ಹೆಂಗರುಳು

                                

“ಯಲ್ಲಾಪುರವೇ ಲಾಯ್ಕಪ್ಪದು ಅಜ್ಜಿ, ನಿಂಗಳ ಮನೆ ಉದಾಸೀನಾವುತ್ತು ಎನಗೆ” ಎಂದು ತೊದಲುತ್ತಲೇ ನುಡಿದ ಮೂರು ವರ್ಷದ ಕೂಸು ಅನಘಾಳ ಮಾತಿಗೆ ಅಚ್ಚರಿಯ ನಗು ಬೀರಿದಳು ರಮ್ಯಾ. ಸಭೆ ಸಮಾರಂಭ ಎಂದೋ, ನೆಂಟರಿಷ್ಟರ ಮನೆ ಎಂದೋ ಬಿಡಾರ ಹೂಡಿದಾಗೆಲ್ಲಾ ತನ್ನ ಸೀರೆಯ ಸೆರಗು ಹಿಡಿದು “ಅಮ್ಮ, ಅಜ್ಜಿ ಮನೆಗೆ ಯಾವಾಗ ಹೋಪದು. ಬೇಗ ಹೆರಡೂ, ಎನಗೆ ಉದಾಸೀನಾವುತ್ತು ಇಲ್ಲಿ.” ಎಂದು ತನಗೆ ಜೋತು ಬೀಳುತ್ತಿದ್ದ ಮಗಳು ಇದೇ ಅನಘ ಅಲ್ಲವೇ? ಎಂದನಿಸದೇ ಇರಲಿಲ್ಲ ರಮ್ಯಾಳಿಗೆ. ಅಷ್ಟಕ್ಕೇ ಸುಮ್ಮನಾಗದ ಅನಘಾಳ ಸಂಭಾಷಣೆ ಮತ್ತೆ ಮುಂದುವರೆದಿತ್ತು ಅಜ್ಜಿ ಯಮುನಾಳೊಂದಿಗೆ. “ನಿಂಗೊಂತ್ತಿಲ್ಲೆ ಅಜ್ಜಿ, ಅಲ್ಲಿ ಯಾರಿದ್ದವು ಹೇಳು? ನಿಂಗೊ ಇಪ್ಪಲೆ ಇದ್ದಿ, . ಆದ್ರೆ ನಿಂಗೋಗೂ ಕೆಲಸ ಇರ್ತು ಅಲ್ದಾ? ಅಮ್ಮಂದೆ ಅಷ್ಟೇ ಬೆಳಗಾಯೆಕ್ಕರೆ ಎನ್ನನ್ನೂ ಎಬ್ಬಿಸಿಕೊಂಡು ಗಡಿಬಿಡಿಲಿ ಆ ಕೆಲಸ, ಈ ಕೆಲಸ ಹೇಳಿ ಮಾಡಿಕೊಂಡು ಬಣ್ಣ ಬಣ್ಣದ ಸೀರೆಗೆ ಒಂದಿಷ್ಟು ಪಿನ್ ಕುತ್ತಿಕೊಂಡು ಹೆರಡ್ತು ಶಾಲೆಗೆ. ಮತ್ತೆ ಅಮ್ಮ ಹೊತ್ತೋಪಗಲೇ ಬಪ್ಪದು. ಅಷ್ಟರವರೆಗೆ ಆನೊಬ್ಬನೇ. ಮತ್ತೆ ಅಮ್ಮ ಬಪ್ಪಗ ಎನಗೂ ಬಚ್ಚಿರ್ತು. ಎಂತದೂ ಆಡುಲಾವುತ್ತಿಲ್ಲೆ. ಅಮ್ಮಂದೆ ಅಷ್ಟೇ ಬೇಗ ಊಟ ಉಣ್ಸಿಕ್ಕಿ ಮಲಗ್ಸುತ್ತು..ಆದ್ರೆ ಇಲ್ಲಿ ಹಾಂಗಲ್ಲನ್ನೇ, ಅಮ್ಮ ಎಲ್ಲಿಗೂ ಹೋವುತ್ತಿಲ್ಲೆ. ಎನ್ನೊಟ್ಟಿಂಗೇ ಇರ್ತು. ಹಾಂ! ಪೂರ್ತಿ ದಿನ. ಎಷ್ಟು ಚಂದ ಅಲ್ದಾ?” ಎಂದು ತನ್ನ ವರದಿ ಒಪ್ಪಿಸುವ ಕಾರ್ಯಕ್ಕೆ ಮಗಳು ಅನಘ ಲಘು ವಿರಾಮ ಹಾಕಿದಾಗಲೇ ರಮ್ಯಾಳ ಗಮನ ಫೋನ್‍ನತ್ತ ಸಂಪೂರ್ಣವಾಗಿ ಹರಿದದ್ದು. “ಸಾಕು ಕೊಡೇ, ಅಬ್ಬಾ ನಿನ್ನ ಪಟ್ಟಾಂಗವೇ?” ಎಂದು ಹುಸಿ ಮುನಿಸಿನಿಂದ ಗದರುತ್ತಲೇ ಫೋನ್‍ನನ್ನು ಕಿವಿಗೇರಿಸಿಕೊಂಡಳು ರಮ್ಯ. “ಎಂತ ಅಮ್ಮ, ಸೌಖ್ಯ ಅಲ್ಲದಾ?” ಉಭಯಕುಶಲೋಪರಿ ವಿಚಾರಿಸಿದಾಗಲೇ ಯಮುನಾ ವಸ್ತು ಸ್ಥಿತಿಗೆ ಮರಳಿದ್ದು.

“ಹೂ ಕಣೇ ಎಂಗ ಸೌಖ್ಯವೇ. ನೀ ಆರಾಮ ಅಲ್ದಾ? ಎಂತದೇ ಅದು ಕೂಸಿನ ರಾಗ ಹೊಸ್ತಿದ್ದು? ಹೊಸ ವಾತಾವರಣ, ಹೊಂದುತ್ತಾ ಅದಕ್ಕೆ ? ಮತ್ತೆ ರವಿ ಕೆಲಸಕ್ಕೆ ಹೋಗಿರೆಕ್ಕು ಅಲ್ದಾ?” ಪ್ರಶ್ನಾರ್ಥಕ ನೆಲೆಯಲ್ಲಿ ವಿಚಾರಿಸಿದ ಮಾತಾದರೂ ಅಲ್ಲಿದ್ದದ್ದು ಅಪಾರ ಕಳಕಳಿಯ ನುಡಿಗಳೇ ಎಂಬುದು ರಮ್ಯಾಳ ಗಮನಕ್ಕೂ ಬಂದಿತ್ತು. “ಅಯ್ಯೋ ಹಾಂಗೆಂತ ಇಲ್ಲೆ ಅಮ್ಮ, ಈ ಕೂಸಿಂದು ರಜಾ ಜಸ್ತಿಯೇ ಆಯಿದು ತಲೆಹರಟೆ. ನಿಂಗೊಗೆ ಗೊಂತಿದ್ದು ಅಲ್ದಾ? ಇವು ಒಟ್ಟಿಂಗಿದ್ದರೆ ಮುಗುತ್ತು ಇದಕ್ಕೆ, ದೂರುಲೆ ಮಣೆ ಹಾಕಿ ಕೊಟ್ಟ ಹಾಂಗೆಯೇ. ಒಂದು ವಾರ ಆದ್ದಷ್ಟೇ ಅಲ್ದಾ ಇಲ್ಲಿಗೆ ಬಂದು, ಹೊಂದಿಕೊಳ್ತಾ ಇದ್ದೆ. ಎನಗಿಂತ ಅನಘನೇ ಪೂರ್ತಿ ಹೊಂದಿಕೊಂಡ ಹಾಂಗಿದ್ದು ಅಲ್ದಾ ಮಾತು ಕೇಳುವಾಗ.” ಎಂದು ರಮ್ಯ ಉತ್ತರಿಸಿದಳಾದರೂ ಕೂಡ ಅವಳಿಗೂ ಗೊತ್ತಿತ್ತು ತನ್ನ ಕೂಸಿನ ಈ ಬಗೆಯ ಅಪರಿಮಿತವಾದ ಸಂಭ್ರಮಕ್ಕೆ ಕಾರಣ ತನ್ನಯ ಇರುವಿಕೆಯೇ ಎಂದು. “ಸರಿ ರಮ್ಯ, ಜೋಪಾನ ಆತಾ. ಹೊಸ ಊರು, ಹೊಸ ಜನಂಗ ಜಾಗ್ರತೆಲಿ ಇರಿ ರಜಾ ದಿನ, ಎಲ್ಲಾ ಒಂದು ಹಂತಕ್ಕೆ ಬಂದು ಗುರ್ತು-ಪರಿಚಯ ಎಲ್ಲಾ ಸರಿಯಪ್ಪನ್ನಾರಷ್ಟೇ. ಆಮೇಲೆ ಎಲ್ಲವೂ ಮೊದಲಿನ ಹಾಂಗೆ ಆವುತ್ತು.” ಎಂದು ಉಪದೇಶವಿತ್ತು ಯಮುನಾ ಫೋನ್ ಕಟ್ ಮಾಡಿ ವಿರಮಿಸಿದಳಾದರೂ ಕೂಡ ರಮ್ಯಾಳ ಮನ ಏನನ್ನೋ ಮೆಲುಕು ಹಾಕುವ ಪ್ರಯತ್ನದಲ್ಲಿತ್ತು.

ಮದುವೆಯಾಗಿ ವರುಷ ಎರಡು ಕಳೆಯುವ ಹೊತ್ತಿಗಾಗಲೇ ತನ್ನ ಮಡಿಲು ತುಂಬಿದ್ದ ಅನಘಾ ರಮ್ಯಾಳ ಉಸಿರಿಗೆ ನವಬಗೆಯ ಚೈತನ್ಯವನ್ನು ತುಂಬಿದ್ದಳೆಂದರೆ ಅದು ಅತಿಶಯೋಕ್ತಿಯಾಗಲಾರದು. ಆಗಷ್ಟೇ ವರ್ಗಾವಣೆ ನಿಮಿತ್ತ ಪರ ಊರಿಗೆ ಹೋಗಿದ್ದ ರವಿಯ ಬಿಡಾರಕ್ಕೆ ಮಗಳ ಸಮೇತ ಬಂದಿದ್ದಳು ರಮ್ಯ. ಹೇಗೂ ಪರೀಕ್ಷೆಗಳ ಗೌಜಿ ಮುಗಿದು, ಆಗಷ್ಟೇ ಬೇಸಿಗೆ ರಜೆ ಶುರುವಾದ ಹಿನ್ನಲೆಯಲ್ಲಿ ರಮ್ಯಾಳಿಗೂ ಪತಿಯಿರುವ ಊರಿಗೊಮ್ಮೆ ಭೇಟಿಯಿತ್ತು ಬರುವ ಸಂದರ್ಭ ತಾನಾಗಿಯೇ ಬಂದಿತ್ತು. ಈ ಹಿನ್ನಲೆಯಲ್ಲಿ ಅನಘಾಳ ಖುಷಿ ಕೂಡ ಮಿತಿಮೀರಿ ತಾಯಿ ಜೊತಿಗಿರುವ ಸಂಭ್ರಮದಲ್ಲಿ ಮತ್ತಷ್ಟು ತರಲೆ ಕೆಲಸಗಳಿಗೆ ಅವಳನ್ನು ತೊಡಗಿಸುವಂತೆ ಮಾಡಿತ್ತು. ಹಾಯಾಗಿ ಕುಳಿತು ತನ್ನದೇ ಲೋಕದಲ್ಲಿ ಮಗ್ನಳಾಗಿ ಆಟವಾಡುತ್ತಿದ್ದ ಮಗಳನ್ನು ಆನಂದ ಭಾವದಿಂದ ನೋಡುತ್ತಲೇ ರಮ್ಯಾಳ ನೆನಪು ಹಿಂದಕ್ಕೋಡಿತು.

ಮಸ್ತಕದ ಪುಟಗಳಲ್ಲಿ ಬೆಚ್ಚಗೆ ಪವಡಿಸಿದ್ದ ನೆನಪಿನಾನುಭವಗಳ ಗುಚ್ಛ ಅರಳತೊಡಗಿತು.
ರಮ್ಯಾಳ ಮಡಿಲು ತುಂಬುವ ದಿನಗಳು ಅರಳುತ್ತಿದ್ದಂತೆ ಪತಿ ರವಿಪ್ರಕಾಶ್‍ನ ಆರೋಗ್ಯದಲ್ಲಾದ ಏರುಪೇರು ರಮ್ಯಾಳ ಮನವನ್ನು ಅತಿಯಾಗಿ ಕದಡಿತ್ತು. ರಮ್ಯ ಎರಡು ತಿಂಗಳ ಗರ್ಭಿಣಿಯಾಗಿದ್ದಾಗ ರವಿಯ ಮೈಮೇಲೆ ಕಾಣಿಸಿಕೊಂಡ ಗುಳ್ಳೆಗಳು ಹಾಗೂ ಪರೀಕ್ಷಾ ನಂತರದ ವರದಿಯ ಪ್ರಕಾರ ಅವು ಪರಸ್ಪರ ಸಂಪರ್ಕದಲ್ಲಿರುವವರಿಗೆ ಹರಡುವಂತಹದ್ದು ಎಂಬ ಮಾಹಿತಿ ಕೇಳುತ್ತಿದ್ದಂತೆಯೇ ಭೂಮಿಗೆ ಕುಸಿದಿದ್ದಳು ರಮ್ಯ. ಹಾಗಾದರೆ ತನ್ನ ಪಾಡೇನು? ಎಂಬ ಪ್ರಶ್ನೆಗೆ ಉತ್ತರವಾಗಿ ಅವಳಲ್ಲೂ ಅಂತಹ ಗುಳ್ಳೆಗಳು ಕಾಣಿಸಲಾರಂಭಿಸಿತು. ಯೋಚಿಸುವಷ್ಟು ವ್ಯವಧಾನವಿಲ್ಲದೆ ತಕ್ಷಣ ತೆರಳಿದ್ದರು ವೈದ್ಯರ ಬಳಿಗೆ. ಕೂಲಂಕುಷವಾಗಿ ಪರೀಕ್ಷಿಸಿದ ಬಳಿಕ ವೈದ್ಯರಿತ್ತ ಸಲಹೆಗೆ ರಮ್ಯ ಅತೀವ ದುಃಖಿತಳಾಗಿದ್ದಳು. ಇಂತಹ ಸ್ಥಿತಿಯಲ್ಲಿ ಹೀಗೊಂದು ಆರೋಗ್ಯದ ಸಮಸ್ಯೆ ಬಂದ ಕಾರಣದಿಂದ ಗರ್ಭದಲ್ಲಿರುವ ಜೀವದ ಬೌದ್ಧಿಕ ಬೆಳವಣಿಗೆಗೆ ಅತಿಯಾಗಿ ಹಾನಿಯಾಗುವ ಸಂಭವವಿದ್ದು, ಅದರ ಭವಿಷ್ಯವನ್ನು ದೂರದೃಷ್ಟಿಯಿಂದ ಗಮನಿಸಿ ನಿರ್ಧಾರವನ್ನು ತೆಗೆದುಕೊಳ್ಳುವುದೇ ಸೂಕ್ತ ಎಂಬುದಾಗಿ ನುಡಿದಾಗ ಅವರ ಮಾತಿನ ಒಳಾರ್ಥವನ್ನು ಅರಿಯದೇ ಇರುವಷ್ಟು ಮೂರ್ಖಳಾಗಿರಲಿಲ್ಲ ರಮ್ಯ.

ಕಣ್ಣರಳಿಸಿ ವೈದ್ಯರೆಡೆಗೆ ದಿಟ್ಟಿಸಿದಾಗ, “ಭವಿಷ್ಯದ ದೃಷ್ಟಿಯಿಂದ ನೋಡುವುದಾದರೆ ಮಗುವನ್ನು ಉಳಿಸಿಕೊಳ್ಳುವಲ್ಲಿ ಯಾವುದೇ ಭರವಸೆಯನ್ನು ನೀಡುವುದು ಖಂಡಿತಾ ಅಸಾಧ್ಯ” ಎಂದು ಖಡಕ್ಕಾಗಿ ಆದೇಶಿಸಿದಾಗ ದಿಗ್ಬ್ರಾಂತಳಾಗಿದ್ದಳು ರಮ್ಯ. ಪಟ್ಟಣಗಳಲ್ಲೆಲ್ಲಾ ಇಂತಹ ವ್ಯವಸ್ಥೆಗಳು ಸರ್ವೇಸಾಮಾನ್ಯ ರೂಪವನ್ನು ಹೊಂದಿತ್ತಾದರೂ ಕೂಡ ರಮ್ಯಾಳ ಭಾವನಾತ್ಮಕ ಮನಸ್ಸು ಇದಕ್ಕೆ ಒಪ್ಪಲಿಲ್ಲ. ಒಂದು ವೇಳೆ ತಾನು ವೈದ್ಯರ ಮಾತಿನಂತೆ ಮುಂದುವರೆಯದೇ ಹೋದರೆ ತನಗೆ ಹುಟ್ಟಲಿರುವ ಮಗುವಿನ ದೈಹಿಕ-ಮಾನಸಿಕ ಸ್ವಾಥ್ಸ್ಯದಲ್ಲಿ ಹೆಚ್ಚು ಕಡಿಮೆ ಉಂಟಾದರೆ ಆ ನ್ಯೂನತೆಯನ್ನು ಸರಿ ಪಡಿಸಲು ತನ್ನಿಂದಾದೀತೇ ಎಂಬ ಪ್ರಶ್ನೆಗಳಲ್ಲಿ ಸಿಲುಕಿ ಚಡಪಡಿಸುತ್ತಿರುವಾಗ ಧೈರ್ಯ ತುಂಬಿದ್ದು ರಮ್ಯಾಳ ತಾಯಿ ಯಮುನಾ. ವೈದ್ಯರ ಸಲಹೆಗೆ ತಕರಾರು ಮಾಡದೇ ಓಗೊಟ್ಟಿದ್ದ ರಮ್ಯಾಳ ನೆಂಟರಿಷ್ಟರು ಕೂಡ ಅಂತೆಯೇ ಕಾರ್ಯೋನ್ಮುಖವಾಗುವುದಕ್ಕೆ ರಮ್ಯಾಳನ್ನು ಒತ್ತಾಯಿಸುತ್ತಿದ್ದದ್ದು ಮಾತ್ರವಲ್ಲದೇ ಅದೇ ಉಚಿತವೆಂದೂ ಸೂಚಿಸಿದ್ದರು ಕೂಡ.

ಈಗಾಗಲೇ ಜಗತ್ತು ಸಾಕಷ್ಟು ಬದಲಾಗಿದ್ದು ಮಾತ್ರವಲ್ಲದೆ ಯಾಂತ್ರಿಕ ಆಲೋಚನೆಗಳೇ ವಿಜೃಂಭಿಸುತ್ತಿದ್ದ ಕಾಲದಲ್ಲಿ ಕೂಡ ಭಾವನಾತ್ಮಕತೆ ಹಾಗೂ ಭಕ್ತಿ ಭಾವಗಳೆಡೆಗೆ ಹೆಚ್ಚಿನ ಮಹತ್ವವನ್ನು ಕೊಡುತ್ತಾ ತನ್ನದೇ ಆದ ತತ್ವಗಳಿಂದ ಕೂಡಿದ ವಿಶಿಷ್ಟ ಬಗೆಯ ಸಂಪ್ರದಾಯದಲ್ಲಿ ಬದುಕುತ್ತಿದ್ದ ಯಮುನಾಳಿಗೆ ಮಗಳ ಬದುಕಿನಲ್ಲಿ ಘಟಿಸಿದ ಘಟನೆ ತೀರಾ ನೋವನ್ನುಂಟು ಮಾಡಿದ್ದು ಮಾತ್ರವಲ್ಲದೇ, ಆ ಕುರಿತು ಸಾಕಷ್ಟು ಚಿಂತಿಸುವಂತೆಯೂ ಮಾಡಿತ್ತು. ಹಿರಿಜೀವವಾದ ಯಮುನಾಳಿಗೆ ಮಗಳ ಕಂಬನಿಯನ್ನು ಒರೆಸುವುದಕ್ಕಿಂತ ಮಿಗಿಲಾದ ಘನ ಕಾರ್ಯ ಸಧ್ಯದ ಪರಿಸ್ಥಿತಿಯಲ್ಲಿ ಬೇರಾವುದೂ ಕಂಡು ಬರಲಿಲ್ಲ. ಮರುಕ್ಷಣವೇ, “ನೋಡು ರಮ್ಯ, ನಾಳೆಗಳ ಕಂಡವು ಆರುದೇ ಇಲ್ಲೆ. ಇಂದು ಕಳದ್ದು ಎನ್ನ ದಿನ ಹೇಳಿ ಇದ್ದುದ್ದರಲ್ಲಿ ನೆಮ್ಮದಿಯ ಕಂಡು ಬದುಕುವ ಸ್ಥಿತಿ ನಿರ್ಮಾಣವಾಯಿದು ಹೇಳುದು ನಿನಗೂ ಗೊಂತಿದ್ದು. ನಿನ್ನಪ್ಪನ ಜೀವನ ಹೇಂಗೆ ಸಾಗಿ ಬೈಂದು ಹೇಳುದು ಮಗಳಾದ ನಿನಗೇ ಗೊಂತ್ತಿದ್ದು. ಆ ಮಾರ್ಗಲ್ಲಿ ನಿಷ್ಠೆಂದಲೇ ಸೇವೆ ಸಲ್ಲಿಸ್ತಾ ಬಂದಿದವು ಹೇಳಿದ ಮೇಲೆ ಆ ದೇವರುಗ ನಿನ್ನ ಕೈಬಿಡ್ತವಾ ಆಲೋಚಿಸು? ವೈಜ್ಞಾನಿಕವಾಗಿ ಯೋಚಿಸಿ ಬದುಕವವಕ್ಕೆ ಎನ್ನ ಮಾತು ಬಾಲಿಶವೇ. ಆದರೆ ದೇವರ ಮೀರಿದ ಶಕ್ತಿ ಪ್ರಪಂಚಲ್ಲಿ ಇದ್ದಾ ರಮ್ಯಾ ? ವೈದ್ಯರೇನೋ ಹೇಳಿದವು ಹೇಳಿ ಹಾಂಗೆ ಮುಂದುವರೆದರೆ ಏನೂ ಅರಿಯದ್ದ ಆ ಕಂದನ ಪಾಡೆಂತ? ಸುಮ್ಮನೆ ಎಂತಕೆ ಅದ್ರ ಉಸಿರಿಂಗೆ ನಂಜಪ್ಪದು, ಇರಲಿ ಬಿಡು ಅದರ ಪಾಡಿಂಗೆ ಅದು ಬೆಳೆದುಕೊಂಡು. ಪ್ರಪಂಚಕ್ಕೆ ಬಪ್ಪ ಸಂದರ್ಭಲ್ಲಿ ಆ ದೇವರೇ ಸಲಹುತ್ತಾ ಹೇಳಿ ಗ್ರಹಿಸಿಕೊಂಡು ದಿನಂಗಳ ಕಳೆ ರಮ್ಯಾ, ಸುಮ್ಮನೆ ಮಗುವಿನ ತೆಗೆಸುವ ಯೋಚನೆಯ ಮಾಡೆಡ. ಎನಗೆ ತಿಳುದ ಹಾಂಗೆ ಹೇಳಿದ್ದೆ. ಇನ್ನು ನಿನ್ನ ಇಷ್ಟ.” ಎಂದು ನುಡಿದವರೇ ರಮ್ಯಾಳ ತಲೆಯನ್ನು ಸವರಿ ತೆರಳಿದ್ದರು.

ದೀರ್ಘ ಆಲೋಚನೆಯ ನಂತರ ಮೌನ ಮುರಿದು ಮಾತನಾಡಿದ್ದ ರಮ್ಯಾ ತನ್ನ ತಾಯಿಯ ಮಾತುಗಳಿಗೆ ಸಹಮತದ ಮುದ್ರೆಯನ್ನೊತ್ತಿದ್ದಳು. ಮನದ ಮೂಲೆಯಲ್ಲಿ ಆಗ್ಗಾಗ್ಗೆ ಕೊರೆಯುತ್ತಿದ್ದ ಭಯದ ಇರಿತವನ್ನು ಕÀಷ್ಟಪಟ್ಟು ಸಹಿಸುತ್ತಿದ್ದಳು ಭಗವಂತನನ್ನು ನಂಬಿ.
ದಿನಗಳು ತುಂಬುತ್ತಿದ್ದಂತೆ ರಮ್ಯಾಳ ಭೀತಿ ಅಧಿಕವೇ ಆಗಿತ್ತಾದರೂ ತಾಯಿಯ ಹರಕೆಗಳು, ಪೂಜೆ – ಪುನಸ್ಕಾರದ ಮಾತುಗಳು ಮನವನ್ನು ಸಮಸ್ಥಿತಿಯಲ್ಲಿಡಲು ಸಹಕಾರಿಯಾಗಿದ್ದವು. ವೈದ್ಯರ ಅಭಿಪ್ರಾಯದ ನಡುವೆಯೂ ರಮ್ಯ ಸಹಜ ಹೆರಿಗೆಯ ಮೂಲಕವೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಅಚ್ಚರಿ ! ಎಂಬಂತೆ ಮಗು ಆರೋಗ್ಯಕರವಾಗಿಯೇ ಇತ್ತು. ತೂಕದಲ್ಲಿ ಮಾತ್ರ ಕೊಂಚ ಕಡಿಮೆ ಇದ್ದುದರ ಹಿನ್ನಲೆಯಲ್ಲಿ ಮಗುವಿನ ಬಗ್ಗೆ ತುಸು ಹೆಚ್ಚು ಗಮನ ನೀಡಿ ಬೆಳೆಸಬೇಕು ಎಂಬ ವೈದ್ಯರ ಮಾತಿಗೆ ಗೋಣು ಆಡಿಸಿದ್ದ ರಮ್ಯ ತಾಯ್ತನದ ಪರ್ವದಲ್ಲೇ ಭಗವಂತನಿಗೆ ಅನಂತ ಧನ್ಯವಾದಗಳನ್ನು ಅರ್ಪಿಸಿದ್ದಳು. ಅಲ್ಲದೇ ತನ್ನಮ್ಮನೆಡೆಗೆ ಕೃತಜ್ಞತಾ ನೋಟವನ್ನೂ ಹರಿಸಿದ್ದಳು. ದಿನಗಳು ಕಳೆದಂತೆ ಬೆಳೆಯುತ್ತಿದ್ದ ತಮ್ಮ ಕರುಳಕುಡಿಗೆ ‘ಅನಘಾ’ ಎಂದೇ ಹೆಸರಿಟ್ಟರು ರಮ್ಯ-ರವಿ ದಂಪತಿಗಳು. ಸಮಯಕ್ಕೆ ಸರಿಯಾಗಿ ಬೇಕಾದ ಚುಚ್ಚುಮದ್ದುಗಳನ್ನು ಅನಘಾಳಿಗೆ ಕೊಡುತ್ತಿತ್ತಾದರೂ ಕೂಡ ಅನಘಾ ಸೂಕ್ಮಮತಿ ಎಂಬ ವಿಚಾರವನ್ನು ತಾಯಿಯಾದ ರಮ್ಯ ಬಹುಬೇಗನೆ ಅರಿತ್ತಿದ್ದಳು. ಆದರೇನಂತೆ ? ಆರೋಗ್ಯಕರವಾಗಿರುವಾಗ ಅದರ ಚಿಂತೆಯಿಲ್ಲ ಎಂದು ನಿರ್ಧರಿಸಿ ನೆಮ್ಮದಿಯಿಂದಿದ್ದಳು ರಮ್ಯ. ಕೂಸಿಗೆ ಒಂದು ವರ್ಷವಾಗುತ್ತಿದ್ದಂತೆ ವೃತ್ತಿಗೆ ತೆರಳಲು ನಿರ್ಧರಿಸಿದ ರಮ್ಯಾಳಿಗೆ ರವಿಯ ಅನುಮತಿ ಕೂಡ ಸಿಕ್ಕಿತ್ತು. ಮುದ್ದಾದ ಮೊಮ್ಮಗಳನ್ನು ನೋಡಿಕೊಳ್ಳುವ ಕೆಲಸಕ್ಕೆ ಹೇಮಾಳ ಒಪ್ಪಿಗೆ ಕೂಡ ದೊರೆತ ಕಾರಣದಿಂದ ರಮ್ಯ ಒತ್ತಡವಿಲ್ಲದೇ ಕೆಲಸಕ್ಕೆ ಹೋಗಿ ಬರಲು ಶುರುಮಾಡಿದ್ದಳು.


ಪ್ರಶಾಂತವಾದ ಸಾಗರದಲ್ಲಿ ಸಂಭವಿಸುವ ಅಲೆಗಳ ಅತಿಯಾದ ಭೋರ್ಗರೆತದಿಂದ ಸಾಗರದ ಸ್ಥಿತಿ ಹದಗೆಡುವಂತೆ ರಮ್ಯಾಳ ಸಂತಸದ ಜೀವನದಲ್ಲಿ ಕೂಡ ನೋವಿನ ಅಲೆ ಎದ್ದಿತ್ತು. ಸರಳ ಜೀವನದಲ್ಲೇ ತೃಪ್ತಿ ಕಾಣುತ್ತಿದ್ದ ರಮಾನಂದ ರಾಯರು ಇದ್ದಕ್ಕಿದ್ದಂತೆ ಬ್ರೈನ್ ಹ್ಯಾಮರೇಜ್‍ಗೆ ಒಳಪಟ್ಟು, ಕೋಮಾವಸ್ಥೆಯಲ್ಲೇ ಮರಣ ಹೊಂದಿದ್ದರು. ಅಚಾನಕ್ಕಾಗಿ ಎದುರಾದ ಈ ಘಟನೆಯಿಂದ ಚೇತರಿಕೊಳ್ಳುವುದಕ್ಕೆ ರಮ್ಯಾ ಹಾಗೂ ಮನೆಯವರಿಗೆ ಬಹಳಷ್ಟು ಸಮಯ ಹಿಡಿದದ್ದು ಮಾತ್ರವಲ್ಲದೇ ಈ ಆಘಾತದ ನಡುವೆ ಪತಿ ರವಿಗೆ ಉತ್ತರ ಕನ್ನಡದ ಯಲ್ಲಾಪುರಕ್ಕೆ ವರ್ಗಾವಣೆಗೊಂಡುದದರ ವರ್ಗಾವಣಾ ಪತ್ರ ಕೂಡ ಬಂದಾಗಿತ್ತು. ಒಬ್ಬಳೇ ಮಗಳಾದ ರಮ್ಯಾಳಿಗೆ ದ್ವಂದ್ವದ ಪರಿಸ್ಥಿತಿ ನಿರ್ಮಾಣವಾಗಿ ಯಾವುದೊಂದೂ ತೀರ್ಮಾನಕ್ಕೆ ಬರಲಾಗದೇ ಚಡಪಡಿಸುತ್ತಿದ್ದಾಗ ರವಿಯೇ ಮುಂದೆ ಬಂದಿದ್ದ ರಮ್ಯಾಳ ಸ್ಥಿತಿಯನ್ನರಿತು. “ರಮ್ಯಾ ಸರ್ಕಾರಿ ಕೆಲಸ ಹೇಳಿದ ಮೇಲೆ ಇದೆಲ್ಲ ಸಹಜವೇ. ಆನೆಂತದೂ ತಪ್ಪು ತಿಳಿತ್ತಿಲ್ಲೆ. ಕಷ್ಟ ಹೇಳಿಯಾದರೆ ನೀ ಊರಿಲಿಯೇ ಇರು. ಎನ್ನ ಕಡೆಯಿಂದಾಗಲಿ ಅಥವಾ ಮನೆಯ ಕಡೆದಂದಾಗಲಿ ಇದಕ್ಕಾವುದೇ ನಿರ್ಭಂದಯಿಲ್ಲೆ. ಕೂಸು ಬೇರೆ ಸಣ್ಣ ಅಲ್ದಾ? ಮಾವನ ವರ್ಷಾಂತಿಕ ಎಲ್ಲಾ ಮುಗುದ ಮೇಲೆ ಇದ್ರ ಬಗ್ಗೆ ಆಲೋಚನೆ ಮಾಡುವ. ಹೇಂಗೂ ಮನೆಲಿ ಅತ್ತೆ ಒಬ್ಬನೇ ಇಪ್ಪದು ನೀನೂ ಜೊತೆಗಿರು, ನೆಮ್ಮದಿಯಾದ್ರೂ ಸಿಕ್ಕುಗು. ಪ್ರಾಯದವು ಅಲ್ದಾ, ಒಂಟಿತನ ನೆನಪುಗಳ ಕೆದಕಿ ನೋವಿನ ಪುನಃ ಹೆಚ್ಚು ಮಾಡುದು ಬೇಡ ಹೇಳಿ. ಅವರ ಜವಾಬ್ದಾರಿ ಕೂಡ ನಮಗಿದ್ದು ಅಲ್ದಾ? ಯೋಚಿಸು” ಎಂದು ಮನಸಾರೆ ಮನದ ಮಾತುಗಳನ್ನು ಅರುಹಿದಾಗ ರಮ್ಯಾಳಿಗೂ ಮನದ ಭಾರ ಇಳಿದ ಅನುಭವ. ಇಂತಹದೊಂದು ತೀರ್ಮಾನ ರಮ್ಯಾಳ ಮಸ್ತಕದಲ್ಲಿ ಮೂಡಿತ್ತಾದರೂ ಹೇಳಿಕೊಳ್ಳಲಾಗದೇ ಮೌನವಹಿಸಿದ್ದಳಷ್ಟೇ.

ತನ್ನ ಹಾಗೂ ರವಿಯ ಮನಸ್ಸಿನ ಮಾತು ಪರಸ್ಪರ ಒಂದೇ ಆಗಿದೆ ಎಂಬುದನ್ನು ರವಿಯ ಮಾತುಗಳಿಂದಲೇ ಅರಿತ ರಮ್ಯಾ ತುಟಿ ಎರಡು ಮಾಡದೇ ಸಮ್ಮತಿಸಿದ್ದಳು. ರವಿ ವರ್ಗಾವಣೆ ನಿಮಿತ್ತ ತೆರಳುವಾಗ ರಮ್ಯಾಳಿಗೆ ಶಾಲಾ ಪರೀಕ್ಷೆಗಳ ಒತ್ತಡ. ಎಂದಿನಂತೆ ಅನಘಾಳ ಪಾಲನೆ ಪೋಷನೆಯ ಹೊಣೆಯನ್ನು ತಾಯಿ ವಹಿಸಿದ್ದರಿಂದ ರಮ್ಯಾಳಿಗೆ ಆ ಕುರಿತು ಚಿಂತೆಯಿರಲಿಲ್ಲವಾದರೂ ತನ್ನ ಕರುಳುಕುಡಿಯನ್ನು ತಾಯಿಪ್ರೇಮದಿಂದ ದೂರಮಾಡುತ್ತಿದ್ದೇನಲ್ಲಾ ಎಂಬ ಅಪರಾಧಿ ಪ್ರಜ್ಞೆ ಬಿಡದೇ ಕಾಡುತ್ತಿದ್ದದ್ದು ಸುಳ್ಳಲ್ಲ. ಸ್ವಾಭಿಮಾನಿಯಾಗಿದ್ದ ರಮ್ಯಾಳಿಗೆ ಜೀವನ ನಿರ್ವಹಣೆಗೆ ಉದ್ಯೋಗ ಅಗತ್ಯ ಎಂದು ತೋರಿದ ಹಿನ್ನಲೆಯಲ್ಲಿ ಆಕೆ ವೃತ್ತಿ ಬದುಕಿನೊಂದಿಗೆ ಹೊಂದುವುದು ಕೂಡ ಅತ್ಯವಶ್ಯಕವಾಗಿತ್ತು.


ಪರೀಕ್ಷೆಗಳು ಮುಗಿದು ರಜಾದಿನಗಳು ದೊರಕುತ್ತಿದ್ದಂತೆಯೇ ರಮ್ಯ ಮಗಳೊಂದಿಗೆ ಹೊರಟಿದ್ದಳು ಯಲ್ಲಾಪುರಕ್ಕೆ. ಮುಂಜಾನೆ ಆಗುತ್ತಿದ್ದಂತೆ ಎಲ್ಲಿಗೋ ತೆರಳುವಂತೆ ಸಿದ್ಧಳಾಗಿ ತನ್ನನ್ನು ಅಜ್ಜಿಯೊಂದಿಗೆ ಬಿಟ್ಟು ಮತ್ತೆ ಸಂಜೆಯ ಹೊತ್ತಿಗೆ ಬರುತ್ತಿದ್ದ ತನ್ನಮ್ಮನ ವರ್ತನೆ ಅನಘಾಳಿಗೆ ದಿನಕಳೆದಂತೆ ಸಾಮಾನ್ಯ ಎಂದು ತೋರಿತ್ತಾದರೂ ಒಳಗೊಳಗೆ ಅವಳ ಮನ ಅಳುತ್ತಿತ್ತು ಎಂಬ ಸತ್ಯವನ್ನು ಮಾತೃಹೃದಯ ಅರಿಯದೇ ಇದ್ದೀತೇನು ? ಮೂರು ವರ್ಷವಾಗುತ್ತಿದ್ದಂತೆ, ಅಜ್ಜಿಗೆ ಬರುವ ಫೋನ್ ಕರೆಗಳ ನಡುವೆ ಬಂದು. ”ಅಮ್ಮನಾ? ಮಾತಾಡುದು” ಎಂದು ಮಗಳು ವಿಚಾರಿಸುವ ಪರಿಯನ್ನು ತಾಯಿಯ ಮೂಲಕ ಅರಿತ ರಮ್ಯಾಳ ಎದೆಯಲ್ಲಿ ಅವಲಕ್ಕಿ ಕುಟ್ಟಿದ ಭಾಸ. ಆದರೆ ಇದೀಗ ತನ್ನೊಂದಿಗೇ ಇರುತ್ತಿದ್ದ ಅಮ್ಮನ ಒಡನಾಟದ ಸಂತಸದಲ್ಲಿದ್ದ ಅನಘ ತನ್ನ ಅಜ್ಜಿ ಯಮುನಾಳ ಫೋನ್ ಕರೆಗೆ “ಅಜ್ಜಿ, ಯಲ್ಲಾಪುರವೇ ಚಂದ” ಎಂದು ಹೊಸ ಊರನ್ನು ಹೊಗಳುವ ಘನಕಾರ್ಯಕ್ಕೆ ಮುಂದಾದಾಗ ಹುಸಿ ಮುನಿಸಿನಿಂದ ಗದರಿದ್ದಳು ರಮ್ಯ.


“ಅಮ್ಮಾ, ಹಶುವಾವುತ್ತು. ತಿಂಬಲೆ ಕೊಡೂ..” ಎಂದು ಸೀರೆಯ ಸೆರಗನ್ನು ಜಗ್ಗಿ ಕೇಳಿದಾಗಲೆ ನೆನಪುಗಳಲ್ಲಿ ಕಳೆದುಹೋಗಿದ್ದ ರಮ್ಯ ವಾಸ್ತವಕ್ಕೆ ಮರಳಿದ್ದು. ಮಗಳನ್ನು ಅಕ್ಕರೆಯಿಂದೆತ್ತಿ ತುಟಿಗೆ ಹೂಮುತ್ತಿತ್ತ ರಮ್ಯ, “ಕೊಡ್ತೆ..ಬಂಗಾರಿ. ನಿಂಗಲ್ಲದ್ದೆ ಮತ್ತಾರಿಂಗೆ ಕೊಡುದು ಹೇಳು?” ಎಂದು ಮಮತೆಯಿಂದ ಉಸುರಿದಾಗ “ಅಮ್ಮಾ” ಎಂದಪ್ಪಿದಳು ಅನಘ. ಅದು ಅತಿ ಹರ್ಷದ ಲಕ್ಷಣ ಎಂದರಿತ ರಮ್ಯ ಮಗಳ ತಲೆಯನ್ನು ನೇವರಿಸಿ ಮುದ್ದಿಸಿದಳು. “ರಮ್ಯ, ಒಂದ್ಮಾತು ಹೇಳ್ತೆ ಆನು. ಸುಮ್ಮನೆ ಎಂತಕೆ ನೀನು ಹೀಂಗೊಂದು ಕಷ್ಟ ಬಪ್ಪದು? ನೀ ಸ್ವಾಭಿಮಾನಿಯೇ ಹೇಳುದರ ಆನುದೇ ಒಪ್ಪುತ್ತೆ, ಅದು ಎನಗೆ ಇಷ್ಟವುದೇ. ಆದ್ರೆ ನಮ್ಮ ನಮ್ಮೊಳಗೇ ಎಂತಕೆ ಇದೆಲ್ಲಾ? ದೇವರು ಜೀವನಕ್ಕೇನೂ ಕಷ್ಟ ಮಾಡಿದ್ದವಿಲ್ಲೆ ಅಲ್ದಾ? ಬಪ್ಪ ಸಂಬಳಲ್ಲಿ ಖರ್ಚಿನ ಕಳದು ಉಳಿತಾಯ ಮಾಡುದಕ್ಕೆ ಯಾವುದೇ ಅಡ್ಡಿಯಿಲ್ಲೆ. ಮತ್ತೆಂತಕೆ ನೀ ಹೀಂಗೊಂದು ದುಡಿವದು ಹೇಳಿ ಕಾಣ್ತು. ಹಾಂಗೇಳಿ ಇಲ್ಲಿ ಬಂದಿರೆಕ್ಕು ಹೇಳಿ ಅರ್ಥ ಅಲ್ಲ. ಹಾಯಾಗಿ ಮನೆಲಿಪ್ಪಲಾಗದಾ? ಸುಮ್ಮನೆ ಎಂತಕೆ ಕೆಲಸ-ಮನೆ ಹೇಳಿಕೊಂಡು ಎರಡು ದೋಣಿಲಿ ಕಾಲಿಡುದು? ಅದು ಅನಿವಾರ್ಯ ಆಗಿದ್ದರೆ ತೊಂದರೆ ಇತ್ತಿಲ್ಲೆ, ಆದರೆ ಈಗ ಎಂತ ಕಮ್ಮಿ ಆಯಿದು ಹೇಳು? ದೇವರು ತೃಪ್ತಕರ ಬದುಕಿಂಗೆ ಬೇಕಾದ್ದರ ಕೊಟ್ಟಿದ ಹೇಳಿ ಆದ ಮೇಲೆ ಸುಮ್ಮನೆ ಹೆಣಗಾಡುದು ಬೇಡ ಹೇಳುವ ಯೋಚನೆಲಿ ಇಷ್ಟು ಹೇಳಿದ್ದು. ಅತ್ತೆಗೂ ಕಷ್ಟ ಅಲ್ದಾ ಮನೆ ಕೆಲಸದೊಟ್ಟಿಂಗೆ ಕೂಸಿನ ನೋಡಿಕೊಂಬದು? ಬೇಕು ಬೇಕಾದ ಹಾಂಗೆ ತವರಿಂಗೂ, ಅತ್ತೆ ಮನೆಗೂ ಹೋಯಿಕೊಂಡು ಆರಾಮಲ್ಲಿ ಇರು. ಮೊನ್ನೆ ಫೋನ್ ಮಾಡಿಯಪ್ಪಗ ಅಮ್ಮ ಹೇಳಿತ್ತಿದವು, ರಮ್ಯನ ಕಷ್ಟವ ನೋಡುಲಾವುತ್ತಿಲ್ಲೆ. ನೀನಾದರೂ ಪರಿಸ್ಥಿತಿಯ ಸೂಕ್ಷ್ಮಂಗಳ ಅದಕ್ಕೆ ಹೇಳು ಹೇಳಿ .ಯೋಚಿಸು ರಮ್ಯ. ನಿನ್ನ ಖುಷಿಗೋಸ್ಕರವೇ ಹೇಳ್ತಾ ಇದ್ದೆ ಬಿಟ್ಟರೆ ಎನ್ನ ಸ್ವಾರ್ಥ ಇದರಲ್ಲಿ ಎಂತದೂ ಇಲ್ಲೆ. ಎಲ್ಲದ್ದಕ್ಕಿಂತ ಹೆಚ್ಚಾಗಿ ಅನಘಂಗೆ ಭಾರಿ ಖುಷಿ ಅಕ್ಕು. ಆ ಸಂತೋಷವ ದೂರ ಮಾಡುದು ಎಂತಕೆ ಅಲ್ದಾ.?” ಎಂದು ದಿನದ ಹಿಂದೆಯಷ್ಟೇ ರವಿ ನುಡಿದಾಗ ರವಿಯನ್ನೇ ದಿಟ್ಟಿಸಿದ್ದಳು ರಮ್ಯ. ಯಾವ ದೃಷ್ಟಿಕೋನದಿಂದ ನೋಡಿದರೂ ಅಲ್ಲಿ ಸತ್ಯಾಂಶವಿತ್ತು. ಸ್ವಾರ್ಥತೆಯ ಒಂದಿಷ್ಟಾದರೂ ಸುಳಿವು ಅಲ್ಲಿ ನುಸುಳುವುದಕ್ಕೆ ಅವಕಾಶವಿರಲಿಲ್ಲ. ಗಾಢ ಆಲೋಚನೆಯ ಬಳಿಕ ಒಂದು ತೀರ್ಮಾನಕ್ಕೆ ಬಂದ ರಮ್ಯ ಈ ಕುರಿತು ತಿಳಿಸಲೆಂದೆ ತನ್ನ ಅಮ್ಮನಿಗೆ ಕರೆ ಮಾಡಿದ್ದಳು. ಅಷ್ಟರಲ್ಲಿ ಅನಘಾಳೇ ಕರೆ ಸ್ವೀಕರಿಸದ್ದರಿಂದ ರಮ್ಯ ಮೌನಿಯಾಗಬೇಕಾಯಿತು.


ಹಸಿವು ಎಂದು ಕೂಗಿದ್ದ ಅನಘಾಳ ಹೊಟ್ಟೆ ತುಂಬಿಸಿ ಮಲಗಿಸುವ ವೇಳೆಗಾಗಲೇ ಮಧ್ಯಾಹ್ನ ಕಳೆದಿತ್ತು. ಮುಂಜಾನೆಯೇ ಮಾಡಿದ್ದ ಅನ್ನಕ್ಕೊಂದು ಸಾರು ಮಾಡಿ ಊಟ ಮಾಡಿ ಕುಳಿತ ರಮ್ಯಾಳ ಕಣ್ಣು ಹಾಯಾಗಿ ಪವಡಿಸಿದ್ದ ಮಗಳನ್ನೇ ತುಂಬಿಕೊಳ್ಳುತ್ತಿತ್ತು. ತಾನು ಅಪರಾಧಿಯಾದೆನೇ? ಹೀಗೊಂದು ಪ್ರಶ್ನೆಗೆ ಧಸಕ್ಕೆಂದಿತು ಹೃದಯ. ಮತ್ತೆ ಅದನ್ನೇ ಯೋಚಿಸಲಾರದೇ ಕಣ್ಮುಚ್ಚಿ ನಿರಾಳತೆಯನ್ನು ಅರಸಿದಳು ರಮ್ಯ. “ಇಲ್ಲ. ಅದು ಹೀಗೆಲ್ಲಾ ಸಿಗುವಂತದ್ದೇ?” ಎಂದು ತನಗೆ ತಾನೆ ಪ್ರಶ್ನಿಸಿ ಮಲಗಿದ್ದ ಮಗಳತ್ತ ಸಾಗಿದಳು ರಮ್ಯ. ಮಾಡಿನಿಂದ ಒಸರುತ್ತಿದ್ದ ಮಳೆ ಹನಿಗಳ ತಂಪಿಗೆ ಬೆಚ್ಚಗೆ ರಗ್ಗು ಹೊದ್ದು ಮಲಗಿದ್ದ ಮಗಳು ಎಂದಿಗಿಂತ ತುಸು ಹೆಚ್ಚೇ ಮುದ್ದಾಗಿ ಕಂಡಳು ರಮ್ಯಾಳಿಗೆ. ತುಸು ಬಾಗಿ ತನ್ನ ತನುವನ್ನು ಹಾಸಿಗೆಗಿತ್ತ ರಮ್ಯಾಳ ಕೈಗಳು ಮಗಳನ್ನು ಬಳಸಿದ್ದವು. ಕಂದನನ್ನು ಬಿಗುವಾಗಿ ಎದೆಗಪ್ಪಿಕೊಂಡ ರಮ್ಯಾಳೊಳಗಿನ ಮಾತೃಭಾವದ ಪ್ರಜ್ಞೆ ಜಾಗೃತಗೊಂಡಿತು. ಏಳು ಬೀಳುಗಳೊಂದಿಗೆ ಜೀಕುವ ಧಾವಂತದ ಬದುಕಿನಲ್ಲಿ ಬರುವ ಸಹಜ ಖುಷಿಗಳನ್ನು ಕಳೆದುಕೊಳ್ಳುವುದು ಮೂರ್ಖತನವಲ್ಲವೇ ಎಂದನಿಸಿತು ರಮ್ಯಾಳಿಗೆ. ತನ್ನದೇ ಜೀವವಾದ ಜೀವಕ್ಕೆ ಜೀವನದ ಬಹುಪಾಲು ಸುಖವನ್ನು ಮೀಸಲಿರಿಸುವುದರಲ್ಲಿ ಸಿಗುವ ತೃಪ್ತಿಯ ಮುಂದೆ ಭಾವನೆಗಳನ್ನು ಬದಿಗಿರಿಸಿ ಹಣದಲ್ಲಷ್ಟೇ ಜೀಕುವ ಯಾಂತ್ರಿಕ ಬದುಕು ಗೌಣವಾಗಿ ಕಂಡಿತು ರಮ್ಯಾಳಿಗೆ. “ನಿನ್ನ ಖುಷಿಗೋಸ್ಕರವೇ ಹೇಳ್ತಾ ಇಪ್ಪದು. ರಮ್ಯಾ” ಎಂದುಸುರುತ್ತಿದ್ದ ರವಿಯ ಹಸನ್ಮುಖ ಕಣ್ಣಮುಂದೆ ಬಂತು. ಭಾವನಾತ್ಮಕತೆಯ ನಂಟಿನಲ್ಲಿ ಬೆಸೆದ ಸಂಬಂಧಗಳ ಪ್ರೀತಿ ಹಾಗೂ ಅವುಗಳಿಂದ ಮುಂದುವರೆಸಲ್ಪಟ್ಟ ಸುಖ-ಸಂತೋಷಗಳ ಮುಂದೆ ಯಾಂತ್ರಿಕತೆ ವ್ಯರ್ಥ ಎಂಬ ತೀರ್ಮಾನಕ್ಕೆ ಬಂದ ರಮ್ಯ ಆ ನಿಟ್ಟಿನಲ್ಲಿ ಕಾರ್ಯೋನ್ಮುಖಳಾಗುವುದಕ್ಕೆ ಮುಂದಾದಳು. ನಿದ್ದೆಯಲ್ಲೇ ಮಗ್ಗುಲು ಬದಲಾಯಿಸಿದ ಅನಘ ಅಮ್ಮನಿಗೆ ಒತ್ತಿಕೊಂಡು ಗಾಢ ನಿದ್ರೆಗೆ ಜಾರಿದಳು. ಗಿಡಮರಗಳ ಎಲೆಯಿಂದ ತೊಟ್ಟಿಕ್ಕುತ್ತಿದ್ದ ಮಳೆಹನಿಗಳ ಗಾತ್ರ ದೊಡ್ಡದಾಗುತ್ತಾ ಇಳೆಯನ್ನು ಅಪ್ಪಿದವು. ತಾಯ್ತನದ ಸುಖದಲ್ಲೇ ಸಂಪೂರ್ಣ ತೃಪ್ತಿಯನ್ನು ಕಾಣಬಯಸಿದ್ದ ರಮ್ಯಾಳ ಮನಸ್ಸು ಹೂವಿನಷ್ಟು ಹಗುರತನವನ್ನು ಕಂಡದ್ದು ಮಾತ್ರವಲ್ಲದೇ ಸಂತೃಪ್ತತೆಯ ನಗು ಅವಳ ಮೊಗದಲ್ಲಿ ಲಾಸ್ಯವಾಡುತ್ತಿತ್ತು.’ಧೋ’ ಎಂದು ಸುರಿಯುವ ಮಳೆಹನಿಗಳ ಸದ್ದು, ಸುಶ್ರಾವ್ಯವಾಗಿ ಅವಳ ಅಧರಗಳಿಂದ ಹೊಮ್ಮುತ್ತಿದ್ದ ಜೋಗುಳದ ಹಾಡಿಗೆ ಸಾಥ್ ನೀಡುತ್ತಿತ್ತು. ಸಂಧ್ಯೆಯಲ್ಲಿ ದುಡಿದು ದಣಿವಿನಿಂದ ಬರುವ ಇನಿಯನ ಮನಸ್ಸಿಗೊಂದು ಆಹ್ಲಾದಕರ ಸಂಗತಿಯನ್ನು ತಿಳಿಸಬೇಕೆಂಬ ರಮ್ಯಾಳ ಸಂಭ್ರಮ ಅವಳ ಚೆಲುವನ್ನು ಮತ್ತಷ್ಟು ಹೆಚ್ಚಿಸಿದ್ದಷ್ಟೇ ಅಲ್ಲದೇ ಬರಲಿರುವ ನಾಳೆಗಳಲ್ಲಿ ಸಾರ್ಥಕ್ಯ ಭಾವದ ಇರುವಿಕೆಯನ್ನು ಸಾರಿ ಸಾರಿ ಹೇಳುತ್ತಿತ್ತು..

*****

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

2 thoughts on “ಹೆಂಗರುಳು”

  1. ಡಾ. ಸುಭಾಷ್ ಪಟ್ಟಾಜೆ

    ರಮ್ಯಾ ಕೇಂದ್ರ ಪಾತ್ರವಾಗಿರುವ ಈ ಕತೆಯಲ್ಲಿ ಮೂರು ತಲೆಮಾರುಗಳ ಸಂವೇದನೆಗಳು ಮುಖ್ಯವಾಗುತ್ತವೆ. ಬಸುರಾಗಿದ್ದಾಗ ಆಕೆ ಎದುರಿಸುವ ತಲ್ಲಣ, ಸಮಸ್ಯೆ ತಾನಾಗಿ ಪರಿಹಾರವಾಗುವ ರೀತಿಯು ಸಹಜವಾಗಿ ಮೂಡಿ ಬಂದಿದೆ. ಅವಳು ತಾಯ್ತನದ ಕಡೆಗೆ ಮರಳುವುದು ಆಕೆಯ ಸೋಲಲ್ಲ. ಪಕ್ವ ಮನಸ್ಸಿನಿಂದ ಮೂಡಿದ ನಿರ್ಧಾರ.

    ರಮ್ಯಳ ನಿರ್ಧಾರವು ಹಿಮ್ಮುಖ ಚಲನೆಯಂತೆ ಭಾಸವಾಗುವುದಾದರೂ, ಚರ್ಚೆಗೆ ಗ್ರಾಸವಾಗುವ ವಿಷಯವಾದರೂ ಅಕೆಯದ್ದು ಪರಿಪೂರ್ಣತೆಯ ಕಡೆಗಿನ ಚಲನೆ ಎಂಬುದರಲ್ಲಿ ಸಂದೇಹವಿಲ್ಲ. ಕೌಟುಂಬಿಕ ಮೌಲ್ಯಗಳು, ಸಮಷ್ಟಿಯ ಹಿತ ಎಂದು ಹಿಂದೆ ಸರಿಯುತ್ತಿದ್ದು ವ್ಯಕ್ತಿಯ ಸ್ವಾರ್ಥ, ವೈಯಕ್ತಿಕ ಹಿತ ಪರಮ ಲಕ್ಷ್ಯವಾಗಿರುವ ಇತ್ತೀಚಿನ ದಿನಗಳಲ್ಲಿ ಸಹಬಾಳ್ವೆ, ಸಹಜೀವನದ ಆದರ್ಶವನ್ನು ವ್ಯಕ್ತಿ ಹಿತದ ದಮನ ಎಂದೇ ತಿಳಿಯಲಾಗುತ್ತದೆ. ಹೆಣ್ಣೊಬ್ಬಳು ಉದ್ಯೋಗಸ್ಥಳಾಗಿ ಸ್ವಂತ ಅಸ್ತಿತ್ವವನ್ನು ನಿರ್ಮಿಸಬಾರದೇ? ಅದರಿಂದ ದೊರಕುವ ಹಿತ ಮುಖ್ಯವವಲ್ಲವೇ? ಎಂಬ ತರ್ಕ ಬದ್ಧ ಪ್ರಶ್ನೆಗಳು ಏಳುವುದು ಸಹಜ. ಆದರೆ ಮನುಷ್ಯ ಸಂಬಂಧಗಳ ಬಿಸುಪನ್ನು, ಅದು ನೀಡುವ ರಕ್ಷಣೆಯನ್ನು, ಪ್ರೀತಿ ಸೌಹಾರ್ದವನ್ನು ತರ್ಕದ ಮಾತುಗಳಲ್ಲಿ ಅಳೆಯಲು ಸಾಧ್ಯವೇ? ಬದುಕು ಎಂಬುದು ಯಾವ ಕ್ಷಣದಲ್ಲೂ ಅಪ್ಪಳಿಸಬಹುದಾದ ಅದೃಷ್ಟ ದುರದೃಷ್ಟಗಳ ಅಲೆಗಳಿಗೆ ಒಡ್ಡಿಕೊಳ್ಳುವ ವಿದ್ಯಮಾನವಾಗಿರುವುದರಿಂದ ಪರಸ್ಪರ ಹಂಚಿಕೊಳ್ಳುವ ಕ್ಷಣಗಳು ಪ್ರೀತಿ ಮಮತೆಗಳ ಕ್ಷಣಗಳಾಗಿರಬಾರದೇ?

    ಇಲ್ಲಿ ಹೆಣ್ಣಿನ ಬಾಳಿನ ವೈಫಲ್ಯದ, ಶೋಷಣೆಯ ಚಿತ್ರವಿಲ್ಲ. ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿದ ಹೆಣ್ಣು ಉದ್ಯೋಗಕ್ಕೆ ರಾಜೀನಾಮೆಯನ್ನು ಕೊಡಬೇಕಾಗಿ ಬರುವಾಗ ಸಾಮಾನ್ಯವಾಗಿ ಆವರಿಸಿಕೊಳ್ಳುವ ಪ್ರತಿಭಟನೆಯ ಕಲ್ಪನೆಗೆ ಜಾಗವಿಲ್ಲ. ಅದರ ಬದಲಾಗಿ ದೃಢ ನಿರ್ಧಾರ, ವಿವೇಕ, ವಾಸ್ತವ ಪ್ರಜ್ಞೆ ಮತ್ತು ಹೃದಯವಂತಿಕೆಯ ಮೇಲೆ ಒತ್ತು ಇದೆ. ಅಜ್ಜಿ, ಮಗಳು ಮತ್ತು ಮೊಮ್ಮಗಳು ಶಾರೀರಿಕವಾಗಿ ದೂರವಾಗಿದ್ದರೂ ಯಮುನೆಯ ಕಾಳಜಿಯಲ್ಲಿ, ಮಗಳು ರಮ್ಯಾಳ ನಡತೆಯಲ್ಲಿ, ಮೊಮ್ಮಗಳ ಮಾತುಗಳಲ್ಲಿ ಸಂಬಂಧದ ಆಳದ ಅರಿವು ಚೆನ್ನಾಗಿ ಮೂಡಿ ಬಂದಿದೆ.

    ರಮ್ಯಾ ಬಸುರಿಯಾಗಿದ್ದ ಸಂದರ್ಭದಲ್ಲಿ ಆಕೆಯ ಗಂಡ ರವಿಪ್ರಕಾಶನ ಮೂಲಕ ತನ್ನ ದೇಹಕ್ಕೆ ಹರಡಿದ ಗುಳ್ಳೆಗಳು ತನ್ನ ಹೊಟ್ಟೆಯೊಳಗಿನ ಮಗುವಿನ ಶಾರೀರಿಕ ಮಾನಸಿಕ ಆರೋಗ್ಯಕ್ಕೆ ತೊಂದರೆಯನ್ನು ಮಾಡುವ ಸಾಧ್ಯತೆಯು ಇರುವುದರಿಂದ ಗರ್ಭಪಾತವನ್ನು ಮಾಡಿಸುವುದು ಒಳ್ಳೆಯದು ಎಂಬ ಬಂಧು ಬಳಗದ ಸಲಹೆ ಮತ್ತು ಇತರ ಪ್ರತಿಕ್ರಿಯೆಗಳಿಂದಾಗಿ ಗೊಂದಲಕ್ಕೆ ಒಳಗಾಗುತ್ತಾಳೆ. ಮಗುವಿನ ಅಳಿವು ಉಳಿವಿನ ಪ್ರಶ್ನೆಗಳ ನಡುವೆ ಮಾನಸಿಕ ಒತ್ತಡವು ಬಲಿಯುತ್ತಿರುವ ಸಂದರ್ಭದಲ್ಲಿ ರಮ್ಯಾ ತನ್ನನ್ನು ಕಾಡುವ ಸಮಸ್ಯೆ ಮತ್ತು ಸಂದಿಗ್ಧತೆಗಳಿಂದ ಪಾರಾಗಿ, ನೆಮ್ಮದಿಯಿಂದ ಹಡೆದು ಹೊಸ ಹುಟ್ಟನ್ನು ಪಡೆದುಕೊಳ್ಳುವಂತಾಗುವುದು ಮತ್ತೊಬ್ಬ ಹೆಣ್ಣಿನ ಮೂಲಕ ಎನ್ನುವುದು ಅರ್ಥಪೂರ್ಣವಾದ ವಿಚಾರವಾಗಿದೆ. ಆ ಹೆಣ್ಣು ರಮ್ಯಾಳ ತಾಯಿ ಯಮುನೆಯೇ ಆಗಿದ್ದು ಆಕೆಯ ಉಪದೇಶ, ನೀಡಿದ ಧೈರ್ಯದಿಂದಾಗಿ ಸಮಸ್ಯೆಯು ನೀಗಿದೆ ಎಂಬ ಧ್ವನಿಯು ಸಂಬಂಧಗಳ ಭಾವನಾತ್ಮಕ ಬೆಸುಗೆಯನ್ನು ಬಲಪಡಿಸುತ್ತದೆ. ಬಸುರಾಗಿದ್ದ ಸಂದರ್ಭದಲ್ಲಿ ಮತ್ತು ಉದ್ಯೋಗಕ್ಕೆ ರಾಜೀನಾಮೆಯನ್ನು ಕೊಡುವ ಸನ್ನಿವೇಶದಲ್ಲಿ ಆಕೆ ಅನುಭವಿಸುವ ದ್ವಂದ್ವ ಮತ್ತು ಸಂದಿಗ್ಧತೆಗಳು ಇನ್ನಷ್ಟು ಆಳವನ್ನು ಪಡೆಯುವ ಸಾಧ್ಯತೆಗಳು ಇದ್ದವು ಎಂಬುದನ್ನು ಅಲ್ಲಗೆಳೆಯುವಂತಿಲ್ಲ.

    ಇಲ್ಲಿ ಗಂಡನದ್ದು ಪೋಷಕ ಪಾತ್ರ. ಗಂಡು ಹೆಣ್ಣಿನ ಸಂಬಂಧದಲ್ಲಿ ಸಾಮಾನ್ಯವಾಗಿ ತೋರುವ ಸಂಘರ್ಷವಿಲ್ಲ. ಗಂಡು ಹೆಣ್ಣಿನ ಸಂಬಂಧದ ಒಂದು ಒಳ್ಳೆಯ ಮಾದರಿಯು ಇಲ್ಲಿದೆ.

    1. ನಯನ. ಜಿ. ಎಸ್

      ಕಥಾ ಒಡಲಲ್ಲಿ ಅಡಗಿರುವ ಸೂಕ್ಷ್ಮ ಭಾವಗಳು ಹಾಗೂ ಆ ಮೂಲಕ ಕಥೆ ಸಾರಲ್ಪಡುವ ವಿಚಾರಗಳ ಕುರಿತು ಸುದೀರ್ಘವಾಗಿ ವಿಮರ್ಶಿಸಿದ ಬಗೆಯನ್ನು ಓದುವಾಗ ನಿಜಕ್ಕೂ ಒಂದು ರೀತಿಯ ಸಂತೋಷದ ಭಾವ. ಕಾರಣ ಕಥೆಯೊಂದು ಬರೆಯಲ್ಪಡುವುದು ಕಥಾಗಾರರ ಜಾಣ್ಮೆಯಿಂದಲೇ. ಆದರೆ ಅದರ ಯಶಸ್ಸಿರುವುದು ಅದು ಓದುಗರ ಮನವನ್ನು ತಲುಪುವ ಬಗೆಯಿಂದಲೇ. ಬಹುಶಃ ನನ್ನ ಈ ಕಥೆ ಕೂಡ ಅಂತಹದೊಂದು ಯಶಸ್ಸನ್ನು ಪಡೆದಿದೆ ಎಂದು ಭಾವಿಸುತ್ತೇನೆ, ತಮ್ಮಂತಹ‌ ಪ್ರತಿಭಾವಂತ ವಿಮರ್ಶಕರ ವಿಮರ್ಶೆಗೆ ಕಥೆ ಪಾತ್ರವಾಗಿದೆ ಎಂದಾಗ.

      ವಸ್ತು ಸ್ಥಿತಿಯನ್ನು ವಿಚಾರಿಸಿ ನೋಡಿದರೆ ತಾವೇ ಹೇಳಿದಂತೆ ಪ್ರಸ್ತುತ ಕಥೆಯಲ್ಲಿ ರಮ್ಯಾ ತೆಗೆದುಕೊಳ್ಳುವ ನಿರ್ಧಾರ ಎಲ್ಲೋ ಒಂದು ಕಡೆ ಆಕೆಯನ್ನು ಹಿಮ್ಮುಖ ಚಲನೆಗೆ ಚಲಿಸುವಂತೆ ಮಾಡುತ್ತಿದೆ ಎಂದು ಅನ್ನಿಸಿದರೂ ಕೂಡ ಅದು ಆಕೆಯ ಗೆಲುವೇ ಹೌದು. ತಮ್ಮತನವನ್ನು ಬಿಟ್ಟು ಕೊಡದೇ, ತಮ್ಮದೆನಿಸಿಕೊಂಡದುದರ ಕಡೆಗೆ ತೋರುವ ಸ್ವಂತಿಕೆಯ ಭಾವ ಹಾಗೂ ಪ್ರೀತಿಯನ್ನು ಕಂಡಾಗ ಮತ್ತು ಅದರ ಅನುಭಾವಕ್ಕೆ ಬಂದಾಗ ಅದು ನೀಡುವ ಸಂತೋಷವೇ ಬೇರೆ ಮತ್ತು ಭಿನ್ನ. ತಾವೇ ಹೇಳಿದಂತೆ ತರ್ಕ ಮತ್ತು ವಾದಗಳಿಂದ ಅಳೆಯಲು ಸಾಧ್ಯವಿಲ್ಲ.

      ಪುರುಷ ಪ್ರಧಾನ ಸಮಾಜ ಎಂದು ಕರೆಯಲ್ಪಡುವ ಈಗಿನ ಸಮಾಜದಲ್ಲಿ ಪುರುಷನೋರ್ವ ತನ್ನ ಅಸ್ತಿತ್ವದೆಡೆಗೆ ತೋರುವ ಕಾಳಜಿ ಜೊತೆ ಜೊತೆಗೆ ತನ್ನ ಸಂಗಾತಿಯೂ ಕೂಡ ಅಂತಹ ಕಾಳಜಿಗೆ ಬದ್ಧಳೇ ಎಂದು ನಿರ್ಧರಿಸಿ ಆಕೆಯೆಡೆಗೆ ತೋರುವ ಸಹಾನುಭೂತಿಯ ಧೋರಣೆ ನಿಜಕ್ಕೂ ಮೆಚ್ಚತಕ್ಕದ್ದು.

      ಪ್ರತಿಯೊಂದು ಕುಟುಂಬದಲ್ಲೂ ಕೂಡ ಇಂತಹುದೇ ಮನೋಭಾವದ ಜನರಿದ್ದರೆ ಬಹುಶಃ ಸಡಿಲಗೊಳ್ಳುತ್ತಿರುವ ಭಾವನಾತ್ಮಕ ಬೆಸುಗೆಗಳು ಮತ್ತೊಮ್ಮೆ ಬಿಗುಗೊಳ್ಳುವ ಎಲ್ಲಾ ರೀತಿಯ ಸಾಧ್ಯತೆಗಳು ಚಿಗುರಲು ಖಂಡಿತ ಅವಕಾಶವಿದೆ.

      ಕಥಾ ಒಡಲಲ್ಲಿ ವಿಹರಿಸಿ, ತಾವು ನೀಡಿದ ವಿಮರ್ಶೆಯ ಮಾತುಗಳಿಗೆ ಮನತುಂಬಿ ಧನ್ಯವಾದಗಳನ್ನು ಅರ್ಪಿಸುತ್ತೇನೆ ಸುಭಾಷ್ ಅವರೇ.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter