ಗೋಡೆಗೆ ನೇತು ಹಾಕಿದ್ದ ಕ್ಯಾಲೆಂಡರ್ ತೆಗೆದು ಟೀಪಾಯಿ ಮೇಲಿಟ್ಟುಕೊಂಡು ಕನ್ನಡಕ ಕಣ್ಣಿಗೇರಿಸಿಕೊಂಡ ವಿಘ್ನೇಶ. ಡೈನಿಂಗ್ ಕುರ್ಚಿಯ ಮೇಲೆ ಕೂತು ಟೇಬಲ್ಲಿನ ಮೇಲೆ ಹರಡಿಕೊಂಡಿದ್ದ ಹುರುಳೀಕಾಯಿಯ ನಾರು ತೆಗೆಯುತ್ತಿದ್ದ ಶರಾವತಿ ವ್ಯಂಗ್ಯವಾಗಿ ಕೇಳಿದಳು,
“ಯಾವುದಕ್ಕೆ ಮುಹೂರ್ತ ನೋಡ್ತಿದೀರಿ?”
ತೋರುಬೆರಳಿನ ತುದಿಯಿಂದ ಒಂದು ತಾರೀಖನ್ನು ನಿರ್ದೇಶಿಸುತ್ತಾ ಉದ್ಗರಿಸಿದ ವಿಘ್ನೇಶ,
“ಓ, ನಾಳೇನೇ ರಾಮನವಮಿ ಕಣೇ..”
“ಅದಕ್ಕೇನೀಗ?”
“ಈ ಕೊರೊನಾ ದೆಸೆಯಿಂದ ಲಾಕ್‍ಡೌನ್ ಆಗಿ ಯುಗಾದಿ ಹಬ್ಬ ಬಂದಿದ್ದೂ ಗೊತ್ತಾಗ್ಲಿಲ್ಲ, ಹೋಗಿದ್ದೂ ಗೊತ್ತಾಗ್ಲಿಲ್ಲ. ಅಕ್ಕಿ, ಕಡಲೇಬೇಳೆ ಪಾಯಸ ಮಾಡಿ ಆಯ್ತು ಅನ್ನಿಸ್ಬಿಟ್ಟೆ ಹಬ್ಬಾನ..”
“ಮಕ್ಕಳು ಬರೋ ಹಾಗಿಲ್ಲ, ಮೊಮ್ಮಕ್ಕಳು ಬರೋ ಹಾಗಿಲ್ಲ. ಇದ್ದಲ್ಲೇ ಲಾಕ್ ಆಗಿದಾರೆ. ಇರೋ ಇಬ್ರಿಗೆ ಒಬ್ಬಟ್ಟು ತಟ್ಬೇಕಾಗಿತ್ತಾ? ಮಾಡೋ ಕೆಲಸಾನೇ ಏಳೂಹನ್ನೊಂದು. ನಿಮಗೆ ಬಾಯಿ ರುಚಿ ಕೆರಳಿಬಿಡುತ್ತೆ..”
“ಆಯ್ತು ಮಾರಾಯ್ತೀ, ಸುಮ್ನಿರು” ಅಂದ ವಿಘ್ನೇಶ ತಪ್ಪೊಪ್ಪಿಗೆಯ ಧಾಟಿಯಲ್ಲಿ.
ಮಾತಾಡುವ ಹಾಗಿಲ್ಲ, ಮುರಿತುಕೊಂಡು ಬೀಳುತ್ತಾಳೆ ಶರಾವತಿ. ಕೆಲಸ ಜಾಸ್ತಿಯಾಗಿದೆ. ಮನೆಕೆಲಸದವಳಿಗೆ ಸಂಬಳ ಸಹಿತ ರಜಾ ಕೊಟ್ಟು ಕಳಿಸಿಯಾಗಿದೆ. ರಜಾ ಕೊಡದಿದ್ದರೂ ಅವಳು ತೆಗೆದುಕೊಳ್ಳುತ್ತಿದ್ದುದು ಗ್ಯಾರಂಟಿ. ಕೆಲಸದವರೆಲ್ಲಾ ಸಾಮೂಹಿಕವಾಗಿ ರಜಾ ಘೋಷಿಸಿಕೊಂಡಿದ್ದಾರೆ. ಹಾಗಿಲ್ಲದಿದ್ದರೂ ಮನೆಯವರಿಗೆ ಅವರನ್ನು ಒಳಗೆ ಬಿಟ್ಟುಕೊಳ್ಳುವ ಧೈರ್ಯವಿಲ್ಲ. ನಾಕು ಮನೆ ಮೆಟ್ಟಿಲು ಹತ್ತಿ ಇಳಿಯುವವರು ಎಲ್ಲಿಂದಾದರೂ ಬೀಜ ತಂದು ಬಿತ್ತಿಬಿಟ್ಟರೆ? ಟೀವಿ ಹಾಕಿದರೆ ಸಾಕು, ಕೊರೊನಾ, ಕೊರೊನಾ. ಹುಡುಗು ವಯಸ್ಸಲ್ಲಿ ಆಟವಾಡಿಕೊಂಡು ಮುಸ್ಸಂಜೆ ಹೊತ್ತಿಗೆ ಮನೆಗೆ ಬಂದಾಗ ಅಜ್ಜಿ ಹೇಳುತ್ತಿದ್ದುದು ನೆನಪಿದೆ ವಿಘ್ನೇಶನಿಗೆ,
“ಹಿಮ್ಮಡಿ ನೆನೆಯೋ ಹಾಗೆ ಕಾಲು ತೊಳ್ಕೊಂಡು ಬಾರೋ. ಇಲ್ದಿದ್ರೆ ಹಿಮ್ಮಡಿಯಿಂದ ಶನಿ ದೇಹ ಹೊಕ್ಬಿಡ್ತಾನೆ..”
ಶನಿ ಸುಳ್ಳು, ಕೊರೊನಾ ಸತ್ಯ ಅನ್ನುವ ಹಾಗೆ ಯಾವ ಮಾಯದಲ್ಲಿ ಹೆಮ್ಮಾರಿ ಶರೀರ ಹೊಕ್ಕುಬಿಡುತ್ತದೆಯೋ ಎಂದು ಜನ ಹೆದರಿ ಹೋಗಿದ್ದಾರೆ. ‘ಅಣು, ರೇಣು, ತೃಣಕಾಷ್ಠಗಳಲ್ಲಿ’ ಅನ್ನುವ ಹಾಗೆ ಎಲ್ಲಿ ಅಂಟಿಕೊಂಡಿರುತ್ತದೆಯೋ ಪರಮಾತ್ಮ ಬಲ್ಲ. ಹೆಜ್ಜೆಹೆಜ್ಜೆಗೂ ಮುಂಜಾಗ್ರತೆ. ಅದರಲ್ಲೂ ಶರಾವತಿ ಸ್ವಲ್ಪ ಹೆಚ್ಚೇ ಭಯಸ್ಥೆ. ಸೊಳ್ಳೆ ಬಾಯಿಗೆ ಹೋಗುತ್ತದೆ ಎನ್ನುವ ಅರಿವೂ ಇಲ್ಲದೆ ಟೀವಿ ಎದುರು ಬಾಯಿ ಕಳೆದುಕೊಂಡು ಕೂತು ಅಲ್ಲಿ ಹೇಳುವುದನ್ನೆಲ್ಲಾ ಕೇಳಿಸಿಕೊಳ್ಳುತ್ತಾಳೆ. ಮಾತ್ರವಲ್ಲ, ಜೀರ್ಣಿಸಿಕೊಳ್ಳುತ್ತಾಳೆ. ಹದ ಹೇಳಿಕೊಡುವುದರಲ್ಲಿ ಹೆಮ್ಮಕ್ಕಳು ಕಡಿಮೆಯಿಲ್ಲ. ‘ಹಾಗಿರಿ.., ಹೀಗಿರಿ..’ ಎಂದು ದಿನಾ ಫೋನು. ಇಂತಾದ್ದೊಂದು ಕಾಲ ಬರಬಹುದೆಂದು ವಿಘ್ನೇಶ ಇರಲಿ, ಯಾರೂ ಊಹಿಸಿರಲಿಕ್ಕಿಲ್ಲ. ತರಕಾರಿ ತೆಗೆದುಕೊಂಡರೆ ಸೀದಾ ಬಚ್ಚಲುಮನೆಗೆ ರವಾನೆ. ಬೆಚ್ಚಗಿನ ನೀರಿಗೆ ಸೋಡಾಪುಡಿ ಹಾಕಿ ಚೊಕ್ಕವಾಗಿ ತೊಳೆದು ಡೈನಿಂಗ್ ಟೇಬಲ್ ಮೇಲೆ ನೀರೊಣಗಲು ಹರವಿ, ಆಮೇಲೆ ಫ್ರಿಜ್ಜಿಗೆ ಪ್ರವೇಶ. ನಂದಿನಿ ಹಾಲಿನ ಪ್ಯಾಕೆಟ್ಟುಗಳಿಗೆ ಸ್ನಾನ. ಮನೆಗೆ ಸಾಮಾನು ತಂದರೆ ವಾರಗಟ್ಟಲೆ ಹೊರಹೊರಗೇ ಇಟ್ಟು ನಂತರ ಒಳಗೆ ಬರಮಾಡಿಕೊಳ್ಳುವ ಮುನ್ನೆಚ್ಚರಿಕೆ. ಏನು ಮುಟ್ಟಿದರೂ ಸಾಬೂನಿನಿಂದ ಕೈ ತೊಳೆದುಕೊಳ್ಳುವುದರ ಕಡೆ ಧ್ಯಾನ. “ಪೇಪರ್ ಬೇಡವೇ ಬೇಡ” ಎಂದು ಕಟ್ಟುನಿಟ್ಟು ಮಾಡಲು ನೋಡಿದ್ದಳು ಶರಾವತಿ. “ಊಟ ಬೇಕಾದ್ರೂ ಬಿಡ್ತೀನಿ, ಪೇಪರ್ ಬಿಡಲ್ಲ..” ಎಂದು ವಿಘ್ನೇಶ ಬಿಗಿಯಾದ ಮೇಲೆ ಪೇಪರ್ ನಿಲ್ಲಿಸಿರಲಿಲ್ಲ. ಆದರೆ ಪ್ರತಿಯೊಂದು ಪುಟವನ್ನೂ ಒಣಬಟ್ಟೆಯಿಂದ ಉಜ್ಜಿ ವರೆಸಿ ವಿಘ್ನೇಶನಿಗೆ ಹಸ್ತಾಂತರಿಸುತ್ತಿದ್ದಳು ಶರಾವತಿ. “ನಮ್ಮ ಅಜ್ಜಿ ಕೂಡಾ ಇಷ್ಟು ಮಡಿ ಮಾಡ್ತಿರ್ಲಿಲ್ಲ, ಶ್ರಾದ್ಧದ ದಿನ ಬಿಟ್ಟು..” ಲೇವಡಿ ಮಾಡುತ್ತಿದ್ದ ವಿಘ್ನೇಶ.
‘ಕೊರೊನಾ ಮಹಾಮಾರಿ ಸಧ್ಯಕ್ಕೆ ಜಗತ್ತನ್ನು ಬಿಟ್ಟು ತೊಲಗುವುದಿಲ್ಲ. ಅದರೊಡನೆ ಹೊಂದಿಕೊಂಡು ಬಾಳಲು ಕಲಿಯಬೇಕು’ ಎನ್ನುವ ವರದಿ ಕೇಳಿ ವಿಘ್ನೇಶ ಕಂಗಾಲಾಗಿರುವುದು ಹೌದು. ಹಿಡಿದದ್ದು, ಮುಟ್ಟಿದ್ದಕ್ಕೆಲ್ಲಾ ಕೈ ತೊಳಿ, ಕಾಲು ತೊಳಿ ಅಂದರೆ ಎಲ್ಲಿಯವರೆಗೆ? ಮುಖಗವುಸು ಹಾಕಿಕೊಂಡು ಅಗತ್ಯ ಖರೀದಿಗೆ ಹೊರಗೆ ಹೋದರೂ ಗುರುತಿನವರು ಕಂಡರೆ ಕೈಯಾಡಿಸಿ ಕಳಚಿಕೊಳ್ಳುವಷ್ಟು ಮನುಷ್ಯಸಂಬಂಧಗಳು ಹದಗೆಟ್ಟಿವೆ. ಯಾರ ಹತ್ತಿರ ನಿಂತು ಯೋಗಕ್ಷೇಮದ ಎರಡು ಮಾತಾಡುವುದಕ್ಕೂ ಭಯ. ಎಲ್ಲರ ಮೇಲೂ ಅನುಮಾನ. ಈಚೆ ಮನೆಯವರು ಕೆಮ್ಮಿದರೆ ಆಚೆ ಮನೆಯವರು ನೂರಾ ನಾಲ್ಕಕ್ಕೆ ಕಂಪ್ಲೇಂಟ್ ಮಾಡಿದರೆಂದೇ ಲೆಕ್ಕ. ‘ನಡುವೆ ಅಂತರವಿರಲಿ, ನಡುವೆ ಅಂತರವಿರಲಿ..’ ಕೇಳಿ ಕೇಳಿ ಕಿವಿ ದಡ್ಡು ಬಿದ್ದಿದೆ. ಹೆದರುವವರಿಗೆ ಹೆದರಿಕೆ. ಹೆದರದವರಿಗೆ ಯಾವ ಪಿಕೀರೂ ಇಲ್ಲ. ಬಿಂದಾಸಾಗಿ ಬೀದಿ ತಿರುಗಿಕೊಂಡಿರುತ್ತಾರೆ.
ಹೆಂಡತಿಯೊಬ್ಬಳೇ ಮೈಕೈ ಹುಡಿ ಮಾಡಿಕೊಂಡು ಕೆಲಸ ಮಾಡುವುದನ್ನು ನೋಡಿ ನೋಡಿ ವಿಘ್ನೇಶನ ಮನಸ್ಸು ಮೃದುವಾಗಿದ್ದಿದೆ. ಅವನು ಕೆಲಸ ಮಾಡಿಕೊಡಲು ಮುಂದೆ ಬಂದರೆ ಶರಾವತಿಗೆ ಪಥ್ಯವಾಗುವುದಿಲ್ಲ. ‘ಪಾತ್ರೆ ತಿಕ್ಕಿ ಕೊಡ್ಲಾ? ಕಸ ಗುಡಿಸ್ಲಾ?’ ಎಂದು ಅವನು ಕೇಳುವುದು ‘ಬೇಡ’ ಎನ್ನುವ ಉತ್ತರದ ನಿರೀಕ್ಷೆಯಿಂದ ಎಂದು ಶರಾವತಿ ಅರ್ಥೈಸಿಕೊಂಡರೆ ಅದರಲ್ಲಿ ವಿಘ್ನೇಶನ ತಪ್ಪೇನುಂಟಂತೆ? ‘ಅಭ್ಯಾಸವಿಲ್ಲದವರು ಅಗ್ನಿಕಾರ್ಯ ಮಾಡಿದಂತೆ’ ನಾಲ್ಕು ಪಾತ್ರೆಗಳನ್ನು ಗಂಟೆಗಟ್ಟಲೆ ತೊಳೆಯುವುದು, ತರಕಾರಿ ಹೆಚ್ಚಲು ಕೂತರೆ ಊಟದ ಹೊತ್ತಾಗುವವರೆಗೆ ಹೆಚ್ಚುತ್ತಲೇ ಇರುವುದು, ಶರಾವತಿಗೆ ಸೈಸಿಕೊಳ್ಳಲು ಸಾಧ್ಯವಾಗದೆ ಮೈ ಪರಚಿಕೊಳ್ಳುವಂತಾಗುತ್ತದೆ. ಹೀಗಾಗಿ ವಿಘ್ನೇಶನನ್ನು ಹಾಯಾಗಿರಲು ಬಿಟ್ಟುಬಿಟ್ಟಿದ್ದಾಳೆ. ಬಿಡಿ, ಎಲ್ಲರ ಮನೆಯ ದೋಸೆಯೂ ತೂತು.
ಮರುದಿನದ ಬೆಳಗಿನೊಂದಿಗೆ ವಿಘ್ನೇಶನ ನಡವಳಿಕೆಯಲ್ಲಿ ಏನೋ ಚಡಪಡಿಕೆ. ಗೇಟಿನವರೆಗೆ ಹೋಗುತ್ತಾನೆ, ವಾಪಸು ಬರುತ್ತಾನೆ, ಟೀವಿ ಹಾಕುತ್ತಾನೆ, ಮರುಗಳಿಗೆಯಲ್ಲಿ ಮತ್ತೆ ಗೇಟಿನ ಕಡೆಗೆ..
“ಯಾಕೆ ತೊಣಚಿ ಹೊಕ್ಕ ಹಾಗೆ ಆಡ್ತೀರಿ? ಈಗಿನ್ನೂ ನೆಲ ವರೆಸಿದೀನಿ. ಒಣಗೋವರೆಗಾದ್ರೂ ಜಿತವಾಗಿ ಒಂದು ಕಡೆ ಕೂತಿರಿ..” ಸಿಟ್ಟು ಮಾಡಿದಳು ಶರಾವತಿ.
ಘಂಟೆ ಒಂಭತ್ತು. “ಇಂಗಿನ ವಾಸನೆ ಬರ್ತಿದೆ” ಅಂದ ವಿಘ್ನೇಶ, ಲಾಲಾರಸ ನುಂಗಿಕೊಳ್ಳುತ್ತಾ. ಮೊದಲಿಂದ ಅವನಿಗೊಂದು ಖಾಯಿಲೆ. ಬೇಳೆಸಾರಿಗೆ ‘ಚುಂಯ್’ ಎಂದು ಇಂಗಿನ ಒಗ್ಗರಣೆ ಬಿದ್ದು ಮನೆತುಂಬಾ ಇಡುಗಿಕೊಂಡಿತು ಅಂದರೆ ಹಸಿವು ಕೆರಳಿ ಬಿಡುತ್ತಿತ್ತು. ಶರಾವತಿ ಕುಕ್ಕರ್ ಏರಿಸುವುದೇ ನಡುಮಧ್ಯಾಹ್ನ ಆದ ಮೇಲೆ. ಮತ್ತೆಲ್ಲಿಯ ಇಂಗಿನ ವಾಸನೆ? ಈ ಸಲ ಬಾಯಿ ಬಿಟ್ಟು ಕೇಳಿದ ವಿಘ್ನೇಶ,
“ಇಂದ್ರಮ್ಮ ಹುಷಾರಿದಾರಂತನೇ?”
“ಯಾಕೆ, ನಮ್ಮ ಬೀದಿಗೆ ಇನ್ನೂ ಕೊರೊನಾ ಬಡ್ಕೊಂಡಿಲ್ಲ..”
“ಹಂಗಲ್ಲ ಕಣೇ, ನಿನ್ನೇನೇ ಹೇಳ್ಲಿಲ್ವಾ, ರಾಮನವಮಿ ಇವತ್ತು..”
“ಓ..” ಅಂದಳು ಶರಾವತಿ ದೀರ್ಘವಾಗಿ. ಆ ಪ್ರತಿಕ್ರಿಯೆಯಲ್ಲಿ ಅದಿನ್ನೆಷ್ಟು ಗೂಡಾರ್ಥ ಹುದುಗಿತ್ತು ಅಂದರೆ ಪಾಪ, ಹೇಳದೆ ನಿಮಗೆ ಅರ್ಥವಾಗುವುದಾರೂ ಹೇಗೆ? ಅಥವಾ ಅರ್ಥವಾಗಿಬಿಟ್ಟಿದೆಯಾ?
ಇಂದ್ರಮ್ಮನ ಮನೆಯಲ್ಲಿ ರಾಮನವಮಿ ಅಂದರೆ ಭಾರೀ ಗಡದ್ದು. ಮೂರು ರೀತಿಯ ಪಾನಕ. ಲಿಂಬೆಹಣ್ಣು, ಬೇಲದ ಹಣ್ಣು ಮತ್ತು ಬನಾಸ್ಪತ್ರೆ ಹಣ್ಣಿನಿಂದ ತಯಾರಾಗುವಂತವು. ಸೀ ಕುಡಿದ ಬಾಯಿಗೆ ಖಾರದ ಮಸಾಲೆ ಮಜ್ಜಿಗೆ. ಜಿಹ್ವೆಗೆ ಅರಿವಾದರೂ ಆಗದ ಹಾಗೆ ಅದೆಷ್ಟು ಹದವಾಗಿ ಚೂರೇ ಹಸಿಮೆಣಸಿನ ಖಾರ, ಇಂಗು, ಉಪ್ಪು, ಕೊತ್ತಂಬರಿ ಸೊಪ್ಪು ಬೆರೆಸಿರುತ್ತಿದ್ದರು ಅಂದರೆ ಕುಡಿದ ಮೇಲೆ ನಾಲಿಗೆ ಲೊಟ್ಟೆ ಹಾಕುವಷ್ಟು. ಎರಡು ಥರದ ಕೋಸುಂಬರಿ. ಎಳೆಸೌತೆ ಹೆಚ್ಚಿ ಹಾಕಿದ ಕಡಲೇಬೇಳೆ ಕೋಸುಂಬರಿಯ ಜೊತೆ ಹೆಸರುಬೇಳೆ ಕೋಸುಂಬರಿ. ತೆಂಗಿನ ತುರಿ, ಲಿಂಬೆಹಣ್ಣಿಗೆ ಚೌಕಾಶಿ ಮಾಡುತ್ತಿರಲಿಲ್ಲ. ಹಾಗಾಗಿ ಅವುಗಳ ರುಚಿಯೇ ಅದ್ಭುತ. ಬಾಳೆಹಣ್ಣಿನ ಸೀಕರಣೆಯ ಜೊತೆ ತಪ್ಪದೆ ರಾಮನವಮಿಗೆ ತಯಾರಿಸುತ್ತಿದ್ದ ತುಪ್ಪ ಜಿನುಗುವ ಗೋಧಿಹಿಟ್ಟಿನ ಉಂಡೆ. ದ್ರಾಕ್ಷಿ, ಗೋಡಂಬಿಗಳ ಸಮ್ಮಿಲನದ ಸೊಗಸು. ರಾಮನವಮಿಯ ದಿನ ಬೀದಿಯ ನಾಲ್ಕಾರು ಮನೆಗಳ ಮುತ್ತೈದೆಯರನ್ನು ತಪ್ಪದೆ ಅರಿಶಿನ, ಕುಂಕುಮಕ್ಕೆ ಕರೆಯುತ್ತಿದ್ದರು ಇಂದ್ರಮ್ಮ. ಇವರ ಮನೆಗೂ, ಅವರ ಮನೆಗೂ ಮಧ್ಯೆ ನಾಲ್ಕೇ ನಾಲ್ಕು ಮನೆಗಳು. ಅಲ್ಲಿ ಗೇಟಿನಲ್ಲಿ ನಿಂತು ಕರೆದರೂ ಇಲ್ಲಿಗೆ ಕೇಳುವಷ್ಟು ಹತ್ತಿರ. ಇಷ್ಟು ಹೊತ್ತಿಗೆ ಅವರ ಮನೆಯಿಂದ ಆಹ್ವಾನ ಬಂದಿರಬೇಕಿತ್ತು. ಹನ್ನೊಂದು ಗಂಟೆಯ ಹೊತ್ತಿಗೆ ಅವರಲ್ಲಿಗೆ ಹೋಗಿ ಬರುವ ಮಹಿಳಾಮಣಿಗಳ ಸಡಗರದಿಂದ ಬೀದಿ ಕಳೆಗಟ್ಟಬೇಕಿತ್ತು. ‘ಚೆನ್ನಾಗಿರಲ್ಲ, ಗೇಟ್ ಹತ್ರ ನಿಂತ್ಕಂಬೇಡಿ’ ಎಂದು ವಿಘ್ನೇಶ ಶರಾವತಿಯಿಂದ ಬೈಸಿಕೊಳ್ಳುವ ಸಂದರ್ಭವೂ ಇರುತ್ತಿತ್ತು. ಇನ್ನೂ ಇಂದ್ರಮ್ಮನ ಮನೆಯಿಂದ ಕರೆ ಬಂದಿಲ್ಲ ಅಂದ ಮೇಲೆ ‘ಹುಷಾರಿಲ್ವಾ?’ ಎಂದು ವಿಘ್ನೇಶ ಕಾಳಜಿ ತೋರಿಸಿದ್ದರಲ್ಲಿ ಶರಾವತಿ ತಪ್ಪರ್ಥ ಮಾಡಿಕೊಳ್ಳುವುದಕ್ಕೇನಿರಲಿಲ್ಲ. ಅವರ ಮನೆಯ ತಟ್ಟೆಯನ್ನೇ ಕೇಳಿ ಅಲ್ಲಿ ಕೊಟ್ಟಿದ್ದನ್ನೆಲ್ಲಾ ಅದರಲ್ಲಿ ಜೋಡಿಸಿಕೊಂಡು ಮನೆಗೆ ತರುತ್ತಿದ್ದಳು ಶರಾವತಿ. ಸಮಾ ಅರ್ಧರ್ಧ ಪಾಲು ಮಾಡಿ ಮೊದಲ ನೈವೇದ್ಯ ವಿಘ್ನೇಶನಿಗೆ. ಕೋಸುಂಬರಿ ಮೆಲ್ಲುತ್ತಾ, ಪಾನಕ ಸವಿಯುತ್ತಾ ಶಾಭಾಶ್‍ಗಿರಿ ಕೊಡುತ್ತಿದ್ದ ವಿಘ್ನೇಶ,
“ಏನೇ ಅನ್ನು, ಕೆಲವರ ಕೈಗುಣಾನೇ ಹಾಗಿರುತ್ತೆ. ಕೈಯಲ್ಲಿ ಅಮೃತ ಇರುತ್ತೆ..” ಎಂದು ಅವನು ಶುರು ಹಚ್ಚಿದರೆ ಶರಾವತಿಯ ಭ್ರುಕುಟಿಗಳು ಗಂಟಾಗುತ್ತಿದ್ದುವು. “ಇಷ್ಟಿಷ್ಟೇ ತಿಂದ್ರೆ ಎಲ್ಲಾ ರುಚಿಯಾಗಿರುತ್ತೆ..” ಎನ್ನುವ ಕೊಂಕು ಮಾತು ಅವಳ ಬಾಯಿಂದ ಉದುರುತ್ತಿತ್ತು. ‘ಇಷ್ಟಿಷ್ಟೇ..’ ಅನ್ನುವುದು ನೂರಕ್ಕೆ ನೂರು ಸತ್ಯ ಅಲ್ಲ. ಧಾರಾಳವಾಗಿಯೇ ಕೊಟ್ಟಿರುತ್ತಿದ್ದರು ಪುಣ್ಯಾತ್ಗಿತ್ತಿ. ಘಂಟೆ ಹನ್ನೆರಡೂವರೆಯಾದ ಮೇಲೆ ಇನ್ನು ತನ್ನ ನಿರೀಕ್ಷೆಯ ಕರೆ ಬರುವುದಿಲ್ಲ ಎಂದು ವಿಘ್ನೇಶನಿಗೆ ಮನವರಿಕೆಯಾಯ್ತು. ಶರಾವತಿಯ ಬಳಿ ಅಸಮಾಧಾನ ತೋರಿಸಿದ ವಿಘ್ನೇಶ,
“ಲಾಕ್ ಡೌನ್ ಇದ್ರೇನಂತೆ, ಮದುವೇನೇ ಮಾಡ್ತಾರಂತೆ. ನಾಕು ಜನಾನ ಕರೆಯೋ ಪದ್ಧತೀನ ಬಿಟ್ಬಿಡ್ಬೇಕಾಗಿತ್ತಾ? ಯಾವ ಮಹಾ ದೂರ?”
“ಅವರು ಕರೆದ್ರೂ ನಾನು ಹೋಗ್ತಿರ್ಲಿಲ್ಲ..” ಅಂದಳು ಶರಾವತಿ.
“ಯಾಕೆ?”
“ಮಕ್ಕಳು ಹೇಳಿದಾರೆ ಕಣ್ರೀ. ಕರೀಲಿ, ಕರೀದೇ ಇರ್ಲಿ, ಯಾರ ಮನೆಗೂ ಹೋಗೋ ಹಾಗಿಲ್ಲ..”
ವಿಘ್ನೇಶ ಉಗುಳು ನುಂಗಿಕೊಂಡ. ಯಾಕೋ ಗಂಟಲು ಒಣಗಿದಂತಾಯ್ತು.
“ಒಂದು ಲೋಟ ಪಾನಕ ಮಾಡೇ..” ಅಂದ. ಶರಾವತಿ ತಾರಮ್ಮಯ್ಯ ಮಾಡಿದಳು,
“ಲಿಂಬೆಹಣ್ಣು ಖರ್ಚಾಗಿದೆ. ಹೋಗಿ ತಗಂಬಂದ್ರೆ..” ಅಂದಳು. ಎಲ್ಲೋ ಪೋಲೀಸ್ ವಾಹನದ ಸೈರನ್ ಕೇಳಿಸಿದಂತಾಯ್ತು. ವಿಘ್ನೇಶ ತೆರೆದಿದ್ದ ಮುಂಬಾಗಿಲು ಮುಚ್ಚಿದ.
* ವಸುಮತಿ ಉಡುಪ, ಮೈಸೂರು
ಕೊರೊನಾ ಕಾಲದ ‘ರಾಮನವಮಿ ಪುರಾಣ’
ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಿ
ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ
ಫೇಸ್‌ಬುಕ್ ಲಾಗಿನ್ ಬಳಸಿ ಕಮೆಂಟ್ ಮಾಡಿ
ವಸುಮತಿ ಉಡುಪ
ಕಿರು ಪರಿಚಯ
ವಸುಮತಿ ಉಡುಪ, ಮೈಸೂರು, : ವಿವಿಧ ವಾರ ಹಾಗೂ ಮಾಸಪತ್ರಿಕೆಗಳಲ್ಲಿ, ದಿನಪತ್ರಿಕೆಗಳಲ್ಲಿ, ಇನ್ನೂರೈವತ್ತಕ್ಕೂ ಹೆಚ್ಚು ಕತೆಗಳು ಪ್ರಕಟವಾಗಿವೆ. ಹಲವು ಕಿರು ಕಾದಂಬರಿಗಳು, ಕಾದಂಬರಿಗಳು, ಪ್ರಬಂಧಗಳು, ಮಕ್ಕಳ ಸಾಹಿತ್ಯ ಪ್ರಕಟಗೊಂಡಿವೆ. ಕೆಲವು ಕತೆಗಳು ಅನ್ಯಭಾಷೆಗೆ ಅನುವಾದಗೊಂಡಿವೆ. ಕೆಲವು ಕತೆಗಳು ರೇಡಿಯೋ ನಾಟಕಗಳಾಗಿ ಪ್ರಸಾರಗೊಂಡಿವೆ. ಗ್ರೀಕ್ ಪುರಾಣಕತೆಯ ಕಿರು ಪ್ರಸಂಗದಿಂದ ಪ್ರೇರಣೆಗೊಂಡು ಬರೆದ ನಾಟಕ ‘ಮೃಗತೃಷ್ಣಾ’ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ಸತತ ಮೂರು ಬಾರಿ ಪ್ರಥಮ ಬಹುಮಾನ ಪಡೆದಿದೆ. ಮುಂಬೈ ಕರ್ನಾಟಕ ಸಂಘ ಸೇರಿದಂತೆ ಹಲವೆಡೆ ಪ್ರದರ್ಶಿಸಲ್ಪಟ್ಟಿದೆ. ಎಂ.ಕೆ. ಇಂದಿರಾ ಪ್ರಶಸ್ತಿ, ಸೂರ್ಯನಾರಾಯಣ ಚಡಗ ಪ್ರಶಸ್ತಿ, ಸಾಹಿತ್ಯ ಅಕಾಡೆಮಿಯ ದತ್ತಿನಿಧಿ ಬಹುಮಾನ ಸೇರಿದಂತೆ ಹಲವು ಪ್ರಶಸ್ತಿ, ಬಹುಮಾನಗಳು ಲಭ್ಯ.
All Posts
2 thoughts on “ಕೊರೊನಾ ಕಾಲದ ‘ರಾಮನವಮಿ ಪುರಾಣ’”
ಕಥೆ ಲಘುಹಾಸ್ಯ ಬೆರೆತು ಸೊಗಸಾಗಿ ಸಾಗಿದೆ.
ಅಭಿನಂದನೆಗಳು.
ಕಥೆಯಲ್ಲಿ ಪೂರಕ ಹಾಸ್ಯ ಬೆರೆತು ಓದಲು ಇಷ್ಟವಾಯಿತು. ಅಭಿನಂದನೆಗಳು ಮೇಡಂ.