ಮುಂಬೈ ವಿಶ್ವವಿದ್ಯಾಲಯ, ಕನ್ನಡ ವಿಭಾಗ – ಜುಲೈ 21, ಕೃತಿ ಬಿಡುಗಡೆ

ಮುಂಬಯಿ:- ಕನ್ನಡ ವಿಭಾಗ, ಮುಂಬಯಿ ವಿಶ್ವವಿದ್ಯಾಲಯವು ದಿನಾಂಕ 21/7/2023 ಶುಕ್ರವಾರ ನಾಲ್ಕು ಕೃತಿಗಳ ಬಿಡುಗಡೆ, ವಿಶೇಷ ಉಪನ್ಯಾಸ ಹಾಗೂ ಡಾ.ಎಸ್.ಎಲ್ ಭೈರಪ್ಪನವರೊಂದಿಗೆ ಸಾಹಿತ್ಯ ಸಂವಾದ ಕಾರ್ಯಕ್ರಮವನ್ನು ಆಯೋಜಿಸಿದೆ. ಪದ್ಮಭೂಷಣ ಪುರಸ್ಕೃತರಾದ ಡಾ.ಎಸ್.ಎಲ್. ಭೈರಪ್ಪನವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕನ್ನಡ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ.ಜಿ.ಎನ್.ಉಪಾಧ್ಯ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ‘ವಿಶ್ವಮಾನ್ಯ ಲೇಖಕರಾಗಿ ಭೈರಪ್ಪ’ ಈ ವಿಷಯದ ಕುರಿತು ಪುಣೆಯ ಖ್ಯಾತ ಸಾಹಿತಿ, ವಿಮರ್ಶಕರಾಗಿರುವ ಡಾ.ಸುಪ್ರಿಯಾ ಸಹಸ್ರಬುದ್ಧೆ ಅವರು ವಿಶೇಷ ಉಪನ್ಯಾಸವನ್ನು ನೀಡಲಿದ್ದಾರೆ.
ಇದೇ ಸಂದರ್ಭದಲ್ಲಿ ಸಂಶೋಧನ ವಿದ್ಯಾರ್ಥಿ ಕಲಾ ಭಾಗ್ವತ್ ಅವರ ‘ಕನ್ನಡ ಸಂಶೋಧನೆಗೆ ಮುಂಬಯಿ ಕೊಡುಗೆ’ ಕೃತಿಯನ್ನು ಡಾ.ಎಸ್.ಎಲ್.ಭೈರಪ್ಪನವರು ಬಿಡುಗಡೆ ಮಾಡಲಿದ್ದಾರೆ. ಕೃತಿಯ ಕುರಿತು ಮುಂಬೈಯ ಸಂಘಟಕ, ಲೇಖಕ, ಮೊಗವೀರ ಮಾಸಿಕದ ಸಂಪಾದಕರಾದ ಶ್ರೀ ಅಶೋಕ ಸುವರ್ಣ ಅವರು ಮಾತನಾಡಲಿದ್ದಾರೆ. ಕಲಾ ಅವರು ಈ ಕೃತಿಯಲ್ಲಿ ಸ್ವಾತಂತ್ರ್ಯ ಪೂರ್ವದಿಂದ ಹಿಡಿದು ಪ್ರಸ್ತುತದವರೆಗೆ ಮುಂಬೈಯ ಪ್ರಮುಖ ವಿದ್ವಾಂಸರು ಸಂಶೋಧನ ಕ್ಷೇತ್ರದಲ್ಲಿ ಮಾಡಿದ ಸಾಧನೆ ಹಾಗೂ ನೀಡಿದ ಕೊಡುಗೆಗಳ ಸ್ಥೂಲವಾದ ವಿಶ್ಲೇಷಣೆಯೊಂದಿಗೆ ಅನೇಕ ವಿವರಗಳನ್ನು ದಾಖಲಿಸಿದ್ದಾರೆ.
ಕನ್ನಡ ವಿಭಾಗದ ವಿದ್ಯಾರ್ಥಿಗಳಾದ ನಳಿನಾ ಪ್ರಸಾದ್ ಹಾಗೂ ಕಂಠದಾನ ಕಲಾವಿದರಾಗಿರುವ ಸುರೇಂದ್ರ ಕುಮಾರ್ ಮಾರ್ನಾಡ್ ಅವರಿಂದ ಭೈರಪ್ಪನವರ ಕೃತಿಗಳ ಆಯ್ದ ಭಾಗದ ವಾಚನವೂ ನಡೆಯಲಿದೆ. ಸಂಶೋಧನ ವಿದ್ಯಾರ್ಥಿಗಳು ಭೈರಪ್ಪನವರೊಂದಿಗೆ ಸಂವಾದ ನಡೆಸಲಿದ್ದಾರೆ. ಕನ್ನಡ ವಿಭಾಗದ ಸಹಪ್ರಾಧ್ಯಾಪಕರಾದ ಡಾ.ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ಕಾರ್ಯಕ್ರಮವನ್ನು ಸಂಯೋಜಿಸಲಿರುವರು ಎಂದು ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗದ ಪ್ರಕಟಣೆ ತಿಳಿಸಿದೆ.
ಕಲಾ ಭಾಗ್ವತ್: ಕಲಾ ಚಿದಾನಂದ ಭಾಗ್ವತ್ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಸಮೀಪದ ಹಳದೀಪುರದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ವಿಜ್ಞಾನ ವಿಷಯದಲ್ಲಿ ಪದವಿ ಪಡೆದ ಅವರು ಸಂಗೀತ, ಸಾಹಿತ್ಯ, ಸಾಂಘಿಕ ಚಟುವಟಿಕೆಗಳಲ್ಲಿ ಸಮಾನ ಆಸಕ್ತಿ ಉಳ್ಳವರು. ಮುಂಬೈ ವಿಶ್ವವಿದ್ಯಾಲಯದಿಂದ ಪ್ರಥಮ ಯಾರ್ಂಕ್ ಹಾಗೂ ಪ್ರತಿಷ್ಠಿತ ಎಂ. ಬಿ. ಕುಕ್ಯಾನ್ ಬಂಗಾರದ ಪದಕದೊಂದಿಗೆ ಕನ್ನಡ ಎಂ.ಎ ಪದವಿಯನ್ನು ಪಡೆದಿರುತ್ತಾರೆ. ಅವರ ಎರಡು ಕೃತಿಗಳು ಈಗಾಗಲೇ ಬೆಳಕು ಕಂಡಿವೆ, ಕವಿತೆ, ಕತೆ, ಬಿಡಿ ಬರಹಗಳು, ವಿಮರ್ಶಾ ಲೇಖನಗಳು, ಶೋಧ ಲೇಖನಗಳು ಪತ್ರಿಕೆಗಳಲ್ಲಿ, ಸಂಪಾದಿತ ಕೃತಿಗಳಲ್ಲಿ ಪ್ರಕಟಗೊಂಡಿವೆ. ಕಲಾ ಅವರು ಪ್ರಸ್ತುತ ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗದಲ್ಲಿ ಡಾ. ಜಿ. ಎನ್. ಉಪಾಧ್ಯ ಅವರ ಮಾರ್ಗ ದರ್ಶನದಲ್ಲಿ ಪಿಎಚ್.ಡಿ ಅಧ್ಯಯನವನ್ನು ನಡೆಸುತ್ತಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Sign up for our Newsletter