ನನ್ನೊಲವಿನ . . . .ಗೆ, ಹೇಗಿದ್ದಿಯಾ? ಇಷ್ಟು ವರ್ಷಗಳ ನಂತರ ಕೇಳುತ್ತಿದ್ದೇನೆಂದು ಬೇಸರಬೇಡ. ನಿನಗೊಂದು ಪತ್ರ ಬರೆಯಬೇಕೆಂದು ನಾನು ಬಹುದಿನಗಳಿಂದ ಕಾಯುತ್ತಿದ್ದೆ. ನಾವು ಕಳೆದ ಸುಂದರಕ್ಷಣಗಳನ್ನು ಅಕ್ಷರಗಳಲ್ಲಿ ಹಿಡಿದಿಡಲು ಹಂಬಲಿಸಿದ್ದೆ. ಈಗ ಅದಕ್ಕೆ ಮುಹೂರ್ತ ಕೂಡಿಬಂದಂತಿದೆ. ನಮ್ಮಿಬ್ಬರ ದೃಷ್ಟಿಗಳು ಆಕಸ್ಮಿಕವಾಗಿ ಒಂದಕ್ಕೊಂದು ಸಂಧಿಸಿದ ಆ ಸಂಧ್ಯಾಕಾಲದಲ್ಲಿ ನನ್ನನ್ನು ಆಕರ್ಷಿಸಿದ್ದು ಸೌಂದರ್ಯಕ್ಕಿಂತಲೂ ಹೆಚ್ಚಾಗಿ ಸರಳತೆಗೆ ಕನ್ನಡಿ ಹಿಡಿದಂತಿದ್ದ ಆ ನಿನ್ನ ಮುಗ್ಧ ಮುಖ. ನೀನು ಅಪ್ರತಿಮ ರೂಪಸಿಯಲ್ಲ ಎನ್ನುವ ಸತ್ಯ ನಿನಗೂ ಗೊತ್ತಿದ್ದರಿಂದ ಈ ಮಾತು ನಿನಗೆ ಪಥ್ಯವಾಗಲಾರದು. ಅಲ್ಲಿಂದ ಆರಂಭವಾದ ನಮ್ಮ ನೋಟದ ಬೇಟೆ ಕಾಲಕ್ರಮದಲ್ಲಿ ಮಾತಾಗಿ ಬಯಲಾದ ಕ್ಷಣ ಖಂಡಿತಾ ನನಗೆ ನೆನಪಿಲ್ಲ. ನಿನಗೆ ನೆನಪಿದೆಯಾ.... ಆಗ ನೀನು ಲಂಗ ದಾವಣಿಯಲ್ಲಿ ಪುಟ್ಟ ಗುಬ್ಬಚ್ಚಿಯಂತೆ ಕಾಣುತ್ತಿದ್ದೆ. ಪ್ಯಾಂಟು, ಶರ್ಟು, ಚೂಡಿದಾರಗಳು ಅಷ್ಟಾಗಿ ಬಳಕೆಯಲ್ಲಿಲ್ಲದ ಕಾಲವದು. ನೋಡುನೋಡುತ್ತಿದ್ದಂತೆ ಕಳೆದುಹೋದವು ನೋಡು ನಲವತ್ತೈದು ವರ್ಷಗಳು. ಆದರೂ ಕಾಲೇಜಿನ ಕೊನೆಯ ವರ್ಷದ ಆ ದಿನಗಳು ಇಂದಿಗೂ ಕಚಗುಳಿಯಿಡುವ ಮಧುರಕ್ಷಣಗಳಲ್ಲವೇ...? ಆಗೊಮ್ಮೆ ಈಗೊಮ್ಮೆ ನೀನು ಸೀರೆಯಲ್ಲಿಯೂ ಮಿಂಚುತ್ತಿದ್ದೆ. ನಿನ್ನ ತೆಳ್ಳನೆಯ ದೇಹಕ್ಕೆ ಅಂಟಿದ ಸೀರೆಯಿಂದ ನಿನ್ನಲ್ಲೊಂದು ಅವ್ಯಕ್ತವಾದ ಸ್ನಿಗ್ಧತೆ ಹೊರಹೊಮ್ಮುತ್ತಿತ್ತು. ಸರಳತೆಯ ಮಾದರಿಯಂತಿದ್ದ ನೀನು ನನ್ನೊಂದಿಗೆ ನಿಧಾನವಾಗಿ ಹೆಜ್ಜೆ ಹಾಕುತ್ತಿದ್ದೆ. ಆಗೆಲ್ಲಾ ಅಪರೂಪಕ್ಕೆ ನಿನ್ನ ಕೈ ನನ್ನ ಕೈಯನ್ನು ಗೊತ್ತಿಲ್ಲದೆ ಸ್ಪರ್ಶಿಸುತ್ತಿತ್ತು. ಆ ಸ್ಪರ್ಶ ನನ್ನಲ್ಲಿ ಒಂದು ರೀತಿಯ ಪುಳಕವನ್ನು ಸೃಷ್ಟಿಸುತ್ತಿತ್ತು. ನಾವಿಬ್ಬರೂ ಯಾವುಯಾವುದೋ ವಿಷಯದ ಬಗ್ಗೆ ಗಂಟೆಗಟ್ಟಲೆ ಹರಟುತ್ತಿದ್ದೆವು. ನಮ್ಮ ಮಾತಿನಲ್ಲಿ ಸಾಹಿತ್ಯದಿಂದ ಹಿಡಿದು ರಾಜಕಾರಣದವರೆಗೆ ಎಲ್ಲವೂ ನುಸುಳುತ್ತಿತ್ತು. ನಮ್ಮ ಮಾತಿಗೆ ಪೂರ್ಣವಿರಾಮವೇ ಇರುತ್ತಿರಲಿಲ್ಲ. ಉದ್ದನೆಯ ಮರದ ತುಂಡು ನೆರಳಡಿಯಲ್ಲಿ ಕೂತು ನಮ್ಮದೇ ಆದ ನೆಮ್ಮದಿಯ ಸಾಮ್ರಾಜ್ಯದಲ್ಲಿ ಹಾರುಹಕ್ಕಿಗಳಾಗುತ್ತಿದ್ದೆವು. ಯಾವುದೋ ಮಾತಿನ ಮಧ್ಯೆ ನಾನೊಮ್ಮೆ ನಿನ್ನ ನತ್ತಿನ ಮೂಗನ್ನು ಒತ್ತಿದ್ದೆ. ನಿನ್ನ ನೋವಿನ ನಡುವೆ ಒಂದಿಷ್ಟು ರಕ್ತ ಅಲ್ಲಿ ಜಿನುಗಿತ್ತು. ನಾನು ಹೌಹಾರಿದ್ದೆ. ಆದರೆ ನೀನು ನಿರಾಳವಾಗಿ ಕುಲುಕುಲು ನಕ್ಕು ಸುಮ್ಮನಾಗಿದ್ದೆ. ನಿನ್ನ ಆ ನಗು ಇಂದಿಗೂ ನನ್ನ ಕಿವಿಗಳಲ್ಲಿ ಜೀವಂತವಾಗಿ ಪ್ರತಿಧ್ವನಿಸುತ್ತಿದೆ. ನಿನ್ನ ನಗುವಿನಲ್ಲೊಂದು ಚೆಲುವಿದೆ. ನಿನ್ನ ನಗು ನಿಷ್ಕಲ್ಮಶದ ಅಭಿವ್ಯಕ್ತಿ. ಅದು ನಿನಗೆ ಗೊತ್ತ...? ನಾನೀಗ ಬದುಕಿನ ಪಡುವಣ ದಿಕ್ಕಿನತ್ತ ಸೋತ ಹೆಜ್ಜೆಗಳನ್ನು ಇಡುತ್ತಿದ್ದೇನೆ. ನೀನು ನನಗಿಂತ ವಯಸ್ಸಿನಲ್ಲಿ ತುಸು ಚಿಕ್ಕವಳು. ವಿದೇಶದ ನೆಲದಲ್ಲಿ ನಿನ್ನ ಸೌಂದರ್ಯ, ದೇಹಕಾಂತಿ ಅಷ್ಟಾಗಿ ಮುಕ್ಕಾಗಿರಲಿಕ್ಕಿಲ್ಲ. ಒಂದಿಷ್ಟು ಸ್ಥೂಲತೆ ಬಂದಿರಬಹುದು. ನೀನಿನ್ನೂ ನವತರುಣಿಯಂತೆಯೇ ನನಗೆ ಬೆಳದಿಂಗಳ ಬಾಲೆಯಂತೆ ಭಾಸವಾಗುತ್ತಿರುವಿ. ಆದರೆ ನಿನ್ನ ನೆನಪಾದಾಗಲೆಲ್ಲ ನನ್ನಲ್ಲೀಗ ಆ ಮೊದಲಿನ ಭಾವನೆಗಳು ಕೆರಳುವುದಿಲ್ಲ. ಬದಲು ಆತ್ಮೀಯತೆಯ, ಕಾಳಜಿಯ, ನಿಸ್ವಾರ್ಥ ಪ್ರೀತಿಯ ವರ್ತುಲದಲ್ಲಿ ನಾವಿಬ್ಬರೂ ಪರಿಕ್ರಮಿಸುವಂತೆ ಭಾಸವಾಗುತ್ತಿದೆ. ವಯಸ್ಸಿಗೆ ಸಹಜವಾದ ಮಾನಸಿಕ ಸ್ಥಿತಿ ಇದಾಗಿರಬಹುದು. ಹಾಗೆಂದು ಆಗ ನಮ್ಮ ಒಡನಾಟದಲ್ಲಿ ನಾವೆಂದೂ ಸಭ್ಯತೆಯ ಎಲ್ಲೆ ಮೀರಿರಲಿಲ್ಲ ನೆನಪಿದೆಯಾ...? ನನ್ನೊಳಗೆ ನಿನ್ನ ಬಗ್ಗೆ ಒಂದು ರೀತಿಯ ಆಕರ್ಷಣೆ ಮನೆಮಾಡಿದ್ದು ನಿಜ. ಆದರೆ ಆ ಸೆಳೆತದ ಭಾವನೆಯಲ್ಲಿ ವಿಕಾರಗಳು ಎಂದೂ ಅಲೆಯೆಬ್ಬಿಸಿರಲಿಲ್ಲ. ನಿನಗೊಂದು ಸಿಹಿಮುತ್ತನ್ನು ಕೊಡಬೇಕೆಂದು ನನ್ನ ಬಹುದಿನಗಳ ಹಂಬಲವಿತ್ತು ಅಷ್ಟೆ. ಹಾಗಾಗಿ ಒಮ್ಮೆ ಧೈರ್ಯವಿಲ್ಲದೆ ನಿಧಾನಕ್ಕೆ ನಿನ್ನ ಎಡಗೈ ಕಿರುಬೆರಳನ್ನು ನಾನು ಮೆತ್ತಗೆ ಕಚ್ಚಿದ್ದೆ. ಆಗ ನಿನ್ನ ಕಣ್ಣಲ್ಲಿ ಮೂಡಿದ ಮಿಂಚು ನನಗೀಗಲೂ ನೆನಪಿದೆ. ಇಷ್ಟನ್ನು ಬಿಟ್ಟು ನಾವು ಎಂದೂ ಯಾವ ವಿಷಯದಲ್ಲಿಯೂ ಮುಂದುವರಿಯಲಿಲ್ಲ. ನನಗಾಗ ಅವಕಾಶಗಳು ಇರಲಿಲ್ಲವೆಂದಲ್ಲ. ಆದರೆ ನಮ್ಮ ನಂಬಿಕೆಯ ಸ್ನೇಹದ ಪ್ರೀತಿಯ ಬುನಾದಿಯ ಮೇಲೆ ಅನಗತ್ಯದ, ಇಬ್ಬರಿಗೂ ಅಪೇಕ್ಷಣೀಯವಲ್ಲದ ಕ್ರಿಯೆಗಳಿಗೆ ನಾವಿಬ್ಬರೂ ಆಸ್ಪದ ಕೊಡಲೇ ಇಲ್ಲ. ಹೀಗಾಗಿ ಇಂದಿಗೂ ನಮ್ಮ ನಡುವಿನ ಒಲವಿನ ಭಾವನಾತ್ಮಕ ಸಂಬಂಧಕ್ಕೆ ಚ್ಯುತಿ ಬಂದಿಲ್ಲ. ನಿನಗೆ ನೆನಪಿರಬಹುದು. ನಾವಿಬ್ಬರು ಒಂದೆರಡು ಸಿನೆಮಾಗಳನ್ನು ನೋಡಿದ್ದೆವು ಅಲ್ಲವೇ? ಅದೊಂದು ದೊಡ್ಡ ಸಾಹಸ. ಆಗ ಚಿತ್ರಮಂದಿರದಲ್ಲಿ ಅಕ್ಕಪಕ್ಕ ಕೂತರೂ ಅಪರಿಚಿತರಂತೆ ವರ್ತಿಸಿದ್ದೆವು. ಹೊಟೇಲಿನಲ್ಲಿ ಕೂತಾಗ ನೀನು ಮೆಲ್ಲನೆ ಪೊಟ್ಟಣ ಬಿಚ್ಚಿ ಮನೆಯಿಂದ ತಂದ ಕೊಬ್ಬರಿ ಮಿಠಾಯಿಯನ್ನು ನನಗೆ ಕೊಟ್ಟಿದ್ದೆ. ಅದರಲ್ಲಿ ನೀನೆಷ್ಟು ನನ್ನನ್ನು ಸಂಪೂರ್ಣವಾಗಿ ಆವರಿಸುತ್ತಿದ್ದಿ ಎನ್ನುವ ಪರಿಕಲ್ಪನೆಗೆ ನಾನಿಂದು ಕೂಡಾ ಪೂರ್ಣವಿರಾಮವನ್ನು ಹಾಕಿಲ್ಲ. ನಾನು ಕುಡಿದಿಟ್ಟ ಎಂಜಲು ನೀರಿನ ಗ್ಲಾಸನ್ನು ನೀನು ತುಟಿಗೊತ್ತಿದಾಗ ನಮ್ಮ ನಡುವಿನ ಬೇರ್ಪಡಿಸಲಾಗದ ಸ್ನೇಹಸೇತುವಿಗೊಂದು ಮುನ್ನುಡಿ ಬರೆದಾಗಿತ್ತು. ನಮ್ಮಿಬ್ಬರ ಚಿಂತನೆಯಲ್ಲಿ, ವಿಚಾರಗಳಲ್ಲಿ ಸಾಕಷ್ಟು ಸಾಮ್ಯತೆಯಿರುತ್ತಿತ್ತು. ಒಲವಿಗೆ ಇದೊಂದು ಇಂಬು ಎನ್ನುವ ಮಾತನ್ನು ನೀನು ನಂಬುತ್ತಿರಲಿಲ್ಲ. ಮಾತಿನುದ್ದಕ್ಕೂ ಒಮ್ಮೆ ನೀನು ಅಡಿಗಡಿಗೆ ನನ್ನ ಪುಸ್ತಕವನ್ನು ಎದೆಗವಚಿಕೊಂಡದ್ದನ್ನು ನಾನು ಸೂಕ್ಷ್ಮವಾಗಿ ಗಮನಿಸಿದ್ದೆ. ಆ ಅಪ್ಪುಗೆಯಲ್ಲಿ ಬಹುಶಃ ನೀನು ನನ್ನನ್ನು ಕಲ್ಪಿಸಿ ಸುಖಿಸುತ್ತಿದ್ದಿರಬೇಕು. ನಾನು ಪರೀಕ್ಷೆಯಲ್ಲಿ ಅತಿಕಡಿಮೆ ಅಂಕ ಗಳಿಸಿದ ನನ್ನ ಉತ್ತರಪತ್ರಿಕೆ ನಿನಗಂದು ಪ್ರೇಮಪತ್ರವಾಗಿ ಕಂಡಿರಬೇಕು. ಹಾಗಾಗಿ ನೀನದನ್ನು ನನ್ನಿಂದ ಕಸಿದು ಜೋಪಾನವಾಗಿ ಕಾಯ್ದಿರಿಸಿದ್ದೆ. ಅಪರೂಪಕ್ಕೆ ನಾನೊಮ್ಮೆ ಕೊಟ್ಟ ದುಂಡುಮಲ್ಲಿಗೆಯ ದಂಡನ್ನು ಒಪ್ಪವಾಗಿ ಮುಡಿದು ನನ್ನ ಮೂಗಿಗೆ ಸುವಾಸನೆಯ ಅಮಲೇರುವಂತೆ ಮಾಡಿದ್ದೆ. ಕಾಲೇಜುಡೇಯಲ್ಲಿ ಆಡಿದ ನಾಟಕದಲ್ಲಿನ ನನ್ನ ಹೆಣ್ಣಿನ ಪಾತ್ರಕ್ಕೆ ನೀನು ನಿನ್ನ ಸೀರೆ, ಕುಪ್ಪಸ, ಕೈಬಳೆಗಳನ್ನು ಕೊಟ್ಟಿದ್ದೆ. ಅವುಗಳನ್ನು ತೊಡುವಾಗ ನಾನು ನಾನಾಗಿರಲಿಲ್ಲ. ನಿನ್ನ ಸದಾ ಸ್ಪರ್ಶಿಸುತ್ತಿದ್ದ ಅವು ನನ್ನ ನರನಾಡಿಗಳಲ್ಲಿ ಬೆಚ್ಚಗಿನ ಸುಖವನ್ನು ಹರಿಸಿದ್ದವು. ನೀನು ಕದ್ದು ಮುಚ್ಚಿ ಬರೆಯುತ್ತಿದ್ದ ಪತ್ರಗಳನ್ನು ಓದಿ ಓದಿ ಹರಿಯಲಾಗದೆ ನಾನು ದೋಣಿ ಮಾಡಿ ನಮ್ಮೂರಿನ ನದಿಯಲ್ಲಿ ತೇಲಿಬಿಡುತ್ತಿದ್ದೆ. ಆಗ ನಮ್ಮ ನಡುವಿನ ನಿಷ್ಕಲ್ಮಶವಾದ ಪ್ರೇಮಭಾವನೆ ನಿರಂತರವಾಗಿ ಹೀಗೆಯೇ ಸಾಗುತ್ತಿರಲಿ ಎನ್ನುವ ಆಶಯ ನನ್ನದಾಗಿತ್ತು. ಹೀಗಿರುತ್ತ ನೀನು ಕ್ರಮೇಣ ಮಾತಿಲ್ಲದೆ, ಪತ್ರವಿಲ್ಲದೆ ನನ್ನಿಂದ ದೂರವಾಗುತ್ತಾ ಬಂದೆ. ಕಾರಣ ನಿನ್ನ ಮದುವೆ. ನಾನೂ ಮದುವೆಯಾದೆ. ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ಹೆಂಡತಿ ಮಕ್ಕಳು ನನಗಿದ್ದಾರೆ. ನಿನ್ನ ಒಳ್ಳೆಯ ಗುಣ ಹೃದಯವಂತಿಕೆಗೆ ನಿನಗೂ ಒಳ್ಳೆಯ ಸಂಗಾತಿ ಸಿಕ್ಕಿರಬೇಕಲ್ಲವೇ? ಆದರೂ ನನ್ನ ಪ್ರೀತಿಯ ಚೇತನ ಇಂದಿಗೂ ಬತ್ತಿಲ್ಲ ನೋಡು. ಈಗಲೂ ಅದು ಅಷ್ಟೇ ನವನವೀನವಾಗಿದೆ. ಭಾವನೆಗಳು ಕಾಲಗತಿಯಲ್ಲಿ ಪ್ರೌಢತೆಯನ್ನು ಪಡೆದಿರಬಹುದು. ಹಾಗೆಂದು ಪ್ರೀತಿಯ ತಾಯಿಬೇರಿಗೆಂದೂ ಧಕ್ಕೆಯಾಗಿಲ್ಲ. ಕಳೆದ ದಿನಗಳ ಅನುಕ್ಷಣದ ನೂರೆಂಟು ಸಣ್ಣಪುಟ್ಟ ಸಂಗತಿಗಳು, ಮಾತುಗಳು, ಹುಸಿಮುನಿಸಿನ ಕ್ಷಣಗಳು, ಉದ್ವೇಗ, ನಿರಾಳತೆ.... ಎಲ್ಲವೂ ನಿನಗೆ ನೆನಪಿರಲಿಕ್ಕಿಲ್ಲ. ಯಾಕೆಂದರೆ ನೀನು ನೆಲೆಸಿರುವ ದೂರದ ವಿದೇಶದ ನೆಲ ಅವೆಲ್ಲವನ್ನೂ ತನ್ನ ಕಾಲಗರ್ಭದಲ್ಲಿ ಕ್ರಮೇಣ ಕಬಳಿಸಿರಬೇಕು. ಈಗ ನನ್ನದೊಂದೇ ಇಚ್ಛೆ. ನಮ್ಮ ನಡುವಿನ ಬೇರೆಯದೇ ಆದ ಪ್ರೇಮ ಬದುಕಿನ ಚಿತ್ರಕ್ಕೊಂದು ಚೌಕಟ್ಟು ಸಿದ್ಧವಾಗುವ ಮೊದಲು ನೀನೊಮ್ಮೆ ನನ್ನೆದುರು ಇದ್ದಕ್ಕಿದ್ದಂತೆ ಬಂದು ನಿಲ್ಲಬಾರದೇ...... ನಿನಗೂ ಹಾಗೆ ಅನಿಸುತ್ತಿರಬಹುದಲ್ಲವೇ.... ಇಂತಿ ನಿನ್ನವನೇ ಆದ, ...... **************************
ಪ್ರೇಮಪತ್ರದಲ್ಲೊಂದು ಭಾವಪಯಣ
ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಿ
ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ
ಫೇಸ್‌ಬುಕ್ ಲಾಗಿನ್ ಬಳಸಿ ಕಮೆಂಟ್ ಮಾಡಿ
ಧರ್ಮಾನಂದ ಶಿರ್ವ
ಉಡುಪಿ ತಾಲೂಕಿನ ಶಿರ್ವ ಗ್ರಾಮದಲ್ಲಿ ಜನಿಸಿದ ಇವರು ಪ್ರಾಥಮಿಕ ಮತ್ತು ಪಿಯುಸಿವರೆಗಿನ ಶಿಕ್ಷಣವನ್ನು ಶಿರ್ವದಲ್ಲಿ ಮುಗಿಸಿ, ಉಡುಪಿಯ ಎಂ.ಜಿ.ಎಂ ಕಾಲೇಜಿನಲ್ಲಿ ಬಿ.ಕಾಂ. ಪದವಿ ಪಡೆದರು. ಮುಂದೆ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಬ್ಯಾಂಕಿನಲ್ಲಿ ನಿಯುಕ್ತಿಗೊಂಡು ಮ್ಯಾನೇಜರ್ ಹಂತದಲ್ಲಿ ನಿವೃತ್ತಿಗೊಂಡರು. ಈಗ ವಾಸ್ತ್ಯವ್ಯ ಬೆಂಗಳೂರಲ್ಲಿ.
ಇವರ ಬರವಣಿಗೆಯ ಮೊದಲ ಹೆಜ್ಜೆ ಆರಂಭವಾದದ್ದು 1978 ರಲ್ಲಿ, ಆಗ ಉಡುಪಿಯಿಂದ ಬರುತ್ತಿದ್ದ ‘ರಾಯಭಾರಿ’ ವಾರಪತ್ರಿಕೆಯ ಮೂಲಕ. ಸಾಕಷ್ಟು ಲೇಖನಗಳು ಅಲ್ಲಿ ಪ್ರಕಟಗೊಂಡವು. ಮೊದಲ ಕಥೆ ‘ಬದುಕು ಬಯಕೆ’ 1980 ರಲ್ಲಿ ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾಯಿತು. ಅಲ್ಲಿಂದ ಮುಂದೆ ಬಹಳಷ್ಟು ಕಥೆಗಳು / ಲಲಿತ ಪ್ರಬಂಧಗಳು / ಹಾಸ್ಯ ಬರಹಗಳು ಸುಧಾ, ಮಂಗಳ, ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ವಿಜಯವಾಣಿ, ಉದಯವಾಣಿ ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ಇವುಗಳ ಜೊತೆಗೆ ಪ್ರವಾಸ ಲೇಖನಗಳು, ಕೃಷಿ ಆಧಾರಿತ, ಆಧ್ಯಾತ್ಮಿಕ, ಪ್ರಚಲಿತ ವಿಷಯಗಳ ಮೇಲಿನ ಲೇಖನಗಳು ಸುಧಾ, ಮಂಗಳ, ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ಸಾರಸ್ವತ ಸಂದೇಶ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
All Posts
20 thoughts on “ಪ್ರೇಮಪತ್ರದಲ್ಲೊಂದು ಭಾವಪಯಣ”
ಮುಚ್ಚಿಟ್ಟುಕೊಂಡ ಕಳೆದುಹೋದ ಪ್ರೀತಿಯ ನೆನಪಿನ ಸಾಲುಗಳು ಸೊಗಸಾಗಿವೆ. ನಿಮ್ಮ ಬರಹ ಮತ್ತು ಶೈಲಿ ಚೆನ್ನಾಗಿದೆ. ಅಭಿನಂದನೆಗಳು ಧರ್ಮಾನಂದ ನಾಯಕ್
ಧನ್ಯವಾದಗಳು ಸರ್
Neevu bareda pankti galannu manasokta enjoy madide.great creative imaginative practicle story edu.nimma bareyuva style tumba olledu.hegene mundakku bariyutha eri.devaru olledu madali.excellent
Thank you very much for your kind and encouraging words, which is really a boost to my future writings. Let your good wishes be with me always.
ನಿಮ್ಮ ಬರಹ ಈಗ ಮಾಗಿದ ವಯಸ್ಸಿನಲ್ಲಿ ಹಳೆಯ ಸುಮಧುರ ನೆನಪುಗಳನ್ನು ಮತ್ತೆ ಹೆಕ್ಕಿ ತರುವಲ್ಲಿ ಯಶಸ್ವಿಯಾಗಿದೆ. ನವಿರಾದ ಪ್ರೇಮ ಪತ್ರ ತುಂಬಾ ಖುಷಿ ಕೊಡ್ತು. ಬಹಳ ದಿನಗಳ ಬಳಿಕ ಒಂದು ಹಿತವಾದ ಕಥೆ ಓದಿದೆ. ಅಭಿನಂದನೆಗಳು ಸಾರ್
ನಿಮ್ಮ ಪ್ರೋತ್ಸಾಹದಾಯಕ ನುಡಿಗಳಿಗೆ ಧನ್ಯವಾದಗಳು
ಪ್ರೀತಿ ಪ್ರೇಮದ ಗತ ನೆನಪುಗಳು ಸವಿ ಏನಿಸಿದಾಗ ಮೂಡೂವ ಭಾವನೆಗಳೇ ಬೇರೆ. ಆ ಒಂದು ಪ್ರೇಮದ ಪರಿ ಇಲ್ಲಿ ಭಾವ ಮತ್ತು ಭಾಷೆಗಳೊಂದಿಗೆ ವ್ಯಕ್ತವಾಗಿದ್ದು ಇದ್ದು ಬಹಳೇ ಸುಂದರವಾಗಿವೆ. ಭಾವ ಜೀವಿಗೆ ಅಭಿನಂದನೆಗಳು.
ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.
ಆಗಿನ ಅವ್ಯಕ್ತ ಪ್ರೀತಿ ಈಗ ಹೊರಹೊಮ್ಮಿದೆ. ಭಾವನೆಗಳ ಭೋರ್ಗರೆತ ಸೊಗಸಾಗಿ ಮೂಡಿಬಂದಿದೆ. ಅಭಿನಂದನೆಗಳು. ಇನ್ನೂ ಬರಲಿ ಇಂತಹ ಪ್ರೇಮ ಪತ್ರಗಳ ಮೆಲುಕು.
ತುಂಬ ಧನ್ಯವಾದಗಳು ಶೇಖರಗೌಡರೆ
I think this seems to be a nearer to real life story of most of yesterday youngsters which they are cherishing nowadays.I like the the way in which you you describe the love without attaching importance to physical attraction .I am realy happy to read your matured writing.Hearty congratulations 👏
Thanks a lot Dalabanjan
Sir, Nice story? Or….. Who is She?
ಪ್ರೇಮಿಗಳ ಮಧ್ಯ ಆದ ಸನ್ನಿವೇಶಗಳನ್ನು ಪ್ರೇಮ ಪತ್ರ ಮಾಧ್ಯಮದ ಮೂಲಕ ಭಾವನೆ ಗಳನ್ನು ಪ್ರಸ್ತುತ ಪಡಿಸುವಾಗ ಲೇಖಕನ ವಯಸ್ಸು ಅಡ್ಡ ಬರುವದಿಲ್ಲ ಎಂದು ನನ್ನ ಅನಿಸಿಕೆ. ಇಂತಹ ಪ್ರಸಂಗಳು ಇಂದಿನ ಸಮಾಜದಲ್ಲಿ ಸಾಮಾನ್ಯ. ನಿಮ್ಮ ಭಾವ ಪಯಣ ಯಶಸ್ವಿ ಆಗಿದೆ.
ತುಂಬಾ ಚೆನ್ನಾಗಿದೆ ಅಭಿನಂದನೆಗಳು ಧರ್ಮಾ ನಂದ ಅವರೆ,
ಧನ್ಯವಾದಗಳು ಸರ್
Thank you Bhat.
Who is she?
One million dollar question…
Imaginary write up without any base….
ಕಲ್ಪನೆಯಲ್ಲಿ ಎಲ್ಲವನ್ನೂ ಎಳೆದು ತರಬಹುದು…
ತುಂಬಾ ಚೆನ್ನಾಗಿದೆ ಭಾವಪಯಣ 👌👌
ಧನ್ಯವಾದಗಳು
It is really heart touching. Unconditional, unselfish, true love is presented beautifully. Hats off to you sir.
Thank you very much for your encouraging comment. Grateful to you madam.