ಮಾಣಿಕ್ಯ ಪ್ರಕಾಶನ ಸಂಸ್ಥೆಯು ಪ್ರತಿ ವರ್ಷದಂತೆ ಪ್ರಸಕ್ತ ಸಾಲಿನಲ್ಲಿ ರಾಜ್ಯ ಹಾಗೂ ಹೊರ ರಾಜ್ಯಗಳ ಸಾಹಿತ್ಯಿಕ ಕ್ಷೇತ್ರದ ವಿವಿಧ ಪ್ರಕಾರಗಳಲ್ಲಿ ಅವಿರತವಾಗಿ ಕಾರ್ಯೋನ್ಮುಖವಾಗಿ ಸಾಧನೆಗೈಯುತ್ತಿರುವ ಎಲೆಮರೆಯ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕಥಾ ಸಂಕಲನಕ್ಕೆ ಕೊಡ ಮಾಡುವ 2023ನೆಯ ಸಾಲಿನ ಪದ್ಮಾವತಿ ವೆಂಕಟೇಶ ದತ್ತಿ ಪುರಸ್ಕಾರಕ್ಕೆ ಅನಿತಾ ಪಿ. ತಾಕೊಡೆಯವರ ನಿವಾಳಿಸಿ ಬಿಟ್ಟ ಕೋಳಿ ಕಥಾ ಸಂಕಲನ ಆಯ್ಕೆಯಾಗಿದೆ. ಸದರಿ ದತ್ತಿ ಪ್ರಶಸ್ತಿಯು ಪ್ರಶಸ್ತಿ ಫಲಕ ಹಾಗೂ ಎರಡು ಸಾವಿರ ರೂಪಾಯಿ ನಗದು ಬಹುಮಾನವನ್ನು ಒಳಗೊಂಡಿದೆ. 2023ರ ಸೆಪ್ಟೆಂಬರ್ 24 ಭಾನುವಾರ ಹಾಸನದ ಸಂಸ್ಕೃತ ಭವನದಲ್ಲಿ ಹಮ್ಮಿಕೊಂಡಿರುವ ಏಳನೆಯ ವರ್ಷದ ರಾಜ್ಯಮಟ್ಟದ ಕವಿ ಕಾವ್ಯ ಸಂಭ್ರಮದಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ಮಾಣಿಕ್ಯ ಪ್ರಕಾಶನ, ಹಾಸನದ ಪ್ರಕಾಶಕರು ದೀಪ ಉಪ್ಪಾರ್ ಹಾಗೂ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬೆಂಗಳೂರು ಇದರ ಸಂಸ್ಥಾಪಕ ಅಧ್ಯಕ್ಷರಾದ ಕೊಟ್ರೇಶ್ ಎಸ್. ಉಪ್ಪಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅನಿತಾ ಪೂಜಾರಿಯವರು ಕವಿಯಾಗಿ, ಲೇಖಕರಾಗಿ, ಕಥೆಗಾರರಾಗಿ ಸಾಹಿತ್ಯ ಕ್ಷೇತ್ರದಲ್ಲಿ ಪರಿಚಿತರಾಗಿದ್ದಾರೆ. ಇವರು ಕೆ.ಎಸ್.ಒ.ಯು. ಮೈಸೂರು ವಿಶ್ವವಿದ್ಯಾಲಯದಲ್ಲಿ ಬಿ.ಎ. ಪದವಿ ಪಡೆದಿದ್ದಾರೆ. ಮುಂಬೈ ವಿಶ್ವವಿದ್ಯಾಲಯದಲ್ಲಿ ಎಂ.ಎ. ಪದವಿಯನ್ನು ಪ್ರಥಮ rank ನೊಂದಿಗೆ ಪಡೆಯುವುದರ ಮೂಲಕ ಎಂ.ಬಿ.ಕುಕ್ಯಾನ್ ಬಂಗಾರದ ಪದಕದ ಅರ್ಹತೆಯನ್ನು ಸಾಧಿಸಿದ್ದಾರೆ. ಇದೀಗ ಮುಂಬಯಿ ವಿಶ್ವವಿದ್ಯಾಲಯದಲ್ಲಿ ಡಾ.ಜಿ. ಎನ್. ಉಪಾಧ್ಯ ಅವರ ಮಾರ್ಗದರ್ಶನದಲ್ಲಿ “ಮುಂಬಯಿ ಬಿಲ್ಲವರು ಸಾಂಸ್ಕೃತಿಕ ಅಧ್ಯಯನ” ಈ ವಿಷಯದ ಕುರಿತು ಪಿಎಚ್.ಡಿ ಅಧ್ಯಯನದಲ್ಲಿ ನಿರತರಾಗಿದ್ದಾರೆ.
ಈಗಾಗಲೇ ಅನಿತಾ ಅವರ ಒಟ್ಟು ಏಳು ಕೃತಿಗಳು ಲೋಕಾರ್ಪಣೆಗೊಂಡಿವೆ. ಇವರ ಕವನ ಸಂಕಲನ “ಅಂತರಂಗದ ಮೃದಂಗ”ದ ಹಸ್ತಪ್ರತಿಗೆ, ಜಗಜ್ಯೋತಿ ಕಲಾವೃಂದ ಮುಂಬೈ ವತಿಯಿಂದ “ಶ್ರೀಮತಿ ಸುಶೀಲಾ ಎಸ್ ಶೆಟ್ಟಿ ಸ್ಮಾರಕ ಕಾವ್ಯ ಪ್ರಶಸ್ತಿ”, “ಜನಸ್ಪಂದನ ಟ್ರಸ್ಟ್(ರಿ) ಸುವ್ವಿ ಪಬ್ಲಿಕೇಷನ್ಸ್, ಶಿಕಾರಿಪುರ” ಕೊಡಮಾಡುವ “ಅಲ್ಲಮ ಸಾಹಿತ್ಯ ಪ್ರಶಸ್ತಿ ಲಭಿಸಿದೆ. ಮೋಹನ ತರಂಗ’ ಈ ಕೃತಿಗೆ 2019-20ನೆಯ ಸಾಲಿನ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಡಮಾಡುವ ನಗದು ಪುರಸ್ಕಾರ ಪ್ರಾಪ್ತಿಯಾಗಿದೆ. ಸಾಹಿತ್ಯ ಕ್ಷೇತ್ರದಲ್ಲಿ ಇವರ ಸಾಧನೆಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಮುಂಬಯಿ ಮತ್ತು ಮಂಗಳೂರು ಆಕಾಶವಾಣಿಯಲ್ಲಿ ಇವರ ಕತೆ, ಭಾವಗೀತೆ ಮತ್ತು ಕವನಗಳು ಪ್ರಸಾರಗೊಂಡಿವೆ. ಇವರು 2019ರಲ್ಲಿ ಮೈಸೂರು ಅರಮನೆಯಲ್ಲಿ ನಡೆದ ವಿಶ್ವವಿಖ್ಯಾತ ದಸರಾ ಕವಿಗೋಷ್ಠಿಯಲ್ಲೂ ಭಾಗವಹಿಸಿ ಗೌರವ ಪುರಸ್ಕಾರವನ್ನು ಪಡೆದಿದ್ದಾರೆ. ಪ್ರಸ್ತುತ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ(ರಿ)ಇದರ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.