ಬಿ ಜನಾರ್ಧನ್ ಭಟ್ ರವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಮರ್ಶೆ, ಕಾದಂಬರಿ, ಕಥೆ, ಮಕ್ಕಳ ಸಾಹಿತ್ಯ, ಅನುವಾದ ಮುಂತಾದ ಹಲವಾರು ಸಾಹಿತ್ಯ ಪ್ರಕಾರಗಳಲ್ಲಿ ತಮ್ಮ ಪ್ರತಿಭೆಯನ್ನು ರುಜುವಾತು ಪಡಿಸಿದವರು. ಕಾಲೇಜಿನ ಅಧ್ಯಾಪಕರಾಗಿದ್ದುಕೊಂಡು ಕನ್ನಡ ಮತ್ತು ಇಂಗ್ಲಿಷ್ ಬಾಷೆಯ ಮೇಲೆ ಹತೋಟಿ ಸಾಧಿಸಿದವರು. ಗಮ್ಯ ಇದು ಅವರ ೭ನೆಯ ಕಾದಂಬರಿ. ಅವರ ಮೊದಲ ಕಾದಂಬರಿಗಳಲ್ಲಿ ಇತಿಹಾಸ ಮತ್ತು ವರ್ತಮಾನ ಕಾಲದ ಬದುಕಿನ ಮುಖ ಮುಖಿಯ ಪರಿಶೀಲನೆ ಇದ್ದರೆ, ಇಲ್ಲಿ ಕರ್ನಾಟಕ ಮತ್ತು ಕೇರಳ-ಕರ್ನಾಟಕ ಗಡಿ ಪ್ರದೇಶದ ಜನಗಳ ಸಾಂಸ್ಕೃತಿಕ ಬದುಕಿನ ಚಿತ್ರಣವಿದೆ.
ಕಾದಂಬರಿ ಸುಲಭವಾಗಿ ಓದಿಸಿಕೊಂಡು ಹೋಗುತ್ತದೆ. ಈ ಕಾದಂಬರಿಯಲ್ಲೂ ಭಟ್ ರವರು ವಿವಿಧ ಪಾತ್ರಗಳ ಚಿತ್ರಣದ ಮೂಲಕ ಸದ್ಯದ ಪ್ರಸ್ತುತ ಸಾಮಾಜಿಕ ಜೀವನ ವನ್ನು ಚಿತ್ರಿಸುತ್ತ, ಹಿಂದಿನ ತಲೆಮಾರು ಅವರ ಜೀವನಕ್ರಮದ ಮೇಲು ಬೆಳಕು ಚೆಲ್ಲುತ್ತಾರೆ. ಇದು ಕಾಲಕ್ರಮೇಣ ಬದಲಾದ ಮೌಲ್ಯಗಳ ದರ್ಶನವನ್ನು ಓದುಗರಿಗೆ ಮಾಡಿಸುತ್ತದೆ.
ಕಾದಂಬರಿಯಲ್ಲಿ ಬರುವ ಊರಿನ ಯುವಕ ಮಂಡಲದ ವಾರ್ಷಿಕೋತ್ಸವ, ನಾಟಕ ಪ್ರದರ್ಶನ, ಪಂಚಾಯತ್ ಚುನಾವಣೆ ಇವೆಲ್ಲ ಕರಾವಳಿ ತೀರದ ಓದುಗರಿಗೆ ಚಿರಪರಿಚಿತ. ಕಾದಂಬರಿಯಲ್ಲಿ ಪಾತ್ರಪೋಷಣೆ, ಸ್ವಭಾವ ಚಿತ್ರಣ, ಕಥೆಯ ಗತಿ , ಮೊದಲು ನಿಗೂಢವಾದ ವಿಷಯಗಳು ಮತ್ತೆ ಒಂದೊಂದೇ ಅನಾವರಣ ಗೊಳ್ಳುವುದು ಓದುಗರನ್ನು ಸೆರೆ ಹಿಡಿಯುತ್ತವೆ. ಕಾದಂಬರಿಯಲ್ಲಿ ಮುಖ್ಯವಾಗಿ ದ್ವನಿಸುವುದು ‘ವಿಧಿಯ ಕೈವಾಡದ ಮುಂದೆ ಮಾನವ ಅಸಹಾಯಕ’. ಬದುಕಿನ ಆಗು ಹೋಗುಗಳು, ಏಳು ಬೀಳುಗಳು ಮನುಷ್ಯನ ನಿಯಂತ್ರಣದ ಹೊರಗೆ ಉಳಿದುಬಿಡುತ್ತದೆ. ವಿಧಿ ಎಲ್ಲರ ವಯುಕ್ತಿಕ ಬದುಕನ್ನು ನಿಯಂತ್ರಿಸುತ್ತದೆ. ವ್ಯಕ್ತಿ ಬಯಸಿದ್ದು ನಡೆಯಲು ಬಹುದು ನಡೆಯದೆ ಇರಲು ಬಹುದು.
ನಾರಾಯಣ ಮಾಸ್ಟರ್, ಶಂಕರ್ ಬಲ್ಲಯಾ, ಅಚ್ಚುತಣ್ಣ, ಸುಧಾಕರ ವರ್ಕಾಡಿ , ರಾಜಣ್ಣ ಬಂಗಾರಣ್ಣ, ಗಿರಿಜಕ್ಕ, ಕಾರ್ತಿಯಾನಮ್ಮ, ಮಣಿಕಾಂತ, ಜಗ್ಗಿ ಮುಂತಾದ ಪಾತ್ರಗಳು ನಮ್ಮನು ತಟ್ಟುತ್ತವೆ , ಮುಟ್ಟುತವೆ. ಕಾದಂಬರಿಯ ಮುಖ್ಯ ಪಾತ್ರಗಳು ರಾಜೇಶ್, ಕಲ್ಯಾಣಿ ಮತ್ತು ರಾಗಿಣಿ.
ರಾಜೇಶ್ ಎಲ್ಲಾ ಅರ್ಹತೆ, ಮತ್ತು ಗುಣಗಳನ್ನು ಪಡೆದರೂ ಅವನ ದೌರ್ಬಲ್ಯ ಸುಂದರ ಹೆಣ್ಣಿನ ಬಗೆಗೆ ಏಕ ಮುಖ ಪ್ರೀತಿ. ಶ್ರೀಮಂತಿಕೆಯ ಬದುಕನ್ನು ಬಯಸಿದ ರಾಗಿಣಿ ತನ್ನ ತಂದೆಯ ಕೈಗೊಂಬೆ ಯಂತೆ ಬಂದು ಬೀಳುವುದು ಸುಳ್ಳು ಮೋಸಗಾರ ವಿವಾಹಿತ ಮಣಿಕಾಂತನ ಬಲೆಗೆ. ಕೊನೆಗೆ ರಾಜೇಶ್ ಬಗ್ಗೆ ಅನಾಸಕ್ತಿ ತೋರಿಸುವ ರಾಗಿಣಿಯಲ್ಲಿ ಬದುಕಿನ ಬಗೆಗೆ ಪ್ರಭುದ್ದತೆ ಇಲ್ಲ, ಬದಲಾಗಿ ಪರಿಶ್ರಮ ಇಲ್ಲದ ಬದುಕಿನ ಬಯಕೆಯಿದೆ. ಕಾದಂಬರಿಯಲ್ಲಿ ಪಂಚಾಯತ್ ಚುನಾವಣೆಯ ಪ್ರಕ್ರಿಯೆಗಳು ಚೆನ್ನಾಗಿ ಮೂಡಿ ಬಂದಿದೆ.
ಕಲ್ಯಾಣಿಯ ಗಂಡನ ಮನೆಯವರ ಅಮಾನವೀಯತೆ, ಮೂರ್ಖತನ ಮತ್ತು ಮೂಡ ನಂಬಿಕೆ ಮತ್ತು ಕೊನೆಯಲ್ಲಿ ಅವರ ಪಾಲಿಗೆ ದೊಕಿದ ಪೊರಕೆ ಸೇವೆ ಚೆನ್ನಾಗಿ ಮುಡಿಬಂದಿದೆ. ರಾಜೇಶನ ತಾಯಿ ಮತ್ತು ಕಲ್ಯಾಣಿಯ ತಾಯಿ ಇಬ್ಬರೂ ರಾಜೇಶ್ ನನ್ನು ಮತ್ತು ಕಲ್ಯಾಣಿ ಯನ್ನು ಎಂದೂ ಬೆರೆಯಲು ಅರಿಯಲು ಅವಕಾಶ ನೀಡಲಿಲ್ಲ. ಆದರೆ ವಿಧಿ ಕೊನೆಗೊ ಅವರಿಗೆ ಮದುವೆ ಮಾಡಿ ಬಿಡಿಸಿತು.
ಒಟ್ಟಿನಲ್ಲಿ ಗಮ್ಯ ಓದುಗರಿಗೆ ಮುದ ನೀಡುತ್ತದೆ. ಡಾ. ಬಿ ಜನಾರ್ದನ ಭಟ್ ರವರಿಗೆ ಅಭಿನಂದನೆಗಳು .
*********