ಬಾನಲ್ಲಿ ಚಂದಿರನು ಉರುಳುರುಳಿ ಬಂದಿಹನು ನಿನ್ನ ಮುಖ ದರ್ಶನದ ಸಲುವಾಗಿ ಗೆಳತಿ ಚುಕ್ಕಿಗಳು ಹೊಳೆ ಹೊಳೆದು ಕಣ್ಮನವ ಸೆಳೆಯುತಿವೆ ಮುಗಿಲಾಲಂಕಾರ ನಿನ್ನ ಸಲುವಾಗಿ ಗೆಳತಿ ಕಣ್ಣ ಕೋಲ್ಮಿಂಚನು ಹಿಡಿಯ ಬಲ್ಲವರುಂಟೆ ಧರಣಿಗೂ ಭಯವಂತೆ ಕಿರಿದಾಗಿ ಗೆಳತಿ ಪಿಸುದನಿಯ ನೀ ನುಡಿಯೆ ಆಲಿಸುವ ನೆಪ ಹೂಡಿ ಗಾಳಿ ಬೀಸಿದೆಯಲ್ಲ ಜೋರಾಗಿ ಗೆಳತಿ ನೀ ನಡೆವ ಹಾದಿಯಲಿ ಹೂವು ಹಾಸಿಗೆ ಹಾಸಿ ಕಾಯುತಿದೆ ಕುಸುಮದಳ ನಿನಗಾಗಿ ಗೆಳತಿ ಮದನ ಸುಮ ಬಾಣವದು ಎಲ್ಲರೆದೆಯನ್ನು ತಾಕಿ ತಾಪ ಹೆಚ್ಚಿದೆಯಂತೆ ಬಿಸಿಯಾಗಿ ಗೆಳತಿ ಸಾಗರದ ಅಲೆ ಉಕ್ಕಿ ತೀರ ತಲುಪಿದೆ ಈಗ ಬಚ್ಚಿಟ್ಟ ಮುತ್ತುಗಳ ಮಳೆಯಾಗಿ ಗೆಳತಿ ನೊಂದ ಪ್ರೇಮಿಯ ಹೃದಯ ಗೆಲುವಾಗುವ ಸಮಯ ನೀ ಬರಲು ಬಾಳ ಬೆಳಕಾಗಿ ಗೆಳತಿ ಸಂಜೆ ಮೆಲ್ಲನೆ ಇಳಿದು ಕೆನ್ನೆ ಸೋಕಲು ತಪಿಸಿ ಸುತ್ತಲಿನ ಜಗವೆಲ್ಲ ಕೆಂಪಾಗಿ ಗೆಳತಿ ಪ್ರೇಮ ಕವಣೆಯ ಬೀಸಿ ಸುಮತಿ ನಸುನಗೆ ಸೂಸಿ ಜಗವೀಗ ಕಾಣುತಿದೆ ಹೊಸದಾಗಿ ಗೆಳತಿ * ಸುಮತಿ ಕೃಷ್ಣಮೂರ್ತಿ
