ಏಳು ಆಣೆಕಟ್ಟುಗಳು

ಸುಂದರ ಪ್ರಕೃತಿ ಜಗತ್ತಿನ ಜೀವಾಳ. ಮನುಷ್ಯನ ಸಾರಸತ್ತ್ವ. ಆಗರ್ಭ ಶ್ರೀಮಂತನಿಂದ ಹಿಡಿದು ತುತ್ತಿಗಿಲ್ಲದ ಬಡವನವರೆಗೆ ಸಾಂಸಾರಿಕ, ಸಾಮಾಜಿಕ ಹೊರೆಗಳಿಂದ ಸುಸ್ತಾದವರು, ಮಿಂಚಿನ ಓಟವೇ ಜೀವನ ಎಂದುಕೊಂಡವರು ಎಲ್ಲರೂ ಒಂದಲ್ಲ ಒಂದು ಸಂದರ್ಭ ನಿಶ್ಶಬ್ದವಾಗಿ ಹರಿಯುವ ನದಿ, ಪ್ರವಾಹವೆಬ್ಬಿಸುವ ಹೊಳೆ, ತಂಗಾಳಿ ಬೀಸುವ ಉದ್ಯಾನವನ, ಮೌನ ಬೋಧಿಸುವ ದಟ್ಟಮಲೆ, ತಾಟಸ್ಥ್ಯವೇ ಸಫಲತೆ ಎನ್ನುವ ನಿಡಿದಾದ ಬೆಟ್ಟಗುಡ್ಡಗಳ ಆಸುಪಾಸು ಹಾದು ಹೋಗುವಾಗ ಕೆಲವು ನಿಮಿಷಕ್ಕಾದರೂ ನಿಂತಿಳಿದು, ಕುಳಿತು, ಓಡಾಡಿ ಅಲ್ಲಿನ ಭವ್ಯತೆಯನ್ನ ಅನುಭವಿಸುತ್ತ ಸಾಂತ್ವನವನ್ನು ಪಡೆಯಲಿಚ್ಛಿಸುತ್ತಾರೆ.
ಅಂಥ ಮನೋಹರ ಹೊಳೆಯೊಂದು ಇಲ್ಲೂ ಹರಿಯುತ್ತಿದೆ. ಅದು ನೀಲಾವರದ ಪಂಚಮಿಕಾನ ಸಮೀಪದ ಮಡಿಹೊಳೆ. ಈ ವರ್ಷದ ಮುಂಗಾರು ಉತ್ತರದ ಕಡೆಗೆ ಹಾರಿ, ವರುಣನಾಗಮನ ತಿಂಗಳು ತಡವಾದರೂ ಉಡುಪಿಜಿಲ್ಲೆಯ ಹೊಳೆಗಳೆಲ್ಲ ತುಂಬಿ ಹರಿಯುತ್ತಿವೆ. ನಾನಿಂದು ಮಡಿಹೊಳೆಯ ದಂಡೆಯಲ್ಲಿ ವಾಹನ ನಿಲ್ಲಿಸಿದೆ. ನದಿಯುದ್ದಕ್ಕೂ ಹಾಸಿಕೊಂಡು ಪುಟ್ಟ ಊರೊಳಗೆ ಕೊಂಡೊಯ್ದು ಜನಜೀವನವನ್ನು ಪರಿಚಯಿಸುವ ಕಾಂಕ್ರೀಟ್ ರಸ್ತೆಯಿಂದ ಒಂದಷ್ಟು ದೂರ ಸಾಗಿದೆ. ಅಲ್ಲೊಂದು ಸುಂದರ ನಾಗಬನವಿದೆ. ಹತ್ತಾರು ಬೃಹತ್ ವೃಕ್ಷಗಳು ಅದರೊಳಗೆ ತಲೆಯೆತ್ತಿ ನಿಂತಿವೆ. ಆಗಷ್ಟೇ ಬಿರುಸಾದ ಮಳೆ ಬಂದು ಹೋಗಿತ್ತು. ಮರಗಿಡಗಳೆಲ್ಲ ಪನ್ನೀರು ಮಿಂದಂತೆ ಪರಿಶುದ್ಧವಾದ ಗಂಧರ್ವ ಸಮೂಹದಂತೆ ಕಾಣುತ್ತಿವೆ. ಬನದ ವಾರಿಸುದಾರರು, ‘ಬನವೂ ನಾಗನೂ ತಮ್ಮ ಅಧಿಕಾರ ವ್ಯಾಪ್ತಿಗೇ ಬರುತ್ತಾನೆ!’ ಎಂದು ಭಾವಿಸಿರಬೇಕು. ಕಾಂಕ್ರೀಟ್ ಆವರಣ, ಕಬ್ಬಿಣದ ಗೇಟು ಕೂರಿಸಿ ಬನಕ್ಕೆ ಬೀಗ ಹಾಕಿದ್ದಾರೆ. ಹೊರಗಡೆ ದಟ್ಟ ಪೊದೆಗಳು. ಅವುಗಳಲ್ಲಿ ಅರಳಿದ ಪುಟ್ಟಪುಟ್ಟ ಹೂವುಗಳು.
ತುಸು ದೊಡ್ಡ ಗಾತ್ರದ ಕಪ್ಪು ಬಿಳುಪಿನ ಚಿಟ್ಟೆಯೊಂದು ಕೋಮಲವಾದ ಪಾರದರ್ಶಕ ರೆಕ್ಕೆಗಳನ್ನು ಬಡಿಯುತ್ತ ಹೂವಿಂದ ಹೂವಿಗೆ ಹಾರುತ್ತ ಮಕರಂದ ಹೀರುತ್ತಿದೆ. ಫೋಟೋ ಕ್ಲಿಕ್ಕಿಸಲನುವಾದೆ. ನನ್ನಿರುವನ್ನು ಗಮನಿಸುತ್ತ ಕಾರ್ಯಮಗ್ನವಾಗಿದ್ದ ಆ ಜೀವಿ ಚಂಗನೆ ಒಂದಷ್ಟು ದೂರ ಹಾರಿ ಅಲ್ಲೊಂದು ಹೂವಿನ ಮೇಲೆ ಕುಳಿತುಕೊಂಡಿತು. ನನ್ನ ಕ್ಯಾಮೆರಾ ಅಲ್ಲಿಗೂ ಹಿಂಬಾಲಿಸಿತು. ಅದು ಭಯ, ಬೇಸರದಿಂದ ಅಲ್ಲಿಂದಲೂ ಮಾಯವಾಯಿತು. ನಮ್ಮ ಆಧುನಿಕ ಯಂತ್ರೋಪಕರಣಗಳೆಲ್ಲ ಹೀಗೆಯೇ. ಯಾವ ಜೀವಿಯನ್ನೂ ನಿರ್ಭಯವಾಗಿ ಬದುಕಲು ಬಿಡುವುದಿಲ್ಲ.
ಚಿಟ್ಟೆ ಒಂದು ಪುಟ್ಟ ಜೀವಿ. ಅದರ ಮೆದುಳು ಸಾಸಿವೆಯಷ್ಟಿರಬಹುದು. ಆದರೆ ಅದಕ್ಕೆ ತನ್ನ ಪರಿಸರದ ಬಗೆಗಿನ ಅರಿವು, ಗ್ರಹಣಶಕ್ತಿ ಅದ್ಭುತ! ನಿತ್ಯ ನಾನಾ ಅಪಾಯಗಳಿಗೆ ಸೋಕಿಕೊಂಡೇ ತಿನ್ನುವ, ವಿರಮಿಸುವ, ವಂಶ ಬೆಳೆಸಿ ಉಳಿಸುವ ಸವಾಲಿನ ಬದುಕನ್ನು ಅಂಥ ಸಣ್ಣ ಜೀವಿಯೊಂದು ಹೇಗೆ ನಿಭಾಯಿಸುತ್ತದೆ ಎಂಬುದು ಸೋಜಿಗ!


ಹಿಂದಿರುಗಿ ಹೋಗಿ ಹೊಳೆಯ ದಂಡೆ ಮೇಲೆ ಹೊಸದಾಗಿ ನಿರ್ಮಿಸಿದ ಸಿಮೆಂಟು ಬೆಂಚಿನಲ್ಲಿ ಕುಳಿತು ಹರಿವ ನದಿಯನ್ನು ದಿಟ್ಟಿಸತೊಡಗಿದೆ. ನದಿಯ ನಡುವೆ ವಿಶಾಲ ಬಂಡೆಯಿದೆ. ಬೇಸಗೆಯಲ್ಲಿ ಅದರ ಮೇಲೆ ಬೆಳ್ಳಕ್ಕಿ, ನೀರುಕಾಗೆಗಳು ಕುಳಿತು ಮೀನು, ನೀರುಹಾವು ಮತ್ತಿತರ ಜೀವಿಗಳನ್ನು ಹಿಡಿದು ತಿನ್ನುತ್ತ, ಬಿಸಿಲು ಕಾಯಿಸುತ್ತ ಸಹಜ ಧ್ಯಾನದಲ್ಲಿರುತ್ತವೆ. ಪೂರ್ವದಿಂದ ವೇಗವಾಗಿ ಹರಿದು ಬರುವ ನೀರು ಬಂಡೆಯನ್ನಪ್ಪಳಿಸುತ್ತಿದೆ. ಅದರ ಅಪ್ಪಳಿಸುವಿಕೆಯಲ್ಲೂ ಅಂದವಿದೆ. ಬಂಡೆಗೆ ಬಡಿಯುವ ನೀರು ಮೇಲೆ ಕೆಳಗೆ ಚಿಮ್ಮುತ್ತಿದೆ. ಆದರೂ ತಾಳತಪ್ಪದೆ ಇಬ್ಭಾಗವಾಗಿ, ಬಂಡೆಯನ್ನು ಕೋಮಲವಾಗಿ ಸವರುತ್ತ ಮುಂದೆ ಸಾಗುತ್ತಿದೆ. ಸೀಳಿ ಹರಿವ ನೀರು, ಅದರ ಮಗ್ಗುಲಲ್ಲಿ ನೇರವಾಗಿ ಹರಿದು ಬರುವ ಪ್ರವಾಹದ ನಡುವೆ ಘರ್ಷಣೆ ಏಳುತ್ತಿದೆ. ಅದರಿಂದ ಸಣ್ಣಪುಟ್ಟ ಮತ್ತು ಕೆಲವೊಮ್ಮೆ ಆಳವಾದ ಬಿರುಸು ಸುಳಿಗಳು ಮೂಡುತ್ತಿವೆ. ಆ ಸುಳಿಗಳೊಳಗೆ ಆಂತರಿಕ ತಿಕ್ಕಾಟಗಳಾಗುತ್ತಿವೆ. ಹಾಗೆ ಸುಳಿಸುಳಿದು ಮುಂದೆ ಸಾಗುತ್ತ ಸುಳಿಯುವಿಕೆ ನಿಂತು, ಆವರ್ತಗಳು ಸುಳಿವೇ ಇಲ್ಲದಂತೆ ಕಣ್ಮರೆಯಾಗುತ್ತಿವೆ. ಅಷ್ಟರಲ್ಲಿ ಬಿರುಸಾದ ಗಾಳಿ ಬೀಸಿತು. ಅದರ ವೇಗಕ್ಕೆ ನೀರ ಮೇಲ್ಪದರವು ಮೆಲುವಾಗಿ ಕಂಪಿಸಿತು. ತೆಳುವಾದ ಸೂಕ್ಷ್ಮ ತರಂಗಗಳೆದ್ದು ಲಯಬದ್ಧವಾಗಿ ಕುಣಿದವು.
ಬಹುಶಃ ನಮ್ಮ ಮನಸ್ಥಿತಿಯೂ ಹೀಗೆಯೇ ಇರುತ್ತದೆ. ಮನಸ್ಸಿನ ಭಾವನೆ, ಯೋಚನೆ, ಚಿಂತನೆಗಳು ನದಿ, ಸಮುದ್ರದಲ್ಲಿ ಅನಂತವಾಗಿ ಏಳುವ ವಿವಿಧ ರೂಪದ ಅಲೆ, ಸುಳಿಗಳಿದ್ದಂತೆಯೇ. ಹೊರಮುಖವಾಗುವ ಮನಸ್ಸಿನಲ್ಲಿ ಒಳ್ಳೆಯ, ಕೆಟ್ಟ ಆಲೋಚನೆಗಳು ನಿರಂತರ ಮೂಡುತ್ತ ಒಂದಷ್ಟು ಹೊತ್ತು ಸುಳಿಸುಳಿದು ತಿಕ್ಕಾಡಿ ಪೀಡಿಸುತ್ತ ದಿಕ್ಕು ತಪ್ಪಿಸಬಹುದು. ಅವುಗಳಲ್ಲಿ ಪ್ರಿಯವಾದುದನ್ನು ಹಿಡಿಯಲು, ಕೆಟ್ಟದ್ದನ್ನು ತ್ಯಜಿಸಲು ಪ್ರಯತ್ನಿಸುವುದು ವ್ಯರ್ಥ. ಅವು ಯಾವುವೂ ಶಾಶ್ವತವಲ್ಲ, ಕ್ಷಣಿಕದವು. ಆದರೆ, ‘ಅಂಥ ಭಾವನೆ, ಯೋಚನೆಗಳೇ ನಾವು; ಅವುಗಳೇ ನಮ್ಮ ನೈಜ ಅಸ್ತಿತ್ವ!’ ಎಂದು ಭಾವಿಸುವಷ್ಟು ಕಾಲ ಅವುಗಳಿಂದ ಉದ್ಭವಿಸುವ ಸುಖ ದುಃಖ, ನೋವು ನಲಿವುಗಳಲ್ಲಿ ಸಿಲುಕಿ ಒದ್ದಾಡುತ್ತಿರುತ್ತೇವೆ ಎಂದೆನ್ನಿಸಿತು.


ವಿಸ್ತಾರ ಸೇತುವೆಯಡಿಯಿಂದ ಬಾಣದ ತುದಿಯಾಕಾರದ, ಕಪ್ಪುಬಣ್ಣದ ಮೂರು ಪುಟ್ಟ ಹಕ್ಕಿಗಳು ಹೊರಗೆ ಚಿಮ್ಮಿದುವು. ಒಂದು ಹಕ್ಕಿ ಸೇತುವೆಯ ಕಂಭದ ಮೇಲೆ ಹೋಗಿ ಕುಳಿತುಕೊಂಡಿತು. ಉಳಿದೆರಡು ಅತ್ತ ಧಾವಿಸಿ ವಿವಿಧ ಭಂಗಿಗಳಿಂದ ಹಾರಾಡುತ್ತ ಅದನ್ನು ಆಕರ್ಷಿಸತೊಡಗಿದವು. ಸೇತುವೆಯ ಮೇಲೆ ಸ್ಕೂಟರೊಂದು ಬಂತು. ‘ಅವಳಿಗೆ ಮೂವತ್ತು ಸಾವಿರ ಕೊಟ್ಟಾಯಿತಲ್ಲಾ, ಮತ್ತೇನಂತೆ ಅವಳದ್ದು!’ ಸ್ಕೂಟರ್ ಸವಾರ, ಹಿಂದೆ ಕುಳಿತಿದ್ದ ಐವತ್ತರ ಹರೆಯದ ಹೆಂಗಸಿಗೆ ಒರಟಾಗಿ ಹೇಳಿದ್ದು ಕಿವಿಗಪ್ಪಳಿಸಿತು. ಮರುಕ್ಷಣ ಪಕ್ಷಿಗಳು ರಪ್ಪನೆ ಹಾರಿ ಹೋದುವು. ಹೆಂಗಸು ಅದಕ್ಕೇನೋ ಉತ್ತರಿಸುವಷ್ಟರಲ್ಲಿ ಸ್ಕೂಟರೂ ಕಣ್ಮರೆಯಾಯಿತು.
ಬೆಲೆಬಾಳುವ ಕಾರೊಂದು ವೇಗವಾಗಿ ಸೇತುವೆಯನ್ನು ಪ್ರವೇಶಿಸಿತು. ನಡುಭಾಗಕ್ಕೆ ಬರುತ್ತ ಅದರ ವೇಗ ಕುಗ್ಗಿತು. ಗಾಜುಗಳು ಮೆಲ್ಲನೆ ಕೆಳಕ್ಕಿಳಿದವು. ಒಳಗಿಂದ ನಾಲ್ಕು ಮುಖಗಳು ಹೊರಮುಖವಾದುವು. ಹೊಳೆಯ ಸೌಂದರ್ಯವನ್ನೂ ಹಸಿರ ಸೊಬಗನ್ನೂ ಸವಿಯುತ್ತ ಕ್ಷಣಹೊತ್ತು ಧ್ಯಾನಸ್ಥವಾದುವು. ಬಹುಶಃ ಯಜಮಾನನ ಮನಸ್ಸು ಮುಂದಿನ ಪ್ರಯಾಣವನ್ನು ನೆನಪಿಸಿರಬೇಕು. ಕಾರಿನ ಗಾಜುಗಳು ಮತ್ತೆ ಮೇಲೇರಿದುವು. ಕಾರು ಮೆಲ್ಲನೆ ಹೊರಟಿತು. ಕೆಲವು ನಿಮಿಷಗಳ ಬಳಿಕ ಜೀಪೊಂದು ಬಂದು ನಿಂತಿತು. ದಪ್ಪ ದೇಹದ, ಖಾಕಿಧಾರಿ ಯುವಕನೊಬ್ಬ ಇಳಿದ. ಎರಡು ದೊಡ್ಡ ಮೂಟೆಗಳಷ್ಟು ಬಾಳೆಯೆಲೆ, ತರಕಾರಿ ತ್ಯಾಜ್ಯವನ್ನು, ನಗರಸಭೆಯ ತ್ಯಾಜ್ಯ ವಿಲೇವಾರಿ ವಾಹನಕ್ಕೆ ಸುರಿವಂತೆ ಸಾವಕಾಶವಾಗಿ ಹೊಳೆಗೆಸೆದ. ಜೀಪು ಹತ್ತಿ ಕುಳಿತ. ವಾತಾವರಣದ ಆಹ್ಲಾದವನ್ನನುಭವಿಸುತ್ತ ಕೆಲವು ನಿಮಿಷ ಮೊಬೈಲ್‍ನಲ್ಲಿ ಬ್ಯುಸಿಯಾದ. ನಂತರ ಹೊರಟು ಹೋದ. ತುಸುಹೊತ್ತಲ್ಲಿ ಬೈಕೊಂದು ಬಂತು. ಸವಾರ ಬೈಕ್‍ನಲ್ಲಿ ಕುಳಿತು ಒಂದು ಕಾಲನ್ನು ಸೇತುವೆಯೆಡೆಗೆ ತೂರಿದ. ಮೊಬೈಲ್ ತೆಗೆದು ಸುತ್ತಲಿನ ಅಪೂರ್ವ ದೃಶ್ಯವನ್ನು ಕೆಲವು ನಿಮಿಷ ಯಾಂತ್ರಿಕವಾಗಿ ಸೆರೆ ಹಿಡಿದ. ಬಳಿಕ ಹೊರಟು ಹೋದ. ನಾವು ಅಂಥ ಸೌಂದರ್ಯವನ್ನು ಯಂತ್ರಗಳಲ್ಲಿ ಸೆರೆ ಹಿಡಿವ ಬದಲು ಒಂದಿಷ್ಟು ಹೊತ್ತು ಹೃದಯದಲ್ಲಿ ತುಂಬಿಕೊಳ್ಳಲಿಚ್ಛಿಸಿದರೆ ಹೊಸ ಚೈತನ್ಯ ಪುಟಿಯಬಹುದೇನೋ?


ಮಳೆ ಮತ್ತೆ ಶುರುವಾಯಿತು. ಕೊಡೆ ಬಿಡಿಸೆದ್ದು ನಾಗಬನದ ಸಮೀಪದ ಶೆಡ್ಡಿನತ್ತ ಹೋಗಿ ನಿಂತೆ. ಬಿರುಸಾದ ಗಾಳಿ ಮಳೆ ನದಿಯುದ್ದಕ್ಕೂ ಅಪ್ಪಳಿಸುವ ದೃಶ್ಯವು ಮೈಮನಸ್ಸನ್ನು ಪುಳಕಿಸುತ್ತಿದೆ. ಭವಿಷ್ಯದ ಚಿಂತೆ, ಯಶಸ್ಸಿನ ಹಿಂದೆ ಓಡುವ ಜಗತ್ತಿನಲ್ಲಿ ಹುಟ್ಟುವ ಹಿಂಸೆ, ನಿರಾಶೆ, ಗೊಂದಲಗಳ ನಡುವೆ ಅದು ಪುಳಕಗೊಳ್ಳಲಾರದೇನೋ. ಎದುರುಗಡೆ ಉದ್ದಕ್ಕುದ್ದ ನಾಟಿಯಾದ ಹಸಿರು ಹೊಲಗದ್ದೆಗಳು. ದೂರದ ಖಾಲಿ ಹೊಲದಲ್ಲೊಬ್ಬ ನೀಲಿಬಣ್ಣದ ರೈನ್‍ಕೋಟ್ ತೊಟ್ಟು ನಾಲ್ಕಾರು ಹಸುಗಳನ್ನು ಮೇಯಿಸುತ್ತಿದ್ದ. ಅವು ಸ್ಥಳೀಯ ಹಸುಗಳಲ್ಲ. ತುಸು ದೊಡ್ಡವು. ಅವುಗಳ ಎಲುಬು ಬುರುಡೆಗಳು ಅಲ್ಲಲ್ಲಿ ಎದ್ದು ಕಾಣುತ್ತಿದ್ದವು. ಮನುಷ್ಯನಿಗೆ ಹಾಲು ತುಪ್ಪ, ಬೆಣ್ಣೆಯಂಥ ವಿಶೇಷ ಉತ್ಪನ್ನವನ್ನು ನೀಡುವ ಜೀವಯಂತ್ರಗಳವು. ಅದಕ್ಕಾಗಿಯೇ ಆತ ಅವುಗಳನ್ನು ಬಹಳ ಆಸ್ಥೆಯಿಂದ ಸಾಕಿ ಬೆಳೆಸುತ್ತಾನೆ. ಮುಂದೊಂದು ದಿನ ಹಾಲು ಕಡಿಮೆಯಾದರೆ, ನಿಲ್ಲಿಸಿದರೆ ಆತ ಅವುಗಳನ್ನು ಮೊದಲು ಕೊಂಡ ದರಕ್ಕಿಂತ ಕೊಂಚ ಕಡಿಮೆಗೆ ಮಾರುತ್ತಾನೆ. ಅವು ಗೋಮಾಂಸ ಪ್ರಿಯರ ಮೃಷ್ಟಾನ್ನ ಭೋಜನದಲ್ಲಿ ಪಾಲು ಪಡೆದು ಬದುಕು ಮುಗಿಸುತ್ತವೆ.
ಮುಖ್ಯ ಸೇತುವೆಯ ಪಕ್ಕದ ಊರಿಗೆ ಬರಲು ಬಲಬದಿಯಲ್ಲಿ ಕಿರು ಸಂಕವಿದೆ. ಸೈಕಲ್ ಸವಾರನೊಬ್ಬ ಒದ್ದೆಮುದ್ದೆಯಾಗುತ್ತ ಬಂದ. ಸ್ವಲ್ಪ ದೂರದಲ್ಲಿ ಸೈಕಲ್ ನಿಲ್ಲಿಸಿದ. ನನ್ನನ್ನು ಅಪರಿಚಿತ ಅನುಮಾನದಿಂದ ದಿಟ್ಟಿಸುತ್ತ ಶೆಡ್ಡಿನತ್ತ ಬಂದು ಮೈಕೈ ಹಿಂಡಿ ಕೊಸರಿಕೊಳ್ಳುತ್ತ ಪಕ್ಕದಲ್ಲಿ ನಿಂತ.
‘ಮಳೆ ಜೋರಾದಂತಿದೆಯಲ್ಲ?’ ಮಾತಾಡಿಸಿದೆ. ನನ್ನತ್ತ ತಿರುಗಿದವನು ಕಿರುನಗುತ್ತ, ‘ಹೌದು!’ ಎಂದ. ತೆಳ್ಳಗಿನ ಶರೀರದ ಆತ ಬಣ್ಣ ಮಾಸಿದ ಚೌಕಳಿ ಲುಂಗಿ, ಹಳೆಯ ಶರ್ಟ್ ಧರಿಸಿದ್ದ. ವಯಸ್ಸು ಐವತ್ತರ ಆಸುಪಾಸಿರಬಹುದು ಎಂದುಕೊಂಡೆ.


‘ಯಾವೂರು ನಿಮ್ಮದು?’ ಎಂದೆ.
‘ಇದೇ ಊರು. ಓ ಅಲ್ಲಿ ಕಾಣುತ್ತಿದೆಯಲ್ಲ ತೆಂಗಿನ ತೋಟ ಅದು ನನ್ನದೇ!’ ಎಂದ. ಅತ್ತ ದಿಟ್ಟಿಸಿದೆ. ನದಿಯಾಚೆ ದಡದಲ್ಲಿ ಎರಡು ಮೂರು ಎಕರೆಗಳಷ್ಟು ವಿಸ್ತಾರವಾದ ತೆಂಗು, ಕಂಗಿನ ತೋಟ ಸಮೃದ್ಧವಾಗಿತ್ತು.
‘ಎಡಗಡೆ ಓ ಅಲ್ಲೊಂದಷ್ಟು ನಾಟಿ ಮಾಡಿದ ಗದ್ದೆಗಳಿವೆಯಲ್ಲ ಅವೂ ನನ್ನವೇ. ಈ ವರ್ಷ ಮುಂಗಾರು ಮಳೆ ತಿಂಗಳು ತಡವಾಗಲು ಹೋಗಿ ಜೂನ್ ಆರು, ಏಳಕ್ಕೇ ಆಗಬೇಕಿದ್ದ ನಾಟಿ ಜುಲೈ ಮಧ್ಯಕ್ಕೆ ಮುಗಿದಿದೆ. ಎರಡನೇ ಬೆಳೆ ತೆಗೆಯೋದು ಹೇಗೆಂದು ಮುಂದೆ ನೋಡಬೇಕು’ ಎಂದ.
ಅವನ ಹಕ್ರ್ಯೂಲಸ್ ಸೈಕಲ್ ನೋಡಿ, ನನ್ನ ಬಾಲ್ಯದಲ್ಲಿ ಅಂಥ ಸೈಕಲ್‍ಗಳನ್ನು ಓಡಿಸಿದ್ದರ ನೆನಪಾಯಿತು.
‘ಎಷ್ಟು ವರ್ಷದಿಂದ ಸೈಕಲ್ ಓಡಿಸುತ್ತಿದ್ದೀರಿ?’
‘ನಲ್ವತ್ತು ವರ್ಷಗಳಿಂದ!’
‘ಸ್ಕೂಟರ್ ಓಡಿಸುವುದಿಲ್ಲವೇ?’
‘ಇಲ್ಲ. ನಲ್ವತ್ತು ವರ್ಷದಲ್ಲಿ ಇದು ನಾಲ್ಕನೇ ಸೈಕಲ್!’ಎನ್ನುತ್ತ ಸ್ವಚ್ಛವಾಗಿ ನಕ್ಕ.
‘ನಿಮ್ಮ ವಯಸ್ಸೆಷ್ಟು?’ ಹಿಂಜರಿಯುತ್ತ ಕೇಳಿದೆ. ‘ಎಪ್ಪತ್ತಾರು’ಎಂದ. ಅಚ್ಚರಿಯಾಯಿತು! ಆ ಹಿರಿಯ ಎಷ್ಟೊಂದು ಸದೃಢನಾಗಿದ್ದನೆಂದರೆ, ಈಗಿನ ಇಪ್ಪತ್ತೈದರ ಯುವಕರೂ ಅವನಷ್ಟಿರಲಾರರು ಎಂದೆನಿಸಿತು.
ನಾಡಿಗೆ ಅನ್ನ ನೀಡುವ ರೈತನೊಬ್ಬ ಮನಸ್ಸು ಮಾಡಿದರೆ ತನ್ನೆಲ್ಲಾ ಜಮೀನನ್ನು ಸೂಕ್ತ ಬೆಲೆಗೆ ಮಾರಿ ಅದರ ಬಡ್ಡಿಯಿಂದಲೇ ಆಧುನಿಕ ಜೀವನ ನಡೆಸಬಹುದಲ್ಲವೇ? ಆದರೆ ಆತ ಕೆಸರುಮಣ್ಣು ಕಸಕಡ್ಡಿ ಕೊಳೆತ ಗೊಬ್ಬರ ಹುಳಹುಪ್ಪಟೆ ಹಾವು ಅರಣೆಗಳು ತುಂಬಿರುವಂಥ ಹೊಲಗದ್ದೆ, ಒಣ ಬಯಲುಗಳಿಗೆ, ಮಳೆ ಬಿಸಿಲೆನ್ನದೆ ಅಂಟಿಕೊಂಡು ತನ್ನಿಡೀ ಬದುಕನ್ನು ಕೃಷಿಗೇ ಸಮರ್ಪಿಸುವಂಥ ಮನಸ್ಥಿತಿಯನ್ನು ಅವನೊಳಗೆ ಇರಿಸಿದ ಶಕ್ತಿ ಯಾವುದು? ಉನ್ನತ ವ್ಯಾಸಾಂಗ, ಮೇರೆತ್ತರದ ಹುದ್ದೆ, ಅಧಿಕಾರಗಳು; ನಾಡು, ನಗರಗಳ ಐಷಾರಾಮಿ ಜೀವನವನ್ನೇ ಬಯಸುವ, ಸಿಗದಿದ್ದರೆ ಕಸಿಯಲೂ ಹಿಂಜರಿಯದೆ ಸುಖವನ್ನರಸುವ ಜನರಿಗಾಗಿಯೇ ಈ ರೈತಾಪಿ ಜೀವಗಳು ಸೃಷ್ಟಿಯಾಗಿದೆಯೇ?


‘ಈ ಸಲ ಇಲ್ಲಿ ನೆರೆ ಬಂದಿದೆಯೇ?’ ವಿಚಾರವನ್ನು ಬದಿಗೊತ್ತಿ ಕೇಳಿದೆ.
‘ಹೌದು ಬಂದಿತ್ತು’ ಎಂದ ಹಿರಿಯ.
‘ಇಲ್ಲೆಲ್ಲ ಮುಳುಗಡೆಯಾಗಿತ್ತೇ?’
‘ಓ ಅಲ್ಲಿ ಹೊಳೆಯ ನಡುವೆ ಒಂದು ಬಂಡೆ ಇದೆಯಲ್ಲ, ಅದರ ನೆತ್ತಿಯಲ್ಲೊಂದು ಒಣ ಮರದ ದಿಮ್ಮಿ ಕಾಣುತ್ತಿದೆ ನೋಡಿ, ಅಷ್ಟೆತ್ತರಕ್ಕೆ ಬಂದಿತ್ತು. ಅಂದರೆ ಈಗ ನಾವು ನಿಂತಿರುವ ಜಾಗದಲ್ಲಿ ಮೊಣಕಾಲು ಮುಳುಗುವಷ್ಟು!’ ಎಂದ.
ಆ ದಿಮ್ಮಿಯನ್ನು ಆಗಲೇ ನೋಡಿದ್ದೆ. ಆದರೆ ಅದು ನೆರೆ ಬಂದು ಬಿಟ್ಟು ಹೋದ ಕುರುಹು ಎಂದು ನನ್ನ ನಗರದ ಬುದ್ಧಿಗೆ ಹೊಳೆಯಲಿಲ್ಲ.
‘ಇಲ್ಲಿನ ಬಾವಿಗಳ ನೀರು ಹೇಗಿದೆ?’
‘ಆ ವಿಷಯ ಮಾತ್ರ ಕೇಳಬೇಡಿ. ಮಳೆಗಾಲದ ನಂತರ ಇಲ್ಲಿನ ಹೆಚ್ಚಿನ ಬಾವಿಗಳ ನೀರು ಪೂರ್ತಿ ಒಗರುಪ್ಪು! ಈ ಹೊಳೆ ಪಶ್ಚಿಮಘಟ್ಟದಲ್ಲಿ ಹುಟ್ಟಿ ನಮ್ಮೂರ ಮಧ್ಯೆ ಹರಿದು ಸಮುದ್ರ ಸೇರುವವರೆಗೂ ನಮ್ಮ ಘನ ಸರಕಾರವು ಇದಕ್ಕೆ ಏಳು ಆಣೆಕಟ್ಟುಗಳನ್ನು ಕಟ್ಟಿದೆ. ಇಲ್ಲಿಂದ ಸುಮಾರು ಇಪ್ಪತ್ತು ಕಿಲೋ ಮೀಟರ್ ದೂರದಲ್ಲಿ ಸಮುದ್ರವಿದೆ. ತಿಳುವಳಿಕೆಯಿಲ್ಲದ ಸರಕಾರದ ಕೆಲಸದಿಂದಾಗಿ ನಮ್ಮ ಕಣ್ಣಳತೆಯಲ್ಲಿ ಸಿಹಿ ನೀರಿದ್ದರೂ ಅದಕ್ಕಾಗಿ ಪರದಾಡುವಂತಾಗಿದೆ. ಇದನ್ನು ಯಾರಿಗೆ ಹೇಳುವುದು? ಹೇಳಿದರೆ ಆಣೆಕಟ್ಟುಗಳನ್ನು ಕೆಡಹುತ್ತಾರೆಯೇ?’ ಹಿರಿಯ ನೋವಿನಿಂದ ಹೇಳಿದ. ಅಷ್ಟೊತ್ತಿಗೆ ಮಳೆ ನಿಂತಿತು.

‘ಆಯ್ತು, ಹೊರಡುತ್ತೇನೆ ನಮಸ್ಕಾರ’ ಎಂದು ನಗುತ್ತ ಸೈಕಲ್ ಹತ್ತಿದ.
ಏಳು ಆಣೆಕಟ್ಟು, ಒಣಕಲು ಹಸುಗಳು, ರೈತರ ಬದುಕು, ಉಪ್ಪುನೀರು, ನಾಗಬನ-ಎಲ್ಲವೂ ನನ್ನೊಳಗೆ ದಾಖಲಾಗಲು ಹವಣಿಸಿದವು. ಅವುಗಳಿಂದ ಪಾರಾಗಬೇಕು. ಮರಳಿ ಹೋಗಿ ಸಿಮೆಂಟು ಬೆಂಚಿನ ಮೇಲೆ ಕುಳಿತು ಹೊಳೆ ದಿಟ್ಟಿಸತೊಡಗಿದೆ. ಹದವಾದ ಗಾಳಿ. ಹಸಿರು ಜಲ ಮೌನವಾಗಿ ಹರಿಯುತ್ತಿತ್ತು. ತೆಳುವಾದ ಅಳೆಗಳು. ನಡುನಡುವೆ ರಪ್ಪನೆ ಹುಟ್ಟಿ ಕ್ಷಣಹೊತ್ತು ಸುತ್ತಿ ಸುಳಿದು ಕಣ್ಮರೆಯಾಗುತ್ತಿದ್ದ ಸುಳಿಗಳನ್ನು ನೋಡುತ್ತ ಮೆಲ್ಲನೆ ವಿಲೀನವಾದೆ.

ಗುರುರಾಜ್ ಸನಿಲ್, ಉಡುಪಿ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter