ಗೃಹಿಣೀ ಗೃಹ ಮುಚ್ಯತೇ..

                                                  ಚಿತ್ರ: ಮಂಗಳಾ ಶೆಟ್ಟಿ

ಅಂದು ನಗರದ ರಂಗ ಮಂದಿರದಲ್ಲಿ ಇತ್ತೀಚಿಗೆ ಬದುಕಿಗೆ ವಿದಾಯ ಹೇಳಿದ್ದ ಪ್ರಸಿದ್ದ ನಟಿ ರೂಪತಾರಾಳ ಆತ್ಮ ಕಥೆ ‘ಹರಿದ ಗಾಳಿಪಟ’ ಪುಸ್ತಕ ಬಿಡುಗಡೆ ಸಮಾರಂಭ.ಅವಳ ಅಭಿಮಾನಿಗಳ ದಂಡೇ ಅಲ್ಲಿ ನೆರೆದಿತ್ತು. ಹದಿಹರೆಯದ ಹುಡುಗರಿಂದ , ಬದುಕಿನ ವಸಂತ ದಾಟಿದವರೂ ಅಲ್ಲಿದ್ದರು.ಚೆಂದುಳ್ಳಿ ಚೆಲುವೆ ರೂಪತಾರಾಳ ಚಲನ ಚಿತ್ರವೆಂದರೆ ಹದಿನೈದು ದಿನದ ಮೊದಲೇ ಟಿಕೆಟ್ ಬುಕ್ ಆಗುತ್ತಿದ್ದವು.ಫಸ್ಟ ಡೇ ಫಸ್ಟ ಶೋ ನೋಡಿದವರಂತೂ ಜನ್ಮ ಸಾರ್ಥಕವಾದ ಭಾವದಲ್ಲಿ ತೇಲುತ್ತಿದ್ದರು.ಪಾತ್ರ ಯಾವುದೇ ಇರಲಿ ಅದಕ್ಕೆ ಜೀವ ತುಂಬಿ ,ಪಾತ್ರದೊಳಗೆ ತಲ್ಲೀನಳಾಗಿ ಭಾವ ಉಕ್ಕಿಸುವ ಮುಖ ಚಹರೆಯೊಂದಿಗೆ ಅವಳ ಅಭಿನಯ ನೋಡುಗರ ಮನ ಸೆಳೆಯುತಿತ್ತು. ಚೆಲ್ಲು, ಚೆಲ್ಲಾದ ಪಾತ್ರಗಳಿರಲಿ,ತುಂಟ ಹುಡುಗಿಯ ಪಾತ್ರವಿರಲಿ ಎಲ್ಲದಕ್ಕೂ ನ್ಯಾಯ ಒದಗಿಸುತ್ತಿದ್ದ ರೂಪತಾರಾಳ ಬೊಗಸೆಗಂಗಳು, ಮಟ್ಟಸವಾದ ಎತ್ತರ,ಪಡ್ಡೆ ಹುಗುಗರ ಹೃದಯ ಬಡಿತ ಹೆಚ್ಚಿಸುವ ತುಂಬಿದೆದೆ, ತುಸು ಮೊಂಡ ಮೂಗು ,ಶ್ವೇತ ವರ್ಣ ,ರಂಗು ಬಳಿದ ಮುದ್ದಾದ ಪುಟ್ಟ ತುಟಿಗಳು ಅವಳನ್ನು ಸುಂದರಿಯರ ಸಾಲಿಗೆ ಸೇರಿಸುತ್ತಿದ್ದವು. ಚಿತ್ರರಂಗದಲ್ಲಿ ಅತ್ಯಂತ ಬೇಡಿಕೆಯ ನಟಿಯಾಗಿ ,ಅನೇಕ ಚಲನ ಚಿತ್ರ ಪ್ರಶಸ್ತಿಯನ್ನು ಪಡೆದ ಅವಳ ಅಕಾಲಿಕ ಮರಣ ಅವಳ ಅಭಿಮಾನಿಗಳನ್ನು ದಿಗ್ಭ್ರಮೆಗೊಳಿಸಿತ್ತು. ಇಂದು ಅವಳ ಆತ್ಮ ಕಥೆಯ ಪುಸ್ತಕವನ್ನು ಕೊಂಡು ಓದುವ ಕಾತರದಲ್ಲಿ ಜನರು ಪುಸ್ತಕ ಬಿಡುಗಡೆಗೆ ಕಾದು ಕುಳಿತಿದ್ದರು.

ವೇದಿಕೆಯ ಮೇಲೆ  ಚಿತ್ರರಂಗದ ಹೆಸರಾಂತ ನಿರ್ದೇಶಕ ಧೀರೇನ್ ,ನಟ ಪ್ರಫುಲ್  ಪುಸ್ತಕ ಬಿಡುಗಡೆ ಮಾಡಿ ರೂಪತಾರಾಳ ಜೊತೆ ತಮ್ಮ ಒಡನಾಟವನ್ನು ಹಂಚಿಕೊಂಡು ಚಿತ್ರರಂಗಕ್ಕೆ ಅವಳ ಕೊಡುಗೆಯನ್ನು ನೆನೆಸಿದರು.ಇತ್ತ ಪುಸ್ತಕ ಕೊಳ್ಳಲು ಜನ ಮುಗಿಬಿದ್ದು ಖರೀದಿಸಿದ್ದರು.ತನ್ನ ಗೆಳತಿಯರೊಂದಿಗೆ ಸಮಾರಂಭಕ್ಕೆ ಬಂದಿದ್ದ ಮೈಥಿಲಿ ಅಂಥ ಗಲಾಟೆಯಲ್ಲೂ ಗುದ್ದಾಡಿ ಪುಸ್ತಕ ಕೊಂಡಿದ್ದಳು.ಸಣ್ಣ ಪುಟ್ಟ ರೂಪದರ್ಶಿ ಕೆಲಸ ಮಾಡುತ್ತಿದ್ದ ಮೈಥಿಲಿಯನ್ನು ಗ್ಯ್ಲಾಮರ್ ಜಗತ್ತು ಕೈ ಬೀಸಿ ಕರೆಯುತಿತ್ತು.ರೂಪತಾರಾಳ ಬದುಕನ್ನು ಅರಿಯುವ ತುಡಿತ ಹೆಚ್ಚಾಗಿ ಬೇಗನೆ ಮನೆ ಸೇರಿ ಊಟ ಮಾಡಿದ ಶಾಸ್ತ್ರ ಮಾಡಿ ಕೋಣೆ ಸೇರಿದ್ದಳು.

ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ನನ್ನ ಅಪ್ಪ  ಒಬ್ಬ ಸಾಧಾರಣ‌ ಗುಮಾಸ್ತ .ಎರಡು ಗಂಡು,ಎರಡು ಹೆಣ್ಣು ಮಕ್ಕಳಲ್ಲಿ ನಾನೇ ಕೊನೆಯವಳು.ಆರಕ್ಕೇರದ ಮೂರಕ್ಕಿಳಿಯದ ಜೀವನ.ಸರಕಾರಿ ಶಾಲೆಗೆ ಹೋಗುವ ಈ ನಾಲ್ವರಲ್ಲಿ ನಾನೇ ತುಂಟಿ,ಸುಂದರಿ ಬಹು ಬೇಗನೆ ಬೇರೆಯವರನ್ನು ಆಕರ್ಷಿಸುವ ಕಲೆ ನನಗೊಲಿದಿತ್ತು. ಆ ದಿನ ಶಾಲೆಯ ವಾರ್ಷಿಕೋತ್ಸವದ ಲ್ಲಿ ನನ್ನ  ನೃತ್ಯ ನೋಡಿದ ಮುಖ್ಯ ಅತಿಥಿಗಳು ನನ್ನನ್ನು ವೇದಿಕೆಗೆ ಕರೆದು ಸನ್ಮಾನ ಮಾಡಿ ನೃತ್ಯ ಕಲಿತದ್ದು ಎಲ್ಲಿ ಎಂದು ಕೇಳಿದಾಗ ,ಎಲ್ಲೂ ಇಲ್ಲ ಮೊಬೈಲ್ ನೋಡಿ ಕಲಿತದ್ದು ಎಂದಾಗ ಆಶ್ಚರ್ಯದಿಂದ  ನೋಡಿದ್ದರು.ಈ ಸಮಾರಂಭದ ನಂತರ ನನ್ನ ಫೋಟೋಗಳು ಪತ್ರಿಕೆ,ವೃತ್ತ ಪತ್ರಿಕೆಗಳಲ್ಲಿ ರಾರಾಜಿಸಿ ಹತ್ತು ವರ್ಷದವಳಾದ ನನ್ನ ನೃತ್ಯಕ್ಕೆ ಎಲ್ಲ ಕಡೆಯಿಂದಲೂ ಬೆಂಬಲ ವ್ಯಕ್ತವಾಗಿತ್ತು. ಎಲ್ಲರೂ ನನ್ನನ್ನು, ನನ್ನ ನೃತ್ಯವನ್ನು ಮೆಚ್ಚಿ ಹೊಗಳಿದಾಗ ಮನದಲ್ಲೇ ನನಗೊಂತರಹ ಖುಷಿ ನಾನೇನೂ ಅಸಾಧಾರಣವಾದದ್ದೊಂದು ಸಾಧಿಸಿದ್ದೇನೆ ಅಂತ.‌ಆದರೆ ಮುಂದೊಂದು ದಿನ ಇದೇ ನನ್ನ ಬದುಕಿನಲ್ಲಿ ನಕ್ಷತ್ರಿಕನಂತೆ ಕಾಡುವುದೆಂಬ ಅರಿವು ಆ ಅಮಾಯಕ ವಯಸ್ಸಿನಲ್ಲಿ ನನಗಿರಲಿಲ್ಲ.

ಒಂದು ದಿನ  ನಿರ್ಮಾಪಕರೊಬ್ಬರು ತಮ್ಮ ಸಿನಿಮಾದಲ್ಲಿ ಬಾಲ ನಟಿಯಾಗಿ ನಟಿಸಲು ನನ್ನನ್ನು ಆಯ್ಕೆ ಮಾಡಿದಾಗ ಅಪ್ಪ,ಅಮ್ಮನ ಖುಷಿ ಮುಗಿಲು ಮುಟ್ಟಿತ್ತು.ಪ್ರಾರಂಭದಲ್ಲಿ ಶೂಟಿಂಗ್ ಗೆ ಖುಷಿಯಿಂದ ಹೋಗುತ್ತಿದ್ದ ನನಗೆ ಆ ನಂತರ ಇಡೀ ದಿನ ಅಲ್ಲಿ ಕಾಯುತ್ತ ಕುಳಿತು ಅವರು ಕರೆದಾಗ ನೃತ್ಯನೋ, ಅವರು ಹೇಳಿಕೊಟ್ಟ ಡೈಲಾಗೋ ಹೇಳಿ ರಾತ್ರಿ ಯಾವಾಗೋ ಮನೆಗೆ ಬರುವುದು ಬೇಡವಾಗ ತೊಡಗಿತು. ಸ್ನೇಹಿತೆಯರ ಜೊತೆ ನನ್ನ ಒಡನಾಟಕ್ಕೂ ಕುತ್ತು ಬಂದಿತು. ಆಟ,ನಗು,ಖುಷಿ ಕನ್ನಡಿಯ ಗಂಟಾಗ ತೊಡಗಿದಾಗ ನನಗೆ ಅದರಲ್ಲಿ ಆಸಕ್ತಿ ಕಡಿಮೆಯಾಗ ತೊಡಗಿತು.ಅಪ್ಪ,ಅಮ್ಮನಿಗೆ “ನಾನು ಇನ್ನು ಮೇಲೆ ಈ ಶೂಟಿಂಗ್ ಗೆ ಹೋಗೋದಿಲ್ಲ ನಾನು ಶಾಲೆಗೆ ಹೋಗ ಬೇಕು,ನನ್ನ‌ ಗೆಳತಿಯರ ಜೊತೆ ಆಟವಾಡ ಬೇಕು” ಎಂದಾಗ ಅಪ್ಪ,ಅಮ್ಮ …”ಪುಣ್ಯಾ ಮಾಡಿದ್ದೀಯ ಇಂತಹ ಅವಕಾಶ ಯಾರಿಗೂ ಇಷ್ಟು ಸುಲಭವಾಗಿ ಸಿಗುವುದಿಲ್ಲ,ದುಡ್ಡು ಸಹ ಚೆನ್ನಾಗಿ ಸಿಗುತ್ತಿದೆ ಸುಮ್ಮನೆ ರಗಳೆ ಮಾಡದೆ ಹೋಗು “ಎಂದಾಗ ಚಿಕ್ಕ ಹುಡುಗಿಯಾದ ನಾನು ಸುಮ್ಮನಾಗಿದ್ದೆ.ದುಡ್ಡಿನ ರುಚಿ ಹತ್ತಿದ್ದ ಹೆತ್ತವರಿಗೆ  ನನ್ನ ಆಸೆ,ಆಕಾಂಕ್ಷೆ,ನನ್ನ ಮನದ ತುಡಿತ, ಭಾವನೆಗಳು ಅರ್ಥವಾಗಲೇ ಇಲ್ಲ.ಎಲ್ಲೋ,ಏನೋ ಸರಿ ಇಲ್ಲ ಅಂತ ನನಗನಿಸಿದರೂ ಹೇಳಿ ಕೊಳ್ಳುವಷ್ಟು ಪ್ರಬುದ್ದತೆ ಆಗ ನನಗಿಲ್ಲವಾಗಿತ್ತು .

ಹದಿನಾರನೇ ವಯಸ್ಸಿಗೇ ಮೈ ಕೈ ತುಂಬಿಕೊಂಡು ಎಲ್ಲರ ಕಣ್ಣು ಕುಕ್ಕುವಂತಾಗಿದ್ದ ನನಗೆ ಪ್ರಸಿದ್ದ  ನಾಯಕ ನಟ ಕಿಶೋರನ ಜೊತೆ ನಾಯಕಿಯಾಗುವ ಅವಕಾಶ ದೊರಕಿದಾಗ  ಎಲ್ಲ ಕಡೆಯಿಂದಲೂ ಅಭಿನಂದನೆಯ ಹೊಳೆಯೇ ಹರಿದು ಬಂದಿತ್ತು .   ನನ್ನ ಭಾವಪೂರ್ಣ ಅಭಿನಯಕ್ಕೆ ನಾಯಕಿಯಾಗಿ ನಟಿಸಿದ ಆ ಮೊದಲ ಸಿನಿಮಾಕ್ಕೆ ಪ್ರಶಸ್ತಿ ಬಂದಾಗ ನನ್ನ ಮುಡಿಯಲ್ಲಿ ಇನ್ನೊಂದು ಗರಿ ಮೂಡಿತ್ತು.ನನ್ನ ಮನದ ತುಮುಲಗಳು,ಹೊಯ್ದಾಡುವ ಅಂಕೆಗೆ ಸಿಲುಕದ ಭಾವನೆಗಳೇ ನನ್ನ ಭಾವಪೂರ್ಣ ಅಭಿನಯಕ್ಕೆ ಕಾರಣವಾಗುತ್ತಿದ್ದವೇನೋ ಅಂತ ಅನ್ನಿಸುತಿತ್ತು.   ಇದಾದ ನಂತರ ಹಿಂತಿರುಗಿ ನೋಡದೆ ನನ್ನ ಸಿನಿಮಾ ಕರಿಯರ್ ಮುಂದುವರಿದಿತ್ತು. ನನ್ನಿಷ್ಟಕ್ಕೆ ವಿರುದ್ದವಾಗಿಯೇ ಕಾಂಚಾಣ  ನನ್ನ ಹೆತ್ತವರನ್ನು ಕುಣಿಸುತಿತ್ತು.ಸಿನಿಮಾ ಜಗತ್ತಿನ ಗ್ಲ್ಯಾಮರ್,ದೊಡ್ಡ ದೊಡ್ಡ ಪಾರ್ಟಿಗಳು,ದೊಡ್ಡವರು ಎಂದೆನಿಕೊಂಡವರ ಒಡನಾಟದಲ್ಲಿ ನಾನು ಕಳೆದು ಹೋಗಿದ್ದೆ.ನನ್ನ ಅಸ್ತಿತ್ವ ‘ರೂಪತಾರ ‘ಒಬ್ಬ  ಪ್ರಸಿದ್ದ ನಟಿ ಎಂಬುದಷ್ಷೇ ಆಗಿತ್ತು ನನ್ನ ವೈಯಕ್ತಿಕ ಬದುಕು ತೆರೆಮರೆಗೆ ಸರಿದಿತ್ತು.ಎಷ್ಟೋ ಸಲ ಈ ಗ್ಯ್ಲಾಮರ್ ಜಗತ್ತಿನಿಂದ ಹೊರ ಬರಬೇಕು ಅಂತ ಅಂದುಕೊಂಡಷ್ಟೂ  ಆ ಹುದುಲಿನಲ್ಲಿ ಸಿಲುಕಿಕೊಂಡು ಆಳಕ್ಕಿಳಿಯುತ್ತಲೇ ಹೋದೆ.ನನ್ನನ್ನು ನನ್ನ  ಸೌಂದರ್ಯ, ದುಡ್ಡಿಗಾಗಿ ಪ್ರೀತಿಸದೆ,ನಿಜವಾಗಿ,ನಿಷ್ಕಳಂಕವಾಗಿ ಪ್ರೀತಿಸುವ  ಹೃದಯಕ್ಕಾಗಿ ನನ್ನ ಮನ ಹಾತೊರೆಯುತಿತ್ತು.ಆಗ ಭೇಟಿಯಾದವನೇ ಕುಣಾಲ್.

 ಕುಣಾಲ್ ನಗರದ ಪ್ರತಿಷ್ಟಿತ ಉದ್ದಿಮೆದಾರ. ಅಂದು ಸಮಾರಂಭವೊಂದರಲ್ಲಿ ಭೇಟಿಯಾಗಿದ್ದ ನಮ್ಮಿಬ್ಬರಲ್ಲಿ ಪ್ರಾರಂಭವಾಗಿದ್ದ ಸ್ನೇಹ ಮುಂದೆ ಪ್ರೀತಿಗೆ ತಿರುಗಿತ್ತು.ಆಗರ್ಭ ಶ್ರೀಮಂತನಾಗಿದ್ದ ಅವನು ನನ್ನನ್ನು ಮದುವೆಯಾಗಲು ಬಯಸಿದಾಗ ಮನ ಹುಚ್ಚೆದ್ದು ಕುಣಿದಿತ್ತು.ಇನ್ನು ಮದುವೆಯಾಗಿ, ನೆಮ್ಮದಿಯಾಗಿ ಹೊಸ ಜೀವನ ನಡೆಸುವ ಕನಸು ಕಾಣ ತೊಡಗಿದೆ.ಸರಳವಾಗಿ ,ಸಾಂಪ್ರದಾಯಿಕವಾಗಿ ಮದುವೆಯಾಗುವ ಅವನ ಇಚ್ಚೆಯಂತೆ ,ಅವನು ಕಟ್ಟುವ ತಾಳಿಗೆ ತಲೆಬಾಗಿದ್ದೆ.ಆರು ತಿಂಗಳು ಜೋಡಿ ಹಕ್ಕಿಗಳಂತೆ ಹಾರಾಡಿ ಹಿಂತಿರುಗಿ ಬಂದು,ಸಿನಿಮಾ ಜಗತ್ತಿನಿಂದ ದೂರ ಸರಿದು ಅಪ್ಪಟ ಗೃಹಿಣಿಯ ಜೀವನದ ಕನಸು ಕಾಣುತಿದ್ದ ನನಗೆ ಆ ದಿನ ಕುಣಾಲ್  “ಸಿನಿಮಾ ಶೂಟಿಂಗ್ ಯಾವಾಗ ಪ್ರಾರಂಭ ” ಎಂದು ಕೇಳಿದಾಗ ಒಂದು ಕ್ಷಣ ಕಕ್ಕಾಬಿಕ್ಕಿಯಾಗಿದ್ದೆ. “ಆ ಗ್ಲ್ಯಾಮರ್ ಜಗತ್ತಿನಿಂದ ದೂರವಾಗಿ ನೆಮ್ಮದಿಯ ಜೀವನ ಅರಸಿ ನಿನ್ನನ್ನು ಮದುವೆಯಾಗಿದ್ದು ಕುಣಾಲ್” ಎಂದಿದ್ದೆ.ಆ ಕ್ಷಣದ ಅವನ ಮುಖದ ಭಾವ ಮುಂಬರುವ‌ ಆಪತ್ತಿಗೆ ಸೂಚನೆಯಂತಿತ್ತು.ಈಗ ಸದ್ಯದಲ್ಲಿ ನನ್ನ ಬಿಜಿನೆಸ್ ಲಾಸ್ನಲ್ಲಿದೆ ಅದು ಕೊಂಚ ಸುಧಾರಿಸುವ ತನಕ ಕೆಲಸ ಮಾಡು ಆ ನಂತರ ಬಿಡುವೆಯಂತೆ ಎಂದಾಗ ಅದೇ ಅಸಹಾಯಕತೆಯಿಂದ ಶೂಟಿಂಗ್ ಹೋಗಲು ಪ್ರಾರಂಭಿಸಿದೆ.ಶೂಟಿಂಗ್ ಮುಗಿಸಿ ಮನೆಗೆ ಬಂದು ಕುಣಾಲ್ ಗೆ ಇಷ್ಟವಾಗುವ ಅಡುಗೆ ಮಾಡಿ ಕಾಯ್ದು ಕುಳಿತಿದ್ದ ನನ್ನನ್ನು ಕಣ್ಣೆತ್ತಿಯೂ ನೋಡದೆ ಕಾಟಾ ಚಾರಕ್ಕೆ ಸ್ವಲ್ಪ ತಿಂದು ಮಲಗುತ್ತಿದ್ದ ಅವನನ್ನು ನೋಡಿದಾಗ ಬಿಜಿನೆಸ್ ಪ್ರಾಬ್ಲಮ್ ಅಂತ ಕಾಣುತ್ತೆ ಎಂದು ಸಮಾಧಾನ ಮಾಡಿಕೊಳ್ಳುತ್ತಿದ್ದೆ. ಆದರೆ  ಬಿಜಿನೆಸ್ ಸಂಪೂರ್ಣ ನಷ್ಟದಲ್ಲಿದ್ದು  ಅಪಾರ ಸಾಲವಾಗಿರುವ ವಿಷಯ ಆ ನಂತರ  ಗೊತ್ತಾಗಿತ್ತು.

 ಈ ಕಹಿಯನ್ನು ಮರೆಯಲು ನಮ್ಮಿಬ್ಬರ ಒಲವಿನ ದ್ಯೋತ್ಯಕವಾದ  ಮಗುವಿನ ಆಗಮನದ ಸುದ್ದಿಯನ್ನು ಸಂತೋಷದಿಂದ ಅವನೊಂದಿಗೆ ಹಂಚಿ ಕೊಂಡಾಗ ಈಗಲೇ ಮಗುವಿಗೆ ಏನವಸರವಿದೆ,ಅಬಾರ್ಷನ್ ಮಾಡಿಸಿಕೋ ಎಂದು ಬಲವಂತ ಪಡಿಸಿದಾಗ ಅಸಹಾಯಕಳಾಗಿ ಒಪ್ಪಿದ್ದೆ, ಮುಂದೊಂದು ದಿನ ಬದುಕಿನ ಈ ಕಾರ್ಮೋಡ ಸರಿದು‌ ಹೊಂಗಿರಣ ಮೂಡುವುದೆಂಬ ಆಸೆಯಿಂದ.ಆದರೆ ನನ್ನ ಬದುಕನ್ನು ಆವರಿಸಿದ್ದ ಕಾರ್ಮೋಡ ಸರಿಯದೇ ಇನ್ನಷ್ಟು ಗಾಢವಾಗುತ್ತಾ ಸಾಗಿತ್ತು.ಬಾಹ್ಯ ಪ್ರಪಂಚದಲ್ಲಿ ನಾನೊಬ್ಬ ಸುಂದರ,ಭಾವಪೂರ್ಣ ನಟನೆಯ ನಟಿ.ಅನೇಕ ಪ್ರಶಸ್ತಿ, ಪುರಸ್ಕಾರಗಳ ಒಡತಿ.ಆದರೆ ನನ್ನ ವೈಯಕ್ತಿಕ ಬದುಕಲ್ಲಿ  ಭಾವನೆಗಳ ಬಣ್ಣ ಮಾಸಿ ಹೋಗಿ,ಬದುಕೆಂಬ ಕ್ಯಾನ್ವಾಸ್ ಹರಿದ  ಗಾಳಿಪಟವಾಗಿತ್ತು.

ಎರಡನೇ ಸಲ ತಾಯಿಯಾಗುವ  ಚಿಹ್ನೆಗಳು ಕಂಡಾಗ ಸಂತಸದಿಂದ ಉಬ್ಬಿದ್ದ ನನಗೆ ಅದರ ಅಪ್ಪ ಯಾರು ಎಂದಾಗ ಮಾತನಾಡದೆ ಹೋಗಿ ಅಬಾರ್ಷನ್ ಮಾಡಿಸಿಕೊಂಡಿದ್ದೆ. ಕುಣಾಲ್ ನ ಈ ಮಟ್ಟದ ಕೀಳು ಯೋಚನೆಯಿಂದ  ಘಾಸಿಯಾಗಿತ್ತು ನನ್ನ ಮನ .ದಿನದಿಂದ ದಿನಕ್ಕೆ ಅವನ ದುರ್ವರ್ತನೆ‌ ಮಿತಿ ಮೀರಿ ಕುಡಿತದ ಅಮಲಿನಲ್ಲಿ ನನ್ನ ಮೇಲೆ ಕೈ ಎತ್ತಲೂ ಪ್ರಾರಂಭಿಸಿದ. ಇದೆಂತಹ ಜೀವನ ನನ್ನದು ಅಪ್ಪ,ಅಮ್ಮನ ಕಪಿ ಮುಷ್ಟಿಯಿಂದ ಪಾರಾದೆ ಅನ್ನುವಷ್ಟರಲ್ಲಿ ,ನನ್ನ  ಪರಿಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದ ಹಾಗಾಯಿತಲ್ಲಾ ಅಂತ ಅನಿಸಿತ್ತು.ಕುಡಿತದ ಅಮಲಿನಲ್ಲಿ ಕಾರು  ಓಡಿಸುತಿದ್ದ ಕುಣಾಲ್ ಆ್ಯಕ್ಸಿಡೆಂಟಾಗಿ ತೀರಿ ಹೋದಾಗ ಅವನು ನನಗೆ ಬಿಟ್ಟು ಹೋದ ಸಾಮ್ರಾಜ್ಯ ಅಂದರೆ ಮೈ ತುಂಬಾ ಸಾಲ. ಸಾಲ ತೀರಿಸಲು ಬೇಕೋ ಬೇಡವೋ ಗ್ಲ್ಯಾಮರ್‌ ಜಗತ್ತಿಗೆ ಅಂಟಿ ಕೊಂಡಿದ್ದೇನೆ.ಯಾಂತ್ರಿಕ ನಟನೆಯ ಜೀವನ . ಗಂಡ,ಮನೆ,ಮಕ್ಕಳು ಎಂಬ ನನ್ನ ಕನಸು ಕನಸಾಗಿಯೇ ಉಳಿಯಿತು.’ಗೃಹಿಣೀ ಗೃಹ ಮುಚ್ಯತೇ’ ಎಂಬ ಉನ್ನತ ಉಕ್ತಿಗೆ ನಾನು ಭಾಜನಳಾಗಲೇ ಇಲ್ಲ.

“ನಾ ಕೊಯೀ ಉಮಂಗ ಹೈ,ನಾ ಕೊಯೀ ತರಂಗ ಹೈ ಮೆರಿ ಜಿಂದಗೀ ಹೈ ಕ್ಯಾ ಏಕ ಕಟೀ ಪತಂಗ ಹೈ” ಎಂಬ’ ಕಟೀ ಪತಂಗ ‘ಹಿಂದೀ ಚಿತ್ರದ ಹಾಡಿನೊಂದಿಗೆ‌ ಕತೆ ಮುಗಿದಿತ್ತು.

  • ಪುಷ್ಪಾ ಹಾಲಭಾವಿ, ಧಾರವಾಡ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

1 thought on “ ಗೃಹಿಣೀ ಗೃಹ ಮುಚ್ಯತೇ..”

  1. Ravindra S Javali

    Short but tragic reality. Difficult to digest. But hats off to your efforts.
    All the best to your future projects.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter