ಅಜ್ಜಿಯ ‘ಕೌದಿ’ ನೆನಪು

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕರ್ನಾಟಕಕ್ಕೆ ಬಂದಾಗ ಸುಧಾ ಮೂರ್ತಿಯವರು ಕೌದಿ ಮತ್ತು ರೇಷ್ಮೆ ಸೀರೆಯನ್ನು ಕಾಣಿಕೆಯಾಗಿ ಕೊಟ್ಟಿದ್ದರು. ಕೆಲವರು ಕೇಳಿದರು ‘ಕೌದಿ ಯಾಕೆ ನೀವು ಕಾಣಿಕೆಯಾಗಿ ಕೊಟ್ಟಿದ್ದೀರಿ ? ‘ಅದಕೆ ಸುಧಾ ಮೂರ್ತಿ ಅವರು “ಚಳಿಗಾಲಕ್ಕೆ ಬೆಚ್ಚಗೆ ಬೇಸಿಗೆಗೆ ತಂಪು” ನೀಡುವ ಕೌದಿ ಎಂದಿದ್ದರು.

                    ಮಾನವನಿಗೆ ಆಹಾರ, ಗಾಳಿ,ನೀರು  ಮುಂತಾದ  ಮೂಲಭೂತ  ಸೌಕರ್ಯಗಳು  ಅತಿ ಅಗತ್ಯ. ಮನುಷ್ಯನಿಗೆ  ಪ್ರತಿಯೊಂದು  ವಸ್ತುಗಳು  ಬೇಕೇ  ಬೇಕು. ತನ್ನ  ದಿನಚರಿಯಲ್ಲಿ ವಸ್ತುಗಳ  ಅನುಕೂಲತೆ  ಅನುಸಾರವಾಗಿ  ಬಳಕೆಯನ್ನು  ಮಾಡುತ್ತಾನೆ. ತನಗೆ  ಊಟದಲ್ಲಿ ಬಗೆ - ಬಗೆಯ  ತಿಂಡಿ  ತಿನಿಸುಗಳು,  ಉಡುಗೆ ತೊಡುಗೆಯಲ್ಲಿ  ಬಣ್ಣ- ಬಣ್ಣದ ಬಟ್ಟೆಗಳು, ತಾನಿರುವ ಸ್ಥಳಗಳ    ಮೊದಲಾದವು ತನಗೆ ಬೇಕಾದ  ರೀತಿಯಲ್ಲಿ  ಆಯ್ಕೆ  ಮಾಡುತ್ತಾನೆ. ತನ್ನ ದಿನನಿತ್ಯದ  ಬಳಕೆಯಲ್ಲಿ  ಹಾಸಿಗೆಯೂ  ಕೂಡ ಒಂದಾಗಿದೆ.  ಮನುಷ್ಯನು  ಬೆಳಿಗ್ಗೆಯಿಂದ  ರಾತ್ರಿವರೆಗೆ  ಕೆಲಸ  ಕಾರ್ಯಗಳನ್ನು  ಮುಗಿಸಿ ಮಲಗುವುದು  ಹಾಸಿಗೆ  ಮೇಲೆ. ಹಾಸಿಗೆಯು ಶುಭ್ರ, ಮೈಗೆ ಹಿತ,  ಮೆತ್ತಗೆ, ಕಣ್ಣಿಗೆ ಬಣ್ಣ - ಬಣ್ಣದಿಂದ ಕೂಡಿರುವ  ಹಾಸಿಗೆಯನ್ನೇ  ಆಯ್ಕೆ  ಮಾಡುತ್ತಾನೆ. ಚಾದರ್,  ಬೆಡ್ ಶೀಟ್,  ಬ್ಲಾಂಕೆಟ್, ಜಮಕಾನಿ, ಕಂಬಳಿ, ಕೌದಿ  ಮೊದಲಾದ  ಹೆಸರುಗಳಿಂದ  ಕರೆಯುತ್ತೇವೆ. ಆದರೆ  ಉತ್ತರ  ಕರ್ನಾಟಕದ  ಕಡೆಗೆಲ್ಲ  'ಕೌದಿ'  ಎಂದೇ  ಪ್ರಸಿದ್ಧಿಯಲ್ಲಿದೆ.   



 ಕೌದಿ  ಎಂದರೆ  ಇದು  ಬೆಡ್ ಶೀಟು,  ಚಾದರ, ಬ್ಲಾಂಕೆಟ್ ತರ ಇರುವುದಿಲ್ಲ. ಗ್ರಾಮೀಣ  ಭಾಗದ  ಹೆಣ್ಣುಮಕ್ಕಳು  ಬೇಸಿಗೆಯ  ಕಾಲದಲ್ಲಿ  ಎರಡು  ತಿಂಗಳು  ಹೊಲಗಳಲ್ಲೆಲ  ಕೆಲಸವಿರುವುದಿಲ್ಲ.   ಆಗ   ಅವರು   ಕೌದಿ ಹೊಲಿಯುತ್ತಾರೆ.  'ಮಳೆ ಬಂದರೆ ಬೆಳೆ'  ಎಂದು ನಂಬಿರುವ  ಒಕ್ಕಲಿಗರು  ಇವರು.  ಯುಗಾದಿಯ ಆಸುಪಾಸಿನಲ್ಲಿ  ತಮ್ಮೆಲ್ಲ  ಹೊಲಗಳಲ್ಲಿ ರಾಶಿಗಳು ಮುಗಿದಿರುತ್ತವೆ.  ಆಗ ಎರಡು, ಮೂರು ತಿಂಗಳು ಕೌದಿ   ಹೊಲಿಯುವ  ಕಾರ್ಯ  ಬಲು  ಜೋರು. ಬೆಳಿಗ್ಗೆ  ಕೋಳಿ  ಕೂಗುವ  ಸಮಯದಲ್ಲಿ  ಎದ್ದು  ಮನೆ  ಕೆಲಸವೆಲ್ಲ  ಮುಗಿಸಿ ಕೌದಿ  ಹೊಲಿಯುವುದರಲ್ಲಿ  ತೊಡಗಿರುತ್ತಾರೆ. ಹೊರ ಅಂಗಳದಲ್ಲಿ  ಹೆಂಗಳೆಯರೆಲ್ಲರು  ಕೌದಿ ಹೊಲಿಯುವುದು  ಸಂಭ್ರಮವೇ  ಸಂಭ್ರಮ. ಜಾನಪದ  ಹಾಡುಗಳನ್ನು  ಹಾಡುತ್ತಾ  ಒಬ್ಬರಿಗೊಬ್ಬರು  ಹರಟೆ  ಹೊಡೆಯುತ್ತಾ ಬಲು ಖುಷಿಯಿಂದ  ತಮ್ಮ  ಕಾಯಕದಲ್ಲಿ  ಮಗ್ನರಾಗಿರುತ್ತಾರೆ. 

ಕೌದಿ  ಹೊಲಿಯುವ  ಕಲೆ ಎಲ್ಲರಿಗೂ  ಬರುವುದಿಲ್ಲ.   ಅದು  ಸುಲಭದ ಕೆಲಸವಲ್ಲ.  ಬುಧವಾರ  ಮತ್ತು  ಶನಿವಾರ ಲ್ಯಾವಿ ಮಾಡುತ್ತಾರೆ. ಲ್ಯಾವಿ ಎಂದರೇನು?ಲ್ಯಾವಿ ಎಂದರೆ  ಅವರ  ಅಳತೆಗೆ  ಅನುಗುಣವಾಗಿ  ಸೀರೆಯನ್ನು  ತೆಗೆದುಕೊಂಡು   ಕೆಳಗೆ  ಹಾಸಿ  ನಾಲ್ಕು  ಮೂಲೆಗೆ ಏನಾದರೂ  ಒಂದು  ಭಾರವಾದ  ವಸ್ತುವಿಟ್ಟು  ಆ ಸೀರೆಯ  ಮೇಲೆ  ನೀರಿನಲ್ಲಿ  ಅದ್ದಿಸಿ  ಚಿಕ್ಕ  ಚಿಕ್ಕ ಬಟ್ಟೆಯ  ತುಂಡುಗಳನ್ನು  ಹಾಕಿ  ಮೇಲೆ  ಮತ್ತೊಂದು  ಬಟ್ಟೆ  ಹಾಕಿ   ದಾರದಿಂದ  ಮೊದಲು  ನಾಲ್ಕು  ಬದಿಗೆ   ಹೋಲಿದುಕೊಳ್ಳುತ್ತಾರೆ.  ನಂತರ  ಮಧ್ಯ ಭಾಗದಲ್ಲಿಯೂ ದಾರದಿಂದ ದೊಡ್ಡ  ದೊಡ್ಡ  ಅಳತೆಯಲ್ಲಿ   ಹೊಲಿಯುತ್ತಾರೆ. ಈಗ  ಇದಾಯಿತು ಲ್ಯಾವಿ. ಇಷ್ಟಕ್ಕೆ ಮುಗಿಯಲಿಲ್ಲ. ಈಗ  ಪ್ರಾರಂಭವಾಗುತ್ತದೆ   ನಿಜವಾದ  ಕೌದಿಯ  ರಚನೆ. ಮರುದಿವಸ  ಆ ಲ್ಯಾವಿಯನ್ನು  ಬಿಸಿಲಲ್ಲಿ  ಸ್ವಲ್ಪ  ಹೊತ್ತು ಒಣಗಿಸುತ್ತಾರೆ.  ಒಣಗಿದ  ನಂತರ  ಹೊಲಿಯಲು ಆರಂಭಿಸುತ್ತಾರೆ. 

ಆ  ಲ್ಯಾವಿಯ   ಮೇಲೆ  ಒಂದು  ಬಟ್ಟೆಯ  ತುಂಡನ್ನು  ಹೊದ್ದಿಸಿ  ಒಂದು  ಮೂಲೆಯಿಂದ  ಒಂದರ  ನಂತರ  ಮತ್ತೊಂದರಂತೆ ಬಟ್ಟೆಯೂ  ಜೋಡಿಸುತ್ತಾ  ಪೂರ್ಣ  ಒಂದು  ಸುತ್ತು ಹಾಕುತ್ತಾರೆ. ಹೀಗೆ  ಕೌದಿ  ಹೊಲಿಯುವಾಗ  ಅದರಲ್ಲಿ  ಹಣಗಿ  ಮೂಲಿ, ಸಾಕಳಿ   ಮೂಲಿ, ಕತ್ತರಿ ಮೂಲಿ, ಮೊದಲಾದ  ಮೂಲೆಯ ಚಿತ್ರವನ್ನು ಹೊಲಿಯುತ್ತಾರೆ. ಕೌದಿ  ಹೊಲಿಯುತ್ತಾ  ಒಂದು  ಮೊಳದಷ್ಟು  ಆದ ಮೇಲೆ  ಚಿಕ್ಕ  ತುಂಡು  ಬಟ್ಟೆಯನ್ನು  ಒಂದರ  ಬದಿಗೊಂದು  ಹೀಗೆ  ಮೂರು  ತುಂಡು  ಹಾಕಿ  ಹೊಲಿದರೆ  ಅದಕ್ಕೆ  ಅಡ್ಣುಣಗಿ  ಎನ್ನುತ್ತಾರೆ. ಪಗಡಿ, ಪಂಚವಿಸ  ಪಗಡಿ,  ಮನಿಕಟ್ಟಿ  ಮೊದಲಾದ ವಿನ್ಯಾಸವನ್ನು  ತೆಗೆಯುತ್ತಾ  ಹೊಲಿಯುತ್ತಾರೆ. ಹೀಗೆ ಅನೇಕ  ಡಿಸೈನಗಳು  ಹಾಕಿ  ಹೊಲಿಯುವ  ಪದ್ಧತಿ. 

ಆ  ಪುಟ್ಟ  ಪುಟ್ಟ  ಕೈಗಳಿಂದ  ರಂಗು  ರಂಗಿನ  ಕೌದಿಗಳನ್ನು  ಹೊಲಿಯುವುದೇ  ಮಾರ್ಮಿಕವಾಗಿದೆ. ನೋಡಿದರೆ   ಕಣ್ಣುಗಳು ಕಂಗೊಳಿಸುತ್ತವೆ. ಕಾಗೆ ಕಾಲು, ಗುಬ್ಬಿ ಕಾಲು ಹೀಗೆ ಅನೇಕ  ವಿನ್ಯಾಸಗಳು ಬಿಡಿಸುತ್ತಾರೆ. ಸಾಲುಗಳು ಮೇಲೆ  ಕೆಳಗೆ  ಇಲ್ಲದೆ  ಒಂದೇ  ಸಮವಾಗಿ  ಬರುತ್ತವೆ. ಕೌದಿಯು  ಆಯಾತಕಾರವಾಗಿದ್ದರೆ ಮುಗಿಸುವಾಗ  ಸರಿಯಾಗಿ  ಬರುವುದಿಲ್ಲ.  ಆಗ  'ಮನೆ ಕಟ್ಟಿ'  ಹೊಲಿಯುತ್ತಾರೆ. ಮನೆ ಕಟ್ಟಿ ಹೊಲಿಯುದೆಂದರೆ  ಏನು?  ಕೌದಿಯನ್ನು  ಒಂದು  ಮೊಳ  ಹೊಲಿದ  ಮೇಲೆ  ಮಧ್ಯದಲ್ಲಿ  ಬಂದಾಗ  ಎರಡು  ಭಾಗ  ಮಾಡಿ  ವಿಂಗಡಿಸಿ ಹೊಲಿಯುತ್ತಾರೆ.  ಅಜ್ಜಿ  ಹೊಲಿಯುವಾಗ  ನನಗೆ  ಕಾಡುವ  ಪ್ರಶ್ನೆ ಒಂದೇ.  ಅದು ಏನೆಂದರೆ  ಒಂದು  ಚೂರು  ಮೇಲು ಕೆಳಗೆ  ಆಗದೆ  ಸಮಾನ  ಅಳತೆಯಲ್ಲಿ  ಹೊಲಿಯುವರು. ನಾನು  ಒಮ್ಮೆ  ಅಜ್ಜಿಗೆ  ಕೇಳಿದೆ.    ಅಜ್ಜಿ  ನೀನು  ಇಷ್ಟು  ಪರಿಪೂರ್ಣವಾಗಿ ಹೇಗೆ ಹೊಲಿಯುವುದು? ಅದಕ್ಕೆ  ಅಜ್ಜಿ  ಹೇಳುತ್ತಿದ್ದರು. ಒಂದು  ಮೊಳ  ಕಟ್ಟಿಗೆಯನ್ನು  ತೆಗೆದು  ಅದರ ಸಹಾಯದಿಂದ  ಅಳತೆ  ಮಾಡಿ  ಗುರುತು  ಹಾಕಿ ಸಮಮದೃಷ್ಟಿಯಿಂದ  ಹೊಲಿಯುತ್ತೇವೆ.  ಕೌದಿ ಹೊಲಿಯುತ್ತಾ  ಮುಗಿತಾ  ಬಂದರೆ  ಬಲು  ಖುಷಿಯಲ್ಲಿ  ಇರುವರು.  ಕೌದಿಯ ಕೊನೆಯ  ಸಮಯದಲ್ಲಿ  ನಾಲ್ಕು  ಜೋಳದ  ಕಾಳನ್ನು  ಹಾಕಿ  ಮುಗಿಸುತ್ತಾರೆ.

 ಹೀಗೆ  ನಾವು  ಚಿಕ್ಕವರು ಇರುವಾಗ  ನಮ್ಮ  ಅಜ್ಜಿ  ಕೌದಿ  ಹೊಲಿಯುವುದನ್ನು ನೋಡಿ  ಸಂತೋಷಪಟ್ಟಿದಲ್ಲದೆ  ನಾನು  ಹೊಲಿದ ನೆನಪು  ಹಾಗೆ  ಮನಸ್ಸಿನಲ್ಲಿ  ಅಚ್ಚ ಹಸಿರಾಗಿ ಉಳಿದಿದೆ. ಅಜ್ಜಿ  ಅನೇಕ  ಪ್ರಕಾರಗಳ  ಕೌದಿ ಹೊಲಿಯುತ್ತಿದ್ದರು. ನಮ್ಮ ಕಡೆಗೆಲ್ಲ  ಹೆಣ್ಣು  ಮಗಳ  ಮದುವೆ ಸಂದರ್ಭದಲ್ಲಿ  ಕೌದಿ  ಕೊಡುವ  ಪದ್ಧತಿ. ಈಗಿನ ಹಾಗೆ  ಬ್ಲಾಂಕೆಟ, ಬೆಡ ಶೀಟ ಗಳಿರಲಿಲ್ಲ ಕೌದಿ  ಕೊಡ್ತಾ  ಇದ್ದರು.  ಊರಲ್ಲಿ ಯಾರದಾದರು   ಮದುವೆ ಇದ್ದರೆ  ಅಜ್ಜಿ  ಹತ್ತಿರ  ಬಂದು  ಅವರು  ಹೊಸ  ಬಟ್ಟೆ ಕೊಟ್ಟು  ಕೌದಿ  ಹೊಲಿಸಿಕೊಂಡು  ಹೋಗುತ್ತಿದ್ದರು. ಆಗ  ದುಡ್ಡು  ಕೊಡ್ತಾ  ಇರಲಿಲ್ಲ. ಮೂರು ನಾಲ್ಕು ಶೇರು  ಜೋಳ  ಒಂದು  ಹೊತ್ತು  ಊಟಕ್ಕೆ ಕೊಡುತ್ತಿದ್ದರು. ಆದರೆ ಈಗ ದುಡ್ಡು ಕೊಟ್ಟು ಹೊಲಿದು ಕೊಳ್ಳುತ್ತಾರೆ.

 ಅಜ್ಜಿ  ಹತ್ತಿರ  ತುಂಬಾ ಜನ  ಕೌದಿ  ಹೊಲಿದುಕೊಂಡು  ಹೋಗುತ್ತಿದ್ದರು. ಮಗುವಿಗೆ  ಹಾಸಲಿಕೆ  ಹೊದ್ದಲಿಕೆ  ಕೌದಿಯನ್ನೇ ಉಪಯೋಗಿಸುತ್ತಿದ್ದರು. ಅದು ಮಕ್ಕಳ ಮೈಗೆ  ಮೃದುವಾಗಿರುತ್ತಿತ್ತು. ಕೌದಿ  ನೋಡುವಾಗ ಅನಿಸಬಹುದು  ಈ  ದಾರ ತಾಗಬಹುದು. ಆದರೆ ಅದು  ಚುಚ್ಚುವುದಿಲ್ಲ. ಮಗಳ ಹೆರಿಗೆ ನಂತರ ಗಂಡನ ಮನೆಗೆ ಹೋಗುವಾಗ ಮಗುವಿಗಾಗಿ ದುಬಟಿ (ಚಿಕ್ಕ ಗಾತ್ರದ ಕೌದಿ) ಕೊಡತಾ  ಇದ್ದರು. ಆದರೆ  ಈಗ ಅದೆಷ್ಟೋ  ಹೊಸ  ಬಗೆಯದೆಲ್ಲ  ಬಂದಿದೆ. ಆದರೂ ಹಳ್ಳಿ ಕಡೆ ಇನ್ನು ಕೊಡುವ ಸಂಪ್ರದಾಯವಾಗಿ ಉಳಿದಿದೆ. ಕುಲಾಯಿ (ತಲೆಗೆ ಕಟ್ಟುವ, ಟೋಪಿ)  ಸಹ ಕೊಡುತ್ತಿದ್ದರು. ಇದರಲ್ಲಿಯೂ  ಅನೇಕ  ಬಗೆ  ಬಗೆಯ ವಿನ್ಯಾಸಗಳು  ಹೊಲಿತಾ ಇದ್ದರು. ಕುಲಾಯಿಯು ಕೆಂಪು ರಿಬ್ಬನ  ಜೋಡಿಸಿ   ಅಲಂಕರಿಸಿ  ಹೊಲಿಯುತ್ತಿದ್ದರು. ಅದು ನೋಡುವುದಕ್ಕೆ  ಎರಡು  ಕಣ್ಣುಗಳು  ಸಾಲದು. ಇದು ಕೂಡ  ಬಣ್ಣ  ಬಣ್ಣಗಳಿಂದ  ಕೂಡಿರುತ್ತಿದ್ದವು.  ಹೀಗೆ ಅಜ್ಜಿ  ಊರಲ್ಲಿ  ಕೌದಿ  ಕುಲಾಯಿ  ಹೊಲಿಯುವುದರಲ್ಲಿ  ಎತ್ತಿದ  ಕೈ.  ಅಜ್ಜಿ  ಎಲ್ಲಾ  ಬಗೆ ಬಗೆಯ  ಡಿಸೈನ್ ( ಸ್ತೂಲಕಲ್ಪನೆ) ಹೊಲಿಯುತ್ತಿದ್ದರು.

 ಅಜ್ಜಿ  ಹತ್ತಿರ  ಕೌದಿ  ಹೊಲಿಸಲು ಬರುವವರು  ಹೇಳುವುದು ಒಂದೇ. ಮಾಹಾದೇವಿ ಯಾವುದೇ  ಡಿಸೈನ್  ಹಾಕು  ಇಲ್ಲ  ಸಾದಾ  ಒಟ್ಟಿನಲ್ಲಿ ಹೊಲಿದು  ಕೊಡು  ಎಂದು  ಹೇಳುತ್ತಿದ್ದರು. ಅಜ್ಜಿ ನಗುನಗುತ್ತಾ  ಒಪ್ಪಿಕೊಳ್ಳುತ್ತಿದ್ದರು.  ಅವರು  ಹೇಳಿದ ಸಮಯಕ್ಕೆ  ಹೊಲಿದು  ಕೊಡುತ್ತಿದ್ದರು.  ಅಜ್ಜಿ ಕೆಲವರಿಗೆ   ಹೊಲಿದು  ಕಾಣಿಕೆಯಾಗಿ  ಕೊಟ್ಟಿದ್ದು  ಇದೆ. ನನಗೂ  ಕೂಡ  ಮದುವೆ  ಸಮಯದಲ್ಲಿ ಕೊಟ್ಟಿದ್ದಾರೆ. ಇಲ್ಲಿ  ಮುಂಬೈಯಲ್ಲಿ  ನೋಡಿದವರು ಬೆರಗು  ಆಗದವರೇ  ಇಲ್ಲ. ರೂಪಾ ಎಷ್ಟು  ಚಂದ ಯಾರು  ಹೊಲಿದಿದ್ದಾರೆ?   ಕೈಯಿಂದ ಹೊಲಿದಿದ್ದಾ? ಎಂದು ಕೇಳುತ್ತಿದ್ದರು. ಮರಾಠಿಗರಂತು  ಗೋದಡಿ ಕೊಣಿ  ಶಿವಲ. ಕಿತೀ  ಸುಂದರ  ಆಹೇ.  ಖೂಪ್ ಖೂಪ  ಛಾನ್  ಆಹೆ.  ಎಂದು ನುಡಿಯುತ್ತಿದ್ದರು. ಕೌದಿ  ಒಗೆದು  ಹೊರಗಡೆ  ಹಾಕಿದಾಗಲೆಲ್ಲ  ಕೇಳದವರೇ  ಇಲ್ಲ  ಎನಿಸುತ್ತೆ.  ಹೋಗುವ  ಬರುವ ಹೆಣ್ಣು  ಮಕ್ಕಳು  ಬಾಯಿ  ಮೇಲೆ ಬೆರಳಿಟ್ಟು ಕೊಳ್ಳುವರು. ಫಾರ್ ಛಾನ್  ಆಹೇ. ಎಂದು ಉದ್ಗಾರ  ತಗೆಯುತ್ತಿದ್ದರು. ನಾನು  ಅಜ್ಜಿಗೆ ಫೋನಿನಲ್ಲಿ ಅಜ್ಜಿ ನೀವು  ಹೊಲಿದು  ಕೊಟ್ಟ ಕೌದಿಯ ಬಗ್ಗೆ    ತಾರೀಪು  ತುಂಬಾನೇ  ಆಗ್ತಾ  ಇದೆ  ಇಲ್ಲಿ. ಎಂದು  ಹೇಳಿದಾಗ  ಅಜ್ಜಿ  ಖುಷಿಯಿಂದ  ನಗುತ್ತಿದ್ದರು. 

  ಈಗಿನ  ಇಂಜಿನಿಯರಿಗಿಂತ ಏನು  ಕಡಿಮೆ  ಇರಲಿಲ್ಲ  ನಮ್ಮ  ಹಿರಿಯರು  ಒಂದು ಹೆಜ್ಜೆ  ಮೇಲಿದ್ದರೂ  ಎನ್ನಲು  ನಮಗೆ  ಹೆಮ್ಮೆ ಎನಿಸುತ್ತದೆ. ಇದೇ  ಕಸಬು  ಎಷ್ಟೋ  ಜನರ  ಜೀವನದ  ದಾರಿ ದೀಪವಾದ  ಉದಾಹರಣೆ  ಇದೆ. ಈಗಲೂ  ಕೆಲವು  ಕಡೆಗೆಲ್ಲ  ಇದರ  ಆಧಾರದ   ಮೇಲೆ ಜೀವನ  ನಡೆಸುತ್ತಾರೆ. ನಮ್ಮ  ರಾಷ್ಟ್ರಪತಿ  ದ್ರೌಪದಿ ಮುರ್ಮು  ಅವರು  ಕರ್ನಾಟಕಕ್ಕೆ  ಬಂದಾಗ  ಸುಧಾ ಮೂರ್ತಿಯವರು  ಅವರನ್ನು  ಕೌದಿ ಮತ್ತು ರೇಷ್ಮೆ ಸೀರೆಯನ್ನು   ಕಾಣಿಕೆಯಾಗಿ   ಕೊಟ್ಟಿದ್ದರು. ಕೆಲವರು  ಕೇಳಿದರು.  ಕೌದಿ  ಯಾಕೆ ನೀವು ಕಾಣಿಕೆಯಾಗಿ ಕೊಟ್ಟಿದ್ದೀರಿ ?  ಅದಕೆ ಸುಧಾ ಮೂರ್ತಿ ಅವರು "ಚಳಿಗಾಲಕ್ಕೆ  ಬೆಚ್ಚಗೆ  ಬೇಸಿಗೆಗೆ  ತಂಪು" ನೀಡುವ ಕೌದಿ  ಎಂದಿದ್ದರು. ಅವರ  ಮಾತು  ನೂರಕ್ಕೂ ನೂರು ಸತ್ಯ ಎನಿಸುತ್ತದೆ.  ಕೌದಿಯ  ಬಗ್ಗೆ 'ಮೂರು ಸಾವಿರ  ಹೊಲಿಗೆ'  ಎಂಬ  ಕೃತಿಯು  ಸುಧಾ  ಮೂರ್ತಿ  ಅವರು  ರಚಿಸಿದ್ದಾರೆ.   ಅದು  ಹಿಂದಿ, ಮರಾಠಿ,  ಇಂಗ್ಲಿಷ ನಲ್ಲಿಯೂ  ಅನುವಾದವಾಗಿದೆ.
 
ಒಟ್ಟಾರೆ ಕೌದಿಯ ಬಗ್ಗೆ ಹೇಳುತ್ತಿದ್ದರೆ ಮುಗಿಯುವುದೇ ಇಲ್ಲ. ಇದು ೨೦ ರಿಂದ ೩೦ ವರ್ಷದವರೆಗೆ  ಹರಿಯುವುದಿಲ್ಲ. ಅಷ್ಟು  ವರ್ಷ ಬಳಸಬಹುದು.  ಆದರೆ  ಈಗೆಲ್ಲ  ಹೊಲಿಗೆ  ಯಂತ್ರದ ಮೇಲೆ  ಹೊಲಿಯುವುದು  ತುಂಬಾನೇ ಸುಲಭವಾಗಿದೆ. ಗ್ರಾಮೀಣ  ಭಾಗದಲ್ಲಿಯೂ  ಕೂಡ  ನೂತನ  ಬದುಕಿಗೆ  ಹೊಂದಿಕೊಂಡಿದ್ದಾರೆ. ಹೊಸ  ಹೊಸ ಬಣ್ಣ ಬಣ್ಣದ ಹಾಸಿಗೆಯನ್ನು  ಬಳಸುವದು ರೂಢಿ ಮಾಡಿಕೊಂಡಿದ್ದಾರೆ.
              *******

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

3 thoughts on “ಅಜ್ಜಿಯ ‘ಕೌದಿ’ ನೆನಪು”

  1. ಶೇಖರಗೌಡ ವೀ ಸರನಾಡಗೌಡರ್

    ತುಂಬಾ ಸವಿಸ್ತಾರವಾದ ಲೇಖನ. ಅಭಿನಂದನೆಗಳು.

  2. ಮ.ಮೋ.ರಾವ್ ರಾಯಚೂರು

    ಅಜ್ಜಿಯ ಕೌದಿ ಒಂದು ಸಮಗ್ರ ಎನ್ನುವಂತಹ ದಾಖಲಾತ್ಮಕ (ಡಾಕ್ಯುಮೆಂಟರಿ) ಲೇಖನ. ನಮ್ಮ ಮನೆಯಲ್ಲೂ ಎರೆಡು ಮೂರು ದೊಡ್ಡ ಕೌದಿಗಳಿವೆ. ಅಭಿನಂದನೆಗಳು.

  3. ಗೋಪಾಲ ತ್ರಾಸಿ

    ವಾಹ್ ವಾಹ್…. ಸೊಗಸಾದ, ಆಪ್ತವಾಗಿ ಬರೆದ ಮಾಹಿತಿಪೂರ್ಣ ಲೇಖನ.. ಅಭಿನಂದನೆಗಳು

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter