‘ಕಥಾನವಮಿ’ -ಪುಸ್ತಕ ಪರಿಚಯ


ಕಥಾನವಮಿ
(ಹಿಂದಿಯಿಂದ ಕನ್ನಡಕ್ಕೆ ಭಾಷಾಂತರ)
ಅನುವಾದಕರು: ಡಾ. ಸುಮಂಗಲಾ ಮುಮ್ಮಿಗಟ್ಟಿ
ರೇಖಾ ಪ್ರಕಾಶನ
# ೧೫ ಬಿ, ಹುಲಿಕೆರೆ ವಿಲೇಜ್‌,
ಮಂಡ್ಯ, ಶ್ರೀರಂಗ ಪಟ್ಟಣ-೫೭೧೪೩೮
ಮೊದಲ ಮುದ್ರಣ-೨೦೨೨.
ಬೆಲೆ-೨೦೫.

***
ʼಕಥಾನವಮಿʼ ಡಾ. ಸುಮಂಗಲಾ ಮುಮ್ಮಿಗಟ್ಟಿಯವರು ಹಿಂದಿಯಿಂದ ಕನ್ನಡಕ್ಕೆ ಭಾಷಾಂತರಿಸಿದ ಒಂಬತ್ತು ಕಥೆಗಳ ಸಂಕಲನ.
ಡಾ. ಮುಮ್ಮಿಗಟ್ಟಿಯವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಹಿಂದಿ ವಿಭಾಗ ಮುಖ್ಯಸ್ಥರಾಗಿ ನಿವೃತ್ತಿ ಹೊಂದಿದವರು. ಭಾಷಾಂತರಗಳ ಮೂಲಕ ಹಿಂದಿ ಮತ್ತು ಕನ್ನಡ ಭಾಷೆಯ ನಡುವೆ ಸೇತುವೆ ನಿರ್ಮಿಸಿದವರು. ಕೇಂದ್ರೀಯ ಹಿಂದಿ ನಿರ್ದೇಶನಾಲಯ ಹಿಂದಿಯಲ್ಲಿ ಬರೆಯುವ ಹಿಂದಿಯೇತರ ಭಾಷಾ ಲೇಖಕರಿಗೆ ಕೊಡಮಾಡುವ ಪುರಸ್ಕಾರ ಹಾಗೂ ಉತ್ತರ ಪ್ರದೇಶ ಹಿಂದಿ ಸಂಸ್ಥಾನ, ಲಖ್ನೌನಿಂದ ಸೌಹಾರ್ದ್‌ ಸಮ್ಮಾನವನ್ನು ಮುಡಿಗೇರಿಸಿಕೊಂಡವರು.

ಇಲ್ಲಿರುವ ಒಂಬತ್ತು ಕಥೆಗಳಲ್ಲಿ ಹಿಂದಿಯ ಪ್ರಸಿದ್ಧ ಕಥೆಗಾರರ ಬಹುಚರ್ಚಿತ ಕಥೆಗಳನ್ನು ಅನುವಾದಕ್ಕಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಕಾದಂಬರಿ ಸಮ್ರಾಟ್‌ ಪ್ರೇಮಚಂದರಿಂದ ಇತ್ತೀಚಿನ ಕಥೆಗಾರರಾದ ಅರ್ಚನಾ ವರ್ಮಾರ ವರೆಗಿನವರ ಆಯ್ದ ಕಥೆಗಳನ್ನು ಓದುಗರ ಮುಂದಿಟ್ಟಿದ್ದಾರೆ. ಜೊತೆಗೆ ಹಿಂದಿ ಕಥಾ ಸಾಹಿತ್ಯ ಬೆಳೆದುಬಂದ ದಾರಿಯನ್ನು ಆರಂಭದಲ್ಲಿ ಸವಿಸ್ತಾರವಾಗಿ ತಿಳಿಸಿದ್ದಾರೆ. ಕೊನೆಯಲ್ಲಿ ಕಥೆಗಾರರ ಕಿರುಪರಿಚಯವನ್ನೂ ಮಾಡಿಕೊಡುವುದರ ಮೂಲಕ ಹಿಂದಿ-ಕನ್ನಡ ಕಥಾ ಸಾಹಿತ್ಯದ ತೌಲನಿಕ ಅಧ್ಯಯನಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಇಲ್ಲಿಯ ಮೊದಲ ಕಥೆ ಪ್ರೇಮಚಂದರ ʼಶತರಂಜ ಕೇ ಖಿಲಾಡಿʼ ಯ ಅನುವಾದ ʼಚದುರಂಗದಾಟಗಾರರುʼ. ಕೆಲವು ವರ್ಷಗಳ ಹಿಂದೆ ನೀನಾಸಂ ತಂಡದವರು ʼದಂಗೆಯ ಮುಂಚಿನ ದಿನಗಳುʼ (ಅನುವಾದ: ಪ್ರಸನ್ನ) ಎಂಬ ಹೆಸರಿನಲ್ಲಿ ಯಶಸ್ವಿ ಪ್ರಯೋಗ ಮಾಡಿದ್ದರು. ವಾಜಿ಼ದ್‌ಅಲಿ ಶಾಹ (೧೮೪೭-೧೮೫೬) ನ ಕಾಲದ ಲಖ್ನೌನ ವೈಭೋಗದ ಜೀವನ ಶೈಲಿಯನ್ನು ಬಿತ್ತರಿಸುವ ಈ ಕಥೆಯಲ್ಲಿ ಈಸ್ಟ್‌ ಇಂಡಿಯಾ ಕಂಪನಿ ಸರಕಾರದ ಸಾಲದಲ್ಲಿ ಇಡೀ ರಾಜ್ಯ ಒದ್ದೆ ಕಂಬಳಿಯಂತೆ ಭಾರವಾಗಿದ್ದರೂ ಜಾಗೀರುದಾರರ ವಿಲಾಸಮಯ ಜೀವನ ನಿರ್ವಹಣೆಯಲ್ಲೇನೂ ಕೊರತೆಯಿರಲಿಲ್ಲ. ಮಿರ್ಜಾ ಸಜ್ಜಾದ ಅಲಿ ಮತ್ತು ಮೀರ್‌ರೋಶನ್‌ಅಲಿ ಹಗಲಿರುಳೆನ್ನದೆ ಚದುರಂಗದಾಟದಲ್ಲಿ ಮುಳುಗಿರುತ್ತಿದ್ದರು.

ಕಂಪನಿ ಸರಕಾರ ವಾಜಿ಼ದ್‌ಅಲಿ ಶಾಹನನ್ನು ಬಂಧಿಸಿ ಅಜ್ಞಾತ ಸ್ಥಳದೆಡೆಗೆ ಒಯ್ಯುತ್ತಿರುವುದನ್ನು ನೋಡಿಯೂ ಈ ಇಬ್ಬರು ಜಾಗೀರುದಾರರಿಗೆ ದೇಶಾಭಿಮಾನ ಉಕ್ಕಿ ಬರುವುದಿಲ್ಲ. ಅವನನ್ನು ಕೊಂದ ಸುದ್ದಿ ಕೇಳಿ ಕಣ್ಣಂಚು ಜಿನುಗುವುದಿಲ್ಲ. ಹಾಗಂತ ಇವರ ಸೊಂಟದಲ್ಲಿ ಯಾವತ್ತೂ ಖಡ್ಗ ಇದ್ದೇ ಇರುತ್ತಿತ್ತು. ಶೌರ್ಯ ಮತ್ತು ಪರಾಕ್ರಮಕ್ಕೇನೂ ಕೊರತೆಯಿರಲಿಲ್ಲ. ತಮ್ಮ ರಾಜನನ್ನು ರಕ್ಷಿಸಲಾಗದ ಈ ಇಬ್ಬರು ತಮ್ಮ ಚದುರಂಗದ ರಾಜನನ್ನು ರಕ್ಷಿಸುವುದಕ್ಕಾಗಿ ವೈಯಕ್ತಿಕ ಪ್ರತಿಷ್ಠೆಯನ್ನು ಪಣಕ್ಕಿಟ್ಟು ಒಬ್ಬರನ್ನೊಬ್ಬರು ಇರಿದುಕೊಂಡು ಕೊನೆಯುಸಿರೆಳೆಯುತ್ತಾರೆ. ರಾಜಕೀಯ ಅಧಃಪತನಕ್ಕೆ ಬೇರೆ ಉದಾಹರಣೆ ಬೇಕೇ?

ʼಗೆಜ್ಜೆʼ ಜೈನೇಂದ್ರ ಕುಮಾರರು ಬರೆದ ಬಾಲಮನೋವೈಜ್ಞಾನಿಕ ಕಥೆಯಾಗಿದ್ದು, ನಾಲ್ಕು ವರ್ಷದ ಪುಟ್ಟಿಗೆ ಅವಳತ್ತೆ ಕೊಡಿಸಿದ ಗೆಜ್ಜೆ ಕಳೆದುಹೋಗುತ್ತದೆ. ಮನೆಕೆಲಸದವಳ ಮಗ ಎಗರಿಸಿರಬಹುದೆ… ಪುಟ್ಟಿಯ ಒಂಬತ್ತು ವರ್ಷದ ಅಣ್ಣ ಆಶುತೋಷ ತೆಗೆದಿರಬಹುದೆ, ಎಂಬೆಲ್ಲ ಸಂಶಯದ ಸುತ್ತ ತಿರುಗುವ ಈ ಕಥೆಯಲ್ಲಿ ಮಕ್ಕಳಿಗೆ ಹೊಡೆಯಬಾರದು, ಗದರಿಸಬಾರದು, ಹಾಗೆ ಮಾಡಿದರೆ ಅವರು ದಾರ್ಷ್ಟ್ಯಕ್ಕೆ ತುತ್ತಾಗುತ್ತಾರೆ, ಅಪರಾಧಿಗಳ ಬಗ್ಗೆ ಸಹಾನುಭೂತಿಯಿರಬೇಕು, ಕೋಪದಿಂದ ಅಧಿಕಾರ ಚಲಾಯಿಸಬಾರದು, ಪ್ರೀತಿಯಿಂದಲೇ ಗೆಲ್ಲಬೇಕು ಹಾಗೂ ಅದನ್ನು ಕೊನೆಗೊಳಿಸಬೇಕು, ಕ್ರೌರ್ಯದಿಂದ ದಮನಮಾಡಲು ಹೋಗಬಾರದು ಎಂದು ಗೊತ್ತಿರುವ ತಂದೆಯೇ ಮಗನ ಬಾಯಿ ಬಿಡಿಸುವುದಕ್ಕಾಗಿ ಹಿಂಸೆ ಕೊಡುತ್ತ ವಿಚಾರಣೆಯ ದಾರಿ ತಪ್ಪಿಸುತ್ತಾರೆ. ಕೊನೆಗೂ ಅಚಾತುರ್ಯದಿಂದಾಗಿ ಆ ಗೆಜ್ಜೆ ಅತ್ತೆಯ ಬ್ಯಾಗ್‌ನಲ್ಲಿ ಹೋಗಿಬಿಟ್ಟಿತ್ತು, ಎಂಬುದು ಒಂದು ವಾರದ ನಂತರ ತಿಳಿಯುತ್ತದೆ. ಕಥೆ ಸುಖಾಂತವಾದರೂ ಕುತೂಹಲವನ್ನು ಕೊನೆಯವರೆಗೂ ತನ್ನೊಳಗೆ ಇಟ್ಟುಕೊಂಡಿದ್ದು ಇದರ ಧನಾತ್ಮಕ ಅಂಶ.

ಮೂರನೆಯ ಕಥೆ ರಾಜೇಂದ್ರ ಯಾದವರ ʼಬಹಿಷ್ಕೃತʼ. ಇಲ್ಲಿ ಎರಡು ಪೀಳಿಗೆಯ ನಡುವಿನ ಅಂತರದಲ್ಲಿ ನಿಜವಾದ ಬಹಿಷ್ಕೃತರು ಯಾರು ಎಂಬುದನ್ನು ಈ ಕಥೆ ಓದುಗರ ಮುಂದಿಡುತ್ತದೆ. ಪಾರಸಬಾಬುರವರ ಮಗಳು ಮಾಲತಿ, ತನ್ನ ಅಣ್ಣನ ಮನೆಗೆ ಹೋದವಳು ಅಣ್ಣನ ಗೆಳೆಯನನ್ನು ಪ್ರೀತಿಸುತ್ತಾಳೆ. ಪಾರಸಬಾಬುರವರಿಗೆ ಹುಡುಗನ ಜಾತಿಯ ಬಗ್ಗೆ ಆಕ್ಷೇಪವಿದೆ. ಉಳಿದ ಯಾರಿಗೂ ಯಾವ ತೊಂದರೆಯೂ ಇರಲಿಲ್ಲ. ಹಾಗಾಗಿ ಪಾರಸಬಾಬು ಅವಳ ಮದುವೆಗೆ ಹೋಗಲಿಲ್ಲ. ತಮ್ಮ ಹೆಂಡತಿಗೂ ಹೋಗಗೊಡಲಿಲ್ಲ. ಆದರೀಗ ಮಗಳು ಮನೆಗೆ ಬಾರದೇ ಇದ್ದರೆ ತನ್ನ ಕಣ್ಣುಗಳ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವುದಿಲ್ಲ ಎಂದು ಹೇಳಿದ ಹೆಂಡತಿಗಾಗಿ ಮಗಳು-ಅಳಿಯ ಮನೆಗೆ ಬರಬಹುದೆಂದು ಹೇಳಿದರೂ, ಅಂದು ದಿನವಿಡೀ ಅವರು ಹೊರಗಡೆ ತಿರುಗಾಡಿ ಕಾಲ ಕಳೆದು ರಾತ್ರಿ ಊಟದ ಹೊತ್ತಿಗೆ ಮನೆಗೆ ಬರುತ್ತಾರೆ. ಕುಟುಂಬದವರೊಂದಿಗೆ ಬೆರೆಯದೆ, ಅವರೆಲ್ಲ ಅಳಿಯನೊಂದಿಗೆ ಮಾಳಿಗೆಯಲ್ಲಿ ಸಂತೋಷದಲ್ಲಿರುವಾಗ ತಾವು ಮಾತ್ರ ಕೆಳಗಡೆ ಊಟ ತರಿಸಿಕೊಳ್ಳುತ್ತಾರೆ. ಚಂಚಲ ಸ್ವಭಾವದ ಚಿಕ್ಕ ಮಗಳು ಒಂದು ಬಡಿಸಿದರೆ ಮತ್ತೊಂದು ತರಲು ಮಾಳಿಗೆ ಏರಿದವಳು ಬರುವುದೇ ಇಲ್ಲ. ಒಟ್ಟಿನಲ್ಲಿ ಇಲ್ಲಿ ಬಹಿಷ್ಕೃತರು ಯಾರು ಎಂಬುದು ಖುಲಾಸೆಯಾಗುತ್ತದೆ.

ʼಮರಳಿʼ ಎಂಬ ಕಥೆ ಉಷಾ ಪ್ರಿಯಂವದಾರ ʼವಾಪಸಿʼ ಕಥೆಯ ಅನುವಾದ. ಮೂವತ್ತೈದು ವರ್ಷಗಳ ಕಾಲ ರೇಲ್ವೆ ವಿಭಾಗದಲ್ಲಿ ಕೆಲಸ ಮಾಡಿ ನಿವೃತ್ತರಾದ ಗಜಾಧರಬಾಬು ತಮ್ಮ ಕುಟುಂಬದವರೊಂದಿಗೆ ಕಾಲಕಳೆಯಬೇಕೆಂಬ ಸಂತಸದಲ್ಲಿ ಮನೆಗೆ ಮರಳಿದ್ದಾರೆ. ಚಿಕ್ಕ-ಚಿಕ್ಕ ಸ್ಟೇಷನ್‌ನಲ್ಲಿ ಕೆಲಸ ಮಾಡುವ, ಆಗಾಗ ವರ್ಗಾವಣೆಯಾಗುವ ಪರಿಸ್ಥಿತಿ ಇದ್ದುದರಿಂದ ಮಕ್ಕಳ ಶಿಕ್ಷಣಕ್ಕೆ ತೊಂದರೆ ಆಗಬಾರದೆಂದು ಪಟ್ಟಣದಲ್ಲಿಯೇ ಒಂದು ಮನೆ ಮಾಡಿ ತಮ್ಮವರನ್ನೆಲ್ಲ ಅಲ್ಲಿಟ್ಟು, ಖರ್ಚಿಗೆ ಹಣ ಕಳಿಸುತ್ತಿದ್ದರು. ಈಗ ಕುಟುಂಬದವರೊಂದಿಗೆ ಬೆರೆತು ಬದುಕುವ ಕನಸು ಹೊತ್ತು ಮನೆಗೆ ಬಂದರೆ ಅಲ್ಲಿ ನಡೆಯುವುದೇ ಬೇರೆ. ಅಲ್ಲಿಯ ಕೋಣೆಗಳೆಲ್ಲ ಮಕ್ಕಳಿಗೆ ಹಂಚಿಹೋಗಿತ್ತು. ಹಾಗಾಗಿ ಗಜಾಧರಬಾಬುರವರಿಗೆ ಡ್ರಾಯಿಂಗ್‌ರೂಮ್‌ನಲ್ಲಿಯೇ ಒಂದು ಕತ್ತದ ಮಂಚ (ಹೊರಸು) ಹಾಕಿಕೊಡುತ್ತಾರೆ. ಲೇಖಕಿಯ ಮಾತುಗಳಲ್ಲಿ ಹೇಳುವುದಾದರೆ, “ಗಜಾಧರಬಾಬುರ ಸ್ಥಿತಿ ಅಚ್ಚುಕಟ್ಟಾದ ಡ್ರಾಯಿಂಗ್‌ರೂಮ್‌ನಲ್ಲಿ ಹೊರಸು ಇದ್ದಂತೆ!” ಆ ಮನೆಯಲ್ಲಿ ಹಿರಿಯ ಮಗ ಆಗಲೇ ಯಜಮಾನನಾಗಿದ್ದು, ತಂದೆಯ ಯಜಮಾನಿಕೆ ಅಲ್ಲಿ ಬೇಡವಾಗಿತ್ತು. ಮನೆಯವರ ದೃಷ್ಟಿಯಲ್ಲಿ ಅವರು ಮನೆಯ ವಿಷಯದಲ್ಲಿ ಅನಾವಶ್ಯಕ ಮೂಗು ತೂರಿಸುವ ಮುದುಕ! ಹೆಂಡತಿಯೂ ಹಾಗೆಯೇ ಭಾವಿಸುತ್ತಾಳೆ. ಇದರಿಂದ ಅವರ ಮನಸ್ಸಿಗೆ ತುಂಬಾ ನೋವಾಗುತ್ತದೆ. ಹಾಗಾಗಿ ಈ ಹಿರಿಯ ಜೀವ ಮರಳಿ ಕೆಲಸಕ್ಕೆ ಸೇರುವುದಕ್ಕಾಗಿ ಮನೆಬಿಟ್ಟು ಹೋಗುತ್ತಾರೆ. ಅವರನ್ನು ಬೀಳ್ಕೊಡಲು ಮನೆಯಲ್ಲಿ ಎಲ್ಲಿಲ್ಲದ ತಯಾರಿ ನಡೆಯುತ್ತದೆ.

ʼಅದೇ ಅದೇ ಮಾತುʼ ಇದು ರಮೇಶ ಬಕ್ಷಿಯವರ ಕಥೆ. ಮಾನವ ಜೀವನದ ಶುಷ್ಕ ವ್ಯಾವಹಾರಿಕತೆ ಮತ್ತು ಸ್ವಾರ್ಥಪರತೆಯನ್ನು ತಳಹದಿಯನ್ನಾಗಿಟ್ಟುಕೊಂಡು ಬರೆದ ಕಥೆಯಿದು. ಒಂದು ಚಿಕ್ಕ ಪಟ್ಟಣದಲ್ಲಿ ನಡೆಯು ಜಾತ್ರೆಯಲ್ಲಿ ಎರಡು ನಾಟಕ ಕಂಪನಿಗಳು ಟೆಂಟ್‌ ಹಾಕುತ್ತವೆ. ಎರಡರ ಮಧ್ಯೆ ಪೈಪೋಟಿ. ಒಂದರಲ್ಲಿ ʼಶಾಕುಂತಲಾʼ ನಾಟಕ. ಇನ್ನೊಂದರಲ್ಲಿ ನೌಟಂಕಿಯಂಥದ್ದು ನಡೆಯುತ್ತಿದೆ. ʼಶಾಕುಂತಲಾʼ ನಾಟಕ ನೋಡಲು ಜನರು ಜಮಾಯಿಸಿದ್ದಾರೆ. ನಾಟಕದಲ್ಲಿ “ಕಪಟಿಯಾದ ಶಕುಂತಲೆಯನ್ನು ನಾನು ಇಟ್ಟುಕೊಳ್ಳಲಾರೆ” ಎಂದು ದುಶ್ಯಂತ ಹೇಳುವಾಗ ಪ್ರೇಕ್ಷಕರ ಕಡೆಯಿಂದ ಪಟ್ಟೆ-ಪಟ್ಟೆ ಲುಂಗಿಯವನೊಬ್ಬ ಎದ್ದುನಿಂತು, “ನೀನವಳನ್ನು ಇಟ್ಟುಕೊಳ್ಳಲೇಬೇಕು” ಎಂದು ಒತ್ತಾಯಪೂರ್ವಕವಾಗಿ ಹೇಳುತ್ತಾನೆ. ಅಲ್ಲಿ ವೇದಿಕೆಯಲ್ಲಿ “ಇಲ್ಲ…ಇಲ್ಲ…” ಎಂದು ದುಶ್ಯಂತ ಹೇಳುತ್ತಾನೆ. ಕಥಾನಾಯಕ ಈ ಹಿಂದೆಯೂ ಇದೇ ನಾಟಕಕ್ಕೆ ಬಂದಿದ್ದ. ಇದೇ ಪೈಲ್ವಾನ್‌ ಹೀಗೆಯೇ ಅಬ್ಬರಿಸುವುದನ್ನು ಕಂಡಿದ್ದ. ಮೆನೆಜರ್‌ ಅಸಹಾಯಕನಾಗಿ ನಾಟಕ ರದ್ದು ಪಡಿಸುತ್ತಾನೆ. ಕಥಾನಾಯಕ ಮತ್ತೊಂದು ಶೋಗೆ ಟಿಕೆಟ್‌ ಪಡೆದು ಬರುತ್ತಾನೆ. ಆ ಪೈಲ್ವಾನ್‌ ಆಗಲೂ ಹಾಜರ್ !ಆದರೆ ಈ ಬಾರಿ ಮೆನೆಜರ್‌ ಪೊಲೀಸ್ ರನ್ನು ಕರೆಯಿಸಿದ್ದಾನೆ. ಪೈಲ್ವಾನ್‌ ಕಥಾನಾಯಕನಲ್ಲಿ ಬೆಂಕಿಪೆಟ್ಟಿಗೆ ಕೇಳುತ್ತಾನೆ. “ಬೀಡಿ ಸೇದಲಾ?” ಎಂದು ಕೇಳಿದರೆ, “ಇಲ್ಲ, ಟೆಂಟ್‌ಗೆ ಬೆಂಕಿ ಹಚ್ಚಲು” ಎಂದು ಉತ್ತರಿಸುತ್ತಾನೆ. ಅವನು ಮಾಲೆ ಪಟಾಕಿ ತಂದಿದ್ದ. ಪೈಲ್ವಾನ್‌ ಮತ್ತೊಂದು ಟೆಂಟ್‌ನ ಬಾಡಿಗೆ ಗೂಂಡಾ ಎಂಬುದು ಕಥಾ ನಾಯಕನಿಗೆ ತಿಳಿಯುತ್ತದೆ. ಹೇಗೂ ಕಡಕ್‌ ಪೊಲೀಸ್‌ ಬಂದಿದ್ದಾನೆ. ಗಲಾಟೆಯಾದರೆ ಲಾಠಿಚಾರ್ಜ್‌ ಆಗಿಯೇ ಆಗುತ್ತದೆ. ಈ ಕಥಾನಾಯಕ ಆ ಹಳ್ಳಿಯಲ್ಲಿ ರೋಗಿಗಳ ಕೊರತೆಯಿರುವ ಮಾಮೂಲಿ ಡಾಕ್ಟರ್. ನಾಲ್ಕು ಜನರಿಗೆ ಪೆಟ್ಟಾದರೆ ತನ್ನಲ್ಲಿಯೇ ಬ್ಯಾಂಡೇಜ್‌ಗೆ ಬರಬಹುದೆಂಬ ಸ್ವಾರ್ಥ! ಅಬ್ಬಾ! ಇಡೀ ಕಥೆ ನೈತಿಕತೆಯಿಲ್ಲದ ಸೆಣಸಾಟವನ್ನು, ಆಧುನಿಕ ಬದುಕಿನ ಸ್ವಾರ್ಥಸಾಧಕತೆಯನ್ನು ತನ್ನೊಡಲೊಳಗೆ ಹುದುಗಿಸಿಕೊಂಡಿದೆ.

ಸರಗಮ…ಕೋಲಾ ಇದು ಅಸಗರ ವಜಾಹತ್‌ರು ಬರೆದ ಕಥೆ. ಈ ಕಥೆ ಆರಂಭವಾಗುವುದು ಹೀಗೆ, ನಾಯಿಗಳಿಗೆ ಒಂದು ಸೀಜ಼ನ್‌ ಇದ್ದ ಹಾಗೆ ಮಹಾನಗರಗಳಲ್ಲಿ ಕಲೆ ಮತ್ತು ಸಂಸ್ಕೃತಿಯ ಪ್ರದರ್ಶನಕ್ಕೂ ಕೊರೆವ ಚಳಿಗಾಲ ಪ್ರಶಸ್ತವೆಂದು ನಂಬಲಾಗುತ್ತದೆ. ಶ್ರೀಮಂತ ಮನೆತನದ ಹೆಣ್ಣುಮಕ್ಕಳಿಗಂತೂ ‌ಟಿಪ್-ಟಾಪ್ ಆಗಿ ಯಾವುದೇ ಆರ್ಟ್‌ಗ್ಯಾಲರಿಗೆ ಹೋಗುವುದಕ್ಕೆ ಕೊರೆವ ಚಳಿಯ ರಾತ್ರಿಯಲ್ಲಿ ಯಾವ ಅಭ್ಯಂತರವೂ ಇರುವುದಿಲ್ಲ. ಅವರು ಹೋಗುವುದು ತಮ್ಮ ವೈಭವ ಪ್ರದರ್ಶನಕ್ಕೇ ಹೊರತು ಕಲಾ ಮರ್ಮಜ್ಞತೆಯಿಂದಲ್ಲ! ಶಾಸ್ತ್ರೀಯ ಸಂಗೀತದಲ್ಲಿ ಆಸಕ್ತಿಯಿರುವ ಪತ್ರಕರ್ತನೊಬ್ಬ ಎಷ್ಟೇ ಪ್ರಯತ್ನಪಟ್ಟರೂ ಭೀಮಸೇನ ಜೋಶಿಯವರ ಸಂಗೀತ ಕಛೇರಿಗೆ ಹೋಗಲಾಗದೆ ದಿನಗೂಲಿಗಳು ತರಗೆಲೆ ಒಟ್ಟುಗೂಡಿಸಿ, ಬೆಂಕಿ ಹಾಕಿ ಚಳಿ ಕಾಯಿಸುವಲ್ಲಿ ಕುಳಿತು ಚಡಪಡಿಸುತ್ತಾನೆ. ಬೇಕಾಬಿಟ್ಟಿ ಹಣ ತೆತ್ತು ಟಿಕೆಟ್‌ ತೆಗೆದುಕೊಳ್ಳುವವರು ಸಂಗೀತದ ಯಾವ ಸೂಕ್ಷ್ಮ ಒಳನೋಟವೂ ಇಲ್ಲದೆ ತಮ್ಮ ಬೇಳೆ ಬೇಯಿಸಿಕೊಳ್ಳುವುದಕ್ಕಾಗಿ ಟಿಕೆಟ್‌ ಖರೀದಿಸಿ, ಅದನ್ನು ವ್ಯರ್ಥ ಮಾಡುತ್ತಾರೆ. ಆಸಕ್ತಿಯಿರುವ ಸಾಮಾನ್ಯರಿಗೆ ಟಿಕೆಟ್‌ ಅಥವಾ ಪಾಸ್‌ ಪಡೆಯುವುದು ಸಾಧ್ಯವಾಗುವುದಿಲ್ಲ.

‘ಶಿಕ್ಷೆʼ ಇದು ಮನ್ನೂ ಭಂಡಾರಿಯವರ ʼಸಜ಼ಾʼ ಕಥೆಯ ಅನುವಾದ. ಕಛೇರಿಯಲ್ಲಿ ಯಾರೋ ಮಾಡಿದ ಹಣದ ಅಪರಾತಪರಿಯಿಂದಾಗಿ ಶಿಕ್ಷೆ ಅನುಭವಿಸುವ ಒಬ್ಬ ನಿರ್ದೋಷಿ ಈ ಕಥೆಯ ಕೇಂದ್ರಬಿಂದು. ಮುಕದ್ದಮೆಯ ತಾರೀಕು ಮುಂದೆ-ಮುಂದೆ ಹೋಗುತ್ತದೆ. ಎಷ್ಟೋ ವರ್ಷಗಳ ನಂತರ ಅವನು ನಿರ್ದೋಷಿಯೆಂದು ತೀರ್ಪು ಬರುತ್ತದೆ. ಆದರೆ ಅಷ್ಟು ವರ್ಷಗಳ ಕಾಲ ಅವನಷ್ಟೇ ಅಲ್ಲದೆ, ಅವನ ಇಡೀ ಕುಟುಂಬ ಅನುಭವಿಸಿದ ಯಮಯಾತನೆ ಅವರೆಲ್ಲರಿಗೂ ಸಿಕ್ಕ ಶಿಕ್ಷೆಯೆಂದರೆ ಅತಿಶಯೋಕ್ತಿ ಆಗಲಾರದು. ಇದು ನಮ್ಮ ನ್ಯಾಯವ್ಯವಸ್ಥೆ! ಹತ್ತನೆಯ ತರಗತಿಯಲ್ಲಿ ಓದುತ್ತಿರುವ ಮಗಳ ಮೂಲಕ ಈ ಕಥೆ ಸಾಗುತ್ತದೆ.

‘ನಾಗವಂಶಿʼ ಇದು ಸುರೇಂದ್ರ ಸುಕುಮಾರರ ಕಥೆ. ಹಸಿವಿನಿಂದ ಕಂಗೆಟ್ಟ ಮನುಷ್ಯನೊಬ್ಬನನ್ನು ಮುಂದಿಟ್ಟುಕೊಂಡು ಬೀದಿಬದಿಯಲ್ಲಿ ನಾನಾ ಆಟಗಳನ್ನು ಆಡಿ ತೋರಿಸುತ್ತ, ಅದರಿಂದ ಸಂಗ್ರಹಿಸಿದ ಹಣದಿಂದ ಅವನಂತಿರುವ ಕಡುಬಡವರನ್ನು ಉದ್ಧಾರ ಮಾಡುವೆನೆಂದು ಪೊಳ್ಳು ಭರವಸೆ ಕೊಡುವ ಹಾವಾಡಿಗ ವೇಷ ಬದಲಾಯಿಸಿಕೊಂಡು ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತಾನೆಯೇ ಹೊರತು ಆ ಮನುಷ್ಯನಿಗೆ ಏನನ್ನೂ ಮಾಡುವುದಿಲ್ಲ. ಲೇಖಕರು ತನ್ಮೂಲಕ ಇಂಥ ನಾಗರವಂಶದವರೇ ಸಾಮಾಜಿಕ-ರಾಜಕೀಯದಲ್ಲಿ ತುಂಬಿರುವ ಬಗ್ಗೆ ಕಟುತಿಕ್ತ ಶರಾ ಬರೆಯುತ್ತಾರೆ.

ಇಲ್ಲಿಯ ಒಂಬತ್ತನೆಯ ಕಥೆ ಅರ್ಚನಾ ವರ್ಮಾರು ಬರೆದ ‌ʼಬೂಮರ್ಯಾಂಗ್ʼ. ಈ ಕಥೆಯಲ್ಲಿ ತಂದೆ-ತಾಯಿಯರ ನಡುವಿನ ವೈಮನಸ್ಸಿನ ಆಳ-ಹರವನ್ನು ಮಗ ತನ್ನದೇ ರೀತಿಯಲ್ಲಿ ಅರ್ಥೈಸ ತೊಡಗುತ್ತಾನೆ. ಅಪ್ಪ ಮನೆಯಲ್ಲಿದ್ದರೆ ಬೇಕೆನಿಸಿದ್ದೆಲ್ಲ ಸಿಗುತ್ತದೆ, ಆದರೆ ಹೋಮವರ್ಕ್‌ಮಾಡದೇ ಇದ್ದುದಕ್ಕೆ, ನೀಟಾಗಿ ಇಲ್ಲದೇ ಇರುವುದಕ್ಕೆ ಸ್ಕೂಲ್‌ನಲ್ಲಿ ಬೈಸಿಕೊಳ್ಳಬೇಕಾಗುತ್ತದೆ. ಅಮ್ಮ ಮನೆಯಲ್ಲಿದ್ದರೆ ಅವನಿಗೆ ಇನ್ನೊಂದು ರೀತಿಯಲ್ಲಿ ಕರಕರೆಯೆನಿಸುತ್ತದೆ. ಅಪ್ಪ-ಅಮ್ಮರ ನಡುವೆ ಯಾರದು ಸರಿ ಯಾರದು ತಪ್ಪು ಎಂಬ ಬ್ರಹದ್‌ಪ್ರಶ್ನಾರ್ಥಕ ಚಿಹ್ನೆ ಅವನೆದುರು ನಿಲ್ಲುತ್ತದೆ. ಕಥೆಯಲ್ಲೂ ಆ ಗೊಂದಲ ಹಾಗೆಯೇ ಉಳಿದುಬಿಡುತ್ತದೆ.

ಒಟ್ಟಿನಲ್ಲಿ ಇಲ್ಲಿಯ ಎಲ್ಲ ಕಥೆಗಳನ್ನು ಕನ್ನಡ ಭಾಷೆಗೆ ಒಗ್ಗುವಂತೆ ಅನುವಾದಿಸಿದ ಡಾ. ಸುಮಂಗಲಾರು ಅಭಿನಂದನಾರ್ಹರು. ಈ ಪುಸ್ತಕಕ್ಕೆ ಕರ್ನಾಟಕ ಲೇಖಕಿಯರ ಸಂಘ, ಬೆಂಗಳೂರು, ಇವರು ಕೊಡಮಾಡುವ ೨೦೨೨ನೇ ಸಾಲಿನ ಜಿ.ವಿ. ನಿರ್ಮಲಾ (ಅನುವಾದಿತ ಕ್ಷೇತ್ರ) ದತ್ತಿ ಪ್ರಶಸ್ತಿ ಬಂದಿರುವುದು ಪುಸ್ತಕದ ಗರಿಮೆಯ ದ್ಯೋತಕ!

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter