ಗಮಕಿಯ ದೃಷ್ಟಿಯಲ್ಲಿ ಗದಾಯುದ್ಧ

ರನ್ನನ ಗದಾಯುದ್ಧಂ
ವ್ಯಾಖ್ಯಾನ ಸಹಿತ
ವ್ಯಾಖ್ಯಾನಕಾರರು: ಡಾ. ಎಂ.ಎ. ಜಯರಾಮ ರಾವ್
ವೀರಲೋಕ ಬುಕ್ಸ್, ಬೆಂಗಳೂರು
ಮೊಬೈಲ್ : 7022122121
ಬೆಲೆ ರೂ. 350/- 
ವರ್ಷ : 2022, ಪುಟಗಳು : 304

ಹತ್ತನೆಯ ಶತಮಾನದ ಪ್ರಮುಖ ಕನ್ನಡ ಕವಿಗಳಲ್ಲಿ ರನ್ನನದು ಎದ್ದು ಕಾಣುವ ಹೆಸರು. ರತ್ನತ್ರಯರಲ್ಲಿ ಒಬ್ಬನಾದ ಆತ ಶಕ್ತಿಕವಿ ಎಂಬ ಖ್ಯಾತಿಗೂ ಭಾಜನನಾಗಿದ್ದಾನೆ. ಕವಿಚಕ್ರವರ್ತಿ ಬಿರುದಾಂಕಿತ ಕವಿ ರನ್ನನ `ಗದಾಯುದ್ಧ' ಒಂದು ಅಭಿಜಾತ ಕೃತಿ. ಇದೊಂದು ಅನಘ್ರ್ಯ ಕೃತಿ ರತ್ನವೂ ಹೌದು. ಪಂಪನ `ವಿಕ್ರಮಾರ್ಜುನ ವಿಜಯ'ದ ಹಾಗೆ ರನ್ನನ 	`ಗದಾಯುದ್ಧ' ಅಥವಾ `ಸಾಹಸಭೀಮ ವಿಜಯ' ಸಹ ಒಂದು ಚಿರನೂತನ ಮಹಾಕಾವ್ಯ. 

ಈ ಗದಾಯುದ್ಧ ಕಾವ್ಯವನ್ನು ಗಮಕದ ಹಿನ್ನೆಲೆಯಲ್ಲಿ ವ್ಯಾಖ್ಯಾನ ಸಹಿತ ಅರ್ಥ ವಿವರಣೆಯೊಂದಿಗೆ ಹೊರತಂದ ಶ್ರೇಯಸ್ಸು ಖ್ಯಾತ ಕಲಾವಿದ ಗಮಕ ವಿದ್ವಾನ್ ಎಂ.ಎ. ಜಯರಾಮ ರಾವ್ ಅವರಿಗೆ ಸಲ್ಲುತ್ತದೆ. ಪ್ರಾಚೀನ ಕನ್ನಡ ಕಾವ್ಯ ಪರಂಪರೆ ಕೇಳುವುದಕ್ಕೆ ಆದ್ಯತೆ ನೀಡಿತ್ತು. ನಾವಿಂದು ಓದುಗ ಕೇಂದ್ರಿತ ಸಂದರ್ಭದಲ್ಲಿದ್ದೇವೆ. ಹಳಗನ್ನಡ ಕಾವ್ಯವನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಗಮಕಿಗಳ ಪಾತ್ರ ದೊಡ್ಡದಾಗಿತ್ತು. ಗಮಕ ಕಲೆ ಕರ್ನಾಟಕದಲ್ಲಿಯೂ ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿತ್ತೆಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. 

ಕರ್ನಾಟಕದ ಗಮಕ ಕಲಾವಿದರಲ್ಲಿ ಜಯರಾಮ ರಾವ್ ಅವರದು ದೊಡ್ಡ ಹೆಸರು ಹಾಗೂ ಮಹತ್ವದ ಸಾಧನೆ. ಅವರು ಸಂಗೀತ ವಿದ್ವಾಂಸರೂ ಆಗಿದ್ದಾರೆ. ಕನ್ನಡ ಕವಿಗಳ ಕಾವ್ಯದ ಹಿರಿಮೆ ಗರಿಮೆಯನ್ನು ಅವರು ಗಮಕ ಕಲೆಯ ಮೂಲಕ ನಾಡಿಗೆ ಉಣಬಡಿಸುತ್ತಾ ಬಂದ ಪ್ರತಿಭಾ ಸಂಪನ್ನ ವಿದ್ವಾಂಸರು. ಅವರು ಬರೇ ಗಮಕಿ ಮಾತ್ರವಲ್ಲ; ಅತ್ಯುತ್ತಮ ವ್ಯಾಖ್ಯಾನಕಾರರು. `ಮಹಾಭಾರತದ ಕರ್ಣ' ಎಂಬ ಮಹತ್ವದ ಶೋಧ ಕೃತಿಯನ್ನು ರಚಿಸಿದ ಸೂಕ್ಷ್ಮಮತಿಯ ಚಿಂತಕರೂ ಆಗಿದ್ದಾರೆ. ಇದೀಗ ಜಯರಾಮ ರಾವ್ ಅವರು ರನ್ನ ವಿರಚಿತ ಮೇರು ಕಾವ್ಯ `ಗದಾಯುದ್ಧಂ' ಕೃತಿಯನ್ನು ವ್ಯಾಖ್ಯಾನ ಸಹಿತ ಪ್ರಕಟಿಸಿರುವುದು ಒಂದು ಅಪೂರ್ವ ಸಾಧನೆ. ರನ್ನನ ಮಹಾಕಾವ್ಯದ ಸಾಹಿತ್ಯ ಸಂಗೀತ ಲಯ ಲಹರಿಗಳನ್ನು ಸೊಗಸಾಗಿ ವಿವರಿಸಿರುವುದು ಈ ಕೃತಿಯ ಹೆಚ್ಚುಗಾರಿಕೆ. 

ಜಯರಾಮ ರಾವ್ ಅವರು ಕಳೆದ ಅನೇಕ ದಶಕಗಳಿಂದ ಗಮಕ ಕಲೆಯ ಮೂಲಕ ದೇಶದ ಎಲ್ಲೆಡೆ ಸಹೃದಯರ ಮನಸೂರೆಗೊಂಡ ಪ್ರತಿಭಾ ಸಂಪನ್ನ ಕಲಾವಿದರು. ರನ್ನನ ಗದಾಯುದ್ಧ ಅವರಿಗೆ ಮುಖೋದ್ಗತ. ಅದನ್ನು ವಾಚನ ವ್ಯಾಖ್ಯಾನ ಮಾಡುತ್ತಾ ಬಂದಿದ್ದಾರೆ. ಇದೀಗ ಗದಾಯುದ್ಧ ಕಾವ್ಯಕ್ಕೆ ಸೂಕ್ತವಾದ ವ್ಯಾಖ್ಯಾನ ಬರೆದು ಹೀಗೂ ಹಳಗನ್ನಡ ಕೃತಿಯೊಂದನ್ನು ನೋಡಲು ಸಾಧ್ಯ ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಮಹಾಕಾವ್ಯವೊಂದನ್ನು ಗಮಕಿಯೊಬ್ಬರು ಭಿನ್ನಪರಿಯಲ್ಲಿ ಅರ್ಥ ವಿವರಣೆ ನೀಡಿರುವ ಗುರುತರ ಪ್ರಯತ್ನ ಇದಾಗಿದೆ. 

ಗಮಕ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ರೀತಿಯ ಛಾಪು ಮೂಡಿಸಿ ನಡುಗನ್ನಡ ಕಾವ್ಯಗಳಲ್ಲದೆ ಹಳಗನ್ನಡ ಕವಿಗಳ ಕೃತಿಗಳ ಸಾರಸತ್ವಗಳನ್ನು ಕಳೆದ ಆರು ದಶಕಗಳಿಂದ ಅರ್ಥೈಸುತ್ತಾ ಬಂದ ಬಹುಮುಖ ಪ್ರತಿಭೆಯ ವಿದ್ವಾಂಸರು ಜಯರಾಮ ರಾವ್. ತನ್ನದೇ ಆದ ಲಾಂಛನ ಪ್ರಭೆ, ವ್ಯಕ್ತಿ ವಿಶೇಷ, ಸ್ವೋಪಜ್ಞತೆಗಳಿಂದ ಹೊಳೆಯುವ ಕವಿ ಮಹಾಕವಿ ರನ್ನ ತನ್ನ ಅಪ್ರತಿಮ ಪ್ರೌಢಿಮೆಯಿಂದ ಉತ್ಕøಷ್ಟವಾದ ಕಾವ್ಯವನ್ನು ಸಾರಸ್ವತ ಲೋಕಕ್ಕೆ ನೀಡುವಲ್ಲಿ ಯಶಸ್ವಿಯಾದವನು. `ವಾಗ್ದೇವಿಯ ಭಂಡಾರದ ಮುದ್ರೆಯನೊಡೆದಂ ಸಾರಸ್ವತಮೆನಿಪ ಕವಿತೆಯೊಳ್ ಕವಿರತ್ನಂ' ಎಂಬ ಅವನ ಮಾತಿನಲ್ಲಿ ಅತ್ಯುಕ್ತಿಯಿಲ್ಲ. ರಸಭಾವಗಳ ಔಚಿತ್ಯವನ್ನು ಅವುಗಳ ಅನ್ಯೋನ್ಯತೆಯನ್ನು ತಿಳಿದು ಕವಿಮಾರ್ಗವನ್ನು ಕಿಂಚಿತ್ತೂ ಬಿಡದೆ ಅತ್ಯಂತ ಮನೋಜ್ಞವಾದ ಕಾವ್ಯವನ್ನು ರಚಿಸಿದ ರನ್ನನ ಸಾಮಥ್ರ್ಯವನ್ನು ಇಲ್ಲಿ ಅಷ್ಟೇ ಸೊಗಸಾಗಿ ಬೆಳಕಿಗೆ ಹಿಡಿಯಲಾಗಿದೆ. `ಕವಿಯು ತನ್ನ ಕಾವ್ಯ ಶರೀರವನ್ನು ಶಬ್ದಮೂರ್ತಿಯಲ್ಲಿ ಎರಕ ಹೊಯ್ದಿಡಬಲ್ಲವನಾದರೆ ಆ ಮೂರ್ತಿಗೆ ಉಸಿರೂದಿ ಜೀವಕಳೆ ತುಂಬಿ ಸಚೇತನಗೊಳಿಸುವ ಕಲೆ, ಗಮಕ ಕಲೆ.

 ಮಹಾಕಾವ್ಯಗಳ ರುಚಿ ಸವಿಯಬೇಕಾದರೆ ಗಮಕಿಗಳ ಪಾತ್ರ ಬಹು ಮಹತ್ವವಾದುದು' ಎಂಬುದಾಗಿ ಕವಿ ದ. ರಾ. ಬೇಂದ್ರೆ ಅವರು ಹೇಳಿರುವ ಮಾತಿನಲ್ಲಿ ತಥ್ಯವಿದೆ. ಜಯರಾಮ ರಾವ್ ಅವರ ಅರ್ಥ ವಿವರಣೆ, ವ್ಯಾಖ್ಯಾನ ರನ್ನನ ಮಹಾಕಾವ್ಯಕ್ಕೆ ಮತ್ತಷ್ಟು ಮೆರುಗನ್ನು ನೀಡುವಲ್ಲಿ ಯಶಸ್ವಿಯಾಗಿದೆ. ಅರ್ಥ ಪ್ರತೀತಿ ಕೆಡದ ಹಾಗೆ ಪದವಿಂಗಡಣೆ, ವಿವರಣೆ, ಅಗತ್ಯ ಕಂಡಲ್ಲಿ ಸಣ್ಣ ಟಿಪ್ಪಣಿಗಳನ್ನು ನೀಡಿರುವುದು ಔಚಿತ್ಯಪೂರ್ಣ ಉಪಕ್ರಮ.  ಈ ವ್ಯಾಖ್ಯಾನದ ಮೂಲಕ ಜನಸಾಮಾನ್ಯರೂ ಸಹ ರನ್ನನ ಕಾವ್ಯವನ್ನು ಓದಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿದೆ. ಬೆಳ್ವೊಲ ಮತ್ತು ಪುಲಿಗೆರೆಯ ಆರು ನೂರು ಗ್ರಾಮಗಳ ಸುತ್ತಮುತ್ತಲಿನ ಪರಿಸರದ ವಾಡಿಕೆಯ ಆಡುಭಾಷೆ, ದೇಸಿಯನ್ನು ತಿರುಳ್ಗನ್ನಡವನ್ನು ತಾನು ಈ ಕಾವ್ಯದಲ್ಲಿ ಬಳಸಿರುವುದಾಗಿ ಹೇಳಿಕೊಂಡಿದ್ದಾನೆ. ಅಲ್ಲಿ ಸಂಸ್ಕøತವೂ ಹಿತಮಿತವಾಗಿ ಬಳಕೆಯಾಗಿದೆ. `ಶ್ರುತರಮಣೀಯನೆ ಕವಿತಾ| ಚತುರನೆ ಚಾರಿತ್ರಮಣಿ ವಿಭೂಷಣ ರತ್ನಂ| ಶ್ರುತ ರಮಣೀಯನೆ ಕವಿತಾ|ಚತುರನೆ ಚಾರಿತ್ರ ರತ್ನ ಜಲಧಿಯರತ್ನಂ' ಈ ಪದ್ಯಕ್ಕೆ ರಾವ್ ಅವರು ಕೊಡುವ ವಿವರಣೆ ಹೀಗಿದೆ;

ಕವಿರತ್ನ ಎಂದೆಲ್ಲ ಬಿರುದಾಂಕಿತನಾದ ರನ್ನ ನಿಜಕ್ಕೂ ಶಾಸ್ತ್ರಜ್ಞಾನಕೋವಿದನೇ? ಕವಿತಾ ರಚನಾ ಚಾತುರ್ಯವುಳ್ಳವನೇ? ಎಂಬೆಲ್ಲ ಪ್ರಶ್ನೆಗಳಿಗೆ ಅವನೇ ಉತ್ತರವಿತ್ತಿದ್ದಾನೆ. ಉತ್ತಮಶೀಲವೆಂಬ ರತ್ನದಿಂದ ಶೋಭಿತನಾದ ಕವಿರತ್ನ ನಿಜಕ್ಕೂ ಶಾಸ್ತ್ರಜ್ಞಾನ ಸಂಪನ್ನ! ಕವಿತಾ ರಚನಾ ಸಾಮಥ್ರ್ಯವುಳ್ಳವನೆಂಬುದರಲ್ಲಿ ಅನುಮಾನವೇ ಇಲ್ಲ. ಆತ ಸಾಮಾನ್ಯ ರತ್ನವಲ್ಲ. ಶೀಲವೆಂಬ ರತ್ನ ಸಮುದ್ರದಲ್ಲಿ ಹುಟ್ಟಿದ ಅನಘ್ರ್ಯ ರತ್ನವೇ ಸರಿ! (ಇಲ್ಲಿ ಈ ಪದ್ಯದ ಪೂರ್ವಾರ್ಧ (ಮೊದಲ ಎರಡು ಸಾಲು) ಪ್ರಶ್ನಾರ್ಥರೂಪವಾಗಿದ್ದರೆ-ಉತ್ತರಾರ್ಧ (ಕೊನೆ ಎರಡು ಸಾಲು) ಉತ್ತರ ರೂಪದಲ್ಲಿದೆ).

ರನ್ನ ಬಳಸಿದ ಪದನಿಧಿ ಪದ ಸಂಪತ್ತು ನಮ್ಮನ್ನು ಬೆರಗುಗೊಳಿಸುತ್ತದೆ. ವಾಕ್ ಶ್ರೀಯುತ=ವಿದ್ವಾಂಸ, ನಿರಸ್ತಮಿತ=ಸೋಲಿಸಿ ಓಡಿಸಿದ ಕಬರಿಭರಂ-ಕಪ್ಪಾದ ಕೂದಲರಾಶಿ, ಸಂಗರರಂಗ=ಯುದ್ಧ ರಂಗ, ಜೀವಾಕರ್ಷಣ= ಪ್ರಾಣಸೆಳೆಯುವ, ವಿಭಾಸಿ=ಪ್ರಕಾಶಿಸುವ, ಮೂಲೋನ್ಮೂಲನ=ಬೇರು ಸಹಿತ ಕೀಳು, ಧರ್ಮರುಚಿ=ಧರ್ಮಾಸಕ್ತ, ಅಲಂಪು=ಅತಿಶಯವಾದ ಪ್ರೇಮ, ವಾಕ್+ಜಲ=ಮಾತಿನ ಧಾರೆ, ದರಹಾಸ=ಮುಗುಳುನಗೆ, ಅಜಾಂಡ= ಬ್ರಹ್ಮಾಂಡ, ಸೈಪು=ಪುಣ್ಯ, ತಾಟಿಸು=ಬಾರಿಸು, ಕಸವರ ಗಲಿ=ಅಕ್ಕಸಾಲಿಗ ಹೀಗೆ ವಿಶಿಷ್ಟ ಭಾಷಾ ಸೊಗಡು, ಅಲ್ಲಿನ ಶೈಲಿ ಇವನ್ನೆಲ್ಲ ಮುನ್ನೆಲೆಗೆ ತಂದು ಅಲ್ಲಲ್ಲಿ ತೌಲನಿಕವಾಗಿ ವ್ಯಾಖ್ಯಾನ ನೀಡಿರುವುದು ಮೆಚ್ಚತಕ್ಕ ಸಂಗತಿ. ಉದಾಹರಣೆಗೆ:

               ಆರವಮಂ ನಿರ್ಜಿತ ಕಂ
               ಠೀರವರವಮಂ ನಿರಸ್ತಘನರವಮಂ ಕೋ|
               ಪಾರುಣ ನೇತ್ರಂ ಕೇಳ್ದಾ
               ನೀರೊಳಗಿರ್ದುಂ ಬೆಮರ್ತನುರಗಪತಾಕಂ ||

ರವಮಂ=ಧ್ವನಿಯನ್ನು, ನಿರ್ಜಿತ=ಜಯಿಸಿದ; ಕಂಠೀರವ=ಸಿಂಹ; ನಿರಸ್ತ=ಹೊರದೂಡಿದ; ಘನ=ಮೋಡದ (ಮೊಳಗು); ಕೋಪ+ ಅರುಣ+ನೇತ್ರ=ಕೋಪದಿಂದ ಕೆಂಪಾದ ಕಣ್ಣು; ಉರಗ ಪತಾಕ=ಸರ್ಪಧ್ವಜ-ದುರ್ಯೋಧನ; ಬೆಮರ್ತನ್= ಬೆವರಿದನು.

ಸಿಂಹಧ್ವನಿ (ಗರ್ಜನೆ)ಯನ್ನು ಜಯಿಸಿದ, ಮೋಡದಿಂದ ಹೊರದಬ್ಬಿದ ಗುಡುಗಿನ ಮೊಳಗನ್ನೂ ಮೀರಿಸಿದ ಭೀಮನ ಆರ್ಭಟವನ್ನು ಕೋಪದಿಂದ ಕೆಂಪಾದ ಕಣ್ಣುಗಳುಳ್ಳ ದುರ್ಯೋಧನನು ಕೇಳಿ ಆ ತಣ್ಣನೆಯ ನೀರಿನೊಳಗೂ ಬೆವರಿದನಂತೆ - ಇಲ್ಲಿ `ಉರಗ ಪತಾಕ' ಎಂಬ ಪದ ಪ್ರಯೋಗ ಅರ್ಥಪೂರ್ಣವಾಗಿದೆ. ಸರ್ಪಮತ್ಸರಕ್ಕೆ ಎರಕ ಹೊಯ್ದಂತಿದೆ.

ಗಮಕ ಕ್ಷೇತ್ರದಲ್ಲಿ ಆರೂವರೆ ದಶಕಗಳ ಸುದೀರ್ಘವಾದ ಅನುಭವವನ್ನು ಹೊಂದಿರುವ ಜಯರಾಮ ರಾವ್ ಅವರು ಈ ಹೊಸ ಉಪಕ್ರಮದ ಮೂಲಕ ಮಹಾಕವಿ ರನ್ನನನ್ನು ಕನ್ನಡಿಗರ ಮನೆಮನಕ್ಕೆ ಮುಟ್ಟಿಸುವ ಪ್ರಯತ್ನವನ್ನು ಯಶಸ್ವಿಯಾಗಿ ಮಾಡಿದ್ದಾರೆ. ಕನ್ನಡ ವಾಙ್ಮಯದಲ್ಲಿ ಇದೊಂದು ವಿರಳ ಸಾಧನೆ. ಕನ್ನಡ ಸಾಹಿತ್ಯಕ್ಕೆ ಇದೊಂದು ಮೌಲಿಕ ಸೇರ್ಪಡೆ. ಈ ಕೃತಿಯನ್ನು ಸೊಗಸಾಗಿ ಪ್ರಕಟಿಸಿದ ವೀರಲೋಕ ಬುಕ್ಸ್‍ನ ಮಿತ್ರರೂ ಅಭಿನಂದನಾರ್ಹರು.

* ಡಾ. ಜಿ.ಎನ್. ಉಪಾಧ್ಯ, ಮುಂಬೈ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

1 thought on “ಗಮಕಿಯ ದೃಷ್ಟಿಯಲ್ಲಿ ಗದಾಯುದ್ಧ”

  1. ಅತಿರಥಿ, ಮಹಾರಥಿಗಳಾದ ದ್ರೋಣಾಚಾರ್ಯ, ಕರ್ಣ, ಶಲ್ಯ, ದುಃಶಾಸನ, ಶಕುನಿಗಳೆಲ್ಲ ಹತರಾದ ಮೇಲೆ, ಗೋಹತ್ಯಾ ದೋಷದ ಪಾಪ ಪರಿಹಾರಾರ್ಥ ೨೧ ದಿನಗಳ ಭೂ ಪ್ರದಕ್ಷಿಣೆ ಇನ್ನೂ ಮುಗಿಯದ ಬಲರಾಮನ ಅನುಪಸ್ಥಿತಿಯಲ್ಲಿ, ಈಗಾಗಲೇ ಶರಶಯ್ಯೆಯಾಗಿರುವ ಭೀಷ್ಮಾಚಾರ್ಯರ ಸೂಕ್ಷ್ಮ ಉಪದೇಶದಂತೆ, ದ್ವೈಪಾಯನ ಸರೋವರದಲ್ಲಿ
    ಜಲಸ್ತ0ಭನ ಉಪಾಯದಿಂದ ನೀರೊಳಗೆ ಅವಿತಿರುವ ಧುರ್ಯೋಧನನನ್ನು ಯುದ್ಧಕ್ಕೆ ಆಹ್ವಾನಿಸಲು, ಭೀಮನ ಪರಾಕ್ರಮವೇ ಸರಿಯೆಂದು ಸೂಚಿಸುವ ಕೃಷ್ಣನ ಸಂಕೇತದಂತೆ, ಹೆದರುಪುಕ್ಕ, ಹೇಡಿಯೆಂದು ಜರೆದು, ಮೂದಲಿಸುತ್ತ, ರೊಚ್ಚಿನಿಂದ ನೀರಮೇಲೆ ಅಪ್ಪಳಿಸಿದ ಭೀಮನ ಗದಾಪ್ರಹಾರಕ್ಕೆ, ತಲ್ಲಣದಿಂದ, ನೀರೊಳಗಿದ್ದೂ ಬೆವರಿದ ವೀರ ಧುರ್ಯೋಧನ, ರೋಷದಿಂದ ಹೊರಬರುವ ಸನ್ನಿವೇಶವೇ, ಮಹಾಭಾರತದ ಗದಾ-ಪರ್ವದ ಮೊದಲನೇ ಪರಾಕಾಷ್ಠೆ! ರನ್ನನ ಈ ಪದ್ಯ ನಮಗೆ ೧೯೭೦-೭೧ ರಲ್ಲಿ ಎಸ್ಸೆಸ್ಸೆಲ್ಸಿಯ ಪಠ್ಯವಾಗಿತ್ತು.

    ಮಹಾಭಾರತದ ಇಂತಹ ಅತ್ಯಂತ ರೋಚಕ, ರೋಮಾಂಚಕ ಸನ್ನಿವೇಶವನ್ನು, ಅಪ್ರತಿಮ ಭಾಷಾ ಪಾಂಡಿತ್ಯದಿಂದ ಕೂಡಿದ, ಕನ್ನಡ ಕವಿ ಚಕ್ರವರ್ತಿ ರನ್ನನ ‘ಸಾಹಸ ಭೀಮನ ವಿಜಯ’ದ ವರ್ಣನೆಯನ್ನು, ಜನಸಾಮಾನ್ಯರ ಹೃದಯಕ್ಕೆ, ಮಸ್ತಕಕ್ಕೆ, ರಸಭಾವಕ್ಕೆ ಯಾವುದೇ ಚ್ಯುತಿಯಾಗದ ರೀತಿಯಲ್ಲಿ ತಲುಪಿಸುವುದಕ್ಕೆ ಆಧಾರ ಮಾಧ್ಯಮವಾದ ಗಮಕಿಯಲ್ಲಿ, ರಾಗಬದ್ಧವಾಗಿ ಹಾಡುತ್ತ, ಅದರಲ್ಲೂ, ಪದ ವಿಂಗಡಣೆ-ವಿವರಣೆ- ಜತೆಗೆ ಆವಶ್ಯಕವಾದ ಟಿಪ್ಪಣೆಗಳೊಂದಿಗೆ ಪ್ರತಿಪಾದಿಸುವುದಕ್ಕೆ, ಬೇಕಾದದ್ದು : ತತ್ಪರತೆ, ಪರಕಾಯ ಪ್ರವೇಶತೆಯ ಹುನ್ನಾರದ, ನಿಜ ಪರವಶತೆಯೆಂಬ ಸಿಧ್ಧ ಮಂತ್ರ! ವರ್ಷಾನುವರ್ಷ ತದೇಕ ಚಿತ್ತದಿಂದ ಮಾಡಿದ ತಪಸ್ಸಿನ ಅಭಾವದಲ್ಲಿ, ಈ ಮಂತ್ರ ಸಹಜವಾಗಿ ಸಾಕಾರವಾಗಲಾರದು. ದಶಕಗಳ ಸಿಕ್ಸರಿನಲ್ಲಿ, ತನ್ನೊಳಗಿನ ಪ್ರತಿಭೆಯನ್ನು, ವ್ಯಾಖ್ಯಾನಗಳ ನಿಶಿತತೆಯಲ್ಲಿ ಮಸೆದು, ಬೆಸೆದು, ದೇಶದ ಹಲವಾರು ಕಡೆ ಜನಸ್ತೋಮದ ಮನಕ್ಕೂ, ಮನೆಗೂ ರನ್ನನ ಗದಾಯುದ್ಧದ ಪ್ರೌಢಿಮೆಯ ಪಾಕವನ್ನು ಛಲದಿಂದ ಹಂಚಿದ, ಗಮಕ ವಿದ್ವಾನ್ ಡಾ. ಜಯರಾಮರಾಯರ ಕಾಯಕ, ಶ್ಲಾಘನೀಯವಷ್ಟೇ ಅಲ್ಲ, ಕನ್ನಡ ಸಾರಸ್ವತ ಲೋಕದ ಅಭಿವ್ಯಕ್ತಿಯ ಪ್ರಕಾರಗಳಲ್ಲಿ, ಪ್ರತ್ಯೇಕ ವಿಶೇಷ ಶ್ರೇಣಿಯಲ್ಲಿ ದಾಖಲಾಗುವಂಥಾದ್ದು ಅಂದರೆ ಅತಿಶಯೋಕ್ತಿಯಾಗಲಾರದು!

    ‘ರನ್ನನ ಗದಾಯುಧ್ಧ’ ವ್ಯಾಖ್ಯಾನ ಸಹಿತ ಬರೆದ ಡಾ. ಜಯರಾಮರ ಕೃತಿಯ ಪರಿಚಯಿಸುತ್ತ ಉಲ್ಲೇಖಿಸಿದ, ಮುಂಬಯಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಮತ್ತು ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಜಿ.ಎನ್.ಉಪಾಧ್ಯರ ‘ಕನ್ನಡ ವಾಙ್ಮಯದಲ್ಲಿ ಇದೊಂದು ವಿರಳ ಸಾಧನೆ; ಕನ್ನಡ ಸಾಹಿತ್ಯಕ್ಕೆ ಇದೊಂದು ಮೌಲಿಕ ಸೇರ್ಪಡೆ’ ಅನ್ನುವ ಮಾತು ನಿಸ್ಸಂಶಯವಾಗಿ, ಸಂದರ್ಭಕ್ಕೆ ಉಚಿತವಾದ ಮತ್ತೂ ಅರ್ಥಪೂರ್ಣವಾದ ಚಪ್ಪಾಳೆಯಾಗಿ, ಗುಣಗ್ರಾಹಿಗಳ ಹೃದಯದಲ್ಲಿ ನಿಚ್ಚಳವಾಗಿ ಕಂಪಿಸುತ್ತದೆ! ಹೀಗಾಗಿ, ಇಂತಹ ಪ್ರಕಾರ / ಶೈಲಿ, ಕನ್ನಡ ಸಾಹಿತ್ಯ ಪ್ರಸರಣದ ಬಹುಮುಖತೆಗೆ, ಒಂದು ವಿಶೇಷ ಗತ್ತಿನ, ಮುತ್ತಿನ, ಸೊತ್ತಿನ, ಪತ್ತಿನ ಅಂಗವಾಗುತ್ತದೆ!

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Sign up for our Newsletter