ಮಾತಿಲ್ಲದ ವಾತಾವರಣ ಮೌನವೆಂದೆನಿಸುತ್ತದೆ. ನಿಶ್ಶಬ್ದತೆ ಅದರ ಜೀವಾಳ. ಕೆಲವೊಂದು ಶ್ರದ್ಧಾಕೇಂದ್ರಗಳಲ್ಲಿ ಇಂತಹ ಮೌನ ನಮ್ಮನ್ನು ಆವರಿಸುವುದುಂಟು. ನಮ್ಮ ಮನಸ್ಸನ್ನು ಬಹುವಾಗಿ ತಟ್ಟುವ ಆ ಮೌನದಲ್ಲಿ ನಾವೂ ಒಂದಾಗಿಬಿಡುವುದುಂಟು. ಆ ಮೌನದಲ್ಲಿ ಏನೋ ಅರಿವಾಗದ ಭಾವ ನಮ್ಮೊಳಗೆ ಇಳಿಯುವುದುಂಟು. ದೇವರೆದುರು ಕಣ್ಣುಮುಚ್ಚಿದ ನಮ್ಮೊಳಗೆ ನಿರ್ಮಲಭಾವದ ಅನಾವರಣ ಮತ್ತು ಪಸರಣ. ಮಾತು ಹಾಗಲ್ಲ. ಮನುಷ್ಯರ ನಡುವಿನ ಶಬ್ದಭರಿತ ಮಾತು ನಮ್ಮ ಅನಿಸಿಕೆಗಳ, ಭಾವನೆಗಳ ಸಮರ್ಪಕ ಅಭಿವ್ಯಕ್ತಿಗೆ, ಪರಸ್ಪ್ಪರ ಸಂಹನಕ್ಕೆ ದಾರಿಮಾಡಿಕೊಡುವುದು ನಿಜವಾದರೂ ಮಾತೆಂಬುದು ಮಾಣಿಕ್ಯವಾಗಬೇಕಾದರೆ ಅದರ ಬಳಕೆಯಲ್ಲಿಯೂ ಚಿತ್ತ, ಮನಸ್ಸು ಮತ್ತು ವಿವೇಕವನ್ನು ಜಾಗೃತೆಯಿಂದ ಸಮೀಕರಿಸುವುದು ಬಹಳ ಮುಖ್ಯವೆನಿಸುತ್ತದೆ. ಇಲ್ಲವಾದರೆ ಗಾದೆ ಮಾತಿನಂತೆ ಮಾತು ಮನೆ ಕೆಡಿಸುವುದರ ಜೊತೆಗೆ ವ್ಯಕ್ತಿಗತ ಮನಸ್ತಾಪಕ್ಕೂ, ವೈಮನಸ್ಸಿಗೂ, ವಿನಾಕಾರಣ ಜಗಳಕ್ಕೂ ಕಾರಣವಾಗಬಹುದು. ಹೀಗಿರುವಾಗ ಮಾತಿಗಿಂತ ಮೌನವೇ ಲೇಸೆನಿಸುವುದು ಸಹಜವಲ್ಲವೇ?.
ಮನೆಯಲ್ಲಿ ಗಂಡಹೆಂಡಿರ ಮಧ್ಯೆ ಸಣ್ಣಪುಟ್ಟ ಜಗಳಗಳಾಗುವಾಗ ಹಿರಿಯರು ಹೇಳುವಂತೆ ಅವರಲ್ಲಿ ಯಾರಾದರೊಬ್ಬರು ಮೌನಿಯಾದರೆ ಜಗಳ ಎಳೆದುಕೊಂಡು ಹೋಗುವುದಿಲ್ಲ. ಬದಲು ತುಂತುರು ಮಳೆಯಂತೆ ಸ್ವಲ್ಪಹೊತ್ತು ಹನಿದು ಶಾಂತವಾಗುತ್ತದೆ. ಅನಂತರ ಬೇಕಾದರೆ ಇಬ್ಬರ ನಡುವಿನ ಸರಿತಪ್ಪುಗಳನ್ನು ಕೂಲಾಗಿ ಕೂತು ಸರಿಪಡಿಸಿಕೊಳ್ಳಬಹುದು. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ನಮ್ಮಲ್ಲಿ ತಾಳ್ಮೆ ಎನ್ನುವುದು ಮಾತಿನ ಹಿಂದೆ ಎಲ್ಲಿಯೋ ನಿಧಾನಕ್ಕೆ ತೆವಳಿಕೊಂಡು ಬರುತ್ತಿರುತ್ತದೆ. ಎಲ್ಲ ಮುಗಿದ ಮೇಲೆ ಅದು ಪ್ರತ್ಯಕ್ಷವಾಗಿಬಿಡುತ್ತದೆ. ಮಾತು ಮತ್ತು ಮೌನ ಇವೆರಡು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಒಂದನ್ನು ಕಂಡಾಗ ಇನ್ನೊಂದನ್ನು ಕಾಣಲಾಗುವುದಿಲ್ಲ.
`ನಿಶ್ಶಬ್ದವೇ ದೇವರು' (Silence is God) ಎಂಬ ಗೋಡೆಬರಹಗಳನ್ನು ನೀವು ಕಂಡಿರಬಹುದು. `ನಿಶ್ಶಬ್ದವೇ ದೇವರು' ಅನ್ನುವಲ್ಲಿ ನಾವು ಕೇವಲ ಮೌನವಾಗಿದ್ದರೆ ದೇವರು ಸಿಗುತ್ತಾನೆ ಅನ್ನುವ ಅರ್ಥವಲ್ಲ. ನಿಶ್ಶಬ್ದತೆಯಲ್ಲಿ ದೇವರಿದ್ದಾನೆ ಅಥವಾ ಮೌನದೊಳಗೆ ದೇವರನ್ನು ಹುಡುಕು ಎನ್ನುವ ಭಾವಾರ್ಥವು ಸರಿಹೊಂದಬಹುದು. ಅದಕ್ಕಿಂತ ಮುಂಚೆ ಬಹು ಸಂಕೀರ್ಣವಾದ `ದೇವರು' ಅಂದರೇನು ಅನ್ನುವತ್ತ ಸ್ವಲ್ಪ ಹೊರಳೋಣ. ನಮ್ಮ ಸಕಲ ವೇದಶಾಸ್ತ್ರ, ಉಪನಿಷತ್ತು, ಪುರಾಣ ಎಲ್ಲವೂ ದೇವರ ಕಲ್ಪನೆಯನ್ನು ನಾನಾ ವಿಧಗಳಲ್ಲಿ ನಮಗೆ ಅನುಕೂಲವಾಗುವ ರೀತಿಯಲ್ಲಿ, ಕಾಲ, ದೇಶ ಮತ್ತು ಸಮಯವನ್ನು ಗಣನೆಗೆ ತೆಗೆದುಕೊಂಡು ವಿವರಿಸಿವೆ. ಎಲ್ಲದರ ಸಾರ ದೇವರು ಅತೀತ, ಅನಂತ, ಸರ್ವವ್ಯಾಪಿ, ಸರ್ವಶಕ್ತ, ಸರ್ವ ಅಂತರ್ಯಾಮಿ, ನಮ್ಮ ಮನಸ್ಸು, ಬುದ್ಧಿಯನ್ನು ಮೀರಿ ಇರುವ ಒಂದು ಶಕ್ತಿ ಎಂದು ಸಾಮಾನ್ಯವಾಗಿ ಪರಿಗಣಿಸಲಾಗಿದೆ. ಅಂದರೆ ನಾವು ಅವನನ್ನು ಕಾಣಲಾರೆವೇ ಎಂಬ ನಿರಾಸೆ ಒಡನೆ ನಮ್ಮೊಳಗೆ ಮೂಡುವುದು ಸಹಜ. ಹಿಂದೆಲ್ಲ ದೇವರ ಕುರಿತಾಗಿ ಆಗಿಹೋದ ಘಟನೆಗಳಲ್ಲಿ ಭಕ್ತರಿಗೆ ಅವನು ಪ್ರತ್ಯಕ್ಷನಾಗುವುದು, ಬೇಡಿದ ವರಗಳನ್ನು ನೀಡುವುದು, ಕಷ್ಟಕಾಲದಲ್ಲಿ ಸಲಹುವುದು... ಎಂದೆಲ್ಲ ಓದಿರುತ್ತೇವೆ. ಸಾಕ್ಷಾತ್ ಶ್ರೀಕೃಷ್ಣನು ಕುರುಕ್ಷೇತ್ರದಲ್ಲಿ ಅರ್ಜುನನಿಗೆ ತನ್ನ ವಿರಾಟಸ್ವರೂಪವನ್ನು ತೋರಿಸಿದ ಕಥೆ ನಮ್ಮ ಮೈನವಿರೇಳಿಸುವಂತೆ ಮಾಡುತ್ತದೆ. ಹಾಗಾದರೆ ನಾವು ದೇವರನ್ನು ಕಾಣುವುದೆಂತು? ದೇವರ ವರ್ಣನೆಯ ಪ್ರಕಾರ ಅವನು ಈಗ ಸ್ಥೂಲಕಾಯನಾಗಿ ನಮಗೆ ಕಾಣಸಿಗುವುದು ದುರ್ಲಭ. ಮೂರ್ತಿ ಆರಾಧನೆಯಲ್ಲಿ ಅವನನ್ನು ಕಾಣಲಾರೆವೇ ಎಂದು ಕೇಳಿದರೆ.... ಸಾಧ್ಯವಾದೀತು.... ಆದರೆ ಆರಾಧಕ ಅಲ್ಲಿಯ ಮೂರ್ತಿರೂಪದಿಂದ ಆಳಕ್ಕಿಳಿದು ಅಮೂರ್ತದ ಕಡೆಗೆ ಮಾನಸಿಕವಾಗಿ ಸಾಧನೆಯ ದೃಢ ಹೆಜ್ಜೆಯಿಟ್ಟಾಗ ಮಾತ್ರ ದೇವರು ಸಿಕ್ಕಾನು. ಸಿಕ್ಕ ದೇವರನ್ನು ಅವನು ವರ್ಣಿಸಲು ಹೊರಟರೆ ಸೋಲನ್ನು ಅನುಭವಿಸಿಯಾನು. ಕಾರಣ ದೇವರು ವರ್ಣಣಾತೀತ. ಅಲ್ಲಿಯ ಸಾಧಕನ ಅರಿವು ಭಗವಂತನನ್ನು ಕಂಡರೂ ವಿವರಿಸಲಾಗದ ಸ್ಥಿತಿ. ಶಬ್ದಗಳಿಗೆ ನಿಲುಕದ ಭಾವ. ವರ್ಣಿಸಿದರೂ ಅದಲ್ಲ ಎನ್ನುವ ಅಪೂರ್ಣತೆಯ ಕೊರಗು. ಆ ದಾರಿಯಲ್ಲಿ ಹೀಗೆ ಸಾಗಿದಂತೆ ಕೊನೆಯಿರದ ಅನಂತವೇ ತೆರೆದುಕೊಳ್ಳುತ್ತಾ ಹೋಗುತ್ತದೆ. ಸಾಗುತ್ತಾ ಸಾಗುತ್ತಾ ಹುಡುಕಹೊರಟವನೇ ಇಲ್ಲವಾಗುತ್ತಾನೆ.... ಶೂನ್ಯವಾಗುತ್ತಾನೆ; ಸಮುದ್ರದಲ್ಲಿ ಜಾರಿದ ಉಪ್ಪಿನ ಗೊಂಬೆಯಂತೆ. ಅಲ್ಲಿ ಏನು ಹೇಳಬೇಕೆಂದರೂ ಸಾಧಕನಿರುವುದಿಲ್ಲ. ಇರುವುದು ಅವನೊಬ್ಬನೇ!
ಮೌನ ಎನ್ನುವುದು ಆಡುನುಡಿಯಲ್ಲಿ ಮಾತನಾಡದಿರುವುದು. ಅಂದರೆ ಮಾತಿಲ್ಲದ ಮೌನ. ಆದರೆ ಮನಸ್ಸು? ಅದು ಮಾತನಾಡುತ್ತಲೇ ಇರುತ್ತದೆ. ನಮ್ಮ ಪಂಚೇಂದ್ರಿಯಗಳ (ಕಣ್ಣು, ಕಿವಿ, ಮೂಗು, ನಾಲಿಗೆ ಮತ್ತು ಚರ್ಮ) ಮೂಲಕ ಎಲ್ಲವನ್ನೂ ನೋಡುತ್ತಿರುತ್ತದೆ, ಅನುಭವಿಸುತ್ತಿರುತ್ತದೆ. ಮನಸ್ಸು ಯಾವತ್ತಾದರು ವಿರಮಿಸಿದ್ದುಂಟೆ? ನಿದ್ದೆಯಲ್ಲೂ ಅದು ಸುಪ್ತವಾಗಿ ಗತಿಶೀಲವಾಗಿರುತ್ತದೆ. ಮನಸ್ಸು ವಿರಮಿಸಿದರೆ ಅದು ಮನುಷ್ಯನ ಅಂತ್ಯ ಅಂತಲೇ ಅರ್ಥ. ದೇವರು ಎಂತಹ ಚಾಣಾಕ್ಷ್ಯ ನೋಡಿ. ಮನಸ್ಸು ದೇವರ ವರ. ಇಂತಹ ಮನಸ್ಸನ್ನು ನಮ್ಮೊಳಗೆ ಇಟ್ಟು ನಮ್ಮ ಪರೀಕ್ಷೆ ಮಾಡಹೊರಟವನು ಬುದ್ಧಿವಂತನೇ ಅಲ್ಲವೇ?. ಈ ಮನಸ್ಸು ನಮ್ಮನ್ನು ರೂಪಿಸುತ್ತದೆ ಎನ್ನುವುದು ದಿಟವಾದ ಮಾತು. ಮನಸ್ಸನ್ನು ಸರಿಯಾದ ದಾರಿಯಲ್ಲಿ ನಡೆಸಿದರೆ ಎಲ್ಲವೂ ಸುಗಮ, ಸುಲಲಿತ ಮತ್ತು ಸೌಖ್ಯ. ಇಲ್ಲವಾದರೆ ನಮ್ಮ ಅವನತಿಯನ್ನು ನಾವೇ ಆಹ್ವಾನಿಸಿದಂತೆ. ನಮ್ಮೊಳಗಿನ ಮನಸ್ಸು ನಮ್ಮ ನಡೆನುಡಿಗಳ, ಹಾವಭಾವಗಳ ಮೂಲಕ ಅಭಿವ್ಯಕ್ತವಾಗುತ್ತದೆ; ವ್ಯಕ್ತಿತ್ವವನ್ನು ರೂಪಿಸುತ್ತದೆ. ಅಂದಾಗ ಮನಸ್ಸು ನಮ್ಮ ನಿಯಂತ್ರಣದಲ್ಲಿ ಇರಬೇಕು ಎಂದಂತಾಯಿತು. ಅದಾದರೋ ಹುಚ್ಚು ಕುದುರೆಯನ್ನು ಏರಿದಂತೆ. ಕ್ಷಣ ಇಲ್ಲಿ ಕ್ಷಣ ಅಲ್ಲಿ. ವೇಗದಲ್ಲಿ ಮನೋವೇಗವೇ ತ್ವರಿತಗತಿಯುಳ್ಳದ್ದು. ಸುತ್ತಮುತ್ತಲಿನ ಆಗುಹೋಗುಗಳಲ್ಲಿ ಯಾವತ್ತೂ ಕಳೆದುಹೋಗುವ ಶಕ್ತಿಶಾಲಿ ಮನಸ್ಸನ್ನು ಒಂದೆಡೆ ಹರಿಯಗೊಟ್ಟರೆ ಅದು ನಿರ್ದಿಷ್ಟ ಗುರಿಯನ್ನು ಪರಿಣಾಮಕಾರಿಯಾಗಿ ತಲುಪಬಲ್ಲುದು. ದೇವರನ್ನು ತಲುಪಲು ಮತ್ತು ಅವನೊಡನೆ ಸಂಭಾಷಿಸಲು ನಮಗೆ ಪ್ರಬಲ ಅಸ್ತ್ರವಾಗಿ ದೊರಕುವುದು ಈ ಮನಸ್ಸು ಮಾತ್ರ. ನಾವು ಕೆಡಿಸಿಕೊಂಡ ನಮ್ಮ ಮನಸ್ಸನ್ನು ಪಳಗಿಸಲು ಸಮರ್ಥ ಯೋಗಸಾಧನೆ ಬೇಕು; ಜೊತೆಗೆ ನಾವು ಎಡವÀದಂತೆ ಕೈಹಿಡಿದು ನಡೆಸಲು ಯೋಗ್ಯ ಗುರುವೂ ಬೇಕು. ಆತ ಆಧ್ಯಾತ್ಮಿಕತೆಯ ಎಲ್ಲ ಮಜಲುಗಳನ್ನು ಪಾರುಮಾಡಿದವನಾಗಿರಬೇಕು. ಅಂತಹ ಗುರುವನ್ನು ಕರುಣಿಸು ಅಂತ ದೇವರಲ್ಲಿ ಅನನ್ಯ ಭಕ್ತಿಯಿಂದ ಕಣ್ಣೀರ್ಗರೆದು ಬೇಡಿದ್ದೇ ಆದರೆ ದೇವರು ತಥಾಸ್ತು ಅನ್ನದೆ ಇರುವುದಿಲ್ಲ. ಅವನೆಡೆಗಿನ ನಮ್ಮ ಒಂದು ಹೆಜ್ಜೆ ಅವನ ಹತ್ತು ಹೆಜ್ಜೆಗಳನ್ನು ನಮ್ಮೆಡೆ ಇಡುವಂತೆ ಮಾಡುತ್ತದೆ. ಇದು ಮಾತ್ರ ಸತ್ಯ.
ಮನಸ್ಸನ್ನು ಅರಿತ ನಾವೀಗ ಮೌನದೆಡೆಗೆ ಜಾರೋಣ. ಈ ಮೌನ ಎರಡು ಬಗೆಯದ್ದು. ಒಂದು ಭೌತಿಕವಾಗಿ ಎಲ್ಲರಿಗೂ ಅನುಭವಕ್ಕೆ ಬರುವ ಮಾತಿಲ್ಲದ ಮೌನ. ಇನ್ನೊಂದು ಆಂತರಿಕ ಮೌನ. ಭೌತಿಕ ಮೌನದಲ್ಲಿ ಮನಸ್ಸು ನಮ್ಮ ನಿಯಂತ್ರಣದಲ್ಲಿ ಇರಬೇಕೆಂದೇನೂ ಇಲ್ಲ. ಅದು ಲಂಗುಲಗಾಮಿಲ್ಲದೆ ಗಲ್ಲಿಗಲ್ಲಿ ಸುತ್ತುತ್ತಿರಬಹುದು. ಆದರೆ ಅಂತರ್ಮುಖಿ ಮೌನದಲ್ಲಿ ಮನಸ್ಸು ದೇವರ (ಗಮ್ಯದ) ಕಡೆಗೆ ಒಲಿದಿರುತ್ತದೆ. ಮುಖ್ಯವಾಗಿ ನಮ್ಮ ಪಂಚೇಂದ್ರಿಯಗಳು ಸುಶಿಕ್ಷಿತ ಮನಸ್ಸಿನ ಮೂಲಕ ಮೌನಕ್ಕೆ ಶರಣಾಗಿರುತ್ತವೆ. ಅಚ್ಚರಿಯಲ್ಲವೇ? ಇದು ಅಕ್ಷರಶಃ ಸತ್ಯ. ಪಂಚೇಂದ್ರಿಯಗಳು ಇಲ್ಲಿ ತಮ್ಮ ಸ್ವಾಭಾವಿಕ ಗುಣಧರ್ಮದಂತೆ ಕೆಲಸ ಮಾಡುತ್ತಿದ್ದರೂ ಅದರ ಪರಿಣಾಮ ಮನಸ್ಸಿನ ಮೇಲಾಗದೆ ಸಂಸ್ಕಾರಗಳೂ ಶೂನ್ಯವಾಗುತ್ತವೆ. ಇಂತಹ ಮೌನವೇ ನಮಗೆ ದೇವರನ್ನು ಕಾಣಲು ಬೇಕಾಗಿರುವುದು. ಎಲ್ಲಿ ಪಂಚೇಂದ್ರಿಯಗಳು ಪ್ರತಿಕ್ರಿಯೆಗಳ ಪರಿಣಾಮವನ್ನು ಉಂಟುಮಾಡುವುದಿಲ್ಲವೋ ಅಲ್ಲಿ ಮನಸ್ಸು ತಿಳಿನೀರಕೊಳದಂತೆ ನಿರ್ಮಲವಾಗಿರುತ್ತದೆ. ಅಂದರೆ ಈ ತರದ ಮನಸ್ಸಿನ ಮೂಲಕ ಸರಿಯಾದ ಯೋಗಸಾಧನೆಯನ್ನು ಕೈಗೊಂಡಿದ್ದೇ ಆದರೆ ನಮ್ಮ ಭೌತಿಕತೆಗೆ ಮೀರಿರುವ, ಕೇವಲ ಭಾವಪ್ರಪಂಚಕ್ಕಷ್ಟೇ ಗೋಚರವಾಗಬಲ್ಲ ದೇವರು ಮನೆಬಾಗಿಲಲ್ಲೇ ದರುಶನ ಕೊಟ್ಟಾನು. ಹೀಗೆ ಮೌನವೆನ್ನುವುದು ನಮ್ಮ ನಿಜವಾದ ಸಹಜಸ್ಥಿತಿಯನ್ನು ಮುಟ್ಟುವ ಸಾಧನವಾಗಬೇಕು. ಅಲ್ಲಿ ಊಹಿಸಲೂ ಸಾಧ್ಯವಾಗದ ನಿಶ್ಶಬ್ದತೆ ಇರುತ್ತದೆ. ದೇವರ ಸಾನ್ನಿಧ್ಯವಿರುತ್ತದೆ. ನಿಶ್ಶಬ್ದತೆಗೆ ಜಾರಿದ ಮನಸ್ಸು ಅನಂತತೆಯಲ್ಲಿ ಲೀನವಾಗುತ್ತದೆ. ಅನಂತತೆ ಅಗೋಚರ ದೇವರ ಒಂದು ಗುಣಧರ್ಮ.
11 thoughts on “‘ನಿಶ್ಶಬ್ದವೇ ದೇವರು’”
ನಿಜ ! ನಿಶಬ್ಧತೆ ನಮ್ಮನ್ನು ರಕ್ಷಿಸುತ್ತದೆ ಮತ್ತು ಮೌನದಲ್ಲಿ ದೇಹ ಉತ್ತೇಜಿವಾಗುವುದಿಲ್ಲ. ಅದಕ್ಕೇನೇ ‘ಮೌನಕ್ಕೆ ಶರಣು’ ಏಂದು ನಾವು ಸಾಮಾನ್ಯವಾಗಿ ಕೇಳಿಸಿಕೊಳ್ಳುತ್ತೇವೆ. ಅದರರ್ಥ ಶಬ್ದ-ಅಜೀರ್ಣದ ಕಡೆಗೆ ಹೋಗುವುದು ಬೇಡ ಎಂದು. ‘ಮೌನ’ ಪ್ರಬಲ ಶಕ್ತಿ ಕೊಡುತ್ತದೇನೋ ನಿಜ, ಆದರೇ, ಅದೇ ನಮ್ಮ ಜೀವನವಾಗಬಾರದು. ಅರ್ಥಗರ್ಭಿತ ಲೇಖನ ಮತ್ತು ಶಬ್ದ ಬಳಕೆ ಉತ್ಕೃಷ್ಟ. ಅಭಿನಂದನೆಗಳು.
ಧನ್ಯವಾದಗಳು ನಾಯಕ್
ಇದು ಒಂದು ಉತ್ಕೃಷ್ಟ ಲೇಖನ. ಇದರಲ್ಲಿಯ ಶಬ್ದ ಪ್ರಯೋಗಗಳು ಬಹಳೇ ಆಕರ್ಷಣೀಯ. ಹಾಗಾಗಿ, ಲೇಖಕರಿಗೆ ಅಭಿನಂದನೆಗಳು.
ಧನ್ಯವಾದಗಳು
ಹಾಡು, ಭಜನೆ, ಸ್ತೋತ್ರ, ಮಂತ್ರ ಸೇವೆಗಳು, ಇನ್ನೊಬ್ಬರು ಕಂಡ ಭಗವಂತನನ್ನು ತಿಳಿಸುತ್ತವೆ. ಅದೂ ಅಸಮರ್ಪಕವೇ. ದೇವರ ಬಳಿಯಲ್ಲಿ ಈ ಶಬ್ದಾಡಂಬರಗಳಿಗೆ ಅರ್ಥವಿಲ್ಲ! ಅಲ್ಲಿರುವುದು ಕೇವಲ ನಿಶ್ಶಬ್ದ. ಅನಂತತೆ ಆ ಭಗವಂತನ ಗುಣಧರ್ಮವೆಂದು ತಿಳಿಸುತ್ತಾ, ಶ್ರೀ. ಧರ್ಮಾನಂದ ಶಿರ್ವ ಅವರು, ಆತನನ್ನು ಕಾಣಲು, ಅಲ್ಲ, ಆತನಲ್ಲಿ ಲೀನವಾಗಲು ಇರುವ ಏಕೈಕ ಮತ್ತು ಅಂತಿಮ ಸ್ಥಿತಿಯನ್ನೂ ಸ್ಪಷ್ಟವಾಗಿ ತಿಳಿಸಿದ್ದಾರೆ. ನಮನಪೂರ್ವಕ ಅಭಿನಂದನೆಗಳು. ಮ.ಮೋ.ರಾವ್, ರಾಯಚೂರು.
ಧನ್ಯವಾದಗಳು ಮದನಮೋಹನ ರಾವ್
ಮನಸ್ಸಿಗೆ ಮುದ ನೀಡಿದ ಲೇಖನ. ನಮ್ಮೊಳಗೆ ನಾವು ಇಳಿದು ನಮ್ಮನ್ನು ನಾವು ಶೋಧಿಸಿಕೊಳ್ಳುವುದರ ಬಗ್ಗೆ ಬಹಳ ಅರ್ಥಪೂರ್ಣವಾಗಿ ಬರೆದಿರುವಿರಿ. ಹುಚ್ಚು ಕುಸುರೆಯಂತೆ ನೆಗೆದಾಡುವ ಹುಚ್ಚು ಖೋಡಿ ಮನಸ್ಸು ಒಂದೆಡೆ ನಿಲ್ಲುವುದು ಅಷ್ಟು ಸುಲಭದ ಮಾತಲ್ಲ.
ಅಭಿನಂದನೆಗಳು.
ಧನ್ಯವಾದಗಳು ಸರ್
ಮೌನದ ಬಗ್ಗೆ ಅತ್ಯಂತ ಆಳವಾದ ಅಧ್ಯಯನ ಬರಹ . ನಾವು ಮೌನದಲ್ಲಿ ಇದ್ದಾಗ ದೇವರ ಬಗ್ಗೆ ಚಿಂತನ ಮುಂದಿನ ಮಾಡಲು ಸಾಧ್ಯ .
ಶ್ರೀ ಧರ್ಮಾನಂದ ನಾಯಕರಿಗೆ ಅಭಿನಂದನೆಗಳು
– ಎಸ್ ಆರ್ ಸೊಂಡೂರು ಗಂಗಾವತಿ
ಮೌನದ ಬಗ್ಗೆ ಅತ್ಯಂತ ಆಳವಾದ ಅಧ್ಯಯನ ಬರಹ . ನಾವು ಮೌನದಲ್ಲಿ ಇದ್ದಾಗ ದೇವರ ಬಗ್ಗೆ ಚಿಂತನ ಮುಂಥನ ಮಾಡಲು ಸಾಧ್ಯ .
ಶ್ರೀ ಧರ್ಮಾನಂದ ನಾಯಕರಿಗೆ ಅಭಿನಂದನೆಗಳು
– ಎಸ್ ಆರ್ ಸೊಂಡೂರು ಗಂಗಾವತಿ
ಮೌನದ ಬಗ್ಗೆ ಅತ್ಯಂತ ಆಳವಾದ ಅಧ್ಯಯನ ಬರಹ . ನಾವು ಮೌನದಲ್ಲಿ ಇದ್ದಾಗ ದೇವರ ಬಗ್ಗೆ ಚಿಂತನ ಮಂಥನ ಮಾಡಲು ಸಾಧ್ಯ .
ಶ್ರೀ ಧರ್ಮಾನಂದ ನಾಯಕರಿಗೆ ಅಭಿನಂದನೆಗಳು
– ಎಸ್ ಆರ್ ಸೊಂಡೂರು ಗಂಗಾವತಿ