ಆಗ ರಾತ್ರಿ ಮೂರು ಘಂಟೆ. ತನ್ನ ಊರಿಗೆ ವಾಪಸು ಹೋಗಲು ಬಸ್ಸು ಇಲ್ಲ. ಆಟೋ ಸಿಗಲ್ಲ. ಇನ್ನು ‘ ನಟರಾಜ ‘ ( ಬರಿ ಕಾಲಿನಲ್ಲಿ ನಡೆಯುವ ) ಸರ್ವೀಸ್ಸೇ ಗತಿ!… ಹಾಗೆ ಎಷ್ಟು ದೂರ ನಡೆದನೋ ಏನೋ … ಇನ್ನು ಒಂದು ಹೆಜ್ಜೆ ಕೂಡ ಮುಂದೆ ಹಾಕಲಾರದಷ್ಟು ಸುಸ್ತು…ಕಡು ರಾತ್ರಿಯ ನೀರವ ಮೌನ ಬೇರೆ… ನಾಯಿಗಳ ಜೋರಾದ ಬೊಗಳಿಕೆಗೆ ಬೆದರಿದ…ಹಠಾತ್ ಆಗಿ ಬೀದಿ ದೀಪಗಳು ಆಫ್ ಅದವು. ಇನ್ನು ಈ ರಾತ್ರಿ ಎಲ್ಲೋ ಒಂದು ಕಡೆ ಮಲಗದೆ ಬೇರೆ ದಾರಿ ಇಲ್ಲ…ಮುಚ್ಚುತ್ತಿರುವ ಕಣ್ಣುಗಳನ್ನು ಅತೀ ಕಷ್ಟದಿಂದ ತೆರೆದು ನೋಡಿದ…ಸನಿಹದ ಕಟ್ಟೆಯ ಮೇಲೆ ಯಾವುದೋ ಒಂದು ಶಿಲೆಯ ವಿಗ್ರಹ ನಿಂತ ಹಾಗೆ ಅನಿಸಿತು. ಕೂಡಲೇ ಸರ ಸರ ಅದನ್ನು ಹತ್ತಿ ವಿಗ್ರಹದ ಕೆಳಗಿನ ಗ್ರಾನೈಟ್ ನೆಲದ ಮೇಲೆ ಉಟ್ಟಿದ್ದ ಲುಂಗಿ ಬಿಚ್ಚಿ ಕೆಳಗೆ ಹಾಸಿ ಮಲಗಿದ…ಅರೆ ಕ್ಷಣದಲ್ಲಿ ಗೊರಕೆ ಹೊಡೆಯಲು ಶುರು ಮಾಡಿದ ಬಳಲಿ ಸುಸ್ತಾದ ಗುಂಡಣ್ಣ!…
ಆಕಾಶದಲ್ಲಿ ದಟ್ಟವಾಗಿ ಹರಡಿದ ಕಪ್ಪು ಮೋಡಗಳು ಎಲ್ಲ ಒಂದಾಗಿ ಮಳೆ ಸುರಿಸಲು ಸಿದ್ಧವಾದವು… ಅಷ್ಟರಲ್ಲಿ ದೊಡ್ಡ ಸಿಡಿಲಿನ ಶಬ್ದದ ಮಧ್ಯೆ ಆಗಸದಿಂದ ಭೂಮಿಗೆ ಜಾರಿದ ಒಂದು ಕೋಲ್ಮಿಂಚು ಅಲ್ಲಿನ ವಿಗ್ರಹದ ಮೇಲೆ ಬಿತ್ತು.
ಆ ಬೆಳಕಿನ ಕಾರಣಕ್ಕೋ ಏನೋ ಇದ್ದಕ್ಕಿದ್ದಂತೆ ಅಲ್ಲಿಯ ವಿಗ್ರಹಕ್ಕೆ ಜೀವ ಬಂದಂತಾಗಿ ನಿಧಾನವಾಗಿ ಕೆಳಗೆ ಇಳಿಯಿತು. ಸ್ವಲ್ಪ ಹೊತ್ತಿನ ಬಳಿಕ ಟಮೋಟ ಬಣ್ಣದ ಲುಂಗಿಯ ಮೇಲೆ ಕೇಸರಿ ಶಾಲನ್ನು ಹೊದ್ದ ಸೂರ್ಯ ಆಕಾಶದ ಮೇಲೆ ಪಯಣ ಆರಂಭಿಸಿದ್ದು ನೋಡಿ ಕತ್ತಲು ಭಯದಿಂದ ಪಲಾಯನ ಮಾಡಿತು.
ಈಗ ಸೂರ್ಯ ಬಿಳಿ ಬಣ್ಣದ ಡ್ರೆಸ್ ಧರಿಸಿ ಅಂದಿನ ಡ್ಯೂಟಿಗೆ ಸಿದ್ಧನಾದ. ಜೀವಂತ ಮಾನವನಂತೆ ಮೆಲ್ಲನೆ ರಸ್ತೆಯ ಒಂದು ಬದಿಯಲ್ಲಿ ನಿಧಾನವಾಗಿ ಹೆಜ್ಜೆ ಹಾಕುತ್ತಿದ್ದ ವಿಗ್ರಹ ಮಾನವನನ್ನು ನೋಡಿದ ನಿಜ ಮಾನವನೊಬ್ಬ… ಒಮ್ಮೆ ಅಲ್ಲ ಮಗದೊಮ್ಮೆ ದೃಷ್ಟಿಸಿ ನೋಡಿ ‘ ನೀವು ಅವರೇನಾ …’ ಎನ್ನುತ್ತಾ ಖುಷಿಯಿಂದ ಜೋರಾಗಿ ಕೇಕೆ ಹಾಕಿದ. ” ಬನ್ನಿ ಸಾರ್… ಸರಿಯಾದ ಸಮಯಕ್ಕೆ ಬಂದಿರುವಿರಿ. ಇಲ್ಲೇ ನಮ್ಮ ಕಾಲೋನಿಯಲ್ಲಿ ದೊಡ್ಡ ಸರಕಾರಿ ಶಾಲೆ ಇದೆ. ಇಂದು ಸ್ವಾತಂತ್ರ್ಯ ದಿವಸದ ನಿಮಿತ್ತ ತ್ರಿವರ್ಣ ಬಣ್ಣದ ಧ್ವಜವನ್ನು ಹಾರಿಸಬೇಕಾಗಿದೆ. ಇದು ನೀವು ಈ ದೇಶಕ್ಕೆ ಕೊಟ್ಟ ರಾಷ್ಟ್ರ ಧ್ವಜವೇ…” ವಿನಯದಿಂದ ನಮಸ್ಕರಿಸಿ ಕೈ ಹಿಡಿದು ಮೆಲ್ಲನೆ ನಡೆಸಿದ. ಸ್ವಲ್ಪ ದೂರದಲ್ಲೇ ಧ್ವಜಾರೋಹಣದ ಕಂಬ ಕಾಣಿಸಿತು. ಧ್ವಜಾರೋಹಣ ಮಾಡಲು ಆಗಲೇ ಎಲ್ಲ ಸರ್ವ ಸಿದ್ಧತೆಗಳೂ ಆಗಿದ್ದವು.
ಕೆಳಗೆ ಇಟ್ಟ ಕುರ್ಚಿಗಳ ಮೇಲೆ ಒಂದೆರಡು ರಾಷ್ಟ್ರ ನಾಯಕರ ಫೋಟೋಗಳು ಇದ್ದವು. ಅವುಗಳ ಸುತ್ತೂ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ನಿಂತಿದ್ದರು. ಕೈಯಲ್ಲಿ ಕೋಲನ್ನು ಹಿಡಿದುಕೊಂಡು ಮೆಲ್ಲನೆ ವಿಗ್ರಹ ಮಾನವ ಧ್ವಜಾರೋಹಣದ ಕಂಬದ ಹತ್ತಿರ ಬಂದ. ಅಲ್ಲಿ ನೆರೆದವರು ಆ ವಿಗ್ರಹ ಮಾನವನ ಮುಖವನ್ನು ಈ ಮುಂಚೆ ಎಲ್ಲೋ ನೋಡಿದ ಹಾಗೆ ಇದೆಯಲ್ಲಾ ಎಂದು ತಲೆ ಕೆರೆದುಕೊಂಡು, ನೆನಪಿಸಿಕೊಳ್ಳಲು… ಪಾಪ… ಪರಿಪರಿಯಾಗಿ ಪ್ರಯತ್ನ ಮಾಡುತ್ತಿದ್ದಾರೆ. ಇಷ್ಟು ವರ್ಷಗಳಲ್ಲಿ ತಾನು ಎಂದೂ ಧ್ವಜಾರೋಹಣ ಮಾಡಿಲ್ಲ… ಈಗ ಮೊದಲ ಬಾರಿ ಅಂತಹ ಅಪೂರ್ವ ಅವಕಾಶ ಸಿಕ್ಕಿದೆ.
ಸರಿಯಾಗಿ ಆ ಸಮಯಕ್ಕೆ ಒಂದರ ಹಿಂದೊಂದು ಕಾರುಗಳು ರೊಯ್ಯನೆ ಶಬ್ದ ಮಾಡುತ್ತಾ ಸಾಲಾಗಿ ಬಂದು ನಿಂತವು. ದೊಡ್ಡ ಹಡಗಿನಂತಹ ಕಾರಿನಿಂದ ಗನ್ ಮೆನ್ ಗಳ ಸಮೇತ ಇಳಿದು ಬಂದ ಖಾದಿ ವಸ್ತ್ರಧಾರಿ ನಾಯಕ ” ಧ್ವಜಾರೋಹಣ ಸಲುವಾಗಿ ನನ್ನನ್ನು ಆಹ್ವಾನಿಸಿ ಬೇರೆಯವರಿಂದ ಆ ಕೆಲಸ ಮಾಡಿಸುತ್ತಿರುವುದು ಸರಿಯಾ?..” ಎಂದು ಗಟ್ಟಿ ಧ್ವನಿಯಲ್ಲಿ ಅಸಹನೆ ವ್ಯಕ್ತಪಡಿಸಿದ. ಹತ್ತಿರಕ್ಕೆ ಬಂದು ” ನೀವು ಯಾರು?…” ಎಂದು ಪ್ರಶ್ನಿಸುತ್ತಾ ಕೈಯಲ್ಲಿ ಕೋಲು ಹಿಡಿದ ವಿಗ್ರಹ ಮಾನವನನ್ನು ಮತ್ತು ಕುರ್ಚಿಯ ಮೇಲೆ ಹೂವಿನ ಹಾರ ಹಾಕಿದ ಫೋಟೋದಲ್ಲಿರುವ ವ್ಯಕ್ತಿಯನ್ನು ದಿಟ್ಟಿಸಿ ತಾಳೆ ಮಾಡಿ ನೋಡಿದ ನಾಯಕ. ” ತಾವು ಇಲ್ಲಿ ಯಾಕೆ?… ಇಲ್ಲಿ ನಿಮಗೇನು ಕೆಲಸ?… ದಯಮಾಡಿ ಪಕ್ಕಕ್ಕೆ ಸರಿಯಿರಿ. ನಿಮ್ಮದು ಈ ರಾಜ್ಯವಲ್ಲ. ನೀವು ಯಾವ ಪಕ್ಷದ ನಾಯಕರಲ್ಲ. ಸ್ವಾತಂತ್ರ್ಯ ನಂತರ ಯಾವ ರಾಜಕೀಯ ಪಕ್ಷಗಳು ಈ ದೇಶದಲ್ಲಿ ಅಸ್ತಿತ್ವದಲ್ಲಿ ಇರಬಾರದೆಂದು ಅಂದು ಫರ್ಮಾನು ಹೊರಡಿಸಿದವರು ನೀವೇ!…ಅಲ್ಲದೆ ಅಂದು ಸಹಾ ನಿಮ್ಮ ಕೆಲಸ ಮೆಚ್ಚದ ಸಾಕಷ್ಟು ಜನರು ಇದ್ದರಂತೆ. ಅದಕ್ಕೆ ಅಲ್ಲವೇ ಕೊನೆಗೆ ‘ ಹೇ…ರಾಮ್ ‘ ಎನ್ನುತ್ತಾ ನೀವು ಪ್ರಾಣ ಬಿಟ್ಟಿರಿ… ಪುಸ್ತಕಗಳಲ್ಲಿ, ಫೋಟೋಗಳಲ್ಲಿ ಅಥವಾ ವಿಗ್ರಹ ರೂಪಗಳಲ್ಲಿ ಇರಬೇಕಾದ ನೀವು ಹೀಗೆ ಪ್ರಜೆಗಳ ಮಧ್ಯೆ ಬರುವುದು ತಪ್ಪಲ್ಲವೇ…ಈಗ ಯಾರ ಕೈಯಲ್ಲಿ ಯಾವ ತರಹದ ಬಂದೂಕುಗಳು ಇರುತ್ತವೆ ಅಂತ ಯಾರಿಗೂ ಗೊತ್ತಿಲ್ಲ…” ಎಂದು ಮೆದು ಧ್ವನಿಯಲ್ಲಿ ನಿಧಾನವಾಗಿ ನುಡಿದ.
ಒಂದೆರಡು ಕ್ಷಣದ ಬಳಿಕ ಮತ್ತೆ ಮಾತು ಮುಂದುವರೆಸುತ್ತಾ ” ಪತ್ರಿಕೆಯವರು – ಟಿ ವಿ ಮಾಧ್ಯಮದವರು ಬರುತ್ತಿದ್ದಾರೆ. ಈಗ ಕಾಲ ಸಾಕಷ್ಟು ಬದಲಾಗಿದೆ. ಹೊಸ ನೀರು ಬಂದು ಹಳೆಯ ನೀರು ಹಳ್ಳ ಹಿಡಿದಿದೆ!. ಇದು ಪ್ರಕೃತಿ ನಿಯಮ. ಪ್ರಜೆಗಳ ಸೇವೆ ಮಾಡೋದು ಒಂದು ಕಾಲಕ್ಕೆ ‘ ಪ್ಯಾಶನ್ ‘. ಈಗ ಅದು ‘ ಪ್ರೊಫೆಶನ್ ‘ ! ದಯವಿಟ್ಟು ಪಕ್ಕಕ್ಕೆ ಜರುಗಿರಿ. ಇನ್ನು ಕೆಲವೇ ತಿಂಗಳುಗಳಲ್ಲಿ ಚುನಾವಣೆಗಳು ಬರ್ತಾ ಇವೆ. ಜನರಿಗೆ ನಾವು ಆಗಾಗ್ಗೆ ಪತ್ರಿಕೆಯಲ್ಲಿ – ಟಿ ವಿ ಯಲ್ಲಿ ಕಂಡರೆ ಮಾತ್ರ ನಮಗೆ ಜಾಬ್ ಸೆಕ್ಯೂರಿಟಿ…ವಿಗ್ರಹ ರೂಪದಲ್ಲಿ ನೀವು ಎಲ್ಲಿರಬೇಕೋ ಅಲ್ಲಿದ್ದರೆ ನಿಮಗೂ ನಮಗೂ ಕ್ಷೇಮ. ನಿಮ್ಮ ಜಯಂತಿಯಂದು ಮತ್ತು ಸ್ವಾತಂತ್ರೋತ್ಸವ ದಿನದಂದು ನೀವಿದ್ದಲ್ಲಿಗೆ ಬಂದು ದೊಡ್ಡ ಹೂವಿನ ಹಾರ ಹಾಕಿ ಭಕ್ತಿ ಭಾವದಿಂದ ನಮಸ್ಕರಿಸಿ ಬರುತ್ತೇವೆ….ತಿಳಿಯಿತೇ…ಈಗ ನಿಮಗೂ ವಯಸ್ಸಾಯಿತು. ಮುಪ್ಪು ದೇಹ…ಕಣ್ಣು ಸರಿಯಾಗಿ ಕಾಣುವದಿಲ್ಲ. ನಿಶ್ಯಕ್ತಿ ಬೇರೆ…” ಎಂದು ಕಳಕಳಿ ವ್ಯಕ್ತಪಡಿಸಿದ ಜನ ನಾಯಕ.
ನಂತರ ಇದ್ದಕ್ಕಿದ್ದಂತೆ ” ಯಾರೋ ಒಬ್ಬರು ಬೇಗ ಬಂದು ಈ ಅಜ್ಜನನ್ನು ಇಲ್ಲಿಂದ ಪಕ್ಕಕ್ಕೆ ಸರಿಸಿ ಮೊದಲು…” ಎಂದು ಜನ ನಾಯಕ ಜೋರಾಗಿ ಅರಚಿದ. ಆ ಶಬ್ದಕ್ಕೆ ನಾಯಕರ ಹಿಂಬಾಲಕ ದಂಡೇ ಬಂತು.
ಇಷ್ಟು ಹೊತ್ತು ‘ ಆಜಾದಿಕಾ ಅಮೃತ ಮಹೋತ್ಸವದ ಸ್ವಾತಂತ್ರ್ಯ ದಿನಾಚರಣೆಯ ‘ ಪ್ರಹಸನ ನೋಡಿದ ವಿಗ್ರಹ ಮಾನವ ಗತ್ಯಂತರವಿಲ್ಲದೆ ಮೆಲ್ಲನೆ ತಾನು ಬಂದ ದಾರಿಯತ್ತ ಕೋಲು ಹಿಡಿದುಕೊಂಡು ವಾಪಾಸು ನಡೆದು ಸ್ವ – ಸ್ಥಾನ ಸೇರಿದ.
ಗಡದ್ದಾಗಿ ಮಲಗಿದ್ದ ‘ ಶ್ರೀ ಸಾಮಾನ್ಯ ‘ ಗುಂಡಣ್ಣನಿಗೆ ಹಠಾತ್ತನೆ ನಿದ್ದೆಯಿಂದ ಎಚ್ಚರವಾಗಿ ಗಾಢ ಕನಸಿನಿಂದ ಎದ್ದು ಹೊರ ಬಂದು ನೋಡುತ್ತಾನೆ. ಎದುರಿಗೆ ಬೊಚ್ಚು ಬಾಯಿ, ತುಂಡು ಬಟ್ಟೆ ಧರಿಸಿದ ಫಕೀರ, ಕನ್ನಡಕವನ್ನು ಹಾಕಿಕೊಂಡು ಕೋಲನ್ನು ಹಿಡಿದ ವಿಗ್ರಹ ರೂಪದ ‘ ಮಹಾತ್ಮ ಗಾಂಧೀಜಿ …’ ರಸ್ತೆಯ ಮೇಲಿನ ತನ್ನ ದೇಶದ ಪ್ರೀತಿಯ ಪ್ರಜೆಗಳತ್ತ ದೃಷ್ಟಿ ನೆಟ್ಟು ಸ್ಥಿರವಾಗಿ – ಶಾಂತವಾಗಿ ನಿಂತು ಅವರನ್ನು ಹರಸುವಂತೆ ಭಾಸವಾಯಿತು.
ನಿದ್ದೆಯಲ್ಲಿ ಬಂದ ಸಿಹಿ ಕನಸನ್ನೇ ಮತ್ತೆ ನೆನಪಿಸಿಕೊಂಡು ಹೃದಯ ಹಗುರಾಗಿ ‘ ರಾಷ್ಟ್ರಪಿತ ‘ ನಿಗೆ ಒಂದು ದೊಡ್ಡ ಸೆಲ್ಯೂಟ್ ಹೊಡೆದ ಗುಂಡಣ್ಣ ಊರಿಗೆ ಹೋಗಲು ಕೂಡಲೇ ಬಸ್ ನಿಲ್ದಾಣದ ದಾರಿ ಹಿಡಿದ.