ರಾಮನಾಥರ ಉತ್ತರಾಯಣ-ರಾಮ್‌ ಬಾಣ

ಪುಸ್ತಕದ ಶೀರ್ಷಿಕೆ: ರಾಮ್ ಬಾಣ- 2
ಲೇಖಕರು: ರಾಮ್ ( ಎನ್.ರಾಮನಾಥ್)
ಪ್ರಕಾಶಕರು: ನ್ಯೂ ವೇವ್ ಬುಕ್ಸ್, ಇ.ಎ.ಟಿ. ರಸ್ತೆ, ಬಸವನಗುಡಿ, ಬೆಂಗಳೂರು- 4
ಪುಟ: 224
ಬೆಲೆ: ₹200/-

ಎನ್. ರಾಮನಾಥ್

        ʼಸುಧಾʼ ಪತ್ರಿಕೆ ಕಣ್ಣಿಗೆ ಬಿದ್ದಾಗ ನಾನು ಮೊದಲು ಓದುವುದು ʼನೀವು ಕೇಳಿದಿರಿ?ʼ ಅಂಕಣ. ಇದು ದಶಕಗಳ ಹಿಂದೆ ಬೀಚಿಯವರು ಓದುಗರ ಪ್ರಶ್ನೆಗಳಿಗೆ ಉತ್ತರ ಬರೆಯುತ್ತಿದ್ದಾಗ ಮತ್ತು ಅದಕ್ಕೆ ಕಲಾವಿದ ರಾಮಮೂರ್ತಿಯವರು ಅತ್ಯಾಕರ್ಷಕ ಚಿತ್ರ ಬರೆಯುತ್ತಿದ್ದಾಗ ಶುರುವಾದ ಹಳೆಯ ಅಭ್ಯಾಸ. ಬೀಚಿಯವರ ನಂತರ  ನವರತ್ನರಾಂ, ಅ.ರಾ.ಮಿತ್ರ, ಎಂ.ಎಸ್. ನರಸಿಂಹಮೂರ್ತಿ ಮುಂತಾದವರು ಆ ಅಂಕಣವನ್ನು ಸಮರ್ಥವಾಗಿ ಮುಂದುವರಿಸಿದರು. ಕಳೆದ  ಸುಮಾರು14 ವರ್ಷಗಳಿಂದ ಗೆಳೆಯ ಎನ್. ರಾಮನಾಥರು 'ರಾಂ' ಎಂಬ ಹೆಸರಿನಿಂದ ಅರ್ಥಪೂರ‍್ಣವಾದ ಉತ್ತರಗಳ ಮೂಲಕ ʼನೀವು ಕೇಳಿದಿರಿ?ʼ ಅಂಕಣಕ್ಕೆ ನ್ಯಾಯ ಒದಗಿಸುತ್ತಿದ್ದಾರೆ.  ಇಷ್ಟು ದೀರ್ಘಕಾಲ ಸಾಪ್ತಾಹಿಕ ಅಂಕಣವೊಂದನ್ನು, ಅದರಲ್ಲೂ ಹಾಸ್ಯ ಪ್ರಧಾನವಾದ ಅಂಕಣವನ್ನು ನಿರ್ವಹಿಸುವುದು ಎಲ್ಲರಿಂದಲೂ ಸಾಧ್ಯವಿಲ್ಲ. ಅದಕ್ಕೆ ವಿಶೇಷವಾದ ಪ್ರತಿಭೆ ಮತ್ತು ಪರಿಶ್ರಮ ಬೇಕು. ರಾಮನಾಥರಲ್ಲಿ ಇವೆರಡೂ ಧಾರಾಳವಾಗಿದೆ. 
      ರಾಮನಾಥರು ನಗೆಬರಹ, ಲಲಿತ ಪ್ರಬಂಧ, ಅಣಕವಾಡು, ಅನುವಾದ, ಪ್ರಶ್ನೋತ್ತರ ಮುಂತಾದ ವೈವಿಧ್ಯಮಯವಾದ ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.  ಕನ್ನಡದ ಜೊತೆಗೆ ಸಂಸ್ಕೃತ, ಇಂಗ್ಲಿಷ್‌, ಹಿಂದಿ, ತಮಿಳು, ತೆಲುಗು ಭಾಷೆಗಳನ್ನೂ ಬಲ್ಲ ರಾಮನಾಥ್‌ ತಮ್ಮ ಬರವಣಿಗೆಗೆ ಆ ಎಲ್ಲ ಭಾಷೆಗಳ ಸೊಗಸನ್ನು ಬಳಸಿಕೊಳ್ಳುತ್ತಾರೆ. ಮಾಸ್ಟರ್‌ ಹಿರಣ್ಣಯ್ಯನವರ ಗರಡಿಯಲ್ಲಿ ತಾಲೀಮು ಮಾಡಿದ್ದು ಅವರ ಬರಹದ ಮೇಲೆ ಉತ್ತಮ ಪ್ರಭಾವವನ್ನು ಬೀರಿದೆ. ರಾಮನಾಥರ ಬರಹಗಳಲ್ಲಿ ಎದ್ದು ಕಾಣುವುದು ಅವರ ಪನ್‌ ಪ್ರೇಮ. ಅವರ ಮಾತುಗಳೂ ಪನ್‌ ಗಳಿಂದ ಸಂಪನ್ನವಾಗಿರುತ್ತವೆ. ಮುದುವೆ ಊಟದಲ್ಲಿ ಒಂದರ ಹಿಂದೆ ಒಂದು ಸಿಹಿತಿಂಡಿಗಳು ಬರುವ ಹಾಗೆ ರಾಮನಾಥರು ಪನ್ನುಗಳನ್ನು ಉರುಳಿಸುತ್ತ ಹೋಗುತ್ತಾರೆ. ಕೆಲವೊಮ್ಮೆ ಎಲ್ಲವನ್ನೂ ತಿಂದು ಅರಗಿಸಿಕೊಳ್ಳಲು ಆಗದಷ್ಟು ವೇಗವಾಗಿ ಮತ್ತು ಧಂಡಿಯಾಗಿ ಅವರು ಸಿಹಿತಿಂಡಿಗಳನ್ನು ಬಡಿಸುತ್ತಾರೆ! ರಾಮನಾಥರು ನೂರಾರು, ಇನ್ನೂರಾರು  ಅಣಕವಾಡುಗಳನ್ನು ಬರೆದು ಆ ಪ್ರಕಾರದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಆದರೆ, ಅಣಕವಾಡುಗಳ ಯಶಸ್ಸಿನಲ್ಲಿ ಮೂಲ ಕವನದ ಜನಪ್ರಿಯತೆ ಮತ್ತು ಗಾಯನದ ಪಾಲು ಇರುತ್ತದೆ ಅನ್ನುವುದನ್ನು ನಾವು ಮರೆಯಬಾರದು. ಆದ್ದರಿಂದ ನನಗನ್ನಿಸುವಂತೆ ರಾಮನಾಥ್‌ ಅವರ ಪ್ರತಿಭೆ ಹೆಚ್ಚು ಪ್ರಕಾಶಮಾನವಾಗಿ ಕಾಣುವುದು ಪ್ರಶ್ನೆಗಳಿಗೆ ಅವರು ಮಾಡುವ ʼಉತ್ತರ ಕ್ರಿಯೆʼ ಯಲ್ಲಿ. ʼರಾಮ್‌ ಬಾಣʼ ಅನ್ನುವ ಅವರ ಆಯ್ದ ಪ್ರಶ್ನೋತ್ತರಗಳ ಸಂಗ್ರಹದಲ್ಲಿ ನನ್ನ ಮಾತಿಗೆ ಸಾಕಷ್ಟು ಪುರಾವೆ ಸಿಗುತ್ತದೆ.
     ರಾಮನಾಥರ ಉತ್ತರಾಯಣದ ಯಶಸ್ಸಿಗೆ  ಅನೇಕ ಕಾರಣಗಳಿವೆ. ಅವುಗಳಲ್ಲಿ ಮುಖ್ಯವಾದದ್ದು ಓದುಗರು ಊಹಿಸಲು ಸಾದ್ಯವಾಗದಂಥ ಉತ್ತರ ನೀಡುವ ಪ್ರತಿಭೆ. ನಾವು ಯಾವುದೋ  ಒಂದು ಉತ್ತರದ ನಿರೀಕ್ಷೆಯಲ್ಲಿರುವಾಗ ರಾಮ್‌ ನೀಡುವ ಅನಿರೀಕ್ಷಿತ ಉತ್ತರ ನಮ್ಮನ್ನು ಒಂದು ಕ್ಷಣ ತಬ್ಬಿಬ್ಬುಗೊಳಿಸುತ್ತದೆ. ಕಡಲ ತೀರದಲ್ಲಿ ನಿಂತಾಗ ಅಲೆಗಳು ಮರಳುವ ಸಮಯದಲ್ಲಿ ನಮ್ಮ ಕಾಲ ಕೆಳಗಿನ ನೆಲ ಕುಸಿದಂತೆ ಆಗಿ ಒಂದು ರೀತಿಯ ವಿಚಿತ್ರ ಖುಷಿಯಾಗುತ್ತದಲ್ಲವೆ? ರಾಮ್‌ ಬತ್ತಳಿಕೆಯಿಂದ ಹೊರಬರುವ ಬಹಳಷ್ಟು ಉತ್ತರ ಬಾಣಗಳು ಇದೇ ಆನಂದವನ್ನು ಉಂಟುಮಾಡುತ್ತವೆ. ಓದುಗರನ್ನು ಬೆರಗುಗೊಳಿಸಿ ವಾಹ್‌, ಆಹಾ, ಅಬ್ಬಾ ಅನ್ನುವ ಉದ್ಗಾರ ಮೂಡಿಸುತ್ತವೆ. ಹನಿಗವನಗಳಲ್ಲಿ ಹೆಚ್ಚಾಗಿ  ಕಂಡುಬರುವ ಈ ಬಗೆಯ ಅನಿರೀಕ್ಷಿತ ತಿರುವುಗಳಿಗೆ ಪಂಚ್‌ ಅನ್ನುತ್ತಾರೆ. ನನಗೆ ಅನ್ನಿಸುವಂತೆ ರಾಮ್‌ ಉತ್ತರಕಾಂಡದ ಜನಪ್ರಿಯತೆಯ ಪ್ರಮುಖ ಅಂಶ ಇದೇ. ಅವರ ಪಂಚ್‌ ಎಷ್ಟು ತೀಕ್ಷ್ಣವಾಗಿರುತ್ತದೆ ಅನ್ನುವುದಕ್ಕೆ ಕೆಲವು ಉದಾಹರಣೆಗಳು:
*ಪೌರೋಹಿತ್ಯ ಕಾರ್ಯವನ್ನು ಹೆಣ್ಣು ಮಾಡದಿರಲು ಕಾರಣವೇನು?
-ಹೋಮಕುಂಡದ ಬಿಸಿಗೆ ಮೇಕಪ್‌ ಹಾಳಾಗುವುದರಿಂದ!
*ಪ್ರೇಯಸಿ ಪ್ರಿಯಕರನಿಗೆ ಗಾಳಿಯಲ್ಲಿ ತೇಲಾಡುವಂತೆ ಮಾಡುವ ಮೂರು ಪದಗಳು ಯಾವುವು?
ಈ ಪ್ರಶ್ನೆಗೆ ನಮ್ಮ ಮನಸ್ಸಿನಲ್ಲಿ ಮೂಡುವ ಉತ್ತರ “ಐ ಲವ್‌ ಯೂ”. ಆದರೆ ರಾಮ್‌ ಗೆ ಹೊಳೆಯುವ ಉತ್ತರವೇ ಬೇರೆ. ಅವರು ಪ್ರಕಾರ ಪ್ರಿಯಕರನಿಗೆ ಗಾಳಿಯಲ್ಲಿ ತೇಲಾಡುವಂತೆ ಮಾಡುವ ಮೂರು ಪದಗಳು-“ಹೋಗಿ ನೇಣು ಹಾಕ್ಕೋ”
ಚಿತ್ರರಂಗಕ್ಕೆ ಸಂಬಂಧಿಸಿದ ಒಂದು ಪ್ರಶ್ನೆಗೆ ರಾಮ್‌  ನೀಡುವ ಅನಿರೀಕ್ಷಿತ ಉತ್ತರದ ಸೊಬಗು ಹೇಗಿದೆ ನೋಡಿ:
*ಹೊಸ ಚಲನಚಿತ್ರಗಳು ಶುಕ್ರವಾರದಂದೇ ಯಾಕೆ ಬಿಡುಗಡೆಯಾಗುತ್ತವೆ?
ನೋಡಿದವರು ಶನಿವಾರ ಭಾನುವಾರ ಸುಧಾರಿಸಿಕೊಳ್ಳಲೆಂದು! 
ಅಬ್ಬಾ! ಎಷ್ಟು ಧ್ವನಿ ಪೂರ್ಣವಾಗಿದೆಯಲ್ಲವೆ? ಮಚ್ಚು ಲಾಂಗುಗಳೇ ನಾಯಕರಾಗಿರುವ ಇಂದಿನ  ಸಿನಿಮಾಗಳ ʼಚಿತ್ರಹಿಂಸೆʼಯನ್ನು ಅನುಭವಿಸಿದವರು ಸುಧಾರಿಸಿಕೊಳ್ಳುವುದಕ್ಕೆ ಎರಡು ರಜಾ ದಿನಗಳು ಬೇಕೇ ಬೇಕು. ರಾಮ್‌ ಅವರ ಇಂಥ ಉತ್ತರಗಳಲ್ಲಿ ನಗೆಯ ಹಿಂದೆ ಕುಟುಕುವ ವಿಡಂಬನೆಯೂ ಇರುತ್ತದೆ.
ಇದೇ ಮಾದರಿಯ ಇನ್ನೊಂದು ಸೂಚ್ಯವಾದ ಉತ್ತರ:
*ಎಲ್ಲಾ ಮಠಾಧೀಶರೂ ಮರದ ಪಾದುಕೆಗಳನ್ನೇ ಧರಿಸುತ್ತಾರಲ್ಲಾ, ಏಕೆ?
-ಎಂತಹ ಮಿಂಚಿನ ಬಳ್ಳಿ ಸೋಕಿದರೂ ಗ್ರೌಂಡ್‌ ಆಗದಿರಲೆಂದು. 
ವೈಜ್ಞಾನಿಕವಾದ ಈ ಉತ್ತರ  ಕಪಟ ಸಂನ್ಯಾಸಿಗಳು ಮುಟ್ಟಿ ನೋಡಿಕೊಳ್ಳುವಂಥ ಪೆಟ್ಟು ನೀಡುತ್ತದೆ.
ಇಂಥ ಅನಿರೀಕ್ಷಿತ ಉತ್ತರಗಳನ್ನು ನೀಡಲು ರಾಮ್‌ ಅವರಿಗೆ ವರ್ತಮಾನದ ಸಂಗತಿಗಳೇ ಆಗಬೇಕೆಂದಿಲ್ಲ. ಪುರಾಣಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೂ ಅವರು ಇದೇ ವರಸೆಯಲ್ಲಿ ಉತ್ತರಿಸಬಲ್ಲರು ಎಂಬುದಕ್ಕೆ ಒಂದು ಪುರಾವೆ:
*ಪಾಂಡುವಿನ ಪುತ್ರರಾದ ಪಂಚ ಪಾಂಡವರು ಒಬ್ಬಳನ್ನೇ ವರಿಸಿದ್ದೇಕೆ ಮಹಾಪ್ರಭೂ?
-ಕಾಡುಮೇಡುಗಳನ್ನು ಅಲೆಯುವಾಗ ಐದೈದು ಹೆಂಡತಿಯರನ್ನು ಕಾಪಾಡಿಕೊಳ್ಳುವುದು ಕಷ್ಟವೆಂದು. 
ಈ ರೀತಿಯ ವಿಚಿತ್ರವಾದರೂ ಸತ್ಯ ಅನ್ನಿಸುವ, ಸುಳ್ಳಾದರೂ ಹೌದು ಅನ್ನಿಸುವ ಉತ್ತರಗಳನ್ನು ನೀಡಲು ಎಲ್ಲರಂತೆ ಒಂದೇ ದಿಕ್ಕಿನಲ್ಲಿ ಯೋಚಿಸಿದರೆ ಸಾಲದು. ಪ್ರಶ್ನೆಯನ್ನು ದಶದಿಕ್ಕುಗಳಿಂದ, ವಿವಿಧ ಕೋನಗಳಿಂದ ನೋಡಬೇಕು. ಇದಕ್ಕೆ ಬೇಕಾದ lateral thinking/out of box thinking ರಾಮನಾಥರಲ್ಲಿ ಸಹಜವಾಗಿರುವುದರಿಂದ ಅವರು ಅನಾಯಾಸವಾಗಿ ಬಲವಾದ ಪಂಚ್‌ ಕೊಡಬಲ್ಲರು.
ರಾಮನಾಥರ ಕೆಲವು ಉತ್ತರಗಳಲ್ಲಿ ಕಂಡು ಬರುವ ಪ್ರಾಸಾನುಪ್ರಾಸಗಳು, ಅಪರೂಪದ ಕಲ್ಪನೆಗಳು, ವರ್ಣನೆಗಳು, ಹೋಲಿಕೆಗಳು ಹಾಗೂ ಧ್ವನಿ ಅವರೊಳಗೊಬ್ಬ ಒಳ್ಳೆಯ ಕವಿ ಇದ್ದಾನೆ ಅನ್ನುವುದನ್ನು ತೋರಿಸುತ್ತವೆ. ಎಲ್ಲಿ ಅನ್ನುವಿರಾದರೆ ಈ ಉತ್ತರಗಳನ್ನು ಓದಿ:
*ಚಿನ್ನ; ಇದರ ನಿಜವಾದ ಅರ್ಥ?
-ಮೋಹ ಹುಟ್ಟಿಸುವ ಲೋಹ
*ಪುಂಗಿ ಊದಿದರೆ ಹಾವು ಬರುತ್ತೆ. ಹುಡುಗಿಗೆ ʼಐ ಲವ್‌ ಯೂʼ ಅಂದ್ರೆ?
-ಹಾವುಗೆ ಕೈಗೆ ಬರುತ್ತೆ!
*ಕನ್ನಡ, ಕನ್ನಡಿ ಎರಡಕ್ಕೂ ಇರುವ ವ್ಯತ್ಯಾಸವೇನು?
-ಕನ್ನಡ ನಾಡಿಗೆ ಅವಶ್ಯ, ಕನ್ನಡಿ ಲೇಡಿಗೆ ಅವಶ್ಯ
*ಸಿನಿಮಾದಲ್ಲಿ ನಾಯಕನಂತೆ ನಾಯಕಿ ಏಕೆ ಮೈ ಮುಚ್ಚಿಕೊಳ್ಳುವುದಿಲ್ಲ?
-ಏಕೆಂದರೆ ಪ್ರೇಕ್ಷಕ ಅದನ್ನು ಮೆಚ್ಚಿಕೊಳ್ಳುವುದಿಲ್ಲ!
*ಏಕಪತ್ನೀವ್ರತಸ್ಥ ಶ್ರೀರಾಮ, ದ್ವಿಪತ್ನೀವ್ರತಸ್ಥ?
-ಕುಮಾರ, ಹೀಗೆಲ್ಲಾ ದೊಡ್ಡವರ ಬಗ್ಗೆ ಪ್ರಶ್ನಿಸಬಾರದು!
ಸ್ವಾಮೀ, ಅತ್ಯಂತ ಸೂಚ್ಯವಾದ ಮೇಲಿನ ಉತ್ತರವನ್ನು ವಿವರಿಸುವ ಅಪಾಯಕಾರಿ ಕೆಲಸಕ್ಕೆ ನಾನು ಕೈಹಾಕುವುದಿಲ್ಲ!
ಪದಗಳಾಟ, ಪದ ವಿನೋದವೂ ರಾಮ್‌ ಬಾಣದಲ್ಲಿಹೇರಳವಾಗಿ ಸಿಗುತ್ತವೆ. ಉದಾ:
*ವಟ ವಟ ಅನ್ನುವ ಕಪ್ಪೆಗೂ, ಸದಾ ಬೈಯುವ ಬಾಸ್‌ ಗೂ ಏನು ವ್ಯತ್ಯಾಸ?
-ಕಪ್ಪೆ ಉಭಯ ಜೀವಿ; ಬಾಸ್‌ ಭಯ(ಹುಟ್ಟಿಸುವ) ಜೀವಿ.
*ಗಾಂಧೀಜಿಯವರು ಕಡೇ ಘಳಿಗೆಯಲ್ಲಿ ʼಹೇ ರಾಮ್‌, ಹೇ ರಾಮ್‌ʼ ಎಂದು ಕೂಗಿದಾಗ ನೀವೆಲ್ಲಿದ್ದಿರಿ?
-ನಾ(ನಹೀ)…ನಾ….ನಾ…ಥೂ ರಾಮ್‌ʼ ಎಂದು ನಾಥೂರಾಮ್‌ ಗೆ ಹಿಂದಿಯಲ್ಲಿ ಗುಂಡುಹೊಡೆಯಬೇಡ ಎಂದು ಅರಚಿಕೊಳ್ಳುತ್ತಿದ್ದೆ.
*ಮಿಕ್ಸಿಗೂ ಹೆಂಡತಿಗೂ ಏನು ವ್ಯತ್ಯಾಸ?
-ಮಿಕ್ಸಿ ಅಡಿಗೆಗೆ ಅವಶ್ಯ, ಹೆಂಡತಿ ಅಡಿಗಡಿಗೆ ಅವಶ್ಯ!
*ಕಲೆಗಾರನಿಗೂ, ಕೊಲೆಗಾರನಿಗೂ ವ್ಯತ್ಯಾಸವೇನು ಶಿವಾ?
-ಇವನದು ಉಳಿಪೆಟ್ಟು, ಅವನದು ಉಳಿಯದ ಪೆಟ್ಟು!
ವಿಷಜಂತುವಿನ ಹಾಗೆ ʼವಶಜಂತುʼ, ಪರಿವರ್ತನೆಯಂಥ ʼನರಿವರ್ತನೆʼ, ಪತಿವೃತೆಯರ ಹಾಗೆ ಕೇಳಿಸುವ ʼಪತಿವ್ಯಥೆಯರುʼ …ಈ ಬಗೆಯ ಹೊಸ ಪದಗಳ ಮೂಲಕ ಹಾಸ್ಯ ಸೃಷ್ಟಿಯಾಗಿರುವುದನ್ನೂ ರಾಮನಾಥರ ಕೆಲವು ಉತ್ತರಗಳಲ್ಲಿ ಗಮನಿಸಬಹುದು. 
ಉಸಿರಾಡಿದಷ್ಟೇ ಸಹಜವಾಗಿ ಪನ್‌ ಮಾಡುವುದು ರಾಮನಾಥರ ಪನ್ನತಿಕೆ! ಹೀಗಾಗಿ ಅವರ ಉತ್ತರ ಬಾಣಗಳಲ್ಲಿ ಅದು ಧಾರಾಳವಾಗಿ ಸಿಗುತ್ತದೆ. ʼಒಂಟಿʼ ಎಂಬ ಪದದಲ್ಲಿ one tea ಇರುವುದನ್ನು ಗ್ರಹಿಸುವ ಅವರ ಪನ್‌ ಪ್ರಜ್ಞೆ ಈ ಕೆಳಗಿನ ಪ್ರಶ್ನೋತ್ತರದಲ್ಲಿ ಕಾಣಬಹುದು. 
*ಒಂಟಿ ಹೆಣ್ಣಿನ ಹೃದಯ ಯಾವಾಗಲೂ ಏನನ್ನು ಬಯಸುತ್ತದೆ?
-ಬೈ ಟೂ ಟೀ ಹಂಚಿಕೊಳ್ಳುವ ಸಂಗಾತಿಯನ್ನು!
ಇದು ಪನ್ ಗೆ ಒಂದು ಉದಾಹರಣೆ. ಇನ್ನುಳಿದವುಗಳನ್ನು ನೀವೇ ಗುರುತಿಸಿ ಆನಂದಿಸಿ. ನಿಮ್ಮ ಆನಂದವನ್ನು ನಾನು ನಂದಿಸುವುದಿಲ್ಲ!
“ಮಿತವಾಗಿ ಬಳಸಿ/ಕನ್ನಡ ಉಳಿಸಿ” ಎಂದಿದ್ದರು ಕವಿ ಬಿ.ಆರ್.ಎಲ್. ರಾಮ್‌ ಪದಪ್ರಯೋಗದಲ್ಲಿ ನಿಪುಣರಷ್ಟೇ ಅಲ್ಲ ಜಿಪುಣರೂ ಹೌದು. ಈ ಪುಸ್ತಕದ ʼಚಿನಕುರುಳಿʼ ವಿಭಾಗದಲ್ಲಿ ಅವರು ನೀಡಿರುವ ಉತ್ತರಗಳನ್ನು ಗಮನಿಸಿದರೆ ಪದ ಬಳಕೆಯಲ್ಲಿ ಅವರೆಷ್ಟು ಕಂಜೂಸ್ ಅನ್ನುವುದು ತಿಳಿಯುತ್ತದೆ.
     ನಮ್ಮಲ್ಲಿ ಎಲ್ಲ ಬಗೆಯ ಹಾಸ್ಯಕ್ಕೆ  ಹೆಚ್ಚಾಗಿ ವಸ್ತುವಾಗುವವರು ಮಹಿಳೆಯರು. ಹೆಣ್ಣುಮಕ್ಕಳ ಬಗ್ಗೆ ಮಾಡುವ ಹಾಸ್ಯ ಆರೋಗ್ಯಕರವಾಗಿದ್ದರೆ, ಸಭ್ಯತೆಯ ಎಲ್ಲೆ ಮೀರದಿದ್ದರೆ ಅವರೂ ಅದನ್ನು ಆನಂದಿಸುತ್ತಾರೆ. ರಾಮನಾಥರೂ ಮಹಿಳೆಯರ ಮೇಲೆ ಸಾಕಷ್ಟು ಹಾಸ್ಯ ಬಾಣ ಪ್ರಯೋಗಿಸಿದ್ದಾರೆ. ಆದರೆ ಅವು ಕಚಗುಳಿ ಮಾಡುತ್ತವೆಯೇ ಹೊರತು ಚುಚ್ಚಿ ನೋಯಿಸುವುದಿಲ್ಲ. ರಾಮನಾಥರಿಗೆ ಮಹಿಳೆಯರ ಬಗ್ಗೆ ಅಪಾರ ಗೌರವ ಇರುವುದನ್ನು ಅವರ ಅನೇಕ ಉತ್ತರಗಳಲ್ಲಿ ಕಾಣಬಹುದು. ಹಾಸ್ಯ ಮತ್ತು ಅಶ್ಲೀಲತೆಯ ನಡುವೆ ಇರುವ ಗೆರೆ ಅತ್ಯಂತ ತೆಳುವಾದುದು. ಕೆಲವು ಹಾಸ್ಯಗಾರರು ಉದ್ದೇಶಪೂರ್ವಕವಾಗಿ ಆ ಗೆರೆಯನ್ನು ಅಳಿಸುತ್ತಾರೆ! ಆದರೆ ರಾಮ್‌ ಹಾಗೆ ಮಾಡಿಲ್ಲ. 
*ಹೆಣ್ಣಿನ ನಡುವಿನಲ್ಲಿ ಏನಿದೆ ರಾಮ್?
ಪೋಲಿ ಉತ್ತರ ಬಯಸುವ ಮೇಲಿನ ಪ್ರಶ್ನೆಗೆ ರಾಮ್‌ ಕೊಟ್ಟ ಉತ್ತರ-ಮಗುವಿನ ಸೀಟ್!
ರಂಜನೆಯ ಜೊತೆಗೆ ಚಿಂತನೆಗೂ ಪ್ರೇರಣೆ ನೀಡುವ ಇಂಥ ರಾಮ್‌ ಬಾಣಗಳೂ ಈ ಸಂಕಲನದಲ್ಲಿ ಸಾಕಷ್ಟಿವೆ. ನಿರೀಕ್ಷಿತ, ಗಂಭೀರ ಅನ್ನಿಸುವ ಉತ್ತರಗಳೂ ಇವೆ. ಆದರೆ ಅವುಗಳ ಸಂಖ್ಯೆ ಕಡಿಮೆ. ಪನ್‌ ಜೊತೆಗೆ ಪಾಂಡಿತ್ಯವನ್ನೂ ಅವರ ಉತ್ತರಗಳಲ್ಲಿ ಕಾಣಬಹುದು. ಹೀಗಾಗಿ ಅವರ ಸ್ಮರಣ ಶಕ್ತಿ ನಿಜಕ್ಕೂ ಅದ್ಭುತ. ರಾಮ್‌ ಅವರ ಮೆದುಳಿನಲ್ಲಿಎಷ್ಟು RAM (Random Access Memory) ಇರಬಹುದು? ಅವರೇ ಹೇಳಿರುವಂತೆ “ಎಷ್ಟೇ ಜಟಿಲವಾದ ಪ್ರಶ್ನೆ ಬಂದರೂ jam ಆಗದಷ್ಟು!” 
ಓದುಗರ ಪ್ರಶ್ನೆಗಳಿಗೆ ಸ್ವಾರಸ್ಯಕರವಾಗಿ ಉತ್ತರಿಸುವ ʼನೀವು ಕೇಳಿದಿರಿ?ʼ ಅಂಕಣದಲ್ಲಿ ಬೀಚಿ, ಮಿತ್ರ ಮುಂತಾದ ಹಿರಿಯರು ತೋರಿದ ಮಟ್ಟವನ್ನು ರಾಮ್‌ ಎಳೆಯರಾಗಿದ್ದಾಗಲೇ ಮುಟ್ಟಿದ್ದಾರೆ. ಇದೀಗ ಹಿರಿಯ ನಾಗರಿಕರಾಗಿ ಭಡ್ತಿ ಹೊಂದಿರುವ ಅವರು‌ ಹಿರಿಯರು ಹಾಕಿದ ಆ ಅಳತೆಗೋಲನ್ನು ಇನ್ನಷ್ಟು ಎತ್ತರಿಸುವಂತೆ ಇನ್ನೂ ಹಲವು ಕಾಲ ಪ್ರಶ್ನೆಗಳಿಗೆ ಉತ್ತರಿಸಲಿ ಎಂದು ಮನದುಂಬಿ ಹಾರೈಸುತ್ತೇನೆ. 
ವಾಚಕರ ಪ್ರಶ್ನೆಗೆ
ಚುರುಕಾದ ಚಂದದ 
ಉತ್ತರವ ನೀಡುವ ರಾಮ್‌ ಜಾಣ
ಚಿಂತೆಗಳ ತೊಲಗಿಸಿ
ಸಂತಸವ ಕೊಡುವುದು
ಒತ್ತಡದ ಬದುಕಿಗೆ ರಾಮ್‌ ಬಾಣ!
ರಾಮ್‌ ಎಂಬ ಹಾಸ್ಯ ಬಾಣ-ಸಿಗನ ರಾಮ್‌ ಬಾಣದ ಬಗ್ಗೆ ಬರೆದ ಈ ಚುಟುಕಿನೊಂದಿಗೆ ನನ್ನ ಈ ಲೇಖನವನ್ನು ಮುಗಿಸುತ್ತೇನೆ.
-ಎಚ್.ಡುಂಡಿರಾಜ್

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

4 thoughts on “ರಾಮನಾಥರ ಉತ್ತರಾಯಣ-ರಾಮ್‌ ಬಾಣ”

  1. Raghavendra Mangalore

    ಎಂದಿನಂತೆ ಡುಂಡಿರಾಜ್ ಅವರ ಪಂಚ್ ಜೊತೆಗೆ ರಾಮನಾಥ್ ಪಂಚುಗಳು ಮನಸಿಗೆ ಮುದ ನೀಡಿತು. ಓಟ್ಟಿನಲ್ಲಿ ಚೇತೋಹಾರಿ ಲೇಖನ.

  2. ಚೆನ್ನಾಗಿದೆ. ಶ್ರೀ ರಾಮ್ ನಾಥ್ ಅವರ ಚಾಣಾಕ್ಷತೆ ಯ ಉತ್ತರ ಗಳ ಪರಿಯನ್ನು ದುಂಡಿರಾಜರು ರಸವತ್ತಾಗಿ ವಿಶ್ಲೇಷಿಸಿದ್ದಾರೆ

  3. ಮ.ಮೋ.ರಾವ್ ರಾಯಚೂರು

    ಸುಧಾ ಪತ್ರಿಕೆಯಲ್ಲಿ ‘ನೀವು ಕೇಳಿದಿರಿ’ ಮತ್ತು ‘ಸಮದರ್ಶಿ’ ನನ್ನ ಅಚ್ಚುಮೆಚ್ಚಿನ ಓದುಗಳಾಗಿದ್ದವು. ಶ್ರೀ. ಎನ್. ರಾಮನಾಥರನ್ನು ವಿವರವಾಗಿ ಪಪರಿಚಯಿಸಿದಿರಿ. ಧನ್ಯವಾದಗಳು. ಅಭಿನಂದನೆಗಳು.

  4. ಮ.ಮೋ.ರಾವ್ ರಾಯಚೂರು

    ಸುಧಾ ಪತ್ರಿಕೆಯಲ್ಲಿ ‘ನೀವು ಕೇಳಿದಿರಿ’ ಮತ್ತು ‘ಸಮದರ್ಶಿ’ ನನ್ನ ಅಚ್ಚುಮೆಚ್ಚಿನ ಓದುಗಳಾಗಿದ್ದವು. ಶ್ರೀ. ಎನ್. ರಾಮನಾಥರನ್ನು ವಿವರವಾಗಿ ಪರಿಚಯಿಸಿದಿರಿ. ಧನ್ಯವಾದಗಳು. ಅಭಿನಂದನೆಗಳು.

    Reply

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Sign up for our Newsletter