ಮುಂಬಯಿ: ಇವತ್ತಿನ ಕವಿತೆಗಳಲ್ಲಿ ವಿಷಯಕ್ಕೆ ಹೆಚ್ಚಿನ ಒತ್ತು ಕೊಡುತ್ತೇವೆ. ಕವಿಯಾದವನಿಗೆ ಛಂದಸ್ಸು ಗೊತ್ತಿರಲೇಬೇಕು. ಛಂದಸ್ಸನ್ನು ಕಲಿಯದೇ ಇದ್ದರೆ, ಲಯದ ಪ್ರಜ್ಞೆ ಇಲ್ಲದೆ ಇದ್ದರೆ ಒಳ್ಳೆಯ ಕವಿಗಳಾಗಲು ಸಾಧ್ಯವಿಲ್ಲ. ಆಧುನಿಕ ಕವಿಗಳಲ್ಲಿ ಲಯದ ಪ್ರಜ್ಞೆ ಬಹಳ ಕಡಿಮೆ. ಕವಿತೆ ಬರೆಯುವಾಗ ಕವಿಯು ಧ್ಯಾನಸ್ಥನಾಗರಬೇಕು. ವಸ್ತುವಿನ ಕುರಿತಾದ ಧ್ಯಾನ ಇರಬೇಕು. ಅದನ್ನು ಇನ್ನೊಂದಕ್ಕೆ ಹೋಲಿಸಿ ಬರೆಯಬಹುದಾದಂಥ ಸಾಮಥ್ರ್ಯವಿರಬೇಕು. ಹಳೆಯ ವಸ್ತುವನ್ನು ಇಟ್ಟುಕೊಂಡು ಹೊಸದನ್ನು ಸೃಷ್ಟಿಸುವ ಅಸಲು ಕಸುಬನ್ನು ಕಲಿತುಕೊಳ್ಳಬೇಕು. ಕವಿಯಾದವನಲ್ಲಿ ಪ್ರತಿಭೆ ಮತ್ತು ಪ್ರಯತ್ನ ಎರಡು ಒಟ್ಟೊಟ್ಟಿಗೆ ಇರಬೇಕು. ಕವಿ ನಿರ್ಮೋಹನಾಗಿರಬೇಕು. ಕಾವ್ಯ ಯಾವುದೂ ಅಲ್ಲ ಹಾಗೂ ಎಲ್ಲವೂ ಹೌದು. ಕಾವ್ಯ ಅನ್ನುವಂಥದ್ದು ಬಹಳ ಮುಖ್ಯವಾದ ಮಾಧ್ಯಮ’ ಎಂದು ಸುಬ್ರಾಯ ಚೊಕ್ಕಾಡಿಯವರು ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯದಲ್ಲಿ ಡಾ.ಜಿ.ಎನ್.ಉಪಾಧ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾವ್ಯ ಸಂವಾದ ಕಾರ್ಯಕ್ರಮದಲ್ಲಿ ನುಡಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಇವರು, ‘ಕವಿತೆ ಅನ್ನುವುದು ವಿಶಿಷ್ಟವಾದ ಅನುಭವ. ಅದೊಂದು ದರ್ಶನ. ಆ ದರ್ಶನಕ್ಕಾಗಿ ಕಾವ್ಯವನ್ನು ಮತ್ತೆ ಮತ್ತೆ ಓದಬೇಕು ದುಃಖದಲ್ಲಿರುವಾಗ, ಸಂತೋಷದಲ್ಲಿರುವಾಗ ಕಾವ್ಯವೇ ನೆನಪಾಗುವುದು. ಕವಿತೆ ನಮ್ಮ ಒಟ್ಟು ಬದುಕಿನಲ್ಲಿ ವಹಿಸುವಂತ ಪಾತ್ರ ಬಹಳ ಮಹತ್ವದ್ದು. ನಾನು ಹಳ್ಳಿಯಲ್ಲಿ ಹುಟ್ಟಿ ಬೆಳೆದು ಅದೇ ಪರಿಸರದಲ್ಲಿ ಜೀವಿಸಿದವನು. ಕವಿತೆ ಬರೆಯಲು ನಿಸರ್ಗದಲ್ಲಿರುವ ಲಯವನ್ನು ಹುಡುಕುತ್ತೇನೆ. ಹಕ್ಕಿಗಳ ಕುಹೂ ಕುಹೂ, ಪ್ರಾಣಿಗಳ ಕೂಗು ಯಾವ ಲೆಕ್ಕಕ್ಕೆ ಸೇರುತ್ತವೆ ಎಂಬುದನ್ನು ಗ್ರಹಿಸುತ್ತೇನೆ ಎಲ್ಲ ಧ್ವನಿಯಲ್ಲಿ ಲಯ ಇದ್ದೇ ಇರುತ್ತದೆ. ಸಾಮಾನ್ಯವಾಗಿ ಖುಷಿಗಿಂತ ನೋವಿನಲ್ಲಿಯೇ ಪರಿಣಾಮಕಾರಿಯಾದಂಥ ಕವಿತೆ ಹುಟ್ಟುವುದು. ನಮ್ಮ ಸಮಾಜ ಕವಿಯಾದವನಿಗೆ ವಿಶೇಷವಾದ ಗೌರವವನ್ನು ಕೊಡುತ್ತದೆ’ ಎಂದು ಕಾವ್ಯ, ಅದರ ಹುಟ್ಟು, ಹಾಗೂ ರಚನೆಯ ಕುರಿತು ಮಹತ್ವದ ವಿಚಾರಗಳನ್ನು ತಿಳಿಯಪಡಿಸಿದರು.
ಕಾವ್ಯ ಸಂವಾದದಲ್ಲಿ ಪಾಲ್ಗೊಂಡ ಲೇಖಕಿ ಅಕ್ಷತಾ ರಾಜ್ ಪೆರ್ಲ ಅವರು, ‘ಬರಹಗಾರನಾದವನು ತನ್ನ ವೈಯಕ್ತಿಕ ಸಿದ್ಧಾಂತಗಳಿಗೆ ಬದ್ಧನಾಗಿರಬೇಕು. ಹೊರಗಿನ ಸಿದ್ಧಾಂತಗಳಿಗೆ ಪ್ರಭಾವಿತನಾಗಿ ತನ್ನ ಮಿತಿಯನ್ನು ಮೀರಬಾರದು. ಇವತ್ತು ಬಹುತೇಕ ಕವಿಗಳೆನಿಸಿಕೊಂಡವರು ಯಾರೋ ಒಬ್ಬರು ಕೊಟ್ಟ ಹೇಳಿಕೆಯ ಪರ ವಿರುದ್ಧವಾಗಿ ಬರೆಯುವುದರಲ್ಲಿಯೇ ಉತ್ಸುಕರಾಗಿರುತ್ತಾರೆ. ಅದರ ಬದಲು ಅವರ ಮನಸ್ಸಿನೊಳಗೆ ಏನಿದೆ? ಭಾವನೆಗಳು ಏನು ಹೇಳುತ್ತವೆ ಎಂಬುದನ್ನು ಗಮನಿಸಿ, ಸ್ಪಂದಿಸಿ ಬರೆಯುವುದು ಒಳ್ಳೆಯದು. ಈಗಾಗಲೇ ನಾವು ಯಾಂತ್ರಿಕ ಬದುಕನ್ನು ಬದುಕುತ್ತ ಇದ್ದೇವೆ. ಯಾವುದೇ ಸಂಬಂಧಗಳಿಗೆ ಬೆಲೆ ಇಲ್ಲದಂಥ ಕಾಲಘಟ್ಟಕ್ಕೆ ಬಂದು ಮುಟ್ಟಿದ್ದೇವೆ. ಹಾಗಾಗಿ ಮುಂದೆ ಕವಿಗಳಿಗಿರುವ ಸವಾಲು ಏನೆಂದರೆ ಭಾವನೆಗಳ ಹುಡುಕಾಟ. ಹೀಗಾದರೆ ಮಾತ್ರ ಮುಂದಿನ ದಿನಗಳಲ್ಲಿ ಕವಿ ಎಂದು ಗುರುತಿಸಿಕೊಳ್ಳಲು ಸಾಧ್ಯ’ ಎಂದು ಸಾಹಿತ್ಯ ಕ್ಷೇತ್ರದಲ್ಲಿನ ಪ್ರಸ್ತುತ ಸ್ಥಿತಿಗತಿಯ ಕುರಿತು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಾದ ಡಾ.ಜಿ.ಎನ್.ಉಪಾಧ್ಯ ಅವರು, ‘ಅನ್ಯಾನ್ಯ ನೆಲೆಗಳಲ್ಲಿ ಕನ್ನಡ ವಾಙ್ಮಯವನ್ನು ಶ್ರೀಮಂತಗೊಳಿಸಿದಂತಹ ಸುಬ್ರಾಯ ಚೊಕ್ಕಾಡಿಯವರ ವೈಶಿಷ್ಟ್ಯವೇನೆಂದರೆ ನವ್ಯಕಾವ್ಯದ ಪರಂಪರೆಯಿಂದ ಬಂದು ತಮ್ಮತನವನ್ನು, ತಮ್ಮ ವರ್ಚಸ್ಸನ್ನು ಬೆಳೆಸಿಕೊಂಡಿರುವುದು. ನಿಸಾರ್ ಅಹಮದ್, ಜಿ.ಎಸ್.ಶಿವರುದ್ರಪ್ಪ, ಚೆನ್ನವೀರ ಕಣವಿ, ಹೆಚ್.ಎಸ್.ವೆಂಕಟೇಶ್ ಮೂರ್ತಿ ಈ ಸಾಲಿನಲ್ಲಿ ನಿಲ್ಲಿಸಲೇ ಬೇಕಾದಂತ ಹಿರಿಯ ಕವಿ ಸುಬ್ರಾಯ ಚೊಕ್ಕಡಿಯವರು. ಸಮಕಾಲಿನ ಸಂದರ್ಭದಲ್ಲಿ ಬೆರಳೆಣಿಕೆಯ ಕವಿಗಳಲ್ಲಿ ಸುಬ್ರಾಯ ಚೊಕ್ಕಾಡಿಯವರು ಒಬ್ಬರು. ಸಹೋದರಿ ಅಕ್ಷತಾ ರಾಜ್ ಪೆರ್ಲ ಅವರು ಕನ್ನಡ ವಿಭಾಗಕ್ಕೆ ಕಳೆದ ಐದಾರು ವರ್ಷಗಳಿಂದ ಆತ್ಮೀಯರು. ಸಾಹಿತ್ಯ ವಲಯದಲ್ಲಿ ಮುಂಚೂಣಿಯಲ್ಲಿರುವ, ಕ್ರಿಯಾಶೀಲ ವ್ಯಕ್ತಿತ್ವವನ್ನು ಹೊಂದಿರುವ ಲೇಖಕಿ. ಹಾಗೆಯೇ ನಮ್ಮ ವಿಭಾಗದ ವಿದ್ಯಾರ್ಥಿಗಳೂ ಪ್ರತಿಭಾ ಸಂಪನ್ನರು ಎಂದು ಹೇಳಲು ಅಭಿಮಾನವಾಗುತ್ತಿದೆ’ ಎಂದು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕಲಾ ಭಾಗ್ವತ್ ಅವರು ಚೊಕ್ಕಾಡಿಯವರ ಭಾವಗೀತೆಗಳನ್ನು ಹಾಡಿದರೆ, ನಳಿನಾ ಪ್ರಸಾದ್ ಅವರು ಧ್ಯಾನಸ್ಥ ಕವಿತೆಯನ್ನು ವಾಚಿಸಿದರು. ಅಂದು ಮಧ್ಯಾಹ್ನ ಒಂದೂವರೆ ಗಂಟೆಯಿಂದ ಕಲಾವಿದರಾದ ಮೋಹನ್ ಮಾರ್ನಾಡ್ ಅವರ ಉಪಸ್ಥಿತಿಯಲ್ಲಿ ಕುವೆಂಪು, ಬೇಂದ್ರೆ, ಅಡಿಗರು, ಶೀಮುಂಜೆ ಪರಾರಿ, ಬಿ.ಎ.ಸನದಿ, ಬಿ.ಎಸ್.ಕುರ್ಕಾಲ್, ಮುಂತಾದ ಹಿರಿಯ ಕವಿಗಳ ಕಾವ್ಯ ಗಾಯನ ವಾಚನಗಳು ಮನಸ್ಸಿಗೆ ರಸದೌತಣವನ್ನು ನೀಡಿದವು. ಸುರೇಖಾ ಹರಿಪ್ರಸಾದ್ ಶೆಟ್ಟಿಯವರು ಕಾರ್ಯಕ್ರಮವನ್ನು ನಿರೂಪಿಸಿದರು. ಅನಿತಾ ಪೂಜಾರಿಯವರು ವಂದಿಸಿದರು. ಕಾರ್ಯಕ್ರಮದಲ್ಲಿ ಲೇಖಕ ಪೇತ್ರಿ ವಿಶ್ವನಾಥ ಶೆಟ್ಟಿ, ಲಕ್ಷ್ಮೀ ಎಸ್. ಶೆಟ್ಟಿ, ಗೀತಾ ಶೆಟ್ಟಿ ಹಾಗೂ ಕನ್ನಡ ವಿಭಾಗದ ವಿದ್ಯಾರ್ಥಿ ಮಿತ್ರರು ಉಪಸ್ಥಿತರಿದ್ದರು.