” ಆದ್ಯ ಶಂಕರಾಚಾರ್ಯರ ಜೀವನಾಧಾರಿತ ‘ಅದ್ವೈತಾ ಚಿ ಉಪನಿಷದ್’ ಎಂಬ ಶುಭಾಂಗಿ ಭಡಭಡೆ ಅವರ ಮರಾಠಿ ಮೂಲ ಕಾದಂಬರಿಯನ್ನು ಮಾಲತಿ ಮುದಕವಿ ಅವರು ಕನ್ನಡಕ್ಕೆ ಅನುವಾದಿಸಿದ್ದು ,ಪ್ರಕಟಣೆಗೆ ಸಿದ್ಧವಾಗಿದೆ. ಕಾದಂಬರಿಯ ಕೂಲಂಕಷ ವಿಷಯ ಮಂಥನ ಇಲ್ಲಿದೆ”. – ಸಂ.
ಧರ್ಮೋ ರಕ್ಷತಿ ರಕ್ಷಿತಃ... ಯುಗಯುಗಗಳ ಅಂತರದಲ್ಲಿ ಅನಾಚಾರ, ಕೆಟ್ಟ ಪ್ರವೃತ್ತಿ, ಅತ್ಯಾಚಾರಗಳು ಹೆಚ್ಚು ಆಗತೊಡಗಿದಾಗಲೊಮ್ಮೆ ಯುಗಪುರುಷನ ಜನನವಾಗುತ್ತದೆ. ಅತ್ಯಂತ ಘನವಾದ ಕತ್ತಲೆಯನ್ನು ಸೀಳಿ ಬರುವಂಥ ಪ್ರಕಾಶದ ಬೆಳ್ಳಿರೇಖೆಯು ಇಡಿಯ ವಾತಾವರಣವನ್ನೇ ಬೆಳಗಿಸುತ್ತದೆ ಎನ್ನುವುದು ಎಲ್ಲರೂ ಅರಿತ ವಿಷಯವೇ! ಶ್ರೀ ಶಂಕರಾಚಾರ್ಯರು ಅವತರಿಸುವ ಕಾಲದಲ್ಲಿಯೂ ಭಾರತದಲ್ಲಿ ಧಾರ್ಮಿಕ ಕ್ಷೋಭೆ ಉಂಟಾಗಿ, ಸನಾತನ ಧರ್ಮ ಮತ್ತು ರಾಷ್ಟ್ರೀಯ ಏಕತೆಗೆ ಭಾರೀ ಅಪಾಯ ಒದಗಿ ಬಂದಿತ್ತು. ಇಂತಹ ದುಃಸ್ಥಿತಿಯಿಂದ ಈ ದೇಶವನ್ನು ಸಂರಕ್ಷಿಸಿ, ಧರ್ಮ ಸಂಸ್ಥಾಪನೆ ಮಾಡಲು ಜ್ಞಾನಸ್ವರೂಪಿಯಾದ ಆ ಪರಮೇಶ್ವರನೇ ಧರೆಗಿಳಿದು ಬರಬೇಕಾಯಿತು. ಅಂತಹ ಪರಶಿವನ ಪರಮಾವತಾರವೇ ಶ್ರೀ ಶಂಕರರು ಎಂದೂ ಹೇಳುತ್ತಾರೆ. 'ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ..' ಭಾರತದಲ್ಲಿ ಧರ್ಮದ ಗ್ಲಾನಿಯುಂಟಾದಾಗಲೆಲ್ಲಾ ನಾನು ಜನ್ಮವೆತ್ತಿ ಬರುತ್ತೇನೆ ಎಂದು ಹೇಳಿರುವ ಭಗವಾನ್ ಶ್ರೀಕೃಷ್ಣನು ಹಾಗೂ ಮೃತ್ಯುವಿನ ನಂತರ ಮತ್ತೆ ಹುಟ್ಟಿ ಬರುವ ಮಾರ್ಗವನ್ನು ಹೇಳುವ ಶಿವಶಂಕರ ಇವರಿಬ್ಬರ ವಿಚಾರಗಳನ್ನೂ ಅಳವಡಿಸಿಕೊಂಡೇ ಶಂಕರರ ಜನನವಾಗಿತ್ತು ಎಂದು ಲೇಖಕಿ ಹೇಳುವ ಮಾತು ಅತ್ಯಂತ ಸತ್ಯವೆನ್ನಿಸುತ್ತದೆ ಆಚಾರ್ಯರ ಕಾರ್ಯವೈಖರಿಯನ್ನು ನೋಡಿದಾಗ. ಸಮಾಜವನ್ನು ಏಕಸೂತ್ರದಲ್ಲಿ ಬಂಧಿಸುವ ಸಾಮರ್ಥ್ಯ ಇರುವುದು ಕೇವಲ ಧರ್ಮಕ್ಕೆ ಮಾತ್ರ. ಧರ್ಮವು ಬಂಧನವಲ್ಲ. ಅದು ಸಮಾಜದ ಸುಖಕ್ಕಾಗಿ ಇರುವಂಥ ಆಚಾರಸಂಹಿತೆ. ಆದರೆ ಸಮಾಜದಲ್ಲಿಯ ಪ್ರತಿಯೊಬ್ಬ ವ್ಯಕ್ತಿಯ ಸ್ವಭಾವವೂ ಒಂದೊಂದು ರೀತಿಯದು. ಸಮಾಜದೊಡನೆ ಹೊಂದಿಕೊಂಡಿರುವುದು, ತನ್ನ ಸ್ವಪ್ರತಿಷ್ಠೆಗೆ ಒಂದು ಸೀಮೆಯನ್ನು ಹಾಕಿಕೊಂಡು ಒಗ್ಗಟ್ಟನ್ನು ತರುವಂಥ ಧರ್ಮವೇ ಪರಸ್ಪರ ಬಂಧುಭಾವವನ್ನು ನಿರ್ಮಿಸುವುದು. ಅದುವೇ ಮಾನವಧರ್ಮ. ಇದೇ ಆದಿ ಶಂಕರಾಚಾರ್ಯರು ಪ್ರತಿಪಾದಿಸಿದ ಅದ್ವೈತ ಪರಂಪರೆ. ಆದಿ ಶಂಕರಾಚಾರ್ಯರನ್ನು ಅದ್ವೈತ ಪರಂಪರೆಯ ಪ್ರವರ್ತಕರು ಎಂದು ಹೇಳಲಾಗುತ್ತದೆ. ಅವರು ಮಂಡಿಸಿದಂಥ ಭಾರತೀಯ ಧರ್ಮದ ದರ್ಶನವನ್ನು ಜಗತ್ತಿನ ಅದ್ವೈತ ವೇದಾಂತವೆಂದು ಹೇಳಲಾಗುತ್ತದೆ. ಆದಿ ಶಂಕರಾಚಾರ್ಯರ ಅತ್ಯಂತ ಪ್ರಸಿದ್ಧ ಬೋಧನೆಯು ಅದ್ವೈತ ವೇದಾಂತದ ಧ್ವನಿಯಾಗಿದೆ. ಅವರ ತತ್ವಜ್ಞಾನವನ್ನು ಜಗತ್ತಿನ ದರ್ಶನ ಶಾಸ್ತ್ರಗಳಲ್ಲಿಯೇ ಶ್ರೇಷ್ಠ ಎಂದು ತಿಳಿಯಲಾಗುತ್ತದೆ. ಭಾರತದ ಸಾಂಸ್ಕ್ರತಿಕ ಇತಿಹಾಸದಲ್ಲಿ ಧ್ರುವ ನಕ್ಷತ್ರದಂತೆ ಪ್ರಕಾಶಮಾನರಾಗಿರುವ ಮಹಾಪುರುಷರಲ್ಲಿ ಶಂಕರಾಚಾರ್ಯರು ಪ್ರಮುಖರು. ಶಂಕರಾಚಾರ್ಯರು ಕೇವಲ ಭಾರತವಷ್ಟೇ ಅಲ್ಲ, ಇಡಿಯ ಜಗತ್ತಿನ ಸರ್ವೋಚ್ಚ ದಾರ್ಶನಿಕರಲ್ಲಿ ಒಬ್ಬರು. ಜೀವನದ ನಾಲ್ಕು ಗುರಿಗಳಲ್ಲಿ ಅರ್ಥ, ಕಾಮಗಳನ್ನು ನಿರರ್ಥಕ ಎಂದು ತಿಳಿದ ಅವರು ಧರ್ಮ ಮಾರ್ಗದಲ್ಲಿ ನಡೆದು ಮೋಕ್ಷವನ್ನು ಹೊಂದುವುದರಲ್ಲಿ ನಂಬಿಕೆ ಇಟ್ಟಿದ್ದರು. ಜನನ ಮತ್ತು ಮರಣದ ಚಕ್ರದಿಂದ ಮುಕ್ತಿ (ಮೋಕ್ಷ) ಪಡೆಯುವುದು ಮಾನವ ಜೀವನದ ಅಂತಿಮ ಗುರಿ ಎಂಬುದು ಅವರ ನಂಬಿಕೆಯಾಗಿತ್ತು. ಅವರು ಜೀವನದಲ್ಲಿ ನಿಷ್ಕಾಮ ಕರ್ಮವೇ ಮುಕ್ತಿಗೆ ಸಾಧನ, ಶಾರೀರಿಕ ಸುಖಗಳ ಬೇಡಿಕೆಗಳಿಗೆ ಯಾವುದೇ ಸೀಮೆಯಿಲ್ಲವಾದ್ದರಿಂದ ನಿಷ್ಕಾಮ ಕರ್ಮ ಮಾಡುತ್ತ ಈಶ್ವರನಲ್ಲಿ ಸಮರ್ಪಣಾ ಭಾವವನ್ನು ಹೊಂದುವುದೇ ಜ್ಞಾನ ಮಾರ್ಗದತ್ತ ಕೊಂಡೊಯ್ಯುವ ಏಕೈಕ ಮಾರ್ಗ ಹಾಗೂ ಜ್ಞಾನವನ್ನು ಅದ್ವೈತ ಜ್ಞಾನದ ಪರಮಸಾಧನ ಎಂದೂ ಹೇಳಿದ್ದಾರೆ. ಏಕೆಂದರೆ ಜ್ಞಾನವು ಎಲ್ಲ ಕರ್ಮಗಳನ್ನು ಸುಟ್ಟು ಭಸ್ಮ ಮಾಡುತ್ತದೆ ಎನ್ನುವುದು ಅವರ ನಂಬಿಕೆ. ಅಜ್ಞಾನದಿಂದಾಗಿ ಜೀವವು ತನ್ನ ಸ್ವರೂಪವನ್ನು ಮರೆತು ತನ್ನನ್ನು ಕರ್ತಾ-ಭೋಕ್ತಾ ಎಂದು ತಿಳಿಯುತ್ತದೆ. ಆದ್ದರಿಂದಲೇ ಶರೀರವನ್ನು ಧಾರಣ ಮಾಡಬೇಕಾಗುತ್ತದೆ. ಮತ್ತೆ ಮತ್ತೆ ಈ ಜಗತ್ತಿನಲ್ಲಿ ಹುಟ್ಟಿ ಬರಬೇಕಾಗುತ್ತದೆ. ಇದೇ ಬಂಧನ. ಈ ಬಂಧನದಿಂದ ಮುಕ್ತಿ ಪಡೆಯಬೇಕೆಂದರೆ ಅಜ್ಞಾನವು ನಾಶವಾಗಬೇಕು. ಆಗಲೇ ಜೀವವು ತನ್ನನ್ನು ತಾನು ಶುದ್ಧ ಚೈತನ್ಯ ಬ್ರಹ್ಮನ ರೂಪದಲ್ಲಿ ಅರಿಯುವುದು ಸಾಧ್ಯವಾಗುತ್ತದೆ. ಶರೀರವನ್ನು ಹೊಂದಿದ್ದರೂ ಜ್ಞಾನವನ್ನು ಹೊಂದಿರುವ ಕಾರಣದಿಂದ ಜೀವವು ಮುಕ್ತವಾಗಬಹುದಾಗಿದೆ. ಏಕೆಂದರೆ ಜೀವವು ತನ್ನನ್ನು ತಾನು ಆತ್ಮದ ರೂಪದಲ್ಲಿ ಅರಿಯದೆ ತನ್ನನ್ನು ಶರೀರ, ಇಂದ್ರಿಯ, ಮನಸ್ಸು ಮುಂತಾದ ರೂಪದಲ್ಲಿ ಅರಿತಾಗ ಮಾತ್ರ ಈ ಶರೀರವು ಬಂಧನವಾಗಿದೆ. ಶರೀರವು ತನ್ನ ಕರ್ಮವನ್ನು ಭೋಗಿಸಿ ನಂತರ ಶರೀರದಿಂದ ಮುಕ್ತವಾದಾಗ ಸಹಜವಾಗಿಯೇ ವಿದೇಹ ಮುಕ್ತಿಯನ್ನು ಪಡೆಯುತ್ತದೆ. ಮುಕ್ತಿ ಎಂದರೆ ನಿಜವಾದ ಅರ್ಥದಲ್ಲಿ ಏನು? ಅವರ ದೃಷ್ಟಿಯಲ್ಲಿ ಇತರರಿಗೆ ಆನಂದ, ಸಮಾಧಾನ, ಸೌಖ್ಯಗಳನ್ನು ನಿಃಸ್ವಾರ್ಥದಿಂದ ಕೊಡುವುದೇ ಮುಕ್ತಿ ಅಥವಾ ಮೋಕ್ಷ. ಹಾಗಾಗಿ ಇದೇ ಜನ್ಮದಲ್ಲಿಯೇ ಈ ಮೋಕ್ಷವನ್ನು ನಾವು ಪಡೆಯುವುದಕ್ಕೆ ಸಾಧ್ಯವಿದೆ. ಈ ಜನ್ಮದ ಸತ್ಕರ್ಮಗಳನ್ನು ಮುಂದಿನ ಜನ್ಮಕ್ಕಾಗಿ ಇಟ್ಟುಕೊಳ್ಳುವುದರ ಅಗತ್ಯವೇ ಬೀಳುವುದಿಲ್ಲ ಎಂದು ಹೇಳಿದರು. ಸೃಷ್ಟಿಯ ಉತ್ಪತ್ತಿಗೆ ಮೂಲಕಾರಣ ಬ್ರಹ್ಮ ಎಂದು ಹೇಳುವ ಅವರು ಬ್ರಹ್ಮನು ತನ್ನ ಮಾಯಾ ಶಕ್ತಿಯ ಸಹಯೋಗದಿಂದ ಈ ಸೃಷ್ಟಿಯನ್ನು ನಿರ್ಮಾಣ ಮಾಡಿದನೆಂದು ಹೇಳುತ್ತಾರೆ. ಅಹಂ ಬ್ರಹ್ಮಾಸ್ಮಿ- ಜೀವವೇ ಪರಬ್ರಹ್ಮ ಎಂದೂ ಬ್ರಹ್ಮನಲ್ಲಿ ಏಕತೆಯನ್ನು ಹೊಂದಿ ಮುಕ್ತಿಯನ್ನು ಪಡೆಯುವುದೇ ಮಾನವ ಅಸ್ತಿತ್ವದ ಅಂತಿಮ ಗುರಿ ಎಂದು ಅವರು ಹೇಳಿದರು. ಶಂಕರಾಚಾರ್ಯರು ಭಕ್ತಿಯು ಕೂಡ ಆಧ್ಯಾತ್ಮಿಕ ಅಭ್ಯಾಸದ ಪ್ರಮುಖ ಅಂಶವಾಗಿದೆ ಎಂದು ಭಕ್ತಿಯ ಪ್ರಾಮುಖ್ಯತೆಯನ್ನು ಹೇಳುತ್ತ ಅದೂ ಮುಕ್ತಿಯನ್ನು ಪಡೆಯುವ ಸುಲಭ ಸಾಧನವೆಂದು ಒತ್ತಿ ಹೇಳಿದರು. ಅಷ್ಟೇ ಅಲ್ಲ, ಆಧ್ಯಾತ್ಮಿಕ ಪ್ರಗತಿಗೆ ಗುರು ಅತ್ಯಗತ್ಯ ಎಂದೂ, ಪ್ರತಿಯೊಬ್ಬರೂ ತಮ್ಮ ಗುರಿ ಸಾಧನೆಗೆ ಅರ್ಹ ಆಧ್ಯಾತ್ಮಿಕ ಗುರುವನ್ನು ಹೊಂದಬೇಕೆಂದು ಗುರುವಿನ ಮಹತ್ವವನ್ನು ಕೂಡ ಹೇಳಿದರು. ಜ್ಞಾನವೂ ಮುಕ್ತಿಯನ್ನು ಪಡೆಯುವ ಪ್ರಮುಖ ಸಾಧನವಾಗಿದ್ದು ಭಕ್ತಿ ಮಾರ್ಗದಲ್ಲಿ ಸಮರ್ಪಣೆ ಇದ್ದರೆ ಜ್ಞಾನ ಮಾರ್ಗದಲ್ಲಿ ಚಿಂತನೆ ಇರುತ್ತದೆ ಎಂದು ಹೇಳಿದ ಅವರು ನಿಜವಾದ ಜ್ಞಾನವು ಕೇವಲ ಬೌದ್ಧಿಕ ತಿಳುವಳಿಕೆಯಲ್ಲ, ಆದರೆ ಅಂತಿಮ ವಾಸ್ತವದ ಸಾಕ್ಷಾತ್ಕಾರವೂ ಆಗಿದೆ ಎಂದು ನಂಬಿದ್ದರು. "ಸಮಾಜವು ಇಂದು ವಿಚಿತ್ರವಾದ ಅವಸ್ಥೆಯಲ್ಲಿ ಸಾಗುತ್ತಿದೆ. ಕೇವಲ ಆಚಾರ-ವಿಚಾರಗಳಿಗೆ ಮಾತ್ರ ಪ್ರಾಮುಖ್ಯತೆ ನೀಡುವುದರಿಂದ ಧರ್ಮದ ಸ್ವರೂಪವು ಕೇವಲ ಆಚರಣೆಗೇ ಸೀಮಿತವಾಗಿದೆ, ಇನ್ನು ಕೆಲವರು ಧರ್ಮಗ್ರಂಥಗಳನ್ನೇ ನೆಚ್ಚಿಕೊಂಡು ಧರ್ಮಗ್ರಂಥಗಳೊಂದಿಗೆ ಧರ್ಮವನ್ನು ಕಟ್ಟಿ ಹಾಕಿಬಿಟ್ಟಿದ್ದಾರೆ. ಕೆಲವರು ತಮ್ಮದೇ ಆದ ಧರ್ಮವನ್ನು ತಾವೇ ಸಿದ್ಧಗೊಳಿಸಿದ್ದಾರೆ. ಇಂದು ಬೌದ್ಧ ಧರ್ಮ, ಜೈನ ಧರ್ಮಗಳ ಅನುಯಾಯಿಗಳು ಹಿಂದೂ ಧರ್ಮದ ಬಗ್ಗೆ ಬಹಿರಂಗವಾಗಿಯೇ ನಿಂದೆಯನ್ನು ಮಾಡುತ್ತಲಿದ್ದಾರೆ. ಆದರೆ ಧರ್ಮ-ಪಂಥ, ಆಚರಣೆ, ಶಾಸ್ತ್ರ ಹಾಗೂ ಕಠೋರ ವ್ರತಾಚರಣೆಗಳಿಗಿಂತಲೂ ಸಮಾಜಕ್ಕೆ ಹಸಿವಿನ ನಿವಾರಣೆ, ಮನಸ್ಸಿನ ಸಮಾಧಾನ, ಜ್ಞಾನದಾನದ ವಿಚಾರ ಇವುಗಳ ಅಗತ್ಯವಿದೆ. ಆದರೆ ಅದನ್ನು ಯಾರೂ ಮಾಡುತ್ತಲಿಲ್ಲ. ಪ್ರತಿಯೊಬ್ಬ ಗುರುವೂ ತಮ್ಮ ತಮ್ಮ ಗುರುಕುಲಗಳನ್ನು ಪ್ರಾರಂಭ ಮಾಡಿದರು. ಅದರಲ್ಲಿಯೂ ಸ್ಪರ್ಧೆ ಪ್ರಾರಂಭಗೊಂಡಿತು. ಆ ಸ್ಪರ್ಧೆಯಲ್ಲಿ ವಿಕೃತಿಯು ಬಂದದ್ದು ಸಮಾಜಕ್ಕೆ. ಕ್ಷತ್ರಿಯರು ಒಮ್ಮೆ ಶ್ರೇಷ್ಠರೆನಿಸಿದರೆ, ಇನ್ನೊಮ್ಮೆ ಬ್ರಾಹ್ಮಣರು ಶ್ರೇಷ್ಠರಾದರು. ಇದರ ಜೊತೆಗೇ ಇತರ ಧರ್ಮಗಳು ಬೆಳೆಯುತ್ತಿರುವುದೂ ಈ ವಿಷಯದಲ್ಲಿ ಪ್ರಭಾವವನ್ನು ಬೀರಿತು. ಇದರಿಂದಾಗಿ ಜನಸಾಮಾನ್ಯರು ದಿಕ್ಕೆಟ್ಟರು." ಎಂದು ಅವರ ಗುರುಗಳಾದ ಗೋವಿಂದಾಚಾರ್ಯರು ಹೇಳಿದಾಗಲೇ ಶಂಕರಾಚಾರ್ಯರು ಮನಸ್ಸಿನಲ್ಲಿಯೇ ಹಿಂದೂ ಧರ್ಮದ, ಸಂಸ್ಕೃತಿಯ ಏಳ್ಗೆಗಾಗಿ ಶ್ರಮಿಸುವುದಾಗಿ ಸಂಕಲ್ಪವನ್ನು ಮಾಡಿದ್ದರು. ಆದಿ ಶಂಕರಾಚಾರ್ಯರಿಗೆ ಹಿಂದೂ ಧರ್ಮದ ಪುನಃಪ್ರತಿಷ್ಠಾಪಕರು ಎಂಬ ಶ್ರೇಯಸ್ಸು ಸಲ್ಲುತ್ತದೆ. ಒಂದೆಡೆ ಅದ್ವೈತ ಚಿಂತನೆಯನ್ನು ಪುನಃ ಪ್ರತಿಷ್ಠಾಪಿಸಿ ಸನಾತನ ಹಿಂದೂ ಧರ್ಮದ ದಾರ್ಶನಿಕ ಆಧಾರವನ್ನು ಸುದೃಢಗೊಳಿಸಿದರೆ ಇನ್ನೊಂದೆಡೆ ಜನಸಾಮಾನ್ಯರಲ್ಲಿ ರೂಢಿಯಲ್ಲಿದ್ದ ಮೂರ್ತಿ ಪೂಜೆಯ ಔಚಿತ್ಯವನ್ನು ಸಿದ್ಧಗೊಳಿಸುವ ಪ್ರಯತ್ನವನ್ನೂ ಮಾಡಿದರು. ಸನಾತನ ಹಿಂದೂ ಧರ್ಮಕ್ಕೆ ದೃಢವಾದ ಅಡಿಪಾಯವನ್ನು ಹಾಕಲೆಂದು ಅವರು ವಿರೋಧ ಪಂಥಗಳ ಅಭಿಪ್ರಾಯಗಳಲ್ಲಿಯ ಕೆಲವು ಅಂಶಗಳನ್ನು ಅಂಗೀಕರಿಸಿದರು. ಅವರು ಮುಕ್ತವಾಗಿ ವರ್ಣಾಶ್ರಮ ಪದ್ಧತಿಯನ್ನು ವ್ಯಾಖ್ಯಾನಿಸುತ್ತ, ಜ್ಞಾನ ಎಂದರೆ ಪ್ರಕಾಶವಿದ್ದಂತೆ. ಅದನ್ನು ನಿರ್ಬಂಧಿಸಿ ಇರಿಸುವ ಪ್ರಯತ್ನವೆಂದರೆ ಅದು ಜ್ಞಾನಕ್ಕೆ ಎಸಗುವ ಗುರುತರ ಅಪರಾಧವೇ. ಜ್ಞಾನದ ದ್ವಾರಗಳು ಯಾವಾಗಲೂ ಎಲ್ಲರಿಗೂ ಮುಕ್ತವಾಗಿರಬೇಕು. ಕೊನೆಯ ಪಕ್ಷ ಜ್ಞಾನದ ಅರ್ಥ ತಿಳಿದಂಥವರಿಗೆಯಾದರೂ ಈ ದ್ವಾರಗಳನ್ನು ಮುಕ್ತವಾಗಿರಿಸಬೇಕು. ಮನುಷ್ಯ ಒಬ್ಬನೇ. ಅವನ ದೇಹದಲ್ಲಿ ಒಬ್ಬನೇ ಪರಮೇಶ್ವರನು ವಾಸಿಸುತ್ತಾನೆ. ಅದೇ ರಕ್ತ, ಅದೇ ಅವಯವಗಳು, ಅವನ ಜನನ ಹಾಗೂ ಮೃತ್ಯುಗಳು ಕೂಡ ಒಂದೇ ರೀತಿಯವು. ಎಂದಮೇಲೆ ಜ್ಞಾನವೂ ಸಮಾನವೇ ಆಗಿರಬೇಕಲ್ಲವೇ?" ಎಂದು ಹೇಳಿದರು. "ಹಾಗಿರುವಾಗ ವರ್ಣಾಶ್ರಮ ವ್ಯವಸ್ಥೆಯು ಏಕೆ ಗುರುಗಳೇ?" ಎಂದು ಸುರೇಶ್ವರಾಚಾರ್ಯರು ಪ್ರಶ್ನೆ ಮಾಡಿದಾಗ ಶ್ರೀ ಶಂಕರಾಚಾರ್ಯರು "ಇದಕ್ಕೆ ಉತ್ತರವೂ ಕೂಡ ಸಹಜವಾದದ್ದೇ ಆಗಿದೆ ಮಗೂ. ಕರ್ಮಾನುಸಾರ ವರ್ಣಗಳು. ಪ್ರತಿಯೊಬ್ಬನೂ ಜ್ಞಾನಿಯಾಗಲು ಸಾಧ್ಯವಿಲ್ಲ. ಪ್ರತಿಯೊಬ್ಬನಿಗೂ ಕರ್ಮವು ಸಾಧಿಸುತ್ತದೆ ಎನ್ನಿಸುವುದಿಲ್ಲ. ಪ್ರತಿಯೊಬ್ಬನಿಗೂ ಯುದ್ಧವನ್ನು ಮಾಡಲು ಬರುತ್ತದೆ ಎಂದಲ್ಲ. ಅದೇ ರೀತಿಯಲ್ಲಿ ಪ್ರತಿಯೊಬ್ಬನಿಗೂ ವ್ಯಾಪಾರ-ವ್ಯವಸಾಯಗಳು ಸಾಧಿಸುವುದಿಲ್ಲ. ಯಾರಿಗೆ ಯಾವುದು ಸರಿ ಎನ್ನಿಸುತ್ತದೆಯೋ ಅದನ್ನು ಅಗತ್ಯವಾಗಿ ಮಾಡಬೇಕು. ವಿಶ್ವಾಮಿತ್ರರು ಮೊದಲು ಕ್ಷತ್ರಿಯರಾಗಿದ್ದರು. ನಂತರ ಬ್ರಾಹ್ಮಣವೃತ್ತಿಯನ್ನು ಸ್ವೀಕರಿಸಿ ಋಷಿಗಳಾದರು. ಪರಶುರಾಮರು ಬ್ರಾಹ್ಮಣವೃತ್ತಿಯಲ್ಲಿ ಇದ್ದವರು ನಂತರದಲ್ಲಿ ಕ್ಷತ್ರಿಯವೃತ್ತಿಯನ್ನು ಸ್ವೀಕರಿಸಿದರು. ಎಂದರೆ ವರ್ಣದ ಬಂಧನವು ಎಂದಿಗೂ ಇಲ್ಲ, ಆಗಲೂಬಾರದು.." ಎಂದು ಹೇಳುತ್ತಾ ಅವರು ವರ್ಣಾಶ್ರಮ ಪದ್ಧತಿಯ ಬಗ್ಗೆ ಇಂದು ಜನಮಾನಸದಲ್ಲಿ ಇರುವಂತಹ ತಪ್ಪು ಅಭಿಪ್ರಾಯಕ್ಕೂ ಸಮಜಾಯಿಷಿ ಕೊಟ್ಟಿದ್ದಾರೆ. ಎಲ್ಲ ವೇದಾಂತದ ಸಾರವನ್ನು ನಾಲ್ಕು ಮಹಾವಾಕ್ಯಗಳಲ್ಲಿ ಹೇಳಲು ಬರುತ್ತದೆ. 'ಪ್ರಜ್ಞಾನಂ ಬ್ರಹ್ಮಂ', 'ತತ್ ತ್ವಮ್ ಅಸಿ', 'ಅಯಂ ಆತ್ಮಾ ಬ್ರಹ್ಮ' ಹಾಗೂ ನಾಲ್ಕನೆಯ ಮಹಾವಾಕ್ಯ 'ಅಹಂ ಬ್ರಹ್ಮಾಸ್ಮಿ' ಈ ಮೆಟ್ಟಿಲುಗಳ ಮೇಲೆಯೇ ಜ್ಞಾನದ ಮಂದಿರದ ವರೆಗೂ ತಲುಪಲು ಸಾಧ್ಯವಾಗುತ್ತದೆ.. 'ನಾನು ಬ್ರಹ್ಮನೇ ಇದ್ದೇನೆ' ಈ ಆತ್ಮಸಾಕ್ಷಾತ್ಕಾರವು ನಂತರ ಸಾಧಕನಿಗೆ ಆಗುತ್ತದೆ ಎಂದು ಸಂಕ್ಷಿಪ್ತವಾಗಿ ಮುಕ್ತಿ ಮಾರ್ಗವನ್ನು ಪ್ರತಿಪಾದಿಸುವ ಆಚಾರ್ಯರು ಸನ್ಯಾಸಿಯ ಕರ್ತವ್ಯವನ್ನು ಕೂಡ ವಿಶ್ಲೇಷಿಸಿದ್ದಾರೆ. ಸನ್ಯಾಸಿಯಾದವನ ಧರ್ಮವೆಂದರೆ ಸಮಾಜಾಭಿಮುಖಿಯಾಗಿ ಸಮಾಜಕ್ಕೆ ಬೋಧನೆ ಮಾಡಿ ಸನ್ಮಾರ್ಗವನ್ನು ತೋರುವುದು, ಸ್ವಧರ್ಮನಿಷ್ಠೆಯನ್ನು ಪಾಲಿಸುವುದಕ್ಕೆ ಆಹ್ವಾನಿಸುವುದು ಹಾಗೂ ಪಾಲಿಸುವಂತೆ ಮಾಡುವುದು, ರಾಷ್ಟ್ರದ ಉತ್ಥಾನವಾಗುವುದಕ್ಕಾಗಿ ಸಂಚಾರ ಮಾಡುವುದು. ಸನ್ಯಾಸಿಯು ಉಪದೇಶಕ, ಸಮಾಲೋಚಕ, ಪ್ರಬೋಧಕ ಹಾಗೂ ಸುವಿಚಾರ ಪ್ರಸ್ಥಾಪಕನಾಗಿರುತ್ತಾನೆ. ಸನ್ಯಾಸಿಯ ಪರಮಾನಂದವನ್ನು ಪ್ರಾಪ್ತಿಸಿಕೊಳ್ಳುವ ಮಾರ್ಗವು ಈ ಸಮಾಜದಿಂದಲೇ ಹಾಯ್ದುಹೊಗುತ್ತದೆ. ಏಕಾಂತವೆನ್ನುವುದು ಕೇವಲ ತನ್ನ ಸ್ವಂತದ ಆನಂದಕ್ಕಾಗಿ ಸೀಮಿತವಾಗಿರುತ್ತದೆ ಎಂದು ಸನ್ಯಾಸಿಯ ಧರ್ಮವನ್ನೂ ಅವರು ವಿಶ್ಲೇಷಿಸುತ್ತಾರೆ. "ಬ್ರಹ್ಮನು ನಿರಾಕಾರನು. ಅವನು ನಿರ್ಮಿಸಿದ ಆತ್ಮರೂಪ ಚೈತನ್ಯವು ನಿತ್ಯವಾದದ್ದು. ಈ ದೇಹದಲ್ಲಿ ಅದು ಇರುವ ವರೆಗೂ ಅದರ ಕಾರ್ಯವು ನಡೆಯುತ್ತದೆ. ಆದರೆ ಅ ಕರ್ಮವು ಮುಗಿದಾಗ ಆತ್ಮವು ಆ ಬ್ರಹ್ಮನಲ್ಲಿ ವಿಲೀನವಾಗುತ್ತದೆ. ಎಂತಲೇ ನಾನು ಅದ್ವೈತದ ಉಪಾಸಕ. ಆ ನಿರಾಕಾರ ಬ್ರಹ್ಮಶಕ್ತಿಯ ಉಪಾಸಕ. ಅದಕ್ಕೇ ನಾನು, 'ಬ್ರಹ್ಮ ಸತ್ಯ ಜಗನ್ ಮಿಥ್ಯಾ' ಎನ್ನುವೆನು. ಕೆಲವೇ ಸಮಯಕ್ಕಾಗಿ ದೊರೆತಂಥ ಈ ಜೀವನವು ಅದೇ ಬ್ರಹ್ಮನಲ್ಲಿ ಒಂದಾಗುವಂಥದು. ಇದು ಸತ್ಯ." ಎಂದು ಅವರು ಅಹಂ ಬ್ರಹ್ಮಾಸ್ಮಿಗೆ ಸ್ಪಷ್ಟೀಕರಣವನ್ನು ಕೊಡುತ್ತಾರೆ. ಸಾಕಾರ ಪ್ರತಿಮೆಗೆ ಸಂಬಂಧಿಸಿದಂತೆ ಅವರನ್ನು ಅನೇಕರು, "ನೀವು ನಿರ್ಗುಣ-ನಿರಾಕಾರದ ಉಪಾಸಕರಾಗಿದ್ದಲ್ಲಿ ಇತರ ಎಲ್ಲ ಸಾಕಾರ ಪ್ರತಿಮೆಗಳ ಸ್ತೋತ್ರವನ್ನು ಏಕೆ ಹಾಡುತ್ತೀರಿ?" ಎಂದು ಕೇಳಿದಾಗ ಉತ್ತರವಾಗಿ, "ನಾವು ಆತ್ಮಸಹಿತವಾಗಿ ದೇಹದಲ್ಲಿ ಇರುವವರೆಗೂ ಕಾಣುವುದೆಲ್ಲವೂ ಸತ್ಯವೇ ಆಗಿದೆ. ಇದರಲ್ಲಿ ಸಂದೇಹವೇ ಇಲ್ಲ. ನಿರಾಕಾರದ ಸಾಕಾರ ಸ್ವರೂಪವು ಸೃಷ್ಟಿಯಲ್ಲಿದೆ ಎನ್ನುವುದೂ ಸತ್ಯವೇ. ಆದರೆ ಭಾಸವಾಗುವುದೆಲ್ಲವೂ ನಿತ್ಯವಲ್ಲ. ನಿತ್ಯವಿರುವುದು ಕೇವಲ ಆತ್ಮ ಮಾತ್ರ. ಅದ್ವೈತ ನಿರಾಕಾರವೂ ಹಾಗೆಯೇ ಇದೆ. ನಾವು ವಾಯುಲಹರಿ, ಸುಗಂಧ ಇವುಗಳನ್ನೆಲ್ಲ ಅನುಭೂತಿಯಿಂದ ಅರಿಯುತ್ತೇವೆ. ಹಾಗೆಯೇ ನಿರಾಕಾರದ ಸ್ವರೂಪವನ್ನೂ ಕೂಡ ಅರಿಯಬಲ್ಲೆವು. ಸಾಮಾನ್ಯ ಜನರಿಗೆ ಈ ಸಾಕಾರ ಪ್ರತಿಮೆ, ಈ ವಿಶ್ವ ಎಲ್ಲವೂ ಸಾಕಾರವೆನ್ನಿಸುತ್ತದೆ. ಅದಕ್ಕಾಗಿಯೇ ಅದರೊಂದಿಗೆ ಸಂಬಂಧವು ಕೂಡ ಸಾಧ್ಯವಾಗುತ್ತದೆ. ನಾನು ಸ್ತೋತ್ರಗಳನ್ನು ಹೇಳುವಾಗ ನನಗೆ ನಿರಾಕಾರವೇ ಸಾಕಾರವಾಗುತ್ತದೆ. ನಿರಾಕಾರದ ಸಾಕಾರ ಸೃಷ್ಟಿಯ ರೂಪವನ್ನು ಕಾಣುತ್ತ ಭಾವಪರವಶತೆಯಿಂದ ಕೂಡಿ ಆಯಾ ಸಮಯಗಳಲ್ಲಿ ಆಯಾ ಸ್ತೋತ್ರಗಳನ್ನು ಹಾಡುತ್ತೇನೆ. ಅದ್ವೈತವಾದದ ಪುರಸ್ಕಾರವನ್ನು ಮಾಡುವ ನಾನು, ಒಂದು ಮೆಟ್ಟಿಲು ಇಳಿದು ಆತ್ಮ, ಪರಮಾತ್ಮ ಬೇರೆ ಬೇರೆ ಎಂದು ತಿಳಿದ ಜನರನ್ನು ಎರಡೂ ಒಂದೇ ಎಂದು ನಂಬುವಂತೆ ಮಾಡಬಲ್ಲೆ. ಎಲ್ಲ ಆತ್ಮಗಳಲ್ಲಿ ಏಕತೆ ಇದೆ ಹಾಗೂ ವೈಯಕ್ತಿಕ ಆತ್ಮವು ಬ್ರಹ್ಮನೊಂದಿಗೆ ತನ್ನನ್ನು ಗುರುತಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ ಎನ್ನುವವರನ್ನೂ ಅಹಂ ಬ್ರಹ್ಮಾಸ್ಮಿ ಎಂದು ನಂಬುವಂತೆ ಮಾಡಬಲ್ಲೆ. ಬ್ರಹ್ಮವೇ ಸತ್ಯ ಎಂದು ನಾನು ಮತ್ತೆ ಮತ್ತೆ ಹೇಳುವೆನು. ಓಂ ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ಪೂರ್ಣಮುದಚ್ಯತೆ ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಷ್ಯತೆ. ಬ್ರಹ್ಮನು ಈ ವಿಶ್ವವನ್ನು ವ್ಯಾಪಿಸಿಕೊಂಡಿದ್ದಾನೆ. ಅದಃ ಎಂದರೆ ಬ್ರಹ್ಮ. ಇದಮ್ ಎಂದರೆ ಜಗತ್ತು, ಜೀವ. ಬ್ರಹ್ಮವು ಪೂರ್ಣ. ಜೀವವು ಪೂರ್ಣ. ಜಗತ್ತೂ ಪೂರ್ಣ. ಕಾಲ, ಕಾಮ, ವೇಗ ಇವುಗಳಲ್ಲಿ ಇರುವಂಥ ಘಟನೆಗಳ ದೃಶ್ಯಗಳು ಎಂದರೆ ಇದಮ್. ಅದಃ ಎಂದರೆ ಪರಬ್ರಹ್ಮ. ಅವನು ನಿರಾಕಾರನು. ಅವನು ಪ್ರತ್ಯಕ್ಷ ಅಥವಾ ದೃಶ್ಯವಾಗಿರದಿದ್ದರೂ ಎಲ್ಲೆಡೆಯಲ್ಲಿಯೂ ಇರುವುದರ ನಂಬಿಕೆಯು ಎಲ್ಲರಿಗೂ ಇರುತ್ತದೆ. ಇದು ಪೂರ್ಣವಾಗಿದೆ, ಅದು ಪೂರ್ಣವಾಗಿದೆ ಹಾಗೂ ಜಗತ್ತೂ ಪೂರ್ಣವಾಗಿದೆ. ಸೃಷ್ಟಿಯ ವಿಸರ್ಜನೆಯ ನಂತರವೂ ಆ ನಿರಾಕಾರ ಬ್ರಹ್ಮನು ನಿತ್ಯನು. ಪೂರ್ಣದಲ್ಲಿ ಪೂರ್ಣವನ್ನು ಕಳೆದಲ್ಲಿ ಕೂಡ ಪೂರ್ಣವೇ ಇರುತ್ತದೆ. ಪೂರ್ಣದಲ್ಲಿ ಪೂರ್ಣವನ್ನು ಕೂಡಿಸಿದರೂ ಕೂಡ ಅದು ಪೂರ್ಣವೇ ಆಗಿರುತ್ತದೆ. ಎಂದ ಮೇಲೆ ಈ ವಿಶ್ವದ ವ್ಯವಹಾರವು ದೃಶ್ಯಮಾನವಾದ ಸೃಷ್ಟಿಯಲ್ಲಿಯ ವ್ಯವಹಾರಕ್ಕಿಂತಲೂ ವಿಭಿನ್ನವಾಗಿದೆ. ಪ್ರತಿಯೊಬ್ಬ ಮನುಷ್ಯನಿಗೂ ಪೂರ್ಣತ್ವದ ಸೆಳೆತವು ಇದ್ದೇ ಇರುತ್ತದೆ. ಯಾವುದೇ ಕಾರ್ಯದಲ್ಲಿಯೂ ಕರ್ಮಸಿದ್ದಿಯಿಂದ ಪ್ರಾಪ್ತಗೊಳಿಸಿಕೊಂಡ ಯಶಸ್ಸು ಎಂದರೆ ಪೂರ್ಣತ್ವದ ಸಮಾಧಾನ. ಇದು ಪೂರ್ಣವಾಗಿ ಕಾಣಿಸುವುದಿಲ್ಲವಾದರೂ ಅದರ ಅನುಭೂತಿಯು ಉಂಟಾಗುತ್ತದೆ. ಆತ್ಮ, ಚೈತನ್ಯ, ಶಕ್ತಿ, ಇವು ನಿರಾಕಾರವಾಗಿದ್ದರೂ ಅವುಗಳ ಅನುಭೂತಿಯು ನಮಗೆ ಉಂಟಾಗುತ್ತದೆ. ಆಗ ಪೂರ್ಣದಲ್ಲಿ ಪೂರ್ಣವಾಗಿರುವುದರ ನಿರಾಕಾರದ ಅನುಭೂತಿಯನ್ನೇ ನಾವು ಪಡೆಯಬಹುದು. ಈ ವಿರಾಟ ವಿಶ್ವವನ್ನು ನಿರ್ಮಿಸಿದವನು ಅದೃಶ್ಯನು. ಸ್ವತಃ ಅದೃಶ್ಯನೇ ಆಗಿದ್ದರೂ ಕಣ್ಣಿಗೆ ಕಾಣುತ್ತಿರುವುದೆಲ್ಲವನ್ನೂ ನಿರ್ಮಾಣ ಮಾಡಿದವನು ಅವನೇ. ಮೊದಲು ಬ್ರಹ್ಮ, ವಿಷ್ಣು, ಮಹೇಶ್ವರ ಎಂಬ ಮೂವರು ಪುರುಷರ ಪ್ರಕೃತಿಯ ನಿರ್ಮಾಣದ ನಂತರ ಅವನು ಸೃಷ್ಟಿಯ ಉತ್ಪತ್ತಿ, ಸ್ಥಿತಿ, ಲಯ ಈ ಮೂರು ಅವಸ್ಥೆಗಳನ್ನು ಅವರಿಗೆ ಒಪ್ಪಿಸಿದನು. ಆದರೆ ಈ ಮೂವರು ಪ್ರಥಮಪುರುಷರ ಮೊದಲೂ ಸೃಷ್ಟಿಯು ಇದ್ದೇ ಇತ್ತು. ನಿರಾಕಾರವಾಗಿದ್ದುದೆಲ್ಲವೂ ಸತ್ಯವಾಗಿತ್ತು. ಅವನನ್ನೇ ಬ್ರಹ್ಮ ಎಂದು ಕರೆದರು. ಆ ಬ್ರಹ್ಮನು ಅಪೂರ್ಣನಲ್ಲ. ಎಲ್ಲರ ದೇಹದಲ್ಲಿಯೂ, ಸೃಷ್ಟಿಯಲ್ಲಿಯೂ ಪ್ರವೇಶ ಮಾಡಿಯೂ ಅವನು ಪೂರ್ಣನೇ ಆಗಿದ್ದಾನೆ." ಎಂದು ಹೇಳಿದರು. ಶ್ರೀ ಶಂಕರರು ಜೀವಿಸಿದುದು ಕೇವಲ ೩೨ ವರ್ಷಗಳ ಕಾಲ. ಪ್ರಾಚೀನ ಕಾಲದಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಪ್ರಯಾಣ ಮಾಡುವುದು ಅತಿ ಕಷ್ಟಕರವಾದ ಕೆಲಸವಾಗಿದ್ದಾಗ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಮೂರು ಬಾರಿ ದೇಶಾದ್ಯಂತ ಸಂಚರಿಸಿ ತಮ್ಮ ಆಯುಷ್ಯದ ಕೇವಲ ಮೂವತ್ತೆರಡು ವರ್ಷಗಳಲ್ಲಿಯೇ ತಮ್ಮ ಮಧುರ ಸಂದೇಶದಿಂದ ಜನಮನವನ್ನು ಗೆದ್ದರು. ತಮ್ಮ ಜೀವಿತದ ಈ ಅಲ್ಪಾವಧಿಯಲ್ಲಿಯೇ ದೇಶದ ಮೂಲೆ ಮೂಲೆಗಳಿಗೆ ಸಂಚರಿಸಿ ಗೀತಾಚಾರ್ಯ ಶ್ರೀಕೃಷ್ಣನ ಸಿದ್ಧಾಂತವಾದ "ಅದ್ವೈತ" ತತ್ವವನ್ನು ಪ್ರತಿಪಾದಿಸುವುದಷ್ಟೇ ಅಲ್ಲ, ಜಗತ್ತಿಗೆ ಸಾರಿ, ಹಲವಾರು ಮತಗಳಿಂದ ದಾಳಿಗೊಳಗಾಗುತ್ತಿದ್ದ ನಮ್ಮ ಹಿಂದೂ ಧರ್ಮವನ್ನು ಪುನರುತ್ಥಾನಗೊಳಿಸಿದರು. ಶೈವ, ವೈಷ್ಣವ, ಶಾಕ್ತ, ಗಾಣಪತ್ಯ, ಸೌರ ಹಾಗೂ ಸ್ಕಂದ ಮತಗಳನ್ನು ಒಗ್ಗೂಡಿಸಿ, ಷಣ್ಮತ ಪ್ರತಿಷ್ಠಾಪಕರಾದರು. ಪ್ರಾಚೀನ ಭಾರತೀಯ ಉಪನಿಷತ್ತುಗಳ ಸಿದ್ಧಾಂತಗಳಿಗೆ ಅವರು ಪುನರುಜ್ಜೀವನವನ್ನು ಪ್ರದಾನ ಮಾಡುವ ಪ್ರಯತ್ನ ಮಾಡಿದವರು. ಅವರು ಈಶ್ವರನನ್ನು ಪೂರ್ಣ ವಾಸ್ತವಿಕತೆಯ ರೂಪದಲ್ಲಿ ಸ್ವೀಕಾರ ಮಾಡಿದರು. ಈ ಸಂಸಾರವನ್ನು ಮಾಯೆ ಎಂದೂ ಹೇಳಿದರು. ಅವರ ಅಭಿಪ್ರಾಯದಲ್ಲಿ ಅಜ್ಞಾನಿಗಳು ಮಾತ್ರವೇ ಈಶ್ವರನನ್ನು ವಾಸ್ತವಿಕವೆಂದು ತಿಳಿಯದೆ ಸಂಸಾರವೇ ನಿತ್ಯವೆಂದು ತಿಳಿಯುತ್ತಾರೆ. ಜ್ಞಾನಿಗಳ ಮುಖ್ಯ ಉದ್ದೇಶವು ತಮ್ಮನ್ನು ತಾವು ಭ್ರಮೆ ಹಾಗೂ ಮಾಯೆಯಿಂದ ಮುಕ್ತರನ್ನಾಗಿಸಿಕೊಳ್ಳುವ ಹಾಗೂ ಈಶ್ವರ ಹಾಗೂ ಬ್ರಹ್ಮನೊಂದಿಗೆ ತಾದಾತ್ಮ್ಯವನ್ನು ಸ್ಥಾಪಿಸುವಂಥದಾಗಬೇಕು. ಶಂಕರಾಚಾರ್ಯರು ವರ್ಣಾಧಾರಿತ ಸಾಮಾಜಿಕ ವ್ಯವಸ್ಥೆಯ ಬಗ್ಗೆ ತಮ್ಮದೇ ಆದಂಥ ಅಭಿಪ್ರಾಯವನ್ನು ಹೇಳುತ್ತ, ಚಾತುರ್ವರ್ಣಗಳ ವಿಂಗಡಣೆಯು ಮನುಷ್ಯನು ಉದರಂಭರಣೆಗಾಗಿ ಮಾಡುವ ಕರ್ಮಗಳಿಗನುಸಾರವಾಗಿ ಆಯಿತೇ ಹೊರತು ಜನ್ಮಾನುಸಾರವಾದ ಮೇಲು ಕೀಳುಗಳಿಂದಲ್ಲ ಎಂದರು. ದೇಶದ ಮೂಲೆ ಮೂಲೆಗಳಲ್ಲಿ ಸಂಚರಿಸಿದ ಶಂಕರರು ಅನೇಕರನ್ನು ಅಧ್ಯಾತ್ಮಕ್ಕೆ ಸಂಬಂಧಪಟ್ಟ ವಾದದಲ್ಲಿ ಸೋಲಿಸಿದರು. ಆದಿಶಂಕರರು ಭಗವದ್ಗೀತೆ, ಉಪನಿಷತ್ ಹಾಗೂ ಬಾದರಾಯಣರ "ಬ್ರಹ್ಮಸೂತ್ರ"ಕ್ಕೆ ಭಾಷ್ಯವನ್ನು ರಚಿಸಿ ಪ್ರಸ್ಥಾನತ್ರಯಿಯನ್ನು ಬರೆದ ಮೊದಲ ಆಚಾರ್ಯರಾದರು. ಇವರು ರಚಿಸಿದ "ಭಜ ಗೋವಿಂದಮ್" ಸ್ತೋತ್ರ ಅತ್ಯಂತ ಪ್ರಸಿದ್ಧವಾದುದು. ಹಲವಾರು ಇತರ ಸ್ತೋತ್ರಗಳನ್ನೂ ಶಂಕರರು ರಚಿಸಿದ್ದಾರೆ. ಹಲವಾರು ಪಂಡಿತರನ್ನೂ, ಶಾಸ್ತ್ರವೇತ್ತರನ್ನೂ ಜಯಿಸಿ, ಸರ್ವಜ್ಞ ಪೀಠವನ್ನೇರಿದರು. ಭಾರತದಲ್ಲಿ ವಾದ ಮಾಡಿ ತಮ್ಮನ್ನು ಜಯಿಸುವವರೇ ಇಲ್ಲವೆಂದು ಹೀಗಳೆದು ಶಾರದೆಯ ದೇಗುಲದ ದಕ್ಷಿಣದ ಬಾಗಿಲನ್ನು ಮುಚ್ಚಿಸಿದ್ದ ಪಂಡಿತರ ಬಾಯಿ ಮುಚ್ಚಿಸಿದರು. ಸರ್ವಜ್ಞ ಪೀಠವನ್ನೇರಿದರು. ಜಗದ್ಗುರುಗಳಾದರು. ದೇಶದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಪೀಠಗಳನ್ನು ಎಂದರೆ ಉತ್ತರದಲ್ಲಿ ಬದರಿ ಪೀಠವನ್ನೂ, ದಕ್ಷಿಣದಲ್ಲಿ ಶೃಂಗೇರಿ ಪೀಠವನ್ನೂ, ಪೂರ್ವದಲ್ಲಿ ಪುರಿ ಪೀಠವನ್ನೂ, ಪಶ್ಚಿಮದಲ್ಲಿ ದ್ವಾರಕಾ ಪೀಠವನ್ನೂ ಸ್ಥಾಪಿಸಿ, ಪ್ರತಿಯೊಂದು ಪೀಠಕ್ಕೂ ತಮ್ಮ ಒಬ್ಬೊಬ್ಬ ಶಿಷ್ಯರನ್ನು ಪೀಠಾಧಿಪತಿಗಳನ್ನಾಗಿ ಮಾಡಿದರು. ಈ ನಾಲ್ಕೂ ಮಠಗಳು ಇಂದಿಗೂ ಧರ್ಮ ಜಾಗೃತಿಯನ್ನು ಮೂಡಿಸುವಲ್ಲಿ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿವೆ. ಅಲ್ಲದೆ ಇಂದಿಗೂ ತಮ್ಮ ಗುರು ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದ್ದು ಅಸಂಖ್ಯಾತ ಅನುಯಾಯಿಗಳನ್ನು ಹೊಂದಿವೆ. ಜೀವಿತ ಕಾಲದಲ್ಲೇ ತಮ್ಮ ಮಹತ್ಸಾಧನೆಗಳಿಂದ ಮತ್ತು ಆದರ್ಶ ಜೀವನದಿಂದ ಪ್ರಸಿದ್ದಿ ಪಡೆದ ಆಚಾರ್ಯರ ಬಗ್ಗೆ ಪ್ರಸ್ತುತ ಕಾಲಕ್ರಮದಲ್ಲಿ ದಂತಕಥೆಗಳು ಹಬ್ಬಿ, ನ್ಯೆಜವಾದ ಮತ್ತು ಐತಿಹಾಸಿಕವಾದ ವಿಷಯಗಳು ಮಾಸಲಾಗಿ ಗೋಚರಿಸುತ್ತಿವೆ. ಇದು ಎಲ್ಲ ಪ್ರಾಚೀನ ಮಹಾಪುರುಷರ ಜೀವನ ಚರಿತ್ರೆಯಲ್ಲೂ ಉಂಟಾಗಿರುವ ಸಂಗತಿ. ಆಚಾರ್ಯರ ಸಮಕಾಲೀನವಾದ ಯಾವ ಐತಿಹಾಸಿಕ ದಾಖಲೆಗಳೂ, ಗ್ರಂಥವೂ ದೊರಕಿರದೆ ಇರುವುದು ನಮ್ಮ ದುರ್ದ್ಯೆವ. ಆಚಾರ್ಯರ ಜೀವನವನ್ನು ತಿಳಿಸುವ 'ಶಂಕರ ದಿಗ್ವಿಜಯ' ಎಂಬ ಹೆಸರಿನ ಕೆಲವು ಗ್ರಂಥಗಳು ದೊರಕಿರುವುದು ನಿಜವಾದರೂ ಅವುಗಳು ಯಾವುವೂ ಶ್ರೀ ಶಂಕರರ ಸಮಕಾಲದಲ್ಲಿ ಆಥವಾ ಸಮೀಪ ಕಾಲದಲ್ಲಿ ರಚಿತವಾದವುಗಳಲ್ಲ. ಕೆಲವಂತೂ ನಾಲ್ಕಾರು ಶತಮಾನಗಳ ನಂತರ ರಚಿತವಾದ ಗ್ರಂಥಗಳು. ಆಚಾರ್ಯರ ಶಿಷ್ಯರೇ ಆಗಿದ್ದ ಪದ್ಮಪಾದರು ಶಂಕರ ದಿಗ್ವಿಜಯ ಎಂಬ ಗ್ರಂಥವನ್ನು ರಚಿಸಿದ್ದರೆಂದು ಹೇಳುತ್ತಾರೆ. ಆದರೆ ಈ ಗ್ರಂಥ ಇದುವರೆಗೂ ದೊರೆತಿಲ್ಲ. ಆದುದರಿಂದ ಶ್ರೀ ಶಂಕರರ ಜೀವನ ಚರಿತ್ರೆಯನ್ನು ತಿಳಿಯಲು ಪರಂಪರಾಗತವಾಗಿ ಬಂದಿರುವ ಐತಿಹ್ಯಗಳು, ಮಾಧವೀಯ ಶಂಕರ ದಿಗ್ವಿಜಯ, ಗುರುವಂಶ ಕಾವ್ಯ ಮೊದಲಾದ ಗ್ರಂಥಗಳ ತೌಲನಿಕ ಅಧ್ಯಯನದಿಂದ ಮಾತ್ರ ಸಾಧ್ಯ. ಇಂಥ ಅಧ್ಯಯನವನ್ನು ಆಳವಾಗಿ ಅಭ್ಯಸಿಸಿ ಅದಕ್ಕೆ ಕಾದಂಬರಿಯ ಒಂದು ಕಂಪನ್ನು ಇತ್ತವರು ಶ್ರೀಮತಿ ಶುಭಾಂಗಿ ಭಡಭಡೆಯವರು. ಕೇರಳ ರಾಜ್ಯವು ಪ್ರಾಚೀನ ಕಾಲದಿಂದಲೂ ಪ್ರಕೃತಿ ಸೌಂದರ್ಯಕ್ಕೆ ಮತ್ತು ಬೌದ್ದಿಕ ಪ್ರತಿಭೆಗೆ ಹೆಸರಾದ ಪ್ರದೇಶ. ಪೂರ್ಣಾ ನದಿಯ ದಡದ ಮೇಲೆ ಇಂದಿನ ಕೊಚ್ಚಿನ್‌ಗೆ ಸಮೀಪದಲ್ಲಿರುವ ಕಾಲಟಿ ಎಂಬುದು ಅಲ್ಲಿನ ಒಂದು ಸುಂದರ ಗ್ರಾಮ; ಶಿವಗುರು ಮತ್ತು ವಿಶಿಷ್ಟಾದೇವಿ ಎಂಬ ದಂಪತಿಗಳು ಅಲ್ಲಿ ವಾಸವಾಗಿರುತ್ತಾರೆ. ಅವರದು ಸಂಪ್ರದಾಯಸ್ಥ ನಂಬೂದರಿ ಬ್ರಾಹ್ಮಣ ಕುಟುಂಬ. ಶಿವಗುರುಗಳು ಒಂದು ಗುರುಕುಲವನ್ನು ನಡೆಸುತ್ತಲಿರುತ್ತಾರೆ. ಅಚಲವಾದ ಭಕ್ತಿ ಮತ್ತು ನಿಷ್ಠೆಗಳಿಂದ ಶಿವಶಂಕರನ ಸೇವೆಯೇ ಏಕೈಕ ಮಾರ್ಗ ಎನ್ನುವ ಭಾವದಿಂದ ಹಲವು ದಿನಗಳನ್ನು ಕಳೆದರು. ಒಂದು ರಾತ್ರಿ ಶಿವಗುರುಗಳ ಕನಸಿನಲ್ಲಿ ಶಿವಶಂಕರನು ಕಾಣಿಸಿಕೊಂಡ ಅನುಭವ. ಕನಸಿನಲ್ಲಿ ಬಂದಂಥ ಭಗವಂತನು "ನಿಮ್ಮ ನಿಷ್ಠೆ-ಭಕ್ತಿಗಳಿಗೆ ನಾನು ಮೆಚ್ಚಿದ್ದೇನೆ. ನಿಮ್ಮ ಆಸೆಯನ್ನು ಈಡೇರಿಸುತ್ತೇನೆ. ಆದರೆ ನಿಮಗೆ ದೀರ್ಘಾಯುಷ್ಯವುಳ್ಳ ದಡ್ಡ ಮಗನು ಬೇಕೋ ಅಥವಾ ಅಲ್ಪಾಯುಷ್ಯವುಳ್ಳ ಲೋಕ ಗುರುವೆನಿಸುವ ಸರ್ವಜ್ಞನಾದ ಬೇಕೊ?" ಎಂದು ಪ್ರಶ್ನಿಸುತ್ತಾನೆ. ಭಗವಂತನಲ್ಲಿ ಆಪಾರ ವಿಶ್ವಾಸವುಳ್ಳ ಶಿವಗುರುಗಳು ಅಲ್ಪಾಯುಷಿಯಾದರೂ ಸರ್ವಜ್ಞನೂ, ವಿಶ್ವ ವಿಖ್ಯಾತನೂ ಆಗುವ ಮಗನು ತಮಗೆ ಬೇಕು ಎಂದು ಬೇಡಿಕೊಳ್ಳುತ್ತಾರೆ. ನಂತರ ಸಂತೋಷದಿಂದ ಶಿವಗುರು ವಿಶಿಷ್ಟಾದೇವಿಯರು ಮತ್ತೆ ಹಲವು ದಿನಗಳು ಇದ್ದು, ಈಶ್ವರನ ಸೇವೆ ಮಾಡಿ ತಮ್ಮ ಊರಿಗೆ ಹಿಂತಿರುಗಿದರು. ದೈವಕೃಪೆಯಿಂದ ವಿಶಿಷ್ಟಾದೇವಿಯ ಗರ್ಭದಲ್ಲಿ ಜನಿಸಿದ ಶಿಶುವಿಗೆ ಶಂಕರನೆಂದೇ ನಾಮಕರಣ ಮಾಡಿದರು. ದಿವ್ಯಾಂಶಸಂಭೂತರಾದ ಬಾಲಶಂಕರನು ಬಾಲ್ಯದಿಂದಲೂ ಎಲ್ಲ ರೀತಿಯಲ್ಲಿ ಅಸಮಾನರಾಗಿಯೇ ಬೆಳೆಯುತ್ತಲಿದ್ದನು. ಮೂರನೆಯ ವಯಸ್ಸಿನಲ್ಲಿಯೇ ಅಪಾರವಾದ ಜ್ಞಾನವನ್ನು ಪಡೆದ ಅವನು ಏಕಪಾಠಿಯಾಗಿದ್ದನು. ಅವನಿಗೆ ಮೂರನೆಯ ವಯಸ್ಸಿನಲ್ಲಿಯೇ ತಂದೆಯ ಅಗಲಿಕೆಯುಂಟಾಗುತ್ತದೆ. ಐದನೆಯ ವಯಸ್ಸಿನಲ್ಲಿಯೇ ಮುಂಜಿವೆಯನ್ನು ಮಾಡಿ, ಬ್ರಹ್ಮಾನಂದ ಗುರುಗಳ ಗುರುಕುಲದಲ್ಲಿ ಕಲಿಯಲೆಂದು ಇರಿಸುತ್ತಾರೆ. ಹನ್ನೆರಡನೆಯ ವಯಸ್ಸಿಗೆ ಕಲಿತು ಮುಗಿಸಬೇಕಾದಂಥ ಉಪನಿಷತ್ತು, ವೇದಗಳು ಎಲ್ಲ ವಿದ್ಯೆಯನ್ನು ಕೇವಲ ಮೂರೇ ವರ್ಷಗಳಲ್ಲಿ ಪ್ರಾಪ್ತಿಸಿಕೊಂಡು ಆಚಾರ್ಯನೆಂಬ ಬಿರುದನ್ನು ಹೊತ್ತು ತನ್ನ ಊರಿಗೆ ಮರಳಿದ ಶಂಕರನು ತಮ್ಮ ತಂದೆಯ ಗುರುಕುಲವನ್ನೇ ನಡೆಸುತ್ತಿರುತ್ತಾನೆ. ಊರ ಜನರಿಗಷ್ಟೇ ಏಕೆ, ಅಲ್ಲಿಯ ರಾಜನಿಗೂ ಪ್ರಿಯನಾದಂಥ ಬಾಲಶಂಕರನು ತನ್ನ ಆಯುಷ್ಯವು ಎಂಟೇ ವರ್ಷಗಳಷ್ಟಿರುವುದನ್ನು ತಂದೆಯು ಬರೆದಿರಿಸಿದಂಥ ಭೂರ್ಜಪತ್ರದ ಮೇಲಿನ ಬರಹದಿಂದ ಅರಿತು ಇದರ ಬಗ್ಗೆ ಏನೂ ಅರಿಯದ ತಾಯಿಗೆ ತನ್ನ ಅಗಲಿಕೆಯ ದುಃಖವುಂಟಾಗಬಾರದೆಂದು ಸನ್ಯಾಸಿಯಾಗಿ ದೂರ ಹೊರಟುಹೋಗುವ ಆಲೋಚನೆಯನ್ನು ಮಾಡುತ್ತಾನೆ. ಆಕೆಯು ಒಪ್ಪಿಗೆಯನ್ನು ಕೊಡುವುದಿಲ್ಲ. ಪೂರ್ಣಾ ನದಿಯಲ್ಲಿ ಸ್ನಾನಕ್ಕೆ ಹೋದಾಗ ಮೊಸಳೆಯೊಂದು ಅವನ ಕಾಲನ್ನು ಹಿಡಿಯುತ್ತದೆ. ಆಗ ಶಂಕರನು ತನಗೆ ಸನ್ಯಾಸಿಯಾಗಲು ಒಪ್ಪಿಗೆಯನ್ನು ಕೊಟ್ಟರೆ ಮಾತ್ರ ತಾನು ಉಳಿಯುವುದಾಗಿ ಹೇಳುತ್ತಾನೆ. 'ಒಟ್ಟಿನಲ್ಲಿ ಹೇಗಿದ್ದರೂ ನನ್ನ ಮೃತ್ಯುವು ನಿಶ್ಚಿತವೇ ಆಗಿದೆ. ಆದ್ದರಿಂದ ನನಗೆ ಸನ್ಯಾಸವನ್ನು ತೆಗೆದುಕೊಳ್ಳುವುದಕ್ಕೆ ಅನುಮತಿಯನ್ನು ಕೊಡು ತಾಯಿ. ಜೀವಂತ ಉಳಿದೆನಾದರೆ ಸನ್ಯಾಸವನ್ನಾದರೂ ತೆಗೆದುಕೊಂಡು ನಾನು ಜೀವಂತ ಉಳಿದೇನು. ಏಕೆಂದರೆ ನನಗೆ ಸನ್ಯಾಸವನ್ನು ಸ್ವೀಕರಿಸುವುದಕ್ಕೆ ಅನುಮತಿಸುವುದು ಎಂದರೆ ಅದು ನನ್ನ ಪುನರ್ಜನ್ಮವಾದಂತೆಯೇ ಸರಿ..." ಎಂದು ಹೇಳಿದಾಗ ತಾಯಿಯು ಅನುಮತಿಯನ್ನು ಕೊಡುತ್ತಾಳೆ. ಗೋವಿಂದಾಚಾರ್ಯರ ಹತ್ತಿರ ವಿದ್ಯೆ ಕಲಿಯುವ ಆಕಾಂಕ್ಷೆಯಿಂದ ನರ್ಮದಾ ನದಿಯ ವರೆಗೂ ಕಾಲಟಿಯಿಂದ ನಡೆಯುತ್ತ ಹೋಗುತ್ತಾರೆ. ಮೊದಲು ಗೋವಿಂದಾಚಾರ್ಯರ ಹತ್ತಿರ, ನಂತರ ಗೌಡಪಾದಾಚಾರ್ಯರ ಹತ್ತಿರ ಕೂಡ ವಿದ್ಯೆಯನ್ನು ಕಲಿತು ಪ್ರಸ್ಥಾನತ್ರಯಿಯನ್ನು ರಚಿಸುತ್ತಾರೆ. ಗೌಡಪಾದರು ಅವರಿಗೆ ತಮ್ಮ ಆಯುಷ್ಯದ ಹದಿನಾರು ವರ್ಷಗಳನ್ನು ಧಾರೆ ಎರೆದರೆ ಸ್ವತಃ ಶಿವನೇ ಅವರಿಗೆ ಎಂಟು ವರ್ಷಗಳಷ್ಟು ಆಯುಷ್ಯವನ್ನು ಹೆಚ್ಚಿಸುತ್ತಾನೆ. ನಂತರ ಹಿಂದೂ ಧರ್ಮದ ಏಳ್ಗೆಗಾಗಿ ಇಡಿಯ ಭಾರತದಲ್ಲಿ ತಿರುಗಾಡುತ್ತಾರೆ. ಹನ್ನೆರಡರ ವೇಳೆಗೆ ತಮ್ಮ ಪ್ರಧಾನ ಕೃತಿಗಳೆನಿಸಿರುವ ವೇದಾಂತ ಭಾಷ್ಯಗಳನ್ನು ಬರೆದಿದ್ದರಂತೆ. ಅವರ ಬುದ್ದಿಶಕ್ತಿ ಎಷ್ಟು ತೀಕ್ಷ್ನವಾಗಿತೋ, ಅಷ್ಟೆ ಅವರ ಹೃದಯವೂ ವಿಶಾಲವಾಗಿತ್ತು. ಸಂಸ್ಕೃತ ಭಾಷೆಗಳಲ್ಲಿ ಪಾರಂಗತರಾಗಿದ್ದರು. ಅವರು ತಮ್ಮ ಮೊದಲ ವರ್ಷದಲ್ಲಿಯೇ ಮಾತೃಭಾಷೆಯಾದ ಮಲೆಯಾಳ ಮತ್ತು ವೇದಭಾಷೆಯಾದ ಸಂಸ್ಕ್ರತ-ಎರಡನ್ನೂ ಕಲಿತರು. ಎರಡನೆಯ ವರ್ಷದಲ್ಲಿ ಈ ಭಾಷೆಗಳಲ್ಲಿ ಕಾವ್ಯಗಳನ್ನೂ ಪುರಾಣಗಳನ್ನೂ ಓದಿ ಅವುಗಳ ಅರ್ಥಗಳನ್ನು ಹೇಳುತಿದ್ದರು ಎನ್ನಲಾಗಿದೆ. ಸಾಮಾನ್ಯ ದೃಷ್ಟಿಯಿಂದ ನೋಡಿದರೆ ಇದರಲ್ಲಿ ಉತ್ಪ್ರೇಕ್ಷೆ ಇದೆಯೇನೋ ಎನಿಸಬಹುದು. ಆದರೆ ಅವರ ಸಾಧನೆಯನ್ನು ನೋಡಿದಾಗ ಸಹಜವೆನ್ನಿಸುವ ಭಾವನೆಯೂ ಬರುತ್ತದೆ. ಮಂಡನಮಿಶ್ರರ ಜೊತೆಗೆ ನಡೆದಂಥ ವಾದ-ಪ್ರತಿವಾದದ ನಂತರ ಸರಸ್ವತಿದೇವಿಯ ವೈವಾಹಿಕ ಜೀವನದ ಎಂದರೆ ಸತಿ-ಪತಿಯರ ಕಾಮಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕಲೆಂದು ಪರಕಾಯ ಪ್ರವೇಶವನ್ನು ಮಾಡಿ ಸನ್ಯಾಸದ ಸೀಮೆಯಲ್ಲಿದ್ದುಕೊಂಡು ಅನುಭವಿಸಲಾಗದಂಥ ಯಥಾರ್ಥದ ಅನುಭವವನ್ನು ಪಡೆದರು. ಸರಸ್ವತಿದೇವಿಯ ಪ್ರಶ್ನೆಗಳಿಗೆ ಉತ್ತರವನ್ನು ಹೇಳಿ ಮಂಡನಮಿಶ್ರರನ್ನು ಸೋಲಿಸಿ ತಮ್ಮ ಶಿಷ್ಯರನ್ನಾಗಿಸಿಕೊಂಡರು. ನಂತರ ಅವರನ್ನೇ ಸುರೇಶ್ವರಾಚಾರ್ಯರೆಂಬ ಹೆಸರಿನಿಂದ ಶೃಂಗೇರಿಯ ಮಠದ ಗುರುಗಳನ್ನಾಗಿ ಮಾಡಿದರು. ಅವರು ತಾಯಿಯು ಮರಣಾಸನ್ನರಾಗಿರುವಾಗ ಅಲ್ಲಿಗೆ ತಲುಪಿ ತಾಯಿಗೆ ಕೊಟ್ಟಂಥ ಮಾತಿಗನುಸಾರವಾಗಿ ಅವಳ ಸೇವೆಯನ್ನು ಮಾಡಿ ಅವಳ ಚಿತೆಗೆ ಅಗ್ನಿ ಸ್ಪರ್ಶವನ್ನು ಮಾಡಿ ಮಗನಾದವನ ಕರ್ತವ್ಯವನ್ನೂ ಮಾಡುತ್ತಾರೆ. ಈ ಕಾದಂಬರಿಯಲ್ಲಿ ನಿಸರ್ಗದ ವರ್ಣನೆಗೂ ಲೇಖಕಿಯು ಬಹಳ ಒತ್ತು ನೀಡಿದ್ದಾರೆ. ಅದು ಶ್ರೀ ಶಂಕರರ ಗುಣವಿಶೇಷವೂ ಅಗಿತ್ತೇನೋ. ಏಕೆಂದರೆ ಅವರ ಕಾವ್ಯಗಳಲ್ಲಿ, ಸ್ತೋತ್ರಗಳಲ್ಲಿಯೂ ನಾವು ನಿಸರ್ಗ ಸೌಂದರ್ಯದ ಬಗೆಗಿನ ಅವರ ಒಲವನ್ನು ಕಾಣುತ್ತೇವೆ. ಇತಿಹಾಸಕ್ಕೂ ಕಾದಂಬರಿಗೂ ಒಂದು ವ್ಯತ್ಯಾಸವಿದೆ, ಜೊತೆಗೇ ಇರಲೇಬೇಕಾದ ಒಂದು ಸಾಮ್ಯವೂ ಇದೆ. ಇತಿಹಾಸವನ್ನು ಬದಲಾಯಿಸುವುದಕ್ಕೆ ಬರಲಾರದಾದರೂ ಕಾದಂಬರಿಯಲ್ಲಿ ಕಥೆಗೆ ಪೂರಕವಾಗುವಂತೆ ಕಲ್ಪನೆಗೆ ಅವಕಾಶವಿರುತ್ತದೆ. ಇಲ್ಲಿ ಅಂಥ ಸಂದರ್ಭಗಳು ಸಾಕಷ್ಟು ಬಂದಿವೆ. 'ಸುಮತಿ'ಯದೂ ಕೂಡ ಕಾಲ್ಪನಿಕ ಪಾತ್ರವೇ. ಇಲ್ಲಿ ಆಕೆ ವಿಷ್ಣುಶಾಸ್ತ್ರಿಗಳ ಮಗಳು. ವಿಷ್ಣುಶಾಸ್ತ್ರಿಗಳು ಶಂಕರಾಚಾರ್ಯರ ತಂದೆಯ ಪರಮ ಮಿತ್ರರು. ಅವರು ಆ ಕಾಲದಲ್ಲಿ ಮನಸ್ಸಿನಲ್ಲಿಯೇ ತಮ್ಮ ಮಗಳನ್ನು ಆಚಾರ್ಯ ಶಂಕರರ ಜೊತೆಗೆ ವಿವಾಹವನ್ನು ಮಾಡಬೇಕೆಂದು ಆಲೋಚಿಸಿರಲೂಬಹುದು. ಈ ಸಂಭವನೀಯತೆಯನ್ನು ಗಮನದಲ್ಲಿರಿಸಿಕೊಂಡೇ ಅವಳ ಮನಸ್ಸಿನಲ್ಲಿಯ ಅನೇಕ ಆಂದೋಲನಗಳು, ಪರಿವರ್ತನಗಳನ್ನು ಈ ಕಾದಂಬರಿಯಲ್ಲಿ ವಿವರಿಸಿದ್ದೇನೆ ಎಂದು ಲೇಖಕಿ ಹೇಳುತ್ತಾರೆ. ಆಚಾರ್ಯ ಶಂಕರರು ಅವಳನ್ನು ಧರ್ಮಭಗಿನಿ ಎಂದೇ ತಿಳಿದಿದ್ದರೂ ಕೂಡ ಅವಳಿಗೆ ಅದರ ಕಲ್ಪನೆಯೂ ಇರುವುದಿಲ್ಲ. ಎಂತಲೇ ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಆಕೆ ವಿವಾಹದಲ್ಲಿ ಉತ್ಸುಕಳಾಗಿದ್ದು, ನಂತರ ಕರ್ತವ್ಯನಿಷ್ಠ ಯುವತಿಯಾಗಿ ಮಾರ್ಪಡುತ್ತಾಳೆ. ಕೊನೆಯವರೆಗೂ ಬ್ರಹ್ಮಚಾರಿಣಿಯಾಗಿಯೇ ಉಳಿಯುತ್ತಾಳೆ. ಆಚಾರ್ಯ ಶಂಕರರು- 'ಜಗದ್ಗುರು' ಎಂದು ಸನ್ಮಾನಿತರಾದಾಗ 'ಕನ್ಯಾ ಆಶ್ರಮ'ದ ಸಂಸ್ಥಾಪನೆಯನ್ನು ಮಾಡಿ ಪರೋಕ್ಷವಾಗಿ ತಾನೂ ಮಹಿಳಾ ಜಾಗೃತಿಯ ಹೆಜ್ಜೆಯನ್ನಿರಿಸಿ ಲೋಕೋಪಕಾರಿ ಕೆಲಸಕ್ಕೆ ನಾಂದಿ ಹಾಡಿರುತ್ತಾಳೆ. ಸುಮತಿ ಎಂಬ ಈ ಕಾಲ್ಪನಿಕ ಪಾತ್ರವು ಕಥೆಗೆ ಪೂರಕವಾಗಿ ಅವಳು ಆದರ್ಶ ಹೆಣ್ಣಾಗಿ ಚಿತ್ರಿತಳಾಗಿದ್ದಾಳೆ. ಈ ಕಾದಂಬರಿಯಲ್ಲಿ ಶಂಕರಾಚಾರ್ಯರು ಕಂಚಿಯ ಕಾಮಕೋಟಿಯಲ್ಲಿ ದೇಹವಿಟ್ಟರು ಎಂದು ಹೇಳಲಾಗುತ್ತದೆ. ಆದರೆ ಅವರ ಜೀವನದ ಕೊನೆಯ ಭಾಗದಲ್ಲಿ ಹಿಮಾಲಯಕ್ಕೆ ಪ್ರಯಾಣ ಮಾಡಿ ಅಲ್ಲಿ ಕೇದಾರ ದೇವಾಲಯದ ಹತ್ತಿರ ಮುಕ್ತಿಯನ್ನು ಪಡೆದರೆಂದು ಕೆಲವರು ಹೇಳುತ್ತಾರೆ. ಕೇದಾರದ ಕೇದಾರನಾಥ ದೇವಾಲಯದ ಹಿಂಭಾಗದಲ್ಲಿ ಶ್ರೀ ಶಂಕರರ ಸಮಾಧಿ ಇದೆ; ಶಿಲಾಪ್ರತಿಮೆಯೂ ಇದೆ. ಕೇರಳದವರು ಕೇರಳದ ತ್ರಿಶೂರಿನಲ್ಲಿ ಅವರು ಸಮಾಧಿಸ್ಥರಾದರೆನ್ನುತ್ತಾರೆ, ತಮಿಳನಾಡಿನವರು ಕಂಚಿಯಲ್ಲಿ ಶಂಕರರು ವಿದೇಹ ಮುಕ್ತಿ ಪಡೆದರೆನ್ನುತ್ತಾರೆ. ಕೇರಳ, ಕಂಚಿಗಳಲ್ಲಿಯೂ ಅವರ ಸಮಾಧಿಗಳಿವೆ. ಸುಪ್ರಸಿದ್ಧ ಕಾದಂಬರಿಕಾರ್ತಿ ಶುಭಾಂಗಿ ಭಡಭಡೆಯವರು ತಮ್ಮ ೭೫ ನೆಯ ವಯಸ್ಸಿನಲ್ಲಿ ತಮ್ಮ ಈ ೭೫ನೆಯ ಕಾದಂಬರಿಯನ್ನು ಬರೆದರು ಎನ್ನುವುದು ಒಂದು ಅತ್ಯಂತ ವಿಚಿತ್ರ ಯೋಗಾಯೋಗವೇ ಸೈ. ಆದ್ಯ ಶಂಕರಾಚಾರ್ಯರ ಕಲ್ಪನೆಗಿಂತಲೂ ಹೆಚ್ಚೇ ಎನ್ನುವ ಅವರ ಈ ಪ್ರತö್ಯಕ್ಷ ಜೀವನದ ಚರಿತ್ರಾತ್ಮಕ ಕಾದಂಬರಿ "ಅದ್ವೈತದ ಉಪನಿಷತ್ತು". ತಾವು ಮರಾಠಿಯಲ್ಲಿ ಬರೆದಂಥ ಈ ಹೊತ್ತಿಗೆಯನ್ನು ನಾನು ಕನ್ನಡಕ್ಕೆ ಅನುವಾದಿಸಲೇಬೇಕೆಂಬ ಒತ್ತಾಯವು ಅವರಿಂದ ಬಂದಿತ್ತು. ನಾನು ಅದನ್ನು ಮುಂದಕ್ಕೆ ಹಾಕುತ್ತಲೇ ಇದ್ದೆ ಅನೇಕ ಕಾರಣಗಳಿಂದಾಗಿ. ಮೊದಲನೆಯದು ಸಮಯದ ಅಭಾವ ಜೊತೆಗೇ ನನ್ನ ಅನಾರೋಗ್ಯ. ಆದರೆ ಅವರು ನನಗೆ ಸಾಕಷ್ಟು ಸಮಯವನ್ನು ತೆಗೆದುಕೊಳ್ಳಬೇಕೆಂದೂ, ಆದರೆ ನಾನೇ ಅದನ್ನು ಮಾಡಬೇಕೆಂದು ಹೇಳಿದಾಗ ನಾನು ಸೋತೆ. ಇಲ್ಲಿಯ ವರೆಗೂ ನಾನು ಬರೆದಂಥ ಏಕಮಾತ್ರ ಆಧ್ಯಾತ್ಮಿಕ ಹೊತ್ತಿಗೆ ಎಂದರೆ ನಿತ್ಯ ಜೀವನದಲ್ಲಿ ಭಗವದ್ಗೀತೆ ಎಂಬ ಸ್ವತಂತ್ರ ಕೃತಿಯಾಗಿತ್ತು. 'ಅದ್ವೈತದ ಉಪನಿಷತ್ತು' ಎಂಬ ಈ ಗ್ರಂಥವನ್ನು ಅನುವಾದವನ್ನು ಮಾಡುವ ಮೊದಲು ಓದಲೆಂದು ಕೈಗೆತ್ತಿಕೊಂಡಾಗ ಇದೂ ಒಂದು ಧರ್ಮೋಪದೇಶದ ಕೈಪಿಡಿಯೇ ಇದ್ದೀತು ಎನ್ನುವ ಭಾವನೆಯೂ ಇತ್ತು. ಆದರೆ ಓದುತ್ತಾ ಹೋದಂತೆ ಶ್ರೀ ಶಂಕರಾಚಾರ್ಯರು ಕೇವಲ ಒಂದು ಧರ್ಮದ ಸಂಘಟಕರಷ್ಟೇ ಅಲ್ಲ, ಅವರು ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ಸಾರಿ ಹೇಳಿದ ಆಚಾರ್ಯತ್ರಯರಲ್ಲಿ ಶಂಕರಾಚಾರ್ಯರು ಮೊದಲಿಗರು (ಆದಿ ಶಂಕರರು) ಎನ್ನುವುದರ ಅರಿವಾಯಿತು. ಈ ರೀತಿಯಾಗಿ ನಮಗೆ ಅವರ ವ್ಯಕ್ತಿತ್ವದಲ್ಲಿ ಗುರು, ದಾರ್ಶನಿಕ, ಸಮಾಜ ಹಾಗೂ ಧರ್ಮ ಸುಧಾರಕ, ವಿಭಿನ್ನ ಮತಗಳು ಹಾಗೂ ಸಂಪ್ರದಾಯಗಳ ಸಮನ್ವಯಕಾರನ ರೂಪವು ಕಾಣುತ್ತದೆ. ಕೆಲವು ವಿದ್ವಾಂಸರು ಅವರ ಮೇಲೆ ಬೌದ್ಧ ಶೂನ್ಯವಾದದ ಪ್ರಭಾವವನ್ನು ಕಾಣುತ್ತ ಅವರಿಗೆ ಪ್ರಚ್ಛನ್ನ ಬುದ್ಧ ಎಂತಲೂ ಕರೆಯುತ್ತಾರೆ. ಸ್ವಾಮಿ ವಿವೇಕಾನಂದರಂಥ ಯುವಸನ್ಯಾಸಿಗಳು ವಿದೇಶಗಳಲ್ಲಿ ಭಾಷಣ ಮಾಡಿದ್ದು ಕೂಡ ಶ್ರೀ ಶಂಕರ ರ ವೇದಾಂತವನ್ನೇ. ಇಂದು ನಮ್ಮ ಭಾರತ ಕ್ಕೆ ಇಂಥದೇ ಒಬ್ಬ ಯೋಗಿ, ಕವಿ, ಭಕ್ತ, ಕರ್ಮನಿಷ್ಠ, ಹಾಗೂ ಶಾಸ್ತ್ರೀಯ ಜ್ಞಾನದ ಜೊತೆಗೆ ಜನಕಲ್ಯಾಣದ ಭಾವನೆಯನ್ನು ಹೊಂದಿರುವ ಒಂದು ಮಹಾವ್ಯಕ್ತಿತ್ವದ ಅವಶ್ಯಕತೆ ಇದೆ. ಕೇರಳದಲ್ಲಿಯ ಪುಟ್ಟ ಹಳ್ಳಿ ಕಾಲಟಿಯ ಶಿವಗುರು-ವಿಶಿಷ್ಟಾದೇವಿಯರ ಪುತ್ರ ಈ ಶಂಕರ. ತಮ್ಮ ಕೇವಲ ಎಂಟನೆಯ ವರ್ಷದಲ್ಲಿಯೇ ಅವರು ನಾಲ್ಕು ವೇದಗಳ ಅಧ್ಯಯನವನ್ನು ಮಾಡಿದರು. ಹನ್ನೆರಡನೆಯ ವರ್ಷದಲ್ಲಿ ಅವರು ಸರ್ವ ಶಾಸ್ತçಗಳ ಜ್ಞಾನವನ್ನು ಪ್ರಾಪ್ತಿ ಮಾಡಿಕೊಂಡರು. ಹದಿನಾರನೆಯ ವರ್ಷದಲ್ಲಿ ಪ್ರಸ್ಥಾನತ್ರಯೀಯನ್ನೂ, ಅನೇಕ ವಿಧವಾದ ಮಧುರ ಹಾಗೂ ಸಮರ್ಪಕವಾದ ಸ್ತೋತ್ರಗಳನ್ನೂ ಬರೆದರು. ಭಾರತಭ್ರಮಣವನ್ನು ಮಾಡಿ ಬದರಿನಾಥ, ದ್ವಾರಕಾ, ಜಗನ್ನಾಥಪುರಿ, ಶೃಂಗೇರಿಗಳಂಥ ಕಡೆಗೆ ಮಠಗಳನ್ನು ಸ್ಥಾಪಿಸಿದರು. ಶೈವ, ಶಾಕ್ತ, ವೈಷ್ಣವ, ಸೌರ, ಗಾಣಪತ್ಯ, ಕಾಪಾಲಿಕ ಹಾಗೂ ವಾಮಾಚಾರಿ ಎಂಬ ಈ ಏಳು ಮತಗಳ್ನು ಏಕತ್ರಗೊಳಿಸುವ ಮಹತ್ಕಾರ್ಯವನ್ನು ಮಾಡಿದರು. ಆದಿತ್ಯ, ಅಂಬಿಕಾ, ವಿಷ್ಣು, ಗಣನಾಥ ಹಾಗೂ ಮಹೇಶ್ವರ ಈ ಐದು ದೇವತೆಗಳ ಪಂಚಾಯತನ ಪೂಜೆಯನ್ನು ಅವರು ಹೇಳಿದರು. ಇದು ಲೋಕೋತ್ತರ ಕಾರ್ಯವನ್ನು ಮಾಡಿದ ಆ ವ್ಯಕ್ತಿಯ ತಾತ್ವಿಕ ಭೂಮಿಕೆ, ಪ್ರತ್ಯಕ್ಷ ಕಾರ್ಯ, ಅಸೀಮ ಲೋಕಪ್ರಿಯತೆ, ರಾಜರಿಂದ ಮಾನ್ಯತೆ, ವಾದ-ಪ್ರತಿವಾದಗಳಲ್ಲಿಯ ಸಹಜ ಖಂಡನ ಮಂಡನ ಮಾಡುವ ಅವರ ನಿರ್ದೋಷ ಶೈಲಿ ಇವುಗಳನ್ನು ಗಮನಿಸುವುದು ಸರಳವಾಗಿರಲಿಲ್ಲ. ಇಪ್ಪತ್ತು ಸಾಮಾಜಿಕ ಕಾದಂಬರಿಗಳು ಹಾಗೂ ಇಪ್ಪತ್ತು ಚರಿತ್ರಾತ್ಮಕ ಕಾದಂಬರಿಗಳನ್ನು ಬರೆದಿರುವ ಈ ಲೇಖಕಿಗೆ ಆದ್ಯ ಶಂಕರಾಚಾರ್ಯರ ಜೀವನ ಹಾಗೂ ಅಲೌಕಿಕ ಕಾರ್ಯಗಳ ಬಗ್ಗೆ ಆಕರ್ಷಣೆಯುಂಟಾಗಿತ್ತು. ಅವರ ಜೀವನದೊಂದಿಗೆ ಜೋಡಿಸಲ್ಪಟ್ಟ ಚಮತ್ಕಾರ, ದಂತಕಥೆ, ಆಖ್ಯಾಯಿಕೆಗಳನ್ನು ಬಳಸಿಕೊಂಡು ಈ ಕಾದಂಬರಿಯಲ್ಲಿ ಅವುಗಳ ಚಿತ್ರಣವನ್ನು ಸಹಜವೆಂಬಂತೆ ಮಾಡಲಾಗಿದೆ. ಹದಿನೈದು ದಿನಗಳ ವರೆಗೂ ತಪಸ್ಸು ಮಾಡಿ ಪೂರ್ಣಾ ನದಿಯನ್ನು ಮನೆಗೆ ಹತ್ತಿರದಲ್ಲಿ ತರುವುದು, ಮೊಸಳೆಯು ಬಾಲಕ ಶಂಕರನ ಕಾಲನ್ನು ಹಿಡಿದಾಗ ವಿಶಿಷ್ಟಾದೇವಿಯು ಅವನಿಗೆ ಸನ್ಯಾಸವನ್ನು ತೆಗೆದುಕೊಳ್ಳುವ ಅನುಮತಿಯನ್ನು ಕೊಟ್ಟಕೂಡಲೆ ಬಿಟ್ಟುಬಿಡುವುದು, ವಜ್ರೋಲಿ ಮುದ್ರಾ ಧಾರಣ ಮಾಡಿ ಶಂಕರರು ರಾಜಾ ಅಮರುಕನ ಮೃತಶರೀರದಲ್ಲಿ ಪರಕಾಯ ಪ್ರವೇಶವನ್ನು ಮಾಡುವುದು, ಹುಲಿಯು ಶಂಕರನ ದಾರಿಯನ್ನು ಅಡ್ಡಗಟ್ಟುವುದು, ಸತ್ತಂಥ ಶಿಶುವನ್ನು ಅವರು ಜೀವಂತಗೊಳಿಸುವುದು ಈ ಲೋಕವಿಲಕ್ಷಣ ಪ್ರಸಂಗದ ಚಿತ್ರಣವನ್ನು ಲೇಖಿಕೆಯು ಮಾಡಿದ್ದಾರೆ. ವ್ಯಕ್ತಿ ಪೂಜೆಯ ಅಥವಾ ನೀರಸತೆಯ ನೆರಳೂ ಕೂಡ ಈ ಕಾದಂಬರಿಯಲ್ಲಿ ಬಾರದಂತೆ ಚಿತ್ರಿಸಿದ್ದಾರೆ. ಶಂಕರನಿಂದ ಶಂಕರಾಚಾರ್ಯರಾಗುವ ವರೆಗಿನ ಈ ಪ್ರವಾಸದಲ್ಲಿ ಅನೇಕ ಪ್ರಸಿದ್ಧ, ಲೋಕಮಾನ್ಯ ವ್ಯಕ್ತಿಗಳು ಅವರ ಸಂಪರ್ಕದಲ್ಲಿ ಬಂದಿದ್ದರು. ಹಣೆಯ ಮೇಲೆ ಭಸ್ಮ, ಸೊಂಟಕ್ಕೆ ಸುತ್ತಿದ ಶ್ಯಾಟಿ. ಕೈಯಲ್ಲಿ ದಂಡ, ಹೆಗಲ ಮೇಲೊಂದು ಜೋಳಿಗೆ ಹೀಗಿರುವ ಯುವಸನ್ಯಾಸಿಯು ನರ್ಮದೆಯ ದಂಡೆಯ ಮೇಲಿನ ಮಾಂಧಾತ ದ್ವೀಪದ ಗುಹೆಯಲ್ಲಿ ತಪಸ್ಸಿಗೆ ತೊಡಗಿರುವ ಗುರುದೇವ ಗೋವಿಂದಾಚಾರ್ಯರ ವರೆಗೂ ತಲುಪಿದ್ದನು. ರಾಜಾ ರಾಜಶೇಖರ, ಗೌಡಪಾದ ಗುರುಗಳ ಬಗೆಗಿನ ಅದ್ಭುತ ಕತೆಗಳು. ಜೀವಂತವಾಗಿ ಅಗ್ನಿಯಲ್ಲಿ ಪ್ರವೇಶ ಮಾಡುವ ಕುಮಾರಿಲ ಭಟ್ಟರು, ಮಂಡನ ಮಿಶ್ರ, ಪ್ರಭಾಕರಾಧ್ವರಿ. ಸರಸ್ವತಿದೇವಿ ಇವರ ಭೆಟ್ಟಿಯ ಸಂದರ್ಭಗಳು, ಅನೇಕಾನೇಕ ಪ್ರಸಂಗಗಳು ನಮ್ಮೆದುರು ಚಲಚ್ಚಿತ್ರದಂತೆ ಸರಿಯುತ್ತ ಹೋಗುತ್ತವೆ. ಕಾದಂಬರಿಯ ಮಧ್ಯವರ್ತಿ ಪಾತ್ರಗಳಾದ ಕೆಲ ವಿದ್ವಾಂಸರು ವಕ್ತೃತ್ವ ಸಂಪನ್ನರಾಗಿದ್ದು, ಅದರೊಂದಿಗೇ ಅತ್ಯಂತ ಜಾಣ್ಮೆಯಿಂದ ವಾದ-ಪ್ರತಿವಾದಗಳನ್ನು ಮಾಡುವ ಈ ವ್ಯಕ್ತಿಗಳು ಕೊನೆಯಲ್ಲಿ ಸೋತು ಶರಣಾಗತಿ ಹೊಂದುವುದನ್ನು ಹೇಳುವಾಗ ಆ ಚರ್ಚೆಯಲ್ಲಿ ಅನೇಕ ಧರ್ಮಸಂಬಂಧಿತ ಹಾಗೂ ಜ್ಞಾನದಾಯಕ ಬೋಧನೆಗಳು ವ್ಯಕ್ತಹೊಂದುವುದು ಕೂಡ ಲೇಖಕಿಯ ಆಧ್ಯಾತ್ಮಿಕ ಜ್ಞಾನಕ್ಕೆ ಹಿಡಿದ ಕನ್ನಡಿಯಾಗಿದೆ. ಈ ವ್ಯಕ್ತಿಗಳ ಅಭ್ಯಾಸಪೂರ್ಣ ಸಂದರ್ಭಗಳನ್ನು ಕಥೆಯ ಹರಿವಿನಲ್ಲಿ ಸಹಜವಾಗಿಯೇ ಎಂಬಂತೆ ಲೇಖಕಿಯು ಚಿತ್ರಿಸಿದ್ದಾರೆ. ತಾಯಿಯು ಜೀವಂತವಿರುವಾಗ ಶಂಕರನು ಅವಳ ವಿಷಯದಲ್ಲಿ ಕರ್ತವ್ಯವನ್ನು ಮಾಡಲಿಲ್ಲವೆಂದು ಹಾಗೂ ಸನ್ಯಾಸಿಗಳಿಗೆ ಶಾಸ್ತ್ರಾನುಸರವಾಗಿ ತಾಯಿಯ ದಹನಸಂಸ್ಕಾರವನ್ನು ಮಾಡಲು ಅಧಿಕಾರವಿರುವುದಿಲ್ಲವೆಂದೂ ಊರಿನ ಜನರು ಅಭಿಪ್ರಾಯ ಪಟ್ಟರೂ ಶಂಕರರು ಮನೆಯ ಅಂಗಳದಲ್ಲಿಯೇ ದಹನಸಂಸ್ಕಾರವನ್ನು ಮಾಡಿ ಮುಗಿಸುವ ಪ್ರಸಂಗವನ್ನು ಲೇಖಿಕೆಯು ಬಹಳ ಮಾರ್ಮಿಕವಾಗಿ ವಿವರಿಸಿದ್ದಾರೆ. ಕೇವಲ ಶಂಕರನ ಮೇಲೆ ಜೀವನವಿಡೀ ನಿರಪೇಕ್ಷ ಪ್ರೇಮವನ್ನು ಇರಿಸುವ ಸುಮತಿಯ ಕಾಲ್ಪನಿಕ ಪಾತ್ರವು ಕೂಡ ಮನಸ್ಸನ್ನು ಸಹಜವಾಗಿಯೇ ತಟ್ಟುತ್ತದೆ. ಶಂಕರಾಚಾರ್ಯರು ಭಾರತಭ್ರಮಣವನ್ನು ಮಾಡಿದಾಗ ಅವರ ಮಾರ್ಗವು ಲೇಖಕಿಯ ಕಲ್ಪನಾಶಕ್ತಿಯಿಂದ ಸಾಕಾರಗೊಂಡಿದೆ. ಆದರೆ ಈ ಮಹತ್ವದ ಸ್ಥಳದ ಭೌಗೋಲಿಕ, ಸಾಂಸ್ಕೃತಿಕ ಇತಿಹಾಸವನ್ನೂ ಲೇಖಕಿಯು ದೊರಕಿಸಿಕೊಂಡು ಅದರ ಆಧಾರದ ಮೇಲೆ ಪ್ರಾಮಾಣಿಕತೆಯಿಂದ ಹೇಳಿದ್ದಾರೆ. ಆಯಾ ಭೂಮಿಯ ಸಾಕ್ಷಾತ್ ದರ್ಶನವನ್ನು ಲೇಖಕಿಯು ಮಾಡಿಕೊಂಡAತೆಯೇ ಕಾಣುತ್ತದೆ. ನರ್ಮದಾ ತೀರದಲ್ಲಿಯ ಗೋವಿಂದಾಚಾರ್ಯರ ಆಶ್ರಮವಿದ್ದಂಥ ಸ್ಥಳದ ಭಾರತಮಾತೆಯ ಹಸಿರು ತುಂಬಿದ ವನಶ್ರೀಯ ಸೊಬಗು ಲೇಖಕಿಗೆ ಸೊಂಟದ ಪಟ್ಟಿಯಂತೆ ಕಾಣುತ್ತದೆ. ಮಧ್ಯಪ್ರದೇಶ, ಗೋಕರ್ಣ, ಮಹಾಬಳೇಶ್ವರ, ಕನಖಲ, ಅಲಕನಂದಾ, ಹಾಗೂ ಮಂದಾಕಿನಿ ಸಂಗಮ, ಏಲಾಪುರಿ, ವೃಂದಾವನ, ಕಾಶಿ, ದ್ವಾರಕೆ, ಪಶುಪತಿನಾಥ ಹಾಗೂ ಇತರ ಎಷ್ಟೋ ಮಹತ್ವದ ಇಂಥ ಸ್ಥಳಗಳು ಅವುಗಳ ಪೌರಾಣಿಕ ಸಂದರ್ಭಸಹಿತ ಕೊಡುವುದು ಸರಳವಾದ ಕೆಲಸವಲ್ಲ ಎನ್ನುವುದರ ಅರಿವು ಓದುಗರಿಗೆ ಆಗುತ್ತದೆ. ಅದಲ್ಲದೆ ಓದುಗರ ಹಾಗೂ ಅಧ್ಯಯನಕಾರರ ಗಮನವನ್ನು ಸೆಳೆಯುವಂಥ ಪಾಣಿನಿಯ ಅಷ್ಟಾಧ್ಯಾಯಿಯಲ್ಲಿಯ ಪಕವಃ -ಈ ಅಪವಾದಾತ್ಮಕ ಸೂತ್ರಕ್ಕೆ ಕಾಶ್ಮೀರ ನಿವಾಸಿ ಚಂದ್ರಶರ್ಮನು ಮಾಡುವಂಥ ವಿಶ್ಲೇಷಣೆ, ಹಾಗೆಯೇ ತ್ರಿವಿಧಾ ಎಂಬ ಹೆಸರಿನ ವಿಶೇಷ ವಿಶ್ಲೇಷಣೆಯನ್ನು ಆ ಸಂದರ್ಭದಲ್ಲಿ ಮಾಡುವುದು, ಭಾಷೆಯ ಸೂಕ್ಷö್ಮತನಗಳು ಲೇಖಕಿಯ ಭಾಷಾಪಾಂಡಿತ್ಯದಿಂದಲೇ ಬಂದಿವೆ ಎನ್ನವುದು ಅರಿವಾಗುತ್ತದೆ. ಛಾಂದೋಗ್ಯೋಪನಿಷತ್ತು, ಆತ್ಮಕಾವ್ಯ ಇಂಥ ಉಲ್ಲೇಖವು ವೇದದೊಂದಿಗೆ ಋಗ್ವೇದ, ಪತಂಜಲಿ ವಿಷಯಕವಾದ ವಿವರಗಳು, ಪ್ರತ್ಯಕ್ಷ-ಅಪ್ರತ್ಯಕ್ಷ ಜ್ಞಾನದ ವಿಷಯದ ಟಿಪ್ಪಣಿಗಳು, ನಾಲ್ಕು ಮಹಾವಾಕ್ಯಗಳ ಸ್ಪಷ್ಟೀಕರಣ ಹಾಗೂ ಕೃಷ್ಣಾಷ್ಟಕ, ಕಾಶಿಪಂಚಕ ಹೀಗೆ ಅನೇಕ ಸಂದರ್ಭಗಳಲ್ಲಿಯ ಅರ್ಥಲಾವಣ್ಯ, ಶಬ್ದಪ್ರತಿಷ್ಠೆಗಳನ್ನು ಅರಿತಾಗ ಕಥೆಯ ಓಟದಲ್ಲಿ ಸಹಜತೆಯು ಬರುತ್ತದೆ, ಅಥರ್ವವೇದದಲ್ಲಿಯ ಗೃಹಮಹಿಮಾ ಸ್ತೋತ್ರವು ಓದುಗರಿಗೆ ಆಶ್ಚರ್ಯವನ್ನುಂಟುಮಾಡುತ್ತದೆ. ಲೇಖಕಿಯ ಲೇಖನಿಗೆ ಯಾವುದೇ ಸೀಮೆಯೇ ಇರದಿರುವುದನ್ನು ಸೂಚಿಸುತ್ತದೆ. ಶುಭಾಂಗಿ ಭಡಭಡೆಯವರು ಮರಾಠಿಯ ಅತ್ಯಂತ ಜನಪ್ರಿಯ ಕಥೆಗಾರ್ತಿ. ಭೌಮರ್ಷಿ, ನಾನಿಕಾ, ಕೈವಲ್ಯಾಚೆ ಲೇಣೆ ಇಂಥ ಚರಿತ್ರಾತ್ಮಕ ಕಾದಂಬರಿಗಳಷ್ಟೇ ಇದಂ ನ ಮಮ, ಸ್ವಾಮಿ ವಿವೇಕಾನಂದ, ಸಿಯಾವರ ರಾಮಚಂದ್ರ ಕೀ ಜಯ- ಅವರ ಈ ನಾಟಕಗಳು ಇಡಿಯ ಭಾರತದಲ್ಲಷ್ಟೇ ಏಕೆ, ದುಬೈಯಲ್ಲಿಯೂ ಪ್ರಯೋಗ ಹೊಂದಿವೆ. ಅನೇಕ ಪುರಸ್ಕಾರಗಳೂ ದೊರೆತಿವೆ. ತಮ್ಮ ೮೧ ನೆಯ ಜನ್ಮದಿನಕ್ಕೆ ಅವರು ೮೧ ಕಾಧಂಬರಿಗಳನ್ನು ಲೋಕಾರ್ಪಣೆ ಮಾಡಿದಂಥ ಮಹಾಲೇಖಕಿ. ಜನಪ್ರಿಯ ಕಾದಂಬರಿಗಳಲ್ಲಿಯ ವಿಶೇಷತೆ ಎಂದರೇ ಅವುಗಳಲ್ಲಿಯ ಗುಣಾತ್ಮಕತೆ. ವಿಷಯದ ದೊಡ್ಡ ವ್ಯಾಪ್ತಿ, ಸುಂದರವಾದ ವಿಸ್ತಾರ, ಪ್ರಸಂಗಗಳ ಸುಂದರವಾದ ಹಾಗೂ ಅರ್ಥವತ್ತಾದ ವಿವರಣೆ. ಸುಂದರವಾದ ವ್ಯಕ್ತಿಚಿತ್ರಣ, ನಿಸರ್ಗದ, ಪರಿಸರದ, ಸಮೃದ್ಧತೆಯ ಚಿತ್ರಣ ಇವು ವಿಶೇಷವಾಗಿ ಈ ಕಾದಂಬರಿಯಲ್ಲಿ ಓದುಗರ ಮನಸೆಳೆಯುವಂತಿವೆ. ಅತ್ಯಂತ ಕೂಲಂಕಷವಾದ ವಿವರಣೆ ಹಾಗೂ ಕಲಾತ್ಮಕತೆ ಎರಡೂ ದೃಷ್ಟಿಯಿಂದ ನೋಡಿದರೂ ಈ ಕಾದಂಬರಿಯು ಇಂದಿನ ಮಹತ್ವದ ಸಾಹಿತ್ಯಕೃತಿಯಾಗಿದೆ ಎಂದು ಧ್ಯಯನಕಾರರಿಗೆ ಎನ್ನಿಸುತ್ತದೆ. ಕಾದಂಬರಿಯ ಮಾಧ್ಯಮದಿಂದ ಮಹಾ ವ್ಯಕ್ತಿಗಳ ಕೀರ್ತಿಯು ಸಮಾಜದಲ್ಲಿ ಹರಡುವ ಪ್ರಯತ್ನವು ಈ ಲೇಖಕಿಯದು. ಶುಭಾಂಗಿ ಅಕ್ಕ ಅಪೂರ್ವವಾದ ಕಾರ್ಯಕ್ಷಮತೆಯನ್ನು ಹೊಂದಿರುವ, ದೃಢ ನಿರ್ಧಾರವನ್ನು ಹೊಂದಿದ ವ್ಯಕ್ತಿತ್ವದ ಹಿರಿಯರು. ಅವರು ಕಳೆದ ಮೂರು ದಶಕಗಳಿಂದ ಪದ್ಮಗಂಧಾ ಎಂಬ ಹೆಸರಿನ ಮಹಿಳಾ ಲೇಖಕಿಯರ ಸಂಘಟನೆಯನ್ನು ನಿರ್ಮಿಸಿದ್ದಾರೆ. ಹೊಸ ಹೊಸ ಲೇಖಕಿಯರಿಗೆ ಪ್ರೇರಣೆಯಾಗಿದ್ದಾರೆ. ಸುಂದರ ಹಾಗೂ ಸರಳವಾದ ಭಾಷೆಯನ್ನು ಭಗವಂತನ ಸುಂದರವಾದ ಸಾಂಸ್ಕೃತಿಕ ದೇಣಿಗೆ ಎಂದೇ ಹೇಳಬಹುದು. ಸಾತ್ವಿಕ ಪ್ರತಿಭೆಯ ಹಾಗೂ ನಿರ್ದೋಷ ರಚನಾಶೈಲಿಗೆ ಇದೊಂದು ನಿದರ್ಶನ. ಶಂಕರಾಚಾರ್ಯರ ಜೀವನದಲ್ಲಿಯ ಅನೇಕ ಉಲ್ಲೇಖನೀಯ ಪ್ರಸಂಗಗಳನ್ನು ಕೆಲವೊಮ್ಮೆ ಕಲ್ಪನೆಯಲ್ಲಿ ಸಾಕಾರಗೊಳಿಸಿ, ಕೆಲವೊಮ್ಮೆ ಇತಿಹಾಸದಲ್ಲಿ ಇರುವಂತೆಯೇ ಚಿತ್ರಿಸಿ ಓದುಗರನ್ನು ಸತತವಾಗಿ ಓದಿನಲ್ಲಿ ಹಿಡಿದಿರಿಸುವಂಥ ಶೈಲಿ. ವಾಸ್ತವವಾಗಿ ಇದೊಂದು ಸನ್ಯಾಸಿಯ ಜೀವನದ ಕತೆ. ಅದರಲ್ಲಿಯೂ ತಪಶ್ಚರ್ಯ ಹಾಗೂ ತತ್ವಜ್ಞಾನದ ಜಟಿಲ ವಿಷಯ. ಸಾಮಾನ್ಯರ ದೈನಂದಿನ ಜೀವನಪದ್ಧತಿಯೊಂದಿಗೆ ಸಂಬಂಧಿತವಾಗಿರದಂಥದು. ಆದರೂ ಲೇಖಕಿ ತಮ್ಮ ಸುಂದರ ಶೈಲಿಯಿಂದಾಗಿ ಕೇವಲ ಕಥನವನ್ನು ಹೊಂದಿರುವ ಕಾಧಂಬರಿಯಾಗಿರದೆ ಮಾಹಿತಿಪೂರ್ಣವೂ ಆಗುವಂತೆ ಬರೆದಿದ್ದಾರೆ. ಇಲ್ಲಿ ಸಂಸ್ಕೃತ ಶ್ಲೋಕಗಳೂ ಇವೆ. ಉದಾಹರಣೆಗಳೂ ಇವೆ. ಗೀತೆಯ, ಉಪನಿಷತ್ತಿನ, ವೇದಗಳ ಹಾಗೂ ಅಚಾರ್ಯರ ಸ್ವರಚಿತ ಸ್ತೋತ್ರಗಳು ಇಲ್ಲಿವೆ. ಅದ್ವೈತದಂಥ ತತ್ವಜ್ಞಾನವೆಂದರೆ ಈಶ್ವರನ ಗುಣಧರ್ಮದ ಚಿಂತನೆ. ದೇವಭಕ್ತನ ಐಕ್ಯ. ಇವೆಲ್ಲವೂ ಓದುಗರ ಗಂಟಲಲ್ಲಿ ಸಹಜ ರೀತಿಯಿಂದ ಇಳಿಯುವಂತೆ ಬರೆದಿದ್ದಾರೆ. ಶಂಕರಾಚಾರ್ಯರು ರಚಿಸಿದಂಥ ವಿವಿಧ ದೇವತೆಗಳ ಸ್ತುತಿಗಳನ್ನು ಪ್ರಾತಿನಿಧಿಕ ಸ್ವರೂಪದಲ್ಲಿ ಹೇಳಿ ಅವುಗಳಲ್ಲಿಯ ಜಟಿಲವಾದಂಥ ತತ್ವಜ್ಞಾನವನ್ನು ಸುಬೋಧ ಪದ್ಧತಿಯಿಂದ ಪ್ರಸ್ತುತಗೊಳಿಸಿ ಲೇಖಕಿ ಒಬ್ಬ ಯಶಸ್ವಿ ಲೇಖಕಿಯಾಗಿರುವುದನ್ನು ಸಾಬೀತುಗೊಳಿಸಿದ್ದಾರೆ. ಈ ಕಾದಂಬರಿಗಾಗಿ ಲೇಖಕಿಗೆ ಪ್ರದಾನಮಂತ್ರಿಗಳಾದ ನರೇಂದ್ರ ಮೋದಿಯವರು ಅಭಿನಂದಿಸಿ ಪತ್ರವನ್ನೂ ಕಳಿಸಿದ್ದಾರೆ. ಅದನ್ನು ಈ ಪುಸ್ತಕದಲ್ಲಿಯೇ ಹಾಕಿರುವೆನು. ಇದು ಕಾದಂಬರಿಯಾಗಿರುವುದರಿಂದ ಇದರ ಸ್ವರೂಪವು ಶಾಸ್ತ್ರಗ್ರಂಥಕ್ಕಿಂತಲೂ ಹಾಗೂ ಸಂಶೋಧನಾ ಗ್ರಂಥಕ್ಕಿಂತಲೂ ಖಂಡಿತವಾಗಿಯೂ ವಿಭಿನ್ನವಾಗಿ ಇರಬೇಕೆನ್ನುವುದರ ಬಗ್ಗೆ ಅರಿವನ್ನು ಮನದಲ್ಲಿರಿಸಿಕೊಂಡೇ ಅವರು ಈ ಕಾದಂಬರಿಯನ್ನು ಬರೆದಿದ್ದಾರೆ. ಅಲ್ಲದೆ ಕಾದಂಬರಿಯ ಹಾಗೂ ಐತಿಹಾಸಿಕ ವಸ್ತುವಿಷಯದಲ್ಲಿ ಪ್ರತ್ಯೇಕತೆಯನ್ನು ತೋರದೆ ನಾಯಕನಿಗೆ ಪೂರ್ಣಪ್ರಮಾಣದ ನ್ಯಾಯವನ್ನು ಕೊಡುವ ಅಮೂಲ್ಯವಾದ ಕಾರ್ಯವನ್ನು ಕೂಡ ಅವರು ಮಾಡಿದ್ದಾರೆ. ಈ ರೀತಿಯಲ್ಲಿ ಅವರು ಸಾಮಾನ್ಯ ಓದುಗನನ್ನು ತಲುಪುವ ಈ ಮಹತ್ಕಾರ್ಯವನ್ನು ಸಹಜವೆಂಬಂತೆ ಮಾಡಿದ್ದರೆ ನಾನು ಕೂಡ ನಮ್ಮ ಕನ್ನಡದ ಓದುಗರಿಗೆ ಇದನ್ನು ತಲುಪಿಸುವ ಕಾರ್ಯವನ್ನು ಮಾಡಿದ್ದೇನೆ ಎಂಬ ಹೆಮ್ಮೆ ನನಗಿದೆ. ****
10 thoughts on “ಆದ್ಯ ಶ್ರೀ ಶಂಕರಾಚಾರ್ಯರು”
ನಿಮ್ಮ ಇ ಪತ್ರಿಕೆಯಾದ ವಿಶ್ವಧ್ವನಿಯಲ್ಲಿ ನನ್ನ ಈ ಮಾತುಗಳನ್ನು ಪ್ರಕಟಿಸಿದುದಕ್ಕಾಗಿ ಸಂಪಾದಕರಿಗೆ ಧನ್ಯವಾದಗಳು. 🙏
ಓ. ಇಂತಹ ಒಂದು ಕೃತಿ ಕನ್ನಡ ಕ್ಕೆ ಅನುವಾದ ಗೊಂಡಿರುವುದು ತುಂಬ ಸಂತೋಷ ಮತ್ತುಸ್ವಾಗತಾಹ೯.
ಧನ್ಯವಾದಗಳು ಮಹೇಶ್ವರಿಯವರೆ 🙏🙏
ಕಾದಂಬರಿಯ ಪೂರ್ವಾಂಕಣವನ್ನು ಓದಿದರೇ ಆ ಕಾದಂಬರಿಯನ್ನು ಒದಲೇಬೇಕೆನ್ನಿಸುತ್ತದೆ. ಶ್ರೀ ಆದಿ ಶಂಕರರ ಐತಿಹಾಸಿಕ ಚರಿತೆಯನ್ನು ಮತ್ತೊಮ್ಮೆ ಕನ್ನಡಿಗರಿಗೆ ನೀಡಿದ ಕವಯಿತ್ರಿ ಶ್ರೀಮತಿ ಮಾಲತಿ ಮುದಕವಿ ಅವರಿಗೆ ಅಭಿನಂದನಪೂರ್ವಕ ನಮನಗಳು. ಕಾದಂಬರಿಯು ಕೊಡಲೇ ಜನಮಾನಸವನ್ನು ಸೇರಲಿ.
Mandumbida dhanyavadagalu savisthaaravaada maahithi, thumba chennagide
ಧನ್ಯವಾದಗಳು ಮಹೇಶ್ವರಿಯವರೆ 🙏🙏
ಒಂದು ಮಹತ್ತರ ಕೃತಿಯನ್ನು ಕನ್ನಡಕ್ಕೆ ತಂದು ಓದುಗರ ಕಣ್ಣ ಮುಂದೆ ಇಟ್ಟದ್ದು ಸಣ್ಣ ವಿಷಯವಿಲ್ಲ. ಶ್ರೀ ಆದಿ ಶಂಕರನ ಅನುಗ್ರಹ ನಿಮ್ಮ ಮತ್ತು ನಮ್ಮೆಲ್ಲರ ಮೇಲೆ ಇರಲಿ.
ಧನ್ಯವಾದಗಳು ಸರ್.
ನಮ್ಮ ದೇಶದ ನೆಚ್ಚಿನ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಪ್ರತಿಮ ಹಾಗೂ ಸುಭದ್ರ ನೇತೃತ್ವದಲ್ಲಿ, ಸನಾತನ ಧರ್ಮದ ಪುನರುತ್ಥಾನದ ಸದೈವಿಕ, ಸಕಾಲದಲ್ಲಿ, ಅವರಿಂದಲೇ ಪ್ರಶಂಸಿಸಲ್ಪಟ್ಟ, ಸುಪ್ರಸಿದ್ಧ ಮರಾಠಿ ಕಾದಂಬರಿಕಾರ್ತಿ ಶುಭಾಂಗಿ ಭಡಭಡೆಯವರ ೭೫ನೇ ವರ್ಷದ ೭೫ನೇ ಕಾದಂಬರಿ, ‘ಆದ್ಯ ಶಂಕರಾಚಾರ್ಯ’ರ ಜೀವನಾಧಾರಿತ ‘ಅದ್ವೈತಾಚಾ ಉಪನಿಷದ್’ನ ಕನ್ನಡ ಅನುವಾದ, ಧಾರವಾಡದ ಅದೇರೀತಿಯ ಸದಭಿರುಚಿಯುಳ್ಳ ಸಮರ್ಥ ಕಾದಂಬರಿಗಾರ್ತಿ ಹಾಗೂ ಈಗಾಗಲೇ ಸಾಕಷ್ಟು ಹೆಸರುವಾಸಿಯಾಗಿರುವ ಮರಾಠಿಯ ನುರಿತ ಅನುವಾದಕಿ ಮಾಲತಿ ಮುದಕವಿಯವರಿಂದ, ಭಾಷಾಂತರವಾಗಿ ಹೊರಬರುತ್ತಿರುವದು, ಬಹಳೇ ಸಂತೋಷದ ಸಂಗತಿಯಾಗಿದೆ. ಭಾರತದ ಸಂಸ್ಕೃತಿಯನ್ನು ಅರ್ವಾಚೀನ ಜಗತ್ತಿಗೆ ಬೇರೂರುವಂತೆ ಸಾರಿದ ಪ್ರಥಮ ಆಚಾರ್ಯ ಆದಿ ಶಂಕರಾಚಾರ್ಯರ ಶೋಧಕ, ಬೋಧಕ, ಜಾಗೃತ, ಚಿಕಿತ್ಸಕ ಬುದ್ಧಿಮತ್ತೆಯ, ಜೀವನ ಮಾರ್ಗದರ್ಶಿತ್ವವನ್ನೊಳಗೊಂಡ, ಈ ಪುಸ್ತಕ, ಕನ್ನಡ ಜನತೆಗೆ ಹೆಚ್ಚು ಹೆಚ್ಚು ಪ್ರಕಾಶನವಾಗಲಿದೆ. ಆ ಪುಸ್ತಕದ ವಸ್ತು-ವಿಷಯದ ಸೂಕ್ಷ್ಮ ಹಿನ್ನೆಲೆಯನ್ನು ಬರೆದಿದ್ದಕ್ಕೆ ಲೇಖಕಿಗೆ ಅಭಿನಂದನೆಗಳು!
Thank you for your comments. Shri C V Aabhahit, Shri RAghavendra Mangalore, Mangala Prakash Shetty, M m Rao.