ಮಾವಿನಕೆರೆ ರಂಗನಾಥಸ್ವಾಮಿ
ನಾನೇ ಹೊರಡೋಕೆ ತಡಾ ಮಾಡಿದ್ನೇನೋ, ಉಳಿದವರೆಲ್ಲಾ ನನಗಿಂತ ಮೊದಲೆ ಬಂದು ಬಿಟ್ಟಿರುತ್ತಾರೆ ಅದ್ರಲ್ಲೂ ಮಂಜುಳಾ ಟೈಮಿಗೆ ಮಹತ್ವ ಕೊಡುತ್ತಾರೆ ಎಂದು ಧಾರವಾಹಿಯ ನಟಿಯರಂತೆ ಸ್ವಗತವಾಡುತ್ತಾ ಗೆಳತಿ ಸುಧಾಳ ಮನೆಯತ್ತ ಧಾವಿಸಿದೆ. ‘ಇನ್ನೂ ವೆಹಿಕಲ್ ಬಂದಿಲ್ವಲ್ಲ ಸುಧಾ ಎಂದೆ. ಮಂಜುಳಾ ಮಧ್ಯಾಹ್ನದ ಊಟಾ ಕಟ್ಟಿಸಿಕೊಂಡು ಬರಬೇಕಲ್ಲಾ ಲೇಟಾಯ್ತು ಅನ್ನಿಸುತ್ತೆ’.. ಮೆಲು ನಗೆ ಬೀರುತ್ತಾ ಸುಧಾ ಹೇಳಿದಾಗ ‘ಬಚಾವ್’ ಎಂದು ಸಶಬ್ದವಾಗಿ ಹೇಳಿದೆ. ಕೊಂಚ ಹೊತ್ತಿನಲ್ಲೆ ಮಹಿಳೆಯರ ಕಲರವದಿಂದ ಕೂಡಿದ ವೆಹಿಕಲ್ ಬಂದು ನಮ್ಮೆದುರು ನಿಂತಿತು. ಮಂಜುಳಾ, ಅನಿತಾ, ವಿನೂತಾ, ಛಾಯಾ, ಪ್ರೀತಿ ಹಾಯ್ ಎನ್ನುತ್ತಾ ಕೈಬೀಸಿದರು, ನಾನು ಸುಧಾ ವಿದ್ಯಾ, ಸುಮನ್, ಪ್ರೀತಿ ಶ್ರೀಕಾಂತ್ ವೆಹಿಕಲ್ ಏರಿದೆವು.
ಜಪದಕಟ್ಟೆ ಜಪ್ಪೆಶ್ವರ
ಈ ಸಲ ನಮ್ಮಮ್ಮ ನನ್ನ ಗೆಳತಿಯರನ್ನಾ ನೋಡಲಿ ಎಂದು ಕರೆದುಕೊಂಡು ಬಂದಿದ್ದೇನೆ ಎಂದರು ಪ್ರೀತಿ. ಮೈಸೂರಿನಲ್ಲಿ ನೆಲೆಸಿ ನಿತ್ಯವೂ ಗೃಹಕೃತ್ಯಗಳಲ್ಲಿಯೋ ಆಫೀಸ್ ಕೆಲಸಗಳಲ್ಲಿಯೋ ಮುಳುಗಿ ಜಗ ಮರೆಯುವ ನಾವು ಹನ್ನೊಂದು ಗೆಳತಿಯರನ್ನು ಬೆಸೆದಿದ್ದು ನಿಷ್ಕಲ್ಮಷವಾದ ನಿರಪೇಕ್ಷ ಪ್ರೀತಿ, ಊರೂರು ಸುತ್ತುವ ಹವ್ಯಾಸ. ಎರಡು ಅಥವಾ ಮೂರು ತಿಂಗಳಿಗೊಂದು ಪುಟ್ಟ ಪ್ರವಾಸ ಹಮ್ಮಿಕೊಳ್ಳಲು ನೆರವಾಗುವುದು ಗೆಳತಿಯರ ಬಳಗ ವಾಟ್ಸಾಪ್ ಗ್ರುಪ್ ಅಲ್ಲಿಯೇ ಸ್ಥಳದ ಆಯ್ಕೆ ನಡೆದು ಪ್ರವಾಸದ ರೂಪುರೇಷೆಗಳನ್ನು ಒಬ್ಬಿಬ್ಬರು ನಿರ್ಣಯಿಸಿದರೆ ಸಾಕು ಸಂಭ್ರಮಕ್ಕೆ ನಾಂದಿ ಹಾಡಿದಂತೆಯೇ ಸರಿ… ಹಳೆಯ ಪ್ರವಾಸದ ಮಧುರ ಕ್ಷಣಗಳನ್ನು ಮೆಲುಕು ಹಾಕುತ್ತಾ ಕೆ, ಆರ್ ನಗರದ ಶ್ರೀ ಹೊಟೆಲ್ನಲ್ಲಿ ದೋಸೆ, ಇಡ್ಲಿ ವಡೆ, ಟೊಮೆಟೊ ರೈಸ್ಬಾತ್ ಸವಿದು ಕಾಫಿ ಕುಡಿದು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನಲ್ಲಿರುವ ಮಾವಿನಕೆರೆಯಲ್ಲಿರುವ ಬೆಟ್ಟದ ರಂಗನಾಥನ ದರ್ಶನಕ್ಕೆ ಹೊರಟೆವು.
ಬೆಟ್ಟದಿಂದ ಕಾಣುವ ವಿಹಂಗಮ ನೋಟ
ಸೂರ್ಯದಯದ ಚೆಂದವನ್ನು ಕಣ್ತುಂಬಿಸಿಕೊಳ್ಳುತ್ತ, ಮಳೆಗಾಲದ ನೀರುಂಡು ಹಚ್ಚಹಸಿರಾಗಿ ಕಂಗೊಳಿಸುವ ಸುತ್ತಮುತ್ತಲಿನ ಹೊಲಗಳ ಚೆಲುವನ್ನು ಆಸ್ವಾದಿಸುತ್ತಾ ಸಾಗಿದೆವು, ದೊಡ್ಡ ದೊಡ್ಡ ಬಂಡೆಗಳು ಪೊದೆಗಳು ವೃಕ್ಷಗಳಿಂದೊಡಗೂಡಿದ ಬೆಟ್ಟವನ್ನು ವೆಹಿಕಲ್ ಏರಿಯೇ ಸಾಗಬಹುದಾದ ಅನುಕೂಲ ಇದೆ ಅಲ್ಲಿ, ಗುಡಿ ಎದುರು ಬೃಹತ್ ಗಾತ್ರದ ಅಶ್ವತ್ಥ, ಸಂಪಿಗೆಯ ಮರಗಳಿವೆ. ಮರ ಸುತ್ತ ಕಟ್ಟಿದ ಕಟ್ಟೆಯ ಮೇಲೆ ಗಣಪನ ಮೂರ್ತಿ ಇದೆ. ಅದರೆದುರು ಪುಟ್ಟ ಬಯಲು ಇದೆ! ನಕ್ಷತ್ರಾಕಾರವಾಗಿ ಕಟ್ಟಿದ ದೇಗುಲಕ್ಕೆ ಎತ್ತರವಾದ ಸುಂದರ ಗೋಪುರವಿದೆ. ದೇಗುಲದ ಒಳಗೆ ಹೋದರೆ ಮುಖ ಮಂಟಪ ದಾಟಿದ ನಂತರ ಒಳಗಿರುವುದು ನಿಸರ್ಗ ನಿರ್ಮಿತ ಗುಹೆ! ‘ಇಲ್ಲಿರುವ ರಂಗನಾಥಸ್ವಾಮಿ ಆದಿಶೇಷನ ಮೇಲೆ ಮಲಗಿದ್ದಾನೆ, ಜಿತೆಗೆ ಲಕ್ಷ್ಮಿಯೂ ಇದ್ದಾಳೆ. ‘ಸ್ವಾಮಿ ಒರಳುಕಲ್ಲಿನಲ್ಲಿ ಒಡಮೂಡಿದ್ದಾನೆ ನೋಡಿ’ ಎಂದರು ಗೆಳತಿ ಸುಧಾ. ಮಲಗಿರುವ ರಂಗನಾಥನ ಹಿಂಭಾಗದಲ್ಲಿ ನಿಂತಿರುವ ಕೆತ್ತನೆಯ ಮೂರ್ತಿ ಇದೆ. ಅತ್ಯಂತ ಪ್ರಶಾಂತವಾದ ದೇವಸ್ಥಾನದಲ್ಲಿ ದರ್ಶನಕ್ಕಾಗಿ ಉದ್ದದ ಪಾಳಿ ಹಚ್ಚುವ ಕಷ್ಟವಿಲ್ಲ. ದೇವರ ಮುಂದೆ ಕುಳಿತು ಸಮೀಪದಿಂದ ರಂಗನಾಥನನ್ನು ನೋಡಿ ಕಣ್ತುಂಬಿಸಿಕೊಳ್ಳಬಹುದು. ಇದೇ ಗುಡಿಯಲ್ಲಿ ಆಂಜನೇಯನನ್ನೂ ದರ್ಶನ ಮಾಡಬಹುದು. ದೇವಸ್ಥಾನದ ಹೊರಭಾಗದಲ್ಲಿ ವಿಷ್ಣುವಿನ ದಶಾವತಾರದ ಮೂರ್ತಿಗಳನ್ನು ಕೆತ್ತಲಾಗಿದೆ. ಮಾಘಮಾಸದ ಪುಷ್ಯನಕ್ಷತ್ರದಂದು ಸ್ವಾಮಿಗೆ ವಿಜೃಂಭಣೆಯ ರಥೋತ್ಸವ ನಡೆಯುತ್ತದೆಯಂತೆ. ಜಾತ್ರೆ ಹದಿನೈದು ದಿನಗಳ ಕಾಲ ನಡೆಯುತ್ತದೆಯಂತೆ. ಹೊಯ್ಸಳ ವಾಸ್ತುಶಿಲ್ಪದ ಈ ಗುಡಿಯನ್ನು ಬುಕ್ಕರಾಜನು ಕಟ್ಟಿಸಿದ ಎನ್ನುತ್ತರೆ ಅಲ್ಲಿಯ ಸ್ಥಳೀಯರು. ವೈಷ್ಣವ ಧರ್ಮದ ಹರಿಕಾರರಾದ ರಾಮಾನುಜಾಚಾರ್ಯರು ಕೆಲಕಾಲ ಅಲ್ಲಿ ತಪಗೈದರು ಎಂಬ ದಾಖಲೆ ಇದೆಯಂತೆ. ಸಮುದ್ರ ಮಟ್ಟದಿಂದ ಆರುನೂರು ಅಡಿ ಎತ್ತರಕ್ಕೆ ಈ ಗುಡ್ಡದ ರಚನೆ ಇದೆ.
ರುದ್ರಪಟ್ಟಣದ ದೇಗುಲ
ದೇವಸ್ಥಾನದ ಹಿಂಭಾಗದ ಕಾಲು ದಾರಿಯಲ್ಲಿ ಬೆಟ್ಟವನ್ನೇರಬಹುದು. ಬೃಹದ್ ಗಾತ್ರದ ಬಂಡೆಗಳನ್ನೇರುವುದು ಕೊಂಚ ಸಾಹಸದ ಕೆಲಸವೇ ಸರಿ,. ಪುಟ್ಟ ಆಟಿಗೆಯಂತೆ ಕಾಣುವ ಮನೆಗಳು, ಗೊಂಬೆಗಳಂಥಹ ವೃಕ್ಷಗಳು, ಆಗಸಕ್ಕೆ ಹಿಡಿದ ನೀರಕನ್ನಡಿಯಂತೆ ಕಾಣುವ ಪುಟ್ಟ ಪುಟ್ಟ ಕೆರೆಗಳು…. ಹೀಗೆ ಸುತ್ತಮುತ್ತಲಿನ ನೋಟ ಅತ್ಯಂತ ರಮಣೀಯವಾದದ್ದು. ಗೆಳತಿಯರೆಲ್ಲ ನಕ್ಕು ನಲಿದು ಧಾರಾಳವಾಗಿ ಫೋಟೋ ಕ್ಲಿಕ್ಕಿಸಿದೆವು. ರೀಲ್ಸ ಮಾಡುವ ಪ್ರಯತ್ನವೂ ನಡೆಯಿತೆನ್ನಿ…ಭಕ್ತರು ಶ್ರಮಪಟ್ಟೇ ತನ್ನನ್ನು ನೋಡಲಿ ಎಂದು ರಂಗನಾಥ ಬೆಟ್ಟಕ್ಕೇರಿ ಪವಡಿಸಿರಬಹುದೇ ಅಥವಾ ಭಕ್ತರಿಗೆ ಪ್ರಕೃತಿಯ ಮುಂದೆ ತಮ್ಮ ಅಲ್ಪತೆಯ ಅರಿವು ಮೂಡಲಿ ಎಂಬುದಿರಬಹುದೇ? ಎಂದೆಲ್ಲ ಮಾತಾಡಿಕೊಳ್ಳುತ್ತ ಗುಟ್ಟವನ್ನಿಳಿದು ಮಾವಿನ ಕೆರೆ ಊರಿನೊಳಗಿರುವ ಲಕ್ಷ್ಮಿ ವೆಂಕಟರಮಣ ದೇವಸ್ಥಾನವನ್ನೂ ನೋಡಿದೆವು.
ಅಲ್ಲಿಂದ ಹೋಗಿದ್ದು ರುದ್ರಪಟ್ಟಣ ಎಂಬ ಊರಿಗೆ ಸಂಗೀತ ವಿದ್ವಾಂಸರಾದ ಆರ್ .ಕೆ. ಪದ್ಮನಾಭ ಹುಟ್ಟೂರು ಅದು. ಸದ್ಯಕ್ಕೆ ಬೆಂಗಳೂರಿನಲ್ಲಿ ನೆಲೆಸಿರುವ ಈ ಕಲಾವಿದರು ಪ್ರಸಿದ್ದಿಯ ಶಿಖರವನ್ನೇರಿದವರಾದರೂ ಹುಟ್ಟಿದೂರು ಮರೆಯದವರು. ತಂಬೂರಿಯಾಕಾರದ ಸಪ್ತಸ್ವರ ದೇಗುಲ ಕಟ್ಟಿಸಿದ್ದಾರೆ. ಕನಕದಾಸರು, ವಾದಿರಾಜರು, ಶ್ರೀಪುರಂದರದಾಸರು, ಶ್ರೀ ಸರಸ್ವತಿ, ಶ್ರೀ ತ್ಯಾಗರಾಜರು, ಮುತ್ತು ದೀಕ್ಷಿತರು, ಶ್ರೀ ಶ್ಯಾಮಶಾಸ್ತ್ರಿಯವರ ಮೂರ್ತಿಗಳಿವೆ. ದೇವಸ್ಥಾನದ ಬಲಭಾಗದಲ್ಲಿ ದ್ವಾದಶ ಸ್ವರಸ್ಥಾನಗಳನ್ನು ಸ್ಥಾಪಿಸಿದ ಇನ್ನೊಂದು ದೇವಸ್ಥಾನವಿದೆ. ಪುಟ್ಟ ಪುಟ್ಟ ಕಲ್ಲಿನ ಕಂಬಗಳಿಗೆ ಪುಟ್ಟ ಸುತ್ತಿಗೆಯಿಂದ ಬಾರಿಸಿದರೆ ಸರಿಗಮಪದನಿ ಸ್ವರ ಹೊಮ್ಮುವ ಅಚ್ಚರಿ ಇದೆ. ತಮ್ಮ ಮೂಲ ನೆಲೆಗೆ ಇಂಥದ್ದೊಂದು ವಿಶಿಷ್ಟತೆಯನ್ನು ತಂದುಕೊಟ್ಟ ಕಲಾವಿದರಿಗೆ ಮನದಲ್ಲಿಯೇ ನಮಿಸಿ ನಾವು ಹೋಗಿದ್ದು ಜಪದ ಕಟ್ಟೆ ಎನ್ನುವ ಇನ್ನೊಂದು ಕ್ಷೇತ್ರಕ್ಕೆ.
ಕಾವೇರಿ ತೀರದಲ್ಲಿರುವ ಈಶ್ವರನ ಪುರಾತನ ದೇವಸ್ಥಾನವನ್ನು ಎಡತೊರೆ ಮಠದವರು ಅಭಿವೃದ್ಧಿಪಡಿಸಿದ್ದಾರೆ. ಅತ್ಯಂತ ಪ್ರಶಾಂತವಾದ ಪರಿಸರ, ಮಂತ್ರಘೋಷದ ನಾದದಿಂದ ಸಕಾರಾತ್ಮಕತೆ ತಾನೇ ತಾನಾಗಿ ನೆಲೆಸಿದಂತಿತ್ತು. ಪ್ರಸನ್ನಭಾವದ ಈಶ್ವರನ ಮೂರ್ತಿಗೆ ನಮಿಸಿದೆವು. ಬೃಹತ್ ಭೋಜನ ಶಾಲೆಯಲ್ಲಿ ಕಾಫಿ ಕುಡಿದು ದೇವಸ್ಥಾನದ ಪಕ್ಕದಲ್ಲಿರುವ ಕಾವೇರಿ ನದಿಗಿಳಿದೆವು. ಜುಳು ಜುಳು ಕಲರವಗೈಯುತ್ತ ಹರಿವ ಕಾವೇರಿ ವಿಸ್ತಾರವಾಗಿ ಹಾಸಿದ ಸೆರಗಿನಂತೆ ದೃಷ್ಟಿ ಹರಿಯುವಷ್ಟುದ್ದಕ್ಕೂ ಕಾಣಿಸುತ್ತಾಳೆ. ತಾಯ ಮಡಿಲಲ್ಲಾಡುವ ಮಕ್ಕಳಂತೆ ಒಂದಿಷ್ಟು ಹೊತ್ತು ನಾವು ಅಕ್ಷರಶಃ ಮಕ್ಕಳಾದೆವು. ಹೊತ್ತು ಕಂತಿದಂತೆ ದಿನಕರನ ಇಳಿಬಿಸಿಲಿಗೆ ಹೊಳೆವ ನೀರನ್ನು ಬಿಟ್ಟಗಲುವ ಸಮಯ ಬಂದೇ ಬಿಟ್ಟಿತ್ತು. ‘ತಾಯಿ ಇನ್ನೆಂದು ನಿನ್ನ ದರ್ಶನವೋ, ಮತ್ತೊಮ್ಮೆ ಕರೆಸಿಕೋ ನಮ್ಮನ್ನು’ ಎಂದು ನದಿಗೆ ಭಕ್ತಿಯಿಂದೊಮ್ಮೆ ನಮಿಸಿ ಮತ್ತೆ ಗಾಡಿ ಏರಿದೆವು. ಮೈಸೂರು ಸೇರುವವರೆಗೂ ಅಂತ್ಯಾಕ್ಷರಿ ಕನ್ನಡ ಹಿಂದಿ ಚಿತ್ರಗೀತೆಗಳ ಸಾಲುಗಳನ್ನು ಹಾಡುತ್ತ ಸಾಹಿತ್ಯ ನೆನಪಾಗದಿದ್ದಾಗ ತರರಂಪಂ ಲಲಲಲಾ ಎಂದೆಲ್ಲ ಶಬ್ದಗೈದೆವು.
ಗೆಳತಿಯರ ಬಳಗ
‘ಮನೆಯ ತಾಪತ್ರಯದಲ್ಲಿ ಎಲ್ಲಿಗೂ ಹೋಗಲಾಗುವುದಿಲ್ಲ, ಒಬ್ಬಂಟಿಯಾಗಿಯೂ ತಿರುಗಲಾಗುವುದಿಲ’್ಲ… ಎನ್ನುವ ಹೆಂಗಸರ ಕಷ್ಟ ಮೀರುವ ಧೈರ್ಯವನ್ನು ಒಗ್ಗಟ್ಟಿನಿಂದಲೇ ನಾವು ಮೀರಿದ್ದೇವೆ. ಆಗಾಗ ಇಂಥಾ ಒಂದೆರಡು ದಿನಗಳ ಪ್ರವಾಸವನ್ನು ಮಿತವ್ಯಯದಲ್ಲಿಯೇ ಮಾಡುತ್ತ ನಮ್ಮ ಅನುಭವದ ಮಿತಿ ಹಿಗ್ಗಿಸಿಕೊಂಡಿದ್ದೇವೆ ಎನ್ನುವುದೇ ಹೆಚ್ಚುಗಾರಿಕೆ. ಗೆಳೆಯನದ ತಂಪಿನಲಿ ಮನವ ತೋಯಿಸಿಕೊಂಡು ದುಗುಡತೆ ಕಳೆದು ಸಕಾರಾತ್ಮಕತೆಯನ್ನು ಮೈಗೂಡಿಸಿಕೊಳ್ಳುತ್ತೇವೆ.
********