ಮಿಂಚಿನ ಬಳ್ಳಿ- ವಿಕಾಸ ಹೊಸಮನಿ ಅಂಕಣ l ಕಾರ್ನಾಡರ ‘ಆಡಾಡತ ಆಯುಷ್ಯ’


ಗಿರೀಶ ಕಾರ್ನಾಡ ಭಾರತದ ಮಹತ್ವದ ನಾಟಕಕಾರಲ್ಲೊಬ್ಬರು. ಒಂದು ಡಝನ್ ನಾಟಕಗಳು, ಎರಡು ಲೇಖನ ಸಂಗ್ರಹಗಳು, ಎರಡು ಅನುವಾದಿತ ನಾಟಕಗಳು ಮತ್ತು ಒಂದು ಆತ್ಮಕಥನ ಮಾತ್ರ ಪ್ರಕಟಿಸಿರುವ ಕಾರ್ನಾಡರು ಪಡೆದ ಖ್ಯಾತಿ ಮಾತ್ರ ಅಪಾರ. ‘ತುಘಲಕ್’, ‘ಹಯವದನ’, ‘ಯಯಾತಿ’ ಮತ್ತು ‘ತಲೆದಂಡ’ ನಾಟಕಗಳು ಅವರನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದವು. ಅವರ ಬಹುತೇಕ ನಾಟಕಗಳು ಇಂಗ್ಲಿಷ್ ಸೇರಿದಂತೆ ಹತ್ತು ಹಲವು ಭಾಷೆಗಳಿಗೆ ಅನುವಾದವಾಗಿವೆ. ರಂಗಭೂಮಿ ಮತ್ತು ಸಿನಿಮಾ ರಂಗದಲ್ಲಿ ದೊರೆತ ಯಶಸ್ಸು ಕಾರ್ನಾಡರಿಗೆ ತಾರಾ ವರ್ಚಸ್ಸು ತಂದು ಕೊಟ್ಟಿದೆ.

ಗಿರೀಶ ಕಾರ್ನಾಡರ ‘ಆಡಾಡತ ಆಯುಷ್ಯ’ ಅವರ ಆತ್ಮ-ಕಥೆಗಳನ್ನು ಹೇಳುತ್ತದೆ. ‘ಆಡಾಡತ ಆಯುಷ್ಯ’ದ ಮೊದಲ ಎರಡು ಅಧ್ಯಾಯಗಳಲ್ಲಿ ಕಾರ್ನಾಡರು ತಮ್ಮ ಬಾಲ್ಯದ ಬಗ್ಗೆ ಬರೆದುಕೊಂಡಿದ್ದಾರೆ. ಹಿಂದೊಮ್ಮೆ ಅವರ ತಾಯಿ ಬರೆದಿಟ್ಟ ಅಪೂರ್ಣ ಆತ್ಮಕಥನವೊಂದರ ಕುರಿತು ನೀಡಿರುವ ಮಾಹಿತಿ ತುಂಬ ಕುತೂಹಲಕಾರಿಯಾಗಿದೆ. ಆಗಿನ ಕಾಲದಲ್ಲಿ ವಿಧವಾ ವಿವಾಹವಾದ ಕಾರ್ನಾಡರ ತಂದೆ-ತಾಯಿಗಳ ಧೈರ್ಯ ನಿಜಕ್ಕೂ ಮೆಚ್ಚುವಂತಹದು. ಕರಾವಳಿಯ ಹೆಬ್ಬಾಗಿಲೆಂದೇ ಖ್ಯಾತಿ ಪಡೆದ ಶಿರಸಿ ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ನಗರ. ಕಾರ್ನಾಡರು ತಾವು ಬಾಲ್ಯವನ್ನು ಕಳೆದ ಆರು ದಶಕಗಳ ಹಿಂದಿನ ಶಿರಸಿಯ ಚಿತ್ರಣವನ್ನು ಓದುಗರ ಕಣ್ಣ ಮುಂದೆ ತರುವಂತೆ ನೀಡಿದ್ದಾರೆ.

‘ಧಾರವಾಡ : ಐವತ್ತೊಂದು ಮನೆ’ ಎಂಬ ಅಧ್ಯಾಯದಲ್ಲಿ ಐವತ್ತು ಮತ್ತು ಅರವತ್ತರ ದಶಕದ ಧಾರವಾಡದ ಚಿತ್ರಣವಿದೆ. ಒಂದು ಕಾಲದಲ್ಲಿ ಸಾರಸ್ವತ ಸಮುದಾಯದ ಬಹುತೇಕ ಕುಟುಂಬಗಳು ನೆಲೆಸಿದ್ದ ಸ್ಥಳ ಸಾರಸ್ವತಪುರ. ಈಗ ಅಸಡ್ಡಾಳವಾಗಿ ಬೆಳೆದಿರುವ ಸಾರಸ್ವತಪುರ ರೂಪುಗೊಂಡ ಬಗೆ ಮತ್ತು ಕಾಲಾಂತರದಲ್ಲಿ ಅದು ಬದಲಾಗುತ್ತ ಹೋದ ಕುರಿತು ಕಾರ್ನಾಡರು ಸವಿವರವಾಗಿ ಬರೆದಿದ್ದಾರೆ. ಆಧುನಿಕತೆಯ ಅಬ್ಬರದಲ್ಲಿ ತನ್ನ ಮೂಲ ಸೌಂದರ್ಯ ಕಳೆದುಕೊಂಡ ಸಾರಸ್ವತಪುರದ ಕುರಿತು ಕಾರ್ನಾಡರಿಗೆ ತುಂಬ ವಿಷಾದವಿದೆ

‘ಧಾರವಾಡ : ಕರ್ನಾಟಕ ಕಾಲೇಜು’ ಎಂಬ ದೀರ್ಘ ಅಧ್ಯಾಯದಲ್ಲಿ ಕರ್ನಾಟಕ ಕಾಲೇಜು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದ ಅಂದಿನ ಸಾಹಿತ್ಯಕ ವಾತಾವರಣ ಮತ್ತು ಸಾಹಿತಿಗಳ ಕುರಿತು ಕೆಲವು ಕುತೂಹಲಕಾರಿ ಮಾಹಿತಿಗಳು ದೊರೆಯುತ್ತವೆ. ಆಗ ಧಾರವಾಡಕ್ಕೊಂದು ಅಪೂರ್ವ ಪ್ರಭಾವಳಿಯಿತ್ತು.

ಉತ್ತರ ಕರ್ನಾಟಕಕ್ಕೆ ಹಳೆ ಮೈಸೂರಿನೊಡನೆ ಸಾಂಸ್ಕೃತಿಕ ಸಂಬಂಧವೇ ಇರಲಿಲ್ಲ. ಮೈಸೂರು ಸಂಸ್ಥಾನದಲ್ಲೂ ಉತ್ತರ ಕರ್ನಾಟಕದವರು ಒರಟರು ಎಂಬ ತಾತ್ಸಾರವಿತ್ತು. ಇನ್ನು ದಕ್ಷಿಣ ಕನ್ನಡವಂತೂ ದೂರ. ಹೀಗಾಗಿ ಉತ್ತರ ಕರ್ನಾಟಕಕ್ಕೆ ಧಾರವಾಡವೇ ಸಾಂಸ್ಕೃತಿಕ ರಾಜಧಾನಿಯಾಗಿತ್ತು. ಇಲ್ಲಿ ಹಲವಾರು ಹೆಸರಾಂತ ಶೈಕ್ಷಣಿಕ ಸಂಸ್ಥೆಗಳನ್ನು ಮತ್ತು ಧಾರವಾಡದಲ್ಲಿ ಅಡ್ಡಾಡಿದರೆ ಬೀದಿ ಬೀದಿಯಲ್ಲೂ ಕವಿಗಳು, ಲೇಖಕರು, ಪ್ರಕಾಶಕರು ಎದುರಾಗುತ್ತಾರೆ ಎಂಬ ಐತಿಹ್ಯ ತಕ್ಕ ಮಟ್ಟಿಗೆ ನಿಜವೂ ಆಗಿತ್ತು”.

(ಆಡಾಡತ ಆಯುಷ್ಯ, ಪುಟ ೬೭)

ಉತ್ತರ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಯಾದ ಧಾರವಾಡದ ಪ್ರಮುಖ ಆಕರ್ಷಣೆಯೆಂದರೆ ವರಕವಿ ಬೇಂದ್ರೆ. ಧಾರವಾಡದಲ್ಲಿದ್ದುಕೊಂಡು ಬೇಂದ್ರೆಯವರ ಪ್ರಭಾವದಿಂದ ತಪ್ಪಿಸಿಕೊಳ್ಳುವುದು ಅಸಾಧ್ಯ. ಕಾರ್ನಾಡರು ತಾವು ಕಂಡ ಬೇಂದ್ರೆಯವರ ವ್ಯಕ್ತಿಚಿತ್ರವನ್ನು ಸಾಧ್ಯವಾದಷ್ಟು ಪ್ರಾಮಾಣಿಕವಾಗಿ ಕೊಟ್ಟಿದ್ದಾರೆ

“ಬೇಂದ್ರೆ ಕುಳ್ಳರು. ಯಾವ ಗುಂಪಿನಲ್ಲೂ ಅವರು ತೀರ ಗಿಡ್ಡರಾಗಿರುವುದು ಎದ್ದು ಕಾಣುತ್ತಿತ್ತು. ಬಹುಶಃ ಇದೇ ಕಾರಣಕ್ಕಾಗಿ ಮಾತನಾಡಲಾರಂಭಿಸಿದರೆ ದನಿ ಎತ್ತಿದಾಗ, ತಾರಸ್ವರದಲ್ಲಿ ಮಾತನಾಡಿ, ಸುತ್ತಮುತ್ತಲಿನ ಜನ ತಮ್ಮನ್ನು ದುರ್ಲಕ್ಷಿಸುವುದನ್ನೇ ಅಸಾಧ್ಯಗೊಳಿಸಿಬಿಡುತ್ತಿದ್ದರು. ಮೀಸೆ, ಟೊಪ್ಪಿಗೆ, ಕೊಡೆ, ಧೋತರ, ಕುರುಚಲು ಗಡ್ಡ ಇವೆಲ್ಲ ಅವರನ್ನು ಜಿ. ಬಿ. ಜೋಶಿ ‘ಮಾಸ್ತರರು’ ಎಂದು ಸಂಭೋದಿಸುವುದರ ಅನ್ವರ್ಥತೆಯನ್ನು ಸಮರ್ಥಿಸುತ್ತಿದ್ದವು. ಆದರೆ ಅವರ ಸ್ವರೂಪ ಹೀಗಿದ್ದರೂ ಮುಖದಲ್ಲಿ ಮಾತ್ರ ವಿಲಕ್ಷಣ ಚೈತನ್ಯವಿತ್ತು. ‘ಕಣ್ಣಾನ ಬೆಳಕೇನs ಮಾರ್ಯಾಗಿನ ತುಳುಕೇನ’ ಎಂಬ ಅವರ ಸಾಲುಗಳು ಅವರನ್ನೇ ಬಣ್ಣಿಸುತ್ತಿದ್ದವೆನ್ನಬಹುದು. ಅವರ ಯಾವುದೇ ಛಾಯಾಚಿತ್ರವನ್ನು ನೋಡಿದರೂ ಅವರು ನಿರ್ಭಾವವಾಗಿ ಜಡವಾಗಿ ಇದ್ದದ್ದು ಕಾಣಿಸುವುದೇ ಇಲ್ಲ”.

“ಅವರು ತನ್ನ ಕವಿತೆಯೋದಲಾರಂಭಿಸಿದರೆ ಆ ವಾಚನದಲ್ಲಿ ಇಡಿಯ ದೇಹ ಪಾಲ್ಗೊಳ್ಳುತ್ತಿತ್ತು. ಎಡಗೈಯಲ್ಲಿ ಪುಸ್ತಕ ಹಿಡಿದರೆ ಬಲಗೈಯನ್ನು ಬೀಸುತ್ತ ತೋರಬೆರಳಿನಿಂದ ಕವಿತೆಯ ಮರ್ಮವನ್ನೇ ತಿವಿಯುತ್ತ ನಗುತ್ತ, ಹುಬ್ಬುಗಂಟು ಹಾಕುತ್ತ, ತಲೆಯಲ್ಲಾಡಿಸುತ್ತ ಓದುವ ಅವರ ದನಿಯ ಕಾಂತಿ, ಚೈತನ್ಯ ಶ್ರೋತೃಗಳನ್ನು ರೋಮಾಂಚಿತಗೊಳಿಸಿಬಿಡುತ್ತಿದ್ದವು. ಅಂಥ ಸಮಯದಲ್ಲಿ ೧೯೨೯ರ ಬೆಳಗಾವಿಯ ಸಾಹಿತ್ಯ ಸಮ್ಮೇಳನದಲ್ಲಿ ಅವರು ‘ಹಕ್ಕಿ ಹಾರುತಿದೆ ನೋಡಿದಿರಾ’ ಕವಿತೆ ಓದಿ ಸಭಿಕರಲ್ಲಿ ಉಂಟು ಮಾಡಿದ ಕಲ್ಲೋಲವನ್ನು ಊಹಿಸಬಹುದಾಗಿತ್ತು”.

(ಆಡಾಡತ ಆಯುಷ್ಯ, ಪುಟ ೮೮)

ಕಾರ್ನಾಡರು ತಮ್ಮ ನಿಡುಗಾಲದ ಮಿತ್ರ ಕೃಷ್ಣ ಬಸರೂರು, ಕರ್ನಾಟಕ ಕಾಲೇಜಿನಲ್ಲಿ ಕಲಿಸಿದ ಗುರುಗಳಾದ ಕವಿ ವಿ. ಕೃ. ಗೋಕಾಕ್, ಮೊದಲ ಪ್ರಕಾಶಕರಾದ ಮನೋಹರ ಗ್ರಂಥ ಮಾಲಾ ಮತ್ತು ಅದರ ಅಟ್ಟದಲ್ಲಿ ನಡೆಯುತ್ತಿದ್ದ ಸಾಹಿತ್ಯಕ ಚರ್ಚೆಗಳ ಕುರಿತ ಮಾಹಿತಿ ನೀಡಿದ್ದಾರೆ. ಖ್ಯಾತ ವಿಮರ್ಶಕ ಕೀರ್ತಿನಾಥ ಕುರ್ತಕೋಟಿ, ಅಂತರರಾಷ್ಟ್ರೀಯ ಖ್ಯಾತಿಯ ಲೇಖಕ ಎ. ಕೆ. ರಾಮಾನುಜನ್ ಹಾಗೂ ಅವರಿಗೆ ಅತ್ಯಂತ ಆಪ್ತರಾದ ಪತ್ರಕರ್ತ ವೈಎನ್ಕೆ ಕುರಿತು ಅವರು ವಿಶೇಷ ಸಂಗತಿಗಳನ್ನೇನೂ ಹೇಳಿಲ್ಲ. ಸಾಧಾರಣವಾಗಿ ಎಲ್ಲರಿಗೂ ಗೊತ್ತಿರುವ ಸಾಮಾನ್ಯ ಸಂಗತಿಗಳೇ ಇವೆ.

ಕಾರ್ನಾಡರು ‘ಯಯಾತಿ’, ‘ತುಘಲಕ್’ ಮತ್ತು ‘ಹಯವದನ’ದಂತಹ ನಾಟಕಗಳನ್ನು ತುಂಬ ಚಿಕ್ಕ ವಯಸ್ಸಿನಲ್ಲಿಯೇ ಬರೆದರು. ಸುದೈವವಶಾತ್ ಅವರಿಗೆ ಕುರ್ತಕೋಟಿಯವರಂತಹ ಸಹೃದಯ ವಿಮರ್ಶಕರು ಮತ್ತು ಜಿ. ಬಿ. ಜೋಶಿಯವರಂತಹ ಪ್ರಕಾಶಕರು ದೊರೆತರು. ಕಾರ್ನಾಡರ ಕನ್ನಡವನ್ನು ಆಮೂಲಗ್ರವಾಗಿ ತಿದ್ದಿ ಅವರನ್ನು ಉತ್ತಮ ನಾಟಕಕಾರರನ್ನಾಗಿ ರೂಪಿಸಿದವರು ಕುರ್ತಕೋಟಿಯವರು. ಕಾರ್ನಾಡರು ಉತ್ತಮ ನಾಟಕಕಾರರಾಗಿ ಖ್ಯಾತಿ ಪಡೆಯುವಲ್ಲಿ ವಿಮರ್ಶಕ ಕುರ್ತಕೋಟಿಯವರ ಕೊಡುಗೆ ಗಮನಾರ್ಹ.

ಮುಂಬಯಿ, ಆಕ್ಸಫರ್ಡ್ ಮತ್ತು ಮದ್ರಾಸ್ ಎಂಬ ಅಧ್ಯಾಯಗಳು ತುಂಬ ರಸವತ್ತಾಗಿವೆ. ಕಾರ್ನಾಡರು ತಾವು ಆಕ್ಸಫರ್ಡಿನಲ್ಲಿ ಕಳೆದ ವರ್ಷಗಳಲ್ಲಿ ಪಡೆದ ಅನುಭವಗಳ ಬಗ್ಗೆ ನಿಸ್ಸಂಕೋಚವಾಗಿ ಹೇಳಿಕೊಂಡಿದ್ದಾರೆ. ಜಗತ್ತಿನ ಪ್ರಖ್ಯಾತ ಶೈಕ್ಷಣಿಕ ಕೇಂದ್ರವಾದ ಆಕ್ಸಫರ್ಡ್, ಅಲ್ಲಿನ ಶಿಕ್ಷಣ ಕ್ರಮ, ಪಬ್ ಸಂಸ್ಕೃತಿ, ಗೆಳೆಯ-ಗೆಳತಿಯರು ಮತ್ತು ಪ್ರೇಯಸಿಯರ ಕುರಿತು ವಿಶದವಾಗಿ ಹೇಳಿದ್ದಾರೆ. ಸಾಮಾನ್ಯವಾಗಿ ತುಂಬ ಜನ ಸಾಹಿತಿಗಳು ಮತ್ತು ಕಲಾವಿದರು ತಮಗೆ ಪ್ರೇಯಸಿಯರಿದ್ದರೂ ಅವರ ಕುರಿತು ಸಾರ್ವಜನಿಕವಾಗಿ ಮಾತನಾಡಲು ಮತ್ತು ಬರೆಯಲು ಹಿಂದೇಟು ಹಾಕುತ್ತಾರೆ. ಭಾರತೀಯ ಲೇಖಕರಂತೂ ಇಂತಹ ವಿಷಯಗಳ ಕುರಿತು ಚಕಾರವೆತ್ತುವುದಿಲ್ಲ. ಆದರೆ ಕಾರ್ನಾಡರು ತಮ್ಮ ಪ್ರೇಯಸಿಯರ ಕುರಿತು ತುಂಬ ಧೈರ್ಯದಿಂದ ಬರೆದುಕೊಂಡಿರುವುದು ಗಮನಾರ್ಹ.

ಅರವತ್ತರ ದಶಕದ ಅಂತ್ಯದಲ್ಲಿ ಕನ್ನಡದಲ್ಲಿ ಕೆಲವು ಕಲಾತ್ಮಕ ಚಿತ್ರಗಳು ಆರಂಭವಾದರೂ ಕೂಡ ಹೊಸ ಅಲೆಯ ಚಿತ್ರಗಳು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ್ದು ಮಾತ್ರ ಎಪ್ಪತ್ತರ ದಶಕದ ಆರಂಭದಲ್ಲಿ ಬಂದ ‘ಸಂಸ್ಕಾರ’ ಚಲನಚಿತ್ರದ ಮೂಲಕ. ‘ಸಂಸ್ಕಾರ’ ಚಲನಚಿತ್ರದ ಅದ್ಭುತ ಯಶಸ್ಸು ಕನ್ನಡದಲ್ಲಿ ಹೊಸ ಅಲೆಯ ಕಲಾತ್ಮಕ ಚಿತ್ರಗಳು ಹೆಚ್ಚಿನ ಪ್ರಮಾಣದಲ್ಲಿ ನಿರ್ಮಾಣವಾಗುವಂತೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿತು. ಕಾರ್ನಾಡರು ಮುಂದೆ ಸಿನಿಮಾ ರಂಗದಲ್ಲಿ ಬೆಳೆಯುವಂತೆ ಮಾಡಿದ್ದು ಸಹ ‘ಸಂಸ್ಕಾರ’ ಸಿನಿಮಾ.

ಯು. ಆರ್. ಅನಂತಮೂರ್ತಿಯವರ ಪ್ರಖ್ಯಾತ ಕಾದಂಬರಿ ‘ಸಂಸ್ಕಾರ’ ಓದಿದ ನಂತರ ತಮ್ಮಲ್ಲಿ ಉಂಟಾದ ಭಾವನೆಗಳ ಕುರಿತು ಕಾರ್ನಾಡರು ಹೇಳಿರುವ ಮಾತುಗಳು ತುಂಬ ಸಹಜವಾದವು. ಸಮಕಾಲೀನ ಲೇಖಕನೊಬ್ಬನ ಯಶಸ್ವಿ ಕೃತಿಯೊಂದನ್ನು ಓದಿದಾಗ ಸಹ ಲೇಖಕನೊಬ್ಬನಲ್ಲಿ ಉಂಟಾಗಬಹುದಾದ ಮೆಚ್ಚುಗೆ ಮತ್ತು ಅಸೂಯೆಯ ಸಮ್ಮಿಶ್ರ ಭಾವನೆಗೆ ಇದೊಂದು ಒಳ್ಳೆಯ ಉದಾಹರಣೆ.

ಸಂಸ್ಕಾರ ಪ್ರಕಟವಾದಾಗ ಇಡಿಯ ಕನ್ನಡ ಸಾಹಿತ್ಯ ಸೃಷ್ಟಿಯನ್ನು ಬಡಿದೆಬ್ಬಿಸಿತು ಅಂದಾಗ ನಾನು ಅದನ್ನೋದಿ ಉತ್ತೇಜಿತನಾದದ್ದರಲ್ಲಿ ಆಶ್ಚರ್ಯವೇನಿಲ್ಲ. ಆದರೆ ಅವತ್ತು ನಾನು ಎಚ್ಚರವಿದ್ದದ್ದು ಕೇವಲ ಒಂದು ಅತ್ಯುತ್ತಮ ಕಾದಂಬರಿಯನ್ನು ಓದಿದ ಉತ್ಸಾಹದಿಂದ ಮಾತ್ರವಲ್ಲ. ಕೆಲಿಯಾಡಸ್ಕೋಪ್ ನಳಿಗೆಯನ್ನು ತಿರುಗಿಸಿದೊಡನೆ ಅದರೊಳಗಿನ ಬಣ್ಣ ಬಣ್ಣದ ಕಾಜಿನ ಚೂರುಗಳೆಲ್ಲ ತಮ್ಮ ನಡುವಿನ ಸಂಬಂಧವನ್ನೇ ಬದಲಾಯಿಸಿ ಹೊಸ ರಂಗೋಲಿಗಳನ್ನು ಸೃಷ್ಟಿಸುವಂತೆ ಸಂಸ್ಕಾರ ನನಗೆ ಗೊತ್ತಿದ್ದ ಕನ್ನಡ ಜೀವನ ವಿನ್ಯಾಸವನ್ನೇ ಬದಲಾಯಿಸಿಬಿಟ್ಟಿತು”.
“ನಿಜ ಹೇಳಬೇಕಾದರೆ ನನ್ನ ಜೀವನದಲ್ಲಿ ಮೊದಲನೆಯ ಸಲ ಒಬ್ಬ ಸಮಕಾಲೀನ ಲೇಖಕ ನನ್ನಲ್ಲಿ ಮತ್ಸರವುಂಟುಮಾಡಿದ್ದ. ಈ ಕಾದಂಬರಿಯನ್ನು ನಾನು ಬರೆಯಬೇಕಾಗಿತ್ತು. ಅದನ್ನು ಅನಂತಮೂರ್ತಿ ಎಂಬ ಅನರ್ಹ ಬರೆದುಬಿಟ್ಟಿದ್ದ. ಈಗ ಅದನ್ನು ಹೇಗಾದರೂ ಮಾಡಿ ನನ್ನದಾಗಿಸಿಕೊಳ್ಳಬೇಕಾಗಿತ್ತು. ಆದರೆ ಹೇಗೆ ಎಂಬುದು ತಕ್ಷಣ ಹೊಳೆಯಲಿಲ್ಲ”.

(ಆಡಾಡತ ಆಯುಷ್ಯ, ಪುಟ ೨೧೫-೨೧೬)

ಭೈರಪ್ಪನವರ ‘ವಂಶವೃಕ್ಷ’ ಕಾದಂಬರಿಯಾಧಾರಿತ ಚಿತ್ರವನ್ನು ಬಿ. ವಿ. ಕಾರಂತರೊಂದಿಗೆ ಸೇರಿ ನಿರ್ದೇಶಿಸಿದ ಕಾರ್ನಾಡರು ಆ ಚಿತ್ರ ನಿರ್ಮಾಣದ ಹಂತದಲ್ಲಿ ಪಡೆದ ಅನುಭವ ಸ್ವಾರಸ್ಯಕರವಾಗಿದೆ. ವಿಶೇಷವಾಗಿ ಕನ್ನಡ ಸಿನಿಮಾರಂಗದಲ್ಲಿ ಕಲಾತ್ಮಕ ಚಿತ್ರಗಳನ್ನು ಮಾಡಿ ಖ್ಯಾತಿ ಪಡೆದ ಜಿ. ವಿ. ಅಯ್ಯರ್ ಅವರ ತೆರೆಯ ಹಿಂದಿನ ಮುಖವನ್ನು ತುಂಬ ಉತ್ಸಾಹದಿಂದ ಪರಿಚಯಿಸಿದ್ದಾರೆ. ಹಣಕಾಸಿನ ವಿಷಯದಲ್ಲಿ ಪಂಗನಾಮ ಹಾಕುವ ಅಯ್ಯರ್ ಅವರ ಸ್ವಭಾವ ಚಿತ್ರರಂಗದಲ್ಲಿ ಪ್ರಸಿದ್ಧವಾದುದು. ಅಯ್ಯರರ ಇಂತಹ ಸ್ವಭಾವದ ಕುರಿತು ಕಾರ್ನಾಡರು ಸ್ವಲ್ಪ ವ್ಯಂಗ್ಯಮಿಶ್ರಿತ ಹಾಸ್ಯದಲ್ಲಿ ಹೇಳಿದ್ದಾರೆ.

ನನ್ನ ಜೊತೆಗೆ ಸಲಿಗೆ ಬೆಳೆದಂತೆ ಅಯ್ಯರರೇ ತನ್ನ ಭೂತಕಾಲದ ಭಂಡ ಕೃತ್ಯಗಳ ಬಗ್ಗೆ ಮುಚ್ಚು ಮರೆಯಿಲ್ಲದೆ ಹೇಳತೊಡಗಿದರು. ಯಾರನ್ನು ಯಾವ ಯಾವ ರೀತಿಯಲ್ಲಿ ಮೋಸ ಮಾಡಿ ಗೆದ್ದೆ, ಸೋತೆ, ದುಡ್ಡು ಮಾಡಿದೆ ಇತ್ಯಾದಿಗಳನ್ನೆಲ್ಲ ನಿರ್ದಾಕ್ಷಿಣ್ಯವಾಗಿ ನಗುತ್ತಲೇ ವಿವರಿಸಿದರು. ನಾನು, ‘ನೀವು ಇದನ್ನೆಲ್ಲ ಬರದಿಡಬೇಕು’ ಎಂದಾಗ, ಖುಷಿಯಿಂದ ತಲೆದೂಗಿ ಎನ್. ಎಸ್. ಸುಬ್ಬರಾವ್ ಸಂಪಾದಿಸುತ್ತಿದ್ದ ‘ಮೇನಕಾ’ ಚಿತ್ರ ಪತ್ರಿಕೆಯಲ್ಲಿ ತನ್ನ ಆತ್ಮಕಥೆಯನ್ನಾರಂಭಿಸಿ ಅದರಲ್ಲಿ ತನ್ನ ಕುಕೃತ್ಯಗಳನ್ನೆಲ್ಲ ಬಣ್ಣಿಸತೊಡಗಿದರು. ಆದರೆ ಒಂದು ದಿನ ವೈಎನ್ಕೆ, ‘ಬೇಡ ಅಯ್ಯರ್, ಅದೆಲ್ಲ ಸಾಕು ಮಾಡಿ’ ಎಂದಾಗ ತಟಕ್ಕನೆ ನಿಲ್ಲಿಸಿಬಿಟ್ಟರು”.

(ಆಡಾಡತ ಆಯುಷ್ಯ, ಪುಟ ೨೫೬)

ಕಾರ್ನಾಡರು ಪುಣೆಯ ಫಿಲ್ಮ್ ಮತ್ತು ಟೆಲಿವಿಷನ್ ಇನಸ್ಟಿಟ್ಯೂಟಿನ ನಿರ್ದೇಶಕರಾಗಿಯೂ ಗಮನಾರ್ಹ ಕೆಲಸ ಮಾಡಿದ್ದಾರೆ. ಭಾರತದ ಪ್ರತಿಷ್ಠಿತ ಸಂಸ್ಥೆಗಳಲ್ಲೊಂದಾದ ಪುಣೆಯ ಎಫ್.ಟಿ.ಟಿ.ಐ.ನ ಕುರಿತು ಅನೇಕ ಸ್ವಾರಸ್ಯಕರ ಮಾಹಿತಿ ನೀಡುವ ಕಾರ್ನಾಡರು ಎಫ್.ಟಿ.ಟಿ.ಐ. ಆವಾರಾದಲ್ಲಿ ಟಿ. ವಿ. ಕೇಂದ್ರ ಸ್ಥಾಪಿತವಾಗದಂತೆ ಮಾಡಿದ ಶ್ರೇಯಸ್ಸು ತಮಗೇ ಸೇರಿದ್ದೆಂದು ನಿಸ್ಸಂಕೋಚವಾಗಿ ಹೇಳಿಕೊಳ್ಳುತ್ತಾರೆ!

“ಹೀಗೆ ಇನಸ್ಟಿಟ್ಯೂಟಿನ ಕ್ಯಾಂಪಸ್ – ನನ್ನ ಭಾವನಾ ವಿಶ್ವದ ಪ್ರಭಾತ ಸ್ಟುಡಿಯೋದ ಆವಾರ – ಇಂದಿಗೂ ಅವಿಚ್ಛಿನ್ನವಾಗಿ ಉಳಿದಿದ್ದರೆ ಅದರ ಶ್ರೇಯಸ್ಸು ನನಗೇ ಸಲ್ಲಬೇಕು. ನನಗೊಬ್ಬನಿಗೇ!”

(ಆಡಾಡತ ಆಯುಷ್ಯ, ಪುಟ ೩೦೧)

ವೈಯಕ್ತಿಕ ಜೀವನದ ಕುರಿತು ಬರೆದುಕೊಳ್ಳುವಾಗ ಮಾತ್ರ ಕಾರ್ನಾಡರು ಸಾಧ್ಯವಾದಷ್ಟು ಪ್ರಾಮಾಣಿಕತೆ ತೋರಿಸುತ್ತಾರೆ. ಕಲೆ, ಸಾಹಿತ್ಯ, ರಂಗಭೂಮಿ ಮತ್ತು ಸಿನಿಮಾ ರಂಗದಲ್ಲಿ ತುಂಬ ಜನ ಏಕಪತ್ನಿವ್ರತಸ್ಥರೂ ಅಲ್ಲ, ಪತಿವ್ರತೆಯರೂ ಅಲ್ಲ. ಆದರೆ ಅದನ್ನು ಸಾರ್ವಜನಿಕವಾಗಿ ಒಪ್ಪಿಕೊಳ್ಳುವ ಧೈರ್ಯ ಅನೇಕರಿಗೆ ಇರುವುದಿಲ್ಲ. ಏನೆಲ್ಲಾ ಮಾಡಬಾರದ ಕೆಲಸಗಳನ್ನು ಮಾಡಿಯೂ ಸಹ ತುಂಬ ಒಳ್ಳೆಯವರೆಂದು ಬಿಂಬಿಸಿಕೊಳ್ಳುವ ಹವಣಿಕೆ ಅನೇಕರಲ್ಲಿ ಕಂಡು ಬರುತ್ತದೆ. ಇಂತಹ ಸೂಕ್ಷ್ಮ ವಿಚಾರದಲ್ಲಿ ಮಾತ್ರ ಕಾರ್ನಾಡರು ಭಿನ್ನವಾಗಿ ನಿಲ್ಲುತ್ತಾರೆ.

ಕಾರ್ನಾಡರಿಗೆ ಪ್ರತಿಭೆಯಿತ್ತು ಅದರೊಂದಿಗೆ ಅದೃಷ್ಟವೂ ಸಾಥ್ ನೀಡಿದ್ದರಿಂದ ಯಶಸ್ವಿ ವ್ಯಕ್ತಿಯಾಗಿ ಬೆಳೆಯಲು ಸಾಧ್ಯವಾಯಿತು. ರೋಡ್ಸ್ ಸ್ಕಾಲರಶಿಪ್ಪು ಪಡೆದು ಆಕ್ಸಫರ್ಡಿಗೆ ಹೋದದ್ದು, ಮದ್ರಾಸಿನ ಆಕ್ಸಫರ್ಡ್ ಪ್ರೆಸ್ಸಿನಲ್ಲಿ ನೌಕರಿ ಮಾಡಿದ್ದು, ‘ಸಂಸ್ಕಾರ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟದ್ದು ಮತ್ತು ಪುಣೆಯ ಫಿಲ್ಮ್ ಮತ್ತು ಟೆಲಿವಿಜನ್ ಇನಸ್ಟಿಟ್ಯೂಟ್ ನಿರ್ದೇಶಕರಾದದ್ದು ಸೇರಿದಂತೆ ಅವರ ಜೀವನದ ಪ್ರಮುಖ ಘಟನೆಗಳೆಲ್ಲ ನಡೆದದ್ದೆಲ್ಲ ಅವರಿಗೆ ನಲವತ್ತು ವರ್ಷ ತುಂಬುವುದರೊಳಗೆ ಎಂಬುದು ಆಶ್ಚರ್ಯಕರವಾದುದು.

ಗಿರೀಶ ಕಾರ್ನಾಡರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳ ಜೊತೆಗೆ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಸಹ ಲಭಿಸಿದೆ. ಚಲನಚಿತ್ರಗಳ ನಿರ್ದೇಶನ ಮತ್ತು ಅಭಿನಯಕ್ಕಾಗಿ ಅವರಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಮತ್ತು ಫಿಲಂಫೇರ್ ಪ್ರಶಸ್ತಿಗಳು ಸಹ ಲಭಿಸಿವೆ. ಕಾರ್ನಾಡರು ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪಡೆದದ್ದು ತಮ್ಮ ಮೂವತ್ನಾಲ್ಕನೆಯ ವಯಸ್ಸಿನಲ್ಲಿ! ಭಾರತ ಸರ್ಕಾರ ಕೊಡಮಾಡುವ ಪದ್ಮಶ್ರೀ ಪ್ರಶಸ್ತಿ ಪಡೆದಾಗ ಅವರಿಗೆ ಕೇವಲ ಮೂವತ್ತಾರು ವರ್ಷ! ಆಗ ಅವರ ಮೂರು ನಾಟಕಗಳು ಮಾತ್ರ ಪ್ರಕಟವಾಗಿದ್ದವು! ಮುಂದೆ ಐವತ್ನಾಲ್ಕನೆಯ ವಯಸ್ಸಿನಲ್ಲಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ಸಹ ಲಭಿಸಿತು.

ಚಂಪಾ ಅವರ “ಕಾರ್ನಾಡರು ಜ್ಞಾನಪೀಠ ಪ್ರಶಸ್ತಿಯನ್ನು ಹೊಡೆದುಕೊಂಡರು” ಎಂಬ ಮಾತನ್ನು ಒಪ್ಪಲಾಗದು. ಕನ್ನಡದಲ್ಲಿ ಕಾರ್ನಾಡರಿಗಿಂತ ಅರ್ಹರು ಮತ್ತು ಹಿರಿಯರಾದ ಹಲವು ಲೇಖಕರಿದ್ದರೂ ಸಹ ಜ್ಞಾನಪೀಠ ಪ್ರಶಸ್ತಿ ಅವರಿಗೆ ಒಲಿಯಿತು. ಕಾರ್ನಾಡರು ಜ್ಞಾನಪೀಠಕ್ಕೆ ಖಂಡಿತವಾಗಿಯೂ ಅರ್ಹರು. ಕನ್ನಡ ಸಾಹಿತ್ಯಕ್ಕೆ ಅವರು ಗಣನೀಯ ಕೊಡುಗೆ ನೀಡಿದ್ದಾರೆ. ಪ್ರಶಸ್ತಿಯೊಂದನ್ನು ನಿರ್ಧರಿಸುವಲ್ಲಿ ಸಾಹಿತ್ಯದೊಂದಿಗೆ ಸಾಹಿತ್ಯೇತರ ಕಾರಣಗಳು ಸಹ ನಿರ್ಣಾಯಕ ಪಾತ್ರ ವಹಿಸುತ್ತವೆ. ‘ಪಂಪ ಪ್ರಶಸ್ತಿ’ ಮತ್ತು ‘ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ’ದ ಅಧ್ಯಕ್ಷಗಿರಿಯನ್ನು ತಮ್ಮದಾಗಿಸಿಕೊಂಡ ಚಂಪಾ ಅವರಿಗೆ ಇದು ಗೊತ್ತಿಲ್ಲದ್ದೇನೂ ಅಲ್ಲ! ಇರಲಿ, ಕಾರ್ನಾಡರು ಪ್ರಶಸ್ತಿ – ಪುರಸ್ಕಾರಗಳ ವಿಷಯದಲ್ಲಿ ಮಾತ್ರ ತುಂಬ ಅದೃಷ್ಟವಂತರು.

ಕಾರ್ನಾಡರ ಆತ್ಮಕಥನವನ್ನು ಸೂಪರ್ ಸ್ಟಾರ್ ರಜನಿಕಾಂತರ ಕಮರ್ಷಿಯಲ್ ಸಿನಿಮಾಗೆ ಹೋಲಿಸಬಹುದು. ಅವರ ಸಿನಿಮಾದಲ್ಲಿ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ಸಂಗೀತ, ಗಾಯನ ಮತ್ತು ಇತರೆ ಪಾತ್ರವರ್ಗಕ್ಕಿಂತ ಹೆಚ್ಚು ಮಿಂಚುವುದು ರಜನಿಕಾಂತರು ಮಾತ್ರ! ಅದೇ ರೀತಿ ‘ಆಡಾಡತ ಆಯುಷ್ಯ’ದ ತುಂಬ ಗಿರೀಶ ಕಾರ್ನಾಡರು ಆವರಿಸಿಕೊಂಡಿದ್ದಾರೆ.

‘ಆಡಾಡತ ಆಯುಷ್ಯ’ ಒಂದು ಜನಪ್ರಿಯ ಕಾದಂಬರಿಯಂತೆ ಓದಿಸಿಕೊಂಡು ಹೋಗುತ್ತದೆ. ಮೊದಲ ಅಧ್ಯಾಯದಿಂದ ಕೊನೆಯ ಅಧ್ಯಾಯದವರೆಗೆ ಪ್ರತಿ ಪುಟದಲ್ಲೂ ಕಾರ್ನಾಡರೇ ಮಿಂಚುತ್ತಾರೆ. ಕಾರ್ನಾಡರು ತಮ್ಮ ಆತ್ಮಕಥನದಲ್ಲಿ ಯಾವ ವಿಷಯವನ್ನು ಎಷ್ಟು ಹೇಳಬೇಕು ಮತ್ತು ಯಾವ ರೀತಿ ಹೇಳಬೇಕು ಎಂಬುದರ ಕುರಿತು ತುಂಬ ಜಾಗ್ರತೆ ವಹಿಸಿದ್ದಾರೆ. ಸಾಹಿತ್ಯ, ರಂಗಭೂಮಿ ಮತ್ತು ಸಿನಿಮಾ ಕ್ಷೇತ್ರದ ವ್ಯಕ್ತಿಗಳ ಕುರಿತು ಬರೆಯುವಾಗಲೂ ಸಹ ಈ ಜಾಗ್ರತೆ ಕಂಡುಬರುತ್ತದೆ. ‘ಆಡಾಡತ ಆಯುಷ್ಯ’ ಶುದ್ಧಾಂಗವಾಗಿ ಗಿರೀಶ ಕಾರ್ನಾಡರ ಆತ್ಮಕಥನ. ಕಾರ್ನಾಡರ ಅಭಿಮಾನಿಗಳಿಗೆ ಈ ಆತ್ಮಕಥನ ತುಂಬ ಖುಷಿ ಕೊಡುಬಹುದು ಆದರೆ ಪ್ರಬುದ್ಧ ಓದುಗರಿಗೆ ಇದು ಸಾಕಷ್ಟು ನಿರಾಶೆಯನ್ನುಂಟುಮಾಡುತ್ತದೆ.

ಐವತ್ತರ ದಶಕದ ನಂತರದ ಕನ್ನಡ ಸಾಹಿತ್ಯ, ರಂಗಭೂಮಿ ಮತ್ತು ಸಿನಿಮಾ ರಂಗದ ಬೆಳವಣಿಗೆಗೆ ಸಾಕ್ಷಿ ಭೂತರಾಗಿದ್ದ ಕಾರ್ನಾಡರ ಆತ್ಮಕಥನ ಒಂದು ಒಳ್ಳೆಯ ಸಾಂಸ್ಕೃತಿಕ ಚರಿತ್ರೆಯ ಸ್ವರೂಪ ಪಡೆಯುವ ದೊಡ್ಡ ಅವಕಾಶವಿದ್ದರೂ ಅದರಿಂದ ವಂಚಿತವಾಗಿದೆ. ಆತ್ಮಕಥನದಲ್ಲಿ ಏನು ಹೇಳಬೇಕು, ಎಷ್ಟು ಹೇಳಬೇಕು ಮತ್ತು ಯಾವ ರೀತಿ ಹೇಳಬೇಕು ಎಂಬುದು ಲೇಖಕನ ಆಯ್ಕೆ ಮತ್ತು ವಿವೇಚನೆಗೆ ಬಿಟ್ಟ ವಿಷಯವಾದ್ದರಿಂದ ಓದುಗರು ಲೇಖಕನನ್ನು ದೂರುವಂತಿಲ್ಲ!

ಕಾರ್ನಾಡರ ‘ಆಡಾಡತ ಆಯುಷ್ಯ’ ಇಂತಹ ಕೆಲವು ಸಾಹಿತ್ಯಕ ತಕರಾರುಗಳ ನಡುವೆಯೂ ಓದಿಸಿಕೊಂಡು ಹೋಗುವ ಗುಣ ಪಡೆದಿದೆ. ಕಾರ್ನಾಡರನ್ನು ಕುರಿತು ತಿಳಿಯಲು ಬಯಸುವವರು ಅವರಿವರು ಬರೆದ ಲೇಖನ, ಪುಸ್ತಕ ಓದುವುದಕ್ಕಿಂತ ಅವರ ಆತ್ಮಕಥನ ‘ಆಡಾಡತ ಆಯುಷ್ಯ’ ಓದುವುದೇ ಹೆಚ್ಚು ಸಮಂಜಸ. ಕಳೆದ ಕೆಲವು ವರ್ಷಗಳಲ್ಲಿ ಕನ್ನಡದಲ್ಲಿ ಬಂದ ಬಹುತೇಕ ಆತ್ಮಕಥನ ಕೃತಿಗಳಿಗೆ ಈ ಮಾತು ಅನ್ವಯಿಸುತ್ತದೆ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

3 thoughts on “ಮಿಂಚಿನ ಬಳ್ಳಿ- ವಿಕಾಸ ಹೊಸಮನಿ ಅಂಕಣ l ಕಾರ್ನಾಡರ ‘ಆಡಾಡತ ಆಯುಷ್ಯ’”

  1. ಡಾ. ಬಿ. ಜನಾರ್ದನ ಭಟ್

    ವಿಕಾಸ್ ಹೊಸಮನಿಯವರ ಅಂಕಣ ತುಂಬಾ ಚೆನ್ನಾಗಿ ಬರುತ್ತಿದೆ. ಅಭಿನಂದನೆಗಳು

  2. ಈಗಾಗಲೇ ಓದಿದ್ದೆ.ನಿಮ್ಮ ಅತೀ ಸೂಕ್ಷ್ಮ ಹೊಳುವುಗಳು, ಹೊಸದೊಂದು ಆಯಾಮ ಕಲ್ಪಿಸಿದವು.ಮರು ಓದಿಗೆ ಪ್ರೇರೇಪಿಸುತ್ತಿದೆ.

  3. ಶೇಖರಗೌಡ ವೀ ಸರನಾಡಗೌಡರ್

    ಕಾರ್ನಾಡರ ಬಗ್ಗೆ ಒಳ್ಳೆಯ ಮಾಹಿತಿ ಇದೆ. ಆಗಿನ ಕವಿ ಚೆನ್ನವೀರ ಕಣವಿ, ಶಂ.ಭಾ.ಜೋಶಿಯವರ ಬಗ್ಗೆ ಪ್ರಸ್ತಾಪ ಆಗಬೇಕಿತ್ತೇನೋ…

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter