ಆರು ತಿಂಗಳು ಹದಿನೆಂಟು ಪತ್ರಗಳು

ನನ್ನ ಮದುವೆಯ ವಿಷಯದಲ್ಲಿ ನನಗಿಂತ ಹೆಚ್ಚು ತಲೆಕೆಡಿಸಿಕೊಂಡವನು ಸಹೋದ್ಯೋಗಿ ಮೋಹನ. ಯಾಕೆಂದರೆ ಮದುವೆಯ ವಯಸ್ಸು ಬಸವನ ಹುಳುವಿನಂತೆ ತೆವಳುತ್ತ ಸಾಗಿದ್ದು ಕೆಲಸದ ಒತ್ತಡದಲ್ಲಿ ಗಮನಕ್ಕೆ ಬಾರದಿದ್ದರೂ ವಯಸ್ಸೆಷ್ಟು ಅಂತ ಯಾರಾದರು ಕೇಳಿದಾಗ ಮೂವತ್ತು ಮೀರಿದ ನಾನಿನ್ನೂ ಅವಿವಾಹಿತ ಎನ್ನುವ ನೋವು ಸದಾ ನನ್ನೊಳಗೆ ಸಣ್ಣಗೆ ಕೊರೆಯುತ್ತಿತ್ತು. ಇದಕ್ಕೆ ಕಾರಣ ಮದುವೆಗೆ ಬೆಳೆದು ನಿಂತ ತಂಗಿ ಎಂದು ನಾನು ಹೆಮ್ಮೆಯಿಂದ ಹೇಳಿಕೊಳ್ಳಬಹುದಾಗಿದ್ದರೂ ಕಂಡವರ ಕಣ್ಣಲ್ಲಿ ಆ ತ್ಯಾಗಕ್ಕೆ ಬೆಲೆಯೇ ಇರಲಿಲ್ಲ. ಜವಾಬ್ದಾರಿ ಸ್ಥಾನದಲ್ಲಿದ್ದು ತಂಗಿಯ ಮದುವೆ ಮಾಡಿಸದೆ ನಾನು ಮದುವೆಯಾದರೆ ಸತ್ತ ಅಪ್ಪನ ಆತ್ಮಕ್ಕೆ ಶಾಂತಿಯೂ, ಇರುವ ಅಮ್ಮನ ಮನಸ್ಸಿಗೆ ನೆಮ್ಮದಿಯೂ ಸಿಗಲಿಕ್ಕಿಲ್ಲ ಎಂದು ಭಾವನಾತ್ಮಕ ನೆಲೆಯಲ್ಲಿ ಉಳಿದುಬಿಟ್ಟವನು ನಾನು. ತಂಗಿಯ ಮದುವೆಗೆ ನಾನು ಪಟ್ಟ ಪಾಡು ಅಷ್ಟಿಷ್ಟಲ್ಲ. ಬಂದ ಸಂಬಂಧಗಳೆಲ್ಲವೂ ಹೊಂದಾಣಿಕೆಯಾಗದ ಕಾರಣ ಅವಳ ಮದುವೆಗೆ ಕಂಕಣಬಲ ಕೂಡಿಬಂದಿರಲಿಲ್ಲ. ಅವೆಲ್ಲವನ್ನೂ ಬರೆದರೆ ಒಂದು ದೊಡ್ಡ ಕಾದಂಬರಿಯೇ ಆದೀತು ಬಿಡಿ.

ಮೋಹನ ಯಾವಾಗಲು ಹೇಳುತ್ತಿದ್ದ. ಅವನ ಸಂಬಂಧಿಕರಲ್ಲಿ ಒಂದು ಮದುವೆಯ ಗಂಡು ಇದೆ. ರವಿವಾರ ಅವರ ಮನೆಗೆ ಹೋಗಿ ನೋಡಿ ಬರೋಣ ಅಂತ. ಮೋಹನ ಮತ್ತು ನಾನು ಒಂದು ರಾಷ್ಟ್ರೀಕೃತ ಬ್ಯಾಂಕಲ್ಲಿ ಕ್ಲರ್ಕ್ ಹುದ್ದೆಯನ್ನು ಅಲಂಕರಿಸಿದವರು. ಅವನು ಹೇಳಿದ ಇಂತಹ ಅವಕಾಶವನ್ನು ತಪ್ಪಿಸಲು ಸಾಧ್ಯವೇ? ತುದಿಗಾಲಲ್ಲಿ ನಿಂತವನು ಮೋಹನನೊಡನೆ ಒಂದು ಶನಿವಾರ ರಾತ್ರಿ ಹೊರಟೇ ಬಿಟ್ಟೆ. ಸುಮಾರು ಆರು ಗಂಟೆಗಳ ಬಸ್ಸು ಪ್ರಯಾಣದ ದೂರದ ಊರು. ಆ ಊರಲ್ಲಿ ಬಸ್ಸಿಳಿದು ಲಾಡ್ಜ್ ಒಂದರಲ್ಲಿ ರೂಂ ತಗೊಂಡು ಬೆಳಗ್ಗಿನ ನಿತ್ಯವಿಧಿಗಳನ್ನು ಪೂರೈಸಿ, ಒಂದಿಷ್ಟು ಲಘು ಉಪಾಹಾರವನ್ನು ಹೊಟ್ಟೆಗಿಳಿಸಿ ನೇರವಾಗಿ ಅವರ ಮನೆಗೆ ಹೋದಾಗ ಅಂಗಳದಲ್ಲಿ ನೀರು ಹನಿಸಿ ಆಗತಾನೆ ಇಟ್ಟ ಅಂದದ ರಂಗೋಲಿ ನಮ್ಮನ್ನು ಸ್ವಾಗತಿಸಿದರೆ ತೆರೆದ ಬಾಗಿಲಲ್ಲಿ ಎದುರಾದವಳು ಸ್ಫುರದ್ರೂಪಿ ತರುಣಿ. ನಾನು ಯಾವ ಗಂಡಿನ ನೆನಪನ್ನು ಎದೆಯೊಳಗಿಳಿಸಿ ಸಾಗಿದ್ದೆನೋ ಅವನ ತಂಗಿ ಇವಳಾಗಿರಬಹುದೇನೋ ಎನ್ನುವ  ಅಂದಾಜಿಗೆ ನಾನಿಳಿದುಬಿಟ್ಟೆ. ಅವಳಾದರೋ ಕಂಡ ಮೊದಲ ನೋಟದಲ್ಲಿ ಮನಸೂರೆಗೊಳ್ಳುವ ಚೆಲುವಿನ ಗಣಿಯಾಗಿದ್ದಳು. ಹದಿಹರೆಯದ ಕಣ್ಣಿಗೆ ಕಂಡದ್ದೆಲ್ಲವೂ ಅಪ್ರತಿಮ ಸುಂದರವೆನ್ನುವ ಇಂಗಿತಕ್ಕೆ ನೀವು ಬರಬೇಡಿ. ಅವಳನ್ನು ನೋಡುತ್ತಿದ್ದ ನನ್ನ ಕಣ್ಣುಗಳು ಕದಲಲಿಲ್ಲ. ಅಂದವಾಗಿ ಸೀರೆ ಕುಪ್ಪಸ ತೊಟ್ಟಿದ್ದಳು. ಬೆಳದಿಂಗಳ ಅವಳ ಮೈಬಣ್ಣ, ಉಕ್ಕೇರುವ ಯೌವನವನ್ನು ಹಿಡಿದಿಡಲು ಸೋಲುವ ಅಂಗಸೌಷ್ಠವ, ಮೈದುಂಬಿದ ನೀಳಕಾಯ, ಉದ್ದನೆಯ ಮುಖ, ಮೂಗಿನ ಅಂದ ಹೆಚ್ಚಿಸುವ ಮೂಗುತಿ, ಉದ್ದನೆಯ ಕೇಶರಾಶಿ, ಹಣೆಯೊಡನೆ ಪಿಸುಮಾತಿಗಿಳಿದ ಮುಂಗುರುಳು, ಹಣೆಯಲ್ಲಿ ತೇಲುವ ಚಂದಿರನ ನೆನಪನ್ನು ಹೊತ್ತು ತರುವ ಕೆಂಪನೆಯ ಬಿಂದಿ, ಕಿವಿಯಲ್ಲಿ ಉಯ್ಯಾಲೆಯಾಡುವ  ಲೋಲಕಗಳು.... ಒಟ್ಟಿನಲ್ಲಿ ಅಪ್ಸರೆಯೊಬ್ಬಳು ನನ್ನೆದುರು ದಿಢೀರನೆ ಪ್ರತ್ಯಕ್ಷಳಾದ ಅನುಭವವಾಯಿತು. ಮಿತ್ರ ಮೋಹನ ಅಪ್ಪಿ ತಪ್ಪಿಯೂ ಅವಳ ಸುದ್ದಿ ಎತ್ತಿರಲಿಲ್ಲ. ಅಚ್ಚರಿಯೆನಿಸಿತು. ಮನೆಬಾಗಿಲಲ್ಲಿ ಅಪರಿಚಿತರನ್ನು ಕಂಡವಳು ಸುಮಧುರ ಸ್ವರದಲ್ಲಿ ಅಣ್ಣನನ್ನು ಕರೆದಳು. ತಂಗಿಯ ಕರೆಗೆ ಹೊರಬಂದ ಅಣ್ಣ ಸುರೇಶ ಎದುರಿದ್ದ ಪರಿಚಿತ ಮೋಹನನನ್ನು ಕಂಡು ಆತ್ಮೀಯತೆಯಿಂದ ಬರಮಾಡಿಕೊಂಡ. ಯಾಂತ್ರಿಕವಾಗಿ ಒಳನಡೆದ ನನ್ನನ್ನು ಅದಾಗಲೇ ಅವಳು ಸಂಪೂರ್ಣವಾಗಿ ಆವರಿಸಿಬಿಟ್ಟಿದ್ದಳು.

`ನಿಮಗೆ ಎದುರಾದವಳು ನನ್ನ ತಂಗಿ ಸುಲತ' ಅಂತ ಸುರೇಶ ಮಾತಿಗಿಳಿದಾಗ ಅವಳ ಹೆಸರನ್ನು ಮರೆಯದೆ ಮನಸ್ಸಿಗಿಳಿಸಿದೆ. ಮುಂಜಾನೆಯ ಎಲ್ಲ ವಿಧಿಗಳನ್ನು ಪೂರೈಸಿ ತಿಂಡಿ ತಿಂದು ಹೋಗಿದ್ದರಿಂದ ಅವರಿಗೆ ತೊಂದರೆ ಕೊಡುವ ಪ್ರಸಂಗ ಬಂದಿರಲಿಲ್ಲ. ಆದರೂ ಟಿಫಿನ್ನಿನ ಸಮಯ ಅದಾಗಿದ್ದರಿಂದ ನಮ್ಮನ್ನು ಎಬ್ಬಿಸಿ ತಿಂಡಿಗೆ ಕೂಡಿಸಿಯೇ ಬಿಟ್ಟರು. ಆ ಮನೆಯಲ್ಲಿ ದೊಡ್ಡವ ಸುರೇಶ ತಂಗಿ ಸುಲತ ಬಿಟ್ಟರೆ ತಮ್ಮ ಸುದೀಪ ಮೂವರೆ. ಎಲ್ಲರಿಗಿಂತ ಹಿರಿಯವಳಾದ ಸುಪ್ರಿಯ ಅದಾಗಲೇ ಮದುವೆಯಾಗಿ ಗಂಡನ ಮನೆಗೆ ಹೋಗಿದ್ದಳು. ಸುಪ್ರಿಯ ಅದೇ ಊರಿನಲ್ಲಿದ್ದುದರಿಂದ ಒಡಹುಟ್ಟಿದವರಿಗೆ ಒಂದು ರೀತಿಯ ನೆಮ್ಮದಿ ಇತ್ತು. ತಂದೆ ತಾಯಿಗಳು ಬಹಳ ಹಿಂದೆಯೇ ತೀರಿಕೊಂಡ ಕಾರಣ ತಂಗಿ ಮತ್ತು ತಮ್ಮನ ಜವಾಬ್ದಾರಿಯನ್ನು ಸುರೇಶ ಹೊತ್ತುಕೊಂಡಿದ್ದ. ಅವನು ನನ್ನಂತೆ ರಾಷ್ಟ್ರೀಕೃತ ಬ್ಯಾಂಕೊಂದರಲ್ಲಿ ಕೆಲಸ ಮಾಡುತ್ತಿದ್ದ. ನಮ್ಮ ನಡುವಿನ ಮಾತಿನಲ್ಲಿ ಇವೆಲ್ಲ ಸಂಗತಿಗಳು ಹೊರಬಂದಿದ್ದವು. 

ಸುಲತ ಮಾಡಿದ ಬಿಸಿಬಿಸಿ ಉಪ್ಪಿಟ್ಟು ತುಸು ಹೆಚ್ಚಿನ ರುಚಿಯನ್ನೇ ಕೊಟ್ಟಿತ್ತು. ಜೊತೆಗೆ ಚಹ ಸೇವನೆಯಿಂದ ನನ್ನೊಳಗೊಂದು ನವಚೇತನದ ಮಿಂಚು ಹರಿದಾಡಿತು. ಎಲ್ಲದಕ್ಕೂ ಕಾರಣ ಸುಲತ ಎಂದು ಬೇರೆ ಹೇಳಬೇಕಾಗಿಲ್ಲವಲ್ಲ. ಉಪ್ಪಿಟ್ಟು ಎಷ್ಟು ಹೊಟ್ಟೆಗೆ ಸೇರಿತೋ ಲೆಕ್ಕವಿಲ್ಲ. ತಿನ್ನುವ ಮಧ್ಯೆ ನಾನು ಅವಳನ್ನು ಕದ್ದುಮುಚ್ಚಿ ನೋಡುತ್ತಲೇ ಇದ್ದೆ. ಅವಳಾದರೂ ಅಷ್ಟೆ. ನಾನು ನೋಡಿದಾಗಲೆಲ್ಲ ಅವಳೂ ನನ್ನ ನೋಟಕ್ಕೆ ಪ್ರತಿನೋಟದ ಉತ್ತರ ಕೊಡುತ್ತಿದ್ದಳು. ಆಗೆಲ್ಲ ಅವಳ ತುಟಿಯ ಮೇಲಿನ ಮಂದಹಾಸ ಕೆನ್ನೆಯ ಕುಳಿಯಲ್ಲಿ ಇಳಿದು ಮಾಯವಾಗುತ್ತಿತ್ತು. ಒಟ್ಟಿನಲ್ಲಿ ಅದೇನು ಮಾಯೆಯೋ ಅಥವಾ ಮಾಯೆಯೊಳಗೆ ನಾವೋ ಪರಸ್ಪರ ನೋಟದಲ್ಲಿಯೇ ಮಾತಾಡಿಕೊಂಡೆವು. 

ತಿಂಡಿ ತಿಂದು ಹಾಲಿನಲ್ಲಿ ಕೂತು ನಾವು ಬಂದ ಕಾರಣವನ್ನು ಮೋಹನ ಬಿಚ್ಚಿಡುತ್ತಿದ್ದಂತೆ ಸುರೇಶ
`ಸುಲತಳಿಗಾಗಿ ನಾವೀಗ ಗಂಡು ಹುಡುಕುತ್ತಿದ್ದೇವೆ. ಅವಳ ಮದುವೆ ಆದ ನಂತರ ನನ್ನ ಮದುವೆ. ನನಗೇನು ಮದುವೆಗೆ ಅಷ್ಟು ಅವಸರವಿಲ್ಲ' ಅಂತ ಸೂಕ್ಷ್ಮವಾಗಿ ನನ್ನನ್ನು ದಿಟ್ಟಿಸಿದ. ಎಲ್ಲಿಯೋ ಬಿಟ್ಟ ಬಾಣ ಗುರಿತಪ್ಪಿ ಮತ್ತೆಲ್ಲಿಯೋ ನಾಟಿದಂತಾಯಿತು ನನಗೆ. ನನ್ನ ತಂಗಿಗೆ ಗಂಡು ನೋಡಲೆಂದು ಬಂದವನ ವಿವೇಕ ಜಾಗೃತವಾಗಿ ಅದಲುಬದಲಿನ ಸಂಬಂಧದ ಪ್ರಸ್ತಾಪವನ್ನು ತುಸು ಅಳುಕಿನಿಂದಲೇ ಮುಂದಿಟ್ಟೆ. ಸುರೇಶ ಅದಕ್ಕೆ ಸಹಮತಿಸಲಿಲ್ಲ. ಅದಲುಬದಲಿನ ಸಂಬಂಧಗಳು ನಡೆದಲ್ಲೆಲ್ಲ ಆದ ಕಿರಿಕಿರಿಗಳನ್ನು ಅನಾಹುತಗಳನ್ನು ನಮ್ಮೆದುರು ತೆರೆದಿಟ್ಟ. ಹಾಗೆ ಹೇಳುತ್ತಲೇ `ಸುಲತ ನಿಮಗೆ ಒಪ್ಪಿಗೆಯಾದರೆ ನೋಡಿ...ಬಿ.ಎ. ಮಾಡಿದ್ದಾಳೆ. ಕೆಲಸಕ್ಕೆ ಎಲ್ಲೂ ಸೇರಿಲ್ಲ. ಮನೆಕೆಲಸ ಅಡುಗೆ ಎಲ್ಲ ಬರುತ್ತೆ' ಅಂತ ಹೆಚ್ಚುವರಿ ಮಾತನ್ನು ಸೇರಿಸಲು ಮರೆಯಲಿಲ್ಲ. ನನ್ನ ಸ್ಥಿತಿ ಅಡಕತ್ತರಿಯಲ್ಲಿ ಸಿಕ್ಕಂತಾಯಿತು. ಸುಲತಳನ್ನು ಒಪ್ಪಿ ಮದುವೆಯಾದರೆ ತಂಗಿಯ ಮದುವೆಯ ಗತಿ. ಮನೆಯವರು ಇದಕ್ಕೆ ಖಂಡಿತಾ ಒಪ್ಪಲಿಕ್ಕಿಲ್ಲ. ಹಾಗೊಂದು ವೇಳೆ ನಾನು ಮೊದಲು ಮದುವೆಯಾಗಿ ತಂಗಿಯ ಮದುವೆಯ ಭಾರ ನನ್ನದೇ ಅಂತ ಪ್ರಮಾಣ ಮಾಡಿದರೂ ಅಮ್ಮನ ಮನಸ್ಸಿನಲ್ಲಿ ಅಭದ್ರತೆಯ ಸಣ್ಣದೊಂದು ಕಿಡಿ ಜೀವಂತವಾಗಿಯೇ ಉಳಿದೀತು. ಇಂತಹ ಪರಿಸ್ಥಿತಿ ಎದುರಾಗಬಹುದು ಅಂತ ಎಣಿಸಿರದ ನಾನು ನನ್ನ ನಿರ್ಧಾರಕ್ಕಾಗಿ ಸ್ವಲ್ಪ ಸಮಯಾವಕಾಶವನ್ನು ಕೇಳಿದೆ. ಅದಕ್ಕೆ ಒಪ್ಪಿದ ಸುರೇಶ ಮನೆಯೊಳಗೆ ಹೋಗಿ ಸುಲತಳೊಡನೆ ಅವಳ ಅಭಿಪ್ರಾಯವನ್ನು ಕೇಳಿರಬೇಕು. ಅವಳೇನಂದಳೋ ಗೊತ್ತಿಲ್ಲ. ಹೊರಬಂದವನೇ `ನಮ್ಮ ಸುಲತಳಿಗೆ ನೀವು ಒಪ್ಪಿಗೆಯಾಗಿದ್ದೀರಿ' ಅಂತ ತನ್ನ ತೀರ್ಮಾನವನ್ನು ಸಾರಿಯೇ ಬಿಟ್ಟ. ಸಾವಿನವರೆಗೂ ಸಾಗುವ ಜೀವನಕ್ಕೆ ಎಂತ ಅವಸರದ ತೀರ್ಮಾನ ಎನಿಸಿತು. ನನ್ನ ಪೂರ್ವಾಪರಗಳ, ಕುಟುಂಬದ ಕುರಿತು ವಿಚಾರಿಸದೆ ಕೇವಲ ನನ್ನನ್ನು ಕಂಡೊಡನೆ ತೆಗೆದುಕೊಂಡ ನಿರ್ಧಾರದ ಬಗ್ಗೆ ಸೋಜಿಗವೆನಿಸಿತು. ಬಹುಶಃ ಮೋಹನ ನನ್ನ ಕುರಿತಾದ ಎಲ್ಲ ವಿವರಗಳನ್ನು ಸುರೇಶನಿಗೆ ಮೊದಲೇ ತಿಳಿಸಿರಬಹುದು. ಅಲ್ಲದೆ ಅವರ ಕುಟುಂಬದಲ್ಲಿ ಹಿರಿಯವನಾಗಿ ನಿರ್ಧಾರ ತೆಗೆದುಕೊಳ್ಳುವವನು ಸುರೇಶನೇ ಆದುದರಿಂದ ತಾಳ ಎಲ್ಲಿಯೂ ತಪ್ಪಿಲ್ಲ ಅಂದುಕೊಂಡೆ. ಸುರೇಶನ ಮಾತನ್ನು ಕೇಳಿ ನನ್ನೊಳಗಿನ ಸಂತಸದ ಆಗಸದಲ್ಲಿ ಕ್ಷಣಕಾಲ ಮಿಂಚೊಂದು ಮಿಂಚಿ ಮರೆಯಾಯಿತು. ಅವರ ಇಂಗಿತಕ್ಕೆ ನಾನಲ್ಲಿ ಏನನ್ನಾದರೂ ಮಾತನಾಡಲೇ ಬೇಕಿತ್ತು. ಹೀಗಾಗಿ ಅಲ್ಲಿ ನನ್ನ ಸಮ್ಮತಿಯನ್ನು ಪ್ರಕಟಿಸದೆ ಪತ್ರದ ಮೂಲಕ ತಿಳಿಸುವುದಾಗಿ ಹೇಳಿ ಹೊರಟೆವು. ನಾವು ಹೊರಬರುತ್ತಿದ್ದಂತೆ ತಲೆಬಾಗಿಲಿಗೆ ಬಂದ ಸುಲತ ಮತ್ತೊಮ್ಮೆ ನನ್ನನ್ನು ನೋಡಿ ನಕ್ಕಳು. ಆ ನಗುವಿನಲ್ಲಿ ತನ್ನ ತೀರ್ಮಾನದ ಮುದ್ರೆಯನ್ನು ಒತ್ತಿದಂತಿತ್ತು. ತಕ್ಷಣಕ್ಕೆ ನನ್ನೊಳಗೆ ನಾನು `ಹುಚ್ಚುಹುಡುಗಿ' ಅಂದುಕೊಂಡೆ. 

ಹಿಂತಿರುಗಿ ಬಂದವನ ಮನಸ್ಸನ್ನು ಸುಲತ ಕದ್ದುಬಿಟ್ಟಿದ್ದಳು. ಮಾನಸಿಕವಾಗಿ ನನ್ನ ಜೊತೆಯಾಗಿಯೇ ಬಂದವಳು ನಿಂತಲ್ಲಿ ಕೂತಲ್ಲಿ ಕಾಡಿಸತೊಡಗಿದಳು. ಅಮ್ಮನಿಗೆ ಕೂಡಲೇ ನಡೆದುದೆಲ್ಲವನ್ನೂ ತಿಳಿಸಿ ಪತ್ರ ಬರೆದೆ. ಅಮ್ಮನಿಂದ ಬಂದ ಪತ್ರದಲ್ಲಿ ಅವಳು ನಿರ್ಧಾರವನ್ನು ನನಗೇ ಬಿಟ್ಟಿದ್ದಳು. ಅಚ್ಚರಿ ಅನಿಸಿತು. ಆದರೂ ಜವಾಬ್ದಾರಿಯ ಹೆಗಲ ಭಾರ ನನ್ನನ್ನು ನೆನಪಿಸುತ್ತಲೇ ಇತ್ತು. ಅಮ್ಮನ ಪತ್ರದಲ್ಲಿ ಹೀಗಿತ್ತು.
`ನಿನ್ನ ತಂದೆಯವರು ತೀರಿಕೊಂಡು ಎರಡು ತಿಂಗಳಾಯಿತಷ್ಟೆ. ಅವರ ವರ್ಷಾಂತಿಕ (ವಾರ್ಷಿಕ ಶ್ರಾದ್ಧ) ಮುಗಿಯದೆ ನೀನು ಮದುವೆ ಮಾಡಿಕೊಳ್ಳುವ ಹಾಗಿಲ್ಲ. ಅವರು ಅಲ್ಲಿಯವರೆಗೆ ಕಾಯುವುದಿದ್ದರೆ ಕಾಯಲಿ. ಈ ಮಧ್ಯೆ ನಿನ್ನ ತಂಗಿಗೆ ಗಂಡು ಹುಡುಕುವ ವಿಚಾರದಲ್ಲಿ ಅವರೊಂದಿಷ್ಟು ಪ್ರಯತ್ನಿಸಿದರೆ ಒಳ್ಳೆಯದು. ಹೇಗಿದ್ದರೂ ನಿನ್ನ ತಂಗಿಯ ಮದುವೆಯ ಭಾರ ನಿನ್ನದೇ. ಅದನ್ನು ನಾನು ಬೇರೆ ಹೇಳಬೇಕಾಗಿಲ್ಲ. ಯಾವುದು ಒಳ್ಳೆಯದು ಅಂತ ಯೋಚಿಸಿ ನಿರ್ಧಾರ ತಗೋ' 
ಅಮ್ಮ ಬರೆದುದು ಸರಿಯಾಗಿಯೇ ಇತ್ತು. ಯಾವುದಕ್ಕೂ ಜವಾಬ್ದಾರಿ ಸ್ಥಾನದಲ್ಲಿ ನಾನಿರುವಾಗ ನನ್ನ ಕರ್ತವ್ಯವನ್ನು ಸ್ಪಷ್ಟವಾಗಿ ನೆನಪಿಸಿದ್ದಳು. 

ಇಷ್ಟಾಗುವಾಗ ನಾವು ಹೋಗಿ ಬಂದು ಹತ್ತು ದಿನಗಳಾಗಿದ್ದವು. ಸುರೇಶನಿಗೆ ನಾನು ಕೊಟ್ಟ ಮಾತಿನಂತೆ ಪತ್ರ ಬರೆಯಲೇ ಬೇಕಿತ್ತು. ಸುರೇಶನಿಗೆ ಪತ್ರ ಬರೆಯುತ್ತಾ ಮುಂದಿನ ರವಿವಾರ ನಾನೊಬ್ಬನೇ ಅವರ ಮನೆಗೆ ಬರುವೆನೆಂದು, ಅಮ್ಮ ಬರೆದ ವಿಷಯವನ್ನು ಸೂಕ್ಷ್ಮವಾಗಿ ತಿಳಿಸುತ್ತಾ ಹೆಚ್ಚಿನ ಸಂಗತಿ ಬಂದ ನಂತರ ಮಾತನಾಡುವ ಎಂದು ಸಂದೇಶ ರವಾನಿಸಿದೆ. ತಂಗಿಗಿಂತ ಮೊದಲು ನಾನೇ ಮದುವೆಗೆ ತಯಾರಾಗಿ ನಿಂತೆನಲ್ಲ ಅನ್ನುವ ಅಪರಾಧಿ ಭಾವ ನನ್ನನ್ನು ಪ್ರಶ್ನಿಸುತ್ತಲೇ ಇತ್ತು. ಆದರೂ ಒಂದು ಸಮಾಧಾನ; ಮುಂದಿನ ಹತ್ತು ತಿಂಗಳಲ್ಲಿ ತಂಗಿಗೊಂದು ಮದುವೆಯ ಗಂಡು ಯಾಕೆ ಸಿಗಬಾರದು... ಸಿಕ್ಕೇ ಸಿಗುತ್ತಾನೆ ಎನ್ನುವ ಹುರುಪಿನಲ್ಲಿ ಮುಂದಿನ ರವಿವಾರದ ಹಾದಿ ಕಾದೆ. ಆ ರವಿವಾರವೂ ಓಡೋಡಿ ಬಂತು. ಕಳೆದ ಸಲದಂತೆ ಶನಿವಾರ ರಾತ್ರಿ ಮನೆ ಬಿಟ್ಟವನು ರವಿವಾರ ಅವರೂರಿಗೆ ತಲುಪಿ ಲಾಡ್ಜ್‍ನಲ್ಲಿ ರೂಂ ಮಾಡಿ ಮುಂಜಾನೆಯ ನಿತ್ಯಕರ್ಮಗಳನ್ನು ಮುಗಿಸಿ ಅವರ ಮನೆಯೆದುರು ಪ್ರತ್ಯಕ್ಷನಾದೆ. ಆದರೆ ಈ ಸಲ ಬಾಗಿಲು ತೆರೆದದ್ದು ಸುಲತ ಅಲ್ಲ ಸುರೇಶ. ಕೊಂಚ ನಿರಾಸೆಯಾಯಿತು. ಬೆಳಗ್ಗಿನ ತಿಂಡಿಯನ್ನು ಅವರಲ್ಲಿ ಸಂಕೋಚವಿಲ್ಲದೆ ಸವಿಯುತ್ತ ನಾನು ಮತ್ತೊಮ್ಮೆ ವಿಷಯವನ್ನು ವಿಸ್ತಾರವಾಗಿ ವಿವರಿಸಿದೆ. ಆಗ ಮನೆಯವರೆಲ್ಲ ಹಾಲಿನಲ್ಲಿಯೇ ಇದ್ದರು. 
`ನನಗೆ ಹುಡುಗಿ ಒಪ್ಪಿಗೆಯಾಗಿದ್ದಾಳೆ. ಆದರೆ ನನ್ನ ತಂದೆಯವರು ಇತ್ತೀಚೆಗೆ ತೀರಿಕೊಂಡ ಕಾರಣ ಒಂದು ವರ್ಷ ಮದುವೆಯಾಗುವ ಹಾಗಿಲ್ಲ. ಅಲ್ಲಿಯ ತನಕ ಕಾಯಲು ನೀವು ತಯಾರಿದ್ದೀರಾ? ಈ ಮಧ್ಯೆ ತಂಗಿಯ ಮದುವೆಗೂ ಪ್ರಯತ್ನಿಸುವ ಜವಾಬ್ದಾರಿ ನನ್ನ ಮೇಲಿದೆ. ನಿಮ್ಮ ಕಡೆ ಯಾರಾದರು ಒಳ್ಳೆಯ ಗಂಡಿದ್ದರೆ ಹೇಳಿ. ನಿಮಗೆ ನಮ್ಮ ಮನೆ, ಮನೆತನ ನೋಡುವ ಇಚ್ಛೆ ಇದ್ದರೆ ಊರಿನ ನಮ್ಮ ಮನೆಗೆ ಬರಬಹುದು. ಬರುವ ಮುಂಚೆ ತಿಳಿಸಿದರಾಯಿತು. ನಾನು ಕೆಲಸ ಮಾಡುವ ಬಗ್ಗೆನೂ ಬಂದು ವಿಚಾರಿಸಬಹುದು...' ಇಷ್ಟು ಹೇಳಿ ಅವರ ಮುಖ ನೋಡಿದೆ. ಅಷ್ಟು ದೀರ್ಘ ಕಾಲ ಅವರು ನನಗಾಗಿ ಕಾಯಲು ಹಿಂದೇಟು ಹಾಕಬಹುದು ಎನ್ನುವ ಅಳುಕು ನನ್ನಲ್ಲಿತ್ತು. ಯಾಕೆಂದರೆ ಹುಡುಗಿ ಪಸಂದಾಗಿದ್ದಾಳೆ. ಅವಳನ್ನು ನೋಡಿದ ಯಾರಾದರೂ ಒಪ್ಪಿಕೊಳ್ಳದಿರಲು ಕಾರಣವೇ ಇರಲಿಲ್ಲ.
ನನ್ನ ಮಾತಿಗೆ ಅವರೆಲ್ಲರು ಯಾವ ಷರತ್ತುಗಳೂ ಇಲ್ಲದ ಒಮ್ಮತದ ಸಮ್ಮತಿಯನ್ನು ಸೂಚಿಸಿದರು. ನನಗೆ ಅತೀವ ಸಂತಸವಾಯಿತು. ಅಷ್ಟರಲ್ಲಿ ಅಲ್ಲಿಗೆ ಬಂದ ಸುಪ್ರಿಯ ಮತ್ತವಳ ಗಂಡ ಆ ಕ್ಷಣದ ಸಂಭ್ರಮಾಚರಣೆಯಾಗಿ ಸಿಹಿಯನ್ನು ನನಗೂ ಸುಲತಳಿಗೂ ತಿನ್ನಿಸುವುದರ ಮೂಲಕ ಅಭಿನಂದನೆಗಳನ್ನು ಸಲ್ಲಿಸಿದರು. ಅಲ್ಲಿಗೆ ಗಂಡು ಹೆಣ್ಣಿನ ಪರಸ್ಪರ ಒಪ್ಪಿಗೆಯ ಮೊದಲ ಅಧ್ಯಾಯ ಮುಗಿದಂತಾಯಿತು. ಸುಲತ ಮಾನಸಿಕವಾಗಿ ನನ್ನವಳಾದಳು. ನನ್ನ ಮದುವೆಯ ನಿರ್ಧಾರ ಇಷ್ಟು ಸುಲಲಿತವಾಗಿ ಮುಗಿಯುತ್ತದೆ ಎಂದು ನಾನೆಣಿಸಿರಲಿಲ್ಲ.

ಇದಾಗಿ ತಿಂಗಳೊಳಗೆ ಸುಲತನ ಕಡೆಯ ಮೂವರು ನಾನು ಕೆಲಸ ಮಾಡುತ್ತಿದ್ದ ಊರಿಗೆ ಬಂದು ಬ್ರಹ್ಮಚಾರಿಯ ರೂಂನ್ನು ನೋಡಿ, ಕೆಲಸದ ಕುರಿತು ಮಾಹಿತಿ ಕಲೆಹಾಕಿ ಮಧ್ಯಾಹ್ನದ ಊಟವನ್ನು ಸವಿದು ತೆರಳಿದರು. ಅದೇ ತಿಂಗಳ ಕೊನೆಯಲ್ಲಿ ನಾನು ಊರಿಗೆ ಹೋಗುವ ವಿಚಾರವನ್ನು ಅವರಿಗೆ ತಿಳಿಸಿದ್ದೆ. ಹೀಗಾಗಿ ಅವರು ನಮ್ಮೂರಿನ ಮನೆಗೆ ಬರುವ ಯೋಜನೆಯನ್ನು ತಿಳಿಸಿದರು. ಈ ಮಧ್ಯೆ ಜಾತಕ ನೋಡುವ ಶಾಸ್ತ್ರವೂ ಮುಗಿದುಹೋಯಿತು. ಉತ್ತಮ ರೀತಿಯಲ್ಲಿ ಕೂಡಿಬರುವುದಾಗಿ ಜ್ಯೋತಿಷಿಗಳು ಹೇಳಿದ ಮೇಲೆ ಹಿರಿಯರಲ್ಲಿ ಇದ್ದ ಅಲ್ಪಸ್ವಲ್ಪ ಹಿಂಜರಿತವೂ ಮಾಯವಾಯಿತು. ನಾನು ಊರಿನಲ್ಲಿದ್ದ ಸಮಯದಲ್ಲಿ ಸುಲತಳನ್ನು ಸೇರಿಸಿ ನಾಲ್ಕು ಮಂದಿ ನಮ್ಮ ಮನೆಗೆ ಬಂದರು. ಹುಡುಗಿಯನ್ನು ನೋಡಿದ ಅಮ್ಮನ ಮುಖದಲ್ಲಿ ಮಗನ ಆಯ್ಕೆಯ ಬಗ್ಗೆ ಮೆಚ್ಚುಗೆಯ ಮಂದಹಾಸ ಚಿಮ್ಮಿತು. `ಸುಲತ ಮನೆಯೊಳಗೆ ಕಾಲಿಟ್ಟಂತೆ ಮನೆಯೆಲ್ಲ ಬೆಳಗಿದಂತೆ ಆಯಿತು ಮಗನೆ' ಅಂತ ಅಮ್ಮ ತನ್ನ ಮನದಾಳದ ಹರ್ಷವನ್ನು ವ್ಯಕ್ತಪಡಿಸಿದಳು. ಬಂದವರಿಗೆ ಯಥಾರೀತಿ ಉಪಚಾರವಾಯಿತು. ನಮ್ಮ ಮನೆಮಂದಿಯ ಜೊತೆಗೆ ಅಕ್ಕಪಕ್ಕದವರೂ ಹುಡುಗಿಯನ್ನು ನೋಡಿ ಮೆಚ್ಚಿಕೊಂಡರು. ನಮ್ಮ ಆತಿಥ್ಯ ಅವರಿಗೆ ಹಿಡಿಸಿದಂತೆ ಕಂಡಿತು. ನಾವು ಹುಡುಗಿಯ ಮನೆಗೆ ಹೋಗಿ ನೋಡುವ ಶಾಸ್ತ್ರವನ್ನು ನಾನು ಏಕಾಂಗಿಯಾಗಿ ಮೊದಲೇ ಮುಗಿಸಿದ್ದ ಕಾರಣ ಆ ಪ್ರಶ್ನೆ ಅಲ್ಲಿ ಏಳಲಿಲ್ಲ. ಮದುವೆಗೆ ಇನ್ನೂ ಸಾಕಷ್ಟು ಸಮಯವಿದ್ದುದರಿಂದ ಮದುವೆಯ ದಿನಾಂಕವನ್ನು ಮತ್ತೆ ನೋಡಿದರಾಯಿತು ಅಂತ ಎರಡೂ ಕಡೆಯವರು ನಿರ್ಧರಿಸಿಯಾಯಿತು. ನನ್ನೊಳಗೆ ಒಂದೆಡೆ ಸಂಭ್ರಮದ ಅಲೆ ಬಿಟ್ಟೂಬಿಡದೆ ಅಬ್ಬರಿಸುತ್ತಿದ್ದರೆ ಮನದ ಮೂಲೆಯಲ್ಲೆಲ್ಲೋ ತಂಗಿಯ ಮದುವೆಯ ಚಿಂತೆ ಇನ್ನಿಲ್ಲದಂತೆ ಕಾಡುತ್ತಿತ್ತು. 

ಮದುವೆಯ ಮುಂಚೆ ಮುಖ್ಯವಾಗಿ ಆಗಬೇಕಾದ ಇಷ್ಟೆಲ್ಲ ಕಾರ್ಯಕ್ರಮಗಳು ಗಡಬಡಿಸಿ ನಡೆದುಹೋದವು. ಇನ್ನೇನಿದ್ದರೂ ಮದುವೆಯ ದಿನ ನಿಶ್ಚಯ ಮತ್ತು ಅದರ ತಯಾರಿ. ಅದಕ್ಕೆ ಸಾಕಷ್ಟು ಸಮಯಾವಕಾಶವೂ ಇತ್ತೆನ್ನಿ. ಹೀಗಿರುತ್ತಿರಲು ಒಂದು ದಿನ ನನಗೊಂದು ಪತ್ರ ಬಂತು. ಅಂಚೆಯ ತಿಳಿಹಳದಿ ಬಣ್ಣದ ಕವರು. ಯಾರು ಬರೆದಿರಬಹುದು ಎಂದು ನೋಡಿದರೆ ಸುಲತ. ಒಮ್ಮೆ ರೋಮಾಂಚನವಾಯಿತು. ಒಳಗಿರುವ ಪತ್ರವನ್ನು ತೆರೆದು ಓದುವ ತನಕ ನೂರೆಂಟು ಯೋಚನೆಗಳ ಚಿತ್ತಾರದ ಕಾರಂಜಿ ಮನಸ್ಸಿನಲ್ಲಿ ಉಕ್ಕುಕ್ಕಿ ಹಾರುತ್ತಿತ್ತು. ಎಲ್ಲರೂ ಬರೆಯುವಂತೆ ಪ್ರೀತಿಯ.... ಎನ್ನುವ ಸಂಬೋಧನೆಯಿಂದಲೇ ಪತ್ರ ಶುರುವಾಗಿತ್ತು. ಪತ್ರದುದ್ದಕ್ಕೂ ಅದುವರೆಗೆ ನಡೆದ ಘಟನೆಗಳಿಗೆಲ್ಲ ಧನ್ಯವಾದಗಳನ್ನು ಅರ್ಪಿಸಿ ಧನ್ಯವಾದ ಪತ್ರವನ್ನಾಗಿ ಮಾಡಿದ್ದಳು. ಓದಿ ಖುಷಿಯಾಯಿತು. ಹೆಚ್ಚು ಸಮಯ ವ್ಯರ್ಥಮಾಡದೆ ತಕ್ಷಣ ಉತ್ತರ ಕೊಟ್ಟೆ. ಅಲ್ಲಿಂದ ಶುರುವಿಟ್ಟಿತು ನಮ್ಮ ಪ್ರೇಮಪತ್ರಗಳ ಓಡಾಟ. ಪ್ರತಿಯೊಂದು ಪತ್ರದಲ್ಲಿಯೂ ಹೊಸ ವಿಷಯಗಳು ಪ್ರಸ್ತಾಪವಾಗುತ್ತಿದ್ದವು. ಹದಿಹರೆಯದಲ್ಲಿ ವಿಷಯಗಳಿಗೇನು ಬರಗಾಲವೇ? ಮೊಗೆದಷ್ಟು ದಕ್ಕುವ ಸಂಗತಿಗಳು ಪತ್ರಗಳಿಗೆ ಆಹಾರವಾಗುತ್ತಿದ್ದವು. ಅವಳ ಪತ್ರಗಳಿಗೆ ಉತ್ತರಿಸುತ್ತಾ ನಾನೊಬ್ಬ ಅಪ್ಪಟ ಪ್ರೇಮಿಯಾಗಿ ಬದಲಾದೆ. ಸುಖಸಂಸಾರದ ನೂರೆಂಟು ಸೂತ್ರಗಳು ಪತ್ರಗಳ ತುಂಬ ಹರಿದಾಡಿದವು. ನಮ್ಮ ಮುಂದಿನ ಬದುಕು, ಆತ್ಮಚರಿತ್ರೆ, ಪ್ರೀತಿಯ ಒಡನಾಟ, ಪರಸ್ಪರ ಹೊಂದಾಣಿಕೆಯ ತಂತ್ರ, ಗೌರವಿಸುವ ಮನೋಭಾವ, ಒಡಹುಟ್ಟಿದವರನ್ನು ಸಲಹುವ, ಹೆತ್ತವರನ್ನು ಕಾಳಜಿಯಿಂದ ನೋಡಿಕೊಳ್ಳುವ, ಸಂಬಂಧಿಕರೊಡನೆ ಉತ್ತಮ ಬಾಂಧವ್ಯವನ್ನು ಹೊಂದುವ, ಅದನ್ನು ಉಳಿಸಿಕೊಳ್ಳುವ.... ಹೀಗೆ ಮುಂದಿನ ಬದುಕಿನ ನೀಲಿ ನಕ್ಷೆಗಳೆಲ್ಲ ಪತ್ರಗಳ ಮೂಲಕ ಇಬ್ಬರ ಕಣ್ಣೆದುರು ತೆರೆದುಕೊಂಡವು. ಪತ್ರಗಳ ಪ್ರತಿಯೊಂದು ಶಬ್ದದಲ್ಲಿಯೂ ಪ್ರೀತಿಯ ಪಸೆಯಿರುತ್ತಿತ್ತು; ಕಾಳಜಿಯ ಲೇಪವಿರುತ್ತಿತ್ತು. ಈ ನಡುವೆ ನಮ್ಮ ನಡುವಿನ ನೂರಾರು ಸಿಹಿಮುತ್ತುಗಳು ಪತ್ರಗಳಿಗೆ ಅಂಟಿಕೊಂಡೇ ನಮ್ಮನ್ನು ಮುಟ್ಟುತ್ತಿದ್ದವು. ಅವೆಷ್ಟು ಸಂಗತಿಗಳು ಪತ್ರಗಳ ಮೂಲಕ ನಮ್ಮೆದೆಯೊಳಗೆ ಇಳಿದವೋ ಗೊತ್ತಿಲ್ಲ. ಆರು ತಿಂಗಳಲ್ಲಿ ಬರೋಬ್ಬರಿ ಹದಿನೆಂಟು ಪತ್ರಗಳು ನನ್ನ ಕೈಸೇರಿದ್ದವು. ಎಲ್ಲವೂ ಹಳದಿ ಬಣ್ಣದ ಕವರುಗಳೇ. ಅವಳು ಬರೆದ ಪತ್ರಗಳನ್ನು ಮುತುವರ್ಜಿವಹಿಸಿ ಅಂಚೆಗೆ ಹಾಕಲು ಮತ್ತು ನನ್ನ ಪತ್ರಗಳನ್ನು ಜೋಪಾನವಾಗಿ ಅವಳ ಕೈಗೆ ತಲುಪಿಸಲು ತಮ್ಮ ಸುದೀಪ ಆಪ್ತರಕ್ಷಕನಂತೆ ಸಹಕರಿಸುತ್ತಿರುವುದಾಗಿ ಹೆಮ್ಮೆಯಿಂದ ಬರೆದಿದ್ದಳು. ಒಮ್ಮೆಯಂತೂ ಯಾರ ಅಚಾತುರ್ಯವೋ ಗೊತ್ತಿಲ್ಲ ಕವರಿಗೆ ಅಂಚೆಚೀಟಿಯನ್ನು ಅಂಟಿಸುವುದರ ಬದಲು ರೆವಿನ್ಯೂ ಸ್ಟ್ಯಾಂಪ್ ಹಚ್ಚಿದ ಕವರು ನನ್ನ ಕೈಸೇರಿತ್ತು. ನಿರ್ವಾಹವಿಲ್ಲದೆ ಒಂದೆಕ್ಕೆರಡು ದಂಡ ತೆತ್ತು ಪತ್ರವನ್ನು ನನ್ನದಾಗಿಸಿಕೊಂಡಿದ್ದೆ. ದಿನ ತಿಂಗಳುಗಳು ನಾಗಾಲೋಟದಂತೆ ಸರಿಯುತ್ತಿದ್ದವು. ಅವಳ ಪತ್ರಗಳಿಗೆ ಕಾಯುವುದೊಂದನ್ನು ಬಿಟ್ಟು ಬೇರೆ ಯಾವ ಕಡೆಯೂ ನನ್ನ ಲಕ್ಷ್ಯವಿರಲಿಲ್ಲ. ಒಂದೆರಡು ದಿನ ಪತ್ರ ಬರುವುದು ತಡವಾದರೂ ನನಗೆ ಸಹನೆಯಾಗುತ್ತಿರಲಿಲ್ಲ. 

ಹೀಗಿರುತ್ತಿರಲು ಒಂದು ದಿನ ನನಗೊಂದು ಮದುವೆಯ ಆಮಂತ್ರಣ ಪತ್ರ ಬಂತು. ನನಗೆ ಯಾರು ಆಮಂತ್ರಣ ಪತ್ರ ಕಳುಹಿಸಿದ್ದಾರೆ...? ಯಾವ ಕಡೆಯಿಂದ ಎಂದು ಯಾವ ಹೆಚ್ಚಿನ ಆಸಕ್ತಿಯನ್ನು ತೋರದೆ ತೆರೆದು ನೋಡಿದರೆ ಎದೆ ಧಸಕ್ಕೆಂದಿತು. ಅದು ಸುಲತಳ ಮದುವೆಯ ಕರೆಯೋಲೆ. ನಂಬಲಿಕ್ಕೆ ಸಾಧ್ಯವೇ ಆಗಲಿಲ್ಲ. ಮತ್ತೆ ಮತ್ತೆ ನೋಡಿದೆ. ಸಂಶಯವೇ ಇಲ್ಲ. ಅದೇ ಹೆಸರಿನ ಬೇರೆ ಹುಡುಗಿಯಾಗಿರಲಿ ಅಂತ ದೇವರಲ್ಲಿ ಬೇಡುತ್ತ ಮಗದೊಮ್ಮೆ ಓದಿದೆ. ಅವಳ ಹಿರಿಯರ ಹೆಸರುಗಳೆಲ್ಲ ಅಚ್ಚಾಗಿದ್ದರಿಂದ ಮುಂದೆ ಸಂಶಯವೇ ಉಳಿಯಲಿಲ್ಲ. ಈ ಹುಡುಗಿ ಯಾಕೆ ಹೀಗೆ ಮಾಡಿದಳು ಎನ್ನುವುದೇ ನನ್ನ ಮನಸ್ಸಿನಲ್ಲಿ ಅನುಕ್ಷಣ ಪ್ರತಿಧ್ವನಿಸುವ ಪ್ರಶ್ನೆಯಾಯಿತು. ಉತ್ತರಿಸುವವರಾರು? 

ನಮ್ಮ ನಡುವಿನ ಇಷ್ಟು ಸಮಯದ ಗಾಢ ಪ್ರೀತಿಗೆ, ಅನುಬಂಧಕ್ಕೆ ಏನು ಅರ್ಥ? ಅವಳು ನಿಜವಾಗಿಯೂ ನನ್ನನ್ನು ಪ್ರೀತಿಸಿದ್ದಳೇ? ಅವಳು ಬರೆದ ಪತ್ರಗಳೇ ಅದಕ್ಕೆ ಸಾಕ್ಷಿಯಾಗಿವೆಯಲ್ಲ. ಒಂದು ವೇಳೆ ನನಗಿಂತ ಉತ್ತಮ ಸಂಬಂಧ ಬಂದು ಮನೆಯವರ ಒತ್ತಾಯಕ್ಕೇನಾದರೂ ಬಗ್ಗಿಬಿಟ್ಟಳೇ? ಹಾಗಿದ್ದರೆ ಈ ಪತ್ರಗಳು... ಪ್ರೇಮ ಎಲ್ಲ ಏನು? ನನ್ನನ್ನು ಮನಸಾರೆ ಒಪ್ಪಿ ಪ್ರೀತಿಸಿದ ಮೇಲೆ ಅಣ್ಣನೆದುರು ನಿಂತು ತನ್ನ ನಿರ್ಧಾರವನ್ನು ಸ್ಪಷ್ಟ ಮಾತುಗಳಲ್ಲಿ ಹೇಳಬಹುದಿತ್ತಲ್ಲ. ಯಾಕೆ ಹಿಂಜರಿಕೆ? ಕಲಿತವಳು ಇವಳು. ಇವಳಿಗೆ ಅಷ್ಟೂ ಸ್ವಾತಂತ್ರ್ಯವಿದ್ದಿಲ್ಲವೇ? ನನ್ನ ಮೇಲಿನ ಅಪನಂಬಿಕೆ ಏನಾದರು... ಛೆ... ಇರಲಾರದು. ನನ್ನ ತಲೆಯೊಳಗೆ ಸುಂಟರಗಾಳಿಯಂತೆ ಎದ್ದ ನೂರೆಂಟು ಪ್ರಶ್ನೆಗಳು ಉತ್ತರವಿಲ್ಲದೆ ಒದ್ದಾಡಿದವು. ಅಂತಹ ಸಂದರ್ಭದಲ್ಲಿ ಪರಿಸ್ಥಿತಿಯನ್ನು ವಿವರಿಸಿ ನನಗೊಂದು ಪತ್ರ ಬರೆಯಬಹುದಿತ್ತಲ್ಲ. ಅದಕ್ಕೂ ಅಡ್ಡಿಯಾದರೇ ಅಣ್ಣ ತಮ್ಮಂದಿರು? ಪತ್ರದ ಮೂಲಕ ನನಗೊಂದು ವಿಷಯ ತಿಳಿಸಿದ್ದರೆ ಏನಾದರೂ ದಾರಿ ಹುಡುಕಬಹುದಿತ್ತು. ಈಗ ದಾರಿಗಳೆಲ್ಲ ಬಾಗಿಲು ಮುಚ್ಚಿಕೊಂಡಿವೆ. ನನ್ನೊಡನೆ ಪತ್ರದಲ್ಲಿ ಇಷ್ಟು ಸಲುಗೆಯಿಂದ ಇದ್ದವಳಿಗೆ ಈ ಒಂದು ವಿಷಯವನ್ನು ಹೇಳಬೇಕು ಅಂತ ಯಾಕೆ ಅನಿಸಲಿಲ್ಲ. ಅಲ್ಲಿ ಅಪರಾಧಿ ಮನೋಭಾವ ಅವಳನ್ನು ಕಾಡಲಿಲ್ಲವೇ? ಒಟ್ಟಿನಲ್ಲಿ ನನ್ನ ಪ್ರೀತಿಯನ್ನು ಕೇವಲವಾಗಿ ಪರಿಗಣಿಸಿ, ನನ್ನನ್ನು ತೊರೆದು ಯಾವ ಅಳುಕಿಲ್ಲದೆ ಇನ್ನೊಬ್ಬನನ್ನು ಪ್ರೀತಿಸುವ ಅವಳ ನಡೆಯೇಕೋ ನನಗೆ ಜೀರ್ಣೀಸಿಕೊಳ್ಳಲಾಗಲಿಲ್ಲ. 

ಆ ದಿನವೆಲ್ಲ ನನ್ನ ಮನಸ್ಸು ಪ್ರಕ್ಷುಬ್ಧವಾಗಿತ್ತು. ಕೆಲಸದ ಕಡೆ ಆಸಕ್ತಿಯಿರಲಿಲ್ಲ. ಮಂಕಾಗಿದ್ದ ನನ್ನನ್ನು ಗಮನಿಸಿದ ಶಾಖಾ ವ್ಯವಸ್ಥಾಪಕರು `ಏನು ವಿಷಯ? ಕೇಳಿದರು. ಮರೆಮಾಚದೆ ಇದ್ದ ವಿಷಯವನ್ನೆಲ್ಲಾ ಅರುಹಿ ಮದುವೆಯ ಆಮಂತ್ರಣ ಪತ್ರವನ್ನು ಅವರಿಗೆ ತೋರಿಸಿದೆ. ಅವರು ನೋಡಿ ದಂಗಾದರು. 
`ನಿಮಗೆ ಈಗಲೂ ಅವಳನ್ನು ಮದುವೆಯಾಗುವ ಇಚ್ಛೆ ಇದ್ದರೆ ಹೇಳಿ. ಮದುವೆ ನಿಲ್ಲಿಸೋಣ' ಅಂತ ಹೇಳಿದರು.
ನಾನದಕ್ಕೆ ಸಿದ್ಧನಿರಲಿಲ್ಲ. 
`ಒಂದು ಹೆಣ್ಣಿನ ಜೀವನದ ಪ್ರಶ್ನೆ ಸಾರ್. ಬೇಡ. ಅವಳು ನಿಜವಾಗಿಯೂ ಈ ಹುಡುಗನನ್ನು ಒಪ್ಪಿಯೇ ಮದುವೆಗೆ ಸಮ್ಮತಿ ಕೊಟ್ಟಿರಬಹುದು. ಅವನು ನನಗಿಂತ ನೋಡಲು ಸುಂದರನಾಗಿರಬಹುದು. ಮೇಲಾಗಿ ಅವನು ಬ್ಯಾಂಕಿನಲ್ಲಿ ಅಧಿಕಾರಿ ಹುದ್ದೆಯಲ್ಲಿದ್ದಾನೆ. ಅದಕ್ಕೆ ಮನಸೋತಿರಬಹುದು. ಇರಲಿ ಬಿಡಿ ಸಾರ್. ಪತ್ರಗಳ ಮೂಲಕ ನನಗೆ ಪ್ರೀತಿಯ ಅನುಭವವನ್ನು ಧಾರೆಯೆರೆದ ಅವಳ ಜೀವನ ಸುಖಮಯವಾಗಿರಲಿ. ನಾನಿದನ್ನು ಇಲ್ಲಿಯೇ ಮರೆತುಬಿಡುತ್ತೇನೆ...' ಅಂತ ಅವರಿಗೆ ನನ್ನೊಳಗಿನ ನೋವನ್ನು ನುಂಗಿ ಹೇಳಿದೆ. ಅವಳ ಮೇಲಿದ್ದ ನನ್ನೆದೆಯೊಳಗಿನ ಪ್ರೀತಿ ಮಾತ್ರ ಇದಾವುದಕ್ಕೂ ಒಪ್ಪದೆ ರೋಧಿಸುತ್ತಲೇ ಇತ್ತು. 

ನನಗೀಗಲೂ ಒಂದು ಕನಸಿದೆ.... ಅವಳನ್ನು ಒಮ್ಮೆಯಾದರೂ ಕಂಡು ಮಾತನಾಡಬೇಕೆಂದು. 

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

10 thoughts on “ಆರು ತಿಂಗಳು ಹದಿನೆಂಟು ಪತ್ರಗಳು”

  1. Raghavendra Mangalore

    ಸಾವಿನವರೆಗೆ ಜೊತೆಯಾಗಿ ಸಾಗುವ ಸಂಬಂಧದ ನಿರ್ಧಾರ… ಈ ವಾಕ್ಯ ಮನ ಕಲಕಿತು. ಒಳ್ಳೆಯ ಭಾವನಾತ್ಮಕ ಮತ್ತು ಹೃದಯ ತಟ್ಟುವ ಕಥೆ. ಅಭಿನಂದನೆಗಳು.

  2. ಶೇಖರಗೌಡ ವೀ ಸರನಾಡಗೌಡರ್

    ನವಿರು ಪ್ರೇಮ ಕಥೆ ಏಕಾಯೇಕಿ ದುಃಖಾಂತ್ಯದಲ್ಲಿ ಕೊನೆಗೊಂಡಿದ್ದು ಓದುಗರ ಮನಸ್ಸಿಗೆ ನೋವನ್ನುಂಟು ಮಾಡುತ್ತದೆ. ಕಥೆಯ ಓಘ ತುಂಬಾ ಮಧುರವಾಗಿದೆ.
    ಅಭಿನಂದನೆಗಳು.

  3. ಎಸ್ ಆರ್ ಸೊಂಡೂರು ಗಂಗಾವತಿ

    ಒಳ್ಳೆಯ ಕತೆ ಮನಮುಟ್ಟುವಂತೆ ಬರೆದಿದ್ದೀರಿ.
    ಬೇರೆ ಮದವೆಯ ನಿರ್ಧಾರ ಪ್ರಶ್ನೆಯಾಗಿ ಉಳಿಯಿತು. ಬಹುಶಃ ಅವಳ ಇಚ್ಛೆಗೆ ವಿರುದ್ಧವಾಗಿ ಈ ನಿರ್ಧಾರ ಇರಬಹುದು.

    1. ಪಿ. ಜಯರಾಮನ್

      ಕಥೆ ತುಂಬಾ ಚನ್ನಾಗಿದೆ. ಎರಡೂ ಮನೆಯವರು ಒಪ್ಪಿ, ಎರಡೂ ಮನಸುಗಳು ಬೆರೆತ ಮೇಲೂ ಈ ರೀತಿಯ ಬದಲಾವಣೆ ನಿಜಕ್ಕೂ ಮನಸ್ಸಿಗೆ ನೋವನ್ನುಂಟು ಮಾಡಿದೆ. ಕೊನೆಯದಾಗಿ ಅವಳ ಕಂಡು ಮಾತನಾಡುವ ಕನಸು ಕನಸಾಗಿಯೇ ಇರಲಿ.

  4. ಝಾಡೇ HEERALAL

    ✍️✍️. ಕಥೆ ತುಂಬಾ ಚನ್ನಾಗಿದೆ👌👌ಅಭಿನಂದನೆಗಳು🙏🙏

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter