟಿ ಅಂತ ಬಾಳು ಕೊಟ್ಟರೆ ನನಗೇ ದೋಖಾ ಮಾಡುತ್ತಿರುವಿ. ಕುಂಟರಿಗೆ, ಕುರುಡರಿಗೆ ಧಿಮಾಕು ಬಹಳ ಅಂತ, ನಿನ್ನಂಥಹವರನ್ನು ನೋಡೇ ಹೇಳಿರಬೇಕು. ನಾಯಿ ಮುಟ್ಟಿದ ಮಡಕೆ ನೀನು. ನಿನ್ನಂಥಹವಳ ಜೊತೆಗೆ ಸಂಸಾರ ಮಾಡುವುದಕ್ಕೆ ಹೇಸಿಗೆ ಎನಿಸುತ್ತಿದೆ" ಎಂದು ಹಾಗೆ ಹೀಗೆ ಬಾಯಿಗೆ ಬಂದಂತೆ ಬಯ್ಯುತ್ತಿದ್ದ. ಸಿಟ್ಟಿನ ಭರದಲ್ಲಿ ಹೊಡೆಯುತ್ತಲೂ ಇದ್ದ. ಕೆಲವೊಂದು ರಾತ್ರಿ ಮನೆಗೇ ಬರುತ್ತಿರಲಿಲ್ಲ. ಅವನಿಗೆ ಸಹೋದ್ಯೋಗಿಯೊಬ್ಬಳು ತಗುಲಾಕ್ಕಿಕೊಂಡಿದ್ದಾಳೆಂದು ಆಮೇಲೆ ಗೊತ್ತಾಗಿತ್ತು. ರಾತ್ರಿ ಬಂದರೂ ವಿಕೃತಕಾಮಿಯಂತೆ ಅತ್ಯಾಚಾರವೆಸಗುತ್ತಿದ್ದ. 
	ಕೊನೆಗೊಂದು ದಿನ, "ಎಂಜಲೆಲೆಯ ಮೇಲೆ ಉಣ್ಣುವ ಅಭ್ಯಾಸ ನನಗಿಲ್ಲ. ನೀನು ನನಗೆ ಬೇಡ" ಎಂದು ಕಡ್ಡಿ ಮುರಿದಂತೆ ಹೇಳಿ ಕೊರಳಲ್ಲಿದ್ದ ತಾಳಿಯನ್ನು ಕಿತ್ತುಕೊಂಡು ನನ್ನಿಂದ ದೂರಾಗಿದ್ದ. ನಾಲ್ಕು ವರ್ಷಗಳ ನಮ್ಮ ದಾಂಪತ್ಯ ಕೊನೆಗೊಂಡಿತ್ತು. ಇಂಥಹ ಅನಾಗರಿಕ ಮನುಷ್ಯನ ಜೊತೆಗೆ ಬಾಳುವುದಕ್ಕಿಂತ ಒಂಟಿಯಾಗಿರುವುದೇ ಲೇಸು ಅಂತ ಅಂದುಕೊಂಡು ಸಂಬಂಧ ಕಡಿದುಕೊಂಡೆ. ಆಗ ನನ್ನ ಕೈಹಿಡಿದು ನಡೆಸಿದ್ದು ಇದೇ ಹೆಣ್ಣ್ಯಾ ಗುರು. ದುಃಖಿತಳಾಗಿದ್ದ ನನ್ನ ಕಂಬನಿ ಒರೆಸಿ ಸಾಂತ್ವನದ ಮಳೆಯನ್ನೇ ಸುರಿಸಿ ನನ್ನೆದೆಯ ಬೇಗುದಿಯನ್ನು ತಣಿಸಿದ್ದ. ಅದೊಂದು ದಿನ ನನ್ನನ್ನು ತೋಳಲ್ಲಿ ಬಳಸಿ ನನ್ನೆದೆಯನ್ನು ತನ್ನೆದೆಗೆ ಒತ್ತಿಕೊಂಡು, ಬಿಗಿದಪ್ಪಿಕೊಂಡು, "ಅರ್ಪಿತಾ, ನೀನು ನನ್ನ ಜೀವನದಲ್ಲಿ ಹೊಸ ಬೆಳಕನ್ನು ಮೂಡಿಸಿದವಳು. ನೀನು ನನ್ನವಳೇ ಏಕೆ ಆಗಬಾರದು? ತುಂಬು ಹೃದಯದಿಂದ ಸ್ವೀಕರಿಸುವೆ" ಎಂದು ನನ್ನೆದೆಯಲ್ಲಿ ಮೆಲ್ಲಗೇ ಉಸುರಿದ್ದ.
	"ಗುರು, ನಾನು ಗಂಡ ಬಿಟ್ಟವಳು. ಮೇಲಾಗಿ ಕುಂಟಿ. ನಿನಗೆ ಅನುರೂಪಳಾದ ಹುಡುಗಿ ಸಿಗದೇ ಇರುತ್ತಾಳೆಯೇ?" ನನ್ನ ಮನದಲ್ಲಿದ್ದುದನ್ನು ಬಯಲಿಗಿಟ್ಟಿದ್ದೆ.
	"ನನಗೆ ನೀನೇ ಬೇಕು. ನಿನಗಿಂತ ಒಳ್ಳೇ ಹೆಂಡತಿ ಸಿಗಲಾರಳು." ಖಡಾಖಂಡಿತವಾಗಿ ಹೇಳಿದ್ದ ಗುರು.
	"ಮತ್ತೆ ನಿನ್ನ ಅಮ್ಮ ಒಪ್ಪಬೇಕಲ್ಲ ಈ ಸಕೆಂಡ್ ಹ್ಯಾಂಡ್ ಕುಂಟಿ ಹೆಂಡತಿಯನ್ನು...?"
	"ಆ ಚಿಂತೆ ನಿನಗೇಕೆ? ನನ್ನಮ್ಮನ ಆಶೀರ್ವಾದ ಪಡೆದುಕೊಂಡೇ ಮದುವೆಯಾಗೋಣ. ಸರಿ ತಾನೇ...?" ಎಂದಿದ್ದ. 
	ಗುರುಪ್ರಸಾದ್ ನನ್ನನ್ನು ತನ್ನ ಮನೆಗೆ ಕರೆದುಕೊಂಡು ಹೋಗಿದ್ದ. "ಅಮ್ಮಾ, ಇವಳೇ ಅರ್ಪಿತಾ..." ಎಂದು ತನ್ನಮ್ಮನಿಗೆ ಪರಿಚಯಿಸಲು ಮುಂದಾಗಿದ್ದ. "ಅಮ್ಮಾ, ನಾನು ಗಂಡ ಬಿಟ್ಟವಳು ಮತ್ತು ಕುಂಟಿ..." ಎಂದು ನಾನು ಹೇಳುವಷ್ಟರಲ್ಲಿ, "ಗೊತ್ತು ಗೊತ್ತು. ನಿನಗೆ ಗಂಡ ಬಿಟ್ಟವಳೆಂದು ಹೇಳಿದವರ್ಯಾರು? ಪಕ್ಕದಲ್ಲೇ ಗುಂಡು ಕಲ್ಲಿನಂಥ ನನ್ನ ಮಗ ಇರುವಾಗ ನೀನು ಗಂಡ ಬಿಟ್ಟವಳೇಗೆ ಆಗುವಿ? ದೈವೀ ಸಂಕಲ್ಪದಿಂದಲೇ ನೀವಿಬ್ಬರೂ ಸತಿ-ಪತಿಗಳಾಗುತ್ತಿರುವಿರಿ" ಎಂದೆನ್ನುತ್ತಾ ನಮ್ಮಿಬ್ಬರನ್ನು ತುಂಬು ಹೃದಯದಿಂದ ಸ್ವಾಗತಿಸಿ ತೆಕ್ಕೆಗೆ ಹಾಕಿಕೊಂಡು ಆಶೀರ್ವದಿಸಿದಳು. ಮರುದಿನ ದೇವಸ್ಥಾನವೊಂದರಲ್ಲಿ ದೇವರ ಸನ್ನಿಧಿಯಲ್ಲಿ ಹಾರಗಳನ್ನು ಬದಲಾಯಿಸಿಕೊಂಡು ಸತಿ-ಪತಿಗಳಾದೆವು. ನಮ್ಮ ಅನ್ಯೋನ್ಯ ದಾಂಪತ್ಯಕ್ಕೆ ಸಾಕ್ಷಿ ಎನ್ನುವಂತೆ ವರ್ಷ ತುಂಬುವಷ್ಟರಲ್ಲಿ `ಚಿಗುರು' ನಮ್ಮ ಮಡಿಲು ಸೇರಿಕೊಂಡಳು. ಹೆಣ್ಣ್ಯಾ ಗುರುಪ್ರಸಾದ್ ಮತ್ತು ಈ ಕುಂಟಿ ಈಗ ಆದರ್ಶ ದಂಪತಿಗಳು. ಮತ್ತಿನ್ನೇನು ಬೇಕು ಈ ಮೂರು ದಿನದ ಬದುಕಿಗೆ...?
	"ಏನೇ ಕುಂಟಿ ಇನ್ನೂ ನಿದ್ರೆ ಬಂದಿಲ್ಲವಾ...?" ಗುರು ನನ್ನ ಕೆನ್ನೆ ತಟ್ಟಿದಾಗ ಅವನೆಡೆ ದೃಷ್ಟಿ ಹರಿಸುತ್ತಾ, "ಹಳೇ ನೆನಪುಗಳು ಮನದಲ್ಲಿ ಸುಳಿಯುತ್ತಿದ್ದವು. ನಿನಗೂ ಅದೇ ನೆನಪುಗಳು ಕಾಡುತ್ತಿವೆ ತಾನೆ...?" ಎಂದೆನ್ನುವಷ್ಟರಲ್ಲಿ ಗುರು ಹೌದೆನ್ನುತ್ತಾ ನನ್ನೆದೆಯಲ್ಲಿ ಮುಖವಿರಿಸಿ ಕಣ್ಮುಚ್ಚಿ ಮಲಗಲು ಮುಂದಾದ.    	   	


	* ಶೇಖರಗೌಡ ವೀ ಸರನಾಡಗೌಡರ್,
	ತಾವರಗೇರಾ-583279, ತಾ : ಕುಷ್ಟಗಿ, ಜಿ : ಕೊಪ್ಪಳ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

3 thoughts on “ನಗುವಿರದ ಮನದಲ್ಲಿ ಅರಳಿದ ಮಲ್ಲಿಗೆ”

  1. JANARDHANRAO KULKARNI

    ವಾರದ ಕಥೆ ‘ ನಗುವಿರದ ಮನದಲ್ಲಿ ಅರಳಿದ ಮಲ್ಲಿಗೆ ‘ ಚನ್ನಾಗಿದೆ. ಅಪರೂಪದ ವಿಷಯಕ್ಕೆ ಪ್ರೀತಿಯ ಲೇಪನ ಮಾಡಿ ಹೇಳಿದ್ದು ಸೊಗಸಾಗಿದೆ. ಅಭಿನಂದನೆಗಳು ಗೌಡರಿಗೆ.

  2. Raghavendra Mangalore

    ವಿಭಿನ್ನ ಕಥಾ ವಸ್ತುವನ್ನು ಪ್ರಸ್ತುತ ಪಡಿಸಿದ ರೀತಿ ಅನನ್ಯ. ಅಪರೂಪದ ದಂಪತಿಗಳ ಸಂಭಾಷಣೆ ಅಪ್ತವಾಯಿತು.

  3. ಧರ್ಮಾನಂದ ಶಿರ್ವ

    ಭಿನ್ನಕಥಾವಸ್ತುವಿನ ಸರಳ ಕಥೆಯಲ್ಲಿ ಸರಸ, ಕಾಮ, ಪ್ರೇಮ ವಿಜೃಂಭಿಸಿವೆ.
    ಅಭಿನಂದನೆಗಳು.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter