- ರಾಘವೇಂದ್ರ ಮಂಗಳೂರು
ರಾತ್ರಿ ಒಂಭತ್ತು ಘಂಟೆಗೆ ಅಟೆಂಡರ್ ಅಮರೇಶ ತನ್ನ ಮನೆಯಲ್ಲಿ ಆರಾಮಾಗಿ ಟಿ ವಿ ನೋಡುತ್ತಾ ಕೆಳಗೆ ಕೂತು ಊಟ ಮಾಡುತ್ತಿದ್ದಾಗ ಮೋಬೈಲ್ ರಿಂಗಾಯಿತು. ಯಾರದು ಅಂತ ನೋಡಿದರೆ ಮ್ಯಾನೇಜರ್ ಗುಂಡೂರಾವ್ ಅವರದು. ಫೋನ್ ಎತ್ತದೆ ಕಸಿವಿಸಿಗೊಂಡು ಸುಮ್ಮನೆ ಕೂತ. ರಾತ್ರಿ ಟಿ ವಿ ನೋಡಲು ಸಹಾ ಬಿಡುತ್ತಿಲ್ಲ ಈ ಮ್ಯಾನೇಜರ್ ಎಂದು ಮನಸಿನಲ್ಲೇ ಬೈದುಕೊಂಡ. ಮತ್ತೆ ಮತ್ತೆ ರಿಂಗಾದ ಮೇಲೆ ಮೊಬೈಲ್ ಎತ್ತಿಕೊಂಡು ಅಮರೇಶ “ಹಲೋ ಸಾರ್” ಎಂದದ್ದೇ ತಪ್ಪಾಯಿತು.
ಆ ಕಡೆಯಿಂದ ಗುಂಡೂರಾವ್ ಒಂದು ನಿಮಿಷ ಸಹ ಗ್ಯಾಪ್ ಕೊಡದೆ ಕೊರೆಯಲು ಶುರು ಮಾಡಿದ.” ಇಂದು ಬ್ರಾಂಚ್ ವ್ಯವಸ್ಥಾಪಕರ ಆರ್. ಓ ವಲಯದ ಸಭೆಯಲ್ಲಿ ಎ ಜಿ ಎಂ ಎಲ್ಲ ವಿಷಯಕ್ಕೆ ನಮ್ಮ ಶಾಖೆಯ ಪರ್ಫಾರ್ಮೆನ್ಸ್ ಮೆಚ್ಚಿಕೊಂಡು ಹೊಗಳಿ ನನ್ನನ್ನು ಆಕಾಶಕ್ಕೆ ಏರಿಸಿದರು. ಆದರೆ ಕೃಷಿ ಸಾಲದ ಅದರಲ್ಲೂ ಮುಖ್ಯವಾಗಿ ಡೈರಿ ಸಾಲದ ರಿಕವರಿ ಸರಿಯಾಗಿಲ್ಲ ಎಂದು ಧೊಪ್ಪನೆ ಅಲ್ಲಿಂದ ಕೆಳಗೆ ನೂಕಿದರು…ಸ್ಟಾರ್ ಪರ್ಫಾರ್ಮರ್ ಎಂದು ಹೆಸರು ಪಡೆದ ನನಗೆ ಸಭೆಯಲ್ಲಿ ತುಂಬಾ ಅವಮಾನವಾಯಿತು ಅಮರೇಶ…ಅದಕ್ಕೆ ನಾಳೆ ಬೆಳಿಗ್ಗೆ ಕೃಷಿ ಕಟ್ಟುಬಾಕಿದಾರರ… ಅದರಲ್ಲೂ ಡೈರಿ ಲೋನ್ ಕಂತುಗಳನ್ನು ಸರಿಯಾಗಿ ಕಟ್ಟದ ಫಲಾನುಭವಿಗಳನ್ನು ಮೊದಲು ಭೇಟಿಯಾಗಿ ಬಿಗಿ ಮಾಡೋಣ. ಅಲ್ಲದೇ ಯಾವುದೇ ಕೃಷಿ ಸಾಲದ ಮರುಪಾವತಿ ಮಾಡಲು ಯಾವ ರೈತ ತಾನಾಗಿಯೇ ಮುಂದೆ ಬರುವುದಿಲ್ಲ. ಅದಕ್ಕೆ ದಿನ ನಿತ್ಯವೂ ಹನುಮಪ್ಪನ ಗುಡಿ ಮುಂದೆ ಸೇರುವ ‘ ಚಿಂತಕರ ಚಾವಡಿ ‘ (ಕೆಲ ಹಳ್ಳಿಗಳಲ್ಲಿ ಮಾಡಲು ಬೇರೆ ಕೆಲಸವಿಲ್ಲದ ಮರಿ ಪುಢಾರಿಗಳು ದಿನಾಲೂ ಮಿರ್ಚಿ ಮಂಡಕ್ಕಿ ತಿಂದು ಚಹಾ ಗುಟುಕರಿಸುತ್ತಾ, ಮತ್ತೊಮ್ಮೆ ಸಾಲ ಮನ್ನಾ ಸ್ಕೀಂ ಖಂಡಿತ ಬರುತ್ತದೆ ಎನ್ನುವ ಸುಳ್ಳು ಸುದ್ದಿಯನ್ನು ಹಗಲಿರುಳೂ ಹರಡುವ ತಂಡ!) ಸಹ ಕಾರಣ ಎಂದು ಎಲ್ಲರಿಗೂ ಗೊತ್ತು. ನಾಳೆ ಬೆಳಿಗ್ಗೆ ಆರು ಘಂಟೆಗೆ ನೀನು ಬ್ಯಾಂಕಿಗೆ ಬಂದರೆ ಇಬ್ಬರೂ ಸೇರಿ ಮೊದಲು ಮಲ್ಲಾಪುರಕ್ಕೆ (ಅಲ್ಲಿಯ ಜನಸಂಖ್ಯೆಗಿಂತ ಕೃಷಿ ಸಾಲದ ಫಲಾನುಭವಿಗಳು ಅದರಲ್ಲೂ ಕಟ್ಟು ಬಾಕಿದಾರರೇ ಹೆಚ್ಚು!) ಬೈಕ್ ಮೇಲೆ ಹೋಗೋಣ. ಸಾಲದ ಲಿಸ್ಟ್ (ಮಾನ್ಯ ಕಟ್ಟುಬಾಕಿದಾರರ ಪಟ್ಟಿ) ನಾನು ತರುತ್ತೇನೆ. ಓಕೆ ” ಎಂದು ಅಮರೇಶನ ಅನುಮತಿ ಸಹಾ ಕೇಳದೆ ಮರುದಿನದ ‘ ವಿಲೇಜ್ ಇನ್ಸ್ಪೆಕ್ಷನ್ ‘ ಪ್ರೋಗ್ರಾಮ್ ಫಿಕ್ಸ್ ಮಾಡಿಯೇ ಬಿಟ್ಟ ಮ್ಯಾನೇಜರ್ ಗುಂಡೂರಾವ್.
ಹಳೆಯ ಸಾಲ ವಸೂಲಿ ಮಾಡುವದರಲ್ಲಿ ಮ್ಯಾನೇಜರ್ ಗುಂಡೂರಾವ್ ‘ ಎಕ್ಸ್ಪರ್ಟ್ ‘ ಎಂದು ಹೋದಲ್ಲೆಲ್ಲ ಹೆಸರು ಗಳಿಸಿದ್ದ. ಅಲ್ಲದೇ ಮೆಟ್ರೋ ನಗರಗಳಲ್ಲಿ ಸೇವೆ ಮಾಡುವಾಗ ಎನ್ ಪಿ ಎ ( ಈ ಎಂ ಐ ಕಂತುಗಳನ್ನು ಸರಿಯಾಗಿ ಕಟ್ಟದ ಸಾಲ) ಆದ ಸಾಲವನ್ನು ಬ್ಯಾಂಕಿಗೆ ಒತ್ತೆ ಇಟ್ಟ ಕಾರ್, ಲಾರಿ, ಮನೆಗಳನ್ನು ಹರಾಜು ಮಾಡಿಸಲು ಮುಂದಾಗಿ ಸಾಲ ವಸೂಲಾತಿಯನ್ನು ನಿರ್ದಾಕ್ಷಿಣ್ಯವಾಗಿ ಮಾಡಿದ ಸ್ಟಾರ್ ಪರ್ಫಾರ್ಮರ್ ( ನಕ್ಷತ್ರಿಕ! ) ಎಂದು ಹೆಸರು ಬೇರೆ ಗಳಿಸಿದ್ದ. ಅವಕಾಶ ದೊರೆತಾಗಲೆಲ್ಲಾ ಸಿಬ್ಬಂದಿಗೆ ‘ ಸಾಲ ವಸೂಲಿ ಮಾಡುವ ಕಲೆ ‘ ಕುರಿತು ಭರ್ಜರಿ ಭಾಷಣ ಬಿಗಿದು ಅವರನ್ನು ಆಗಾಗ ಹುರಿದುಂಬಿಸುತ್ತಿದ್ದ (ಹಿಂಸಿಸುತ್ತಿದ್ದ!).
ಹೀಗಾಗಿ ಬೆಳ್ಳಂಬೆಳಿಗ್ಗೆ ಬೇರೇನೂ ಮಾತನಾಡದೆ ಅಮರೇಶ ಮ್ಯಾನೇಜರ್ ಗುಂಡೂರಾವ್ ಅವರ ಬೈಕ್ ಹತ್ತಿ ಮಲ್ಲಾಪೂರದತ್ತ ಪ್ರಯಾಣ ಬೆಳೆಸಿದ. ಮಲ್ಲಾಪೂರ ಹಳ್ಳಿಯ ಅಂಕು ಡೊಂಕು ಓಣಿಗಳಲ್ಲಿ ತಿರುಗಲು ಶುರು ಮಾಡಿದರು ಬ್ಯಾಂಕಿನ ಸಿಬ್ಬಂದಿ ಜೋಡಿ. ಸಡನ್ ಆಗಿ ಮೂರ್ರಾ ಎಮ್ಮೆಗೆ ಸಾಲ ತೆಗೆದುಕೊಂಡ ಬಳಿಕ ಒಮ್ಮೆ ಕೂಡ ಬ್ಯಾಂಕಿನ ಕಟ್ಟೆ ಮರೆತು ಸಹಾ ಹತ್ತಲಾರದ ಹಾಗೂ ಬ್ಯಾಂಕಿನಲ್ಲಿ ಸಾಲ ಎತ್ತುವಳಿ ಮಾಡಿದ ದಿನದಿಂದ ಆ ದಿಕ್ಕಿನಲ್ಲಿ ಅಪ್ಪಿ ತಪ್ಪಿಯೂ ತಲೆ ಇಟ್ಟು ಮಲಗದ ‘ ಮಹಾನ್ ಸಾಲಗಾರ ಮುತ್ತಪ್ಪ ‘ ನೆನಪಾದ ಅಮರೇಶನಿಗೆ.
” ಮುರ್ರಾ ಮುತ್ತಪ್ಪನ ಮನೆ ಎಲ್ಲಿ…? ಎಂದು ಕೇಳಿದ ಅಮರೇಶ ದಾರಿಯಲ್ಲಿ ಎದುರಾದ ಮತ್ತೊಬ್ಬ ಬ್ಯಾಂಕಿನ ಫಲಾನುಭವಿಯನ್ನು. ” ಸಾರ್…ಸ್ವಲ್ಪ ಮುಂದೆ ಹೋಗಿ ಬಲಗಡೆ ತಿರುಗಿ. ಒಂದು ಅರಮನೆಯಂತಹ ಮನೆ ಬರುತ್ತದೆ. ಅದು ಆತನದು ಅಲ್ಲ. ಎದುರಿಗೆ ಇರುವ ಪುಟ್ಟ ಗುಡಿಸಲು ಮುತ್ತಪ್ಪನ ಮನೆ.” ಎಂದು ಉತ್ತರಿಸಿದ ಆತ ದಾಪುಗಾಲು ಹಾಕುತ್ತಾ…ತಡ ಮಾಡಿದರೆ ತನ್ನ ಸಾಲದ ಕುರಿತು ಎಲ್ಲಿ ಕೇಳುತ್ತಾರೋ ಎನ್ನುವ ಭಯದಿಂದ. ಬೈಕ್ ರಸ್ತೆಯಲ್ಲಿ ನಿಲ್ಲಿಸಿ ಮುರ್ರಾ ಮುತ್ತಪ್ಪನ ಗುಡಿಸಲಿನ (ಮಹಲಿನ) ಮುಂದೆ ಇಬ್ಬರೂ ಬಂದು ನಿಂತರು.
ಅಂಗಳದಲ್ಲಿ ಕಟ್ಟಿ ಹಾಕಿದ್ದ ನಾಲ್ಕೈದು ಸಾಧಾರಣ ಎಮ್ಮೆಗಳ ಮದ್ಧ್ಯೆ ‘ ರಾಣಿ ಗತ್ತಿನ ‘ ಮುರ್ರಾ ಎಮ್ಮೆಯ ಹತ್ತಿರ ಬಂದು ಅದರ ಕಿವಿಗೆ ಹಾಕಿದ್ದ ಟ್ಯಾಗ್ ಕಂಡು ಇದು ತಮ್ಮದೇ ಬ್ಯಾಂಕಿನಿಂದ ಸಾಲ ಪಡೆದು ಖರೀದಿಸಿದ (ಚಿರಾಸ್ತಿ !) ಎಮ್ಮೆ ಎಂದು ಅಮರೇಶ ಮೊದಲು ಖಾತ್ರಿ ಮಾಡಿಕೊಂಡ.
ಅಷ್ಟರಲ್ಲಿ ಗುಂಡೂರಾವ್ ಎಮ್ಮೆಯ ಆಸಲಿ ಮಾಲೀಕನನ್ನು ಗುಡಿಸಲಿನಿಂದ ಹೊರ ಬರುವಂತೆ ಜೋರಾಗಿ ಮುತ್ತಪ್ಪನ ಹೆಸರು ಕೂಗಿದ. ಮುರ್ರಾ ಮುತ್ತಪ್ಪ ಬ್ಯಾಂಕಿನವರನ್ನು ಕಂಡು
ದುರ್ದಾನ ತೆಗೆದುಕೊಂಡವನಂತೆ ಮುಖ ಗಂಟಿಕ್ಕಿ ” ಏನು ಬೇಕಾಗಿತ್ತು ನಿಮಗೆ ?” ಎಂದು ಸಿಡುಕಿನಿಂದ ಪ್ರಶ್ನಿಸಿದ.
ಕಾಲರ್ ಎಗರಿಸುತ್ತಾ ಗುಂಡೂರಾವ್ ” ನಾನು ಈ ಮೂರ್ರಾಗೆ ಸಾಲ ಕೊಟ್ಟ ಬ್ಯಾಂಕಿನ ಮ್ಯಾನೇಜರ್…ಮರೆತು ಬಿಟ್ಟಿಯೇನು?.” ಎಂದ ಸ್ವಲ್ಪ ರೋಷದಿಂದ.
” ಆಯ್ತು ಸಾರ್ ಏನಾಗಬೇಕು ಈಗ?” ಎಂದು ಅದೇ ಟೋನಿನಲ್ಲಿ ಉತ್ತರಿಸಿದ ಮುರ್ರಾ ಮುತ್ತಪ್ಪ.
” ಎಮ್ಮೆ ಸಾಲ ತೆಗೆದುಕೊಂಡು ಎರಡು ವರ್ಷವಾಯ್ತು.
ಇಲ್ಲಿಯವರೆಗೆ ಕಟ್ಟೋ ಬಾಕಿ ಕಂತುಗಳಿರಲಿ … ಒಂದೇ ಒಂದು ರೂಪಾಯಿ ಸಹ ಸಾಲದ ಮರುಪಾವತಿ ಮಾಡಿಲ್ಲ. ಈಗ ಎಲ್ಲ ಕಂತುಗಳ ಒಟ್ಟು ಬಾಕಿ ಮೊತ್ತ ನಲವತ್ತು ಸಾವಿರಗಳನ್ನು ಈಗಿಂದೀಗಲೇ ಕಟ್ಟಬೇಕು…ಇಲ್ಲವೆಂದರೆ…” ಎಂದು ಅರೆ ಕ್ಷಣ ಮಾತು ನಿಲ್ಲಿಸಿದ ಗುಂಡೂರಾವ್.
“ಈಗ ಸದ್ಯ ನನ್ನ ಬಳಿ ಒಂದು ರೂಪಾಯಿ ಸಹಾ ಇಲ್ಲ…ಒಂದೆರಡು ತಿಂಗಳು ಸಮಯ ಕೊಡಿ. ಹೇಗಾದರೂ ಮಾಡಿ ಎಷ್ಟು ಸಾಧ್ಯವಾಗುತ್ತೋ ಅಷ್ಟು ಕಟ್ಟುತ್ತೀನಿ ಸಾರ್…” ಎಂದು ವಿನಮ್ರತೆಯಿಂದ ಕೈ ಮುಗಿದ ಮೂರ್ರಾ ಮುತ್ತಪ್ಪ.
ಅಂತಹ ಸರ್ವೇ ಸಾಧಾರಣ ಉತ್ತರ ಕೇಳಿದ ಮ್ಯಾನೇಜರ್ ಗುಂಡೂರಾವ್ ನಿಗೆ ಬಿ ಪಿ ಸರ್ರನೆ ಏರಿತು. ಸಿಟ್ಟಿನಿಂದ ವಿಶ್ವಾಮಿತ್ರನಂತೆ ರೌದ್ರಾವತಾರ ತಾಳಿ ” ಈ ನಿನ್ನ ಮೂರ್ರಾ ಎಮ್ಮೆ ಬ್ಯಾಂಕಿನ ಆಸ್ತಿ…ಈಗ ಸ್ವಲ್ಪವಾದರು ಹಣ ಕಟ್ಟಿಲ್ಲವೆಂದರೆ ಇದನ್ನು ಹೊಡೆದುಕೊಂಡು ಹೋಗಿ ನಮ್ಮ ಬ್ಯಾಂಕಿನ ಕಾಂಪೌಂಡಿನಲ್ಲಿ ಕಟ್ಟಿ ಹಾಕ್ತೇವೆ. ಆಗ ನೀನೇ ಓಡುತ್ತಾ ಬಂದು ಬಿಡಿಸಿಕೊಳ್ಳಬೇಕು ತಿಳಿಯಿತಾ…” ಎಂದು ಅಬ್ಬರಿಸಿದ ಮೂರ್ರಾ ಮುತ್ತಪ್ಪನ ಮೇಲೆ.
” ಈಗ ನನ್ನ ಹತ್ತಿರ ಒಂದು ರೂಪಾಯಿ ಸಹಾ ಇಲ್ಲ. ನಾನಂತೂ ಸದ್ಯ ಹಣ ಕಟ್ಟೋ ಸ್ಥಿತಿಯಲ್ಲಿ ಇಲ್ಲ. ಈಗಿಂದ ಈಗಲೇ ಕಟ್ಟೋದಿಕ್ಕೆ ಆಗೋದಿಲ್ಲ… ಅದೇನು ಚಿರಾಸ್ಥಿ (ಮೂರ್ರಾ ಎಮ್ಮೆ!) ವಶ ಪಡಿಸಿಕೊಳ್ಳುತ್ತಿರೋ ಪಡಿಸಿಕೊಳ್ಳಿ…ನಿಮಗೆ ತಿಳಿದದ್ದು ನೀವು ಮಾಡಿ ಸಾರ್… ನನಗೆ ತಿಳಿದದ್ದು ನಾನು ಮಾಡ್ತೇನೆ…ಮನೆ ಒಳಗೆ ನನ್ನ ಹೆಂಡತಿ ಮಾಡಿದ ಬಿಸಿ ಬಿಸಿ ಚೌ ಚೌ ಭಾತ್ ರೆಡಿ ಇದೆ. ಬೇಕಿದ್ದರೆ ನೀವು ಕೂಡ ಬಂದು ನಾಷ್ಟ ಮಾಡಿಕೊಂಡು ಹೋಗಿ. ಆದರೆ ಸಾಲ ಕಟ್ಟಿ ಅಂತ ಮಾತ್ರ ಹೇಳಬೇಡಿ. ಈಗ ನಾನು ಹೋಗಿ ಅರ್ಜೆಂಟ್ ಆಗಿ ಬಿಸಿ ಚೌ ಚೌ ಬಾತ್ ತಿನ್ನಲೇಬೇಕು…ನಮಸ್ಕಾರ . ನಾನು ಬರುತ್ತೇನೆ.” ಎಂದು ಬ್ಯಾಂಕಿನವರ ಮೇಲೊಂದು ಸಡನ್ ‘ ಸರ್ಜಿಕಲ್ ದಾಳಿ ‘ ಮಾಡಿ ಸರ ಸರ ಮನೆ ಒಳಗೆ ಹೋದ ಮುತ್ತಪ್ಪನನ್ನು ನೋಡಿ ಮೂರ್ಛೆ ಹೋಗುವದೊಂದೆ ಬಾಕಿ ಪಾಪ ಬ್ಯಾಂಕಿನ ಸಿಬ್ಬಂದಿಗೆ.
” ಅಮರೇಶ ಈ ಮುತ್ತಪ್ಪನ ಸೊಕ್ಕು ಮುರಿಯಲು ನಮಗೆ ಒಂದೇ ದಾರಿ. ನೀನೇನು ಚಿಂತೆ ಮಾಡಬೇಡ ನಾನು ನಿನ್ನ ಹಿಂದೆ ಇರುತ್ತೇನೆ, ಮೊದಲು ಮೂರ್ರಾ ಎಮ್ಮೆಯನ್ನು ಕಟ್ಟಿದ ಗೂಟಾದಿಂದ ಹಗ್ಗವನ್ನು ಬಿಡಿಸಿಕೊಂಡು ಬಾ.. ಡೋನ್ಟ್ ವರಿ ” ಎಂದು ಭರವಸೆ ತುಂಬಿದ ಮ್ಯಾನೇಜರ್ ಗುಂಡೂರಾವ್.
” ಇನ್ನು ತಪ್ಪೋದಿಲ್ಲ..ಎಲ್ಲ ನನ್ನ ಹಣೆಬರಹ…” ಎಂದು ಮನಸಿನಲ್ಲಿ ಮ್ಯಾನೇಜರ್ ಗೆ ಹಿಡಿ ಶಾಪ ಹಾಕುತ್ತಾ ಎಮ್ಮೆ ಕೊರಳ ಹತ್ತಿರ ಹೆಜ್ಜೆ ಹಾಕಿದ ಅಮರೇಶ. ಗಾಬರಿಯಿಂದ ಕೊಸರುತ್ತಿದ್ದ ಮುರ್ರಾ ಎಮ್ಮೆಗೆ ಅಷ್ಟರಲ್ಲಿ ಧೀಡಿರೆಂದು ಕೋಪ ಬಂದು ” ಅಂಬಾ…ಅಂಬಾ…” ಎಂದು ಜೋರಾಗಿ ಕಿರುಚಲು ಶುರು ಮಾಡಿತು.
” ಸಾರ್ ಎಮ್ಮೆಗೆ ನನ್ನ ಮೇಲೆ ಯಾಕೋ ಸಿಟ್ಟು ಬಂದಂತಿದೆ…ಅದಕ್ಕೆ ಗಟ್ಟಿ ಧ್ವನಿಯಲ್ಲಿ ಒದರುತ್ತಿದೆ ” ಎಂದ ಅಮರೇಶ ಎಮ್ಮೆ ಕೊರಳಗೆ ಹಾಕಿದ ಹಗ್ಗವನ್ನು ಗೂಟದಿಂದ ಬಿಡಿಸುವ ಪ್ರಯತ್ನ ಮಾಡುತ್ತಾ… ” ಅದಕ್ಕೆ ನಿನ್ನ ಮೇಲೆ ಯಾಕೆ ಕೋಪ?…ಅದು ಏನಾದರೂ ನಮ್ಮ ಡಿ ಜಿ ಎಂ ಅಥವಾ ಏ ಜಿ ಎಂ ಏನು ಎದುರಿಗೆ ಸಿಕ್ಕ ಮ್ಯಾನೇಜರ್ ಗಳ ಮೇಲೆ ರುಬಾಬು ತೋರಿಸಿ ಬಾಯಿಗೆ ಬಂದಂತೆ ಬಯ್ಯೋದಿಕ್ಕೇ…” ಎಂದು ಬ್ಯಾಂಕಿನ ಹಳೇ ಜೋಕ್ ಕಟ್ ಮಾಡಿ ತನ್ನ ಜೋಕಿಗೆ ತಾನೇ ಬಾಯಿ ತುಂಬಾ ನಕ್ಕ ಗುಂಡೂರಾವ್.
” ಅದು ಅರಚುತ್ತಿದೆಯಲ್ಲ ಆ ಸಿಟ್ಟಿಗೆ ಒಂದು ಕೊಂಬಿನಿಂದ ಇರಿದು ( ಟೈಮ್ ಸರಿ ಇಲ್ಲದಿದ್ದರೆ ಎರಡೂ ಕೊಂಬಿನಿಂದ! ) ನನ್ನನ್ನು ಈಗಲೇ ‘ಶಿವನ ಪಾದ’ ಮುಟ್ಟಿಸಿದರೂ ಅಶರ್ಯವಿಲ್ಲ ದಮ್ಮಯ್ಯ ಅಂತೀನಿ ನನ್ನ ಬಿಟ್ಟು ಬಿಡಿ ಸಾರ್” ಎಂದು ಗೋಗರೆದ ಅಮರೇಶ.
” ಅಂಬಾ ಎನ್ನುವ ಎಮ್ಮೆ ಇರಿಯೋದಿಲ್ಲ…ಬೊಗಳುವ ನಾಯಿ ಕಚ್ಚುವುದಿಲ್ಲ ಎನ್ನುವ ನಾಣ್ಣುಡಿ ಮರೆತೆಯಾ ಅಮರೇಶ” ಎಂದು ಮತ್ತೊಮ್ಮೆ ಧೈರ್ಯ ತುಂಬಲು ಯತ್ನಿಸಿದ ಮ್ಯಾನೇಜರ್ ಗುಂಡೂರಾವ್.
” ನಿಮಗೇನು ಸಾರ್ ನೀವು ದೂರ ಇದ್ದು ಎಷ್ಟಾದರೂ ನುಡಿ ಮುತ್ತುಗಳನ್ನು ಅಲ್ಲಿಂದಲೇ ಉದರಿಸುತ್ತೀರಿ. ಅದು ನನಗೆ – ನಿಮಗೆ ಅರ್ಥ ಆಗುತ್ತದೆ. ಆದರೆ ಎಮ್ಮೆಗೆ ಅರ್ಥವಾಗಬೇಕಲ್ಲ ಸಾರ್. ಅಲ್ಲದೇ ಕನ್ನಡ ಗೊತ್ತಾಗುವ ನಮ್ಮ ರಾಜ್ಯದ ಎಮ್ಮೆ ಅಲ್ಲ ಸಾರ್…ದೂರದ ಹರಿಯಾಣದ್ದು ಅದರ ಭಾಷೆಯೇ ಬೇರೆ” ಎಂದು ಗೊಣಗಿದ ಅಮರೇಶ.
” ಅದೇನು ಹುಲಿನಾ ಸಿಂಹನಾ ಅಷ್ಟು ಭಯ ಪಡೋದಿಕ್ಕೆ… ನಿನಗೆ ಏನಾದರೂ (ಜೀವಕ್ಕೆ ಅಪಾಯವಾದರೆ ಇನ್ಸೂರೆನ್ಸ್ ಕ್ಲೇಮ್ ಎಲ್ಲಾ ಬೇಗ ಸೆಟಲ್ ಮಾಡುವ ಸಂಪೂರ್ಣ ಜವಾಬ್ದಾರಿ ನನ್ನದು ಎನ್ನುವಂತೆ!) ಆದರೆ ನಾನಿಲ್ವೆ. ಮೊದಲು ಅದರ ಕುತ್ತಿಗೆಗೆ ಇರುವ ಹಗ್ಗ ಬಿಚ್ಚು ಸಾಕು…” ಎಂದು ಗಂಭೀರ ಸ್ವರದಲ್ಲಿ ಆದೇಶಿಸಿದ ಗುಂಡೂರಾವ್.
ಕೊನೆಗೆ ಆದದ್ದಾಗಲಿ ಎಂದು ‘ಮನೆ ದೇವರ’ ಮೇಲೆ ಭಾರ ಹಾಕಿ ಎಮ್ಮೆಯ ಕುತ್ತಿಗೆಯ ಹಗ್ಗವನ್ನು ಬಿಚ್ಚಿ ಅದರ ತುದಿಯನ್ನು ತನ್ನ ಕೈಯಲ್ಲಿ ಭದ್ರವಾಗಿ ಹಿಡಿದುಕೊಂಡು ಮುಂದಿನ ಪುಟ್ಟ ರಸ್ತೆಯತ್ತ ಹೆಜ್ಜೆ ಹಾಕಿದ ಎಮ್ಮೆಯ ಜೊತೆ ಅಮರೇಶ, ಮ್ಯಾನೇಜರ್ ಗುಂಡೂರಾವ್ಸಹಾಯದೊಂದಿಗೆ.
ಅಷ್ಟೇ…ಈಗ ಅಲ್ಲಿಯ ಸೀನು ಇದ್ದಕ್ಕಿದ್ದಂತೆ ಪೂರ್ತಿ ಬದಲಾಯಿತು. ಮೂರ್ರಾ ಎಮ್ಮೆಯನ್ನು ಅಮರೇಶ ಮುಂದೆ ಎಳೆದುಕೊಂಡು ಹೋಗುತ್ತಿದ್ದಾನೋ ಅಥವಾ ಅಮರೇಶನನ್ನು ಎಮ್ಮೆಯೇ ದರ ದರ ಎಳೆದುಕೊಂಡು
ಹೋಗುತ್ತಿದೆಯೋ ಎಂದು ನೋಡುವವರಿಗೆ ಸ್ವಲ್ಪ ಗೊಂದಲವುಂಟು ಮಾಡಿದ್ದು ಸುಳ್ಳಲ್ಲ.
” ನೀನು ಮೊದಲು ಎಮ್ಮೆಯ ಜೊತೆ ಮೆಲ್ಲಗೆ ನಡೆ…ಅದು ಎಳೆಯುವ ದಿಕ್ಕಿನಲ್ಲೇ ನೀನು ಸಾಗು… ಹಿಂದಿನಿಂದ ನಾನು ಕೋಲಿನಿಂದ ಅದು ಸರಿಯಾಗಿ ಹೆಜ್ಜೆ ಹಾಕದಾಗ ಹೊಡೆದ್ರೆ ಅದಕ್ಕೆ ಭಯವಾಗಿ ಮುಂದೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತೆ…” ಎಂದು ‘ ಥಿಯರಿ’ ಪಾಠ ಮಾಡಿದ ಗುಂಡೂರಾವ್.
” ಸಾರ್… ಎಮ್ಮೆಗೆ ಇರುವ ದೊಡ್ಡ ಕೋಡುಗಳ ಮುಂದೆ ನಾನಿದ್ದೇನೆ. ಹಿಂದೆ ಬರೀ ಬಾಲ ಇರುತ್ತದೆ..ಅಲ್ಲಿ ಸುರಕ್ಷಿತವಾಗಿ ನೀವು ಇದ್ದೀರಿ” ಎಂದ ಅಮರೇಶ ವ್ಯಂಗ್ಯವಾಗಿ ಮೆನೇಜರ್ ನನ್ನು ಉದ್ದೇಶಿಸಿ.
” ಅದಕ್ಕೆ ಬೆನ್ನ ಮೇಲೆ ಏಟು ಬೀಳದಿದ್ದರೆ ಎಮ್ಮೆ ಹೇಗೆ ಸರಿ ದಾರಿಗೆ ಬರುತ್ತದೆ ಹೇಳು…” ಎಂದು ತನ್ನ ವಾದವನ್ನು ಬಲವಾಗಿ ಮತ್ತೊಮ್ಮೆ ಸಮರ್ಥಿಸಿಕೊಂಡ ಗುಂಡೂರಾವ್.
” ನೀವು ಮ್ಯಾನೇಜ್ಮೆಂಟ್ ಕೇಡರ್ ನವರಲ್ಲ ಸಾರ್…ಅದಕ್ಕೆ ಎಮ್ಮೆ ನಿಮಗೆ ಏನು ಮಾಡುವದಿಲ್ಲ…ಆದರೆ ನಾವು ಬ್ಯಾಂಕ್ ಕಾರ್ಮಿಕರು. ಅದಕ್ಕೆ ಅದು ನಮ್ಮನ್ನು ಸುಮ್ಮನೆ ಬಿಡೋದಿಲ್ಲ…” ಎಂದ ರೋಷದಿಂದ ಅಮರೇಶ
ಹಾಗೂ ಹೀಗೂ ಮುರ್ರಾ ಎಮ್ಮೆಗೆ ಗೂಟದಿಂದ ಮುಕ್ತಿ ಕೊಡಿಸಿ ಅತೀ ಕಷ್ಟದಿಂದ ರಸ್ತೆಯಲ್ಲಿ ಮತ್ತಷ್ಟು ಮುಂದೆ ಸಾಗಿದರು ಇಬ್ಬರೂ. ಸುತ್ತ ಮುತ್ತಲಿನ ಮನೆಯ ಹೆಣ್ಣು ಮಕ್ಕಳೆಲ್ಲ ‘ ಕರಗ’ ಉತ್ಸವವನ್ನು ಉತ್ಸುಕತೆಯಿಂದ ನೋಡುವಂತೆ ತಮ್ಮಿಬ್ಬರನ್ನು ನೋಡುವ ರೀತಿ ಕಂಡು ಮುಜುಗರಗೊಂಡ ಆಮರೇಶ.
ಸ್ವಲ್ಪ ಮುಂದೆ ಎಮ್ಮೆಯನ್ನು ಹಾಗೂ ಹೀಗೂ ಬಹಳ ಕಷ್ಟಪಟ್ಟು ಕರೆದುಕೊಂಡು (ಎಳೆದುಕೊಂಡು!) ಸಾಗಿದರು.. ಅಷ್ಟರಲ್ಲಿ ಧಿಡೀರ್ ಅಂತ ಕೆಂಪು ಬಣ್ಣದ ಶರ್ಟ್ ಧರಿಸಿದ ಒಬ್ಬ ಹುಡುಗ ಸೈಕಲ್ ಮೇಲೆ ಮುಂದೆ ಹೋಗುತ್ತಿದ್ದುದನ್ನು ನೋಡಿದ ‘ ಮೂರ್ರಾ’ ಒಮ್ಮೆಲೆ ಘೀಳೆಂದು ಶಬ್ದ ಮಾಡುತ್ತಾ ಆ ಹುಡುಗನನ್ನು ಫಾಲೋ ಮಾಡಲು ಪ್ರಯತ್ನಿಸಿ ಅಮರೇಶನನ್ನು ಸ್ವಲ್ಪ ದೂರ ಎಳೆದುಕೊಂಡು ಹೋಗಿ ಆತನನ್ನು ಕೆಡವಿ ನಂತರ ಜೆಟ್ ಸ್ಪೀಡಿನಲ್ಲಿ ಮುಂದೆ ಓಡಿತು. ಆ ರಭಸಕ್ಕೆ ಮುಂದೆ ಇದ್ದ ಅಮರೇಶ ಮತ್ತು ಹಿಂದೆ ಇದ್ದ ಮ್ಯಾನೇಜರ್ ಗುಂಡೂರಾವ್ ದಪ್ಪಂತ ಕೆಳಗೆ ಬಿದ್ದರು ಆಯಾ ತಪ್ಪಿ ಸಮಾನ ಅಂತರದಲ್ಲಿ.
” ಎಷ್ಟು ಕಂಟ್ರೋಲ್ ಮಾಡಿದರೂ ನಮಗೆ ಸಿಗದಂತೆ ಜೋರಾಗಿ ಓಡಿ ಹೋಯಿತು ಸಾರ್ ಎಮ್ಮೆ..ಈಗೇನು ಮಾಡಬೇಕೋ ಗೊತ್ತಾಗುತ್ತಿಲ್ಲ… ಪರ್ಫಾರ್ಮರ್ ಮ್ಯಾನೇಜರ್ ನೀವು… ನೀವೇ ದಾರಿ ತೋರಿಸಬೇಕು ಸಾರ್…” ಎಂದ ಮೈಗೆ ಕಾಲಿಗೆ ಆದ ಪೆಟ್ಟುಗಳನ್ನು ಕೈಯಿಂದ ಮೆಲ್ಲಗೆ ಸವರಿಕೊಳ್ಳುತ್ತಾ ಅಮರೇಶ.
ಮುರ್ರಾ ಎಮ್ಮೆ ಓಡಿ ಹೋದ ರಭಸಕ್ಕೆ ಹೃದಯಾಘಾತವಾದಂತಾಗಿ ಆ ನೋವಿನಿಂದ ಹೊರ ಬರಲಾರದ ಗುಂಡೂರಾವ್ ಅಲ್ಲೇ ಕುಸಿದು ಕುಳಿತ. ಅಲ್ಲದೇ ಈಗ ಮುರ್ರಾ ಮುತ್ತಪ್ಪ ತನ್ನ ಪ್ರೀತಿಯ “ಮುರ್ರಾ ಎಮ್ಮೆ ಎಲ್ಲಿ?” ಎಂದು ಕೇಳಿದರೆ ಏನು ಉತ್ತರ ಕೊಡಬೇಕೊ ಒಂದೂ ಗೊತ್ತಾಗುತ್ತಿಲ್ಲ. ವಾಸ್ತವವಾಗಿ ಮುತ್ತಪ್ಪನನ್ನು ಬೆದರಿಸಬೇಕು ಎನ್ನುವ ತನ್ನ ಪ್ಲಾನ್ ರಿವರ್ಸ್ ಆಗಿ ಈಗ ತಾನೇ ಮುತ್ತಪ್ಪನಿಗೆ ಹೆದರಬೇಕಾಯಿತಲ್ಲ ಎನ್ನುವ ಚಿಂತೆ ಗುಂಡೂರಾವ್ ಮುಖದಲ್ಲಿ ಸ್ಪಷ್ಟವಾಗಿ ಕಾಣತೊಡಗಿತು.
ಬ್ಯಾಂಕಿನವರ ಚೀರಾಟ, ಕಿರುಚಾಟ ಮತ್ತು ದೊಂಬರಾಟವನ್ನೆಲ್ಲ ದೂರದಿಂದ ನೋಡುತ್ತಿದ್ದ ಮುತ್ತಪ್ಪ ನಿಧಾನವಾಗಿ ಮನೆಯಿಂದ ಹೊರ ಬಂದ. ಮುರ್ರಾ ಎಮ್ಮೆಯನ್ನು ಅವರು ತನ್ನ ಅಂಗಳದಿಂದ ಬಿಡಿಸಿಕೊಂಡು ರಸ್ತೆಗೆ ತಂದು ಫಜೀತಿಗೆ ಒಳಗಾಗುವ ವಿಷಯ ಆತ ಮೊದಲೇ ಊಹಿಸಿದ್ದ.
ಸೀದಾ ಮ್ಯಾನೇಜರ್ ಗುಂಡೂರಾವ್ ಮತ್ತು ಅಟೆಂಡರ್ ಅಮರೇಶನ ಬಳಿ ಬಂದು ” ಸಾರ್…ನಮ್ಮ ಅಂಗಳದಲ್ಲಿದ್ದ ಪ್ರೀತಿಯ ಮೂರ್ರಾವನ್ನು ನೀವು ಬಲವಂತವಾಗಿ ಎಳೆದುಕೊಂಡು ಹೋದದ್ದು ಎದುರು ಮನೆಯ ಸಾಹುಕಾರರ ಸಿ ಸಿ ಕ್ಯಾಮರಾದಲ್ಲಿ ಭದ್ರವಾಗಿ ರೆಕಾರ್ಡ್ ಆಗಿದೆ. ನಿಜ ಹೇಳಬೇಕೆಂದರೆ ನಮ್ಮ ಅಂಗಳದಲ್ಲಿ ಇದ್ದದ್ದು ನಿಮ್ಮ ಬ್ಯಾಂಕಿನಿಂದ ಸಾಲ ಪಡೆದು ಖರೀದಿಸಿದ್ದು ಅಲ್ಲವೇ ಅಲ್ಲ! ನಾನು ಅದನ್ನು ನನ್ನ ಮಗಳ ಮದುವೆಯಲ್ಲಿ ಅಳಿಯನಿಗೆ ‘ವರದಕ್ಷಿಣೆ’ ರೂಪದಲ್ಲಿ ಗಿಫ್ಟ್ ಕೊಟ್ಟಿರುವೆ. ನೀವು ಅವಸರದಲ್ಲಿ ಟ್ಯಾಗ್ ಸರಿಯಾಗಿ ನೋಡದೆ ನಮ್ಮದು ಅಂತ ತಪ್ಪಾಗಿ ಭಾವಿಸಿರುವಿರಿ. ಈಗ ಹೆಚ್ಚು ಕಡಿಮೆ ಕಳ್ಳತನ ಮಾಡಿ ಹೊರಗೆ ಎಳೆದುಕೊಂಡು ಹೋಗಿದ್ದು ನಮ್ಮಸಾಹುಕಾರನದು ಎನ್ನುವ ವಿಷಯ ನೆನಪಿರಲಿ ಮತ್ತು ಅವರು ನಿಮ್ಮ ಬ್ಯಾಂಕಿನಲ್ಲಿ ಸಾಲ ತೆಗೆದುಕೊಂಡಿಲ್ಲ. ಸಂಜೆ ಅವರೇ ಪೊಲೀಸ್ ಕಂಪ್ಲೇಂಟ್ ಕೊಡುತ್ತೇನೆ ಎಂದು ಈಗ ತಾನೇ ನನಗೆ ಫೋನ್ ಮಾಡಿ ಹೇಳಿದ್ದಾರೆ…” ಎಂದು ಹುಸಿ ನಗುತ್ತಾ ನುಡಿದ ಮುತ್ತಪ್ಪ.
” ತಾನೊಂದು ಬಗೆದರೆ ದೈವ ಇನ್ನೊಂದು ಬಗೆಯಿತು ” ಎನ್ನುವಂತೆ ಆಯಿತು ಬ್ಯಾಂಕಿನವರ ಸದ್ಯದ ಪರಿಸ್ಥಿತಿ. ಕೊನೆಗೆ ಪೆಚ್ಚು ಮೋರೆ ಹಾಕಿಕೊಂಡು ಮ್ಯಾನೇಜರ್ ಗುಂಡೂರಾವ್, ಮುತ್ತಪ್ಪನ ಹತ್ತಿರ ಬಂದು ಕೈ ಹಿಡಿದು ” ಏನೋ ಸಾಲ ವಸೂಲಿ ಮಾಡಬೇಕೆಂಬ ಆವೇಶದಲ್ಲಿ ತಪ್ಪು ಮಾಡಿದ್ದೇವೆ. ಇದೊಂದು ಸಲ ಕ್ಷಮಿಸಿ. ನಿಮ್ಮ ಸಾಹುಕಾರರ ಮುರ್ರಾವನ್ನು ಹುಡುಕಿ ತರಲು ಯಾರಿಗಾದರೂ ಒಪ್ಪಿಸಿ. ಅದರ ಖರ್ಚನ್ನು ನಾನೇ ಕೊಡುತ್ತೇನೆ. ಸಾಲದ ಕಂತನ್ನು ನಿಮಗೆ ಅನುಕೂಲವಾದಾಗ ಕಟ್ಟಿ…ಅವಸರವೇನಿಲ್ಲ… ಪ್ಲೀಜ್ …ಮೊದಲು ನಮ್ಮನ್ನು ಈ ಸಂಕಷ್ಟದಿಂದ ಪಾರು ಮಾಡಿ…ಸಾರ್ ” ಎಂದು ಗೋಗರೆದ.
” ಸಾರ್…ಸಾಲದ ಕಂತು ಮುಂದಿನ ತಿಂಗಳು ಕಟ್ಟುತ್ತೇನೆ. ಆ ನನ್ನ ಪ್ರೀತಿಯ ಮುರ್ರಾ ನಮ್ಮ ಮನೆ ಮತ್ತು ನನ್ನನ್ನು ಬಿಟ್ಟು ಎಲ್ಲೂ ಹೋಗೋದಿಲ್ಲ. ಸಂಜೆಯವರೆಗೆ ಅಲ್ಲಿ ಇಲ್ಲಿ ಅದೂ ಇದೂ ಮೇಯ್ದು ವಾಪಾಸು ಬರುತ್ತದೆ. ನೀವು ಅದರ ಬಗ್ಗೆ ಚಿಂತೆ ಬಿಡಿ…ಈಗ ನೀವು ಮೊದಲು ನಿಮ್ಮ ಊರಿಗೆ ಹೋಗಿ ಬ್ಯಾಂಕಿನ ಕೆಲಸ ನೋಡಿಕೊಳ್ಳಿ ಸಾರ್…”ಎಂದು ಮುತ್ತಪ್ಪ ನುಡಿದ ಶಾಂತ ಸ್ವರದಲ್ಲಿ.
ಅದನ್ನು ಕೇಳಿ ಆತನನ್ನು ಎತ್ತಿಕೊಂಡು ಮುದ್ದಾಡುವಷ್ಟು ಪ್ರೀತಿ ಉಕ್ಕಿತು ಒಮ್ಮೇಲೆ ಗುಂಡೂರಾವ್ ಹಾಗೂ ಅಮರೇಶನಿಗೆ. ಕೂಡಲೇ ಒಂದು ನಿಮಿಷ ಕೂಡ ತಡಮಾಡದೆ ಬೈಕ್ ಸ್ಟಾರ್ಟ್ ಮಾಡಿ ಮುತ್ತಪ್ಪನಿಗೆ ಟಾಟಾ ಹೇಳಿ ರೊಯ್ಯೆಂದು ಹೊರಟೇ ಬಿಟ್ಟಿತು ಬ್ಯಾಂಕಿನ ‘ಭಲೇ ಜೋಡಿ’ ಮತ್ತೆ ಮಲ್ಲಾಪುರದತ್ತ ತಿರುಗಿ ಸಹಾ ನೋಡದೆ. …ಡೈರಿ ಸಾಲ ವಸೂಲಾತಿಗೆ ಅದರಲ್ಲೂ ಮುಖ್ಯವಾಗಿ ಮುರ್ರಾ ಎಮ್ಮೆ (ಚಿರಾಸ್ಥಿ!) ಸ್ವಾಧೀನ ಪಡಿಸಿಕೊಳ್ಳಲು ಮತ್ತೆಂದೂ ಆ ಬ್ಯಾಂಕಿನವರು ಪಾಪ ಮಲ್ಲಾಪೂರದತ್ತ ಸುಳಿಯಲೇ ಇಲ್ಲ!
*
21 thoughts on “ಮೂರ್ರಾ ಎಮ್ಮೆ ಮತ್ತು ಮ್ಯಾನೇಜರ್ ಗುಂಡೂರಾವ್”
ವಾವ್ ಸೂಪರ್ ರಾಘಣ್ಣ. ವಿಡಂಬನಾತ್ಮಕ ಬರಹದಲ್ಲಿ ನಿಮ್ಮಲ್ಲಿಯ ಪಳಗಿದ ಸಾಹಿತಿ ಅದ್ಭುತವನ್ನು ಸೃಷ್ಟಿಸಿದ್ದಾನೆ. ಅಭಿನಂದನೆಗಳು.
ಧನ್ಯವಾದಗಳು
ಸೂಪರ್ ವಿಡಂಬನೆ. ಕಥಾವಸ್ತು ರಾಜಕೀಯದಿಂದ ಬ್ಯಾಂಕಿನ ಕಡೆ ತಿರುಗಿದ್ದು ಮತ್ತು ವಿಡಂಬನಾ ಬರಹದಲ್ಲಿ ಹಿಡಿತ ಸಾಧಿಸುತ್ತಿರುವುದು ಸಂತಸದ ಸಂಗತಿ. ಬ್ಯಾಂಕ್ ಜೀವನದಲ್ಲಿ ಇಂತಹ ಸಾಕಷ್ಟು ಸಂಗತಿಗಳು ನಮ್ಮೆಲ್ಲರ ಅನುಭವಕ್ಕೆ ಬಂದಿರುತ್ತವೆ.
ಅಭಿನಂದನೆಗಳು.
ಧನ್ಯವಾದಗಳು
ಸರ್ ನಿಮ್ಮ ಈ ಬರಹ
ಮೂರ್ರಾ ಎಮ್ಮೆ ಮತ್ತು ಮ್ಯಾನೇಜರ್ ಗುಂಡೂರಾವ್”ಚನ್ನಾಗಿ ಮೂಡಿ ಬಂದಿದೆ
ಧನ್ಯವಾದಗಳು
ಸಾಲ ನೀಡಿವುದಕ್ಕಿಂತ ಅದರ ವಸೂಲಾತಿ ತುಂಬ ಫಜೀತಿಯದೆಂದು ರಾಘವೇಂದ್ರ ಮಂಗಳೂರು ಅವರು ತುಂಬ ಹಾಸ್ಯಮಯವಾಗಿ ತಿಳಿಸಿದ್ದಾರೆ. ಓದುತ್ತಾ ಓದುತ್ತಾ ನಗೆ ಉಕ್ಕಿ ಬರುತ್ತದೆ. ಅಭಿನಂದನೆಗಳು.
The story highlights the practical difficulty at root level in recovery
of loans. Sri Raghavendra has narrated the story in a local attractive language.Hearty congratulations to Sri.M Raghavendra.
Thank you Sir
ಧನ್ಯವಾದಗಳು
ಮುರ್ರಾ ಎಮ್ಮೆ, ಗುಂಡೂರಾವ್ ಮ್ಯಾನೇಜರ್ ಮತ್ತು ಅಮರೇಶನ ಅನುಭವ ಸೊಗಸಾಗಿ ಮೂಡಿಬಂದಿದೆ. ಓದುಗರಿಗೆ
ಖುಷಿ ನೀಡುವ ಸಾಹಿತ್ಯ. ಅಭಿನಂದನೆಗಳು.
ಧನ್ಯವಾದಗಳು
ಇದು ಕಥೆಯೊ, ನಿಜವೋ ಗೊತ್ತಿಲ್ಲ. ಆದರೆ ಈ ರೀತಿಯ ಸನ್ನಿವೇಶಗಳು FO/ Manager ಗಳ ಜೀವನದಲ್ಲಿ ಸಹಜ.
ಕಥೆ ತುಂಬಾ ವಿಡಂಬನಾತ್ಮಕವಾಗಿದೆ. ಓದಲು ಮನಸ್ಸಿಗೆ ಖುಷಿಯಾಗುತ್ತದೆ.
ಅಭಿನಂದನೆಗಳು.
ಧನ್ಯವಾದಗಳು
Enjoyed reading the story.
Almost all officers or managers have had this kind of experience.
Thank you Sir
super article sir
Thank you
Nice story. we also experienced almost similar situation while recovering NPA.
Thank you Sir
ಬ್ಯಾಂಕ್ ಮ್ಯಾನೇಜರ್ ಕೊಟ್ಟ ಎಮ್ಮೆಯ ಸಾಲ ಮತ್ತು ಸಾಲದ ವಸೂಲಿ ಎಲ್ಲವನ್ನು ಬಹಳ್ ಅಚ್ಚುಕಟ್ಟಾಗಿ ವರ್ಣಿಸಿದ್ದೀರಿ . ನಿಜವಾದ ಸನ್ನಿವೇಶಗಳು ವಿಡಂಬನಾಆತ್ಮಕ ಕಥೆ .