” ಎಲ್ಲದಕ್ಕೂ ಬೆಲೆಯಿದೆ! ಯಾವುದನ್ನೂ ನಿರ್ಲಕ್ಷಿಸುವುದು ಬೇಡ “
ಒಂದು ಊರಿನಲ್ಲಿ ಒಬ್ಬ ಕುಂಬಾರನಿದ್ದನು. ಅವನು ಒಮ್ಮೆ ಗಡಿಬಿಡಿಯಿಂದ ಕೆಲಸ ಮಾಡುವಾಗ ಮಡಿಕೆ ತುಂಡಿನ ಮೇಲೆ ಬಿದ್ದು ಅವನ ಹಣೆಗೆ ಏಟಾಯಿತು. ಕುಂಬಾರನು ತಕ್ಕ ವೇಳೆಗೆ ಯೋಗ್ಯ ಉಪಚಾರವನ್ನು ಮಾಡದ್ದರಿಂದ ಅದು ಕೀವಾಗಿ ದೊಡ್ಡ ಗಾಯವಾಯಿತು. ಮುಂದೆ ವೈದ್ಯರ ಉಪಚಾರದಿಂದ ಕಡಿಮೆಯಾಯಿತು. ಆದರೆ ಹಣೆಯ ಮೇಲೆ ದೊಡ್ಡದೊಂದು ಗಾಯದ ಕಲೆ ಉಳಿದು ಬಿಟ್ಟಿತು. ಕೆಲವು ದಿನಗಳ ನಂತರ ಆ ದೇಶದಲ್ಲಿ ದೊಡ್ಡ ಬರಗಾಲ ತಲೆದೋರಿತು. ಮಳೆ ಇಲ್ಲದೆ ಕೆರೆಬಾವಿಗಳೆಲ್ಲ ಬತ್ತಿ ಹೋಗಿದ್ದವು. ನೀರಿಗಾಗಿ ಜನರ ಹಾಹಾಕಾರ ಶುರುವಾಯಿತು. ಅನ್ನಕ್ಕಾಗಿ ಜನರು ಗೋಳಾಡಹತ್ತಿದರು. ಕಡೆಗೆ ಬಹಳಷ್ಟು ಜನರು ತಮ್ಮ ದೇಶವನ್ನು ಬಿಟ್ಟು ಗುಳೇ ಹೊರಟರು. ಕುಂಬಾರನೂ ಕೂಡ ತನ್ನ ಗ್ರಾಮದಿಂದ ಗುಳೇ ಹೊರಟು ಪರ ರಾಜ್ಯಕ್ಕೆ ಬಂದನು .ಅಲ್ಲಿ ಅರಸನಿಗೆ ಭೇಟಿಯಾದನು. ಇವನ ಹಣೆ ಮೇಲಿನ ಗಾಯದ ಗುರುತನ್ನು ಕಂಡ ರಾಜನು ಇವನೊಬ್ಬ ಮಹಾವೀರನಾಗಿರಬಹುದು ಎಂದು ಊಹಿಸಿಕೊಂಡು ಇವನಿಗೆ ಸೇನೆಯಲ್ಲಿ ಒಂದು ಅಧಿಕಾರವನ್ನು ಕೊಟ್ಟನು. ಕುಂಬಾರನಿಗೆ ಸೇನಾಧಿಕಾರಿಯಾಗಿ ಕೆಲಸ ದೊರೆಯಿತು. ವಿಪುಲವಾದ ಸಂಬಳವು ದೊರೆಯಲು ಪ್ರಾರಂಭವಾಯಿತು. ಆದರೆ ಇವನ ಕೈ ಕೆಳಗೆ ಕೆಲಸ ಮಾಡುವ ಅಧಿಕಾರಿಗಳಿಗೆ ಇವನ ಹೇಡಿತನ ಮೂರ್ಖತನವೂ ಕ್ರಮೇಣವಾಗಿ ಕಂಡುಬರಲಾರಂಭಿಸಿತು . ಆದರೂ ಅವರು ಅರಸನಿಗೆ ಹೆದರಿಕೊಂಡು ಏನನ್ನು ಹೇಳದೆ ಸುಮ್ಮನಿದ್ದರು. ಒಮ್ಮೆ ರಾಜ್ಯದ ಮೇಲೆ ಶತ್ರುಗಳು ಮುತ್ತಿಗೆ ಹಾಕಿದರು . ಈ ಸುದ್ದಿಯನ್ನು ಕೇಳಿದ ಅರಸನು ತನ್ನ ಚತುರಂಗ ಬಲವನ್ನು ಸಜ್ಜು ಮಾಡ ಹತ್ತಿದನು. ಆ ಸಮಯಕ್ಕೆ ರಾಜನು ಸೇನಾಧಿಕಾರಿ ಕುಂಬಾರನನ್ನು ಕರೆದು " ಅಯ್ಯಾ ವೀರ ಶಿರೋಮಣಿ ರಣರಂಗದಲ್ಲಿ ನಿನ್ನ ವೀರತ್ವವನ್ನು ತೋರಿಸುವ ಕಾಲ ಸಮೀಪಿಸಿದೆ "ಎಂದನು. ದಂಡಾಳುಗಳ ಗಡಿಬಿಡಿಯನ್ನು ಶಸ್ತ್ರಾಸ್ತ್ರಗಳ ಸಂಗ್ರಹವನ್ನು ನೋಡಿಯೇ ಭಯಭೀತನಾಗಿದ್ದ ಕುಂಬಾರನು ಮರಣಭೀತಿಯಿಂದ ಕಂಗಾಲಾದನು. ಅದೇ ದಿನ ರಾತ್ರಿ ತನ್ನ ಗ್ರಾಮಕ್ಕೆ ಓಡಿ ಹೋಗಬೇಕೆಂದು ಆಲೋಚಿಸಿದನು. ಆದರೆ ಎಲ್ಲಿದ್ದರೂ ಒಂದಿಲ್ಲ ಒಂದು ದಿನ ರಾಜನ ಭಟರು ಸೆರೆಹಿಡಿಯುತ್ತಾರೆನ್ನುವ ಭರವಸೆಯಿಂದ ಕಳವಳಗೊಂಡನು.ಕೊನೆಗೂ ಅರಸನ ಮುಂದೆ ಧೈರ್ಯ ಮಾಡಿ ನಿಜಸ್ಥಿತಿಯನ್ನು ಅರುಹಿದನು. ರಣವಾರ್ತೆಯಿಂದ ವ್ಯಗ್ರನಾಗಿದ್ದ ಅರಸನಿಗೆ ಈ ಸುದ್ದಿಯನ್ನು ಕೇಳಿ ಸಿಟ್ಟು ನೆತ್ತಿಗೇರಿತು. ಕುಂಬಾರನಿಗೆ ಶಿಕ್ಷೆಯಾಯಿತು. ಸ್ನೇಹಿತರೆ , ಇಲ್ಲಿ ತಿಳಿದುಬರುವುದೇನೆಂದರೆ ಸುಳ್ಳಿನ ಆಯಸ್ಸು ತೀರ ಕಡಿಮೆ ಹಾಗೂ ನಿರ್ಲಕ್ಷ್ಯ ತನದಿಂದ ಕೆಲಸಗಳನ್ನು ಮರೆಮಾಚಬಾರದೆಂಬ ವಿಷಯಗಳು. ಕುಂಬಾರನು ಕೆಲವು ದಿನಗಳ ನಂತರವಾದರೂ ಸತ್ಯವನ್ನು ರಾಜನ ಮುಂದೆ ಅರುಹಬೇಕಾಗಿತ್ತು. ಆದರೆ ದುಡ್ಡಿನ ಲಾಲಸೆಯಿಂದ ಹಾಗೆ ಮಾಡಲಿಲ್ಲ. ಅವನಲ್ಲಿಯ ಮೂಢತನ ಎಲ್ಲಿ ಹೋಗಿತ್ತು? 'ಹಣ ಎಂದರೆ ಹೆಣವೂ ಬಾಯ್ಬಿಡುತ್ತದೆ' ಅನ್ನುವ ಹಾಗೆ ಅನಾಯಾಸವಾಗಿ ದುಡ್ಡು ಗಳಿಸಿದನು. ಕೆಲಸದಲ್ಲಿ ನಿರ್ಲಕ್ಷ್ಯ ತೋರಿದನು. ಮುಂದೆ ಕಷ್ಟದಲ್ಲಿ ಸಿಲುಕಿಕೊಂಡನು. ಏನೋ ಕಷ್ಟಕಾಲದಲ್ಲಿ ಹೊಟ್ಟೆಯ ಪಾಡಿಗೋಸ್ಕರ ಸುಳ್ಳು ಹೇಳಿರಬಹುದು. ಆದರೆ ಮುಂದೆ ಬರಗಾಲ ಹೋದ ಮೇಲೆ ರಾಜನಿಗೆ ನಿಜ ಸಂಗತಿಯನ್ನು ತಿಳಿಸಿದ್ದರೆ ಸಂಕಷ್ಟಕ್ಕೆ ಗುರಿಯಾಗುತ್ತಿರಲಿಲ್ಲ. ಸುಳ್ಳಿನಿಂದ ನಮಗೆ ಲಾಭವಾದರೂ, ಅದು ಆ ಕ್ಷಣಕಷ್ಟೇ! ಮುಂದೆ ಅದರಿಂದ ತೊಂದರೆ ತಪ್ಪಿದ್ದಲ್ಲ ಎನ್ನುವದು ಸರ್ವವಿದಿತ. ಕಾಲ ಎಲ್ಲದಕ್ಕೂ ಬೆಲೆ ಕೇಳುತ್ತದೆ. ನಮ್ಮ ಜವಾಬ್ದಾರಿಯಿಂದ ಸುಲಭವಾಗಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ರಾಜನು ನಿಜಾಂಶ ತಿಳಿಯದೇ ಕುಂಬಾರನಿಗೆ ಸೇನಾಧಿಕಾರಿಯಾಗಿ ನೇಮಿಸಿದ್ದು ನಿರ್ಲಕ್ಷ್ಯತನ, ಪೂರ್ವಾಗ್ರಹ ಪೀಡಿತ ಭಾವನೆಯನ್ನು ತೋರಿಸುತ್ತದೆ . ಇದರಿಂದ ದೇಶದ ರಕ್ಷಣೆಗೆ ನಷ್ಟ ಉಂಟಾಯಿತು. ಸೇನಾಬಲ ತುಸು ಕುಸಿದಿತ್ತು. ತನ್ನ ಕೆಲಸಕ್ಕೆ ನ್ಯಾಯವನ್ನು ಒದಗಿಸಿ ದೇಶ ರಕ್ಷಣೆಗಾಗಿ ಯಥಾಶಕ್ತಿ ದುಡಿಯದೇ, ಕೇವಲ ಸಂಬಳದ ಆಸೆಗಾಗಿ ಕೆಲಸವನ್ನು ಒಪ್ಪಿಕೊಂಡದ್ದು ಕುಂಬಾರನನ್ನು ಅಧೋಗತಿಗೆ ನೂಕಿತು. ಯಾವ ಕೆಲಸವನ್ನೂ ಅಲಕ್ಷ್ಯ ಮಾಡಬಾರದು. ನಾವು ಆಡುವ ಮಾತುಗಳಿಗೆ,ಮಾಡುವ ಕಾರ್ಯಗಳಿಗೆ, ಯೋಚಿಸುವ ರೀತಿಗಳಿಗೆ...ಮುಂತಾದ ಎಲ್ಲದಕ್ಕೂ ಅದರದೇ ಆದ ಲೆಕ್ಕವಿದೆ ಬೆಲೆಯಿದೆ. ದಾರ್ಶನಿಕರಾದ ಡಿ.ವಿ.ಜಿ.ಅವರ ಒಂದು ಕಗ್ಗವು ಎರಡು ವಿಧವಾದ ಲೆಕ್ಕಾಚಾರದ ಕುರಿತು ಹೀಗೆ ಹೇಳುತ್ತದೆ. ಎರಡುತೆರ ಮೌಲ್ಯಂಗಳೆಲ್ಲಕಂ ಲೋಕದಲ್ಲಿ / ಪರಮಾರ್ಥಕೊಂದು, ಸಾಂಪ್ರತದರ್ಥಕೊಂದು// ಪರಿಕಿಸೆರಡಂ ನೀನು; ಹೊರಬೆಲೆಯ ಗುಣಿಪಂದು/ಮರೆಯಬೇಡೊಳಬೆಲೆಯ - ಮಂಕುತಿಮ್ಮ// ಪ್ರಪಂಚದಲ್ಲಿ ನಾವು ಮಾಡುವ ಕೆಲಸಗಳಿಗೆ ಎರಡು ವಿಧವಾದ ಬೆಲೆಗಳಿವೆ .ಒಂದು ಲೌಕಿಕಕ್ಕೆ ಸಂಬಂಧಿಸಿದ್ದು. ಮತ್ತೊಂದು ಪಾರಮಾರ್ಥಿಕಕ್ಕೆ ಸಂಬಂಧಿಸಿರುವುದು. ಒಂದು ತನಗೆ ಮತ್ತು ತನ್ನವರಿಗೋಸ್ಕರ ಮಾಡುವ ಕೆಲಸಗಳು ಮತ್ತೊಂದು ಲೋಕ ಸಂಗ್ರಹಕ್ಕಾಗಿ ಮಾಡುವ ಕೆಲಸಗಳು ಹೊರ ಜಗತ್ತಿನಲ್ಲಿ ಮಾಡುವ ಕೆಲಸಗಳಿಗೆ ದೊರಕುವ ಲಾಭಗಳನ್ನು ಲೆಕ್ಕ ಹಾಕುವಾಗ ಒಳಗಿರುವ ವಸ್ತುವಿಗೆ ಸಲ್ಲಿಸಬೇಕಾಗಿರುವುದನ್ನು ಮರೆಯಬಾರದು. ಅಂದರೆ ಆತ್ಮಸಾಕ್ಷಿಯನ್ನು ಮರೆಯಬಾರದು. ಎರಡೂ ಕೆಲಸಗಳನ್ನು ಸರಿಯಾಗಿ ಅವಲೋಕಿಸುತ್ತಾ ಮುನ್ನಡೆದಾಗಲೇ ಜೀವನ ಸಾರ್ಥಕವಾಗುವುದು. * ವಿಭಾ ಪುರೋಹಿತ
2 thoughts on “ನೀತಿ ಪ್ರತೀತಿ -ವಿಭಾ ಪುರೋಹಿತ ಅಂಕಣl “ಎಲ್ಲದಕ್ಕೂ ಬೆಲೆಯಿದೆ!””
ತುಂಬಾ ಚಂಧ ಬರೆಹ.ಅಭಿನಂದನೆಗಳು
Very nice and meaningful