ಚಿತ್ರ: ಮಂಗಳಾ ಶೆಟ್ಟಿ
ಅಯ್ಯೋ! ಯಾರದು ಬಾಗಿಲು ತಟ್ಟುತ್ತಿರೋದು?
ಮುಚ್ಚಿದ ಬಾಗಿಲನ್ನು ಭೀತಿಯ ಕಣ್ಣುಗಳಿಂದ ದಿಟ್ಟಿಸತೊಡಗಿದಳು ಕಾವೇರಿ. ಜಾನಕಮ್ಮನಾಗಿರಬಹುದಾ? ಅಲ್ಲ. ಖಂಡಿತಾ ಅವರಲ್ಲ. ಇಷ್ಟು ಬೇಗ ಹೇಗೆ ಅವಳು ಇಲ್ಲಿಗೆ ತಲುಪಲು ಸಾಧ್ಯ? ಅದೂ ಕೋಲೂರಿಕೊಂಡು? ಅವಳು ನನ್ನ ಹೆಸರು ಹಿಡಿದು ಕರೆಯುತ್ತಾಳೆಯೇ ವಿನಃ ಬಾಗಿಲು ಬಡಿಯುವುದಿಲ್ಲ. ಹಾಗಿದ್ರೆ ಮತ್ತೆ?
ರಾತ್ರಿಯ ನೀರವವನ್ನು ಭೇದಿಸುವಂತೆ ಬಾಗಿಲು ತಟ್ಟುವ ಸದ್ದಾಗುತ್ತಲೇ ಇತ್ತು. ತಾನಿನ್ನೂ ಬೆವರುತ್ತಲೇ ಇದ್ದೇನೆ ಎಂಬ ಅರಿವಿನಿಂದ ಅವಳು ಇನ್ನಷ್ಟು ಹೆದರತೊಡಗಿದಳು. ‘ಹೀಗೇ ಮುಂದುವರಿದ್ರೆ ನೆರೆಕರೆಯವರಿಗೆಲ್ಲ ಎಚ್ಚರವಾಗ್ಲಿಕ್ಕಿಲ್ವಾ? ಅವರೆಲ್ಲಾದ್ರೂ ನೋಡಿಬಿಟ್ರೆ?’ ಎಂದು ಅಂಜುತ್ತಾ ಬಾಗಿಲ ಕಡೆಗೆ ಅದುರುವ ಹೆಜ್ಜೆಗಳನ್ನಿಡತೊಡಗಿದಳು. ಬಾಗಿಲ ಹಿಡಿಯನ್ನು ಮುಟ್ಟುತ್ತಲೇ ಎದೆ ದಡಬಡಿಸತೊಡಗಿತು. ಏನಾದರಾಗಲಿ ಎಂದುಕೊಂಡು ಬಾಗಿಲನ್ನು ಚೂರೇ ತೆರೆದು ಅದಕ್ಕೆ ಅಡ್ಡವಾಗಿ ನಿಂತು ನೋಡಿದಳು.
“ಗೋಪಾಲ!”
ಬಿಗಿದು ಬೀಗಿದ ಎದೆ ಇಳಿಯುವಂತೆ ಅವಳು ನಿಟ್ಟುಸಿರು ಬಿಟ್ಟಳು. ಭುಜಗಳು ಸಡಿಲಗೊಂಡು ಕುಸಿದವು.
“ಕರೆದೆಯಾ?”
ಅವನ ದನಿಯಲ್ಲಿ ಗಾಬರಿಯಿತ್ತು. ಏದುಸಿರಿನ ಲಯಕ್ಕೆ ತಕ್ಕಂತೆ ಅವನ ಹೊಟ್ಟೆ- ರಟ್ಟೆಗಳು ಉಬ್ಬಿ ಕುಗ್ಗುತ್ತಿದ್ದವು.
“ಗೋಪಾಲಾ… ಈ ಮನೆ ಹಿಂದಿಂದ…”
ಎನ್ನುತ್ತಿದ್ದಂತೆ ಆಕೆಯ ದನಿ ಮಾತ್ರವಲ್ಲ ಬಾಗಿಲ ಚೌಕಟ್ಟನ್ನು ಬಿಗಿಯಾಗಿ ಹಿಡಿದುಕೊಂಡಿದ್ದ ಅವಳ ಕೈಯೂ ನಡುಗತೊಡಗಿತು. ಅಷ್ಟರಲ್ಲಿ ಗೋಪಾಲ ದಿಗಿಲು ಬಿದ್ದು “ಮನೆ ಹಿಂದೆ ಏನು? ಇರು. ನಾನೊಮ್ಮೆ ನೋಡ್ಕೊಂಡು ಬರ್ತೇನೆ” ಎಂದ. ‘ಬೇಡಾ’ ಎನ್ನುವುದರೊಳಗೆ ಮನೆಯ ಹಿಂಬದಿಗೆ ಹೋಗಿ ಬಿಟ್ಟಾಗಿತ್ತು ಅವನಿಗೆ. ಒಳಕ್ಕೆ ತಿರುಗಿದ ಕಾವೇರಿ ತನ್ನ ಬೆನ್ನ ಹಿಂದೆಯೇ ಕದ ಹಾಕಿಬಿಟ್ಟು ಬಸವಳಿದವಳಂತೆ ನಿಧಾನಕ್ಕೆ ಕಣ್ಣುಮುಚ್ಚಿಕೊಂಡಳು.
ಅಂದೂ ಹೀಗೆಯೇ ತುಂಬಿಕೊಂಡಿತ್ತು ಕತ್ತಲು. ಹೀಗೆಯೇ ಮುಚ್ಚಿಕೊಂಡಿತ್ತು ಕಣ್ಣು.
ತಲೆಯೊಳಗಿನ ಭಾರ ಹೆಚ್ಚಾದಂತೆನಿಸುತ್ತಿತ್ತು. ದುಂಬಿಗಳು ಗುಂಯ್‍ಗುಡುತ್ತಾ ಹಾರಿ ಮೈಯಿಡೀ ಉರಿದೇಳುತ್ತಿರುವಂತೆನಿಸಿತ್ತು. ಕಿವಿಗಳು ಬಿಗಿಯಾಗಿ ಮುಚ್ಚಿಕೊಂಡು ಬಿಟ್ಟಿದ್ದವು. ಬಾಯಿಯೊಳಗೆ ಒಸರುತ್ತಿರುವ ಕಹಿರಸ ಚುರುಗುಟ್ಟುತ್ತಿರುವ ಗಂಟಲಿನಿಂದ ಕೆಳಗಿಳಿಯಲು ಹಿಂಜರಿಯುತ್ತಿತ್ತು.
ತಟಕ್ಕನೆ ಸದ್ದುಗದ್ದಲಗಳೆಲ್ಲ ನಿಂತುಹೋದಂತಾಯಿತು.
ಯಾರೋ ನನ್ನ ಹಣೆಯನ್ನು ನೇವರಿಸುತ್ತಿದ್ದಾರೆ. ಹಣೆಯಿಂದ ಕೆನ್ನೆಗಳತ್ತ. ಕೊರಳಿನಿಂದ ಎದೆಯತ್ತ. ಮೆತ್ತಗಿನ ಸ್ಪರ್ಶ. ಕಿವಿಯಲ್ಲಿ ಯಾವುದೋ ಮೆಲುವಾದ ರಾಗ. ಹಿಂದೆಂದೋ ಕೇಳಿ ಮರೆತ ಜೋಗುಳದ ಸಾಲು. ಅದರ ತಂಪಿನಲ್ಲಿ ನಿದ್ದೆ ಬಂದದ್ದೇ ಗೊತ್ತಾಗಲಿಲ್ಲ. ಕಣ್ಣು ತೆರೆದಾಗ ಹಾಸಿಗೆಯ ಮೇಲಿದ್ದೆ. ತಬ್ಬಿಬ್ಬಾಗಿ ತುಸು ಅಂಜಿಕೆಯಿಂದಲೇ ಸುತ್ತಲೂ ಕಣ್ಣಾಡಿಸಿದೆ. ಬಳಲಿದ ನೋಟ ಹೋಗಿ ಬಿದ್ದದ್ದೇ ಗೋಪಾಲನ ಮೇಲೆ.
“ನಿನ್ನೆ ರಾತ್ರಿ ಎಂಥಾ ಜ್ವರ! ಪ್ರಜ್ಞೆಯೇ ಇರಲಿಲ್ಲ” ಅವನು ಹೇಳುತ್ತಿದ್ದ.
ತಲೆ ತುಂಬಾ ಭಾರ. ಹಣೆ ತುಂಬಾ ಹುಳ ಹರಿದಂತಾಗುತ್ತಿತ್ತು. ಮೈಯೆಲ್ಲ ಒದ್ದೆ.
“ಬೆವರು ಒಳ್ಳೆಯದೇ. ಜ್ವರ ಬಿಟ್ಟದ್ದರ ಲಕ್ಷಣ ಅದು” ಅವನು ನನ್ನ ಹಣೆಯನ್ನು ಮುಟ್ಟಿ ನೆಮ್ಮದಿಯಿಂದ ಹೇಳುವಾಗ ಮನಬಿಚ್ಚಿ ನಗುವುದಕ್ಕೂ ಆಗಲಿಲ್ಲ. ನೆತ್ತಿಯ ಮೇಲೆ ಅವನ ಬೆರಳುಗಳು ಒತ್ತಿದಾಗ ಹಾಗೇ ಕಣ್ಣು ಮುಚ್ಚಿದೆ. ಅವನ ಕೈ ಆಗಲೂ ನೇವರಿಸುತ್ತಿತ್ತು ನನ್ನ ಕನ್ನೆ- ಕೊರಳುಗಳನ್ನು.
“ನಂಜುಂಡ ಎಲ್ಲಿಗೆ ಹೋಗಿದ್ದಾನೆಂದೇ ಗೊತ್ತಿಲ್ಲ ನನಗೆ. ಅವನು ಹಾಗೆಯೇ. ಬೆಳಗಾದರೆ ಎದ್ದ. ಹೋದ. ಬಂದರೆ ಬಂದ. ಇಲ್ಲದಿದ್ದರೆ ಇಲ್ಲ. ಹೆಚ್ಚಾಗಿ ಬರುತ್ತಿದ್ದದ್ದು ರಾತ್ರಿಯಲ್ಲಿ. ಆಗೆಲ್ಲ ಅವನ ಕೈಯಲ್ಲಿ ಹಣವಿರುತ್ತಿತ್ತು. ಉಡಿಯಲ್ಲಿ ಮದ್ಯದ ಬಾಟಲಿಯೂ. ಅವನು ಗೂಂಡಾಗಿರಿ, ಕಳ್ಳಸಾಗಣೆ ಏನಾದರೂ ಮಾಡುತ್ತಿರಬಹುದೇ ಅಂತ ಸಂಶಯವಿತ್ತು. ವಿಚಾರಿಸಿದರೆ ಉತ್ತರವಿಲ್ಲ. ಜೋರು ಮಾಡಿದರೆ ರಪಕ್ ರಪಕ್ ಅಂತ ಏಟು”
ಗೋಪಾಲನು ಕಾವೇರಿಯ ಮುಖವನ್ನು ನೋವಿನಿಂದ ನೋಡಿದ.
“ಮದುವೆಯಾದ ಹೊಸತರಲ್ಲಿ ಹೀಗಿರಲಿಲ್ಲ. ಎಲ್ಲಿ ಹೋದರೂ ಸಂಜೆಯಾದಾಗ ತಪ್ಪದೆ ಹಿಂತಿರುಗುತ್ತಿದ್ದ. ನಗುನಗುತ್ತಾ ಮಾತನಾಡುತ್ತಿದ್ದ. ಕೆಲವು ತಿಂಗಳುಗಳ ನಂತರ ಆ ವ್ಯವಹಾರ, ಈ ವ್ಯವಹಾರ ಅಂತ ಹೇಳಿ ಎರಡು ಮೂರು ದಿನಕ್ಕೊಮ್ಮೆ ಬರಲಾರಂಭಿಸಿದ. ಮುಖ ಬಿರುಸಾಗಿರುತ್ತಿತ್ತು. ಮಾತನಾಡಿಸಲು ಭಯವಾಗುತ್ತಿತ್ತು. ನಂತರ ವಾರಕ್ಕೊಮ್ಮೆ ಬಂದು ಹೋಗಲು ಶುರು ಮಾಡಿದ. ಏನು, ಎತ್ತ ಎಂದು ಕೇಳಿದರೆ ಸಿಟ್ಟಿನಿಂದ ಹಾರಾಡಲು ಅದೂ ಒಂದು ನೆಪವಾಗುತ್ತಿತ್ತು. ಯಾಕೆ ಹೀಗೆ? ನನ್ನನ್ನು ಮದುವೆಯಾಗಲು ಇಷ್ಟವಿರಲಿಲ್ಲವಾ ಅಥವಾ ಬೇರೆ ಏನಾದೂ.್ರ..”
ಗೋಪಾಲ ಮಾತನಾಡಲಿಲ್ಲ. ಮೌನ ಅಸಹನೀಯವೆನಿಸುತ್ತಿದ್ದಂತೆ ಕಾವೇರಿ ತನ್ನ ಬಲಮುಷ್ಠಿಯನ್ನು ಎಡ ಅಂಗೈಗೆ ಗುದ್ದಿ ಹೊಸಕುತ್ತಾ ಹೇಳಿದಳು “ಒಮ್ಮೊಮ್ಮೆ ಎಲ್ಲಿಗಾದರೂ ಓಡಿಹೋಗಬೇಕೆನಿಸುತ್ತದೆ”
ಗೋಪಾಲ ನಕ್ಕ “ಎಲ್ಲಿಗೆ ಹೋದರೂ ಕುತ್ತಿಗೆ ಮಟ್ಟದ ನೀರೇ ಕಾವೇರಿ. ಈಜಿ ದಡ ಸೇರಲು ಕಲಿಯಬೇಕು. ಅವರಿವರು ಹೇಳುವಂತೆ ಯಾರೂ ಬದುಕಲು ಸಾಧ್ಯವಿಲ್ಲ. ನಾವು ಹೇಗೆ ಬಾಳಬೇಕು ಎಂಬುದನ್ನು ನಾವೇ ನಿzssರ್Àರಿಸಬೇಕು. ಸುಖ-ಸಂತೋಷಗಳನ್ನು ನಾವೇ ಹುಡುಕಿಕೊಳ್ಳಬೇಕು. ಆಗ ಮಾತ್ರವೇ ಬದುಕನ್ನು ಬದಲಿಸಲು ಸಾಧ್ಯ”
“ಬದುಕು ಬದಲಿಸೋದು! ನನ್ನಿಂದಂತೂ ಸಾಧ್ಯವಿಲ್ಲ” ಅವಳ ತುಟಿ ಮತ್ತು ಕಣ್ಣುಗಳು ಮಿನುಗುತ್ತಿದ್ದರೂ ಆ ಮುಗುಳ್ನಗೆಯ ಹಿಂದೆ ನೆಟ್ಟ ನೋವಿನ ಶೂಲ ಅವನಿಗೆ ಕಾಣದಿರಲಿಲ್ಲ.
“ಯಾಕೆ ಸಾಧ್ಯವಿಲ್ಲ? ಮೊದಲು ನೀನು ಬದಲಾಗಬೇಕು”
“ಈ ಪರಿಸ್ಥಿತಿಯಲ್ಲಿ …”
“ಯಾಕಿಲ್ಲ? ಇಲ್ಲಿಗೆ ಬಂದಂದಿನಿಂದ ನೀನು ಎಷ್ಟೋ ಬದಲಾಗಿಲ್ಲವಾ? ನಂಜುಂಡನೊಂದಿಗೆ ಇಲ್ಲಿಗೆ ಬಂದ ಹೊಸತರಲ್ಲಿ ನಾನು ನಿನ್ನನ್ನು ನೋಡಿದಾಗ, ನೋಡಿ ನಕ್ಕಾಗ ತಲೆ ಕೆಳಗೆ ಹಾಕಿ ಸೀದಾ ಮನೆಗೆ ನಡೆದು ಬಿಡುತ್ತಿದ್ದೆ. ನಾನು ಎಲ್ಲಾದ್ರೂ ಎದುರಾದರೆ, ಗಂಟಲು ಕೆರೆದರೆ ನಗುವುದಿರಲಿ ನನ್ನತ್ತ ನೋಡುತ್ತಲೂ ಇರಲಿಲ್ಲ. ಈಗೇನಾಯ್ತು? ನನ್ನೊಂದಿಗೆ ಯಾಕೆ ಅಷ್ಟೂ ಮಾತಾಡಿಬಿಟ್ಟೆ? ಬಿಗಿಯಾಗಿ ನಡೆದುಕೊಳ್ಳದೆ ಯಾಕೆ ಆತ್ಮೀಯವಾಗಿ ನಡೆದುಕೊಂಡೆ? ಬದುಕಿನ ಸಂಗತಿಗಳನ್ನೇಕೆ ಹೇಳಿಕೊಂಡೆ? ಮೌನ ಗೌರಿಯಂತಿದ್ದ ನೀನೀಗ ಮಾತು, ನಗೆ, ಹರಟೆಗಳಲ್ಲಿ ಮೈ ಚಳಿ ಬಿಟ್ಟು ನನ್ನೊಡನೆ ಬೆರೆತುಕೊಂಡದ್ದನ್ನು ನೋಡಿದರೆ…”
ಕಾವೇರಿ ತನ್ನ ತುಟಿಯಲ್ಲಿ ಮೂಡಿದ ಕಿರುನಗೆಯನ್ನು ಅಡಗಿಸಿಕೊಳ್ಳಲು ಮುಖವನ್ನು ತಗ್ಗಿಸಿದಳು.
“ಹೌದು ಗೋಪಾಲ, ನಿನ್ನನ್ನು ಇಷ್ಟು ಹತ್ತಿರದಿಂದ ಕಂಡದ್ದೂ ಮನಬಿಚ್ಚಿ ಮಾತನಾಡಲು ಅವಕಾಶ ಸಿಕ್ಕಿದ್ದೂ ಇದೇ ಮೊದಲು. ಮೃದುವಾಗಿ ಮೈ ಸವರುವಂಥ ನಿನ್ನ ಮಾತುಗಳನ್ನು ಕೇಳಿದರೆ ಸುಮ್ಮನೇ ಬಾಯಿ ಹೊಲಿದುಕೊಂಡಿರಲು ಹೇಗೆ ಸಾಧ್ಯ? ಇದಕ್ಕಿಂತ ಮೊದಲು ನಿನ್ನನ್ನು ನೋಡಿಯೂ ನೋಡದಂತೆ ಮಾಡಿದಾಗ ನಾನೊಬ್ಬಳು ಅಹಂಕಾರಿಯೆಂದು ಭಾವಿಸಿರಬಹುದು ನೀನು”
“ಮೊದಲು ಹಾಗಂದುಕೊಂಡಿದ್ದೆ. ಹಾಗೆಂದು ಅಮ್ಮನಲ್ಲಿ ಹೇಳಿಯೂ ಇದ್ದೆ. ಆಗ ಅವಳು ಹೇಳಿದಳು. ‘ಮಗಾ ಆಕೆಯ ಸ್ವಭಾವ ಒಳ್ಳೆಯದು. ತುಂಬ ಸರಳ. ಮುಗ್ಧತೆ ಇನ್ನೂ ಹೋಗಿಲ್ಲ. ನಿನ್ನೆ ನೀನಿಲ್ಲದ ಹೊತ್ತಲ್ಲಿ ನಾನು ಸೀಮೆಯೆಣ್ಣೆ ಡಬ್ಬಗಳನ್ನು ತರುತ್ತಿದ್ದಾಗ ಅವಳಾಗಿಯೇ ಹತ್ತಿರ ಬಂದು ಎರಡೂ ಡಬ್ಬಗಳನ್ನು ಒಂದೊಂದು ಕೈಯಲ್ಲಿ ಹಿಡಿದು ಮನೆಯವರೆಗೆ ತಂದುಕೊಟ್ಟಳು. ಸ್ವಲ್ಪವೂ ಏದುಸಿರಿಲ್ಲ. ಒಳ್ಳೆ ಗಟ್ಟಿಯಾಗಿದ್ದಾಳೆ’ ಅಂತ”
“ಇಲ್ಲ ಗೋಪಾಲ. ಮೊದಲು ಇನ್ನಷ್ಟು ಗಟ್ಟಿಯಾಗಿದ್ದೆ. ಈಗ ಸೊರಗಿದ್ದೇನೆ”
“ಜ್ವರ ಬಂತು ಅಂತ ಇಷ್ಟು ತಲೆಕೆಡಿಸಿಕೊಂಡರೆ ಹೇಗೆ? ಕೆಲವು ದಿನ ಕಳೆಯಲಿ. ಮೊದಲಿನ ಹಾಗೆ ಮೈಕೈ ತುಂಬಿಕೊಳ್ತಿ ನೀನು”
“ಕಳೆದ ವಾರ ನಾನು ಜ್ವರ ಹಿಡಿದು ಮಲಗಿದಾಗ ನೀನು ಬಾರದಿರುತ್ತಿದ್ದರೆ… ನನ್ನನ್ನು ಎತ್ತಿ ಆಸ್ಪತ್ರೆಗೆ ಕರೆದುಕೊಂಡು ಹೋಗದಿರುತ್ತಿದ್ದರೆ… ಇಷ್ಟೂ ದಿನ ನಾನು ಯಾರನ್ನು ಉಪೇಕ್ಷೆ ಮಾಡಿದೆನೋ ಅವನೇ ನನ್ನನ್ನು…”
“ನಾನು ನನ್ನ ಕರ್ತವ್ಯವನ್ನು ಮಾಡಿದೆ ಅಷ್ಟೇ”
“ನನ್ನ ಜೀವ ಉಳಿಸಿದ ನಿನ್ನನ್ನು ದಿನಾ ಧ್ಯಾನಿಸುತ್ತಿದ್ದೆ. ತೋಟ ಹಿತ್ತಿಲುಗಳ ಕಡೆ ಬಂದರೆ ನೀನು ಅಲ್ಲಿರುತ್ತಿರಲಿಲ್ಲ. ನೀರು ತರುವಾಗ ಹುಡುಕಿದರೆ ಕಾಣುತ್ತಿರಲಿಲ್ಲ. ಇನ್ನೇನೂ ಬೇಡ. ಒಮ್ಮೆ ಸಿಕ್ಕಿದರೆ ‘ತುಂಬ ಉಪಕಾರವಾಯ್ತು’ ಎನ್ನಬೇಕೆಂದುಕೊಂಡಿದ್ದೆ. ಆದರೆ ನಿನ್ನನ್ನು ಕಾಣುತ್ತಿದ್ದಂತೆ ಎದೆ ಧಸ್ಸೆನ್ನುತ್ತಿತ್ತು. ಗಂಟಲೊಣಗುತ್ತಿತ್ತು. ಒಂದಕ್ಷರ ಮಾತನಾಡಲಾಗುತ್ತಿರಲಿಲ್ಲ” ಎನ್ನುತ್ತಾ ತಲೆಯೆತ್ತಿದಾಗ ಗೋಪಾಲನ ನೋಟವು ಕೆಂಪಗೆ ಊದಿಕೊಂಡ ತನ್ನ ಬಲಗೆನ್ನೆ, ಭಾರವಾದ ಕಣ್ಣು, ನಳಿದೋಳಿನ ನುಣ್ಣಗಿನ ಮೇಲ್ಮೈಯಲ್ಲಿ ಅಮೃತಶಿಲೆಯ ಮೇಲಿರಿಸಿದ ಹರಳಿನಂತೆ ಕಾಣುವ ಕಡುಗೆಂಪಿನ ದಪ್ಪ ಚುಕ್ಕೆ, ಕೊರಳ ಬದಿ – ತುಂಬಿದ ಎದೆಯ ಮೇಲ್ಭಾಗ ಮತ್ತು ಕಿಬ್ಬೊಟ್ಟೆಯ ಮೇಲಿನ ಉಗುರ ಗೀರುಗಳನ್ನು ಮುಲಾಮಿನಂತೆ ಸವರುತ್ತಿರುವುದನ್ನು ಕಂಡು ಅವಳ ಗಾಯಗಳು ಉರಿದೇಳತೊಡಗಿದವು.
“ಕಾವೇರಿ ನಿನ್ನ ಮೈಯಲ್ಲಿ ಕಲೆಗಳಿವೆಯಲ್ಲ”
“ಓಹ್! ಅದಾ?” ಅವಳ ತುಟಿಯಂಚಿನಲ್ಲಿ ಮೂಡಿದ್ದ ನಗೆಯ ಎಳೆ ಮಾಯವಾಯಿತು. “ಅದೆಲ್ಲ ನಂಜುಂಡನ ಕೊಡುಗೆ. ಕೆಂಪಗೆ ರಕ್ತ ಕಟ್ಟಿಕೊಂಡಿದೆಯಲ್ಲ, ಅದು ನಿನ್ನೆ ಹೊಡೆದದ್ದು. ನೀಲಿಯಾಗಿದೆಯಲ್ಲ, ಅದು ಹೋದವಾರದ್ದು. ಕಪ್ಪು ಕಪ್ಪಾದುದೆಲ್ಲ ಅದಕ್ಕೂ ಹಿಂದಿನದ್ದು. ಅವನಿಗೆ ನನ್ನ ಮೇಲೆ ಕೋಪ ಬಂದ್ರೆ, ಸಂಶಯ ಹುಟ್ಟಿದ್ರೆ, ಹಾಸಿಗೆಯಲ್ಲಿ ಸುಖ ಕೊಡದೇ ಹೋದ್ರೆ, ಸಂಗ ಬೇಕೆನಿಸಿದಾಗ ನಾನೆಲ್ಲಾದ್ರೂ ನಿದ್ದೆ ಮಾಡ್ತಿದ್ರೆ ಎದೆಗೆ ಸಿಗರೇಟಿನ ತುದಿಯಿಂದ ಮುದ್ರೆಯೊತ್ತುತ್ತಿದ್ದ. ಚೂರಿಯಿಂದ ಗೆರೆ ಎಳೀತಿದ್ದ. ಬೆನ್ನಿಗೆ ಮಾತ್ರವಲ್ಲ ಕಾಲುಗಳಿಗೆ ಕೂಡ”
“ಯಾಕೆ?”
“ಹಿಂದಲೆಯಲ್ಲಿ ಹರಡಿದ ಕೂದಲರಾಶಿಯನ್ನು ಭುಜದ ಕೆಳಗೆ ಜಾರಿಸ್ತಿದ್ದಂತೆ ಬೆನ್ನಿನ ಭಾಗ ತೆರೆದುಕೊಂಡಾಗ, ನಡೆಯುವಾಗ ನೆತ್ತರು ಚಿಮ್ಮುವಂತೆ ಕೆಂಪಾಗುವ ಪಾದಗಳನ್ನು ಕಂಡಾಗ ಅವನ ಮನಸ್ಸು ಕೆರಳ್ತದಂತೆ. ಆದ್ರಿಂದ ಬೇರೆ ಯಾರೂ ನನ್ನ ಬೆನ್ನು ಮತ್ತು ಕಾಲುಗಳನ್ನು ನೋಡದಿರಲಿ, ನೋಡಿದ್ರೂ ಚಂದ ಕಾಣದಿರಲಿ ಅಂತ…”
“ಛೆ!”
“ಆರಂಭದಲ್ಲಿ ಹೀಗಿರ್ಲಿಲ್ಲ. ಆಮೇಲೆ ಹೆಚ್ಚಿದ ಹಂಬಲ ಅವನಿಂದ ಹಾಗೆ ಮಾಡಿಸ್ತೋ ಅಥವಾ ಅವನೊಳಗೆ ಹುದುಗಿದ್ದ ತೀಟೆ ಅಂಥ ಚರ್ಯೆ ರೂಪಿಸ್ತೋ ಗೊತ್ತಿಲ್ಲ”
“ಅವನಿಗೆ ನಿನ್ನ ಮೇಲೆ ಪ್ರೀತಿ ಇರಲಿಲ್ವಾ?”
ಕಾವೇರಿ ಮಾತನಾಡಲಿಲ್ಲ. ಖಿನ್ನ ನಗುವಿನೊಂದಿಗೆ ಅವಳ ಕಣ್ಣುಗಳು ಎದುರಿನ ಕಿಟಿಕಿಯಾಚೆಗೆ ದೃಷ್ಟಿ ನೆಟ್ಟವು. ನರಗಳು ಬಿಗಿಯಾಗಿ ಬಿಗಿದುಕೊಳ್ಳುವಂತೆ, ಗುಡ್ಡೆ ಒಳಗೆ ಹುದುಗಿಕೊಳ್ಳುವಂತೆ ಕಣ್ಣು ಮುಚ್ಚಿದಳು. ಜಾಗ್ರತೆಯಿಂದ ಒಳಗೆಳೆದುಕೊಳ್ಳುತ್ತಿದ್ದ ಉಸಿರಿನ ಜೊತೆಗೆ ಅವಳ ಎದೆಯುಬ್ಬಿ ಬೆನ್ನು ಎದ್ದು ಮತ್ತೆ ನಿಧಾನವಾಗಿ ಇಳಿಯತೊಡಗಿತು.
“ಕಾವೇರಿ, ಇವುಗಳಲ್ಲದೆ ಬೇರೆ ಕಲೆಗಳೂ ಇವೆ”
“ಹೌದ? ಎಂಥ ಕಲೆ?”
“ಕುಂಕುಮ ಎರಚಿದಂತೆ ಅಲ್ಲಲ್ಲಿ ಸ್ವಲ್ಪ ಕೆಂಪಾಗಿದೆ. ಬೊಕ್ಕೆಯೆದ್ದು ಕೀವು ತುಂಬೋ ಮೊದಲು ಡಾಕ್ಟರಿಗೆ ತೋರಿಸೋದೊಳ್ಳೇದು”
ಒಮ್ಮೆಲೆ ಅವಾಕ್ಕಾದ ಕಾವೇರಿ ಸುಡುವಂಥ ಉಸಿರನ್ನು ಒಳಗೆಳೆದುಕೊಂಡಳು. ತನಗರಿಯದಂತೆ ಅಗಲವಾಗತೊಡಗಿದ ಕಣ್ಣುಗಳಲ್ಲಿ ಶಂಕೆ, ಭಯ, ಆತಂಕದ ಛಾಯೆಗಳು ತುಂಬಿ ಹರಿಯತೊಡಗಿದವು.
“ಏನಾದ್ರೂ ಹೆಚ್ಚುಕಮ್ಮಿಯಿದ್ರೆ ನನ್ನತ್ರ ಹೇಳು. ನಂಜುಂಡನತ್ರ ಹೇಳಬೇಡ”
ಎನ್ನುತ್ತಿದ್ದಂತೆ ಅವಳ ಮೈಯನ್ನು ಹೊಕ್ಕ ಅಸ್ಪಷ್ಟ ಭೀತಿ ಅಸ್ವಸ್ಥತೆಗಳು ಮೆಲ್ಲನೆ ಅವಳ ಅಂತರಂಗದ ಮೂಲೆ ಮೂಲೆಗೂ ವ್ಯಾಪಿಸತೊಡಗಿದವು. ದೇವರೇ! ಇದು ನಂಜುಂಡನಿಂದ ಪಡೆದ ಹೊಲಸು ಪ್ರಸಾದವಾಗಿರಬಹುದೇ? ಅಯ್ಯೋ! ಇನ್ನೂ ಎಂತೆಂಥ ರೋಗಗಳನ್ನು ಅಂಟಿಸಬೇಕೆಂದುಕೊಂಡಿದ್ದಾನೋ ಆ ನಂಜುಂಡ.
ಕಾವೇರಿ ಪುನಃ ಎಚ್ಚರಗೊಂಡದ್ದು ಮತ್ತೊಮ್ಮೆ ಬಾಗಿಲು ತಟ್ಟಿದ ಶಬ್ದಕ್ಕೆ. ಹೆಚ್ಚೇನೂ ಯೋಚಿಸದೆ ಬಾಗಿಲು ತೆರೆದಾಗ ಹೊರಗೆ ನಿಂತಿದ್ದ ಗೋಪಾಲ “ಅಲ್ಲೇನೂ ಇಲ್ಲ” ಎಂದ. ಮಾತಿನಲ್ಲಿ ಅಸಮಾಧಾನವೇನೂ ಇರಲಿಲ್ಲ. ಅವಳು ಗೋಪಾಲನನ್ನೊಮ್ಮೆ ಅಡಿಮುಡಿವರೆಗೂ ದಿಟ್ಟಿಸಿದಳು. ತೊಯ್ದು ಹಸಿಯಾದ ಮೈ “ಶ್ಯೋ… ನಿಂಗೆ ಸುಮ್ನೇ ಕಷ್ಟ ಕೊಟ್ನಲ್ಲಾ” ಅವಳ ದನಿಯಲ್ಲಿ ಬೇಸರವಿತ್ತು. ತಪ್ಪಿತಸ್ಥ ಭಾವನೆಯಿತ್ತು.
“ಪರವಾಗಿಲ್ಲ. ನೀನು ಕರೆದಾಗ ನಂಗೆ ನಿದ್ದೆ ಬಂದಿರ್ಲಿಲ್ಲ”
“ನನಗೂ ಅಷ್ಟೆ. ಮಲಗಿದ ಬಳಿಕ ಮಂದವಾದ ಜೊಂಪು ಹತ್ತಿತ್ತು. ಮೌನದಲ್ಲಿ ಒಬ್ಬಳೇ ತೇಲುತ್ತಿದ್ದೇನೆ ಅನಿಸಿತು. ಇದ್ದಕ್ಕಿದ್ದಂತೆ ಯಾರೋ ಚೀರಿದಂತೆನಿಸಿ ದಡಕ್ಕನೆ ಎಚ್ಚರವಾಯಿತು. ಹೃದಯ ಕರಗಿಸುವ ಕೂಗೊಂದು ಸರಳುಗಳೆಡೆಯಿಂದ ನುಗ್ಗಿ ಬಂದು ಕಿವಿಗಪ್ಪಳಿಸಿದ ರಭಸಕ್ಕೆ ಬೆಚ್ಚಿಬಿದ್ದೆ. ಅಸಹಾಯಕ ಪ್ರಾಣಿಯೊಂದು ತನ್ನ ಕೊನೆಯ ಗಳಿಗೆಯಲ್ಲಿ ಮಾಡುವಂಥ ಆರ್ತನಾದ. ಯಾರಿರಬಹುದು? ಕಿಟಿಕಿಯ ಹೊರಗೆ ಬೆಳಕು ಹಾಯಿಸಿ ನೋಡಿದಾಗ ಏನೂ ಕಾಣಲಿಲ್ಲ. ದೀಪ ಆರಿಸಿ ಮಲಗುವಷ್ಟರಲ್ಲಿ ಪುನಃ ಚೀರಾಟ! ಮತ್ತೇನನ್ನೂ ಯೋಚಿಸದೆ ಮಂಚದಿಂದ ಎದ್ದು ಮೆಲ್ಲಗೆ ಅಡುಗೆಮನೆಗೆ ಬಂದೆ. ಕಿಟಿಕಿ ತೆರೆದು ನಿನ್ನಮ್ಮನನ್ನು ಕರೆದೆ. ಕೆಲವೇ ಕ್ಷಣಗಳಲ್ಲಿ ಬಾಗಿಲು ಬಡಿಯುವ ಸದ್ದು! ಅದು ನೀನಾಗಿರಬಹುದೆಂದು ಊಹಿಸಿರಲಿಲ್ಲ”
“ಇದೀಗ ಕೇಳಿಸಿದ ಮಾತು ಚೀರಾಟ ಬರೇ ಭ್ರಮೆ ಇರಬಹುದ?”
“ಅಲ್ಲ ಎನ್ನುವ ಹಾಗಿಲ್ಲ. ದಿನ ಕಳೆದಂತೆ ಭ್ರಮೆಗಳು ಹೆಚ್ಚುತ್ತಿವೆ. ಮಲಗಿದ ಸ್ವಲ್ಪ ಹೊತ್ತಲ್ಲೇ ಮೈಮೇಲೆ ಹಾವು ಹರಿದಾಡಿದಂತೆ, ಅದುವೇ ಹಗ್ಗವಾಗಿ ಮೈಗೆ ಬಿಗಿದುಕೊಂಡಂತೆ, ಮನೆಯ ನಾಲ್ಕು ಗೋಡೆಗಳು ಚಲಿಸುತ್ತಾ ನನ್ನನ್ನು ಅವುಗಳ ನಡುವೆ ಸಿಲುಕಿಸಿ ಉಸಿರುಗಟ್ಟಿಸಿದಂತೆ, ಕಿಟಿಕಿಯಾಚೆಗೆ ಕಾಣುವ ಹುಣಸೆ ಮರ ವಿಕಾರ ರೂಪ ಧರಿಸಿ ಕೊಂಬುಗಳ ಕೈ ಚಾಚಿ ಕತ್ತು ಹಿಸುಕಲು ಬಂದಂತೆ, ಮನೆಯ ಸುತ್ತಲೂ ಪಿಶಾಚಿಗಳು ಬೊಬ್ಬಿರಿಯುತ್ತಾ ಕುಣಿಯುತ್ತಿರುವಂತೆ…”
“ಹಾಗಿದ್ದರೆ ಕನಸು ಕಂಡಿದ್ದಿರಬೇಕು. ಕಿಟಿಕಿ-ಬಾಗಿಲು ಮುಚ್ಚಿ ಮಲಗು. ಏನೂ ಅಗೋದಿಲ್ಲ. ಹಾಗೇನಾದರೂ ಇದ್ದರೆ ನನ್ನನ್ನು ಕರೆದರೆ ಸಾಕು”
“ಸರಿ ಗೋಪಾಲಾ” ಅವಳ ನೋಟದಲ್ಲಿ ಮೆಚ್ಚುಗೆಯಿತ್ತು. ಸ್ನೇಹ ಜಿನುಗುತ್ತಿತ್ತು.
ಅವನು ತನ್ನ ಮನೆಯ ಕಡೆಗೆ ಒಂದೆರಡು ಹೆಜ್ಜೆ ಹಾಕಿರಬಹುದು. ತಕ್ಷಣ ಏನೋ ನೆನಪಾದಂತೆ ಅವಳತ್ತ ತಿರುಗಿ ಹೇಳಿದ “ನಿಂಗೆ ಅಷ್ಟೊಂದು ಹೆದ್ರಿಕೆ ಆಗ್ತಿದ್ರೆ ನನ್ನ ಮನೇಲಿ ಮಲಗಬಹುದಲ್ವ?”
ಅನಿರೀಕ್ಷಿತ ಆಹ್ವಾನದಿಂದ ದಿಗ್ಮೂಢಳಾದ ಅವಳು ಬಾಗಿಲನ್ನು ಮುಚ್ಚುವುದಕ್ಕೂ ಮರೆತು ಒಂದರೆಗಳಿಗೆ ಸ್ತಬ್ಧಳಾದಳು “ಅದು… ಅದು” ಎಂದು ತಡವರಿಸುತ್ತಾ ಗೋಡೆಗೆ ಇನ್ನಷ್ಟು ಒರಗಿ ನಿಂತಳು. ಕೈಬೆರಳುಗಳನ್ನು ಒಂದರೊಳಗೊಂದರಂತೆ ಹೆಣೆದು ಸರ್ವಶಕ್ತಿಯಿಂದ ಬಿಗಿದುಕೊಂಡಳು. ಮೈಮುರಿತದಿಂದ ಅವಳ ನಡುಕ ಸ್ಥಿಮಿತಕ್ಕೆ ಬಂತು. ಗೋಪಾಲ ನಕ್ಕು ತಲೆದೂಗುತ್ತಾ ಹೇಳಿದ “ಆಯ್ತಾಯ್ತು. ನಿನ್ನಿಷ್ಟ. ಆದ್ರೂ ನಿನ್ನ ಧೈರ್ಯ ಅಂದ್ರೆ ಧೈರ್ಯವಪ್ಪಾ. ಇಂಥ ಮನೆಯೊಳಗೆ ಒಬ್ಳೇ ಇರೋದು ಅಂತಂದ್ರೆ…”
ಅಯ್ಯೋ!
ಕಾವೇರಿ ತನ್ನೆರಡೂ ಕಿವಿಗಳನ್ನು ಮುಚ್ಚಿಕೊಂಡಳು. ಕಿವಿಯೊಳಗೆ ಮೊರೆಯಿತು ಮತ್ತದೇ ಚೀರಾಟ. ಕಣ್ಣುಬಿಟ್ಟು ನೋಡಿದರೆ ಗೋಪಾಲನಿಲ್ಲ! ಕಿವಿಯೊಳಗೆಲ್ಲ ಗುಂಯ್‍ಗುಟ್ಟುವ ನಿಶ್ಶಬ್ದ. ಹೆಚ್ಚು ಯೋಚಿಸಲು ಪುರುಸೊತ್ತೇ ಇಲ್ಲದಂತೆ ಅವಳು ತಳಮಳಿಸತೊಡಗಿದಳು. ಏನು ಮಾಡಲಿ? ಅವಳ ಮನಸ್ಸು ತೂಗಾಡತೊಡಗಿತು. ಹೋಗಲೋ ಬೇಡವೋ? ರಾತ್ರಿ ಹೊತ್ತಿನಲ್ಲಿ ಕುರುಡಾದ ಚಿಟ್ಟೆಯು ತನ್ನ ರೆಕ್ಕೆಯನ್ನು ಪಟಪಟಿಸಿದ ಹಾಗೆ ಹೃದಯ ತೊಯ್ದಾಡಿತು. ಹೊಸ್ತಿಲಿನಿಂದ ಹೊರಗೆ ಕಾಲಿಡುವಾಗ ‘ಬೇಡ. ನನ್ನ ಮಾತು ಕೇಳು’ ಎಂದು ಯಾರೋ ಪಿಸುಗುಟ್ಟಿದಂತಾಯಿತು. ಅಂಗಳಕ್ಕಿಳಿದಾಗಲಂತೂ ‘ಹೋಗಬೇಡ’ ಎಂದು ಕೈ ಹಿಡಿದು ಹಿಂದಕ್ಕೆಳೆದಂತಾಯಿತು. ಅದಕ್ಕೆಲ್ಲ ಕಿವಿಗೊಡದೆ ನಡೆಯುವಾಗ ಹಿಮವನ್ನು ಹೊದ್ದ ಬಯಲೊಂದು ತನ್ನೆದುರು ಹರಡಿದಂತೆ, ಅದಕ್ಕೆ ಅಡ್ಡವಾಗಿ ಕೀರಲು ದನಿಯನ್ನು ಹೊರಡಿಸುತ್ತಾ ಬೀಸಿ ಬಂದ ಗಾಳಿ ಅವಳನ್ನು ಹಿಡಿದು ಮನೆಯೊಳಗೆ ತಳ್ಳತೊಡಗಿದಂತೆ ಭಾಸವಾಯಿತು. ಅದರ ಬಿರುಸಿಗೆ ಅವಳ ಸೀರೆ ಮತ್ತು ಕೂದಲುಗಳು ಹಾರಾಡತೊಡಗಿದವು. ಮೆಟ್ಟಿಲುಗಳ ಬದಿಯಲ್ಲಿ ನೆಟ್ಟ ಕಬ್ಬಿಣದ ಕಂಬಿಯನ್ನು ಹಿಡಿದುಕೊಳ್ಳದಿರುತ್ತಿದ್ದರೆ ಗಾಳಿಯು ನನ್ನನ್ನು ತೂರಾಡಿಸಿ ಹೊತ್ತೊಯ್ಯುತ್ತಿತ್ತು ಎಂದು ಅವಳಿಗೆ ತೋರಿತು. ಬಲವನ್ನೆಲ್ಲ ಒಗ್ಗೂಡಿಸಿಕೊಂಡು ಹಾದಿಯಲ್ಲಿ ಅಡ್ಡವಾಗುವ ಅಡೆತಡೆಗಳನ್ನು ಬದಿಗೆ ಸರಿಸಿಕೊಂಡು ಹೋಗುವಂತೆ ತಲೆ ಬಗ್ಗಿಸಿಕೊಂಡು ಮನೆಯನ್ನು ದಾಟಿ, ತೋಟವನ್ನು ಹಿಂದಿಕ್ಕಿ ಹಿತ್ತಿಲ ಮುಂಭಾಗದಲ್ಲಿ ಹಾದು ಹೋದಳು. ಗದ್ದೆಯ ತಿರುವಿನಲ್ಲಿ ಒಂದು ಕ್ಷಣ ನಿಂತು ತನ್ನ ಮುಂದೆ ನಡೆಯುತ್ತಿದ್ದ ಗೋಪಾಲನನ್ನು ‘ಶ್…ಶ್’ ಎಂದು ಸದ್ದು ಮಾಡಿ ಕರೆದಾಗ ಛಕ್ಕನೆ ಹಿಂತಿರುಗಿದವನಿಗೆ ತನ್ನ ಕಣ್ಣುಗಳನ್ನೇ ನಂಬಲಾಗಲಿಲ್ಲ. ಅದ್ಭುತವೊಂದನ್ನು ಕಂಡ ಅಚ್ಚರಿಯ ನಗೆಯೊಂದಿಗೆ ತನ್ನನ್ನೇ ನೋಡುತ್ತಿದ್ದವನ ಬಳಿ ಅವಳೆಂದಳು “ಪರ್ವಾಗಿಲ್ಲ. ನಾನು ಜಾನಕಮ್ಮನೊಟ್ಟಿಗೆ ಮಲಗ್ತೇನೆ” ಯಾವುದೋ ಗುಂಗಿನಲ್ಲಿದ್ದವನಿಗೆ ಅವಳ ಮಾತು ಕೇಳಿಸಲಿಲ್ಲವೇನೋ “ನೀನು ಬಂದಿದ್ದು ಒಳ್ಳೇದಾಯ್ತು. ಅಲ್ಲಿ ನಾನು ನಿಲ್ಲುವಂತೆಯೂ ಇಲ್ಲ. ಬಿಟ್ಟು ಬರುವಂತೆಯೂ ಇಲ್ಲ. ಒಟ್ಟಾರೆ ಚಿಂತೆಯಾಗಿ ಬಿಟ್ಟಿತ್ತು ನಂಗೆ” ಎಂದ ನೆಮ್ಮದಿಯ ಉಸಿರು ಚೆಲ್ಲಿ “ಮತ್ತೊಂದು ಮಾತು ಕಾವೇರಿ. ನಾನೆಷ್ಟಾದ್ರೂ ಹೊರಗಿನವನು. ರಾತ್ರಿ ಹೊತ್ತಲ್ಲಿ ನಿನ್ನತ್ರ ಬಂದು ಮನೆಗೆ ಬರ್ತೀಯಾ ಅಂತ ಕರೀಬಾರ್ದಿತ್ತು. ಆದ್ರೆ ಏನು ಮಾಡ್ಲಿ? ಬೇರೆ ದಾರಿ ಇರ್ಲಿಲ್ಲ. ಹಾಗಾಗಿ ನಂದು ಅಧಿಕಪ್ರಸಂಗವಾಯ್ತು ಅಂತ ಭಾವಿಸ್ಬಾರ್ದು ನೀನು”
“ಹೊರಗಿನವನೋ? ನೀನು ನಂಗೆ ಹೊರಗೋ?”
ಬಹಳ ಅಕ್ಕರೆಯಿಂದ ಹೇಳಿದಳು ಆಕೆ. ತನ್ನ ಮೇಲೆ ಕಾಳಜಿ ವಹಿಸಿದ ಅವನನ್ನು ಅಷ್ಟೂ ನೆಚ್ಚಿಕೊಂಡಿತ್ತು ಅವಳ ಜೀವ.
“ಮಾತನಾಡುತ್ತಾ ನಡೆದುದರಿಂದ ಮನೆಗೆ ತಲುಪಿದ್ದು ಗೊತ್ತೇ ಆಗಲಿಲ್ಲ” ಬಾಗಿಲು ತೆರೆಯುತ್ತಾ ಗೋಪಾಲನೆಂದ “ಅಮ್ಮ ಇಲ್ಲಿಲ್ಲ. ಪೆರಡಾಲ ಜಾತ್ರೆಗೆ ಹೋಗಿದ್ದಾಳೆ. ಇನ್ನು ಬರೋದು ಬಯಲಾಟ ಮುಗಿಸ್ಕೊಂಡೇ”
ತುಣುಕು ಮೋಡವಿಲ್ಲದ ಆಕಾಶವನ್ನು ಸೀಳಿ ಫಳ್ಳನೆ ಎರಗಿದ ಮಿಂಚು ನೇರ ಅವಳ ಕಣ್ಣಿಗೆ ಇರಿದಂತಾಗಿ ಒಂದು ಕ್ಷಣ ಸುತ್ತಲೂ ಕತ್ತಲಿಟ್ಟಂತಾಯಿತು. ಕಿಬ್ಬೊಟ್ಟೆಯಾಳದಲ್ಲಿ ಭೀಕರ ಚಳುಕು ಮಿಡಿನಾಗರದಂತೆ ಕದಲಿದಂತಾಗಿ ಗೋಪಾಲನನ್ನು ದುರುದುರನೆ ನೋಡಿದಳು. ಆದರೆ ಕಣ್ಣಿನಲ್ಲಿ ಬೆಂಕಿಯೇನೂ ಇರಲಿಲ್ಲ. ಮಾತನಾಡತೊಡಗಿದಂತೆ ತುಟಿಗಳು ಚಲಿಸಿದವು. ಆದರೆ ಸ್ವರ ಹೊರಡಲಿಲ್ಲ. ಅವನು ತಿರುಗಿ ನೋಡಿದಾಗ ಬಾಗಿಲ ಬಳಿ ಅನುಮಾನಿಸುತ್ತಾ ನಿಂತ ಅವಳ ಕಾಲಿನ ಬೆರಳುಗಳನ್ನು ಕಂಡ. ಅವನ ದೃಷ್ಟಿ ರೇಖೆಯಿಂದ ಬಲ ಒಗ್ಗೂಡಿದಂತಾಗಿ ಅವಳೊಮ್ಮೆ ಥಟ್ಟನೆ ಚಲಿಸಿದಳಾದರೂ ಮರುಕ್ಷಣವೇ ಬೇರಿಳಿದಂತೆ ನಿಂತುಬಿಟ್ಟಾಗ ಗೋಪಾಲನು “ಒಳಗೆ ಬಾ ಕಾವೇರಿ. ಯಾರಾದ್ರೂ ನೋಡಿಯಾರು” ಎನ್ನುತ್ತಾ ಅವಳ ಕೈ ಹಿಡಿದು ಮೆಲ್ಲಗೆ ಒಳಕ್ಕೆಳೆದುಕೊಂಡ.
ಆಚೀಚೆ ನೋಡುತ್ತಲೇ ಮನೆಯಿಂದ ಹೊರಬಿದ್ದಳು ಕಾವೇರಿ. ಮನೆಯ ಕಡೆ ನಡೆಯುವಾಗ ಆಚೀಚೆ ನೋಡುತ್ತಲೇ ಮನೆಯಿಂದ ಹೊರಬಿದ್ದಳು ಕಾವೇರಿ. ಹೆಜ್ಜೆಗಳಲ್ಲಿ ಬಳಲಿಕೆಯ ಭಾರ; ನಡುಕ. ಅಬ್ಬ! ಎಂಥ ಪೌರುಷ ಅವನದ್ದು! ಗಟ್ಟಿ ತೋಳುಗಳು. ಕಸುವಿನ ಎದೆ. ತಾನು ಸೋತು ಬಳಲಿ…
ಪಕ್ಕದ ಪೊದೆಯ ಬಳಿ ತರಗೆಲೆಗಳ ಸದ್ದು ಕಿವಿಗೆ ಬಿದ್ದಾಗ ಆಕೆ ಕಿಡಿತಗುಲಿದಂತೆ ಎಚ್ಚರಗೊಂಡಳು. ಬಾಡಿದ ಕಣ್ಣುಗಳಲ್ಲಿ ಅಡಗಿದ್ದ ಮಂಪರು, ನಿದ್ದೆ, ಅಯಾಸಗಳೆಲ್ಲ ಹಾರಿಹೋದವು.
ನಂಜುಂಡನಾಗಿರಬಹುದ?
ಅವಳ ಚರ್ಮದ ರಂಧ್ರಗಳಿಂದ ಬೆವರಿನ ಸೂಕ್ಷ್ಮತುಂತುರುಗಳು ಹೊಮ್ಮಿ ನಿಂತವು. ‘ಇಲ್ಲ. ಅವನೇಕೆ ಆ ದಾರಿಯಲ್ಲಾಗಿ ಬರ್ಬೇಕು?’ ಎಂದೆನಿಸುತ್ತಿದ್ದಂತೆ ತಲೆಬಿಸಿ ಸ್ವಲ್ಪ ಕಡಿಮೆಯಾದರೂ ಉತ್ಕಂಠಿತ ಮನಸ್ಸು ಸೂಜಿಮೊನೆಯಲ್ಲಿ ನಿಂತಿತು. ‘ಹಾರೆಯಿಂದ ಅಗೆವ ಸದ್ದಿನಂತೆದೆಯಲ್ಲ’ ಎಂದು ಕೆಳತುಟಿಯನ್ನು ಕಚ್ಚಿ ಹಿಡಿದು ಬಗ್ಗಿ ಬೆಕ್ಕಿನ ಹೆಜ್ಜೆಯಿಡುತ್ತಾ ಮುಂದಕ್ಕೆ ಸಾಗುತ್ತಿದ್ದಂತೆ ತನ್ನ ಮನೆಯ ಪೊದೆಗಳ ಬಳಿ ಕರಿನೆರಳೊಂದು ಅಸ್ಪಷ್ಟವಾಗಿ ಗೋಚರಿಸಿತು. ಅದೇನೆಂದು ಸೂಕ್ಷ್ಮವಾಗಿ ಕಣ್ಣು ನೆಟ್ಟಳು. ದೊಡ್ಡ ಕಲ್ಲೋ, ದೊಣ್ಣೆಯೋ ಏನಾದರೂ ಸಿಗಬಹುದೋ ಅಂತ ನೆಲದ ಕಡೆ ದೃಷ್ಟಿ ಹಾಯಿಸಿದ್ದೇ ತಡ ಅವಳು ಗಟ್ಟಿಯಾಗಿ ಚೀರಿದಳು. ಆ ಬೊಬ್ಬೆಗೆ ಬೆದರಿದ ಆಕೃತಿಯು ಅಲ್ಲಿಂದ ಪೊದೆಯಾಚೆಗೆ ನೆಗೆದು ಒಂದೇ ಓಟ!
ಪೊದೆಯ ಬಳಿ ಅಗಲವಾಗಿ ಬಾಯಿ ತೆರೆದ ಹೊಂಡದೊಳಗೆ ಶವವೊಂದು ಅಂಗಾತ ಬಿದ್ದಿತ್ತು. ತಲೆಯಿಂದ ಎದೆವರೆಗೆ ಹಸಿಮಣ್ಣಿನಿಂದ ಮುಚ್ಚಲಾಗಿತ್ತು. ಅದರಿಂದ ಹೊಮ್ಮುತ್ತಿದ್ದ ನೆತ್ತರ ವಾಸನೆಗೆ ಭಯಮಿಶ್ರಿತ ಅಸಹ್ಯವು ಬೆನ್ನಹುರಿಯ ಆಳದಿಂದ ತೆರೆಯಂತೆ ಎದ್ದು ಬಂತು. ಭೀಭತ್ಸ ಭಾವವೊಂದು ಆಕ್ರಮಿಸಿಕೊಂಡು ಮೈತುಂಬಾ ಆಘಾತದ ಅಲೆಗಳು ಹರಿದಂತಾಗಿ ಅವಳ ಹೊಕ್ಕುಳದ ಸುತ್ತಲಿನ ಭಾಗ ತರತರ ನಡುಗಿತು. ನಂಜುಂಡ ಮನೆ ಬಿಟ್ಟು ಹೋದ ರಾತ್ರಿಯಂದು ಧರಿಸಿದ್ದ ಬಟ್ಟೆಗಳು ಯಾವುವು ಎಂದು ಉಸಿರು ಬಿಗಿಹಿಡಿದು ಚಿಂತಿಸಿದಳು. ಕಣ್ಣು ಬಿಟ್ಟು ನೋಡಿದರೆ ಅಯ್ಯೋ! ಅದೇ ಕೆಂಪಂಗಿ ಮತ್ತು ಚೌಕುಳಿ ಲುಂಗಿ!
ಮೃತ್ಯುಭಯದಿಂದಲೋ ಎಂಬಂತೆ ಅವಳ ಕಣ್ಣುಗಳು ಹೊರಚಾಚಿಕೊಂಡವು. ಮುಖವಿಡೀ ಬಿಳುಚಿಕೊಂಡಿತು. ‘ದೇವರೇ’ ಎಂದು ಮೊಣಕಾಲೂರಿ ಕುಸಿಯುತ್ತಿದ್ದಂತೆ ಅವಳ ದನಿ ಚೀತ್ಕಾರವಾಯಿತು. ಜಗತ್ತೇ ಗರಗರ ತಿರುಗಿದಂತೆನಿಸಿ ಕಣ್ಣು ಕತ್ತಲೆಗಟ್ಟಿತು.
ಕಾವೇರಿಯ ಕಾಲುಗಳು ಅಡ್ಡಾದಿಡ್ಡಿ ಚಲಿಸುತ್ತಿದ್ದವು. ಎದೆ ಒಂದೇ ಸವನೆ ಹೊಡೆದುಕೊಳ್ಳುತ್ತಿತ್ತು. ನರಬಿಗಿದ ತೊಡೆಗಳು ನಡುಗುತ್ತಿದ್ದವು. ಕಾಲುಗಳನ್ನು ಆದಷ್ಟು ಹತೋಟಿಯಲ್ಲಿಟ್ಟುಕೊಂಡು ಓಡಲು ಎಷ್ಟು ಶ್ರಮಿಸಿದರೂ ಸಾಧ್ಯವಾಗಲಿಲ್ಲ. ಗೋಪಾಲನನ್ನು ಒಮ್ಮೆ ಕಾಣಲು, ಇದೆಲ್ಲವನ್ನೂ ಹೇಳಲು ಸಾಧ್ಯವಾಗ್ತಿದ್ರೆ…
ನನ್ನನ್ನು ನಿದ್ದೆಯಿಂದ ಬಡಿದೆಬ್ಬಿಸಿದ ಚೀರಾಟ ನಂಜುಂಡನದ್ದಾಗಿದ್ದಿರಬಹುದಾ?
ಅವಳ ತಲೆಯೊಳಗೇನೋ ಮಿಸುಕಾಡಿದಂತಾಯಿತು. ಗೋಪಾಲ ನನ್ನ ಮನೆಗೆ ತಲುಪಬೇಕಿದ್ರೆ ಹೇಗೂ ನಾಲ್ಕೈದು ನಿಮಿಷಗಳು ಬೇಕು. ಆದರೆ ನಾನು ಜಾನಕಮ್ಮನನ್ನು ಕರೆದು ಬಾಯಿ ಮುಚ್ಚುವುದರೊಳಗೆ ಅವನು ಹೇಗೆ ಪ್ರತ್ಯಕ್ಷನಾದ? ಹಾಗಿದ್ರೆ… ಹಾಗಿದ್ರೆ… ನೊಣಗಳಂತೆ ಮುತ್ತಿಕೊಳ್ಳುತ್ತಿರುವ ಯೋಚನೆಗಳನ್ನು ಕೊಡಹುವಂತೆ ತಲೆಯನ್ನು ಅತ್ತಿತ್ತ ಜಾಡಿಸಿದಳು. ಇಲ್ಲ. ಗೋಪಾಲ ಹಾಗೆ ಮಾಡುವನೇ? ಎಷ್ಟಾದರೂ ಅವನು ನಂಜುಂಡನ ಗೆಳೆಯನಲ್ಲವೇ? ಹಾಗಿದ್ದ ಮೇಲೆ ಅವನಿಗೇಕಿರಬೇಕು ನಂಜುಂಡನ ಮೇಲೆ ದ್ವೇಷ? ಎಂದು ಸಮಾಧಾನಪಟ್ಟುಕೊಳ್ಳುತ್ತಿದ್ದಂತೆ ನೆನಪುಗಳು ಒಡ್ಡು ಹರಿದ ನೀರಿನಂತೆ ನುಗ್ಗಿ ಬಂದವು.
“ನಂಜುಂಡಾ”
ರೋಷ ಭುಗಿಲೆದ್ದ ಗೋಪಾಲ ಬೊಬ್ಬಿರಿದ. ಇಡೀ ಊರನ್ನೇ ನಡುಗಿಸುವ ನಂಜುಂಡ ಚಳಿ ಹಿಡಿದಂತೆ ಥರಗುಟ್ಟಿದ. ಕೈಯಲ್ಲಿದ್ದ ಗಾಜಿನ ಲೋಟ ಕೆಳಗುರುಳಿ ಮದ್ಯವಿಡೀ ನೆಲದಲ್ಲಿ ಹರಡಿತು. ಗೋಪಾಲನ ಕಣ್ಣುಗಳಲ್ಲಿ ಮೂಡಿದ ಕಿಡಿ ನಿಧಾನವಾಗಿ ಬೆಳೆಯುತ್ತಾ ಜ್ವಾಲಾಮುಖಿಯಾಗುತ್ತಿದೆಯೋ ಎಂದೆನಿಸುವಷ್ಟು ಪ್ರಖರವಾಗತೊಡಗಿತು.
“ನನ್ನಪ್ಪ ಹೇಗೆ ಸತ್ತಾಂತ ನಂಗೊತ್ತುಂಟು”
ರುದ್ಧ ಕಂಠದಿಂದ ಹೊರಬಿದ್ದ ರುದ್ರ ಸ್ವರದ ಅಬ್ಬರವನ್ನು ಕೇಳಿ ಬೆಚ್ಚಿ ಬಿದ್ದೆ. ತಿದಿಹಾಕಿದ ಮಣ್ಣಿನ ಪಾತ್ರೆಯೊಳಗೆ ಹಾಕಿಟ್ಟ ಕೆಂಡಗಳೆಲ್ಲ ಒಂದುಗೂಡಿ ಕಣ್ಣುಗಳಾಗಿವೆಯೋ ಎಂಬಂತೆ ನಿಗಿನಿಗಿಸುವ ದೃಷ್ಟಿ. ಅವನ ಅಂಥ ಅವತಾರವನ್ನು ಒಮ್ಮೆಯೂ ಕಂಡಿರದ ನಾನು ಬಿಟ್ಟ ಬಾಯಿಯನ್ನು ಮುಚ್ಚಲೂ ಮರೆತು ನೋಡಿದಲ್ಲೇ ಬಾಕಿ.
“ನನ್ನ ವಿರುದ್ಧ ಕೋರ್ಟಲ್ಲಿ ಸಾಕ್ಷಿ ಹೇಳಿದ್ರೆ ನಿನ್ನಪ್ಪನನ್ನು ಮಾತ್ರವಲ್ಲ ನಿನ್ನನ್ನೂ ಕೊಂದೇನು” ನಂಜುಂಡ ತೇಲುಗಣ್ಣು ಬಿಟ್ಟು ತೊದಲಿದ.
“ಹೇಯ್!”
ಗೋಪಾಲನ ತೋರುಬೆರಳು ನಂಜುಂಡನನ್ನು ಕುಳಿತಲ್ಲೇ ಕೀಲಿಸಿಬಿಟ್ಟಿತ್ತು. ನಂತರ ಅವನು ಥಟ್ಟನೆದ್ದು ಕುರ್ಚಿಯನ್ನು ಒದ್ದು ಮೈ ಸೆಟೆಸಿದ. ನೆತ್ತಿಯ ಮೇಲಿನ ಕೂದಲು ಗಾಳಿಗೆ ತೊನೆದಾಡಿದವು. ಹೊರಗೆ ಕೇಳಿಸುವಷ್ಟು ಗಟ್ಟಿಯಾಗಿ ಹಲ್ಲು ಕಡಿದ. ಎದೆಗೂಡಿನೊಳಗಿನಿಂದ ಫೂತ್ಕಾರ ಹೊರಬಿತ್ತು. ಒಂದುಕ್ಷಣ ಮೈಯನ್ನು ಕುಗ್ಗಿಸಿದಂತೆ ಮಾಡಿ, ಮೊಣಕಾಲುಗಳನ್ನು ಮಡಚಿ ಇನ್ನೇನು ಅವನತ್ತ ನೆಗೆಯಬೇಕೆನ್ನುವಷ್ಟರಲ್ಲಿ ಭಯಾನಕವಾಗಿ ಹೊಳೆಯುತ್ತಿದ್ದ ಅವನ ದೃಷ್ಟಿ ನನ್ನ ಮೇಲೆ ಬಿತ್ತು. ನನ್ನನ್ನು ನೋಡುತ್ತಿದ್ದಂತೆ ಆ ಕಣ್ಣಿನ ಕಿಡಿಗಳು ಆರಿ ಮುಖದ ಗಂಟು ಸಡಿಲವಾಗತೊಡಗಿತು. ಏನೋ ಹೇಳುವಂತೆ ಬಾಯಿ ತೆರೆದರೂ ಹೇಳಲಾಗದೆ ಧುಮುಗುಟ್ಟುತ್ತಾ ಹೊರಟು ಹೋದ. ಮತ್ತೆರಡು ದಿನಗಳಲ್ಲಿ ಅವನನ್ನು ನೋಡಿದಾಗ, ಮಾತನಾಡುವಾಗಲೆಲ್ಲ ಅಸ್ಪಷ್ಟ ಅನಿರ್ವಚನೀಯ ಭೀüತಿ ಒಳಗೆಲ್ಲೋ ಮಡುಗಟ್ಟಿಯೇ ಇತ್ತು.
ನಂಜುಂಡನ ಮೇಲೆ ಗೋಪಾಲನಿಗೆ ಅಷ್ಟೊಂದು ಹಗೆ ಇರುತ್ತಿದ್ರೆ ಅವನು ನನ್ನ ಮೇಲೆ ಅಷ್ಟೊಂದು ಪ್ರೀತಿ ತೋರುತ್ತಿದ್ದನಾ? ರಾತ್ರಿ ಹೊತ್ತಲ್ಲಿ ಒಂಟಿಯಾಗಿರಬೇಡ ಅಂತ ಮನೆಗೆ ಕರ್ಕೊಂಡು ಹೋಗುತ್ತಿದ್ದನಾ?
ಅವಳಿಗೆ ಮೈಪರಚಿಕೊಳ್ಳುವಂತಾಯಿತು. ತಲೆ ಒಡೆಯುವುದನ್ನು ತಡೆಹಿಡಿಯಲೋ ಎಂಬಂತೆ ಎರಡೂ ಕೈಗಳಿಂದ ಕೂದಲನ್ನು ಅಮುಕಿ ಹಿಡಿದಳು. ಅಯ್ಯೋ! ಗೋಪಾಲನನ್ನು ಒಮ್ಮೆ ಕಾಣಲು ಸಾಧ್ಯವಾಗುತ್ತಿದ್ದರೆ… ವಿಹ್ವಲತೆ ಕ್ಷಣಕ್ಷಣಕ್ಕೂ ಏರುತ್ತಿದ್ದಂತೆ ತಲೆಯನ್ನಿಡೀ ಕೆದರಿ, ಗುಡುಗು ಹುಟ್ಟುವ ಮೋಡಗಳಾಚೆಗೆಲ್ಲ ಕೇಳಿಸುವಷ್ಟು ಗಟ್ಟಿಯಾಗಿ ಕಿರುಚಬೇಕೆನಿಸಿತು.
ಬಹುಶಃ ಮನೆಯ ಹಿಂದೆ ಹೆಣ ಹುಗಿಯುವುದಕ್ಕಾಗಿಯೇ ನನ್ನನ್ನು ಮನೆಗೆ ಕೊಂಡೊಯ್ದು…
ಅವಳ ಜೀವ ಹಿಂಡಿದಂತಾಯಿತು. ಸೆರಗೆಳೆದುಕೊಳ್ಳುವ ಮೊದಲೇ ಅಳು ಉಕ್ಕಿ ಬಂದಿತಾದರೂ ಕಣ್ಣೀರು ಒಸರಲಿಲ್ಲ. ಮುಚ್ಚಿದ ಕಣ್ಣುಗಳೆದುರು ಪ್ರೀತಿ ತುಂಬಿದ ಮುಖವೊಂದು ಮೂಡಿ ಬರುತ್ತಿದ್ದಂತೆ ಮನದಲ್ಲಿ ಕೋಪ ದ್ವೇಷಗಳ ಮೋಡ ದಟ್ಟವಾಗತೊಡಗಿತು. ‘ಹೌದು. ಇನ್ನು ಹಾಗೆ ಮಾಡೋದೇ ಒಳ್ಳೇದು’ ಎಂದುಕೊಳ್ಳುತ್ತಾ ಗಂಟಲಲ್ಲಿ ಕಟ್ಟಿ ನಿಂತ ಬಿಕ್ಕಳಿಕೆಯನ್ನು ಕಷ್ಟಪಟ್ಟು ತಹಬದಿಗೆ ತಂದುಕೊಂಡಳು.
ತೋರಣಕಟ್ಟೆ ಇನ್ನೂ ದೂರದಲ್ಲಿದೆ ಎಂದು ಕಾವೇರಿಗೆನಿಸಿದ್ದು ರಜತಗಿರಿಯ ಜೋಡು ಮಾರ್ಗವನ್ನು ತಲುಪಿದಾಗಲೇ. ಪೋಲೀಸರ ಬಳಿ ಎಲ್ಲವನ್ನೂ ಹೇಳಿಬಿಡಬೇಕೆಂದುಕೊಂಡಳು. ‘ಹಾಗೆಲ್ಲಾದ್ರೂ ಮಾಡಿದ್ರೆ ಅವರು ನನ್ನನ್ನು ಅಷ್ಟಕ್ಕೇ ಬಿಟ್ಟಾರಾ? ನೀನೇ ಯಾಕೆ ನಂಜುಂಡನನ್ನು ಕೊಲೆ ಮಾಡಿರ್ಬಾರ್ದು ಅಂತ ನನ್ನನ್ನೇ…’ ಎಂದುಕೊಳ್ಳುತ್ತಿದ್ದಂತೆ ನಿಂತ ನೆಲ ಕುಸಿದಂತಾಯಿತು. ಮುಂದೇನು ಮಾಡುವುದಕ್ಕೂ ತೋಚದೆ ಭೂತದಂತೆ ಬಿರಿಹೊಯ್ದು ನಿಂತ ಮರಕ್ಕೆ ರಪರಪ ಗುದ್ದಿಕೊಳ್ಳುತ್ತಿದ್ದಂತೆ ಯಾವುದೋ ವಾಹನವೊಂದು ಅವಳನ್ನು ದಾಟಿ ಮುಂದಕ್ಕೆ ಹೋಯಿತು. ‘ಓಹ್’ ಎಂದು ಪಕ್ಕಕ್ಕೆ ಸರಿದು ನಿಲ್ಲುತ್ತಿದ್ದಂತೆಯೇ ಅವಳ ಕಣ್ಣಲ್ಲಿ ಗಾಬರಿ ಮೂಡಿತು. ‘ಪೋಲೀಸ್ ಜೀಪ್!’ ಗಂಟಲಿನಿಂದ ಉದ್ಗಾರ ಹೊರಡುತ್ತಲೇ ಎದೆ ಬಡಿತ ನಿಂತಂತಾಗಿ ಮೈಯಲ್ಲೆಲ್ಲ ವಿಚಿತ್ರ ಭಯ ಹರಿದಾಡತೊಡಗಿತು. ಆಗಲೇ ಅವಳ ಗಮನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಆಕೃತಿಯತ್ತ ಹರಿದದ್ದು. ‘ಗೋಪಾಲನಲ್ಲವಾ ಅದು?’ ಎಂದೆನಿಸುತ್ತಿದ್ದಂತೆ ಮೈ ನೆಟ್ಟಗಾಗಿ ರೋಮಗಳು ನಿಮಿರಿದವು. ‘ಊಹೂಂ. ಅವನಲ್ಲ’ ಎಂದು ತೋರಿದರೂ ಕತ್ತು ಬಾಗಿಸಿ, ಕಣ್ಣು ಜೋಡಿಸಿ ನೋಡಿದಳು. ಸರಿಯಾಗಿ ಕಾಣದಿದ್ದುದರಿಂದ ಜೀಪಿನ ಹಿಂದೆಯೇ ವೇಗವಾಗಿ ನಡೆಯತೊಡಗಿದಳು. ಓಡಿ ಸಮೀಪಿಸಲು ಯತ್ನಿಸಿದಳು. ಇನ್ನೇನು ‘ಹೋಯ್’ ಎಂದು ಚೀರಬೇಕೆನ್ನುವಷ್ಟರಲ್ಲಿ ಒಮ್ಮೆಲೆ ವೇಗವನ್ನು ಹೆಚ್ಚಿಸಿದ ಜೀಪು ಕತ್ತಲಲ್ಲಿ ಮರೆಯಾಯಿತು. ಕಾವೇರಿ ಕೈ ಕೈ ಹಿಸುಕಿಕೊಳ್ಳುತ್ತಾ ನಿಂತಲ್ಲೇ ಒದ್ದಾಡುತ್ತಿದ್ದಂತೆ ಹಿಂದಿನಿಂದ ಯಾರೋ ಅವಳ ಭುಜ ಹಿಡಿದು ಅಮುಕಿದರು. ಬೆನ್ನ ಹುರಿಗೆ ಚಳಿಗಾಳಿ ಹೊಕ್ಕಂತಾಗಿ ಕೊರಳನ್ನು ಗಕ್ಕನೆ ಹಿಂದಕ್ಕೆ ತಿರುವಿ ನೋಡಿದಾಗ ಅವಳ ಉಸಿರೇ ಗಂಟಲಲ್ಲಿ ಸಿಕ್ಕಿಕೊಂಡಂತಾಯಿತು.
ನಂಜುಂಡ!