ಡಾ. ಮೊಗಸಾಲೆ ಅವರ ‘ಭಾರತ ಕಥಾ’: ಸಮಾಜದ ದುರಂತ ವ್ಯಂಗ್ಯಗಳ ಪ್ರತಿಫಲನ

ಇಂದು ಡಾ. ನಾ. ಮೊಗಸಾಲೆ ಅವರ ಜನ್ಮದಿನ (ಅಗಸ್ಟ ೨೭, ೧೯೪೪). ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.

ಕನ್ನಡದ ಮಹತ್ವದ ಲೇಖಕರಲ್ಲಿ ಒಬ್ಬರಾದ ಡಾ. ನಾ. ಮೊಗಸಾಲೆ ಅವರ ‘ಭಾರತ ಕಥಾ’ ಎಂಬ ಕಾದಂಬರಿಯು ರಾಜಕೀಯದ ಮುಷ್ಠಿಯೊಳಗೆ ಸಿಲುಕುವ ಊರಿನ ವಿದ್ಯಮಾನಗಳನ್ನು ವಾಸ್ತವದ ನೆಲೆಯಲ್ಲಿ ಬಿಚ್ಚಿಡುತ್ತದೆ. ಬೇಡವೆಂದರೂ ನಮ್ಮ ಬದುಕಿನೊಳಗೆ ನುಸುಳುವ, ಇಷ್ಟವಿಲ್ಲದಿದ್ದರೂ ನಮ್ಮನ್ನು ಕರಾಳ ಕೈಗಳಲ್ಲಿ ಅಪ್ಪಿಕೊಳ್ಳುವ, ದೂರವಾಗಲು ಹೊರಟವರನ್ನು ಬೆಂಬತ್ತಿ ಒಳಗೆ ಎಳೆದುಕೊಳ್ಳುವ ಕ್ರೌರ್ಯವು ಈ ಕಾದಂಬರಿಯನ್ನು ಮುನ್ನಡೆಸುತ್ತದೆ. ಇದು ದಕ್ಷಿಣ ಕನ್ನಡ ಜಿಲ್ಲೆಯ ಸೀತಾಪುರ ಎಂಬ ಕಾಲ್ಪನಿಕ ಊರಿನಲ್ಲಿ ನಡೆಯುವುದಾದರೂ ಅದನ್ನು ಭಾರತದ ಯಾವುದೇ ಹಳ್ಳಿಗೂ ಅನ್ವಯಿಸಬಹುದಾಗಿದೆ. ಒಂದರ್ಥದಲ್ಲಿ ಮೊಗಸಾಲೆಯವರ ಕಾಳಜಿಯೇ ಗ್ರಾಮ ಭಾರತ. ಹಳ್ಳಿಯಲ್ಲಿ ನಿಂತು ಸಾಮಾಜಿಕ ವಿದ್ಯಮಾನಗಳ ಬದಲಾವಣೆಗಳನ್ನು ವೀಕ್ಷಿಸುವ ಅವರಿಗೆ ಗ್ರಾಮ ಭಾರತವು ರಾಜಕೀಯದ ಬಲೆಯೊಳಗೆ ಬಿದ್ದು ನರಳುವಂತೆ ಕಾಣಿಸುತ್ತದೆ.

ರಾಜಕೀಯ ಸ್ಥಿತ್ಯಂತರವು ಮನುಷ್ಯನ ಬದುಕು ಭಾವಗಳನ್ನು ಪ್ರಭಾವಿಸುವ ವಿವರಗಳಿರುವುದರಿಂದ ಈ ಕಾದಂಬರಿಗೆ ರಾಜಕೀಯ ಅರ್ಥವ್ಯಾಪ್ತಿಯು ಒದಗಿದೆ. ಈ ಪರಿಸ್ಥಿತಿಯು ರಾಜಕೀಯ ದೃಷ್ಟಿಕೋನವಿಲ್ಲದವರ ಬದುಕನ್ನೂ ಸೆರೆಹಿಡಿಯುತ್ತದೆ. ಕಣ್ಣಿಗೆ ಕಾಣದ ಕೆಟ್ಟ ವ್ಯವಸ್ಥೆಯು ನಮ್ಮ ಕತ್ತು ಹಿಸುಕುತ್ತಾ ಇದೆ ಎಂಬ ಭಾವವನ್ನು ಉಂಟು ಮಾಡುತ್ತದೆ. ಕಾಲದ ದುರ್ನಡತೆಗೆ ಮುಖಾಮುಖಿಯಾದ, ಅಧಿಕಾರ ಮೋಹದ ನಡುವೆ ವಿಷಣ್ಣವಾದ ಸಮಾಜದ ಚಿತ್ರಣವನ್ನು ನೀಡುತ್ತದೆ. ಹಳ್ಳಿಗಳು ತಮ್ಮ ಅಸ್ಮಿತೆಯನ್ನು ಕಳೆದುಕೊಳ್ಳಲು ರಾಜಕೀಯವೇ ಕಾರಣವಾಗುತ್ತಿದೆ ಎಂಬ ಆಶಯವನ್ನು ವ್ಯಕ್ತಪಡಿಸುತ್ತದೆ.

ಏಕಪಾತ್ರ ಅಥವಾ ನಾಯಕಪ್ರಧಾನ ಕಾದಂಬರಿಗಳಿಗಿಂತ ಭಿನ್ನವಾಗಿರುವ ಈ ಕಾದಂಬರಿಯಲ್ಲಿ ಊರೇ ಕೇಂದ್ರವಾಗಿದೆ. ಊರನ್ನು ವಿಚಲಿತಗೊಳಿಸುವ ರಾಜಕಾರಣದ ಪರಿಣಾಮಗಳನ್ನು ಪರ ಅಥವಾ ವಿರೋಧದ ನೆಲೆಗಳಲ್ಲಿ ದಾಖಲಿಸದೆ ಇವುಗಳು ಓದುಗರ ಪ್ರಜ್ಞೆಯಲ್ಲಿ ಅಚ್ಚೊತ್ತುವ, ಅವುಗಳಿಗೆ ಅದರದ್ದೇ ಆದ ಪ್ರತಿಕ್ರಿಯೆ ಮತ್ತು ಪ್ರತಿಸ್ಪಂದನೆಯನ್ನು ಉಂಟುಮಾಡುವ ಬಗೆಯನ್ನು ನಿರೂಪಿಸುತ್ತದೆ. ಲೇಖಕರು ಸೃಷ್ಟಿಸುವ ಲೋಕದ ಒಳ ತರ್ಕವನ್ನು ಅನುಸರಿಸಿಕೊಂಡು ಹೋಗಲು ಸಾಧ್ಯವಾಗುವಂಥ ನಿರೂಪಣ ಶೈಲಿಯನ್ನು ಒಳಗೊಂಡಿರುವ ಕಾದಂಬರಿಯಲ್ಲಿ ಮನುಷ್ಯನ ಅಂತರಂಗ ಮತ್ತು ಸಾಮಾಜಿಕ ವಾಸ್ತವಗಳು ಬಿಚ್ಚಿಕೊಳ್ಳುತ್ತವೆ.

ಭಾಸ್ಕರ ಹೆಗಡೆಯ ಸಾಮಾಜಿಕ – ರಾಜಕೀಯ ಬೆಳವಣಿಗೆಯನ್ನು ವಿವರಿಸುವ ಕಾದಂಬರಿಯು ಆತನಿಂದಾಗಿ ಅಧಪತನಕ್ಕೆ ಒಳಗಾಗುವ ಊರಿನ ಪರಿಸ್ಥಿತಿಯನ್ನು ಅನಾವರಣಗೊಳಿಸುತ್ತದೆ. ಡಾ. ಎಸ್. ಎನ್. ಭಟ್ಟರು ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದ ಯುವಕ ಮಂಡಲದ ಕಾರ್ಯದರ್ಶಿಯ ಸ್ಥಾನವು ಸಿಗುವುದರೊಂದಿಗೆ ಅವನ ಭಾಗ್ಯದ ಬಾಗಿಲು ತೆರೆದುಕೊಳ್ಳುತ್ತದೆ. ಕ್ರಮೇಣ ಅವನ ಬೇರುಗಳು ಸಮಾಜದ ಮೇಲೆ ಇಳಿದುಕೊಳ್ಳುತ್ತವೆ. ಏನೂ ಇಲ್ಲದಿದ್ದ ಭಾಸ್ಕರ ಹೆಗಡೆಯು ಎಲ್ಲವೂ ಬೇಕು ಎಂದು ದೋಚಿಕೊಳ್ಳುವ ನೆಲೆಗೆ ತಲುಪುತ್ತಾನೆ. ಶಾಲೆ, ನ್ಯಾಯ ಬೆಲೆ ಅಂಗಡಿ, ಪಂಚಾಯತ್ ಸದಸ್ಯತ್ವ, ಸಹಕಾರಿ ಸಂಘ ಸಂಸ್ಥೆಗಳ ಪಾಲುದಾರಿಕೆಗಳನ್ನು ಗ್ರಾಮದ ಏಳಿಗೆಗೆ ವಿನಿಯೋಗಿಸುವ ಬದಲು ತಾನು ಕನಸು ಕಾಣುತ್ತಿರುವ ಶಾಸಕ ಸ್ಥಾನವನ್ನು ಏರುವ ಮೆಟ್ಟಿಲುಗಳಾಗಿ ಉಪಯೋಗಿಸುತ್ತಾನೆ. ಹಿರಿಯರಿಗೆ ಮಣಿಯುವ ವಿನಯ, ಅನುಕಂಪ, ಭಾವುಕತೆ ಮುಂತಾದ ಒಳ್ಳೆಯ ಅಂಶಗಳಿದ್ದರೂ ಧೂರ್ತತನ, ಓಲೈಕೆ, ಅರ್ಹರನ್ನು ಪದಚ್ಯುತಗೊಳಿಸುವ ತಂತ್ರ, ಹಿಂಬಾಗಿಲ ಪ್ರವೇಶ, ಸಮಯ ಸಾಧಕತನ, ಪ್ರಚಾರ – ಮನ್ನಣೆಗಳ ಒತ್ತಾಸೆ, ಲಾಲಸೆಗಳಿಗೆ ಬಲಿಯಾಗಿ ಊರ ನಾಯಕನೆಂಬ ಹಣೆಪಟ್ಟಿಯನ್ನು ಹಚ್ಚಿ ಮೆರೆಯುವ ಅಹಂಕಾರ, ಪ್ರತಿಯೊಂದರಲ್ಲೂ ಹಸ್ತಕ್ಷೇಪವನ್ನು ಮಾಡುವ ಬುದ್ಧಿ, ಅಧಿಕಾರದ ಬಲ, ಗುಂಪುಗಾರಿಕೆ, ಲಂಪಟತನ, ಲಾಭಕೋರತನಗಳನ್ನೇ ಬಂಡವಾಳವಾಗಿಸಿಕೊಂಡು ಸಮಾಜ ಸುಧಾರಕ- ಸಾಂಸ್ಕøತಿಕ ನೇತಾರನೆಂಬ ಮುಖವಾಡವನ್ನು ತೊಟ್ಟು ಮೆರೆಯುವ, ವಿರೋಧಿಸಲು ಸಾಧ್ಯತೆಯಿರುವ ಜನರ ಗುಂಪಿಗೆ ಮದ್ಯಮಾಂಸಗಳನ್ನು ಒದಗಿಸಿಕೊಟ್ಟು ಯಜಮಾನ್ಯ ವ್ಯವಸ್ಥೆಯ ಭಾಗವೆನಿಸಿಕೊಳ್ಳುವ ಆತನ ಹಾದಿಯು ಆಧುನಿಕ ರಾಜಕೀಯದ ದಾರಿ. ಅಸುರೀ ಭಾವದಿಂದ ಕುದಿದು ಕನಲುತ್ತಾ ಪರಿಸ್ಥಿತಿಯ ಮೇಲೆ ರಾಕ್ಷಸೀಯ ಆಧಿಪತ್ಯವನ್ನು ಸ್ಥಾಪಿಸಿ, ಜಗತ್ತಿನ ಒಳ್ಳೆಯತನ, ಸ್ವಚ್ಛತೆಗಳ ಮೇಲೆ ಒಡೆತನವನ್ನು ಹೇರಿ ದುಷ್ಟತನವೇ ವಿಜೃಂಭಿಸುವಂತೆ ಮಾಡುವ ಅವನ ಅಮಾನವೀಯ ನಡವಳಿಕೆಗಳು ಮುಗ್ಧರ ಮನಸ್ಸನ್ನು ಚಿವುಟುತ್ತವೆ. ತನಗೋ ಸರಿಯಾಗಿ ಬದುಕಲು ಗೊತ್ತಿಲ್ಲ. ಇತರರನ್ನೂ ಬಾಳಗೊಡುವುದಿಲ್ಲ. ಬದುಕಿನ ಹಾದಿಯಲ್ಲಿ ಸಾಗುವವರಿಗೆ ಅಡ್ಡಗಾಲು ಹಾಕುವುದೇ ಅವನ ಸ್ವಭಾವ. ದುರ್ಗುಣ ದುರಾಲೋಚನೆಗಳು ಬಿಡುವುದೇ ಇಲ್ಲ. ಸ್ವಾರ್ಥ, ದ್ವೇಷ, ಹಿಂಸೆ ಕ್ರೌರ್ಯಗಳನ್ನೇ ಜೀವಾಳವಾಗಿಸಿಕೊಂಡು ಮೋಸ, ವಂಚನೆ, ಕುತಂತ್ರಗಳ ಬಲೆಯನ್ನು ಬೀಸಿ ಒಳ್ಳೆಯವರನ್ನು ಬೀಳಿಸಲು ಯತ್ನಿಸುತ್ತಾನೆ. ವಿಲಿವಿಲಿ ಒದ್ದಾಡಿಸುತ್ತಾನೆ. ದನದ ಮುಖ. ಹುಲಿಯ ನಖ. ಬದುಕಲು ಹೆಣಗುವವರಿಗೆ ಇಂಥವರು ಕಾಲಿಗೆ ಮುಳ್ಳಾಗುತ್ತಾರೆ. ಕಣ್ಣಿಗೆ ಕಸವಾಗುತ್ತಾರೆ. ಮಾನವೀಯತೆಯ ಮೇಲೆ ಕೆಟ್ಟ ಶಕ್ತಿಗಳ ನೆರಳು ಬಿದ್ದಾಗ ಶುದ್ಧ ಮನಸ್ಸಿನ ಕನಸುಗಳು, ಜನಸಾಮಾನ್ಯರ ಆಶೋತ್ತರಗಳು ನಾಶವಾಗುತ್ತವೆ ಎಂಬುದಕ್ಕೆ ಹೊಸತಾಗಿ ಕಟ್ಟಿಸಲು ಹೊರಟ ಶಾಲೆಯ ಕಟ್ಟಡವು ಕುಸಿದುಬೀಳುವ ಸನ್ನಿವೇಶವು ಸಾಕ್ಷಿಯಾಗುತ್ತದೆ. ಆತನು ಡಾ. ಎಸ್. ಎನ್. ಭಟ್ಟರಿಗೆ ಹೊಡೆಯುವ ಸನ್ನಿವೇಶದ ಮೂಲಕ ಪ್ರಭುತ್ವ ಮತ್ತು ರಾಜಕೀಯ ಪಕ್ಷಗಳು ಬಳಸುವ ಹಿಂಸೆಯ ಸ್ವರೂಪವನ್ನು ಬಿಂಬಿಸುವ ಕೃತಿಯು ಮನುಷ್ಯನ ಘನತೆಯನ್ನು ಹೊಸಕಿ ಹಾಕುವ ಹಿಂಸೆಯ ಮುಖಗಳನ್ನು ಅಭಿವ್ಯಕ್ತಿಸುವುದರೊಂದಿಗೆ ರಾಜಕೀಯದೊಳಗೆ ಹುದುಗಿಕೊಂಡಿರುವ ಕ್ರೌರ್ಯದ ದರ್ಶನವನ್ನು ಮಾಡುತ್ತದೆ.

ಒಬ್ಬನ ಕ್ರೌರ್ಯವು ಇಡೀ ಸಮುದಾಯಕ್ಕೆ ತರುವ ದುಃಖ, ಅವನತಿಗಳನ್ನು ಚಿತ್ರಿಸುವ ಕಾದಂಬರಿಯು ಭಾಸ್ಕರ ಹೆಗಡೆ ಏಕೆ ಹೀಗೆ ಆದ ಎಂಬುದನ್ನು ಕಾಣಲು ಯತ್ನಿಸುತ್ತದೆ. ಒಬ್ಬ ಸಾಮಾನ್ಯ ಮನುಷ್ಯ ಇದನ್ನು ಸಾಧಿಸಿದ್ದು ಹೇಗೆ? ಯಾವ ಶಕ್ತಿಗಳು ಇವನನ್ನು ಮೇಲೆ ತಳ್ಳಿದವು? ಮೇಲೇರುತ್ತಾ ಹೋದಂತೆ ಅವನ ವ್ಯಕ್ತಿತ್ವದಲ್ಲಿ ಯಾವ ರೀತಿಯ ಬದಲಾವಣೆಗಳು ಉಂಟಾದವು? ಎಂಬ ಪ್ರಶ್ನೆಗಳನ್ನು ಬಿಡಿಸುತ್ತಾ ಹೋಗುವ ಲೇಖಕರು ಭಾಸ್ಕರ ಹೆಗಡೆಯ ವೈಯಕ್ತಿಕ ಆಸೆ ಆಕಾಂಕ್ಷೆ, ಸಾಮಥ್ರ್ಯ ದೌರ್ಬಲ್ಯಗಳು ಮತ್ತು ಅವನನ್ನು ಸುತ್ತುವರಿದ ಸಾಮಾಜಿಕ ರಾಜಕೀಯ ಪರಿಸರದ ಕಡೆ ಗಮನವನ್ನು ಹರಿಸಿದ್ದಾರೆ. ಮೌಲ್ಯಗಳು ಕುಸಿದರೆ ವ್ಯವಸ್ಥೆ ಉಳಿಯಲಾರದು. ಈ ಮೌಲ್ಯಗಳನ್ನು ನಾಶಮಾಡುವ ದುಷ್ಟ ಇಡೀ ವ್ಯವಸ್ಥೆಯ ಅವನತಿಗೆ ಕಾರಣನಾಗುತ್ತಾನೆ. ವ್ಯಕ್ತಿನಿಷ್ಠೆ- ಪಕ್ಷನಿಷ್ಠೆಗಳನ್ನು ಮುಖ್ಯವಾಗಿರಿಸಿಕೊಂಡು ಸಾರ್ವಜನಿಕ, ಸಾಮುದಾಯಿಕ ಬದುಕಿನಲ್ಲಿ ಕರ್ತವ್ಯವನ್ನು ಕೈಬಿಡುವವರೂ ಅವನಂತೆಯೇ ಇಡೀ ವ್ಯವಸ್ಥೆಯ ಅವನತಿಗೆ, ಸಮುದಾಯದ ದುಃಖಕ್ಕೆ ಕಾರಣರಾಗುತ್ತಾರೆ. ಆದರೆ ಮನುಷ್ಯನನ್ನು ಮೀರಿದ ಶಕ್ತಿಯಿದೆ. ಕಾಲ ಕೂಡಿ ಬಂದಾಗ ಅದು ತನ್ನ ಶಕ್ತಿಯನ್ನು ಪ್ರಕಟಿಸುತ್ತದೆ ಎಂಬುದಕ್ಕೆ ಶಾಲೆಯ ಕಟ್ಟಡವು ಕುಸಿದುಬೀಳುವ ಸನ್ನಿವೇಶವು ಸಾಕ್ಷಿಯಾಗುತ್ತದೆ. ಮಾನವನು ಎಷ್ಟೇ ಮೆರೆದರೂ ಪ್ರಕೃತಿಯ ಎದುರು ನಿಲ್ಲಲಾರ. ನಿಸರ್ಗವು ಅವನ ಸೃಷ್ಟಿಯನ್ನು ಕ್ಷಣಮಾತ್ರದಲ್ಲಿ ನಾಶ ಮಾಡಬಲ್ಲದು. ಅದರ ಶಕ್ತಿಯೆದುರು ಮಾನವನಿರ್ಮಿತ ವ್ಯವಸ್ಥೆಯು ಉಳಿಯುವುದಿಲ್ಲ ಎಂಬ ಎಚ್ಚರಿಕೆಯನ್ನು ನೀಡುತ್ತದೆ.

ತಾನು ಮಾಡಿರುವ ಅಪರಾಧವೇನು ಎಂದು ತಿಳಿಯಲು ಯತ್ನಿಸಿದರೂ ಸಮರ್ಪಕವಾದ ಉತ್ತರಗಳು ದೊರೆಯದೆ ಮಾನಸಿಕ ಹಿಂಸೆಯನ್ನು ಅನುಭವಿಸುವ ಡಾ. ಎಸ್. ಎನ್. ಭಟ್ಟರು ತಪ್ಪಿತಸ್ಥನಲ್ಲದ ತನ್ನನ್ನು ಏಕೆ ಶಿಕ್ಷಿಸುತ್ತಿದ್ದಾರೆ ಎಂದರಿಯದೆ ತಲ್ಲಣಿಸುತ್ತಾರೆ. ಅಮಾಯಕರಾದ ಅವರು ಯಾವುದೇ ರಾಜಕೀಯ ಪಕ್ಷ ಮತ್ತು ಗಲಭೆಗಳಿಗೆ ಸಂಬಂಧಿಸಿದವರಲ್ಲದಿದ್ದರೂ ಅವರ ನಡುವೆ ಸಿಕ್ಕಿ ಹಾಕಿಕೊಳ್ಳುತ್ತಾರೆ. ಸರ್ವಾಧಿಕಾರಿ ವ್ಯವಸ್ಥೆಯಲ್ಲಿ ಬದುಕು ಅತಂತ್ರವಾಗುವ ರೀತಿಯನ್ನು ಕೃತಿಯು ತನ್ನ ವಿವರಗಳಲ್ಲಿ, ಒಟ್ಟು ಪರಿಣಾಮದಲ್ಲಿ ಸೊಗಸಾಗಿ ಚಿತ್ರಿಸುತ್ತದೆ. ರಾಜಕೀಯವು ವ್ಯಕ್ತಿಯನ್ನು ತನ್ನ ಪಾಡಿಗೆ ಬದುಕಲು ಬಿಡದೆ ಸುಳಿಯೊಳಗೆ ಎಳೆಯುವುದು ನಿಜವಾದರೂ ಬದುಕಲು ಅಗತ್ಯವಾದ ಪಟ್ಟುಗಳನ್ನು ಕಲಿಯುವುದರೊಂದಿಗೆ ವ್ಯಕ್ತಿಯ ಕೈಗಳು ಕ್ರಮೇಣ ಸೋಲಲಿವೆಯೇ ಎಂಬ ಸಂಶಯದ ಜೊತೆಗೆ ಬದುಕು ಎಂಬ ಹೋರಾಟದಲ್ಲಿ ವ್ಯಕ್ತಿತ್ವ, ಸ್ವಂತಿಕೆ, ಬದುಕುವ ಹಕ್ಕುಗಳು ನಾಶವಾಗಿ ಮನುಷ್ಯನು ಪ್ರವಾಹದಲ್ಲಿ ಹೆಣದಂತೆ ತೇಲಿ ಹೋಗುವನೇ ಎಂಬ ಆತಂಕವೂ ಇಲ್ಲಿದೆ. ತತ್ವ ಸಿದ್ಧಾಂತ, ಮಾನವೀಯ ತುಡಿತ ಮಿಡಿತಗಳ ಬದಲು ಸ್ವಾರ್ಥ, ಜಿದ್ದು ಕ್ರೌರ್ಯಗಳನ್ನು ಮೆರೆಯುವ ವಾಸ್ತವದ ಅರಿವು ಮುಖ್ಯವಾಗುತ್ತದೆ. ನಾಯಕರ ಸ್ವಾರ್ಥಕ್ಕಾಗಿ ವ್ಯಕ್ತಿ ಮತ್ತು ಸಮಾಜವು ಬಲಿಯಾಗುವ ದುರಂತವನ್ನು ಕಂಡು ಮರುಗುತ್ತಾ ಬದುಕಿನ ಅರ್ಥವೇನು ಎಂಬ ಪ್ರಶ್ನೆಯನ್ನು ಎಬ್ಬಿಸುತ್ತದೆ.

ಒಬ್ಬ ಕಾರ್ಯಕರ್ತನಾಗಿ ವಿಸ್ತøತವಾದ, ಸಮೃದ್ಧವಾದ ವಿವರಗಳಲ್ಲಿ ಮೂಡಿಬರುವ ಭಾಸ್ಕರ ಹೆಗಡೆಯು ಕಾದಂಬರಿಯ ಎಲ್ಲ ಪಾತ್ರಗಳೊಂದಿಗೆ ಒಂದಲ್ಲ ಒಂದು ಬಗೆಯ ಸಂಬಂಧವನ್ನು ಇಟ್ಟುಕೊಂಡಿರುವುದರಿಂದ ಕೃತಿಯ ಭಾಗಗಳನ್ನು ಅದರ ಒಟ್ಟು ಬಂಧಧಲ್ಲಿ ಬೆಸೆಯುವ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಾನೆ. ಅವನಿಗೆ ಸಾರ್ಥಕ್ಯದ ಕ್ಷಣಗಳು ಇದ್ದರೂ ಕಾದಂಬರಿಯು ಅವನ ಜನಪ್ರಿಯತೆ, ಯಶಸ್ಸು, ಲಂಪಟತನ, ನೈತಿಕ ಕಟ್ಟುಪಾಡುಗಳಿಗೆ ಒಗ್ಗದ ಜೀವನಶೈಲಿಯ ಕಡೆಗೆ ಒತ್ತು ನೀಡುತ್ತದೆ. ಸ್ವಾರ್ಥಪ್ರೇರಿತ ಚಟುವಟಿಕೆಗಳನ್ನು ವಿವರಿಸುವಂತೆ ಅವನಿಗಿಂತ ಭಿನ್ನ ನೆಲೆಗಳಲ್ಲಿರುವ ಪಾತ್ರಗಳನ್ನು ಅಷ್ಟೇ ಸಂಕೀರ್ಣವಾಗಿ ಬಿಡಿಸುತ್ತದೆ. ಆದ್ದರಿಂದ ಇದನ್ನು ಭಾಸ್ಕರ ಹೆಗಡೆಯನ್ನು ಕುರಿತ ಕಾದಂಬರಿ ಮಾತ್ರವಾಗಿ ಓದಬಾರದು. ಅವನು ಈ ಕಾದಂಬರಿಯ ಪ್ರಧಾನ ಪಾತ್ರವಾಗಿದ್ದರೂ ಅವನೊಂದಿಗೆ ವೈದೃಶ್ಯದಲ್ಲಿ ನಿಲ್ಲುವ ಪಾತ್ರಗಳು ಸೂಚಿಸುವ ಬಹುಮುಖಿ ನೆಲೆಗಳ ಒಟ್ಟು ವಿನ್ಯಾಸದಲ್ಲಿ ಗ್ರಹಿಸಿದರೆ ಕಾದಂಬರಿಯ ಮಹತ್ವ ತಿಳಿಯುತ್ತದೆ. ಊಳಿಗಮಾನ್ಯ ವ್ಯವಸ್ಥೆಯ ಪ್ರತಿನಿಧಿಯಾಗಿರುವ ದುಗ್ಗಪ್ಪ ಹೆಗಡೆಯು ಸಮಾಜದ ಗೌರವಾನ್ವಿತ ಸ್ಥಾನದಲ್ಲಿದ್ದುಕೊಂಡು ತಮ್ಮ ಮೂಗಿನ ನೇರಕ್ಕೆ ಆಡಳಿತ ಮಾಡುವ ವ್ಯಕ್ತಿ. ಒಳಿತು ಕೆಡುಕುಗಳ ಮಿಶ್ರಣವಾಗಿರುವ ಆ ವ್ಯಕ್ತಿಯಿಂದಾಗಿ ಊರಿಗೆ ಯಾವ ತೊಂದರೆಯೂ ಇಲ್ಲ. ಒಳಿತಿನ ಪಕ್ಷದವರಾದ ಕುಪ್ಪಣ್ಣಯ್ಯ ಮತ್ತು ಡಾ. ಎಸ್. ಎನ್. ಭಟ್ಟರ ನಡುವಿನ ವ್ಯಕ್ತಿಗತ ಭಿನ್ನತೆಗಳೂ ಮುಖ್ಯವಾಗುತ್ತವೆ. ತನ್ನಂತೆಯೇ ಆದರ್ಶವಾದಿಯೂ, ಒಳಿತಿನ ಸಮರ್ಥಕನೂ, ವಿನಯವಂತನೂ, ಉದಾರಿಯೂ, ಸ್ನೇಹಶೀಲನೂ ಆದ ಎಸ್. ಎನ್. ಭಟ್ಟರ ಮೇಲೆ ಕುಪ್ಪಣ್ಣಯ್ಯನಿಗೆ ಪ್ರೀತಿ ಗೌರವಗಳಿದ್ದರೂ, ಭಾಸ್ಕರ ಹೆಗಡೆಯ ಕೈಯಿಂದ ಏಟುಗಳನ್ನು ತಿಂದ ಮೇಲೆಯೂ ಆತನ ಮೇಲೆ ಕಾನೂನು ಕ್ರಮವನ್ನು ಕೈಗೊಳ್ಳ ಬಯಸದ ಪುಕ್ಕಲುತನವನ್ನು, ನಿರ್ಣಾಯಕ ಗಳಿಗೆಯಲ್ಲಿ ನಿರ್ಲಿಪ್ತನಾಗಿ ಉಳಿಯುವ ಮನೋಭಾವವನ್ನು ಒಪ್ಪುವುದಿಲ್ಲ. ಎಸ್. ಎನ್. ಭಟ್ಟರೂ ಸೇರಿದಂತೆ ಸೀತಾಪುರದ ಜನರು ಅನುಭವಿಸುವ ಬವಣೆ, ದಬ್ಬಾಳಿಕೆಗಳನ್ನು ಕಂಡು ಭಾಸ್ಕರ ಹೆಗಡೆಯ ವಿರುದ್ಧ ಸೆಟೆದು ನಿಲ್ಲುವ ಆತನ ಸ್ವಭಾವವು ಕಾದಂಬರಿಯ ದರ್ಶನವನ್ನು ಸಂಕೀರ್ಣಗೊಳಿಸುತ್ತದೆ. ಹೀಗೆ ಸೀತಾಪುರದ ಒಳಪ್ರಪಂಚವು ಹೊರಜಗತ್ತಿನ ಸೂಕ್ಷ್ಮರೂಪವಾಗಿ ಕಂಡುಬರುತ್ತದೆ.

ಕಾದಂಬರಿಯ ಪ್ರಸಂಗಗಳು ಪ್ರಭುತ್ವದ ಸೊಕ್ಕು, ದೊಡ್ಡಸ್ತಿಕೆ, ಅರ್ಥಹೀನ ಹಿಂಸೆಯ ಸ್ವರೂಪವನ್ನು ಕಟ್ಟುವ ರೂಪಕಗಳಾಗುತ್ತವೆ. ದಕ್ಷ ಆಡಳಿತ, ನ್ಯಾಯ-ಅನ್ಯಾಯ ವಿವೇಚನೆ, ಶಿಸ್ತು, ಕರುಣೆ, ಅಭಿಮಾನ ಮುಂತಾದ ಕಲ್ಪನೆಗಳು – ಮೌಲ್ಯಗಳು ಬೆಲೆ ಕಳೆದುಕೊಳ್ಳುವ ಕಹಿ ಸತ್ಯವನ್ನು ವಿವರಿಸುತ್ತದೆ. ಪ್ರಭುತ್ವ, ಸಮಾಜಸೇವೆ, ನಾಯಕತ್ವ ಮುಂತಾದ ಕಲ್ಪನೆಗಳನ್ನು ವೈಭವೀಕರಿಸದೆ ಅವುಗಳ ಹಿಂದಿನ ಪೊಳ್ಳುತನವನ್ನು ಅನಾವರಣಗೊಳಿಸುವ ಕಾದಂಬರಿಯು ಮಾನವ ನಿರ್ಮಿತ ಸಂಸ್ಥೆಗಳಲ್ಲಿ ಸ್ವತಃ ಮಾನವನೇ ಸಮಾಜದ ದುರಂತಕ್ಕೆ ಕಾರಣವಾಗುವ ವಿಪರ್ಯಾಸ-ವೈಪರೀತ್ಯಗಳನ್ನೂ, ‘ಸಾಹಸ’ವೆಂದು ಭಾವಿಸುವ ವಿದ್ಯಮಾನಗಳ ಹಿಂದಿನ ವಿರೋಧಾಭಾಸಗಳನ್ನು ಬಯಲುಗೊಳಿಸುತ್ತದೆ. ಪರಸ್ಪರ ವಿರುದ್ಧವೆನಿಸುವ ಜೀವನಕ್ರಮಗಳನ್ನು ಎದುರಾಗಿಸಿ ನೋಡುವ ವಿಧಾನ ಇಲ್ಲಿದೆ. ಒಳಿತಿನ ಪರವಾಗಿದ್ದುಕೊಂಡು ವಿಫಲನಾದ ಕುಪ್ಪಣ್ಣಯ್ಯ ಮತ್ತು ಕೆಡುಕಿನ ಪರವಾಗಿದ್ದುಕೊಂಡು ಸಫಲನಾದ ಭಾಸ್ಕರ ಹೆಗಡೆಯನ್ನು ಮುಖಾಮುಖಿಯಾಗಿಸುವ ಪ್ರಕ್ರಿಯೆಯಲ್ಲೇ ಜೀವನ ಸಾಫಲ್ಯದ ಕುರಿತ ಜಿಜ್ಞಾಸೆ ಓದುಗನ ಮನದಲ್ಲಿ ಹುಟಿಕೊಳ್ಳುವಂತೆ ಮಾಡುತ್ತದೆ. ಜೀವನ ಸಫಲವಾಗಲು ಅಥವಾ ವಿಫಲವಾಗಲು ಎಂಥ ಶಕ್ತಿ ಕೇಂದ್ರಗಳು ಕೆಲಸ ಮಾಡುತ್ತವೆ ಎಂಬ ಸೂಚನೆಯನ್ನು ನೀಡುತ್ತದೆ. ತದ್ವಿರುದ್ಧವೆನಿಸುವ ಸಂಗತಿ, ಪಾತ್ರ, ಸಂದರ್ಭಗಳನ್ನು ಸಮಾನ ಕುತೂಹಲ ಮತ್ತು ಸಹಾನುಭೂತಿಗಳಿಂದ ಹಲವು ನೆಲೆಗಳಲ್ಲಿ ಪರಿಶೀಲಿಸಿ ಪರಿಭಾವಿಸಿಕೊಳ್ಳುತ್ತಾ ಆ ಪ್ರಕ್ರಿಯೆಯನ್ನು ಓದುಗರ ಮುಂದೆ ಬಿಚ್ಚಿಡುತ್ತದೆ. ಈ ಪ್ರಕ್ರಿಯೆಯ ಮೂಲಕ ಹೊರಡಬಹುದಾದ ಸತ್ಯಗಳನ್ನು ಬಿಡಿಸಿ ಹೇಳದಿದ್ದರೂ ತನ್ನ ಶೋಧದಲ್ಲಿ ಓದುಗರನ್ನೂ ಸಹಭಾಗಿಗಳನ್ನಾಗಿ ಮಾಡಿಕೊಂಡು ಅವರವರ ತೀರ್ಮಾನಗಳಿಗೆ ಅವರವರೇ ತಲುಪಲು ಸಾಧ್ಯವಾಗುವಂಥ ಬಂಧವನ್ನು ಕಾಣುತ್ತೇವೆ.

ಪರಂಪರಾಗತ ಸಾಂಸ್ಕøತಿಕ – ಸಾಮಾಜಿಕ ಆವರಣದೊಳಗೆ ನುಸುಳುವ ಸ್ವಾರ್ಥ ಕಲುಷಿತ ರಾಜಕೀಯವು ಭಾಸ್ಕರ ಹೆಗಡೆಯ ರೂಪದಲ್ಲಿ ಮೂರ್ತವಾಗಿದೆ. ಆತನ ಬಗ್ಗೆ ಮೆಚ್ಚುಗೆಯಾಗಲೀ ತಿರಸ್ಕಾರವಾಗಲೀ ಕಾಣದೆ ಒಂದು ಬಗೆಯ ವಿಷಾದ ಕೃತಿಯುದ್ದಕ್ಕೂ ವ್ಯಾಪಿಸಿಕೊಂಡಿದೆ. ಯಾವ ರೀತಿಯ ವ್ಯಕ್ತಿಗಳನ್ನು ಹೊಗಳು ಭಟರ ಗುಂಪು, ಸಾಹಿತ್ಯ ಕೃತಿಗಳು ವೈಭವೀಕರಿಸುತ್ತವೆಯೋ ಅವುಗಳನ್ನು ಈ ಕಾದಂಬರಿಯು ಸಂದೇಹದಿಂದ ನೋಡುತ್ತದೆ. ಬ್ರಾಹ್ಮಣಿಕೆಯ ಬಗ್ಗೆ ಚರ್ಚೆ ನಡೆಯುವ ಹೊತ್ತಿನಲ್ಲಿ “ಅದೆಲ್ಲ ಹುಂಬ ಕಲ್ಪನೆ ವಸಂತಣ್ಣ. ಬ್ರಾಹ್ಮಣರಲ್ಲಿ ವಿಶೇಷ ಬುದ್ಧಿವಂತಿಕೆ ಅಥವಾ ಪ್ರತಿಭೆ ಇದೆ ಎನ್ನುವುದನ್ನು ನಾನು ಒಪ್ಪುವುದಿಲ್ಲ. ಮಾಸ್ತಿ, ಕಾರಂತ, ಬೇಂದ್ರೆ, ದೇವುಡು ಇವರೆಲ್ಲ ದೊಡ್ಡ ಪ್ರತಿಭಾವಂತರು ನಿಜ. ಹಾಗಂತ ಕುವೆಂಪು, ಪೂಚಂತೇ, ದೇವನೂರು, ಶಿವರುದ್ರಪ್ಪ, ಕಣವಿ, ಕಟ್ಟೀಮನಿ ಕೂಡಾ ಅಷ್ಟೇ ಪ್ರತಿಭಾವಂತರು ಅಂತ ನನ್ನ ನಂಬುಗೆ. ಪ್ರತಿಭೆ ಎನ್ನುವುದು ಪ್ರಕೃತಿ ಕೊಡುವ ವರ. ಪ್ರಕೃತಿಗೆ ನಮ್ಮ ಹಾಗೆ ಇಂವ ಇಂಥ ಜಾತಿಯವ ಅಂವ ಇಂಥ ಜಾತಿಯವ ಎನ್ನುವ ಭೇದ ಇದೆಯಾ?” (ಪುಟ 59) ಎನ್ನುವ ಕುಪ್ಪಣ್ಣಯ್ಯನ ನೇರ ನಡೆ ನುಡಿಗಳಲ್ಲಿ ವ್ಯಕ್ತವಾಗುವ ಜಾತ್ಯತೀತ ಮನೋಭಾವ ಭಾಸ್ಕರ ಹೆಗಡೆಯಲ್ಲಿ ಇಲ್ಲ. ಅಧ್ಯಾಪಕನ ನೇಮಕಾತಿಯ ಸಂದರ್ಭದಲ್ಲಿ ತನ್ನ ಗುರುಗಳೂ, ಶಾಲೆಯ ಮುಖ್ಯೋಪಾಧ್ಯಾಯರೂ ಆದ ತಿಮ್ಮಪ್ಪಯ್ಯ ಮೇಷ್ಟ್ರ ಮುಂದೆ ಬ್ರಾಹ್ಮಣ ವಿರೋಧಿ ಮಾತುಗಳನ್ನಾಡುತ್ತಾ ಪ್ರಗತಿಪರನೆಂದು ತೋರಿಸಿಕೊಳ್ಳುವ ಆತನಲ್ಲಿ ತನ್ನ ಸಮುದಾಯಕ್ಕೆ ಸೇರಿದ ತಿರುಮಲೇಶನಿಗೆ ಉದ್ಯೋಗವನ್ನು ಕೊಡಿಸುವ ಸ್ವಜನ ಪಕ್ಷಪಾತವಿದೆಯೇ ಹೊರತು ಬೇರೇನಲ್ಲ. ನಿರ್ದಿಷ್ಟ ಜಾತಿಯೊಂದನ್ನು ಹೊಗಳುವುದು ಅಥವಾ ತೆಗಳುವುದೇ ಪ್ರಗತಿಪರ ಚಿಂತನೆ ಎಂಬ ಭಾವನೆಯು ಬೇರು ಬಿಟ್ಟಿರುವ ಈ ಹೊತ್ತಿನಲ್ಲಿ ಎಲ್ಲ ಜಾತಿಯವರನ್ನೂ ಮನುಷ್ಯರೆಂದು ಪರಿಗಣಿಸಿ ಅವರನ್ನು ಪ್ರೀತಿಯ ತಂತುವಿನಲ್ಲಿ ಬೆಸೆಯುವ ಕುಪ್ಪಣ್ಣಯ್ಯನವರ ವಿಶಾಲ ಮನಸ್ಸಿಗೂ ಮೇಲುಜಾತಿಯವರನ್ನು ಗಟ್ಟಿದನಿಯಲ್ಲಿ ತೆಗಳುತ್ತಾ ತನ್ನ ಜಾತಿಯವರನ್ನು ಶಕ್ತಿಮೀರಿ ಪ್ರೋತ್ಸಾಹಿಸುವ ಭಾಸ್ಕರ ಹೆಗಡೆಯ ದ್ವಿಮುಖ ನೀತಿಗೂ ಬಹಳ ಅಂತರವಿದೆ. ಹಿರಿಯ ಕಿರಿಯರಂಬ ಭೇದವಿಲ್ಲದೆ ಸಾಧು ಸ್ವಭಾವದವರ ಮೇಲೆ ಏರಿಹೋಗುವ, ತನಗಿಂತ ಉನ್ನತ ಸ್ಥಾನದಲ್ಲಿರುವವರ ಕಾಲಿಗೆ ಬೀಳುವ, ಮಾತುಮಾತಿಗೂ ದೇವರಾಣೆ ಹಾಕಿ ಅಂಗಾಲಾಚುವ ಭಾಸ್ಕರ ಹೆಗಡೆಯ ಅತಿವಿನಯವು ಧೂರ್ತ ಲಕ್ಷಣದ ಸಂಕೇತವಾಗಿದೆ.

ಭಾಸ್ಕರ ಹೆಗಡೆಯಿಂದ ಬಸಿರಾಗಿ ಆತ್ಮಹತ್ಯೆಯನ್ನು ಮಾಡಿಕೊಂಡ ಶೋಭಾ ಆಧುನಿಕ ಸಮಾಜದಲ್ಲಿ ಹೆಣ್ಣು ಅನುಭವಿಸುತ್ತಿರುವ ಶೋಷಣೆ ಮತ್ತು ದುರಂತದ ಪ್ರತೀಕವಾಗಿದ್ದಾಳೆ. ಸಮಾಜದ ಪ್ರತಿಷ್ಠಿತ ವ್ಯಕ್ತಿಯಾದ ದುಗ್ಗಪ್ಪ ಹೆಗಡೆಯವರು ಕೆಲಸದ ಹೆಣ್ಣಾಳುಗಳೊಂದಿಗೆ ಚಕ್ಕಂದವಾಡಿದ ಕತೆಗಳನ್ನು ಬಣ್ಣಿಸತೊಡಗುವಾಗ ‘ಈ ಪ್ರಾಯದಲ್ಲಿ’ ತಾನು ಕೇಳಿ ಸಂಭ್ರಮಿಸುವುದೇನಿದೆ ಎಂದುಕೊಂಡು ಒಳನಡೆಯುವ ಹೆಂಡತಿ ದೇವಕಿಯಮ್ಮನು ವಾರ್ಧಕ್ಯದ ಹರೆಯದಲ್ಲೂ ಅವರನ್ನು ತನ್ನ ಸೊಂಟದಲ್ಲಿ ‘ಕರಗಿಸುವ’ ದಿಟ್ಟೆ. “ಈ ಪ್ರಾಯದಲ್ಲೂ ನಿಮಗೆ ಇಷ್ಟು ಹುಚ್ಚಿದ್ದರೆ, ಇನ್ನು ಮೂವತ್ತಾಗದ ಹುಡುಗ ಆತ್ಮಹತ್ಯೆ ಮಾಡಿಕೊಂಡ ಹುಡುಗಿಗೆ ಬಸುರು ಮಾಡಿದ್ದರಲ್ಲಿ ವಿಶೇಷ ಏನಿದೆ?” (ಪುಟ 79) ಎಂದು ಹಾಸ್ಯ ಮಾಡುವ ಆಕೆಯದ್ದು ಅಳು ನುಂಗಿ ನಗು ತೋರಿಸುವ ಪರಿಸ್ಥಿತಿಯೇ. ನಾಟಿ ಕೆಲಸ ಇಲ್ಲವೇ ಮನೆಗೆಲಸಕ್ಕೆ ಬರುವ ಹೆಂಗಸರೊಂದಿಗೆ ಸೊಂಟದ ಕೆಳಗಿನ ಮಾತುಗಳನ್ನು ಆಡುವ ತನ್ನ ಗಂಡ ಸಾಚಾ ಅಲ್ಲ ಎಂದು ಮದುವೆಯಾದ ಹೊಸತರಲ್ಲೇ ತಿಳಿದುಕೊಂಡಿದ್ದ ಆಕೆ ಬದುಕಿನುದ್ದಕ್ಕೂ ಅದೆಂಥ ಜ್ವಾಲಾಮುಖಿಯನ್ನು ತಲೆಯೊಳಗೆ ತುಂಬಿಕೊಂಡಿದ್ದಿರಬಹುದು ಎಂದು ಓದುಗರೇ ಊಹಿಸಬೇಕಷ್ಟೇ. ಗಂಡನಿದ್ದೂ ಇಲ್ಲದ ಮೇರಿ ಮತ್ತು ರಶ್ಮಿಯ ಬದುಕಿನ ಒಳದಾರಿಗಳು ಭಾಸ್ಕರ ಹೆಗಡೆಯ ಒಳದಾರಿಗಳನ್ನು ಸಂಧಿಸುತ್ತವೆ. ತನಗೆ ಬೇಕಾದಾಗ ಅವರಿಂದ ದೈಹಿಕ ಸುಖವನ್ನು ಪಡೆಯುವ ಭಾಸ್ಕರ ಹೆಗಡೆಯು ಅವರ ಪಾಲಿಗೆ ಏಣಿಯ ಮೆಟ್ಟಲು ಮಾತ್ರ. ಮೇರಿಯು ಆತನ ಮದ್ಯದಂಗಡಿಯ ಪಾಲುದಾರಿಕೆಯನ್ನು ಪಡೆದುಕೊಂಡರೆ ರಶ್ಮಿಯು ಅವನಿಂದ ನೆರವಿನಿಂದ ಚುನಾವಣೆಯ ಅಭ್ಯರ್ಥಿಯಾಗುತ್ತಾಳೆ. ಅಧಿಕಾರದ ಆಮಿಷಕ್ಕೆ ಒಡ್ಡಿಕೊಂಡ ವ್ಯಕ್ತಿಗಳು ಸುತ್ತಲಿನ ಮನುಷ್ಯರನ್ನು ಕೇವಲ ಉಪಕರಣಗಳಂತೆ ಬಳಸುವ ಬಗೆ, ಅಧಿಕಾರಶಾಹಿಯು ವ್ಯಕ್ತಿಗಳನ್ನು ಅಮಾನವೀಕರಣಗೊಳಿಸುವ ಪರಿಯನ್ನು ಅನಾವರಣಗೊಸಿದ್ದಾರೆ. ಭಾಸ್ಕರ ಹೆಗಡೆಯ ಸೋಗಲಾಡಿತನ ಮತ್ತು ಕಾಮುಕತೆಗಳು ಮುನ್ನೆಲೆಗೆ ಬರುವಷ್ಟು ಇವರ ‘ಪಾತಿವೃತ್ಯ’ದ ಪ್ರಶ್ನೆಯು ಮುನ್ನೆಲೆಗೆ ಬಾರದಿರುವುದು ಗಮನಾರ್ಹವಾಗಿದೆ. ಭಾಸ್ಕರ ಹೆಗಡೆಯ ಕಣ್ಣು ತಪ್ಪಿಸಿ ಬೇರೆಯವರ ಸಂಗವನ್ನು ಮಾಡುವ ಮೂಲಕ ಬದುಕಿನ ಒಳದಾರಿಯನ್ನು ಹುಡುಕುವ ಇವರು ತಮ್ಮ ಹೆಣ್ತನವನ್ನೇ ಅಸ್ತ್ರವನ್ನಾಗಿಸಿಕೊಂಡು ಹೇಗೆ ಗುರಿಯನ್ನು ಸಾಧಿಸಬಲ್ಲರು ಎಂಬುದನ್ನು ಧ್ವನಿಸುವ ಕಾದಂಬರಿಯು ಗಂಡಸರನ್ನು ಶೋಷಕರನ್ನಾಗಿಯೂ ಹೆಂಗಸರನ್ನು ಶೋಷಿತರನ್ನಾಗಿಯೂ ಕಲ್ಪಿಸಿ ಅಭ್ಯಾಸವಾಗಿರುವ ಈ ಹೊತ್ತಿನಲ್ಲಿ ‘ಶೋಷಣೆ’ಯ ಕುರಿತು ಇರುವ ಸಾಮಾನ್ಯ ನಂಬಿಕೆಗಳನ್ನು ಒಡೆಯುತ್ತದೆ. ‘ಪತಿವ್ರತೆ’ ಮತ್ತು ಸುಧಾರಿತ ಹೆಣ್ಣುಗಳಿಗಿಂತ ಭಿನ್ನವಾದ ಪಾತ್ರಮಾದರಿಗಳನ್ನು ಸೃಷ್ಟಿಸುವ ಮೂಲಕ ಆದರ್ಶ ಮತ್ತು ಸಂಪ್ರದಾಯದ ನೆಲೆಗಳಿಗಿಂತ ವಾಸ್ತವದ ನೆಲೆಗಳಿಗೆ ಸಮೀಪವಾಗುತ್ತದೆ. ಹಾಗೆಂದು ಈ ಕಾದಂಬರಿಯಲ್ಲಿ ಕೆಟ್ಟವರೇ ತುಂಬಿಕೊಂಡಿದ್ದಾರೆ, ಇದರಲ್ಲಿ ದುಷ್ಟಶಕ್ತಿಗಳ ಮೇಲುಗೈ ಮಾತ್ರವಿದೆ ಎಂದಲ್ಲ. ಕ್ರೈಸ್ತ ಸಮುದಾಯಕ್ಕೆ ವಚ್ಚ (ವಲೇರಿಯನ್ ಡಿಸೋಜ) ಮನುಷ್ಯತ್ಬದ ಪ್ರತೀಕವಾಗಿದ್ದಾನೆ. “ನಾವು ಆಗಾಗ ಮನುಷ್ಯರಾಗಿರಬೇಕು. ಮನುಷ್ಯರಾಗಿ ಬದುಕಬೇಕು ಅನ್ನುತ್ತಿದ್ದರೂ ನಿಜವಾಗಿಯೂ ನಾವು ಮನುಷ್ಯರಾಗಿ ಇಲ್ಲದಿರುವುದು ಹೆಚ್ಚು (ಪುಟ 85) ಎನ್ನುತ್ತಾ ಕಾದಂಬರಿಯ ಮೂಲಶ್ರುತಿಯನ್ನೇ ತನ್ನ ದುಗುಡದ ಮೂಲಕ ವ್ಯಕ್ತಪಡಿಸುತ್ತಾನೆ. ತಾಳೆ ಮರದಿಂದ ಶೇಂದಿಯನ್ನು ತೆಗೆಯುವುದು ಬಿಲ್ಲವರ ಕುಲಕಸುಬಾಗಿದೆಯೇ ಹೊರತು ಕ್ರೈಸ್ತರ ವೃತ್ತಿಯಲ್ಲ. ಆದರೆ ವಚ್ಚನು ಆ ಕೆಲಸಕ್ಕೆ ತೊಡಗಬೇಕಾಗಿ ಬಂದದ್ದು ಆಕಸ್ಮಿಕವಾಗಿ. ಪಕ್ಕದ ಮನೆಯ ಚಂದಯ್ಯ ಪೂಜಾರಿಯು ವಾಯಿದೆ ಜ್ವರ (ಟೈಫಾಯ್ಡ್) ಕ್ಕೆ ಬಲಿಯಾಗಿ ಹಾಸಿಗೆ ಹಿಡಿದಾಗ ಅವನ ಕುಟುಂಬಕ್ಕೆ ಉಪವಾಸವೇ ಗತಿಯಾಗುತ್ತದೆ. ಆಗ ವಚ್ಚನು ಅವರ ಕಷ್ಟವನ್ನು ನೋಡಲಾರದೆ ಮರಗಳನ್ನು ಏರಿ ಅವುಗಳಿಂದ ಶೇಂದಿಯನ್ನು ತೆಗೆದು ಅದರಿಂದ ದೊರಕುವ ಆದಾಯವನ್ನು ನೀಡುವ ಮೂಲಕ ಆ ಕುಟುಂಬವನ್ನು ಬದುಕಿಸುತ್ತಾನೆ. ಭಾಸ್ಕರ ಹೆಗಡೆಯಂತೆ ಹೆಣ್ಣಿನ ನಂಬಿಕೆಗೆ ದ್ರೋಹವನ್ನು ಬಗೆಯದೆ, ಅವರ ಅಸಹಾಯಕತೆಯನ್ನು ತನ್ನ ತೆವಲು ತೀರಿಸಲು ಉಪಯೋಗಿಸಿಕೊಳ್ಳದೆ ಚಂದಯ್ಯ ಪೂಜಾರಿಯ ಹೆಂಡತಿ ಸೀತುವಿನ ಪಾಲಿಗೆ ಅಣ್ಣನಾಗಿ ಅವಳ ಮಕ್ಕಳನ್ನು ಪೊರೆಯುತ್ತಾನೆ. ಕತ್ತಲೆಯಲ್ಲಿರುವ ಕುಟುಂಬದ ನಡುವೆ ಸ್ನೇಹದೀಪವನ್ನು ಬೆಳಗಿಸುತ್ತಾನೆ. ಸಹೋದರತೆಯನ್ನು ಅರಳಿಸುತ್ತಾನೆ. ‘ಜಾತಿ ಬಾಂಧವರು ಬಹಿಷ್ಕಾರವನ್ನು ಹಾಕುವರೇ?’ ಎಂಬ ಪ್ರಶ್ನೆಗೆ ‘ನಮ್ಮ ಪಾದ್ರಿಗಳು ಕಳ್ಳು ಕುಡಿಯುತಾರೆ. ಆದ್ದರಿಂದ ನಾವು ಕಳ್ಳು ತೆಗೆದುಕೊಟ್ಟರೆ ತಪ್ಪೇನು?’ ಎಂದು ಉತ್ತರಿಸುವ ವಚ್ಚನು ಜಾತಿಧರ್ಮಗಳ ಕಟ್ಟುಪಾಡುಗಳನ್ನು ಮೀರಿ ಮಾನವೀಯತೆಯನ್ನು ಅನಾವರಣಗೊಳಿಸುತ್ತಾನೆ. ‘ನಿನ್ನಂತೆ ನಿನ್ನ ನೆರೆಮನೆಯವನನ್ನೂ ಪ್ರೀತಿಸು’ ಎಂದ ಏಸುಕ್ರಿಸ್ತನ ಮಾತಿಗೆ ಉದಾಹರಣೆಯಾಗುತ್ತಾನೆ. ನಾಲ್ಕನೇ ಅಧ್ಯಾಯದಲ್ಲಿರುವ ಈ ಭಾಗವು ಬಿಡಿ ಕತೆಯನ್ನು ಓದಿದ ಅನುಭವವನ್ನು ಉಂಟು ಮಾಡುತ್ತದೆ.

ವ್ಯಕ್ತಿಯ ಪ್ರಜ್ಞೆಯಲ್ಲಿ, ಅವನು ಬದುಕುತ್ತಿರುವ ಸಮಾಜದಲ್ಲಿ ಕಾಣಿಸಿಕೊಂಡ ಪಲ್ಲಟಗಳನ್ನು ದಾಖಲಿಸುವ ಕಾದಂಬರಿಯಲ್ಲಿ ನ್ಯಾಯ ಬೆಲೆ ಅಂಗಡಿಯನ್ನು ಸ್ಥಾಪಿಸುವ ಸನ್ನಿವೇಶವಿರುವುದರಿಂದ ಅದು ಎಪ್ಪತ್ತರ ದಶಕ ಎಂದು ಅರ್ಥಮಾಡಿಕೊಳ್ಳಬಹುದು. ಕನ್ನಡದ ಬಹುತೇಕ ಕಾದಂಬರಿಗಳಲ್ಲಿ ಸಮಾಜದ ಚಿತ್ರಣವಿರುವುದು ನಿಜವಾದರೂ ಅವುಗಳು ಹೆಚ್ಚಾಗಿ ನಾಯಕ ಪ್ರಧಾನವಾಗಿದ್ದು ವ್ಯಕ್ತಿಯ ವೈಯಕ್ತಿಕ ಬದುಕಿನ ಕಡೆ ಲಕ್ಷ್ಯವನ್ನು ಇಟ್ಟುಕೊಂಡಿರುತ್ತವೆ. ಆದರೆ ತನ್ನದೇ ಆದ ಕಟ್ಟುಕಟ್ಟಳೆಗಳೊಂದಿಗೆ ಬದುಕುತ್ತಿದ್ದ ಸಮಾಜವು ಧೂರ್ತನೊಬ್ಬನ ಚಟುವಟಿಕೆಗಳಿಗೆ ಬಲಿಯಾಗಿ ತಾನು ನಿರೀಕ್ಷಿಸದಿದ್ದ ವಿದ್ಯಮಾನಗಳಿಗೆ ಮೂಕಸಾಕ್ಷಿಯಾಗುವುದು ಈ ಕಾದಂಬರಿಯ ವಸ್ತು. ಸಮಾಜದಲ್ಲಿ ಭ್ರಷ್ಟಾಚಾರ ಬೆರೆತು ಹೋಗಿರುವುದನ್ನು ಮೂರ್ತವಾಗಿ ಅನುಭವಕ್ಕೆ ತಂದುಕೊಡುವ ಕಾದಂಬರಿಯು ಕಪ್ಪುಬಿಳುಪಿನ ಪಾತ್ರಚಿತ್ರಣದಲ್ಲಿ ಲೀನವಾಗದೆ, ಅನುಕರಣೆಗೆ ಯೋಗ್ಯರಾದ ಒಳ್ಳೆಯವರು ಮತ್ತು ತಿರಸ್ಕಾರಕ್ಕೆ ಅರ್ಹರಾದ ಕೆಟ್ಟವರು ಯಾರು ಎಂಬ ನೈತಿಕ ತೀರ್ಮಾನವನ್ನು ಕೊಡುವುದರಲ್ಲಿ ನಿರತವಾಗದೆ ಮನುಷ್ಯ ಸ್ವಭಾವದ ವೈವಿಧ್ಯಗಳನ್ನು ಕಂಡು ಅರ್ಥ ಮಾಡಿಕೊಳ್ಳುವ ಕುತೂಹಲವನ್ನು ಹೊಂದಿದೆ. ಜನನಾಯಕರೆನಿಸಿಕೊಳ್ಳುವವರು ಮಾಡುವ ಅನ್ಯಾಯಗಳನ್ನು ಬಯಲಿಗೆಳೆಯುವ ಮೂಲಕ ಸಮಾಜದ ಅವನತಿಯ ಚಿತ್ರವನ್ನು ನೀಡುವುದರೊಂದಿಗೆ ಅವರ ಅಸ್ತಿತ್ವ ಮತ್ತು ವ್ಯಕ್ತಿತ್ವದೊಳಗೆ ಹುದುಗಿಕೊಂಡಿರುವ ವ್ಯಂಗ್ಯಗಳನ್ನು ನೇರವಾಗಿ ಓದುಗರ ಮುಂದಿಡುವ ಕಾದಂಬರಿಯು ಭಾವುಕತೆ, ಬೌದ್ಧಿಕತೆಗಳನ್ನು ಬಿಟ್ಟುಕೊಟ್ಟು, ನಿರ್ದಿಷ್ಟ ವ್ಯಕ್ತಿ ಮತ್ತು ಸನ್ನಿವೇಶಗಳ ಮೂಲಕ ಅವರು ಬದುಕುತ್ತಿರುವ ಸಮಾಜ ಸಂಸ್ಕøತಿಗಳನ್ನು ಅವಲೋಕಿಸುತ್ತದೆ.

ಸಾಮಾನ್ಯವಾಗಿ ಹೆಚ್ಚಿನ ಕಾದಂಬರಿಗಳ ಮುಖ್ಯ ಪಾತ್ರ ಅಥವಾ ವ್ಯಕ್ತಿಗಳು ತಮ್ಮ ಬದುಕಿನಲ್ಲಿ ಸಾಕಷ್ಟು ಕಷ್ಟ ಸುಖಗಳನ್ನುಂಡು, ಒಳ್ಳೆಯ ಅಥವಾ ಕೆಟ್ಟ ಕೆಲಸಗಳನ್ನು ಮಾಡಿ, ಅನೇಕ ಬಗೆಯ ಏರಿಳಿತಗಳನ್ನು ಕಂಡು ಮಾಗುತ್ತಾ ಬೆಳೆಯುತ್ತಾರೆ. ಕಾದಂಬರಿಯ ಕೊನೆಗೆ ಬರುವಷ್ಟರಲ್ಲಿ ಲೌಕಿಕ ಕಾಮನೆಗಳಿಂದ ಕಳಚಿಕೊಂಡು ವೈರಾಗ್ಯದ ಅಂಚನ್ನು ಮುಟ್ಟಿರುತ್ತಾರೆ. ಕೆಟ್ಟವರು ಕಠಿಣ ಶಿಕ್ಷೆಗೆ ಒಳಗಾಗಿ ಅಪರಾಧಿ ಭಾವದಿಂದ ಕುಸಿದಿರುತ್ತಾರೆ ಇಲ್ಲವೇ ಬದುಕಿನ ಶೂನ್ಯತೆಯ ದರ್ಶನವನ್ನು ಮಾಡಿಕೊಂಡು ಸಾಯುತ್ತಾರೆ. ಆದರೆ ಇಲ್ಲಿ ಭಾಸ್ಕರ ಹೆಗಡೆಯು ಕೊನೆಯವರೆಗೂ ತನ್ನ ಅಹಂಕಾರ, ವ್ಯಾಮೋಹ, ಸ್ವಾರ್ಥಗಳಿಂದ ದೂರವಾಗುವುದಿಲ್ಲ. ಮರ್ಯಾದೆಯನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬಂದರೂ ಅವನಲ್ಲಿ ಪಶ್ಚಾತ್ತಾಪ, ಪಾಪಪ್ರಜ್ಞೆ ಹುಟ್ಟುವುದಿಲ್ಲ. ತೀರಾ ಖಳನಾಯಕನೆಂದು ಹೇಳಲಾಗದಿದ್ದರೂ ಅವನದ್ದು ಪ್ರತಿನಾಯಕನ ಪಾತ್ರಕ್ಕೆ ಹತ್ತಿರವಾಗಿದೆ. ಆದ್ದರಿಂದ ಕಾದಂಬರಿಯಲ್ಲಿ ಭಾವುಕತೆಯ ಅಂಶ ಕಡಿಮೆಯಾಗಿದ್ದು ಪಾತ್ರಚಿತ್ರಣ, ಘಟನೆಗಳ ನಿರೂಪಣೆ, ಸನ್ನಿವೇಶದ ವ್ಯಾಖ್ಯಾನ ವಿಶ್ಲೇಷಣೆಗಳಲ್ಲಿ ವಸ್ತುನಿಷ್ಠತೆಯು ಕಂಡುಬರುತ್ತದೆ. ಮೊಗಸಾಲೆಯವರ ಇತರ ಕಾದಂಬರಿಗಳಲ್ಲಿ ನಿರೂಪಕರು ತಮ್ಮ ನಾಯಕರೊಂದಿಗೆ ದೂರವನ್ನು ಕಾಯ್ದುಕೊಂಡರೂ ಅವರ ಮೆಚ್ಚುಗೆ ತಮ್ಮ ತಮ್ಮ ಪಾತ್ರಗಳ ಬಗ್ಗೆ ಹರಿದಿರುವುದು ಸ್ಪಷ್ಟವಾಗಿದೆ. ಆದರೆ ಈ ಕಾದಂಬರಿಯ ನಿರೂಪಣೆಯಲ್ಲಿ ಮೆಚ್ಚುಗೆ ಆರಾಧನ ಭಾವಗಳ ಬದಲು ಒಂದು ಬಗೆಯ ವಿಮರ್ಶೆಯು ಹುದುಗಿರುವಂತೆ ಭಾಸವಾಗುತ್ತದೆ. ಉಳಿದವರನ್ನು ಹಿಂಸಿಸುವ ಭಾಸ್ಕರ ಹೆಗಡೆಯು ತನ್ನ ಕ್ರೌರ್ಯದಿಂದ ತಾನೇ ಬಳಲಿ, ಶಿಕ್ಷೆಯನ್ನು ಅನುಭವಿಸುವ ಅಥವಾ ದುರಂತದ ಕಡೆ ಸಾಗುವ ಮೂಲಕ ತನ್ನ ಸತ್ಯವನ್ನು ಅರಿಯುವ ಯಾತನಾಮಯ ಸ್ಥಿತಿಗೆ ತಲುಪುವ ಬಗೆಯನ್ನು ಮೊಗಸಾಲೆಯವರು ತಮ್ಮ ಮುಂದಿನ ಕಾದಂಬರಿಯ ವಸ್ತುವನ್ನಾಗಿಸಿಕೊಂಡರೆ ಹೊರ ಜಗತ್ತಿಗೆ ತನ್ನನ್ನು ಹೇಗೆ ಬೇಕಾದರೂ ತೋರಿಸಿಕೊಳ್ಳುವ ವ್ಯಕ್ತಿಯು ತನ್ನ ಅಂತರಂಗದ ಮುಂದೆ ಶರಣಾಗಿ, ತಾನು ಮಾಡಿದ ತಪ್ಪುಗಳಿಗೆ ಪರಿಹಾರವಿಲ್ಲ ಎಂದರಿತು ಹೈರಾಣಾಗುವ ಪರಿಸ್ಥಿತಿಯನ್ನು ಮನಶಾಸ್ತ್ರೀಯ ನೆಲೆಯಲ್ಲಿ ವಿಶ್ಲೇಷಿಸುವ ಅವಕಾಶ ಸೃಷ್ಟಿಯಾಗಬಹುದು.

ರಾಜಕೀಯವು ರಾಜ್ಯಭಾರವನ್ನು ನಡೆಸುವವರಿಗೆ ಮಾತ್ರ ಸೇರಿದ್ದು ಎಂಬ ಭಾವನೆಯು ಭಾರತದಲ್ಲಿ ಬೇರು ಬಿಟ್ಟಿದೆ. ಹಲವು ವೃತ್ತಿ ಹವ್ಯಾಸಗಳಲ್ಲಿ ತಲ್ಲೀನರಾದವರಿಗೆ ರಾಜಕೀಯದ ಗೊಡವೆ ಅಗತ್ಯವಿಲ್ಲ ಎಂದೆನಿಸುವುದರಿಂದ, ಕಣ್ಣು ತೆರೆದ ಕೂಡಲೇ ರಾಜಕೀಯ ರಂಗದ ಮೋಸ, ವಂಚನೆ, ಅಸತ್ಯ, ಅನ್ಯಾಯ, ಅಪಪ್ರಚಾರ, ಸ್ವಜನ ಪಕ್ಷಪಾತಗಳ ಚಿತ್ರಣಗಳು ಮೂಡುವುದರಿಂದ ಅದರ ಕುರಿತು ತಾತ್ಸಾರ ಭಾವನೆ ಮೂಡಿ ಸಹಜವಾಗಿಯೇ ಅಲ್ಲಿಂದ ದೂರವಾಗುತ್ತಾರೆ. ಭಾಸ್ಕರ ಹೆಗಡೆಯ ವಿರುದ್ಧ ನೆಲೆಯಲ್ಲಿರುವ ಕುಪ್ಪಣ್ಣಾಚಾರ್ಯ, ಡಾ. ಎಸ್. ಎನ್. ಭಟ್ಟ ಮತ್ತು ಅಶೋಕ ಹೆಗಡೆ ಮುಂತಾದವರು ಇಂಥ ಮನೋಭಾವರಾಗಿದ್ದಾರೆ. ಆದರೆ ಸಮಸ್ಯೆಗಳ ಸುಳಿಯಲ್ಲಿ ಸಿಕ್ಕಿದಾಗ ಅವರು ಕೈಕಾಲು ಬಿಡುವುದಿಲ್ಲ. ಕೈಕಾಲು ಬಡಿಯುತ್ತಲೇ ಅದನ್ನು ಎದುರಿಸುತ್ತಾರೆ. ಕಷ್ಟ ನಷ್ಟಗಳ ಹೆದ್ದೆರೆಗಳು ಅಪ್ಪಳಿಸಿದರೂ ಬಂಡೆಯಂತೆ ಗಟ್ಟಿಯಾಗಿ ನಿಲ್ಲುತ್ತಾರೆ. ದುಃಖ ಯಾತನೆಗಳ ಬೆಂಕಿಯಲ್ಲಿ ಸುಟ್ಟರೂ ಬೂದಿಯಾಗದೆ ಆ ಕುಲುಮೆಯಲ್ಲೇ ಕರಗಿ ಎರಕವಡೆದ ಚಿನ್ನದ ರೂಪದಲ್ಲಿ ಹೊರ ಬಂದು ಹೊಳೆಯುತ್ತಾರೆ. ಬಿರುಗಾಳಿಯ ಏಟು ತಿಂದು ದೋಣಿ ಹೊಯ್ದಾಡಿದರೂ ಅದನ್ನೇ ಆತುಕೊಂಡು ರಕ್ಷಣೆಯನ್ನು ಪಡೆಯುವ, ತನ್ನೊಂದಿಗೇ ಅದನ್ನೂ ದಡ ಸೇರಿಸುವ ಅಂಬಿಗನಂತೆ ಧೈರ್ಯದಿಂದ ಬದುಕು ಕಟ್ಟಿಕೊಂಡು ಗುರಿಯನ್ನು ಸಾಧಿಸುತ್ತಾರೆ. ಇಂಥವರು ಬದುಕು ತಮಗೆ ಮಾತ್ರ ಎಂದು ತಿಳಿದವರಲ್ಲ. ಪ್ರೀತಿ, ಕರುಣೆ, ತ್ಯಾಗಗಳನ್ನೇ ಜೀವಾಳವಾಗಿಟ್ಟುಕೊಂಡು ಉಳಿದವರಿಗೂ ಬದುಕು ನೀಡಲು ಯತ್ನಿಸುತ್ತಾರೆ. ಒಳಿತು ಕೆಡುಕುಗಳ ನಡುವಿನ ತಿಕ್ಕಾಟದಲ್ಲಿ ಒಳಿತಿನ ಶಕ್ತಿಗಳು ಅಸಹಾಯಕವಾಗಿ ಕೆಡುಕೇ ವಿಜೃಂಭಿಸುವಂತೆ ಕಂಡರೂ ಸರಿಯಾದ ಅರ್ಥದಲ್ಲಿ ಬದುಕುವ ಬಯಕೆಯನ್ನು ಹೊಂದಿರುವವರು ಇಂಥ ಸವಾಲುಗಳನ್ನು ಎದುರಿಸಿ ಬಾಳ್ವೆಗೆ ಭರವಸೆಯಾಗುತ್ತಾರೆ ಎಂಬ ಧ್ವನಿಯ ಮೂಲಕ ಕಾದಂಬರಿಯು ಧನಾತ್ಮಕ ಚಿಂತನೆಗೆ ದಾರಿ ಮಾಡಿ ಕೊಡುತ್ತದೆ. ಲೇಖಕರು ಜೀವನ್ಮುಖಿಯಾಗಿ ಚಿಂತಿಸುತ್ತಾರೆ ಎಂಬುದಕ್ಕೆ ಈ ಕಾದಂಬರಿಯು ಸಾಕಷ್ಟು ಪುರಾವೆಗಳನ್ನು ಒದಗಿಸುತ್ತದೆ. ಬದುಕು ಎಂದರೆ ಅನುಭವವೇ ಹೊರತು ಸಿದ್ಧಾಂತವಲ್ಲ ಎಂದು ಸಾರುತ್ತದೆ. ಔಪಚಾರಿಕ ಧೋರಣೆ, ವ್ಯವಸ್ಥೆಗಳನ್ನು ಬದಿಗೆ ಸರಿಸಿ ಬದುಕಿಗೆ ಕಣ್ಣಾಗುವ ಮೌಲ್ಯಗಳತ್ತ ತುಡಿಯುತ್ತದೆ.

ರಾಜಕೀಯವು ಮಾನವನ ಬದುಕನ್ನು ಆವರಿಸುವ ಬದುಕಿನ ಅನಿಶ್ಚಿತತೆ, ಗುರಿಯಿಲ್ಲದ ಕಾಯುವಿಕೆ, ಬೇರ್ಪಡುವ ಸಂಬಂಧಗಳು, ನಿರಪರಾಧಿಯ ಯಾತನೆಗಳಿಗೆ ಸಂಕೀರ್ಣ ರೂಪಕವೇ ನಿರ್ಮಾಣಗೊಂಡಿದೆ. ಚರಿತ್ರೆಯು ನಿರ್ದಯವಾಗಿ ಚಲಿಸುತ್ತದೆ ಎಂಬ ಸತ್ಯವನ್ನು ಕಾದಂಬರಿಯು ಮರೆಮಾಚುವುದಿಲ್ಲ. ಈ ಚಲನೆಯು ಜನರ ಮೇಲೆ ಬೀರುವ ಪರಿಣಾಮಗಳನ್ನು ಅಲಕ್ಷಿಸುವುದಿಲ್ಲ. ಬದುಕಿನ ಸುಖ, ಸಂಭ್ರಮ ಮತ್ತು ವಿಕೃತಿಗಳನ್ನು ಮುಖಾಮುಖಿಯಾಗಿಸಿ, ಸಾಮಾಜಿಕ ಪ್ರಕ್ರಿಯೆಗಳು ಮತ್ತು ಮನುಷ್ಯರ ಮನೋವ್ಯಾಪಾರಗಳ ಸಂಕೀರ್ಣ ಚಿತ್ರಗಳನ್ನು ನೇಯುವುದರೊಂದಿಗೆ ಪ್ರಪಂಚದ ಯಾವ ಕಡೆಯಲ್ಲೂ ಕಾಣಿಸಬಹುದಾದಂಥ ಸ್ವಾರ್ಥ ಪ್ರೇರಿತ ರಾಜಕೀಯ, ಪ್ರತ್ಯೇಕತೆ, ಸರ್ವಾಧಿಕಾರ, ಒಳಿತಿನ ಶಕ್ತಿಗಳ ಹುಟ್ಟಡಗಿಸುವ ಹುನ್ನಾರ ಮತ್ತು ಅಜ್ಞಾನದ ಒಟ್ಟು ಮೊತ್ತದ ಪರಿಣಾಮಗಳನ್ನು ದಾಖಲಿಸುವುದರಿಂದ, ವೈರುಧ್ಯಗಳಿಂದ ಕೂಡಿದ ಸಮಾಜದಲ್ಲಿ ಬದುಕುವ ಮನುಷ್ಯನ ಸ್ಥಿತಿ ಮತ್ತು ಸಾಧ್ಯತೆಗಳ ಬಗ್ಗೆ ಚಿಂತಿಸುವುದರಿಂದ ಈ ಕಾದಂಬರಿಯು ಎಲ್ಲ ಕಾಲಕ್ಕೂ ಸಲ್ಲುವ ಕೃತಿಯೆನಿಸಿಕೊಳ್ಳುತ್ತದೆ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter